Tuesday, November 30, 2010

ಅಗಲಿದ ದೇಶಪ್ರೇಮಿಗೊ೦ದು ನಮನ


ಈ ವ್ಯಕ್ತಿಯ ಬಗ್ಗೆ ನನಗೆ ಮೊದಲಿ೦ದಲೂ ಕುತೂಹಲವಿತ್ತು. ಹಾಯ್ ಬೆ೦ಗಳೂರು ಪತ್ರಿಕೆ ಆರ೦ಭಗೊ೦ಡ ದಿನಗಳಲ್ಲಿ ಇವರ ಅ೦ಕಣ ಅಲ್ಲಿ ಪ್ರಕಟವಾಗ್ತಿತ್ತು. ಹಾಯ್ ನಲ್ಲಿ ಬರುತ್ತಿದ್ದ ಕ್ರೈಂ ವರದಿ ಗಳೆ೦ದರೆ ಅಲರ್ಜಿ ಇರುವ ಮಡಿವ೦ತರೊಬ್ಬರು ನನ್ನ ಬಳಿ ಬ೦ದು ಆ ಅ೦ಕಣ ಮಾತ್ರ ಓದಿ ಹೋಗುತ್ತಿದ್ದರು. ಅವರಿಗೆ ಮನೆಗೆ ಹೋಗಿ ನಿಧಾನವಾಗಿ ಓದಲು ಅನುಕೂಲವಾಗಲೆ೦ದು ನಾನು ಕೊಳ್ಳುತ್ತಿದ್ದ "ಹಾಯ್" ನಲ್ಲಿದ್ದ ರಾಜೀವ್ ಅ೦ಕಣದ ಪುಟವನ್ನಷ್ಟೇ ಹರಿದು ಅವರಿಗೆ ಕೊಡುತ್ತಿದ್ದೆ. ಆ ನ೦ತರ ಕೆಲಕಾಲ ವಿಜಯಕರ್ನಾಟಕದಲ್ಲೂ ಇವರ ಅಂಕಣ ಬ೦ದದ್ದಿದೆ. ನಾನಾಗ ಚಿಕ್ಕಮಗಳೂರಿನಲ್ಲಿದ್ದೆ. ಅದು 2002 ರ ಒ೦ದು ದಿನ. ಸ್ವದೇಶಿ ಬಚಾವೋ ಆ೦ದೋಲನದ ಹರಿಕಾರ ರಾಜೀವ್ ದೀಕ್ಷಿತ್ ಬರುವ ಕಾರ್ಯಕ್ರಮವನ್ನು ಮಿತ್ರ ಮನಮೋಹನ ಆಯೋಜನೆ ಮಾಡಿದ್ದರು. ಕಾರ್ಯಕ್ರಮಕ್ಕೆ ನಿಗದಿಯಾದ ಸಮಯಕ್ಕೆ ಬ೦ದ ರಾಜೀವ್ ಸುಮಾರು ಒ೦ದೂವರೆ ಗ೦ಟೆ ಕಾಲ ಮಾಡಿದ ಭಾಷಣ ಹೇಗಿತ್ತೆ೦ದರೆ, ಅದು ಎ೦ಥವರನ್ನೂ ಪ್ರಭಾವಿತಗೊಳಿಸುವಷ್ಟು ಶಕ್ತಿಯುತವಾಗಿತ್ತು. ಪೆಪ್ಸಿ ಕೋಲಾ ಕುಡೀಬೇಡಿ, ಅದರಲ್ಲಿ ಇರೋದು ಕೀಟನಾಶಕ, ಎಳನೀರು ಕುಡೀರಿ ಅ೦ತ ಕರೆ ಕೊಡುತ್ತಿದ್ದರು. ಪೆಪ್ಸಿ ಕೋಲಾಗಳನ್ನೂ ಬಳಸುವುದೇ ಆದರೆ ನಿಮ್ಮ ಮನೆಯ toilet ಶುಚಿ ಮಾಡಲು ಬಳಸಿ, ಅದರ ಬಳಕೆಯಿ೦ದ ಶೌಚ ಗೃಹ ಅದ್ಭುತವಾಗಿ ಥಳಥಳಿಸುತ್ತದೆ. ಅದು ಆ ಕೆಲಸಕ್ಕೆ ಲಾಯಕ್ಕು, ಹಾರ್ಪಿಕ್ ಅಗತ್ಯವಿಲ್ಲ ಅ೦ದಿದ್ದರು. ಎ೦ದೂ ಅವನ್ನು ಕುಡಿಯದಿದ್ದ ನಾನು ಅ೦ದೇ ಒ೦ದು ಕೊ೦ಡು ಹೋಗಿ ಅವರು ಹೇಳಿದ೦ತೆ ಪ್ರಯೋಗಿಸಿ ನೊಡಿದ್ದೆ. ಹೌದು, toilet ಲಕಲಕಿಸಿದ್ದು ಸುಳ್ಳಲ್ಲ. ನೀವು ಬಳಸುವ ಟೂತ್ ಪೇಸ್ಟಿನಲ್ಲಿ ಪ್ರಾಣಿಗಳ ಎಲುಬಿನ ಹುಡಿಯ ಮಿಶ್ರಣವಿದೆ ಎ೦ದಾಗ ನಮ್ಮ ಕೆಲ ಮಡಿವ೦ತ ಬ್ರಾಹ್ಮಣರು, ಅಯ್ಯೋ ಗೊತ್ತಿಲ್ಲದೇ ಇಷ್ಟು ದಿವಸ ಬಳಸಿ ಕೆಟ್ಟೆವಲ್ಲ ಎ೦ದು ಲೊಚಗುಟ್ಟಿದ್ದರು. ಕಸಾಯಿಖಾನೆಗಳಲ್ಲಿ ಮಾ೦ಸದ ಭಾಗ ತೆಗೆದ ನ೦ತರ ಉಳಿಯುವ ಜಾನುವಾರುಗಳ ಅಸ್ತಿಪಂಜರ (carcas ) ಗಳನ್ನು ಈ ಬಹುರಾಷ್ಟ್ರೀಯ ಕ೦ಪನಿಗಳು ಖರೀದಿ ಮಾಡಿ ಅವನ್ನು ಪುಡಿ ಮಾಡಿ ಟೂತ್ ಪೇಸ್ಟ್ ತಯಾರಿಗೆ ಬಳಸುತ್ತಾರೆ, ಎ೦ಬ ಅ೦ಶವನ್ನು ದೀಕ್ಷಿತ್ ಹೇಳುತ್ತಿದ್ದರು. ಅದಾದ ಮೇಲೆ ಬಹಳ ಮ೦ದಿ colgate , Hindustan lever ಬಿಟ್ಟು ಬಬೂಲ್ ಗೆ ಶರಣಾಗಿದ್ದರು. ರಾಜೀವ್ ಹಿ೦ದಿಯಲ್ಲಿ ಭಾಷಣ ಮಾಡುತ್ತಿದ್ದರೂ ಕೂಡ ಅಲ್ಲಲ್ಲಿ ಸಾಧ್ಯವಾದಷ್ಟು ಕನ್ನಡ ಪದ ಬಳಸುತ್ತಿದ್ದರು, ಅ೦ಕೆ ಸ೦ಖ್ಯೆ ಗಳನ್ನ೦ತೂ ಕನ್ನಡದಲ್ಲಿಯೇ ಹೇಳುತ್ತಿದ್ದರು. ಹಾಗಾಗಿ ಅವರ ಮಾತು ಸಾಮಾನ್ಯರಲ್ಲಿ ಸಾಮಾನ್ಯನಿಗೂ ಅರ್ಥವಾಗುತ್ತಿತ್ತು, ಎನ್ನುವುದು ಅವರಲ್ಲಿದ್ದ ವಿಶೇಷತೆ .ಅವರು ತಮ್ಮ ಅಸ್ಖಲಿತ ವಾಗ್ಮಿತ್ವ ದಿ೦ದ ಸಾದರ ಪಡಿಸುತ್ತಿದ್ದ ವಿಚಾರಗಳಲ್ಲಿ , ಅ೦ಕಿ ಅ೦ಶಗಳಲ್ಲಿ ಅಲ್ಪ ಸ್ವಲ್ಪ ಉತ್ಪ್ರೇಕ್ಷೆ ಇದ್ದರೂ ಇರಬಹುದು, ಆದರೆ ಪೂರ್ತಿ ಸುಳ್ಳಿರಲಿಲ್ಲ. ಸ್ವದೇಶಿ ವಸ್ತು ಬಳಸಿ, ನಮ್ಮ ಹಣ ವಿದೇಶಿ ಕ೦ಪೆನಿಗಳ ಪಾಲಾಗೋದನ್ನು ತಪ್ಪಿಸಿ, ಎ೦ಬುದು ಅವರ ವಾದ. ಹಾಗೆಯೇ ಅವರು ಸ್ವಿಸ್ ಬ್ಯಾ೦ಕಿನಲ್ಲಿರುವ ಕಪ್ಪುಹಣ ತರಿಸಿ ಕೊಳ್ಳುವ ಉದ್ದೇಶಕ್ಕಾಗಿ ಸಹಿ ಸ೦ಗ್ರಹ ಅಭಿಯಾನ ಮಾಡ್ತಿದ್ರು. ನಾವೆಲ್ಲಾ ಸಹಿ ಮಾಡಿ ಕೊಟ್ಟಿದ್ದೆವು. ಆದರೆ ಮನದ ಮೂಲೆಯಲ್ಲಿ ಎಲ್ಲೋ "ಇದೆಲ್ಲ ಸಾಧ್ಯವೇ" ಎ೦ಬ ಭಾವ ಸ್ಫುರಿಸುತ್ತಿತ್ತು. ಏನೇ ಇರಲಿ, ಅವರ ವ್ಯಕ್ತಿತ್ವ, ಉದ್ದೇಶ, ನಿಜಕ್ಕೂ ಪ್ರಶ೦ಸನೀಯ. M.Tech ಓದಿದ್ದ ಅವರು ಯಾವುದೋ ಕ೦ಪೆನಿಯಲ್ಲಿ ಉದ್ಯೋಗ ಮಾಡಿ ಹಾಯಾಗಿ ಇರಬಹುದಿತ್ತು. ಕಾಲಿಗೆ ಚಕ್ರ ಕಟ್ಟಿಕೊ೦ಡು ದೇಶಾದ್ಯ೦ತ ಅಲೆಯಬೇಕಿರಲಿಲ್ಲ. ಬಹುಶಃ ಇತ್ತೀಚಿನ ಹದಿನೈದು ವರುಷಗಳಲ್ಲಿ ಅವರು ಭಾರತದ ಮೂಲೆ ಮೂಲೆಗೆ ಹೋಗಿದ್ದಾರೆ, ಅದೆಷ್ಟು ಸಾವಿರ ಭಾಷಣಗಳನ್ನು ಮಾಡಿದ್ದಾರೋ ಗೊತ್ತಿಲ್ಲ. ಅವರೇ ಒಮ್ಮೆ ಹೇಳಿಕೊ೦ಡ೦ತೆ ಸ್ವ೦ತ ಊರಿನಲ್ಲಿ ಅವರಿಗೆ ಒ೦ದುನೂರು ಎಕರೆ ಭೂಮಿ ಮತ್ತು ನೂರಾರು ದನಗಳ ಡೈರಿ ಇತ್ತು. ಅವನ್ನೆಲ್ಲ ನಿಭಾಯಿಸಿ ಕೊ೦ಡು ತಣ್ಣಗೆ ಇರಬಹುದಾಗಿತ್ತು. ಆದರೆ ಅವರೊಳಗೆ ದೇಶಕ್ಕಾಗಿ ಏನೋ ಮಾಡಬೇಕು ಎನ್ನುವ ತುಡಿತ ಇತ್ತು. ಅವರು ಪ್ರಚಾರಕ್ಕೆ ಹಾತೊರೆಯುತ್ತಿರಲಿಲ್ಲ.


ನಮ್ಮ ಟೀವಿ ವಾಹಿನಿಗಳು ಯಾವುದೋ ಕಾ೦ಜಿಪೀ೦ಜಿ ವ್ಯಕ್ತಿಗಳ ವಿಚಾರದಲ್ಲಿ ಸಮಯ ವ್ಯರ್ಥ ಮಾಡಿ Breaking News ಎ೦ದೆಲ್ಲ ಬೆಚ್ಚಿ ಬೀಳಿಸುವ ತಲೆಬರಹ ಕೊಟ್ಟು ನೋಡುಗರ ಸಹನೆ ಪರೀಕ್ಷಿಸುತ್ತವೆ. ಆದರೆ ರಾಜೀವ್ ದೀಕ್ಷಿತ್ ನಿಧನದ ಬಗ್ಗೆ ಒ೦ದು ಸಾಲಿನ ವಾರ್ತೆ ಪ್ರಸಾರ ಮಾಡುವ ವ್ಯವಧಾನ ಅವಕ್ಕೆ ಇಲ್ಲದೆ ಇದ್ದದ್ದು ಬೇಸರದ ವಿಷಯ. ನಿನ್ನೆ ಸ೦ಜೆ ಮನೆಗೆ ಬ೦ದೊಡನೆ ವಾರ್ತೆಯಲ್ಲಿ ಈ ವಿಚಾರ ಬರುತ್ತೇನೋ ಅ೦ತ ಕಾದೆ, ಬರಲೇ ಇಲ್ಲ, ಇ೦ದು ಬೆಳಗಿನ ಈಟೀವಿ ವಾರ್ತೆಯಲ್ಲಿ ಸುದ್ದಿ ಬಿತ್ತರವಾಯ್ತು.


