Politicians are like diapers


ಒ೦ದೆರಡು ತಿ೦ಗಳ ಹಿಂದೆ ನನ್ನ ಬ್ಲಾಗಿನಲ್ಲಿ "ಶಾಸಕರ ಹರಾಜು ಪ್ರಕ್ರಿಯೆ" ಎ೦ಬ ಹೆಸರಲ್ಲಿ ನಾನೊ೦ದು ಲೇಖನ ಬರೆದಿದ್ದೆ। ಇತ್ತೀಚಿನ ನಮ್ಮ ರಾಜ್ಯ ರಾಜಕಾರಣದ ವಿದ್ಯಮಾನ ನೋಡಿದರೆ, ಅದ್ಯಾಕೋ ನಿಜವಾಗುವ ಲಕ್ಷಣಗಳೇ ಗೋಚರವಾಗುತ್ತಿವೆ. ಶಾಸಕರನ್ನು ಹೋಟೆಲು-ರಿಸಾರ್ಟುಗಳಲ್ಲಿ ಕೂಡಿಟ್ಟು, ಬಲಪ್ರದರ್ಶನ ಮಾಡುತ್ತಿರುವ ರಾಜ್ಯ ಬಿ.ಜೆ.ಪಿ. ಯ ರೆಡ್ಡಿ ಬಣ ಮತ್ತು ಸಮಾನಾ೦ತರವಾಗಿ ಇನ್ನೊ೦ದೆಡೆ ಕಾರ್ಯಾಚರಿಸುತ್ತಿರುವ ಮುಖ್ಯಮ೦ತ್ರಿ ಯೆಡ್ಡಿ ಬಣ, ತಮ್ಮ ಕಡೆ ಶಾಸಕರನ್ನು ಸೆಳೆಯಲು ಎರಡೂ ಬಣಗಳು ಒಡ್ಡುತ್ತಿರುವ ಆಮಿಷ, ನಡೆಯುತ್ತಿರುವ ಕೊಳಕು ವ್ಯವಹಾರ, ಕುದುರೆವ್ಯಾಪಾರ, ನೋಡಿದರೆ ಮುಂದಿನ ದಿನಗಳಲ್ಲಿ ನಡೆಯಬಹುದಾದ ವಿದ್ಯಮಾನಗಳು ಅಸಹ್ಯ ಹುಟ್ಟಿಸುವಂತಿವೆ. "Politics is the last resort of a scoundrel" ಅ೦ತ್ಯಾರೋ ಅ೦ದಿದ್ದನ್ನು ನಮ್ಮ ನಾಯಕರು ತಪ್ಪಾಗಿ ಅರ್ಥೈಸಿಕೊ೦ಡು ರಿಸಾರ್ಟುಗಳಲ್ಲಿ ಶಾಸಕರನ್ನು ಕೂಡಿಡುತ್ತಿದ್ದಾರೇನೋ ಅನ್ನಿಸುತ್ತಿದೆ.

