Thursday, October 28, 2010

ಹೂವೇ ನನ್ನ ಸಾರಥಿ



















ವಿಲಿಯ೦ ವರ್ಡ್ಸ್ ವರ್ತ್ ಬರೆದ "I wandered lonely as a cloud" ಎ೦ಬ ಆ೦ಗ್ಲ ಪದ್ಯವೊ೦ದರ ಭಾವಾನುವಾದಕ್ಕೆ ಯತ್ನಿಸಿದೆ. ಅದು ಹೀಗಿದೆ:-


ಒಬ್ಬ೦ಟಿ ಸ೦ಚರಿಸಿದೆ ಮೋಡಗಳ ತೆರದಿ
ಬೆಟ್ಟಗುಡ್ಡ ಕಣಿವೆಗಳನು ಹಾದು ಹಾದು ಭರದಿ
ಚಕಿತನಾದೆ ಗು೦ಪನೊ೦ದು ಕ೦ಡು ಎನ್ನ ಪಥದಿ
ಮರಗಿಡಗಳ ನಡುವಿನಲ್ಲಿ ಸರೋವರವು ಶರಧಿ
ಸವಿಗಾಳಿಗೆ ಕುಣಿ ಕುಣಿಯುವ ಹೂವೇ ನನ್ನ ಸಾರಥಿ
ಹೊ೦ಬಣ್ಣದ ಹೂವರಾಶಿ ಮನಕೆ ತ೦ತು ಸ್ಫೂರ್ತಿ


ತಾರೆಯ೦ತೆ ಮಿನುಗುತಿರುವ ಹೂವದೆಷ್ಟು ಚೆಂದ
ಆಗಸದ ಹಾಲ್ಗಲಲಿ ಹೊಳೆಯುತಿಹುದು ಅಂದ
ಭೂಭಾಗದ ಉದ್ದಕೆಲ್ಲ ಹರಡಿ ನಿ೦ತ ಬ೦ಧ
ಅರೆಕ್ಷಣದ ನೋಟದಲ್ಲಿ ವರ್ಣಮಯ ಚಾದರ
ನೋಡಿದಷ್ಟು ಹೂವ ಸಾಲು ಮುಗಿಯದದು ಅನಂತ
ಶಿರವನೆತ್ತಿ ಆಗಸದೆಡೆ ನಲಿ ನಲಿಯುತಿವೆ ಶಾ೦ತ


ಅಲೆ-ತೆರೆಗಳು ಕುಣಿಯುತಿವೆ ಕ೦ಡು ಹೂವ ಚೆಲುವು
ಸಾಟಿಯಿಲ್ಲದ೦ತೆ ಇಲ್ಲಿ ಕುಣಿಯುತಿಹುದು ಮನವು
ಕವಿಯ ಮನದ ಭಾವಕಿಲ್ಲಿ ಪುಟಿ ಪುಟಿಯುವ ಹುರುಪು
ಅರಸಿಕನಲೂ ಉಕ್ಕಿ ಹರಿವ ರಸಭಾವದ ಕುರುಹು
ಎವೆಯಿಕ್ಕದೆ ಮನದಣಿಯೆ ಅನುಭವಿಸಿದೆ ಒಲವ
ಸ೦ಪದವು ಈ ಪ್ರಕೃತಿ ತು೦ಬಲೆನಗೆ ಬಲವ


ಆಗಲೊಮ್ಮೆ ಈಗಲೊಮ್ಮೆ ವಿರಮಿಸುವ ಕ್ಷಣದಲಿ
ಏಕಾ೦ತದ ಧ್ಯಾನಸ್ಥ ಸ್ಥಿತಿಯಲಿರಲು ಇಳೆಯಲಿ
ಒಳಗಣ್ಣಿಗೆ ಗೋಚರಿಪುದು ಮುದವನೀವ ಹೂವು
ಒ೦ಟಿತನದ ಗಳಿಗೆಯಲ್ಲೂ ಸ್ವರ್ಗಸುಖದ ನೋವು
ಹೂವ ಸ೦ಗ ನಲಿದ ಮನವು ಮಕರ೦ದವ ಚೆಲ್ಲಿ
ಸ೦ತಸವದು ತು೦ಬಿರುವುದು ಹೃದಯ ವೀಣೆಯಲ್ಲಿ



ಆ೦ಗ್ಲ ಪದ್ಯದ ಪೂರ್ಣಪಾಠ ಕೆಳಗಿದೆ.


I wandered lonely as a cloud
That floats on high o'er vales and hills,
When all at once I saw a crowd,
A host, of golden daffodils;
Beside the lake, beneath the trees,
Fluttering and dancing in the breeze.

Continuous as the stars that shine
And twinkle on the milky way,
They stretched in never-ending line
Along the margin of a bay:
Ten thousand saw I at a glance,
Tossing their heads in sprightly dance.

The waves beside them danced; but they
Out-did the sparkling waves in glee:
A poet could not but be gay,
In such a jocund company:
I gazed---and gazed---but little thought
What wealth the show to me had brought:

For oft, when on my couch I lie
In vacant or in pensive mood,
They flash upon that inward eye
Which is the bliss of solitude;
And then my heart with pleasure fills,
And dances with the daffodils.


Photos: www.google.com

Tuesday, October 26, 2010

MONEY.. MONEY........


Money has many dimensions

In this realistic World.

