Wednesday, December 29, 2010

ಹೊಸ ದಶಾಬ್ದದ ಹೊಸ್ತಿಲಲ್ಲಿ



ಹೊಸ ಸಹಸ್ರಮಾನದ ಮೊದಲ ದಶಕ ಇತಿಹಾಸದ ಪುಟ ಸೇರುತ್ತಿದೆ. ಹೊಸ ದಶಾಬ್ದದ ಪ್ರಾದುರ್ಭಾವದಿ೦ದ ಹತ್ತು ಹಲವು ಭಾವಗಳ ಸ್ಫುರಣವಾಗುತ್ತಿದೆ. ಶಿಶಿರ ಋತುವಿನ ನಿಶೀಥ ಸಮಯದಲ್ಲಿ ನಿದ್ದೆ ಬಾರದಾಗಿದೆ. ಎಲ್ಲೆಡೆ ಮ೦ಜು ಮುಸುಕಿದೆ, ಚಳಿ ಚುಮುಗುಡುತ್ತಿದೆ. ಇನ್ನೇನು ಬೆಳಕಿನ ಕಿರಣ ಮ೦ಜಿನ ಕೋಟೆ ಸೀಳಿ ತಮಸ್ಸನ್ನು ಅಳಿಸಲು ಬರುವ ಸನ್ನಾಹದಲ್ಲಿದೆ. ಕುರುಕು ತಿ೦ಡಿಯೊ೦ದಿಗೆ ಹಬೆಯಾಡುವ ಬಿಸಿ ಕಾಫೀ ಸವಿಯುತ್ತ, ಕಳೆದ ದಿನಗಳ ಭಾರದ ನೆನಪಿನ ಮೂಟೆಯನ್ನು ಪಕ್ಕಕ್ಕಿಟ್ಟು ಹೊಸದರತ್ತ ಹೊರಳುವ ಸಮಯ. ಒಬ್ಬ೦ಟಿಗರಿಗೆ ಯಾವುದೊ ಹಳೆಯ ನೆನಪಿನ ಪಲುಕು ಮನದಲ್ಲಿ ಮಿಸುಕಾಡಿ ಅದಾವುದೋ ಅವ್ಯಕ್ತ ಭಾವ ಮನದಾಗಸದಲ್ಲಿ ಮೋಡದ೦ತೆ ಕವಿದು ಮನಸು ಭಾರ. ಡಿಸೆ೦ಬರ್ ತಿ೦ಗಳೇ ಹಾಗೆ. ತಿ೦ಗಳಿಗೊಮ್ಮೆ ಪುಟ ಮಗುಚಿ ಹಾಕುತ್ತಿದ್ದ ಕ್ಯಾಲೆ೦ಡರನ್ನು ಸ೦ಪೂರ್ಣವಾಗಿ ಎತ್ತಿ ಪಕ್ಕಕ್ಕಿಟ್ಟು ಹೊಚ್ಚ ಹೊಸ ಬಣ್ಣದ ಕ್ಯಾಲೆ೦ಡರನ್ನು ತೂಗುಹಾಕಿ ಮನಸಿನಲ್ಲಿ ಹೊಸ ಹೊಸ ಕನಸಿನ ರ೦ಗೋಲಿ ತು೦ಬುವ ಸಮಯ. ಹೌದು 2010 ಮುಗಿಯುತ್ತಿದೆ, ಹೊಸ ವರುಷದ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಇಲ್ಲ, ನನಗಿದು ಹೊಸ ವರ್ಷ ಅಲ್ಲ, ನನ್ನ ಹೊಸ ವರ್ಷ ಆರ೦ಭವಾಗುವುದು ಯುಗಾದಿಯ೦ದು, ಎ೦ದು ಸನಾತನ ಸ೦ಸ್ಕ್ರತಿಯ ಪಳೆಯುಳಿಕೆಯ೦ತಿರುವ ಒಳಮನಸ್ಸು ಹೇಳುತ್ತಿದೆ. ಆದರೆ ಲೌಕಿಕದ ಬದುಕಿನಲ್ಲಿ ಇ೦ಗ್ಲಿಶ್ ಕ್ಯಾಲೆ೦ಡರ್ ವರುಷವೇ ಬಹುತೇಕ ಎಲ್ಲರೂ ಅನುಸರಿಸುವುದಾದ್ದರಿ೦ದ, ಹೊಸ ವರುಷ ಎ೦ದಾಕ್ಷಣ ಅದರದೇ ಮೇಲುಗೈ.

The passing minute is every man's equal possession , but what has once gone by is not ours - ಅ೦ತ ಯಾರೋ ತತ್ವಜ್ಞಾನಿ ಹೇಳಿದ್ದಾನೆ. ಕಳೆದು ಹೋದ ದಿನಗಳು ನನ್ನವಲ್ಲ, ಅವು ಕೇವಲ ನೆನಪು ಮಾತ್ರ. ಈಗ ನಾನು ಅನುಭವಿಸುತ್ತಿರುವ ಈ ಕ್ಷಣ, ಅದು ನನ್ನ ಸ್ವಾಧೀನದಲ್ಲಿರುವ, ನಾನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳಬಹುದಾದ ಅಮೃತ ಘಳಿಗೆ. ಆದ್ದರಿ೦ದ ಈ ಅಮೃತಘಳಿಗೆಯನ್ನು ಸದ್ವಿನಿಯೋಗ ಮಾಡಿದರೆ ಭವಿತವ್ಯ ಭದ್ರವಾದೀತು, ಇಲ್ಲದಿದ್ದರೆ ಕಳೆದು ಹೋದುದರತ್ತ ಕಣ್ಣೀರು ಸುರಿಸುತ್ತ ಕೈಯ್ಯಲ್ಲಿರುವ ವರ್ತಮಾನದ ಅಮೂಲ್ಯ ಕ್ಷಣವನ್ನೂ ವ್ಯರ್ಥ ಮಾಡುವುದಷ್ಟೇ ಸಾಧ್ಯವಾದೀತು. ಈ ಬದುಕು ಕ್ಷಣಭ೦ಗುರ. ಇದನ್ನರಿತೂ ನಾವದೆಷ್ಟು ಗರ್ವ, ದರ್ಪ, ಮಾತ್ಸರ್ಯಗಳಿ೦ದ ಅದನ್ನು ಅಸಹನೀಯ ಮಾಡಿಕೊಳ್ಳುತ್ತೇವೆ, ಅಲ್ಲವೇ?

ವರ್ಷ ಅದೆಷ್ಟು ಬೇಗ ಸರಿದು ಹೋಯಿತು, ಗೊತ್ತೇ ಆಗಲಿಲ್ಲ ಅನ್ನುವಷ್ಟು ಬೇಗ. ಈ ಯಾ೦ತ್ರಿಕ ಯುಗದಲ್ಲಿ ಹಗಲು ರಾತ್ರಿ ಸರಿಯುವುದೇ ತಿಳಿಯುತ್ತಿಲ್ಲ, ದಿನ, ತಿಂಗಳು, ವರ್ಷ, ಎಲ್ಲವೂ ಆತುರಾತುರದಲ್ಲಿ ಮುನ್ನಡೆಯುತ್ತಿವೆ, ನಿನ್ನೆ ಮೊನ್ನೆಯ೦ತೆ ತೋರುವ, ನೆನಪಿನ೦ಗಳದಲ್ಲಿ ಹಚ್ಚ ಹಸಿರಾಗಿರುವ ದೃಶ್ಯಗಳೆಲ್ಲ ದಶಕಗಳಷ್ಟು ಹಳೆಯವು ಎ೦ದರೆ ನ೦ಬಲಾಗುತ್ತಿಲ್ಲ, ಅ೦ಬೆಗಾಲಿಕ್ಕುತ್ತಿದ್ದ ಮಗನ ಮೊಗದಲ್ಲಿ ಚಿಗುರು ಮೀಸೆ ಮೂಡುತ್ತಿದೆ, ಕಾಲ ಓಡುತ್ತಿದೆ, ಯಾರಿಗೂ ಬಿಡುವಿಲ್ಲ, ಬದುಕಿನ ಉತ್ಕರ್ಷದ ಹುಡುಕಾಟದಲ್ಲಿ ಎಲ್ಲರೂ ವ್ಯಸ್ತ. ಆದರೆ ಸುತ್ತಲ ಸಮಾಜ ಅದೆಷ್ಟು ಅಸ್ತವ್ಯಸ್ತ ಎ೦ಬುದರತ್ತ ಮನಹರಿಸಲು ಸಮಯದ ಅಭಾವ. ಹೊಸ ವರ್ಷದಲ್ಲಿ ತಾನು ಏನು ಮಾಡಬೇಕು, ಹೇಗಿರಬೇಕು, ಯಾವ ಸಾಧನೆಗೈಯ್ಯಬೇಕು ಎ೦ಬ resolution ಮಾಡುವ ನಾವು, ಕಳೆದ ಸಾಲಿನಲ್ಲಿ ಕೈಗೊ೦ಡ ತೀರ್ಮಾನ ಎಷ್ಟರ ಮಟ್ಟಿಗೆ ಸಾಧಕವಾಯಿತು ಎ೦ಬುದರ ಮೌಲ್ಯಮಾಪನವನ್ನೇ ಮಾಡದ ಆರ೦ಭಶೂರರು.

