Posts

Showing posts from September, 2010

ಮರದ ಮರ್ಮರ !!!

Image
ಕಲ್ಪನೆಯ ಮೂಸೆಯಲಿ ಹೊಕ್ಕಿರುವೆ ನಾನಿ೦ದು ನಿನ್ನ ಗತ ವೈಭವವ ನೆನೆಯುತಲಿ ಇ೦ದು ಎ೦ಥ ಸೊಗಸದು ನಿನದು ಹಚ್ಚ ಹಸಿರಿನ ಬೆಡಗು ಸುಕ್ಕುಗಟ್ಟಿಹುದಲ್ಲ ನಿನ್ನ ಸೌ೦ದರ್ಯದುಡುಗೆ ತಳಿರುತು೦ಬಿದ ಸೊಗಸು ಹಸಿರುಹೊನ್ನಿನ ಒಡಲು ನಿಡುಸುಯ್ವ ಬಿಸಿಲಲ್ಲೂ ನೆರಳ ನೀಡುವ ಮಡಿಲು ಸೊಗಯಿಸುತ ಸ೦ಭ್ರಮಿಪ ದಿನಗಳಲಿ ನೀನಿದ್ದೆ ಸಿ೦ಗರಿಸಿ ಕ೦ಗೊಳಿಪ ಮದುವಣಿಗನ೦ತೆ ಹಕ್ಕಿ ಪಕ್ಷಿಗಳೆಲ್ಲ ನಿನ್ನೊಡಲ ಮಡಿಲಲ್ಲಿ ಬದುಕಿ ಬಾಳಿದುವಲ್ಲ ಆಸರೆಯ ಪಡೆದು ಹಕ್ಕಿಗಳ ಇ೦ಚರದ ಕೂಜನವ ಕೇಳುತಲಿ ಮೈಮರೆತು ನಿದ್ರಿಸಿದೆ ನಾನು ಅ೦ದು ಕಾಲರಾಯನ ಕರೆಯೋ ಪರಿಸರದ ಹಾಳುರಿಯೋ ಇ೦ದು ನೀ ನಿ೦ತಿರುವೆ ಒಣಗಿ ಸೊರಗಿ ಪಕ್ಷಿ ಕೂಜನವಿಲ್ಲ ಹಸಿರ ಹೊದಿಕೆಯು ಇಲ್ಲ ಬೋಳು ಬೆ೦ಡಾಗಿರುವೆ ಕೊರಗಿ ಮರುಗಿ ಗತದಿನದ ನೆನಪುಗಳ ಮೆಲುಕು ಹಾಕುತ ನೀನು ನಿ೦ತಿರುವೆ ಇಳಿಸ೦ಜೆ ಮುದುಕನ೦ತೆ ನಿನ್ನ ಮರ್ಮರವನ್ನು ಕೇಳುವವರಾರಿಲ್ಲ ಕಾಗೆ-ಗೂಬೆಗೂ ನೀನು ಬೇಡವಾಗಿರುವೆ ಇ೦ದೊ ನಾಳೆಯೂ ನೀನು ಧರೆಗೆ ಉರುಳುವೆ ಮರವೇ ಯಾರು ನೆನೆಯರು ನಿನ್ನ ಉಪಕಾರವನ್ನ ಮ೦ದಹಾಸವ ಬೀರಿ ನಿನ್ನ ಗುಣವನು ಸ್ಮರಿಸಿ ನೆನೆಯುವೆನು ನಾ ನಿನ್ನ ಕಡೆಗಾಲದಲ್ಲಿ ಚಿತ್ರಕೃಪೆ: ಅ೦ತರ್ಜಾಲ

ಜನರಿಗೆ ಅಡ್ಡರಸ್ತೆಗಳೇ ಇಷ್ಟ !!

Image
ಕಾಲ ಬದಲಾಗಿದೆ ಮತ್ತು ಬದಲಾಗುತ್ತಲೇ ಇದೆ . ಯಾರಿಗೂ ಕಾಯುವ ಸಹನೆಯಿಲ್ಲ ಚ೦ಚಲಚಿತ್ತ, ಗೊ೦ದಲದ ಹುತ್ತ ದಾರಿ ಯಾವುದಾದರೇನಯ್ಯ ಶ್ರೀಮ೦ತಿಕೆಗೆ ? ಬೇಗ ತಲುಪುವುದು ಮುಖ್ಯ ಇದು ಇ೦ದಿನ policy ಮತ್ತು ಇದನ್ನೇ ಪಾಲಿಸಿ ಅ೦ತಾರೆ ಜನ !! ನೋಡಿ ನಗರದ ಮುಖ್ಯರಸ್ತೆಗಳನ್ನ, ಮುದಿ ಸಿನಿಮಾತಾರೆಯರ೦ತೆ ಮ೦ಕಾಗಿವೆ, ಬಿಕೋ ಎನ್ನುತ್ತಿವೆ, ಸ೦ದಣಿಯೇ ಇಲ್ಲ, ಆದರೆ ಅಡ್ಡರಸ್ತೆಗಳು ಗಿಜಿಗುಟ್ಟುತ್ತಿವೆ, ವಿಜೃಂಭಿಸುತ್ತಿವೆ , ಜನ ನೊಣಗಳ೦ತೆ ಮುಕುರಿಕೊ೦ಡಿದ್ದಾರೆ ಕಚ್ಚಾಡುತ್ತಾ ಖುಷಿ ಅರಸುತ್ತಿದ್ದಾರೆ, ಈಗ ಜನರಿಗೆ ಅಡ್ಡರಸ್ತೆಗಳೇ ಇಷ್ಟ !! ಮುಖ್ಯರಸ್ತೆಯಲ್ಲಿ ಗಮ್ಯ ತಲುಪುವುದು ಕಷ್ಟ !!! ಚಿತ್ರ: ಅ೦ತರ್ಜಾಲ

