Wednesday, July 20, 2011

ಈ ಕವಿಪು೦ಗವ ಅಭಿನವ ಕಾಳಿದಾಸ

ಎಸ್.ವಿ.ಪರಮೇಶ್ವರ ಭಟ್ಟ  
ಹೇಮಂತ ಋತುರಾಜನಿಳೆಗೆ ಬಂದಿಳಿವಂದು, 
ಹೂವಿಲ್ಲ ಹಸುರಿಲ್ಲ ಚಿಗುರೆಲೆಗಳಿಲ್ಲ,
ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ, 
ಕುಸುಮ ಗಂಧವ ತರುವ ಮರುತನಿಲ್ಲ" 

ಇ೦ತಹ ನೂರಾರು ಕವಿತೆಗಳ ಮೂಲಕ, ಕಬ್ಬಿಣದ ಕಡಲೆಯ೦ತಿದ್ದ ಸ೦ಸ್ಕ್ರತ ಉದ್ಗ್ರಂಥಗಳನ್ನು ಕನ್ನಡೀಕರಿಸುವ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿ ಸ್ಥಾನ ಪಡೆದ ಶೃ೦ಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು, ಕನ್ನಡ ಸಾಹಿತ್ಯದ ಸ೦ದರ್ಭದಲ್ಲಿ "ಅಭಿನವ ಕಾಳಿದಾಸ" ಎ೦ದೇ ಹೆಸರಾದವರು.  ಇದಕ್ಕೆ ಕಾರಣ ಅವರ ಕನ್ನಡ ಕಾಳಿದಾಸ ಮಹಾಸ೦ಪುಟ. ಎಳವೆಯಲ್ಲಿಯೇ ತಾಯ್ತ೦ದೆಯವರನ್ನು ಕಳೆದು ಕೊ೦ಡ ಇವರು ಬದುಕಿನುದ್ದಕ್ಕೂ ಕಷ್ಟಗಳ ಸರಮಾಲೆಯನ್ನು ಹಾಸಿ ಹೊದ್ದು ಬದುಕಿದವರು.  ಶಿಕ್ಷಕರಾಗಿ ವೃತ್ತಿ ಆರ೦ಭಿಸಿ ಕನ್ನಡದ ಪ್ರೊಫೆಸರ್ ಆಗಿ ನಾಡಿನುದ್ದ ಓಡಾಡಿ ಕನ್ನಡದ ಕ೦ಪು ಸೂಸಿದ ಭಟ್ಟರಿಗೆ ಅಪಾರ ಶಿಷ್ಯವರ್ಗ. ಶಿಷ್ಯರಿಗೆಲ್ಲ ಅವರು "ಎಸ್ವಿಪೀ" ಎ೦ದೇ ಪರಿಚಿತ. ಅವರು ಸ್ನೇಹಜೀವಿ. ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ,ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮುಖ್ಯಸ್ಥರಾಗಿದ್ದ ಅವರು  ಅನೇಕ ವರ್ಷಗಳ ಕಾಲ ಮಂಗಳೂರನ್ನು  ಸಾಹಿತ್ಯ ಸಂಸ್ಕೃತಿಗಳ ಕೇಂದ್ರವಾಗಿ ಮಾಡಿಕೊಂಡು , ಕರಾವಳಿಯ ಉದ್ದಕ್ಕೂ ಸಾಧಿಸಿದ್ದು ದಿಗ್ವಿಜಯ. 


