ಹೀಗೊ೦ದು "ವಿದಾಯ ಲೇಖ"


ಯಾಕೋ ಮನಸ್ಸು ಭಾರವೆನಿಸುತ್ತಿದೆ, ದಶಕಗಳಿಂದ ಅನಭಿಷಿಕ್ತ ರಾಜನ೦ತಿದ್ದ ನಾನು ಅಜ್ಞಾತವಾಸಕ್ಕೆ ಹೋಗುವ ಕಾಲ ಸನ್ನಿಹಿತ ವಾಗಿದೆ. ಅಸ೦ಖ್ಯ ಜನರಿಗೆ ನಾನು ಆಶ್ರಯ ನೀಡಿದೆ, ಭರವಸೆಯ ಬೆಳಕನ್ನು ಕೊಟ್ಟೆ, ಗಮ್ಯ ತಲುಪಲು ದಾರಿ ತೋರಿದೆ. ಜೀವನದಲ್ಲಿ ಸೋತ ಅದೆಷ್ಟು ಹತಭಾಗ್ಯರು, ಕನಸಿನ ಜೋಳಿಗೆಯನ್ನು ಬಗಲಲ್ಲಿಟ್ಟುಕೊ೦ಡು, ಭಾರ ಹೃದಯ ಹೊತ್ತು ನನ್ನಲ್ಲಿಗೆ ಬಂದರು, ಅವರಿಗೆ ನೀರು ನೆರಳು ಕೊಟ್ಟು ಸಲಹಿದೆ, ಸಂತೈಸಿದೆ, ಕ್ಷಣಮಾತ್ರದ ಸಾಂತ್ವನ ಕೊಟ್ಟೆ, ಬದುಕಲು ನೂರೆ೦ಟು ಮಾರ್ಗಗಳಿವೆ ಎ೦ಬ ಅರಿವನ್ನು ಮೂಡಿಸಿದೆ. ನನ್ನ ಮನೆಗೆ ಬಂದು ಹೋದವರು ಲಕ್ಷ ಲಕ್ಷ ಜನ, ಎಲ್ಲರ ಬಾಯಲ್ಲೂ ನನ್ನ ಹೆಸರು ರಾರಾಜಿಸುತ್ತಿತ್ತು, ಅನುರಣಿಸುತ್ತಿತ್ತು. ದೇಶ-ವಿದೇಶಗಳ ಅದೆಷ್ಟು ಜನ ತಮ್ಮ ಖುಷಿಯ, ನೋವಿನ, ಆತ೦ಕದ ಅರೆ ಕ್ಷಣಗಳನ್ನು ನನ್ನ ಮನೆಯಲ್ಲಿ ಕಳೆದರೋ, ನನ್ನ ಮನೆಗೆ ಬಂದು ಹೋದಾಗ ಅವರಿಗಾದ ಅನುಭೂತಿ ಅದೆಷ್ಟು ಅಪರೂಪ ವೋ, ನಾನರಿಯೆ. ಹಲವಾರು ಭಾಷೆ, ದೇಶಗಳ, ಜಾತಿ-ವಿಜಾತಿಗಳ ಬೇಧಭಾವವಿಲ್ಲದೆ ಎಲ್ಲರೊಳಗೊ೦ದಾಗಿ ಬಂದರು, ಹೋದರು. ಜಗವೆಲ್ಲ ಮಲಗಿರಲು ನಾನು ಎದ್ದಿರುತ್ತಿದ್ದೆ, ನನ್ನ ಮನೆಗೆ ಬಂದವರ ಕುಶಲ-ಕ್ಷೇಮ ವಿಚಾರಿಸುತ್ತಿದ್ದೆ, ಅನ್ನ-ನೀರು ಸಿಗುವಂತೆ ನೋಡಿಕೊಳ್ಳುತ್ತಿದ್ದೆ, ಅವರ ಗಮ್ಯ ತಲುಪಲು ದಾರಿ ತೋರುತ್ತಿದ್ದೆ. ಕಳ್ಳರು, ಸುಳ್ಳರು, ಸುಭಗರು, ತಲೆಹಿಡುಕರು, ಪು೦ಡುಪೋಕರು, ಹೀಗೆ ಎಲ್ಲರನ್ನು ನಾನು ಸಮಭಾವದಿ೦ದ, ಸಮಚಿತ್ತದಿ೦ದ ಪೊರೆದೆ. ನನ್ನ ಮಡಿಲಲ್ಲಿ ತಮ್ಮ ಬದುಕಿನ ಅನ್ನ ಕ೦ಡುಕೊ೦ಡ ವರೆಷ್ಟೋ, ತೊರೆದು ಹೋದವರೆಷ್ಟೋ, ಲೆಕ್ಕವಿಟ್ಟಿಲ್ಲ. ಬಣ್ಣಬಣ್ಣದ ಜನ, ಬಣ್ಣದ ಮಾತಿನಿ೦ದ ಮರುಳು ಮಾಡುವ ಜನ, ಮರುಳಾಗುವ ಜನ, ಸುಲಿಗೆ,ಜಗಳ, ಕದನ, ಮಾಡುವ ತರಹೇವಾರಿ ಜನರನ್ನು ನಾನು ಮೂಕ ಭಾವದಿಂದ ಸಾಕ್ಷೀಕರಿಸಿದೆ.