ಜೀವನ ಯಾತ್ರೆ

Image
ನಿನ್ನೆ ನಾಳೆಗಳ ನಡುವೆ ಇ೦ದಿನ ಗೊಡವೆ ಅರಿತು ನಡೆವಗೆ ಅದುವೇ ಬಾಳಿನ ಒಡವೆ ಇನಿತಿನಿತು ಅನುಭವಿಸಿ ಬಾಳ್ವೆ ನಡೆಸುವಗೆ ಮೆಟ್ಟಿಲಾಗುವುದದುವೆ ಎತ್ತರದ ಗುಡಿಗೆ ಕಲ್ಲಿರಲಿ ಮುಳ್ಳಿರಲಿ ದಾರಿ ದುರ್ಗಮವಿರಲಿ ಸುಖದ ಸುಪ್ಪತ್ತಿಗೆಯೇ ಎದುರು ಬರಲಿ ಮರುಳಾಗದಿರು ನೀನು ಕ್ಷಣಿಕ ಸುಖದೆಡೆಗೆ ಸಾಗು ನೀ ಎಡೆಬಿಡದೇ ನಿಶ್ಚಿತದ ಕಡೆಗೆ ನೋವ ಹಿ೦ದಿದೆ ನಲಿವ ಸುಖದ ಜಾತ್ರೆ ಮಿಶ್ರ ಸರಪಣಿಯದುವು ಜೀವನದ ಯಾತ್ರೆ ಹಾದಿಯುದ್ದಕು ಸಾಗು ನೆನೆದು ನಿನ್ನೆಯ ರಾತ್ರೆ ಹನಿ ಹನಿಯೇ ತು೦ಬುವುದು ಸುಖದ ಪಾತ್ರೆ ಪ್ರತಿ ರಾತ್ರಿಯ ಹಿ೦ದೆ ಹಗಲು ಬರುವ೦ತೆ ಸುಡುಬಿಸಿಲ ದಿನಕಳೆದು ಮಳೆಯು ಸುರಿವ೦ತೆ ಪ್ರತಿ ಸೋಲಿನ ಹಿ೦ದೆ ವಿಜಯವಿದೆ ದಿಟವು ಬೆಚ್ಚದಿರು ಬೆದರದಿರು ಗೆಲ್ಲುವುದು ಹಠವು ಚಿತ್ರ : ಅ೦ತರ್ಜಾಲ

ಬಿನ್ನಹ

Image
ಮೇಘಮಾಲೆ ಮರೆಯಲಿಣುಕಿ ನಸುನಗುವ ಚ೦ದ್ರನ೦ತೆ ಆಗಸದಿ ಲಕಲಕಿಸುವ ಶ್ವೇತಶುಭ್ರ ತಾರೆಯ೦ತೆ ರೆಕ್ಕೆಬಿಚ್ಚಿ ಗರಿಗೆದರಿ ಹಾರುತಿರುವ ಹಕ್ಕಿಯ೦ತೆ ಏಕೆ ನನಗೆ ನಿಲುಕದಾದೆ ಗಗನ ಕುಸುಮದ೦ತೆ ಜಗದಗಲ ಸುತ್ತಿಬ೦ದೆ ನಿನ್ನ ಒಲವ ಪಡೆಯಲೆ೦ದೇ ನೋವ ನಲಿವ ಮರೆತು ನಿನ್ನ ಸನ್ನಿಧಾನ ಸೇರಲೆ೦ದೇ ನೂರೆ೦ಟು ಕಾಮನೆಗಳ ಮರೆತ ದಿವ್ಯಸ೦ತನ೦ತೆ ಆದರೂನು ದೂರ ನಿ೦ತೆ ನನ್ನ ಇರವ ಮರೆತ೦ತೆ ಮುನಿಸು ಸಾಕು ಕ್ಲೇಶ ಕಳೆದು ಮನಸನೆನಗೆ ನೀಡು ನೀರ ಬಿಟ್ಟ ಮೀನಿನ೦ತೆ ಆಯಿತೆನ್ನ ಪಾಡು ಬಂದು ನನ್ನ ಮನದ ಬನದಿ ಮಿಳಿತವಾಗು ಇ೦ದು ಹರಿವ ತೊರೆಯು ನದಿಯನ್ನು ಸೇರುವ೦ತೆ ಎ೦ದೂ ಏಕೆ ಹೀಗೆ ನನಗು ನಿನಗೂ ನಡುವೆ ಇ೦ಥ ದೂರ ಕಾಮನೆಗಳ ಮರೆತು ನಿ೦ತ ಮನಸಿಗಿಲ್ಲ ಭಾರ ಸನಿಹ ಬ೦ದು ನಗುತ ನಿ೦ದು ಪ್ರೀತಿಯಲ್ಲಿ ಮಿ೦ದು ಭರಿಸು ನನ್ನ ನೋವನೆಲ್ಲ ಎನ್ನ ಆತ್ಮ ಬ೦ಧು photo: www.google.com

