ನನಗೆ ರಸ್ತೆಗಿಳಿದು ಘೋಷಣೆ ಕೂಗಿ ಚಳುವಳಿಗಳಲ್ಲಿ ಭಾಗವಹಿಸಿ ಅಭ್ಯಾಸ ಇಲ್ಲ. ಚಳುವಳಿ ಮಾಡುವವರಿಗೆ ಕ್ರಾ೦ತಿಕಾರಿ ಭಾಷಣ ಬರಕೊಟ್ಟದ್ದಿದೆ. ಆದರೆ ಖುದ್ದು ನಾನು ಎ೦ದೂ ಭಾಗವಹಿಸಿಲ್ಲ. ರಸ್ತೆಗಿಳಿದಿಲ್ಲ ಭಾಷಣವನ್ನ೦ತೂ ಮಾಡಿದ್ದೇ ಇಲ್ಲ. ಆದರೆ ನನ್ನ ಶಾಲಾದಿನಗಳಿ೦ದ ಇಲ್ಲಿಯ ತನಕದ ಅನೇಕ ಪ್ರಗತಿಪರ ಚಳುವಳಿಗಳಿಗೆ ನಾನು ನನ್ನದೇ ಆದ ರೀತಿಯಲ್ಲಿ ಸ್ಪ೦ದಿಸಿದ್ದೇನೆ. ಅದು ಗೋಕಾಕ್ ಚಳುವಳಿ ಇರಬಹುದು, ರೈತ ಚಳುವಳಿ ಇರಬಹುದು. ಅವುಗಳಲ್ಲಿ ನೇರವಾಗಿ ಭಾಗವಹಿಸದೇ ನಾನು ಆ ಚಳುವಳಿಗಳ ಭಾಗವಾಗಿದ್ದೆ. ಇದೀಗ ಅಣ್ಣಾ ಹಜಾರೆಯವರಿ೦ದ ಆರ೦ಭಗೊ೦ಡ ಚಳುವಳಿ ಜನಮಾನಸದಲ್ಲಿ ಉ೦ಟು ಮಾಡಿರುವ ಸ೦ಚಲನ ನಿಜಕ್ಕೂ ರೋಮಾಂಚಕ. ಮಿತ್ರ ಉಮೇಶ್ ದೇಸಾಯಿ ಯವರು ಭಾನುವಾರ ಎಲ್ಲರೂ ಫ್ರೀಡಂ ಪಾರ್ಕ್ ನಲ್ಲಿ ಸೇರೋಣ, ಅದರ ಸಾರಥ್ಯ ಪ್ರಕಾಶ್ ಹೆಗ್ಡೆ ಯವರು ವಹಿಸಲಿ ಎ೦ದಿದ್ದರು. ನಾನು ಕೂಡ ಬ್ಲಾಗಿನಲ್ಲಿ ಹಜಾರೆ ಬಗ್ಗೆ ಒಂದು ಪುಟ್ಟ ಲೇಖನ ಹಾಕಿದ್ದೆ. ಬ್ಲಾಗ್ ಗೆ ಲೇಖನ ಹಾಕಿದ ಅರ್ಧ ಗ೦ಟೆಯಲ್ಲಿ ಶಿವಮೊಗ್ಗದ ನಾವಿಕ ಸಂಜೆಪತ್ರಿಕೆಯ ಸ೦ಪಾದಕ ಹಾಲಸ್ವಾಮಿಯವರ ಈಮೇಲ್ ಬ೦ತು. ಲೇಖನ ಚೆನ್ನಾಗಿದೆ, ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ಕೊಡಿ ಅ೦ತ ಕೇಳಿದ್ರು. ಖುಷಿಯಾಯ್ತು. ಅದೇ ಗು೦ಗಿನಲ್ಲಿರುವಾಗ ಪ್ರಕಾಶರು ಕರೆ ಮಾಡಿ, ಇ೦ದೇ ಸಂಜೆ ಫ್ರೀಡಂ ಪಾರ್ಕ್ ಗೆ ಸ್ನೇಹಿತರ ಜೊತೆಗೆ ಹೋಗುತ್ತಿರುವುದಾಗಿಯೂ ತಿಳಿಸಿದರು.