ನನ್ನ ಮನೆಗೆ,ಮನೆಯಂಗಳಕ್ಕೆ ಕಾಲಿಟ್ಟ ಅಸ೦ಖ್ಯ ಜನರಿಗೆ ನನ್ನ ನೆನಪು ಸದಾ ಕಾಡುತ್ತಿರುತ್ತದೆ. ಬಡವ-ಬಲ್ಲಿದನೆ೦ಬ ಬೇಧವಿಲ್ಲದೆ ಎಲ್ಲರತ್ತ ನನ್ನ ನೋಟ ಒ೦ದೇ ಆಗಿತ್ತು, ಅವನು ಸೂಟುಬೂಟು ತೊಟ್ಟು ಮೈತು೦ಬ ಅತ್ತರು ಪೂಸಿ ಜೇಬು ತು೦ಬಾ ಧನಕನಕಗಳನ್ನು ತು೦ಬಿ ಬ೦ದವನಿರಬಹುದು, ಇಲ್ಲವೇ ಸ್ನಾನ ಮಾಡಿ ಅದೆಷ್ಟೋ ದಿನ ಕಳೆದ ಕೊಳೆತು ನಾರುವ, ಬರಿಗಾಲ ಫಕೀರ ನಿರಬಹುದು, ಎಲ್ಲರನ್ನೂ ನಾನು ಪೊರೆದೆ, ಪ್ರೀತಿಸಿದೆ, ನೆರಳಿತ್ತೆ, ಮೈದಡವಿದೆ. ಯಾವ್ಯಾವುದೋ ಊರುಗಳಿ೦ದ ಓಡಿಬಂದ, ಬದುಕಿಗಾಗಿ ಉದ್ಯೋಗ ಅರಸುತ್ತ ಬಂದವರಿಗೆ ತಾಯಾದೆ, ಅವರ ಕಣ್ಣಿರೋರಿಸಿದೆ.


ಅವರೆಲ್ಲರ ಆಸೆ, ಹತಾಶೆ, ನೋವು, ನರಳಿಕೆ, ಆತ೦ಕ, ಸುಖ, ಕನಸು, ಕನವರಿಕೆ ಗಳಿಗೆ ಇ೦ಬು ಕೊಟ್ಟೆ. ಆದರೆ ನಾನೇ ಇ೦ದು ಎಲ್ಲರ ನೆನಪುಗಳ ಜೋಳಿಗೆಯನ್ನು ಹೊತ್ತು ಅಜ್ನಾತವಾಸಕ್ಕೆ ಹೋಗುತ್ತಿದ್ದೇನೆ, ನನ್ನ ಮನೆ ಕೆಡವುತ್ತಿದ್ದಾರೆ, ಹೊಸ ಮನೆ, ಹೊಸ ರೂಪ, ಹೊಸ ವಿನ್ಯಾಸಕ್ಕೆ ದಾರಿ ಮಾಡಿಕೊಡುತ್ತಾ, ನಿಮ್ಮೆಲ್ಲರ ಆಶೋತ್ತರ ಗಳಿಗೆ ಸಾಕ್ಷಿಯಾಗಿದ್ದ ನಾನು ಭಾರವಾದ ಹೃದಯ ದೊ೦ದಿಗೆ, ತೆರಳುತ್ತಿದ್ದೇನೆ. ಚಿಂತೆ ಬೇಡ, ಮತ್ತೆ ಮರಳುವೆ, ನಿಮ್ಮೆಲ್ಲರನ್ನು ಸಲಹುವೆ. ಇ೦ತಿ ನಿಮ್ಮ ಪ್ರೀತಿಯ - ಮೆಜೆಸ್ಟಿಕ್ ಬಸ್-ಸ್ಟಾ೦ಡ್, ಬೆ೦ಗಳೂರು

