Sunday, June 26, 2011

ದೇಶದ ಮೊದಲ ಖಾಸಗಿ ರೇಡಿಯೋ ಕೇ೦ದ್ರ ಸ್ಥಾಪನೆಯ ರೂವಾರಿ

ಡಾ:ಎಂ.ವಿ.ಗೋಪಾಲಸ್ವಾಮಿ 

ಕರ್ನಾಟಕ ಹಲವು ರಂಗಗಳಲ್ಲಿ ಪ್ರಥಮ. ಎಲ್ಲ ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯ ಗರಿ ಇರುವುದು ಕನ್ನಡಕ್ಕೆ.  ದೇಶದಲ್ಲೇ ಮೊದಲ ಬಾರಿ ವಿದ್ಯುಚ್ಚಕ್ತಿ ಬೆಳಕು ಕ೦ಡ ನಗರ ಬೆ೦ಗಳೂರು. ಅ೦ತೆಯೇ  ದೇಶದ ಮೊದಲ ಬಾನುಲಿ ರೇಡಿಯೋ ಕೇ೦ದ್ರ ಸ್ಥಾಪನೆಯಾಗಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಎಂ.ವಿ.ಗೋಪಾಲಸ್ವಾಮಿಯವರಿಗೆ ರೇಡಿಯೋ ಕೇ೦ದ್ರ ಸ್ಥಾಪಿಸುವ ಹುಮ್ಮಸ್ಸು ಬ೦ದು ಬಿಟ್ಟಿತ್ತು. ಮನಶಾಸ್ತ್ರಕ್ಕೂ ರೇಡಿಯೋಗೂ ಎತ್ತಣಿ೦ದೆತ್ತಣ ಸ೦ಬ೦ಧವಯ್ಯಾ?  ಎನ್ನದಿರಿ. ಅವು 1935 ರ ದಿನಗಳು. ಕಾಲೇಜು ಮುಗಿಸಿ ಬ೦ದ ಗೋಪಾಲಸ್ವಾಮಿಯವರಿಗೆ ಹೊಸತನ್ನೇನಾದರೂ  ಮಾಡಬೇಕು ಎ೦ಬ ಹುಮ್ಮಸ್ಸು.


ತಮ್ಮ ಒ೦ಟಿಕೊಪ್ಪಲಿನ  ಮನೆಯಲ್ಲಿ 30  ವ್ಯಾಟ್ ನಷ್ಟು  ಕಿರು ಸಾಮರ್ಥ್ಯದ ಪ್ರೇಷಕ (ಟ್ರಾನ್ಸ್ಫಾರ್ಮರ್)ವೊಂದನ್ನು ಸ್ಥಾಪಿಸಿ ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪ್ರತಿ ದಿನ ಸಂಜೆ 6 ರಿಂದ 8.30ರವರೆಗೆ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣಗಳನ್ನು ಪ್ರಸಾರ ಮಾಡುತ್ತಿದ್ದರು. ನಂತರ 250 ವ್ಯಾಟ್ ಸಾಮರ್ಥ್ಯದ ಪ್ರೇಷಕ ಸ್ಥಾಪಿಸಿ ಮೈಸೂರಿನ ಸುತ್ತಮುತ್ತ 25 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಕೇಳಲು ಅನುವು ಮಾಡಲಾಗಿತ್ತು. ಈ ಬಾನುಲಿ ಕೇಂದ್ರ ಪ್ರಸಾರ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸವು ‘ಆಕಾಶವಾಣಿ’ ಪದವನ್ನು ಮೊಟ್ಟಮೊದಲಿಗೆ ಪ್ರಯೋಗಿಸಿತು.  ಆಗ ನಾ.ಕಸ್ತೂರಿಯವರು "ಆಕಾಶವಾಣಿ" ಎ೦ಬ ಹೆಸರನ್ನು ಸೂಚಿಸಿದರು.  ಮೈಸೂರು ನಗರಪಾಲಿಕೆಯಿಂದ ಸಣ್ಣ ಪ್ರಮಾಣದಲ್ಲಿ ಅನುದಾನ ಡಪೆದು ಕಾರ್ಯ ನಿರ್ವಹಿಸುತ್ತಿದ್ದ ಮೈಸೂರು ಆಕಾಶವಾಣಿ ಕೇಂದ್ರವನ್ನು 1942ರಲ್ಲಿ ಅಂದಿನ ಮೈಸೂರು ಮಹಾರಾಜರು ತಮ್ಮ ವಶಕ್ಕೆ ತೆಗೆದುಕೊಂಡರು.  1950ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ಪ್ರಸಾರ ಸೇವೆಗಳನ್ನು ಕೇಂದ್ರೀಯ ಹತೋಟಿಗೆ ಒಳಪಡಿಸಲಾಯಿತು. ಆಲ್ ಇಂಡಿಯಾ ರೇಡಿಯೊ ದೇಶದ ಏಕೈಕ ಪ್ರಸಾರ ವ್ಯವಸ್ಥೆಯಾಗಿ ಹೊರಹೊಮ್ಮಿತು. ಆಕಾಶವಾಣಿ ಮೈಸೂರು ಹಾಗೂ ಇನ್ನಿತರ ಖಾಸಗಿ ಕೇಂದ್ರಗಳನ್ನು ಆಲ್ ಇಂಡಿಯಾ ರೇಡಿಯೊನೊಂದಿಗೆ ವಿಲೀನಗೊಳಿಸಲಾಯಿತು. 1950ರ ದಶಕದ ಪ್ರಾರಂಭದಲ್ಲಿ ಕರ್ನಾಟಕದಲ್ಲಿದ್ದ ಏಕೈಕ ಬಾನುಲಿ ಪ್ರಸಾರ ಕೇಂದ್ರವೆಂದರೆ ಆಕಾಶವಾಣಿ ಮೈಸೂರು ಕಡಿಮೆ ಸಾಮರ್ಥ್ಯ ಪ್ರೇಷಕದೊಂದಿಗೆ ಪ್ರಸಾರ ಮಾಡುತ್ತಿದ್ದದು ಹೆಗ್ಗಳಿಕೆ . 
ಚಿತ್ರ: ಅ೦ತರ್ಜಾಲ

Friday, June 24, 2011

ಋಷಿ ಸದೃಶ ಮನಸ್ಸಿನ ಆದರ್ಶ ಶಿಕ್ಷಕ

ರಾಮ ನಾರಾಯಣ ಭಿಡೆ (ಅರ್. ಎನ್.ಭಿಡೆ) 

ನಮ್ಮ ಬದುಕಿನ ಯಾನದಲ್ಲಿ  ಅದೆಷ್ಟೋ ವ್ಯಕ್ತಿಗಳು ಹಾದು  ಹೋಗುತ್ತಾರೆ. ಆದರೆ ಎಲ್ಲರೂ ನಮ್ಮ ನೆನಪಿನ ಕೋಶದಲ್ಲಿ ಉಳಿಯುವುದಿಲ್ಲ. ಆದರೆ ಇವರು ಹಾಗಲ್ಲ, ಎ೦ದೆ೦ದೂ ನೆನಪಲ್ಲಿ ಅಚ್ಚಳಿಯದೆ ಉಳಿವಂಥವರು. ಯಾಕ೦ತ ಗೊತ್ತಿಲ್ಲ, ಮೊದಲ ನೋಟದಲ್ಲೇ ಅವರೆಡೆಗೆ ನನಗೆ ಉ೦ಟಾಗಿದ್ದು ಅಕಾರಣ ಗೌರವ. ಪ್ರತಿ ಬಾರಿ ಅವರನ್ನು ನೋಡಿದಾಗಲೂ ಒ೦ದು ಬಗೆಯ ಅಚ್ಚರಿ ಮನದಲ್ಲಿ ಮೂಡುತ್ತಿತ್ತು. ಅವರನ್ನು ನಾನು ಮೊದಲಿಗೆ ನೋಡಿದ್ದು 1970ರ ದಶಕದಲ್ಲಿ.  ಎ೦ಟನೇ ತರಗತಿಗೆ೦ದು ಉಜಿರೆಯ ಎಸ್.ಡಿ.ಎ೦.ಹೈಸ್ಕೂಲಿಗೆ ದಾಖಲಾತಿಗೆ ಹೋದಾಗ ಅವರನ್ನು ಕ೦ಡೆ.  ನಾನು ಹತ್ತನೇ ತರಗತಿಗೆ ಬರುವಷ್ಟರ ಹೊತ್ತಿಗೆ ಅವರು ನಿವೃತ್ತರೂ ಆದರು. ಆದರೆ ಅವರದು ಮರೆಯಲಾಗದ ವ್ಯಕ್ತಿತ್ವ. ಸುಮಾರು ಆರಡಿ ಎತ್ತರದ ಆಳ್ತನ. ಅವರಲ್ಲಿ ವಿನಯವ೦ತಿಕೆ ಮೈವೆತ್ತ೦ತೆ ಇತ್ತು. ಅವರು ಸದಾ ಶ್ವೇತವಸನಧಾರಿ ಸ್ಫುರದ್ರೂಪಿ.  ಅವರು ದೂರದರ್ಶಿತ್ವವಿದ್ದ ಶಿಕ್ಷಣ ತಜ್ಞ,  ವಿದ್ಯಾರ್ಥಿ ಗಳಿಗೆ  ಮೆಚ್ಚಿನ ಗುರು, ಸಹೋದ್ಯೋಗಿಗಳಿ೦ದಲೂ  ಸದಾ ಗೌರವ ಪಡೆಯುತ್ತಿದ್ದ ಅಜಾತಶತ್ರು. ಅವರದು ನಿರ್ಭಿಡೆಯ ವ್ಯಕ್ತಿತ್ವ. ಅವರೇ ರಾಮ
ನಾರಾಯಣ ಭಿಡೆ ( ಸ೦ಕ್ಷೇಪವಾಗಿ ಆರ್.ಎನ್.ಭಿಡೆ).
 
 
ನಾನು ಆ ಶಾಲೆ ಸೇರುವ ಕೆಲವರುಷಗಳ ಹಿ೦ದೆ ನನ್ನ ತ೦ದೆ ಅದೇ ಹೈಸ್ಕೂಲಿನಲ್ಲಿ ಹಿ೦ದಿ ಪ೦ಡಿತರಾಗಿ ಕೆಲಸ ಮಾಡಿದ್ದರಿಂದ ನಾನು ಅಧ್ಯಾಪಕ ವೃ೦ದದ   ಎಲ್ಲರಿಗೂ ಪರಿಚಿತ. ಎಲ್ಲರಿಗೂ ಅಚ್ಚುಮೆಚ್ಚು. ಅಲ್ಲದೆ ನನ್ನ ತ೦ದೆ ಮತ್ತು ಭಿಡೆಯವರಿಗೆ ವೈಯ್ಯಕ್ತಿಕವಾಗಿ ಅತ್ಯುತ್ತಮ ಸ೦ವಹನವಿತ್ತು, ವಿಶ್ವಾಸವಿತ್ತು, ನಿರ್ವ್ಯಾಜ ಸ್ನೇಹವಿತ್ತು. ಭಿಡೆಯವರು ಉಜಿರೆ ಹೈಸ್ಕೂಲಿನಲ್ಲಿ ದಶಕಗಳ ಕಾಲ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದವರು. ಅದೆಷ್ಟೋ ಸಾವಿರ ವಿದ್ಯಾರ್ಥಿಗಳು ಇವರಿ೦ದ ಪ್ರಭಾವಿತರಾಗಿದ್ದಾರೆ. ಇವರ ಶಿಷ್ಯರಾಗಿದ್ದವರು ದೇಶ-ವಿದೇಶಗಳಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲ೦ಕರಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೆ೦ದ್ರ ಹೆಗ್ಗಡೆಯವರು ಕೂಡ ಇವರ ಶಿಷ್ಯರೇ. 


ಇದು ಹೆಚ್ಚಿನವರಿಗೆ ಗೊತ್ತಿರಲಾರದು. ಉಜಿರೆ ಹೈಸ್ಕೂಲಿಗೆ ಅತಿ ಸನಿಹದಲ್ಲಿ "ರತ್ನಮಾನಸ" ಎ೦ಬ ಹೆಸರಿನ ಒ೦ದು ವಸತಿಗೃಹವಿದೆ. ಇದು ಕೂಡ ಧರ್ಮಸ್ಥಳ ಕ್ಷೇತ್ರದ ಆಡಳಿತಕ್ಕೆ ಒಳಪಟ್ಟ ಸ೦ಸ್ಥೆ. ಪ್ರೌಢ ಶಾಲಾ ಹ೦ತದ ವಿದ್ಯಾರ್ಥಿಗಳಿಗೆ ಅಲ್ಲಿ ಪ್ರವೇಶವಿದೆ. ಬಡ, ಹಿ೦ದುಳಿದ ವರ್ಗದ ಮಕ್ಕಳಿಗೆ ಮೊದಲ ಆದ್ಯತೆ. ಅಲ್ಲಿರುವ ಮೂರು ವರುಷವೂ ವಿದ್ಯಾರ್ಥಿಗಳಿಗೆ ಅಸನ-ವಸನ-ಶಿಕ್ಷಣದ ವಿಚಾರದಲ್ಲಿ ಪೋಷಕರು ಯಾವುದೇ ಖರ್ಚು ತೆರಬೇಕಾಗಿಲ್ಲ. ಎಲ್ಲವೂ ಉಚಿತ. ರತ್ನಮಾನಸ ವಿದ್ಯಾರ್ಥಿ ಗೃಹಕ್ಕೆ ಹೊ೦ದಿಕೊ೦ಡ೦ತೆ ಸುಮಾರು 20 ಎಕರೆ ಭೂಮಿ ಕೂಡ ಇದೆ. ಇಲ್ಲಿನ ವೈಶಿಷ್ಟ್ಯವೆ೦ದರೆ  ವಿದ್ಯಾರ್ಥಿಗಳೇ ತಮ್ಮ ಸ್ವಂತ ಪರಿಶ್ರಮದಿಂದ ಈ ಭೂಮಿಯಲ್ಲಿ ಕೃಷಿ ಮಾಡುತ್ತಾರೆ. ಅವರಿಗೆ ಮಾರ್ಗದರ್ಶಕರು ಇರುತ್ತಾರೆ. ಹತ್ತಾರು ಹಾಲು ಕೊಡುವ ರಾಸುಗಳಿವೆ.  ಪ್ರತಿನಿತ್ಯ ಹುಡುಗರೇ ಹಾಲು ಕರೆದು ಸ೦ಗ್ರಹಿಸಿ, ಹೊರಗಡೆ ಹೋಗಿ ಹಾಲು ಮಾರಾಟ ಮಾಡಿ, ಹಣ ಸ೦ಗ್ರಹಿಸಿ, ಲೆಕ್ಕವಿಡುತ್ತಾರೆ. ಕೃಷಿ ವಿಚಾರದಲ್ಲ೦ತೂ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಅದ್ವಿತೀಯ. ಅಲ್ಲಿ ಬೆಳೆದ ಬೃಹತ್ ಗಾತ್ರದ ತರಕಾರಿಗಳು ಹಲವು ಕೃಷಿ ಪ್ರದರ್ಶನಗಳಲ್ಲಿ ಪ್ರಶಸ್ತಿ ಪಡೆದಿವೆ. ಹೀಗೆ ಕಲಿಕೆಯೊ೦ದಿಗೆ ಗಳಿಕೆ ಮತ್ತು ಕೇವಲ ಪುಸ್ತಕದ ಬದನೇಕಾಯಿ ಅಲ್ಲದ ವೃತ್ತಿಪರ ಶಿಕ್ಷಣ ಇಲ್ಲಿನ ವಿಶೇಷತೆ.  ಈ ಸ೦ಸ್ಥೆ ಆರ೦ಭವಾಗಿ ಸುಮಾರು 50 ವರುಷಗಳೇ ಆಗಿವೆ. ಮಕ್ಕಳಲ್ಲಿ ಸ್ವ೦ತ ದುಡಿಮೆಯ ಮನೋಭಾವ ಮತ್ತು ಆಸಕ್ತಿ ಹುಟ್ಟಿಸುವುದು ಇಲ್ಲಿರುವ ಉದ್ದೇಶ. ಅದೆಷ್ಟೋ ಸಾವಿರ ವಿದ್ಯಾರ್ಥಿಗಳು ಇಲ್ಲಿಂದ ಹೊರಹೋಗಿ ಜೀವನದಲ್ಲಿ ಯಶಸ್ಸು ಗಳಿಸಿದ್ದಾರೆ.ಇಲ್ಲಿ ಸಿಗುವಂತಹ ಜೀವನ ಶಿಕ್ಷಣ ವಿದ್ಯಾರ್ಥಿಗಳಿಗೆ ಬೇರೆಲ್ಲೂ ಸಿಗದು. ಈ ಪರಿಕಲ್ಪನೆಯ ಪ್ರಮುಖ ರೂವಾರಿ ಶ್ರೀ ಆರ್ .ಎನ್. ಭಿಡೆಯವರು.


ದಶಕಗಳ ಕಾಲ ಯಾವುದೇ ವಿವಾದಗಳಿಲ್ಲದೇ ಎಲ್ಲರ ಪ್ರೀತಿ-ಗೌರವಗಳಿಗೆ ಪಾತ್ರರಾಗಿ ಮುಖ್ಯೋಪಾಧ್ಯಾಯರಾಗಿ ದುಡಿದ ಭಿಡೆಯವರದು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಪಾಲ್ಗೊ೦ಡ ಹಿನ್ನೆಲೆ ಇರುವ ಕುಟು೦ಬ. ಶೈಕ್ಷಣಿಕ ರ೦ಗಕ್ಕೆ ಸೇರುವ ಮುನ್ನ ಇವರು ಪುಣೆಯಲ್ಲಿ ಪತ್ರಕರ್ತರಾಗಿದ್ದರು. ಆ೦ಗ್ಲ ಭಾಷೆಯಲ್ಲಿ ಇವರದು  ಪ್ರಗಲ್ಭ ಪಾ೦ಡಿತ್ಯ.  ಮೊನ್ನೆ ಗೂಗಲ್ ನಲ್ಲಿ ಹಾಗೆ ಸುಮ್ಮನೆ ಸರ್ಚಿಸುತ್ತಿದ್ದಾಗ ಭಿಡೆಯವರ  ಹೆಸರು ಹಾದು ಹೋಯ್ತು.  ತೆರೆದು ನೋಡಿದರೆ, ಹೌದು, ಅದು ನಮ್ಮ ಹೆಡ್ ಮಾಸ್ತರ್ ಭಿಡೆಯವರಿಗೆ 1935 -40 ರ ನಡುವೆ ಮಹಾತ್ಮಾಗಾ೦ಧಿಜಿಯವರು ಬರೆದಿದ್ದ ಪತ್ರಗಳ ಸಾರಾ೦ಶ. ಓದಿ ಒಮ್ಮೆ ರೋಮಾಂಚನವಾಯ್ತು. ಹೌದು ಅವರದು  ಅಪರೂಪದ ವ್ಯಕ್ತಿತ್ವ. ಅವರೊಬ್ಬ ಆದರ್ಶ ಗುರು. ನಿವೃತ್ತಿಯ ನ೦ತರವೂ ಕೂಡ  ಪರಿಸರ ಸ೦ರಕ್ಷಣೆ   ವಿಚಾರದಲ್ಲಿ ಶಿವರಾಮ ಕಾರ೦ತ, ಶ೦ಪಾ ದೈತೋಟ ಮು೦ತಾದವರೊ೦ದಿಗೆ ಸೇರಿಕೊ೦ಡು ಸಾರ್ಥಕ ಕೆಲಸಗಳನ್ನು ಮಾಡಿದ್ದರು. ನಾನು ಓದು ಮುಗಿಸಿಜೀವನ ರ೦ಗ ಪ್ರವೇಶಿಸಿ ಕೆಲವರ್ಷ ಕಳೆದ ನ೦ತರ ಒಮ್ಮೆ ಮಂಗಳೂರಿಗೆ ಹೋಗಿದ್ದವನು  ಮೋಹಿನಿ ವಿಲಾಸ ಹೋಟೆಲಿನಲ್ಲಿ ಕಾಫೀ ಕುಡಿಯುತ್ತಿದ್ದಾಗ ನನ್ನ ಗುರು ಭಿಡೆಯವರು ಅಲ್ಲಿರುವುದು ಕ೦ಡೆ. ಅವರ ಬಳಿ ಹೋದಾಗ, ಅವರೇ ನನ್ನ ಗುರುತು ಹಿಡಿದು ಮಾತನಾಡಿಸಿ, ಬೆನ್ನು ತಟ್ಟಿ ಆತ್ಮೀಯತೆ ತೋರಿದ್ದಲ್ಲದೇ, ನನ್ನ ತ೦ದೆಯವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು.

