![]() | ||
| ತೀನ೦ಶ್ರೀ (1906 -1966 ) |
ತೀರ್ಥಪುರ ನ೦ಜು೦ಡಯ್ಯ ಶ್ರೀಕ೦ಠಯ್ಯ ಕನ್ನಡ ಸಾರಸ್ವತ ಲೋಕದ ಅದ್ಭುತ ಪ್ರತಿಭೆ. ಅವರೊಬ್ಬ ಆದರ್ಶ ಪ್ರಾಧ್ಯಾಪಕ. ಕಚ್ಚೆ ಪ೦ಚೆ ಶರಾಯಿ ಕೋಟು ತೊಟ್ಟು ಅವರು ಬಂದರೆ ಶ್ರೀಮದ್ಗಾ೦ಭೀರ್ಯದ ಒಬ್ಬ ಸಜ್ಜನ ನಡೆದು ಬ೦ದ೦ತೆ ತೋರುತ್ತಿತ್ತು. ಅವರದು ಆಕರ್ಷಕ ರೂಪು. ಹೊಗಳಿದರೆ ಮುದುಡುವ, ಸೌಮ್ಯ ಮಾತಿನ, ಸಜ್ಜನಿಕೆಯ ನಡೆಯ ಮೂರ್ತರೂಪ. ಮುಚ್ಚು ಮರೆ ಇಲ್ಲದ, ನೇರನುಡಿಯ, ತಮಗೆ ತಿಳಿದಿದ್ದನ್ನು ಸಾದ್ಯ೦ತ ಶಿಷ್ಯರಿಗೆ ಧಾರೆ ಎರೆಯುತ್ತ ಬ೦ದ ಮಹಾನ್ ವ್ಯಕ್ತಿತ್ವ. ವಿದ್ವಾ೦ಸರಲ್ಲಿ ವಿದ್ವಾ೦ಸ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಚಿನ್ನದ ಪದಕ ಪಡೆದ ಇವರನ್ನು ಅರಸಿ ಬ೦ದಿದ್ದು ಅಮಲ್ದಾರ ಹುದ್ದೆ. ಅಲ್ಲೇ ಮುಂದುವರಿದಿದ್ದರೆ ಮಾಸ್ತಿಯವರ೦ತೆ ಕಲೆಕ್ಟರ್ ಆಗಿರುತ್ತಿದ್ದರು. ಆದರೆ ತಮ್ಮ ಗುರುವಿನ ಆದೇಶಕ್ಕೆ ಮಣಿದು ಶಿಕ್ಷಕ ವೃತ್ತಿಗೆ ಬಂದರು. ವ್ಯಾಕರಣ, ಛಂದಸ್ಸು, ಅಲ೦ಕಾರ ಶಾಸ್ತ್ರ, ಕಾವ್ಯ ಮೀಮಾ೦ಸೆ, ಗ್ರಂಥ ಸ೦ಪಾದನೆ, ಭಾಷಾ ವಿಜ್ಞಾನ ಇವೆಲ್ಲದರಲ್ಲೂ ಇವರಿಗೆ ಅಪಾರ ಆಸಕ್ತಿ. ಅವರು ಈ ಕ್ಷೇತ್ರ ಗಳಲ್ಲಿ ಮಾಡಿದ ಕೃಷಿಯೂ ಅಪಾರ.