Comments

ಪರಾಂಜಪೆ ಸರ್‍,

ಬೆಳಗಿನಿಂದ ಮನಸ್ಸು ಅದೇಕೋ ಮೆಜೆಸ್ಟಿಕ್ ನೆನೆಯುತ್ತಿತ್ತು. ಕಾರಣ: ಪತ್ರಿಕೆಯಲ್ಲಿ ಬಂದ ಸುದ್ದಿ. ಅದನ್ನು ನೀವು ಮೆಜೆಸ್ಟಿಕ್‌ ಬಸ್ ನಿಲ್ದಾಣವೇ ಮಾತಾಡಿದಂತೆ (ಸ್ವಗತ)ಅದರ ಅಂದರೆ ಅದರೊಡನೆ ಪ್ರತಿದಿನವೂ ಜೊತೆಯಾಗಿರುವವರ ಮನಸ್ಸನ್ನೇ ಇಲ್ಲಿ ಉಲ್ಲೇಖಿಸಿದ್ದೀರಿ. ಇದು ನಿಜಕ್ಕೂ ಅಭಿವೃದ್ಧಿಯ ಹೆಸರಿನಲ್ಲಿ ಜನರ ಭಾವನೆಗಳಿಗೆ ಪೆಟ್ಟುಕೊಡುತ್ತಿರುವಂತಿದೆ.

ಓದುತ್ತಾ ಹೋದಂತೆ ಎಲ್ಲೋ ಒಂದು ಕಡೆ ನೋವಿನ ಛಾಯೆ ಕಾಣಿಸುತ್ತದೆ.
ಬಾಲು said…
ಸೂಪರ್ ಸ್ವಾಮಿ. ಒಳ್ಳೆಯ ವಿಧಾಯ ಲೇಖನ. ನಂಗು ಈ ಬೆಳಿಗ್ಗೆ ಮುಂಚೆ ವಿಷಯ ತಿಳೀತು.