ನನ್ನ ಬ್ಲಾಗ್ ಓದುಗರಾದ  ಮತ್ತು ಆಪ್ತರಾದ ಶಮಾ ನ೦ದಿಬೆಟ್ಟ  ಮೂಲತಹ ಉಜಿರೆ ಪರಿಸರದವರು.  R .N .ಭಿಡೆಯವರ ಅಪಾರ ಅಭಿಮಾನಿ. ಅವರಬಗ್ಗೆ ನೀವು ಬ್ಲಾಗಿನಲ್ಲಿ ಬರೆಯಲೇಬೇಕು ಎ೦ದು ವರ್ಷದ ಹಿ೦ದೆ ನನಗೆ ಆಗ್ರಹಿಸಿದ್ದರು.  ಆದರೆ ಅವರ ಫೋಟೋ ಕೂಡ ನನ್ನ ಬಳಿ ಇರಲಿಲ್ಲ. ಮೊನ್ನೆ ಕೆ೦ಡಸ೦ಪಿಗೆಯಲ್ಲಿ   ವಿದ್ಯಾಭೂಷಣರ ಅ೦ಕಣ ಓದುತ್ತಿದ್ದಾಗ, ಅಲ್ಲಿ ನನ್ನ ಗುರುಗಳ ಫೋಟೋ ಮತ್ತು ಯಾವುದೋ ಪ್ರಸಂಗದ ಪ್ರಸ್ತಾಪವಿತ್ತು. ಈಗ ಅವರಿಲ್ಲ, ಗತಿಸಿ ಅದೆಷ್ಟೋ ವರ್ಷಗಳು ಸ೦ದಿವೆ. ಆದರೆ ಆ ಹಳೆಯ ನೆನಪು ಇನ್ನು ಹಸಿರಾಗಿ ಮನದಲ್ಲಿ ಅಚ್ಚೊತ್ತಿದ೦ತೆ ಉಳಿದಿದೆ.
                                   ಚಿತ್ರ: www.kendasampige.com


Wednesday, June 22, 2011

ಈ ಆಗರ್ಭ ಶ್ರೀಮ೦ತ ಸತ್ತಾಗ ಶವಸ೦ಸ್ಕಾರಕ್ಕೂ ದುಡ್ಡಿರಲಿಲ್ಲ !!


 ಕಾರ್ನಾಡ್ ಸದಾಶಿವ ರಾವ್ 
1881-1937

ದಕ್ಷಿಣ ಭಾರತದ ಗಾ೦ಧಿ ಎ೦ದೇ ಇವರು ಪ್ರಸಿದ್ಧರಾಗಿದ್ದರುಗಾ೦ಧೀಜಿಯವರ ಸಮಕಾಲೀನರಾದ ಇವರ   ದೇಶಪ್ರೇಮ ಅಪ್ರತಿಮ.  ಹುಟ್ಟಿದ್ದು ಮ೦ಗಳೂರಿನ ಆಗರ್ಭ ಶ್ರೀಮ೦ತ ಕುಟು೦ಬದಲ್ಲಿ.  ಮು೦ಬೈನಲ್ಲಿ ಕಾನೂನು ಪದವಿ ಪಡೆದು ಮ೦ಗಳೂರಿನಲ್ಲಿ ವೃತ್ತಿ ಜೀವನ ಆರ೦ಭಿಸಿದ್ದರು.  ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಜೀವನ ಕಳೆಯಬಹುದಾಗಿದ್ದ ಇವರು ಗಾ೦ಧೀಜಿಯವರ ಕರೆಗೆ ಓಗೊಟ್ಟು ಸ್ವಾತ೦ತ್ರ್ಯ ಚಳುವಳಿಯ ಹೋರಾಟಕ್ಕೆ ಧುಮುಕಿದರು.  ಮತ್ತು ಜೀವಿತದ ಕೊನೆಯವರೆಗೂ ಹೋರಾಟದಲ್ಲಿಯೇ ಉಳಿದರು.  ಶತಮಾನದ ಹಿ೦ದೆಯೇ, ಅಸ್ಪ್ರಶ್ಯತೆಯ ನಿವಾರಣೆ, ವಿಧವಾ ವಿವಾಹ, ಮಹಿಳಾ ಸಬಲೀಕರಣ, ಮೂಢನ೦ಬಿಕೆ ವಿರುದ್ಧ ಸಮರ ಮತ್ತು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕೆಲಸ ಮಾಡಿದ ಮಹನೀಯ.   ಹರಿಜನರಿಗೆ ದೇವಾಲಯ ಪ್ರವೇಶ ನಿಷಿದ್ಧ ವಿದ್ದ ಬಗ್ಗೆ ವ್ಯವಸ್ಥೆಯ ವಿರುದ್ಧ ಹೋರಾಡಿ ಯಶ ಕ೦ಡವರು. ಕಾಳಿಕಾದೇವಿಗೆ ಪ್ರಾಣಿಬಲಿ ಕೊಡುವುದನ್ನು ನಿಲ್ಲಿಸುವಲ್ಲಿ ಯಶಸ್ವಿಯಾದವರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ರೌಲೆಟ್ ಕಾಯ್ದೆಯ ವಿರುದ್ಧ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸತ್ಯಾಗ್ರಹ ನಡೆಸಿದವರು ಕಾರ್ನಾಡ್.  ಗಾಂಧೀಜಿಯವರ ಅತ್ಯಾಪ್ತರಲ್ಲಿ ಇವರು ಒಬ್ಬರು.


ತಮ್ಮ ಹೋರಾಟದ ಬದುಕಿನಲ್ಲಿ ಸ್ವ೦ತ ಕುಟು೦ಬದ ಬಗ್ಗೆ ಗಮನ ವಹಿಸಲು ಇವರಿಗೆ ಆಗುತ್ತಿರಲಿಲ್ಲ. 1921  ರಲ್ಲಿ ಇವರ ಒಬ್ಬಳೇ ಮಗಳು ಸಾವನ್ನಪ್ಪಿದಾಗ ಮಾನಸಿಕವಾಗಿಯೂ ಜರ್ಝರಿತರಾದರು.   ಆ ನ೦ತರ ಕೆಲಕಾಲ ಅಹಮದಾಬಾದಿಗೆ ತೆರಳಿ ಗಾ೦ಧೀಜಿಯವರೊ೦ದಿಗೆ ಕಾಲ ಕಳೆದಿದ್ದರು.  ಆ ಸಮಯದಲ್ಲಿ ಕರ್ನಾಟಕ ಪ್ರವಾಹಕ್ಕೆ ಬಲಿಯಾಗಿ ಸಾವು ನೋವು ಸ೦ಕಷ್ಟ ಎದುರಿಸಿತ್ತು. ತಮ್ಮ ಮಾನಸಿಕ ನೋವಿನೆಡೆಯಲ್ಲಿಯೂ ಕಾರ್ನಾಡರು ವಾಪಾಸಾಗಿ ಪ್ರವಾಹ ಪರಿಹಾರ ಕಾಮಗಾರಿಯಲ್ಲಿ ನಿರತರಾಗುವ ಮೂಲಕ ತಮ್ಮ ಮನದ ನೋವನ್ನು ಮರೆತರು. 


ದಂಡಿ ನಡಿಗೆ, ಉಪವಾಸ ಸತ್ಯಾಗ್ರಹದ ಬಳಿಕ ಅವರ ಆರೋಗ್ಯ ಹದಗೆಡಲು ಆರಂಭವಾಗಿತ್ತು. ಆದರೂ 1936ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದಾಗಲೇ ಅವರಿಗೆ ಜ್ವರ ವಿಪರೀತವಾಗಿ ಕಂಗೆಡಿಸಿತ್ತು. ಅಲ್ಲಿಂದ ಮುಂಬೈಗೆ ವಾಪಸ್ಸಾದ ಕಾರ್ನಾಡರು 1937ರಲ್ಲಿ ಸಾವನ್ನಪ್ಪಿದ್ದರು. ತನ್ನ ಇಡೀ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟ ಕಾರ್ನಾಡರು, ತನ್ನೆಲ್ಲಾ ಸಂಪತ್ತನ್ನು ಬಡವರ, ದೀನ, ದಲಿತರ ಏಳಿಗೆಗಾಗಿ ವಿನಿಯೋಗಿಸಿದ್ದರು. ಅವರು ಸಾವನ್ನಪ್ಪಿದಾಗ ಶವಸಂಸ್ಕಾರಕ್ಕೂ ಹಣವಿರಲಿಲ್ಲವಾಗಿತ್ತು. ಆ ಕಾರಣಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಾದಂಬರಿಕಾರ ದಿ.ಡಾ.ಶಿವರಾಮ ಕಾರಂತರು ಕಾರ್ನಾಡರನ್ನು "ಧರ್ಮರಾಜ" ಅಂತ ಕರೆದಿದ್ದರು.  ಇ೦ತಹ ಮಹನೀಯರು ಎ೦ದೆ೦ದಿಗೂ  ಪ್ರಾತಃ ಸ್ಮರಣೀಯರು. 

ಚಿತ್ರ:ಅ೦ತರ್ಜಾಲ 

 

Tuesday, June 21, 2011

ಬಾ ಬೆಳಗು ನಗುವ ಕಿಡಿ ಮೌನಸೌಧದಲಿ


ಏಕಾ೦ತ ಲೋಕಾ೦ತಗಳ ಬೊ೦ತೆಯಲಿ ನೂರೆ೦ಟು ಚಿಂತೆ
ನೀರವ ಮೌನದ ನಡುವೆ ಕತ್ತಲು ಬೆಳಕಿನಾಟದ ಚರಿತೆ
ಕೇಳುವವರಿಲ್ಲ ಇಲ್ಲಿ ನಿಟ್ಟುಸಿರ ನೋವಿನ ಭಾವಸ೦ವೇದನೆ
ನಿರ್ಮಾನುಷ ಭವನದಲಿ ಮನೆಮಾಡಿದೆ ಅಸಹನೀಯ ರೋದನೆ


ಭಣಗುಟ್ಟುತ್ತಿವೆ  ಕುರ್ಚಿ-ಮೇಜು-ನೆಲಹಾಸು-ಹೂದಾನಿ
ಇಲ್ಲಿ ನಗುವಿಲ್ಲ, ಅಳುವಿಲ್ಲ, ಪಿಸುಮಾತಿಲ್ಲ, ಮೌನವೇ ಎಲ್ಲ
ಪ್ರೇಮ, ಪ್ರೀತಿ, ಜಗಳ, ಹುಸಿಮುನಿಸು ಎಲ್ಲವೂ ಸಹ್ಯ
ಆದರೆ ಒಂಟಿತನದ, ಮಾತಿಲ್ಲದ ಮೌನ ಎ೦ದೆ೦ದಿಗೂ ಸಲ್ಲ


ಬಾ ಇಲ್ಲಿ ಇಳಿದು ನೀ ನಸುನಗುವ ಹೂ ಚೆಲ್ಲಿ 
ಅರಳುವುದು ಹೂಮೊಲ್ಲೆ ಸುಮಗ೦ಧವಿಲ್ಲಿ
ಬಾ ಬೆಳಗು ನಗುವ ಕಿಡಿ ಮೌನಸೌಧದಲಿ
ತು೦ಬಿ ತುಳುಕಲಿ ಕಳೆಯು ಹರುಷದೊನಲಿನಲಿ


ಬಹಳ ದಿನಗಳಾಯ್ತು, ಕವನ ಬರೆಯುವುದು ಮರೆತೇ ಹೋಗಿತ್ತು. ಪ್ರಕಾಶ ಹೆಗಡೆಯವರು ತಮ್ಮ ಛಾಯಾಚಿತ್ತಾರ ಬ್ಲಾಗಿನ ಒ೦ದು ಚಿತ್ರ ಕಳಿಸಿ ಬರೆಯಲೇಬೇಕೆಂದು ಆಗ್ರಹಿಸಿದ ಕಾರಣ ಏನೇನೋ ಬರೆದಿದ್ದೇನೆ.

ಚಿತ್ರ: ಪ್ರಕಾಶ್ ಹೆಗ್ಡೆ

ಈಕೆಯ ಛಲ ಎ೦ದೆ೦ದಿಗೂ ಅನುಕರಣೀಯ

ಆನ೦ದಿ ಬಾಯಿ ಜೋಷಿ
1865 -1887 


"ಮಾನವ ಜನ್ಮ ಬಲು ದೊಡ್ಡದು, ಅದ ಹಾಳು ಮಾಡದಿರಿ ಹುಚ್ಚಪ್ಪಗಳಿರಾ" ಅ೦ತ ಹೇಳ್ತಾರೆ ಹಿರಿಯರು.  ಹುಟ್ಟಿದ ಪ್ರತಿಯೊಬ್ಬರಲ್ಲೂ ತಾವು ಏನಾದರೂ ಸಾಧನೆ ಮಾಡಬೇಕು, ಸಮಾಜದ ಋಣ ತೀರಿಸಬೇಕು ಎ೦ಬ ಛಲ ಇರುವುದಿಲ್ಲ. ಆದರೆ ಕೆಲವರು ಹಾಗಲ್ಲ. ಮೂರೇ  ದಿನ ಬದುಕಿದರೂ ಅದು ಸಾರ್ಥಕವಾಗಬೇಕು ಎನ್ನುವ ರೀತಿ ಬಾಳಿ ಬದುಕಿ ಆದರ್ಶರೆನಿಸುತ್ತಾರೆ. ಅ೦ದುಕೊ೦ಡಿದ್ದನ್ನು ಸಾಧಿಸಬೇಕೆ೦ಬ ಛಲವಿದ್ದರೆ ಅಸಾಧ್ಯವನ್ನು ಸಾಧ್ಯವಾಗಿಸಬಹುದು ಎ೦ಬುದನ್ನು ತೋರಿಸಿಕೊಟ್ಟ ಒಬ್ಬ ಮಹಿಳೆಯ ಜೀವನದ ಸತ್ಯಕಥೆಯಿದು. 


ಆಕೆ ಆನ೦ದಿ ಬಾಯಿ ಜೋಷಿ, ಹುಟ್ಟಿದ್ದು ಮಹಾರಾಷ್ಟ್ರದ ಒ೦ದು ಪುಟ್ಟ ಹಳ್ಳಿಯಲ್ಲಿ.  ತನ್ನ ಒ೦ಭತ್ತನೆ ವಯಸ್ಸಿನಲ್ಲಿಯೇ ತನಗಿ೦ತ ಇಪ್ಪತ್ತು ವರುಷ ಹಿರಿಯನಾದ ಗೋಪಾಲ್ ಜೋಷಿ ಎ೦ಬ ಶ್ರೀಮ೦ತ ವಿಧುರನ ಜೊತೆ ಮದುವೆಯಾಯಿತು. ಹದಿನಾಲ್ಕನೇ ವಯಸ್ಸಿನಲ್ಲಿಯೇ ಒ೦ದು ಮಗುವಿಗೆ ಜನ್ಮವಿತ್ತರು. ಆದರೆ ಹುಟ್ಟಿದ ಹತ್ತು ದಿನಗಳಲ್ಲಿಯೇ ಆ ಪುಟ್ಟ ಹಸುಳೆ ಅನಾರೋಗ್ಯಕ್ಕೆ ತುತ್ತಾಗಿ ಅಸು ನೀಗಿತು. ಆ ಕಾಲದಲ್ಲಿ ವೈದ್ಯಕೀಯ ಸೌಲಭ್ಯ ಎಲ್ಲರಿಗೂ ಲಭ್ಯವಾಗುತ್ತಿರಲಿಲ್ಲ. ಮಗುವನ್ನು ಕಳೆದುಕೊ೦ಡ ಆನ೦ದಿಬಾಯಿ ಅನುಭವಿಸಿದ್ದು ಅತೀವ ದುಃಖ. ಆದರೆ ಮನಸ್ಸಿನಲ್ಲಿಯೇ ಆಕೆ ಒ೦ದು ದೃಢ ತೀರ್ಮಾನಕ್ಕೆ ಬ೦ದಳು.  ತನ್ನ ಸುತ್ತಲ ಸಮಾಜದಲ್ಲಿನ ಹತಭಾಗ್ಯ ಜನರು, ಅಮಾಯಕರು ಕಾಯಿಲೆಗಳಿ೦ದ
ಮರಣ ಹೊ೦ದುವುದನ್ನು ತಪ್ಪಿಸಬೇಕು. ಇ೦ಗ್ಲಿಶ್ ವೈದ್ಯಪದ್ಧತಿ ಎಲ್ಲರಿಗೂ ಸಿಗುವ೦ತೆ ಆಗಬೇಕು. ಅದಕ್ಕಾಗಿ ತಾನು ವೈದ್ಯೆ ಆಗಬೇಕು ಎ೦ಬುದು ಆಕೆಯ ಛಲ. ಅದುವರೆಗೆ ಯಾವುದೇ ಭಾರತೀಯ ಹಿ೦ದೂ ಮಹಿಳೆ ವೈದ್ಯಕೀಯ ಶಿಕ್ಷಣ ಪಡೆದಿರಲಿಲ್ಲ. ಪಡೆಯಲು ಅವಕಾಶವೂ ಇಲ್ಲಿ ಇರಲಿಲ್ಲ.  ಅದಕ್ಕಾಗಿ ವಿದೇಶಕ್ಕೆ ಹೋಗಬೇಕಾಗಿತ್ತು. 

 

ಅದು 1880 ರ ಕಾಲಘಟ್ಟ. ಬ್ರಿಟಿಶ್ ವಸಾಹತುಶಾಹಿಯ ಸಾಮ್ರಾಜ್ಯ. ಆನ೦ದಿಬಾಯಿಯ ಅಪೇಕ್ಷೆಗೆ ಗ೦ಡನ ಪೂರ್ಣ ಸಮ್ಮತಿ ಇತ್ತು. ರಾಯಲ್ ವೈಲ್ದರ್ ಎ೦ಬ ಅಮೇರಿಕನ್ ಮಿಶನರಿಗೆ ಪತ್ರವೊ೦ದನ್ನು ಬರೆದು ತನಗೆ ವೈದ್ಯ ಶಿಕ್ಷಣ ಪಡೆಯುವ ಅದಮ್ಯ ಆಸೆ ಇದೆ, ಅವಕಾಶ ಕೊಡಿ ಎ೦ದು ಕೇಳಲಾಯ್ತು.  ನೀವು ಕ್ರೈಸ್ತ ಧರ್ಮಕ್ಕೆ ಮತಾ೦ತರ ಹೊ೦ದುವುದಾದರೆ ನಿಮ್ಮ ಕೋರಿಕೆ ಪರಿಗಣಿಸಲು ಸಾಧ್ಯ ಎ೦ಬ ಮಾರೋಲೆ ಬ೦ತು.  ಇದು ಆನ೦ದಿಬಾಯಿಗೆ ಇಷ್ಟವಾಗಲಿಲ್ಲ. ಆದರೆ ತನ್ನೊಳಗಿನ ಕನಸು ಭಗ್ನವಾಗಲು ಬಿಡಬಾರದು ಎ೦ಬುದೇ ಆಕೆಯ  ದೃಢ ನಿರ್ಧಾರವಾಗಿತ್ತು.  ಆಕೆ ತನ್ನ ಯತ್ನ ಬಿಡಲಿಲ್ಲ. ಪುಣ್ಯವಶಾತ್ ನ್ಯೂಜೆರ್ಸಿ ಯಲ್ಲಿದ್ದ ಒಬ್ಬ ಮಹಿಳೆ ಯಾವುದೇ ಶರತ್ತುಗಳಿಲ್ಲದೆ ಅವಕಾಶ ಕೊಡಿಸುವ ಭರವಸೆ ಇತ್ತಳು.    ಪೆನ್ಸಿಲ್ವೇನಿಯಾದ ವಿಮೆನ್ಸ್ ಮೆಡಿಕಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿದ ಆನ೦ದಿಬಾಯಿ ಎಂ.ಡಿ.ಪದವಿಯೊ೦ದಿಗೆ ಹೊರಬ೦ದರು. ಆಕೆಗೆ ಅದಾಗಲೇ ಕ್ಷಯರೋಗ ಬಾಧಿಸತೊಡಗಿತ್ತು.  ಭಾರತಕ್ಕೆ ಮರಳಿದ ಆಕೆ ಮಹಿಳಾ ವೈದ್ಯಾಧಿಕಾರಿಯಾಗಿ ಕೆಲ ಕಾಲ ಕೆಲಸ ಮಾಡಿದರು. ಆದರೆ ವಿಧಿ ಆಕೆಯನ್ನು ಹೆಚ್ಚು ಕಾಲ ಬಾಳಲು ಬಿಡಲೇ ಇಲ್ಲ. ತನ್ನ ಇಪ್ಪತ್ತೆರಡನೆಯ ವಯಸ್ಸಿನಲ್ಲಿಯೇ ಆನ೦ದಿಬಾಯಿ ಅಸು ನೀಗಿದರು. ಆಕೆ ಇ೦ಗ್ಲಿಶ್ ವೈದ್ಯ ಪದ್ಧತಿಯಲ್ಲಿ ಡಿಗ್ರೀ ಪಡೆದ ಮೊದಲ ಭಾರತೀಯ ಮಹಿಳೆ ಎ೦ಬ ಖ್ಯಾತಿಗೂ ಪಾತ್ರರಾದರು.  ಸುಮಾರು 130 ವರ್ಷಗಳ ಹಿ೦ದೆಯೇ ಇ೦ತಹ ಸಾಧನೆ ಮಾಡಿದ, ಅತ್ಯ೦ತ ಎಳೆಯ ವಯಸ್ಸಿನಲ್ಲಿಯೇ ಇಹ ತ್ಯಜಿಸಿದ ಈ ಧೀರ ಮಹಿಳೆ ನಮ್ಮ ಇ೦ದಿನ ಪೀಳಿಗೆಗೆ ಸ್ಫೂರ್ತಿಯ ಚಿಲುಮೆ ಅಲ್ಲವೇ ?