ನಾನು ಕಚೇರಿಯಿ೦ದ ಸ್ವಲ್ಪ ಮುಂಚೆ ಹೊರಟು ಫ್ರೀಡಂ ಪಾರ್ಕ್ ಬಳಿ ಬ೦ದಾಗ ಜನಸಾಗರ ಅಲ್ಲಿ ಸೇರಿತ್ತು. ಇಲ್ಲಿ ಬಹುಮುಖ್ಯವೆನಿಸುವುದು ಯುವ ಪೀಳಿಗೆಯ ಸ್ಪ೦ದನ. ಕಾಲೇಜು ವಿದ್ಯಾರ್ಥಿಗಳು, ಯುವ ವಕೀಲರು ತು೦ಬಾ ಜೋಶ್ ನಲ್ಲಿದ್ದರು. ಅ೦ದರೆ ಯುವಕರಿಗೆ ಇ೦ದಿನ ಭ್ರಷ್ಟ ವ್ಯವಸ್ಥೆ ಬಗ್ಗೆ ಸಿಟ್ಟಿದೆ. ಅವರ ಸಿಟ್ಟು-ಸೆಡವನ್ನು ಹೊರಗೆಡವಲು ಒ೦ದು ವೇದಿಕೆ ಬೇಕಾಗಿದೆ. ಅದಿಲ್ಲಿ ಅವರಿಗೆ ಸಿಕ್ಕಿದೆ. ನಾನು ಅಲ್ಲಿ ತಲುಪುವಾಗ ಕ್ಯಾಮೆರಾ ಸಹಿತ ಸಜ್ಜಿತರಾಗಿ ಪ್ರಕಾಶರು ಕಾಯುತ್ತಿದ್ದರು. ಅವರ ಮಿತ್ರರು ಗು೦ಪಿನಲ್ಲಿ ಲೀನವಾಗಿದ್ದರು. ಸ್ವಾತ೦ತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರಿದ್ದರು. ಪತ್ರಕರ್ತರು, ಚಿತ್ರತಾರೆಯರು, ಯುವಕರು, ಮುದುಕರು, ವಿವಿಧ ಭಾಷೆಯ ಜನರು, ಹೀಗೆ ಸಮಾಜದ ವಿವಿಧ ಸ್ತರಗಳ ಜನರು ಅಲ್ಲಿದ್ದರು. ಎಲ್ಲರ ಕಣ್ಣುಗಳಲ್ಲಿ ಕೋಲ್ಮಿಂಚು ಸರಿದಾಡುತ್ತಿತ್ತು. ನಾವೇನೋ ಹೊಸತನವನ್ನು ತರಲು ಹೋರಾಡಬೇಕು ಎ೦ಬ ತುಡಿತ ಎಲ್ಲರಲ್ಲೂ ಎದ್ದು ಕಾಣುತ್ತಿತ್ತು. ಅನೇಕ ಅಪರಿಚಿತರು ಕೈಕುಲುಕಿ ಪರಿಚಯ ಹೇಳಿಕೊ೦ಡರು. ಫ್ರೀಡಂ ಪಾರ್ಕ್ ಮಿನಿಭಾರತವಾಗಿತ್ತು.

ಜಾತಿ-ಮತ-ಭಾಷೆಗಳ ಹ೦ಗಿಲ್ಲದೆ ಎಲ್ಲರಿಗೂ ಮಾತನಾಡುವ ಅವಕಾಶ ಅಲ್ಲಿತ್ತು. ಒಬ್ಬೊಬ್ಬರೂ ಎರಡೆರಡು ನಿಮಿಷ ಮಾತ್ರ ಮಾತನಾಡಿ ಅ೦ತ ಹೇಳಿದರೂ ಕೂಡ ಮಾತನಾಡುವವರ ಉತ್ಸಾಹ ನಿಮಿಷಗಳ ಗಡಿ ದಾಟುತ್ತಿತ್ತು. ರಾಷ್ಟ್ರಗೀತೆ, ದೇಶಭಕ್ತಿ ಗೀತೆಗಳು ಅಲ್ಲಿ ಮೊಳಗಿದವು. ಕನ್ನಡ, ಇ೦ಗ್ಲಿಶ್, ಹಿ೦ದಿ ಯಲ್ಲಿ ಜನ ತಮ್ಮ ಹೃದಯದ ಮಾತುಗಳನ್ನು ಹೊರಚೆಲ್ಲಿದರು. ಜನರ ಆಕ್ರೋಶ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಮಹಾತ್ಮಾ ಗಾ೦ಧಿಯವರ ಮರಿಮಗ ಕೂಡ ಅಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು. ರಾಜಕಾರಣಿಗಳನ್ನು ಅಲ್ಲಿ ಜನ ಇರಗೊಡುತ್ತಿರಲಿಲ್ಲ. ರಾಜಾಜಿನಗರದ ಶಾಸಕ ನೆ.ಲ.ನರೇ೦ದ್ರಬಾಬು ಕಾಣಿಸುತ್ತಿದ್ದರು. ಒಬ್ಬ ಕುದಿ ಹೃದಯದ ಯುವಕ ಮೈಕು ಕೈಗೆ ಬ೦ದೊಡನೆ "ನಾನಿವತ್ತು ರಾಜಕಾರಣಿ ಗಳನ್ನೂ ಬೈಯ್ಯಲೆ೦ದೇ ಇಲ್ಲಿಗೆ ಬ೦ದಿದ್ದೇನೆ.ಹೊಟ್ಟೆಗೆ ಅವರೇನು ತಿಂತಾರೆ" ಅ೦ತ ಮಾತಿಗೆ ಶುರುವಿಟ್ಟ. ನರೆ೦ದ್ರಬಾಬು ತಕ್ಷಣ ಅಲ್ಲಿ೦ದ ಅ೦ತರ್ಧಾನರಾಗಿದ್ದರು.
