Sunday, February 27, 2011

ಸರಸ್ವತಿ-ವಿಸ್ಮಯ ಸ೦ಸ್ಕ್ರತಿ


ಇದೊ೦ದು ಅಪರೂಪದ ಸ೦ಶೋಧನಾತ್ಮಕ  ಕೃತಿ. "ಸರಸ್ವತಿ" ಪದದ ನಿಷ್ಪತ್ತಿ ಮತ್ತು ಅರ್ಥಸ್ವರೂಪದ ವಿಶ್ಲೇಷಣೆಯೊ೦ದಿಗೆ ಆರ೦ಭವಾಗುವ ವ್ಯಾಖ್ಯಾನ ಸಾದ್ಯ೦ತವಾಗಿ ಆ ಪದದ ಹಿ೦ದಿರುವ ಮಹತ್ತು, ವಿಶಿಷ್ಟತೆ ಮತ್ತು ಹತ್ತು ಹಲವು ಆಸಕ್ತಿದಾಯಕ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಸರಸ್ವತಿ ಎ೦ದರೆ ಅದು ನದಿಯೂ ಹೌದು, ಗೋವಿನ ಹೆಸರೂ ಹೌದು, ಋಗ್ವೇದದಲ್ಲಿ ಉಲ್ಲೇಖವಾದ ವಾಗ್ದೇವಿಯ ಹೆಸರೂ ಹೌದು, ಒಟ್ಟಿನಲ್ಲಿ ಆ ಹೆಸರಿಗೆ ಹೊ೦ದಿಕೊ೦ಡ೦ತೆ ಇರುವ ಅನೇಕ   ವಿಸ್ಮಯಕಾರಿ ಮಾಹಿತಿಗಳನ್ನು ಕಲೆಹಾಕಿ ಈ ಕೃತಿಯ ಮೂಲಕ ಒ೦ದು ವಿಶಿಷ್ಟ ಬಗೆಯ ಪಕ್ವಾನ್ನವನ್ನು ಲೇಖಕರು ಓದುಗರಿಗೆ ಉಣಬಡಿಸಿದ್ದಾರೆ. ಋಗ್ವೇದ, ಸ್ಕ೦ದಪುರಾಣ, ಜೈನ ಮತ್ತು ಬೌದ್ಧ ಧರ್ಮಗ್ರ೦ಥಗಳು, ಕನ್ನಡ ಸಾಹಿತ್ಯ ಚರಿತ್ರೆ, ಜನಪದ ಸಾಹಿತ್ಯ, ಹಳೆಗನ್ನಡ ಶಾಸನಗಳು ಇವನ್ನೆಲ್ಲ ಆಕರವಾಗಿಸುವ ಜೊತೆಗೆ  ಸುಮಾರು ಒ೦ದುಸಾವಿರ ವರ್ಷಗಳ ಕಾಲಾವಧಿಯ ನೂರಾರು ಸರಸ್ವತಿಯ ಶಿಲ್ಪಗಳ  ಅಧ್ಯಯನ ಮಾಡಿ ಅಪರೂಪದ ಮಾಹಿತಿಗಳನ್ನು ಲೇಖಕರು ಒ೦ದೆಡೆ ಕಲೆ ಹಾಕಿದ್ದಾರೆ.


ಭಾರತೀಯ ಸ೦ಸ್ಕ್ರತಿಯಲ್ಲಿ  ಸರಸ್ವತಿಯ ಪಾತ್ರದ ಮಹತ್ವ, ಬಹುಧರ್ಮಗಳ ಬೀಡಾಗಿರುವ ಭಾರತದಲ್ಲಿ ಹಿ೦ದು, ಜೈನ ಮತ್ತು ಬೌದ್ಧ ಧರ್ಮಗಳಲ್ಲಿ ಸರಸ್ವತಿಯನ್ನು ಹೇಗೆ ಅರ್ಥೈಸಲಾಗಿದೆ ಎ೦ಬುದರ ನಿರೂಪಣೆ ಇಲ್ಲಿದೆ.  ಹಲವಾರು ಉದ್ಗ್ರ೦ಥಗಳನ್ನು ಅಭ್ಯಸಿಸಿ ಸರಸ್ವತಿಯನ್ನು ಜ್ಞಾನದೇವತೆ ಮತ್ತು ಪ್ರೇರಣಾ ಶಕ್ತಿಯಾಕಿ, ಯುದ್ಧದೇವತೆಯಾಗಿ,ಶಾ೦ತಿದೇವತೆಯಾಗಿ, ಅಹಿ೦ಸಾ ದೇವತೆಯಾಗಿ, ಅನ್ನಪೂರ್ಣೆಯಾಗಿ ,ಭಾಗ್ಯದೆವತೆಯಾಗಿ, ಆರೋಗ್ಯದೇವತೆಯಾಗಿ ಲೇಖಕರು ವಿಶ್ಲೇಷಿಸಿರುವ  ಬಗೆ ಅನನ್ಯ. ಋಗ್ವೇದದ ಋಕ್ಕುಗಳನ್ನು ಆಧರಿಸಿ ಸರಸ್ವತಿಯನ್ನು ತಾಯಿ, ಸಹೋದರಿ, ಮಗಳು, ಸ್ನೇಹಿತೆ, ಪತ್ನಿ ಹೀಗೆ ಹಲವು ನೆಲೆಗಳಲ್ಲಿ ಲೇಖಕರು ವಿವರಿಸಿದ್ದಾರೆ. ಸರಸ್ವತಿ ಮತ್ತು ಸಾರಸ್ವತ ಪದಗಳಿಗಿರುವ ಸ೦ಬ೦ಧದ ವಿವರಣೆ ಇದೆ.   ಸರಸ್ವತಿಯನ್ನು ಪುರಾಣಗಳಲ್ಲಿ, ಅದರಲ್ಲೂ ವಿಶೇಷವಾಗಿ ಪದ್ಮಪುರಾಣ, ಬ್ರಹ್ಮವೈವರ್ತಪುರಾಣ  , ದೇವಿ ಭಾಗವತ, ಮಾರ್ಕಾ೦ಡೇಯ ಪುರಾಣ, ಬ್ರಹ್ಮಾ೦ದಪುರಾಣ, ವಾಮನಪುರಾಣ, ಮತ್ಸ್ಯಪುರಾಣ, ಸ್ಕ೦ದಪುರಾಣ, ಭಾಗವತ ಪುರಾಣ, ಲಿಂಗಪುರಾಣ, ವರಾಹಪುರಾಣ, ವಿಷ್ಣು ಧರ್ಮೊತ್ತರ ಪುರಾಣ, ಅಗ್ನಿಪುರಾಣಗಳಲ್ಲಿ ಹೇಗೆ ಅರ್ಥೈಸಲಾಗಿದೆ ಎ೦ಬುದರ ಸ೦ಕ್ಷೇಪ ಉಲ್ಲೇಖವಿದೆ.   ಅನ್ಯನಾಗರಿಕತೆಗಳಲ್ಲಿ, ಅದರಲ್ಲೂ ಪ್ರಮುಖವಾಗಿ ಈಜಿಪ್ಷಿಯನ್ ಮತ್ತು ಗ್ರೀಕ್ ದೇವತೆಗಳ ಹಿನ್ನೆಲೆಯಲ್ಲಿ, ಆ ಭಾಗದ ದೇವತೆಗಳಿಗೂ ಸರಸ್ವತಿಗೂ ಇರುವ ಹೋಲಿಕೆಗಳ ವಿವರಣೆ ಆಸಕ್ತಿದಾಯಕ.  ಪ೦ಪ, ರನ್ನ, ಪೊನ್ನ, ಕಾಳಿದಾಸ, ನಾಗವರ್ಮ, ದುರ್ಗಸಿ೦ಹ, ನಯಸೇನ, ರುದ್ರಭಟ್ಟ, ಅಗ್ಗಳ, ಹರಿಹರ, ನೇಮಿಚ೦ದ್ರ, ಬ೦ಧುವರ್ಮ,ಕವಿಕಾಮ, ಜನ್ನ, ರಾಘವಾ೦ಕ, ಆ೦ಡಯ್ಯ, ಮಲ್ಲಿಕಾರ್ಜುನ, ಮಹಾಬಲ ಕವಿ, ಕೇಶಿರಾಜ,ಬಾಹುಬಲಿಪ೦ಡಿತ, ಕುಮಾರವ್ಯಾಸ, ಭಾಸ್ಕರ, ಮಧುರ, ಈಶ್ವರ ಕವಿ, ರಾಮರಸ ವಿರೂಪಾಕ್ಷ,  ಕುಮಾರವಾಲ್ಮೀಕಿ, ಸೋಮನಾಥ, ಮ೦ಗರಸ, ಪುರ೦ದರದಾಸರೂ ಸೇರಿದ೦ತೆ ಅನೇಕ ದಾಸವರೇಣ್ಯರು ಸರಸ್ವತಿಯನ್ನು ತಮ್ಮ ಕೃತಿಗಳಲ್ಲಿ ಹೇಗೆ ಬಣ್ಣಿಸಿದ್ದಾರೆ, ಎ೦ಬುದು ವಿಸ್ತೃತವಾಗಿ ಮೂಡಿ ಬ೦ದಿದೆ.   ಇಷ್ಟು ಮಾತ್ರವಲ್ಲದೆ ದೇಶಾದ್ಯ೦ತ ಇರುವ ಹತ್ತು ಹಲವು ಶಾಸನಗಳನ್ನು, ಸರಸ್ವತಿ ಪ್ರತಿಮೆಗಳನ್ನು ಅಧ್ಯಯನ ಮಾಡಿ "ಶಾಸನ ಸರಸ್ವತಿ" ಎ೦ಬ ಪ್ರತ್ಯೇಕಭಾಗದಲ್ಲಿ ಅನೇಕ ವಿಚಾರಗಳನ್ನು ಸಾದೋಹರಣ ವಿವರಿಸಲಾಗಿದೆ. 


ಒಟ್ಟಿನಲ್ಲಿ ಸರಸ್ವತಿಗೆ ಸ೦ಬ೦ಧಪಟ್ಟ೦ತೆ ಎಲ್ಲ ಮಾಹಿತಿಗಳನ್ನು ಒಳಗೊ೦ಡಿರುವ ಈ ಮಹತ್ಕ್ರತಿ ಒ೦ದು ಅಪೂರ್ವ ಕೈಪಿಡಿ. ಬಹುಶಃ ಇ೦ತಹ ಯತ್ನವನ್ನು ಯಾರೂ ಮಾಡಿಲ್ಲವೆನಿಸುತ್ತದೆ. ಸರಸ್ವತಿಯ ಸುತ್ತ ಇರುವ ವಿಸ್ಮಯ ಸ೦ಸ್ಕ್ರತಿಯತ್ತ ಬೆಳಕು ಚೆಲ್ಲುವಲ್ಲಿ  ಲೇಖಕರು ಯಶಸ್ವಿಯಾಗಿದ್ದಾರೆ.  ಈ ಕೃತಿ ರಚನೆಗೆ ಅವರು ಒ೦ದೆರಡಲ್ಲ ನೂರಾರು ಕನ್ನಡ ಮತ್ತು ಆ೦ಗ್ಲ ಗ್ರ೦ಥಗಳನ್ನು ಅಧ್ಯಯನ ಮಾಡಿದ್ದಾರೆ. ಅವರು ಉದ್ಧರಿಸಿರುವ ಆಕರ ಗ್ರ೦ಥಗಳ ಪಟ್ಟಿ ಓದುಗನಲ್ಲಿ ವಿಸ್ಮಯ ಉ೦ಟು ಮಾಡುತ್ತದೆ.  ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಇ೦ತಹ ಸ೦ಶೋಧನಾತ್ಮಕ ಕೃತಿ  ಹೊರಬ೦ದಿಲ್ಲ ಎ೦ಬುದು ನನ್ನ ಅನಿಸಿಕೆ. ಸುಮಾರು 400 ಪುಟಗಳಷ್ಟಿರುವ ಈ ಕೃತಿಯನ್ನು  "ಗ್ರ೦ಥ" ಎ೦ದು ನಿಸ್ಸ೦ಶಯವಾಗಿ ಕರೆಯಬಹುದು. ಈ ಪುಸ್ತಕದ ಗಾತ್ರ ಮತ್ತು ತೂಕಕ್ಕಿ೦ತ ಅದೆಷ್ಟೋ ಪಟ್ಟು ಹೆಚ್ಚು ತೂಕದ ಮಾಹಿತಿ, ವಿವರ ಇದರಲ್ಲಿ ಅಡಕವಾಗಿದೆ. ಅಲ್ಲಲ್ಲಿ ಕೆಲವೆಡೆ ಮುದ್ರಾರಾಕ್ಷಸನ ಹಾವಳಿ ಇದೆಯಾದರೂ ಅದರಿ೦ದ ಕೃತಿಯ ಒಟ್ಟ೦ದಕ್ಕೆ ಲೋಪವಾಗಿಲ್ಲ. ಈ ಕೃತಿಗೆ ಮುನ್ನುಡಿ ಬರೆದ ಕನ್ನಡದ ಪ್ರಖ್ಯಾತ ಕವಿ ಎಚ್.ಎಸ್.ವೆ೦ಕಟೇಶ ಮೂರ್ತಿಯವರು ಕೂಡ ಲೇಖಕರನ್ನು ಶ್ಲಾಘಿಸಿ, ಇದೊ೦ದು ಅಪರೂಪದ ಕಾರ್ಯವೆ೦ದು ಹೇಳಿದ್ದಾರೆ.   ಇದೊ೦ದು ಸ೦ಗ್ರಹಯೋಗ್ಯ ಕೃತಿ. ಎಲ್ಲರೂ ಕೊ೦ಡು ಓದಬೇಕಾದ, ಇಟ್ಟುಕೊಳ್ಳಬೇಕಾದ ಆಕರಗ್ರ೦ಥವಿದು.  ಒ೦ದೇ ಗುಕ್ಕಿನಲ್ಲಿ ಇದನ್ನು ಓದಿ ಮುಗಿಸುವುದು ಕಷ್ಟವೆನಿಸಬಹುದು, ಸಮಯವಿದ್ದಾಗಲೆಲ್ಲ ಇದನ್ನು ಓದಿ ಅರ್ಥೈಸಿಕೊ೦ಡಲ್ಲಿ ಜ್ಞಾನ ಕೋಶದ ವೃದ್ಧಿಯ ಜೊತೆಗೆ ಲೇಖಕರ ಶ್ರಮಕ್ಕೆ ಉತ್ತೇಜನ ಕೊಟ್ಟ೦ತಾಗುತ್ತದೆ.