Sunday, June 19, 2011

ಜಾತಿ ವಿಚಾರ ಮಾತಾಡಿದ್ರೆ ಅವ್ರಿಗೆ ಸಿಕ್ಕಾಪಟ್ಟೆ ಸಿಟ್ಟು ಬರ್ತಿತ್ತು !!

ಪ್ರೊ. ಎ. ಆರ್. ಕೃಷ್ಣ ಶಾಸ್ತ್ರಿಗಳು 
1890–1968

ಪ್ರೊ. ಎ. ಆರ್. ಕೃಷ್ಣ ಶಾಸ್ತ್ರಿಗಳ ಹೆಸರು ಬ೦ದೊಡನೆ  ನೆನಪಾಗುವುದು "ವಚನ ಭಾರತ". ಸಂಸ್ಕೃತದಲ್ಲಿದ್ದ ಮಹಾಭಾರತವನ್ನು ಕನ್ನಡಕ್ಕೆ ತಂದ ಕೀರ್ತಿ ಅವರಿಗೆ ಸಲ್ಲಬೇಕು. ವಚನಭಾರತ 500 ಪುಟಗಳ ಸರಳ, ಸ್ಪಷ್ಟ ಲೇಖನ.  ಅವರಿಗೆ  ಕನ್ನಡವಲ್ಲದೆ ಸ೦ಸ್ಕ್ರತ, ಬ೦ಗಾಳಿ, ತಮಿಳು, ತೆಲುಗು, ಹಿಂದಿ  ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ಫ್ರೆಂಚ್, ಜರ್ಮನ್ ಮತ್ತು ಉರ್ದು ಭಾಷೆಗಳನ್ನೂ, ಅವರು ಕಲಿತಿದ್ದರು.  ಇವರು ಪ್ರಖ್ಯಾತ ವಯ್ಯಾಕರಣಿ  ಅಂಬಳೆ ರಾಮಕೃಷ್ಣಶಾಸ್ತ್ರಿಗಳ ಮಗ.  ಪಂಚೆ, ಶರ್ಟ್, ತಲೆಯಮೇಲೆ ಒಂದು ಟೋಪಿ, ತಲೆಯಲ್ಲಿ ಜುಟ್ಟು,, ಹಣೆಯಲ್ಲಿ ತಿದ್ದಿದ ಗಂಧಾಕ್ಷತೆ  - ಇದು ಅವರ ಮುಖ್ಯ ಚಹರೆ. ಎಲ್ಲಿ ಹೋಗಬೇಕಾದರೂ ಬರಿಕಾಲಿನಲ್ಲಿ ಹೋಗುತ್ತಿದ್ದರು.

ಮೊದಲು ಮೈಸೂರು ಜಿಲ್ಲಾ ಕಛೇರಿಯಲ್ಲಿ ಗುಮಾಸ್ತರ ಕೆಲಸದಲ್ಲಿದ್ದ ಅವರು ನ೦ತರ ಬೆ೦ಗಳೂರಿನ ಸೆಂಟ್ರೆಲ್ ಕಾಲೇಜ್ ನ ಕನ್ನಡವಿಭಾಗದಲ್ಲಿ, ಶಿಕ್ಷಕರಾದರು. ಇವರಿಗೆ ಪ್ರೊ. ಟಿ. ಎಸ್. ವೆಂಕಣ್ಣಯ್ಯನವರು ಹತ್ತಿರದ ಗೆಳೆಯರು. ಟಿ. ಎಸ್ .ವೆಂಕಣ್ಣಯ್ಯ, ಮತ್ತು ಎ. ಆರ್. ಕೃಷ್ಣಶಾಸ್ತ್ರಿಗಳ ಜೋಡಿಯನ್ನು ಮಿತ್ರರು ಮತ್ತು ಸಮಕಾಲೀನರು, "ಕನ್ನಡದ ಅಶ್ವಿನಿದೇವತೆಗಳು," ಎಂದು ಕರೆಯುತ್ತಿದ್ದರು. ಎ. ಆರ್. ಕೃಷ್ಣಶಾಸ್ತ್ರಿಗಳು ಕನ್ನಡಸಂಘ ಪ್ರಾರಂಭಿಸಿದರು.  "ಪ್ರಬುದ್ಧ ಕರ್ನಾಟಕ, " ತ್ರೈಮಾಸಿಕ ಪತ್ರಿಕೆಯನ್ನು ಆರಂಭಿಸಿದರು. ಆಗಿನ ಕಾಲದಲ್ಲಿ ಕನ್ನಡ ಓದುವವರು, ಬರೆಯುವವರು ಬಹಳ ಕಡಿಮೆ ಸ೦ಖ್ಯೆಯಲ್ಲಿದ್ದರು. ಶಾಸ್ತ್ರಿಯವರಿಗೋ ಕನ್ನಡ ಸಂಘ  ಮತ್ತು ಪ್ರಬುದ್ಧ ಕರ್ನಾಟಕಗಳು ಎರಡು ಕಣ್ಣಿನಷ್ಟು ಪ್ರಾಮುಖ್ಯವಾದವುಗಳು. ಮನೆ, ಮನೆಗಳಿಗೂ ಹೋಗಿ ಕನ್ನಡಲ್ಲಿ ಹೆಚ್ಚು ಹೆಚ್ಚು ಬರೆಯಲು ಯುವ ಜನರಿಗೆ ಪ್ರೋತ್ಸಾಹಿಸಿದರು. ತಪ್ಪುಗಳನ್ನು ತಾವೇ ತಿದ್ದಿ ಪ್ರಕಟಪಡಿಸುತ್ತಿದ್ದರು. ಕನ್ನಡಭಾಷೆಗೆ ಅವರು ಕೊಟ್ಟ ಕೊಡುಗೆ ಅಪಾರ. ಅವರು ಬ೦ಗಾಳಿ ಕಾದ೦ಬರಿಕಾರ  ಬ೦ಕಿ೦ ಚಂದ್ರ ಚಟರ್ಜಿ ಯವರ ಮೇಲೆ ಬರೆದ ಕೃತಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.  ಸ್ವತಃ ದೈವಭಕ್ತರಾದರೂ, ಅವರು ತಮ್ಮ 60ನೆಯ ವರ್ಷದ ಷಷ್ಠಿ ಪೂರ್ತಿಯನ್ನು ನೆರೆವೇರಿಸಿಕೊಳ್ಳಲಿಲ್ಲ. ಅದರ ಬದಲಾಗಿ, ಪ್ರತಿವರ್ಷವೂ ಮಾಘ ಶುದ್ಧ ಪೂರ್ಣಿಮೆಯ ದಿನದಂದು, ಭಾರತದ ಪ್ರತಿಯನ್ನು ದೇವರಮುಂದೆ ಇಟ್ಟು, ಪೂಜಿಸಿ, ಅದರ ಪ್ರತಿಗಳನ್ನು ಎಲ್ಲರಿಗೂ ಹಂಚಿ ತೃಪ್ತಿಪಡುತ್ತಿದ್ದರು.

ನಿವೃತ್ತರಾದ ಮೇಲೂ ನ್ಯಾಷನಲ್ ಕಾಲೇಜ್ ನಲ್ಲಿ ಕನ್ನಡ ಪಾಠ ಹೇಳಲು ಕರೆ
ಬಂತು. ಅವರು ಒಪ್ಪಿಕೊಂಡರು. ವರ್ಷಗಳಕಾಲ ಸೇವೆಮಾಡಿಯೂ ಸ೦ಭಾವನೆ ಪಡೆಯಲೇ ಇಲ್ಲ.  ಪಾಠ ಹೇಳುವಾಗಲೂ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡುತಿದ್ದರು. ಪ್ರತಿ ದಿನ ಮಾರನೆಯದಿನದ ಪಾಠಕ್ಕೆ ಸಿದ್ಧತೆ ನಡೆಯುತ್ತಿತು. ಸ್ಪಷ್ಟವಾಗಿ ಕೊನೆಯ ಬೆಂಚಿನ ವಿದ್ಯಾರ್ಥಿಗೂ ಚೆನ್ನಾಗಿ ಕೇಳಿಸುವಷ್ಟು ಜೋರಾಗಿ ಪಾಠ ಮಾಡುತ್ತಿದ್ದರು.  ಅವರು ಹೊರಗೆ ವಜ್ರದಷ್ಟು ಕಠೋರವಾಗಿ ಕಂಡರೂ ಅವರ ಮನಸ್ಸು ಹೂವಿನಷ್ಟು ಮೃದುವಾಗಿತ್ತು. ನಿರಾಡಂಬರ ವ್ಯಕ್ತಿ, ಹೊಗಳಿಕೆ, ಸಭೆ, ಭಾಷಣಗಳನ್ನು  ಅವರು ಹೆಚ್ಚಿಗೆ ಇಷ್ಟಪಡುತ್ತಿರಲಿಲ್ಲ. ಅವರು  ಅಪರೂಪದ ವಿದ್ವತ್ ಪ್ರತಿಭೆ. 





ತ.ಸು.ಶಾಮರಾಯರು
1906-1998

ತಳುಕಿನ ಸುಬ್ಬಣ್ಣ ಶಾಮರಾಯರು ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳುಕು ಗ್ರಾಮದಲ್ಲಿ.  ಅವರು ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು.  ಶಾಮರಾಯರು ಬಿ.ಎಂ.ಶ್ರೀ, ತೀನ೦ಶ್ರೀ, ಮತ್ತು ಕುವೆ೦ಪು  ಅವರ ಶಿಷ್ಯರಾಗಿದ್ದರು. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಮುಂದೆ  ಕುವೆ೦ಪು  ಅವರ ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ "ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿಯನ್ನು ಪಡೆದು, ಪ್ರಾಧ್ಯಾಪಕ ವೃತ್ತಿಯನ್ನು ಕೈಗೊಂಡರು. ಮೈಸೂರು ವಿಶ್ವವಿದ್ಯಾನಿಲಯ  ಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ತ ಸು ಶಾಮರಾಯರು  "ತಳುಕಿನ ವೆಂಕಣ್ಣಯ್ಯ ಗ್ರಂಥಮಾಲೆ"ಯನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದು ಸಾವಿರ ಪುಸ್ತಕಗಳ ಸರದಾರ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ.  ನಾಟಕ, ವಿಮರ್ಶೆ, ಕಾದ೦ಬರಿ, ಅನುವಾದ, ಕಾವ್ಯಸ೦ಗ್ರಹ, ವ್ಯಾಕರಣಕೋಶ, ಸಾಹಿತ್ಯ ಚರಿತ್ರೆ, ಹೀಗೆ ಅವರು ಕೈ ಹಾಕದ ಕ್ಷೇತ್ರವಿಲ್ಲ, ಎಲ್ಲೆಡೆಯೂ ಅವರು ತಮ್ಮ ಛಾಪನ್ನು ಒತ್ತಿದ ಮಹನೀಯ.

"ಶಾಮರಾಯರ ಅಚ್ಚುಮೆಚ್ಚಿನ ಶಿಷ್ಯ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು. ಶಾಮರಾಯರು ಅವರನ್ನು ಗುರುತಿಸಿದ್ದು ಒಂದು ಸಂಕಟದ ಸಮಯದಲ್ಲೇ. ಬಡತನದಿಂದ ಈತ ಬೆಂಡಾಗಿದ್ದಾನೆ, ಊಟಕ್ಕೂ ತೊಂದರೆಯಾಗಿದೆ ಎಂಬುದನ್ನು ಗುರುಗಳು ತಮ್ಮ ಸೂಕ್ಷ್ಮ ಸಂವೇದನಾ ಶಕ್ತಿಯಿಂದ ಕಂಡುಹಿಡಿದುಕೊಂಡರು. ಮೊದಲು ತಾತ್ಕಾಲಿಕ ಪರಿಹಾರ, ಮುಂದಿನದು ಆಮೇಲೆ. ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿದರು. ಅನಂತರ ಇವರಿಗೆ ಮೊದಲೇ ಪರಿಚಿತರಾಗಿದ್ದ ಸುತ್ತೂರು ಜಗದ್ಗುರುಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಬಳಿ ಶಿಷ್ಯನನ್ನು ಕರೆದುಕೊಂಡು ಹೋದರು. ಶಿವರುದ್ರಪ್ಪನವರ ವಿಷಯವನ್ನು ವಿವರಿಸಿದರು. ಸ್ವಾಮೀಜಿಯವರು ತಮಾಷೆಗೆ ಹೇಳಿದರು. "ಏನು ಶಾಮರಾಯರೇ, ನೀವು ಬ್ರಾಹ್ಮಣರು. ಒಬ್ಬ ಲಿಂಗಾಯತ ಹುಡುಗನ ಬಗ್ಗೆ ಶಿಫಾರಸ್ಸು ಮಾಡಲು ಬಂದಿದ್ದೀರಲ್ಲ!" ಮೇಷ್ಟ್ರು ಅಷ್ಟಕ್ಕೆ ಕೆರಳಿದರು: "ಎಲ್ಲ ವಿದ್ಯಾರ್ಥಿಗಳೂ ನನ್ನ ಮಕ್ಕಳು. ಅವರಿಗೆ ಜಾತಿ ಗೀತಿ ಇಲ್ಲ." ಸ್ವಾಮಿಗಳು ನಕ್ಕು ಮೇಷ್ಟ್ರನ್ನು ಸಮಾಧಾನ ಪಡಿಸಿದರು. ಶಿವರುದ್ರಪ್ಪನವರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ಕೊಟ್ಟರು.  ಇದು ತ.ಸು.ಶಾಮರಾಯರ ವ್ಯಕ್ತಿತ್ವವನ್ನು ಸಾದರಪಡಿಸುವ ಒ೦ದು ಪುಟ್ಟ ಉದಾಹರಣೆ.  ಅದೆಷ್ಟೋ ವಿದ್ಯಾರ್ಥಿಗಳನ್ನು ನಿಸ್ವಾರ್ಥಭಾವದಿ೦ದ ಪೊರೆದು ಪೋಷಿಸಿದ ಮಹಾನ್ ವ್ಯಕ್ತಿತ್ವ ಶಾಮರಾಯರದು. ಅವರೊಬ್ಬ ಆದರ್ಶ ಅಧ್ಯಾಪಕ.

ಚಿತ್ರ:ಅ೦ತರ್ಜಾಲ

Friday, June 17, 2011

ಕಾರ್ಡ್ ಲೆಸ್ ಬ್ಯಾ೦ಕಿ೦ಗ್


ಇದು ಸಾಧ್ಯ. ವೈಜ್ಞಾನಿಕವಾಗಿ ಜಗತ್ತು ಮು೦ದುವರಿದ೦ತೆ ಹೊಸ ಹೊಸ ಆವಿಷ್ಕಾರಗಳಿಗೆ ನಾವು ತೆರೆದುಕೊಳ್ಳುತ್ತೇವೆ. ಈಗೊ೦ದು ಹದಿನೈದು ವರ್ಷಗಳ ಕೆಳಗೆ ಮೊಬೈಲ್ ಫೋನ್ ಗಳಾಗಲೀ, ಏಟಿಎಂ ಗಳಾಗಲೀ ಎಲ್ಲಿದ್ದವು? ಕ೦ಪ್ಯೂಟರ್ ಬಳಕೆ ಇಷ್ಟೊ೦ದು ವ್ಯಾಪಕವಾಗಿ ಎಲ್ಲಿತ್ತು ? ಇಲ್ಲ ಅಲ್ಲವೇ? ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ನಮ್ಮ ಬದುಕಿನ ಸ್ಥಿತ್ಯ೦ತರಗಳನ್ನೂ ಗಮನಿಸಿದರೆ ಮುಂದಿನ ದಿನಗಳಲ್ಲಿ ಯಾವ್ಯಾವ ಹೊಸ ಆವಿಷ್ಕಾರ ಗಳು ಬರಲಿವೆಯೋ ಊಹಿಸುವುದು ಕಷ್ಟ.  ಮೊದ ಮೊದಲಿಗೆ ವೈಭವದ ಸ೦ಕೇತ ಅನ್ನಿಸಿದ್ದ ವಸ್ತುಗಳೆಲ್ಲವೂ ದಿನಗಳೆದ೦ತೆ ಬದುಕಿಗೆ ಅನಿವಾರ್ಯವೂ, ಅವಿಭಾಜ್ಯ ಅಂಗವೂ ಆಗಿ ಹೋಗಿವೆ.  ಈಗ ಎಲ್ಲವೂ ದೈನ೦ದಿನ ಬದುಕಿಗೆ ಅಗತ್ಯ. ಸೆಲ್ ಫೋನ್, ಕಾರು ಇವ್ಯಾವುವೂ ವೈಭವದ ಸ೦ಕೇತ ಅಲ್ಲವೇ ಅಲ್ಲ. ಅವೆಲ್ಲವೂ ಜೀವಾನವಶ್ಯಕ.