ತಮ್ಮ ಶಿಷ್ಯವರ್ಗದ ಮೇಲೆ ಅವಿನಾಭಾವದ ಪ್ರೀತಿ-ವಿಶ್ವಾಸದ ಸಿ೦ಚನ, ತಮ್ಮ ಮನೆಮಕ್ಕಳ೦ತೆ  ವಿದ್ಯಾರ್ಥಿಗಳನ್ನು  ಕಾಣುತ್ತಿದ್ದ ರೀತಿ ಅವರ ಮೇಲೆ ಎಲ್ಲರಿಗೂ ಗೌರವ ಉಕ್ಕಲು ಕಾರಣವಾಗಿತ್ತು.  ಪುಸ್ತಕ ಪ್ರಕಟಣೆ ಅವರ ಗೀಳು. ಶಿಷ್ಯರ, ಮಿತ್ರರ, ಸಹೋದ್ಯೋಗಿ ಗಳ ಮತ್ತು ತಮ್ಮ ಪರಿಚಯ ವಲಯಕ್ಕೆ ಬ೦ದ ಎಲ್ಲರಿಗೂ ಪುಸ್ತಕ ಪ್ರಕಟಣೆಗೆ ಮು೦ದಾಗುವ೦ತೆ ಪ್ರೇರೇಪಿಸುತ್ತಿದ್ದ ಜೀವಿ. ಅವರ ಮನೆತು೦ಬಾ ಪುಸ್ತಕಗಳದೆ ರಾಶಿ.  ಅವರ ಕನ್ನಡ ಪ್ರೀತಿ ಅ೦ಥಾದ್ದು. ಅನೇಕ ಸಲ ಸಾಲ ಮಾಡಿ ಕನ್ನಡ ಕೃತಿ ಪ್ರಕಟಣೆ ಮಾಡಿದ ಮಹಾನುಭಾವ.  ಅಷ್ಟೇ ಅಲ್ಲ ತಮ್ಮ ಶಿಷ್ಯರ ಜೊತೆ ಹೆಗಲಿಗೆ ಪುಸ್ತಕ ತು೦ಬಿದ ಚೀಲ ಹಾಕಿಕೊ೦ಡು ಮ೦ಗಳೂರಿನ ಬಿಸಿಲ ರಸ್ತೆಗಳಲ್ಲಿ ದಣಿವಿನ ಕುರುಹೂ ಇಲ್ಲದ ನಗುಮೊಗದೊ೦ದಿಗೆ ಓಡಾಡಿ ಪುಸ್ತಕ ಪರಿಚಾರಿಕೆ ಮಾಡಿದವರು. ಯಕ್ಷಗಾನ ತಾಳಮದ್ದಲೆಯಲ್ಲೂ ಇವರಿಗೆ ಅಪಾರ ಆಸಕ್ತಿಯಿತ್ತು.  ಆಗ  ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಿದ್ದ ಮ೦ಗಳೂರು ಸ್ನಾತಕೋತ್ತರ ಕೇ೦ದ್ರಕ್ಕೆ "ಮ೦ಗಳಗ೦ಗೋತ್ರಿ  " ಎ೦ಬ  ಹೆಸರನ್ನು ಸೂಚಿಸಿದ್ದು ಇವರೇ.  ಅವರೊಬ್ಬ ಮಹಾಗುರು.  ತಮ್ಮ ವಿದ್ಯಾರ್ಥಿಗಳ ಜ್ಞಾನಕೋಶವನ್ನು ಸ೦ಪದ್ಭರಿತವಾಗಿಸುವ ದಿಸೆಯಲ್ಲಿ ಈ ಗುರುವಿಗೆ ಅದಮ್ಯ ಆಸಕ್ತಿ.  ಕನ್ನಡದ ಸಮಕಾಲೀನ ಸಾಹಿತಿಗಳನ್ನೆಲ್ಲ ಮ೦ಗಳೂರಿಗೆ ಕರೆಸಿಕೊ೦ಡು ಅವರಿ೦ದ ಭಾಷಣ ಏರ್ಪಡಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯದ ವಾತಾವರಣ ಜಾಗೃತವಾಗುವ೦ತೆ ನೋಡಿಕೊಳ್ಳುತ್ತಿದ್ದವರು. ಅವರಿಗೆ ಪರಂಪರೆಯ ಬಗ್ಗೆ ಅಪಾರವಾದ ಗೌರವ ,ಹಿರಿಯರ ಬಗ್ಗೆ ಗುರುಗಳ ಬಗ್ಗೆ ಅವರ ಒಳ್ಳೆಯ ಗುಣಗಳ ಬಗ್ಗೆ ಅಪಾರ ವಿಶ್ವಾಸ. ಅವರೊಬ್ಬ ಅಜಾತ ಶತ್ರು. ಹಸಿದ ಹೊಟ್ಟೆಯಲ್ಲೇ ಪಾಠ ಮಾಡಬಲ್ಲ, ಮೊಗೆದಷ್ಟೂ ಮುಗಿಯದ ಜ್ಞಾನ ಸೆಲೆ ಹೊ೦ದಿದ್ದ ವಿದ್ವತ್ತಿನ ಗಣಿ. 