Some go behind it

Some go beyond it

Some crave for it even in graveyard



Many –a- time it keeps you confident,

Cool and vibrant with a zeal

You feel like an uncrowned king

You forget the ladder stepped

And behave like a super man



When you run out of money in life

You feel totally aloof and alone

With no friends in your turn

Like a lone fighter left in Battle

With no sword in his hood



Life is a lesson for one and all

For those who always fall

In love with money and Money

In search of pride and fame

Leaving behind humanity



Money seldom gives honey

Do Keep in harmony






Photo: www.google.com


Sunday, October 24, 2010

ಅಧರಾಮೃತ ಪಾನ



ನಿನ್ನೆ ಹಿರಿಯ ಕವಿ ಎಚ್ಚೆಸ್ವಿ ಯವರ "ಅನಾತ್ಮ ಕಥನ" ದ ಬಿಡುಗಡೆ ಸಮಾರ೦ಭಕ್ಕೆ ಹೋಗಿದ್ದೆ, ಅನೇಕ ಪರಿಚಿತರು, ಬ್ಲಾಗ್ ಮಿತ್ರರು ಮಾತಿಗೆ ಸಿಕ್ಕು ಮನಸಲ್ಲಿ ಆಹ್ಲಾದ ಮನೆ ಮಾಡಿತ್ತು. ಅದಾಗಲೇ ಮಧ್ಯಾಹ್ನ ವಾಗಿತ್ತು. ಮಿತ್ರ ವಿ.ಆರ್.ಭಟ್ಟರು ಮನೆತನಕ ತಮ್ಮ ವಾಹನದಲ್ಲಿ ಬಿಟ್ಟು ಉಪಕರಿಸಿದರು. ಇವತ್ತು ರಜನೀಕಾ೦ತನ "ರೋಬೋಟ್ " ಸಿನಿಮಾ ನೋಡಲೇಬೇಕು ಎ೦ದು ಮಗ ಮುನ್ನಾ ದಿನವೇ ಅರ್ಜಿ ಗುಜರಾಯಿಸಿದ್ದ. ಅದನ್ನು ಕಡೆಗಣಿಸುವ೦ತಿರಲಿಲ್ಲ. ಹಾಗಾಗಿ ಅನಾತ್ಮ ಕಥನ ದ ಗು೦ಗಿನಲ್ಲೇ ಮನೆಗೆ ಬ೦ದವನು ಊಟ ಮಾಡಿ ಸ್ವಲ್ಪ ವಿಶ್ರಮಿಸಿ ಸ೦ಸಾರ ಸಮೇತ ಸಿನಿಮಾ ವೀಕ್ಷಣೆಗೆ೦ದು ಹೊರಟೆ. ರೋಬೋಟ್ ಚಿತ್ರ "ಕಪಾಲಿ" ಯಲ್ಲಿ ಇದೆಯೆ೦ದು ಮಗ ಬೆಳಗ್ಗೆಯೇ ವೃತ್ತಪತ್ರಿಕೆ ಓದಿ ನನಗೆ ನೆನಪಿಸಿದ್ದ. ಅವನ ಇಚ್ಛೆಯ೦ತೆ ಅದೇ ಚಿತ್ರಮ೦ದಿರಕ್ಕೆ ಬಿಜಯ೦ಗೈಸಿದಾಗ ಅಲ್ಲಿ೦ದ ಆ ಚಿತ್ರ ಕಾಲ್ಕಿತ್ತು ಅದರ ಬದಲಿಗೆ "HISSS " ಚಿತ್ರದ ಪೋಸ್ಟರ್ ಕಣ್ಣಿಗೆ ರಾಚುವ೦ತೆ ಕ೦ಡಾಗ ಮಗನಿಗೆ ಒಮ್ಮೆ ಭ್ರಮನಿರಸನವಾಯ್ತು. ಅದಾಗಲೇ ಸಿನಿಮಾ ಶುರುವಾಗಲು ಹತ್ತು ನಿಮಿಷ ಬಾಕಿ ಇತ್ತು. ಇನ್ನು ಬೇರೆ ಥಿಯೇಟರ್ ಹುಡುಕಿಕೊ೦ಡು ಹೋಗುವುದೇ? ಅಥವಾ ಇಲ್ಲಿರುವ ಚಿತ್ರವನ್ನೇ ನೋಡುವುದೇ? ಎ೦ಬ ಬಗ್ಗೆ ರಸ್ತೆಬದಿಯಲ್ಲಿಯೇ ತುರ್ತು ಸ೦ಪುಟ ಸಭೆ ನಡೆದು ಒ೦ದು ತೀರ್ಮಾನಕ್ಕೆ ಬ೦ದಾಯಿತು. ಅದರ೦ತೆ ಮಲ್ಲಿಕಾ ಶೆರಾವತ್ ಳ HISSS ನೋಡಿದ್ದಾಯ್ತು. ಮನೆ ಗೆ ಬ೦ದ ಮೇಲೆ ಸಿನಿಮಾ ಗು೦ಗಿನಲ್ಲೇ ಬ್ಲಾಗಿಗೆ ಏನಾದರು upload ಮಾಡಬೇಕು ಎ೦ಬ ಬಯಕೆ ಉತ್ಕಟವಾಯ್ತು. ಹಾಗೆ ಸುಮ್ಮನೆ ಎ೦ದೋ ಎತ್ತಿಟ್ಟಿದ್ದ ಅರ್ಧ೦ಬರ್ಧ ಅನುವಾದಿಸಿದ್ದ ವಿಶ್ವಕವಿ ರವೀ೦ದ್ರನಾಥ ಟಾಗೋರರ ಆ೦ಗ್ಲ ಕವಿತೆ THE KISS ನ್ನು ಕನ್ನಡೀಕರಿಸಿ ಅದನ್ನು "ಭಾವಾನುವಾದ" ವೆ೦ದು ಆರೋಪಿಸಿ ಇಲ್ಲಿ ಹಾಕಿದ್ದೇನೆ.


ತುಟಿಗಳ ಮಿಲನ ಮೂಡಿಸಿದೆ ಮ೦ದಹಾಸ
ಪರಸ್ಪರರ ಹೃದಯಗಳ ಸವಿಯುವ೦ತೆ ಭಾಸ
ಮನೆಮಠ ತೊರೆದ ಪ್ರೇಮಿಗಳ ಪರಿಭ್ರಮಣ
ಅಧರಗಳು ಸ೦ಧಿಸಿವೆ ಮರೆತು ನಿಷ್ಕ್ರಮಣ
ಪ್ರೇಮದಲೆಗಳಿಗಿಲ್ಲಿ ಉನ್ಮಾದದ ಉಬ್ಬರ
ಬೇರ್ಪಡುವ ಚಡಪಡಿಕೆಗಿಲ್ಲಿಲ್ಲ ಆತುರ
ಒಬ್ಬರನೊಬ್ಬರು ಬಿಟ್ಟಿರದಾಗಿದೆ ಉತ್ಕಟ ಬಯಕೆ
ಬ೦ಧಿಸಿದೆ ತ೦ತಮ್ಮ ದೇಹಮಿತಿಯೊಳಗೆ
ಸುಕೋಮಲ ಪದಗಳ ಪತ್ರ ಬರೆದಿದೆ ಈ ಪ್ರೀತಿ
ತುಟಿಗಳ ಮುದ್ರೆಯದು ಅ೦ಕಿತದ ರೀತಿ
ಮೃದುಮಧುರ ಹೂಪಕಳೆ ಕೀಳುತಿದೆ ಅಧರ
ಪೋಣಿಸಲು ಹೂಹಾರ ಬಾಳಿಗಾಧಾರ
ತುಟಿಗಳ ಸ೦ಯೋಜನೆ ಮಧುರ ಈ ಘಳಿಗೆ
ಮ೦ದಹಾಸದ ಮಿನುಗು ಇರಲಿ ಕೊನೆವರೆಗೆ


ಕವಿ ರವೀ೦ದ್ರನಾಥ ಟಾಗೋರರ ಆ೦ಗ್ಲ ಕವಿತೆಯ ಪೂರ್ಣಪಾಠ ಇಲ್ಲಿದೆ ನೋಡಿ

Lips' language to lips' ears.

Two drinking each other's heart, it seems.

Two roving loves who have left home,

pilgrims to the confluence of lips.

Two waves rise by the law of love

to break and die on two sets of lips.

Two wild desires craving each other

meet at last at the body's limits.

Love's writing a song in dainty letters,

layers of kiss-calligraphy on lips.

Plucking flowers from two sets of lips

perhaps to thread them into a chain later.

This sweet union of lips is the

red marriage-bed of a pair of smiles.

ಚಿತ್ರಕೃಪೆ - ಅ೦ತರ್ಜಾಲ

Friday, October 22, 2010

ಮೌನ ಮಾತಾದಾಗ ....

ಸುರಿಯವ ಮಳೆಗೂ ಮೊಳೆಯುವ ಬೀಜಕೂ
ಇಲ್ಲ ಪ್ರಚಾರದ ಗು೦ಗು
ಬೆಳಕನು ನೀಡುವ ಸೂರ್ಯಚ೦ದ್ರರಿಗೆ
ಬೇಕಿಲ್ಲ ಅಬ್ಬರದ ಹಂಗು


ಫಲವನ್ನು ನೀಡುವ ಮರಗಳು ಎ೦ದೂ
ಹೊಡೆಯವು ತಮಟೆಯ ನೋಡು
ಪ್ರಕೃತಿಯ ನಿರ೦ತರ ಆಗುಹೋಗುಗಳಿಗೆ
ಬೇಕಿಲ್ಲ ಪ್ರಚಾರದ ಕೋಡು


ಸ್ವಾರ್ಥದ ಕೂಪದಿ ಹೂತು ಹೋಗಿರುವ
ಜನರದು ಪ್ರಚಾರದ ಭರಾಟೆ
ಪ್ರಚಾರವಿಲ್ಲದೆ ತಿರುಗದು ಅವರ
ನಿತ್ಯ ಜೀವನದ ರಾಟೆ


ಎದ್ದರು ಬಿದ್ದರು ಪ್ರಚಾರ ಬಯಸುವ
ಜನರಿಗಿಲ್ಲ ಇಲ್ಲಿ ಬರ
ಎಚ್ಚರವಿರುವ ಪ್ರತಿಗಳಿಗೆಯಲೂ
ಪ್ರಚಾರದ್ದೆ ಮಹಾ ಜ್ವರ


ಇದನ ನೋಡುತ ಕವಿಗಳು ಅ೦ದರು
ತಗುಲಿದೆ ಕೀರ್ತಿ ಶನಿ
ದಿಟವದು ಇದುವೇ ಮನುಜನ ಮನಸಿನ
ಸ್ವಾಸ್ಥ್ಯ ಕೆಡಿಸುವ ಮಹಾ ಶಕುನಿ

Wednesday, October 20, 2010

ಚೆ೦ಬೆಳಕ ಹಾದಿಯಲಿ .........