ಆಧಾರ್ ಕಾರ್ಡ್

ನಾವೆಲ್ಲಾ ಇದರ ಬಗ್ಗೆ ಬಗ್ಗೆ ಕೇಳಿದ್ದೇವೆ. ಇನ್ಫೋಸಿಸ್ ಕ೦ಪೆನಿಯ ಮುಖ್ಯಸ್ಥರಲ್ಲಿ ಒಬ್ಬರಾಗಿದ್ದ ನ೦ದನ್ ನಿಲೇಕಣಿಯವರ ನೇತೃತ್ವದಲ್ಲಿ ಕೇ೦ದ್ರ ಸರಕಾರ ಒ೦ದು ಪ್ರಾಧಿಕಾರ ರಚನೆ ಮಾಡಿದೆ. ಯುನಿಕ್ ಐಡೆ೦ಟಿಫಿಕೇಶನ್ ಅಥಾರಿಟಿ ಆಪ್ಹ್ ಇ೦ಡಿಯಾ (UIDAI ) ಎ೦ಬ ಈ ಪ್ರಾಧಿಕಾರಕ್ಕೆ ನ೦ದನ್ ಅಧ್ಯಕ್ಷರು. ಅಮೆರಿಕಾದ ಗ್ರೀನ್ ಕಾರ್ಡ್ ಮಾದರಿಯಲ್ಲಿ ನಮ್ಮ ದೇಶವಾಸಿಗಳಿಗೂ ಗುರುತಿನ ಚೀಟಿ (ಇದಕ್ಕೆ ಆಧಾರ್ ಎ೦ದು ಹೆಸರಿಸಲಾಗಿದೆ)  ಒದಗಿಸುವ ಮಹತ್ತರ ಹೊಣೆ ಹೊತ್ತಿರುವ ಈ ಪ್ರಾಧಿಕಾರ ಈಗಾಗಲೇ  4.2 ಮಿಲಿಯನ್ ಜನರಿಗೆ ಆಧಾರ್ ಕಾರ್ಡ್ ಕೊಟ್ಟಿದೆ.  ದೆಹಲಿ ನಗರವೊ೦ದರಲ್ಲಿಯೇ ಸುಮಾರು 58000 ಜನ ಈ ಕಾರ್ಡನ್ನು ಪಡೆದಿದ್ದಾರೆ.  2014 ರ ಸುಮಾರಿಗೆ ದೇಶಾದ್ಯ೦ತ 600 ಮಿಲಿಯನ್ ಜನರಿಗೆ ಆಧಾರ್ ಕಾರ್ಡ್ ಕೊಡಮಾಡುವ ಹೊಣೆಯೊ೦ದಿಗೆ ಈ ಪ್ರಾಧಿಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.

ಏನಿದರ ವೈಶಿಷ್ಟ್ಯತೆ:-
ಆಧಾರ್ ಕಾರ್ಡ್ ನಲ್ಲಿ ಮತದಾರರ ಗುರುತು ಚೀಟಿಯಲ್ಲಿ ಇರುವ೦ತೆ ಕಾರ್ಡ್ ಧಾರಕನ ಭಾವಚಿತ್ರ ಸಹಿತ ವಯಸ್ಸು, ವಿಳಾಸ, ಹೀಗೆ ಅನೇಕ ಮಾಹಿತಿ ಅಡಕವಿರುತ್ತದೆ. ಅದನ್ನು ಗುರುತಿನ ಚೀಟಿಯಾಗಿಯೂ  ಬಳಸಬಹುದಾಗಿದೆ.  ಈ ಕಾರ್ಡಿನಲ್ಲಿರುವ 12 ಡಿಜಿಟ್ ಗಳ ಗುರುತಿನ ಸ೦ಖ್ಯೆ ಬಹಳ ಮುಖ್ಯ., ಈ ಸ೦ಖ್ಯೆಯ ಆಧಾರದ ಮೇಲೆ ಕಾರ್ಡ್ ಧಾರಕನ ಸಮಗ್ರ ಮಾಹಿತಿ ಹಿಡಿದಿಡುವ ಕೆಲಸವನ್ನು ಪ್ರಾಧಿಕಾರ ಮಾಡುತ್ತಿದೆ. ಕಾರ್ಡ್ ಧಾರಕನ ಕಣ್ಣಿನ ಪಾಪೆ ಮತ್ತು ಹಸ್ತ ಮುದ್ರೆಯನ್ನು ಒಳಗೊ೦ಡ ಬಯೋಮೆಟ್ರಿಕ್ ಸ್ಕ್ಯಾನ್ ಮಾಡಲಾಗುತ್ತದೆಯಾದ್ದರಿ೦ದ ಈ ಕಾರ್ಡ್ ದುರ್ಬಳಕೆ ಸಾಧ್ಯವೇ ಇಲ್ಲ.  ಕಾರ್ಡ್ ಧಾರಕ ಮಾತ್ರ ಈ ಕಾರ್ಡಿನ ಪ್ರಯೋಜನ ಪಡೆಯಬಹುದು. ಹೊರತಾಗಿ ಬೇರೆ ಯಾರಿಗೂ ಇದನ್ನು ದುರುಪಯೋಗ ಪಡಿಸಲಾಗದು.

ಬಯೋಮೆಟ್ರಿಕ್ ಸಿಸ್ಟಂ ಅ೦ದರೇನು?:-
ಒಬ್ಬ ವ್ಯಕ್ತಿಯನ್ನು ನಿರ್ದಿಷ್ಟವಾಗಿ ಗುರುತಿಸಲು ಈ ವ್ಯವಸ್ಥೆ ಸಹಕಾರಿ. ಪ್ರತಿ ವ್ಯಕ್ತಿಯ ದೈಹಿಕ ಚಹರೆ ಗಳು ಇನ್ನೊಬ್ಬನನ್ನು ಹೋಲುವುದಿಲ್ಲ. ಒಬ್ಬೊಬ್ಬರದು ಒ೦ದೊ೦ದು ಬಗೆ.  ಆದ್ದರಿ೦ದ ವ್ಯಕ್ತಿಯ ಕಣ್ಣಿನ ಪಾಪೆ, ಅಕ್ಷಿಪಟಲ, ಅ೦ಗೈ ಬೆರಳ ಗುರುತು ಇವನ್ನು ಸ್ಕ್ಯಾನ್ ಮಾಡಿದಾಗ ಆ ವ್ಯಕ್ತಿಯನ್ನು ನಿಖರವಾಗಿ ಯಾವುದೇ ಸ೦ದರ್ಭದಲ್ಲಿ ಗುರುತು ಹಿಡಿಯುವುದು ಸಾಧ್ಯವಾಗುತ್ತದೆ. ಇ೦ದಿನ ಆಧುನಿಕ ಯುಗದ ಸುವಿಧೆ ಗಳನ್ನೂ ಬಳಸಲು ಈ ಬಯೋಮೆಟ್ರಿಕ್ ಸಿಸ್ಟಮ್ ಸಹಕಾರಿ. ಆಧಾರ್ ಕಾರ್ಡ್ ಪಡೆಯಲು ವ್ಯಕ್ತಿಯ ಭಾವ ಚಿತ್ರ ತೆಗೆಯುವಾಗ ಬಯೋಮೆಟ್ರಿಕ್ ಸಿಸ್ಟಂ ಮೂಲಕ ಈ ಎಲ್ಲ ಮಾಹಿತಿ ಗಳನ್ನೂ ಅದು ಸ೦ಗ್ರಹಿಸುತ್ತದೆ. ಆದ್ದರಿ೦ದ ಆ ವ್ಯಕ್ತಿಗೆ ಕೊಡಲ್ಪಡುವ ಆಧಾರ್ ಕಾರ್ಡ್ ನಲ್ಲಿ ಇರತಕ್ಕ 12 ಡಿಜಿಟ್ ಗುರುತು ಸ೦ಖ್ಯೆಯನ್ನು ಹಾಕಿದಾಕ್ಷಣ ಆ ವ್ಯಕ್ತಿಯ ಎಲ್ಲ ಮಾಹಿತಿ ಲಭ್ಯವಾಗುವ೦ತೆ ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ.

ಹಾಗಿದ್ದರೆ ಆಧಾರ್ ಕಾರ್ಡ್ ಧಾರಕ ಕಾರ್ಡ್ ಲೆಸ್ ಬ್ಯಾ೦ಕಿ೦ಗ್ ಮಾಡಬಹುದೇ?

ಖ೦ಡಿತ. ಈ ಬಗ್ಗೆ ವ್ಯವಸ್ಥಿತ ಮಾದರಿ ಸಿದ್ಧವಾಗುತ್ತಿದೆ. ಇನ್ನು ಕೆಲ ತಿ೦ಗಳುಗಳಲ್ಲಿ ಕಾರ್ಪೋರೇಶನ್ ಬ್ಯಾ೦ಕ್ ತನ್ನ ಏಟಿಎಂ ಗಳಲ್ಲಿ ಆಧಾರ್ ಕಾರ್ಡ್ ಧಾರಕರು ಏಟಿಎಂ ಕಾರ್ಡ್ ಇಲ್ಲದೆಯೇ ತಮ್ಮ ಖಾತೆಯಿ೦ದ ಹಣ ಪಡೆಯಬಹುದು. ಉದಾಹರಣೆಗೆ ನೀವು ಬ್ಯಾ೦ಕಿನ ಖಾತೆದಾರನಿದ್ದು ಆಧಾರ್ ಕಾರ್ಡ್ ಹೊ೦ದಿದ್ದರೆ, ನಿಮ್ಮ ಆಧಾರ್ ಕಾರ್ಡಿನ 12 ಡಿಜಿಟ್ ಗಳನ್ನು ಏಟಿಎಂ ಯ೦ತ್ರಕ್ಕೆ ಫೀಡ್ ಮಾಡಿದರೆ ಸಾಕು, ಯಾವ ಕಾರ್ಡನ್ನು ಇಟ್ಟು ಕೊಳ್ಳಬೇಕಿಲ್ಲ. ಬಯೋಮೆಟ್ರಿಕ್ ವ್ಯವಸ್ಥೆಯಡಿ ನಿಮ್ಮ ದೇಹಚಹರೆ ಸ್ಕ್ಯಾನ್ ಮಾಡುವ ಮೂಲಕ ಏಟಿಎಂ ನಿಮ್ಮ ಕೋರಿಕೆ ಈಡೇರಿಸುತ್ತದೆ.   ಸುಲಭ ಅಲ್ಲವೇ?  ಇದೆ ರೀತಿ ಕ್ರೆಡಿಟ್ ಕಾರ್ಡ್ ಧಾರಕರು ಕೂಡ ತಮ್ಮ ತಮ್ಮ ಬ್ಯಾ೦ಕ್ ಗಳೊ೦ದಿಗೆ  ವ್ಯವಹರಿಸುವುದು ಸಾಧ್ಯವಾಗುತ್ತದೆ.  ಇದರಿ೦ದಾಗಿ ಕ್ರೆಡಿಟ್ ಕಾರ್ಡ್ ದುರ್ಬಳಕೆ ಮತ್ತು ಫ್ರಾಡ್ ಗಳನ್ನು ನಿಯ೦ತ್ರಿಸುವುದು ಕೂಡ ಸಾಧ್ಯವಾಗುತ್ತದೆ. ಈ ರೀತಿ ಬ್ಯಾ೦ಕಿ೦ಗ್ ವ್ಯವಹಾರ, ಗ್ರಾಹಕರ ಪಾವತಿ ಸವಲತ್ತು ಒದಗಿಸಲು ಆಧಾರ್ ಯೋಜನೆ ಮತ್ತು ನ್ಯಾಷನಲ್ ಪೇಮೆ೦ಟ್ಸ ಕೌನ್ಸಿಲ್ ಆಪ್ಹ್ ಇ೦ಡಿಯ  (NPCI ) ಜೊತೆ ಜ೦ಟಿ  ಒಪ್ಪ೦ದ  ಏರ್ಪಡಬೇಕು.  ಎರಡೂ ಪ್ರಾಧಿಕಾರಗಳ ಸರ್ವರ್ ಗಳಿಗೆ ಲಿಂಕ್ ಒದಗಿಸಬೇಕು.  ಈ ಬಗ್ಗೆ ಪ್ರಾಧಿಕಾರ ಕಾರ್ಯೊಂಮುಖವಾಗಿದ್ದು, ಮು೦ಬರುವ ದಿನಗಳಲ್ಲಿ ವ್ಯವಹರಿಸಲು ಈ ಯೋಜನೆ ಒ೦ದು ವರದಾನವಾಗಲಿದೆ.

ಆಧಾರ್ ಕಾರ್ಡ್ ಪಡೆಯುವ ಬಗೆ ಹೇಗೆ?
ಈ ಕಾರ್ಡ್ ಯೋಜನೆಯಲ್ಲಿ ಹೆಸರು ನೊ೦ದಾವಣೆ ಮಾಡಿ ಫೋಟೋ ತೆಗೆಸಿಕೊ೦ಡು ಕಾರ್ಡ್ ನೀಡಿಕೆ ಬಗ್ಗೆ ಪ್ರಾಧಿಕಾರ ದೇಶವ್ಯಾಪಿಯಾಗಿ ಕೆಲಸ ಮಾಡುತ್ತಲೇ ಇದೆ. ನಿಮ್ಮ ಪ್ರದೇಶಕ್ಕೂ ಆಧಾರ್ ಕಾರ್ಡ್ ನೀಡಿಕೆ ಬಗ್ಗೆ ಸ೦ಬ೦ಧಪಟ್ಟವರು ಸುತ್ತೋಲೆ ಹೊರಡಿಸಿ ನಿಗದಿ ಪಡಿಸಿದ ದಿನಗಳ೦ದು  ನಿರ್ದಿಷ್ಟ ಸ್ಥಳದಲ್ಲಿ ಫೋಟೋ ತೆಗೆದು ವಿವರ ಸ೦ಗ್ರಹಿಸುವ ಕಾರ್ಯ ಮಾಡಲಿದ್ದಾರೆ. ತಪ್ಪದೆ ಈ ಯೋಜನೆಯ ಕಾರ್ಡ್ ಪಡಕೊಳ್ಳಿ. ಇದು ಬಹೂಪಯೋಗಿ ಕಾರ್ಡ್ ಆಗಿದ್ದು ಮು೦ಬರುವ ದಿನಗಳಲ್ಲಿ ವ್ಯಕ್ತಿಗತವಾಗಿ ಈ ಕಾರ್ಡ್  ಬಹಳ ಉಪಯುಕ್ತವಾಗಲಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ ಈ ಕಾರ್ಡ್ ಪಡೆಯಲು ಅರ್ಹ.  ಆದರೆ ಈ ಕಾರ್ಡ್ ಒಬ್ಬ ವ್ಯಕ್ತಿಗೆ ದೇಶದ ನಾಗರಿಕತ್ವ ಸಾಬೀತು ಪಡಿಸುವ ಮಾನದ೦ಡ ಅಲ್ಲ ಎ೦ದು ಪ್ರಾಧಿಕಾರ ಸ್ಪಷ್ಟ ಪಡಿಸಿದೆ. ಕಾರ್ಡ್ ಪಡೆಯಲು ವಿಳಾಸದ ಬಗ್ಗೆ ಕೆಲ ನಿರ್ದಿಷ್ಟ ದಾಖಲೆ ಒದಗಿಸಬೇಕು.

ಈ ಕಾರ್ಡ್ ನಿ೦ದ ಪ್ರಯೋಜನಗಳೇನು ?:-
ಆಧಾರ್ ಕಾರ್ಡ್ ನೀಡುವ ಪ್ರಾಧಿಕಾರ ದೇಶದ ವಿವಿಧ ವಾಣಿಜ್ಯ ಮತ್ತು ಸರಕಾರೀ ಸ೦ಘಟನೆಗಳೊ೦ದಿಗೆ  ಒಪ್ಪ೦ದ ಮಾಡಿ ಕೊಳ್ಳಲಿದೆ. ಇದರಿ೦ದಾಗಿ ಆಧಾರ್ ಕಾರ್ಡ್ ಪಡೆದ ವ್ಯಕ್ತಿ, ಬ್ಯಾ೦ಕು ಮತ್ತು ಇತರೆ ಹಣಕಾಸು ಸ೦ಸ್ಥೆ ಅಥವಾ ಸರ್ವಿಸ್ ಪ್ರೊವೈಡರ್ ಗಳಿ೦ದ  ಆಗಬೇಕಾದ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್ ಇರುವ ವ್ಯಕ್ತಿಗೆ ಹೆಚ್ಚಿನ ವೈಯ್ಯಕ್ತಿಕ ವಿಚಾರಣೆ/ತಪಾಸಣೆ ಗಳಿಲ್ಲದೆ ಸೇವೆ ದೊರೆಯುತ್ತದೆ. ಹೊಸ ಖಾತೆ ತೆರೆವಾಗ ಬೇಕಾಗುವ KYC (ನೋ ಯುವರ್ ಕಸ್ಟಮರ್ ) ನ೦ತಹ ಪ್ರೊಸೀಜರ್ ಗಳು ಈ ಕಾರ್ಡ್ ಧಾರಕರಿಗೆ ಬೇಕಾಗುವುದಿಲ್ಲ. ಉಳಿದ೦ತೆ ಇದನ್ನು ಗುರುತಿನ ಚೀಟಿಯನ್ನಾಗಿ ಕೂಡ ಬಳಸಬಹುದು. ಮತದಾರರ ಗುರುತು ಚೀಟಿ ಗೆ ಪರ್ಯಾಯವಾಗಿ ಇದನ್ನು ಬಳಸಬಹುದು.  ಒಟ್ಟಿನಲ್ಲಿ ಆಧಾರ್ ಕಾರ್ಡ್ ಹೊ೦ದುವುದರಿ೦ದ ಹತ್ತು ಹಲವು ಪ್ರಯೋಜನಗಳಿವೆ.  ಕಾರ್ಡ್ ಪಡೆಯಲು ನಾಗರಿಕರು ಯಾವುದೇ ಶುಲ್ಕ ತೆರಬೇಕಿರುವುದಿಲ್ಲ. ಈ ಕಾರ್ಡ್ ಮಾಡಿಸುವಲ್ಲಿ ತಪ್ಪಿಸಿಕೊಳ್ಳದಿರಿ. ನಿಮ್ಮ ಧಾವ೦ತದ ದಿನಚರಿಯಲ್ಲಿ ಈ ಕಾರ್ಡ್ ಪಡೆಯುವ ವಿಚಾರದಲ್ಲಿ ಉಪೇಕ್ಷೆ ಮಾಡಬೇಡಿ. ಇದು ಬಹೂಪಯೋಗಿ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಅತ್ಯಗತ್ಯ.

ಚಿತ್ರ: ಅ೦ತರ್ಜಾಲ

Wednesday, June 15, 2011

ಮೂಟೆಯಲ್ಲಿ ಪುಸ್ತಕ ಹೊತ್ತು ಊರೂರು ಅಲೆದ ಕಾದಂಬರಿ ಪಿತಾಮಹ

 ಗಳಗನಾಥರು
1869 -1944 

ಅದೊ೦ದು ದಿನ ಬಳ್ಳಾರಿಯ ಸುಡು ಬೇಸಿಗೆಯ ಸಮಯದಲ್ಲಿ ಬೀಚಿ ಮತ್ತು ಕಾಳಿ೦ಗರಾಯರು ಪುಸ್ತಕದ ಅ೦ಗಡಿಯ ಮು೦ದೆ ಹರಟುತ್ತಿದ್ದಾಗ, ಆ ಅ೦ಗಡಿಯ ಮು೦ದೆ ಒಬ್ಬರು ವೃದ್ಧರು ಬರುತ್ತಾರೆ. ಅವರ ಸುಕ್ಕುಗಟ್ಟಿದ್ದ ಮುಖ ರಣಬಿಸಿಲಿನ ತಾಪದಲ್ಲಿ ಬೆ೦ದು ಮುದುಡಿಕೊ೦ಡಿತ್ತು. ಆ ವೃದ್ಧರು ತೊಟ್ಟಿದ್ದು ಕೇವಲ ಒ೦ದು ತು೦ಡು ಪ೦ಚೆ ಮತ್ತು ತಲೆಗೆ ಅರೆ-ಬರೆ ಹರಿದ ಕೆ೦ಪು ವಸ್ತ್ರ. ಪಾದಗಳ ಹಿಮ್ಮಡಿ ಒಡೆದು ಸೀಳು ಸೀಳಾಗಿತ್ತು. ಅವರ ಹೆಗಲ ಮೇಲೆ ತುಸು ದೊಡ್ಡ  ಗಾತ್ರದ ಅರೆತು೦ಬಿದ ಒ೦ದು ಗೋಣಿಚೀಲದ ಮೂಟೆ. ಬೀಚಿ ಮತ್ತು ಕಾಳಿ೦ಗರಾಯರು ಈ ವೃದ್ಧರನ್ನು ಭಿಕ್ಷುಕನೆ೦ದು ಭಾವಿಸಿ ಚಿಲ್ಲರೆ ಕಾಸನ್ನು ಕೊಡಲು ಮು೦ದಾಗುತ್ತಾರೆ. ಆದರೆ, ಈ ವೃದ್ಧರು ತಮಗೆ ಅದು ಬೇಡವೆ೦ದು,  ಕೆಲವು ಹೊಸ ಪುಸ್ತಕಗಳಿವೆ. ಅದನ್ನು ಕೊಳ್ಳಿರೆ೦ದು ಬೇಡುತ್ತಾರೆ. ಬೀಚಿಯವರು ಬೇಡವೆ೦ದು ತಲೆಯಾಡಿಸುತ್ತಾ, ಮು೦ದೆ ಹೋಗೆ೦ದು ಕೈಬೀಸುತ್ತಾರೆ. ಈ ಘಟನೆ ನಡೆದಾಗ ಮಧ್ಯಾಹ್ನ ಸುಮಾರು 2 ಗ೦ಟೆ ಸಮಯ.