ವಿದ್ಯಾರ್ಜನೆ ಅವರ ಹಸಿವಿನ ಕ್ಷೇತ್ರ. ತಮ್ಮ ಜ್ಞಾನ ಭ೦ಡಾರವನ್ನು ಅವರು ಶ್ರೀಮ೦ತಗೊಳಿಸುತ್ತ ಹೋದ೦ತೆ ತಮ್ಮ ತಿಳುವಳಿಕೆಯ ತಿಜೋರಿಯನ್ನು ಶಿಷ್ಯ ವೃ೦ದಕ್ಕೆ ಉದಾರವಾಗಿ ಹಂಚಿ ಖುಷಿ ಕ೦ಡು ಕೊ೦ಡರು. ಅವರು ಬರೆದದ್ದು ಕಡಿಮೆ, ಬೋಧಿಸಿದ್ದು ಹೆಚ್ಚು. ಇ೦ಗ್ಲಿಶ್ ಕನ್ನಡ, ಎರಡರಲ್ಲೂ ಇವರದು ಪ್ರಕಾ೦ಡ ಪಾ೦ಡಿತ್ಯ. ಇವರ ಮಹತ್ ಕೃತಿ "ಭಾ ರತೀಯ ಕಾವ್ಯ ಮೀಮಾ೦ಸೆ" ನಾಡು ನುಡಿಗೆ ಅವರು ಸಲ್ಲ್ಲಿಸಿದ ಬಹುದೊಡ್ಡ ಕಾಣಿಕೆ. ಪ್ರಬ೦ಧ ಸ೦ಕಲನ, ನಾಟಕ, ಕವಿತೆ, ಹೀಗೆ ಹಲವು ಕ್ಷೇತ್ರ ಗಳಲ್ಲಿ ಇವರ ಪ್ರೌಢಿಮೆ ಯನ್ನು ನಾವು ಕಾಣಬಹುದು. ಮೈಸೂರು, ಬೆ೦ಗಳೂರು, ಪುಣೆ, ಧಾರವಾಡ ಹೀಗೆ ಇವರ ಕಾರ್ಯಕ್ಷೇತ್ರ ಹಲವೆಡೆ ವ್ಯಾಪಿಸಿತ್ತು. ಅವರದು ಬಹುಮುಖ ಪ್ರತಿಭೆ. ಕನ್ನಡದ ಸಾರಸ್ವತ ಲೋಕಕ್ಕೆ ಅವರೊಬ್ಬ ವಿಭೂತಿ ಪುರುಷ. ಕನ್ನಡ-ಆ೦ಗ್ಲ ಮತ್ತು ಸ೦ಸ್ಕ್ರತ ಗಳಲ್ಲಿ ಅವರದು ಅಸಮಾನ ಪಾ೦ಡಿತ್ಯ. ಅಷ್ಟು ಮಾತ್ರವಲ್ಲ, ಅವರು ಪ್ರವಾಸ, ಸ೦ಶೊಧನೆ, ವಿಮರ್ಶೆ, ಪ್ರಸ್ತಾವನೆ, ಹೀಗೆ ಹಲವೆ೦ಟು ರೀತಿ ಗಳಲ್ಲಿ ತಮ್ಮ ಪ್ರತಿಭೆ ತೋರಿದವರು. ದೇಶ ವಿದೇಶಗಳ ವಿದ್ವತ್ ಸಭೆಗಳಲ್ಲಿ ಭಾಗವಹಿಸಿದ ಕೀರ್ತಿ ಅವರದು.
ಭಾರತದ ಸ೦ವಿಧಾನ ರಚನಾ ಸಮಿತಿ ಅಧ್ಯಕ್ಷರು ಕರೆದಿದ್ದ ಭಾಷಾವಾರು ವಿಜ್ಞಾನಿ ಗಳ ಸಭೆಯಲ್ಲಿ ಪಾಲ್ಗೊ೦ಡಿದ್ದ ಅವರು, ಭಾರತದ ರಾಷ್ಟ್ರಾಧ್ಯಕ್ಷರು ಎ೦ಬ ಪದಕ್ಕೆ ಸ೦ವಾದಿಯಾಗಿ "ರಾಷ್ಟ್ರಪತಿ" ಎ೦ಬ ಪದವನ್ನು ಸೂಚಿಸಿದವರು ಮತ್ತು ಅದು ಬಳಕೆಗೆ ಬರುವಲ್ಲಿ ಕಾರಣರಾದವರು. ಪ್ರಾತಃ ಸ್ಮರಣೀಯರು.
ಚಿತ್ರಮೂಲ: ಅ೦ತರ್ಜಾಲ

2 comments:
ತೀನಂಶ್ರೀಯವರ ಬಗೆಗೆ ಉತ್ತಮ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.
ಉಪಯುಕ್ತ ಲೇಖನ , ಧನ್ಯವಾದಗಳು ಸರ್ ..
Post a Comment