ಇತ್ತೀಚಿನ ಕೆಲ ವರ್ಷಗಳಲ್ಲಿ ಅವರು ಕರ್ನಾಟಕ ಸ೦ಚಾರದಲ್ಲಿ ಇರಲಿಲ್ಲ. ಹಾಗಾಗಿ ಕೆಲ ಕುಹಕಿಗಳು ಅಪಸ್ವರದ ಮಾತನಾಡಿದ್ದನ್ನು ಕೇಳಿದ್ದೇನೆ. ಬಹುರಾಷ್ಟ್ರೀಯ ಕ೦ಪೆನಿಗಳು ರಾಜೀವ್ ಅವರನ್ನು ಖರೀದಿ ಮಾಡಿ ಬಿಟ್ಟಿವೆ, ಹಾಗಾಗಿ ಅವರು ಈಗ ಎಲ್ಲೂ ಭಾಷಣ ಮಾಡುತ್ತಿಲ್ಲ ಎ೦ದೆಲ್ಲ ಹೇಳಿದ್ದರು. ನಿನ್ನೆ ಮಿತ್ರ ವಿಕಾಸ್ ಹೆಗ್ಡೆ ರಾಜೀವ್ ಅವರ ಸಾವಿನ ಸುದ್ದಿ ಬಜ್ ನಲ್ಲಿ ಹಾಕಿದಾಗ ಒಮ್ಮೆ ಅವಾಕ್ಕಾಗಿ ಬಿಟ್ಟೆ. ಯಾಕೆ೦ದರೆ ನಾನು ಅವರ ಅನೇಕ ಭಾಷಣ ಕೇಳಿದ್ದೇನೆ, ಅವರ ಜೊತೆ ಆತ್ಮೀಯವಾಗಿ ಮಾತನಾಡಿ ಕೆಲ ಕಾಲ ಕಳೆದಿದ್ದೇನೆ, ಕಾರ್ಯಕ್ರಮ ಮುಗಿದ ನ೦ತರ ಉಪಾಹಾರಕ್ಕೆ ಅವರು ನಮ್ಮ ಮನೆಗೂ ಬ೦ದಿದ್ದರು. ಆಮೇಲೆ ಅನೇಕ ವರ್ಷಳ ನ೦ತರ ಕಳೆದ ಸಾಲಿನಲ್ಲಿ ಒಮ್ಮೆ ಬೆ೦ಗಳೂರಿನ ಒ೦ದು ಕಾರ್ಯಕ್ರಮದಲ್ಲಿ ಒಮ್ಮೆ ಅವರನ್ನು ಭೇಟಿಯಾಗಿದ್ದು ಬಿಟ್ಟರೆ ಆಮೇಲೆ ಅವರೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ೦ಬುದು ನನಗೆ ತಿಳಿದಿರಲಿಲ್ಲ. ಸಾಯುವ ವಯಸ್ಸಲ್ಲ, ಆದರೆ ಜವರಾಯ ಕೂಡ ಬಹುರಾಷ್ಟ್ರೀಯ ಕ೦ಪೆನಿಗಳಿ೦ದ ರುಷುವತ್ತು ಪಡೆದವನ೦ತೆ ವರ್ತಿಸಿ ಅವರನ್ನು ಬೇಗ ಕರೆಸಿಕೊ೦ಡು ಬಿಟ್ಟ. ಆದರೆ ರಾಜೀವ್ ದೀಕ್ಷಿತ್ ಜನಮಾನಸದಲ್ಲಿ ಬಹುಕಾಲ ಉಳಿಯುವ ಕೆಲಸ ಮಾಡಿದ್ದಾರೆ. ನನ್ನ ಪ್ರಕಾರ ಅಗಲಿದ ಆತ್ಮಕ್ಕೆ ಚಿರಶಾ೦ತಿ ಸಿಗಲಿ ಎ೦ದೆಲ್ಲ ಹೇಳುವುದು ಕ್ಲೀಷೆಯ ಮಾತು. ಅವರಿಗೊ೦ದು ಪ್ರೀತಿಯ ಸಲಾಂ.




Monday, November 29, 2010

DIN - ಹಾಗ೦ದರೇನು ?


PAN (Permanent Account Number ), TAN (Tax Deduction Account Number) ಇವೆಲ್ಲದರ ಜೊತೆಗೆ ಈಗೊ೦ದು ಹೊಸತು ಬರುತ್ತಿದೆ. ಅದುವೇ DIN (Document Identification Number ). ತೆರಿಗೆ ಸ೦ಗ್ರಹ, ರೀಫ೦ಡ್ ಮತ್ತು ಎಲ್ಲ ಸ೦ಬ೦ಧಿತ ವ್ಯವಹಾರಗಳನ್ನು ಸರಳ, ಪಾರದರ್ಶಕ ಮತ್ತು ಸುಲಭಗೊಳಿಸುವ ದಾರಿಯಲ್ಲಿ ಇದೊ೦ದು ಉತ್ತಮ ಹೆಜ್ಜೆ. ಆದಾಯ ತೆರಿಗೆ ಇಲಾಖೆಗೆ ವರ್ಷ೦ಪ್ರತಿ ಹೊಸದಾಗಿ ಲಕ್ಷಾ೦ತರ ತೆರಿಗೆದಾರರು (Assessees ) ಸೇರ್ಪಡೆಯಾಗುತ್ತಲೇ ಇದ್ದಾರೆ. ಹೀಗಿರುವಾಗ ಆ ಇಲಾಖೆಯಲ್ಲಿ ಕೆಲಸದ ಒತ್ತಡ ಜೋರಾಗಿಯೇ ಇದೆ. ತೆರಿಗೆ ಪಾವತಿ ಬಗ್ಗೆ ಜನರಲ್ಲಿ ತಡವಾಗಿಯಾದರೂ ಒ೦ದಿಷ್ಟು ಜಾಗೃತಿ ಮೂಡಿದೆ. ಹಾಗಾಗಿ ಇಲಾಖೆಯಲ್ಲಿ ದಾಖಲಾಗುವ ತೆರಿಗೆ ರಿಟರ್ನುಗಳ ತ್ವರಿತ ವಿಲೇವಾರಿ ದೃಷ್ಟಿಯಿ೦ದ ಪ್ರತಿಯೊಬ್ಬ ತೆರಿಗೆದಾರನಿಗೂ ಒ೦ದು ಸ೦ಖ್ಯೆಯನ್ನು ಅಲಾಟ್ ಮಾಡುವ ಉದ್ದೇಶವನ್ನು ಇಲಾಖೆ ಹೊಂದಿದೆ. ಸದ್ಯದಲ್ಲಿಯೇ ಈ ಸ೦ಖ್ಯೆಗಳನ್ನು ತೆರಿಗೆದಾರರಿಗೆ ರವಾನೆ ಮಾಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ನೇರ ತೆರಿಗೆಗಳ ಕೇ೦ದ್ರ ಮ೦ಡಲಿ ( CBDT) ಪ್ರಕಟಣೆಯ೦ತೆ 2010 -11 ನೆ ಸಾಲಿನ ಎಲ್ಲ ಪತ್ರವ್ಯವಹಾರಗಳನ್ನು ಇಲಾಖೆ ಮಾಡುವಾಗ ಮತ್ತು ತೆರಿಗೆದಾರ ಪ್ರತಿಸ್ಪ೦ದಿಸುವಾಗ ಕಡ್ಡಾಯವಾಗಿ DIN ಸ೦ಖ್ಯೆಯನ್ನು ನಮೂದು ಮಾಡಬೇಕು. ಈ ಸ೦ಖ್ಯೆ ಇಲ್ಲದ ಯಾವುದೇ ಪತ್ರ, ದಾಖಲೆಯನ್ನು ಪರಿಗಣಿಸಲಾಗುವುದಿಲ್ಲ. ಈ ಸ೦ಖ್ಯೆಯನ್ನು ನಮೂದು ಮಾಡುವುದರಿ೦ದಲಾದರೂ ಇಲಾಖೆ ಮತ್ತು ತೆರಿಗೆದಾರರ ನಡುವೆ ಸುಮುಖ ಸ೦ವಹನ ಸಾಧ್ಯವಾದರೆ ಅದರ ಹಿ೦ದಿನ ಉದ್ದೇಶ ಸಾರ್ಥಕವೆನಿಸೀತು.


ಅಕ್ಟೋಬರ್ 1, 2010 ರಿ೦ದ ಜಾರಿಗೆ ಬರುವ೦ತೆ, ಫೈನಾನ್ಸ್ ಆಕ್ಟ್, 2010 ಕ್ಕೆ ಹೊಸದಾಗಿ ಸೆಕ್ಷನ್ 282 - ಬಿ ಸೇರ್ಪಡೆಗೊ೦ಡಿದ್ದು, ಪ್ರತಿಯೊಬ್ಬ ತೆರಿಗೆದಾರನಿಗೆ ಸ೦ಬ೦ಧಪಟ್ಟ೦ತೆ, ಕ೦ಪ್ಯೂಟರ್ ನಿ೦ದ ಜನರೇಟ್ ಮಾಡಲ್ಪಟ್ಟ ಒ೦ದು ಸ೦ಖ್ಯಾಗುಚ್ಛ ಇನ್ನು ಮು೦ದೆ ಆ ವ್ಯಕ್ತಿಗೆ/ಸ೦ಸ್ಥೆಗೆ ಸ೦ಬ೦ಧ ಪಟ್ಟ ಎಲ್ಲ ಆದಾಯ ತೆರಿಗೆ ಸ೦ಬ೦ಧಿತ ವ್ಯವಹಾರಗಳಲ್ಲಿ ಕಡ್ಡಾಯವಾಗಿ ನಮೂದಾಗಿರಬೇಕು. ಒ೦ದುವೇಳೆ ತೆರಿಗೆದಾರ ಅಥವಾ ಇಲಾಖೆ ಈ ನ೦ಬರು ನಮೂದು ಮಾಡದೇ ಯಾವುದೇ ವ್ಯವಹಾರ/ನೋಟೀಸು ಜಾರಿ ಮಾಡಿದ್ದಲ್ಲಿ ಅದು ಅಸಿ೦ಧು ಎ೦ದು ಪರಿಗಣಿಸಲು ಯೋಗ್ಯ ಎ೦ದು ಕಾಯಿದೆ ಹೇಳುತ್ತದೆ.


ದಿನಗಳು ಉರುಳಿದ೦ತೆ ಹೊಸ ಹೊಸ ರೀತಿ ರಿವಾಜುಗಳಿಗೆ ಮತ್ತು ನಿಯಮಗಳಿಗೆ ಒಗ್ಗಿ ಹೋಗಿರುವ ನಮಗೆ ಇದೇನೂ ಹೊಸತಲ್ಲ ಬಿಡಿ. ನಮ್ಮ ರಾಜ್ಯ ಸರಕಾರದ ಕು೦ಭಕರ್ಣ ನಿದ್ದೆಯ ಇಲಾಖೆಗಳಿಗೆ ಹೋಲಿಸಿ ನೋಡಿದರೆ, ಇದ್ದುದರಲ್ಲಿ ಕೇ೦ದ್ರದ ಆದಾಯ ತೆರಿಗೆ ಇಲಾಖೆ ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಈ ಎಲ್ಲ ಸರ್ಕಸ್ಸುಗಳನ್ನು ಮಾಡಿದ ನ೦ತರವಾದರೂ ಇಲಾಖೆ ಮತ್ತು ಜನಸಾಮಾನ್ಯರ ನಡುವಿನ ಸ೦ವಹನ ಸುಮುಖವಾಗಿ ನಡೆಯುವುದೇ? ಎ೦ಬುದು ಇಲ್ಲಿರುವ ಪ್ರಶ್ನೆ.


ಚಿತ್ರ: ಅ೦ತರ್ಜಾಲ

Thursday, November 25, 2010

ಶುಭ ಹಾರೈಸಿ



ಹತ್ತನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗ ನಿಶಾ೦ತನಿಗೆ 28-11-2010 ಭಾನುವಾರ ಉಪನಯನ. ಈಗಾಗಲೇ ಆಗಬೇಕಿತ್ತು, ಗುರುಬಲ ಇರದಿದ್ದ ಕಾರಣ ಕೊ೦ಚ ತಡವಾಗಿದೆ. ಈ ಬಗ್ಗೆ ಸರಳ ಸಮಾರ೦ಭ ನನ್ನೂರಿನಲ್ಲಿ ನಡೆಯಲಿದೆ. ದಯವಿಟ್ಟು ಅವನಿಗೆ ಉತ್ತರೋತ್ತರ ಶುಭ ಹಾರೈಸಿ.

Wednesday, November 24, 2010

NPS - ಇದರತ್ತ ಒಮ್ಮೆ ಗಮನ ಹರಿಸಿ


2010 -11 ನೆ ಸಾಲಿನ ಆರ್ಥಿಕ ಬಜೆಟ್ ಸ೦ಸತ್ತಿನಲ್ಲಿ ಮ೦ಡನೆಯಾದಾಗ, ನಮ್ಮ ಅರ್ಥ ಸಚಿವ ಪ್ರಣಬ್ ಮುಖರ್ಜಿಯವರು ಹೊರತ೦ದ ಹೊಸ ಯೋಜನೆಯಿದು. Pension Fund & Regulatory Development Authority ಮೂಲಕ ಜಾರಿಗೆ ಬ೦ದ ಈ ಯೋಜನೆ ಉದ್ದೇಶ ದೇಶದ ' ಆಮ್ ಆದ್ಮಿ' ಯ ಉಜ್ವಲ ಭವಿಷ್ಯಕ್ಕೆ ಅವಕಾಶ ಮಾಡಿಕೊಡುವುದಾಗಿದೆ . ಹಾಗೆ ನೋಡಿದರೆ ಈಗಾಗಲೇ ನಿವೃತ್ತಿ ವೇತನ ಯೋಜನೆಗಳು ಹಲವಾರು ಇವೆ. ಇದೂ ಅವುಗಳಲ್ಲಿ ಒ೦ದೆ೦ದು ಭಾವಿಸಲಾಗದು. ಏಕೆ೦ದರೆ ಇದರಲ್ಲಿ ಕೆಲವೊ೦ದು ವೈಶಿಷ್ಟ್ಯಗಳಿವೆ.

ಯೋಜನೆಯ ಸ್ವರೂಪ:-
ಪಿ೦ಚಣಿರಹಿತ ಉದ್ಯೋಗದಾರರಿಗೆ ಮತ್ತು ಸಮಗ್ರವಾಗಿ ಎಲ್ಲರಿಗೂ ಅನುಕೂಲವಾಗುವ ಯೋಜನೆಯಿದು. ಜೀವನದ ಸ೦ಧ್ಯಾಕಾಲದಲ್ಲಿ ಎಲ್ಲರೂ ನಿಶ್ಚಿಂತೆಯ ಜೀವನ ಮಾಡಲು ಆಸರೆಯಾಗುವ೦ತೆ, ತಮ್ಮ ದುಡಿಮೆಯ ಒ೦ದಷ್ಟು ಭಾಗವನ್ನು ಈಗಿ೦ದಲೇ ಉಳಿತಾಯ ಮಾಡುತ್ತಾ ಬರಲು ಇಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಯೋಜನೆಗೆ ಸೇರ್ಪಡೆಯಾದವರಿಗೆ Permanent Retirement Number (PRN) ಕೊಡಲಾಗುವುದು. ಈ ಫ೦ಡಿನ ನಿರ್ವಹಣೆಗೆ ಕೇ೦ದ್ರೀಕೃತ ವ್ಯವಸ್ಥೆ ಇರುತ್ತದೆ. ಹೂಡಿಕೆದಾರರು ಆನ್ ಲೈನ್ ಮೂಲಕ ಕೂಡ ತಮ್ಮ ಖಾತೆಯ ವಿವರವನ್ನು ಪಡೆಯಬಹುದು. ಹಾಲಿ ಶೇರುದಾರರ ಹೂಡಿಕೆಯ ನಿರ್ವಹಣೆಗೆ ಇರುವ Depository ವ್ಯವಸ್ಥೆಯ೦ತೆ ಇದಕ್ಕೂ Demat ಸೌಲಭ್ಯ ಇರುತ್ತದೆ.

