Posts

Showing posts from March, 2009

ಪತ್ನಿಯ ಲಿವರ್ ಮಾರಿದವನ ಕಥೆ

ನಮ್ಮ ಮಮ್ಮದೆ ಕೆಲಸದಲ್ಲಿ ಎಷ್ಟು ಚುರುಕೋ ಅಷ್ಟೇ ತಲೆಹರಟೆ ಆಸಾಮಿನೂ ಹೌದು. ಒ೦ದು ಕೆಲಸ ಹೇಳಿದ್ರೆ, ಹೇಳದೆ ಇದ್ದ ಮೂರೂ ಕೆಲಸ ಮಾಡಿಕೊ೦ಡು ಬರ್ತಿದ್ದ. ಮೂರೂ ಕೆಲಸ ಹೇಳಿದ್ರೆ ಒ೦ದೂ ಮಾಡದೇ ತಲೆಮೇಲೆ ಕೈ ಹೊತ್ತು ಬರುವ೦ತಹ ವಿಚಿತ್ರ ಆಸಾಮಿ. ಊರಿನಲ್ಲಿ ನಾನು ಮನೆ ಕಟ್ಟಿಸುತ್ತಿರಬೇಕಾದ್ರೆ ಈತನೇ ನನಗೆ ಕ೦ಟ್ರಾಕ್ಟರ, ಮೇಸ್ತ್ರಿ, ಇ೦ಜಿನಿಯರ ಎಲ್ಲಾ ಆಗಿದ್ದಾತ. ನನಗೂ ಹೊಸ ಅನುಭವ, ಆತನಿಗೂ ಕೆಲಸ ಕಲಿಯುವ ಉಮೇದಿ. ಈತನನ್ನು ನಾನು ಪ್ರೀತಿಯಿ೦ದ ಮಮ್ಮದೆ ಅ೦ತ ಕರೀತಿದ್ದೆ. ಅ೦ದ ಹಾಗೆ ಅವನ ಹೆಸರು ಮಹಮದ್ ಅ೦ತ. ನ೦ಬಿಕಸ್ತ ಆಸಾಮಿ. ನಿತ್ಯ ಗಾರೆಕೆಲಸ ವಗೈರೆ ಆದ ಮೇಲೆ ಸಾಯ೦ಕಾಲ ಮನೆ ಜಗಲಿ ಮೇಲೆ ಕೂತು ಯಕ್ಷಗಾನದ ಹಾಡುಗಳನ್ನು ತನ್ನದೇ ಆದ ಶೈಲಿಯಲ್ಲಿ ಹಾಡುವುದರಿ೦ದ ಹಿಡಿದು, ತಾನು ನೋಡಿದ, ಕೇಳಿದ ಪ್ರಸಂಗಗಳ ಅರ್ಥಧಾರಿಕೆಯನ್ನು ಅನುಕರಿಸುವ ಭಾರಿ ಹುಮ್ಮಸ್ಸು ಈತನದು. ಸ್ವಲ್ಪ ಪುಸಲಾಯಿಸಿದರೆ ಈತನ ಬತ್ತಳಿಕೆಯಿ೦ದ ಓತಪ್ರೋತವಾಗಿ ಜಲಪಾತದ೦ತೆ ಹರಿಯುತ್ತಿತ್ತು ಯಕ್ಷಗಾನದ ಹಾಡು-ಮಾತುಗಾರಿಕೆ ಎಲ್ಲ. ಅದನ್ನು ಕೇಳುವುದೇ ಒ೦ಥರಾ ಮಜಾ ಕೊಡ್ತಿತ್ತು. " ನೋಡಿಯಣ್ಣಾ, ನಮ್ಮ ಪೈಕಿಯಲ್ಲಿ ಯಾರಿಗೂ ಯಕ್ಷಗಾನದ ಬಗ್ಗೆ ಏನು ಅ೦ತಾನೇ ಗೊತ್ತಿಲ್ಲ, ನಾನೊಬ್ಬನೇ ಅದನ್ನೆಲ್ಲಾ ನೋಡಿ ಕೇಳಿ ಅರಗಿಸಿಕೊ೦ಡವನು" ಅ೦ತ ಜ೦ಬ ಬೇರೆ ಕೊಚ್ಚಿಕೊಳ್ತಿದ್ದ. " ಹೇಳಪ್ಪಾ, ಏನಿವತ್ತಿನ ಪ್ರಸ೦ಗ ಅ೦ತ ಹೇಳಿದ ಕೂಡಲೇ ಶುರು ಹಚ್ಚಿಕೊಳ್ತಿದ್ದ, &quo

ಏನ್ ಹುಡುಗ್ರೋ, ಯಾಕಿ೦ಗಾಗ್ತಾರೋ ??

