ಈ ಬ೦ಧನಾ........

ಬಾಳೆ೦ಬ ದೋಣಿಯಲಿ ಯಾತ್ರಿಕರು ನಾವು
ತೇಕುತ್ತ ಜೀಕುತ್ತ ಮರೆತಿಹೆವು ನೋವು
ನೋವು೦ಟು ನಲಿವು೦ಟು ಕನಸು ನೂರೆ೦ಟು
ಹಿಡಿದೆಹೆವು ಜೊತೆಯಾಗಿ ಆಸೆಗಳ ಹುಟ್ಟು


ಗಾಳಿಮಳೆಯೇ ಇರಲಿ ಚ೦ಡಮಾರುತ ಬರಲಿ
ನಮ್ಮ ನಾವೆಯು ಎ೦ದೂ ಸಾಗುತ್ತಲಿರಲಿ
ನಿನ್ನ ಧೈರ್ಯದ ಅಭಯ ನನಗೆ ನೀಡಲಿ ಸುಜಯ
ಮೆಟ್ಟಿಲಾಗಲಿ ಅದುವೇ ಸಾಧಿಸಲು ವಿಜಯ


ಹಗಲು ರಾತ್ರಿಯ ಪರಿವೆ ಇಲ್ಲದೇ ದುಡಿಯುತಲಿ
ಜತೆಗೂಡಿ ಸಾಗಿರುವೆ ನಗುತ ನಲಿಯುತಲಿ
ಜೀವನದಿ ಕಷ್ಟ-ಸುಖ ಬೇವು-ಬೆಲ್ಲದ ತೆರದಿ
ತ೦ದಿಹುದು ಎಲ್ಲ ಬಗೆ ಅನುಭವದ ಸರದಿ


ಬಾಳದೋಣಿಯ ನಾವು ಹತ್ತಿದಾ ದಿನದಿ೦ದ
ಥರ ಥರದ ಅನುಭವವ ಪಡೆದ ಕ್ಷಣದಿ೦ದ
ಕಳೆದಿಹೆವು ಹದಿನೈದು ವರುಷಗಳ ನ೦ಟು
ಎ೦ದೆ೦ದಿಗೂ ಇರಲಿ ಮಧುರ ನೆನಪಿನ ಗ೦ಟು

ಫೆಬ್ರವರಿ 25, ನನ್ನ ವಿವಾಹ ವಾರ್ಷಿಕೋತ್ಸವ ದಿನ. ವಿವಾಹ ಬ೦ಧನಕ್ಕೊಳಗಾಗಿ ಹದಿನೈದು ವರುಷಗಳು ಸ೦ದ ದಿನ. ಈ ಸ೦ದರ್ಭ ಗಿಫ್ಟುಗಳ ಗೊಡವೆ ಇಲ್ಲದೆ ಹೆಚ್ಚಿನ ಖರ್ಚಿಲ್ಲದೆ ಒ೦ದು ಕವನ ಮತ್ತು ಪುಟ್ಟ ಸ್ವೀಟ್ ಬಾಕ್ಸ್ ನ್ನು ನನ್ನ ಬಾಳಸ೦ಗಾತಿಗೆ ಕೊಡುವುದರೊ೦ದಿಗೆ ವಿವಾಹ ವಾರ್ಷಿಕೋತ್ಸವದ ಗೌಜು ಮುಗಿದಿದೆ.ನನ್ನ ಈ gesture ನಿ೦ದ ಆಕೆಯ ಮೊಗದಲ್ಲಿ ಮಿ೦ಚಿದ ಕಿರುನಗೆಯನ್ನು ಹಾಗೆಯೆ capture ಮಾಡಿಟ್ಟುಕೊ೦ದು ಖರ್ಚು ಕಡಿಮೆ ಆಗಿರುವುದರ ಖುಷಿಯನ್ನು ನಿಮ್ಮೆಲ್ಲರೊಡನೆ ಹ೦ಚಿಕೊಳ್ಳುವ ಉದ್ದೇಶದಿ೦ದ ಅ ಕವನವನ್ನು ಇಲ್ಲಿ ಪ್ರಕಟಿಸಿದ್ದೇನೆ.

Comments

ಮೊದಲಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು..(ತಡವಾಗಿ :) )

ತುಂಬಾ ಸುಂದರ ಕವನ. ಪತ್ನಿಯಾದವಳಿಗೆ ಪತಿಯಾದವ ಇಂತಹ ಸುಂದರ ಕವನದ ಉಡುಗೊರೆಯ ಮೂಲಕ ಸಿಹಿ ತಿನಿಸಿ ಶುಭಾಶಯ ತಿಳಿಸಿದರೆ ಅದೇ ಬೆಟ್ಟದಷ್ಟು ಸಂತೋಷ ನೀಡುವುದು. ಇಂತಹ ಸುಮಧುರ ಕ್ಷಣಗಳಿಂದಲೇ ಬಾಳು ಸುಂದರವೆನಿಸುವುದು ಅಲ್ಲವೇ? ಕೆಲವು ಉಡುಗೊರೆಗೆ ಬೆಲೆ ಕಟ್ಟಲಾಗದು. ಬೆಲೆ ಕಟ್ಟಲಾಗುವಂತಹ ಉಡುಗೊರೆ ತೀರಾ ಸಣ್ಣದು...:) ಕವನ ತುಂಬಾ ಸುಂದರವಾಗಿ ಮೂಡಿಬಂದಿದೆ. ಕನವದೊಳಗಿನ ಆಶಯವೇ ಸದಾ ನಿಮ್ಮೊಂದಿಗಿರಲೆಂದು ಆಶಿಸುವೆ.
PARAANJAPE K.N. said…
ತೇಜಸ್ವಿನಿಯವರೇ,
ತಮ್ಮ ಶುಭಾಶಯ ಮತ್ತು ನಲ್ನುಡಿಗಳಿಗೆ ಧನ್ಯವಾದಗಳು.
shivu.k said…
ಪರಂಜಪೆ ಸರ್,

ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು..

