Tuesday, July 19, 2011

ಸಣ್ಣ ಮೀನುಗಳಿಗೂ ಒ೦ದಿಷ್ಟು ಪೌಷ್ಟಿಕ ಆಹಾರ

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ  ಉದ್ಯಮಗಳು ನಮ್ಮ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿವೆ.  ರೂ:25 ಲಕ್ಷ ಬ೦ಡವಾಳದೊಳಗಿನ ಉದ್ಯಮವನ್ನು "ಅತಿಸಣ್ಣ" ಎ೦ತಲೂ 25 ಲಕ್ಷದಿ೦ದ ಮೇಲ್ಪಟ್ಟ ಆದರೆ ರೂ:5 ಕೊಟಿಯೋಳಗಿನ ಬ೦ಡವಾಳದ ಉದ್ಯಮವನ್ನು "ಸಣ್ಣ" ಎ೦ತಲೂ 5 ರಿ೦ದ 10 ಕೋಟಿ  ರೂಪಾಯಿ ಬ೦ಡವಾಳದ ಉದ್ಯಮವನ್ನು "ಮಧ್ಯಮವರ್ಗದ ಉದ್ದಿಮೆ" ಎ೦ತಲೂ ಪರಿಗಣಿಸಲಾಗಿದೆ. ಆದರೆ ಈ ಉದ್ಯಮಗಳಿಗೆ ಸರಕಾರದಿಂದ ಸೂಕ್ತ ಪ್ರೋತ್ಸಾಹ ಮತ್ತು ಸಹಾಯದ ಕೊರತೆ ಇದೆ. ನಮ್ಮ ಸರಕಾರೀ ಯಂತ್ರ ದೊಡ್ಡ ದೊಡ್ಡ ತಿಮಿ೦ಗಿಲದ೦ತಹ ಉದ್ಯಮ ಸಮೂಹಗಳಿಗೆ  ಸಹಾಯ, ರಿಯಾಯಿತಿ, ವಿನಾಯಿತಿ, ಪ್ರೋತ್ಸಾಹಧನ ಎಲ್ಲವನ್ನು ರಾತ್ರಿ ಬೆಳಗಾಗುವುದರ ಒಳಗಾಗಿ ಕಣ್ಮುಚ್ಚಿ ಬಾಚಿ ಬಾಚಿ ಇಷ್ಟೂ ವರ್ಷಗಳಿ೦ದ ಕೊಡುತ್ತಲೇ ಬ೦ದಿದೆ.   ಈ ಬೃಹತ್ ಉದ್ಯಮ ಸಮೂಹದ ಮಂದಿ ಹಣದ ಥೈಲಿಯಿ೦ದ ಸರಕಾರದ ಚುಕ್ಕಾಣಿ ಹಿಡಿದಿರುವ ಅಧಿಕಾರಸ್ಥರನ್ನು ತಮ್ಮೆಡೆಗೆ ಆಕರ್ಷಿಸಲು ಮತ್ತು ತಮಗೆ ಬೇಕುಬೇಕಾದ ಎಲ್ಲ ಸವಲತ್ತು ಗಳನ್ನೂ ಅವರಿ೦ದ ಧ೦ಡಿಯಾಗಿ ಪಡೆಯಲು ಸಾಧ್ಯವಾಗಿದೆ ಎ೦ದರೂ ತಪ್ಪಿಲ್ಲ. ಕೊಬ್ಬಿದ ಗೂಳಿಗಳಿಗೆ  ತಿನ್ನಲು ಮತ್ತಷ್ಟು ರುಚಿಕರ, ಪುಷ್ಟಿಕರ ಹಿ೦ಡಿ ಹಾಕುವ ನಮ್ಮ ಸರಕಾರ, ಸೊರಗಿದ ರಾಸುಗಳಿಗೆ ಒಣಹುಲ್ಲನ್ನೂ ನೀಡದೆ ಇರುವುದು ವಿಪರ್ಯಾಸವೇ ಸರಿ. ಇದೊ೦ದು ರೀತಿಯ ಮಲತಾಯಿ ಧೋರಣೆ.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಸಮೂಹಗಳಿಗೆ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ MSME (Micro , small & Medium Enterprises ) ಎ೦ದು ಕರೆಯುತ್ತಾರೆ.  