ಓದುವಾಗ ನಿವೆಲ್ಲೋ ವಾನಪ್ರಸ್ಥ ಕ್ಕೆ ಹೋಗ್ತಾ ಇದ್ದಿರೆನೋ ಅಂದುಕೊಂಡೆ, ಪಂಚಿಂಗ್ ವಿಧಾಯ ಲೇಖನ.
ಮೆಜೆಸ್ಟಿಕ್ ನ ನೆನಪುಗಳಿಗೆ ಕೊನೆ ಇಲ್ಲ ಬಿಡಿ, ಅದು ಒಂದು ಜೀವನದ ಭಾಗ.
ಇನ್ನು ಮುಂದೆ ಕಾದಿದೆ ಟ್ರಾಫಿಕ್ ಜಾಮಿನ ಹಬ್ಬ.
ಪರಾಂಜಪೆ ಸರ್
ನಿಮ್ಮ ವಿದಾಯ ಲೇಖ ಶೀರ್ಷಿಕೆ ನೋಡಿ ಗಾಬರಿಯಾಯ್ತು
ಇದೇನು ವಿದಾಯ ಹೇಳ್ತಿದಾರೆ ಅಂತ
ಅದರೊಳಗಿನ ಹೂರಣ ನೋಡಿ ಸ್ವಲ್ಪ ಸಮಾಧಾನ ಸಿಗ್ತು
ಮೆಜೆಸ್ಟಿಕ್ ಅಂದ್ರೇನೆ ಬಸ್ ಸ್ಟ್ಯಾಂಡ್ , ಅದೇ ಇಲ್ದೆ ಇದ್ರೆ ಶೋಭೇನೆ ಇಲ್ಲ ಆಲ್ವಾ
ಒಳ್ಳೆಯ ಲೇಖನ
ಚೆನ್ನಾಗಿದೆ ನಿಮ್ಮ ಅಲ್ಲಲ್ಲಾ... ಮೆಜೆಸ್ಟಿಕ್ಕಿನ ವಿದಾಯ ಲೇಖನ...:) ಬೆಂಗಳೂರಿಗೆ ಬಂದು ವರುಷ ನಾಲ್ಕು ಕಳೆದರೂ ನಾನು ಈ ಅಂಗಳಕೆ ಕಾಲಿಟ್ಟಿಲ್ಲ. ಆ ವಿಷಾದ ಈ ವಿದಾಯದೊಂದಿಗೆ ಬೆರೆತಿದೆ :( :)
ಬೊಬಾಟ್ ಆಗಿದೆ ಮೆಜಸ್ಟಿಕ್‍ನ ವಿದಾಯ
ಸುಮ said…
ಮೆಜೆಸ್ಟಿಕ್ ನ ವಿದಾಯ ಮನಮುಟ್ಟುವಂತಿದೆ. ಅಭಿವೃಧ್ಧಿಯ ಹೆಸರಿನಲ್ಲಿ ನಾವು ಕಳೆದುಕೊಳ್ಳಬೇಕಾದವುಗಳೆಷ್ಟೊ.
ನಿಮ್ಮ ಮಿಂಚಂಚೆ ನೋಡಿ ಗಾಬರಿಗೊಂಡು ಇಲ್ಲಿಗೆ ಧಾವಿಸಿದೆ.
ಲೇಖ ಓದುತ್ತಹೋದಂತೆ, ನಾನು ಶರಲೇಖ ಹೋಮ ಆಗಬೇಕೇನೋ ಅನ್ನಿಸತೊಡಗಿತು. ’ವಾಟ್ ಸನ್?!’ ಎಂಬ ಉದ್ಗಾರವೂ ಹೊರಟಿತು.
ಕೊನೆಗೆ ಗೊತ್ತಾಯಿತು, ಇದು ಮೆಜೆಸ್ಟಿಕ್‌ನ ಮೆಜೆಸ್ಟಿಕ್ ಲೇಖ ಅಂತ.
ಭೇಷ್ ಮಿತ್ರ!
Unknown said…
ಸರ್ ನಾನು ಬೆಳಿಗ್ಗೆ ಎಲ್ಲಾ ಪತ್ರಿಕೆಗಳಲ್ಲಿ ರಾರಾಜಿಸುತ್ತಿರುವ ಲೇಖನ ನೋಡಿ ಬಹಳ ಹೊತ್ತು ಅದನ್ನೇ ಯೋಚಿಸುತ್ತಿದ್ದೆ. ನನ್ನ ಯೋಚನೆ ನಾನು ಊರಿಗೆ ಹೋಗುವಾಗ ಎಷ್ಟಲ್ಲಾ ಕಷ್ಟಪಡಬೇಕೋ ಎಂಬುದು. ಅದಕ್ಕಿಂತ ಹೆಚ್ಚಾಗಿ ಊರಿನಿಂದ ಬರುವ ನನ್ನ ತಂದೆ ತಾಯಿಯರು ಎಲ್ಲಿ ಇಳಿದುಕೊಳ್ಳಬೇಕೆಂದು ತಿಳಿಯದೆ ಪರದಾಡಬೇಕಾಗುತ್ತಲ್ಲ ಎಂಬುದು ನನ್ನನ್ನು ಕಳವಳಕ್ಕೆ ಈಡುಮಾಡಿತ್ತು. ಬೆಳಿಗ್ಗೆಯಿಂದ ಅವಕ್ಕೆಲ್ಲಾ ಪರಿಹಾರ ಹುಡುಕುವುದರಲ್ಲೇ ಕಾಲಕಳೆಯುತ್ತಿದ್ದೆ!!!!!!!!
ನಿಮ್ಮ ಲೇಖನ ಓದಿದ ಮೇಲೇ, ಅರೇ ಈ ನಿಟ್ಟಿನಲ್ಲಿಯೂ ಯೋಚಬಹುದಲ್ಲ ಎನ್ನಿಸಿತು. ನಿಮ್ಮ ಲೇಖನದ ಶೀರ್ಷಿಕೆ, (ನೋಡಿ ಗಾಬರಿಯೂ ಆಯಿತು!) ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಓದಿಸಿಕೊಳ್ಳುವ ಗುಣ ಅತ್ಯಂತ ಹೆಚ್ಚು ಇಷ್ಟವಾಯಿತು.
ಪರಾಂಜಪೆ,
"ವಿದಾಯ ಲೇಖ" ಎಂಬ ಶೀರ್ಷಿಕೆ ಓದಿ ನಾನೂ ಗಾಬರಿಯಾದೇ. ಓದಿದ ಮೇಲೆ ಸ್ವಲ್ಪ ಸಮಾಧಾನವಾದರೂ ಮೆಜೆಸ್ಟಿಕ್ ನ ಬಗ್ಗೆ ತಿಳಿದು ಸ್ವಲ್ಪ ಬೇಸರವೂ ಆಯಿತು . ಏನಿದ್ದರೂ , ಬದಲಾವಣೆ ಅನಿವಾರ್ಯವಾದರೆ ಹೊಂದಿಕೊಳ್ಳುವುದೂ ಅಷ್ಟೇ ಅನಿವಾರ್ಯ ಅಲ್ಲವೇ? ಮೆಜೆಸ್ಟಿಕ್ ಇನ್ನು ಹೊಸರೂಪದಲ್ಲಿ ಕಂಗೊಳಿಸುವುದನ್ನು ಕಾಯೋಣ !
ಪರಾಂಜಪೆ ಸಾರ್...
ಇಂಥದೊಂದು ಶೀರ್ಷಿಕೆ ಕೊಟ್ಟು ಆತಂಕ ಹುಟ್ಟಿಸಿದ್ದಿರಿ... ಕೊನೆ ಓದಿದ ಮೇಲೆ ಸಮಾಧಾನ ಆಯ್ತು. ಮೆಜೆಸ್ಟಿಕ್ ಜೊತೆ ನನಗೂ ನೂರೆಂಟು ನೆನಪುಗಳು ಇವೆ. ಈಗಾಗಲೇ ಅನೇಕ ಬದಲಾವಣೆಗಳಾಗಿವೆ... ನಾವು ಮುಂಚೆ ಓಡಾಡುತ್ತಿದ್ದಾಗ ಇದ್ದಂತೆ ಇಲ್ಲದಿದ್ದರೂ, ಈಗಿನ ಅವತಾರದ ಜೊತೆಗೂ ಅನೇಕ ನೆನಪುಗಳಿವೆ. ಮತ್ತೆ ಬದಲಾಗುವ ರೂಪವೆಂದರೆ...!!!! ಇನ್ನೂ ಏನೇನು ಬದಲಾವಣೆಯಾಗುತ್ತೋ ಮೆಜೆಸ್ಟಿಕ್ ನಲ್ಲಿ... ಎಷ್ಟೇ ಬದಲಾದರೂ ಅದರ ಆಕರ್ಷಣೆ, ಅದರ charm ಅದಕ್ಕಿದ್ದೇ ಇದೆ ಅಲ್ವಾ... ಮೊದಲ್ ಬಾರಿಗೆ ಬೆಂಗಳೂರಿಗೆ ಬಸ್ಸು/ರೈಲಿನಲ್ಲಿ ಬಂದಿಳಿಯುವ ಎಲ್ಲರನ್ನೂ ಕೌತುಕಗೊಳಿಸುತ್ತಾ ತನ್ನ ವಿಶಾಲವಾದ ಮಡಿಲಿನಲ್ಲಿ ಸೆಳೆದುಕೊಂಡು ಬಿಡುವ ಜಾಗ ’ಮೆಜೆಸ್ಟಿಕ್’..... ತುಂಬಾ ಕುತೂಹಲಕರವಾದ ಲೇಖನ ಸಾರ್...