ಲೇಖಕರ ಕುರಿತು:-
ಈ ಉದ್ಗ್ರ೦ಥವನ್ನು ಬರೆದವರು ಮಿತ್ರರಾದ ಡಾ:ಬಿ.ಅರ್.ಸತ್ಯನಾರಾಯಣ. ಗ್ರಾಮೀಣ ಹಿನ್ನೆಲೆಯಿ೦ದ ಬ೦ದಿರುವ ಇವರು ಬೆ೦ಗಳೂರಿನ ಸುರಾನಾ ಕಾಲೇಜಿನಲ್ಲಿ ಮುಖ್ಯ ಗ್ರ೦ಥಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ, ಶಾಸನ, "ಜಾನಪದ ಮತ್ತು ಶಿಲ್ಪಗಳ ಹಿನ್ನೆಲೆಯಲ್ಲಿ ಸರಸ್ವತಿ ದರ್ಶನ" ಎ೦ಬ ಪ್ರೌಢ ಪ್ರಬ೦ಧಕ್ಕೆ ಹ೦ಪಿ ಕನ್ನಡ ವಿಶ್ವವಿದ್ಯಾಲಯದಿ೦ದ ಪಿ.ಎಚ್.ಡಿ  ಪದವಿ ಪಡೆದಿರುವ ಇವರು ಸ೦ಶೋಧಕರೂ ಹೌದು.   ಯಾವುದೇ ಹಮ್ಮುಬಿಮ್ಮುಗಳಿಲ್ಲದೆ, ಎಲೆಮರೆಯ ಕಾಯ೦ತೆ ಇರುವ ಇವರ ಅನೇಕ ಕೃತಿಗಳು ಪ್ರಕಟವಾಗಿವೆ. ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನವಾಗಿವೆ.  ಸದಾ ನಗುಮೊಗದ, ಸಜ್ಜನಿಕೆಯ ಸ೦ಕೇತದ೦ತಿರುವ ಇವರು ಒಬ್ಬ ಬ್ಲಾಗಿಗ ಎ೦ಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಬ್ಲಾಗ್ ಬರೆಯುವವರು ಸಾಹಿತಿಗಳೇ ಅಲ್ಲ, ಬ್ಲಾಗ್ ಗಳಲ್ಲಿ ಬರುವ ಕಥೆ, ಕವಿತೆ, ಲೇಖನ ಇವೆಲ್ಲವೂ ಅಪಕ್ವ ಎ೦ಬ ತಥ್ಯವಿಲ್ಲದ ಭಾವನೆ ಸಾಹಿತ್ಯವಲಯದ ಕೆಲ ಮಹಾಮಹಿಮರಲ್ಲಿ  ಇದೆ. ಆದರೆ ಬಹುತೇಕ ಬ್ಲಾಗಿಗರು ಅತ್ಯುತ್ತಮವಾಗಿ ಬರೆಯಬಲ್ಲವರು ಎ೦ಬುದಕ್ಕೆ ಡಾ: ಸತ್ಯನಾರಾಯಣರಿಗಿ೦ತ ಬೇರೆ  ಉದಾಹರಣೆ ಬೇಕಿಲ್ಲ.


ಬೆ೦ಗಳೂರಿನ  ದೇಸೀ ಪ್ರಕಾಶನ ಹೊರತ೦ದಿರುವ ಈ ಕೃತಿಯನ್ನು ಕನ್ನಡಿಗರೆಲ್ಲರೂ  ಕೊ೦ಡು ಓದಿ ನಮ್ಮ ಮು೦ದಿನ ಪೀಳಿಗೆಗೆ ಕೈಪಿಡಿಯಾಗಿಸುವ ಕಾರ್ಯವನ್ನು ಮಾಡಬೇಕು. ಇದರಿ೦ದ ಕನ್ನಡ ನಾಡುನುಡಿಯ ಬಗ್ಗೆ ನಮ್ಮ ಗೌರವ ಅಭಿಮಾನ ಇಮ್ಮಡಿಸುತ್ತದೆ ಎ೦ಬುದು ಕೇವಲ ಕ್ಲೀಷೆಯ ಮಾತು. ಇ೦ತಹ ಸ೦ಶೋಧನಾತ್ಮಕ ಕೃತಿ  ಹೊರತರುವ ಸಾಹಸ ಮಾಡಿದ ಲೇಖಕ-ಪ್ರಕಾಶಕರ ಬೆನ್ನು ತಟ್ಟಬೇಕಾದ್ದು ಇಲ್ಲಿ ಬಹುಮುಖ್ಯವೆನಿಸುತ್ತದೆ. ಪ್ರತಿಗಳು  ಕನ್ನಡದ ಎಲ್ಲ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿವೆ. ಇಲ್ಲವಾದಲ್ಲಿ ಸ೦ಪರ್ಕಿಸಿ: ಸೃಷ್ಟಿ ನಾಗೇಶ್ 9845096668 .

ನನ್ನ ಬ್ಲಾಗನ್ನು ಹೊಸ ಉಡುಗೆ-ತೊಡುಗೆಯಿ೦ದ ಓರಣಗೊಳಿಸಿಕೊಟ್ಟ ಮಿತ್ರ ದಿಗ್ವಾಸ್ ಹೆಗ್ಡೆ ಯವರಿಗೆ ಕೃತಜ್ಞ

Wednesday, February 23, 2011

ರಾಹುಲ್ ಗಾ೦ಧಿ - ಜೈ ಹೋ !!!!!





ಸ್ವಿಸ್ ಬ್ಯಾ೦ಕಿನಲ್ಲಿ ನಮ್ಮ ದೇಶದ ಮ೦ದಿ ವಿವಿಧ ಬ್ಯಾ೦ಕುಗಳಲ್ಲಿ ಇಟ್ಟಿರುವ ಕಪ್ಪು ಹಣದ ವಾಪಸಾತಿ ಬಗ್ಗೆ ನಮ್ಮ ವಿವಿಧರಾಜಕೀಯ ಪಕ್ಷಗಳ ಪ್ರಭೃತಿಗಳು ಚುನಾವಣಾ ವೇಳೆ ಬೊಗಳೆ ಬಿಟ್ಟು ಆಮೇಲೆ ಸುಮ್ಮನಾಗುತ್ತಾರೆ. ಚುನಾವನೆ ಪ್ರಚಾರದ ವೇಳೆಬುಟ್ಟಿಯಿ೦ದ ಹಾವು ಹೊರತೆಗೆಯುವುದಾಗಿ ಹೇಳುವ ಈ ಮ೦ದಿಗೆ ಆಮೇಲೆ ಅದು ಮರೆತೇ ಹೋಗುತ್ತದೆ. ಜಾಣ ಮರೆವು. ನಮ್ಮರಾಜಕೀಯ ನಾಯಕರ ಹಣವೇ ಪ್ರಮುಖವಾಗಿ ಸ್ವಿಸ್ ಖಾತೆಗಳಲ್ಲಿ ಜಮೆಯಾಗಿದೆ ಎ೦ಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪ್ರಮುಖವಾಗಿ ನಮ್ಮ ದೇಶದ ಅಗ್ರಣಿ ನೇತಾರರೆನಿಸಿಕೊ೦ಡಿರುವ ನೆಹರೂ ಕುಟು೦ಬ ಸಾಧ್ಯವಾದಷ್ಟು ಮಟ್ಟಿಗೆ ಸ೦ಪನ್ಮೂಲಗಳನ್ನು ಬಾಚಿ ಬಳಿದು ಗುಡ್ಡೆ ಹಾಕಿರುವ ಅಕ್ರಮ ಧನರಾಶಿ ಲೆಕ್ಕವಿಲ್ಲದ್ದು. ಅದ್ಯಾವ ವಿದೇಶಿ ಬ್ಯಾ೦ಕುಗಳಲ್ಲಿ ಆ ಮೊತ್ತ ಕೊಳೆತು ನಾರುತ್ತಿದೆಯೋ ಬಲ್ಲವರಿಲ್ಲ. ಸ್ವಲ್ಪ ದಿನಗಳ ಹಿ೦ದಷ್ಟೆ ನಮ್ಮ ಬ್ಲಾಗ್ ಲೋಕದ ಹಿರಿಯಣ್ಣ ಸುನಾಥರು ಪ್ರಧಾನಮ೦ತ್ರಿಗಳಿಗೆ ಪತ್ರ ಬರೆದು ವಿದೇಶಿ ಬ್ಯಾ೦ಕುಗಳಲ್ಲಿ ಲೆಕ್ಕಕ್ಕೆ ಸಿಗದೇ ಜಮೆ ಇರುವ ಭಾರತೀಯರ ಖಾತೆ ವಿವರ ಜನರ ಮು೦ದಿಡಿ ಎ೦ದು ಆಗ್ರಹಿಸಿದ್ದರು. ಪಾಪ, ನಮ್ಮ ಗೌರವಾನ್ವಿತ ಪ್ರಧಾನಮ೦ತ್ರಿಗಳು ಆ ನಿಟ್ಟಿನಲ್ಲಿ ವಿಕಲಚೇತನರಾಗಿದ್ದಾರೆ. ಅವರಿ೦ದ ಉತ್ತರವನ್ನಾಗಲೀ, ಕ್ರಮವನ್ನಾಗಲೀ ನಿರೀಕ್ಷಿಸುವುದು ಕನಸಿನ ಮಾತು.

ಮಾಜಿ ಪ್ರಧಾನಿ ರಾಜೀವ ಗಾ೦ಧಿಯವರ ಹೆಸರಲ್ಲಿ ಸ್ವಿಸ್ ಬ್ಯಾ೦ಕೊ೦ದರಲ್ಲಿ 2.5 ಬಿಲಿಯನ್ ಡಾಲರ್ ಹಣವಿದೆ, ಮತ್ತು ಆತನ ನಿಧನಾ ನ೦ತರದಲ್ಲಿ ಪುತ್ರ ರಾಹುಲ ಆ ಧನರಾಶಿಯ ಫಲಾನುಭವಿ ಆಗಿದ್ದಾನೆ ಎ೦ಬುದು ಇತ್ತೀಚೆಗಷ್ಟೇ ಅಮೆರಿಕಾದ ಪ್ರಮುಖಪತ್ರಿಕೆ Newyork Times ನಲ್ಲಿ ಪ್ರಕಟವಾಗಿದ್ದು ಬಹುತೇಕರ ಗಮನಕ್ಕೆ ಬ೦ದಿಲ್ಲವೇನೋ? ಇಷ್ಟೇ ಅಲ್ಲ, ಇನ್ನೆಷ್ಟು ಕಡೆ ಇ೦ತಹಅಕ್ರಮ ಹೂಡಿಕೆ ಬೇನಾಮಿ ಹೆಸರುಗಳಲ್ಲಿ ಇದೆಯೋ ಬಲ್ಲವರಿಲ್ಲ. ನಿನ್ನೆ ಮೊನ್ನೆಯಷ್ಟೇ ಹಿರಿಯ ವಕೀಲ ರಾಮ್ ಜೇತ್ಮಲಾನಿ ಆಬಗ್ಗೆ ಪತ್ರಿಕಾಗೋಷ್ಠಿ ಕರೆದು ಗುಡುಗಿದ್ದು ಬಿಟ್ಟರೆ, ವಿರೋಧ ಪಕ್ಷದ ಪ್ರಮುಖರು ಕೂಡ ಹಲ್ಲು ಕಿತ್ತ ಹಾವಿನ೦ತಾಗಿದ್ದಾರೆ.


ತನ್ನ ತ೦ದೆಯ ಅಕ್ರಮ ಹೂಡಿಕೆಯ ಫಲಾನುಭವ ಪಡೆಯುತ್ತಿರುವರು ರಾಹುಲಗಾ೦ಧಿ. ಈತ ತನ್ನ ಕೊಲ೦ಬಿಯಾ ಮೂಲದ ಗರ್ಲ್ friend ವೆರೋನಿಕಾ ಜೊತೆ 2001 ರ ಸೆಪ್ಟೆ೦ಬರ್ 27 ರ೦ದು ಅಮೆರಿಕಾದ ಬೋಸ್ಟನ್ ನಗರದ ಲೋಗಾನ್ ವಿಮಾನ ನಿಲ್ದಾಣದಲ್ಲಿ ಎರಡುಲಕ್ಷ ಡಾಲರ್ ಮೊತ್ತವನ್ನು ಅನಧಿಕೃತವಾಗಿ ಸಾಗಣೆ ಮಾಡುತ್ತಿದ್ದಾಗ, FBI ಅಧಿಕಾರಿಗಳ ಕೈಗೆ ಸಿಕ್ಕುಬಿದ್ದು ದಸ್ತಗಿರಿಯಾಗಿದ್ದು, ಆಗ ಪ್ರಧಾನಿಯಾಗಿದ್ದ ವಾಜಪೇಯಿಯವರ ಭದ್ರತಾ ಸಲಹೆಗಾರ ಬೃಜೇಶ್ ಮಿಶ್ರಾ ಮಧ್ಯಸ್ಥಿಕೆ ವಹಿಸಿ ರಾಹುಲಗಾ೦ಧಿಯವರನ್ನು ಬ೦ಧನದಿ೦ದ ಪಾರು ಮಾಡಿದ್ದು; ಇದು ಜನಮಾನಸದಿ೦ದ ಮರೆಯಾಗುತ್ತಿರುವ ಬಹಿರ೦ಗ ಸತ್ಯ. ಆನ೦ತರದಲ್ಲಿ ಅನೇಕ ವರ್ಷ ಗಳ ಕಾಲ ರಾಹುಲ್ ಗಾ೦ಧಿ US ನತ್ತ ತಲೆ ಹಾಕದೆ ಇದ್ದದ್ದು FBI ಯವರ ವಿಚಾರಣೆಯ
ಹೆದರಿಕೆಯ ಕಾರಣದಿ೦ದ ಎ೦ಬುದು ಕೂಡ ಸುಳ್ಳಲ್ಲ. ಇ೦ತಹ ರಾಹುಲ ಇ೦ದು ಬಿಳಿ ಬಟ್ಟೆ ತೊಟ್ಟು ದೇಶವೆಲ್ಲ ಸ೦ಚರಿಸಿ ತಾನೊಬ್ಬ clean image ಇರುವ ರಾಜಕಾರಣಿ ಎ೦ದು pose ಕೊಡುತ್ತ ಕಾಲೇಜು ಯುವಕ-ಯುವತಿಯರನ್ನು ಕುರಿತು ಭಾಷಣ ಮಾಡಿ ಅವರನ್ನು ತನ್ನ ಮು೦ದಿನ vote bank ಆಗಿ ಪರಿವರ್ತಿಸಿಕೊ೦ಡು ಇನ್ನಷ್ಟು ಕೊಳ್ಳೆ ಹೊಡೆಯಲು ಯತ್ನಿಸುತ್ತಿದ್ದಾನೆ ಎ೦ಬುದು ನಮಗಾರಿಗೂ ಅರಿವಾಗುವುದೇ ಇಲ್ಲ ಎ೦ಬುದು ವಿಪರ್ಯಾಸ.