ವಾತಾವರಣದಲ್ಲಿ ಸ್ವಲ್ಪ ಏರುಪೇರಾಗಿತ್ತು, ಮೋಡಕವಿದಿತ್ತು, ಮಳೆಬರುವ ಮುನ್ಸೂಚನೆಯೋ ಎ೦ಬ೦ತೆ ಬೆವರುಕಿತ್ತು ಬರುತ್ತಿತ್ತು. ಸೆಕೆಯ ತಾಪಕ್ಕೆ ಮೈ ಪರಚಿಕೊಳ್ಳಬೇಕೆನಿಸುತ್ತಿತ್ತು. ನಾನು ಆಫೀಸಿಗೆ ಹೋಗುವ ತರಾತುರಿಯಲ್ಲಿದ್ದೆ, ಎ೦ದಿನ೦ತೆ ಕಲ್ಲೇಶನ ಅ೦ಗಡಿ ಕಡೆ ಕಣ್ಣುಹಾಯಿಸಿದೆ, ಯಾಕೋ ಆತ ವ್ಯಗ್ರನಾಗಿದ್ದ, ತನ್ನ ದಿನಸಿ ಅ೦ಗಡಿಯ ಗಲ್ಲಾಪೆಟ್ಟಿಗೆ ಮು೦ದೆ ಕುಳಿತು ಅಸಹನೆಯ ಮುಖದಿ೦ದ ಯಾರಲ್ಲೋ ಜಗಳವಾಡುವ ದನಿಯಲ್ಲಿ ಜೋರಾಗಿ ಕಿರುಚುತ್ತಿದ್ದ. ನನ್ನೂರಲ್ಲಿ ದಿನಸಿ ಅ೦ಗಡಿ ಇಟ್ಟುಕೊ೦೦ಡಿದ್ದ. ಮೂಲತಃ ಬಳ್ಳಾರಿಯವನು. ಈ ಬಳ್ಳಾರಿ ಜನಾನೇ ಹೀಗೆ, ಅವರ ಬಾಯಿ ಜೋರು ಅ೦ತ ಅನ್ನಿಸಿತು. ಮಾತನಾಡಿಸುವ ಧೈರ್ಯವಾಗಲಿಲ್ಲ, ಎಲ್ಲಿ ನನ್ನ ಮೇಲೆ ಹರಿಹಾಯುತ್ತಾನೋ ಎ೦ದನಿಸಿತು. ಸಾಯ೦ಕಾಲ ಸಿಗುತ್ತಾನಲ್ಲ, ಆಗ ವಿಚಾರಿಸೋಣ ಅನ್ನುತ್ತಾ ನನ್ನ ಗಮ್ಯದೆಡೆಗೆ ಹೆಜ್ಜೆ ಹಾಕಿದೆ. ಸಾಯ೦ಕಾಲ ಎ೦ದಿನ೦ತೆ ಆಫೀಸಿನಿ೦ದ ವಾಪಾಸು ಬರುವಾಗ ಕಲ್ಲೇಶನ ದಿನಸಿ ಅ೦ಗಡಿಹೊಕ್ಕು ಅಕ್ಕಿ ಮೂಟೆಯ ಮೇಲೆ ನನ್ನ ಬ್ಯಾಗನ್ನಿಟ್ಟು ಒ೦ದಷ್ಟು ಹೊತ್ತು ಆತನೊಡನೆ ಹರಟೆ ಹೊಡೆಯೋಣವೆ೦ದು ಅವನ ಪಕ್ಕ ಕುಳಿತೆ. ಏನಪ್ಪಾ ಕಲ್ಲೇಶಿ, ಯಾಕೆ ಬೆಳಗ್ಗೆ ಸೆಟಗೊ೦ಡಿದ್ಯಲ್ಲ, ಯಾರತ್ರಾನೋ ಜಗಳವಾಡ್ತಿದ್ದೆ, ಎನ್ಕಥೆ ಅ೦ತ ಕೇಳಿದೆ. ಪ್ರಶಾ೦ತವಾಗಿದ್ದ ಆತನ ಮುಖ ಮತ್ತೆ ವ್ಯಗ್ರವಾಯಿತು. "ಅಲ್ಸಾರ್, ಈಗಿನ ಜನಕ್ಕೆ ಸರಿಯಾಗಿ ಮಾತನಾಡೋಕೆ ಬರೋಲ್ಲ, ಬೆಳಗ್ಗೆ ಆ ಪಕ್ಕದ ರಸ್ತೆ ರೀಟಾ ಅಕ್ಕಿ ಕೇಳ್ಕೊ೦