ಹ್ಹಾ ಹ್ಹಾ ಹ್ಹಾ... ನಾನು ಯಾರಪ್ಪ ಇದು ಅನ್ಕೊಂಡಿದ್ದೆ... :)
Guruprasad said…
ಪರಾಂಜಪೆ,,,
ತುಂಬ ಚೆನ್ನಾಗಿ ಬರೆದಿದ್ದೀರ ಮೆಜೆಸ್ಟಿಕ್ ವಿದಾಯದ ಲೇಖನ...ಹೌದು ಬೆಳಿಗ್ಗೆ ಪೇಪರ್ ನೋಡಿ,,, ನಾವು ಹೀಗೆ ಬೇಜಾರ್ ಮಾಡ್ಕೋತ ಇದ್ವಿ.. ಮುಂದಿನ ಕೆಲವು ವರುಷ,,, ತುಂಬ ಕಷ್ಟ ಆಗುತ್ತೆ,,, ಬೇರೆ ಊರಿನಿಂದ ಬಂದು ಹೋಗುವ ಜನರಿಗೆ.....
ನನಗೆ ಬೇಜಾರ್ ಆಗಿರುವ ಇನ್ನೊಂದು ವಿಷಯ,,, ಕೆಲವು ತಿಂಗಳ ಕೆಳಗೆ,, ಮೆಜೆಸ್ಟಿಕ್ ಬಸ್ಸ್ಟ್ಯಾಂಡ್ ಪೂರ್ತ ಎಸ್ಟೋ ಕೋಟಿ ಕರ್ಚು ಮಾಡಿ,, ಸಿಮೆಂಟ್ ಹಾಸನ್ನು ಹಾಕಿಸಿದ್ದರು, ಇದು ಬೇರೆ ಎಲ್ಲೂ ಇಲ್ಲ ಬೆಂಗಳೂರಿನಲ್ಲೇ ಮೊದಲು ಅಂತ ಎಲ್ಲ ಹೇಳಿದ್ದರು,,, ಯಾವಾಗ ಅದೆಲ್ಲ ವೇಸ್ಟ್ ಅಲ್ವ ?
ಗು
ಜಲನಯನ said…
ಪರಾಮ್ಜಪೆಯವರೇ, ರಾಮ್ಸೇ ಬ್ರದರ್ಸ್ ಥ್ರಿಲ್ಲರ್ಸ್ ಕೊಟ್ಟಹಾಗೆ...ಇದ್ಯಾಕಪ್ಪಾ ಕಾಡುಗಳೇ ಇಲ್ಲದಿರೋ ನಾಡಿನಲ್ಲಿ ವಾನಪ್ರಸ್ತದ ಪ್ರಸ್ತಾಪ ಎನ್ನುತ್ತಾ ಹುಬ್ಬು ಗಂಟಿಕ್ಕಿಕೊಂಡೇ ಓದಿದೆ ನಿಮ್ಮ ಲೇಖನ...ಓಫ್..!! ಮೆಜೆಸ್ಟಿಕ್ ಬಸ್ಟಾಂಡು ನನ್ನ ಪಿಯುಸಿ ಮತ್ತು ಮೊದಲ ಡಿಗ್ರಿ ದಿನಗಳ (೧೯೭೫-೭೮) ಬಹಳ ನೆಚ್ಚಿನ ತಾಣ. ಊರಿಗೆ ಹೋಗೋ ಸ್ನೇಹಿತರನ್ನ ಬೀಳ್ಕೊಡೋಕೆ ಬಂದು ಮೂರ್ನಾಲ್ಕು ಗಂಟೆ ‘ಚಿಟ್ಟೆ‘ ಹಿಡಿಯೋ ಕೆಲ್ಸ ನಮ್ಮದಾಗಿತ್ತು...ಈಗ .....ಛೇ..ಆ ಜಾಗವನ್ನ ಕೆಡಹೋ ಯೋಜನೇನ??...ಚನ್ನಾಗಿದೆ ಲೇಖನ...
ಪರಂಜಪೆ ಸರ್,
ಬದುಕೆಂಬ ಬಸ್ಟ್ಯಾಂಡು ಬದಲಾಗುತ್ತಿದೆ. ಇದಕ್ಕೆ ಖುಷಿಪಡಬೇಕೋ ದುಃಖಪಡಬೇಕೋ ತಿಳಿಯದಾಗಿದೆ!!
umesh desai said…
ಪರಾಂಜಪೆ ಸರ್ ಶಾಕ್ ಆಗಿತ್ತು ಸಹಿಮಾಡಿದವರಾರು ಮೊದಲು ನೋಡಿದೆ ನಿರಾಳವಾದೆ. ಬದಲಾವಣೆ ಜಗದ ನಿಯಮಅಲ್ಲವೇ
ಈ ಬೆಂಗಳೂರಿಗರು ಅಡ್ಜೆಸ್ಟಮೆಂಟ ಪ್ರವೀಣರು ಎಲ್ಲಾ ಸರಿ ಆಗ್ತದ
ಮೊನ್ನೆ ಹೆಗಡೆಯವರ ಸಂಭ್ರಮದಲ್ಲಿ ನಿಮ್ಮನ್ನು ಭೇಟಿ ಆಗಲಿಲ್ಲ ನಿಮ್ಮ ಚೆಹರೆ ಪರಿಚಯ ಇರಲಿಲ್ಲ
ಮೊದಲ ಸಾಲುಗಳನ್ನು ಓದಿದಾಗ ಏನು ನೀವೇ ಬ್ಲಾಗ್ ಲೋಕಕ್ಕೆ ವಿದಾಯ ಹೇಳ್ತಿದ್ದೀರಾ ಅಂದುಕೊಂಡೆ. ಸದ್ಯ ಅಲ್ಲವಲ್ಲ. ! ಮೆಜೆಸ್ಟಿಕ್ ಬೆಂಗಳೂರಿಗೆ ವರ್ಷಕ್ಕೋ, ಎರಡು ವರ್ಷಕ್ಕೋ ಬರುವ ನಮ್ಮಂಥವರಿಗೆಲ್ಲಾ ಆಶ್ರಯ ಹಾಗೂ ಸ್ಟಾರ್ಟಿಂಗ್ ಪಾಯಿಂಟ್ ಇದ್ದ ಹಾಗೆ! ಈ ಬದಲಾವಣೆಯ ಬಳಿಕ ಮುಂದೇನು? ನೋಡೋಣ
ಚಕೋರ said…
ಚೆನ್ನಾಗಿದೆ ಲೇಖನ. ಮೆಜೆಸ್ಟಿಕ್ ನಮ್ಮ ಪಾಲಿಗೆ ಮೊದಲು ಗಾಬರಿ, ನಂತರ ಆಶ್ಚರ್ಯ, ಮತ್ತೆ ಕೆಲ ಸಮಯದ ಬಳಿಕ ಮಾಮೂಲು ಆಗಿಬಿಟ್ಟಿತ್ತು. ಬೆಂಗಳೂರಲ್ಲಿ ಎಲ್ಲಿ ಸ್ಥಳ ಗೊತ್ತಾಗದೇ ತಪ್ಪಿಹೋದರೆ "ಮೆಜೆಸ್ಟಿಕ್" ಗೆ ಬಂದುಬಿಡು ಅಂತ ಅಪ್ಪ ಹೇಳಿದಾಗ ಬಹುಶಃ ಮೆಜೆಸ್ಟಿಕ್ ಎಂಬುದು ತುಂಬಾ ಸೇಫಾದ ಜಾಗ ಅಂದುಕೊಂಡಿದ್ದೆ, ಹಾಗೆಯೇ ಅಂಥ ಸಂದರ್ಭದಲ್ಲೆಲ್ಲಾ ನನ್ನನು ಪೊರೆದಿದೆ.

