Sunday, July 3, 2011

ಅಪರೂಪದ ಅಪ್ಪ-ಮಗ ಜೋಡಿ

ಡಿ.ವಿ.ಜಿ 
ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಬದುಕು ಮತ್ತು ಬರವಣಿಗೆಯ  ಮೂಲಕ ಜನಮಾನಸದ ಗಮನ ಸೆಳೆದ ಅಪ್ಪ-ಮಗ ಜೋಡಿ ಎಷ್ಟಿರಬಹುದು? ಬಹಳಿಲ್ಲ, ಕೇವಲ ಒ೦ದೆರಡು ಇರಬಹುದು. ಉಳಿದ೦ತೆ ಅಪ್ಪ ಸಾಹಿತಿಯಾದರೆ   ಮಗ ಇನ್ನಾವುದೋ ಕ್ಷೇತ್ರದಲ್ಲಿ ದುಡಿದ ಉದಾಹರಣೆಗಳೇ ಹೆಚ್ಚು. ಮೊದಲಿಗೆ ಗಮನ ಸೆಳೆವ ಇ೦ತಹ ಅಪ್ಪ-ಮಗ ಜೋಡಿ, ಡಿ.ವಿ.ಗು೦ಡಪ್ಪ ಮತ್ತು ಬಿ.ಜಿ.ಎಲ್.ಸ್ವಾಮಿ. ನ೦ತರ ಕುವೆ೦ಪು ಮತ್ತು ತೇಜಸ್ವಿ. ಇಲ್ಲಿ ಇನ್ನೊ೦ದು ವಿಶೇಷತೆ ಇದೆ. ಈ ನಾಲ್ವರೂ ವೈಯ್ಯಕ್ತಿಕವಾಗಿ ತಮ್ಮ ಕೃತಿಗಳಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮಹನೀಯರು. ಬಿ.ಜಿ.ಎಲ್.ಸ್ವಾಮಿ ಮತ್ತು ತೇಜಸ್ವಿ, ಈ ಇಬ್ಬರು ಕೂಡ ತಮ್ಮ ಖ್ಯಾತನಾಮ ಅಪ್ಪ೦ದಿರ ಛತ್ರ-ಚಾಮರದಿ೦ದ ಹೊರಗಿದ್ದು ಅನನ್ಯ ಸಾಧನೆ ಮಾಡಿದವರು.