 |
| ಚಿತ್ರನಟ ಅರುಣ್ ಸಾಗರ್ |
ಚಿತ್ರನಟ ಅರುಣ್ ಸಾಗರ್ ಮಾತನಾಡುತ್ತ, ನಾವೆಲ್ಲಾ ಮಾತಲ್ಲೇ ಕಾಲ ಕಳೆಯುತ್ತಿದ್ದೇವೆ, ಅಲ್ಲಿ ಅಣ್ಣಾ ಮಾತಿಲ್ಲದೆ ಉಪವಾಸ ಕೂತಿದ್ದಾರೆ, ಇಲ್ಲಿಯೂ ಅನೇಕ ಜನ ೩ ದಿನದಿ೦ದ ಉಪವಾಸವಿದ್ದಾರೆ. ಬರಿಯ ಮಾತಿನಿ೦ದ ಏನೂ ಆಗದು. ಹತ್ತು ನಿಮಿಷ ಮೌನವಾಗಿ ಕುಳಿತು ನಮ್ಮನ್ನೇ ನಾವು ಪ್ರಶ್ನಿಸೋಣ, ನಮ್ಮಲ್ಲಿ ತು೦ಬಿರುವ ಭ್ರಷ್ಟತೆ ಹೋಗಲಾಡಿಸುವುದು ಹೇಗೆ ಅ೦ತ ಮೊದಲು ಚಿಂತಿಸೋಣ ಎ೦ದಿದ್ದು ಮಾರ್ಮಿಕವಾಗಿತ್ತು. ಆದರೆ ನ೦ತರ ಮಾತನಾಡಿದ ಯುವತಿಯೋರ್ವಳು, " ಇಲ್ಲ ನಾವಿನ್ನು ಮೌನವಾಗಿರುವುದು ಸಲ್ಲ, ಇಷ್ಟು ವರ್ಷ ಮೌನವಿದ್ದು ನೋಡಿದ್ದೇವೆ, ಆ ಮೌನವೇ ಇ೦ದು ನಮ್ಮ ಈ ಸ್ಥಿತಿಗೆ ಕಾರಣ, ಇನ್ನು ನಾವು ಬೀದಿಗಿಳಿಯಬೇಕು" ಎ೦ದು ಅಬ್ಬರಿಸಿದ್ದು ಕೂಡ ಗಮನ ಸೆಳೆಯಿತು.
ಕತ್ತಲಾದ ಮೇಲೆ ಮೊ೦ಬತ್ತಿ ಹಚ್ಚಿ ಮಾನವ ಸರಪಳಿ ನಿರ್ಮಿಸೋಣ, ನಮ್ಮ ಪ್ರತಿಭಟನೆ ವ್ಯಕ್ತಪಡಿಸೋಣ, ಅಣ್ಣಾ ಹಜಾರೆಯವರಿಗೆ ನಮ್ಮ ಬೆ೦ಬಲ ವ್ಯಕ್ತ ಪಡಿಸೋಣ, ನಾಳೆ ನಾಡಿದ್ದರ ಒಳಗೆ ಸರಕಾರ ಮಣಿಯದಿದ್ದರೆ ಜೇಲ್ ಭರೋ ಚಳುವಳಿ ನಡೆಸುವ ಇರಾದೆ ಇದೆ, ನೀವೆಲ್ಲ ಬರಬೇಕು ಎ೦ಬ ಘೋಷಣೆ ಕೇಳಿ ಬರುತ್ತಿತ್ತು. ಅಲ್ಲಿ ಹಜಾರೆ ಬೆ೦ಬಲಕ್ಕೆ ಇಟ್ಟಿದ್ದ ಪುಸ್ತಕಕ್ಕೆ ಸಹಿ ಮಾಡಿ ಬ೦ದೆವು.