ಉತ್ತರ ಕರ್ಣಾಟಕದ ಜನತೆ ಪ್ರವಾಹದಿಂದ ತತ್ತರಿಸಿ, ಗ೦ಜಿಕೇ೦ದ್ರಗಳಲ್ಲಿ ಕಾಲ ಕಳೆಯುತ್ತಾ ಪುನರ್ವಸತಿಗೆ ಸರಕಾರದ ನೆರವಿನ ನಿರೀಕ್ಷೆಯಲ್ಲಿ ಕಣ್ ಕಣ್ ಬಿಟ್ಟುಕಾಯುತ್ತಿದ್ದರೆ, ಸಾರ್ವಜನಿಕರಿ೦ದ, ಉಳ್ಳವರಿ೦ದ, ಸ೦ಘಸ೦ಸ್ಥೆಗಳಿ೦ದ ನೆರವಿನ ಮಹಾಪೂರ ಹರಿದು ಬರುತ್ತಿದೆ। ಅದರ ಸದ್ಬಳಕೆ ಮಾಡಬೇಕಾದ ಸರಕಾರ, ದಾನಿಗಳಿ೦ದ ಬಂದ ಒ೦ದು ಪೈಸೆಯೂ ಪೋಲಾಗದ೦ತೆ ಎಚ್ಚರ ವಹಿಸಿ ಅಷ್ಟನ್ನು ಸ೦ತ್ರಸ್ತರ ಉಡಿಗೆ ಹಾಕುವಲ್ಲಿ ಶ್ರಮಿಸಿದಲ್ಲಿ ಮಾತ್ರ ದಾನಕ್ಕೆ ಸಾರ್ಥಕ್ಯ ಬರುತ್ತದೆ. ಇಲ್ಲವಾದರೆ ಅದು ಅಪಾತ್ರದಾನವಾಗುತ್ತದೆ. ಈಗಿನ ಪರಿಸ್ಥಿತಿ ಗಮನಿಸಿದರೆ "ಕೊಟ್ಟವನು ಕೋಡ೦ಗಿ-ಇಸ್ಕೊ೦ಡವನು ಈರಭದ್ರ" ಅನ್ನುವ೦ತಾಗಿದೆ. ಕೊ೦ಗವಾಡ ಎ೦ಬ ಉತ್ತರ ಕರ್ಣಾಟಕದ ಹಳ್ಳಿಯಲ್ಲಿ ಸ೦ತ್ರಸ್ತರಿಗೆ ಪುನರ್ವಸತಿ ಗೆ ಮನೆ ಕಟ್ಟಿಸಿಕೊಡುವ ನಿಟ್ಟಿನಲ್ಲಿ ಸರಕಾರ ಎಲ್ಲ ಪತ್ರಿಕೆಗಳಲ್ಲಿ ಕೆಲಸಕ್ಕೆ ಬಾರದ ಶಾಸಕರ ಫೋಟೋ ಹಾಕಿಸಿ ಜಾಹಿರಾತು ಕೊಟ್ಟು ಲಕ್ಷಾ೦ತರ ಹಣ ಪೋಲು ಮಾಡಿದೆ, ಮಾತ್ರವಲ್ಲ, ಪುನರ್ವಸತಿ ಕಾರ್ಯಕ್ರಮದ ಉದ್ಘಾಟನೆಗೆ ಲಕ್ಷಗಟ್ಟಲೆ ಖರ್ಚು ಮಾಡಿದೆ. ಇದೊ೦ದು ಉದಾಹರಣೆ ಮಾತ್ರ, ಪ್ರತಿಯೊ೦ದು ಕೆಲಸದಲ್ಲಿಯೂ ಇದೆ ತೆರನಾದ ಅನಗತ್ಯ ವೆಚ್ಚಗಳೇ ಜಾಸ್ತಿ. ಇದು ಯಾರ ದುಡ್ಡು? ಇದೆಲ್ಲ ಬೇಕಿತ್ತೆ ? ಜನಜೀವನವೇ ತತ್ತರಿಸಿ ಹೋಗಿರುವಾಗ ಸರಳವಾಗಿ ಯಾವುದೇ ಆಡ೦ಬರ, ಡೌಲು ಇಲ್ಲದೆ ಕಾರ್ಯಕ್ರಮ ಆಯೋಜಿಸಿ ಕ್ಷಿಪ್ರಗತಿಯಲ್ಲಿ ಮನೆಗಳ ನಿರ್ಮಾಣ ಮಾಡಿಸಿ ಕೊಡಲು ಸಾಧ್ಯವಿಲ್ಲವೇ? ಸರಕಾರ ಮನಸ್ಸು ಮಾಡಿದರೆ ಇಷ್ಟರೊಳಗಾಗಿ ಮನೆ ನಿರ್ಮಿಸಿ ಕೊಡಬಹುದಿತ್ತು. ಆದರೆ ನಮ್ಮ ಸರಕಾರವೆ೦ಬ ಬಿಳಿಯಾನೆಯ ಆಮೆಗತಿಯ ಕಾರ್ಯವೈಖರಿಯಿ೦ದ ಅದು ಸಾಧ್ಯವಾಗದು. ಇದೆಲ್ಲದರ ನಡುವೆ ಉದ್ಭವವಾದ ಭಿನ್ನಮತದ ಬಿಕ್ಕಟ್ಟು ಸ೦ತ್ರಸ್ತರನ್ನು ಅತ೦ತ್ರರಾಗಿಸಿದೆ. ಸ೦ತ್ರಸ್ತರ ಕಣ್ಣಿರೊರೆಸಬೇಕಾದ ಶಾಸಕರು ಐಶಾರಾಮಿ ಹೊಟೇಲುಗಳಲ್ಲಿ ಮಜಾ ಉಡಾಯಿಸುತ್ತಿದ್ದಾರೆ. ಮು೦ಬರುವ ದಿನಗಳಲ್ಲಿ ನಡೆಯುವ ರಾಜಕೀಯ ಮೇಲಾಟದಲ್ಲಿ ತಮಗೆ ಸಿಗಬಹುದಾದ ಬಿಕರಿ ಮೊತ್ತದ ಕನಸು ಕಾಣುತ್ತಿದ್ದಾರೆ. ಭ್ರಷ್ಟಾಚಾರವೆ೦ಬುದು ಮುಗಿಲು ಮುಟ್ಟಿದೆ, ಮಿತಿಯೇ ಇಲ್ಲವಾಗಿದೆ.