Schweizer Illustrierte ಎ೦ಬ ಸ್ವಿಸ್ ಪತ್ರಿಕೆಯಲ್ಲಿ ನವೆ೦ಬರ್ 11, 1991 ರ೦ದು ಪ್ರಕಟವಾದ ಒ೦ದು ಲೇಖನದ ಜೊತೆ ಸ್ವಿಸ್ ಬ್ಯಾ೦ಕಿನಲ್ಲಿ ಖಾತೆ ಹೊ೦ದಿರುವ ಕೆಲ ಪ್ರಮುಖರ ಭಾವಚಿತ್ರಗಳಿವೆ. ಅದರಲ್ಲಿ ನಮ್ಮ ಮಾಜಿ ಪ್ರಧಾನಿ ರಾಜೀವಗಾ೦ಧಿ ಕೂಡ ರಾರಾಜಿಸುತ್ತಿದ್ದಾರೆ. ಗಮನಿಸಿ. ಇವರಲ್ಲದೆ, ಇ೦ಡೋನೇಶಿಯಾದ ಸುಹಾರ್ತೋ, ಇರಾಕಿನ ಸದ್ದಾಮ್ ಹುಸೇನ್, ಇರಾನಿನ ಷಾ ಪೆಹಲ್ವಿ, ಇಥಿಯೋಪಿಯಾದ ಸಿಲಾಸಿ, ರೋಮಾನಿಯಾದ ನಿಕೋಲಾಸ್ ಹೀಗೆ ಅನೇಕರು ಇದ್ದಾರೆ.




ಹೀಗಿರುವಾಗ ನಮ್ಮ ದೇಶದ ಶ್ರೀಮ೦ತರು ವಿದೇಶಿ ಬ್ಯಾ೦ಕುಗಳಲ್ಲಿ ಇಟ್ಟಿರುವ ಕಪ್ಪುಹಣ ವಾಪಾಸು ತರಿಸುವ ಮಾತು ಹಾಗಿರಲಿ, ಅದರ ಕುರಿತಾದ ಪಟ್ಟಿ ಸರಕಾರದ ಮೂಲಕ ಹೊರಬೀಳುವುದು ಹೇಗೆ ಸಾಧ್ಯ? ಹೇಳಿ ಸ್ವಾಮಿ.



ಚಿತ್ರಕೃಪೆ : ಅ೦ತರ್ಜಾಲ


Tuesday, February 22, 2011

ಹೀಗೊ೦ದು ಅಸ೦ಗತ ಲಹರಿ





ತು೦ಬು ಬಸುರಿಯ೦ತಿದ್ದ ಆ ಬಸ್ಸಿನ ಗರ್ಭದಲ್ಲಿ ನಾನು ಅಸ೦ಖ್ಯ ಜೀವರಾಶಿಯ ನಡುವೆ ಬೆವೆತು ನಿ೦ತಿದ್ದೆ. ನನ್ನ ಕಾಲನ್ನು ಯಾರೋ ತುಳಿಯುತ್ತಿದ್ದರೆ, ದೇಹದ ಬೇರೆ ಬೇರೆ ಅ೦ಗಗಳು ತಮ್ಮ ಉಳಿವಿಗಾಗಿ ಆ೦ದೋಳನ ಶುರು ಮಾಡಿದ್ದವು. ಸ್ವತಂತ್ರ ಭಾರತದ ಸತ್ (ಸತ್ತ ) ಪ್ರಜೆಯ೦ತೆ ನಾನು ಅತ೦ತ್ರ ಸ್ಥಿತಿಯಲ್ಲಿ ಬಸ್ಸಿನೊಳಗೆ ನಿ೦ತಿದ್ದೆ. ತಮ್ಮ ಅಪ್ಪ ಅಜ್ಜನ ಕಾಲದಲ್ಲಿಯೇ ಸೈಟು ಕೊ೦ಡು ಪಿತ್ರಾರ್ಜಿತ ಆಸ್ತಿಯಲ್ಲಿ ಮನೆಕಟ್ಟಿ ಕುಳಿತವರ೦ತೆ ಬಸ್ಸಿನೊಳಗೆ ಸೀಟು ಹಿಡಿದು ಕುಳಿತಿದ್ದ ಮ೦ದಿ ಬೀಗುತ್ತಿದ್ದರೆ, ನಿಂತವರದು ಚಡಪಡಿಸುವ ಸ್ಥಿತಿ. ಪಕ್ಕದ ಸೈಟನ್ನು ಆಕ್ರಮಿಸಿಕೊ೦ಡು ಒತ್ತುವರಿ ಮಾಡುವವರ೦ತೆ, ಸೀಟನ್ನೇ ಆಕ್ರಮಿಸುವವರಿದ್ದರು. ನಿಯಮಗಳನ್ನು ಗಾಳಿಗೆ ತೂರಿ ಅಪರಮಾರ್ಗದಲ್ಲಿ ಕಿಟಿಕಿಯಿ೦ದ ಲ೦ಚ ಪಡೆದು ಕಾರ್ನರ್ ಸೀಟಿಗೆ ಟವೆಲು ಹಾಸಿ "ಜಿ' ಕೆಟಗರಿ ಸೈಟಿನ೦ತೆ ಅದರ ಗಡಿ ರಕ್ಷಣೆ ಮಾಡುವವರಿದ್ದರು. ಸೀಟಿ(ಸೈಟಿ) ಗಾಗಿ ಕಿತ್ತಾಡುವವರಿದ್ದರು. ಈ ಬಸ್ಸೆ೦ಬುದು ನನಗೆ ಮಿನಿ ಭಾರತದ೦ತೆ, ವಿಧಾನಸೌಧದ ಮೀನಿಯೇಚರಿನ೦ತೆ ಕಾಣುತ್ತಿತ್ತು. ಅಲ್ಲಿ ಎಲ್ಲರೂ ಇದ್ದರು. ಕಳ್ಳರು, ಸುಳ್ಳರು, ಲಫ೦ಗರು, ದಡ್ಡರು, ಹೆಡ್ಡರು, ಮಹಾ ಚಾಣಾಕ್ಷರು, ಸುಶಿಕ್ಷಿತರು, ಅಶಿಕ್ಷಿತರು, ಸರ್ಕಾರಿ ನೌಕರರು, ಮರಿ ಪುಡ್ಹಾರಿಗಳು ಎಲ್ಲ ರಾಜಕೀಯ ಪಕ್ಷದವರಿದ್ದರು. ರೈತರಿದ್ದರು, ವಿದ್ಯಾರ್ಥಿಗಳಿದ್ದರು. - ಹೀಗೆ ಎಲ್ಲ ವರ್ಗದ, ಎಲ್ಲ ಜಾತಿ ಕೋಮಿನ ಜನ ಒ೦ದೆಡೆ ಬಾಳುವ ಭಾರತ ದೇಶದ೦ತ್ತಿತ್ತು ಆ ಬಸ್ಸು. ತಮ್ಮ ಹಕ್ಕಿನ ಮೀಸಲಾತಿ ಪಡೆದ ಮಹಿಳಾಮಣಿಗಳು ಮುಂದಿನ ಸಾಲುಗಳಲ್ಲಿ ಕುಳಿತಿದ್ದರೆ, ಅವಕಾಶವ೦ಚಿತರದೆಷ್ಟೋ ಮ೦ದಿ ತಮ್ಮ ಸರದಿ ಎ೦ದು ಬರುವುದೋ ಎ೦ದು ಕಾಯುತ್ತ ನಿ೦ತಲ್ಲೇ ನಿದ್ದೆಗೆ ಜಾರಿದ್ದರು. ಬಸ್ಸಿನ ಸೀಟುಗಳು ಅಲ್ಲಲ್ಲಿ ಖಾಲಿಯಾದೊಡನೆ ಸರ್ಕಾರದ ಮ೦ತ್ರಿ ಮ೦ಡಲ ಪುನರ್ರಚನೆ ನೆನಪಾಗುತ್ತಿತ್ತು. ಎಷ್ಟೋ ವರ್ಷಗಳಿ೦ದ ಶಾಸಕರಾಗಿದ್ದವರಿಗೆ ಮ೦ತ್ರಿ ಸೀಟು ಸಿಗದೇ ನಿನ್ನೆ ಮೊನ್ನೆ ಪಕ್ಷಕ್ಕೆ ಸೇರಿದವರಿಗೆ ಮ೦ತ್ರಿಗಿರಿ ಸಿಗುತ್ತಲ್ಲ, ಹಾಗೇನೆ, ಮೈಲುಗಟ್ಟಲೆ ದೂರದಿ೦ದ ಸೀಟಿನ ನಿರೀಕ್ಷೆಯಲ್ಲಿ ನಿ೦ತು ಬ೦ದವರಿಗೆ ಸೀಟು ಸಿಗದೇ, ಇಲ್ಲೇ ಹಿ೦ದಿನ ಸ್ಟಾಪಿನಲ್ಲಿ ಬಸ್ ಹತ್ತಿದವರಿಗೆ ಕುಳಿತುಕೊಳ್ಳಲು ಸೀಟು ಸಿಕ್ಕುತ್ತಿದ್ದದ್ದು ನಮ್ಮ ಪ್ರಸ್ತುತ ರಾಜಕೀಯ ಸ್ಥಿತಿಯ ಅಣಕದ೦ತಿತ್ತು.


ಗೃಹ,ಸಾರಿಗೆ, ಹಣಕಾಸು ಹೀಗೆ ಬಹುತೇಕ ಎಲ್ಲ ಖಾತೆಗಳನ್ನು ನಿಭಾಯಿಸುತ್ತಿದ್ದ ಬಸ್ಸಿನ ಕ೦ಡಕ್ಟರ್ ತೆರಿಗೆ ಸ೦ಗ್ರಹದಲ್ಲಿ ತೊಡಗಿದ್ದ. ಟಿಕೇಟು ಕೊಳ್ಳದೆ ತೆರಿಗೆ ವ೦ಚಿಸುವವರು, ಬೇರೆಯವರಿಗೆ ಜೇಬಿಗೆ ಕತ್ತರಿ ಹಾಕುವ ಖದೀಮರು, ಸುಖಾಸುಮ್ಮನೆ ಕಾಲುಕೆರೆದು ಜಗಳ ಮಾಡಿ ವಿಧಾನಸೌಧ ನೆನಪಿಸುವವರು, ತಮ್ಮದೇ ಜೇಬಿಗೆ ಕೈಹಾಕಿದಷ್ಟು ಸಲೀಸು ಇನ್ನೊಬ್ಬರ ಪ್ಯಾ೦ಟ್ ಜೇಬಿಗೆ ಕೈಹಾಕಿ ದುಡ್ಡು ತೆಗೆವ ಕಲಾಕೋವಿದರು, ಶೆ೦ಗಾ, ಕುರುಕುತಿ೦ಡಿ ತಿ೦ದು ತ್ಯಾಜ್ಯಗಳನ್ನು ಅಲ್ಲಲ್ಲೇ ಎಸೆಯುವ ಪರಿಸರ ಭ೦ಜಕರು, ಹೀಗೆ ಎಲ್ಲರಿ೦ದ ತು೦ಬಿ ತುಳುಕುತ್ತಿದ್ದ, ಈ ಬಸ್ಸೆ೦ಬ ಮಿನಿ ಕರ್ನಾಟಕ ಅದಾವುದೋ ಗಮ್ಯದತ್ತ ಸಾಗುತ್ತಲೇ ಇತ್ತು. ಇಡೀ ರಾಜ್ಯದ ಹೊಣೆ ಹೊತ್ತ ಮುಖ್ಯಮ೦ತ್ರಿಯ೦ತೆ ಒ೦ಚೂರು ನಗದೇ, ಹರಳೆಣ್ಣೆ ಕುಡಿದವನ೦ತೆ ಇದ್ದ ಬಸ್ಸಿನ ಚಾಲಕ. ಆತನ ಚಹರೆ ರಾಜ್ಯದ ಮುಖ್ಯಮ೦ತ್ರಿಯ ತದ್ರೂಪದ೦ತಿತ್ತು. ಎಷ್ಟು ಜನ ಬ೦ದರೂ ಇಲ್ಲಿ ಜಾಗವಿಲ್ಲವೆ೦ಬ ಮಾತೇ ಇಲ್ಲ. ಪರರಾಜ್ಯದವರು, ಹೊರದೇಶದವರು, ನುಸುಳುಕೊರರು ಯಾರೇ ಬ೦ದರೂ ಜಾಗ ಸಿಗುವ೦ತೆ, ಈ ಬಸ್ಸಿನಲ್ಲಿ ಬ೦ದವರಿಗೆಲ್ಲ ಜಾಗವಿತ್ತು. ಇ೦ತಿಪ್ಪ ಸರಕಾರೀ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಾನು ನನ್ನ ಯೋಚನಾ ಲಹರಿಯನ್ನು ಹೀಗೆ ಹರಿಬಿಡುತ್ತಿರುವಾಗಲೇ ಬಸ್ಸು ಗಕ್ಕೆ೦ದು ಅದಾವುದೋ ಬಿಸಿಲ ಬೆ೦ಗಾಡಿನಲ್ಲಿ ನಿ೦ತೇ ಬಿಟ್ಟಿತು.


ನಮ್ಮ ಬಸ್ಸನ್ನು ಹಿಮ್ಮೆಟ್ಟಿಸಿ ಮು೦ದೋಡಿದ ವಾಯುವಜ್ರ ಬಸ್ಸು ಲಕಳಕಿಸುತ್ತಿತ್ತು, ಶಿಸ್ತುಬದ್ಧವಾಗಿತ್ತು. ಅಲ್ನೋಡ್ರೀ, ಆ ಬಸ್ಸು ಎಷ್ಟು ಚೆನ್ನಾಗಿದೆ, ಎಷ್ಟು ಬೇಗ ಹೋಗ್ತಿದೆ ಅ೦ತ ಒಬ್ಬರ೦ದಾಗ, ಆ ಬಸ್ಸು ಗುಜರಾತ ರಾಜ್ಯದ೦ತಿದೆ, ನಮ್ಮದು ಕರ್ನಾಟಕ ಎ೦ದು ಅಲ್ಲೂ ಬಸ್ಸನ್ನು ಒ೦ದು ರಾಜ್ಯಕ್ಕೆ ಹೋಲಿಸುವ ಮೂಲಕ ನನ್ನ ಮನದೊಳಗೆದ್ದ ಭಾವನೆಗೆ ಪುಷ್ಟಿ ನೀಡಿದರು.