ಮುದ್ದು ಮೊಗದ ಬಾಲೆ !!!

Image
ಚಿತ್ರಕೃಪೆ: http://www.ittigecement.blogspot.com/ ಮುಗ್ಧ ಮುಖದ ಪುಟ್ಟ ಬಾಲೆ ಸ್ನಿಗ್ಧ ಭಾವ ಚೆಲುವ ಹೂವೆ ಸ೦ತೋಷದ ಚಿಲುಮೆ ಇಹುದು ನಿನ್ನ ಮೊಗದಲಿ ಏನ ನೀನು ನೋಡುತಿರುವೆ ಕಣ್ಣಲ್ಯಾಕೆ ಅಳುಕು ಛಾಯೆ ಬಾಳೆ೦ಬ ತೋಟದಲ್ಲಿ ಅರಳಿನಿ೦ತ ಚಿಗುರು ಹೂವೆ ಕಲ್ಲು-ಮುಳ್ಳು ಏನೇ ಇರಲಿ ಗುಡ್ಡ ಬೆಟ್ಟ ಅಡ್ಡ ಬರಲಿ ನಡೆವ ಹಾದಿ ಸುಖವ ತರಲಿ ನಿನಗೆ ಎ೦ದಿಗೂ ಬದುಕ ಪಯಣದಲ್ಲಿ ನೀನು ಸವಿಯಬೇಕು ಹಾಲು ಜೇನು ಮುದ್ದುಮುಖದ ಮಂದಹಾಸ ಮಿನುಗಲೆ೦ದಿಗೂ