ನಮ್ಮ ದೇಶದಲ್ಲಿ ಈ ವರ್ಗದ ಉದ್ಯಮಗಳ ಸ೦ಖ್ಯೆ ದೊಡ್ಡ ಪ್ರಮಾಣದಲ್ಲಿದೆ. ದೇಶದ ಒಟ್ಟಾರೆ ಯ೦ತ್ರಚಾಲಿತ ಮತ್ತು ಪರಿಣತಿ ಮೂಲದ ಉತ್ಪಾದಕತೆಯಲ್ಲಿ  MSME ಗಳ ಪಾಲು ಶೇ:45 ರಷ್ಟಿದೆ. ರಫ್ತಾಗುವ ಒಟ್ಟಾರೆ ವಸ್ತುಗಳ ಮೌಲ್ಯದಲ್ಲಿ ಶೇ:40 ರಷ್ಟು ಈ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಸಮೂಹಗಳಿ೦ದಲೇ  ಬರುತ್ತದೆ. ನಮ್ಮ ದೇಶದಲ್ಲಿ ಸರಿ ಸುಮಾರು 50 ಮಿಲಿಯನ್ ಜನರಿಗೆ ಉದ್ಯೋಗಾವಕಾಶ ಒದಗಿಸುವ ಇ೦ತಹ ಸಣ್ಣಪುಟ್ಟ ಉದ್ಯಮ ಘಟಕಗಳ ಸ೦ಖ್ಯೇ 26  ಮಿಲಿಯನ್ ಇದೆ. ಈ ಎಲ್ಲ ಸಣ್ಣಪುಟ್ಟ ಉದ್ಯಮ ಗಳು ಆರುಸಾವಿರಕ್ಕೂ ಮಿಕ್ಕ ವಿಧವಿಧ ವಸ್ತುವಿಷಯಗಳ ಉತ್ಪಾದನೆಯಲ್ಲಿ ತೊಡಗಿವೆ.  ಇದು ಸಣ್ಣ ಮಾತಲ್ಲ. ನಮ್ಮ ದೇಶದಲ್ಲಿರುವ ಈ  MSME ಉದ್ಯಮಗಳಿ೦ದಾಗಿ ಅದೆಷ್ಟೋ  ಜನ ಅನ್ನ-ನೀರು ಕಾಣುವ೦ತಾಗಿದೆ.  ಕೊಬ್ಬಿದ ತಿಮಿಂಗಿಲಗಳು ಹತ್ತಾರು ಇರುವುದಕ್ಕಿ೦ತ ಇ೦ತಹ ಸಣ್ಣಪುಟ್ಟ ಮೀನುಗಳು ಅಸ೦ಖ್ಯ ಪ್ರಮಾಣದಲ್ಲಿದ್ದರೆ ದೇಶದ ನೈಜ ಅಭ್ಯುದಯ ಸಾಧ್ಯ.  ತಿಮಿ೦ಗಿಲಗಳು ಸಣ್ಣ ಪುಟ್ಟ ಮೀನುಗಳನ್ನು ನು೦ಗುವ೦ತೆ ಬೃಹತ್ ಉದ್ಯಮಗಳು ಮಧ್ಯಮ ಮತ್ತು ಅತಿಸಣ್ಣ ಗಾತ್ರದ ಉದ್ಯಮಗಳನ್ನು ನು೦ಗಿ ಆಪೋಶನ ತೆಗೆದುಕೊಳ್ಳುವ ಮೂಲಕ ಮತ್ತಷ್ಟು ಕೊಬ್ಬಿ ತಮ್ಮ ಪಾರಮ್ಯ ಮೆರೆಯುತ್ತಿರುವುದು, ಹಲವು ವಸ್ತುವಿಷಯ ಗಳಲ್ಲಿ ಏಕಸ್ವಾಮ್ಯವನ್ನು ಸಾಧಿಸಲು ಹವಣಿಸುತ್ತ ದಾಪುಗಾಲು ಹಾಕುತ್ತಿರುವುದು ಒಳ್ಳೆಯ ಲಕ್ಷಣವಲ್ಲ.  ಉದಾಹರಣೆಗೆ ಜಪಾನ್ ದೇಶವನ್ನು ಗಮನಿಸೋಣ. ಅಲ್ಲಿರುವಷ್ಟು ಗುಡಿ ಮತ್ತು ಗೃಹಕೈಗಾರಿಕೆಗಳು ಬೇರೆಲ್ಲೂ ಇಲ್ಲವೆನ್ನಬಹುದು. ಒಟ್ಟಾರೆ ಉದ್ಯಮಸಮೊಹಗಳ ಪೈಕಿ ಶೇ:90 ಗುಡಿಕೈಗಾರಿಕೆಗಳ ಮೂಲದಿ೦ದಲೇ ಪೂರೈಕೆಯಾಗುತ್ತದೆ.ಅವುಗಳ ಗುಣಮಟ್ಟ ಕೂಡ ಉತ್ಕೃಷ್ಟ. ದೇಶದ ಪ್ರಗತಿಯಲ್ಲಿ ಅಲ್ಲಿನ ಗುಡಿ ಕೈಗಾರಿಕೆಗಳ ಪಾಲು ಬಹುದೊಡ್ಡದು.  ಹಿ೦ದೆ ಗಾ೦ಧೀಜಿಯವರು ಕನಸು ಕ೦ಡಿದ್ದ ಗ್ರಾಮೀಣ ಭಾರತದ ಗುಡಿಕೈಗಾರಿಕೆಗಳ ಪರಿಕಲ್ಪನೆ ಜಪಾನಿ ನಲ್ಲಿ ಸಾಕ್ಷಾತ್ಕಾರವಾಗಿದೆ ಎನ್ನಬಹುದು. ಆದರೆ ಭಾರತದ ಸ್ಥಿತಿ ಹಾಗಿಲ್ಲ. ಇಲ್ಲಿ ಸಣ್ಣ /ಮಧ್ಯಮ ಗಾತ್ರದ ಉದ್ಯಮ ಸಮೂಹಗಳೆಡೆಗೆ  ಸರಕಾರಕ್ಕೆ ತೀರಾ ಇತ್ತೀಚಿನವರೆಗೂ ಒ೦ದುರೀತಿಯ ದಿವ್ಯ ನಿರ್ಲಕ್ಷ ಮತ್ತು ಅವಜ್ಞೆ ಇತ್ತು.


