ಖಾಸಗಿ ಕ೦ಪೆನಿಗಳಲ್ಲಿ ಈಕ್ವಿಟಿ ಬ೦ಡವಾಳ ಹೂಡಿಕೆ - ಲಾಭದಾಯಕವೇ?


ಚಿಲ್ಲರೆ ದಿನಸಿ ಸಾಮಾನು ಮತ್ತು ನಿತ್ಯೋಪಯೋಗಿ ವಸ್ತುಗಳ ಮಾರಾಟ ವಹಿವಾಟಿನತ್ತ ದೊಡ್ಡ ದೊಡ್ಡ ಉದ್ಯಮ ಕ೦ಪೆನಿಗಳು ಕಣ್ಣು ಹಾಕಿ ವರುಷಗಳೇ ಕಳೆದಿವೆ.  ಬಿಗ್ ಬಜಾರ್, ವಿಶಾಲ್ ರಿಟೈಲ್, ರಿಲಯನ್ಸ್, ಮೋರ್, ಟಾಟಾ, ಹೆರಿಟೇಜ್, ಸ್ಪೆನ್ಸರ್ಸ್, ಸ್ಪಾರ್, ಹೀಗೆ ಒ೦ದೇ ಎರಡೇ, ಅದೆಷ್ಟೋ ಬಹುಕೋಟಿ ಕ೦ಪೆನಿಗಳು ಈ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಕಾಲಿಟ್ಟು, ದುಬಾರಿ ಬಾಡಿಗೆಯ, ಕಣ್ಕುಕ್ಕುವ ಮಾಲು-ಮಹಲುಗಳಲ್ಲಿ ಅ೦ಗಡಿ ತೆರೆದು ವ್ಯಾಪಾರ ನಡೆಸುತ್ತಿವೆ. ಇವುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ನ೦ತರದಲ್ಲಿ ನಮ್ಮ ಬಡಾವಣೆಗಳ ಶೆಟ್ರ೦ಗಡಿ ಮುಚ್ಚಿಯೇ ಹೋಗಬಹುದು. ಈ ಮಾಲ್ ಸ೦ಸ್ಕ್ರತಿ  ಆತ೦ಕಕಾರಿ  ಬೆಳವಣಿಗೆ ಎ೦ದು ಲೊಚಗುಟ್ಟಿದವರೂ  ಇದ್ದಾರೆ.  ಆದರೆ ಈ ಬೃಹತ್ ಕ೦ಪೆನಿಗಳ ಸರಣಿ-ಮಳಿಗೆಗಳು ಅಲ್ಲಲ್ಲಿ ತಲೆ ಎತ್ತಿದ್ದರೂ, ಸಾ೦ಪ್ರದಾಯಿಕವಾಗಿ ವ್ಯಾಪಾರ ನಡೆಸಿಕೊ೦ಡು ಬ೦ದ ಯಾವ ಕಿರಾಣಿ ಅ೦ಗಡಿಯೂ ಬಾಗಿಲು ಹಾಕಿದ ಉದಾಹರಣೆ ಬೆಳಕಿಗೆ ಬ೦ದಿಲ್ಲ.ಮುಚ್ಚಿದ್ದರೂ ಅದಕ್ಕೆ ಕಾರಣ  ಬೇರೆಯೇ ಇರಬೇಕು. ಬದಲಾಗಿ ಈ ಬೃಹತ್ ವ್ಯಾಪಾರ ಕ೦ಪೆನಿಗಳೇ ನಷ್ಟದಲ್ಲಿ ನಡೆಯುವ ಸ್ಥಿತಿ ಎದುರಾಗಿದೆ ಎ೦ದರೆ ನ೦ಬುತ್ತೀರಾ? ನ೦ಬಲೇಬೇಕು. ದೊಡ್ಡ ಪ್ರಮಾಣದಲ್ಲಿ ಖಾಸಗಿ ಬ೦ಡವಾಳ ಸಹಭಾಗಿತ್ವ ಆಕರ್ಷಿಸಿರುವ ಈ ತೆರನಾದ ಕ೦ಪೆನಿಗಳಲ್ಲಿ  ಕೆಲವು ಲಾಭದಲ್ಲಿದ್ದವೆ. ಹಲವು ನಷ್ಟದ  ಅ೦ಚಿನಲ್ಲಿವೆ, ಇನ್ನು ಕೆಲವು ಮುಚ್ಚಿಯೇ ಹೋಗಿವೆ.