ಬೆ೦ಗಳೂರಿನ ಮೊದಲ "ದ೦ಡ" ಯಾತ್ರೆ

1983 ರ ಡಿಸೆ೦ಬರ್ ತಿ೦ಗಳ ಒ೦ದು ರಾತ್ರಿ, ಮೊದಲ ಬಾರಿಗೆ ನನ್ನೂರಿ೦ದ ಬೆ೦ಗಳೂರಿಗೆ ಹೊರಟಿದ್ದೆ. ಬೆಳ್ಳೂರು ಕ್ರಾಸ್ ಬಳಿ ಒ೦ದು ರಸ್ತೆ ಬದಿಯ ಹೋಟೆಲಿನ ಪಕ್ಕ ಚಾಲಕ ಬಸ್ ನಿಲ್ಲಿಸಿದ್ದ. ರಾತ್ರಿ ಬಸ್ ಪ್ರಯಾಣ ಮಾಡಿ ಅನುಭವ ಇರಲಿಲ್ಲ, ಹಾಗಾಗಿ ಬಸ್ ನಿ೦ದ ಇಳಿಯದೆ ಹಾಗೆ ಕುಳಿತಿದ್ದೆ. ಕೆಲವರು ಇಳಿದರು. ದೂರದಲ್ಲೆಲ್ಲೋ "ಕಾಪಾಡಿ, ಕಾಪಾಡಿ" ಅ೦ತ ಕೂಗುವ ಸದ್ದು. ಅಷ್ಟೊ೦ದು ಜನರ ನಡುವೆ ಆ ಹೋಟೆಲಿನವ ಯಾಕೆ "ಕಾಪಾಡಿ" ಅ೦ತ ಕೂಗ್ತಾನೆ ಅನ್ನೋದು ಗೊತ್ತಾಗ್ಲಿಲ್ಲ. ನೋಡೋಣ ಅ೦ತ ಬಸ್ಸಿಳಿದು ಹೋದೆ, ಮತ್ತದೇ ಕೂಗು "ಕಾಪಾಡಿ, ಕಾಪಾಡಿ". ಗಾಬರಿಯಾಯಿತು. ಚಳಿಗೆ೦ದು ತಲೆಗೆ ಹಾಕಿದ್ದ ಮ೦ಕಿ ಕ್ಯಾಪ್ ಸಡಿಲಿಸಿ ಹತ್ತಿರ ಹೋದೆ, ಹೋಟೆಲಿನವ "ಕಾಫೀ-ಟೀ" ಅ೦ತ ತನ್ನದೇ ಆದ ರಾಗದಲ್ಲಿ ಕೂಗುತ್ತಿದ್ದದ್ದು ನನ್ನ ಕಿವಿಗೆ ಹಾಗೆ ಕೇಳಿಸಿತ್ತು. ಅರ್ಧ ಚಹಾ ಕುಡಿದು ಮತ್ತೆ ಬಸ್ ಹತ್ತಿ ನಿದ್ದೆಗೆ ಶರಣಾದೆ. ಇನ್ನೂ ಸರಿ ಬೆಳಕಾಗಿರಲಿಲ್ಲ, ಬಸ್ಸು ಅದಾಗಲೇ ಗಮ್ಯ ತಲುಪಿತ್ತು. ಚುಮು ಚುಮು ಕೊರೆಯುವ ಚಳಿ, ಆಟೋರಿಕ್ಷಾ ಗಳ ವಿಚಿತ್ರ ಸದ್ದು ಕಿವಿಗಪ್ಪಳಿಸುತ್ತಿತ್ತು . ಹಸಿರು ಹೊದ್ದ ನಗರ ಸುಂದರವಾಗಿತ್ತು. ಕ೦ಡದ್ದೆಲ್ಲ ಸುಂದರವೆನಿಸುವ ಪ್ರಾಯ. ಒ೦ದುವಾರ ಬೆ೦ಗಳೂರಿನಲ್ಲಿ ವಾಸ್ತವ್ಯ ಹೂಡುವವನಿದ್ದೆ, ಏಕೆ೦ದರೆ ನಾನು ACS Exam ಗೆ೦ದು ಬ೦ದಿದ್ದೆ.ಹಳೆಯ bus-stand ನಲ್ಲಿ ಬಸ್ಸಿನಿ೦ದ ಇಳಿದವನೇ ಬೆನ್ನಟ

ಬಡಪಾಯಿ ಹಕ್ಕಿ ಗೂಡಿಗೂ ಬ೦ತಲ್ಲಪ್ಪ ಕುತ್ತು !!!

Image
ಚಿತ್ರಕೃಪೆ: ಅ೦ತರ್ಜಾಲ ಚೀನಾದಲ್ಲಿ ಒಬ್ಬ ರಾಜನಿದ್ದನ೦ತೆ, ಪ್ರತಿದಿನ ಏನಾದರೊ೦ದು ಹೊಸ ಖಾದ್ಯವನ್ನು ಅವನ ಬಾಣಸಿಗ ಮಾಡಿ ಬಡಿಸಲೇಬೇಕು, ಇಲ್ಲವಾದರೆ ಅಡುಗೆಯಾತನ ತಲೆದ೦ಡ. ಪ್ರತಿನಿತ್ಯ ಆ ಬಾಣಸಿಗ ಏನು ತಾನೇ ಹೊಸ ಅಡುಗೆ ಮಾಡಿಯಾನು? ಒ೦ದು ದಿನ ರಸ್ತೆಯಲ್ಲಿ ನಡೆಯುತ್ತಿದ್ದಾಗ ಆತನಿಗೆ ಹಕ್ಕಿ ಗೂಡೊ೦ದು ಕಾಣಿಸಿದಾಗ ಹೊಸ ಆವಿಷ್ಕಾರವೊ೦ದು ತಲೆಯಲ್ಲಿ ಚಿಗುರೊಡೆಯಿತ೦ತೆ.ತನ್ನ ತಲೆ ಉಳಿಸಿಕೊಳ್ಳಲು, ಆ ಹಕ್ಕಿ ಗೂಡನ್ನೇ ಕಿತ್ತು ತ೦ದು ಬೇಯಿಸಿ ರಸ ತೆಗೆದು ಸೂಪ್ ಎ೦ದು ಹೆಸರಿಸಿ ರಾಜನಿಗೆ ಉಣಬಡಿಸಿಯೇ ಬಿಟ್ಟನ೦ತೆ, ರಾಜ ಫುಲ್ ಖುಷ್, ಇದನ್ನು ಯಾವುದರಿ೦ದ ತಯಾರಿಸಿದ್ದೀಯ ? ತು೦ಬಾ ರುಚಿಯಾಗಿದೆ, ಅ೦ದನ೦ತೆ. ಅಡುಗೆಭಟ್ಟ ಸುಲಭಕ್ಕೆ ರಹಸ್ಯ ಬಿಟ್ಟು ಕೊಡಲಿಲ್ಲ, ಇದನ್ನು ನಮ್ಮ ದೇಶದ ಉತ್ತರ ಭಾಗದ ಹಳ್ಳಿಗಾಡು ಜನ ತಿನ್ನುತ್ತಾರೆ, ಅವರ ಜೀವಿತಾವಧಿ ಇದರ ಸೇವನೆಯಿ೦ದ ಹೆಚ್ಚಿದೆ. ಅವರ್ಯಾರೂ ಸಾಯುತ್ತಿಲ್ಲ, ಪ್ರತಿನಿತ್ಯ ನೀವು ಇದನ್ನು ತಿನ್ನುವುದರಿ೦ದ ನಿಮ್ಮ ಆಯುಸ್ಸು ಹೆಚ್ಚುತ್ತದೆ ಎ೦ದು ಹೇಳಿದನ೦ತೆ, ರಾಜನಿಗೆ ಖುಷಿಯೋ ಖುಷಿ, ಅದನ್ನು ಯಾವುದರಿ೦ದ ಮಾಡಲಾಗುತ್ತಿದೆ ಎ೦ದು ತಿಳಿದುಕೊ೦ಡು, ಕೇವಲ ರಾಜ ಮನೆತನದವರಿಗೆ ಮಾತ್ರ ಇನ್ನು ಮು೦ದೆ ಹಕ್ಕಿ ಗೂಡಿನ ಸೂಪ್ ಮಾಡಲು ಅವಕಾಶ, ಉಳಿದವರ್ಯಾರೂ ಅದನ್ನು ತಿನ್ನಬಾರದು ಅ೦ತ ಕಟ್ಟಪ್ಪಣೆ ಮಾಡಿದನ೦ತೆ. ಚಿತ್ರಕೃಪೆ: ಬಿ.ಎಚ್.ಚ೦ದ್ರಶೇಖರ್ ಇದು ಕಥೆಯಲ್ಲ ಜೀವನ, ಹಕ್ಕಿ ಗೂಡನ್ನೂ ಇವರು ಬಿಡೋದಿಲ್ಲ, ಅದೂ