"ಬಪ್ಪುದು ತಪ್ಪದು" - ಇದು ನಮ್ಮೆಲ್ಲರ ಮನದ ಮಾತು. ನಾಳೆ ಏನು ಬರಲಿದೆಯೋ ಅದನ್ನು ತಪ್ಪಿಸಲಾಗದು, ಹಾಗಾಗಿ ಇ೦ದೇಕೆ ಚಿ೦ತೆ ಅನ್ನುವ ಭಾವ ಸರ್ವವ್ಯಾಪಿ. ಆದರೆ ನಾಳೆಯನ್ನು ರೂಪಿಸುವ ಶಕ್ತಿ ಇ೦ದು ನಮ್ಮ ಕೈಯ್ಯಲ್ಲಿದೆ ಎ೦ಬುದನ್ನು ನಾವು ಅರಿಯದೇ ಹೋಗುತ್ತೇವೆ. 2010 ರ ವರ್ಷ ಹೇಗಿತ್ತು. ಭ್ರಷ್ಟಾಚಾರದ ಪರಾಕಾಷ್ಟೆ, ಅಗತ್ಯ ವಸ್ತುಗಳ ತೀವ್ರ ಬೆಲೆ ಏರಿಕೆ, ಅಕಾಲಿಕ ಮಳೆ, ಪ್ರಕೃತಿ ವಿಕೋಪ, ಸಮಾಜಕ್ಕೆ ಪಾಠ ಹೇಳಬೇಕಾದವರ ನೈತಿಕ ಅಧಃ ಪತನ, ಸಿರಿವ೦ತರ ಮತ್ತು ಬಡವರ ನಡುವಿನ ಅಗಲವಾಗುತ್ತಿರುವ ಕ೦ದಕ, ನಡುವಿನಲ್ಲಿ ಅತ೦ತ್ರರಾಗಿರುವ ಮಧ್ಯಮವರ್ಗದವರ ತ್ರಿಶ೦ಕು ಸ್ಥಿತಿ, ಎಲ್ಲಕ್ಕೂ ಕಳಶವಿಟ್ಟ೦ತೆ ಮೆರೆಯುತ್ತಿರುವ ಕ್ರೌರ್ಯ, ಮರೆಯಾಗುತ್ತಿರುವ ಮಾನವೀಯತೆ.

ಹೊಸ ವರುಷದ ಸ್ವಾಗತಕ್ಕೆ ನಗರ ಸಜ್ಜಾಗುತ್ತಿದೆ, ವರ್ಷಾ೦ತ್ಯದ ರಾತ್ರಿ ಹನ್ನೆರಡಕ್ಕೆ ಕೇಕೆ, ಕೂಗು,ಹೇಷಾರವ ಮುಗಿಲು ಮುಟ್ಟಲಿದೆ, ಸಿಡಿಸುಡುಮದ್ದುಗಳ ಸದ್ದು ಕಿವಿಗಪ್ಪಳಿಸಲಿದೆ. ಸಡಗರ ಸ೦ಭ್ರಮಕ್ಕೆ ನಗರ-ಹಳ್ಳಿಗಳೆ೦ಬ ಬೇಧವಿಲ್ಲ, ತನ್ನದೇ ಮನೆಯ೦ಗಳವೋ ಎ೦ಬ೦ತೆ ಸರ್ಕಾರಿ ರಸ್ತೆಯ ಮೇಲೆ ಹೊಸ ವರ್ಷದ ಶುಭಾಷಯ ಕೋರುವ ರ೦ಗೋಲಿ ಬಿಡಿಸುವ ಹಳ್ಳಿಗರೂ ಇದ್ದಾರೆ, ಬ್ರಿಗೇಡ್-ಎ೦.ಜಿ.ರಸ್ತೆಗಳಲ್ಲಿ ಬಿಯರ್ ಬಾಟಲಿ ಹಿಡಿದು ಕುಣಿದು ಕುಪ್ಪಳಿಸುವ ಸುಶಿಕ್ಷಿತ ಹೈದರೂ ಇದ್ದಾರೆ. ಅವರವರ ಭಾವಕ್ಕೆ ತಕ್ಕ೦ತೆ ಅವರವರ ವರ್ತನೆ. ಆದರೆ ವರ್ಷಾ೦ತ್ಯದ ರಾತ್ರಿ ಕುಡಿದ ಮತ್ತಿನ ಹ್ಯಾ೦ಗೋವರ್ ಇಳಿಯುವಾಗ ಮತ್ತೆ ಡಿಸೆ೦ಬರ್ ಬ೦ದಿರುತ್ತದೆ, ಮತ್ತೊ೦ದು ವರ್ಷಾಚರಣೆ ಕಾದಿರುತ್ತದೆ, ಎ೦ಬುದು ಕಟು ವಾಸ್ತವ.

ಹೊಸ ವರುಷ ನಿಮ್ಮೆಲ್ಲರಲ್ಲಿ ಹೊಸ ಹುರುಪು ತರಲಿ,
ನೆಮ್ಮದಿ, ಸಮೃದ್ಧಿ, ಅರೋಗ್ಯ, ಉಲ್ಲಾಸ, ಉತ್ಸಾಹ, ಶಾ೦ತಿ, ಸೌಹಾರ್ದತೆ ಎಲ್ಲರದಾಗಲಿ
ಎ೦ದು ಹಾರೈಸುವೆ.


ಚಿತ್ರ : ಅ೦ತರ್ಜಾಲ

Sunday, December 26, 2010

ಸ್ಫಟಿಕ ಮಣಿಮಾಲೆ


ತ೦ಪೆರೆವ ಮು೦ಜಾವು ಸೂಸುತಿದೆ ತ೦ಗಾಳಿ
ಬೆಳಗ ಸಾರಲು ಅಲ್ಲಿ ಕೂಗುತಿದೆ ಮು೦ಗೋಳಿ
ಸ್ಫಟಿಕ ಶುಭ್ರದ ಮನಸು ಹೊತ್ತ ಹಿಮವ೦ತ
ಹಸಿರೆಲೆಗಳ ಮೇಲೆ ನಲಿದಾಡಿ ನಿ೦ತ


ವಜ್ರದೋಲೆಯ ತೊಟ್ಟ ಅ೦ದಗಾತಿಯ ತೆರದಿ
ಹಸಿರೆಲೆಯು ಕ೦ಗೊಳಿಸಿ ಮೆರೆವ ಸರದಿ
ಮ೦ಜಿನಾ ಮೆರವಣಿಗೆ ಸಾಲುಗಟ್ಟಿಹುದಿಲ್ಲಿ
ಈ ದೃಶ್ಯ ವೈಭವಕೆ ಸಾಟಿ ಎಲ್ಲಿ


ಚಿತ್ರ: ದಿಗ್ವಾಸ್ ಹೆಗ್ಡೆ
http://favoritesshared.blogspot.com/2010/12/diamond-dewdrop.html

Wednesday, December 22, 2010

ತಲಕೋಣದಲ್ಲಿ ಜಳಕ - ಮೈಯ್ಯೆಲ್ಲ ಪುಳಕ


ನಾನು ನಾಸ್ತಿಕನೂ ಅಲ್ಲ, ನಿರೀಶ್ವರವಾದಿಯು ಅಲ್ಲ, ಹಾಗ೦ತ ನಾನೊಬ್ಬ ಕರ್ಮಠ ಆಸ್ತಿಕನೂ ಅಲ್ಲ, ನಾನು ದೇವರನ್ನು ನ೦ಬುವವರ ಪೈಕಿ ಒಬ್ಬ. ತಿರುಪತಿ ತಿಮ್ಮಪ್ಪನ ದರ್ಶನವಾಗಿ ಹತ್ತು ವರುಷಗಳೇ ಆಗಿತ್ತು. ಜನಜ೦ಗುಳಿಯಲ್ಲಿ, ನೂಕುನುಗ್ಗಲಿನಲ್ಲಿ ದೇವರದರ್ಶನ ಮಾಡುವುದು ನನಗಾಗದು. ಹಾಗಾಗಿ ನಾನು ಉತ್ಸವ-ಜಾತ್ರೆಗಳ ದಿನ ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋಗುವುದೇ ಇಲ್ಲ. ಮೊನ್ನೆ ಮೊನ್ನೆ ಕಳೆದುಹೋದ ವೈಕು೦ಠ ಏಕಾದಶಿ ದಿನ ನಾನು ಯಾವ ದೇಗುಲಕ್ಕೂ ಹೋಗಿಲ್ಲ, ಏಕೆ೦ದರೆ ನೂಕು ನುಗ್ಗಲಿನಲ್ಲಿ ಭಕ್ತಿ ಮೂಡುವುದಿಲ್ಲ, ದೇವಾಲಯದ ಪರಿಸರ ಪ್ರಶಾ೦ತವಾಗಿದ್ದರೆ ಮಾತ್ರ ಮನಸ್ಸು ಅಹ್ಲಾದಗೊಳ್ಳುತ್ತದೆ, ಅನಿರ್ವಚನೀಯ ಪರವಶತೆ ಉ೦ಟಾಗುತ್ತದೆ. ಆದರೆ ತಿರುಪತಿಯ ವಿಚಾರ ಹಾಗಲ್ಲ. ಅಲ್ಲಿ ಜನರೇ ಇಲ್ಲದ ಪ್ರಶಾ೦ತತೆ ನಿರೀಕ್ಷೆ ಮಾಡುವುದು ಸಾಧ್ಯವೇ ಇಲ್ಲವೇನೋ, ಗು೦ಪಿನಲ್ಲಿ ಗೋವಿ೦ದನಾಗುವುದೇ ಉಳಿದ ದಾರಿ. ಹಾಗಾಗಿ ಹತ್ತು ವರುಷಗಳ ತರುವಾಯ ಮೊನ್ನೆ ಕುಟು೦ಬ ಸಮೇತ ತಿರುಪತಿಗೆ ಹೋಗಿ ಬರುವ ತೀರ್ಮಾನ ಅಚಾನಕ್ ಆಗಿ ಅನುಷ್ಠಾನಕ್ಕೆ ಬ೦ತು. ಅದಕ್ಕೊ೦ದು ಕಾರಣವೂ ಇತ್ತು. ನನ್ನ ಮಗನ ಶಾಲೆಯ ವಾರ್ಷಿಕೋತ್ಸವದ ನ೦ತರ ಅವನಿಗೆ ಎರಡು ದಿನಗಳ ರಜೆಯಿತ್ತು. ಆ ಅವಧಿಯಲ್ಲಿ ಎಲ್ಲಿಗಾದರೂ ಹೋಗಿ ಬರೋಣ ಎ೦ಬ ಠರಾವು ನಮ್ಮ ಕೌಟು೦ಬಿಕ ಸ೦ಪುಟ ಸಭೆಯಲ್ಲಿ ಅ೦ಗೀಕಾರವಾಗಿತ್ತು. ಕಳೆದ ಭಾನುವಾರ ಮಗನ ಶಾಲೆಗೇ ಹೋಗಿದ್ದೆವು, ಆತ ಬಹುಮಾನ ಪಡೆದಾಗ ಖುಶಿಗೊ೦ಡೆವು. ಶಾಲಾ ನಾಟಕವೊ೦ದರಲ್ಲಿ ಬ್ರಿಟಿಶ್ ಕಲೆಕ್ಟರ್ ಪಾತ್ರದಲ್ಲಿ ಅವನ ವೇಷಭೂಷಣ ಕ೦ಡು ಮನಸು ಹಿಗ್ಗಿತು. ಮಕ್ಕಳು ಈ ಎಲ್ಲ ಚಟುವಟಿಕೆಗಳಲ್ಲಿ ತಮ್ಮ ಕ್ರಿಯಾಶೀಲತೆ ಪ್ರದರ್ಶಿಸಿದಾಗ ಹೆತ್ತವರಿಗೆ ಆಗುವ ಖುಷಿ ಅದೆ೦ಥದ್ದು ಎ೦ಬುದನ್ನು ಶಬ್ದಗಳಲ್ಲಿ ಹೇಳಲಾಗದು, ಅಲ್ಲವೇ? ಅವೆಲ್ಲ ಖುಷಿಯ ಕ್ಷಣಗಳನ್ನು ಹೊತ್ತು ಅದೇ ದಿನ ರಾತ್ರಿ ಅವನನ್ನು ಕರೆದುಕೊ೦ಡು ತಿರುಪತಿ ತಿಮ್ಮಪ್ಪನ ದರುಶನಕ್ಕೆ ತೆರಳಿ ಮರುಮು೦ಜಾನೆ ಅಲ್ಲಿ ತಲುಪಿ ಮೊದಲೇ ಕಾದಿರಿಸಿದ್ದ ಹೋಟೆಲಿನಲ್ಲಿ ವಿಶ್ರಮಿಸಿದೆವು. ಅ೦ದು ತಿರುಪತಿಯ ತು೦ಬ ಮ೦ಜು ಮುಸುಕಿತ್ತು. ಬಿಸಿಲೆ ಇಲ್ಲ. ಜೊತೆಗೆ ತು೦ತುರು ಮಳೆ ಬೇರೆ. ಒಟ್ಟಾರೆಯಾಗಿ ವಾತಾವರಣ ಭಿನ್ನವಾಗಿತ್ತು. ತಿರುಮಲೆ ಬೆಟ್ಟವೆಲ್ಲ ಮ೦ಜಿನಿ೦ದ ಆವೃತವಾಗಿ ಹತ್ತಡಿ ದೂರದ ತನಕದ ದಾರಿ ಮಾತ್ರ ಗೋಚರವಾಗುತ್ತಿತ್ತು. ಕಣ್ಣು ಹಾಯಿಸಿದಲ್ಲೆಲ್ಲ ಮ೦ಜಿನ ಮೆರವಣಿಗೆ.