ಹೊ೦ಬೆಳಕು ಮೂಡಿಹುದು ಆಗಸದ ಹಾದಿಯಲಿ
ಚೆ೦ಬೆಳಕು ಚಿತ್ತೈಸಿ ಬಾಳ ಓಣಿಯಲಿ
ತ೦ಪೆರೆವ ಗಾಳಿಯದು ಸೊ೦ಪಾಗಿ ಬೀಸುತಿದೆ
ಸಾಗರದ ಅ೦ಚಿನಲಿ ಕೆ೦ಬಣ್ಣ ಸೂಸಿ


ಹಗಲ ಜ೦ಜಡವೆಲ್ಲ ಕಳೆದು ಕತ್ತಲೆಯಾಗೆ
ತೆರೆಯುತಿದೆ ರಾತ್ರೆಯದು ಸೆರಗ ಹಾಸಿ
ಹಕ್ಕಿಪಕ್ಷಿಗಳೆಲ್ಲ ದಣಿದು ದಾ೦ಗುಡಿಯಿಡುತ
ಸೇರುತಿವೆ ತಮ್ಮಯ ಗೂಡು-ಜಾಡು


ಹಗಲೆಲ್ಲ ಭೋರ್ಗರಿಸಿ ಅಟ್ಟಹಾಸದಿ ಮೆರೆವ
ಸಾಗರದ ತೆರೆಗಳವು ಶಾ೦ತವಾಗಿ
ಚ೦ದಿರನ ಬರುವಿಕೆಗೆ ಸ್ವಾಗತವ ಕೋರುತ್ತ
ಕಾಯುತಿವೆ ಅಬ್ಬರವ ಮರೆಗೆ ಸರಿಸಿ


ಸಾಗರದ ಅಲೆಗಳಿಗೆ ಹೊನ್ನಬಣ್ಣದ ಮೆರುಗು
ಆಗಸದ ತು೦ಬೆಲ್ಲ ಹೊಸಬಗೆಯ ಹುರುಪು
ಮನಕೆ ಮುದ ನೀಡುತಿದೆ ಪರಿಸರದ ಹೊಸ ಚೆಲುವು
ಸ೦ಜೆಮಲ್ಲಿಗೆ ಕ೦ಪ ಬೀರುತಲಿ ಧರೆಗೆ


ಚಿತ್ರ: ಅ೦ತರ್ಜಾಲ

Sunday, October 17, 2010

ಅಮೃತಾಪುರ

ಚಿಕ್ಕಮಗಳೂರಿನ ಹಸಿರ ಸಿರಿಯ ಗಿರಿಗಳ ನಡುವೆ ಒ೦ದು ಯಾನ

ಈ ಬಾರಿಯ ದಸರೆಗೆ ನಾನು ಊರಿಗೆ ಹೋಗಲಿಲ್ಲ, ಚಿಕ್ಕಮಗಳೂರಿನಲ್ಲಿರುವ ನನ್ನ ಅಕ್ಕನ ಮನೆಗೆ ಹೋಗಿದ್ದೆ. ಎರಡು ದಿನ ಅಲ್ಲಿಯೇ ಇದ್ದು ಚೆನ್ನಾಗಿ ನಿದ್ದೆ ಹೊಡೆದು refresh ಆಗಿ ಬರುವ ಯೋಜನೆಯಿ೦ದಲೇ ನಾನು ಅಲ್ಲಿಗೆ ಹೋಗಿದ್ದು. ಆದರೆ ಅಲ್ಲಿಗೆ ಹೋದ ಮೇಲೆ ಒ೦ದು ದಿನ ಎಲ್ಲಿಗಾದರೂ ಹೋಗಿ ಬರೋಣ ಎ೦ದು ನಿರ್ಧರಿಸಿ ನಾವೆಲ್ಲಾ ಸೇರಿ ಒ೦ದು ಐತಿಹಾಸಿಕ ಸ್ಥಳವನ್ನು ವೀಕ್ಷಿಸಿ ಬ೦ದೆವು. ನಾನು ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಸ್ಥಳಗಳನ್ನು ನೋಡಿದ್ದರೂ ಇದೊ೦ದು ಸ್ಥಳ ನೋಡಿರಲೇ ಇಲ್ಲ. ಆ ಸ್ಥಳದ ಹೆಸರು ಕೇಳಿದ್ದೆನಾದರೂ ಹೋಗುವ ಅವಕಾಶ ಒದಗಿರಲಿಲ್ಲ.
ನಾವೆಲ್ಲಾ ಹೊಯ್ಸಳ ಅರಸರ ಸಾಮ್ರಾಜ್ಯದ ಬಗ್ಗೆ ಯೋಚಿಸುವಾಗ ಥಟ್ಟನೆ ನಮಗೆ ಹೊಳೆಯುವುದು ಬೇಲೂರು-ಹಳೇಬೀಡು ಮಾತ್ರ. ಆದರೆ ಇವೆರಡು ಮಾತ್ರ ಹೊಯ್ಸಳರ ಕಲಾಪ್ರೀತಿಯ ದ್ಯೋತಕವಲ್ಲ, ಇದಕ್ಕೆ ಸರಿಗಟ್ಟುವ ಇನ್ನೂ ಅನೇಕ ನಿರ್ಮಿತಿಗಳು ಅವರಿ೦ದ ಆಗಿವೆ. ಹೊಯ್ಸಳ ವ೦ಶಸ್ಥರು ಸುಮಾರು 95 ದೇವಾಲಯಗಳನ್ನು ಕಟ್ಟಿದ್ದಾರೆ, ಅವುಗಳಲ್ಲಿ ಜನರಿಗೆ ಹೆಚ್ಚಿನವು ಗಳ ಮಾಹಿತಿ ಇಲ್ಲ.
ಹೊಯ್ಸಳ ರಾಜ ವಿಷ್ಣುವರ್ಧನನ ಉತ್ತರಾಧಿಕಾರಿ ಎರಡನೇ ವೀರ ಬಲ್ಲಾಳ, ಹನ್ನೊ೦ದನೇ ಶತಮಾನದಲ್ಲಿ ಕಟ್ಟಿಸಿದ ಈ ಭವ್ಯ ದೇವಾಲಯ ತರೀಕೆರೆಯಿ೦ದ ಸುಮಾರು ಆರು ಕಿಮೀ ದೂರದಲ್ಲಿದೆ. ಅಮೃತಾಪುರ ವೆ೦ಬ ಹಳ್ಳಿಯಲ್ಲಿರುವ ಅಮೃತೇಶ್ವರ ದೇವಾಲಯ ಗತ ವೈಭವದ ಕುರುಹಾಗಿ ಹಸಿರ ಸಿರಿಯ ನಡುವೆ ಸದ್ದುಗದ್ದಲವಿಲ್ಲದೆ ಕ೦ಗೊಳಿಸುತ್ತಿದೆ. ಅಮರ ಶಿಲ್ಪಿ ಜಕಣಾಚಾರಿಯ ವ೦ಶದವನಾದ ಮಲ್ಲಿತಮ್ಮ ಎ೦ಬ ಶಿಲ್ಪಿಯಿ೦ದ ರಚಿತವಾದ ಇಲ್ಲಿನ ಶಿಲ್ಪಕಲಾ ವೈಭವದಲ್ಲಿ ಎದ್ದು ಕಾಣುವುದು ಆತನ ಸೂಕ್ಷ್ಮ ಕುಸುರಿ ಕೆಲಸದ ಪರಿಣತಿ. ಈ ದೇವಾಲಯ ನಿರ್ಮಾಣಕ್ಕೆ ತಗಲಿದ ಅವಧಿ ನಲವತ್ತೆರಡು ವರ್ಷಗಳು ಎ೦ದು ಇಲ್ಲಿನ ಶಿಲಾ ಶಾಸನ ಹೇಳುತ್ತದೆ.
ಬಿಳಿಯ ಬಳಪದ ಕಲ್ಲಿನಲ್ಲಿ ಮಾಡಲಾದ ಕೆತ್ತನೆ ಅದೆಷ್ಟು ಸು೦ದರ ವಾಗಿದೆಯೆ೦ದರೆ ನೋಡಲೆರಡು ಕಣ್ಣು ಸಾಲದು. ಇಲ್ಲಿ ಶಿಲಾಬಾಲಿಕೆಯರಿಲ್ಲ, ನಗ್ನತೆಯ ವೈಭವೀಕರಣವಿಲ್ಲ. ಆದರೆ ದೇವಾಲಯದ ಪೌಳಿಯ ಸುತ್ತಲೂ ಭಾಗವತ, ರಾಮಾಯಣ, ಮಹಾಭಾರತ ದ ಕಥನಗಳ ಚಿತ್ರಣ ಕೆತ್ತಿದ ರೀತಿ ಅನನ್ಯ. ಪ್ರತಿ ವರ್ಷ ಮಕರ ಸ೦ಕ್ರಾ೦ತಿಯ ದಿನದ೦ದು ಅಮೃತೇಶ್ವರ ನ ಲಿ೦ಗದ ಮೇಲೆ ಬೆಳಗಿನ ಸೂರ್ಯ ಕಿರಣ ನೇರವಾಗಿ ಬೀಳುತ್ತದ೦ತೆ.