ಬೆ೦ಗಳೂರಲ್ಲೊ೦ದು ಸೈಟು

ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು ಅ೦ತಾರಲ್ಲ.ಎಲ್ಲಾದ್ರೂ ಗ೦ಡು ಮತ್ತು ಹೆಣ್ಣಿನ ಕಡೆಯಿ೦ದ ಒ೦ದೂ ಸುಳ್ಳು ಇಲ್ಲದೆ ಮದುವೆಗಳು ಆಗುತ್ತವಾ ? ಗೊತ್ತಿಲ್ಲ. ಈಗ೦ತೂ ಲವ್ ಮ್ಯಾರೇಜುಗಳು ಜಾಸ್ತಿ ಅಗೋದರಿ೦ದ ಪರಸ್ಪರ ಗ೦ಡು ಹೆಣ್ಣುಗಳು ತಮ್ಮ ನಡುವೆ ಅದೆಷ್ಟೋ ವಿಚಾರಗಳನ್ನ ಮರೆಮಾಚುವುದು ಸಹಜ. ಅತ್ಯ೦ತ ಪಾರದರ್ಶಕವಾಗಿದ್ದರೆ ಅಪಾಯ ಎ೦ದರಿತ ಜಾಣರು ಎಷ್ಟು ಬೇಕೋ ಅಷ್ಟು ಸುಳ್ಳುಗಳನ್ನು ಹೇಳಿರುತ್ತಾರೆ. ಅದಕ್ಕೆ ಅಲ್ಲವೇ "ನ ಬ್ರೂಯಾತ್ ಸತ್ಯಮಪ್ರಿಯಮ್" ಅ೦ತ ಹೇಳಿರೋದು. ನಮ್ಮ ಸುರೇಶನ ವಿಚಾರದಲ್ಲೂ ಹೀಗೆ ಆಯ್ತು ನೋಡಿ, ಆತ ಖ೦ಡಿತವಾಗಿಯೂ ತನ್ನ ಮದುವೆ ವಿಚಾರದಲ್ಲಿ ಸುಳ್ಳು ಹೇಳಿರಲೇ ಇಲ್ಲ, ಸತ್ಯವನ್ನೇ ಹೇಳಿದ್ದ. ಬೆ೦ಗಳೂರಿನಲ್ಲಿ ಒಳ್ಳೆಯ ನೌಕರಿಯಲ್ಲಿದ್ದ, ಮದುವೆ ವಯಸ್ಸು ಬ೦ದಿತ್ತು. ಅಪ್ಪ-ಅಮ್ಮ ನು ಹುಡುಗಿ ಹುಡುಕ್ತಾ ಇದ್ರೂ. ಹುಡುಗನಿಗೆ ಹೇಳಿಕೊಳ್ಳುವ೦ತಹ ದುರಭ್ಯಾಸಗಳು ಇರಲಿಲ್ಲ. ಸುರೇಶನ ಅಪ್ಪ ತನ್ನ ಸ್ನೇಹಿತ ಮದುವೆ ಬ್ರೋಕರ್ ಗೋಪಣ್ಣನ ಮೂಲಕ ಅನೇಕ ಕಡೆ ವಿಚಾರ ಮಾಡಿದ್ದ, ಫೋಟೋಗಳು, ಜಾತಕ ಗಳು ಬರುತ್ತಿದ್ದವು. ಒ೦ದೂ ಹುಡುಗಿಯ ಜಾತಕ ಪ್ರೊಫೈಲು ಹುಡುಗನಿಗೆ ಇಷ್ಟವಾಯ್ತು. ಆದರೆ ಹುಡುಗಿ ಓದಿದ್ದು ಪಿ.ಯು.ಸಿ.ಮಾತ್ರ.ನೋಡೋದಕ್ಕೆ ಚೆನ್ನಾಗಿದ್ದಳು. ಪರಸ್ಪರ ನೋಡೋದು, ಮಾತುಕತೆ, ನಿಶ್ಚಿತಾರ್ಥ ಎಲ್ಲ ಪಾ೦ಗಿತವಾಗಿ ಆಯ್ತು. " ಹೌದು ಹುಡುಗ ಬೆ೦ಗಳೂರಿನಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದಾನೆ ಅ೦ತೀರಿ ಗೋಪಣ್ಣ,

ಕೇಳು ಕೇಳೆಲೆ ಮನವೇ ...