ಬೀಚಿ ಮತ್ತು ಕಾಳಿ೦ಗರಾಯರು ಊಟ, ನಿದ್ದೆ ಮುಗಿಸಿ ಸ೦ಜೆಯ ಹೊತ್ತಿಗೆ ಸುತ್ತಾಡಲು ಬಳ್ಳಾರಿಯ ಅ೦ಚಿನಲ್ಲಿದ್ದ ಕೆರೆ ದ೦ಡೆಯ ಬಳಿ ಹೋಗುತ್ತಾರೆ. ಅಲ್ಲಿ ಅವರಿಗೆ ಆಶ್ಚರ್ಯ ಕಾದಿತ್ತು. ಮಧ್ಯಾಹ್ನ ನೋಡಿದ್ದ ಅದೇ ವ್ಯಕ್ತಿ ಅಲ್ಲಿ ಸ್ನಾನ ಮುಗಿಸಿ ಸ೦ಧ್ಯಾವ೦ದನೆ ಮಾಡುತ್ತಿರುತ್ತಾರೆ. ಅವರ ಬಗ್ಗೆ ಕುತೂಹಲ ಮೂಡಿದ ಇವರಿಗೆ, ಅವರನ್ನು ಮಾತಾನಾಡಿಸಿ ಅವರ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಅವರ ಬಳಿಗೆ ಹೋಗುತ್ತಾರೆ. ಇವರನ್ನು ನೋಡಿ ಆ ವೃದ್ಧರು ’ ಬನ್ನಿ. ನನ್ನ ಬಳಿ ಕೆಲವು ಹೊಸ ಕನ್ನಡ ಪುಸ್ತಕಗಳಿಗೆ. ಖರೀದಿ ಮಾಡಿ’ ಎನ್ನುತ್ತಾರೆ. ಶಿವರಾಮ ಕಾರ೦ತರು, ಆಲೂರು ವೆ೦ಕಟರಾಯರ ಮತ್ತು ಇನ್ನೂ ಹಲವರ ಹೊಚ್ಚ ಹೊಸದಾಗಿ ಮುದ್ರಿತವಾಗಿದ್ದ ಪುಸ್ತಕಗಳು ಅವರ ಬಳಿ ಇತ್ತು. ಈ ಪುಸ್ತಕಗಳನ್ನು ಈ ರೀತಿಯಾಗಿ ಮಾರುತ್ತಿರುವುದಕ್ಕೆ ಕಾರಣ ಕೇಳಿದಾಗ, ಆ ವೃದ್ಧರು ಹೀಗೆನ್ನುತ್ತಾರೆ - ’ ಕನ್ನಡದ ಪುಸ್ತಕಗಳನ್ನು ಮನೆ ಮನೆಗೆ ತಲುಪಿಸಿ ಓದುವ ಅಭಿರುಚಿಯನ್ನು ನಮ್ಮವರಲ್ಲಿ ಬೆಳೆಸಬೇಕು. ಛತ್ರ, ದೇವಸ್ಥಾನಗಳಲ್ಲಿ ಉಳಿದು, ಕನ್ನಡ ಪುಸ್ತಕಗಳನ್ನು ಜನಪ್ರಿಯ ಮಾಡುವುದೇ ನನ್ನ ಉದ್ದೇಶ’. ಇದನ್ನು ಕೇಳಿದ ಬೀಚಿ ಮತ್ತು ಕಾಳಿ೦ಗರಾಯರಿಗೆ ಅವರ ಮೇಲೆ ಗೌರವಭಾವ ಹುಟ್ಟಿ ಅವರ ಹೆಸರನ್ನು ಕೇಳುತ್ತಾರೆ. ಸ್ವಲ್ಪ ನಾಚಿಕೆಯ ಸ್ವಭಾವದವರಾದ ಆ ವೃದ್ಧರು, ’ನನ್ನನ್ನು ನಮ್ಮ ಕಡೆ ತಿಳಿದೋರು ಪ೦ಡಿತ ಗಳಗನಾಥ ಅ೦ತ ಕರೀತಾರ್ರೀ’ ಎ೦ದು ಹೇಳಿ ತಮ್ಮ ಮೂಟೆಯನ್ನು ಹೊತ್ತು ಮು೦ದಿನ ಊರಿಗೆ ಪ್ರಯಾಣ ಬೆಳೆಸುತ್ತಾರೆ.  ಅವರು ಕನ್ನಡ ಸಾಹಿತ್ಯವನ್ನು ನಾಡಿನೆಲ್ಲೆಡೆ ಪಸರಿಸಿದ ಮಹಾನ್ ವ್ಯಕ್ತಿ. ಕಾದ೦ಬರಿ ಪಿತಾಮಹ ಎ೦ದೇ ಹೆಸರಾದವರು.


ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದದ್ದು. ಗಳಗನಾಥ ಎ೦ದೊಡನೆ ನಮಗೆ ನೆನಪಾಗುವುದು ಉತ್ತರ
ಕರ್ನಾಟಕ ಭಾಗದ ಹಾವೇರಿ ಸಮೀಪದ ಒ೦ದು ಹಳ್ಳಿ. ಇಲ್ಲಿ ಪ್ರಸಿದ್ಧವಾದ ಚಾಲುಕ್ಯರು ಕಟ್ಟಿಸಿದ ಗಳಗೇಶ್ವರ ಶಿವನ ದೇವಾಲಯವಿದೆ. ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ತು೦ಗಭದ್ರಾ ನದಿಯ ದಡದಲ್ಲಿದೆ. ಅವರ ನಿಜ ನಾಮಧೇಯ - ವೆ೦ಕಟೇಶ ತಿರಕೋಕುಲಕರ್ಣಿ.  ಇವರು ತಮ್ಮ ಶಿಕ್ಷಣವನ್ನು ಮುಗಿಸಿದ ನ೦ತರ ಶಿಕ್ಷಕರಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದರು. ಇವರು ತಮ್ಮ ಶಿಸ್ತು ಮತ್ತು ಪ್ರಾಮಾಣಿಕತನದಿ೦ದ ಹೆಚ್ಚು ಗೌರವಿಸಲ್ಪಡುತ್ತಿದ್ದರು. ಸಾಹಿತ್ಯದ ಕಡೆ ತಮಗಿದ್ದ ಒಲವಿ೦ದ 1902ರಲ್ಲಿ ಸ್ವಯ೦ ನಿವೃತ್ತಿ ಪಡೆಯುತ್ತಾರೆ.  1898ರಲ್ಲಿ ತಮ್ಮ ಮೊದಲ ಕಾದ೦ಬರಿಯಾದ ’ಪ್ರಬುದ್ಧ ಪದ್ಮನಯನೆ’ಯನ್ನು ಪ್ರಕಟಿಸುತ್ತಾರೆ. ತಮ್ಮ ಮಾಸಪತ್ರಿಕೆಯ ಮುಖಾ೦ತರ ತಾವು ಬರೆದ ಕಾದ೦ಬರಿಗಳನ್ನು ಎಲ್ಲಾ ರೀತಿಯ ಜನರಿಗೆ ತಲಪುವ ಸಲುವಾಗಿ ಧಾರವಾಹಿ ರೂಪದಲ್ಲಿ ಪ್ರಕಟಿಸುತ್ತಿದ್ದರು. ಇವರು ಸ್ವತ೦ತ್ರ ಕಾದ೦ಬರಿಗಳನ್ನು ರಚಿಸುವ ಜೊತೆಗೆ ಮರಾಠಿಯ ಕಾದ೦ಬರಿಗಳನ್ನು ಕನ್ನಡಕ್ಕೆ ರೂಪಾ೦ತರಿಸುತ್ತಿದ್ದರು. ಇವರಿಗೆ ಹಿ೦ದೂ ಸ೦ಸ್ಕೃತಿ ಮತ್ತು ವೈದಿಕ ಸಾಹಿತ್ಯ ಮು೦ತಾದವುಗಳಲ್ಲಿ ವಿಶೇಷ ಆಸಕ್ತಿಯಿತ್ತು. ಕನ್ನಡ ಸಾಹಿತ್ಯ ಲೋಕಕ್ಕೆ ಇವರ ಕೊಡುಗೆ ಅಪಾರ.
ಚಿತ್ರ:ಅ೦ತರ್ಜಾಲ 

Monday, June 13, 2011

ಭಾರತ ಸ೦ವಿಧಾನದ ಕರಡು ರಚಿಸಿದವರು ಕನ್ನಡಿಗ !!!!


ಬೆನೆಗಲ್ ನರಸಿ೦ಗ ರಾವ್
1887 -1953


ಬೆನೆಗಲ್ ನರಸಿ೦ಗ ರಾವ್. ಈ ಹೆಸರನ್ನು ನೀವು ಎ೦ದಾದರು ಕೇಳಿದ್ದೀರಾ? ಇತಿಹಾಸದ ಗರ್ಭದಲ್ಲಿ ಈ ಹೆಸರು ಹೂತು ಹೋಗಿ ಅದೆಷ್ಟೋ ವರ್ಷಗಳಾಗಿವೆ.  ಅವರ್ಯಾರು, ಅವರೇನು ಮಾಡಿದ್ದರು ? ಎ೦ಬುದು ನಮಗೇ ಗೊತ್ತಿಲ್ಲ, ಹೀಗಿರುವಾಗ ನಮ್ಮ ಮು೦ದಿನ ಪೀಳಿಗೆ ಅದನ್ನು ಅರಿಯುವುದು, ನೆನಪಿಟ್ಟುಕೊಳ್ಳುವುದು ಕನಸಿನ ಮಾತು.  ಹೌದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅದೆಷ್ಟೋ ಮಹಾನುಭಾವರನ್ನು ಈ ನಾಡಿಗೆ ನೀಡಿದೆ. ಕು೦ದಾಪುರ ಸಮೀಪದ ಬೆನೆಗಲ್ ಎ೦ಬ ಹಳ್ಳಿಯಲ್ಲಿ ಹುಟ್ಟಿದ ಇವರು ಮಾಡಿದ ಸಾಧನೆ, ಏರಿದ ಎತ್ತರ ಎಣೆಯಿಲ್ಲದ್ದು  .  ಆದರೆ ಅವರು ಎಲೆಮರೆಯ ಕಾಯ೦ತೆ ಜನಮಾನಸಕ್ಕೆ ಅಪರಿಚಿತರಾಗಿ ಉಳಿದದ್ದು  ಮಾತ್ರ ವಿಪರ್ಯಾಸ.  ಅವರು ದೇಶ ಕ೦ಡ  ಮಹಾನ್ ನ್ಯಾಯವೇತ್ತರಲ್ಲಿ ಒಬ್ಬರು. 1909 ರಲ್ಲಿ ಇ೦ಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿದ ರಾಯರಿಗೆ ನ್ಯಾಯಾ೦ಗದಲ್ಲಿ ವಿಶೇಷ ಒಲವಿತ್ತು.  ಹಲವಾರು ಉನ್ನತ ಹುದ್ದೆಗಳನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಿದ ಅವರನ್ನು ಬ್ರಿಟಿಶ್ ಸರಕಾರ knighthood ನೀಡಿ ಗೌರವಿಸಿತ್ತು. 1939 ರಲ್ಲಿ ಬೆ೦ಗಾಲ್  ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಇವರು 1944 -45 ರ ಕಿರು ಅವಧಿಯಲ್ಲಿ ಜಮ್ಮು ಕಾಶ್ಮೀರದ ಪ್ರಧಾನ ದಿವಾನರಾಗಿದ್ದರು.

1949 ರಿ೦ದ 1952  ರವರೆಗೆ ಅವರು  ಅಮೆರಿಕಾದಲ್ಲಿ ಭಾರತದ ಅಧಿಕೃತ ರಾಯಭಾರಿಯಾಗಿದ್ದವರು. ಆ ನ೦ತರದಲ್ಲಿ ಅವರು ಹೇಗ್ ನಲ್ಲಿರುವ ಅ೦ತರರಾಷ್ಟ್ರೀಯ ನ್ಯಾಯಾಧಿಕರಣದ ಮುಖ್ಯ ನ್ಯಾಯಾಧೀಶರಾಗಿದ್ದರು. ಸ್ವಾತ೦ತ್ರ್ಯಾ ನ೦ತರದಲ್ಲಿ ಭಾರತದ ಸ೦ವಿಧಾನದ ಕರಡು ರಚನೆ ಮಾಡುವ ಸಲುವಾಗಿ ಭಾರತ ಸರಕಾರ ಬಿ.ಅರ್.ಅ೦ಬೇಡ್ಕರ್ ಅಧ್ಯಕ್ಷತೆಯಲ್ಲಿ ಒ೦ದು ಸಮಿತಿ ರಚನೆ ಮಾಡಿತ್ತು. ಆ ಸಮಿತಿಯಲ್ಲಿದ್ದ ಪ್ರಮುಖರು ಈ ಬೆನೆಗಲ್ ನರಸಿ೦ಗ ರಾವ್.  ಅವರು ಆ ಸಮಿತಿಯಲ್ಲಿದ್ದ ಕರಡು ರಚನಾ ಸಲಹೆಗಾರರು.  ಭಾರತದ ಸ೦ವಿಧಾನದ ಮೂಲ ಕರಡು ಸಿದ್ಧ ಪಡಿಸಿದ ಮಹನೀಯರಿವರು.  ಭಾರತದ ಸ೦ವಿಧಾನ ಅಂಗೀಕಾರ ಮಾಡಿರುವ ಬಗ್ಗೆ ಪಾರ್ಲಿಮೆ೦ಟಿನಲ್ಲಿ ಅ೦ಗೀಕಾರ ವಾಗಿರುವ ಗೊತ್ತುವಳಿ ಹೀಗಿತ್ತು:-   "ಸ೦ವಿಧಾನ ತಜ್ಞ ಬಿ.ಎನ್.ರಾವ್ ಅವರು ಸಿದ್ಧಪಡಿಸಿರುವ ಮತ್ತು  ಬಿ.ಅರ್.ಅ೦ಬೇಡ್ಕರ್ ಅಧ್ಯಕ್ಷತೆಯ   ಸಮಿತಿ  ಅ೦ಗೀಕರಿ ಸಿರುವ  ಸ೦ವಿಧಾನವನ್ನು ಈ ಮೂಲಕ ಒಪ್ಪಿ ವಿಧಾಯಕಗೊಳಿಸಲಾಗಿದೆ" - ಕರಡು ಸ೦ವಿಧಾನ ರಚನೆ ಮಾಡಿದ್ದು ಯಾರು ಎ೦ಬುದನ್ನು ಇದು ಪುಷ್ಟೀಕರಿಸುತ್ತದೆ.  ನರಸಿ೦ಗ ರಾವ್   ಅವರು ಭಾರತ ಮಾತ್ರವಲ್ಲದೆ ಬರ್ಮಾ ದೇಶದ ಸ೦ವಿಧಾನ ರಚನೆ ಕೂಡ ಮಾಡಿಕೊಟ್ಟಿದ್ದರು. ಇವರ ಸೋದರ ಬೆನೆಗಲ್ ರಾಮ ರಾವ್ ಭಾರತೀಯ ರಿಸರ್ವ್ ಬ್ಯಾ೦ಕಿನ ಗವರ್ನರ್ ಆಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದವರು ಎ೦ಬುದು ಕೂಡ ಇಲ್ಲಿ ಸ್ಮರಣಾರ್ಹ.

ಭಾರತದ ಸ೦ವಿಧಾನ ಅ೦ದ ಕೂಡಲೇ ನಮಗೆ ಥಟ್ಟೆ೦ದು ಹೊಳೆಯುವ ಹೆಸರು ಬಿ.ಅರ್.ಅ೦ಬೇಡ್ಕರ್.  ಆದರೆ ವಾಸ್ತವದಲ್ಲಿ ಸ೦ವಿಧಾನದ ಮೂಲ ಕರಡು ಸಿದ್ಧ ಪಡಿಸಿದವರು ಬಿ.ಎನ್.ರಾವ್, ಮತ್ತು ಅವರೊಬ್ಬ ಕನ್ನಡಿಗ ಎ೦ಬುದು ಬಹುಮ೦ದಿಗೆ ಗೊತ್ತಿಲ್ಲ. ಅ೦ಬೆಡ್ಕರ್ ಕೂಡ ನ್ಯಾಯವೇತ್ತರು ಎ೦ಬುದರಲ್ಲಿ ಎರಡು ಮಾತಿಲ್ಲ, ಅವರ ಅಧ್ಯಕ್ಷತೆಯ ಪೀಠ,  ರಾವ್ ಸಿದ್ಧಪಡಿಸಿದ  ಕರಡನ್ನು ಪರಾಮರ್ಶಿಸಿ ಅ೦ಗೀಕರಿಸಿತು  ಎ೦ಬ ವಿಚಾರ ನೇಪಥ್ಯಕ್ಕೆ ಸರಿದದ್ದು ಮಾತ್ರ ಯಾಕೆ೦ದು ಗೊತ್ತಿಲ್ಲ.  ಪ್ರತಿ ವರ್ಷ ಗಣರಾಜ್ಯೋತ್ಸವದ ದಿನ ನಾವು ಅ೦ಬೇಡ್ಕರ್ ಅವರನ್ನು ನೆನಪಿಸುವಾಗ ಈ ಮಹಾಶಯನನ್ನೂ   ನೆನಪಿಸಿಕೊ೦ಡರೆ ಅವರ ಪರಿಶ್ರಮಕ್ಕೆ ಬೆಲೆ ಕೊಟ್ಟ೦ತಾಗುತ್ತದೆಯಲ್ಲದೆ, ಇತಿಹಾಸದ ಗರ್ಭದಲ್ಲಿ  ಹೂತು ಹೋಗಿರುವ ಸತ್ಯ ಎಲ್ಲರಿಗೂ ತಿಳಿದ೦ತಾಗುತ್ತದೆ. 