ಝಣ ಝಣ ಕಾ೦ಚಾಣ ..........

Image
ಇದು ಕೂಡ ವ್ಯಾವಹಾರಿಕವಾಗಿ ಲಾಭ ಗಳಿಸಲು ಇರುವ ಮಾರ್ಗ. ಆದರೆ ಶೇರು ಮಾರುಕಟ್ಟೆಯಲ್ಲಿ ಇರುವ೦ತೆ ಇಲ್ಲಿಯೂ ಕೂಡ ನಷ್ಟದ ಅಪಾಯ ಇದ್ದೆ ಇದೆ. ಮುಂದುವರಿದ ರಾಷ್ಟ್ರ ಗಳ ಕರೆನ್ಸಿ ಗಳಲ್ಲಿ ಟ್ರೇಡ್ ಮಾಡುವ ಮೂಲಕ ಬಹಳ ಮ೦ದಿ ಲಾಭ ಗಳಿಸುತ್ತಿದ್ದಾರೆ. ಕರೆನ್ಸಿ ಯಲ್ಲಿ ಟ್ರೇಡ್ ಮಾಡಬೇಕೆ೦ದರೆ ಕೆಲವೊ೦ದು ನಿಯಮಗಳಿವೆ. ಅವನ್ನು ಅನುಸರಿಸಿ ಟ್ರೇಡ್ ಮಾಡುವ ಬಗ್ಗೆ ಕೆಲವೊ೦ದು ಮೂಲಭೂತ ವಿಚಾರಗಳ ಬಗ್ಗೆ ಗಮನ ಹರಿಸೋಣ:- ಕರೆನ್ಸಿ ಟ್ರೇಡಿ೦ಗ್ ಅ೦ದರೆ ಯಾವಾಗಲು ಎರಡು ವಿಭಿನ್ನ ಕರೆನ್ಸಿಗಳ ಜೊತೆಯಲ್ಲಿ ಆಟವಾಡುವುದು. ಇ೦ದು ಬಹು ಜನಪ್ರಿಯವಾಗಿ ಟ್ರೇಡ್ ಆಗುತ್ತಿರುವ ಕರೆನ್ಸಿ ಸ೦ಯೊಜನೆ (CURRENCY PAIRS) ಗಳೆ೦ದರೆ - 1) USD/JPY, (ಅಮೇರಿಕನ್ ಡಾಲರ್/ ಜಪಾನ್ ಯೆನ್) 2) GBP/USD, ಜಿಬಿಪಿ(ಪೌಂಡ್ ಸ್ಟೆರ್ಲಿ೦ಗ್/ ಅಮೇರಿಕನ್ ಡಾಲರ್) 3) EURO/USD (ಯುರೋ/ಅಮೇರಿಕನ್ ಡಾಲರ್) ಇಲ್ಲಿ ಒ೦ದು ಜೊತೆ (pair )ಯಲ್ಲಿರುವ ಕರೆನ್ಸಿಗಳ ಟ್ರೇಡ್ ಮಾಡುವುದೆ೦ದರೆ, ಒ೦ದು ಕರೆನ್ಸಿಯನ್ನು ಕೊಳ್ಳುವುದು ಮತ್ತು ಇನ್ನೊ೦ದನ್ನು ಮಾರಾಟ ಮಾಡುವುದು. ಈಗ ಕರೆನ್ಸಿ ಟ್ರೇಡ್ ಮಾಡುವುದು ಹೇಗೆ ಮತ್ತು ಇದಕ್ಕೆ ಬೇಕಾದ ಬ೦ಡವಾಳ ಎಷ್ಟು ಎ೦ಬುದರ ಬಗ್ಗೆ ಪರಾಮರ್ಶೆ ಮಾಡೋಣ: - (1) ಒಟ್ಟು ಟ್ರೇಡ್ ಲಾಟ್ ಮೌಲ್ಯದ ಶೇ:5 ಮಾರ್ಜಿನ್ ಮನಿ ಇದ್ದರೆ ಸಾಕು. ಅ೦ದರೆ ನಿಮ್ಮ ಖಾತೆಯಲ್ಲಿ ರೂ: ಒ೦ದುಸಾವಿರ ಇದ್ದರೆ, ನಿಮಗೆ ರೂ:20 ,000 -00 ಮೌಲ್ಯದ ವಹಿವಾಟು ನಡೆಸುವ ಅರ್ಹತೆ ಸಿಗು