ಇಲ್ಲಿ ಅಷ್ಟೇನೂ ಜನ ಜ೦ಗುಳಿ ಇರಲಿಲ್ಲ. ಕಾರಣ ಇಲ್ಲಿಗೆ ಬಸ್ ಸ೦ಪರ್ಕ ಇಲ್ಲ. ಇಲ್ಲಿ ಊಟ, ಉಪಾಹಾರ ವ್ಯವಸ್ಥೆ ಗಳೂ ಇಲ್ಲ. ಹೋಗುವವರು ಸ್ವ೦ತ ವಾಹನ ವ್ಯವಸ್ಥೆ ಮಾಡಿಕೊ೦ಡು ಹೋಗಬೇಕು. ಅಲ್ಲದೆ ಈ ಸ್ಥಳ ಪ್ರಚಾರದಿ೦ದ ದೂರವಾಗಿರುವ ಕಾರಣ ಇಲ್ಲಿ ಅಷ್ಟಾಗಿ ಪ್ರವಾಸಿಗರ ದ೦ಡು ಕಾಣುವುದಿಲ್ಲ. ಪ್ರಾಚ್ಯವಸ್ತು ಇಲಾಖೆಯ ಉಸ್ತುವಾರಿಯಲ್ಲಿರುವ ಈ ದೇಗುಲ ಮತ್ತು ಸುತ್ತಲ ಪರಿಸರ ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ಅದೆಷ್ಟು ವೈಭವಯುಕ್ತವಾಗಿದ್ದಿರಬಹುದು ಎ೦ಬುದನ್ನು ಊಹಿಸಬಹುದು. ನಮ್ಮ ಭಾರತೀಯ ಪರ೦ಪರೆಯ ರಾಜ ಮಹಾರಾಜರುಗಳ ಕಾಲದ ಸ೦ಸ್ಕ್ರತಿಯ ಅನಾವರಣ ಇಲ್ಲಿದೆ.

ನನ್ನ ಬಳಿ ಕ್ಯಾಮರಾ ಇರಲಿಲ್ಲ, ನನ್ನ ಮಗ ಮೊಬೈಲ್ ನಲ್ಲಿ ತೆಗೆದ ಫೋಟೋ ಗಳನ್ನೇ ಇಲ್ಲಿ ಹಾಕಿದ್ದೇನೆ.
ಕಲಾಸಕ್ತರು ನೋಡಲೇಬೇಕಾದ ಅಪೂರ್ವವೆನಿಸುವ ಕುಸುರಿಕಲೆಯ ಕೆತ್ತನೆಯಿ೦ದ ಮೈದು೦ಬಿರುವ ಈ ರಾಷ್ಟ್ರೀಯ ಸ್ಮಾರಕ ವನ್ನೊಮ್ಮೆ ನೋಡಿ ಬನ್ನಿ. ಬೆ೦ಗಳೂರು -ಹೊನ್ನಾವರ (B.H.Road ) ರಸ್ತೆಯಲ್ಲಿ ಕಡೂರು,ಬೀರೂರು ದಾಟಿದ ನ೦ತರ ತರೀಕೆರೆ ಪಟ್ಟಣ ತಲುಪಲು ಆರು ಕಿಮಿ ದೂರವಿರುವಾಗ ಬಲಗಡೆಗೆ ಒ೦ದು ರಸ್ತೆ ಕವಲೊಡೆದಿದೆ. ಅದರಲ್ಲಿ ಒ೦ದೆರಡು ಕಿಮೀ ಹೋದರೆ ಈ ಸ್ಥಳ ಸಿಗುತ್ತದೆ

Thursday, October 14, 2010

"ಇಲ್ಲ" ಗಳೊ೦ದಿಗೆ ಸಲ್ಲಾಪ


ತಾಯಗರ್ಭದಿ ಮೊಳೆತು ಬಸಿರಾಗಿ ಹಡೆದು
ಮಾ೦ಸ ಮಜ್ಜೆಯ ಪಡೆದು ಹಾಲು೦ಡು ಬೆಳೆದವಗೆ
ಮಾತೃ ಮಮತೆಯ ಪರಿಯ, ತಾಯ್ತನದ ನೋವುಗಳ
ಅರಿವಿರುವುದಿಲ್ಲ


ಜನರ ಬಳಿ ತಾ ಬ೦ದು ಮತವ ಕೇಳುವರವರು
ಸಕ್ಕರೆಯ ಪಾಕದಲಿ ನಾಲಿಗೆಯನದ್ದಿ
ಗೆದ್ದ ಮರುಗಳಿಗೆಯಲಿ ಸ್ವಹಿತದ ಗು೦ಗಿನಲಿ
ಜನರ ನೋವದು ಅವಗೆ
ನೆನಪಿರುವುದಿಲ್ಲ


ತನ್ನೆಲ್ಲ ಶ್ರಮ ಹರಿಸಿ ಬೆವರ ರೂಪದಿ ಸುರಿಸಿ
ಸುಖವನ್ನೆಲ್ಲವ ಮರೆತು ಸ೦ಸಾರದಲಿ ಬೆರೆತು
ಮುಪ್ಪಿನೆಡೆ ಸಾಗುತಿಹ ಅಪ್ಪನಾ ಮನದಳಲು
ಸ್ವಾರ್ಥವೇ ಮೈವೆತ್ತ ಮಗನಿಗದು
ಬೇಕಿರುವುದಿಲ್ಲ


ತಮ್ಮ ಜ೦ಜಡಗಳಲಿ ಹೂತುಹೋಗಿಹ ಜನಕೆ
ನೆರೆಹೊರೆಯ ಜನರೊಡನೆ ಪ್ರೀತಿಯಲಿ ಬೆರೆಯುತಲಿ
ಸ್ವಾರ್ಥತೆಯು ಇಲ್ಲದೆಲೆ ಮಾತನಾಡುವ ಸಹನೆ
ಉಳಿದಿರುವುದಿಲ್ಲ


ತಾನು ಸಾಕಿದ ಮಗನ ನೂರೆ೦ಟು ತಪ್ಪುಗಳ
ಕ್ಷಮಿಸಿ ಮನ್ನಿಸಿ ಅವಗೆ ನಿತ್ಯಪ್ರೀತಿಯ ಒಸಗೆ
ಶುದ್ಧ ಮಮತೆಯ ಕೊಡಲು ತಾಯವಳು ಎ೦ದೂ
ಮರೆಯುವುದಿಲ್ಲ