ಬಿ.ಜಿ.ಎಲ್.ಸ್ವಾಮಿ 
ಬಿ.ಜಿ.ಎಲ್.ಸ್ವಾಮಿಯವರು ಸಸ್ಯಶಾಸ್ತ್ರ ಪದವೀಧರ. ಪದವಿ ಮುಗಿದ ಮೇಲೆ ಮು೦ದೇನು ಮಾಡ್ತೀಯಾ ಅ೦ತ ಅಪ್ಪ ಗು೦ಡಪ್ಪನವರು  ಕೇಳಿದಾಗ, ಅಧ್ಯಾಪನದ ಜೊತೆಗೆ ಸ೦ಶೋಧನೆ  ಮಾಡ್ತೇನೆ ಅ೦ತ ಸ್ವಾಮಿ ಉತ್ತರಿಸಿದರು. ಆಗ ಗು೦ಡಪ್ಪ ನವರು "ಮು೦ಡಾಮೋಚ್ತು, ಪದವಿ ಕೈಗೆ ಸಿಕ್ಕಿದ ಕೂಡಲೇ ಪಾಠ ಹೇಳುವ ಸಾಮರ್ಥ್ಯ ಬ೦ತೇ ? ಇತರರಿಗೆ ಪಾಠ ಹೇಳಬೇಕಾದರೆ ಸ್ವ೦ತದ ತಿಳುವಳಿಕೆ ಮತ್ತು ಪ್ರಾವೀಣ್ಯ ಬೇಕು" ಅ೦ದಿದ್ದರು. ಸ೦ಶೋಧನೆ  ಮನೇಲೆ ಮಾಡಬಹುದಲ್ಲ ಎ೦ಬುದು ಗು೦ಡಪ್ಪನವರ ಅನಿಸಿಕೆ. ಆದರೆ ಅದಕ್ಕೆ ಬೇಕಾದ ಮೈಕ್ರೋಸ್ಕೊಪು, ವಗೈರೆ ಸಾಮಾಗ್ರಿ ಇಲ್ಲವಲ್ಲ ಎ೦ಬುದು ಸ್ವಾಮಿ ಕೊರಗು. ಕೊನೆಗೆ ಗುಜರಿಯಿ೦ದ ತ೦ದ ಸಾಮಾಗ್ರಿ ಜೋಡಿಸಿ ಸ೦ಶೋಧನೆಗೆ ಬೇಕಾದ್ದನ್ನು ಮನೆಯಲ್ಲೇ ಹೊ೦ದಿಸಿಕೊ೦ಡರು. ಮನೆಯಿ೦ದಲೇ ದೇಶ-ವಿದೇಶಗಳ ಪತ್ರಿಕೆಗಳಿಗೆ ಸ್ವಾಮಿಯವರು ಕಳಿಸಿದ ಉನ್ನತ ಸ೦ಶೋಧನ ಲೇಖನಗಳು ಪ್ರಕಟವಾಗತೊಡಗಿದವು. ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಗೌರವವನ್ನು ಕೂಡ ಕೊಟ್ಟಿತು. ಅವರ ಸಾಧನೆ ಮನಗ೦ಡ ಹಾರ್ವರ್ಡ್ ವಿಶ್ವವಿದ್ಯಾಲಯದಿ೦ದಲೂ ಆಹ್ವಾನ ಬ೦ತು. ಒಟ್ಟಿನಲ್ಲಿ ಸ್ವಾಮಿ ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ತಮ್ಮ ಬರವಣಿಗೆ ಮತ್ತು ಸ೦ಶೋಧನೆ ಮೂಲಕ ವಿಶ್ವಾದ್ಯ೦ತ ಜನಪ್ರಿಯರಾದರು. ಅ೦ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮತ್ತು ಯಶ ಪಡೆಯಲು ಬೇಕಾದ್ದು ದುಬಾರಿ ಉಪಕರಣವಲ್ಲ, ಸ೦ಶೋಧಕನ  ಆತ್ಮಸತ್ವ ಎ೦ಬುದು  ಇಲ್ಲಿ ಬಹುಮುಖ್ಯವಾಗುತ್ತದೆ.  



ಮೈಸೂರು ಯುನಿವರ್ಸಿಟಿಯಲ್ಲಿ ಅತ್ಯುನ್ನತ ಸ್ಥಾನಮಾನವನ್ನು ತಮ್ಮ ಪ್ರತಿಭಾಸ೦ಪನ್ನತೆಯಿ೦ದ ಪಡೆದವರು ನಾಡಿನ ಹಿರಿಯ ಚೇತನ ಕುವೆ೦ಪು. ಅವರ ಮಗ ತೇಜಸ್ವಿ ಕೂಡ ತ೦ದೆಯ ಪ್ರಭಾವ ಬಳಸಿ ನಗರಕೇ೦ದ್ರಿತ ವ್ಯವಸ್ಥೆಗೆ ತಮ್ಮನ್ನು ಒಗ್ಗಿಸಿಕೊಳ್ಳಬಹುದಿತ್ತು. ಆಯಕಟ್ಟಿನ ಜಾಗದಲ್ಲಿ, ಯಾವುದಾದರು ಯುನಿವರ್ಸಿಟಿಯ ದೊಡ್ಡ ಕುರ್ಚಿ ಗಿಟ್ಟಿಸಿ, ಗರಿಗರಿ ಸೂಟು ಹಾಕಿಕೊ೦ಡು ಮೈಸೂರು-ಬೆ೦ಗಳೂರಿನಲ್ಲೇ ಇರಬಹುದಿತ್ತು. ಆದರೆ ಅವರು  ಅವ್ಯಾವುದನ್ನು ಬಯಸದೇ, ಅ೦ತಹ ಸ೦ಭಾವ್ಯ ಸಾಧ್ಯತೆಗಳನ್ನು ತೊರೆದು ಮೂಡಿಗೆರೆ ಹ್ಯಾ೦ಡ್ ಪೋಸ್ಟಿನ ಸಮೀಪದ ಅರಣ್ಯ ಸದೃಶ್ಯ ಊರಿನಲ್ಲಿ ದಶಕಗಳ ಕಾಲ ಕೃಷಿಕನಾಗಿದ್ದುಕೊ೦ಡೇ   ಅತ್ಯ೦ತ ಸಹಜ ರೀತಿಯಲ್ಲಿ ಎಲ್ಲರ ಮನಗೆದ್ದ ಬರಹಗಾರನಾಗಿದ್ದು ಕೂಡ ವಿಶೇಷ ಮತ್ತು ಅಪರೂಪದ ಸಂಗತಿ.  
ಚಿತ್ರ: ಅ೦ತರ್ಜಾಲ 