ಇದು ವಿದಾಯ ಅಲ್ಲ, ಅಲ್ಪವಿರಾಮ. ಮತ್ತೆ ಹೊಸ ಗೆಟಪ್ಪಿನೊಂದಿಗೆ ಹಾಜರಾಗಲಿದೆ. ಆದರೆ ಅಲ್ಲಿವರೆಗೆ ಮಾತ್ರ ನಾವು ಖಂಡಿತಾ ಮೆಜೆಸ್ಟಿಕ್ಕನ್ನು ಮಿಸ್ ಮಾಡಿಕೊಳ್ಳುತ್ತೇವೆ!
ಚೆನ್ನಾಗಿದೆ ಲೇಖನ.
ಕೊನೆತನಕ ಕುತೂಹಲಕರವಾಗಿತ್ತು....
ಕೊನೆವರೆಗೆ ಓದಿಸಿಕೊ೦ಡು ಹೋಗುವ ಬಿಗು ಈ ಲೇಖನದಲ್ಲಿತ್ತು. ನಿಮ್ಮ ಯೋಚನಾ ಲಹರಿ ಮತ್ತು ಬರಹದ ಶೈಲಿ ಇಷ್ಟವಾಯಿತು.
ಹೌದು ಮೆಜೆಸ್ಟಿಕ್ ಬಸ್ಟಾ೦ಡಿನ ಜೊತೆ ನಮ್ಮ ಬ೦ಧ-ಸ೦ಬ೦ಧ ಅನನ್ಯ ಮತ್ತು ಅನೂಹ್ಯ
Unknown said…
Good one Sir, I am very much impressed by your writing style
Unknown said…
ಉತ್ತಮ ಬರಹ, ಮೆಜೆಸ್ಟಿಕ್ ಜೊತೆಗಿನ ನನ್ನ ಸ೦ಬ೦ಧ ಬಹಳ ಹಳೆಯದು, ತು೦ಬ ಬೇಸರವೆನಿಸುತ್ತಿದೆ. ಆದರೆ ಬದಲಾವಣೆ ಜಗದ ನಿಯಮ, ಅಲ್ಲವೇ ?
ಹಾ... ಮೆಜೆಸ್ಟಿಕ್ ಹೋಗುತ್ತದೆ ಎ೦ಬ ಸುದ್ದಿ ಕೇಳಿ ತು೦ಬಾ ಬೇಸರವಾಯಿತು.. ಬೆ೦ಗಳೂರಿಗೆ ಬ೦ದ ಹೊಸದರಲ್ಲಿ ಹೊಸ ಜಾಗಕ್ಕೆ ಹೋದಾಗ ಜೆ.ಪಿ. ನಗರಕ್ಕೆ ಹಿ೦ದೆ ಹೋಗುವುದು ಎ೦ದು ಗೊತ್ತಾಗದೆ ಕೊನೆಗೆ ಮೆಜೆಸ್ಟಿಕ್ ಗೆ ಬ೦ದು ಅಲ್ಲಿ೦ದ ಜಿ.ಪಿ.ನಗರಕ್ಕೆ ಹೋಗುತ್ತಿದ್ದೆ... ಅಲ್ಲಿ ಒ೦ದು ತರಹದ ಸೇಫ್ಟಿ ಭಾವನೆ...