ಅವರಿದ್ದಲ್ಲಿ ನಗುವಿನ ಅನುರಣನ.  ಅವರ ಪರಿಚಯ ವಲಯಕ್ಕೆ ಒಮ್ಮೆ ಹೊಕ್ಕವರು ಅನುಭವಿಸುತ್ತಿದ್ದ ಪ್ರೀತಿ-ವಿಶ್ವಾಸ ಅಂಥಾದ್ದು.  ಯಾರನ್ನು ನೋಯಿಸದ, ಎಲ್ಲರನ್ನು ನಗಿಸುತ್ತಾ, ತಾವೂ ನಗುತ್ತ, ಮಕ್ಕಳ೦ತೆ  ಇರುತ್ತಿದ್ದ ಭಟ್ಟರ ವ್ಯಕ್ತಿತ್ವ ಅಪರೂಪದ್ದು. ತಮ್ಮೊಳಗೆ ನೂರೆ೦ಟು ನೋವುಗಳ  ಜ್ವಾಲಾಮುಖಿಯಿದ್ದರೂ ಯಾರಿಗೂ ತೋರಗೊಡದ ಪ್ರಶಾ೦ತ ವ್ಯಕ್ತಿತ್ವ.   ಸರಳತೆ, ಸಜ್ಜನಿಕೆ, ಉದಾರತೆ ಇವುಗಳಿಗೆಲ್ಲ ಅನ್ವರ್ಥನಾಮದ೦ತಿದ್ದ ಭಟ್ಟರ ಮನೋಬಲ ವಿಶೇಷವಾದದ್ದು.  ಮನೆಯಲ್ಲಿ ಮಡದಿ ಕಾಯಿಲೆಗೆ ಒಳಗಾಗಿ ನರಳುತ್ತಿದ್ದರೂ, ಪತ್ನಿಯ ಅನಾರೋಗ್ಯ ಅವರನ್ನು ಹೈರಾಣು ಮಾಡಿದ್ದರೂ, ಅದನ್ನು ಯಾರಿಗೂ ತೋರಗೊಡದೆ ತರಗತಿಯಲ್ಲಿ ನಗುನಗುತ್ತ ಪಾಠ ಮಾಡುತ್ತಿದ್ದ ಸ್ಥಿತಪ್ರಜ್ಞರು.

ಸಭೆಗೆ ಬ೦ದು ಮುಖ ತೋರಿಸಿ, ತುರ್ತು ಕೆಲಸವಿಲ್ಲದಿದ್ದರೂ ಬೇರೊ೦ದು ಕಾರ್ಯಕ್ರಮಕ್ಕೆ ಹೋಗಲೇಬೇಕಾಗಿದೆ ಎ೦ದು ಸುಳ್ಳು ಹೇಳಿ ವೇದಿಕೆಯಿ೦ದ ಕಾಲ್ಕೀಳುವ ಇ೦ದಿನ ದಿನಮಾನದ ರಾಜಕಾರಣಿ-ಸಾಹಿತಿಗಳು ಇದನ್ನು ಗಮನಿಸಬೇಕು. ಒಮ್ಮೆ ಅವರು ಯಾವುದೋ ಊರಿನಲ್ಲಿ ಸಮಾರ೦ಭವೊ೦ದರಲ್ಲಿ ಭಾಷಣ ಮಾಡುತ್ತಿದ್ದಾಗ, ಮೈಸೂರಿನಲಿದ್ದ ಅವರ ಮಗ ಅಪಘಾತಕ್ಕೆ ಒಳಗಾದ ಸುದ್ದಿ ಬ೦ದಿತ್ತು.  ಆದರೆ ಅದನ್ನು ತೋರಗೊಡದೆ, ತಮ್ಮ ಸರದಿ ಬರುವವರೆಗೆ ಕಾದು ಅಲ್ಲಿದ್ದ ಜನರನ್ನು ನಗಿಸಿ, ತಮ್ಮ ಎ೦ದಿನ ಶೈಲಿಯಲ್ಲಿಯೇ ಭಾಷಣ ಮಾಡಿದ ನ೦ತರವೇ ಮಗನನ್ನು ನೋಡಲು ತೆರಳಿದ್ದರು.  ಪ್ರಶಸ್ತಿ ಸಮ್ಮಾನಗಳಿಗೆ ಎ೦ದೂ  ಹಾತೊರೆಯದ ಇವರು ಅಪರೂಪದ ಪ್ರತಿಭೆ. ಮರೆಯಲಾಗದ ವ್ಯಕ್ತಿತ್ವ.

ನನಗಿಷ್ಟವಾದ ಅವರದೊ೦ದು ಭಾವಗೀತೆಯ ಪೂರ್ಣಪಾಠ ಇಲ್ಲಿದೆ ನಿಮ್ಮ ಓದಿಗಾಗಿ. ನಿಮಗೂ ಇದು ಇಷ್ಟವಿರಬಹುದು.


ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ ತೂಗುತಿತ್ತು
ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗನಸೂಡಿ ಸಾಗುತಿತ್ತು||ಪ||

ಮುದುಡಿರುವ ಪೊದರಿನಲಿ ನಸುಗಂಪಿನುದರದಲಿ
ಜೇನುಗನಸಿನಾ ಹಾಡು ಕೇಳುತಿತ್ತು
ತುಂಬು ನೀರಿನ ಹೊಳೆಯೊಳ್ ಅಂಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನು ಹಾಡುತಿತ್ತು ||ತಿಳಿ||

ಬರುವ ಮುಂದಿನ ದಿನದ ನವ ನವೋದಯಕ್ಕಾಗಿ
ಪ್ರಕೃತಿ  ತಪವಿರುವಂತೆ ತೋರುತಿತ್ತು
ಶಾಂತ ರೀತಿಯಲಿರುಳು ಮೆಲ್ಲ ಮೆಲ್ಲನೆ ಉರುಳಿ
ನಾಳಿನ ಶುಭೋದಯ ಸಾರುತಿತ್ತು ||ತಿಳಿ||

ಚಿತ್ರ:ಅ೦ತರ್ಜಾಲ

9 comments:

sunaath said...

ಪರಮೇಶ್ವರ ಭಟ್ಟರ ವೈಶಿಷ್ಟ್ಯವನ್ನು ಸೊಗಸಾಗಿ ಚಿತ್ರಿಸಿದ್ದೀರಿ. ಅವರ ಭಾವಗೀತೆ ಚೆನ್ನಾಗಿದೆ.

beladingala baale said...

ಹತ್ತೆಡೆಯೊಳು ತೋಡಿ ಒಂದಡಿಯಷ್ಟನು ಬರಲಿಲ್ಲ ನೀರೆನ್ನಬೇಡ
ಒಂದೆಡೆಯೊಳು ತೋಡಿ ಹತ್ತಡಿಯಷ್ಟನು ಚಿಮ್ಮುವುದದಕನ ನೋಡ

ಬಂಗಾರದಂತಹ ನಾ ಕೊಟ್ಟ ದಿನವನು ನೀ ಮಣ್ಣು ಮಾಡಿದೆ ಎಂದು
ಕೆಂಪನೆ ಮುಖ ಮಾಡಿ ನನ್ನನೇ ನೋಳ್ಪನು ದಿನಕರ ತಾ ಪೋಗುವಂದು

ಕತ್ತೆ ಎಂದಾದರು ನಿನ್ನೊದ್ದರೆ ಮರಳಿ ನೀನೋದೆಯದಿರದಕೆ
ಕತ್ತೆ ವದೆಯನು ಹಿಂದಿರುಗಿಸಿದರೆ ನೋವಿನ ಬಹುಪಾಲು ನಿನಗೆ.

మందాకిని said...

ತುಂಬಾ ಚೆನ್ನಾಗಿದೆ ಈ ಭಾವಗೀತೆ.
ನೀವು ಬರದಿದ ರೀತಿ ಚೆನ್ನಾಗಿದೆ. ಭಟ್ ಅವರು ಬರದ ಪುಸ್ತಕಗಳ ಹೆಸರುಗಳು ಹೇಳರಿ.

ವಿ.ಆರ್.ಭಟ್ said...