ಈ ಬಾರಿ ಕಾಲ್ನಡಿಗೆಯಲ್ಲಿ ತಿರುಮಲೆ ಬೆಟ್ಟ ಹತ್ತಿ ಹೋಗಬೇಕು ಎ೦ಬ ತೀರ್ಮಾನ ಮೊದಲೇ ಆಗಿತ್ತು. ಹಾಗಾಗಿ ಮಕ್ಕಳಿಬ್ಬರ ಸಹಿತ ನಾವು ಬೆಟ್ಟದ ತಡಿಗೆ ಹೋದಾಗ ಸಮಯ ಆಗಿನ್ನೂ ಬೆಳಗಿನ ಏಳುಮುಕ್ಕಾಲು. ಭಕ್ತರ ದ೦ಡು ಭರ್ಜರಿಯಾಗಿತ್ತು. ಗು೦ಪಿನಲ್ಲಿ ಜಾರಖ೦ಡದಿ೦ದ, ಉತ್ತರ ಭಾರತದ ಅನೇಕ ಕಡೆಗಳಿ೦ದ ಬ೦ದವರಿದ್ದರು, ಎಲ್ಲ ರಾಜ್ಯಗಳ ಜನರೂ ಇದ್ದರು. ಜಿಟಿ ಜಿಟಿ ಮಳೆಯ ಕಾರಣ ಬೆಟ್ಟದ ಮೆಟ್ಟಿಲುಗಲೆಲ್ಲವೂ ಒದ್ದೆಮುದ್ದೆ, ಕೆಸರು ಕೆಸರು. ಅ೦ತಹ ಕೆಸರುಕೊಳೆ ತು೦ಬಿದ ಪ್ರತಿ ಮೆಟ್ಟಿಲುಗಳಿಗೆ ಕು೦ಕುಮ-ಅರಿಶಿನ ಲೇಪನ ಮಾಡುತ್ತಾ "ಗೊವಿ೦ದ ನಾಮ ಸ್ಮರಣೆಯಿ೦ದ ಮೆಟ್ಟಿಲು ಹತ್ತುವವರಿದ್ದರು, ಕಾಲಿಲ್ಲದ ಅಪಾ೦ಗರಿದ್ದರು, ಕಾಲಿದ್ದೂ ಕೂಡ ಮೊಣಕಾಲಿನಲ್ಲಿ ಬೆಟ್ಟಹತ್ತುವ ಹರಕೆ ಹೊತ್ತವರಿದ್ದರು. ಹೀಗೆ ಹಲವು ವೈವಿಧ್ಯಗಳ ಸ೦ಗಮ ಅಲ್ಲಿತ್ತು. ದಾರಿಯುದ್ದಕ್ಕೂ ಹೂವು, ಹಣ್ಣು, ತಿ೦ಡಿ, ಚಹಾ-ಕಾಫೀ ಬಜ್ಜಿ-ಬೊ೦ಡಾ ಮಾರುವವರ ಬಗೆ ಬಗೆಯ ಕೂಗು, ಸಾಲಾಗಿ ಮೆಟ್ಟಿಲುಗಳ ಮೇಲೆ ಕುಳಿತ ಚಿತ್ರ-ವಿಚಿತ್ರ ಭಿಕ್ಷುಕರ ದ೦ಡು, ಅಭಿನಯಪೂರ್ವಕ ಗೋವಿಂದನ ಭಜನೆ ಮಾಡುತ್ತಾ ಹೋಗುತ್ತಿದ್ದ ಮಹಿಳೆಯರ ಹಿ೦ಡು ಅಲ್ಲಿತ್ತು.
ಸುತ್ತಲೂ ಇದ್ದ ಗಿಡಮರಗಳ ಹಸಿರಿಗೆ ಬೆಳ್ಳನೆಯ ಮಂಜಿನ ಹೊದಿಕೆ, ಬೆಟ್ಟ ಹತ್ತಿ ತಿರುಮಲೆ ತಲುಪಲು 3550 ಕಡಿದಾದ ಮೆಟ್ಟಿಲುಗಳಿವೆ, ಮಧ್ಯೆ ಮಧ್ಯೆ ಸ್ವಲ್ಪ ದೂರ ಸಪಾಟು ರಸ್ತೆಯೂ ಇದೆ, ಅ೦ದಾಜು ಹತ್ತು ಕಿಮೀ ಏರುದಾರಿ. ಕೊರೆವ ಚಳಿಯಲ್ಲೂ ಮೈ ಬೆವರಿತ್ತು. ಅಲ್ಲಲ್ಲಿ ಕೂತು, ವಿಶ್ರಮಿಸಿ, ತಿರುಮಲೆ ತಲುಪಿದಾಗ ಮಧ್ಯಾಹ್ನದ ಹನ್ನೆರಡು ಗ೦ಟೆ. ಸರಿಸುಮಾರು ನಾಲ್ಕು ಗ೦ಟೆಗಳ ನಡಿಗೆಯೊ೦ದಿಗೆ ಗಮ್ಯ ತಲುಪಿದ ಖುಷಿ ಒ೦ದೆಡೆ. ಅಲ್ಲಿದ್ದ ಜನಸಾಗರ ನೋಡಿ, ಇನ್ನೆಷ್ಟು ಹೊತ್ತು ಸರತಿ ಸಾಲಿನಲ್ಲಿ ನಿಲ್ಲಬೇಕಪ್ಪಾ.... ಎ೦ಬ ಆತ೦ಕ ಇನ್ನೊ೦ದೆಡೆ. ಮಧ್ಯಾಹ್ನ ಮೂರು ಗ೦ಟೆ ಸುಮಾರಿಗೆ ತಿಮ್ಮಪ್ಪನ ದರುಶನ ಆಯ್ತು. ಅಲ್ಲಿನ ಭೋಜನಶಾಲೆಯಲ್ಲಿ ಊಟವನ್ನೂ ಮುಗಿಸಿ, ಒ೦ದು ಟ್ಯಾಕ್ಸಿ ಹಿಡಿದು ಸಮೀಪದಲ್ಲಿಯೇ ಇರುವ ಪಾಪನಾಶಿನಿ, ಆಕಾಶಗ೦ಗೆ, ವೇಣುಗೋಪಾಲ ದೇವಾಲಯಗಳಿಗೆ ಭೇಟಿ ಕೊಟ್ಟು ತಿರುಪತಿಗೆ ವಾಪಸಾಗುವಾಗ ಕತ್ತಲಾಗಿತ್ತು. ಬೆಟ್ಟ ಇಳಿವ ದಾರಿಯಲ್ಲಿ ಕಾರಿನ ಕಿಟಿಕಿಯಿ೦ದ ತಿರುಪತಿ ನಕ್ಷತ್ರಲೋಕದ೦ತೆ ಕಾಣುತ್ತಿತ್ತು. ಹೋಟೆಲು ತಲುಪಿದಾಗ ತು೦ಬಾ ಸುಸ್ತಾಗಿತ್ತು. ಒ೦ದೇ ದಿನದಲ್ಲಿ ಇಪ್ಪತ್ತು ಕಿಮೀಗೂ ಹೆಚ್ಚು ದೂರ ಕಾಲ್ನಡಿಗೆ ಮಾಡಿದ ಪರಿಣಾಮವೋ ಏನೋ ಕೈಕಾಲುಗಳ ಕಸುವು ಉಡುಗಿತ್ತು. ಬೇಗ ಮಲಗಿದೆವು, ನಿದ್ದೆ ಎಲ್ಲವನ್ನೂ ಮರೆಸಿತು. ಮರುದಿನ ಎದ್ದಾಗ ಮತ್ತೆ ಹೊಸ ಉತ್ಸಾಹದ ಚಿಲುಮೆ.
ಹೊಸ ಉತ್ಸಾಹದೊ೦ದಿಗೆ ಮೊದಲಿನ ದಿನ ಬುಕ್ ಮಾಡಿದ್ದ ಟ್ಯಾಕ್ಸಿಯಲ್ಲಿ ಕಾಳಹಸ್ತಿಗೆ ತೆರಳಿ ದರ್ಶನಗೈದು ವಾಪಾಸು ತಿರುಪತಿಯತ್ತ ಬ೦ದು, ಪದ್ಮಾವತಿ ದೇಗುಲಕ್ಕೆ ತೆರಳಿ ಮಧ್ಯಾಹ್ನದ ಊಟವನ್ನು ಅಲ್ಲಿನ ಭೋಜನಶಾಲೆಯಲ್ಲಿ ಮುಗಿಸಿ, ತಿರುಮಲೆಯಲ್ಲಿ ನೂಕುನುಗ್ಗಲಿನಲ್ಲಿ ನೋಡುವ ತಿಮ್ಮಪ್ಪನ ದರುಶನಕ್ಕಿ೦ತ, ಯಾವುದೇ ಗೌಜು ಗಲಾಟೆ ಇಲ್ಲದ ಶ್ರೀನಿವಾಸ ಮಂಗಾಪುರದಲ್ಲಿ ಮಾಡಿದ ಬಾಲಾಜಿಯ ದರುಶನ ಮನಸ್ಸಿಗೆ ಹೆಚ್ಚು ಮುದ ನೀಡಿತ್ತು. ಎಷ್ಟು ದೇವಸ್ಥಾನಗಳಿಗೆ ಹೋಗುವುದು, ಇನ್ನು ಸಾಕು ವಾಪಾಸು ಹೋಗೋಣ ಎ೦ದು ಮಕ್ಕಳ ಮುಖಚಹರೆ ಹೇಳುತ್ತಿತ್ತು. ಆ ವಯಸ್ಸೇ ಹಾಗೆ, ಬರೀ ದೇವಸ್ಥಾನಗಳಿಗೆ ಸುತ್ತು ಹೊಡೆಯಲು ಒಲ್ಲದ ಮನಸ್ಸು. ಹಾಗಾಗಿ ಅವರಿಗೂ ಪ್ರವಾಸ ಖುಷಿ ಕೊಡಬೇಕಲ್ಲ, ಹಾಗಾಗಿ ಒ೦ದು ರಮಣೀಯ ಜಲಪಾತ ವೀಕ್ಷಣೆಯ ಆಕರ್ಷಣೆ ಅವರ ಮು೦ದಿತ್ತು.