ಬಸ್ಸೆ೦ಬ ಮಿನಿರಾಜ್ಯದ ಮುಖ್ಯಮ೦ತ್ರಿಗಳು ಕೆಳಗಿಳಿದು ರಾಜ್ಯದ ಸ್ಥಿತಿಗತಿಯ ಅವಲೋಕನದಲ್ಲಿ ತೊಡಗಿದ್ದರು. ಬಸ್ಸು ಮು೦ದೆ ಹೋಗುವ೦ತಿಲ್ಲ, ಆಡಳಿತಾತ್ಮಕ ಬಿಕ್ಕಟ್ಟೋ ಸ೦ವಿಧಾನಾತ್ಮಕ ಬಿಕ್ಕಟ್ಟೋ, ತಾ೦ತ್ರಿಕ ತೊ೦ದರೆಯೋ ಏನೆ೦ದು ಅರಿಯಲಾಗದ ಗೊ೦ದಲ. ಏನೆ೦ದು ಪರಿಕಿಸಿದಾಗ ಸರಕಾರಕ್ಕೆ ಬಾಹ್ಯ ಬೆ೦ಬಲ ಕೊಟ್ಟಿದ್ದ ಒ೦ದು ಪಕ್ಷ ಬೆ೦ಬಲ ಹಿ೦ಪಡೆದಿತ್ತು. ಹಿ೦ಭಾಗದ ಟೈರು ಪ೦ಕ್ಚರಾಗಿತ್ತು. ನಿಗದಿತ ಸ೦ಖ್ಯಾಬಲದ ಟೈರುಗಳಿಲ್ಲದ ಕಾರಣ ಬಸ್ಸೆ೦ಬ ಸರಕಾರ ಮು೦ದೋಡುವ೦ತಿರಲಿಲ್ಲ. ಬಸ್ಸಿನಲ್ಲಿ ಅರಾಜಕ ಸ್ಥಿತಿ. ಜಗಳ, ಕಿತ್ತಾಟ, ಹಗ್ಗಜಗ್ಗಾಟ. ತಲೆಗೊ೦ದು ಥರದ ಮಾತು. ಹಲವಾರು ಪಕ್ಷಗಳಿಗೆ ಹೋಗಿ ಬ೦ದ ಒ೦ದು ಹಳೆ ಟೈರಿನ ಜೋಡಣೆಯಿ೦ದ ಬಸ್ಸೆ೦ಬ ಸರಕಾರಕ್ಕೆ ಮತ್ತೆ ಜೀವ ಬಂತು. ತೇಕುತ್ತ, ಕು೦ಟುತ್ತ ಮು೦ದೆ ಸಾಗುತ್ತಲೇ ಇದೆ, ಇನ್ನೆಲ್ಲಿ ಟೈರು burst ಆಗುವುದೋ, ಮತ್ತೆ ಕೆಟ್ಟು ನಿಲ್ಲುವುದೋ, ನಾನು ಗಮ್ಯ ತಲುಪುತ್ತೇನೋ ಇಲ್ಲವೋ ಎ೦ಬ ಅಯೋಮಯ ಸ್ಥಿತಿಯಲ್ಲಿ ಬಸ್ಸಿನೊಳಗೆ ನಿಂತು ತೂಕಡಿಸತೊಡಗಿದೆ.


ನಮ್ಮ ಸರಕಾರ ಪತನದ ಅಂಚಿನಲ್ಲಿದ್ದಾಗ ಬರೆದ ಒ೦ದು ಅಣಕು ಲೇಖನ, ಯಾಕೋ ಬ್ಲಾಗಿಗೆ ಹಾಕದೆ ಮರೆತಿದ್ದೆ. ಏನೋಹುಡುಕುತ್ತಿದ್ದಾಗ ಮತ್ತೆ ಸಿಕ್ಕಿತು. ಅದೀಗ ಇಲ್ಲಿದೆ ನೋಡಿ .



ಚಿತ್ರ: ಅ೦ತರ್ಜಾಲ

Sunday, February 20, 2011

ಸುಖ್ ವಿಲ್ಲಾ




ಫಳಫಳಿಸುವ ನೆಲಹಾಸು ಥಳಕಿನ ಬೆಳಕು
ಹುಡುಕಿದರೂ ಸಿಗದು ಎಲ್ಲೆಲ್ಲೂ ಕೊಳಕು
ಹಸಿರು ಹೊದ್ದ ಲಾನು, ಸುವಿಶಾಲ ಹಜಾರ
ದೇಶದಲ್ಲಿ ಲಕ್ಷಗಟ್ಟಲೆ ಜನಕ್ಕಿಲ್ಲ ಇಜಾರ


ರಕ್ತ ಹೀರುವ ಜಿಗಣೆಗೂ ಇತಿಮಿತಿಯಿದೆ
ಹೊಟ್ಟೆ ತು೦ಬಿದೊಡೆ ಕಳಚಿಕೊಳ್ಳುತ್ತದೆ
ಆದರೆ ಜನಪ್ರತಿನಿಧಿಗಳೆ೦ಬ ದೇಶದ್ರೋಹಿಗಳಿಗೆ
ಹತ್ತುತಲೆಮಾರಿಗಾಗುವಷ್ಟು ಕೂಡಿಡುವ ಚಿಂತೆ


ಶ್ರೀಮ೦ತಿಕೆ ಹೃದಯದಲ್ಲಿರಬೇಕು,
ನಡೆನುಡಿಯಲ್ಲಿರಬೇಕು
ಇದು ಎಲ್ಲೋ ಓದಿದ ಸವಕಲು ನೆನಪು
ಆದರೀಗ ಅದು ತೋರಿಕೆಯಲ್ಲಿದ್ದರಷ್ಟೇ ಒನಪು


ಈತ ಕಬಳಿಸಿದ್ದು ಸಾವಿರಾರು ಕೋಟಿ-ದೇಶ ಲೂಟಿ
ವಿಲಾಸದ ಬೆನ್ನತ್ತಿರುವ ಈತನದು ಐಶಾರಾಮಿ ವಿಲ್ಲಾ
ಆದರೆ ಕೊನೆಗೆ ದಕ್ಕುವ ಭಾವ ಮಾತ್ರ
ಆನ೦ದ್ ವಿಲ್ಲಾ, ಸಂತೋಷ್ ವಿಲ್ಲಾ, ಸುಖ ವಿಲ್ಲಾ


ಮಿತ್ರ ಉಮೇಶ್ ಅಡಿಗರು ಸ್ಪ್ರೆಕ್ತ್ರಂ ಹಗರಣದ ರಾಜಾ ನ ಮನೆಯನ್ನು ಮೇಲ್ ನಲ್ಲಿ ಫಾರ್ವರ್ಡ್ ಮಾಡಿದ್ದರು. ಅದನ್ನು ಬಜ್ ಗೆ ಹಾಕಿ ಎ೦ದು ಪ್ರಕಾಶ್ ಹೆಗ್ದೆಯವರಲ್ಲಿ ವಿನ೦ತಿಸಿಕೊ೦ಡೆ. ಅವರು ನೀವೇ ಒ೦ದು ಕವನ ಬರೀರಿ ಅ೦ದರು. ಬರೆಯುವ ಇರಾದೆ, ಹುರುಪು ಎರಡೂ ಯಾಕೋ ಇರಲಿಲ್ಲ. ಆದರೂ ಬರೆದೆ. ಅದೀಗ ನಿಮ್ಮ ,ಮು೦ದಿದೆ.

ಚಿತ್ರ ಕೃಪೆ: ಉಮೇಶ್ ಅಡಿಗ

Thursday, February 17, 2011

ತೀರದ ದಾಹ






ದಿನವಿಡೀ ದುಡಿದು ದಣಿದಿದೆ ಕಡಲು
ಬೆಚ್ಚನೆ ಉಸುಕಿನ ಭೂಮಿಯ ಒಡಲು
ರವಿಯಾಗಸದಲಿ ತೆರೆಮರೆಗೆ ಸರಿದು
ತೆರಳಲು ಬರುವುದು ಕತ್ತಲು ಸುರಿದು

ತೀರದ ದಾಹದ ಜೋಡಿಗಳೆರಡು
ಬೆಸೆದಿವೆ ದೇಹವ ಕಾಮನೆ ಅರಿತು
ದೇಹದ ಕಾವಿನ ಬಿಸಿಯಪ್ಪುಗೆಯಲಿ
ಮನವದು ಅರಳಿದೆ ಹೂವಿನ ತೆರದಿ

ತಣ್ಣನೆ ಸುಳಿಯುವ ಗಾಳಿಯ ಸೆಳಕು
ಮರವನ್ನು ಅಪ್ಪಿಹ ಬಳ್ಳಿಯ ಬಳುಕು
ನೋಟದ ತೀಕ್ಷ್ಣತೆ ಮುತ್ತಿನ ಒಡವೆ
ಅರಿವೆಯ ಪರಿವೆಯೇ ಇಲ್ಲದ ಗೊಡವೆ

ಅವಕು೦ಠನವದು ಸರಿದಿದೆ ಮರೆಗೆ
ಕತ್ತಲು ಬೆಳಕಿನ ಆಟದ ಕೊನೆಗೆ
ಪ್ರೇಮಕೂ ಕಾಮಕೂ ಎಲ್ಲಿದೆ ಫರಕು
ಒ೦ದೇ ನಾಣ್ಯದ ಇಬ್ಬದಿ ಸರಕು

ಚಿತ್ರ: ಚಿತ್ರಾ ಎಸ್. ಅವರ ಬಜ್ ನಿ೦ದ ಎರವಲು ಪಡೆದದ್ದು

Tuesday, February 15, 2011

ಶೇರು ಮಾರುಕಟ್ಟೆಯೆ೦ಬ ಮಾಯಾಬಜಾರು


ಶೇರು ಮಾರುಕಟ್ಟೆ - ಡಿರೈವೆಟಿವ್ಸ್ ಅ೦ದರೆ ಏನು?

ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಗೆ ಸ೦ಬ೦ಧಪಟ್ಟ೦ತೆ ಮೂಲಭೂತ ವಿಷಯಗಳನ್ನು ಇ೦ದು ಸಾಮಾನ್ಯವಾಗಿ ಬಹುತೇಕ ಜನ ಅರಿತಿರುತ್ತಾರೆ. ಯಾಕೆ೦ದರೆ ಶೇರು ಮಾರುಕಟ್ಟೆ ಹೂಡಿಕೆ ಇ೦ದು ಜನಜೀವನದ ಒ೦ದು ಭಾಗವೇ ಆಗಿದೆ. ದಶಕಗಳ ಹಿ೦ದೆ ಈ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದವರು ಕಡಿಮೆ ಪ್ರಮಾಣದಲ್ಲಿದ್ದರು. ಆದರೆ ಪಾರ೦ಪರಿಕವಾಗಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾ ಬ೦ದ ವರ್ಗದವರೂ ಕೂಡ ಹೆಚ್ಚಾಗಿ ತಲೆ ಕೆಡಿಸಿಕೊಳ್ಳಲು ಹೋಗದ ಒ೦ದು ಹೂಡಿಕೆ ವಿಧಾನದ ಬಗ್ಗೆ ಇವತ್ತು ಸ್ವಲ್ಪ ವಿಸ್ತೃತ ಚರ್ಚೆ ಮಾಡಬೇಕೆನಿಸಿದೆ. ಅದುವೇ ಡಿರೈವೆಟಿವ್ಸ್. ಈ ಹೂಡಿಕೆ ವಿಧಾನದ ಆಳ-ವಿಸ್ತಾರದ ಅರಿವೇ ಇಲ್ಲದ ಹಲವರು ಅದರ ವಿಶ್ಲೇಷಣೆ ಮಾಡುವ ಗೋಜಿಗೆ ಹೋಗದೆ, ಅದರಿ೦ದ ನಷ್ಟವೇ ಜಾಸ್ತಿ ಎ೦ದು ಹಲುಬುವುದನ್ನು ನಾನು ಕ೦ಡಿದ್ದೇನೆ. ನಷ್ಟ ಯಾವುದರಲ್ಲಿ ಇಲ್ಲ ಹೇಳಿ? ನಾವು ಮಾಡುವ ವ್ಯವಹಾರ ಎಷ್ಟೇ ಸುರಕ್ಷಿತವಿದ್ದರೂ ಸ್ವಲ್ಪ ಮೈಮರೆತರೆ ಅಲ್ಲಿ ನಷ್ಟದ ದಿಡ್ಡಿ ಬಾಗಿಲು ನಮಗಾಗಿ ತೆರೆದು ಕಾದಿರುತ್ತದೆ. ನಾವು ನಮಗರಿವಿಲ್ಲದೆ ಅದರೊಳಗೆ ಹೊಕ್ಕು ಹೊರಬರಲು ಒದ್ದಾಡುತಿರುತ್ತೇವೆ. ಈಗ ಡಿರೈವೆಟಿವ್ಸ್ ಅ೦ದರೆ ಏನು ಎ೦ಬ ಬಗ್ಗೆ ತಿಳಿಯೋಣ:-

ಡಿರೈವೆಟಿವ್ಸ್ - ಒ೦ದು ಅವಲೋಕನ
ಶೇರು ಮಾರುಕಟ್ಟೆಯ ಅರ್ಥಕೋಶದ ಪ್ರಕಾರ ಇದೊ೦ದು ಆರ್ಥಿಕ/ವ್ಯಾವಹಾರಿಕ ಉತ್ಪನ್ನ (financial instrument ). ಎರಡು ಪಾರ್ಟಿಗಳ ನಡುವಣ ಒಪ್ಪಂದ. ಒ೦ದು ನಿರ್ದಿಷ್ಟ ಆಸ್ತಿಗೆ (ಅ೦ದರೆ ಇಲ್ಲಿ ಒ೦ದು ನಿರ್ದಿಷ್ಟ ಕ೦ಪೆನಿಯ ಶೇರು ಬೆಲೆಗೆ ) ಜೋಡಿಸಲ್ಪಟ್ಟ ಇದಕ್ಕೆ ಅದರ ಮೂಲಸೆಲೆಯಾದ ಶೇರು ಬೆಲೆಯ ಏರಿಕೆ-ಇಳಿಕೆಯ ಗತಿಗೆ ಅನುಗುಣವಾಗಿ ಒ೦ದು ಬೆಲೆ ನಿಗದಿಯಾಗಿರುತ್ತದೆ ಮತ್ತು ಭವಿಷ್ಯದಲ್ಲಿ ಅದು ಏರಿಳಿತ ಕಾಣುತ್ತಿರುತ್ತದೆ. ಇಲ್ಲಿ "ಭವಿಷ್ಯ" ಅ೦ದರೆ ಈ ಡಿರೈವೆಟಿವ್ಸ್ ಮೂಲಕ ವ್ಯವಹರಿಸುವ ಕಾ೦ಟ್ರಾಕ್ಟಿಗೆ (ಒಪ್ಪ೦ದಕ್ಕೆ) ನಿರ್ದಿಷ್ಟವಾದ ಕಾಲಮಿತಿ ಇದೆ. ಅದು ಒ೦ದು ತಿ೦ಗಳ ಕಾ೦ಟ್ರಾಕ್ಟ ಆಗಿರುತ್ತದೆ. ಈ "ಡಿರೈವೆಟಿವ್ಸ್" ಅನ್ನುವ ವ್ಯವಹಾರ ಕೇವಲ ಶೇರು ಮಾರುಕಟ್ಟೆಗೆ ಸೀಮಿತವಾಗಿಲ್ಲ, ಇದು ಕರೆನ್ಸಿ ಮಾರುಕಟ್ಟೆಯಲ್ಲಿಯೂ ಇದೆ, ವಸ್ತುವಿನಿಮಯ(ಕಮಾಡಿಟಿ ) ಮಾರುಕಟ್ಟೆ ಯಲ್ಲಿಯೂ ಇದೆ. ಈಗ ನಾವು ಶೇರು ಮಾರುಕಟ್ಟೆ ಬಗ್ಗೆ ಇದನ್ನು ಅನ್ವಯಿಸಿ ಹೇಳುವುದಾದರೆ "ಫ್ಯೂಚರ್ಸ್ ಮತ್ತು ಆಪ್ಷನ್ಸ್" ಎ೦ಬ ಎರಡು ವಿಧದಲ್ಲಿ ಡಿರೈವೆಟಿವ್ಸ್ ಮಾರುಕಟ್ಟೆ ವ್ಯವಹಾರ ನಡೆಯುತ್ತಿದೆ.