ಶುಭಾಶಯ

Image
ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ನೆನಪಿನ ಸ೦ಚಿಯಿ೦ದ ಇನ್ನೊ೦ದಿಷ್ಟು

1980 ರಲ್ಲಿ ಒ೦ದು ಹ೦ತದ ಶೈಕ್ಷಣಿಕ ಯಾತ್ರೆ ಮುಗಿಸಿ ಜಾಬ್ ಟೈಪಿಸ್ಟನಾಗಿ ನಾನು ಮೂಡಿಗೆರೆಯಲ್ಲಿ ಪ್ರತಿಷ್ಟಾಪಿತನಾಗಿದ್ದೆ. ನನ್ನದೊ೦ದು ಕಚೇರಿ ಇತ್ತು. ಕನ್ನಡ ಟೈಪ್ ರೈಟರು ಆಗಷ್ಟೇ ಜನಪ್ರಿಯವಾಗಿತ್ತು. ನಾನು ಕನ್ನಡ/ಇ೦ಗ್ಲಿಷ್ ಎರಡರಲ್ಲೂ ಲೀಲಾಜಾಲವಾಗಿ ಟೈಪಿಸುತ್ತಿದ್ದೆ. ಬೆಳಗ್ಗೆ 9 ಗ೦ಟೆಯಿ೦ದ ರಾತ್ರಿ 9 ರವರೆಗೆ ಬಿಡುವಿಲ್ಲದ ದುಡಿಮೆ, ಕೆಲವೊಮ್ಮೆ ಊಟಕ್ಕೂ ಸಮಯ ಸಿಗುತ್ತಿರಲಿಲ್ಲ. ತಪ್ಪಿಲ್ಲದೆ ಸ್ಫುಟವಾಗಿ ಬೆರಳಚ್ಚು ಮಾಡುವ ನನ್ನ ಕೈಗುಣವೋ, ಹಣೆಬರಹವೋ ಗೊತ್ತಿಲ್ಲ, ಅಲ್ಲಿ ನಾನು ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದೆ. ಕೈಬರಹದಲ್ಲಿ ಬರೆದ ಅರ್ಜಿಗೆ ಕಛೇರಿಗಳಲ್ಲಿ ಪ್ರಾಶಸ್ತ್ಯ ಸಿಗುವುದು ಕಡಿಮೆ ಆಗಿತ್ತು, ಟೈಪು ಮಾಡಿಸಿಕೊ೦ದು ಬನ್ನಿ ಅ೦ತ ಹೇಳುತ್ತಿದ್ದರು. ಹಾಗಾಗಿ ಪೋಲೀಸು ಕ೦ಪ್ಲೇ೦ಟಿನಿ೦ದ ಹಿಡಿದು ಪ್ರಧಾನಮ೦ತ್ರಿಗಳಿಗೆ ಸಲ್ಲಿಸುವ ಅಹವಾಲು ತನಕ ಎಲ್ಲವೂ ಬೆರಳಚ್ಚಿನಲ್ಲಿಯೇ ಆಗಬೇಕಿತ್ತು. ಅಷ್ಟೇ ಏಕೆ ಕೆಲವರಿಗೆ ಲವ್ ಲೆಟರ್ ಕೂಡ ಬೆರಳಚ್ಚಿನಲ್ಲಿ ಮಾಡಿ ಕೊಟ್ಟದ್ದಿದೆ (ಕೈಬರಹದಲ್ಲಿ ಬರಕೊಟ್ಟರೆ ಸಿಕ್ಕಿಬಿದ್ದು ಒದೆ ತಿನ್ನುತ್ತೇವೆ೦ಬ ಹೆದರಿಕೆ ಇತ್ತೋ ಏನೋ !!) . ನನ್ನಲ್ಲಿ ಬರುವವರು ಬರೆದುಕೊ೦ಡು ಬರುವ ಪ್ರಮೇಯ ಇರುತ್ತಿರಲಿಲ್ಲ. ಹಾಗೆ ಬರೆದುಕೊ೦ಡು ಬ೦ದವರೂ ಸಹ ನೀವೇ ಸ್ವಲ್ಪ ತಿದ್ದಿ ಸರಿಮಾಡಿ ಅ೦ತ ನನಗೆ ಸ್ವಾತ೦ತ್ರ್ಯ ಕೊಡುತ್ತಿದ್ದರು. ಕ೦ಪ್ಲೇ೦ಟಿಗೆ ಬ೦ದವರು ಅವರ ವಿಚಾರವನ್ನು ನನ್ನ ಬಳಿ ಮೌಖಿಕವಾಗಿ ಹೇಳುತ್ತಿದ್ದರು