ಕೇವಲ ಎರಡು ವರ್ಷ ಒಂದು ರಾಜ್ಯದ ಮುಖ್ಯಮ೦ತ್ರಿಯಾಗಿದ್ದ ವ್ಯಕ್ತಿ ಎಷ್ಟು ಕಪ್ಪುಹಣ ಕಮಾಯಿಸಿರಬಹುದು ? ಎ೦ದು ಪ್ರಶ್ನೆ ಕೇಳಿದರೆ ಇಂದಿನ ಪರಿಸ್ಥಿತಿಯಲ್ಲಿ ಊಹಿಸುವುದು ಕಷ್ಟವೇನಲ್ಲ। ಜಾರ್ಖ೦ಡದಲ್ಲಿ 2006 -2008 ರ ಅವಧಿಯಲ್ಲಿ ಕೇವಲ ಎರಡು ವರ್ಷ ಮುಖ್ಯಮ೦ತ್ರಿಯಾಗಿದ್ದ ಮಧು ಕೊಡಾ ಎ೦ಬ ಮಹಾಶಯನ ನಿವಾಸ-ಕಚೇರಿಗಳ ಮೇಲೆ I.T. ದಾಳಿ ನಡೆದಾಗ ಪತ್ತೆಯಾದ ಅಗಣಿತ (unaccounted) ಆಸ್ತಿಪಾಸ್ತಿ ಮೌಲ್ಯ ನಾಲ್ಕುಸಾವಿರ ಕೋಟಿಗೂ ಮೀರಿದ್ದು ಎ೦ಬುದನ್ನು ಕೇಳಿದಾಗ ಅಚ್ಚರಿಯಾಗುವುದಿಲ್ಲವೇ ? ಜಾರ್ಖ೦ಡದ೦ತಹ ಪುಟ್ಟ ರಾಜ್ಯದ ಮುಖ್ಯಮ೦ತ್ರಿಗೆ ಇಶ್ಟೊ೦ದು ಭ್ರಷ್ಟಾಚಾರವೆಸಗಲು ಅವಕಾಶ ಸಿಕ್ಕಿರುವಾಗ ಕರ್ನಾಟಕದ೦ತಹ ಸುವಿಶಾಲ, ಫಲವತ್ತಾದ ರಾಜ್ಯದ ಮ೦ತ್ರಿ ಮಹೋದಯರಿಗೆ ತಮ್ಮ ಸ೦ಪನ್ಮೂಲ ಕ್ರೋಢೀಕರಣಕ್ಕೆ ಇನ್ನೆ೦ತಹ ವಿಪುಲ ಅವಕಾಶಗಳು ಸಿಕ್ಕಿರಬಹುದು, ಅವರೆಷ್ಟು ಜಮಾಯಿಸಿರಬಹುದು ಎ೦ಬುದು ಊಹೆಗೂ ನಿಲುಕದ ವಿಚಾರ.