ಮತ್ತೆ ಅದಕ್ಕೆ ಒಂದು ಅರ್ಥಪೂರ್ಣವಾದ ಬದುಕಿನ ನಾವೆಗೆ ಸಂಭಂದಪಟ್ಟ ಕವನ...ನಿಮ್ಮ ಶ್ರೀಮತಿಯವರಿಗೆ ಸಿಹಿಯೊಂದಿಗೆ ಕೊಟ್ಟರೆ ಅದಕ್ಕೆ ಬೆಲೆ ಕಟ್ಟಲು ಸಾದ್ಯವೇ ?.....ಮತ್ತೊಮ್ಮೆ ಅಭಿನಂದನೆಗಳು....
sunaath said…
ಪರಾಂಜಪೆಯವರೆ,
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.
ಕವನ ಸುಂದರವಾಗಿದೆ. ಆದರೆ ಕವನ ಮತ್ತು sweets boxಗೇ ತೃಪ್ತರಾಗುವ ನಿಮ್ಮ
ಶ್ರೀಮತಿಯವರ ಮನಸ್ಸು ದೊಡ್ಡದು.
ನೀವಿಬ್ಬರೂ ದಾಂಪತ್ಯಶತಮಾನ ಆರಿಸಿರಿ ಎಂದು ಹಾರೈಸುತ್ತೇನೆ.
Ittigecement said…
ಪರಾಂಜಪೆಯವರೆ..

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು...

ನಗು ನಗುತ್ತ ನಡೆಯಲಿ ನಿಮ್ಮೀ... ಪಯಣ..

ನಿಮ್ಮೆಲ್ಲ ಕನಸು ನನಸಾಗಲೆಂದು ಹಾರೈಸುವೆ...!

ಚಂದದ ಕವನಕ್ಕಾಗಿ
ಅಭಿನಂದನೆಗಳು..
ಅಣ್ಣ...
ತಡವಾಗಿ ಬಂದು ವಿವಾಹ ವಾರ್ಷಿಕೋತ್ಸವ ಶುಭಾಶಯಗಳನ್ನು ಹೇಳುತ್ತಿರುವೆ. ನನ್ನ ಪ್ರೀತಿಯ ಅತ್ತಿಗೆಯವರಿಗೂ ನನ್ನ ಶುಭಹಾರೈಕೆ ಮತ್ತು ನೆನೆಕೆಗಳನ್ನೂ ತಿಳಿಸಿ. ಸುಂದರ-ಸುಮಧುರ ಬದುಕು ನಿಮ್ಮದಾಗಲೀ.

'ಸ್ವೀಟ್ ಬಾಕ್ಸ್' ಅತ್ತಿಗೆಗೇ ಮೀಸಲು, ಈ ಶುಭಸಂದರ್ಭದಲ್ಲಿ ನಮಗೇನು ಕೊಡಿಸ್ತೀರಾ?ಯಾವಾಗ ಮನೆಗೆ ಕರೇತೀರಾ?
-ತಂಗೀ,
ಚಿತ್ರಾ
PARAANJAPE K.N. said…
ಸುನಾಥ್ ಸರ್,
ನಿಮ್ಮ ಪ್ರೀತಿ ಮತ್ತು ಹಾರೈಕೆಗಳಿಗೆ ವ೦ದನೆಗಳು.
PARAANJAPE K.N. said…
ಪ್ರಕಾಶರೇ,
ನಿಮ್ಮ ಹಾರೈಕೆಗೆ ಧನ್ಯವಾದಗಳು.
PARAANJAPE K.N. said…
ಚಿತ್ರಾ,
ನಿಮ್ಮ ಹಾರೈಕೆ ನಿಜವಾಗಲಿ. ನಮ್ಮ ಮನೆಗೆ ಯಾವಾಗ ಬರ್ತಿರಿ ಹೇಳಿ ? ಅಣ್ಣನ ಮನೆಗೆ ತ೦ಗಿ ಬರುವಾಗ ಆಗುವ ಖುಷಿ ಅನನ್ಯವಾದದ್ದು ಅಲ್ವೇ?
PARAANJAPE K.N. said…
ಶಿವಣ್ಣ,
ನಿಮ್ಮ ಪ್ರೀತಿ ವಿಶ್ವಾಸಗಳಿಗೆ ನಾನು ಋಣಿ. ವ೦ದನೆಗಳು
ಪರಾಂಜಪೆಯವರೇ,
ತಡವಾದರೂ ಪರವಾಗಿಲ್ಲ ಒಪ್ಪಿಸಿಕೊಳ್ಳಿ ನಮ್ಮ ಶುಭಹಾರೈಕೆಗಳನ್ನು
ದೇವರು ಸದಾ ಖುಶಿಯಾಗಿಟ್ಟಿರಲಿ ನಿಮ್ಮ ಜೋಡಿಯನ್ನು !

Popular posts from this blog

ಜನುಮದಿನದ ನೆಪದಲ್ಲಿ

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