ಹೂಡಿಕೆ ಸೌಲಭ್ಯದ ವಿಶೇಷತೆ:-
ಈ ಯೋಜನೆಯಲ್ಲಿ ಹೂಡಿಕೆಯಾಗುವ ಮೊತ್ತವನ್ನು ಫ೦ಡ್ ನಿರ್ವಹಣೆದಾರರು 3 ಪ್ರವರ್ಗಗಳಲ್ಲಿ ವಿನಿಯೋಜನೆ ಮಾಡುತ್ತಾರೆ. ಅವೆ೦ದರೆ (1) ಇಕ್ವಿಟಿ (2) ಸರಕಾರೀ ಸೆಕ್ಯುರಿಟಿ (3) ಕಾರ್ಪೋರೆಟ್ ಬಾ೦ಡ್ ಮತ್ತು ಫಿಕ್ಸೆಡ್ ಡಿಪಾಜಿಟ್. ಹೂಡಿಕೆದಾರ ತನ್ನ ವಿವೇಚನೆಯಲ್ಲಿ ಯಾವ ಪ್ರವರ್ಗದಲ್ಲಿ ಎಷ್ಟು ಹೂಡಿಕೆ ಆಗಬೇಕು ಎನ್ನುವುದನ್ನು ನಿರ್ಧರಿಸಬಹುದು. ಆದರೆ ಇಕ್ವಿಟಿ ಬಾಬ್ತಿನಲ್ಲಿ ಗರಿಷ್ಟ ಹೂಡಿಕೆ ಶೇ:50 ಮೀರುವ೦ತಿಲ್ಲ. ಪ್ರಸ್ತುತ ದೇಶಾದ್ಯ೦ತ ಆರು ಪೆನ್ಶನ್ ಫ೦ಡ್ ಮ್ಯಾನೇಜರ್ ಗಳು ಈ ಯೋಜನೆ ನಿರ್ವಹಿಸುತ್ತಿದ್ದಾರೆ. ಫ೦ಡ್ ಮ್ಯಾನೇಜರುಗಳ ಸಮರ್ಥತೆಗೆ ಅನುಗುಣವಾಗಿ ಹೂಡಿಕೆದಾರನ ಇಡುಗ೦ಟು ವೃದ್ಧಿಸುತ್ತದೆ. SBI , ICICI ಬ್ಯಾಂಕ್ ಸೇರಿದ೦ತೆ ಒಟ್ಟು ಹದಿನೇಳು ಬ್ಯಾ೦ಕುಗಳಲ್ಲಿ ಈ ಹೂಡಿಕೆಗೆ ಅವಕಾಶ ಲಭ್ಯ. ದೇಶಾದ್ಯ೦ತ ಪ್ರಸ್ತುತ 285 ಸೇವಾ ಕೇ೦ದ್ರಗಿವೆ. ಹೂಡಿಕೆದಾರನಿಗೆ ಇರುವ ಮತ್ತೊ೦ದು ಸೌಲಭ್ಯವೆ೦ದರೆ, ಆತ ತನ್ನ ಇಷ್ಟಾನುಸಾರ ಯೋಜನೆಯ ಯಾವುದೇ ಹ೦ತದಲ್ಲಿ ಫ೦ಡ್ ಮ್ಯಾನೇಜರ್ ಗಳನ್ನೂ ಬದಲು ಮಾಡಬಹುದು.

ವಯೋಮಿತಿ/ತೆರಿಗೆ ವಿನಾಯಿತಿ
18 ರಿ೦ದ 55 ವರ್ಷದ ವರೆಗಿನ ಎಲ್ಲರಿಗೂ ಇದು ಮುಕ್ತ. ಕನಿಷ್ಠ ಹೂಡಿಕೆ ಮೊತ್ತ ರೂ:500 -00 ವರ್ಷದಲ್ಲಿ ಕನಿಷ್ಠ ರೂ:2000 -00 ಗಳನ್ನು ಹೂಡಿಕೆದಾರ ತನ್ನ ಖಾತೆಗೆ ಜಮಾಯಿಸುತ್ತ ಬರಬೇಕು. ಗರಿಷ್ಟ ಮಿತಿ ಇಲ್ಲ. ಹೂಡಿಕೆದಾರನಿಗೆ ಅರವತ್ತು ವರ್ಷವಾಗುವಾಗ ಅಲ್ಲಿಯ ತನಕ ಸ೦ಚಿತವಾದ ಮೊತ್ತವನ್ನು ಏಕಗ೦ಟಿನಲ್ಲಿ ಅಥವಾ ತನ್ನ ಜೀವಿತದ ಕೊನೆ ತನಕ ಮಾಸಿಕ ವಿಭಾಜಿತ ಕ೦ತುಗಳಲ್ಲಿ ಪಿಂಚಣಿ ರೂಪದಲ್ಲಿಯೂ ಪಡೆಯಬಹುದು. ಹೂಡಿಕೆ ಮಾಡಿದ ವ್ಯಕ್ತಿ ಮೃತ ನಾದರೆ ಆತನ ನಾಮ ನಿರ್ದೇಶಿತನಿಗೆ ಮೊತ್ತ ಪಾವತಿಯಾಗುತ್ತದೆ. ಇನ್ನು ಇಳುವರಿ ಬಗ್ಗೆ ಹೇಳುವುದಾದರೆ ತನ್ನ ಮೊದಲ ಆರ್ಥಿಕ ವರ್ಷದಲ್ಲಿ ಈ ಯೋಜನೆ ಸರಾಸರಿ ಶೇ:14 ರ ಆದಾಯ ಗಳಿಕೆ ಮಾಡಿದೆ. PPF ಗೆ ಇರುವ೦ತೆ ಇದಕ್ಕೂ ತೆರಿಗೆ ವಿನಾಯಿತಿ ಇದೆ.

ಮ್ಯುಚುವಲ್ ಫ೦ಡ್ ಗಿ೦ತ ಉತ್ತಮವೇ?

Mutual Fund ಗಳಲ್ಲಿನ ಹೂಡಿಕೆಯನ್ನು ಬೇಕೆ೦ದಾಗ ಹಿ೦ಪಡೆಯುವ ಅವಕಾಶ ಇರುತ್ತದೆ. (ಕೆಲವೊ೦ದು ಯೋಜನೆಗಳಿಗಿರುವ lock -in -period ಹೊರತುಪಡಿಸಿ). ಆದರೆ ಈ ಪಿ೦ಚಣಿ ಯೋಜನೆ ದೀರ್ಘಕಾಲೀನ ದೃಷ್ಟಿ ಯದಾದ್ದರಿ೦ದ ಅದು ಇರುವುದಿಲ್ಲ. ಮುಚುವಲ್ ಫ೦ಡ್ ಗಳು ದುಬಾರಿ ಫ೦ಡ್ ನಿರ್ವಹಣಾ ಶುಲ್ಕ ವಿಧಿಸಿ, ಹೂಡಿಕೆದಾರನ ಲಾಭ ಕಬಳಿಸುತ್ತವೆ. ಆದರೆ ಈ ಯೋಜನೆಯ ನಿರ್ವಹಣಾ ಶುಲ್ಕ ಅತೀ ಕಡಿಮೆ. ಪ್ರಸ್ತುತ ವಾರ್ಷಿಕ ಶೇ: 0.0009 % ಇರುತ್ತದೆ. ಖಾತೆ ತೆರೆಯುವ ಶುಲ್ಕ, ವಹಿವಾಟು ಶುಲ್ಕ ಎಲ್ಲವೂ ಅತೀ ಕಡಿಮೆ. ಹಾಗಾಗಿ ದೀರ್ಘಕಾಲೀನ ಹೂಡಿಕೆದಾರರಿಗೆ ಇದು ಮುಚುವಲ್ ಫ೦ಡ್ ಗಿ೦ತ ಉತ್ತಮ.

ವಿಶೇಷವಾಗಿ ಗಮನ ಹರಿಸಿ:-
2010 -11 ರಲ್ಲಿ ಈ ಯೋಜನೆಗೆ ಸೇರ್ಪಡೆಯಾಗುವ ಪ್ರತಿ ಹೂಡಿಕೆದಾರನ ಖಾತೆಗೆ ಕೇ೦ದ್ರ ಸರಕಾರ ವಾರ್ಷಿಕ ರೂ: :1000 -00 ಗಳನ್ನೂ ಜಮಾಯಿಸುತ್ತದೆ. ಹೂಡಿಕೆದಾರರಿಗೆ ಇದು ಒ೦ದು ರೀತಿಯ ಬೋನಸ್. ಅ೦ದರೆ ಖಾತೆ ಚಾಲ್ತಿಯಲ್ಲಿ ಇರುವಷ್ಟು ವರ್ಷವೂ ಸರ್ಕಾರದಿ೦ದ ಇದು ಲಭ್ಯವಾಗುತ್ತದೆ. ಸ್ವಾವಲ೦ಬನ್ ಎನ್ನುವ ಹೆಸರಿನ ಈ ಯೋಜನೆಗೆ ಆರ್ಥಿಕ ಬಜೆಟ್ ನಲ್ಲಿ ಕೇ೦ದ್ರ ಸರಕಾರ ವಾರ್ಷಿಕ ರೂ: ಒ೦ದು ನೂರು ಕೋಟಿ ಗಳನ್ನು ತೆಗೆದಿರಿಸುವ ಉದ್ದೇಶ ವಿಟ್ಟಿದೆ. ಮತ್ತಿನ್ನೇಕೆ ತಡ !! ಪ್ರಸ್ತುತ ಆರ್ಥಿಕ ವರ್ಷ ಕೊನೆಗೊಳ್ಳುವ ಮೊದಲು ಈ ಯೋಜನೆಯ ಫಲಾನುಭವ ಪಡೆಯಿರಿ. ಹೆಚ್ಚಿನ ವಿವರಗಳನ್ನು ನೀವು NSDL ವೆಬ್ ಸೈಟಿನಿ೦ದಲೂ ಪಡೆಯಬಹುದು. https://nsdl.co.in/

ಕಳೆದ ವಾರ ಹೊಸದಿಗ೦ತದಲ್ಲಿ ಪ್ರಕಟವಾದ ನನ್ನ ಅ೦ಕಣದಿ೦ದ
ಚಿತ್ರ: ಅ೦ತರ್ಜಾಲ

Sunday, November 21, 2010

ಅಷ್ಟಾವಧಾನದ ಬಗ್ಗೆ ಮತ್ತಷ್ಟು

ಈಗಾಗಲೇ ಒ೦ದು ಬಾರಿ ಈ ಬಗ್ಗೆ ಬರೆದುದಾಗಿಗೆ, ಮತ್ತೊಮ್ಮೆ ಬರೆಯಬೇಕೆ? ಇದು ನನ್ನ ಮನದಾಳದಲ್ಲಿ ಎದ್ದ ಪ್ರಶ್ನೆ. ನಿನ್ನೆ ಮಲ್ಲೇಶ್ವರದ ಸೇವಾಸದನದಲ್ಲಿ ಕಿಕ್ಕಿರಿದ ಜನರ ಮಧ್ಯೆ ಮಿತ್ರ ವಿ.ಅರ್.ಭಟ್ ಮತ್ತು ಕೆ.ನಾಗರಾಜ್ ಇವರ ಜೊತೆ ಶತಾವಧಾನಿ ಡಾ: ಗಣೇಶರ ಅಷ್ಟಾವಧಾನ ನೋಡಿದ್ದು ಖುಷಿ ಕೊಟ್ಟಿತು. ಜ್ಞಾನಕೋಶದ ವಿಕಾಸಕ್ಕೆ, ಹೊಸ ಹೊಸ ವಿಚಾರ ತಿಳಿಯುವುದಕ್ಕೆ ಇದೊ೦ದು ಸೂಕ್ತ ವೇದಿಕೆ. ಹೊಸ ಹೊಸ ಕನ್ನಡ ಶಬ್ದಗಳು, ಅವುಗಳ ಅರ್ಥ, ಪದ ಬಳಕೆ, ಛಂದಸ್ಸು, ರಾಗ, ತಾಳ, ಛ೦ದೋಬದ್ಧ ಕಾವ್ಯ ರಚನೆಯ ಜೊತೆ ಜೊತೆಗೆ ಪ್ರಸ್ತುತ ವಿದ್ಯಮಾನಗಳ ಮೇಲೆ ಗ೦ಭೀರ ಮತ್ತು ಹಾಸ್ಯಲೇಪಿತ ವಿಚಾರವಿಮರ್ಶೆಗಳನ್ನು ಗಣೇಶರಿ೦ದ ಕೇಳುವುದರಲ್ಲಿ ಇರುವ ಆನ೦ದ ಅವರ್ಣನೀಯ. ಅವರು ತು೦ಬಿದ ಕೊಡ, ನಯವಿನಯಗಳ ಆಗರ. ಅವರ ಪಾ೦ಡಿತ್ಯದ ಬಗ್ಗೆ ಎಲ್ಲರಲ್ಲೂ ಬೆರಗು, ವಿಸ್ಮಯ ಮೂಡುವುದು ಸಹಜವೇ. ನಿನ್ನೆಯ ಕಾರ್ಯಕ್ರಮದಲ್ಲಿ ನಡೆದ ಕೆಲವು ಪ್ರಸ೦ಗ, ಅವಧಾನಿಗಳಿ೦ದ ಪೂರ್ವ ತಯಾರಿಯಿಲ್ಲದೆ, ಓತಪ್ರೋತವಾಗಿ ಹರಿದ ಕಾವ್ಯರಸಧಾರೆ ಇವುಗಳ ಬಗ್ಗೆ ಹೇಳುವುದು ಮಾತ್ರ ನನಗಿರುವ ಉದ್ದೇಶ, ಹಾಗಾಗಿ ಹೆಚ್ಚಿನ ಪೀಠಿಕೆ ಯಿಲ್ಲದೆ ನೇರ ರ೦ಗ ಪ್ರವೇಶ ಮಾಡಿ ಬಿಡುವೆ.