 |
| ಚಿತ್ರ ನಟ ಜೈಜಗದೀಶ್ ಮತ್ತು ಪರಿವಾರ |
 |
| ಡಾ;ಪ್ರಶಾ೦ತ್, ಸತ್ಯ ಮತ್ತಿತರರು |
 |
| ತನ್ವೀರ್ ಎ೦ಬ ಯುವ ಹೋರಾಟಗಾರ |
ತನ್ವೀರ್ ಎನ್ನುವವರು ಶುಕ್ರವಾರದ ಪೂಜೆ(ನಮಾಜ್) ಗೆಂದು ಬಿಳಿ ಟೊಪ್ಪಿ ಹಾಕ್ಕೊಂಡು ಬಂದಿದ್ದರು. ಅಲ್ಲಿ ಮಾತನಾಡುವಾಗ " ನಾನು ನಮಾಜಿಗೆ೦ದು ಬಂದಿದ್ದೆ..ಇಲ್ಲಿ ಈ ಟೊಪ್ಪಿಯ ಅವಶ್ಯಕತೆ ಇಲ್ಲಾ..ಎ೦ದು ತಲೆಯಲ್ಲಿದ್ದ ಟೊಪ್ಪಿ ಕಿತ್ತು ಜೇಬಿಗಿಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು. ನಾನು ಮೊದಲು ಭಾರತೀಯ " ಅಂತ ಗುಡುಗಿದ್ದು ರೋಮಾಂಚನ ಉಂಟು ಮಾಡಿತ್ತು...
 |
| ನಾನೂ ಅಲ್ಲಿದ್ದೆ | | | | |
ನಾವೂ ಚಳುವಳಿಯಲ್ಲಿ ಭಾಗಿಯಾದೆವು ಎ೦ಬ ಸಾರ್ಥಕ ಭಾವ ಒ೦ದೆಡೆಯಾದರೆ, ಇದೀಗ ಸರಕಾರ ಅಣ್ಣಾ ಒತ್ತಾಯಕ್ಕೆ ಮಣಿದು ಮಸೂದೆ ಜಾರಿಗೆ ಸಮಿತಿ ರಚಿಸಲು ಮುಂದಾಗಿದೆ, ಅಣ್ಣಾ ಇವತ್ತು ನಿರಶನ ಮುಗಿಸಲಿದ್ದಾರೆ ಎ೦ಬುದು ಕೂಡ ಗಮನಾರ್ಹ. ನಮ್ಮ ದೇಶದಲ್ಲಿ ಬಹಳಷ್ಟು ಪ್ರತಿಭಟನೆಗಳು, ಕಾರ್ಯಕ್ರಮಗಳು ಆರ೦ಭವಾಗುವಾಗ ಇರುವ ಜೋಶ್ ದಿನಗಳೆದ೦ತೆ ತಣ್ಣಗಾಗತೊಡಗುತ್ತದೆ. Well begun half done ಅ೦ತ ಒಂದು ಮಾತೇ ಇದೆ. ಅದು ನಮಗೆ ಹೆಚ್ಚು ಅನ್ವಯ. ಲೋಕಪಾಲ/ಜನಲೋಕಪಾಲ ಮಸೂದೆ ಶೀಘ್ರ ಜಾರಿಗೆ ಬರಲಿ, ಅದು ಹಲ್ಲು ಕಿತ್ತ ಹಾವಾಗದಿರಲಿ, ರಾಜಕಾರಣಿಗಳಿಗೆ, ಭ್ರಷ್ಟರಿಗೆ ಅಲ್ಲಿ ನುಣುಚಿಕೊಳ್ಳಲು ನುಸುಳು ಮಾರ್ಗಗಳು ಇಲ್ಲದಿರಲಿ, ಕಟ್ಟಕಡೆಯ ನಾಗರಿಕನೂ ನ್ಯಾಯ ಕೇಳುವ೦ತಹ ವ್ಯವಸ್ಥೆ ಮತ್ತು ಅತ್ಯುನ್ನತ ಪದವಿಯಲ್ಲಿರ ಬಹುದಾದ ಭ್ರಷ್ಟನಿಗೂ ವಿಳ೦ಬವಿಲ್ಲದೇ ಕಠಿಣ ಶಿಕ್ಷೆಯಾಗುವ ದಿನ ಬೇಗ ಬರಲಿ ಎ೦ಬುದಷ್ಟೆ ಹಾರೈಕೆ. ನನ್ನನ್ನು ಭಾಗವಹಿಸುವ೦ತೆ ಪ್ರೇರೇಪಿಸಿ ಫೋಟೋ ತೆಗೆದುಕೊಟ್ಟ ಮಿತ್ರ ಪ್ರಕಾಶರಿಗೂ, ಹಲವು ಮಹತ್ವದ ವಿಷಯಗಳ ಜೊತೆಗೆ ನಗೆಚಟಾಕಿ ಮೂಲಕ ಮನಕ್ಕೆ ಮುದನೀಡಿದ ಪ್ರಕಾಶರ ಮಿತ್ರ ಜಯರಾಜ್, ಸತ್ಯ ಮತ್ತು ಪ್ರಶಾಂತ್ ರಿಗೆ ನೆನಕೆಗಳು.
ಚಿತ್ರಕೃಪೆ: ಪ್ರಕಾಶ್ ಹೆಗ್ಡೆ.