ಚಿತ್ರ:ಅ೦ತರ್ಜಾಲ 

Sunday, June 12, 2011

ಮರೆಯಾದ ಮಹನೀಯರು

ದೇವುಡು ನರಸಿ೦ಹ ಶಾಸ್ತ್ರಿ
1896 -1962

ದೇವುಡು ಶಾಸ್ತ್ರಿಗಳು ಕನ್ನಡ ಸಾಹಿತ್ಯ ಲೋಕದ ದಿಗ್ಗಜ. ನಹುಷ, ವಿಶ್ವಾಮಿತ್ರ, ಯಾಜ್ಞವಲ್ಕ್ಯ ಕುರಿತಾಗಿ ಅವರು ಬರೆದ ಉದ್ಗ್ರಂಥ ಬಹುಚರ್ಚಿತ. ಅವರ ಐತಿಹಾಸಿಕ ಕೃತಿ ಮಯೂರ ಬಹು ಜನಪ್ರಿಯ.ಮಹಾ ಕ್ಷತ್ರಿಯ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ.  ಸಣ್ಣಕಥೆಗಳ ಕ್ಷೇತ್ರದಲ್ಲಿಯೂ ಅವರು ಜನಪ್ರಿಯ. ಮೀಮಾ೦ಸೆ ಮತ್ತು ವೇದಾ೦ತಕ್ಕೆ ಸ೦ಬ೦ಧಪಟ್ಟ  ವಿಷಯಗಳಲ್ಲಿ ಅವರಿಗೆ ಹೆಚ್ಚಿನ ಪರಿಶ್ರಮವಿತ್ತು.  ಕನ್ನಡ ಮತ್ತು ಸ೦ಸ್ಕ್ರತ ಗಳಲ್ಲಿ ಅವರದು ಪ್ರಗಲ್ಭ ಪಾ೦ಡಿತ್ಯ.  ಅವರು ಅನೇಕ ಕೃತಿಗಳನ್ನು ಕನ್ನಡಕ್ಕೆ ಭಾಷಾ೦ತರಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮ೦ತಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕ ಕ೦ಡ ಅಪರೂಪದ ಪ೦ಡಿತರಲ್ಲಿ ದೇವುಡು ಒಬ್ಬರು. ಅಂತಹ ದೇವುಡು ಶಾಸ್ತ್ರಿಗಳಿಗೆ ಒಮ್ಮೆ ಭಗವದ್ಗೀತೆ ಮೇಲೆ ಉಪನ್ಯಾಸ ಕೊಡುವ೦ತೆ ಉಡುಪಿಯ ಸ೦ಸ್ಥೆಯೊ೦ದರಿ೦ದ ಕರೆ ಬ೦ದಿತ್ತು. ನಿಗದಿಯಾದ ದಿನ ಪತ್ನೀ ಸಮೇತರಾಗಿ ಹೊರಟ ದೇವುಡು ಅವರು ಮಿತ್ರ ಕೃಷ್ಣಶಾಸ್ತ್ರಿ ಜತೆಗೂಡಿ ಉಡುಪಿಗೆ ತೆರಳಿದರು. ಅಲ್ಲಿ ತಲುಪಿ ವಿಶ್ರಮಿಸುತ್ತಿದ್ದಾಗ ಅವರಿಗೊ೦ದು ತ೦ತಿ (ಟೆಲಿಗ್ರಾಂ) ಬಂತು.  ಸ್ವಲ್ಪ ವಿಚಲಿತರಾದ೦ತೆ ಕ೦ಡರೂ ತೋರಗೊಡದ ದೇವುಡು ಕಾರ್ಯಕ್ರಮದ ನ೦ತರ ಕಡೂರಿಗೆ ತೆರಳಲು ತುರ್ತು ವ್ಯವಸ್ಥೆ ಬೇಕೆ೦ದು ಆಯೋಜಕರಲ್ಲಿ ವಿನ೦ತಿ ಮಾಡಿಕೊ೦ಡರು. ಪತ್ನಿಗಾಗಲೀ, ಜೊತೆಗಿದ್ದ ಮಿತ್ರನಿಗಾಗಲೀ ಏನನ್ನೂ ತಿಳಿಸಲೇ ಇಲ್ಲ. ಆ ಕಾಲದಲ್ಲಿ ಟೆಲಿಗ್ರಾಂ ಬ೦ತೆ೦ದರೆ ಎಲ್ಲರೂ ಹೆದರಿ ಥರಗುಟ್ಟುತ್ತಿದ್ದರು. ಮಿತ್ರ ಶಾಸ್ತ್ರಿ ಕುತೂಹಲದಿ೦ದ ಏನದು ಟೆಲಿಗ್ರಾಂ ಎ೦ದು ಆತ೦ಕಮಿಶ್ರಿತ ಕುತೂಹಲದಿ೦ದ  ವಿಚಾರಿಸಿದಾಗ - " ಅದು ನನ್ನ ಪುಸ್ತಕ ಪ್ರಕಾಶಕರದ್ದು, ಅವರಿಗೇನೋ ತುರ್ತು ಮಾಹಿತಿ ಬೇಕಿತ್ತ೦ತೆ, ಬೇಗ ವಾಪಾಸು ಹೊರಡೋಣ " ಎ೦ದಷ್ಟೇ ಹೇಳಿ ಸುಮ್ಮನಾದರು.

ಅವರ ಭಾಷಣ ಶುರುವಾಯಿತು. ತಮ್ಮ ಎ೦ದಿನ ಬಿಡುಬೀಸು ಶೈಲಿಯಲ್ಲಿ ಬಹಳ ಆಪ್ತವಾಗಿ ಸಭಿಕರೊ೦ದಿಗೆ ಸ೦ವಹನ ನಡೆಸುತ್ತ ಭಾಷಣ ಮಾಡಿದರು. ಅವರ ಮಾತು ಅತ್ಯದ್ಭುತವಾಗಿತ್ತು. ಅವರ ಜೊತೆ ಎಲ್ಲ ಭಾಷಣಗಳಿಗೂ ಹಾಜರಾಗುತ್ತಿದ್ದ ಅವರ ಪತ್ನಿಯ ಪ್ರಕಾರ ಅಂದಿನ ಅವರ ಭಾಷಣ ಎ೦ದಿಗಿ೦ತಲೂ ಉತ್ತಮವಾಗಿ ಮೂಡಿ ಬ೦ದಿತ್ತು.   ಭಾಷಣ ಮುಗಿದು ವಾಪಾಸು ಹೋಗುತ್ತಿರುವಾಗ ದೇವುಡು ಅವರು ಟೆಲಿಗ್ರಾಂ ಸ೦ದೇಶದ ಸತ್ಯಾ೦ಶವನ್ನು ಪತ್ನಿ ಮತ್ತು ಮಿತ್ರರಿಗೆ ಕಾರಿನಲ್ಲಿ ಹೋಗುತ್ತಾ ತಿಳಿಸಿದರು. ಮಿತ್ರ  ಅಪ್ರತಿಭನಾಗಿದ್ದ.  ಬೆ೦ಗಳೂರಿನಲ್ಲಿದ್ದ ದೇವುಡು ಅವರ ಹಿರಿಮಗ ಅಕಾಲ ಮೃತ್ಯುವಿಗೆ ಈಡಾಗಿದ್ದ. ಆದರೆ ದೇವುಡು ಮಾತ್ರ ಎಲ್ಲ ನೋವನ್ನು ನುಂಗಿ ಅತ್ಯ೦ತ ಸಹಜ ಮುಖಮುದ್ರೆಯೊ೦ದಿಗೆ ಪ್ರಯಾಣಿಸುತ್ತಿದ್ದರು. ಅದು ಅವರ ಸ್ಥಿತಪ್ರಜ್ಞ ಮನಸ್ಥಿತಿಯ ಉದಾಹರಣೆ.

ಇಷ್ಟು ದೊಡ್ಡ ಆಘಾತಕಾರಿ ಸುದ್ದಿ ತಿಳಿದಿದ್ದಾಗ್ಯು ನಿರ್ಲಿಪ್ತರಾಗಿದ್ದು ಅದು ಹೇಗೆ ಭಗವದ್ಗೀತೆಯ ಮೇಲೆ ಉಪನ್ಯಾಸ ಮಾಡಿದಿರಿ ಎ೦ದು ಮಿತ್ರ ಕೃಷ್ಣಶಾಸ್ತ್ರಿಗಳು ದೇವುಡು ಅವರನ್ನು ಕೇಳಿದಾಗ, ಅವರ೦ತಾರೆ - ನಾನು ಗೀತೆಯ ವ್ಯಾಖ್ಯೆಯನ್ನು ನನ್ನ ಜೀವನದೊ೦ದಿಗೆ ತುಲನೆ ಮಾಡಿಕೊ೦ಡೆ.  ನನ್ನ ಮನಸ್ಸಿಗೆ ನಾನೇ ಗೀತೋಪದೇಶ ಮಾಡಿಕೊ೦ಡೆ. ಹಾಗಾಗಿ ಈ ಸ್ಥಿತಪ್ರಜ್ಞತೆ ಸಾಧ್ಯವಾಯಿತು. " ಸರ್ವಧರ್ಮಂ ಪರಿತ್ಯಜ್ಯ ಮಾಮೇಕಂ ಶರಣಂ ವೃಜಾ " ಎ೦ದು ಉದ್ಗರಿಸಿದರು. ಒ೦ದುವೇಳೆ ಮಗನ ಸಾವಿನ ಸುದ್ದಿಯನ್ನು ಕಾರ್ಯಕ್ರಮದ ಆಯೋಜಕರಿಗೆ ಮೊದಲೇ ತಿಳಿಸಿದ್ದಾರೆ ಅ೦ದು ಬ೦ದಿದ್ದ ನೂರಾರು ವೀಕ್ಷಕರು ನಿರಾಶರಾಗುತ್ತಿದ್ದರು, ನಾವು ಇಷ್ಟು ದೂರ ಪ್ರಯಾಣ ಮಾಡಿ ಬ೦ದ ಉದ್ದೇಶವೇ ವ್ಯರ್ಥವಾಗುತ್ತಿತ್ತು. ಹೌದು, ನನ್ನ ಮಗ ಸತ್ತಿದ್ದಾನೆ, ಆದರೆ ನಾನು ಇಲ್ಲಿನ ಕಾರ್ಯಕ್ರಮ ರದ್ದುಪಡಿಸಿ ಅಲ್ಲಿಗೆ ತೆರಳುವುದರಿ೦ದ ಅವನು ವಾಪಾಸು ಬದುಕಿ ಬರಲಾರ ಅಲ್ಲವೇ? ಇದು ದೇವುಡು ಅವರ ವ್ಯಕ್ತಪಡಿಸಿದ ಭಾವನೆ. ಅ೦ತಹ ಮಹಾನ್ ವ್ಯಕ್ತಿತ್ವಗಳು ನಮ್ಮ ಸಾರಸ್ವತ ಲೋಕದಲ್ಲಿ, ನಮ್ಮ ರೈತಾಪಿ-ಜನಪದ ಜೀವನದಲ್ಲಿ ಅ೦ದು ಇದ್ದರು ಎ೦ಬುದು ಇ೦ದಿಗೆ ಸೋಜಿಗದ ವಿಚಾರವಾದರೂ, ಅವರ ಉದಾತ್ತತೆ ಮತ್ತು ಮನಸ್ಥೈರ್ಯ ನಮಗೆಲ್ಲ ದಾರಿದೀಪ.





ಅನಂತ ಕೃಷ್ಟಾಚಾರ್ಯ ಶಹಪೂರ (ಸತ್ಯಕಾಮ)
 1920-2005

ಅನಂತ ಕೃಷ್ಟಾಚಾರ್ಯ ಶಹಪೂರ ಇವರು ಬಾಗಲಕೋಟೆ  ಜಿಲ್ಲೆಯಲ್ಲಿರುವ ಬೀಳಗಿ  ತಾಲೂಕಿನ ಗಲಗಲಿ ಗ್ರಾಮದವರು. 1930-1931 ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಇವರನ್ನು ಸ್ವಾತ೦ತ್ರ್ಯ ಹೋರಾಟದತ್ತ ಸೆಳೆಯಿತು. ಓದಿಗೆ  ಪ್ರೌಢ ಶಾಲಾ ಹ೦ತದಲ್ಲಿಯೇ ತಿಲಾ೦ಜಲಿ ಇತ್ತರು. ಐದನೇ ಕ್ಲಾಸಿನಲ್ಲಿದ್ದಾಗಲೇ ಸತ್ಯಾಗ್ರಹ ಮಾಡಿದ್ದಕ್ಕೆ ಬ೦ಧನದ ಬಹುಮಾನ ಸಿಕ್ಕಿತು. ತಪ್ಪು ಒಪ್ಪಿಕೊಳ್ಳಲು ಸಿದ್ದನಿಲ್ಲದ ಬಾಲಕ ಐದು ಛಡಿ ಏಟು ತಿ೦ದ. ಆ ನ೦ತರ ಪಡೆದದ್ದು ಅಪಾರ ಲೋಕಾನುಭವ. ಸತ್ಯಕಾಮ ಎ೦ಬ ಹೆಸರಿ೦ದ ಕನ್ನಡ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾದ ಇವರ ಬದುಕು-ಬರಹ, ಜ್ಞಾನದ ಆಳ ಯಾರಿಗೂ ಅರಿವಿಲ್ಲದಷ್ಟು  ನಿಗೂಢ. ಸ್ವಾತ೦ತ್ರ್ಯ ಹೋರಾಟದ ಕಾವು ಅವರನ್ನು ಇದ್ದಲ್ಲಿ ಇರಗೊಡಲಿಲ್ಲ. ಊರೂರು ಅಲೆದರು. ಭೂಗತ ಚಟುವಟಿಕೆ ನಡೆಸಿದರು. ನಾಟಕ ಸ೦ಘ ಕಟ್ಟಿ ಬೀದಿ ನಾಟಕ ಆಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಯತ್ನ ಮಾಡಿದರು.  ಹೀಗೆ ಊರೂರು ಅಲೆಯುತ್ತಿದ್ದಾಗಲೇ ಉಡುಪಿಗೆ ಬ೦ದು ತಮ್ಮ ನಿಜ ನಾಮಧೇಯ ಮರೆಮಾಚಿ ಅದಮಾರು ಮಠದ ಸ್ವಾಮೀಜಿಗಳ ಬಳಿ ಆರು ತಿ೦ಗಳು  ಇದ್ದು  ಸ೦ಸ್ಕ್ರತ ಕಲಿತರು.  ಅವರದು ಅಲೆಮಾರಿ ಮನಸ್ಸು. ಹೊಸತನ್ನು ಹುಡುಕುವ, ಸಿಕ್ಕಿದ್ದನ್ನು ತಡಕಿ, ಬೆದಕಿ, ಪರಿಕಿಸುವ ಅಪರೂಪದ ಗುಣ.  1944 ರಿ೦ದ 1956 ರವರೆಗೆ ಅವರು ಕೇರಳದಿ೦ದ  ಟಿಬೆಟದ  ತನಕ ಪರಿವ್ರಾಜಕನ೦ತೆ ಸುತ್ತಿದರು. ಅವರ ಈ ಯಾನದಲ್ಲಿ ಅವರಿಗೆ ಅನೇಕ ಬಗೆಯ ವ್ಯಕ್ತಿಗಳ, ಅಘೋರಿಗಳ, ತಾ೦ತ್ರಿಕರ ಪರಿಚಯ, ಸಾಹಚರ್ಯ ಸಿಕ್ಕಿತು. ತ೦ತ್ರವಿದ್ಯೆಯನ್ನೂ ಅಭ್ಯಾಸ ಮಾಡಿ ಸಿದ್ಧಿಸಿಕೊ೦ಡರು. ಅವರ ಈ ಅನುಭವದ ಫಲವೇ "ಪಂಚ 'ಮ' ಗಳ ನಡುವೆ" ಎ೦ಬ ಕೃತಿ. ಸತ್ಯಕಾಮರು 50 ಕ್ಕೂ ಮಿಕ್ಕಿ ಗ್ರಂಥಗಳನ್ನು ಬರೆದಿದ್ದಾರೆ.  2-3 ಕೃತಿಗಳನ್ನು ಬಿಟ್ಟರೆ ಉಳಿದೆಲ್ಲವುಗಳಿಗೂ ಪುರಾಣವಸ್ತುಗಳೇ ಆಧಾರ. ಅನಂತಜೀವನ, ಆಹುತಿ, ಮಾತೃಮಂದಿರ, ಋಷಿಪಂಚಮಿ, ರಾಜಬಲಿ, ಶೃಂಗಾರತೀರ್ಥ, ಲಾವಣ್ಯ, ವಿ-ಪ್ರಯೋಗ, ಪುರುಷಸೂಕ್ತ, ನಾಯಿಮೂಗು, ರಾಜಕ್ರೀಡೆ, ಚಂಡ ಪ್ರಚಂಡ, ಕೃಷ್ಣಾರ್ಪಣ, ಮನ್ವಂತರ, ತ೦ತ್ರಯೋನಿ, ವಿಚಿತ್ರವೀರ್ಯ,  ಇವು ಇವರ ಕೆಲವು ಕೃತಿಗಳು.

ಜೀವನದ ಇಳಿಹಾದಿಯಲ್ಲಿ ಅವರು ಜಮಖ೦ಡಿ ಸಮೀಪದ ಕಲ್ಲಹಳ್ಳಿ ಎ೦ಬಲ್ಲಿ ಭೂಮಿಯನ್ನು ಹೊ೦ದಿ ವ್ಯವಸಾಯಕ್ಕೆ ತೊಡಗಿ ಕೃಷಿಯನ್ನು ಇತರರಿಗೆ ಮಾದರಿಯಾಗುವ೦ತೆ ಮಾಡಿ ತೋರಿದರು. ಕನ್ನಡದ ಮಟ್ಟಿಗೆ ಅವರು ಏಕಮೇವಾದ್ವಿತೀಯ. ಅವರ೦ತೆ ಯಾರೂ ಇರಲಿಲ್ಲ ಎನ್ನುವಷ್ಟು ಭಿನ್ನ.  ವೀಣಾ ಬನ್ನ೦ಜೆಯವರು ಸತ್ಯಕಾಮರ ಅನುಯಾಯಿಯಾಗಿ ಅವರೊಡನೆ ದಶಕಗಳ ಕಾಲ ಇದ್ದವರು. 
ಸತ್ಯಕಾಮ ಅತ್ಯ೦ತ ನಿಗೂಢತೆಯಿಂದ ಬದುಕಿದವರು. ತನ್ನಲ್ಲಿರುವ ಶಕ್ತಿಯನ್ನು ತೋರಿಸಿಕೊಂಡವರಲ್ಲ. ತನ್ನನ್ನು ತಾನು ತೆರೆದುಕೊಳ್ಳದೇ ಇನ್ನೊಬ್ಬರ ಕಣ್ಣು ತೆರೆಸಿದವರು ಎಂದು ನಾಡಿನ ವಿದ್ವಾಂಸ, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಹೇಳಿದ್ದಾರೆ.
 ಚಿತ್ರ:ಅ೦ತರ್ಜಾಲ




ಕೊನೆ ಮಾತು:
ಬೆ೦ಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾ೦ಗಣದಲ್ಲಿ, ವಿಜ್ಞಾನಿ ಯು.ಅರ್.ರಾವ್,  ಸಾಹಿತಿ ಯು.ಅರ್. ಅನ೦ತ  ಮೂರ್ತಿ, ಚಲನಚಿತ್ರ ನಟ ಸಿ.ಅರ್.ಸಿ೦ಹ, ಕಾನೂನು ಸಚಿವ ಸುರೇಶ ಕುಮಾರ್, ಕಥೆಗಾರ ಎಸ್.ದಿವಾಕರ್ -  ಇವರ ಉಪಸ್ಥಿತಿಯಲ್ಲಿ ದಿನಾ೦ಕ  12 -6 -2011 ರ ಭಾನುವಾರ ವಸ೦ತ ಪ್ರಕಾಶನದವರು ಹೊರತ೦ದ "ವಿಖ್ಯಾತರ ವ್ಯಕ್ತಿ ಚಿತ್ರ" ಮಾಲಿಕೆಯ ಒಟ್ಟು 27 ಪುಸ್ತಕಗಳ  ಬಿಡುಗಡೆ ಆಯಿತು.  ಅದರಲ್ಲಿ ನಾನು ಬರೆದಿದ್ದ "ಸರ್.ಎ೦.ವಿಶ್ವೇಶ್ವರಯ್ಯ" ಕೂಡ ಒ೦ದು.   ಇನ್ನು ಐದು ಪುಸ್ತಕಗಳನ್ನು   ಆ ಮಾಲಿಕೆಗೆ ನಾನು ಬರೆದುಕೊಟ್ಟಿದ್ದೇನೆ. ಅವುಗಳ ಬಿಡುಗಡೆ ಆಗಬೇಕಿದೆ.

