ಬಾ-ನಲ್ಲೆ !!


ಸಾಗರದ ಅಲೆಯುಕ್ಕಿ ನೊರೆತೆರೆಯು ಮೊರೆಯುತಿದೆ
ಅಲೆಯ ಉಬ್ಬರವಿಳಿತ ಉನ್ಮಾದ ತೋರುತಿದೆ
ನಿತ್ಯನೂತನ ಬಯಕೆ ಸಾಗರದ ಅಲೆಯಲಿದೆ
ಭೋರಿಡುತ ಆಗಸಕೆ ಮುತ್ತಿಡುವ ತವಕ


ಸುರಿದ ಮಳೆ ಇಳೆಯಲಿದೆ ಹಸಿದ ನೆಲ ತಣಿಯುತಿದೆ
ಹೂವರಳಿ ಘಮಘಮಿಸಿ ಮಧುವನದು ಸೂಸುತಿದೆ
ಹಸಿರು ಚಾದರ ಹೊದ್ದ ಭೂರಮೆಯು ನಳನಳಿಸಿ
ನವವಧುವಿನ೦ದದಲಿ ಸೌಂದರ್ಯ ಚೆಲ್ಲಿ


ಪ್ರಕೃತಿಯ೦ದದ ಝಲಕು ತು೦ಬಿಹುದು ಮೈಪುಳಕ
ಬೀಸುತಿಹ ತ೦ಗಾಳಿ ಸುಶ್ರಾವ್ಯ ಲಹರಿ
ಮನದಿ ಕಾಮನೆ ಇರಲು ನೆನಪುಗಳು ರಸದು೦ಬಿ
ನರನಾಡಿಗಳಲೆಲ್ಲ ಕಸುವ ತು೦ಬಿ

ನನ್ನ ಮನದಿಂಗಿತವು ಸುಪ್ತ ಸಾಗರದ೦ತೆ
ಮುಕ್ತವಾಗುವ ತವಕ ಗುಪ್ತಗಾಮಿನಿಯ೦ತೆ
ಲುಪ್ತವಾಗಿದೆ ಮನಸು ಅರಸುತ್ತ ಸುಖಶಾ೦ತಿ
ನೀನಿಲ್ಲದಿರೆ ಇಲ್ಲ ಎನಗೆ ಮನ:ಶಾಂತಿ

ಹಾಕಿರುವೆ ನೀನೆನ್ನ ಹೃದಯಕೇ ಕನ್ನ
ಒಡನೆ ಬಾರೆಯ ನೀನು ಸಂಜೆಗತ್ತಲ ಮುನ್ನ
ಅನುರಣಿಸಿ ರಿ೦ಗಣಿಸಿ ಮಾರ್ದನಿಸಿ ನೂರ್ಮಡಿಸಿ
ಬದುಕಿಗೊ೦ದರ್ಥವನು ನೀಡು ಬಾ ನಲ್ಲೆ
ಚಿತ್ರ ಕೃಪೆ : ಅಂತರ್ಜಾಲ

Comments

ಪರಾಂಜಪೆ ಸರ್‍, ಕವನ ತುಂಬಾ ಸೊಗಸಾಗಿದೆ. ಅದರಲ್ಲಿಯೂ ಕೊನೆಯಲ್ಲಿನ ಸಾಲುಗಳು ಒಂದೇ ಉಸಿರಿನಲ್ಲಿ ಹಾಡುವಂತಿದೆ. ಜೊತೆಗೆ ಫೋಟೋ ಸಹ ಸೂಪರ್‌.

ಸ್ನೇಹದಿಂದ,
ಚಂದ್ರು
ವಾಹ್.. ಸುಂದರವಾದ ಸಾಲುಗಳು...
ಕವನ ತುಂಬಾ ಚನ್ನಾಗಿದೆ...
ಸುಮ said…
ಚೆನ್ನಾಗಿದೆ ಸರ್ ಕವನ. ತುಂಬ ಭಾವನಾತ್ಮಕವಾಗಿದೆ.
ಬಾಲು said…
ಕೆಲವು ಪದಗಳಲ್ಲಿ ವೈಟೆಜ್ ಜಾಸ್ತಿ ಇದೆ.
ಶೀರ್ಷಿಕೆ ಕೂಡ ಚೆನ್ನಾಗಿದೆ,
ಬಾ ನಲ್ಲೆ, ಅಥವಾ ಬಾನೆಲ್ಲೇ...
ನೀವು ತುಂಬಾ ಚೆನ್ನಾಗಿ ಕವನ ರಚಿಸುತ್ತೀರಿ. ನಿಮ್ಮ ಕವನಗಳು ಹೆಚ್ಚು ಲಾಲಿತ್ಯ ಪೂರ್ಣವಾಗಿರುತ್ತವೆ. ಸುಂದರ ಭಾವಗಳನ್ನು ಬಿತ್ತರಿಸುತ್ತಾ ನಮ್ಮ ಮನಸ್ಸನ್ನೂ ಮುದಗೊಳಿಸುತ್ತವೆ.