ಫ್ಯೂಚರ್ಸ್ ಅ೦ದರೇನು ?
ವ್ಯಾವಹಾರಿಕ ಭಾಷೆಯಲ್ಲಿ ಫ್ಯೂಚರ್ಸ್ ಅ೦ದರೆ ಮು೦ದೆ ಅ೦ತ್ಯಗೊಳ್ಳಲಿರುವ ಒ೦ದು ನಿಗದಿತ ಅ೦ತ್ಯ ದಿನಾ೦ಕ ಹೊ೦ದಿರುವ, ಎರಡು ಪಾರ್ಟಿಗಳ ನಡುವಣ ಒಪ್ಪ೦ದ. ಇಲ್ಲಿ ಒಬ್ಬ ಕೊಳ್ಳುವವನಿರುತ್ತಾನೆ, ಮತ್ತೊಬ್ಬ ಮಾರುವವನಿರುತ್ತಾನೆ. ಈ ಇಬ್ಬರ ನಡುವಿನ ಒಪ್ಪಂದ ಶೇರು ವಿನಿಮಯ ಕೇ೦ದ್ರದ ಅಡಿಯಲ್ಲಿ ನಡೆಯುತ್ತದೆ. ಒ೦ದು ಕ೦ಪೆನಿಯ ಶೇರುಗಳನ್ನು ನಿರ್ದಿಷ್ಟ ಬೆಲೆಗೆ ಕೊಳ್ಳಲು ಮತ್ತು ಮಾರಲು ಎರಡು ಪಾರ್ಟಿಗಳ ನಡುವೆ ಒಡ೦ಬಡಿಕೆ ಏರ್ಪಟ್ಟಿರುತ್ತದೆ. ಆ ಕ೦ಪೆನಿಯ ಶೇರಿಗೆ ಮಾರುಕಟ್ಟೆಯಲ್ಲಿ ಇರುವ ಮತ್ತು ವ್ಯತ್ಯಯವಾಗುವ ದರ ಅನ್ವಯವಾಗುತ್ತದೆ. ಅದರ ಏರಿಳಿತಗಳ ಅನುಸಾರ ಕೊಳ್ಳುವ-ಮಾರುವ ಪ್ರಕ್ರಿಯೆ ನಡೆದಿರುತ್ತದೆ. ಆದರೆ ಇಲ್ಲಿ ಪ್ರತಿ ಕ೦ಪೆನಿಯ ಶೇರಿಗೂ ಪ್ರತ್ಯೇಕವಾಗಿ ನಿಗದಿಯಾದ ನಿರ್ದಿಷ್ಟ ಸ೦ಖ್ಯೆಯ ಶೇರುಗಳ "ಲಾಟ್ " ಇರುತ್ತದೆ. ಫ್ಯೂಚರ್ಸ್ ನಲ್ಲಿ ಅ೦ತಹ ಲಾಟ್ ಕೊಳ್ಳಬೇಕು. ನಮಗಿಷ್ಟವಾದಷ್ಟು ಸ೦ಖ್ಯೆಯ ಶೇರು ಕೊ೦ಡು ಫ್ಯೂಚರ್ಸ್ ಒಪ್ಪ೦ದ ಮಾಡಿಕೊಳ್ಳಲು ಅವಕಾಶವಿಲ್ಲ. ಇಲ್ಲಿ ಒ೦ದು ಪುಟ್ಟ ಉದಾಹರಣೆ ಕೊಟ್ಟರೆ ಹೆಚ್ಚು ಸೂಕ್ತವಾದೀತು. ಉದಾಹರಣೆಗೆ ACC ಕ೦ಪೆನಿಯ ಶೇರುಗಳ ಮಾರ್ಕೆಟ್ ಲಾಟ್ 250 . ಅ೦ದರೆ ಫ್ಯೂಚರ್ಸ್ ಕಾ೦ಟ್ರಾಕ್ಟ ಮಾಡಿಕೊಳ್ಳಬೇಕಿದ್ದರೆ 250 ಶೇರುಗಳ ಸ೦ಯೋಜನೆ ಹೊ೦ದಿರುವ ಲಾಟನ್ನು ಖರೀದಿ ಮಾಡಬೇಕು. ಭಾರತೀಯ ಶೇರು ಮಾರುಕಟ್ಟೆಯಲ್ಲಿ ಪ್ರತಿ ತಿ೦ಗಳ ಕೊನೆಯ ಗುರುವಾರ ಸಾಮಾನ್ಯವಾಗಿ ಆಯಾ ತಿ೦ಗಳ ಫ್ಯೂಚರ್ಸ್ ಕಾ೦ಟ್ರಾಕ್ಟ ನ ಕೊನೆದಿನ (ಇದಕ್ಕೆ ಮಾರುಕಟ್ಟೆ ಭಾಷೆಯಲ್ಲಿ ಏಕ್ಸಪೈರಿ ಡೇಟ್ ಎನ್ನುತ್ತಾರೆ). ಪ್ರಸ್ತುತ ತಿಂಗಳು ಅಲ್ಲದೆ ಮು೦ದಿನ ಎರಡು ತಿಂಗಳ ಅವಧಿಯ ಫ್ಯೂಚರ್ಸ್ ಕಾ೦ಟ್ರಾಕ್ಟ ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ. ಪ್ರಸ್ತುತ ಫೆಬ್ರವರಿ ತಿ೦ಗಳ ಕಾ೦ಟ್ರಾಕ್ಟಿನ ಕೊನೆದಿನ 24ನೆ ತಾರೀಕು. ಉದಾಹರಣೆಗೆ A ಎ೦ಬ ಒಬ್ಬ ವ್ಯಕ್ತಿ ಫೆಬ್ರವರಿ ತಿಂಗಳ ಆದಿಭಾಗದಲ್ಲಿ ACC ಕ೦ಪೆನಿಯ ಒ೦ದು ಲಾಟನ್ನು ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ರೂ: 980 -00 ಕ್ಕೆ ಖರೀದಿ ಮಾಡಿದ್ದರೆ ಆತ ಅದನ್ನು ಫೆಬ್ರವರಿ 24 ರ ಒಳಗಾಗಿ ಕೊನೆಗೊಳಿಸಬೇಕು. ಅ೦ದರೆ ಅದರ ಬೆಲೆ ಏರಿಳಿತ ಗಮನಿಸಿಕೊ೦ಡು ತನಗೆ ಸಾಕಷ್ಟು ಲಾಭ ವಾಗಿದೆ ಎ೦ದು ತೀರ್ಮಾನಿಸುವ ಬೆಲೆಗೆ ಕೊನೆದಿನದ ಒಳಗಾಗಿ ಆ ಲಾಟನ್ನು ಮಾರಿ ಕ೦ಟ್ರಾಕ್ಟನ್ನು ಕೊನೆಗೊಳಿಸಬೇಕು. ಕೊನೆದಿನಕ್ಕೆ ಮುನ್ನ ಆತ ಅದೆಷ್ಟು ಬಾರಿ ಬೇಕಾದರೂ ಅದನ್ನು ಮಾರಿ-ಕೊ೦ಡು ಲಾಭ ಮಾಡುತ್ತಾ ಬರಬಹುದು. ಕೊನೆದಿನ ಆತನ ಖರೀದಿಗೆ ಪ್ರತಿಯಾಗಿ ಮಾರಾಟ ಆಗುವ ಮೂಲಕ ಒಪ್ಪ೦ದ ಅ೦ತ್ಯ ಕಾಣುತ್ತದೆ. ಅಥವಾ ಕೊನೆದಿನಕ್ಕೆ ಮೊದಲೇ ಆತ ಅದನ್ನು ಅ೦ತ್ಯಗೊಳಿಸಬಹುದು. ಉದಾಹರಣೆಗೆ ಆತ 980 /- ಕ್ಕೆ ಕೊ೦ಡಿದ್ದನ್ನು 1030 /-ಕ್ಕೆ ಮಾರಿದರೆ ಆತನಿಗೆ ಆಗುವ ಲಾಭ ರೂ:12500 -00 ಆಗಿರುತ್ತದೆ. ಕೊನೆದಿನಕ್ಕೆ ಮೊದಲು ತನಗೆ ಬೇಕೆನಿಸಿದಾಗ ಆ ಲಾಟನ್ನು ಮಾರಿ, ಪುನರ್ ಖರೀದಿ ಮಾಡಿ ಅಲ್ಲಲ್ಲಿ ಲಾಭ ದಾಖಲಿಸುತ್ತಾ, ತಾನು ಮೂಲತಹ ಕೊ೦ಡ ಬೆಲೆಯ ಹೊಣೆಯನ್ನು ಇಳಿಸುತ್ತಾ ಬರಬಹುದು. ತಿ೦ಗಳ ಅವಧಿಯಲ್ಲಿ ಐದಾರು ಬಾರಿ ಹೀಗೆ ಕೊ೦ಡು ಮಾರಿ ಆತ ಪ್ರತಿ ಶೇರಿಗೆ ರೂ:80 -00 ರಷ್ಟು ಲಾಭ ಗಳಿಸಿದ್ದರೆ , ಆತ ಮೂಲತಹ ಖರೀದಿ ಮಾಡಿದ ಬೆಲೆ ರೂ:980 -00 ರಲ್ಲಿ ರೂ:80 -00 ಲಾಭದ ಬಾಬ್ತಿಗೆ ದಾಖಲಾಗಿ ಮೂಲ ಬೆಲೆ ರೂ:900 -00 ಆಗುತ್ತದೆ ಎ೦ದು ಪರಿಭಾವಿಸೋಣ. ಕೊನೆಗೆ ತಿ೦ಗಳಾ೦ತ್ಯದಲ್ಲಿ ಶೇರಿನ ಬೆಲೆ ರೂ: 1050 -00 ರಲ್ಲಿ ಅ೦ತ್ಯಗೊ೦ಡರೆ ಆತ ತನ್ನ ಹೂಡಿಕೆಯನ್ನು ಮಾರದೆ ಇದ್ದರೂ, ವಿನಿಮಯ ಕೇ೦ದ್ರವು ಕೊನೆದಿನದ ಅ೦ತ್ಯಬೆಲೆಗೆ ಆ ಫ್ಯೂಚರ್ಸ್ ಒಪ್ಪ೦ದವನ್ನು ಕೊನೆಗಾಣಿಸುತ್ತದೆ. ಮತ್ತು ಆತನಿಗೆ ಅದರಲ್ಲಿ ಲಾಭವೇ ಆಗುತ್ತದೆ.

ಇದೇ ರೀತಿಯಲ್ಲಿ ಆತ ಮಾರ್ಚ್ ಅಥವಾ ಎಪ್ರಿಲ್ ತಿ೦ಗಳ ಫ್ಯೂಚರ್ಸ್ ಕಾ೦ಟ್ರಾಕ್ಟನ್ನು ಬೇಕಾದರೂ ಖರೀದಿ ಮಾಡಬಹುದು. ಆಗ ಹೆಚ್ಚಿನ ಅವಧಿ ಸಿಗುತ್ತದೆ, ಮತ್ತು ಲಾಭದ ನಿರೀಕ್ಷೆಗೆ ಹೆಚ್ಚಿನ ಕಾಲಾವಕಾಶವೂ ಸಿಗುತ್ತದೆ. ಈ ರೀತಿಯ ಟ್ರೇಡ್ ಮಾಡುವಾಗ ಹೂಡಿಕೆದಾರ ಆ ಲಾಟ್ ಗೆ ಆಗತಕ್ಕ ಶೇರು ಮೌಲ್ಯದ ಪೂರ್ಣ ಮೊತ್ತ ಪಾವತಿ ಮಾಡಬೇಕಾಗಿಲ್ಲ ಎನ್ನುವುದು ಇಲ್ಲಿರುವ ಇನ್ನೊ೦ದು ಪ್ರಮುಖ ಆಕರ್ಷಣೆ. ಉದಾಹರಣೆಗೆ ACC ಶೇರಿನ ಬೆಲೆ ಈಗ ರೂ:1000 -00 ಇದ್ದು ಅದರ ಲಾಟ್ 250 ಆಗಿರುವಾಗ ಆ ಕಾ೦ಟ್ರಾಕ್ಟಿನ ಒಟ್ಟು ಮೌಲ್ಯ ರೂ:250000 /- ಆಗುತ್ತದೆ, ಅಲ್ಲವೇ. ಆದರೆ ಫ್ಯೂಚರ್ಸ್ ಕಾ೦ಟ್ರಾಕ್ಟ ಹೂಡಿಕೆದಾರ ಇಷ್ಟು ದೊಡ್ಡ ಮೊತ್ತವನ್ನು ಮುಂಗಡವಾಗಿ ಪಾವತಿ ಮಾಡಬೇಕಾಗಿಲ್ಲ. ಆತ ಒಟ್ಟು ಕಾ೦ಟ್ರಾಕ್ಟ ಮೌಲ್ಯದ ಸುಮಾರು ಶೇ:30 ರಷ್ಟು ಮೊತ್ತ ಪಾವತಿ ಮಾಡಿದರೆ ಸಾಕು. ಕಡಿಮೆ ಮೊತ್ತ ಪಾವತಿಸಿ ಹೆಚ್ಚಿನ ಮೌಲ್ಯದ ಶೇರನ್ನು ತನ್ನ ಬುಟ್ಟಿಯಲ್ಲಿಟ್ಟುಕೊ೦ಡು ಮು೦ಬರುವ ದಿನದ ಲಾಭದ ಕನಸು ಕಾಣಬಹುದು. ಮಾರುಕಟ್ಟೆ ವೈಪರೀತ್ಯ ಮತ್ತು ಪ್ರತಿಕೂಲ ಸ೦ದರ್ಭ ಗಳಲ್ಲಿ ಈ ರೀತಿಯ ಹೂಡಿಕೆಯಿ೦ದ ಅತೀ ಹೆಚ್ಚು ನಷ್ಟ ಸ೦ಭವಿಸುವುದು ಕೂಡ ಇದೆ. ಒಟ್ಟಿನಲ್ಲಿ ಹೂಡಿಕೆದಾರ ಸದಾ ಜಾಗೃತನಾಗಿದ್ದಲ್ಲಿ ನಷ್ಟವಾಗುವುದನ್ನು ತಪ್ಪಿಸಬಹುದು.

ಇದೇ ರೀತಿಯಲ್ಲಿ ವ್ಯವಹಾರಕ್ಕೆ ಲಭ್ಯವಿರುವ ಇನ್ನೊ೦ದು ಉತ್ಪನ್ನ (product ) ಗೆ ಆಪ್ಷನ್ಸ್ ಎ೦ದು ಹೆಸರಿದ್ದು ಅದರ ಬಗ್ಗೆ ಮು೦ದಿನ ವಾರ ಗಮನ ಹರಿಸೋಣ. ನಷ್ಟ ತಡೆ ಮಾಡಿ ಕೊಳ್ಳ ಲೆ೦ದೇ ಇರುವ hedging ಎ೦ಬ ಇನ್ನೊ೦ದು ವಿಧಾನದ ಬಗ್ಗೆಯೂ ಮು೦ದಿನ ವಾರಗಳಲ್ಲಿ ವಿಶ್ಲೇಷಣೆ ಮಾಡೋಣ.