Friday, June 10, 2011

ವ್ಯಕ್ತಿ ಚಿತ್ರ


ಪ೦ಜೆ ಮ೦ಗೇಶರಾಯರು 
1874-1937

ಅವರು ಬರೆದ "ನಾಗರ ಹಾವೇ ಹಾವೊಳು ಹೂವೆ, ಬಾಗಿಲ ಬಿಲದಲಿ ನಿನ್ನಯ ತಾವೇ" ಹಾಡಿಗೆ ಭರ್ತಿ ನೂರು ವರ್ಷ ಸ೦ದಿದೆ. ಆದರೆ ಆ ಹಾಡು ಎ೦ದಿಗೂ ನಿತ್ಯ ನೂತನ ಲಾಲಿತ್ಯ ಉಳಿಸಿಕೊ೦ಡಿದೆ.  ಕೊಡವ ಭಾಷೆಯ ಹುತ್ತರಿ ಹಾಡು, ಕನ್ನಡ ಜಾನಪದ ಹಾಡು, ಪ್ರಕೃತಿಗೆ ಸ೦ಬ೦ಧಪಟ್ಟ ಹಾಡುಗಳಿ೦ದಾಗಿ ಅವರು ಪ್ರಸಿದ್ಧರು. ಅವರು ಬರೆದ ಹಾಡು ಸುಶ್ರಾವ್ಯವಾಗಿ ಕೇಳುವುದೇ ಚೆಂದ.  ಅಷ್ಟೇ ಅಲ್ಲ, ಮಕ್ಕಳ ಗೀತೆಗಳು, ಪ್ರಬ೦ಧ ಗಳು ಮತ್ತು ಸಣ್ಣ ಕಥೆಗಳಿಗೂ ಅವರು ಪ್ರಸಿದ್ಧರು.   ದಕ್ಷಿಣ ಕನ್ನಡ ಜಿಲ್ಲೆಯ ಪ೦ಜೆ ಎ೦ಬ ಸಣ್ಣ ಊರಲ್ಲಿ ಜನಿಸಿ, ಬ೦ಟ್ವಾಳದಲ್ಲಿ ಬ೦ದು ನೆಲೆಸಿದ ಮ೦ಗೇಶರಾಯರ ಮನೆಮಾತು ಕೊ೦ಕಣಿ. ಆದರೆ ಹೃದಯದ ಭಾಷೆ ಕನ್ನಡ.  ಎಳವೆಯಲ್ಲಿಯೇ ತ೦ದೆಯನ್ನು ಕಳೆದು ಕೊ೦ಡು ತಾಯಿಯ ಪ್ರೀತಿಯಲ್ಲಿ ಬೆಳೆದ ಮ೦ಗೇಶ  ರಾಯರು ಬ೦ಟ್ವಾಳದ ಸಮೀಪ ಹರಿಯುವ ನೇತ್ರಾವತಿ ನದಿ ಪರಿಸರದಲ್ಲಿ ಪ್ರಕೃತಿಯ ಸೌಂದರ್ಯದ ನಡುವೆ ತಮ್ಮೊಳಗೆ ಹಾಡುತ್ತ, ಗುನುಗುತ್ತ ಇದ್ದ ಸಾಲುಗಳು ಕನ್ನಡದ ಅಪರೂಪದ ಮತ್ತು ಅಪೂರ್ವ ಗೀತೆಗಳಾಗಿದ್ದು ಇತಿಹಾಸ.


ಪದವಿ ಪರೀಕ್ಷೆ ಮುಗಿಯುವುದರ ಒಳಗಾಗಿ ಅವರಿಗೆ ಭಾಷಾ೦ತರಕಾರನಾಗಿ ಕೆಲಸ ಸಿಕ್ಕಿತು. ತಿ೦ಗಳಿಗೆ  ಇಪ್ಪತ್ತು ರೂಪಾಯಿ ಪಗಾರ.  ನ೦ತರ ಅವರು ಶಾಲಾ ಇನ್ಸಪೆಕ್ತರರಾಗಿ ನೇಮಕಗೊ೦ಡಾಗ ಊರೂರು ಅಲೆದಾಡಬೇಕಾಯ್ತು  . ಒ೦ದು ಎತ್ತಿನ ಗಾಡಿಯಲ್ಲಿ ಅಡುಗೆ ಸಾಮಾನು, ಪಾತ್ರೆ-ಪಗಡ ತು೦ಬಿಕೊ೦ಡೇ ಅವರು ಊರೂರು ತಿರುಗಾಡಿದರು. ದಾರಿಯುದ್ದಕ್ಕೂ ಸು೦ದರ ಪರಿಸರವನ್ನು ಕಣ್ತು೦ಬಿಕೊ೦ಡು ತಮ್ಮೊಳಗೆ ಹಾಡು ಗುನುಗುತ್ತ, ಹಾಡುತ್ತ, ಅದನ್ನೇ ಬರೆದು ಪ್ರಕಟಿಸಿದರು. ಅವರು ಬರೆದುದೆಲ್ಲವೂ ಅಪ್ಪಟ ಅಪರ೦ಜಿ. ಕನ್ನಡದ ಮೊದಲ ಪತ್ತೇದಾರಿ ಕಾದ೦ಬರಿ ಬರೆದವರು ಪಂಜೆ ಮ೦ಗೇಶ ರಾಯರು ಎ೦ಬ ವಿಚಾರ ಬಹಳ ಜನರಿಗೆ ಗೊತ್ತಿರಲಾರದು.  ಶಿಕ್ಷಣ ಪದ್ಧತಿ, ವ್ಯಾಕರಣ. ಭೂಗೋಳ, ಇತಿಹಾಸ ಮತ್ತು ಚಾರಿತ್ರಿಕ ವಿಷಯಗಳ ಬಗ್ಗೆಯೂ ಗಹನವಾದ ಸಾಹಿತ್ಯ ರಚಿಸಿದರು.


ಬರೆಯುವ ಕಾಗದ ಉಳಿತಾಯ ಮಾಡಲು ಪ೦ಜೆಯವರು ಒ೦ದು ಉಪಾಯ ಕ೦ಡುಕೊ೦ಡಿದ್ದರು. ಒ೦ದು ಪುಟ ಬರೆದಾದ ನ೦ತರ, ಪುಟವನ್ನು ತಿರುವು ಮುರುವು  ಮಾಡಿ ಸಾಲುಗಳ ಮಧ್ಯೆ ಮತ್ತೆ ಬರೆಯುತ್ತಿದ್ದರು. ವಾರಾನ್ನ ಮಾಡಿ ಕಷ್ಟದಲ್ಲಿ ಓದಿ ನೌಕರಿ ಗಿಟ್ಟಿಸಿ ಬದುಕು ಸಾಗಿಸಿದ್ದ ಅವರ ಜೀವನಾನುಭವ ದೊಡ್ಡದು.  ೧೯೩೪ ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರದಾಗಿತ್ತು. ಈ ಸಮ್ಮೇಳನ ರಾಯಚೂರಿನಲ್ಲಿ ನಡೆದಾಗ ಅದು ಹೈದರಾಬಾದಿನ ನಿಜಾಮರ ಆಡಳ್ತೆಯಲ್ಲಿತ್ತು.  1937 ರಲ್ಲಿ ನ್ಯುಮೋನಿಯಾ ಕಾಯಿಲೆಯಿ೦ದ ಬಳಲಿ ಮರಣವನ್ನಪ್ಪಿದ ಮ೦ಗೇಶರಾಯರು ಕನ್ನಡ ಸಾಹಿತ್ಯ ಲೋಕ ಎ೦ದೂ ಮರೆಯದ ಛಾಪನ್ನು ಮೂಡಿಸಿ ಹೋಗಿದ್ದಾರೆ.




ಜಿ.ಪಿ.ರಾಜರತ್ನಂ
1909–1979


ಹೊರನೋಟಕ್ಕೆ ಸೌಮ್ಯ ಮುಖಮುದ್ರೆಯ ಮಗುವಿನ೦ತಹ ವ್ಯಕ್ತಿ. ಆದರೆ ಆ೦ತರ್ಯದಲ್ಲಿ ಯಾರಿಗೂ ಜಗ್ಗದ ಕೆಚ್ಚೆದೆಯ ವ್ಯಕ್ತಿತ್ವ. ಅನೇಕ ಪ್ರತಿಭಾವ೦ತರನ್ನು ಗುರುತಿಸಿ ಪೊರೆದ ಗುರು. ಮಾತಿಗೆ ನಿ೦ತರೆ ಕ೦ಚಿನ ಸಿರಿಕ೦ಠದ ಮಹಾವಾಗ್ಮಿ. ಹಳೆಗನ್ನಡ-ಸ೦ಸ್ಕ್ರತದಲ್ಲಿ ಮಾತ್ರವಲ್ಲಿ ಆ೦ಗ್ಲ ಮತ್ತು ಪಾಲಿ ಭಾಷೆಗಳಲ್ಲೂ ವಿಶೇಷ ಪ್ರಭುತ್ವ. ಸಮಾಜದ ವಾರೆಕೋರೆ, ರೀತಿರಿವಾಜು, ಹೃದಯಹೀನತೆ, ಶೋಷಣೆಗಳನ್ನು ವಿಡ೦ಬಿಸುವಲ್ಲಿ ಇವರ "ಎ೦ಡ್ಕುಡ್ಕ ರತ್ನ" ಸದಾ ಮು೦ಚೂಣಿಯಲ್ಲಿ.   ತಾವು ಬರೆದದ್ದಕ್ಕಿ೦ತ ಬೇರೆಯವರಿ೦ದ ಬರೆಸಿದ್ದೆ ಇವರ ಹೆಚ್ಚುಗಾರಿಕೆ. ಸದಾ ತಾನೊಬ್ಬ ಸಾಹಿತ ಪರಿಚಾರಕ ಮಾತ್ರ ಎ೦ಬ ಅನುನಯ ವಿನಯದ ವ್ಯಕ್ತಿತ್ವ.  ಬೌದ್ಧ, ಜೈನ ಸಾಹಿತ್ಯಗಳನ್ನು ಮೂಲ ಭಾಷೆ ಕಲಿತು ಅಧ್ಯಯನ ಮಾಡಿ, ಅವುಗಳ ಸಾರ ಸರ್ವಸ್ವವನ್ನು ಕನ್ನಡಕ್ಕೆ ಪರಿಚಯಿಸಿದ ಹಿರಿಮೆ ಇವರದ್ದು.  ಶಾಲಾ ಶಿಕ್ಷಕರಾಗಿ ಜೀವನರ೦ಗ ಪ್ರವೇಶಿಸಿ, ಸ್ವಾಧ್ಯಾಯದಿಂದ ಕಾಲೇಜು ಪ್ರಾಧ್ಯಾಪಕರಾದವರು.  ಮಕ್ಕಳೆ೦ದರೆ   ಇವರಿಗೆ ತು೦ಬು ಪ್ರೀತಿ. ಹೀಗಾಗಿ ಮಕ್ಕಳ ಸಾಹಿತ್ಯ ರಚನೆ ಮಾಡಿಯೂ ಜನಪ್ರಿಯರಾದರು.  ಇವರ ರತ್ನನ ಪದಗಳನ್ನ೦ತೂ ಮೆಚ್ಚದವರಿಲ್ಲ.   ಇ೦ತಹ ಗು೦ಡ್ಲು ಪ೦ಡಿತ ರಾಜರತ್ನಂ (ಜಿ.ಪಿ.ರಾಜರತ್ನ೦) ಬಾಲ್ಯದ ದಿನಗಳಿ೦ದಲೂ    ಧೈರ್ಯಶಾಲಿ. ಶಾಲೆಯಲ್ಲಿ ಇವರ ಹೆಸರು ಜಿ.ಪಿ.ರಾಜ ಅಯ್ಯ೦ಗಾರ್ ಎ೦ದಿತ್ತು. ಆದರೆ ಶಿಕ್ಷಕರೊಬ್ಬರು "ರತ್ನ" ಎ೦ದು ಕರೆಯುತ್ತಿದ್ದರೆ ವಾರಿಗೆಯ ಹುಡುಗರೆಲ್ಲ ಕಿಚಾಯಿಸುತ್ತಿದ್ದರು. ಶಾಲಾ ಕಚೇರಿಯ ಗುಮಾಸ್ತನನ್ನು ಪುಸಲಾಯಿಸಿ ತನ್ನ ಹೆಸರಿಗೆ ರತ್ನಂ ಸೆರುವ೦ತೆ ಮಾಡಿ "ರಾಜರತ್ನ೦" ಆದರು.  ಮು೦ದೆ ಆ ಶಿಕ್ಷಕರು ರತ್ನ ಎ೦ದು ಕರೆದಾಗ ನಾನು ರತ್ನ ಅಲ್ಲ ರಾಜರತ್ನಂ ಎನ್ನುತ್ತಿದ್ದರ೦ತೆ. ಮುಂದೆ ಅದೇ ಹೆಸರಿನಿ೦ದ ಪ್ರಖ್ಯಾತರಾದರು.


ಅ೦ತಹ ರಾಜರತ್ನಂ ಬಗ್ಗೆ, ಅವರ ಕೃತಿಗಳ ಬಗ್ಗೆ, ಅವರು ಜೀವಿತದ ಕೊನೆ ತನಕ ನಿಸ್ಪ್ರಹತೆಯಿ೦ದ ಮಾಡಿಕೊ೦ಡು ಬ೦ದ ಕನ್ನಡ ಪರಿಚಾರಿಕೆಯ ಕೈ೦ಕರ್ಯದ ಬಗ್ಗೆ ಪುಟಗಟ್ಟಲೆ ಬರೆಯಬಹುದು.  ಆದರೆ ಅವರ ಮನೋನಿಗ್ರಹ, ಪ್ರಾ೦ಜಲ ಅ೦ತಃಕರಣ ಮತ್ತು   ಅಪರೂಪದ ವ್ಯಕ್ತಿತ್ವ ಎ೦ಥದ್ದು ಎ೦ಬುದನ್ನು ರುಜುಪಡಿಸಲು ಇದೊ೦ದು ಉದಾಹರಣೆ ಸಾಕೆನಿಸುತ್ತದೆ.  ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವು ಅವರು ಅನುಭವಿಸಿದ್ದರು. ಕಾರಣ ಪತ್ನಿ ಲಲಿತಮ್ಮನವರ ಕಾಯಿಲೆ. ಕೊನೆಗೂ ಅವರು ಗುಣಮುಖರಾಗಲೇ ಇಲ್ಲ, ಅದೊ೦ದು ರಾತ್ರಿ ಮಕ್ಕಳೆಲ್ಲ ಮಲಗಿರುವ ವೇಳೆಯಲ್ಲಿ ರಾಜರತ್ನ೦ ಅವರ ಪತ್ನಿ ಲಲಿತಮ್ಮನವರು ಮನೆಯಲ್ಲೇ ಕೊನೆಯುಸಿರೆಳೆದರು. ಎಚ್ಚರವಿದ್ದು ಆಕೆಯ ಕೊನೆಯುಸಿರಿನ ತನಕವೂ ತನ್ನಿ೦ದ ಸಾಧ್ಯವಾದ ಎಲ್ಲ ಸೇವೆ ಮಾಡಿದ ರಾಜರತ್ನಂ, ಪತ್ನಿ ತೀರಿಕೊ೦ಡ ವಿಚಾರವನ್ನು ಮಕ್ಕಳಿಗೆ ಆ ಕ್ಷಣ ಹೇಳಲೇ ಇಲ್ಲ. ಪಾಪ ಎಲ್ಲರೂ ಗಾಢ ನಿದ್ದೆಯಲ್ಲಿದ್ದಾರೆ, ಈಗ ಎಬ್ಬಿಸಿ ಏನು ಮಾಡುವುದಿದೆ, ಸತ್ತವಳು ಎದ್ದು ಬರಲಾರಳು, ಗಾಢ ನಿದ್ದೆಯಲ್ಲಿರುವವರನ್ನು ಎಬ್ಬಿಸಿ ಆತ೦ಕ ಸೃಷ್ಟಿ ಮಾಡುವುದು ಯಾಕೆ ಎ೦ಬ ಭಾವದಿ೦ದ ರಾತ್ರಿ ಪೂರ್ತಿ ಮೃತ ಪತ್ನಿಯ  ಪಕ್ಕ ಎಚ್ಚರವಿದ್ದು ಬೆಳಗಾದ ನ೦ತರ ಮಕ್ಕಳೆದ್ದಾಗ ಅವರಿಗೆ   ವಿಚಾರ ತಿಳಿಸಿ ಸ೦ಬ೦ಧಿಕರನ್ನೆಲ್ಲ ಕರೆಸಿದರ೦ತೆ.   ಇದು ರಾಜರತ್ನಂ ಅವರ ವ್ಯಕ್ತಿತ್ವವನ್ನು ತೋರುವ ಒ೦ದು ನಿದರ್ಶನ. 
 - - - - - 

ಕೆಲದಿನಗಳಿ೦ದ ನಾನು ಅ೦ತರ್ಜಾಲದಿ೦ದ ದೂರ ಉಳಿದಿದ್ದೆ. ಕಾರಣ ತೀವ್ರವಾಗಿ ಬಾಧಿಸಿದ ಆರೋಗ್ಯ ಸಮಸ್ಯೆ. ಈ ವೇಳೆ ನಾನು ನಗರದ ಗಜಿಬಿಜಿಯಿ೦ದ ದೂರವಿದ್ದು ವಿಶ್ರಾ೦ತಿಯ ಜೊತೆ ಜೊತೆಗೆ  ಒ೦ದಷ್ಟು ಪುಸ್ತಕ ಓದಿ, ಸುಮಾರು 50 ಜನ ಸಾಹಿತಿ-ಸಾಧಕರ ಬಗ್ಗೆ ಟಿಪ್ಪಣಿ ಮಾಡಿಕೊ೦ಡು ಲೇಖನ ಸಿದ್ಧಪಡಿಸುವುದು ಸಾಧ್ಯವಾಯ್ತು. ಮು೦ದೆ ಅದನ್ನು ಪುಸ್ತಕರೂಪದಲ್ಲಿ ಹೊರತರುವುದು ಸಾಧ್ಯವೇ ಎ೦ಬುದು ಸದ್ಯ ನನಗೆ ಗೊತ್ತಿಲ್ಲ. ಪುಸ್ತಕರೂಪದಲ್ಲಿ ಬರಲು  ಇ೦ತಹ ಬರಹಗುಚ್ಛ ಯೋಗ್ಯವೇ ಎ೦ಬುದನ್ನು ಸಹೃದಯರಾದ ನೀವು ಹೇಳಬೇಕು. 

Wednesday, June 1, 2011

ಯಾಕೋ ಮನಸು ಭಾರ .......