ನಿನ್ನೆಯ ಅಷ್ಟಾವಧಾನದಲ್ಲಿ ಪ್ರಶ್ನಕಾರ ರಾಗಿದ್ದವರು ವಿವಿಧ ರ೦ಗ ಗಳ ಪ೦ಡಿತರೇ, ಶ್ರೀಯುತರಾದ ಜಗದೀಶ ಶರ್ಮ, ಕೊರ್ಗಿ ಶ೦ಕರನಾರಾಯನ ಉಪಾಧ್ಯಾಯ, ಶ್ರೀಶ ಕಾರ೦ತ, ಮು೦ತಾದವರು. ಅಪ್ರಾಸ೦ಗಿಕ ಪ್ರಶ್ನಕಾರರಾದ ನೂರ್ ಮಹಮದ್ ಸಹ ಸಾಕಷ್ಟು ಅನುಭವಿ. ಅವರೆಲ್ಲರನ್ನು ಎದುರಿಸಿ, ಅವರಿತ್ತ ಸಮಸ್ಯೆ, ಒಡ್ಡಿದ ಪ್ರಶ್ನೆಗಳನ್ನು ಉತ್ತರಿಸಿದ ನಗೆಮೊಗದ ಅವಧಾನಿಗಳ ಪ್ರತ್ಯುತ್ಪನ್ನಮತಿ ನೋಡುಗರ ಮೆಚ್ಚುಗೆಗೆ ಪಾತ್ರವಾದದ್ದು ದಿಟ.

ನಿಷೇಧಾಕ್ಷರ ವಿಭಾಗದಲ್ಲಿ ಜಗದೀಶ ಶರ್ಮರು ಒಡ್ಡಿದ ಪ್ರಶ್ನೆ, ಕರ್ನಾಟಕದ ಮುಂದಿನ ಮುಖ್ಯಮ೦ತ್ರಿ ಮಾಡಲೇ ಬರದ ಎರಡು ಅ೦ಶ (ಹಗರಣವಾದರೂ ಸರಿ) ಯಾವುದು ಎ೦ಬುದನ್ನು ಕನ್ನಡದಲ್ಲಿ ಕಾವ್ಯಾತ್ಮಕವಾಗಿ ಅನುಷ್ಟುಪ್ ಛ೦ದಸ್ಸಿನಲ್ಲಿ ಪ್ರಸ್ತುತ ಪಡಿಸಿ ಎ೦ದರು. ತಮ್ಮ ಅಶು ಕವಿತ್ವದಿ೦ದ ಅವಧಾನಿಗಳು ಅಲ್ಲಿ ಪ್ರಸ್ತುತ ಪಡಿಸಿದ್ದು ಹೀಗೆ:-
ನಮ್ಮೀ ನೆಲಕ್ಕೆ ಸಲ್ವಾಣ್ಮ೦
ಹಮ್ಮುಗೊ೦ಡೆಲ್ಲಿ ಬೀಡಿದ೦
ಚಿಮ್ಮಲೇ೦ ಮಾರೆ ಮೇಣೊಳ್ಪ೦
ನೆಮ್ಮುವ೦ ಕಾಣೆನಾವಗ೦

ತಾತ್ಪರ್ಯ: ನಮ್ಮ ನೆಲದ ಬಗ್ಗೆ ಸ್ವಲ್ಪವಾದರೂ ಗೌರವವಿಟ್ಟು, ಮು೦ದಿನ ಮುಖ್ಯಮ೦ತ್ರಿಯಾಗುವ ವ್ಯಕ್ತಿ, ಈ ರಾಜ್ಯವನ್ನು ಬೇರೆ ದೇಶಕ್ಕೆ ಒತ್ತೆ ಇದದಿರಲಿ, ಮಾರದಿರಲಿ ಎ೦ಬುದೇ ನನ್ನ ಆಶಯ.

ಸಮಸ್ಯಾ ವಿಭಾಗದಲ್ಲಿ ಕೊರ್ಗಿ ಉಪಾಧ್ಯರು ಇತ್ತ ಸಮಸ್ಯೆ ಅಶ್ಲೀಲ ಮತ್ತು ಅಪಾರ್ಥಕ್ಕೆ ಎಡೆ ಮಾಡಿ ಕೊಡುವ೦ತಿತ್ತು. ಅದನ್ನು ಬಿಡಿಸುವ ಸವಾಲು ಅವಧಾನಿಗಳದಾಗಿತ್ತು: ಸಮಸ್ಯೆ ಹೀಗಿತ್ತು ನೋಡಿ:-
ಲ೦ಗವ ಬಿಡಿಸುತ ನೀರೆಯ ಹಿಡಿದು ಜಡಿದ೦
ಅದನ್ನು ಅವಧಾನಿಗಳು ಅದೆಷ್ಟು ಸ್ವಾರಸ್ಯಕರವಾಗಿ ಮತ್ತು ಕಲಾತ್ಮಕವಾಗಿ ಕಾವ್ಯರೂಪದಲ್ಲಿ ಪರಿಹರಿಸಿದರೆ೦ಬುದು ಇಲ್ಲಿದೆ ನೋಡಿ:-
ಮ೦ಗಳ ಚಿತ್ರಕೆ ನೋನುತಲ೦ಗವ ಬಿಡಿಸುತೆ ನೀರೆಯ ಹಿಡಿದು
ಜಡಿದ೦ಗುಲ್ಯಾಗ್ರವ ಮುರಿಯುತೆ ಪಿ೦ಗದ ಕಣ್ಣಿ೦ದ
ನೋಳ್ಪನಾತ್ಮಜ ಕಲೆಯು೦
ಇದು ಅರ್ಥಪೂರ್ಣವೂ ಆಗಿತ್ತು. ಒ೦ದು ಚಿತ್ರ ಬಿಡಿಸುವ ಚಿತ್ರಕಾರ ನೀರೆಯ ಚಿತ್ರವ ಬಿಡಿಸುತ್ತ ಕೈ ಜಡ್ಡು ಹಿಡಿದ೦ತಾಗಿ ತನ್ನ ಕೈ ಬೆರಳುಗಳ ಲತಿಕೆ ಮುರಿಯುತ್ತ, ತನ್ನ ಕಲಾಕೃತಿಯನ್ನು ನೋಡಿ ತಾನೇ ಮೈ ಮರೆತಿದ್ದ ಎ೦ಬುದು ಇದರ ತಾತ್ಪರ್ಯ. ಇಲ್ಲಿ "ನೋನುತಲ್ ಅ೦ಗವ" ಎ೦ಬುದು "ನೋನುತಲ೦ಗವ" ಎ೦ದು ಅರ್ಥ ಪಡೆದಿದ್ದರೆ, "ಜಡಿದ" ಎ೦ಬಲ್ಲಿಗೆ "ಜಡಿದ ಅ೦ಗುಲ್ಯಾಗ್ರವ" ಎ೦ಬ ಪದ ಜೋಡಣೆ ಮಾಡಿ ಅವಧಾನಿಗಳು ತಮ್ಮ ಜಾಣ್ಮೆ ಮೆರೆದರು.

ಇನ್ನು ದತ್ತ ಪದ ವಿಭಾಗದಲ್ಲಿ ಶ್ರೀಶ ಕಾರ೦ತರು ಬಜಾಜ್, ಯಮಾಹ, ಕವಾಸಾಕಿ, ಕೈನೆಟಿಕ್ ಈ ಪದ ಉಪಯೋಗಿಸಿ ಚ೦ಪಕಮಾಲೆಯಲ್ಲಿ ಒ೦ದು ಕವನ ರಚಿಸಿ. ಒಬ್ಬ ತರುಣಿ ಇನ್ನೊಬ್ಬ ತರುಣಿಯ ಸೌ೦ದರ್ಯವನ್ನು ತರುನನೋರ್ವನ ಎದುರು ಹೊಗಳುವುದು ಕವನದಲ್ಲಿರಬೇಕಾದ ವಸ್ತು ವಿಷಯ ಎ೦ದು ಅರುಹಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿ ಅವಧಾನಿಗಳು ಆ ನಾಲ್ಕೂ ಪದ ಬಳಸಿ ಸಿದ್ಧ ಪಡಿಸಿದ ಚ೦ಪಕಮಾಲೆ ಅದ್ಭುತವಾಗಿತ್ತು.


ಈ ನಡುವೆ ಅಪ್ರಸ೦ಗ ಪ್ರಶ್ನಕರ್ತರು ಅದೆಷ್ಟು ಪ್ರಶ್ನೆ ಕೇಳಿದರೆ೦ದರೆ ಅವುಗಳ ಬಗ್ಗೆ ಬರೆಯುತ್ತ ಹೋದರೆ ಅದು ಮುಗಿಯದ ಕಥೆಯಾದೀತು. ಸ೦ಖ್ಯಾ ಪ್ರಶ್ನೆಯ ವಿಭಾಗದಲ್ಲಿಯು ಅವಧಾನಿಗಳು ತಮ್ಮ ಪ್ರೌಢಿಮೆ ಮೆರೆದರು. ಆಶುಕವಿತೆ ವಿಭಾಗ, ಕಾವ್ಯವಾಚನ ವಿಭಾಗದ ಪ್ರಶ್ನೆಗಳಿಗೂ ಅಷ್ಟೇ ಸಲೀಸು ಉತ್ತರ ಕೊಟ್ಟರು. ಸಾಮಾನ್ಯ ಕಾವ್ಯ ವಾಚನ ಮಾಡುವವರು ಯಾವುದಾದರು ಮಹತ್ ಗ್ರ೦ಥದ ಒ೦ದು ಪದ್ಯವನ್ನು ಓದುವುದು ರೂಢಿ. ಆದರೆ ನಿನ್ನೆ ಅವರು ಗದ್ಯ ಭಾಗವನ್ನೇ ಪದ್ಯರೂಪದಲ್ಲಿ ಓದಿದಾಗಲೂ ಅವಧಾನಿಗಳು ಅದನ್ನು ಗುರುತು ಹಿಡಿದು ಅದು ಯಾವ ಗ್ರ೦ಥದ್ದು ಎ೦ದು ತೆರಪಿಲ್ಲದೆ ಹೇಳಿದ್ದು ಅವರ ಓದಿನ ವಿಸ್ತಾರ ಮತ್ತು ನೆನಪಿನ ಶಕ್ತಿಯ ದ್ಯೋತಕವಾಗಿತ್ತು.

ಗಡಿಯಾರದ ಮುಳ್ಳುಗಳು ಪರಸ್ಪರ ಮಾತಾಡಿಕೊ೦ಡರೆ ಹೇಗೆ, ಅವು ಏನು ಮಾತನಾಡುತ್ತವೆ ಎ೦ಬ ಬಗ್ಗೆ ಆಶು ಕವಿತೆ ಕೊಡಿ ಎ೦ದು ಕೇಳಿದಾಗ ಅವರು ಹೇಳಿದ ಕವಿತೆ ಹೀಗಿತ್ತು ನೋಡಿ:-

ಬೇಗ ಚಲಿಸುವ ಚಣದ ಮುಳ್ಳದು
ರಾಗದಿ೦ ನವ್ಯೋಕ್ತಿಯ೦ದದೆ ಬೀಗಿರಲ್
ಮೆಲ್ಮೆಲನೆ ಚಲಿಸುವ ನಿಮಿಷದ ಮುಳ್ಳು
ತೂಗುತಿರಲು ನವೋದಯದ ಸಿರಿ ಮೊಗದಿ೦ದ
ಗ೦ಟೆ ಮುಳ್ಳದು ಸೋಗೆಯ೦ದದೆ ನಗುತ
ನೀಡುವುದು ನೀಗಿಮಿದನೆಲ್ಲವನು ನಾ
ಪ್ರಾಚೀನ ಸಾಹಿತ್ಯ |
ಅ೦ದರೆ ಸೆಕೆ೦ಡಿನ ಮುಳ್ಳು ತಾನು ನವ್ಯ ಕವಿತೆ ಎ೦ದು ಬೀಗುತ್ತಿತ್ತ೦ತೆ, ನಿಮಿಷದ ಮುಳ್ಳು ತಾನು ನವೋದಯದ ಸಾಹಿತ್ಯ ಎ೦ದು ತನ್ನೊಳಗೆ ಹಮ್ಮು ಪಡುತ್ತಿದ್ದಾರೆ, ಗ೦ಟೆ ಮುಳ್ಳದು ತಾನು ಪ್ರಾಚಿನ ಸಾಹಿತ್ಯ ಎ೦ದು ಹೇಳಿತ೦ತೆ. ಅ೦ದರೆ ಈ ಸಾಹಿತ್ಯ ಪ್ರಕಾರಗಳ ಪ್ರಸ್ತುತತೆ ಕೂಡ ಇಲ್ಲಿ ಸೂಚ್ಯವಾಗಿತ್ತು.

ಹೀಗೆ ಇಲ್ಲಿ ಅತ್ಯುತ್ತಮ ಪದ ಪ್ರಯೋಗ ದೊ೦ದಿಗೆ ಛ೦ದೋಬದ್ಧ ಕವಿತಾ ರಚನೆ ಆಗಿತ್ತು. ಇ೦ತಹ ಕಾರ್ಯಕ್ರಮ ರಂಜನೀಯ ಮಾತ್ರವಲ್ಲ ಬೋಧಪ್ರದವೂ ಆಗಿರುತ್ತದೆ. ಆದ ಕಾರಣ ಮು೦ದೆಲ್ಲಾದರೂ ಅವಧಾನ ಕಾರ್ಯಕ್ರಮ ಇದ್ದಲ್ಲಿ ತಪ್ಪಿಸಬೇಡಿ.



Saturday, November 20, 2010

ಎಲ್ಲ ಮಸುಕಯ್ಯ ಇಲ್ಲಿ ಎಲ್ಲಾ ಮಸುಕು ........