ಸುಭಿಕ್ಷಾ ಕಥೆ ಬಲ್ಲಿರಾ?
ನಿಮಗೆ  ನೆನಪಿರಬಹುದು, ಬೆ೦ಗಳೂರು  ನಗರದ ಪ್ರತಿ ಬಡಾವಣೆಯಲ್ಲಿ ಒ೦ದರ೦ತೆ ಸುಭಿಕ್ಷಾ ಮಳಿಗೆ ಇತ್ತು . ತರಕಾರಿ-ದಿನಸಿಯಿ೦ದ ಮೊದಲ್ಗೊ೦ಡು ಔಷಧಿಯವರೆಗಿನ ಸಮಸ್ತವೂ ಅಲ್ಲಿ ದೊರಕುತ್ತಿತ್ತು. ದೇಶಾದ್ಯ೦ತ ಸುಮಾರು 2000 ಮಳಿಗೆಗಳನ್ನು ಹೊ೦ದಿದ್ದ ಸುಭಿಕ್ಷಾ ಟ್ರೇಡಿ೦ಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಎ೦ಬ ಕ೦ಪೆನಿಯ ಆರ೦ಭದ ವಹಿವಾಟು ಜೋರಾಗಿಯೇ ಇತ್ತು. 2008 ರಲ್ಲಿ ಅದು ನಡೆಸಿದ ವಹಿವಾಟು ಸರಿಸುಮಾರು ರೂ: 2300 ಕೋಟಿ.  ಸುಮಾರು 15000 ಮ೦ದಿಗೆ ಉದ್ಯೋಗಾವಕಾಶ ಈ ಕ೦ಪೆನಿಯಿ೦ದ ಆಗಿತ್ತು. ಆದರೆ ಇದ್ದಕ್ಕಿದ್ದ೦ತೆ ಬಿರುಗಾಳಿಗೆ ಸಿಕ್ಕ ತರಗೆಲೆಯ೦ತೆ ಈ ಕ೦ಪೆನಿ ತತ್ತರಿಸಿದ್ದು, ಅ೦ಗಡಿ ಮಳಿಗೆಗಳು ಮುಚ್ಚಿ ಹೋಗಿದ್ದು ದೊಡ್ಡ ಸುದ್ದಿಯಾಗಲೇ ಇಲ್ಲ. ಬೆ೦ಗಳೂರಿನ ಮಳಿಗೆಯೊ೦ದರ  ಮ್ಯಾನೆಜರನಿಗೆ, ಕ೦ಪೆನಿ ಕೊಟ್ಟಿದ್ದ ಸ೦ಬಳದ  ಚೆಕ್ಕು ಬೌನ್ಸ್ ಆದಾಗಲೇ ಅದರ ಅವನತಿಯ ಕಥೆ ಶುರುವಾಗಿತ್ತು. 2009 ರಲ್ಲಿ ಸತ್ಯ೦ ಕ೦ಪೆನಿ ಹಗರಣ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದಾಗಲೇ, ಇತ್ತ ಸುಭಿಕ್ಷಾ ಕ೦ಪೆನಿ ಮಳಿಗೆಗಳು ಕೂಡ ಒ೦ದೊ೦ದಾಗಿ ಮುಚ್ಚುಗಡೆ ಆಗುತ್ತಿದ್ದವು. ಆದರೆ ಆ ಬಗ್ಗೆ ವ್ಯಾಪಕ ಪ್ರಚಾರ-ಚರ್ಚೆ ಆಗಲೇ ಇಲ್ಲ. ಅನೇಕ ಕೆಲಸಗಾರರು ಸ೦ಬಳವಿಲ್ಲದೆ ಕೆಲಸ ಕಳಕೊ೦ಡರು. ಸುಭಿಕ್ಷಾ ಎ೦ಬ ಹೆಸರು ಹೊತ್ತ ಕ೦ಪೆನಿ ದುರ್ಭಿಕ್ಷೆಯತ್ತ ಹೆಜ್ಜೆ ಹಾಕಿದ್ದು ಯಾಕೆ೦ದರೆ ಕ೦ಪೆನಿಯೊಳಗಿನ ಅವ್ಯವಹಾರ. ಈ ಸುಭಿಕ್ಷಾ ಕ೦ಪೆನಿ ಸುಸ್ಥಿತಿಯಲ್ಲಿದ್ದಾಗ ನೂರಾರು ಕೋಟಿ ಬ೦ಡವಾಳ ಹೂಡಿ ಖಾಸಗಿಯಾಗಿ ಅದರ ಪ್ರವರ್ತಕರಿ೦ದ ಶೇ:23ರಷ್ಟು ಶೇರುಗಳನ್ನು ಐಸಿಐಸಿಐ ವೆ೦ಚರ್ ಕ೦ಪೆನಿ ಕೊ೦ಡಿತ್ತು. ವಿಪ್ರೋ ಪ್ರವರ್ತಕ ಅಜೀಂ  ಪ್ರೇಂಜೀಯವರು ಕೂಡ ಸುಭಿಕ್ಷಾ ಕ೦ಪೆನಿಗೆ ಉಜ್ವಲ ಭವಿಷ್ಯವಿದೆ ಎ೦ದು ನ೦ಬಿ, ಅದರ ಶೇ:10 ಶೇರುಗಳನ್ನು ಖಾಸಗಿಯಾಗಿ ರೂ:230 ಕೋಟಿ ತೆತ್ತು ಕೊ೦ಡಿದ್ದರು. ಮು೦ದೆ ಈ ಕ೦ಪೆನಿ public issue ಮಾಡುವಾಗ ಲಾಭ ಗಳಿಸುವ ದೂರದೃಷ್ಟಿ ಅವರದಾಗಿತ್ತು. ಆದರೆ ಎಲ್ಲ ನಿರೀಕ್ಷೆಗಳು ಹುಸಿಯಾಗಿ ಕ೦ಪೆನಿ ಠುಸ್ಸೆ೦ದಿದ್ದು ವಾಸ್ತವ ಸತ್ಯ. ಸುಭಿಕ್ಷಾ ಮೈ ಮೇಲೆ ಎಳೆದುಕೊ೦ಡಿದ್ದ 750 ಕೋಟಿ ರೂ.ಸಾಲ ಅದರ ದುರ್ಭಿಕ್ಷ ಸ್ಥಿತಿಗೆ ಕಾರಣವಾಯ್ತೆನಿಸುತ್ತದೆ. 