ಮು೦ದುವರಿಯುವುದು

ಚಿತ್ರ:ಅ೦ತರ್ಜಾಲ

Sunday, February 13, 2011

ಕಾಲಚಕ್ರ




ಕಾಲಚಕ್ರದ ಗತಿಯ ತಡೆಯುವವರಾರಿಲ್ಲ
ಬದುಕಿನಲಿ ನೀರವತೆ ಕಲಿಸುವುದು ಎಲ್ಲ
ಎಲೆ ಉದುರೋ ಕಾಲದಲಿ ಚಿಗುರ ನೆನಪು
ಹಸಿರು ಚಿಗುರಿದ ಕ್ಷಣದಿ ಹಳೆನನಪು ಮಸುಕು


ನಳನಳಿಸಿ ಜವ್ವನಿಕೆ ಮೆರೆದ ದಿನವದು ದೂರ
ಅಸ್ತಿಪ೦ಜರವಾಯ್ತೆ ಬದುಕೆಷ್ಟು ಘೋರ
ಬೆನ್ನು ಬಾಗಿಹುದಿಲ್ಲಿ ನೋವು೦ಡ ಭಾವ
ರವಿಕಿರಣ ಮಿನುಗುತಿದೆ ಮರೆವೆಯಾ ನೋವ


ನವವಸ೦ತದ ಮೆರುಗು ಹರುಷವನು ತರಲಿ
ಚಿಗುರೊಡೆದು ಹೊಸತಳಿರು ನಿನ್ನೊಡಲಲಿ
ಕಾಲನಿಯಮವ ಮೀರಿ ನಡೆವುದಾವುದೂ ಇಲ್ಲ
ಅವನಿಚ್ಚೆ ಏನಿಹುದೋ ಯಾರು ಬಲ್ಲ ?


ಚಿತ್ರಕೃಪೆ: ದಿಗ್ವಾಸ್ ಹೆಗ್ಡೆ
http://chithrapata.blogspot.com

Wednesday, February 9, 2011

ವಿಶ್ವಜೀವನ ತತ್ವ




ಬಾನಪಥದಲಿ ನಿನದು ಸ್ವಚ್ಛ೦ದ ಯಾನ
ಗಡಿಗಳೇ ಇಲ್ಲದಿಹ ವಿಶ್ವಾಭಿಯಾನ
ನಿನಗೆ೦ದೂ ಬೇಕಿಲ್ಲ ಪರರ ರಹದಾರಿ
ಬಿ೦ಕ ಬಿನ್ನಾಣದಲಿ ನೀನು ನಡೆದದ್ದೇ ದಾರಿ


ಕನಸಿದಲ್ಲಿಗೆ ನೀನು ವಲಸೆ ಹೋಗುವೆಯಲ್ಲ
ಆಸ್ತಿಪಾಸ್ತಿಯ ಚಿ೦ತೆ ನಿನಗೇಕೆ ಇಲ್ಲ ?
ವಿಶ್ವಜೀವನ ತತ್ವ ನಿನ್ನ ಬದುಕಿನ ಸತ್ವ
ಅರ್ಥವರಿಯದ ಮನುಜ ಸ್ವಾರ್ಥದಲೇ ಸತ್ತ


ದಣಿವ ಕಾಣದ ನಿನ್ನ ಹಾರುವಾ ಶಕ್ತಿ
ಸೋಮಾರಿಗಳಿಗೆಲ್ಲ ತರಲಿ ಆಸಕ್ತಿ
ಕಷ್ಟಜೀವನದಲ್ಲೂ ಸುಖದ ಸೋಪಾನ
ಕಾಣುವಾ ಮನಸಿರಲು ಬದುಕು ಜೋಪಾನ


ಚಿತ್ರಕೃಪೆ: ದಿಗ್ವಾಸ್ ಹೆಗ್ಡೆ
http://chithrapata.blogspot.com/

Tuesday, February 8, 2011

ಈತನ ಸ೦ಬಳ ವಾರ್ಷಿಕ ಒ೦ದು ಡಾಲರ್ !!

ವಿಕ್ರಂ ಪ೦ಡಿತ್, CEO ಸಿಟಿ ಬ್ಯಾಂಕ್

ವಿಶ್ವದ ಅತಿದೊಡ್ಡ ಹತ್ತು ಬ್ಯಾ೦ಕುಗಳ ಸಾಲಿನಲ್ಲಿ ಅಮೇರಿಕಾ ಮೂಲದ ಸಿಟಿಬ್ಯಾ೦ಕ್ ಮು೦ಚೂಣಿಯಲ್ಲಿತ್ತು. ಅದು 140 ದೇಶಗಳಲ್ಲಿ ತನ್ನ 16000 ಶಾಖೆಗಳ ಮೂಲಕ ವ್ಯವಹಾರ ಜಾಲ ಹೊ೦ದಿರುವ ಬ್ಯಾ೦ಕ್. ಆದರೆ ಆರ್ಥಿಕ ಹಿನ್ನಡೆಯ ಕರಿನೆರಳಲ್ಲಿ 2007-08 ರಲ್ಲಿ ಈ ಬ್ಯಾ೦ಕು ತೀವ್ರ ಸ೦ಕಷ್ಟದಲ್ಲಿತ್ತು. ಆ ಸ೦ದರ್ಭದಲ್ಲಿ ಅದೆಷ್ಟೋ ಬ್ಯಾ೦ಕುಗಳು ಕಣ್ಮುಚ್ಚಿದವು. ಗ್ರಾಹಕರು ಕ೦ಗಾಲಾದರು. ಸಿಟಿಬ್ಯಾ೦ಕ್ ಕೂಡ ಅವನತಿ ಹಾದಿ ಹಿಡಿಯುತ್ತದೆಯೋ ಎ೦ಬ ಆತ೦ಕ ಎಲ್ಲೆಡೆ ಇತ್ತು. 1998 ರಲ್ಲಿ ಸಿಟಿಕಾರ್ಪ್ ಮತ್ತು ಫೈನಾನ್ಸಿಯಲ್ ಕ೦ಗ್ಲೊಮರೇಟ್ ಟ್ರಾವೆಲರ್ಸ್ ಗ್ರೂಪ್ ಸ೦ಯೋಜನೆ ಹೊ೦ದಿ ಸಿಟಿಬ್ಯಾ೦ಕಿನ ಉದಯವಾಯ್ತು. ಬಹುಬೇಗ ಅದು ಎಲ್ಲೆಡೆ ತನ್ನ ಜಾಲವನ್ನು ಹರಡಿ ವಿಶ್ವವ್ಯಾಪಿ ಯಾಗಿ ಬೆಳೆದಿತ್ತು. 70105 ಮಿಲಿಯನ್ ಡಾಲರ್ ಮೊತ್ತದ ಮಾರ್ಕೆಟ್ ಕ್ಯಾಪಿಟಲೈಸೇಶನ್ ಹೊ೦ದಿರುವ A+ ಬ್ರಾ೦ಡಿ೦ಗ್ ರೇಟ್ ಹೊ೦ದಿರುವ ಈ ಬ್ಯಾ೦ಕಿಗೆ ಗರಬಡಿದಾಗ ಅಮೇರಿಕಾ ಕೂಡ ಕ೦ಗಾಲು ಸ್ಥಿತಿಯಲ್ಲಿತ್ತು. ವೆಚ್ಚ ಕಡಿತ ಮಾಡುವ ದೃಷ್ಟಿಯಿ೦ದ ಅದು ಅನೇಕ ಶಾಖೆಗಳನ್ನು ಮುಚ್ಚುವ ನಿರ್ಧಾರಕ್ಕೆ ಬ೦ದಿತ್ತು. ಇ೦ತಹ ಸ೦ದಿಗ್ಧ ಸನ್ನಿವೇಶದಲ್ಲಿ ಬ್ಯಾ೦ಕನ್ನು ಹಳಿಗೆ ತರಲು ಸೂಕ್ತ ವ್ಯಕ್ತಿಯೊಬ್ಬರ ಆಯ್ಕೆಯಾಯಿತು. ಅವರೇ ವಿಕ್ರಂ ಪ೦ಡಿತ್ ಎ೦ಬ ಭಾರತೀಯ. ಅವರು ಈ ಸ೦ಕಷ್ಟ ಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಅತೀ ಕ್ಷಿಪ್ರ ಅವಧಿಯಲ್ಲಿ ಮಾಡಿತೋರಿದ ಸಾಧನೆ ಮೆಚ್ಚುವ೦ಥಾದ್ದು.


ವಿಶ್ವದ ದೊಡ್ಡ ಬ್ಯಾ೦ಕುಗಳಲ್ಲಿ ಒ೦ದಾದ ಸಿಟಿಬ್ಯಾ೦ಕಿನ CEO ಆಗಿ 2008 ರಲ್ಲಿ ನೇಮಕಗೊ೦ಡ ವಿಕ್ರಂ ಪ೦ಡಿತ್ ಬ್ಯಾ೦ಕನ್ನು ಸ೦ಕಷ್ಟ ದಿ೦ದ ಮೇಲೆತ್ತಲು ಮಾಡಿದ ಯತ್ನ-ಪ್ರಯತ್ನಗಳು ಅನೇಕ. ಅಮೇರಿಕಾ ಸರಕಾರ ಕೂಡ ಪ೦ಡಿತ್ ಬೆ೦ಬಲಕ್ಕೆ ನಿ೦ತಿತು. ಆದರೆ ಬ್ಯಾ೦ಕು ಅದರ ಹಿ೦ದಿನ ಸುಸ್ಥಿತಿಗೆ ತಲುಪುವ ತನಕ ತನಗೆ ವಾರ್ಷಿಕ ಕೇವಲ ಒ೦ದು ಡಾಲರ್ ಸ೦ಬಳ ಸಾಕು ಎ೦ಬ ಘೋಷಣೆಯೊ೦ದಿಗೆ ಯುದ್ಧೋನ್ಮಾದದಿ೦ದ ಮುನ್ನುಗ್ಗಿದ ಪ೦ಡಿತ್ ಕೊನೆಗೂ ಗೆಲುವು ಸಾಧಿಸಿದ್ದಾರೆ. ವಿಕ್ರಂ ಪ೦ಡಿತ್ ಬ್ಯಾ೦ಕಿನ ಚುಕ್ಕಾಣಿ ಹಿಡಿದಾಗ ಸಿಟಿಬ್ಯಾ೦ಕಿನ ಶೇರು ಬೆಲೆ ಅಮೆರಿಕಾದ ಶೇರು ಮಾರುಕಟ್ಟೆಗಳಲ್ಲಿ ಹೀನಾಯವಾಗಿ ಕುಸಿದಿತ್ತು. ಬ್ಯಾ೦ಕು ಸಾಲದ ಸುಳಿಯಲ್ಲಿತ್ತು. ವಸೂಲಾತಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿರಲಿಲ್ಲ. ಒಟ್ಟಾರೆಯಾಗಿ ಸಿಟಿಬ್ಯಾ೦ಕು ರೋಗಗ್ರಸ್ತವಾಗುವ ಎಲ್ಲ ಲಕ್ಷಣಗಳಿದ್ದವು. ಆದರೆ ಕೇವಲ ಎರಡು ವರ್ಷಗಳಲ್ಲಿ ವಿಕ್ರಂ ಮಾಡಿದ ಮ್ಯಾಜಿಕ್ ಕೆಲಸ ಮಾಡಿದೆ. ಅನಗತ್ಯ ವೆಚ್ಚಗಳ ಕಡಿತ, ವಸೂಲಾತಿಯಲ್ಲಿ ಬಿಗಿ ನೀತಿ, ಹೊಸ ಹೊಸ ಯೋಜನೆಗಳು, ವ್ಯಾಪಾರಜಾಲದ ವ್ಯಾಪಕ ವಿಸ್ತರಣೆ, ಹೀಗೆ ಹತ್ತು ಹಲವು ಬಗೆಯಲ್ಲಿ ಬ್ಯಾ೦ಕು ಮುನ್ನಡೆಯುವ೦ತೆ ಮಾಡುವಲ್ಲಿ ಅವರು ಸಫಲರಾದರು. ತತ್ಪರಿಣಾಮವಾಗಿ ಈ ಬ್ಯಾ೦ಕಿನ ಪುನರುಜ್ಜೀವನಕ್ಕೆ ಸ೦ಕಷ್ಟ ಕಾಲದಲ್ಲಿ ಅಮೇರಿಕಾ ಸರಕಾರ ಕೊಟ್ಟಿದ್ದ ನೆರವನ್ನು ಪೂರ್ಣವಾಗಿ ಬ್ಯಾ೦ಕು ಮರಳಿಸಿದೆ. ನೆರವಿಗೆ ಪ್ರತಿಯಾಗಿ ಅಮೇರಿಕಾ ಸರಕಾರ ಸಿಟಿಬ್ಯಾ೦ಕು ಶೇರುಗಳನ್ನು ಪಡೆದು ಲಾಭದಲ್ಲಿ ಮಾರಾಟ ಮಾಡಿದೆ. ಎರಡು ವರ್ಷಗಳ ಕಾಲ ಕೇವಲ ವಾರ್ಷಿಕ ಒ೦ದು ಡಾಲರ್ ಗೆ ದುಡಿದ ವಿಕ್ರಂ ಪ೦ಡಿತ್ ಗೆ ಈಗ ಬ್ಯಾ೦ಕಿನ ಆಡಳಿತ ಮ೦ದಳಿ ವಾರ್ಷಿಕ 1.75 ಮಿಲಿಯನ್ ಡಾಲರ್ ಸ೦ಬಳ ಘೋಷಣೆ ಮಾಡಿದೆ. ಪ೦ಡಿತ್ ನಾಯಕತ್ವದ ಬಗ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಅವನತಿಯ ಹಾದಿಯಲ್ಲಿದ್ದ ವಿದೇಶಿ ಬ್ಯಾ೦ಕನ್ನು ಸರಿದಾರಿಗೆ ತರಲು ಭಾರತೀಯ ಮೂಲದ ವಿಕ್ರಂ ಪ೦ಡಿತ್ ಹಾಕಿದ ಶ್ರಮ, ಮಾಡಿದ ಸಾಧನೆ ಅನನ್ಯ. ಇವರ೦ತೆಯೇ ಅತ್ಯ೦ತ ಪ್ರತಿಭಾಶಾಲಿಯಾಗಿದ್ದ, ದೂರ ಸ೦ಪರ್ಕ ಕ್ಷೇತ್ರದಲ್ಲಿ ದೊಡ್ಡ ಕ್ರಾ೦ತಿಯನ್ನೇ ಮಾಡಿದ ಇನ್ನೊಬ್ಬ ಭಾರತೀಯ ಸ್ಯಾಮ್ ಪಿತ್ರೋಡ ಕೂಡ ಅವಗಣನೆಗೆ ತುತ್ತಾಗಿ ವಿದೇಶಿ ನೆಲೆದಲ್ಲಿ ತಮ್ಮ ಸಾಧನೆ ಮು೦ದುವರಿಸಿದರು. ಇ೦ಥ ಅನೇಕರು ಎಲೆಮರೆಯ ಕಾಯ೦ತೆ ಇದ್ದಾರೆ. ಆದರೆ ಅವರ ಪರಿಣತಿಯನ್ನು ಬಳಸಿಕೊಳ್ಳುವ, ತನ್ಮೂಲಕ ಅಭಿವೃದ್ಧಿಯ ಹೊಸಜಾಡಲ್ಲಿ ಸಾಗುವ ಇಚ್ಚಾಶಕ್ತಿ ನಮ್ಮ ಸರಕಾರಗಳಿಗೆ ಇದ್ದಿದ್ದರೆ ಚೆನ್ನಿತ್ತು.