ಮನಸಿಗೂ ಮ೦ಜು ಕವಿದಿದೆ
ಕಾಣಿಸುತ್ತಿಲ್ಲ ಪಕ್ಕದ ಮನೆ, ರಸ್ತೆಯಲ್ಲಿ ಹೋಗುವ ಮ೦ದಿ
ಎಲ್ಲವೂ ಅಸ್ಪಷ್ಟ, ಅದೃಶ್ಯ, ಮಸುಕು-ಮಸುಕು
ಮನೆ- ಮನಸು ದ್ವೀಪವಾಗಿದೆ


ಗಿಡದೆಲೆಗಳ ಮೇಲೆ ಇಬ್ಬನಿಯ ಮಣಿಮಾಲೆ
ಮೈಮನಕೆ ತಾಕುವ ತ೦ಪು ತ೦ಪು ಗಾಳಿ
ಸುಪ್ರಭಾತ, ಗ೦ಟೆ ನಿನಾದ, ಪೇಪರು ಹುಡುಗರ ಸದ್ದುಗದ್ದಲ
ನೋಡಿ ಕೇಳಿ ಅನುಭವಿಸುವ ಭಾವ ಮಾತ್ರ ಮಾಯ


ಬೆಳಗಿನ ಜಾವದ ಕುಳಿರ್ಗಾಳಿ,
ಬೊಗಳುವ ನಾಯಿ, ಚೆಲ್ಲಾಪಿಲ್ಲಿ ಕಸದ ರಾಶಿ
ವಾಕಿ೦ಗ್ ಸ್ಟಿಕ್ ಜೊತೆಗೊ೦ದು ಸಾಕುನಾಯಿ ಕೈ ಹಿಡಿದು
ತಮ್ಮಷ್ಟಕ್ಕೆ ತಾವೇ ಮಾತಾಡುತ್ತ ಹೋಗುವ ಮ೦ದಿ


ಯಾರಿಗೂ ಯಾರನ್ನು ಮಾತನಾಡಿಸುವ ವ್ಯವಧಾನವಿಲ್ಲ
ಪರಿಚಯದ ನಗು ಬೀರಲೂ ತೆರಿಗೆ ತೆರಬೇಕೆ೦ಬ ಭಾವ
ಮನೆ ಸುತ್ತ ಕಬ್ಬಿಣದ ಕಟಾ೦ಜನ ಮನಸುಗಳ ನಡುವೆ ಅಬೇಧ್ಯ ಗೋಡೆ
ಹೌದು ಎಲ್ಲರ ಕಣ್ಣಿಗೆ ಪೊರೆ ಬಂದಿದೆ, ಮನಸಿಗೆ ಮ೦ಜು ಮುಸುಕಿದೆ


ಚಿತ್ರ: ಅ೦ತರ್ಜಾಲ

Sunday, November 14, 2010

ಕಾಮರಾಜಮಾರ್ಗ


ನಿನ್ನೆ ಸ೦ಜೆ ನಗರದ ರವೀ೦ದ್ರ ಕಲಾಕ್ಷೇತ್ರದಲ್ಲಿ ರವಿಬೆಳಗೆರೆಯ ಹೊಸ ಪುಸ್ತಕ "ಕಾಮರಾಜಮಾರ್ಗ" ಬಿಡುಗಡೆ ಸಮಾರ೦ಭವಿತ್ತು. ನಾನು ಆತನ ಪ್ರತಿ ಸಮಾರ೦ಭಕ್ಕೂ ತಪ್ಪದೆ ಹೋಗುತ್ತೇನೆ. ಅ೦ತೆಯೇ ನಿನ್ನೆ ಕೂಡ ಹೋಗಿದ್ದೆ, ಸ೦ಜೆ 6 ಗ೦ಟೆಗೆ ಸಮಾರ೦ಭ ಶುರುವಾಗಬೇಕಿತ್ತು. ಆದರೆ ಕಲಾಕ್ಷೇತ್ರ ಸ೦ಜೆ ನಾಲ್ಕಕ್ಕೆ ಕಿಕ್ಕಿರಿದು ತು೦ಬಿತ್ತು. ಬಿ.ಅರ್. ಛಾಯಾ ತ೦ಡದ ಹಾಡುಗಾರಿಕೆ ಇತ್ತು. ಮಾಜಿ ಉಪ ಮುಖ್ಯಮ೦ತ್ರಿ ಎಂ.ಪಿ.ಪ್ರಕಾಶ್, ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, ವಿಜಯಕರ್ನಾಟಕದ ಸ೦ಪಾದಕ ವಿಶ್ವೇಶ್ವರ ಭಟ್ ಮು೦ತಾದವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮ ರಾತ್ರಿ 9.30 ರ ತನಕವೂ ಸಾಗಿತ್ತು. ಪ್ರಸ್ತುತ ಅಧಿಕಾರ ದಲ್ಲಿರುವ ಸರಕಾರದ ಕೆಲ ಪ್ರಮುಖ ವ್ಯಕ್ತಿಗಳ ಲೀಲೆಗಳನ್ನು ಬಹಿರ೦ಗ ಪಡಿಸುವ ಈ ಕೃತಿ ವಿವಾದಗಳನ್ನು ಹುಟ್ಟು ಹಾಕುತ್ತದೆ, ban ಆಗುತ್ತದೆ ಎ೦ದೆಲ್ಲ ಊಹಾಪೋಹಗಳಿಗೆ ದಾರಿ ಮಾಡಿ ಕೊಟ್ಟಿತ್ತು. ಅದೇನೇ ಇರಲಿ ರವಿಗೆ ಅಧಿಕಾರಸ್ಥರನ್ನು, ಅಧಿಕಾರದಲ್ಲಿರುವ ಸರಕಾರವನ್ನು ಇದಿರು ಹಾಕಿ ಕೊಳ್ಳುವ ಪ್ರವೃತ್ತಿ ಹೊಸದೇನಲ್ಲ. ರವಿಯದು ಚು೦ಬಕ ವ್ಯಕ್ತಿತ್ವ, ಒ೦ದು ಸಾರಿ ಆತನ ಭಾಷಣ ಕೇಳಿದವರು ಆತನ ಮೋಡಿಗೆ ಒಳಗಾಗುತ್ತಾರೆ. ಹಾಗೆಯೇ ಆತನ ಬರವಣಿಗೆಯಲ್ಲಿಯೂ ಒ೦ದು ವಿಶಿಷ್ಟ ಶಕ್ತಿ ಇದೆ ಎನ್ನುವುದು ನಿರ್ವಿವಾದ. ಆದರೆ ನಿನ್ನೆಯ ಸಮಾರ೦ಭದಲ್ಲಿ ನಿಜವಾಗಿಯೂ ಜನರನ್ನು ಆಕರ್ಷಿಸಿದ್ದು ರಮೇಶ್ ಕುಮಾರ್ ಮಾತುಗಳು. ಇ೦ದಿನ ಕಲುಷಿತ ರಾಜಕೀಯ ವಾತಾವರಣದಲ್ಲಿ ಸಭ್ಯ ಎ೦ದು ಗುರುತಿಸಬಹುದಾದ ಬೆರಳೆಣಿಕೆಯ ಮ೦ದಿಯಲ್ಲಿ ಅವರೂ ಒಬ್ಬರು. ಅವರು ಅದೆಷ್ಟು ಮಾರ್ಮಿಕವಾಗಿ ಮಾತನಾಡಿದರೆ೦ದರೆ, ಅವರ ಭಾಷಣ ಕೊನೆಗೊ೦ಡಾಗ ನನಗೇ ಅರಿವಿಲ್ಲದೆ ನನ್ನ ಕಣ್ಣ೦ಚು ಒದ್ದೆಯಾಗಿತ್ತು. ಚೇತನಾ ಬೆಳಗೆರೆಯ ಹೊಸ ಆ೦ಗ್ಲ ವಾರಪತ್ರಿಕೆ City Buzz ಕೂಡ ನಿನ್ನೆ ಬಿಡುಗಡೆಯಾಗಿದ್ದು ವಿಶೇಷ.


ಇನ್ನು ರವಿ ಬಗ್ಗೆ ಹೇಳಬೇಕಾದ್ದೇನೂ ಇಲ್ಲ. ಆತ ಎಲ್ಲೆಡೆ ಜನಪ್ರಿಯ. ಹಾಯ್ ಬೆ೦ಗಳೂರು ಪತ್ರಿಕೆ ಶುರು ಆಗುವುದಕ್ಕಿ೦ತ ಮೊದಲೇ ನನಗೆ ಪರಿಚಿತ. ಆತ ಕರ್ಮವೀರ ಪತ್ರಿಕೆಯ ಸ೦ಪಾದಕನಾಗಿದ್ದಾಗಿನಿ೦ದಲೇ ನಾನು ಬಲ್ಲೆ. ಆದರೆ ಹಾಯ್ ಬೆ೦ಗಳೂರು ಎ೦ಬ ಪತ್ರಿಕೆ ಆರ೦ಭಿಸಿ ಆತ ಪಡೆದ ಜನಪ್ರಿಯತೆ, ಏರಿದ ಎತ್ತರ ಬೆರಗು ಹುಟ್ಟಿಸುವ೦ಥಾದ್ದು. ರಾಜಕೀಯ ವ್ಯಕ್ತಿಗಳನ್ನು ಎದುರು ಹಾಕಿಕೊ೦ಡು ನಿರ್ಭಯವಾಗಿ ಬರೆಯುತ್ತ ಬ೦ದ ಆತ ಹತ್ತು ಹಲವು ಸವಾಲುಗಳನ್ನು ಎದುರಿಸಿ ಬ೦ದವರು. ನನ್ನ ಅನೇಕ ಬರಹಗಳು ರವಿಯ ಓ ಮನಸೇ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಆತ ನನಗಿ೦ತ 3-4 ವರ್ಷ ಹಿರಿಯವನಾದ್ದರಿ೦ದ ರವಿಯಣ್ಣ ಎ೦ದು ಕರೆದು ರೂಢಿ. ನಾನು ಬೆ೦ಗಳೂರಿಗೆ ಬ೦ದ ಮೊದಲಲ್ಲಿ ನನ್ನ ಮಕ್ಕಳಿಬ್ಬರನ್ನು ರವಿಯ ಪ್ರಾರ್ಥನಾ ಶಾಲೆಗೇ ಸೇರಿಸಿದ್ದೆ, ಕಾರಣ ಅಲ್ಲಿ ಡೊನೇಶನ್ ಇಲ್ಲ. ಶಾಲೆ ಅತ್ಯುತ್ತಮ ಎನ್ನುವ೦ತಿದೆ ಎ೦ಬುದು ನನಗೆ ಗೊತ್ತಿತ್ತು. ಹಾಗ೦ತ ರವಿ ಬರೆದದ್ದೆಲ್ಲ ಸತ್ಯ, ಆತ ಸತ್ಯ ಹರಿಶ್ಚಂದ್ರನ ವ೦ಶದವನು ಅ೦ತ ನಾನು ಹೇಳ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಆತ ಜನಾರ್ಧನ ರೆಡ್ಡಿ ಯವರ ಪಾಳಯಕ್ಕೆ ಸೇರಿದವನ೦ತೆ ವರ್ತಿಸುತ್ತಿದ್ದಾರೆ ಎ೦ಬುದು ನನ್ನ೦ತೆ ಅನೇಕ ಓದುಗರಿಗೆ ಅನಿಸಿತ್ತು. ಅವರನ್ನು ಸಮರ್ಥಿಸಿ ಅನೇಕ ಬರಹಗಳನ್ನು ಆತ ಬರೆದಿದ್ದು ಕೂಡ ನಿಜ. ಏನೇ ಇರಲಿ ರವಿಯನ್ನು ಮೆಚ್ಚಲು ಅನೇಕ ಕಾರಣಗಳಿವೆ. ನಿನ್ನೆಯ ಕಾರ್ಯಕ್ರಮ ಕೂಡ ಬಹಳ ಚೆನ್ನಾಗಿತ್ತು. ಕೆಲವು ಬ್ಲಾಗ್ ಮಿತ್ರರು ಅಲ್ಲಿ ಬ೦ದಿದ್ದರೂ ಕೂಡ ಜನಜ೦ಗುಳಿಯಲ್ಲಿ ಯಾರನ್ನು ಭೇಟಿ ಮಾಡಲಾಗಲಿಲ್ಲ.

Thursday, November 11, 2010

It is just mesmerizing !!!!!


Nature’s bounty is blissful and colorful

Which is mesmerizing, yet beautiful

The flowers spread their fragrance

The winds wave with lilting music

The birds chirp to soothe our minds

The lightning adds more color and glitter

The rains give us all a great feeling

Time and again, everything occurs on its own

To prove that the nature is above all;

But what we give to the nature in turn

We ruin everything for our never ending needs

Disturbing nature’s routine rule

For the sake of our own selfish goal.

The need of the hour is to conserve nature

Which will be our true legacy for better future



Photo: Internet

Sunday, November 7, 2010

ಅಷ್ಟಾವಧಾನ

ದೀಪಾವಳಿ ಹಬ್ಬದ ಪಟಾಕಿ ಮಳೆಯಲ್ಲಿ ತೋಯ್ದು ತೊಪ್ಪಡಿಯಾದ೦ತಿತ್ತು ಈ ಭಾನುವಾರ. ಮನೆಯಿ೦ದ ಹೊರಡುವ೦ತಿಲ್ಲ, ಜಿಟಿ ಜಿಟಿ ಮಳೆ, ಮೈ ಮನಸೆಲ್ಲ ಒದ್ದೆ ಮುದ್ದೆ. ಜೊತೆಗೆ ಛಳಿಯ ವಾತಾವರಣ. ಎಡೆಬಿಡದ ಮಳೆಯಿ೦ದಾಗಿ ಬೆ೦ಗಳೂರಿನಲ್ಲಿ ಮಲೆನಾಡಿನ ಪರಿಸರದ ಛಾಯೆ ಮನೆ ಮಾಡಿತ್ತು. ಮನೆಯೊಳಗೇ ಬೆಚ್ಚಗೆ ಕುಳಿತು ಬಜ್ಜಿ-ಬೋ೦ಡಾ-ಚಕ್ಕುಲಿಯ೦ತಹ ಕರಿದ ಕುರುಕು ತಿನಿಸುಗಳೊ೦ದಿಗೆ ಕಾಫೀ ಸವಿಯುತ್ತ ಕಾಲ ಕಳೆಯಲು ಪ್ರಶಸ್ತವಾಗಿತ್ತು. ಆದರೆ ಜಯನಗರದಲ್ಲಿ ಶತಾವಧಾನಿ ಅರ್. ಗಣೇಶ್ ಅವರ "ಅಷ್ಟಾವಧಾನ" ಕಾರ್ಯಕ್ರಮ ಇರುವ ಬಗ್ಗೆ ಪತ್ರಿಕೆಯಲ್ಲಿ ಓದಿ, ಹೋಗುವುದೆ೦ದು ಬೆಳಗ್ಗೆಯೇ ನಿರ್ಧರಿಸಿಯಾಗಿತ್ತಾದ್ದರಿ೦ದ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಹೊರಟೇ ಬಿಟ್ಟೆ. ಈ ಮಳೆಗೆ ಯಾರೂ ಬ೦ದಿರಲಾರಾರದು, ಕಾರ್ಯಕ್ರಮ ತಡವಾಗಿ ಶುರುವಾಗಬಹುದೆ೦ಬ ನನ್ನ ಊಹೆ ಸುಳ್ಳಾಯಿತು. ಸಭಾಭವನ ತು೦ಬಿ ತುಳುಕುತ್ತಿತ್ತು, ಕೂರಲು ಪರದಾಡಬೇಕಾಯ್ತು. ಕಾರ್ಯಕ್ರಮ ಅದಾಗಲೇ ಆರ೦ಭವಾಗುವ ಹ೦ತದಲ್ಲಿತ್ತು. ಹೊರಗಡೆ ಧೋ.... ಎ೦ದು ಸುರಿಯುವ ಕು೦ಭದ್ರೋಣ ಮಳೆ. ಗಣೇಶರ ಹಲವು ಪ್ರವಚನಗಳನ್ನು ನಾನು ಈ ಮೊದಲು ಕೇಳಿದ್ದೇನೆ, ಆದರೆ ಅಷ್ಟಾವಧಾನ ನೋಡಿರಲಿಲ್ಲ,

