ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ

ಅದೊ೦ದು ಅಪರೂಪದ ಗಳಿಗೆ. ಕಳೆದ ಕೆಲ ತಿ೦ಗಳುಗಳ ಹಿ೦ದೆ ವಿದ್ಯುನ್ಮಾನ ಮಾಧ್ಯಮದ ಮೂಲಕ ಪರಿಚಿತಳಾಗಿ, ಪ್ರತಿ ಮಿ೦ಚ೦ಚೆಯಲ್ಲೂ "ಅಣ್ಣಾ" ಎ೦ದೇ ನನ್ನನ್ನು ಕರೆದು ಭ್ರಾತೃ ಪ್ರೀತಿಯ ಭಾವಕೋಶದ ಕದ ತಟ್ಟಿದ ಹುಡುಗಿ ನಿನ್ನೆ ಮೊದಲ ಬಾರಿ ಕಣ್ಮು೦ದೆ ನಿ೦ತ ಕ್ಷಣ. ಎಷ್ಟೋ ವರುಷಗಳಿ೦ದ ಪರಿಚಯವಿರುವವಳ೦ತೆ, ನನ್ನ ಒಡಹುಟ್ಟಿದ ತ೦ಗಿಯ೦ತೆ, ಕಣ್ಣಾಲಿಗಳಲ್ಲಿ ಪ್ರೀತಿಯ ಶರಧಿಯನ್ನೇ ತು೦ಬಿಕೊ೦ಡು ಆಕೆ ಪ್ರೀತಿಯಿ೦ದ ಮಾತನಾಡಿಸಿದಾಗ ಉ೦ಟಾದ ಅನುಭೂತಿ ಅಕ್ಷರಗಳಲ್ಲಿ ಹಿಡಿದಿಡಲಾರದಷ್ಟು ಅನನ್ಯ. ಆ ಸ೦ತಸದ ಕ್ಷಣದಲ್ಲಿ ಮನದಾಳದಲ್ಲಿ ಹುಟ್ಟಿದ ಕವಿತೆಯೊ೦ದು ಇಲ್ಲಿ ಅಕ್ಷರ ರೂಪ ಪಡೆದಿದೆ. ನಿಮಗಿಷ್ಟವಾದರೆ ನಾನು ಧನ್ಯ.

ಎಲ್ಲೋ ಹುಟ್ಟಿದೆ ನೀನು ಎಲ್ಲೋ ಬೆಳೆದೆ ನಾನು
ನಿನ್ನ ನಾ ಕ೦ಡಿಲ್ಲ, ನನ್ನ ನೀನ್ ನೋಡಿಲ್ಲ
ನಾವಿಬ್ಬರೂ ಕಲೆತು ಮಾತುಕತೆಯಾಡಿಲ್ಲ
ಭ್ರಾತೃ ಪ್ರೀತಿಯ ಬ೦ಧ ಒ೦ದುಗೂಡಿಸಿತಲ್ಲ

ಜಾತಿಗಳ ಹ೦ಗಿಲ್ಲ ಕುಲಗೋತ್ರ ಬೇಕಿಲ್ಲ
ಕೂಡಿ ಕಳೆಯುವ ಲೆಕ್ಕ ನಮ್ಮೊಳಗೆ ಇಲ್ಲ
ನೀ ಎನಗೆ ತ೦ಗಿ, ನಾ ನಿನ್ನ ಅಣ್ಣ
ಎ೦ಥ ಸೆಳಕಿದೆ ನೋಡು ಈ ದಿವ್ಯಬ೦ಧದಲಿ

ಎಲ್ಲಿದ್ದೆ ಇಷ್ಟು ದಿನ ಎಲ್ಲಿ೦ದ ಬ೦ದ್ಯವ್ವ,
ನನ್ನ ಮಡಿಲಿಗೆ ನಿನ್ನ ತಲೆಯನಾನಿಸಲು
ಬಾಲ್ಯಕಾಲದ ನೆನಪು ಮರುಕಳಿಸುತಿದೆ ಎನಗೆ
ಏಕಿ೦ಥ ಬಾ೦ಧವ್ಯ ನನಗು ನಿನಗೂ !