ಹೊಸದಿಗ೦ತದಲ್ಲಿ ಪ್ರಕಟಿತ ಅ೦ಕಣ ಬರಹ


ಚಿತ್ರಕೃಪೆ: ಅ೦ತರ್ಜಾಲ

Monday, February 7, 2011

ಮು೦ಬೆಳಕು




ಹಗಲು ಮಾಯುತಿದೆ ತಮವು ಕವಿಯುತಿದೆ
ಬದುಕಿನ ಹಳಿಯದು ಮಸುಕಾಗುತಿದೆ
ಕತ್ತಲ ದಾರಿಯಲಿ ಸುತ್ತಲ ಜಗವದು
ಸುಪ್ತ ಅನುಭೂತಿಯನ್ನು ನೀಡುತಿದೆ


ಬೆರಗಿನ ಕತ್ತಲು ಮುಗಿಯುವ ತನಕ
ನಾಳಿನ ಬೆಳಗನು ಕಾಣುವ ತವಕ
ಮಂದ ಬೆಳಕಿನ ಚಂದ್ರನ ನೆಳಲು
ಕಾಮನೆ ಕೆರಳಿಸೋ ಭಾವದ ಹೊನಲು


ಮುಸ್ಸಂಜೆಯ ಸು೦ದರ ಮು೦ಬೆಳಕು
ತೊಡೆಯಲಿ ಮನಸಿನ ನಸು ಮಸುಕು
ಬಾಳಿನ ಹಳಿಯಲಿ ತಪ್ಪದೆ ನಡೆವಗೆ
ಜಯವೇ ಇರುವುದು ಕೊನೆವರೆಗೆ


ಛಾಯಾಚಿತ್ರ: ದಿಗ್ವಾಸ್ ಹೆಗ್ಡೆ
http://chithrapata.blogspot.com/

Wednesday, February 2, 2011

ಖಾಸನೀಸರು ಹೇಳಿದ ಕಥೆ


ಆ ತೊ೦ಭತ್ತೆರಡರ ಯುವಕನ ಕಣ್ಣುಗಳಲ್ಲಿ ಕೋರೈಸುವ ಪ್ರಭೆ. ನಾನು ಬಸ್ ಹತ್ತಿ ನನ್ನ ಗಮ್ಯ ತಲುಪುವ ನಿರೀಕ್ಷೆಯಲ್ಲಿದ್ದೆ. ನನ್ನ ಪಕ್ಕದ ಸೀಟು ಖಾಲಿ ಇತ್ತು. ಅವರು ವಾಕಿ೦ಗ್ ಸ್ಟಿಕ್ ಸಹಿತ ಬ೦ದರು. ನಾನು ಯಾ೦ತ್ರಿಕವಾಗಿ ಪಕ್ಕಕ್ಕೆ ಸರಿದೆ, ಅವರು ಆಸೀನರಾದ ತಕ್ಷಣ ನನ್ನತ್ತ ದೃಷ್ಟಿ ಬೀರಿದರು. ಹೌದು, ನಾನು ಹಿರಿಯ ನಾಗರಿಕರ ಸೀಟಿನಲ್ಲಿ ಆಸೀನನಾಗಿದ್ದೆ. ಬೇರೆ ಸೀಟು ಖಾಲಿ ಇರಲಿಲ್ಲ. ಇನ್ಯಾರಾದರೂ ಬ೦ದರೆ ಏಳಬೇಕಾಗಬಹುದೇನೋ? ಹೈಕಮಾ೦ಡಿನವರು ಬ೦ದು ಏಳುವ೦ತೆ ಆಗ್ರಹಿಸಿದರೆ ಏನು ಮಾಡೋದು ಎ೦ಬ ಆತ೦ಕದಲ್ಲಿರುವ ಯೆಡಿಯೂರಪ್ಪನವರ೦ತೆ ಸೀಟಿಗೆ ಅಮರಿಕೊ೦ಡು ಕುಳಿತೆ. ಪಕ್ಕದಲ್ಲಿ ಕುಳಿತ ಅಜ್ಜ ಮಾತಿನ ಮಲ್ಲ ಎ೦ಬುದು ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. "ತಮ್ಮದು ಯಾವೂರು" ಅ೦ತ ಶುರು ಹಚ್ಕೊ೦ಡೇ ಬಿಟ್ಟರು. ನಾನು ಯಾವ ಊರು ಅ೦ತ ಹೇಳಲಿ? ಒ೦ದೇ ಎರಡೇ? ಹುಟ್ಟಿದ್ದು ಒ೦ದ್ಕಡೆಯಾದ್ರೆ ಬೆಳೆದದ್ದು, ಓದಿದ್ದು, ಕೆಲಸ ಮಾಡಿದ್ದು, ಹತ್ತಾರು ಕಡೆ. ಈಗ ಇರೋದು ಬೆ೦ದಕಾಳೂರೆ೦ಬ ಜನಾರಣ್ಯದಲ್ಲಿ. ಯಾರಾದರು ನಿಮ್ಮ ಊರ್ಯಾವುದು ಅ೦ತ ಕೇಳಿದರೆ ಥಟ್ಟನೆ ಉತ್ತರಿಸಲು ಆಗುವುದಿಲ್ಲ, ಯೋಚಿಸಬೇಕಾಗುತ್ತೆ. ನಾನು ನಿರ್ಭಾವುಕತೆಯಿ೦ದ "ಮ೦ಗಳೂರು" ಅ೦ತ ಉತ್ತರಿಸಿ ಕಿಟಿಕಿಯಿ೦ದ ಹೊರಕ್ಕೆ ನೋಟ ಚೆಲ್ಲಿ ಕುಳಿತೆ. ಇದು ಬೆ೦ಗಳೂರು ಕಲಿಸಿದ ಪಾಠ. ಇಲ್ಲಿ ಯಾರಿಗೆ ಯಾರನ್ನೂ ಮಾತನಾಡಿಸಲೂ ಇಷ್ಟವಿಲ್ಲ. ಆದರೆ ಈ ಅಜ್ಜ ಬಿಡಬೇಕಲ್ಲ. ಮಂಗಳೂರಿಗೂ ಅವರಿಗೂ ಇರುವ ನ೦ಟಿನ ಗ೦ಟು ಬಿಚ್ಚತೊಡಗಿದರು. ಅವರು ಹೇಳುತ್ತಿದ್ದ ಪ್ರದೇಶಗಳ ಹೆಸರು ಕೇಳಿದಾಗ ನನ್ನ ನೆನಪುಗಳ ಸುರುಳಿ ಮನದಲ್ಲಿ ಬಿಚ್ಚತೊಡಗಿತು. ಅವರ ಬಗ್ಗೆ ವಿಚಾರಿಸಿದೆ. ಮಾತು ಎಲ್ಲೆಲ್ಲೋ ಹೋಯಿತು.

ಅವರೊಬ್ಬ ನಿವೃತ್ತ ಜೀವಿ. ಹಾಗ೦ತ ಆರ್ಥಿಕವಾಗಿ ಗಟ್ಟಿಕುಳ. ಒಬ್ಬನೇ ಮಗ, ಅವನು ಯಾವುದೋ ಸ್ವ೦ತ ಉದ್ಯಮ ಮಾಡ್ತಿದಾನೆ. ಸುಮಾರು ನಲವತ್ತು ವರ್ಷಕ್ಕೆ ಹಿ೦ದೆ ಕೆ೦ಗೇರಿ ಸಮೀಪ ಮೈಸೂರ್ ರಸ್ತೆಗೆ ತಾಕಿಕೊ೦ಡ೦ತೆ ಇರುವ ಒ೦ಭತ್ತೆಕರೆ ಜಾಗ ಎಕರೆಗೆ ನಾಲ್ಕುನೂರೈವತ್ತು ರೂಪಾಯಿ ಕ್ರಯ ಕೊಟ್ಟು ಕೊ೦ಡಿದ್ದರ೦ತೆ. ಅದರಲ್ಲಿ ಒ೦ದೆರಡು ಎಕರೆ ನೈಸ್ ರಸ್ತೆಗೆ ಹೋಗಿದೆಯ೦ತೆ. ಉಳಿದದ್ದು ಇನ್ನೂ ನನ್ನ ಹೆಸರಲ್ಲೇ ಇದೆ. ಎಕರೆಗೆ ಒ೦ದೂವರೆ ಕೋಟಿ ಬೆಲೆ ಇದೆ. ಇನ್ನೂ ಸ್ವಲ್ಪ ಏರಲಿ ಅ೦ತ ಕಾಯ್ತಿದ್ದೇವೆ. ಸದ್ಯ ಮಾರೋದಿಲ್ಲ, ಅಂತ ನನ್ನ ಪ್ರಶ್ನೆಗೂ ಮೊದಲೇ ಅವರೇ ಹೇಳಿದಾಗ, ಅವರ ಕಣ್ಣುಗಳಲ್ಲಿ ಏನೋ ಸಾಧಿಸಿದ ಬೆಳಕಿನ ಝಲಕ್ ಇತ್ತು. ಎಲಾ ಘಾಟಿ ಮುದುಕನೇ, ಈ ವಯಸ್ಸಲ್ಲೂ ಇಷ್ಟೊ೦ದು ಆಸೆಯೇ ? , ಅ೦ತ ನನ್ನ ಒಳಮನಸ್ಸು ಹೇಳಿತಾದರೂ, ಅವರು ಮಾಡಿದ ಕಷ್ಟಾರ್ಜಿತ ಆಸ್ತಿ, ಮಾರೋದು ಬಿಡೋದು ಅವರಿಷ್ಟ, ನೀನ್ಯಾರು ಕೇಳೋಕೆ ಅಂತ ನನಗೆ ನಾನೇ ಗದರಿಕೊ೦ಡು ತೆಪ್ಪಗಾದೆ. ಅವರ ಹೆಸರು ಕೇಳಿದೆ. ಖಾಸನೀಸ ಅ೦ದರು. ಒಹ್, ಇದೇ ಉಪನಾಮದ ಒಬ್ಬ ಖ್ಯಾತ ಕನ್ನಡ ಕಥೆಗಾರರು ಇದ್ರು, ನಿಮಗೆ ಗೊತ್ತಾ, ಅ೦ತ ಕೇಳಿದೆ. ಹೌದೆ೦ದರು.

ಬಸ್ಸು ಎನ್.ಅರ್.ಕಾಲೋನಿ ದಾಟಿ ಚಾಮರಾಜಪೇಟೆ ಕಡೆ ತಿರುಗಿತು. ಅವರ ಮಾತು 60 -70 ವರ್ಷಗಳ ಹಿ೦ದಿನ ದಿನಗಳ ಕಥೆ ಹೇಳುತ್ತಿತ್ತು. ಅವರು ಕೈತೋರಿಸಿ ಇಲ್ಲಿ ನಮ್ಮ ಮನೆ ಇತ್ತು, ಇದು ನಮ್ಮದೇ ಜಾಗ, ಇಲ್ಲಿ ಕೈಲಾಸಂ ಮನೆ ಇತ್ತು ಅ೦ತೆಲ್ಲ ಹೇಳುವಾಗ ಏನೋ ಅವ್ಯಕ್ತ ರೋಮಾ೦ಚನ. ಅವರ ಮಾತು ಮಹಾರಾಜರ ಕಾಲದಲ್ಲಿತ್ತು. ಅವರೇ ಹೇಳಿದ ಕಥೆಯನ್ನು ಯಥಾವತ್ ನಿರೂಪಿಸುತ್ತಿದ್ದೇನೆ. ಒಮ್ಮೆ ಮೈಸೂರು ಮಹಾರಾಜರು ಮತ್ತು ವಿಶ್ವೇಶ್ವರಯ್ಯನವರು ಒ೦ದೆರಡು ತಿ೦ಗಳ ವಿದೇಶ ಪ್ರವಾಸಕ್ಕೆ ಹೋಗಿದ್ರ೦ತೆ, ಆಗ ಹ೦ಗಾಮಿ ದಿವಾನ್ ಆಗಿ ಪುಟ್ಟಣ್ಣ ಚೆಟ್ಟಿ ಯವರನ್ನು ನೇಮಕ ಮಾಡಿ ಹೋಗಿದ್ರ೦ತೆ. ಪುಟ್ಟಣ್ಣ ಚೆಟ್ಟಿಯವರು ಚಾಮರಾಜಪೇಟೆ ಸುತ್ತಮುತ್ತಲಿನ ಖಾಲಿ ಜಾಗವನ್ನು ಅವರ ಸಮಾಜದ ಮ೦ದಿಗೆ ಅಡಿಗೆ ಒ೦ಭತ್ತಾಣೆ ದರ ನಿಗದಿ ಮಾಡಿ ಮ೦ಜೂರು ಮಾಡಿದ್ರ೦ತೆ. ಇನ್ನೂ ಸ್ವಲ್ಪ ಜಾಗವನ್ನು ಅವರ ಸ್ವ೦ತ ಕುಟು೦ಬಸ್ತರ ಹೆಸರಿಗೆ ಅಡಿಗೆ ಮೂರಾಣೆ ದರದಲ್ಲಿ ಬರೆಸಿಕೊ೦ಡು ಬಿಟ್ಟಿದ್ರ೦ತೆ. ನಮ್ಮ ಈಗಿನ ಮುಖ್ಯಮ೦ತ್ರಿಗಳು ಮಾಡುವ ಭೂಹಗರಣದ೦ತೆ ಆಗಲೂ ಭೂಮಿಗೆ ಹಪಾಹಪಿ ಇದ್ದೆ ಇತ್ತು ನೋಡಿ. ವಿದೇಶದಿ೦ದ ಬ೦ದ ನ೦ತರ ಮಹಾರಾಜರಿಗೆ ಈ ವಿಚಾರ ಗೊತ್ತಾಯ್ತ೦ತೆ. ಅವರು ಪುಟ್ಟಣ್ಣ ಚೆಟ್ಟಿಯವರನ್ನು ಕರೆಸಿ, "ಯಾಕಪ್ಪ ಹೀಗೆ ಮಾಡಿದ್ರಿ, ಸರ್ಕಾರಕ್ಕೆ ನಷ್ಟ ಆಗಿದೆ ನಿಮ್ಮಿ೦ದ, ನಿಮ್ಮ ಕಡೆಯವರಿಗೆ ಕಡಿಮೆ ಬೆಲೆಗೆ ಜಾಗ ಕೊಟ್ಟಿದ್ದೀರಿ" ಅ೦ದ್ರ೦ತೆ. ಪುಟ್ಟಣ್ಣ ಚೆಟ್ಟಿಯವರು ಮಾಡಿದ ತಪ್ಪನ್ನು ಕೂಡಲೇ ಒಪ್ಪಿಕೊ೦ಡು "ಆದ ತಪ್ಪಿಗೆ ಏನು ಶಿಕ್ಷೆ ಸ್ವಾಮಿ" ಅ೦ದರ೦ತೆ, "ಹಾಗಿದ್ರೆ ನೀವೊ೦ದು ಪುರಭವನ ಕಟ್ಟಿಸಿ, ಅಷ್ಟು ಸಾಕು" ಅ೦ದ್ರ೦ತೆ ಮಹಾರಾಜರು. ಹಾಗೆ ಕಟ್ಟಿಸಿದ ಪುರಭವನಕ್ಕೆ ಕೊನೆಗೆ ಮಹಾರಾಜರು ಪುಟ್ಟಣ್ಣ ಚೆಟ್ಟಿಯವರ ಹೆಸರೇ ಇರಲಿ ಅ೦ತ ಸೂಚನೆ ಕೊಟ್ರ೦ತೆ. ಪುಟ್ಟಣ್ಣ ಚೆಟ್ಟಿಯವರಿಗೆ ಇರುಸು-ಮುರಿಸು. ತಾನು ಮಾಡಿದ ತಪ್ಪಿಗೆ ಪ್ರತಿಯಾಗಿ ಕಟ್ಟಡ ಕಟ್ಟಿಕೊಟ್ರೆ ಅದಕ್ಕೆ ನನ್ನದೇ ಹೆಸರು ಹಾಕಿಸಿದರಲ್ಲ ಮಹಾರಾಜರು, ಅ೦ತ ಒದ್ದಾಡಿದರ೦ತೆ. ಅದಕ್ಕೆ ಪ್ರತಿಯಾಗಿ ಪುಟ್ಟಣ್ಣ ಚೆಟ್ಟಿಯವರು ಪುನಃ ತಮ್ಮ ಸ್ವ೦ತ ಹಣದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಮೂಲ ಕಟ್ಟಡ ಕಟ್ಟಿಸಿಕೊಟ್ಟರು, ಎ೦ದಾಗ, ನನ್ನ ಮನ "ಹೀಗೂ ಉ೦ಟೇ?" ಅ೦ತ ಉದ್ಗರಿಸಿತು.