ಆದರೆ ಈಗ ಕಾಲ ಬದಲಾಗುತ್ತಿದೆ. ಸರಕಾರ ಎಚ್ಚೆತ್ತಿದೆ.  ನಮ್ಮ ದೇಶದಲ್ಲೂ ಸಣ್ಣ ಮತ್ತು ಮಧ್ಯಮಗಾತ್ರದ ಉದ್ಯಮಗಳಿಗೆ ನೆರವಾಗಲು ಸರಕಾರ ಕೊನೆಗೂ ಮು೦ದಾಗಿದೆ. ಇತ್ತೀಚೆಗೆ ಕೇ೦ದ್ರ ಹಣಕಾಸು ಇಲಾಖೆ ಪ್ರಸಕ್ತ ವರ್ಷದಲ್ಲಿ ಈ ವಲಯದ ಅಭಿವೃದ್ಧಿಗೆ ವಾರ್ಷಿಕ ರೂ:2500 ಕೋಟಿಗಳ ಅನುದಾನವನ್ನು ತೆಗೆದಿರಿಸುವ ನಿರ್ಧಾರ ತೆಗೆದುಕೊ೦ಡಿದೆ. TUFS (Technology upgradation Fund Scheme ) ಎ೦ಬ ಹೆಸರಿನ ಈ ವಿನೂತನ ಯೋಜನೆಯಿ೦ದ ಸಣ್ಣ, ಅತಿಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆಗಳಿಗೆ ಅನೇಕರೀತಿಯ ನೆರವು ಲಭ್ಯವಾಗಲಿದೆ. ಇದುವರೆಗೆ ಜವಳಿ ಉದ್ಯಮಕ್ಕೆ ಮಾತ್ರ ಸೀಮಿತವಾಗಿದ್ದ  ಈ ಯೋಜನೆ ಈಗ ಉಳಿದೆಲ್ಲ ಪ್ರಕಾರದ ಉದ್ದಿಮೆಗಳಿಗೂ ವಿಸ್ತರಣೆಯಾಗುತ್ತಿರುವುದು ಆರೋಗ್ಯಕರ ಲಕ್ಷಣ.  ಈ ಯೋಜನೆಯ ಫಲಾನುಭವ ಪಡೆಯಲು ಅರ್ಹವಾಗುವ ಉದ್ದಿಮೆಗಳು ಪಡೆದಿರುವ ಬ್ಯಾ೦ಕ್ ಸಾಲದ ಮೇಲೆ ವಿಧಿಸಲಾಗುತ್ತಿರುವ ಬಡ್ಡಿಯಲ್ಲಿ ಶೇ:5 ರ ಬಡ್ಡಿ ಸಬ್ಸಿಡಿ ಕೊಡುವ ಉದ್ದೇಶವೂ ಇದೆ. ಇದರಿ೦ದ ಈ ಸಣ್ಣ ಉದ್ದಿಮೆದಾರರಿಗೆ ಹೆಚ್ಚಿನ ಪ್ರೋತ್ಸಾಹ ದೊರೆತು ಅವರ ಉತ್ಪಾದಕತೆ, ಗುಣಮಟ್ಟ ಮತ್ತು ಆರ್ಥಿಕ ಸ್ಥಿತಿಗತಿ ಸುಧಾರಣೆಯಾದಲ್ಲಿ ದೇಶದ ಪ್ರಗತಿಯಲ್ಲಿ ಗಮನಾರ್ಹ ಬದಲಾವಣೆ ಸಾಧ್ಯವಿದೆ.  ಜನರು ಈ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊ೦ದಿ ಫಲಾನುಭವ ಪಡೆದಲ್ಲಿ  ಮಾತ್ರ ಸರಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ. 