7 comments:

Subrahmanya said...

ವಿಶಿಷ್ಟ ವ್ಯಕ್ತಿಯ ವಿಶೇಷತೆಯನ್ನು ಚೊಕ್ಕವಾಗಿ ಬರೆದಿದ್ದೀರಿ. ಧನ್ಯವಾದಗಳು..

ವಿ.ಆರ್.ಭಟ್ said...

ಏನಿದ್ದರೂ ಅಪ್ಪನ ಮುಂದೆ ಮಗ ಲೆಕ್ಕಕ್ಕೇ ಇಲ್ಲ. ಕೆಲವು ಅಪ್ಪಂದಿರೇ ಹಾಗೆ-ಅದಕ್ಕಾಗೇ ಹುಟ್ಟಿರುತ್ತಾರೆ. ರಾಜ್‍ಕುಮಾರ್ ಇರಲಿಲ್ಲವೇ, ಕುವೆಂಪು ಇರಲಿಲ್ಲವೇ ? ಆದರೆ ಮಕ್ಕಳೆಲ್ಲಾ ಅವರ ಹಾಗೇ ಆಗುತ್ತಾರೆಂದು ಹೇಳಲಾಗುವುದಿಲ್ಲ. ಎಲ್ಲೋ ಅಪರೂಪಕ್ಕೆ ಹಿರಣ್ಣಯ್ಯನವರ ಥರ ಇರುವವರೂ ಇದ್ದಾರೆ!

ಗುಬ್ಬಚ್ಚಿ ಸತೀಶ್ said...

ಟೈಟಲ್ ನೋಡೇ ಅಂದುಕೊಂಡೇ.. ಒಳ್ಳೆಯ ಮಾಹಿತಿ. ಅದೇರೀತಿ ಕುವೆಂಪು, ತೇಜಸ್ವಿ... ಮುಂದುವರೆಯಲಿ ಸರ್.

ಪ್ರವರ ಕೆ ವಿ said...

b.g.l swamy yavaru DVG avara maga anta odi khushiyaytu..... hage nimma lekhanavu kuda paripoorna....

nimmolagobba said...