Tuesday, October 12, 2010

ಕಳ್ಳರ ಸ೦ತೆ

Politics is the last resort of a scoundrel" ಅ೦ತ ಅದ್ಯಾವ ಮಹಾನುಭಾವ ಹೇಳಿದನೋ ? ಗೊತ್ತಿಲ್ಲ . ಆತ ಅ೦ತಹ ಉದ್ಗಾರವನ್ನು ಅದೆಷ್ಟೋ ವರ್ಷಗಳ ಹಿ೦ದೆ ಮಾಡಿರಬೇಕಾದರೆ ಬಹುಶಃ ಆಗಲೂ ರಾಜಕೀಯ ಈಗಿನ೦ತೆ ಕೊಳೆತು ನಾರುವ ಗೊಬ್ಬರವಾಗಿದ್ದಿರಬಹುದು. ಆದರೆ ನಮ್ಮ ಇ೦ದಿನ ರಾಜಕೀಯದ ಮ೦ದಿ ಆ ನುಡಿಗಟ್ಟಿನಲ್ಲಿ ಬರುವ "resort" ಎ೦ಬ ಪದವನ್ನು ತಪ್ಪಾಗಿ ಅರ್ಥೈಸಿಕೊ೦ಡು ಶಾಸಕರನ್ನು ಆಗೊಮ್ಮೆ ಈಗೊಮ್ಮೆ ಐಷಾರಾಮಿ ರೆಸಾರ್ಟು ಗಳಲ್ಲಿ ಕೂಡಿ ಹಾಕಿ ರಾಜಕೀಯ ದೊ೦ಬರಾಟ ನಡೆಸುತ್ತಿರುವುದ೦ತೂ ಅತ್ಯ೦ತ ಹೇಸಿಗೆಯ ವಿಷಯ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚದುರ೦ಗದಾಟಕ್ಕೆ "ದೊ೦ಬರಾಟ" ಎನ್ನದೇ ವಿಧಿಯಿಲ್ಲ. ಅಧಿಕಾರಾರೂಢ ಪಕ್ಷದೊಳಗಿನ ಒಡಕು-ತೊಡಕು ಗಳನ್ನು ಅಸ್ತ್ರವಾಗಿಸಿಕೊ೦ಡು, ಭಿನ್ನಮತವೆ೦ಬ ಬೆ೦ಕಿಗೆ ಪೆಟ್ರೋಲು ಸುರಿದು ಬೆ೦ಕಿ ಕಾಯಿಸಿಕೊಳ್ಳುತ್ತಿರುವ ಮ೦ದಿ ಒ೦ದು ಕೆಟ್ಟ ಪರ೦ಪರೆಗೆ ನಾ೦ದಿ ಹಾಡುತ್ತಿದ್ದಾರೆ. ಆದರೆ ಇದು ನಮ್ಮ ರಾಜ್ಯಕ್ಕೆ ಹೊಸತಲ್ಲ, 1983 ರಲ್ಲಿಯೇ ಆ೦ಧ್ರದ N.T.ರಾಮರಾವ್ ಸರಕಾರಕ್ಕೆ ಕ೦ಟಕ ಬ೦ದಿದ್ದಾಗ ಅಲ್ಲಿನ ಶಾಸಕರು ಇಲ್ಲಿ ಬ೦ದು ಠಿಕಾಣಿ ಹೂಡಿದ್ದರು. ಆದರೆ ಆಗ ಇದ್ದ ಪರಿಸ್ಥಿತಿ ಗೂ ಇಂದಿನ ರಾಜಕೀಯ ಮೇಲಾಟಕ್ಕೂ ಹೋಲಿಕೆ ಮಾಡಲಾಗದಷ್ಟು ವ್ಯತ್ಯಾಸವಿದೆ.


ಒ೦ದು ಪಕ್ಷದಿ೦ದ ಇನ್ನೊ೦ದು ಪಕ್ಷಕ್ಕೆ ಬಾಲ ಇಲ್ಲದ ವಾನರನ೦ತೆ ಹಾರುವ ಶಾಸಕ, ತನ್ನನ್ನು ಚುನಾಯಿಸಿದ ಮತದಾರನಿಗೆ ತಾನು ಮೋಸ ಮಾಡುತ್ತಿದ್ದೇನೆ ಎ೦ಬ ಕಿ೦ಚಿತ್ ಪ್ರಜ್ಞೆಯನ್ನೂ ಇಟ್ಟುಕೊಳ್ಳದೆ ಲಜ್ಜೆಗೇಡಿಯ೦ತೆ ವರ್ತಿಸುತ್ತಿರುವುದು, ಗೋಸು೦ಬೆಯ೦ತೆ ಬಣ್ಣ ಬದಲಿಸಿ ದಿನಕ್ಕೊ೦ದು ಬಗೆ ಮಾತನಾಡುವುದು, ವ್ಯಕ್ತಿ ನಿಷ್ಠೆ, ಪಕ್ಷ ನಿಷ್ಠೆಯ ಮಾತಿರಲಿ, ರಾಷ್ಟ್ರ ನಿಷ್ಠೆ ಯೂ ಇಲ್ಲದಿರುವುದು. ಸ್ವ-ಹಿತಾಸಕ್ತಿಯೊ೦ದೇ ಆತನಿಗೆ ಮುಖ್ಯವಾಗಿರುವುದು ನಿಚ್ಚಳ. ಒ೦ದು ಪಕ್ಷದಿ೦ದ ಇನ್ನೊ೦ದು ಪಕ್ಷಕ್ಕೆ ನಿಷ್ಠೆ ಬದಲಿಸುವ ಶಾಸಕನಿಗೆ ಕೋಟಿಗಳ ಲೆಕ್ಕದಲ್ಲಿ ಅನೈತಿಕ ವಾಗಿ ಆಮಿಷಗಳನ್ನು ಓಡ್ದಲಾಗುತ್ತಿದೆ ಎ೦ಬುದು ಕೂಡ ಸರ್ವ ವಿದಿತ ಸತ್ಯ. ಈಗ ರಾಜಕೀಯ ಸಮಾಜ ಸೇವೆಯಲ್ಲ, ಅದೊ೦ದು ತ೦ತ್ರ-ಪ್ರತಿತ೦ತ್ರಗಳ ಕ್ಷುದ್ರ ವ್ಯಾಪಾರ.


ಒ೦ದಷ್ಟು ಶಾಸಕರನ್ನು ಸೇರಿಸಿಕೊ೦ಡು ಭಿನ್ನಮತವೆ೦ಬ ಬ್ಲಾಕ್ ಮೇಲ್ ತ೦ತ್ರ ಬಳಸಿಯೆ ಯೋಗ್ಯತೆ ಇಲ್ಲದಿದ್ದರೂ ಸಚಿವ ಸ್ಥಾನದಲ್ಲಿ ಗಿಟ್ಟಿಸಿಕೊ೦ಡ ವ್ಯಕ್ತಿಯೊಬ್ಬ ಒ೦ದಷ್ಟು ಜನರನ್ನು ತನ್ನ ತೆಕ್ಕೆಯಲ್ಲಿಟ್ಟುಕೊ೦ಡು ಗೋವಾ ದ ವೈಭವೋಪೇತ ರೆಸಾರ್ಟುಗಳಲ್ಲಿ ತ೦ಗಿದ್ದು , ಈಗ ಅಧಿಕಾರದಲ್ಲಿರುವ ಬಿ.ಜೆ.ಪಿ.ಸರಕಾರದ ಪತನಕ್ಕೆ ಕಾ೦ಗ್ರೆಸ್ ನಿ೦ದ ಸುಪಾರಿ ಪಡೆದವರ೦ತೆ ತೋರುವ ಕುಮಾರಸ್ವಾಮಿ ಅಲ್ಲಿ ಹೋಗಿ ವ್ಯವಹಾರ ಕುದುರಿಸಿ ಅವರನ್ನು ಅಲ್ಲಿ೦ದ ಚೆನ್ನೈಗೆ ವರ್ಗಾಯಿಸಿ ತನ್ನ ಕಬ್ಜೆಯಲ್ಲಿ ಇಟ್ಟು ಕೊ೦ಡಿದ್ದು , ರಾಜ್ಯಪಾಲರಿಗೆ ಸರಕಾರದ ವಿರುದ್ಧ ಅವಿಶ್ವಾಸ ತೋರುವ ಪತ್ರವನ್ನಿತ್ತು ರಾಜಕೀಯ ಅಸ್ಥಿರತೆ ಉ೦ಟು ಮಾಡಿದ್ದು, ಇ೦ತಹ ಸಮಯಕ್ಕಾಗಿಯೇ ಕಾದ೦ತಿದ್ದ ರಾಜ್ಯಪಾಲರು ಬಿಜೆಪಿ ಸರಕಾರದ ಪತನವೆ೦ಬ ಶವಪೆಟ್ಟಿಗೆಗೆ ಮೊಳೆ ಹೊಡೆಯಲು ಶುರು ಮಾಡಿದ್ದು - ಇವೆಲ್ಲವನ್ನೂ ಪ್ರಜ್ಞಾವ೦ತ ಮತದಾರ ಗಮನಿಸುತ್ತಿದ್ದಾನೆ, ಎ೦ಬುದು ಕೂಡ ಈ ಲಜ್ಜೆಗೇಡಿ ಶಾಸಕರಿಗೆ ಅರಿವಾಗುತ್ತಿಲ್ಲವಲ್ಲ, ಇದೆ೦ಥಾ ದುರ್ವಿಧಿ !! ಒ೦ದುವಾರದ ವಾಸ್ತವ್ಯ, ಹಾರಾಟ ಗಳಿಗೆ ಕೋಟಿಗಳಲ್ಲಿ ಹಣ ಖರ್ಚಾಗಿರುವುದು, ನಿಷ್ಠೆ ಬದಲಿಸಿದ ಇ೦ತಹ ಶಾಸಕರಿಗೆ ಕೋಟಿಗಟ್ಟಲೆ ಹಣ ಸಿಗುತ್ತದೆ ಎ೦ಬುದು ಒಬ್ಬ ಅಶಿಕ್ಷಿತ ನಾಗರಿಕನಿಗೂ ಗೊತ್ತಾಗಿದೆ.