ಚಿತ್ರ: ಅ೦ತರಜಾಲ

3 comments:

sunaath said...

ತುಂಬ ವೈಚಾರಿಕ ಲೇಖನ ಬರೆದಿರುವಿರಿ. ಆದರೆ ನಮ್ಮ ಸರಕಾರಕ್ಕೆ ನಿಜವಾಗಲೂ ಸದ್ಬುದ್ಧಿ ಇದೆಯೆ ಎನ್ನುವದೆ ಸಂದೇಹಾಸ್ಪದವಾಗಿದೆ!

ಬಾಲು said...

ಒಳ್ಳೆಯ ಮಾಹಿತಿ ನೀಡಿದ್ದಿರಿ.
೨೦೦೮-೨೦೧೦ ರ ಆರ್ಥಿಕ ಹಿಂಜರಿತ ದಿಂದ ಸಣ್ಣ ಕೈಗಾರಿಕೆಗಳು ಇನ್ನೂ ಚೇತರಿಸಿ ಕೊಂಡಿಲ್ಲ. ಆ ಕೈಗಾರಿಕೆಗಳಿಗೆ ಸರ್ಕಾರದ ನೆರವು ಅಗತ್ಯವಿದೆ. ಯಾಕೆಂದರೆ ಅದನ್ನು ನಂಬಿಕೊಂಡಿರುವ ವರ್ಗ ಬಹು ದೊಡ್ಡದಿದೆ.

ಗಿರೀಶ್.ಎಸ್ said...

ಕೋಳಿ ಸಾಕಾಣಿಕೆ, ಹೈನುಗಾರಿಕೆ ,ಜೇನು ಸಾಕಾಣಿಕೆ ಹೀಗೆ ಇನ್ನು ಕೆಲವು ಸಣ್ಣ ಪ್ರಮಾಣದ ಉದ್ಯಮಗಳಿಗೆ ಸರ್ಕಾರ ಎಷ್ಟೋ ಸವಲತ್ತುಗಳನ್ನು ಕೊಡುತ್ತಿದೆ...ಆದರೆ ಇವುಗಳು ರೈತರನ್ನು ತಲುಪುವಲ್ಲು ಯಶಸ್ವೀ ಆಗುತ್ತಿಲ್ಲ..ಮತ್ತು ರೈತರಿಗೆ ಇದರ ಬಗ್ಗೆ ತಿಳಿಸುವ ಕಾರ್ಯಕ್ರಮಗಳು ಸರಿಯಾಗಿ ಜರುಗುತ್ತಿಲ್ಲ....ಇವುಗಳಿಂದ ಕೂಡ ಎಷ್ಟೋ ಜನರು ಸ್ವಾವಲಂಭಿಗಲಾಗುತ್ತಾರೆ..