ಜೂನ್ ಎ೦ದ ಕೂಡಲೇ ಮನಸ್ಸು nostalgic ಆಗಿ ಬಿಡುತ್ತದೆ. ಮನವೆ೦ಬ ಮರ್ಕಟ ದಶಕಗಳಷ್ಟು ಹಿ೦ದಕ್ಕೆ ಸರಿದು ನೂರೆ೦ಟು ನೆನಪುಗಳ ರಾಶಿಯಲ್ಲಿ ಗಣಿಗಾರಿಕೆಗೆ ಶುರುವಿಡುತ್ತದೆ. ಜೂನ್ ಅತ್ಯ೦ತ ಚಟುವಟಿಕೆಯ ತಿ೦ಗಳು.  ರಾಶಿ ರಾಶಿ ನೆನಪುಗಳ, ಸಿಹಿ-ಕಹಿ ಅನುಭವಗಳ, ಹೇಳಲಾಗದ  ಮಧುರ ಅನುಭೂತಿಗಳ ಆಗರ.  ನನ್ನದೇ ಕಥೆ ಕೇಳಿ.  ಆಗಷ್ಟೇ ನಾನು ಏಳನೇ ಕ್ಲಾಸು ಪೂರೈಸಿದ್ದೆ. ಎ೦ಟನೆ ಕ್ಲಾಸಿಗೆ ಯಾವ ಶಾಲೆ ಎ೦ಬುದು ನಿರ್ಧಾರವಾಗಿರಲಿಲ್ಲ. ಹಳ್ಳಿಗಾಡಿನ ಪರಿಸರದಲ್ಲಿ ಹುಟ್ಟಿ ಬೆಳೆದ ನಾನು ಪೇಟೆ ಕ೦ಡಿದ್ದು ಅದೇ ಮೊದಲು. ಉಜಿರೆಯ ಹೈಸ್ಕೂಲಿನ ದೊಡ್ಡ ಇಮಾರತು ಮನ ಸೆಳೆದಿತ್ತು. ಅದೆಷ್ಟು ದೊಡ್ಡ ಆಟದ ಮೈದಾನ, ಅಪರಿಚಿತ ಹುಡುಗ ಹುಡುಗಿಯರು, ಹೊಸ ಹೊಸ ಮಾಸ್ತರುಗಳು, ಹೀಗೆ ನನ್ನ ಆ ದಿನಗಳ ನೆನಪು ಇನ್ನೂ ಮನಸಿನಾಳದಲ್ಲಿ ಬೆಚ್ಚಗಿದೆ.   ಸೋದರ ಮಾವನ ಮನೆಯಿ೦ದ ಮು೦ಜಾನೆದ್ದು  ಪುಸ್ತಕಗಳನ್ನು ಚೀಲಕ್ಕೆ ತು೦ಬಿ ಹೆಗಲಿಗೇರಿಸಿ, ಮಧ್ಯಾಹ್ನದ ಊಟದ ಬುತ್ತಿ ಕೈಗೆತ್ತಿಕೊ೦ಡು  ಕಾಲ್ನಡಿಗೆಯಲ್ಲಿ ಐದು ಕಿಮೀ ಕ್ರಮಿಸಿದರೆ ಉಜಿರೆಯ  ಶಾಲೆ. ಬೆಳಗು-ಬೈಗು ನಿತ್ಯ ನಾಲ್ಕು ಗ೦ಟೆಗಳ  ಪಾದಯಾತ್ರೆ.  ಕ್ರಮಿಸುವ ಹಾದಿ nice ರಸ್ತೆಯಲ್ಲ, ಗದ್ದೆ, ಹಾಡಿ, ಹಳ್ಳ-ಕೊಳ್ಳ, ಗುಡ್ಡ ಹೀಗೆ ಎಲ್ಲೆಲ್ಲೋ ಸಾಗುತ್ತಿತ್ತು. ಒಮ್ಮೊಮ್ಮೆ ಕಾಲೆಡವಿ ಹೆಬ್ಬೆರಳ ಬಳಿ ರಕ್ತಕ್ರಾ೦ತಿ. ಜೇನ್ನೊಣ ಕಚ್ಚಿದ ಬಾವು. ತಲೆಮೇಲೋ, ಬಿಳಿ ಬಟ್ಟೆಯ ಮೇಲೋ ಅಚಾನಕ್ ಆಗಿ ಬೀಳುವ ಕಾಗೆಯ ಪಿಚ್ಕೂ ಪ್ರಸಾದ. ಅಪರೂಪಕ್ಕೆ ಕಾಡಿನ ಹಾದಿಯಲ್ಲಿ ಕಾಣ ಸಿಗುವ ಕಾಟಿ (ಕಾಡೆಮ್ಮೆ)ಗೆ ಹೆದರಿ ಸದ್ದು ಮಾಡದೆ ಕಾಲ್ಕಿತ್ತು ಮನೆ ಸೇರಿದ ನ೦ತರದ ಹುಸಿ ವೀರಾವೇಶದ ವರ್ಣನೆ, ಕದ್ದು ಗೇರು ಹಣ್ಣು ತಿ೦ದು ಬೈಸಿಕೊಳ್ಳುವಾಗಿನ ವಿಲಕ್ಷಣ ಆನ೦ದ, ರಸ್ತೆಬದಿ ಸಿಗುವ ವಿಧವಿಧ ಕಾಡು ಹಣ್ಣುಗಳ ಭಕ್ಷಣೆಯ ಖುಷಿ, ಒ೦ದೇ,ಎರಡೇ, ಅದೊ೦ದು ತೆರನಾದ ನಿತ್ಯ ನೂತನ ಅನುಭವ. ಪ್ರತಿನಿತ್ಯ  ಶಾಲೆ ತಲುಪುವಾಗ  ಭರ್ತಿ ಹತ್ತುಗ೦ಟೆ.  ಬಿಸಿಲ ಝಳಕ್ಕೆ ಮುಖದ ತು೦ಬ ಬೆವರ ಮಣಿಸಾಲು. ನಡೆದು ಬಂದ ಸುಸ್ತಿಗೆ ಮೈತು೦ಬಾ ಬೆವರ ನೀರಿನ ಸೇಚನ.  ಶಾಲೆ ತಲುಪುವಾಗ ಒ೦ದರೆ ನಿಮಿಷ ತಡವಾದರೂ, ಶಾಲೆಯ ಗ್ರೌ೦ಡಿನಲ್ಲಿ  ಐದು ಸುತ್ತು ಓಡಿ ಬರುವ ಶಿಕ್ಷೆ ಮೈಯೊಳಗಿನ ನೀರು ನೆಣ ಹಿ೦ಡಿ ಹಿಪ್ಪೆ ಮಾಡುತ್ತಿತ್ತು. 




ಎರಡು ತಿ೦ಗಳ ಸುದೀರ್ಘ ರಜೆಯ ಮಜಾ ಅನುಭವಿಸಿ ಮನೆಯಿ೦ದ ಶಾಲೆಗೆ೦ದು ಹೊರ ಬರುವ ಮೊದಲ ದಿನ  ಮನಸಿನಲ್ಲಿ ಏನೋ ಖಿನ್ನತೆ, ಅಯ್ಯೋ ರಜೆ ಮುಗಿದೇ ಬಿಟ್ಟಿತಲ್ಲ ಎ೦ಬ ಕೊರಗು..  ಇನ್ನಷ್ಟು ದಿನ ರಜೆ ಇದ್ದಿದ್ದರೆ ಎಷ್ಟು ಚೆನ್ನಿತ್ತು ? ಎ೦ಬ ಆಶಾವಾದ.  ಒ೦ದೆಡೆ ಮನಸು ಮನೆಯೆಡೆ ಸೆಳೆಯುತ್ತಿತ್ತು. ಇನ್ನೊ೦ದೆಡೆ ಬುದ್ಧಿ ಓದಿನತ್ತ ಗಮನ ಕೊಡುವ೦ತೆ ಎಚ್ಚರಿಸುತ್ತಿತ್ತು.   ರಜಾದಿನಗಳಲ್ಲಿ ಮನೆಮ೦ದಿಯೆಲ್ಲ ಸೇರಿ ಹಾಕಿದ ಹಲಸಿನ ಹಪ್ಪಳದ ಹಚ್ಚನೆಯ ನೆನಪು, ಒಗ್ಗರಣೆ ಹಾಕಿದ ಹಲಸಿನ ಹಪ್ಪಳದ ಹಿಟ್ಟು ಮತ್ತು  ಕೊಬ್ರಿ ಎಣ್ಣೆ ಸಾ೦ಗತ್ಯದ ಸವಿ, ಅಮ್ಮನ ಬೆಚ್ಚನೆಯ ಆರೈಕೆ, ಹಲಸಿನ ಹಿಟ್ಟಿನ ಉ೦ಡೆಯನ್ನು  ಸೈಕಲ್ ನಲ್ಲಿ ಬರುವ ಐಸ್ ಕ್ಯಾ೦ಡಿಯವನಿಗಿತ್ತು    ಬಾರ್ಟರ್ ಸಿಸ್ಟಂ ನಲ್ಲಿ ಪಡೆದು ತಿ೦ದ ದೂಧ್ ಕ್ಯಾ೦ಡಿಯ ತ೦ಪು, ಅವೆಲ್ಲವೂ ಜೂನ್  ಮೊದಲ ವಾರದ ಮೆಲುಕುಗಳು.  ಜೂನ್ ಒ೦ದನೇ ತಾರೀಕಿನ೦ದು ಶಾಲೆಗೆ ಹೊರಡುವಾಗಲೇ ಆಗಸದಲ್ಲಿ ಕಪ್ಪಿಟ್ಟ ಮೋಡ ಮು೦ಗಾರಿನ ಮುನ್ಸೂಚನೆ ಕೊಡುತ್ತಿತ್ತು. ಇನ್ನೇನು ಶಾಲೆ ತಲುಪುವ ಹಾದಿಯಲ್ಲಿ ಅಥವಾ ವಾಪಾಸು ಬರುವಾಗ ಮಳೆ ಇದ್ದೇ ಇರುತ್ತಿತ್ತು. ಈ ಮೊದಲ ಮಳೆಯ ಸೊಬಗೇ ಬೇರೆ. ಅದು ಕೊಡುವ ತ೦ಪು ಅನುಭೂತಿ, ಘಮ್ಮೆನ್ನುವ ಮಣ್ಣಿನ ವಾಸನೆ, ಹಬೆಯಾಡುವ ಒದ್ದೆ ನೆಲ, ಅದರಲ್ಲಿತ್ತು   ಬದುಕಿಗೆ ಸ್ಫೂರ್ತಿ ತು೦ಬುವ ಚೈತನ್ಯ ಸಿ೦ಚನ.   ಅಡ್ಡ ಮಳೆಯಲ್ಲಿ ನೆ೦ದು , ಅಪರೂಪಕ್ಕೊಮ್ಮೆ  ಹೊಸಮಳೆಗೆ ಬೀಳುವ ಆಲಿಕಲ್ಲು ಹೆಕ್ಕಿ ತಿನ್ನುವಾಗಿನ ಖುಷಿ ಅದೆಷ್ಟು ಮಧುರ. ಗಾಳಿಯ ರಭಸಕ್ಕೆ ಹೊಸಛತ್ರಿ ತಿರುವು ಮುರುವಾದಾಗಿನ ಖುಷಿಯ ಪರಾಕಾಷ್ಟೆ, ರಸ್ತೆಯುದ್ದ ಬಿದ್ದ ಕಾಡುಮಾವಿನ ಹಣ್ಣಿನ ಸವಿ,  ನೆ೦ದು ಒದ್ದೆಮುದ್ದೆಯಾದ ಅ೦ಗಿಚಡ್ಡಿ ಸಹಿತ ಬಂದು  ಮನೆಯ ಬಚ್ಚಲು ಒಲೆಯ ಮು೦ದೆ ನಿ೦ತು ಮೈಬಿಸಿ ಮಾಡುವಾಗಿನ ಅನುಭವ, ಅತ್ತೆ ಕೊಡುವ ಬಿಸಿಬಿಸಿ  ಕಾಫಿಯೋ, ಕಷಾಯವೋ ಕುಡಿದು ಚಿಮಣಿ ದೀಪದ ಅಡಿಯಲ್ಲಿ ಹೋಂ ವರ್ಕ್ ಮಾಡುವ ಪರಿ, ಎಲ್ಲ ಹಸಿಬಿಸಿ ನೆನಪುಗಳೂ ಅದೆಷ್ಟು ಚೆನ್ನ. ಟೀವಿ,  ಮೊಬೈಲು ಇ೦ತಹ ಯಾವುದೇ ಸುವಿಧೆಗಳಿಲ್ಲದ ದಿನಗಳವು. ರೇಡಿಯೋ ಇದ್ದರೂ ಅದನ್ನು  ಮುಟ್ಟುವ ಸ್ವಾತ೦ತ್ರ್ಯ ಇನ್ನೂ ಮಕ್ಕಳಿಗೆ ಸಿಕ್ಕಿರದ ದಿನಗಳು.      ಎ೦ಟನೆ ಕ್ಲಾಸಿಗೆ  ನನಗೆ ಪಾಠ ಪುಸ್ತಕ ಮತ್ತು ನೋಟ್ಸ್  ಬುಕ್ ಗಳಿಗೆ ತಗಲಿದ ಒಟ್ಟು ವೆಚ್ಚ  ರೂ:25-00 ಎ೦ದು ನೆನಪು. ಹೊಸ ಪುಸ್ತಕಗಳ ಪುಟಗಳ ನಡುವಿನ ಪರಿಮಳ ನನಗೆ  ಆಗ ಆಪ್ಯಾಯಮಾನ. ಪುಸ್ತಕ ಓದುವ ಮುನ್ನವೇ ಆಘ್ರಾಣಿಸಿ ಅಕ್ಷರಗಳ ಮತ್ತನ್ನು ತಲೆಗೇರಿಸಿಕೊಳ್ಳುತ್ತಿದ್ದೆ.  ಅದರಲ್ಲಿದ್ದ ವಿಲಕ್ಷಣ ಆನ೦ದ ಅಂಥಾದ್ದು.


ಇಡೀ ವರ್ಷದ ಓದಿನ ಯಾನಕ್ಕೆ ಜೂನ್ ತಿ೦ಗಳ  ಮುನ್ನುಡಿ ಬಹುಮುಖ್ಯ. ಮಳೆ ಬಾರದ ದಿನ ಛತ್ರಿ ಮರೆತು ಮನೆಯಲ್ಲಿ ಬೈಸಿಕೊಳ್ಳುವಾಗಿನ ದೈನೇಸಿ ಸ್ಥಿತಿ, ಹಲ್ಲು ಕಟಗುಟ್ಟಿಸುವ ಚಳಿ ತರುವ ಭೀಕರ ಮಳೆಯ ದಿನ ಶಾಲೆಗೆ ಹೋಗುವಾಗಿನ ತಲೆಬಿಸಿ, ಮಳೆಗೆ ರಜೆ ಸಿಕ್ಕಾಗಿನ ಖುಷಿ,   ಭೀಕರ ಮಳೆ ಬ೦ದಾಗ್ಯೂ ಶಾಲೆಯ ಮಳೆಮಾಪಕದಲ್ಲಿ ನೀರು ತು೦ಬದಿದ್ದಾಗ ಉಚ್ಚೆ ಹುಯ್ದು ತು೦ಬಿ, ಮಾಸ್ತರರ ಸಮಕ್ಷಮ ಮಳೆ ಅಳತೆ ಮಾಡಿ ಶಾಲೆಗೆ ರಜೆ ಘೋಷಣೆ ಆಗುವ೦ತೆ ಮಾಡುವುದರ ಹಿಂದಿನ ಕೌಶಲ್ಯ,   ರಸ್ತೆಬದಿಯ ಕುರುಕುತಿ೦ಡಿಗಳ ಆಕರ್ಷಣೆ, ದೊಡ್ಡ ಕ್ಲಾಸಿನ ಹುಡುಗ ಹುಡುಗಿಯರ ಹಾವಭಾವಗಳ ಅನುಸರಣೆ, ಇವೆಲ್ಲ ಎ೦ಟನೆ ಕ್ಲಾಸಿನ ವಿಸ್ಮಯಗಳು. ದಿನಗಳೆದ೦ತೆ ಎಲ್ಲವೂ ಜೀವನದ ಅಧ್ಯಾಯದಲ್ಲಿ ಹಾಸುಹೊಕ್ಕು. ಅಪರಿಚಿತರು ಮಿತ್ರರಾಗ್ತಿದ್ರು. ಕೆಲವರು ಅತ್ಯಾಪ್ತರಾಗ್ತಿದ್ರು.

ಆದರೆ ಪ್ರತಿವರ್ಷವೂ ಬರುತ್ತಿದ್ದ ಜೂನ್ ತಿ೦ಗಳ ಆಕರ್ಷಣೆ ಭಿನ್ನ ಭಿನ್ನ. ಒ೦ಭತ್ತನೆ ಕ್ಲಾಸಿಗೆ ಬ೦ದಾಗ ಮತ್ತದೇ ಹಳೆ ನೆನಪುಗಳ ಸರಮಾಲೆ, ಹೊಸ ಮಿತ್ರರ ಆಗಮನ. ರಜೆಯಲ್ಲಿ ಏನೇನು ಮಾಡಿದ್ದೆವೆ೦ಬುದನ್ನು ಕೊಚ್ಚುವ ಸಾಹಸ ಪರ್ವ. ರಜೆಯ ಎರಡು ತಿ೦ಗಳು ಕಳೆದು ಬ೦ದ ನ೦ತರದಲ್ಲಿ ಕೆಲ ಹುಡುಗರ ಚರ್ಯೆ ಬದಲಾಗಿರುತ್ತಿತ್ತು.  ಕೆಲವರ  ಮೊಗದಲ್ಲಿ  ಮೀಸೆ ಮೊಳಕೆಯೊಡೆದ ಪುಳಕ, ಹುಡುಗಿಯರ ಸೌಷ್ಟವದಲ್ಲಿ ಹೊಸ ಉಬ್ಬು, ಹೊಸ ತಿರುವು, ಕಣ್ಣ ನೋಟದಲ್ಲಿ ಹೊಸ ಮಿಂಚು ಇವೆಲ್ಲ ನನ್ನ ಗಮನಕ್ಕೆ ಬರುತ್ತಿತ್ತು. ಆದರೆ ನಾನು ಇದ್ದ ಹಾಗೆಯೇ  ಇದ್ದೇನೆ, ದೊಡ್ಡವನಾಗಿಲ್ಲ, ಮೀಸೆ ಬ೦ದಿಲ್ಲ ಎ೦ಬ ಕೊರಗು.  "ನೀನು ಶುದ್ಧ ಪುಳ್ಚಾರ್, ನನ್ನ ಹಾಗೆ ದಪ್ಪ ಆಗಬೇಕಾದರೆ, ಮೀಸೆ ಬರ್ಬೇಕಾದ್ರೆ ಕೋಳಿಮೊಟ್ಟೆ ತಿನ್ಬೇಕು" ಅ೦ತ ಕ್ಲಾಸ್ ಮೇಟ್  ರಜಾಕ್  ಹೇಳಿದ್ದು ಮನಸಿಗೆ ನಾಟಿತ್ತು.   ಮನೆಯಲ್ಲಿ ಕೂಡಿಸಿಟ್ಟಿದ್ದ  ಡಬ್ಬದ ಅಡಿಯಲ್ಲಿದ್ದ ಕಿಲುಬುಕಾಸು ತಡಕಾಡಿ ಇಪ್ಪತ್ತೈದು  ಪೈಸೆ ಜೇಬಿಗಿಳಿಸಿ ಅದೊ೦ದು ಶುಭ ಮುಹೂರ್ತದಲ್ಲಿ ಅಪರಿಚಿತ ಅ೦ಗಡಿಯಿ೦ದ  ಕೋಳಿಮೊಟ್ಟೆ ಕೊ೦ಡು ಮೈದಾನದ ಮೂಲೆಗೆ ಹೋಗಿ ಯಾರೂ ಇಲ್ಲದ ಸಮಯ ನೋಡಿ  ಕಲ್ಲಿಗೆ  ಜಜ್ಜಿದಾಗ ಅದರೊಳಗಿನ ಹೂರಣ ಅರ್ದ೦ಬರ್ಧ ಹೊರಚೆಲ್ಲಿತ್ತು.  ಮತ್ತುಳಿದದ್ದನ್ನು  ನು೦ಗಿದಾಗ ಆದ ಒತ್ತರಿಸಿ ಬ೦ದ ವಾಕರಿಕೆಯ ಅನುಭವ ಇನ್ನೂ ಹಸಿ ಹಸಿಯಾಗೇ  ಇದೆ. 

ಆದರೆ  ಆ ಪುಳಕ, ಆನ೦ದ ಈಗ ಇಲ್ಲವೇ ಇಲ್ಲ. ಜೂನ್  ಬ೦ತೆ೦ದರೆ ನಿದ್ದೆಯಲ್ಲೂ ಬೆಚ್ಚಿ ಬೀಳುವ ಪರಿಸ್ಥಿತಿ.  ಮಕ್ಕಳ ಶಾಲಾಕಾಲೇಜು ಶುಲ್ಕ, ಯುನಿಫಾರ್ಮ್, ಶೂ, ಪುಸ್ತಕ, ಪರಿಕರ ಹೀಗೆ ಎಲ್ಲವನ್ನು ಹೊ೦ದಿಸಿ ಶಾಲೆಗೆ ಕಳಿಸುವಾಗ ಅಪ್ಪನಾಗಿ ನಾನು ಹೈರಾಣು.   ಅ೦ದು ಒ೦ದು ನೂರು ರೂಪಾಯಿನಲ್ಲಿ ಪರಿಸಮಾಪ್ತಿ  ಆಗುತ್ತಿದ್ದ ಬಾಬ್ತುಗಳಿಗೆ ಈಗ ಸಹಸ್ರಾರು ರೂಪಾಯಿ ವೆಚ್ಚ ಮಾಡಬೇಕಾದ ಅನಿವಾರ್ಯತೆ. ಮಕ್ಕಳ ಮೊಗದಲ್ಲಿ ಅಷ್ಟೋ ಇಷ್ಟೋ ಹುರುಪಿದ್ದರೆ ಅಪ್ಪ-ಅಮ್ಮ೦ದಿರ ಮೊಗದಲ್ಲಿ ದುಡ್ಡು ಹೊ೦ದಿಸುವ ಕಷ್ಟದ ಹೇಳಲಾಗದ ಅಸ೦ಖ್ಯ ಕವಳಿಕೆ ಬವಳಿಕೆಗಳು . ಈ ತಿ೦ಗಳೇ ಹಾಗೆ !! ವಿಚಿತ್ರ ನೆನಪುಗಳ, ಅಪರೂಪದ ಅನುಭವಗಳ, ಹೇಳಲಾಗದ ಹಳಹಳಿಕೆಗಳ  ಸಮ್ಮಿಶ್ರಣ.