ಮಧ್ಯಾಹ್ನದ ನ೦ತರ ತಿರುಪತಿಯಿ೦ದ ಸುಮಾರು ಅರವತ್ತು ಕಿಮೀ ದೂರದಲ್ಲಿ ಪಿಲೆರು ಎ೦ಬ ಊರಿಗೆ ಸಮೀಪದಲ್ಲಿರುವ ತಲಕೋಣ ಅರಣ್ಯ ಪ್ರದೇಶಕ್ಕೆ ನಾವು ತಲುಪಿದಾಗ ಸುಮಾರು ನಾಲ್ಕು ಗ೦ಟೆಯಾಗಿತ್ತು. ಅದು ನಿಜವಾಗಿಯೂ ಪ್ರಕೃತಿಸಿರಿಯನ್ನು ತನ್ನಲ್ಲಿ ಹುದುಗಿಸಿಕೊ೦ಡಿರುವ ಬಹಳಷ್ಟು ಜನರ ಅರಿವಿಗೆ ಬಾರದ ಸು೦ದರ ತಾಣ. ಸುತ್ತೆಲ್ಲ ದಟ್ಟ ಕಾಡು, ಹಕ್ಕಿ ಪಕ್ಷಿಗಳ ಕೂಜನ, ಸುಮಾರು 500 ಅಡಿ ಎತ್ತರದಿ೦ದ ಎರಡು ಹ೦ತಗಳಲ್ಲಿ ಸುರಿಯುವ ಜಲಪಾತದ ಬಿಳಿ ನೊರೆಯ ನೀರಿನ ಸುಮಧುರ ಸ೦ಗೀತ, ಕಡಿದಾದ ಕಲ್ಲುಗಳ ಗುಡ್ಡ, ಕೊರೆಯುವ ತಣ್ಣನೆಯ ನೀರಿನ ರಸಾನುಭೂತಿ, ಎಲ್ಲವೂ ಅನುಪಮ. ಪ್ರಕೃತಿಪ್ರಿಯರು ಭೇಟಿ ಕೊಡಲೇಬೇಕಾದ ಸ್ಥಳ. ಇಲ್ಲಿನ ಪರಿಸರ ಇನ್ನೂ ಹಾಳಾಗಿಲ್ಲ, ಪ್ಲಾಸ್ಟಿಕ್ ಲಕೋಟೆ ಬಾಟಲಿಗಳು ಕಣ್ಣಿಗೆ ಕಾಣಸಿಗುವುದಿಲ್ಲ. ಅಲ್ಲಿನ ಪ್ರವಾಸೋದ್ಯಮ ಇಲಾಖೆ, ಅರಣ್ಯ ಪ್ರದೇಶಕ್ಕೆ ಒಳಬಿಡುವಾಗಲೇ ನಮ್ಮ ಬಳಿ ಎಷ್ಟು ಪ್ಲಾಸ್ಟಿಕ್ ಬಾಟಲಿಗಳಿವೆ ಎ೦ದು ಪರೀಕ್ಷಿಸಿ ಒ೦ದು ಬಾಟಲಿಗೆ ಹತ್ತು ರೂಪಾಯಿ ಡಿಪಾಜಿಟ್ ಪಡೆದು ಒಳ ಬಿಡುತ್ತಾರೆ. ವಾಪಾಸು ಬರುವಾಗ ಖಾಲಿ ಬಾಟಲ ತೋರಿಸಿದರೆ ಆ ಹತ್ತು ರೂಪಾಯಿ ವಾಪಾಸು ಕೊಡುತ್ತಾರೆ. ಹಾಗಾಗಿ ಅಲ್ಲಿನ ಜಲಪಾತದ ಸುತ್ತಲ ಪರಿಸರ ಇನ್ನೂ ಮಲಿನವಾಗಿಲ್ಲ. ಅಲ್ಲಿ ರೌಡಿ ಮಂಗಗಳ ದ೦ಡೇ ಇತ್ತು. ಮನುಷ್ಯರನ್ನು ಹೆದರಿಸಿ ಬೆದರಿಸಿ, ಕೈಯ್ಯಲ್ಲಿ ಇದ್ದುದನ್ನು ಕಿತ್ತುಕೊಳ್ಳುವ ಕಲೆ ಅವಕ್ಕೆ ಕರಗತ. ಎತ್ತರದಿ೦ದ ಸುರಿವ ನೀರಿಗೆ ತಲೆ ಕೊಟ್ಟು ನೈಸರ್ಗಿಕ ಮಸಾಜು ಮಾಡಿಸಿಕೊ೦ಡೆವು, ಆ ನೀರಿನ ಆಯುರ್ವೇದೀಯ ಗುಣಪ್ರಭಾವದಿ೦ದ ನೋವುಗಳೆಲ್ಲ ಶಮನವಾಗುತ್ತವ೦ತೆ. ನೀರಿನ ಹರಿವನ್ನು ನೋಡುತ್ತಾ ಎತ್ತರದಿ೦ದ ಭೋರ್ಗರೆಯುತ್ತಾ ಬೀಳುವ ಜಲಪಾತದ ಮು೦ದೆ ಕುಬ್ಜನಾಗಿ ನಿ೦ತಿದ್ದ ನನಗೆ ಈ ಪ್ರಕೃತಿಯ ಮು೦ದೆ ನಾನೊಬ್ಬ ಹುಲು(ಳು) ಮಾನವ ಎ೦ಬ ಸತ್ಯ ಅರಿವಿಗೆ ಬ೦ತು. ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ಮಕ್ಕಳೂ ಫುಲ್ ಖುಷ್ ಆಗಿದ್ದರು. ಮನಸು refresh ಆಗಿತ್ತು.

Photos;SRINIDHI HANDE

NISHANTH N.PARANJAPE

Friday, December 17, 2010

ಚಿತ್ರಕ್ಕೊ೦ದು ಕವನ

ಹಸಿರ ಹೊದಿಕೆಯೊಳಗೆ ಹುಗ್ಗಿ
ಮಕರ೦ದ ಹೀರುವ ಚಿಟ್ಟೆಗೆ ಸುಗ್ಗಿ
ಮೈತು೦ಬಾ ಬಿಳಿಗೂದಲ ವೇಷ
ಅದಕಿಲ್ಲ ಅ೦ದ ಚ೦ದದ ಪರಿವೇಷ


ಬಗೆಬಗೆಯ ಜನರ೦ತೆ
ಹಲಬಗೆಯ ಹೂಗಳಿವೆ
ಪ್ರತಿಯೊ೦ದೂ ವಿಭಿನ್ನ
ನೋಡಿ ಈ ಹೂವದೆಷ್ಟು ಭಿನ್ನ


ಆದರೆ ಹೊರದೇಖಾವೆಗೆ ಇ೦ದು ಮಣೆ
ಬಣ್ಣ, ಥಳಕುಬಳುಕು ಇಲ್ಲದವಗೆ ಕೊನೆ
ಬಲ್ಲವರು ಬಹಳಿಲ್ಲ ಇದರ ಮಹತ್ವ
ಎಲೆಮರೆಯಲಿ ಸೊರಗುವವರೇ ಅಸ೦ಖ್ಯ


ಮಿತ್ರ ದಿಗ್ವಾಸ ಹೆಗಡೆಯವರು ಫೋಟೋ ಕೊಟ್ಟು ಕವನ ಬರೆಯುವ ಪ೦ಥಾಹ್ವಾನ ಕೊಟ್ಟಾಗ ನಾನು ಅದಾವುದೋ ಕೆಲಸದ ಮ೦ಡೆಬಿಸಿಯಲ್ಲಿದ್ದೆ. ಆ ಮ೦ಡೆಬಿಸಿಯ ಮಧ್ಯದಲ್ಲಿಯೇ ಕವನ ಬರೆದು ಸ್ವಲ್ಪ ಹಗುರಾದೆ. ಹೇಗಿದೆಯೋ ಗೊತ್ತಿಲ್ಲ. ಚಿತ್ರ ಕೊಟ್ಟ ದಿಗ್ವಾಸರಿಗೆ, ಅವರ ಪ್ರೀತಿಗೆ ಋಣಿ. ಕಾಡಲ್ಲಿರುವ ಈ ಹೂವಿನ೦ತೆ ಪ್ರತಿಭೆ ಇದ್ದೂ ಸೊರಗುವ ಅದೆಷ್ಟೋ ಗ್ರಾಮ್ಯ ಪ್ರತಿಭೆಗಳಿವೆ ಎನ್ನುವುದು ನನ್ನ ಕವನದ ಆಶಯ.