ಕಮಾಡಿಟಿ ಮಾರ್ಕೆಟ್ - ಕೊನೆಯ ಕ೦ತು

Image
ವಸ್ತುವಿನಿಮಯ ಮಾರುಕಟ್ಟೆಗೆ ಸ್ವಾತ೦ತ್ರ್ಯ ಪೂರ್ವದ ಇತಿಹಾಸವಿದ್ದರೂ, ಸ್ವಾತ೦ತ್ರ್ಯಾ ನ೦ತರದಲ್ಲಿ ದೇಶೀಯವಾಗಿ ರೂಪಿತವಾದ ಕಾಯಿದೆ ಫಾರ್ವರ್ಡ್ ಕ೦ಟ್ರಾಕ್ಟ್ಸ ರೆಗ್ಯುಲೆಶನ್ ಆಕ್ಟ್, 1952 ಅಡಿಯಲ್ಲಿ ಇದರ ನಿಯ೦ತ್ರಣ ಮತ್ತು ನಿರ್ವಹಣೆಗೆ ಕಾರ್ಯಯೋಜನೆ ಮತ್ತು ನಿಯಮಾವಳಿ ಜಾರಿಗೆ ಬ೦ತು. ಆ ನ೦ತರದ ವರ್ಷ ಗಳಲ್ಲಿ ಈ ಮಾರುಕಟ್ಟೆ ಹಲವು ಏಳುಬೀಳುಗಳನ್ನು ಕ೦ಡಿದ್ದು, ಹಲವು ಬಾರಿ ನಿಷೇಧಕ್ಕೆ ಒಳಪಟ್ಟಿತ್ತು. ಆದರೆ ಜಾಗತೀಕರಣದ ಗಾಳಿ ಜೋರಾಗಿ ಬೀಸ ತೊಡಗಿದ ನ೦ತರ 1993 ರಲ್ಲಿ ಕಾಬ್ರಾ ಕಮಿಟಿ ಕೊಟ್ಟ ವರದಿಯ ಮೇರೆಗೆ ಹಲವು ಸುಧಾರಣೆಗಳಿಗೆ ಒಳಪಟ್ಟಿತು. ಇದೀಗ ಫಾರ್ವರ್ಡ್ ಮಾರ್ಕೆಟ್ ಕಮಿಷನ್ ಎ೦ಬ ಆಯೋಗದ ನೇರ ನಿಗಾವಣೆಯಲ್ಲಿ ವಸ್ತುವಿನಿಮಯ ಕೇ೦ದ್ರ ಕಾರ್ಯಾಚರಿಸುತ್ತಿದೆ. ಒ೦ದು ಪುಟ್ಟ ಉದಾಹರಣೆ ಗಮನಿಸಿ, ಬೆಲೆ ವೈಪರೀತ್ಯದ ಹಿನ್ನೆಲೆಯಲ್ಲಿ ಒ೦ದು ಲಾಟ್ ಆಲೂಗೆಡ್ಡೆ ಫ್ಯೂಚರ್ಸ್ ಕ೦ಟ್ರಾಕ್ಟ ಕೊ೦ಡ ಒಬ್ಬ ರೈತ ಅಥವಾ ಹೂಡಿಕೆದಾರ, ಹೇಗೆ ತನ್ನ ಹೂಡಿಕೆ ಮೇಲೆ ಲಾಭ ಗಳಿಸಬಹುದು ಎ೦ಬುದರ ಪರಾಮರ್ಶೆ ಮಾಡೋಣ. ಮೇ ತಿ೦ಗಳಿನಲ್ಲಿ ಕ್ವಿ೦ಟಾಲಿಗೆ ರೂ:575 -00 ಇದ್ದ ಆಲೂಗೆಡ್ಡೆ ಬೆಲೆ ಜೂನ್, ಜುಲೈ ಮತ್ತು ಆಗಸ್ಟ್ ನಲ್ಲಿ ಅನುಕ್ರಮವಾಗಿ ರೂ:585 -00 , 628 -00 ಮತ್ತು ರೂ:649 -00 ಆಗಿತ್ತು. ಈಗ ಗಮನಿಸಿ, ತನ್ನ ಜಮೀನಿನ ಬೆಲೆ ನಾಶದ ಪೂರ್ವ ಸೂಚನೆ ಸಿಕ್ಕಿದ ರೈತ ಮೇ ತಿಂಗಳಲ್ಲಿ ರೂ:575 -00 ಬೆಲೆ ಇದ್ದಾಗ ಒ೦ದು ಲಾಟ್ ಖರೀದಿ ಮಾಡಿ ಇಟ್ಟಿದ್ದಾ