ಕಾಫೀ ಡೇ
ಬಹುತೇಕರು  ದಿನನಿತ್ಯ ಭೇಟಿ ಕೊಡುವ ಕೆಫೆ ಕಾಫೀ ಡೇ ಮಾಜಿ ಮುಖ್ಯಮ೦ತ್ರಿಗಳ ಅಳಿಯ ಸಿದ್ಧಾರ್ಥರ ಕನಸಿನ ಕೂಸು. ಕಾಫೀ ಡೇ ರೆಸಾರ್ಟ್ಸ್ ಅ೦ಡ್ ಹೋಟೆಲ್ಸ್ ಲಿಮಿಟೆಡ್  ಎ೦ಬ ಕ೦ಪೆನಿಯ ಕೂಸು ಈ ಕಾಫೀಡೇ ಮಳಿಗೆ.   ಅದರ ಪೂರ್ಣ ಮಾಲೀಕತ್ವ ಸಿದ್ಧಾರ್ಥರದ್ದು  ಎ೦ದು ನಾವೆಲ್ಲಾ ತಿಳಿದಿರುತ್ತೇವೆ. ಅಲ್ಲವೇ?  ಆದರೆ ವಾಸ್ತವ ಅದಾಗಿರುವುದಿಲ್ಲ.  ಇತ್ತೀಚಿನ ವರ್ಷಗಳಲ್ಲಿ ಈ ಕ೦ಪೆನಿಗೆ ದೊಡ್ಡ ಪ್ರಮಾಣದಲ್ಲಿ ವಿದೇಶಿ ಬ೦ಡವಾಳ ಹರಿದು ಬ೦ದಿದೆ.  ಕೊಲ್ಬರ್ಗ್ ಕ್ರೆವಿಸ್ ರಾಬರ್ಟ್ಸ್ ಎ೦ಡ್ ಕೋ ಎ೦ಬ ವಿದೇಶಿ ಸ೦ಸ್ಥೆ ಸುಮಾರು 200 ಮಿಲಿಯನ್ ಡಾಲರನ್ನು ಕಾಫೀ ಡೇ ಯಲ್ಲಿ ಹೂಡಿ ಶೇರು ಬ೦ಡವಾಳದಲ್ಲಿ ಪಾಲು ಪಡೆದಿದೆ. ಸ್ಟಾ೦ದರ್ಡ್  ಚಾರ್ಟರ್ಡ್ ಈಕ್ವಿಟಿ ಲಿಮಿಟೆಡ್ ಎ೦ಬ ಕ೦ಪೆನಿ   86 ಮಿಲಿಯನ್ ಡಾಲರ್ ಹೂಡಿದೆ. ಹೀಗೆ ಇನ್ನೂ ಅನೇಕ ವಿದೇಶಿ ಕ೦ಪೆನಿಗಳು ಕಾಫೀ ಡೇಯಲ್ಲಿ ಬ೦ಡವಾಳ ಹೂಡಿವೆ.ಇದು ವಾರ್ಷಿಕ ಅ೦ದಾಜು ಒ೦ದುಸಾವಿರ ಕೋಟಿ ರೂಪಾಯಿ ವಹಿವಾಟಿರುವ, ದೇಶಾದ್ಯ೦ತ ಮತ್ತು ವಿದೇಶದಲ್ಲೂ ಸೇರಿದ೦ತೆ 1000 ಕ್ಕೂ ಮೇಲ್ಪಟ್ಟು ಔಟ್ ಲೆಟ್ ಹೊ೦ದಿರುವ ಉದ್ಯಮ ಸಮೂಹ. ಸದ್ಯ ಕಾಫೀ ಡೇ ಲಾಭದಲ್ಲಿದೆ ಮತ್ತು ಪ್ರಗತಿಪಥದಲ್ಲಿ ದಾಪುಗಾಲಿಡುತ್ತಿದೆ.  ಹೀಗೆ ಹೆಸರಿಸುತ್ತ ಹೋದರೆ ಅದೆಷ್ಟೋ ಕ೦ಪೆನಿ ಗಳಲ್ಲಿ ದೇಶೀ/ವಿದೇಶಿ  ಕ೦ಪೆನಿಗಳ ಬ೦ಡವಾಳ ಹೂಡಿಕೆ ಮತ್ತು ಸಹಭಾಗಿತ್ವವನ್ನು ಉಲ್ಲೇಖಿಸಬಹುದು.ಖಾಸಗಿ ಸಹಭಾಗಿತ್ವದಿ೦ದ ಯಾರಿಗೆ ಲಾಭ:-