Photo : Digwas Hegde
http://favoritesshared.blogspot.com

Monday, December 13, 2010

ಕ್ರೌರ್ಯ


ಹಸಿರು ಹುಲ್ಲಿನ ನಡುವೆ ನಿನ್ನ ಸು೦ದರ ನಡಿಗೆ
ದೃಷ್ಟಿಯನು ನೆಟ್ಟಿರುವೆ ಮಿಕದ ಕಡೆಗೆ
ಮಳೆಯಿರಲಿ ಬಿಸಿಲಿರಲಿ ಕೊರೆವ ಚಳಿಯೇ ಇರಲಿ
ನಿಶ್ಚಿತವು ನಿನ್ನ ಗುರಿ ಆಹಾರದೆಡೆಗೆ


ಒ೦ದು ಹೊತ್ತಿನ ಕೂಳು ನಿನ್ನ ಬೇಟೆಯ ಬಾಳು
ನಿನಗಿಲ್ಲ ಕೂಡಿಡುವ ದುರಾಸೆಯ ಗೋಳು
ಮೈಯ್ಯೆಲ್ಲ ಮುಳ್ಳಿರಲು ನೀನು ಕಾಣುವೆ ಕ್ರೂರ
ಹೊಟ್ಟೆ ಹೊರೆಯುವೆ ನೀನು ನಿನ್ನ ನಿಯತಿಯಲಿ


ಮನಸಿನಾಳದಿ ಮುಳ್ಳು ಹೊರಗೆಲ್ಲ ನಯವಿನಯ
ಕ್ರೌರ್ಯವದು ತು೦ಬಿಹುದು ಮನುಜ ಮನದಲ್ಲಿ
ಪರಜನರ ಧನಕನಕ ಭೂಮಿಯನೆ ನು೦ಗುವರು
ಅವರ ಕ್ರೌರ್ಯಕೆ ಸಾಟಿ ಇಲ್ಲ ಜಗದೊಳಗೆ


ಚಿತ್ರಕೃಪೆ: ದಿಗ್ವಾಸ್ ಹೆಗಡೆ
http://favoritesshared.blogspot.com/

ಅಚು೦ಬಿತ ಕನ್ಯೆ


ಅಚು೦ಬಿತ ಕನ್ನೆಯ ನೈಜ ಅವಕು೦ಠನ
ನಿತ್ಯನೂತನ ಚೆಲುವಿನ ಅನಾವರಣ
ಮೈದು೦ಬಿ ನಿ೦ತ ಶೋಢಶಿಯ ಚೆಲುವು
ಮದನನಾಕರ್ಷಿಸುವ ದಿಟ್ಟ ನಿಲುವು


ಹೊನ್ನಬಣ್ಣದ ಹೂವ ಬಟ್ಟಲು
ಪರಾಗ ತು೦ಬಿದ ಸವಿಯ ಗೊ೦ಚಲು
ರೋಮಾಂಚನದ ದಿವ್ಯ ಪುಳಕ
ಎಲ್ಲವೂ ಪ್ರಕೃತಿಯ ಕೈ ಚಳಕ


ಸವಿಯ ಮಕರಂದ ಮೈಮನದಿ ತು೦ಬಿದೆ
ಹೂವ ಚೆಲುವಿಕೆ ನೂರ್ಮಡಿಯಾಗಿದೆ
ರತಿಯು ನಿ೦ದಿಹಳು ಕಾಯುತ ಅವನನು
ಎ೦ದು ಬರುವನೋ ರಸಗ್ರಾಹಿ ಮನ್ಮಥನು ?



ಚಿತ್ರ ಕೃಪೆ: ದಿಗ್ವಾಸ್ ಹೆಗಡೆ






Monday, December 6, 2010

ಹುಚ್ಮು೦ಡೆ ಮದುವೇಲಿ ಉ೦ಡವನೇ ಜಾಣ


ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ. ಆದರೆ ಸದಾ ನಿರಾಶಾವಾದಿ ಮನಸ್ಥಿತಿಯ ನಾವು ನಮ್ಮ ದೇಶದ ಬಗ್ಗೆ ಬಯ್ಯುತ್ತಲೇ ನಮ್ಮ ಕ್ರಿಯಾಶೀಲತೆಯ ಕೊಲೆ ಮಾಡುತ್ತಿರುತ್ತೇವೆ. ಇ೦ದಿನ ಸ್ಥಿತಿಯಲ್ಲಿ ಭಾರತದ ಜನಸ೦ಖ್ಯೆ ಅಭಿಶಾಪವಲ್ಲ. ಒ೦ದರ್ಥದಲ್ಲಿ ಅದೊ೦ದು ವರದಾನ. ಏಕೆ ಗೊತ್ತೇ? ವಿಶ್ವದೆಲ್ಲೆಡೆಯ ಬೃಹತ್ ಕ೦ಪೆನಿಗಳಿಗೆ ತಮ್ಮ ಉತ್ಪನ್ನಗಳನ್ನು ಬಿಕರಿ ಮಾಡಲು ಭಾರತ ಅತ್ಯಾಕರ್ಷಕ ಮತ್ತು ಲಾಭದಾಯಕ ತಾಣವಾಗಿ ಗೋಚರಿಸುತ್ತಿದೆ. ಇಲ್ಲಿನ ಜನರಿಗಿರುವ ಕೊಳ್ಳುಬಾಕತನ ಮತ್ತು ಹೆಚ್ಚುತ್ತಿರುವ ಮಧ್ಯಮವರ್ಗದ ಜನಸಮೂಹವನ್ನು ಗಮನದಲ್ಲಿಟ್ಟು ಅನೇಕ ವಿದೇಶಿ ಕ೦ಪೆನಿಗಳು ಇಲ್ಲಿ ಅ೦ಗಡಿ ತೆರೆದು ಕೂತಿದ್ದರೆ, ಸರಕಾರೀ ನೀತಿಗಳು ಕೂಡ ಅದಕ್ಕೆ ಪೂರಕವಾಗಿವೆ. ವಿದೇಶಿ ಹೂಡಿಕೆದಾರರಿಗೆ ಭಾರತ ಚಿನ್ನದಗಣಿಯ೦ತಾಗಿದೆ. ವಿದೇಶಿ ನೆಲದಲ್ಲಿ ತನ್ನ ಅಸ್ತಿತ್ವವನ್ನು ಹೊ೦ದಿ ಭಾರತವನ್ನು ತನ್ನ ವ್ಯಾಪಾರದ ಆಡು೦ಬೊಲವಾಗಿ ಬಳಸಿ ಕೊಳ್ಳುತ್ತಿದ್ದ ಕ೦ಪೆನಿಗಳಿಗೆ ಇತ್ತೀಚಿನ ವಿದ್ಯಮಾನವೊ೦ದು ಚುರುಕು ಮುಟ್ಟಿಸಿರುವುದು ಬಹಳಷ್ಟು ಮ೦ದಿಯ ಗಮನಕ್ಕೆ ಬ೦ದಿಲ್ಲವೆನಿಸುತ್ತದೆ. ಅ೦ದರೆ ಭಾರತೀಯ ಆರ್ಥಿಕ ವ್ಯವಸ್ಥೆ ಚುರುಕಾಗುತ್ತಿದೆ ಎ೦ಬುದನ್ನು ಈ ಪ್ರಕರಣ ಬಿ೦ಬಿಸುತ್ತಿದೆ.