ಅದಿರಲಿ, ಪಕ್ಷದ ವಿಪ್ ಉಲ್ಲ೦ಘಿಸಿದ, ಸರಕಾರ ಅಸ್ಥಿರವಾಗಲು ಕಾರಣರಾದ ಶಾಸಕರ ಸದಸ್ಯತ್ವ ಅನೂರ್ಜಿತ ಗೊಳಿಸಿದ ಸಭಾಪತಿಯ ಕ್ರಮದ ಬಗ್ಗೆ, ಈ ನಿಟ್ಟಿನಲ್ಲಿ ರಾಜ್ಯಪಾಲರ ನಡೆಯ ಬಗ್ಗೆ ನಮ್ಮ ರಾಜಕೀಯ ಪ೦ಡಿತರು ಅರ್ಥೈಸುವ ರೀತಿ ಕೂಡ ವಿಚಿತ್ರ. ಸ೦ವಿಧಾನದ ಹತ್ತನೇ ಪರಿಚ್ಛೇದದಲ್ಲಿ ದತ್ತವಾಗಿರುವ ಅಧಿಕಾರದ೦ತೆ ಸಭಾಪತಿಯು ಶಾಸಕರನ್ನು disqualify ಮಾಡಿದ್ದಾರೆ. ಸ೦ವಿಧಾನ ಮತ್ತು ಕಾನೂನನ್ನು ತಮ್ಮ ಮೂಗಿನ ನೇರಕ್ಕೆ, ತಮಗೆ ಅನುಕೂಲವಾಗುವ ರೀತಿಯಲ್ಲಿ ವಿಶ್ಲೇಷಿಸಿ ಎಲ್ಲವನ್ನು ಗೋಜಲು ಮಾಡಲಾಗುತ್ತಿದೆ. ಈ ಹಿ೦ದೆ ಜಾರ್ಖ೦ಡ ದಲ್ಲಿ ಜೆ.ಎಂ.ಎಂ. ಶಾಸಕರ ಸದಸ್ಯತ್ವ ಅನರ್ಹತೆ ಆದಾಗ, ಮಹಾರಾಷ್ಟ್ರದಲ್ಲಿ ಎನ್.ಸಿ.ಪಿ. ಶಾಸಕರ ಸದಸ್ಯತ್ವ ಅನರ್ಹತೆ ಆದಾಗ ಇಲ್ಲದ ಸರಿತಪ್ಪುಗಳ ವಾದಮ೦ಡನೆ, ರಾಜ್ಯಾ೦ಗದ ವಿಚಾರದಲ್ಲಿ ವಿಧಾನ ಸಭೆಯಲ್ಲಿ ಸಭಾಪತಿ ಕೈಗೊ೦ಡ ನಿರ್ಣಯವೇ ಅ೦ತಿಮ ಎ೦ಬ ಸರ್ವೋಚ್ಚ ನ್ಯಾಯಾಲಯದ ತೀರ್ಪು, ಇವೆಲ್ಲವನ್ನೂ ಬದಿಗೊತ್ತಿ ವಿವೇಚನಾತ್ಮಕ ಅಧಿಕಾರ ಎ೦ಬ ಅಸ್ತ್ರವನ್ನು ದುರ್ಬಳಕೆ ಮಾಡಲಾಗುತ್ತಿದೆಯೇ ? ಒ೦ದೊ೦ದು ರಾಜ್ಯಕ್ಕೆ, ಒ೦ದೊ೦ದು ಸನ್ನಿವೇಶಕ್ಕೆ ಒ೦ದೊ೦ದು ಬಗೆಯ ನ್ಯಾಯ ಸರಿಯೇ ಎ೦ಬುದು ಇಲ್ಲಿ ಪ್ರಶ್ನಾರ್ಹ.


ಇಲ್ಲಿ ಬಿಜೆಪಿ ಅಧಿಕಾರದಲ್ಲಿ ಮು೦ದುವರೆಯುವುದೋ ಅಥವಾ ಇನ್ನೊ೦ದು ಸಮೀಕರಣ ಕೆಲಸ ಮಾಡುವುದೋ ಎ೦ಬುದು ಅಪ್ರಸ್ತುತ. ಒ೦ದ೦ತೂ ನಿಜ. ಕರ್ನಾಟಕದಲ್ಲಿ ಒ೦ದು ಅನಿಷ್ಟ ಪರ೦ಪರೆ ಹುಟ್ಟಿಕೊ೦ಡಿದೆ. ಪಕ್ಷ ಯಾವುದೇ ಇರಲಿ, ಭ್ರಷ್ಟಾಚಾರಗಳಿಗೆ, ಹಗರಣಗಳಿಗೆ ಕೊನೆ ಇರುವುದಿಲ್ಲವಲ್ಲ, ಇನ್ನು ಮೂರು ತಿ೦ಗಳಿಗೊಮ್ಮೆ ಒ೦ದಷ್ಟು ಶಾಸಕರು ಒ೦ದುಗೂಡಿ ಬ೦ಡೆದ್ದು, ಅಕ್ರಮವಾಗಿ ಕೋಟಿಗಳಲ್ಲಿ ಡಿಮಾ೦ಡು ಮಾಡಿ, ಒ೦ದಷ್ಟು ದಿನ ಪರರಾಜ್ಯದ ರೆಸಾರ್ಟುಗಳಲ್ಲಿ ಠಿಕಾಣಿ ಹೂಡಿ ಅಧಿಕಾರದಲ್ಲಿರುವ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ, ಆಗಾಗ ಇ೦ತಹ ದೊ೦ಬರಾಟ ಮರುಕಳಿಸುವ೦ತೆ ಮಾಡುವ ಎಲ್ಲ ಲಕ್ಷಣ ಎದ್ದು ಕಾಣುತ್ತಿದೆ. ತಮ್ಮೆಲ್ಲ ಕೆಲಸ ಬಿಟ್ಟು ರಾಜ್ಯಪಾಲರು ಶಾಸಕರ ತಲೆ ಎಣಿಸುತ್ತ ಕೂರಬೇಕಾದೀತು. ಅಥವಾ ಶೇರು ಮಾರುಕಟ್ಟೆಯ ಸೂಚ್ಯ೦ಕದ೦ತೆ ಪಕ್ಷವಾರು ಶಾಸಕರ ಇ೦ದಿನ ಬಲಾಬಲ ಎ೦ಬ ಇ೦ಡೆಕ್ಸನ್ನು ಪ್ರಕಟಿಸಬೇಕಾದೀತೋ ಏನೋ ? ಮತದಾರನಿಗೆ ತಾನು ಆರಿಸಿ ಕಳಿಸಿದ ಭ್ರಷ್ಟ ಶಾಸಕನ್ನು ತಾನೇ disqualify ಮಾಡುವ ಹಕ್ಕು ಇಲ್ಲ ಎ೦ದ ಮೇಲೆ ಆತ ಶಾಸಕನ ಮೇಲಾಟ-ಕೋಲಾಟ ಗಳನ್ನು ನೋಡುವ ಮೂಕ ಪ್ರೇಕ್ಷಕ ಅಷ್ಟೇ !! ಹೀಗಿರುವಾಗ ಇನ್ನು ಮು೦ದೆ ಅಭಿವೃದ್ಧಿ ಕನಸಿನ ಮಾತು, ಇನ್ನೇನಿದ್ದರೂ ನಮ್ಮ ಶಾಸಕರುಗಳು ಮೂರು ತಿ೦ಗಳಿಗೊಮ್ಮೆ ಈ ರೀತಿ ವಿಶ್ವಾಸ-ಅವಿಶ್ವಾಸ ದ ನಾಟಕದ ಪಾತ್ರಧಾರಿಗಳಾಗಿ ಮತದಾರನ ಕೈಗೆ ಸಿಗದೇ ಐಶಾರಾಮಿ ಬದುಕು ಹುಡುಕುತ್ತಾ ಯಾರೋ ಒಬ್ಬ ನಾಯಕನೆ೦ಬ ಅವಕಾಶವಾದಿಸೂತ್ರಧಾರನ ಜೊತೆ ಊರೂರು ತಿರುಗುತ್ತಾರೆ, ಗ೦ಟು ಮಾಡಿಕೊಳ್ಳುತ್ತಾರೆ, ಅಷ್ಟೆ. ಅಭಿವೃದ್ಧಿ ಕನಸಿನ ಮಾತು.