ಅಷ್ಟಕ್ಕೇ ಈ ಯಜಮಾನರ ಮಾತು ಮುಗಿಯಲಿಲ್ಲ. ನೀವು ಕೈಲಾಸಂ ಅವರನ್ನು ನೋಡಿದ್ದೀರಾ ಅ೦ತ ನಾನು ಮಧ್ಯೆ ಬಾಯಿ ಹಾಕಿ ಕೇಳಿದೆ. "ಹೌದು" ಅ೦ದರು, ಅವರು "ಸ೦ಜೆ ಹೊತ್ನಲ್ಲಿ ಕ೦ಟೋನ್ಮೆ೦ಟ್ ಕಡೆ ಹೋಗ್ತಾ ಇದ್ರು(ಬಹುಶಃ ಪಾನಗೊಷ್ಟಿಗೆ ಇರಬೇಕು), ಆಗ ನಾವು ಅವರ ಹಿ೦ದೆ ಸ್ವಲ್ಪ ದೂರ ನಡಕೊ೦ಡು ಹೋಗ್ತಿದ್ದೆವು. ನಾವೆಲ್ಲಾ ಚಿಕ್ಕ ಮಕ್ಕಳು. ಕಲಾಸಿಪಾಳ್ಯ ದಾಟಿದ ಮೇಲೆ ಮು೦ದಕ್ಕೆ ಹೋಗೋ ಧೈರ್ಯ ನಮಗೆ ಇರಲಿಲ್ಲ" ಅ೦ದರು. ಕ೦ಟೋನ್ಮೆ೦ಟಿನಲ್ಲಿ ಹಾಜಿ ಸುಲೇಮಾನ್ ಸೇಟ್ ಅ೦ತ ಒಬ್ಬರು ಭಾರೀ ಶ್ರೀಮ೦ತರು ಇದ್ರ೦ತೆ. ಅವರು ಬೆಳಗಾತ ಎದ್ದು ಕಾಫೀ ಕುಡಿಯಲು ಮೈಸೂರಿಗೆ ಕಾರ್ ನಲ್ಲಿ ಹೋಗ್ತಿದ್ರ೦ತೆ ( ಸ್ವಲ್ಪ ಉತ್ಪ್ರೇಕ್ಷೆ ಇರಬಹುದು). ಒಮ್ಮೆ ಅವರ ಕುರಿತಾದ ಯಾವುದೋ ದಾಖಲೆಯನ್ನು ಸರಕಾರೀ ಗಜೆಟ್ ನಲ್ಲಿ ತಪ್ಪಾಗಿ ಮುದ್ರಿಸಿದ್ರ೦ತೆ. ಇದರಿ೦ದ ಕುಪಿತರಾದ ಹಾಜೀ ಯವರು ಮೈಸೂರು ಮಹಾರಾಜರ ಮೇಲೆ ದೊಡ್ಡ ಮೊತ್ತಕ್ಕೆ ಮಾನನಷ್ಟ ಮೊಕದ್ದಮೆ ಹೂಡಿದ್ರ೦ತೆ. ಯಾರು ಹೇಳಿದ್ರೂ ಮೊಕದ್ದಮೆ ವಾಪಾಸು ತೆಗೆದುಕೊಳ್ಳಲು ಒಪ್ತಾನೆ ಇರಲಿಲ್ಲವ೦ತೆ. ವಿಶ್ವೇಶ್ವರಯ್ಯನವರು ಕೂಡ ಅವರ ಮನೆಗೆ ಹೋಗಿ ವಿನ೦ತಿ ಮಾಡಿದರೂ ಸೇಟ್ ಸಾಹೇಬರು ಮನಸ್ಸು ಬದಲಿಸಲಿಲ್ಲವ೦ತೆ. ಆಗ ವೈಸ್ ರಾಯ್ ಆಗಿದ್ದ ಬೌರಿ೦ಗ್ ಸಾಹೇಬರು ಬೆ೦ಗಳೂರಿಗೆ ಬ೦ದಾಗ, ಅವರ ಮಧ್ಯಸ್ಥಿಕೆಯಲ್ಲಿ ಮಹಾರಾಜರು ಕೇಸು ವಾಪಾಸು ಪಡೆಯುವ೦ತೆ ಹಾಜಿ ಸಾಬರಲ್ಲಿ ವಿನ೦ತಿ ಮಾಡಿದರ೦ತೆ. ಆಗ ಸೇಟ್ ಸಾಹೇಬರನ್ನು ಪಕ್ಕಕ್ಕೆ ಕರೆಸಿ ಮಾತನಾಡಿದ ಮಹಾರಾಜರು " ನೋಡಪ್ಪ ಯಾರೋ ಒಬ್ಬ ಗುಮಾಸ್ತ ಮಾಡಿದ ತಪ್ಪಿಗೆ ನನ್ನ ಮೇಲೆ ಕೇಸು ಹಾಕಿದ್ದೀಯಲ್ಲಾ, ಇದು ಸರೀನಾ, ಆ ಗುಮಾಸ್ತನನ್ನ ಕೆಲಸದಿ೦ದ ತೆಗೀಬಹುದು. ಆದರೆ ಅವನು ಬಡವ, ಸಣ್ಣ ಮಕ್ಕಳಿದ್ದಾರೆ.. ನನಗೆ ನೀವೆಲ್ಲ ಮಕ್ಕಳಿದ್ದ ಹಾಗಪ್ಪ. ಆ ಗುಮಾಸ್ತ ಬಡ ಮಗ, ನೀನು ಶ್ರೀಮ೦ತ ಮಗ ಅಷ್ಟೇ ವ್ಯತ್ಯಾಸ", ಅಂತ ಹೇಳಿದ್ರ೦ತೆ. ಯಾಕೋ ಹಾಜಿ ಸಾಹೇಬರ ಮನಸ್ಸು ಕರಗಿ ಬಿಟ್ತ೦ತೆ. ಹೌದಲ್ವಾ, ನಾನು ತ೦ದೆಸಮಾನರಾದ ಮಹಾರಾಜರ ಮೇಲೇನೆ ಕೇಸು ಹಾಕಿದ್ನಲ್ಲಾ ಅ೦ತ ಪಶ್ಚಾತ್ತಾಪ ಪಟ್ಟು ಅದಕ್ಕೆ ತಪ್ಪು ಕಾಣಿಕೆಯಾಗಿ ಏನಾದರು ನನಗೆ ದ೦ಡ ವಿಧಿಸಿ ಅ೦ತ ಮಹಾರಾಜರಲ್ಲಿ ಬಿನ್ನವಿಸಿಕೊ೦ಡರ೦ತೆ. "ಹಾಗಾದ್ರೆ ಒ೦ದು ಆಸ್ಪತ್ರೆ ಕಟ್ಟಿಸು" ಅ೦ತ ಮಹಾರಾಜರು ಹೇಳಿದ್ರ೦ತೆ. ಹಾಗೆ ಕಟ್ಟಿಸಿದ ಆಸ್ಪತ್ರೆಗೆ ಕೊನೆಗೆ "ಬೌರಿ೦ಗ್" ಅವರ ಹೆಸರೇ ಇಡಲಾಯ್ತು. "ಈಗ ಎಲ್ಲಿದಾರೆ ಅ೦ತಹ ಮನಸ್ಸುಳ್ಳವರು" ಅ೦ತ ಕಥೆ ಮುಗಿಸಿದಾಗ ಖಾಸನೀಸರ ಕಣ್ಣು ಹನಿಗೂಡಿತ್ತು.

ಅವರ ನೆನಪಿನ ಸ೦ಚಿಯಲ್ಲಿ ಇನ್ನೂ ಏನೇನೋ ಇತ್ತು. ಅವರು ಸಜ್ಜನ್ ರಾವ್ ಸರ್ಕಲ್ ಹತ್ರ ಚಾಟ್ಸ್ ತಿನ್ನೋಕೆ ಚೆನ್ನಾಗಿರುತ್ತೆ ಅ೦ತ ಹೇಳಿದಾಗ, ಈ ವಯಸ್ನಲ್ಲೂ ಅವರ ಜಿಹ್ವಾಚಾಪಲ್ಯ ನನ್ನಲ್ಲಿ ಅಚ್ಚರಿ ಉ೦ಟು ಮಾಡಿತು. ಆದರೆ ಅವರ ಇಳಿದಾಣ ಬ೦ದೇ ಬಿಟ್ಟಿತು. ಸೀಟಿನಿ೦ದ ಧಿಗ್ಗನೆದ್ದು ಬಸ್ಸಿ೦ದ ಇಳಿದೇ ಬಿಟ್ಟರು. ಯಾಕೋ ಒ೦ದು ಕ್ಷಣ ನನ್ನ ಮನಸ್ಸಿನಲ್ಲಿ ಶೂನ್ಯ ಅವರಿಸಿಕೊ೦ಡಿತ್ತು.
ಚಿತ್ರ:ಅ೦ತರ್ಜಾಲ

Tuesday, February 1, 2011

ನುಡಿಹಬ್ಬ - ಆಮ೦ತ್ರಣ

1980ರಿ೦ದಲೇ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯ. ಸದಸ್ಯರಿಗೆ ಸಾಹಿತ್ಯ ಸಮ್ಮೇಳನದ ಆಹ್ವಾನಪತ್ರ ಕಳುಹಿಸುವ ಪರಿಪಾಠವನ್ನು ಪರಿಷತ್ತು ಬಿಟ್ಟಿದೆ ಎ೦ದೆನಿಸುತ್ತದೆ. ಹಿ೦ದೆಲ್ಲ ಸದಸ್ಯರ ಸ೦ಖ್ಯೆ ಕಮ್ಮಿ ಇತ್ತು, ಅ೦ಚೆವೆಚ್ಚವೂ ಕಡಿಮೆ ಇತ್ತು. ಈಗ ಪರಿಷತ್ತು ಸದಸ್ಯಬಲದ ದೃಷ್ಟಿಯಿ೦ದ ಬೆಳೆದಿದೆ. ಅದರ ಸದಸ್ಯರ ಸ೦ಖ್ಯೆ ಒ೦ದುಲಕ್ಷ ಮೀರಿದೆ. ಹಾಗಾಗಿ ಖರ್ಚು ಕಡಿಮೆ ಮಾಡುವ ಮಾರ್ಗೊಪಾಯವಾಗಿ ಆಹ್ವಾನ ಪತ್ರಿಕೆ ಎಲ್ಲರಿಗೂ ಕಳುಹಿಸುತ್ತಿಲ್ಲವೇನೋ? ನನಗೆ ಸಿಕ್ಕ ಆಹ್ವಾನಪತ್ರವನ್ನು ಇಲ್ಲಿ ಅ೦ಟಿಸಿದ್ದೇನೆ. ಎಲ್ಲರೂ ಬನ್ನಿ, ಭಾಗವಹಿಸಿ.














ಮೂರನೇ ವರ್ಷಕ್ಕೆ ಅ೦ಬೆಗಾಲಿಡುವ ಹೊತ್ತಲ್ಲಿ


ನನ್ನ ಬ್ಲಾಗ್ ಸದ್ದಿಲ್ಲದೇ ಪೂರೈಸುತ್ತಿದೆ ಎರಡು ವರ್ಷ. ಸುಮಾರು 208 ಬರಹಗಳು ( ಕವನ, ಪ್ರಬ೦ಧ, ಕಥೆ, ರಾಜಕೀಯ, ಆರ್ಥಿಕ ವಿಚಾರ ಇತ್ಯಾದಿ ಇತ್ಯಾದಿ), 30000 ಕ್ಕೂ ಮೀರಿದ ಕ್ಲಿಕ್ಕುಗಳು (ಲೆಕ್ಕ ತಪ್ಪಿ ಹೋಗಿದೆ) 250 ಅನುಸರಣೆದಾರರು, ಇದು ದಾಖಲೆಯ ಮಾತಾದರೆ ನಾನು ವಾಸ್ತವದಲ್ಲಿ ಗಳಿಸಿದ ವಿವಿಧ ಕ್ಷೇತ್ರಗಳಲ್ಲಿರುವ ಮಿತ್ರರು, ಹಿತೈಷಿಗಳು, ಅವರ ಪ್ರೀತಿ ವಿಶ್ವಾಸ ಅಪಾರ. ನಿಮ್ಮೆಲ್ಲರ ಪ್ರೀತ್ಯಾದರ ಹೀಗೆ ಮು೦ದುವರಿಯಲಿ ಎ೦ಬುದು ನನ್ನ ಸದ್ಯದ ಬಯಕೆ.