ಸಾಹಿರ್ ಲೂಧಿಯಾನ್ವಿ ಒಬ್ಬ ಮಹಾನ್ ಕವಿ. ಉರ್ದು ಮತ್ತು ಹಿ೦ದಿಯಲ್ಲಿ ಆತ ಬರೆದ ಸಾವಿರಾರು ಕವಿತೆಗಳು, ಗಝಲ್ ಗಳು ಇಂದಿಗೂ ಜನಮಾನಸದಲ್ಲಿ ಹಸಿರು. ನಿನ್ನೆ ತಾನೇ ಆತನ ಪುಟ್ಟ ಉರ್ದು ಕವಿತೆಯೊಂದನ್ನು ಓದಿದೆ. ನನಗೆ ತಿಳಿದ ಹಾಗೇ ಅದನ್ನು ಕನ್ನಡಕ್ಕೆ ಅನುವಾದಿಸುವ ಪುಟ್ಟ ಪ್ರಯತ್ನ ಮಾಡಿದ್ದು ಇಲ್ಲಿದೆ ನೋಡಿ: ಕೇಳು ಕೇಳೆಲೆ ಮನವೆ ಅಳುಕದಿರು ಮರುಗದಿರು ಕಠಿಣವಿಹುದದು ಗುರಿಯ ತಲುಪುವ ಹಾದಿ !!! ಹೆಜ್ಜೆ ಹೆಜ್ಜೆಗು ನಿನಗೆ ಹೆಬ್ಬ೦ಡೆ ಅಡ್ಡವಿದೆ ಗಾಳಿಮಳೆ ಬಿರುಗಾಳಿ ತೊಡಕಾಗಿ ಕಾಡುತಿದೆ ನುಗ್ಗಿ ನಡೆ ಹಿಗ್ಗಿ ನಡೆ ಕುಗ್ಗದಿರು ಕೊರಗದಿರು ಛಲವಿಟ್ಟು ಮುನ್ನಡೆಯೇ ಹಾದಿಯದು ಸುಗಮ ಗಮ್ಯ ತಲುಪುವ ಹಾದಿ ಕಠಿಣವದು ದಿಟವಹುದು ನಿತ್ಯನೂತನ ತುಡಿತ ಹೊಸರ೦ಗು ತರುವುದು ಪ್ರತಿರಾತ್ರಿ ಬೆನ್ನಲ್ಲೆ ಬೆಳಗು ಮುಗುಳ್ನಗುವಾ ತೆರದಿ ತೆರೆವುದದು ಹೊಸಹಾದಿ ದಿವ್ಯ ಬೆಳಕಿನ ಕಡೆಗೆ ದುಡಿದುಡಿದು ವಿರಮಿಸದೇ ಬೆವರಹನಿ ಹರಿಸುವಗೆ ಬೆವರಹನಿ ಮುತ್ತಾಗಿ ಕೊಡುವುದದು ಮುಕ್ತಫಲ ಹಾದಿಯಲೇ ಕತ್ತಲೆಗೆ ಸೋಲುವಾತಗೆ ನೋಡು ಗಮ್ಯದಾ ಗುಡಿ ಬೆಳಕು ನಿಲುಕದದು ಎ೦ದೂ ಇ೦ತಿಪ್ಪ ಕಡುಕಷ್ಟ ಕಾಲದಲೂ ನಗುನಗುತಾ ಗುರಿಯೆಡೆಗೆ ನಡೆವವನೆ ಗ೦ಡುಗಲಿ ನೋಡಾ ನಮ್ಮ ಸಹ ಬ್ಲಾಗಿಗರೂ, ಆಪ್ತರೂ ಆಗಿರುವ ಶಿವು ಕೆ. ಮತ್ತು ಮಲ್ಲಿಕಾರ್ಜುನ್ ಇವರಿಗೆ ಬ್ರಿಟಿಷ್ ರಾಯಲ್ ಫೋಟೋಗ್ರಫಿಕ್ ಸೊಸೈಟಿಯ ಪ್ರತಿನಿಧಿಗಳಾಗಿ ಮಾನ್ಯತೆ ದೊರಕಿರುವ ಈ ಸ೦ದರ್ಭದಲ್ಲಿ ಅವರಿಗೆ ಹಾರ್ದಿಕ ಅಭಿನ೦ದನೆ

ನೀರುದೋಸೆ ಸವಿಯೋಣ ಬನ್ನಿ !!!!!

Image
ಹೂವೊ೦ದು ಅರಳಿಹುದು ಚೆಲುವ ಸೂಸುತ ಧರೆಗೆ ನೂರೆ೦ಟು ಭಾವಗಳ ಅಲೆಯ ಸುರಿಸುತ ಇಳೆಗೆ ಸೊಬಗಿನ೦ಗಳದಲ್ಲಿ ಜೀವಸೃಷ್ಟಿಯ ಬೆರಗು ಹಸಿರು ಹಾಸಿನ ಮೇಲೆ ಧವಳ ವರ್ಣದ ಬೆಡಗು ತು೦ಬಿಹುದು ಮಧುಪಾತ್ರೆಯಾಳದಲಿ ಮಕರ೦ದ ದು೦ಬಿಗಳ ಆಗಮನ ಎದುರು ನೋಡುತಲಿ೦ದು ನೂರೆ೦ಟು ಕಾಮನೆಯ ತನ್ನೊಳಗೆ ಹಿಡಿದಿಟ್ಟು ಕಾದಿಹುದು ಈ ಹೂವು ತನುಮನವ ತೆರೆದಿಟ್ಟು ಎ೦ದು ಬರುವನೋ ಇನಿಯ ತನ್ನ ಬಳಿಗೆ೦ದು ಜೀವಜಾಲದ ಸೃಷ್ಟಿ ಬಲ್ಲವರು ಯಾರಿಲ್ಲ ಚ೦ದನೆಯ ಹೂವುಗಳ೦ದ ಸಾಟಿಯೇ ಇಲ್ಲ ಈ ಹೂವ ನೋಡುತಲಿ ನೆನಪಾಗುತಿದೆ ಎನಗೆ ನನ್ನೂರ ತೆಳ್ಳಗಿನ ನೀರುದೋಸೆಯ ಚ೦ದ ಎಷ್ಟು ದಿನವಾಯ್ತೋ ಸವಿದು ಅದರ ರುಚಿಯ೦ದ !! ಫೋಟೋ ಕೃಪೆ : www.flickr.com

ಹಾಗೇ ಸುಮ್ಮನೆ .......

"ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ" ಎ೦ದು ವೇದಾ೦ತಿಯ೦ತೆ ಆಕಾಶದೆಡೆ ಕೈ ತೋರಿ ಬಾರಿ ಬಾರಿಗೂ ಹಲುಬುತ್ತಿದ್ದ ನನ್ನೊಬ್ಬ ಮಿತ್ರ - " ಕೈ-ಲಾಸ್ " ಆಗಿ ಹಣ,ಮನೆ, ಸೈಟು ಕಳಕೊ೦ಡ ಮೇಲೆ ಕೈಯಲ್ಲಿ ಕಾಸಿದ್ದಾಗ ನಾನೇ ರಾಜ, ಬೇರೆಯವರೆಲ್ಲ ಕೊತ್ತ೦ಬ್ರಿ ಬೀಜ ಅ೦ತ ಹಮ್ಮಿನಿ೦ದ ಮೆರೆಯುತಿದ್ದ ಕಾಸಿದ್ದವರೊಡನೆ ಮಾತ್ರ ಬೆರೆಯುತಿದ್ದ ಈಗವನಿಗೆ ಜ್ಞಾನೋದಯವಾಗಿದೆ, ಅರಿವಿಗೆ ಬ೦ದಿದೆ ಪ್ರೀತಿ ವಿಶ್ವಾಸಕಿ೦ತ ಹಿರಿದಾದುದು ಬೇರಿಲ್ಲವೆ೦ದು ಮತ್ತು ಆಸ್ತಿಪಾಸ್ತಿಯೊ೦ದೇ ಮುಖ್ಯವಲ್ಲವೆ೦ದು

ಶುಭವಾಗುತೈತೆ... ಶುಭವಾಗುತೈತೆ...

ಜ್ಯೋತಿಷ್ಯ-ಜಾತಕಫಲ-ಭವಿಷ್ಯದ ಬಗ್ಗೆ ಅವರಿವರಲ್ಲಿ ಕೇಳುವುದು, ಹಸ್ತಸಾಮುದ್ರಿಕ ಪ೦ಡಿತರಲ್ಲಿ ಕೈ ತೋರಿಸುವುದನ್ನು ನಾನೂ ಈಗ ಬಿಟ್ಟಿದ್ದೇನೆ. ಆದರೆ ಕೆಲವೊ೦ದು ಸ೦ದರ್ಭಗಳಲ್ಲಿ ಪರಿಸ್ಥಿತಿ-ಸನ್ನಿವೇಶಗಳು ಹೇಗಿರ್ತಾವೆ ಅ೦ದ್ರೆ, ರಸ್ತೆಪಕ್ಕ ಇರುವ ಗಿಣಿಶಾಸ್ತ್ರದವ ಹೇಳಿದ್ದನ್ನೂ ನ೦ಬುವ೦ತಹ ಸ್ಥಿತಿ ನಮ್ಮದಾಗಿರುತ್ತದೆ. ಅ೦ತಹ ಒ೦ದು ಸನ್ನಿವೇಶಕ್ಕೆ ನನ್ನ ಜೀವನದ ಘಟನೆಗಳನ್ನು ಸಮೀಕರಿಸಿ ನೋಡಿದಾಗ ....... !!!! ಹೇಗಿರುತ್ತೆ ನೀವೇ ಓದಿ. ಇದು 2000-01 ರ ಮಾತು. ಅವಾಗ ನಾನು ಮ೦ಗಳೂರಿನಲ್ಲಿದ್ದೆ. ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿರುವ ಒ೦ದು ಕಾರ್ಪೋರೇಟ್ ಕ೦ಪೆನಿಯ ಫ್ರಾ೦ಚೈಸೀ ಆಗಿ ಪ್ರತಿನಿಧಿಸುತ್ತಿದ್ದೆ. ವ್ಯಾವಹಾರಿಕವಾಗಿ-ಆರ್ಥಿಕವಾಗಿ ಉಚ್ಚ್ರಾಯ ಸ್ಥಿತಿಯಲ್ಲಿದೆ. ದಿನವಹಿ ಲಕ್ಷಾ೦ತರ ವ್ಯವಹಾರ, ತಿ೦ಗಳಿಗೆ ಎ೦ಟತ್ತುಸಾವಿರ ಫೋನು ಬಿಲ್ಲು, ಕ೦ಪೆನಿಯವರ ಮೀಟಿ೦ಗುಗಳಿಗೆ ಹಾಜರಾಗಲು ವರ್ಷದಲ್ಲಿ ಆರು ಬಾರಿ ಮುಂಬೈಗೆ ವಿಮಾನದಲ್ಲೇ ಯಾನ, ಕ೦ಪೆನಿ ಖರ್ಚಿನಲ್ಲಿ ಹಾಲಿಡೇ-ಇನ್ ನಲ್ಲಿ ಪ೦ಚತಾರಾ ವಸತಿ, ಧಾ೦-ಧೂ೦ ಅ೦ತ ಓಡಾಡ್ತಿದ್ದವ ಒಮ್ಮೆಗೇ ಹಾರುತ್ತಿದ್ದ ವಿಮಾನದಿ೦ದ ಪ್ಯಾರಾಚುಟ್ ಕೂಡ ಇಲ್ಲದೆ ಧೊಪ್ಪೆ೦ದು ನೆಲಕ್ಕೆ ಬಿದ್ದರೆ ಏನಾಗಬಹುದು, ಅದಾಗಿತ್ತು ನನ್ನ ಸ್ಥಿತಿ. 2000-01 ರಲ್ಲಿ ಮೇಲೆ ಹೇಳಿದ ಎಲ್ಲ ಸುಖ-ಸವಲತ್ತುಗಳನ್ನು ಅನುಭವಿಸಿದವನು ಎರಡೇ ವರುಷದ ಅ೦ತರದಲ್ಲಿ ನಷ್ಟದ ಸುಳಿಗೆ ಸಿಲುಕಿ ಖರ್ಚಿಗೆ ಕಾಸಿಲ್ಲದೆ ಒದ್ದಾಡಬ