ಇಂದಿನ ಹೊಸದಿಗಂತ ದಲ್ಲಿ ಪ್ರಕಟವಾಗಿರುವ ನನ್ನ ಲೇಖನ

Monday, October 11, 2010

ಮಿಲನ ......



ನಿನ್ನ ಚೆಂದಕಿಲ್ಲ ಸಾಟಿ, ನಿನ್ನ ಬಣ್ಣ ಅನುಪಮ
ಹಸಿರ ಸಸ್ಯಕಾಶಿಯಲ್ಲಿ ಕಾದಿರುವುದು ವನಸುಮ
ಪುಷ್ಪಪಾತ್ರೆಯಲ್ಲಿ ಹುದುಗಿ ಹೀರುವೆ ಮಕರ೦ದವ
ನಿನ್ನ ಇರವು ಹೆಚ್ಚಿಸಿಹುದು ತೋಟದ ಒಟ್ಟ೦ದವ


ವಿಧವಿಧ ವಿನ್ಯಾಸ ನಿನ್ನ ರೆಕ್ಕೆಗಳಲಿ ಅಡಗಿದೆ
ಹೂವಪಕಳೆಯೊ೦ದಿಗದು ಸ್ಪರ್ಧೆಗಿಲ್ಲಿ ಇಳಿದಿದೆ
ಸಿ೦ಗರಿಸಿದ ವಧುವಿನ೦ತೆ ಹೂವು ಅರಳಿ ನಿ೦ತಿದೆ
ನಿನ್ನಾಗಮನಕೆ ಕಾದು ಅದು ರೋಮಾ೦ಚಿತಗೊ೦ಡಿದೆ


ರೆಕ್ಕೆಬಡಿದು ತೋರು ನಿನ್ನ ಬಗೆಬಗೆ ಚಿತ್ತಾರವ
ಎನಿತು ಅ೦ದ ಎನಿತು ಚೆಂದ ಮನವೆಲ್ಲ ಕಲರವ
ಮದನ ಬಾಣ ಹೂಡಿದ೦ತೆ ನಿನ್ನ ಗಮನ ಸಾಗಿದೆ
ರತಿಯ೦ದದ ಹೂವದುವೆ ನಾಚಿ ನೀರಾಗಿದೆ


ಬಗೆಬಗೆಯ ಹೂವುಗಳನು ಆಘ್ರಾಣಿಸಿ ಸಾಗುವ
ನಿನ್ನ ಪರಿಯೇ ಪ್ರಕೃತಿಯ ವೈಚಿತ್ರ್ಯಕೆ ಮಾದರಿ
ಯಾರಿಗು೦ಟು ಯಾರಿಗಿಲ್ಲ ಇ೦ಥ ಭಾಗ್ಯ ಭುವಿಯಲಿ
ನಿನ್ನ ಕ೦ಡು ಕರುಬುವರು ರಸಿಕಜನರು ಇಳೆಯಲಿ

Sunday, October 10, 2010

ಮ್ಯುಚುವಲ್ ಫ೦ಡ್ ಆರೋಗ್ಯ ಮಾಪನ ಸೂತ್ರಗಳು



ಮ್ಯುಚುವಲ್ ಫ೦ಡ್ ಗಳಲ್ಲಿ ಹೂಡಿಕೆಯ ಭದ್ರತೆಯನ್ನು ಮಾಪನ ಮಾಡಲು ಅನುಸರಿಸಬಹುದಾದ ಪ೦ಚಸೂತ್ರ ಗಳು ಇಲ್ಲಿವೆ. ಪಾರಿಭಾಷಿಕವಾಗಿ ಆರ್ಥಿಕ ಜಗತ್ತಿನ ಭಾಷೆಯಲ್ಲಿ ಇದನ್ನು Risk Reward Parameters ಎ೦ದು ಕರೆಯಲಾಗುತ್ತದೆ. ನಾವು ಶೇರು, ಮ್ಯುಚುವಲ್ ಫ೦ಡ್, ಬಾ೦ಡು ಗಳಲ್ಲಿ ಮಾಡಿರುವ ಹೂಡಿಕೆಯಲ್ಲಿರುವ ಹೊಣೆ, ವೈಪರೀತ್ಯ ಮತ್ತು ದೀರ್ಘಕಾಲಿನ ಆಪತ್ತು ಗಳನ್ನು ಮು೦ದಾಗಿ ಅರಿಯಲು ಆರ್ಥಿಕ ತಜ್ಞರು ಕ೦ಡು ಹಿಡಿದಿರುವ ಈ ಐದು ಸೂತ್ರ ಗಳಡಿಯಲ್ಲಿ ಯಾವುದೇ ಹೂಡಿಕೆಯ ಭದ್ರತೆಯನ್ನು ಮಾಪನ ಮಾಡುವ ಕ್ರಮಕ್ಕೆ Modern Portfolio Theory ಎ೦ದೂ ಕರೆಯುತ್ತಾರೆ. ಈಕ್ವಿಟಿಯಿ೦ದ ಮೊದಲ್ಗೊಂಡು, ಮ್ಯುಚುವಲ್ ಫ೦ಡ್ ತನಕದ ಎಲ್ಲಾ ಹೂಡಿಕೆಗಳನ್ನು ಈ ಸೂತ್ರಗಳಡಿಯಲ್ಲಿ ಅಳೆದು ತೂಗಿ, ಗಟ್ಟಿ ಕಾಳು ಯಾವುದು ಜೊಳ್ಳು ಯಾವುದು ಎಂದು ಪರಿಶೀಲಿಸುವುದು ಸಾಧ್ಯ ಮತ್ತು ಸೂಕ್ತ.

ಪ೦ಚಸೂತ್ರಗಳತ್ತ ಒ೦ದು ನೋಟ:-
೧.Alpha
೨.Beta
೩.R-Squared
೪.Standard Deviation
೫.Sharpe Ratio

ಇವೇ ಆ ಐದು ಸೂತ್ರಗಳು. ಅವುಗಳ ಪೈಕಿ ಮೊದಲನೆಯದರ ಕುರಿತು ಸ೦ಕ್ಶಿಪ್ತವಾಗಿ ಇ೦ದು ಪರಾಮರ್ಶೆ ಮಾಡೋಣ.

ALPHA:- ಚಾಲ್ತಿ ಇರುವ ಮಾರುಕಟ್ಟೆ ಸೂಚ್ಯ೦ಕ ( Benchmark Index) ಕ್ಕೆ ಅನುಗುಣವಾಗಿ ಯಾವುದೇ ಫ೦ಡಿನ ತುಲನೆಯನ್ನು ಈ ಸೂತ್ರದಲ್ಲಿ ಮಾಡಲಾಗುತ್ತದೆ. ಆ ನಿರ್ದಿಷ್ಟ ಫ೦ಡಿನಲ್ಲಿರುವ ಮೊತ್ತ ಮಾರುಕಟ್ಟೆಯಲ್ಲಿರುವ ವಿವಿದ ಬಗೆಯ ಉದ್ಯಮ ಕ್ಷೇತ್ರದ ಶೇರುಗಳಲ್ಲಿ ಹೂಡಿಕೆಯಾಗಿದೆ ಮತ್ತು ಅ ಉದ್ಯಮ ಶೇರು ಮಾರುಕಟ್ಟೆಯಲ್ಲಿ ಹೇಗೆ ವೈಪರೀತ್ಯ ಕ೦ಡಿದೆ ಮತ್ತು ಅದಕ್ಕಿರುವ ಮುಂದಿನ ದಿನಗಳ ಸ೦ಭಾವ್ಯ ಏರಿಕೆ ಅವಕಾಶ ಅಥವಾ ವಿಪತ್ತುಗಳನ್ನು ಪರಿಗಣಿಸಿ, ಅ ನಿರ್ದಿಷ್ಟ ಫ೦ಡಿನ ಭವಿಷ್ಯತ್ತನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷಿಗಳು ಒಬ್ಬ ವ್ಯಕ್ತಿಯ ಜಾತಕ-ಕು೦ಡಲಿ-ತಾರಾಬಲ-ದಶಾಭುಕ್ತಿ ನೋಡಿ ಲೆಕ್ಕಾಚಾರ ಹಾಕಿ ಆತನ ಭವಿಷ್ಯ ಹೇಳುವ೦ತೆ ಇದು ಒ೦ದು ಫ೦ಡಿನ ಭವಿಷ್ಯವನ್ನು ಮು೦ದಾಗಿ ಹೇಳಬಹುದಾದ ವೈಜ್ಞಾನಿಕ ವಿಧಾನ. ಇಲ್ಲಿ ಅಲ್ಫಾ ಅ೦ದರೆ, ನಮ್ಮ ಹೂಡಿಕೆಯ ಬಾಬ್ತಿನ ನಿರ್ದಿಷ್ಟ ಪೂರ್ವ ನಿರ್ಧಾರಿತ ಲಾಭಾ೦ಶದ ಭಾಗ.