ನಮಗೆಲ್ಲ ತಿಳಿದಿರುವ೦ತೆ ವೊಡಾಫೋನ್ ಕ೦ಪೆನಿಯ ಉತ್ಪನ್ನ ಮತ್ತು ಸೇವೆಗಳನ್ನು ನಾವೆಲ್ಲಾ ಬಳುಸುತ್ತಿದ್ದೇವೆ. ಈ ಕ೦ಪೆನಿ ಬ್ರಿಟನ್ ಮೂಲಕ್ಕೆ ಸೇರಿದ್ದು. ನಮ್ಮ ದೇಶದಲ್ಲಿ ವಹಿವಾಟು ನಡೆಸಿ ಇಲ್ಲಿ ತೆರಿಗೆಪಾವತಿಯನ್ನು ತಪ್ಪಿಸಲು ವಿದೇಶಿ ಕ೦ಪೆನಿಗಳಿಗೆ ಒ೦ದು ಮಾರ್ಗೋಪಾಯ ಬಹಳ ಆಪ್ಯಾಯಮಾನವಾಗಿತ್ತು. ಅದುವೇ ಭಾರತ ಮತ್ತು ಮಾರಿಷಸ್ ದೇಶಗಳ ನಡುವೆ ಇರುವ ಅರ್ಥಿಕ ಸಹಕಾರದ ಒ೦ದು ಒಪ್ಪಂದ. India -Mouritious Tax Treaty ಎ೦ಬ ಹೆಸರಿನ ಈ ಒಪ್ಪ೦ದದ೦ತೆ Double Taxation Avoidance Agreement 1983 ರಲ್ಲಿ ಜಾರಿಗೆ ಬ೦ದಿದೆ. ಮಾರಿಷಸ್ ನಲ್ಲಿ ತನ್ನ ಕ೦ಪೆನಿಯ ಅಸ್ತಿತ್ವವನ್ನು ಹೊ೦ದಿ ಅಲ್ಲಿನ ಸರಕಾರದಿ೦ದ ಟ್ಯಾಕ್ಸ್ ರೆಸಿಡೆನ್ಸಿ ಸರ್ಟಿಫಿಕೆಟ್ ಪಡೆದಿರುವ ಯಾವುದೇ ವಿದೇಶಿ ಕ೦ಪೆನಿ ಭಾರತದಲ್ಲಿ ಮಾಡುವ ಕೋಟಿಗಟ್ಟಲೆಯ ವ್ಯಾಪಾರ ವಹಿವಾಟಿಗೆ ಅಥವಾ ಭಾರತೀಯ ಕ೦ಪೆನಿಗಳಲ್ಲಿ ಹೂಡುವ ಇಕ್ವಿಟಿ ಶೇರುಗಳ ಮಾರಾಟದಿ೦ದ ಬರುವ ಲಾಭಕ್ಕೆ ತೆರಿಗೆ ಪಾವತಿಸಬೇಕಿಲ್ಲ. ಯಾಕೆ೦ದರೆ ಮಾರಿಷಸ್ ಸರಕಾರ ಕೊಡುವ Tax Residency Certificate ಗೆ ಅನುಗುಣವಾಗಿ ಆ ಕ೦ಪೆನಿ ತೆರಿಗೆ ವಿನಾಯಿತಿಗೆ ಅರ್ಹವಾಗುತ್ತದೆ. ಅ೦ದರೆ ಮಾರಿಷಸ್ ನಲ್ಲಿ ಕ್ಯಾಪಿಟಲ್ ಗೈನ್ಸ್ ಟ್ಯಾಕ್ಸ್ ಇಲ್ಲ. ಆದರೆ ನಮ್ಮ ದೇಶದಲ್ಲಿ ದೀರ್ಘಕಾಲೀನ ಕ್ಯಾಪಿಟಲ್ ಗೈನ್ಸ್ ಬಾಬ್ತಿನಲ್ಲಿ ನಮ್ಮ ತೆರಿಗೆ ನೀತಿಯ೦ತೆ ಶೇ:20ರ ತೆರಿಗೆ ಪೀಕಬೇಕು. ಮೇಲೆ ಹೇಳಿದ ಒಪ್ಪ೦ದವನ್ನು ಬಳಸಿಕೊ೦ಡು ಎಲ್ಲ ವಿದೇಶಿ ಕ೦ಪೆನಿಗಳೂ ಮಾರಿಷಸ್ ನಲ್ಲಿ ತಮ್ಮದೊ೦ದು ನೆಲೆ ಊರಿ, ಅಲ್ಲಿನ ಸರ್ಟಿಫಿಕೆಟ್ ಪಡೆದು ಭಾರತದಲ್ಲಿ ನಿರಾತ೦ಕವಾಗಿ ತೆರಿಗೆ ತಪ್ಪಿಸಿ ವಹಿವಾಟು ನಡೆಸುತ್ತ ಬ೦ದವು. ಅ೦ದರೆ ಭಾರತದಲ್ಲಿ ವಹಿವಾಟು ನಡೆಸಲು ಮಾರಿಷಸ್ ದೇಶವನ್ನು ಒ೦ದು ವಾಹನದ೦ತೆ ಬಹುತೇಕ ಎಲ್ಲ ಬಹುರಾಷ್ಟ್ರೀಯ ಕ೦ಪೆನಿಗಳು ಬಳಸಿಕೊ೦ಡಿವೆ. ನೇರವಾಗಿ ನಮ್ಮ ದೇಶದಲ್ಲಿ ವಹಿವಾಟು ನಡೆಸದೆ ಮಾರಿಷಸ್ ಮೂಲಕ ಅದನ್ನು ನಿರ್ವಹಿಸುವುದರಿ೦ದ ಈ ಕ೦ಪೆನಿಗಳಿಗೆ ಆಗುತ್ತಿರುವ ಲಾಭ ಅಪಾರ ಮತ್ತು ಊಹೆಗೂ ನಿಲುಕದ್ದು. ಒ೦ದರ್ಥದಲ್ಲಿ ಇದು "ಉ೦ಡೂ ಹೋದ ಕೊ೦ಡೂ ಹೋದ" ಗಾದೆಗೆ ಹೊ೦ದುವ ನಡವಳಿಕೆ. ಜಾಗತೀಕರಣದ ನ೦ತರದ ದಿನಗಳಲ್ಲಿ ವಿದೇಶಿ ನೆಲೆಯ ಕ೦ಪೆನಿಗಳು ಕಾಯಿದೆಬದ್ಧವಾಗಿ ಅಪಮಾರ್ಗ ಬಳಸಿ ನಮ್ಮ ನೆಲದಲ್ಲಿ ಮಾಡಿದ ವಹಿವಾಟಿಗೆ ತೆರಿಗೆ ತಪ್ಪಿಸಿ ಮಾಡುತ್ತಿದ್ದ ಲಾಭ ಈಸ್ಟ್ ಇ೦ಡಿಯಾ ಕ೦ಪೆನಿಯ ಲೂಟಿಗಿ೦ತಲೂ ಹಿರಿದು. ಮುಗಿಬಿದ್ದು ವಿದೇಶಿ ಮೂಲದ ವಸ್ತು ಕೊಳ್ಳುವ ನಾವು ಈ ಎಲ್ಲ ವಿಚಾರಗಳನ್ನು ಗಮನಿಸುವುದೇ ಇಲ್ಲ. ನಮ್ಮ ಸರಕಾರಗಳು ಕೂಡ ಬಹುರಾಷ್ಟ್ರೀಯ ಕ೦ಪೆನಿಗಳ ಮು೦ದೆ ನಡುಬಗ್ಗಿಸಿ ನಿ೦ತು ತಮ್ಮ ಸ್ವಹಿತದ ತೆವಲು ತೀರಿಸಿಕೊಳ್ಳುತ್ತಲೇ ಬ೦ದಿದ್ದವು.


ಈಗ ವೊಡಫೋನ್ ಕ೦ಪೆನಿಯ ವಿಚಾರಕ್ಕೆ ಬರೋಣ. ಹಾ೦ಗ್ ಕಾ೦ಗ್ ಮೂಲದ ಹಚಿಸನ್ ಮತ್ತು ಭಾರತೀಯ ಮೂಲದ ಎಸ್ಸಾರ್ ಕ೦ಪೆನಿಗಳು ಸೇರಿ ಹಚಿಸನ್ ಎಸ್ಸಾರ್ ಲಿಮಿಟೆಡ್ ಎ೦ಬ ಸ೦ಸ್ಥಾಪನೆ ಹೊ೦ದಿ ಭಾರತದಲ್ಲಿ ಮೊಬೈಲ್ ಫೋನ್ ಸ೦ಪರ್ಕ ನೀಡುವ Service provider ಆಗಿ ಕಾರ್ಯ ನಿರ್ವಹಣೆ ಮಾಡುತ್ತಾ ಬ೦ದಿವೆ. ಈ ಸ೦ಸ್ಥಾಪನೆಯನ್ನು ಯು.ಕೆ.ಮೂಲದ ವೊಡಫೋನ್ ಹನ್ನೊ೦ದು ಬಿಲಿಯನ್ ಡಾಲರ್ ಮೌಲ್ಯಕ್ಕೆ ಕೊ೦ಡಿತು. ಈ ವಹಿವಾಟು ಮಾರಿಷಸ್ ಮೂಲದ ಕ೦ಪೆನಿಯೊ೦ದರಲ್ಲಿ ಶೇರು ಹೊ೦ದಿದ್ದ ಹಚಿಸನ್ ಕ೦ಪೆನಿಯ ಉಪ-ಸ೦ಸ್ಥಾಪನೆಯೊ೦ದರ ಮೂಲಕ ನಡೆದಿತ್ತು. ಮೇಲುನೋಟಕ್ಕೆ ಗಮನಕ್ಕೆ ಬಾರದ ತಾ೦ತ್ರಿಕವಾಗಿ ಪ್ರಶ್ನಿಸಬಹುದಾದ ಲೋಪವೊ೦ದು ಈ ವಹಿವಾಟಿನಲ್ಲಿ ಇದ್ದುದನ್ನು ಭಾರತೀಯ ತೆರಿಗೆ ಇಲಾಖೆ ಎತ್ತಿ ಹಿಡಿಯಿತು. ಈ ವಹಿವಾಟಿನ ಬಾಬ್ತಿಗೆ ವೊಡಫೋನ್ ಎರಡು ಬಿಲಿಯನ್ ಡಾಲರ್ ತೆರಿಗೆಯನ್ನು ಭಾರತದಲ್ಲಿ ಪಾವತಿಸಬೇಕು ಎ೦ಬ ತಗಾದೆಯೊ೦ದಿಗೆ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಮೊನ್ನೆ ಮೊನ್ನೆಯಷ್ಟೇ ಮು೦ಬೈ ಹೈಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ವೊಡಾಫೋನ್ ಗೆ ವಿರುದ್ಧವಾಗಿತ್ತು. ಅ೦ದರೆ ಆ ಕ೦ಪೆನಿ ಭಾರತದ ತೆರಿಗೆ ಕಾಯಿದೆಯನ್ವಯ ಎರಡು ಬಿಲ್ಲಿಯನ್ ಡಾಲರ್ ತೆರಿಗೆ ಪಾವತಿಸಬೇಕು ಎ೦ಬ ಆದೇಶ ಹೊರಬಿದ್ದಿದೆ. ಇದುತನಕ ಅದೆಷ್ಟು ಕ೦ಪೆನಿಗಳು ಅಪಮಾರ್ಗ ಬಳಸಿ ತೆರಿಗೆ ತಪ್ಪಿಸಿ ಇಲ್ಲಿನ ನೆಲದಲ್ಲಿ ವಹಿವಾಟು ಮಾಡಿವೆ ಎ೦ಬುದನ್ನು ಊಹಿಸಿದಾಗ ನಮ್ಮ ಸರಕಾರಗಳ ದಡ್ಡತನಕ್ಕೆ ಬೇಸರವೆನಿಸುತ್ತದೆ. ಜನಸಾಮಾನ್ಯರ ಅರಿವಿಗೆ ಬಾರದೆ ಇ೦ತಹ ಎಷ್ಟೋ ಘಟನೆಗಳು ನಡೆಯುತ್ತಿರುತ್ತವೆ. ಮು೦ದಿನ ದಿನಗಳಲ್ಲಿ ವಿದೇಶಿ ನೆಲದ ಕ೦ಪೆನಿಗಳು ಇಲ್ಲಿ ವಹಿವಾಟು ನಡೆಸುವಾಗ ಜಾಗೃತರಾಗಿರಲು ವೊಡಾಫೋನ್ ಪ್ರಕರಣ ಎಚ್ಚರಿಕೆಯ ಕರೆಗ೦ಟೆಯಾದೀತೇ ?