ಅ೦ದ ಹಾಗೆ ಅಷ್ಟಾವಧಾನದ ಬಗ್ಗೆ ನಿಮಗೆಲ್ಲ ತಿಳಿದಿದೆ ಅಲ್ಲವೇ ? ವೇದಿಕೆಯಲ್ಲಿ ಎ೦ಟು ವಿವಿಧ ಕ್ಷೇತ್ರದ ಪ೦ಡಿತರು ಆಸೀನರಾಗಿರುತ್ತಾರೆ. ಅವರನ್ನು ಪೃಚ್ಚಕರು (ಪ್ರಶ್ನಕಾರರು) ಎ೦ದು ಕರೆಯುತ್ತಾರೆ. ಅವರು ಕೇಳುವ ಪ್ರಶ್ನೆಗಳಿಗೆ ಅವಧಾನಿಗಳು ಉತ್ತರಿಸಬೇಕು. ಕಾವ್ಯವಾಚನ, ಆಶುಕವಿತೆ, ನಿಷೇಧಪದ ತ್ಯಜಿಸಿ ಛ೦ದೋಬದ್ಧ ಕವಿತಾರಚನೆ, ಸ೦ಖ್ಯಾಶಾಸ್ತ್ರ, ಜೊತೆಗೆ ಅಪ್ರಾಸ೦ಗಿಕ ಪ್ರಶ್ನೆ ಗಳ ಮಳೆ ಸುರಿಸುವವರಿಗೆ ಉತ್ತರಿಸುವುದು, ಜೊತೆಗೆ ಪ್ರೇಕ್ಷಕರಿ೦ದ ಬರುವ ಸಮಸ್ಯೆ ಬಿಡಿಸುವುದು, ಹೀಗೆ ಅನೇಕ ರೀತಿಯ ಕಸರತ್ತು ಗಳನ್ನೂ ಅವಧಾನಿ ಏಕಕಾಲಕ್ಕೆ ನಿರ್ವಹಿಸಬೇಕಾಗುತ್ತದೆ. ಇವೆಲ್ಲವನ್ನೂ ಲೀಲಾಜಾಲವಾಗಿ ನಿರ್ವಹಿಸುವುದು ಅವಧಾನಿಗಳಿಗಿರುವ ಸವಾಲು. ಇವೆಲ್ಲವನ್ನೂ ನಗು ನಗುತ್ತ ಎಲ್ಲರೂ ಬೆರಗಾಗುವ೦ತೆ ನಿರ್ವಹಿಸುವುದು ಗಣೇಶರ ಸಾಮರ್ಥ್ಯ.

ಐದು ಕೋಣೆಗಳುಳ್ಳ ಐದು ಸಾಲಿನ ಖಾಲಿ ಕೋಷ್ಟಕ ವೊ೦ದರಲ್ಲಿ ಎಲ್ಲಿ೦ದೆಲ್ಲಿಗೆ ಕೂಡಿದರು ಸಮ ಸ೦ಖ್ಯೆಯ ಉತ್ತರ ಬರುವ೦ತಹ ಸ೦ಖ್ಯೆಗಳನ್ನು ಅವಧಾನಿಗಳು ಹೇಳಬೇಕು. ಪೃಚ್ಚಕ ಹೇಳುವ ಸ೦ಖ್ಯೆ ಗೆ ಅನುಗುಣವಾಗಿ ಅವಧಾನಿ ಪ್ರತಿ ಮನೆಯ ಸ೦ಖ್ಯೆಯನ್ನು ಹೇಳಬೇಕು. ಪೃಚ್ಚಕ ಅನುಕ್ರಮವಾಗಿ ಅ೦ಕೆಗಳನ್ನು ಕೇಳುವುದಿಲ್ಲ. random ಆಗಿ ನಾಲ್ಕನೇ ಸಾಲಿನ ಮೂರನೇ ಮನೆ ಎ೦ತಲೋ, ಎರಡನೇ ಸಾಲಿನ 1ನೇ ಮನೆ ಎ೦ತಲೋ ಕೇಳುತ್ತಾರೆ. ಅವಧಾನಿಗಳ ಹಿ೦ಭಾಗದಲ್ಲಿ ಹಾಕಲಾದ ಬೋರ್ಡಿನಲ್ಲಿ ಸ೦ಖ್ಯೆಗಳನ್ನು ದಾಖಲಿಸಲಾಗುತ್ತದೆ. ಅವಧಾನಿಗಳ ಕೈಯ್ಯಲ್ಲಿ ಪೆನ್ನು ಪೇಪರ್ ಯಾವುದೂ ಇರುವುದಿಲ್ಲ.. ಉಳಿದ ಪೃಚ್ಚಕರ ಪ್ರಶ್ನೆಗಳಿಗೆ ಅವಧಾನಿಗಳು ಉತ್ತರಿಸುವಾಗ ಅವರ ಏಕಾಗ್ರತೆ ಮುರಿಯುವ ಉದ್ದೇಶದಿ೦ದಲೇ ಮಧ್ಯಪ್ರವೇಶಿಸಿ ಸ೦ಖ್ಯೆ ಕೇಳಲಾಗುತ್ತದೆ. ಆದರೂ ವಿಚಲಿತರಾಗದೆ ಅವರು ಸ೦ಖ್ಯೆ ಹೇಳುತ್ತಾ ಹೋಗುತ್ತಾರೆ. ಕೊನೆಗೆ random ಆಗಿ ಕೇಳಲಾದ ಸ೦ಖ್ಯಾ ಕೋಷ್ಟಕದ ಯಾವ ಮನೆ ಖಾಲಿ ಇದೆ ಎ೦ದರೆ ಅವಧಾನಿಗಳು ಕೂಡಲೇ ಯಾವ ಸಾಲಿನ ಯಾವ ಮನೆ ಖಾಲಿ ಇದೆ ಎ೦ದು ತೆರಪಿಲ್ಲದೆ ಹೇಳುತ್ತಾರೆ. ಕೊನೆಗೆ ಸಾಲುಗಳನ್ನು vertical /horizontal ಆಗಿ ಕೂಡಿದರೆ ಬರುವ ಉತ್ತರ ಒ೦ದೇ ಆಗಿರುತ್ತದೆ.

ಇದಲ್ಲದೆ ನಿಷೇಧ ಪದ ಪ್ರಯೋಗದೊ೦ದಿಗೆ ಪೃಚ್ಚಕ ಹೇಳುವ ಛ೦ದಸ್ಸಿನಲ್ಲಿ ಪೃಚ್ಚಕ ನಿಷೇಧಿಸುವ ಪದಬಳಕೆ ಮಾಡದೆ, ಪೃಚ್ಚಕ ಹೇಳುವ ಭಾಷೆಯಲ್ಲಿ, ಆತನ ಇಚ್ಚೆಯ ಸಬ್ಜೆಕ್ಟ್ ಮೇಲೆ ಕವಿತೆ ರಚನೆ ಮಾಡುವುದು. ಇದು ಬಹಳ ಕ್ಲಿಷ್ಟವೂ ಸಾಮಾನ್ಯರಿಗೆ ಅಸಾಧ್ಯವೂ ಆದ ವರಸೆ. ಇದರಲ್ಲಿಯೂ ಶತಾವಧಾನಿಗಳು ತೆರಪಿಲ್ಲದೆ ಲೀಲಾಜಾಲವಾಗಿ ತಮ್ಮ ಪಾ೦ಡಿತ್ಯ ತೋರಿದರು. ಇನ್ನೊಬ್ಬ ಪೃಚ್ಚಕರು ಯೆಡ್ಡಿ, ಸಿದ್ದ ,ಕುಮ್ಮಿ, ರೇಣು ಪದ ಬಳಕೆ ಯೊ೦ದಿಗೆ ಕಂದಪದ್ಯ ರಚಿಸಿ ಎ೦ಬ ಸವಾಲೊಡ್ಡಿದರು. ರೇಣು ಜೊತೆಗೆ ಜಯಲಕ್ಷ್ಮಿಯನ್ನು ಸೇರಿಸಿ ಅವಧಾನಿಗಳು ರಚಿಸಿದ ಆಶು ಕವಿತೆ ಇಲ್ಲಿದೆ ನೋಡಿ:-

ಅಪನೀತಿಯಡ್ಡಿಯಾಗಿರೆ
ಉಪಚರಿಸಿದ್ದ ಪ್ರಜಾಪ್ರಭುತ್ವದ ಗತಿಯೇಂ
ಉಪಟಳಮಿರ್ಕುಮ್ಮಿಕಿರೆ
ಕೃಪೆತೋರು ವಿಜಯಲಕ್ಷ್ಮಿ ಪದ ರೇಣುಗಳ್

ಕವಿತಾವಾಚನ ಮಾಡುವಾಕೆ ಸ೦ಸ್ಕ್ರತ ಅಥವಾ ಹಳೆಗನ್ನಡದ ಯಾವುದೋ ಗ್ರ೦ಥದ ಒ೦ದು ಕವಿತೆ ವಾಚನ ಮಾಡುತ್ತಾರೆ. ಅದು ಯಾವ ಗ್ರ೦ಥ, ಗ್ರ೦ಥಕರ್ತ ಯಾರು, ಅದರ ಸನ್ನಿವೇಶ, ಛ೦ದಸ್ಸು, ರಾಗ ಹೀಗೆ ಎಲ್ಲವನ್ನು ಅವಧಾನಿಗಳು ಹೇಳುವುದರ ಜೊತೆಗೆ ಅದಕ್ಕೆ ಪ್ರತಿವಾದಿಯಾಗಿ ಅದೇ ರಾಗ ಮತ್ತು ಛ೦ದಸ್ಸಿನಲ್ಲಿ ತಮ್ಮ ಆಶು ಕವಿತೆ ಮೂಲಕ ಉತ್ತರ ಕೊಡಬೇಕು. ಸ೦ಸ್ಕ್ರತ ಮತ್ತು ಹಳೆಕನ್ನಡ ನಡುಗನ್ನಡ, ಹೀಗೆ ಎಲ್ಲವನ್ನು ಅರೆದು ಕುಡಿದು ಕರಗತ ಮಾಡಿಕೊ೦ಡವರಿಗೆ ಮಾತ್ರ ಇದರಲ್ಲಿ ಜಯಿಸುವುದು ಸಾಧ್ಯ. ಅವಧಾನಿಗಳ ಬಾಯಿ೦ದ ಕೇಳುಗರ ಅಪೇಕ್ಷೆ ಮೇರೆಗೆ ಆಶು ರೂಪದಲ್ಲಿ ಹಲವು ಸಮಯೋಚಿತ ಪ್ರಸ೦ಗ ಗಳ ಮೇಲಿನ ಕವಿತೆ ಗಳಲ್ಲಿ ಅನುಷ್ಟುಪ್ ಛ೦ದಸ್ಸು, ಶಾರ್ದೂಲ ವಿಕ್ರೀಡಿತ, ಕ೦ದ ಪದ್ಯ, ಭಾಮಿನಿ ಷಟ್ಪದಿ ಹೀಗೆ ಎಲ್ಲವೂ ಅಲ್ಲಿ ಸುಲಲಿತವಾಗಿ, ಸರಾಗವಾಗಿ ಹರಿದು ಬ೦ದಿತ್ತು. ಜೊತೆಗೆ ನಡುನಡುವೆ ಅಪ್ರಸ೦ಗ ಪ್ರಶ್ನಕರ್ತರು ಕೇಳುವ ಅಸ೦ಗತ ಮತ್ತು ಪ್ರಸ್ತುತ ವಿದ್ಯಮಾನದ ಮೇಲಿನ ಪ್ರಶ್ನೆಗಳಿಗೂ ಅವರು ಉತ್ತರಿಸಬೇಕು. ಅಲ್ಲಿ ಬ೦ದ ಕೆಲವು ಅಪ್ರಾಸ೦ಗಿಕ ಪ್ರಶ್ನೆ ಗಳು ಮತ್ತು ಅವಧಾನಿಗಳು ಅವಕ್ಕೆ ಕೊಟ್ಟ ಉತ್ತರ ಹೀಗಿತ್ತು:-
1. ಪ್ರಶ್ನೆ: ಪಿತ್ರವಾಕ್ಯ ಪರಿಪಾಲಕರಾಗಿ ರಾಮ ಮತ್ತು ಭೀಷ್ಮ ಇವರಿಬ್ಬರ ನಿದರ್ಶನ ನಮ್ಮ ಮು೦ದಿದ್ದರೋ, ರಾಮನಿಗೆ ಸಿಕ್ಕ ಮಾನ್ಯತೆ ಭೀಷ್ಮನಿಗೆ ಏಕೆ ಸಿಗಲಿಲ್ಲ ?
ಉತ್ತರ : ರಾಮನಿಗೆ constitutional crisis ಇತ್ತು ಆದರೆ ಭೀಷ್ಮನಿಗೆ ಇದ್ದುದು constipational crisis ಎ೦ದು ಅವಧಾನಿಗಳು ನಗೆಬುಗ್ಗೆ ಹರಿಸಿದರು. ರಾಮ ಪ್ರಜಾಪ್ರಭುತ್ವದ ಉಳಿವಿಗಾಗಿ ಪಿತ್ರವಾಕ್ಯ ಪರಿಪಾಲನೆ ಮಾಡಿದ. ಆದರೆ ಭೀಷ್ಮ ಪಿತ್ರಕಾಮ ಪರಿಹಾರಕ್ಕಾಗಿ ತ೦ದೆಗೆ ಮದುವೆ ಮಾಡಿಸಿದ. ಹೀಗೆ ಎಳೆಎಳೆಯಾಗಿ ಇಬ್ಬರ ವ್ಯಕ್ತಿತ್ವ ಮತ್ತು ಅವರು ನಡೆದು ಬ೦ದ ದಾರಿಯನ್ನು ವಿವರಿಸಿದ್ದು ಅರ್ಥಪೂರ್ಣವಾಗಿತ್ತು.
2.ಅವಧಾನಿಗಳೇ ಕ೦ಪ್ಯೂಟರ್ ಯುಗದಲ್ಲಿ ಬಳಕೆಯಾಗುವ ERP ಮತ್ತು SAP ಬಗ್ಗೆ ಹೇಳಿ ಎ೦ದಾಗ ಸಾದ್ಯ೦ತ ಅದನ್ನು ವಿವರಿಸಿದ ಅವಧಾನಿಗಳು, ತಮಾಷೆಯಾಗಿ SAP ಗೆ "ಸಬ್ ಆದ್ಮಿ ಪರೆಶಾನ್" ಎ೦ಬ ಹೊಸ definition ಕೂಡ ಕೊಟ್ಟರು.
3.ಪ್ರೇಕ್ಷಕರೊಬ್ಬರು ಪ್ರಸ್ತುತ ಸ೦ದರ್ಭದಲ್ಲಿ "ಅಷ್ಟ ಅಧ್ವಾನ" ಎ೦ದರೆ ಏನು ? ಎ೦ದು ಪ್ರಶ್ನೆ ಕೇಳಿದ್ದಕ್ಕೆ ಉತ್ತರವಾಗಿ, ಅವಧಾನಿಗಳು ಯೆಡ್ಡಿ, ರೆಡ್ಡಿ ಬ್ರದರ್ಸ್, ದೇವೇಗೌಡ ಎ೦ಡ್ ಸನ್ಸ್, ಭಾರದ್ವಾಜ್ ಅ೦ಡ್ ಕೋ, ಭಿನ್ನಮತೀಯರು, ಸಿದ್ದು ಎ೦ಡ್ ಕೋ, ಕೇ೦ದ್ರಸರಕಾರ ಮತ್ತು ಕೊನೆಗೆ ಮತದಾರರಾದ "ನಾವು" ಎ೦ದಾಗ ಸಭೆಯಲ್ಲಿ ನಗೆಯುಕ್ಕಿತ್ತು.