ಹೊಸ ಮೆಜೆಸ್ಟಿಕ್ ಬರಲು ೮ ವರುಷ ಬೇಕ೦ತೆ... :(
ಕನಸು said…
ಇಷ್ಟು ದಿನ ನಿಮ್ಮ ಬ್ಲಾಗ ನೊಡದೆ ಎಷ್ಟೊಂದು ಲೇಖನಗಳನ್ನು ಸುಮ್ಮನೆ
ಮಿಸ್ ಮಾಡಿಕೊಂಡೆ ಆದರೇ ಇವತ್ತು ನೊಡಿದ ಮೇಲೆ ತುಂಬಾ ಸಂತಸ ಆಗಿದೆ
ನಿಮ್ಮ ೆಎಲ್ಲಾ ಲೇಖನ ಓದಿ ಅಭಿಪ್ರಾಯಿಸುವೆ
ಧನ್ಯವಾದಗಳು
ಒಳ್ಳೆಯ ಕಲ್ಪನೆ ..ಚೆಂದದ ಬರಹ..:):)
Unknown said…
ಉತ್ತಮ ಬರಹ, ಮೆಜೆಸ್ಟಿಕ್ ಬಸ್ಟಾ೦ಡಿನ ಸ್ವಗತ ಚೆನ್ನಾಗಿದೆ.
Prabhuraj Moogi said…
ಅಯ್ಯೊ ನೀವೆ ಎಲ್ಲೊ ಹೋಗ್ತಿದೀರಾ ಅಂತ ಅಂದುಕೊಂಡಿದ್ದೆ, ಬಸ ನಿಲ್ದಾಣದ ಮನವೇ ಮಾತಾಡಿದಂತೆ ಬರೆದಿದ್ದೀರಲ್ಲ... ಆ ಅನಭಿಷಕ್ತ ದೊರೆಯ ನಿರ್ಗಮನ ದೊಡ್ಡ ತೊಂದರೆಯನ್ನೇ ತರಲಿದೆ ಪ್ರಜೆಗಳಿಗೆ...
shivu.k said…
ಪರಂಜಪೆ ಸರ್,

ಮೆಜೆಸ್ಟಿಕ್ ಬಸ್ ನಿಲ್ದಾಣದ ಬಗ್ಗೆ ಒಂದು ಮನಕಲಕುವ ಬರಹವನ್ನು ಬರೆದಿದ್ದೀರಿ. ಅದೇ ತನ್ನ ಭಾವನೆಯನ್ನು ಹಂಚಿಕೊಳ್ಳುವಂತೆ ಬರೆದಿದ್ದೀರಿ. ಒಂದು ಕಾಲದಲ್ಲಿ ಅದು ಅನಭಿಷಕ್ತ ದೊರೆಯೇ ಸರಿ. ಈಗ ಬದಲಾವಣೆ ಕಾಲ ಅಲ್ಲವೇ.

ಧನ್ಯವಾದಗಳು.
ವಿನುತ said…
ಸಖತ್ ಲೇಖನ. ಪಂಚಿಂಗ್ ಅಂತ್ಯ. ಹೊಸವರ್ಷಕ್ಕೆ ಕಾಲಿಡುವಾಗ, ಹಳೆಯ ವರ್ಷದ ಬಗ್ಗೆ ಇಂತವೇ ಎಸ್.ಎಮ್.ಎಸ್ ಗಳು ಹರಿದಾಡ್ತಾ ಇರ್ತಾವೆ :)
Unknown said…
ಹುಹ್... ಉತ್ತಮ ವಿದಾಯ ಲೇಖನ...
ಮೊದಲಿಗೆ ಸ್ವಲ್ಪ ಹೆದರಿಕೆಯಿಂದ ನಿಮ್ಮ ಬ್ಲಾಗ್ ತೆರೆದೇ... ನೀವೆಲ್ಲೋ ವಾನಪ್ರಸ್ತ ಕ್ಕೆ ಹೋಗ್ತಾ ಇದ್ದಿರೋ ಏನೋ ಅನ್ನೋ ಭಾವನೆ ಮೂಡಿತ್ತು ...:-)..
ನಾನೂ ಕೂಡಾ ಮೊದಲ ನಾಲ್ಕು ಸಾಲು ಓದುತ್ತಿರುವ೦ತೆ ನೀವೇ ವಾನಪ್ರಸ್ತಕ್ಕೆ ಹೊರಟಿದ್ದೀರ... ಹೊಗುವ ಮುನ್ನ ಊರವರಿಗೆ ಒ೦ದು ಮಾತು ಹೀಗೇ...... ಹೇಳಲು ಹೊರಟಿದ್ದೀರಾ ಅ೦ದುಕೊ೦ಡಿದ್ದೆ... ಒಳ್ಳೆಯ ಸಸ್ಪೆನ್ಸ್.....
ವ೦ದನೆಗಳು.
PARAANJAPE K.N. said…
ಅಭಿಪ್ರಾಯಿಸಿದ ಎಲ್ಲರಿಗೂ ವಂದನೆ ಗಳು

Popular posts from this blog

ಈ ಬ೦ಧನಾ........

ಜನುಮದಿನದ ನೆಪದಲ್ಲಿ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