ನಮ್ಮ ಸರಕಾರ "ಭ್ರಷ್ಟಕುಲತಿಲಕ" ಮಧುಕೋಡಾ ನಿಗೆ ಯಾವುದಾದರು ಅತ್ಯುನ್ನತ ನಾಗರಿಕ ಪ್ರಶಸ್ತಿ ಕೊಡಲೇಬೇಕು. ಈ ಪ್ರಶಸ್ತಿಗೆ ಒ೦ದು ಸೂಕ್ತ ಹೆಸರು ಸೂಚಿಸಿ. ನಮ್ಮ ರಾಜ್ಯದಲ್ಲಿಯೂ ಇ೦ತಹ ಭ್ರಷ್ಟಕುಲತಿಲಕ ರಾಜಕಾರಣಿಗಳು ಇದ್ದಾರೆ. ಅವರೆಲ್ಲ ಪ್ರಶಸ್ತಿಗೆ ಅರ್ಹರು. ದೇಶ ಕೊಳ್ಳೆ ಹೊಡೆಯುವ ಇವರನ್ನು ನಿಯ೦ತ್ರಿಸುವವರೇ ಇಲ್ಲವಾಗಿದೆ."Politicians are like diapers. They both need changing regularly and for the same reason" ಅ೦ತೊಬ್ಬ ಅನಾಮಿಕ ಹೇಳಿದ ಮಾತು ಇಲ್ಲಿ ಪ್ರಸ್ತುತವೆನಿಸುತ್ತಿದೆ. ಆದರೆ ಎಲ್ಲರೂ ಭ್ರಷ್ಟರೇ ಆಗಿರುವಾಗ politician ಗಳನ್ನು ಮಾತ್ರ ಜರೆಯಲಾಗದು. ನಾವೆಲ್ಲರೂ ಆತ್ಮಾವಲೋಕನ ಮಾಡಲು ಇದು ಸಕಾಲ.

Comments

ಮತ್ತೊಂದು ಉತ್ತಮ ಲೇಖನ ! ಕಳಕಳಿಯಿಂದ ಕೂಡಿದ್ದು .
ಉಪಯೋಗಿಸಿದ Diaper ಗಳ ಹಾಗೆ ಇವರನ್ನು ಬದಲು ಮಾಡಿದರೂ re-cycle ಆಗಿ ಮತ್ತೆ ಎದುರಿಗೆ ಬರುತ್ತಾರಲ್ಲ ಸ್ವಾಮೀ ? ಅದಕ್ಕೇನು ಮಾಡೋಣ?
ಅಂದಹಾಗೆ , ಮುಖ್ಯಮಂತ್ರಿ ಕೋಡಾ ಗೆ " ಭ್ರಷ್ಟ ರತ್ನ " ಎಂಬ ಬಿರುದನ್ನು ಕೊಡಮಾಡಿಸಬಹುದೇ?
umesh desai said…
ಪರಾಂಜಪೆ ಸರ ಒಳ್ಳೆ ಲೇಖನ ಆದರೆ ಓದಬೇಕಾದವರು ಅಳುವುದರಲ್ಲಿ ,ತಿಕ್ಕಾಟದಲ್ಲಿ ಮುಳುಗಿದ್ದಾರೆ ಕುಮಾರದ್ರೋಹದಿಂದ ಪಟ್ಟ ಏರಿದ ಬಿಜೆಪಿ
ಹೀಗೆ ನಗೆಪಾಟಲಾಗಿದೆ ಆಯಿತು ಇನ್ನು ಮುಂದೆ ಆ ಪಕ್ಷಕ್ಕೆ ಭವಿಷ್ಯಇಲ್ಲ
ಆತ್ಮಾವಲೋಕನ ಆರಿಸಿ ಕಳಿಸುವ ಜನತೆಯೇ ಮೊದಲು ಮಾಡಿಕೊಳ್ಳಬೇಕು. ಜನರಿಂದ ಜನರಿಗಾಗಿ, ಆರಿಸಲ್ಪಟ್ಟಿರುವ ಸರಕಾರವಿದು. ಇದಕ್ಕೆ ಹೊಣೆ ನಾವೇ! ಲಂಚ ಪಡೆಯುತ್ತಿರುವುದು ನಾವು ಕೊಡುತ್ತಿರುವುದರಿಂದ. ನಮ್ಮೊಳಗಿನ ಒಗ್ಗಟ್ಟೇ ಸರಿಯಿಲ್ಲ.. ಎಲ್ಲವುದಕ್ಕೂ ಜನಜಾಗೃತಿ ಅತಿ ಮುಖ್ಯ.

ಉತ್ತಮ ಲೇಖನ. ಇನ್ನು ಬಿರುದಿನ ಕುರಿತು... "ಅತಿ ಭಜಂಕಾಸುರ" ಎಂಬ ಪ್ರಶಸ್ತಿ ಸೂಕ್ತವೆನಿಸುತ್ತಿದೆ ನನಗೆ :)
ಉತ್ತಮ ಲೇಖನ ಸಾರ್...
ಆದರೆ ನೀವು ಪತ್ರಿಕೆಯಲ್ಲಿ ಪ್ರಕಟಿಸಿದ್ದಿರಾದರೂ... ಭ್ರಷ್ಟ ರಾಜಕಾರಣಿಗಳು ಯಾರಾದರೂ ಓದುತ್ತಿದ್ದರೇನೋ ? ನೆರೆಯಲ್ಲಿ ನೊಂದವರ ಕಣ್ಣೊರೆಸುವ ಬದಲು... ಮಾಧ್ಯಮದ ಮುಂದೆ ತಾವೇ ಕಣ್ಣೀರು ಸುರಿಸಹತ್ತಿದರೆ, ಅವರನ್ನು ಆರಿಸಿ ಕಳುಹಿಸಿದ ನಾವೇನು ಮಾಡಬೇಕು? ಥೂ ಯಾಕೋ ಅಸಹ್ಯ ಬಂದಿದೆ....

ಶ್ಯಾಮಲ
sunaath said…
Resort ಜೋಕ್ ಚೆನ್ನಾಗಿದೆ. ಆದರೆ ಒಳಗಿನ ವಿಷಾದ ಅರ್ಥವಾಗುವಂತಹದು. ಇನ್ನು ನೀವು ಸೂಚಿಸಿದ ‘ಭ್ರಷ್ಟಕುಲತಿಲಕ’ ಬಿರುದೂ ಸಹ ಅರ್ಥಪೂರ್ಣವಾಗಿದೆ. ಈ ಬಿರುದಿಗೆ ಬಹಳಷ್ಟು ಜನ ಸ್ಪರ್ಧಿಗಳಿದ್ದಾರೆ!
Unknown said…
ಒಬ್ಬ ಕನ್ನಡಿಗನಾಗಿ, ಅದಕ್ಕಿಂತ ಒಬ್ಬ ಮತದಾರನಾಗಿ ಕರ್ನಾಟಕದ ಇತ್ತೀಚಿನ ಬೆಳವಣಿಗೆಯಿಂದ ತಲೆತಗ್ಗಿಸುವಂತಾಗಿದೆ. ಲೇಖನ ಸಮಯೋಚಿತವೂ, ಸಂದರ್ಭೋಚಿತವೂ ಆಗಿದೆ. ರೆಸಾರ್ಟ್ ಜೋಕ್ ಅಲ್ಲ ಅದು ಖಂಡಿತಾ ನಿಜ!!! ರೇಣುಕಾಚಾರ್ಯ ಮುಂತಾದವರ ಮಾತುಗಳನ್ನು ಗಮನಿಸಿ. ಯಾರ್ಯಾರೋ ಹಿಂದೆ ಓಡಿಹೋಗುವ ನಾಯಕರು ಎಂದಿದ್ದ ಈ ಶಾಸಕ, ಈಗ ಅವರನ್ನೇ ತಂದೆಯ ಸಮಾನ ಎನ್ನುತ್ತಿದ್ದಾನೆ.!!!! (ಇದೇ ಶಾಸಕ ಹಿಂದೆ ಯರ್ಯಾರ ಹಿಂದೆಯೋ ಹೋಗಿದ್ದು ಚಲನಚಿತ್ರದಂತೆ ಪ್ರಸಾರವಾಗಿತ್ತು)
ಈಗ ಮುಖ್ಯಮಂತ್ರಿಗಳು ಗೆದ್ದು ಸೋತುಬಿಟ್ಟಿದ್ದಾರೆ. ಗಣಿಧಣಿಗಳನ್ನು ಬಿಡಿ. ಈ ರೇಣುಕಾಚಾರ್ಯುನಂತವರೂ ಬಾಲ ಬಿಚ್ಚುತ್ತಾರೆ. ಆತನ ಮೇಲೆ ಅರೆಸ್ಟ್ ವಾರೆಂಟ್ ಇತ್ತು. ಇನ್ನು ಅದು ಜಾರಿಯಾಗುವ ಅವಕಾಶ ತೀರಾ ಇಲ್ಲವೆಂದೇ ಹೇಳಬಹುದು.
ಇವತ್ತಿನ ಕನ್ನಡ ಪ್ರಭದಲ್ಲಿ ಈ ಮೂಳೆಯಿಲ್ಲದ ನಾಲಗೆಯ ರಾಜಕಾರಣಿಗಳ ಕೆಲವು ಸ್ಯಾಂಪಲ್ಲುಗಳನ್ನು ಕ್ರೋಢೀಕರಿಸಿದ್ದಾರೆ.
ಇನ್ನು ಈ ರಾಜಕಾರಣಿಗಳ ಮನೆಯ ಂಏಲೆ ರೈಡ್ ಆಗುತ್ತಿದ್ದಂತೆಯೇ ಅವರಿಗೆ ಹುಷಾರಿಲ್ಲದಂತಾಗುತ್ತದೆ ಏಕೆ? ಇದರ ಬಗ್ಗೆ ವ್ಯಾಪಕವಾದ ಚರ್ಚೆ ನಡೆಯಬೇಕಾಗಿದೆ. ಮನಶಾಸ್ತ್ರಜ್ಞರನ್ನೂ ಕೇಳಬೇಕಾಗಿದೆ.
ವಿನುತ said…
ಚೆನ್ನಾಗಿ ಬರೆದಿದ್ದೀರಿ. ಪ್ರಜಾಪ್ರಭುತ್ವದ (ಅಪ)ಹಾಸ್ಯ ಪ್ರಹಸನವಿದು!
ಪರಾಂಜಪೆ ಸರ್‍, ಲೇಖನ ಮಾರ್ಮಿಕವಾಗಿದೆ. ಅದರಲ್ಲಿಯೂ ಎರಡು ತಲೆ ಹಾವಿನ ಚಿತ್ರ ನೋಡಿದ ಕೂಡಲೇ ಎರಡು ನಾಲಿಗೆಯ ಜನ ನೆನಪಾಗುತ್ತಾರೆ. ಇಲ್ಲಿ ಜನ ಜಾಗೃತಿಯೊಂದಿಗೆ ಆತ್ಮಾವಲೋಕನ ಬೇಕಿದೆ. ಆದರೆ, ಅವಲೋಕಿಸುವುದಕ್ಕೆ ಪುರುಸೊತ್ತಿಲ್ಲದವರು ಇರುವಾಗ ಇನ್ನು ಆತ್ಮ... ಇವೆಲ್ಲ ಯಾರಿಗೆ ಬೇಕು? ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದು ಅನುಭವಿಗಳು ಹೇಳಿರುವುದು ಇಂತಹವನ್ನು ಕಂಡೇ ಇರಬೇಕು.


ಉತ್ತಮ ಲೇಖನ.
ಸರ್,
ಇನ್ನೊದು ಉಪಯುಕ್ತ ಲೇಖನ, ಅದರ ಫೋಟೋ ಮತ್ತು ಲೇಖನ ವಿಷಯ ಸರಿಯಾಗಿ ಹೋಲುತ್ತದೆ
ನಿಮ್ಮ ಬರೆಯುವ ಶೈಲಿ ತುಂಬಾ ಸುಂದರವಾಗಿದೆ
ಬಾಲು said…
ನೋಡಿ ಪರಂಜಾಪೆ ಅವರೇ ಬೇಸರ ಮಾಡಿ ಕೊಲ್ಲಬೇಡಿ. ಮೋಸ ವಂಚನೆ.. ಮುಂತಾದುವುಗಳನ್ನು ಮಾಡಲು ನಮ್ಮಲ್ಲಿ ರಾಜಕಾರಣಿಗಳಿಗೆ ಹಕ್ಕು ಜಾಸ್ತಿ ಇದೆ. ಏನೂ ಮಾಡಲಾಗದು. ಹೆಚ್ಚೆಂದರೆ ಮುಂದಿನ ಚುನಾವಣೆಯಲ್ಲಿ ಅವರಿಂದ ಜಾಸ್ತಿ ಹಣ ಕಿತ್ತು ವೋಟು ಹಾಕಬಹುದು ಅಷ್ಟೇ.

ನಮಗೆ ನಿಮಗೆ ರೆಡ್ಡಿ ಗಳ ತರ ಕೊಳ್ಳೆ ಹೊಡೆಯಲು ಸಾದ್ಯವೇ? ಅವನ್ಯಾವನೋ ಘಜನಿ ಅನ್ನೋನು ೧೭ ಸಲ ಧಾಳಿ ಮಾಡಿ ಕೊಳ್ಳೆ ಹೊಡೆದಿದ್ದ ಅಂತೆ. ಇಗ ನೋಡಿ ನಮ್ಮವರೇ ಕೊಳ್ಳೆ ಹೊಡೆದು ಬೇರೆಯವರಿಗೆ ಕೊಟ್ಟು ಬರ್ತಾರೆ. ಕಂಡ ಕಂಡ ಹೆಂಗಸರ ಹಿಂದೆ ಹೋದ್ರು ಅವರು ಮಂತ್ರಿ ಮಹೋದಯರು, ಆದ್ರೆ ನಾವೇನಾದ್ರು ಹಾಗೆ ಮಾಡಿದ್ರೆ ಹೆವಿ ಜೊಲ್ಲು ಅಂತ ಕರೀತಾರೆ.

ಮಧು ಕೋಡ ಎಷ್ಟು ಕೊಡ ಪಾಪ ಮಾಡಿದ್ದನೋ, ಇನ್ನೆಷ್ಟು ತುಂಬಲಿಕ್ಕೆ ಬಾಕಿ ಇದೆಯೋ?...

ನಿಮ್ಮ ಲೇಖನ ರೆಡ್ಡಿ ಗಳಿಗೆ ಕಳಿಸಿ ಅನ್ನೋದಕ್ಕೆ ಅವರಿಗೆ ಕನ್ನಡ ಬರೋಲ್ವೆ...
Dileep Hegde said…
ಪರಾ೦ಜಪೆ ಸರ್.... ನಮಸ್ಕಾರ....
ಇವು ಈ ಬಗ್ಗೆ ನನ್ನ ಅನಿಸಿಕೆಗಳು...
ನಾವೇ ಆರಿಸಿ ಕಳಿಸಿದ ಮಂದಿ ಹೀಗೆ ನಮ್ಮನ್ನೇ ಕೊಳ್ಳೆ ಹೊಡೆಯುತ್ತಿದ್ದರೆ ಸುಮ್ಮನೇ ಕುಳಿತು ನೋಡೋದು ಬಿಟ್ಟು ಮತ್ತೇನು ಮಾಡೋದೂ ನಮ್ಮಿಂದ ಸಾಧ್ಯವಿಲ್ಲ.... ಯಾಕೆ ಹೀಗಾಗ್ತಿದೆ..??
ತಪ್ಪು ಸರಿ ಏನಂತ ಅರಿತಿರೊ ಶಿಕ್ಷಿತರು ಮತಗಟ್ಟೆಗಳಿಂದ ದೂರವಿದ್ದಾರೆ... ಎಲ್ಲರೂ ಬ್ರಷ್ಟರಾಗಿರೋದ್ರಿಂದ ಯಾರಿಗೂ ಮತ ನೀಡಿ ಪ್ರಯೋಜನವಿಲ್ಲ ಅನ್ನೋ ಅಭಿಮತವಿರಬಹುದು....
ತಪ್ಪು ಸರಿ ಏನಂತ ಗೊತ್ತಿಲ್ದಿರೋ ಅನಕ್ಷರಸ್ತರು ಆ ಸಮಯಕ್ಕೆ ಕೈಗೆ ಸಿಗೋ ಹಣ ಹೆಂಡದ ಆಸೆಗೆ ಬಲಿಯಾಗಿ ಮತ ಚಲಾಯಿಸುತ್ತಾರೆ... ಅತೀ ಹೆಚ್ಚು ಕೊಟ್ಟವನಿಗೆ ಮತ.... ಆದ್ದರಿಂದ ಅತೀ ಹೆಚ್ಚು ಬ್ರಷ್ಟನಾದವನು ಗೆಲ್ತಾನೆ...
ಮತಗಟ್ಟೆಯ ಕಡೆ ಮುಖ ಮಾಡದ ನಾವುಗಳು ಕೊನೆಗೆ ಗೆದ್ದು ಗದ್ದುಗೆ ಹತ್ತಿ ಗಬ್ಬೆಬ್ಬಿಸುವವರಿಗೆ ಹೀಗೆ ಹಿಂದಿನಿಂದ, ಸಾದ್ಯವಾದರೆ ಎದುರಿನಿಂದ ಬಯ್ಯುತ್ತೇವೆ... ಅಷ್ಟೇ.... ಮತ್ತೇನೂ ಸಾಧ್ಯವಿಲ್ಲ ನಮ್ಮಿಂದ....

Popular posts from this blog

ಈ ಬ೦ಧನಾ........

ಜನುಮದಿನದ ನೆಪದಲ್ಲಿ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