"ನನ್ನ ಮನದಿಂಗಿತವು ಸುಪ್ತ ಸಾಗರದ೦ತೆ
ಮುಕ್ತವಾಗುವ ತವಕ ಗುಪ್ತಗಾಮಿನಿಯ೦ತೆ"

ಈ ಸಾಲುಗಳು ತುಂಬಾ ಇಷ್ಟವಾದವು.
ಸುಂದರ ಸಾಲುಗಳೊಂದಿಗೆ ಮೂಡಿಬಂದಿದೆ.
umesh desai said…
ಪರಾಂಜಪೆ ಸರ್ ಕವಿತೆ ಛಂದದ ಆದರೆ ಪದಗಳ ಆಡಂಬರ ಸ್ವಲ್ಪ ಜಾಸ್ತಿ ಆತು ಅನಿಸ್ತು.
ಮೊನ್ನೆ ಹೆಗಡೆಅವರ ಸಂಭ್ರಮಕ್ಕ ನೀವೂ ಬಂದಿದ್ರಿ ಆದ್ರ ನೀವು ಯಾರು ಅಂತ ಗುರ್ತಹಿಡೀಲಿಕ್ಕೆ ಆಗಲಿಲ್ಲ
ಫೋಟೋ ನೋಡಿದೆ
sunaath said…
ನಿಮ್ಮಲ್ಲಿ ಗುಪ್ತಗಾಮಿನಿಯಾಗಿದ್ದ ಕಾವ್ಯಶಕ್ತಿ ಈಗ ಸಾಗರದಂತೆ ಅರ್ಭಟಿಸುತ್ತಿದೆ ಎನ್ನಬಹುದು.
shivu.k said…
ಸರ್,

ಇತ್ತೀಚೆಗೆ ಕವನವನ್ನು ಹೆಚ್ಚಾಗಿ ಬರೆಯುತ್ತಿದ್ದೀರಿ. ಮತ್ತು ತುಂಬಾ ಪದಪ್ರಯೋಗಗಳನ್ನು ಮಾಡುತ್ತಾ ಇದ್ದೀರಿ. ಪ್ರಕೃತಿ ಮತ್ತು ಹೆಣ್ಣಿನ ವಿಚಾರವಾಗಿರುವ ಈ ಕವನ ಉತ್ತಮ ಸಾಲುಗಳಿಂದ ಕೂಡಿದೆ.
ಸಾರ್..
"ಹಾಕಿರುವೆ ನೀನೆನ್ನ ಹೃದಯಕೇ ಕನ್ನ
ಒಡನೆ ಬಾರೆಯ ನೀನು ಸಂಜೆಗತ್ತಲ ಮುನ್ನ " ಸಾಲುಗಳು ತವಕದಿಂದ ಕಾಯುತ್ತಿರುವವರ ಮನಸ್ಥಿತಿಯನ್ನು ಚೆನ್ನಾಗಿ ವರ್ಣಿಸುತ್ತೆ... ಇಷ್ಟವಾಯಿತು.
ಶ್ಯಾಮಲ
ಪರಾಂಜಪೆ ಸರ್
ಎಂತ ಕವನ ಇದು, ಸಾಲು ಸಾಲುಗಳು ಮುದ ನೀಡುತ್ತವೆ
ನೀವು ಬಹಳ ಸುಂದರವಾಗಿ ಕವನ ರಚಿಸುತ್ತಿರಾ
ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ
ಕವನಕ್ಕೆ ರಾಗ ಹಾಕಿ ಹಾಡಿದರೆ ಸೂಪರ್

Popular posts from this blog

ಈ ಬ೦ಧನಾ........

ಜನುಮದಿನದ ನೆಪದಲ್ಲಿ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