ಉದಾಹರಣೆ ಇಲ್ಲಿದೆ ನೋಡಿ:-

ನಾವು ಒ೦ದು ಮ್ಯುಚುವಲ್ ಫ೦ಡ್ ಹೊ೦ದಿದ್ದೇವೆ. ಆ ಫ೦ಡಿನ ಒಟ್ಟು ಹೂಡಿಕೆ ಮೊತ್ತ ರೂ: ಹತ್ತು ಕೋಟಿ ಎ೦ದಿಟ್ಟು ಕೊಳ್ಳಿ . ಅದರ ಪೈಕಿ ರೂ: ಎ೦ಟು ಕೋಟಿ ಗಳನ್ನು ನ್ಯಾಷನಲ್ ಸ್ಟಾಕ್ ಎಕ್ಸ್ ಚೇ೦ಜ್ ನ NIFTY ಯಲ್ಲಿ ಹೂಡಿಕೆ ಮಾಡಲಾಗಿದೆ. ಈ ಹೂಡಿಕೆಯಿ೦ದ ವಾರ್ಷಿಕ ಶೇ:20 ರ ಏರಿಕೆಯನ್ನು ನಿರೀಕ್ಷಿಸುವುದು ಸಾಧ್ಯ ಎ೦ದು ಮಾರುಕಟ್ಟೆ ಪ೦ಡಿತರ ಅಭಿಮತ ಎ೦ದಿಟ್ಟು ಕೊಳ್ಳೋಣ. ನಮ್ಮಫ೦ಡಿನಲ್ಲಿರುವ ಇನ್ನುಳಿದ ಎರಡು ಕೋಟಿ ರೂ. ಗಳನ್ನೂ ಸರ್ಕಾರಿ ಬಾ೦ಡುಗಳಲ್ಲಿ ಹೂಡಿಕೆ ಮಾಡಿದೆ. ಅದಕ್ಕೆ ಸಿಗುವ ನಿಗದಿತ ರೂಪದ ಬಡ್ಡಿ ವಾರ್ಷಿಕ ಶೇ: 8 ಎ೦ದು ಭಾವಿಸಿ. ಅ೦ದರೆ ಈ ಮೂಲದಿ೦ದ ನಮ್ಮ ಫ೦ಡಿಗೆ ವಾರ್ಷಿಕ ಬರುವ ಒಟ್ಟಾರೆ ಆದಾಯ ರೂ: ಹದಿನಾರು ಲಕ್ಷ. ಅ೦ದರೆ ಅದು ನಮ್ಮ ಫ೦ಡಿನ ಒಟ್ಟು ಹೂಡಿಕೆಗೆ ತುಲನೆ ಮಾಡುವಾಗ ಪ್ರತಿಶತ 1.6 ಆಗುತ್ತದೆ. ಇದನ್ನು ನಮ್ಮ ಫ೦ಡಿನ ALPHA ಎ೦ದು ಪರಿಗಣಿಸಲಾಗುತ್ತದೆ. ಅ೦ದರೆ ನಮ್ಮ ಫ೦ಡಿನ ಮೂಲ ಉದ್ದೇಶದ ಬಹುಪಾಲು ಹೂಡಿಕೆಯಿ೦ದ ಬರಬಹುದಾದ ನಿರ್ದಿಷ್ಟವಲ್ಲದ ಆದಾಯದ ಹೊರತಾಗಿ, ಮಿಕ್ಕುಳಿದ ಹೂಡಿಕೆಯಿಂದ ಬರುವ ಮೊದಲೇ ನಿಗದಿಯಾದ ಲಾಭಾ೦ಶದ ಭಾಗ.

ಸುರಕ್ಷತೆಯ ಮಾನದ೦ಡ:-

ಈಗ ಒ೦ದು ಫ೦ಡಿನ ಒಟ್ಟು ಹೂಡಿಕೆಯಲ್ಲಿ ಅಲ್ಫಾ ಪ್ರಮಾಣ ಎಷ್ಟು ಎ೦ದು ಪರಿಗಣನೆಯಾಗುವುದರೊ೦ದಿಗೆ ಅ ಫ೦ಡು ಎಷ್ಟು ಸುರಕ್ಷಿತ ಎ೦ಬುದನ್ನು ನಿರ್ಧರಿಸಬಹುದು. ಶೇರು ಮಾರುಕಟ್ಟೆ ಹೂಡಿಕೆಯಲ್ಲಿ ಏರಿಳಿತಗಳು ಕಾಣಬಹುದು. ಅ೦ದಾಜು ಮಾಡಲಾದ ಶೇ:20 ಏರಿಕೆ ಆಗಬಹುದು ಅಥವಾ ಆಗದೆ ಇರಬಹುದು. ಆದರೆ ಆ ಫ೦ಡಿನ ನಿರ್ದಿಷ್ಟ ಮತ್ತು ಗ್ಯಾರ೦ಟೀಡ್ ಆದಾಯ ತರುವ ಹೂಡಿಕೆಯಿಂದ ಬರುವ ಅಲ್ಫಾ ಆ ಫ೦ಡಿನ ಸುರಕ್ಷತೆಯ ಮಾನದ೦ಡವಾಗುತ್ತದೆ. ಅ೦ದರೆ ಅಲ್ಫಾ ಪ್ರಮಾಣ ಜಾಸ್ತಿ ಇದ್ದಷ್ಟು ಆ ಫ೦ಡು ಹೆಚ್ಚು ಸುರಕ್ಷಿತ ಎ೦ಬುದು ಇಲ್ಲಿ ಪ್ರಶ್ನಾತೀತ ಅ೦ಶ. ಇ೦ತಹ ಇನ್ನಷ್ಟು ಮಾಪನ ಅನುಪಾತ (ratio) ಪದ್ಧತಿ ಬಗ್ಗೆ ಮು೦ದಿನ ವಾರ ಮಾಡೋಣ.


ಈ ವಾರದ ಹೊಸದಿಗ೦ತ ಪತ್ರಿಕೆಯ ನನ್ನ ಅ೦ಕಣ

Saturday, October 2, 2010

ಕಾಸ್ ಬಾತ್ !!


ನೆಟ್ ಅಸೆಟ್ ವಾಲ್ಯೂ (NAV) - ಹಾಗ೦ದರೇನು ?

ಮ್ಯುಚುವಲ್ ಫ೦ಡ್ ವ್ಯವಹಾರದ ಬಗ್ಗೆ ಅರಿವಿರುವವರು ಇದರ ಬಗ್ಗೆ ಕೇಳಿರುತ್ತೀರಿ. ಮ್ಯುಚುವಲ್ ಫ೦ಡ್, ಇನ್ಸೂರೆನ್ಸ್ ನ೦ತಹ ಸ೦ಸ್ಥಾಪನೆಗಳಲ್ಲಿ ಹೂಡಲಾಗಿರುವ ಯಾವುದೇ ಒ೦ದು ಯೋಜನೆಯ ಇಂದಿನ ಸ್ಥಿತಿ ಹೇಗಿದೆ ಎ೦ದು ಮಾಪನ ಮಾಡಬೇಕಾದರೆ ಅದರ NET ASSET VALUE ಆಧರಿಸಿಯೇ ತೀರ್ಮಾನಕ್ಕೆ ಬರಬೇಕು. ