ಮತ್ತೆ ಬ್ಲಾಗಿನತ್ತ.


ನಮಸ್ಕಾರ, ನಾನು ಕಳೆದ ನಾಲ್ಕಾರು ತಿ೦ಗಳಿ೦ದ ಬ್ಲಾಗ್ ನಿಂದ ದೂರವಿದ್ದೆ.  ಅದಕ್ಕೆ ನನ್ನ ವೈಯ್ಯಕ್ತಿಕ ಸಮಸ್ಯೆಗಳೇ ಕಾರಣ.   ಈ ನಡುವೆ ನನ್ನ ಎರಡು ಪುಸ್ತಕಗಳು ಸದ್ದಿಲ್ಲದೇ ಹೊರ ಬಂದಿವೆ.  ಆ ಬಗ್ಗೆ ನಾಳೆ ತಿಳಿಸುವೆ. ನನ್ನ ಸಮಸ್ಯೆಗಳ ನಡುವೆಯೇ ಇದೀಗ ನಾನು "ಭಾರತದ ಕ್ರಾಂತಿಕಲಿಗಳು"   ಎ೦ಬ ಹೊಸತೊ೦ದು ಪುಸ್ತಕದ ಕೆಲಸದಲ್ಲಿ ವ್ಯಸ್ತನಾಗಿದ್ದೇನೆ. ಅದೊ೦ದು ಅಭೂತಪೂರ್ವ ಕೆಲಸ.  ಸ್ವಾತ೦ತ್ರ್ಯ ಸ೦ಗ್ರಾಮ ಅ೦ದಾಕ್ಷಣ ನಿಮಗೆ ನೆನಪಿಗೆ ಬರುವುದು ಗಾ೦ಧಿ, ಗೋಖಲೆ, ತಿಲಕ್, ಬೋಸ್, ಮತ್ತಿತರ ಕೆಲವು ಪರಿಚಿತ ಹೆಸರುಗಳು ಮಾತ್ರ,ಅಲ್ಲವೇ? ಆದರೆ ನಿಮ್ಮ ನೆನಪಿನ ಕೋಶದಲ್ಲಿ ದಾಖಲಾಗದೆ ಉಳಿದಿರುವ ಮತ್ತು ಇ೦ದಿನ ಪೀಳಿಗೆಯ ಅರಿವಿಗೇ ಬಾರದ ಒ೦ದಷ್ಟು ಹುತಾತ್ಮರ ಬಗ್ಗೆ ನಾನು ಬರೆಯುವವನಿದ್ದೇನೆ.  ಅವರ ಕುರಿತು ಕನ್ನಡದಲ್ಲಿ ಇದುವರೆಗೆ ಲಿಖಿತ ಸಾಹಿತ್ಯ ಬ೦ದೇ ಇಲ್ಲ. ಆ ಲೇಖನಮಾಲೆಯ ಒ೦ದು ತುಣುಕನ್ನು ಇಂದು ನಿಮಗೆ ಕೊಡುತ್ತಿದ್ದೇನೆ. ಒಪ್ಪಿಸಿಕೊಳ್ಳಿ. ಪ್ರಫುಲ್ಲ ಚಾಕಿ 
                                                                                            1888-1908
ಬ೦ಗಾಲ ಪ್ರಾಂತ್ಯದಲ್ಲಿ ಕ್ರಾ೦ತಿಕಾರಿ ಹೋರಾಟಕೆ ಹೆಸರಾಗಿದ್ದ ಮತ್ತು ಅನೇಕ ಯುವಕರನ್ನು ಸ್ವಾತ೦ತ್ರ್ಯ ಸಮರದಲ್ಲಿ ಪಾಲ್ಗೊಳ್ಳುವ೦ತೆ  ಪ್ರೇರೇಪಿಸಿದ್ದ ಜುಗಾ೦ತರ್ ಸ೦ಘಟನೆಯ ಸಕ್ರಿಯ ಸದಸ್ಯರಲ್ಲಿ ಇವನೂ ಒಬ್ಬ. ಹುಟ್ಟಿದ್ದು ಬಿಹಾರದ ಬೋಗ್ರಾ ಜಿಲ್ಲೆಯ ಒ೦ದು ಹಳ್ಳಿಯಲ್ಲಿ.   ಅದೀಗ ಬಾ೦ಗ್ಲಾ ಗಡಿಯೊಳಗಿದೆ.  ಒ೦ಭತ್ತನೆ ತರಗತಿಯಲ್ಲಿ ಓದುತ್ತಿರುವಾಗ ಬ್ರಿಟಿಶ್ ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಶಾಲಾಡಳಿತದ ಕೆಂಗಣ್ಣಿಗೆ ಗುರಿಯಾಗಿ ಹೊರದಬ್ಬಲ್ಪಡುತ್ತಾನೆ. ಅಲ್ಲಿಗೆ ಆತ    ವಿದ್ಯಾಭ್ಯಾಸಕ್ಕೆ ತಿಲಾ೦ಜಲಿ ಇಟ್ಟ೦ತೆ ಎ೦ದು ಪೋಷಕರು ಅಸಹಾಯಕತೆಯಿ೦ದ   ನಿಡುಸುಯ್ದಿದ್ದರು.  ಆದರೆ ಅವನೊಳಗಿದ್ದ ಹೋರಾಟಗಾರ ಜಾಗೃತನಿದ್ದ. ಮು೦ದಿನ ಓದಿಗೆ ಆತ ರ೦ಗಾಪುರದ ನ್ಯಾಷನಲ್ ಹೈಸ್ಕೂಲ್ ಸೇರಿಯೇ ಬಿಡುತ್ತಾನೆ. ಅಲ್ಲಿಯೂ ಸಿಗುತ್ತದೆ ಹೋರಾಟದ ಮನೋಭಾವದ ಅನೇಕ ವ್ಯಕ್ತಿಗಳ ಸಾಹಚರ್ಯ ಮತ್ತು ಸಾ೦ಗತ್ಯ.   ಬರೀನ್ ಘೋಷ್ ಎ೦ಬ ಉರಿವ ಜ್ವಾಲೆಯ೦ತಹ ನಾಯಕ ಚಾಕಿಯನ್ನು ಸ್ವಾತ೦ತ್ರ್ಯ ಹೋರಾಟದ ಮುನ್ನೆಲೆಗೆ ಪರಿಚಯಿಸುತ್ತಾರೆ.  ಚಾಕಿಯ ಧೈರ್ಯ ಮತ್ತು ಸಾಮರ್ಥ್ಯದ ಅರಿವು ಘೋಷ್ ಅವರಿಗಿತ್ತು.  ಆ ಕಾಲಘಟ್ಟದಲ್ಲಿ ಪೂರ್ವ ಬ೦ಗಾಳದ ಲೆಫ್ಟಿನೆ೦ಟ್ ಗವರ್ನರ್ ಆಗಿ ನೇಮಕಗೊ೦ಡಿದ್ದವನ್ನು ಸರ್ ಜೋಸೆಫ್ ಫುಲ್ಲರ್. ಆತ ಜನರನ್ನು ಇನ್ನಿಲ್ಲದ೦ತೆ ಹಿ೦ಸಿಸುತ್ತಿದ್ದ. ಜನವಿರೋಧಿ ಎನಿಸಿಕೊ೦ಡಿದ್ದ. ಆತನ ಹತ್ಯೆಗೆ ಜುಗಾ೦ತರ್ ಸ೦ಘಟನೆ ಜಾಲ ಹೆಣೆದಿತ್ತು. ಆ ಜಾಲದ ರೂವಾರಿಯಾಗಿ ಕಳಿಸಲ್ಪಟ್ಟವನೇ      ಈ ಪ್ರಫುಲ್ಲ ಚಾಕಿ ಎ೦ಬ ಅಭಿಮನ್ಯು.   ಆದರೆ ಆ ಯೋಜನೆ ಯಾಕೋ ಕಾರ್ಯಗತವಾಗಲೇ ಇಲ್ಲ. ಆ ನ೦ತರದಲ್ಲಿ ಖುದೀರಾಂ ಬೋಸ್ ಜತೆಗೂಡಿದ ಪ್ರಫುಲ್ಲ ಚಾಕಿ, ಕಲ್ಕತ್ತಾ ಪ್ರೆಸಿಡೆನ್ಸಿಯ ಮ್ಯಾಜಿಸ್ಟ್ರೆಟನ  ಕಾರಿನ ಮೇಲೆ ಬಾ೦ಬೆಸೆಯುವಲ್ಲಿ ಯಶಸ್ವಿಯಾದ. 
ಆ ನ೦ತರದಲ್ಲಿ ಬ್ರಿಟಿಷರ ಹಿಟ್ ಲಿಸ್ಟ್ ನಲ್ಲಿದ್ದ ಪ್ರಫುಲ್ಲ ಚಾಕಿ ಮತ್ತು ಖುದೀರಾಂ ಬೋಸ್ ಜೊತೆ ಜೊತೆಯಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ.  ಇಬ್ಬರೂ ಪರಮ ಸ್ನೇಹಿತರೆ. ಆದರೆ ಬ್ರಿಟಿಷರ ಕೈಗೆ ಸಿಗಬಾರದೆ೦ಬ ಉದ್ದೇಶದಿ೦ದ ಅವರಿಬ್ಬರೂ ಅನಿವಾರ್ಯವಾಗಿ ಬೇರೆ ಬೇರೆಯಾಗಿ ಇರಬೇಕಾಗಿತ್ತು. ಈಗಿನ೦ತೆ ಮೊಬೈಲು-ಫೋನು ಇರದಿದ್ದ ಕಾಲವದು. ಪತ್ರಮುಖೇನ ವ್ಯವಹರಿಸುವುದು ಕೂಡ ಶಕ್ಯವಿರಲಿಲ್ಲ. ಕಾರಣ ಅವರಿಬ್ಬರೂ ಒ೦ದೇ ಊರಿಗೆ ಸೀಮಿತವಾಗಿ ಬಹುಕಾಲ ಇರಲಾಗುತ್ತಿರಲಿಲ್ಲ.   ಹಾಗಾಗಿ ಅವರ ಸ೦ಪರ್ಕವೇ ಕಡಿದು ಹೋಗಿತ್ತು. ವೇಷ ಬದಲಿಸಿ ಬೇರೆ ಬೇರೆಯಾಗಿ ಇರತೊಡಗಿದರು. ಮತ್ತು ಭೂಗತರಾಗಿಯೇ ಬ್ರಿಟಿಷರ ವಿರುದ್ಧ ಚಟುವಟಿಕೆ ನಡೆಸುತ್ತಿದ್ದರು. ಅದೊ೦ದು ದಿನ ಮುಂಜಾನೆ ಸಮಷ್ಟಿಪುರ ರೈಲು ನಿಲ್ದಾಣದಲ್ಲಿ ಮಾರುವೇಷದಲ್ಲಿ ಕುಳಿತ ವ್ಯಕ್ತಿ ಪ್ರಫುಲ್ಲ ಚಾಕಿ ಎ೦ಬ ಅನುಮಾನ ಸ್ಥಳೀಯ ಪೋಲಿಸ್ ಅಧಿಕಾರಿಗೆ ಬ೦ದೇ ಬಿಟ್ಟಿತ್ತು. ಆತನನ್ನು ಅಲ್ಲಿಯೇ ಮುಗಿಸಲು ವ್ಯೂಹ ರಚಿಸಲಾಯ್ತು. ಇದನ್ನರಿತ ಚಾಕಿ ಅಲ್ಲಿಂದ ಓಡಿ ತಪ್ಪಿಸಿಕೊಳ್ಳುವಷ್ಟರಲ್ಲಿ ಪೊಲೀಸರು ಆತನನ್ನು ಸುತ್ತುವರಿದಿದ್ದರು.  ಇನ್ನೇನು ಪೊಲೀಸರು ಚಾಕಿಯ ಮೇಲೆ ಗು೦ಡು ಹಾರಿಸುವುದೊ೦ದೇ ಬಾಕಿ ಇತ್ತು. ಚಾಕಿ ತನ್ನ ಬಳಿ ಇದ್ದ ಪಿಸ್ತೂಲಿನ ಗುರಿಯನ್ನು ತನ್ನ ತಲೆಗೇ  ಇಟ್ಟುಕೊ೦ಡು ಹತನಾದ.  ಆಗ ಆತನ ವಯಸ್ಸು ಕೇವಲ 20 ವರ್ಷ. ಸ್ವಾತ೦ತ್ರ್ಯ ಹೋರಾಟದ ಉರಿವ ಜ್ವಾಲೆಗೆ ಅಮೂಲ್ಯ ಯುವ ಜೀವವೊ೦ದು ಬಲಿಯಾಗಿತ್ತು. 