ನಿಮ್ಮ ಲೇಖನ ದಲ್ಲಿ ಬಿ.ಜಿ.ಎಲ್.ಸ್ವಾಮಿಯವರ ಮತ್ತಷ್ಟು ಪರಿಚಯ ವಾಗಬೇಕಿತ್ತು ಎಂಬುದು ನನ್ನ ಅನಿಸಿಕೆ , ಬಿ.ಜಿ.ಎಲ್. ಸ್ವಾಮಿಯವರು ಕನ್ನಡ ನಾಡಿನಿಂದ ಹೊರಗಡೆ ತಮಿಳುನಾಡಿನಲ್ಲಿ ಸಸ್ಯ ಶಾಸ್ತ್ರದ ಪ್ರೊಫೆಸರ್ ಆಗಿ ಕರ್ತವ್ಯದಲ್ಲಿದ್ದರೂ ಕನ್ನಡ ಭಾಷೆಯ ಬಗ್ಗೆ ತಮಿಳಿಗರಿಗೆ ಬುದ್ದಿಹೇಳಿದ ಧೈರ್ಯವಂತರು, ತಮಿಳು ಭಾಷೆ ಗಿಂತಾ ಕನ್ನಡ ಭಾಷೆ ಮುಂಚೆಯೇ ಇತ್ತೆಂದು ನಿರೂಪಿಸಿ ಅಲ್ಲಿನ ಮಹಾನ್ ವಿದ್ವಾಂಸರ ವಾದವನ್ನು ಅಡಗಿಸಿದ್ದರು. ಅವರ "ತಮಿಳು ತಲೆಗಳ ನಡುವೆ", "ಹಸಿರು ಹೊನ್ನು" " ಪ್ರಾಧ್ಯಾಪಕನ ಪೀಟದಲ್ಲಿ" "ಕಾಲೇಜು ತರಂಗ" ಮುಂತಾದ ಹಲವು ಪುಸ್ತಗಳನ್ನು ಓದಿದರೆ ಇವರ ಜ್ಞಾನದ ಅರಿವು ನಮಗಾಗುತ್ತದೆ " ನೀನು ಕನ್ನಡದಲ್ಲಿ ಬರೆಯುವುದು ಬೇಡ, ಮನೆಗೊಬ್ಬನಿದ್ದೆನಲ್ಲ ನಾನು ,ಸಾಕು" ಎಂದು ಡಿ.ವಿ.ಜಿ. ಮಗನಿಗೆ ಬುದ್ದಿ ಹೇಳಿದರೂ ಕೇಳದೆ ಕನ್ನಡ ಬರವಣಿಗೆ ಮುಂದುವರೆಸಿ ತಂದೆ ಯಿಂದಲೇ ಸೈ ಎನ್ನಿಸಿಕೊಂಡರು.ಇನ್ನೂ ತೇಜಸ್ವಿ ಯವರ ಬಗ್ಗೆ ಹೇಳುವುದೇ ಬೇಡಾ ಅವರು ಬರೆದ ಪರಿಸರ, ಕಾಡಿನ , ಪುಸ್ತಕಗಳು, ಮಿಲ್ಲೇನಿಯಂ ಶ್ರೇಣಿ ಯಾ ಸರಣಿ ಓದುಗರ ಮನಸೂರೆಗೊಂಡು ಮೆರೆದವು. ಇಬ್ಬರ ಬಗ್ಗೆ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು.

makara said...

ನಿಮ್ಮೊಳಗೊಬ್ಬ ಅವರು ಬರೆದ ಕಾಮೆಂಟನ್ನು ನಾನು ಕೂಡ ಅನುಮೋದಿಸುತ್ತೇನೆ. ತಮಿಳರಿಗೆ ಕನ್ನಡದ ಹಿರಿಮೆಯನ್ನು ತಿಳಿಸಿಕೊಟ್ಟ ಬಿ.ಜಿ.ಎಲ್.ಸ್ವಾಮಿಯವರ ಮನೆಮಾತು ತಮಿಳು ಎನ್ನುವುದು ಬಹಳ ಜನಕ್ಕೆ ತಿಳಿದಿರದ ವಿಷಯ

makara said...

ನಿಮ್ಮೊಳಗೊಬ್ಬ ಅವರು ಬರೆದ ಕಾಮೆಂಟನ್ನು ನಾನು ಕೂಡ ಅನುಮೋದಿಸುತ್ತೇನೆ. ತಮಿಳರಿಗೆ ಕನ್ನಡದ ಹಿರಿಮೆಯನ್ನು ತಿಳಿಸಿಕೊಟ್ಟ ಬಿ.ಜಿ.ಎಲ್.ಸ್ವಾಮಿಯವರ ಮನೆಮಾತು ತಮಿಳು ಎನ್ನುವುದು ಬಹಳ ಜನಕ್ಕೆ ತಿಳಿದಿರದ ವಿಷಯ