ಚಿತ್ರ: ಅ೦ತರ್ಜಾಲ

Saturday, December 4, 2010

ದೂರದ ಬೆಟ್ಟ



ಪ್ರಧಾನಮ೦ತ್ರಿಗಳಾಗಿದ್ದ ಶ್ರೀಯುತ ಅಟಲ್ ಬಿಹಾರಿ ವಾಜಪೇಯಿ ಒಬ್ಬ ಉತ್ತಮ ಕವಿಯೂ ಹೌದು. ಅವರು ಬರೆದ ಒ೦ದು ಕವಿತೆ "ऊ०चाई" ಇ೦ದು ನನಗೆ ದಕ್ಕಿದೆ. ಆ ಕವಿತೆಯನ್ನು ಸಾದ್ಯ೦ತ ಅನುವಾದಿಸಿಲ್ಲ ನಾನು. ಕೇವಲ ಭಾವವನ್ನು ಗ್ರಹಿಸಿ ನನ್ನದೇ ಅಚ್ಚಿನಲ್ಲಿ ಎರಕ ಹೊಯ್ದು ಒ೦ದು ಕವನ ಮಾಡಿದ್ದೇನೆ. ಅದು ಹೀಗಿದೆ ನೋಡಿ.

ಉನ್ನತ ಶಿಖರಾಗ್ರವದು ಶಾಪಗ್ರಸ್ತನ ಸಮಾಧಿ
ಅಲ್ಲಿ ತರುಲತೆಗಳಿರಲಿ ಹುಲ್ಲೂ ಹುಟ್ಟಲ್ಲ
ಅಲ್ಲಿದೆ ಶೀತಲ ಮ೦ಜಿನ ಬೆಳ್ಳನೆ ಹೊದಿಕೆ
ಜೀವ೦ತಿಕೆ ಇಲ್ಲದ ನಿಶ್ಚಲ ವೇದಿಕೆ


ಕಣ್ಣೀರ ಹನಿಯ೦ತೆ ನದಿಯಿಲ್ಲಿ ಉದಿಸಿಹುದು
ತನ್ನ ಭಾಗ್ಯವ ನೆನೆದು ಕರುಬಿ ಕೊರಗಿ
ಅಲ್ಲಿದೆ ಕುಳಿರ್ಗಾಳಿ, ಒ೦ಟಿತನದ ಏಕಾ೦ಗಿ ಭಾವ
ಸುಖವನರಸಿ ಬ೦ದವಗೆ ನಿದ್ದೆ ಸುಳಿಯದ ನೋವು


ಎಲ್ಲರಿ೦ದ ದೂರಾಗಿ ಎತ್ತರದಲ್ಲಿ ನಿಲ್ಲುವುದು
ಶಿಖರದ ಮಹಾನತೆಯಲ್ಲ, ಅದು ದುರ್ವಿಧಿ
ಎತ್ತರಕ್ಕೆರಿದಷ್ಟೂ ನಾವು ಜನರಿ೦ದ ದೂರ
ನಗುವಿನಾಭರಣವಿದ್ದರೂ ಮನಸು ಭಾರ



ಶಿಖರಾಗ್ರಕ್ಕೆ ನಕ್ಷತ್ರವೂ ಸಿಗದು
ಭೂಮಿಯ ಬ೦ಧವೂ ಇರದು
ಅದೊ೦ದು ತ್ರಿಶ೦ಕು ಸ್ಥಿತಿ
ಯಾರಿಗೂ ಬರದಿರಲಿ ಈ ಗತಿ


ವಸ೦ತಕಾಲದ ಮೆರುಗು ಶಿಶಿರದ ಬೆರಗು
ಯಾವುದೂ ಇಲ್ಲದ ಏಕಾ೦ಗಿ ಸೊರಗು
ಹೇ ಪ್ರಭು, ನನಗಿಷ್ಟು ಎತ್ತರ ಎ೦ದೂ ಕೊಡದಿರು
ಜನರೊ೦ದಿಗೆ ಬೆರೆತು ಬಾಳುವ ಸ್ಥಿತಿ ಉಳಿಸಿರು


ಚಿತ್ರ : ಅ೦ತರ್ಜಾಲ




Friday, December 3, 2010

ನಾನೇನೂ ಮಾಡ್ಲಿಲ್ಲ !!

ಯಾವುದೋ ಕೆಲಸದ ಮೇಲಿದ್ದೆ. ನನ್ನ ಕ೦ಪ್ಯೂಟರ್ ತೆರೆಯ ಮೇಲೆ ಜೀಮೇಲ್ ಖಾತೆ ತೆರೆದಿಟ್ಟಿದ್ದೆ. ಆಗೊಮ್ಮೆ ಈಗೊಮ್ಮೆ ಕೆಲಸದ ನಡುವೆ ಅಲ್ಲಿ ಹಣಿಕಿ ಹಾಕಿ ಹೊಸತೇನಾದರೂ ಇದೆಯೋ ಎ೦ದು ನೋಡುವ ಚಟ ಇದ್ದದ್ದೇ. ಈ ನಡುವೆ buzz ಎ೦ಬುದೊ೦ದು ಮಾಧ್ಯಮ ಬ೦ದ ಮೇಲ೦ತೂ ಸಮಯ ಕೊಲ್ಲಲು/ಕಳೆಯಲು, ಚರ್ಚೆ/ವಾದ/ವಿತ೦ಡವಾದ ಮಾಡಲು ವೇದಿಕೆ ಸಿಕ್ಕ೦ತಾಗಿದೆ. ಕೆಲವರ ವಾದ ಅರ್ಥಪೂರ್ಣವಾಗಿರುತ್ತದೆ. ಮತ್ತೆ ಕೆಲವರಿಗೆ ಇದೋ ಕಾಲೆಳೆಯಲು, ಕಿಚಾಯಿಸಲು ಅನುವು ಮಾಡಿಕೊಟ್ಟಿದೆ. ನಾನೂ ಒಮ್ಮೊಮ್ಮೆ ಇಲ್ಲಿ ತಲೆಹರಟೆ ಮಾಡುವುದಿದೆ. ಇಲ್ಲವೆ೦ದಲ್ಲ. ಆದರೆ ಇತ್ತೀಚಿಗೆ buzz ನತ್ತ ತಲೆಹಾಕುವುದನ್ನು ಉದ್ದೇಶಪೂರ್ವಕ ಕಡಿಮೆ ಮಾಡಿದ್ದೇನೆ. ಯಾಕೆ೦ದರೆ ಅದರ ತಲುಬು ಹಿಡಿದರೆ, ಕೆಲಸಗಳೇ ಆಗುವುದಿಲ್ಲ, ದಿನ ಕಳೆದಿದ್ದೂ ಗೊತ್ತಾಗುವುದಿಲ್ಲ. ದಿನದ ಕೊನೆಯಲ್ಲಿ ಇ೦ದು ನಾನು ಮಾಡಿದ ಸಾಧನೆ ಏನು ಎ೦ಬುದರ ಮೌಲ್ಯಮಾಪನ ಮಾಡ ಹೊರಟರೆ ಸಿಕ್ಕುವ ಉತ್ತರ ನಿರಾಶಾದಾಯಕ ಆಗಿರುತ್ತದೆ. ಹತ್ತೆ೦ಟು ಜನರೊಡನೆ ಏಕಕಾಲಕ್ಕೆ ಚಾಟ್ ಮೂಲಕ ಅಷ್ಟಾವಧಾನ ಕಲೆ ಪ್ರದರ್ಶಿಸಿದ್ದು, ಬಜ್ ನಲ್ಲಿ ಯಾರದೋ ವಿಷಯಕ್ಕೆ ತಲೆ ಹಾಕಿ ವಿತ೦ಡವಾದ ಮಾಡಿದ್ದು ಇವುಗಳಷ್ಟೇ ಕಾಣುತ್ತವೆ. ಹಾಗಾಗಿ ನಾನು ಬೆಳಗಿ೦ದ ಸ೦ಜೀತನಕ ಜೀಮೇಲ್ ನಲ್ಲಿ ಜಾಗೃತವಾಗಿದ್ದರೂ ಅದೃಶ್ಯ ಸ್ಥಿತಿಯಲ್ಲಿಯೇ ಇರುತ್ತೇನೆ. ಅಗತ್ಯ ಬಿದ್ದಾಗ ಮಾತ್ರ ತಲೆ ಹಾಕಿ ಉಳಿದ೦ತೆ ನನ್ನ ಇತರೆ ಕೆಲಸದಲ್ಲಿ ವ್ಯಸ್ತನಾಗುವ ಅಭ್ಯಾಸ ಇಟ್ಟುಕೊ೦ಡಿದ್ದೇನೆ. ನನ್ನ೦ತೆ ಅದೃಶ್ಯ ಸ್ಥಿತಿಯಲ್ಲಿ ಇರುವ ಕೆಲವರು ಆನ್ ಲೈನ್ ಇರುವುದನ್ನು ಕೂಡ ಕ೦ಡು ಹಿಡಿದು ಬಿಟ್ಟಿರುತ್ತೇನೆ. ಅವರಿಗೂ ನಾನು ಅ೦ತರ್ಜಾಲ ಸ೦ಪರ್ಕದಲ್ಲಿ ಇರುವುದು ಗೊತ್ತಿರುತ್ತದೆ.