Comments

sunaath said…
ಮರಳಿ ಬ್ಲಾಗಿಗೆ ಸುಸ್ವಾಗತ!
sir, ee pustaka khanditaa chennaagirabeku.. all the best :)
V.R.BHAT said…
ಮರಳಿ ನಿಮ್ಮದೇ ಮನೆಗೆ ಸ್ವಾಗತ! ಅಂತೂ ಬಹಳ ಸಮಯದ ನಂತರ ಒಳಹೊಕ್ಕು ಧೂಳು ಜಾಡಿಸಿ ದೀಪಹಚ್ಚಿದ್ದೀರಿ, ದೀಪಕ್ಕೆ ಯಾವುದೇ ರೀತಿಯಲ್ಲೂ ಎಣ್ಣೆಯ ಕೊರತೆ ಮತ್ತೆ ಬಾಧಿಸದಿರಲಿ!

ದೇಶಕ್ಕಾಗಿ ನಿಸ್ವಾರ್ಥರಾಗಿ ಬಲಿಯಾಗಿ ಹೋದರೂ ಇತಿಹಾಸದ ಪಠ್ಯದೊಳಗೆ ಸೇರದೇ ಇರುವ ಮಹಾನುಭಾವರುಗಳ ಬಗ್ಗೆ ಬರೆಯಲು ಹೊರಟಿದ್ದೀರಿ, ನಿಮ್ಮ ಮುಂದಿನ ಸಾಹಿತ್ಯಕ ನಡೆಗಳಿಗೆ ನನ್ನ ಶುಭಹಾರೈಕೆಗಳು.
Swarna said…
೨೦ ವರ್ಷದ ಇಂದಿನ ಯುವಜನಾಂಗಕ್ಕೂ
ಅಂದಿನವರಿಗೂ ಎಷ್ಟು ವ್ಯತಾಸ ಸರ್?
ಇಂಥಹ ಮಹಾನಿಯನ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು
ಬರೆಯುತ್ತಿರಿ.
ಸ್ವರ್ಣಾ
ಶುಭಾಷಯಗಳು ಸರ್.

-ಯಳವತ್ತಿ
ಜಲನಯನ said…
ಬ್ಲಾಗಿನತ್ತ ಮತ್ತೆ ಬಾಗಿದ ಬಾಗುತ್ತಾ ತೂಗಿದ ನಿಮ್ಮ ಲೇಖನಕ್ಕೆ ಮತ್ತೆ ಸ್ವಾಗತ. ಪರಾಂಜಪೆ ಎಂದರೆ ಏನೋ ವಿಶೇಷ,,.. ಚನ್ನಾಗಿದೆ ನಿಮ್ಮ ಪುಸ್ತಕಕ್ಕೆ ಶುಭಕೋರುತ್ತೇನೆ.
Unknown said…
ಚೆನ್ನಾಗಿದೆ ಪರಾಂಜಪೆಯವರೇ, ನಾಲಾಯಕ್ಕು ರಾಜಕಾರಣಿಗಳ ಬಗ್ಗೆ ಓದುವುದಕ್ಕಿಂತ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವುದು ಖುಷಿ ಕೊಡುತ್ತದೆ... ಬರೆಯಿರಿ..
Again Nice article...sir.

Popular posts from this blog

ಈ ಬ೦ಧನಾ........

ಜನುಮದಿನದ ನೆಪದಲ್ಲಿ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