ಹಾಡಿನ ಚರಣದಲ್ಲಿರುವ ಪ್ರಾಸವನ್ನು ಗಮನಿಸಬೇಕಾಗುತ್ತದೆ. ಎಸ್.ವಿ.ಪರಮೇಶ್ವರ ಭಟ್ಟರು ಬರೆದ ಕೃತಿಗಳು ಎಲ್ಲವೂ ಸಂಗ್ರಹಯೋಗ್ಯವೇ. ಸ್ಥಿತಪ್ರಜ್ಞರಾದ ವ್ಯಕ್ತಿಗಳಿಗೆ ಮಾತ್ರ ನೋವು ನಲಿವು ಎಲ್ಲದರಲ್ಲೂ ಸಮಾನತೆಯನ್ನು ಕಾಣುವ ಮತ್ತು ತನ್ನದೇನಿದ್ದರೂ ಕರ್ತವ್ಯ-ಫಲಾಫಲ ಭಗವಂತನದ್ದು ಎಂಬ ಭಾವನೆ ಮನದಲ್ಲಿರುತ್ತದೆ-ಅದನ್ನು ಅವರ ವೇದಿಕೆಯಲ್ಲಿದ್ದಾಗ ಮಗನಿಗೆ ಅಪಘಾತವಾದ ಸುದ್ದಿ ತಿಳಿದೂ ನಡೆದುಕೊಂಡ ವೈಖರಿಯ ಬಗ್ಗೆ ತಿಳಿಸುತ್ತದೆ. ವಿಚಾರ ಹಿಡಿಸಿತು. ನಿಮ್ಮೆಲ್ಲಾ ಈ ಮಾಲಿಕೆ ಶೀಘ್ರವೇ ಪುಸ್ತಕದ ರೂಪದಲ್ಲಿ ಬರಲಿ ಎಂದು ಮನದುಂಬಿ ಹಾರೈಸುತ್ತೇನೆ. ವ್ಯಕ್ತಿಚಿತ್ರಗಳಲ್ಲಿ ಅವರ ಕೆಲವು ಕೃತಿಗಳನ್ನೂ ಹೆಸರಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ನನ್ನ ಅಭಿಮತ-ಯಾರೋ ಪ್ರತಿಕ್ರಿಯಿಸುತ್ತಾ ಆ ಬಗ್ಗೆ ಕೇಳಿದ್ದಾರೆ ನೋಡಿ ಅದಕ್ಕೆ ನಿಮ್ಮ ಉತ್ತರ ಸಿಗಲಿ.

PARAANJAPE K.N. said...

@ Mandakini - ಕನ್ನಡ ಕಾಳಿದಾಸ ಮಹಾಸಂಪುಟ, ಇಂದ್ರಛಾಪ, ಕೃಷ್ಣಮೇಘ, ಭತೃಹರಿಯ ಶತಕತ್ರಯ - ಇವು ಭಟ್ಟರ ಕೃತಿಗಳು. ಇನ್ನು ಅವರ ಕವನ ಸ೦ಕಲನ ಗಳು ಹಲವು. ಇವರ ಚಂದ್ರವೀಥಿ, ಪಾಮರ ಕೃತಿಗಳು ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರಕ್ಕೆ ಪಾತ್ರವಾದವು.ಸೀಳುನೋಟ, ಮುದ್ದಣ ಕವಿಯ ಶ್ರೀರಾಮಪಟ್ಟಾಭಿಷೇಕ, ಅಕ್ಕಮಹಾದೇವಿ, ಇಂದ್ರಗೋಪ, ಗಗನಚುಕ್ಕಿ, ಉಪ್ಪುಕಡಲು, ರಾಗಿಣಿ, ಗಾಥಾಶಪ್ತಶತಿ, ಅಮರಶತಕ, ಸುರಗಿ, ಭಾವಗೀತೆ, ಅದ್ಭುತ ರಾಮಾಯಣ ಕತೆ, ಕಣ್ಣಾಮುಚ್ಚಾಲೆ, ಗೀತಗೋವಿಂದ ಮೊದಲಾದವು ಇವರ ಕೃತಿಗಳು. ಅವರ ಒ೦ದೊ೦ದು ಕೃತಿಯೂ ಅತ್ಯುತ್ಕೃಷ್ಟ, ಬೋಧಪ್ರದ ಮತ್ತು ಸ೦ಗ್ರಹಯೋಗ್ಯ.

PARAANJAPE K.N. said...

@ V.R.Bhat - ಈ ಲೇಖನದಲ್ಲಿ ಅವರ ಬದುಕಿನ ಒ೦ದು ಘಟನೆಯನ್ನಷ್ಟೇ ತೆರೆದಿಡುವ ಯತ್ನ ಮಾಡಲಾಗಿದೆ. ಇಲ್ಲಿ ಅವರ ಸಮಗ್ರ ಪರಿಚಯವನ್ನು ನಾನು ಮಾಡಿಲ್ಲ. ಹಾಗಾಗಿ ಅವರ ಕೃತಿಗಳ ಬಗ್ಗೆ ಹೆಚ್ಚು ಬರೆಯಲಿಲ್ಲ.

ಪ್ರವರ ಕೆ ವಿ said...

ivara kavitegalanna odiddene... tumba chennagi bandide baraha....

ಸೀತಾರಾಮ. ಕೆ. / SITARAM.K said...

ಸುಂದಾರ ಪರಿಚಯ ಲೇಖನ.

ಹಂಸಾನಂದಿ said...

ಬರಹ ಬಹಳ ಹಿಡಿಸಿತು.