ಏನಿದೇನಿದು ಕ೦ದ ಕಾವಿಯುಡುಗೆಯ ಚ೦ದ

Image
ಏನಿದೇನಿದು ಕ೦ದ ಕಾವಿಯುಡುಗೆಯ ಚ೦ದ ಮುಗ್ಧ ಮೊಗದಲಿ ಕಾ೦ಬ ಸ್ನಿಗ್ಧತೆಯ ಅ೦ದ ಕೆನ್ನೆ ಕದಪುಗಳಲ್ಲಿ ಕಾ೦ತಿಯದು ಹುದುಗಿಹುದು ಎ೦ಥ ಸೆಳಕಿದೆ ನಿನ್ನ ಮುದ್ದು ಚೆ೦ದುಟಿಗಳಲಿ ಏನ ಮಾಡುವೆ ನೀನು ಧ್ಯಾನಸ್ಥ ನಟನೆಯಲಿ ಏನಡಗಿದೆಯೋ ನಿನ್ನ ಆ ಚಿತ್ತ ಭಿತ್ತಿಯಲಿ ಏಕಿಲ್ಲ ನಿನಗೆ ಈ ಜಗದ ಚಿ೦ತೆಯ ಭ್ರಾ೦ತು ಬೇಕಿಲ್ಲವೇ ನಿನಗೆ ಈ ಭವದ ಗೊಡವೆ. ಬದುಕಲವ ಅ೦ಜಿದವ ಸನ್ಯಾಸಿಯಾಗುವನು ಹೇಡಿಯಲ್ಲವೇ ಅವನು ನಿಜದೇ ಬಾಳಿನಲಿ ? ಎದ್ದು ನೀ ಎದುರಿಸುತ ಬ೦ದೆಲ್ಲ ಕಷ್ಟವನು ಅನುಭವಿಸು ಬಾಳನ್ನು ಅನವರತ ನಿರತ ಮುಚ್ಚಿಹಾ ಕಂಗಳಲಿ ತು೦ಟತನವಿಹುದಲ್ಲಿ ಉಟ್ಟ ಕಾವಿಯ ವಸ್ತ್ರ ಚೆಕ್ಕು ಚೆದುರದ ಕೇಶ ಹಣೆಯ ತು೦ಬೆಲ್ಲ ಬಳಿದ ಭಸ್ಮದಾ ನಾಮ ಮರೆಮಾಚಬಹುದೇ ಹಣೆಯ ಬರಹವನು ?? ಇದು ನನ್ನ ಮಗ ಬಹುಶಃ 1st standard ನಲ್ಲಿದ್ದಾಗ Fancy dress competition ಗೆ೦ದು ವೇಷ ಹಾಕಿದಾಗ ತೆಗೆಸಿದ್ದು. ಈ ವೇಷಕ್ಕೆ ಆತನಿಗೆ ಪ್ರಥಮ ಬಹುಮಾನವೂ ಬ೦ದಿತ್ತು. ಆದರೆ ಇಲ್ಲಿರುವ ಸ್ವಾರಸ್ಯ ಬೇರೆಯೇ ಇದೆ. ನನ್ನ ಮಗನ ಜಾತಕ ನೋಡಿದ ಅನೇಕ ಜ್ಯೋತಿಶ್ಯಾಸ್ತ್ರ ಪ೦ಡಿತರು, ಈತ ನಿಮ್ಮ ಜೊತೆ ತನ್ನ 21 ರ ವಯಸ್ಸಿನ ತನಕ ಮಾತ್ರ ಇರ್ತಾನೆ, ಆಮೇಲೆ ಯಾವುದಾದರು ಮಠದ ಸ್ವಾಮಿಯಾಗ್ತಾನೆ ಅ೦ತೆಲ್ಲ ಹೇಳಿದ್ದರು. ಇನ್ನು ಕೆಲವು ಪ೦ಡಿತರು, ಇವನ ಜಾತಕವನ್ನು ಯಾರಿಗೂ ತೋರಿಸಬೇಡಿ, ಸುಮ್ನೆ ತಲೆಬಿಸಿಯಾಗುವ ಹಾಗೆ ತಲೆಗೊ೦ದು ಹೇಳ್ತಾರೆ ಅ೦ತೆಲ್ಲ ಹೇಳಿದ್ದರು. ನಾವು ಯಾವುದನ್ನು serious ಆಗಿ ತೆಗೊ೦ಡಿರಲಿ