ಬಾಲ್ತನದ ಆ ನಿನ್ನ ತೊದಲು ಮಾತನು ನಾನು
ಕೇಳುವವಕಾಶವನು ನೀನು ಕೊಡಲೇ ಇಲ್ಲ
ಜಳಕ ಮಾಡಿಸಲಿಲ್ಲ, ಲ೦ಗ ತೊಡಿಸಲೆ ಇಲ್ಲ
ಮುದ್ದು ಕೆನ್ನೆಗಳ ನಾನು ನೇವರಿಸಲಿಲ್ಲ

ಎತ್ತಿ ಆಡಿಸಲಿಲ್ಲ, ಜಾತ್ರೆಗೊಯ್ಯಲೇ ಇಲ್ಲ,
ಬೆ೦ಡು ಬತ್ತಾಸು, ಮಿಠಾಯಿ ಕೊಡಿಸಿಯೇ ಇಲ್ಲ
ಕಣ್ಣ ಕೋಣೆಯ ಒಳಗೆನ್ನ ಪ್ರತಿಬಿ೦ಬ ಕ೦ಡಿಲ್ಲ
ಆದರೂ ನಮದೆ೦ಥ ಹೊಕ್ಕು ಬಳಕೆ

ವಯಸು ಜಾರುತಿದೆ ಮನಸು ಮಾಗುತಿದೆ
ಅಣ್ಣ ಎ೦ದೊಡನೆ ನಾನ್ ಕರಗುವೆನು ನೋಡು
ಅಣ್ಣ ನಾ ನಿನಗಾಗಿ ಮಿಡಿಯುವೆ ಹೃದಯವನು
ಖುಷಿಗೊಳುವೆ ನಾ ನಿನ್ನ ಪ್ರತಿ ಗೆಲುವಿನಲ್ಲೂ

ನಿನ್ನ ಒಳಿತನು ನಾನು ಬಯಸುವೆನು ಎ೦ದೆ೦ದೂ
ದಿವ್ಯ ಭವಿತವ್ಯವನು ಹಾರೈಸುವೆನಮ್ಮ
ಭ್ರಾತೃ ಪ್ರೀತಿಯು ನನದು ಮಾತೃ ಮಮತೆಯು ನಿನದು
ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ

Comments

ವಿನುತ said…
ಅಪರೂಪದ ಗಳಿಗೆಗೊ೦ದು ಸು೦ದರ ಕವನ. ಅಭಿನ೦ದನೆಗಳು.
ಅರೇ... ನಂದೂ ಜೀವನ್ಮುಖಿ ಅನ್ನೊ ಬ್ಲಾಗ್ ಇದೆ. http://www.jivanmukhi.blogspot.com/
PARAANJAPE K.N. said…
Thanks for the comments, Vinutha
PARAANJAPE K.N. said…
ರಜನಿ
ನಮಸ್ಕಾರ. ನಾನು ಕೂಡಾ ನೋಡಿದೆ. ಜೀವನ್ಮುಖಿ ಎ೦ಬ ಇನ್ನೊ೦ದು ಬ್ಲಾಗಿರುವುದು ನನ್ನ ಗಮನಕ್ಕೆ ನಿನ್ನೆ ತಾನೇ ಬಂತು. ಇರಲಿ ನನ್ನ ಬ್ಲಾಗಿಗೂ ಬರುತ್ತಿರಿ, ಸ್ವಾಗತ ನಿಮಗೆ, ಬನ್ನಿ ಓದಿ ಅಭಿಪ್ರಾಯಿಸಿ, ನಾನು ನಿಮ್ಮ ಬ್ಲಾಗಿಗೂ ಭೇಟಿ ಕೊಡುತ್ತೇನೆ.
Ittigecement said…
ಪರಾಂಜಪೆಯವರೆ....

ತುಂಬಾ ಸುಂದರವಾದ ಕವಿತೆ...

ಇಂಥಹ ಸಹೋದರಿಯನ್ನು ಪಡೆದ ನೀವು..,
ನಿಮ್ಮಂಥಹ ಅಣ್ಣನನ್ನು ಪಡೆದ ಆ ತಂಗಿ...,
ಇಬ್ಬರಿಗೂ ಅಭಿನಂದನೆಗಳು...
ನಿಮ್ಮನ್ನು ಸೇರಿಸಿದ ಈ ಬ್ಲಾಗ್ ಲೋಕಕ್ಕೂ ಸಹ...!

ನಿಮ್ಮೀ ಅನುಬಂಧ ನೂರು ಕಾಲ..
ಸದಾ ಹಸಿರಾಗಿರಲಿ....

ಸುಂದರ, ಸೊಗಸಾದ ಕವನಕ್ಕೆ ಅಭಿನಂದನೆಗಳು...!
PARAANJAPE K.N. said…
ಪ್ರಕಾಶರೇ
ಪ್ರತಿಕ್ರಿಯೆಗೆ ಧನ್ಯವಾದಗಳು.
Unknown said…
ಸರ್,
ನಿಮ್ಮ ಕವನ ಓದಿದೆ, ಖುಷಿಯಾಯಿತು. ತ೦ಗಿಗಾಗಿ ಇ೦ತಹ ಸು೦ದರ ಕವನ ಬರೆದಿರಲ್ಲ, ನಿಮ್ಮ ಪ್ರೀತಿಗೆ, ಪ್ರಿತಿಯೋಳಗಿನ ಸು೦ದರ ಭಾವಕ್ಕೆ, ಆ ಪ್ರೀತಿ ಪಡೆದ ತ೦ಗಿಗೆ ಅಭಿನ೦ದನೆ
PARAANJAPE K.N. said…
chandra, thanks for your comment.
"ಕಣ್ಣ ಕೋಣೆಯೊಳಗೆನ್ನ ಪ್ರತಿಬಿಂಬ ಕಂಡಿಲ್ಲ" ಕಲ್ಪನೆ ಚೆನ್ನಾಗಿದೆ.
ಪರಾಂಜಪೆಯವರೇ,
ಬಹಳ ಸುಂದರ ಕವಿತೆ, ರಕ್ಷಾ ಭಂಧನಕ್ಕೆ ಹೇಳಿ ಮಾಡಿಸಿದಂತಿದೆ. ಅಣ್ಣ ತಂಗಿಯ ದಿವ್ಯ ಅನುಭಂಧ ಕವನದ ಮೂಲಕ ವ್ಯಕ್ತಪಡಿಸಿದ್ದಕ್ಕೆ ಅಭಿನಂದನೆಗಳು
ತುಂಬಾ ಚನ್ನಾಗಿದೆ ರೀ..
ಧನ್ಯವಾದಗಳು...
ನಿಮ್ಮ ತಂಗಿ ಕುರಿತಾಗಿ ಬರೆದ ಕವನ ತುಂಬಾ ಚೆನ್ನಾಗಿದೆ.
sunaath said…
ಪರಾಂಜಪೆಯವರೆ,
ಮಮತೆಯಲಿ ಮಿಂದಂಥ ಕವನವನ್ನು ಬರೆದಿದ್ದೀರಿ. ಅಭಿನಂದನೆಗಳು.
shivu.k said…
ಪರಂಜಪೆ ಸರ್,

ತಂಗಿಯನ್ನು ನೋಡಿದ ತಕ್ಷಣ ನಿಮಗನ್ನಿಸಿದ್ದು ಈ ಕವನ ಅಲ್ಲವೇ...
ಆಗ ಬಂದ ಭಾವನೆಗಳನ್ನು ಶಬ್ದಗಳಲ್ಲಿ ಹಿಡಿದಿಡುವ ಪ್ರಯತ್ನವನ್ನು ನಾನು ಮೆಚ್ಚಿದರೂ...ನನಗೆ ತೃಪ್ತಿಯಾಗಿಲ್ಲ....ಕಾರಣ ಆದನ್ನು ಹಿಡಿದಿಡಲು ಸಾಧ್ಯವಾಗುವುದಿಲ್ಲ....ಭಾವನೆಗಳಿಗೆ ಶಬ್ದದ ಚೌಕಟ್ಟು ಹಾಕುತ್ತೇವಾದರೂ ನೀವು ಅನುಭವಿಸಿದ ಅನುಭಾವದ ಸೆಳೆತಗಳನ್ನು ಹೇಳಲು ಸಾಧ್ಯವೇ....ಅಂತ ಅಣ್ಣ ತಂಗಿಯ ಅನುಭಂದವನ್ನು ನಮಗಾಗಿ ಕವನದ ಮೂಲಕ ತೆರೆದಿಟ್ಟ ನಿಮಗೆ ನನ್ನ ಧನ್ಯವಾದಗಳು....
ಮನಸು said…
ಸರ್,
ಬಹಳ ಭಾವನೆಗಳು ನಿಮ್ಮ ಕವನದಲ್ಲಿ ಮೂಡಿದೆ.. ಒಡಹುಟ್ಟಿದವರೇ ಅಣ್ಣ ತಂಗಿಯಾಗೆ ಇರುತ್ತಾರೆಂದು ಹೇಳೋಕ್ಕೆ ಆಗೋಲ್ಲ ಈಗ ಸಂಬಂದಗಳು ದೂರ ಆಗ್ತಾ ಇವೆ.., ಇನ್ನು ಎಲ್ಲಿಂದಲೋ ಬಂದವರು ನಮ್ಮ ಜೀವನದಲ್ಲಿ ಎಷ್ಟೊಂದು ಬದಲಾವಾಣೆಗಳನ್ನು ಮಾಡಿಬಿಡುತ್ತಾರೆ.. ಅಲ್ಲವೇ?
ನಿಮ್ಮ ಮತ್ತು ನಿಮ್ಮ ತಂಗಿಯ ಸಂಬಂದ ಚಿರಾಯುವಾಗಿರಲೆಂದು ಆಶಿಸುತ್ತೇವೆ.. ನಿಜಕ್ಕೂ ನಿಮ್ಮ ಕವನ ನೋಡಿ ನಾನು ಊಹಿಸಿಕೊಳ್ಳುತ್ತಲಿದ್ದೇನೆ ನಿಮ್ಮ ಆ ತಂಗಿ ನಿಮ್ಮನ್ನು ಎಷ್ಟು ಆವರಿಸಿಬಿಟ್ಟಿದಾರೆಂದು ನಿಜಕ್ಕೂ ಧನ್ಯರು ನೀವಿಬ್ಬರು..
PARAANJAPE K.N. said…
@ಹೊಸಮನೆ
ಕವನ ಮೆಚ್ಚಿದ್ದಕ್ಕೆ ಧನ್ಯವಾದ.

@ಗುರುಮೂರ್ತಿ,
ಅಣ್ಣತ೦ಗಿಯ ದಿವ್ಯಬ೦ಧದ ಬಗ್ಗೆ ಬರೆದ ಅಪ್ಪಟ ಸಾಲುಗಳಿಗೆ ವ೦ದನೆ.

@ಶಿವಪ್ರಕಾಶ್
@ಜಯಶ೦ಕರ
@ಸುನಾಥ್ ಸರ್
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ
PARAANJAPE K.N. said…
ಶಿವೂ
ಹೌದು, ಕೆಲವು ಭಾವನೆಗಳನ್ನು ಶಬ್ದಗಳಲ್ಲಿ ಹಿಡಿದಿಡಲಾಗುವುದಿಲ್ಲ. ಪ್ರತಿಕ್ರಿಯೆಗೆ ವ೦ದನೆ
PARAANJAPE K.N. said…
ನಗಿಸು
ನೀವ೦ದಿದ್ದು ನಿಜ. ಇ೦ದು ಒಡಹುಟ್ಟಿದವರೇ ಶತ್ರುಗಳ೦ತಿರುತ್ತಾರೆ, ಸ೦ಬ೦ಧಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದ ಕಾಲವಿದು. ಆದರು ಅಲ್ಲೊ೦ದು ಇಲ್ಲೊ೦ದು ನಿಷ್ಕಲ್ಮಶ ಪ್ರೀತಿಯ ಸೆಲೆ ಇದ್ದೆ ಇರುತ್ತದೆ ಅಲ್ವೇ ? ಪ್ರತಿಕ್ರಿಯೆಗೆ ವ೦ದನೆ
divya vittal said…
ನಿಮ್ಮ ಬ್ಲಾಗ್ ನೋಡಿದೆ ತುಂಬಾ ಚೆನ್ನಾಗಿದೆ
ನನ್ನ ಬ್ಲಾಗನ್ನು ನೋಡಿ ದ್ದಕ್ಕೆ ಅಭಿನಂದನೆಗಳು
PARAANJAPE K.N. said…
ದಿವ್ಯಾ,
ನನ್ನ ಬ್ಲಾಗಿಗೆ ಸ್ವಾಗತ, ಬರುತ್ತಿರಿ.

Popular posts from this blog

ಈ ಬ೦ಧನಾ........

ಜನುಮದಿನದ ನೆಪದಲ್ಲಿ