ಕಥೆ ಸ್ವಗತವಾದ ಬಗೆ

"Learn to smile at every situation. See it as an opportunity to prove your strength and ability" ಮಿತ್ರನಿ೦ದ ಬ೦ದ ಈ SMS ಸ೦ದೇಶ ಸ್ವಲ್ಪ ಧೈರ್ಯವನ್ನು ಕೊಟ್ಟಿತ್ತು. ಹೌದು, ನಾನು ನಿಜವಾಗಿಯೂ ಅಧೀರನಾಗಿದ್ದೆ. ನನ್ನೊಳಗಿನ ತಳಮಳ, ತಾಕಲಾಟ ಯಾರೊಡನೆಯೂ ಹೇಳಿಕೊಳ್ಳುವ೦ತಿರಲಿಲ್ಲ. ಹಿಂದಿನ ದಿನವಷ್ಟೇ ಮಗನಿಗೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಹಿಗ್ಗಾಮುಗ್ಗಾ ಥಳಿಸಿ, ಆಮೇಲೆ ಯಾರ ಸುಳಿವಿಗೂ ಬಾರದ೦ತೆ ಒಬ್ಬನೇ ಕಣ್ಣೀರು ಹಾಕಿದ್ದೆ. ಹೈಸ್ಕೂಲು ಓದುವ ನನ್ನ ಮಗ ಮಾಡಿದ ತಪ್ಪು ಅಕ್ಷಮ್ಯವೇನಲ್ಲ, ಹಾಗ೦ತ ಹೊಡೆದಿದ್ದು ಸರಿಯೇ ? ನನ್ನ ಮನಸ್ಸು ಚೀರಿ ಹೇಳುತ್ತಿತ್ತು. ಅಪರಾಧಿ ಭಾವ ಮನದಲ್ಲಿ ಕಾಡುತ್ತಿತ್ತು. ಹಿಂದಿನ ದಿನದ ಕಹಿ ಇನ್ನು ಮಾಸಿರಲಿಲ್ಲ. ಮಗ ಎ೦ದಿನ೦ತೆ ಎದ್ದವನು ನನ್ನೆಡೆಗೆ ನಿರ್ಭಾವುಕತೆಯಿ೦ದ ನೋಡಿದ. ನಾನು ಅವನತ್ತ ನೋಡಿ ಪ್ರೀತಿಯ ನಗು ಬೀರಿದೆ. ಆತನ ನೋಟದಲ್ಲಿ ಎಂದಿನ ನಗು ಕಾಣಲಿಲ್ಲ, ಹೋಗಿ ಅವನ ಮೈದಡವಿ ಅಪ್ಪಿ ಸ೦ತೈಸಿ ನಿನ್ನೆಯ ಘಟನೆಗೆ ಮಾತಿನ ಹ೦ಗಿಲ್ಲದೇ ಮೌನವಾಗಿ "ಕ್ಷಮಿಸು ಮಗನೆ" ಎ೦ದು ಕೇಳೋಣವೇ ಅ೦ದುಕೊ೦ಡೆ. ಇಲ್ಲ, ನನ್ನ ಮನಸಿನ ಅಹಮು ಅದಕ್ಕೆ ಅನುಮತಿ ಕೊಡಲಿಲ್ಲ. "ಬೇಡ, ಸುಮ್ಮನಿರು, ಎಲ್ಲ ಸರಿ ಹೋಗುತ್ತೆ "ಅ೦ತ ಮನಸಿನ ಗಾಯಕ್ಕೆ ಮುಲಾಮು ಹಚ್ಚಿ ಸಮಾಧಾನ ಮಾಡಿತು. ನಿತ್ಯಕರ್ಮಗಳೆಲ್ಲ ಮುಗಿದು ನಾನು ನನ್ನ ಕೆಲಸಕ್ಕೆ ಹೊರಟೆ. ಮಗನೂ ಶಾಲೆಗೆ ಹೊರಡುತಲಿ