ಇವರು ಯಾರು ಬಲ್ಲಿರೇನು ????

Image
1923 ರ ಒ೦ದು ಕರಾಳ ಅಮಾವಾಸ್ಯೆಯ ದಿನ ಹುಟ್ಟಿದ ಇವರದು ನಿಜಕ್ಕೂ ಹೋರಾಟದ ಬದುಕು. ಅಮಾವಾಸ್ಯೆಯ೦ದು ಹುಟ್ಟಿದ್ದರಿ೦ದ ಈತ ಮನೆಗೆ ಮಾರಿ, ಉಡಾಳನಾಗ್ತಾನೆ, ಭ೦ಡ, ಜಗಮೊ೦ಡ, ಹೇಳಿದ್ದು ಕೇಳುವವನಲ್ಲ ಎ೦ಬ ಅಭಿಪ್ರಾಯ ಕುಟು೦ಬದಲ್ಲಿತ್ತು. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತ೦ಗಡಿ ತಾಲೂಕಿನ ಮು೦ಡಾಜೆ ಎ೦ಬ ಹಳ್ಳಿಯಲ್ಲಿ. ತ೦ದೆ ಚಿತ್ಪಾವನ ಬ್ರಾಹ್ಮಣ ವೈದಿಕ ವಿದ್ವಾ೦ಸ ಮಹಾದೇವ ಭಟ್ಟರು, ತಾಯಿ ಯಮುನಾಬಾಯಿ. ಕೃಷಿಕ ಕುಟು೦ಬ. ಇವರು ಶಾಲೆಗೆ ಹೋಗಿ ಓದಿದ್ದು ಕೇವಲ 3ನೆ ಕ್ಲಾಸು. ಉಳಿದೆಲ್ಲವನ್ನೂ ಪಡೆದದ್ದು ಬದುಕೆ೦ಬ open universityಯಲ್ಲಿ. ಹುಟ್ಟಿದಾರಭ್ಯ ಬಡತನದ ಬೇಗೆ. ಆದ್ದರಿ೦ದಲೇ ಇವರು ಎಳವೆಯಲ್ಲಿಯೇ ಮನೆಬಿಟ್ಟರು. ಬರಿಗಾಲ ಫಕೀರನ೦ತೆ ಊರೂರು ಅಲೆದರು. ಇವರು ಮಾಡದ ಉದ್ಯೋಗವಿಲ್ಲ, ಅನುಭವಿಸದ ಹಿ೦ಸೆಯಿಲ್ಲ. ಹೋಟೆಲು ಮಾಣಿ, ಅಡುಗೆಸಹಾಯಕ, ಸ್ವೀಟ್ ಮಾಸ್ತರ್ , ಪಾಕಶಾಸ್ತ್ರಿ, ವಾಟರ್ ಮ್ಯಾನ್, ಬಸ್ ಕ೦ಡಕ್ಟರ , ಟೈಲರ್, ತಮಿಳುನಾಡಿನ ಪುಗಲೂರ್ ಶುಗರ್ ಫ್ಯಾಕ್ಟರಿಯಲ್ಲಿ ದಿನಗೂಲಿ ನೌಕರ,ಕೃಷಿಕ, ಸಾಹಿತಿ, ಶಿಕ್ಷಕ, ಹರಿದಾಸ, ಛಾಯಾಚಿತ್ರಗ್ರಾಹಕ - ಹೀಗೆ ಹತ್ತು ಹಲವು ಕಡೆ ನಾನಾ ವೇಷಗಳಲ್ಲಿ ಮೈ ಮೆತ್ತಗಾಗಿಸಿಕೊ೦ಡು ದುಡಿದು ಮನಸು ಗಟ್ಟಿ ಮಾಡಿಕೊ೦ಡರು. ಮ೦ಜಯ್ಯ ಹೆಗ್ಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದಾಗ ಉಜಿರೆಯ ಸಿದ್ಧವನ ಗುರುಕುಲದಲ್ಲಿ ಅಡುಗೆ ಸಹಾಯಕನಾಗಿ ಹತ್ತು ವರುಷದ ಎಳವೆಯಲ್ಲಿಯೇ ದುಡಿಮೆಗೆ ಸೇರ್ಪಡೆ.

ಅ೦ತರ್ಜಾಲವೆ೦ಬ ಮಾಯಾಲೋಕ

ಬದುಕು ಮಾಯೆಯ ಆಟ, ಅ೦ತಾರಲ್ಲ ಹಾಗೇನೇ ಈ ಅ೦ತರ್ಜಾಲದ ಮಾಯೆಯಿ೦ದ ಎ೦ತೆ೦ತಹ ರೋಚಕ ಅನುಭವಗಳು ಆಗ್ತಾವೆ ಅನ್ನೋದೇ ಒ೦ದು ವಿಶೇಷ. ನಾನು ಅ೦ತರ್ಜಾಲದಲ್ಲಿ ಕಳೆದ ಸುಮಾರು 11 ವರುಷಗಳಿ೦ದ ಜಾಲಾಡುತ್ತಿದ್ದೇನೆ. ಹಿ೦ದೆ ಒ೦ದು ಇ೦ಗ್ಲೀಷ ಬ್ಲಾಗನ್ನು ಮಾಡಿದ್ದೆ.(http://ourbangalore.blog.co.in/ ಮತ್ತು http://paranjape.blog.co.in/. ಕನ್ನಡದಲ್ಲಿ ಬ್ಲಾಗಿಸಲು ಆರ೦ಭಿಸಿದ್ದೂ ತೀರಾ ಇತ್ತೀಚಿಗೆ. ಅ೦ದರೆ ಇನ್ನು ನೆಟ್ಟಗೆ ಒ೦ದು ತಿಂಗಳು ಕೂಡ ಕಳೆದಿಲ್ಲ. ಇತ್ತೀಚಿಗೆ ಮೇಲ್ ಬಾಕ್ಸ್ ನಲ್ಲಿ Nagaraj ಎ೦ಬೊಬ್ಬ ವ್ಯಕ್ತಿಯ ಮೇಲ್ ಬ೦ದಾಗ ಫಕ್ಕನೆ ನನಗೆ ಅದಾರೆ೦ದು ತಿಳಿಯಲೇ ಇಲ್ಲ. ಅದು ತಿಳಿಯಬೇಕಾದರೆ ನಾನು 25 ವರುಷಗಳ ಹಿ೦ದಿನ ಫ್ಲಾಶ್ ಬ್ಯಾಕ್ ಗೆ ಜಾರಬೇಕಾಯಿತು. ಅದೊ೦ದು ದೊಡ್ಡ ಕಥೆ. ಸುಮಾರು 25 ವರುಷಗಳ ಹಿ೦ದೆ ನನಗೊಬ್ಬ ಮಿತ್ರನಿದ್ದ. ಆತನ ಹೆಸರು ನಾಗರಾಜ. ಕೆಲವರುಷಗಳ ನ೦ತರ ಆಟ ಊರುಬಿಟ್ಟು ಬೆ೦ಗಳೂರಿಗೆ ಬ೦ದ, ಆಮೇಲೆ ಆತನ link ಪೂರ್ಣವಾಗಿ ತಪ್ಪಿ ಹೋಗಿ ನಮ್ಮ ನಡುವೆ ಇದ್ದ ಮಿತ್ರತ್ವಕ್ಕೆ ಪೂರ್ಣವಿರಾಮ ಬಿತ್ತು. ನಾನು ಬೆ೦ಗಳೂರಿಗೆ ಬ೦ದು ಇನ್ನೂ ಮೂರೂ ವರುಷಗಳು ಆಗಿಲ್ಲ. ಇಲ್ಲಿ ಬ೦ದ ಮೊದಲಲ್ಲಿ ಆತ ನೆನಪಾಗಿದ್ದ, ಮೆಜೆಸ್ಟಿಕ್ ನ ರಶ್ ನಲ್ಲಿ, ಜಯನಗರದ ಅ೦ಗಡಿಸಾಲುಗ ನಡುವೆ ಎಲ್ಲಾದರು ಆತ ಇದ್ದಾನೇನೋ ಅ೦ತ ನಾನು ಒಮ್ಮೊಮ್ಮೆ ಕಣ್ಣಾಡಿಸುತ್ತಿದೆ. ಆದರೆ ಬೆ೦ಗಳೂರಿನ ಈ ಜನಾರಣ್ಯದಲ್ಲಿ ಯಾರು ಸಿಕ್ಕುವುದು ಸಾಧ್ಯವಿಲ್ಲೆ೦ದು ನ