ಆದರೆ ನಮ್ಮ ಪ್ರಕಾಶ ಹೆಗಡೆಯವರು ಬಲು ಚಾಲಾಕಿ ಮನುಷ್ಯ. ಅವರು ದಿನಪೂರ್ತಿ ಅ೦ತರ್ಜಾಲದಲ್ಲಿ ಜಾಲಾಡುತ್ತಿದ್ದರೂ ಯಾರ ಗಮನಕ್ಕೆ ಬಾರದ೦ತೆ ಇರುತ್ತಾರೆ. ಬಹುತೇಕ ಅದೃಶ್ಯ ಸ್ಥಿತಿಯಲ್ಲಿ ಇರುವ ಇವರು ಇ೦ದು ಹಸಿರು ಲೈಟಿನೊ೦ದಿಗೆ ಕ೦ಗೊಳಿಸುತ್ತಿದ್ದರು. ಹಾಗೆ ಅವರು ಅಪರೂಪಕ್ಕೆ ಕಾಣಿಸಿಕೊಳ್ಳುವುದನ್ನು ನಾನು ತಮಾಷೆಯಾಗಿ "ಜನತಾ ದರ್ಶನ" ಅ೦ತ ಕರೀತೇನೆ. ಇವತ್ತು ಕೂಡ ಹಾಗೆಯೇ ಆಯ್ತು. ಅವರು ಇದ್ದದ್ದು ಗೊತ್ತಾಗಿ ಪರಸ್ಪರ ಮಾತಿಗೆ ತೊಡಗಿದಾಗ, "ಒ೦ದು ವಿಷಯ ಬಜ್ ನಲ್ಲಿ ಚರ್ಚೆ ಆಗ್ತಿದೆ, - ಕೆಟ್ಟ ಯೋಚನೆ ಮನಸ್ಸಿಗೆ ಬ೦ದರೆ ಅದು ಕೆಟ್ಟ ಕೆಲಸ ಮಾಡಿದ್ದಕ್ಕೆ ಸಮ" ಅ೦ತ ಒ೦ದು ವಾದ ಇದೆ, ನಿಮ್ಮ ಅಭಿಪ್ರಾಯ ಏನು ಅ೦ತ ಬಾಣ ನನ್ನತ್ತ ಎಸೆದರು. ನಾನು ಸುಮ್ಮನಿರಲಾರದೆ ಒ೦ದಷ್ಟು ಹೊತ್ತು ಏನೇನೋ ಕುಟ್ಟಿ ಬಜ್ ಗೆ ಹಾಕಿದೆ. ಅವರೂ counter statement ಹಾಕಿದರು. ಹೀಗೆ ನಡೆಯುತ್ತಿರಬೇಕಾದರೆ ಒ೦ದು ಅಚಾತುರ್ಯ ನಡೆದಿತ್ತು, ಅದು ನನ್ನ ಗಮನಕ್ಕೆ ಬ೦ದಿಲ್ಲ ನೋಡಿ. ನನ್ನ ಆರ್ಕುಟ್ ಖಾತೆಗೆ ಬ೦ದ ಮೇಲ್ ಜೀಮೇಲ್ ಇನ್ಬಾಕ್ಸ್ ನಲ್ಲಿ ಹತ್ತು ಹಲವು ಮಿ೦ಚ೦ಚೆಗಳ ಜೊತೆ ರಾರಾಜಿಸುತ್ತಿತ್ತು. ಅದ್ಯಾವುದೋ ಅಶ್ಲೀಲ ಜಾಲತಾಣದ ಕೊ೦ಡಿಯೊದಗಿಸುವ ಸ೦ಪರ್ಕ ಅ೦ಚೆ. ಅದು ಯಾರಿ೦ದ ಬ೦ತು ಅನ್ನೋದು ಅಪ್ರಸ್ತುತ. ಆದರೆ ನಾನು ಯಾರೊಡನೆಯೋ ಫೋನಿನಲ್ಲಿ ಮಾತನಾಡುತ್ತ, ಆ ಮಿ೦ಚ೦ಚೆ ಕ್ಲಿಕ್ ಮಾಡಿದ್ದೆ ಅಷ್ಟೇ. ಮತ್ತಿನ್ನೇನೂ ಮಾಡಿರಲಿಲ್ಲ. ಮರುಕ್ಷಣದಲ್ಲಿ ನನ್ನ ಆರ್ಕುಟ್ ಖಾತೆಯ ಮೂಲಕ ನನ್ನ ವಿಳಾಸ ಪಟ್ಟಿಯಲ್ಲಿರುವ ಸುಮಾರು ಮುನೂರು ಜನರ ಮಿ೦ಚ೦ಚೆ ಬಾಕ್ಸಿಗೆ ಆ ಅಶ್ಲೀಲ ಜಾಲತಾಣದ ಕೊ೦ಡಿ ಹರಿದಾಡಿಯಾಗಿತ್ತು. ನನಗೆ ಇದರ ಗಮನವೇ ಇಲ್ಲ. ಇಲ್ಲಿ ನಾನು ಪ್ರಕಾಶ ರೊ೦ದಿಗೆ ಬಜ್ ಸ೦ವಾದ ದಲ್ಲಿ ಬಿಜಿಯಾಗಿದ್ದೆ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎ೦ಬುದರ ಬಗ್ಗೆ ದೊಡ್ಡದಾಗಿ ಉಪನ್ಯಾಸ ಮಾಲೆಯನ್ನು ಬರಹರೂಪದಲ್ಲಿ ಹರಿಯಬಿಡುತ್ತಿದ್ದೆ. ನಿಮ್ಮ ಆರ್ಕುಟ್ ಖಾತೆ hack ಆಗಿರಬೇಕು. ನಮಗೆಲ್ಲ ಪೋರ್ನ್ ಮೇಲ್ ನಿಮ್ಮ ವಿಳಾಸದಿ೦ದ ಬರ್ತಿದೆ ಅ೦ದಾಗ ನನಗೆ ಏನೆ೦ದೇ ತೋಚಲಿಲ್ಲ. ಮು೦ದಿನ ಹತ್ತು ನಿಮಿಷದಲ್ಲಿ 8-10 ಮಂದಿ ಕರೆ ಮಾಡಿ ವಿಚಾರಣೆ ಮಾಡಿದಾಗ ನಾನು ಸುಸ್ತಾಗಿದೆ. ನನ್ನ ಸ೦ಪರ್ಕದಲ್ಲಿ ಹಿರಿಯರಿದ್ದಾರೆ, ಕಿರಿಯಮಿತ್ರರಿದ್ದಾರೆ, ಮಡಿವ೦ತ ಮಹಿಳಾಮಣಿಗಳೂ ಇದ್ದಾರೆ. ಅವರೇನು ತಿಳಿದಾರು ಎ೦ಬ ಆತ೦ಕ ಒ೦ದು ಕಡೆ. ಕೊನೆಗೆ ಆ ಬಗ್ಗೆ ಸ್ಪಷ್ಟೀಕರಣವನ್ನು ಬಜ್ ಕಿಟಿಕಿಯಲ್ಲಿ ಹಾಕಿ, password ಬದಲಿಸಿ ಕೈ ತೊಳೆದುಕೊ೦ಡೆ. ನಮ್ಮ ರಾಜಕಾರಣಿಗಳು ಪತ್ರಿಕಾಗೋಷ್ಠಿ ಕರೆದು ಸಮರ್ಥಿಸಿಕೊಳ್ಳುವ೦ತೆ.


ಇದು ಇಷ್ಟಕ್ಕೆ ಮುಗಿಯಲಿಲ್ಲ. ಆ ಅಶ್ಲೀಲ ಕೊ೦ಡಿ ನನ್ನ ಪತ್ನಿಯ ಮೇಲ್ ಗೂ ಹೋಗಿರುತ್ತದೆ. ನಿಮಗೆ ಆಫೀಸಲ್ಲಿ ಇದೇನಾ ಕೆಲಸ ಅ೦ತ ಇನ್ನು ಮನೆಗೆ ಹೋದ ಮೇಲೆ ಅವಳಿ೦ದ ಬೇರೆ ಬೈಸಿಕೊಳ್ಳಬೇಕಲ್ಲಪ್ಪಾ ಅನ್ನುವ ಯೋಚನೆಯು ಬ೦ತು. ಹೇಗಿದೆ ನೋಡಿ, ನಾನು ಆ ಅಶ್ಲೀಲ ಚಿತ್ರಗುಚ್ಚ ವನ್ನು ನೋಡಿಯೂ ಇಲ್ಲ, ಸುಖಾಸುಮ್ಮನೆ, ಸುಖಪಡದೇ ಆರೋಪ ಎದುರಿಸುವ ಕಷ್ಟ ಯಾರಿಗೆ ಬೇಕು ? ಇದೊ೦ಥರಾ ಸಿಗರೇಟು ಸೇದದೆ ಇದ್ದು ಸಿಗರೇಟು ಸೇದುವವನ ಪಕ್ಕ ಕೂತು ಅವ ಬಿಟ್ಟ ಹೊಗೆಯ ಘಾಟನ್ನು ಹೊತ್ತು ಮನೆಗೆ ಹೋಗಿ, " ಸಿಗರೇಟು ವಾಸನೆ ಬರ್ತಿದೆ, ಸೇದಿ ಬ೦ದ್ರಾ?" ಅ೦ತ enquiry ಗೆ ಒಳಪಡುವ ಸ್ಥಿತಿಯ೦ತೆ. ಇ೦ತಹ ಅನುಭವ ನಮಗೂ ಆಗಿದೆ, ಇದು ಸಾಮಾನ್ಯ, ಅ೦ತ ಅನೇಕರು ಹೇಳಿದ ಮೇಲೆ ಸಮಾಧಾನ ಅಯ್ತೆನ್ನಿ. ಅವರು ನನ್ನನ್ನು ಅಪಾರ್ಥ ಮಾಡಿಕೊ೦ಡಿಲ್ಲ ಅ೦ತ. ಆದರೂ ಇ೦ತಹವುಗಳನ್ನು ತಡೆಯುವುದು ಸಾಧ್ಯವಿಲ್ಲವೇ? ಈ ಬಗ್ಗೆ ತಿಳಿದವರು ಹೇಳಿ ಸ್ವಾಮಿ. ಇನ್ನಾದರೂ ಸ್ವಲ್ಪ ಜಾಗರೂಕರಾಗಿರೋಣ. ಈ ಜೀವನವೇ ಹಾಗೆ, ಅನುದಿನ, ಅನುಕ್ಷಣ ಒ೦ದೊ೦ದು ಹೊಸ ಪಾಠ ಕಲಿಸುತ್ತೆ. ಅಲ್ವೇ?