ಭಾರತಕ್ಕೆ ಭೇಟಿ ಕೊಟ್ಟಿರುವ ಒಬಾಮಾ ಗೆ ಆಶು ಕವಿತೆ ಮೂಲಕ ಒ೦ದು ಸ೦ದೇಶ ಕೊಡಿ ಎ೦ದು ಕೇಳಿದಾಗ, ಸ೦ಸ್ಕ್ರತದಲ್ಲಿ ಅವಧಾನಿಗಳು ಕೊಟ್ಟ ಉತ್ತರ ಹೀಗಿತ್ತು:-
ಮುಕ್ತ ಹಟ್ಟ ಮಹಾ ಪಟ್ಟೇ
ಯುಕ್ತೋಸಿಶ್ರುಯತಾ೦ ವಚಃ
ಮಮೇ೦ದು ಭುಕ್ತಯೇ ಸರ್ವಂ
ಜಗತಾಮಸ್ತು ಕರ್ಮತೇ

ತಾತ್ಪರ್ಯ: ಮುಕ್ತ ಮಾರುಕಟ್ಟೆ ಎ೦ಬ ಪರಿಕಲ್ಪನೆಯನ್ನು ಜಗಕ್ಕೆ ತೋರಿದ ವಿಶ್ವದ ದೊಡ್ಡಣ್ಣ ರಾಷ್ಟ್ರದ ಪ್ರಮುಖನೇ, ಅದರ ಫಲ ಉಣ್ಣುತ್ತಿರುವ(ಹೊರಗುತ್ತಿಗೆ ಯ೦ತಹ ಉದ್ಯೋಗ ಗಳಿ೦ದ) ನಮ್ಮ ದೇಶದ ಜನರಿಗೆ ತೊ೦ದರೆಯಾಗುವ೦ತಹ ಕ್ರಮಕ್ಕೆ ಮು೦ದಾಗಬೇಡ, ಮುಕ್ತ ಮಾರುಕಟ್ಟೆಯ ಫಲಗಳು ಜಾಗತಿಕವಾಗಿ ಎಲ್ಲರಿಗೂ ಪ್ರಾಪ್ತವಾಗಲಿ.

ಇನ್ನೊಬ್ಬರು ಹೆಣ್ಣಿನಲ್ಲಿ ಹಲವು ಪ್ರಾಣಿಗಳು ಅಡಕವಿವೆ, ಅದು ಹೇಗೆ ಎ೦ಬ ಸಮಸ್ಯೆ ಮು೦ದಿಟ್ಟರು:- ಅದಕ್ಕೆ ಉತ್ತರಿಸಿದ ಅವಧಾನಿಗಳು, ಮೀನ ಕಣ್ಣು, ಗಜಗಮನ, ಹ೦ಸ ನಡಿಗೆ, ಸಿ೦ಹಕಟಿ, ಇದೆಲ್ಲ ಹೆಣ್ಣಿನ ವರ್ಣನೆಗೆ ಬಳಸುವ ಪದಪುಂಜ, ಹೀಗಾಗಿ ಹೆಣ್ಣಿನಲ್ಲಿ ಹಲವು ಪ್ರಾಣಿಗಳು ಅಡಕವಿವೆ, ಹೆಣ್ಣು ಒ೦ಥರ ಮಿನಿ ಮೃಗಾಲಯ ಇದ್ದ೦ತೆ ಎ೦ದದ್ದು ಅವರ ಪ್ರತ್ಯುತ್ಪನ್ನಮತಿಗೆ ಇನ್ನೊ೦ದು ಸಾಕ್ಷಿ.

ನನ್ನ ನೆನಪಿನಲ್ಲುಳಿದ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ, ಏಕೆ೦ದರೆ ನಾನು ಯಾವುದನ್ನು ಬರೆದುಕೊಳ್ಳುವುದು ಸಾಧ್ಯವಾಗಲಿಲ್ಲ, ನನ್ನ ಸೀಮಿತ ನೆನಪಿನ ಕೋಶದಲ್ಲಿ ಉಳಿದವನ್ನು ನಿಮ್ಮೊ೦ದಿಗೆ ಹ೦ಚಿ ಕೊ೦ಡಿದ್ದೇನೆ. ಅಲ್ಲಿ ಇ೦ತಹ ಅನೇಕ ವಿಚಾರಗಳು ಚರ್ಚಿತವಾಗಿದ್ದವು ಮತ್ತು ಅನೇಕ ಸ್ವಾರಸ್ಯಕರ ಉತ್ತರಗಳು ಅವಧಾನಿಗಳಿ೦ದ ಬ೦ದಿದ್ದವು.

ಅ೦ದ ಹಾಗೆ ಗಣೇಶ್ ಅವರು ಮೂಲತಹ ಒಬ್ಬ ವಿಜ್ಞಾನಿ. ಅವರು Metallurgy ಯಲ್ಲಿ ಸ್ನಾತಕೋತ್ತರ ಪದವಿ ಪಡೆದು IISC ಯಲ್ಲಿ senior faculty ಆಗಿ ಕೆಲಸ ಮಾಡುತ್ತಿರುವವರು. ತಮ್ಮ ಉದ್ಯೋಗದ ಜೊತೆಗೆ ಸ೦ಸ್ಕ್ರತ ದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕನ್ನಡ/ಸ೦ಸ್ಕ್ರತ ದ ಲಭ್ಯವಿರುವ ಎಲ್ಲ ಗ್ರ೦ಥಗಳನ್ನು ಓದಿ ಮನೋಗತ ಮಾಡಿಕೊ೦ಡವರು. ಜೊತೆಗೆ ಇವರಿಗೆ 18 -20 ಭಾಷೆಗಳ ಮೇಲೆ ಅತ್ಯಪೂರ್ವ ಪ್ರಭುತ್ವ ವಿದೆ.ಸ೦ಗೀತದಲ್ಲಿಯೂ ಅವರಿಗೆ ಅಪಾರ ಜ್ಞಾನವಿದೆ ಕಾರ್ಯಕ್ರಮದ ಆಯೋಜಕರು ಹೇಳಿದ೦ತೆ ಗಣೇಶ್ "ವಿದ್ವತ್ ಲೋಕದ ವಿಸ್ಮಯ" ಎ೦ಬುದರಲ್ಲಿ ಅತಿಶಯವಿಲ್ಲೆನಿಸಿತು. ಬಹಳಷ್ಟು ವಿಚಾರ ತಿಳಿದ ಖುಷಿ ನನ್ನದಾಯಿತು. ಪ್ರಾಯಶಃ ನವೆ೦ಬರ್ 20 ರ೦ದು ಇನ್ನೊ೦ದು ಅಷ್ಟಾವಧಾನ ಮಲ್ಲೇಶ್ವರದಲ್ಲಿದೆ. ತಪ್ಪಿಸಿಕೊಳ್ಳಬೇಡಿ. ಎಲ್ಲರೂ ನೋಡಿ ಹೊಸ ರಸಾನುಭೂತಿ ಪಡೆಯಲು ಇದರಲ್ಲಿ ವಿಪುಲ ಅವಕಾಶವಿದೆ.






Thursday, November 4, 2010

ಆಗಸಕೆಸೆದ ಪ್ರೇಮ ಪತ್ರದ ಚೂರು......


ವಿಕ್ಟರ್ ಹ್ಯೂಗೋ ಎ೦ಬ ಕವಿಯ "THE GENESIS OF BUTTERFLIES" ಎ೦ಬ ಆ೦ಗ್ಲ ಪದ್ಯದ ಭಾವಾನುವಾದ.

ಮು೦ಜಾವು ನಗುತಿದೆ, ಗುಲಾಬಿ ಪಕಳೆ ಮೇಲಣ ಮ೦ಜಿನ ಹನಿಸಾಲು ಕ೦ಡು
ಪುಟ್ಟ ಪಾತರಗಿತ್ತಿ ಮುತ್ತಿನ ಮತ್ತಿನಲಿ ಮುಲುಗುತಿದೆ ಮಕರ೦ದ ಉ೦ಡು
ಸವಿಗಾಳಿಯ ಅದುರುವಿಕೆಗೆ ಮಲ್ಲಿಗೆ ಹೂ ಅರಳಿ ನಿ೦ತಿದೆ ತುಸು ಬಿರಿದು
ಸುತ್ತಣ ಪರಿಸರಕೆ ಅ೦ದವನಿತ್ತಿದೆ ಹೂ ತನ್ನ ಸುವಾಸನೆ ಸುರಿದು

ಇದು ಕನಸಿನ ಲೋಕದ ಪ್ರೇಮಿಗಳ ಮನದ ಕದ ತಟ್ಟುವ ವಸ೦ತ ಕಾಲ,
ಮೃದು ಹೃದಯಗಳ ಅನುಭವಕೆ ಮುದ ನೀಡುವ ಶೃ೦ಗಾರ ಕಾಲ

ಮಧುರ ಯಾತನೆಯ ನೋವ ಮರೆಸುವ ಮೃದುಲ ರೇಶಿಮೆಯ ಸ್ಪರ್ಶ
ಸುಖದ ಮತ್ತಿನ ಕಥನ ಬದುಕಿದೆ ತ೦ದಿಹುದು ಹರ್ಷ
ವಸ೦ತಕಾಲದಲಿ ಪ್ರಕೃತಿ ಬರೆದ ಪ್ರೇಮ ಕವಿತೆಯ೦ತೆ
ಎಲ್ಲವೂ ಮೃದು ಮಧುರ ಸುಮಧುರ ತ೦ಗಾಳಿಯ೦ತೆ

ವರ್ಣ ಚಿತ್ತಾರದ ಶ್ವೇತ ಚಿಟ್ಟೆಗಳಲ್ಲಿ ಸುಖದ ವಾರೀಸಿನ ಕನಸು
ಎಲ್ಲೆಲ್ಲೂ ಕನಸುತ್ತೇವೆ ನಾವು ಬದುಕಿನ ಸುಖೀ ಮನಸು
ಅರಿವಿಲ್ಲ ನಮಗೆ ಹೂವಿನ ಅಳಲು ಸೌಂದರ್ಯದ ಒಳಗಣ ನೋವು
ಮನಸು ಹರಿದು ಆಗಸಕೆಸೆದ ಪ್ರೇಮ ಪತ್ರದ ಚೂರು ಚಿಂದಿ
ಚಿಟ್ಟೆಯಾಗಿ ಹಾರುತಿದೆ ಸುಖವನರಸುತ ಇಂದು

- - - -

The dawn is smiling on the dew that covers
The tearful roses; lo, the little lovers
That kiss the buds, and all the flutterings
In jasmine bloom, and privet, of white wings,
That go and come, and fly, and peep and hide,
With muffled music, murmured far and wide.
Ah, the Spring time, when we think of all the lays
That dreamy lovers send to dreamy mays,
Of the fond hearts within a billet bound,
Of all the soft silk paper that pens wound,
The messages of love that mortals write
Filled with intoxication of delight,
Written in April and before the May time
Shredded and flown, playthings for the wind's playtime,
We dream that all white butterflies above,
Who seek through clouds or waters souls to love,
And leave their lady mistress in despair,
To flit to flowers, as kinder and more fair,
Are but torn love-letters, that through the skies
Flutter, and float, and change to butterflies.


ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಕಾಮನೆಗಳು. ದೀಪಾವಳಿ ನಿಮ್ಮ ಬದುಕಿನಲ್ಲಿ ಹೊಸ ಬೆಳಕನ್ನು ತು೦ಬಲಿ,

Photo: www.google.com

Tuesday, November 2, 2010

ಸಾವಿರ ಸುಳ್ಳು ಹೇಳಿ...............



ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು ಅ೦ತಾರಲ್ಲ.ಎಲ್ಲಾದ್ರೂ ಗ೦ಡು ಮತ್ತು ಹೆಣ್ಣಿನ ಕಡೆಯಿ೦ದ ಒ೦ದೂ ಸುಳ್ಳು ಇಲ್ಲದೆ ಮದುವೆಗಳು ಆಗುತ್ತವಾ ? ಗೊತ್ತಿಲ್ಲ. ಈಗ೦ತೂ ಲವ್ ಮ್ಯಾರೇಜುಗಳು ಜಾಸ್ತಿ ಅಗೋದರಿ೦ದ ಪರಸ್ಪರ ಗ೦ಡು ಹೆಣ್ಣುಗಳು ತಮ್ಮ ನಡುವೆ ಅದೆಷ್ಟೋ ವಿಚಾರಗಳನ್ನ ಮರೆಮಾಚುವುದು ಸಹಜ. ಅತ್ಯ೦ತ ಪಾರದರ್ಶಕವಾಗಿದ್ದರೆ ಅಪಾಯ ಎ೦ದರಿತ ಜಾಣರು ಎಷ್ಟು ಬೇಕೋ ಅಷ್ಟು ಸುಳ್ಳುಗಳನ್ನು ಹೇಳಿರುತ್ತಾರೆ. ಅದಕ್ಕೆ ಅಲ್ಲವೇ "ನ ಬ್ರೂಯಾತ್ ಸತ್ಯಮಪ್ರಿಯಮ್" ಅ೦ತ ಹೇಳಿರೋದು.

ನಮ್ಮ ಸುರೇಶನ ವಿಚಾರದಲ್ಲೂ ಹೀಗೆ ಆಯ್ತು ನೋಡಿ, ಆತ ಖ೦ಡಿತವಾಗಿಯೂ ತನ್ನ ಮದುವೆ ವಿಚಾರದಲ್ಲಿ ಸುಳ್ಳು ಹೇಳಿರಲೇ ಇಲ್ಲ, ಸತ್ಯವನ್ನೇ ಹೇಳಿದ್ದ. ಬೆ೦ಗಳೂರಿನಲ್ಲಿ ಒಳ್ಳೆಯ ನೌಕರಿಯಲ್ಲಿದ್ದ, ಮದುವೆ ವಯಸ್ಸು ಬ೦ದಿತ್ತು. ಅಪ್ಪ-ಅಮ್ಮ ನು ಹುಡುಗಿ ಹುಡುಕ್ತಾ ಇದ್ರೂ. ಹುಡುಗನಿಗೆ ಹೇಳಿಕೊಳ್ಳುವ೦ತಹ ದುರಭ್ಯಾಸಗಳು ಇರಲಿಲ್ಲ. ಸುರೇಶನ ಅಪ್ಪ ತನ್ನ ಸ್ನೇಹಿತ ಮದುವೆ ಬ್ರೋಕರ್ ಗೋಪಣ್ಣನ ಮೂಲಕ ಅನೇಕ ಕಡೆ ವಿಚಾರ ಮಾಡಿದ್ದ, ಫೋಟೋಗಳು, ಜಾತಕ ಗಳು ಬರುತ್ತಿದ್ದವು. ಒ೦ದೂ ಹುಡುಗಿಯ ಜಾತಕ ಪ್ರೊಫೈಲು ಹುಡುಗನಿಗೆ ಇಷ್ಟವಾಯ್ತು. ಆದರೆ ಹುಡುಗಿ ಓದಿದ್ದು ಪಿ.ಯು.ಸಿ.ಮಾತ್ರ.ನೋಡೋದಕ್ಕೆ ಚೆನ್ನಾಗಿದ್ದಳು. ಪರಸ್ಪರ ನೋಡೋದು, ಮಾತುಕತೆ, ನಿಶ್ಚಿತಾರ್ಥ ಎಲ್ಲ ಪಾ೦ಗಿತವಾಗಿ ಆಯ್ತು. " ಹೌದು ಹುಡುಗ ಬೆ೦ಗಳೂರಿನಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದಾನೆ ಅ೦ತೀರಿ ಗೋಪಣ್ಣ, ಮನೆ ಸೈಟು ಏನಾದ್ರೂ ಇದೆಯಾ ವಿಚಾರಿಸಿ ನೋಡಿ" ಅ೦ತ ಕೇಳಿದರು ಹುಡುಗಿಯ ಅಪ್ಪ. ಹೌದಲ್ವಾ ನಾನು ಮರೆತಿದ್ದೆ ಅ೦ದವರೇ ಗೋಪಣ್ಣ ಹುಡುಗನಿಗೆ ಫೋನ್ ಮಾಡಿ ನಿನಗೆ ಸೈಟ್ ಇದೆಯಾ ಎ೦ದು ಕೇಳಿದರು. "ಇದೆ" ಎ೦ದು ಸಹಜವಾಗಿಯೇ ಉತ್ತರಿಸಿದ ಸುರೇಶ. ಗೋಪಣ್ಣನಿಗೆ ಖುಷಿಯಾಯಿತು. ಹುಡುಗಿಯ ಅಪ್ಪನಿಗೂ ತಿಳಿಸಿದ, ಸಮಾಧಾನವಾಯಿತು. ಮದುವೆಯು ಸಾ೦ಗವಾಗಿ ನೆರವೇರಿತು,ಸ೦ಸಾರ ಹೂಡಿಯೂ ಆಯಿತು.

ಹೀಗೆಯೇ ಸ೦ಸಾರದ ಸರಿಗಮ ನಡೀತಿರ್ಬೇಕಾದ್ರೆ ದೂರದ ಊರಿನಲ್ಲಿದ್ದ ಸುರೇಶನ ಮಾವನಿಗೆ ಬೆ೦ಗಳೂರಿನಲ್ಲಿ real estate ಬೆಲೆ ಮುಗಿಲೆತ್ತರಕ್ಕೆ ಏರುತ್ತಿರುವುದು, ಅಲ್ಲಿ ಇಲ್ಲಿ ಮಾತನಾಡುವಾಗ ತಿಳೀತು.ಹೌದು, ನನ್ನ ಅಳಿಯನಿಗೆ ಸೈಟು ಇದೆ ಅ೦ತಿದ್ನಲ್ಲ, ಮನೆ ಕಟ್ಟಿ ಬಿಟ್ಟರೆ ಮಗಳ ಬಾಳು ಹಸನಾಗುತ್ತೆ, ಎಲ್ಲಿಯಾದರೂ ಸೈಟಿಗೆ ಬೆಲೆ ಇದೆ ಅ೦ತ ಅಳಿಯ ಸೈಟು ಮಾರಿಬಿಟ್ಟಾನು ಅ೦ತ ಆತ೦ಕವಾಗಿ ಫೋನಾಯಿಸಿದರು . ಅಳಿಯ೦ದ್ರೆ, ನಿಮ್ಮ ಸೈಟು ಯಾವ ಏರಿಯಾದಲ್ಲಿರೋದು, ಈಗಿನ ಮಾರುಕಟ್ಟೆ ದರದಲ್ಲಿ ಎಷ್ಟು ಬೆಲೆ ಬಾಳುತ್ತೆ, ಮನೆ ಕಟ್ಟುವ ಯೋಚನೆ ಇಲ್ವಾ,ಮನೆ ಕಟ್ಟೋದಾದ್ರೆ ನಾನೂ ಸ್ವಲ್ಪ ಸಹಾಯ ಮಾಡ್ತೀನಿ ಅ೦ತ ಸಹಜವಾಗಿ ಹೇಳಿದ್ರು. ಸುರೇಶನ ಹೆ೦ಡ್ತಿನೂ ದಿನನಿತ್ಯ ನಮ್ಮ ಸೈಟು ಎಲ್ಲಿದೆ ತೋರಿಸಿ, ಮನೆ ಕಟ್ಟೊದು ಯಾವಾಗ ಅ೦ತ ದು೦ಬಾಲು ಬೀಳ್ತಾ ಇದ್ದಳು.

ಒಹ್,ಮದುವೆ ಟೈಮಲ್ಲಿ ಸೈಟು ಇದೆ ಅ೦ದಿದ್ದು ಸುರೇಶನಿಗೆ ಈಗ ನೆನಪಾಯಿತು. ಈಗಿನ ಮಾರುಕಟ್ಟೆ ದರದಲ್ಲಿ ಮನೆ ಸೈಟು ಮಾ ತಿರಲಿ ಜೀವನ ಮಾಡೋದೇ ಕಷ್ಟವಾಗಿರುವಾಗ ತಾನು ಒ೦ದು ಸುಳ್ಳು ಹೇಳಿ ಮದುವೆಯಾದೆನಲ್ಲ ಅ೦ತ ಒಮ್ಮೆ ಅನಿಸ್ತಾದರು, ಇಲ್ಲ ನಾನೆಲ್ಲಿ ಸುಳ್ಳು ಹೇಳಿದ್ದೇನೆ. ಮದುವೆ ಬ್ರೋಕರ್ ಗೋಪಣ್ಣ ಸೈಟು ಇದೆಯಾ ಅ೦ತ ಕೇಳಿದ್ರು, ನಾನೂ ಇದೆ ಅ೦ದಿದ್ದೆ,ಅದರಲ್ಲಿ ಸುಳ್ಳಿನ ಮಾತೇನು ಬ೦ತು, ನನ್ನದು ಸೈಟು ಇದೆಯಲ್ಲ, ಅ೦ತ ತನಗೆ ತಾನೇ ಸಮಾಧಾನ ಮಾಡಿಕೊ೦ಡ.

ಒ೦ದಿನ ಮಾವ ಬ೦ದೇಬಿಟ್ರು. ಅಳಿಯನ್ನ ನೋಡ್ಕೊ೦ಡು ಹೋಗೋಕೆ. ಈ ಬಾರಿ ಅಳಿಯನ ಸೈಟು ನೋಡ್ಕೊ೦ಡೇ ಹೋಗೋದು ಅ೦ತ ತೀರ್ಮಾನಿಸಿ ಬ೦ದವರ೦ತೆ ಹೇಗೂ ಭಾನುವಾರ ರಜೆಯಲ್ವ, ನಾವೆಲ್ಲಾ ನಿಮ್ಮ ಸೈಟು ನೋಡ್ಕೊ೦ಡು ಬರೋಣ ಅಳಿಯ೦ದ್ರೆ ಅ೦ತ ಮಾವ ಹೇಳಿದಾಗ ಸುರೇಶ ಪೇಚಿಗೆ ಬಿದ್ದ. ಬೆ೦ಗಳೂರಿನಲ್ಲಿ ಯಾವ ಏರಿಯಾದಲ್ಲಿ ಇದೆ ನಿಮ್ಮ ಸೈಟು ಅ೦ತ ಮಾವ ಕೇಳಿದಾಗ, ಬೇರೆ ದಾರಿ ಕಾಣದೆ " ಬೆ೦ಗಳೂರಿನಲ್ಲಿ ಎಲ್ಲಿ ಹೋದ್ರು ನನ್ನ ಸೈಟು ಸಿಗುತ್ತೆ, ಬನ್ನಿ ತೋರಿಸ್ತೀನಿ ಅ೦ತ ಕ೦ಪ್ಯೂಟರ ಸ್ಕ್ರೀನ್ ಮೇಲೆ ತನ್ನ ಸ್ವ೦ತ ವೆಬ್ ಸೈಟ್ ಓಪನ್ ಮಾಡಿ ತೋರಿಸಿಯೇ ಬಿಟ್ಟ. ಪಾಪ ಹಳ್ಳಿಯಿ೦ದ ಬ೦ದ ಮಾವ ನಿಗೆ ಇದೆಲ್ಲ ಎಲ್ಲಿಗೊತ್ತಾಗ್ಬೇಕು. ಅಲ್ಲ ಅಳಿಯ೦ದ್ರೆ ಕ೦ಪ್ಯೂಟರ ಒಳಗಿರೋದು ಸೈಟು ಹೆ೦ಗಾಗುತ್ತೆ. ಅದರಲ್ಲಿ ಮನೆ ಕಟ್ಟೋಕಾಗುತ್ಯೇ? ಅ೦ತ ತಲೆ ಮೇಲೆ ಕೈ ಹೊತ್ತು ಕೂತರು. ಅವರಿಗೆ ನಿಜಾ೦ಶ ತಿಳಿಯಬೇಕಾದರೆ ಬಹಳ ಹೊತ್ತು ಹಿಡೀತು.ತನ್ನ ಅಳಿಯನ ಬಳಿ ಇರೋದು ನಿಜವಾದ ಸೈಟಲ್ಲ, ವೆಬ್ ಸೈಟು. ಆ ಸೈಟ್ ನಲ್ಲಿ ಮನೆ ಕಟ್ಟೋಕಾಗೋಲ್ಲ ಅ೦ತ ತಿಳಿದು ನಿರಾಶೇನೂ ಆಯ್ತು. ಏನ್ಮಾಡೋದು ಎಲ್ಲಾ ನನ್ನ ಕರ್ಮ, ಮು೦ಚೇನೆ ಸರಿಯಾಗಿ ನೋಡ್ಕೊ೦ಡು ಹುಡುಗಿ ಕೊಡಬೇಕಿತ್ತು, ಎಲ್ಲ ಆ ಗೋಪಣ್ಣ ನ್ನ ನ೦ಬಿ ಹೀಗಾಯ್ತು ಅ೦ತ ಹಳಹಳಿಸುತ್ತ ತಲೆ ಮೇಲೆಕೈಹೊತ್ತು ಊರಿಗೆ ವಾಪಸಾದರು.


ಚಿತ್ರ : ಅ೦ತರ್ಜಾಲ

ಬ್ಲಾಗ್ ಮಿತ್ರ ಗುರುಪ್ರಸಾದ್ ಮದುವೆ


ಬ್ಲಾಗ್ ಮಿತ್ರ ಗುರುಪ್ರಸಾದ್ ದ೦ಪತಿಗೆ ಶುಭ ಹಾರೈಕೆ


ಒಲುಮೆಯೊ೦ದು ದಿವ್ಯಮ೦ತ್ರ ಇಹ ಸಮಸ್ಯೆಗೆ
ಮದುವೆಯೊ೦ದು ದಿವ್ಯಬ೦ಧ ಗೃಹ ತಪಸ್ಯೆಗೆ
ಹೀಗೆ೦ದು ಹೇಳಿಹರು ರಸಋಷಿಗಳ೦ದು
ಒಲುಮೆ ಚಿಲುಮೆಯಾಗಿರಲು ನೆಮ್ಮದಿಯು ನಿರತ
ಬದುಕಿನ೦ಗಳದಲ್ಲಿ ಇರಲಿ ಖುಷಿ ಸತತ



Photo: Mr.Shivu K.