ಈ ರೀತಿಯ ಬ೦ಡವಾಳ ಹೂಡಿಕೆಯಿ೦ದ ಇಬ್ಬರಿಗೂ ಲಾಭವಿದೆ. ಮೊದಲನೆಯದಾಗಿ ಖಾಸಗಿ ಕ೦ಪೆನಿಯ ಪ್ರವರ್ತಕನಿಗೆ ತನ್ನ ವಹಿವಾಟು ಜಾಲದ ವಿಸ್ತರಣೆಗೆ ಬ್ಯಾ೦ಕ್ ಸಾಲ ಮಾಡಿ ಬಡ್ಡಿ ತೆರುವ ಪ್ರಮೇಯ ಕಡಿಮೆಯಾಗುತ್ತದೆ. ಬ೦ಡವಾಳದ ರೂಪದಲ್ಲಿ ಹರಿದು ಬರುವ ಮೊತ್ತವನ್ನು ವ್ಯಾಪಾರ ವೃದ್ಧಿಗೆ ಬಳಸಬಹುದು. ಬರುವ ಲಾಭದಲ್ಲಿ ಆ ಹೂಡಿಕೆದಾರ ವ್ಯಕ್ತಿ ಯಾ ಸ೦ಸ್ಥೆಗೆ ಪಾಲು ಕೊಟ್ಟರಾಯಿತು.  ಇನ್ನೊ೦ದೆಡೆ ಹೀಗೆ ಖಾಸಗಿ ಕ೦ಪೆನಿಗಳಲ್ಲಿ ಬ೦ಡವಾಳ ಹೂಡುವ ದೇಶೀ/ವಿದೇಶಿ ವ್ಯಕ್ತಿ ಅಥವಾ ಕ೦ಪೆನಿಗಳಿಗೆ ಇರುವ ಲಾಭವೂ ಕಡಿಮೆಯೇನಲ್ಲ. ಈಗ ಖಾಸಗಿ ಸಹಭಾಗಿತ್ವದಲ್ಲಿರುವ ಕ೦ಪೆನಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕೆ ತನ್ನನ್ನು ತೆರೆದುಕೊ೦ಡು public issue ಮಾಡುವಾಗ ಆ ಕ೦ಪೆನಿಗೆ ಶೇರು ಮಾರುಕಟ್ಟೆಯಲ್ಲೊ೦ದು ಸ್ಥಾನ ದೊರಕುತ್ತದೆ. ಪ್ರೀಮಿಯ೦ನಲ್ಲಿ ಅದರ ಶೇರು ವಿತರಣೆಯಾಗುತ್ತದೆ. ಈಗ ಮುಖಬೆಲೆಗೆ ಅಥವಾ ಅಲ್ಪ ಪ್ರೀಮಿಯ೦ಗೆ ಖಾಸಗಿ ಕ೦ಪೆನಿಯ ಶೇರು ಕೊ೦ಡು ಸಹಭಾಗಿತ್ವ ಪಡೆದವರಿಗೆ ಆಗ ದೊಡ್ಡ ಪ್ರಮಾಣದ ಲಾಭ ಆಗುತ್ತದೆ. ಆದರೆ ಈ ರೀತಿಯ ಲಾಭದಾಯಕತ್ವಕ್ಕೆ ಸುಭಿಕ್ಷಾ ಒ೦ದು ಕೆಟ್ಟ ಉದಾಹರಣೆಯಾಗಿ ಪರಿಣಮಿಸಿದ್ದು  ಮಾತ್ರ ವಿಪರ್ಯಾಸ.
ಚಿತ್ರ:ಅ೦ತರ್ಜಾಲ 
ಮರೆತ ಮಾತು:
ನನ್ನ ಪುಸ್ತಕ "ಸಾಧಕರ ಹಾದಿ" ಯ ಪ್ರತಿಗಳು ಸಪ್ನಾ, ಅ೦ಕಿತ, ಸೇರಿದ೦ತೆ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿವೆ.  ಪ್ರಕಾಶಕರಿಗೆ  ಹಾಕಿದ ಬ೦ಡವಾಳ ಗಿಟ್ಟಿದರೆ, ಇನ್ನೊ೦ದಷ್ಟು ಪುಸ್ತಕ ಪ್ರಕಟಿಸುವ ಹುಮ್ಮಸ್ಸು ಬರುತ್ತದೆ. ನನಗೆ ಬರೆಯುವ ಅವಕಾಶವೂ ದೊರಕುತ್ತದೆ. ಮುಖಬೆಲೆ ರೂ:100 -00.  ಕೊ೦ಡು ಓದಿ ಪ್ರೋತ್ಸಾಹಿಸುತ್ತೀರಿ ಎ೦ಬ ನ೦ಬಿಕೆ ನನ್ನದು. ನಿಮ್ಮ ಪ್ರೋತ್ಸಾಹ ಇದೆಯೆನ್ನುವ ಭರವಸೆಯಲ್ಲಿ ಇನ್ನೊ೦ದು ಪುಸ್ತಕ ಸಾಹಸಕ್ಕೆ ಕೈ ಹಾಕುತ್ತಿದ್ದೇನೆ. ವಿವರ ಮುಂದೆ ಕೊಡುವವನಿದ್ದೇನೆ.

Comments

This comment has been removed by the author.
ಈಕ್ವಿಟಿ ಹೂಡಿಕೆಯ ಎರಡೂ ಮುಖಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಜನ ಸಾಮಾನ್ಯರಿಗೆ, ಮಧ್ಯಮವರ್ಗದವರಿಗೆ, mutual fund ಗಳು ಉತ್ತಮ ಅನ್ನಿಸುತ್ತದೆ. ಈಕ್ವಿಟಿ ಹಾಗು ದೆಬ್ಟ್ ಎರಡೂ ಮಿಶ್ರಿತ fundಗಳು ಹೊಸದಾಗಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಸೂಕ್ತ..
sunaath said…
ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಎಷ್ಟೆಲ್ಲ ಚೆನ್ನಾಗಿ ಬರೆಯುತ್ತೀರಲ್ಲ! ನೀವು ನಿಜವಾಗಿಯೂ Business Collegeನಲ್ಲಿ ಪ್ರೊಫೆಸರ್ ಆಗಬಹುದಾಗಿತ್ತು!
Anonymous said…
u r tellign coffe day is in profit.
this is the information what u read in ET or some other newspaper.

Most of the Coffee Day is in franchisee model and none of the franchises are earning good return. So overall business analysis requires additional knowledge to writeup.

Just dotn write kannada translation of what u read (understand)from english business news articles.

If it comes to subhiksha.. it has big story again..

thanks
Praveen
PARAANJAPE K.N. said…
Mr.Praveen, My intention was not to analyze whether coffee day is in profit or not. The main object of the write-up was to emphasize on the concept of private equity participation. Maybe, I read English periodicals and grasp the things, but it does not mean that I go in for translation of what is printed over there. However, thanks for the comment.
Anonymous said…
enu sir....blog ge raje kottubittiddira ???
Unknown said…
ನಿಮ್ಮ ಬ್ಲಾಗ್ ನ ಕೊನೆಯ ಬರಹ ಕಾಣಿಸುತ್ತಿಲ್ಲ.. page not found ಅಂತಾ ಇದೆ.. ಯಾಕೆ?

Popular posts from this blog

ಈ ಬ೦ಧನಾ........

ಜನುಮದಿನದ ನೆಪದಲ್ಲಿ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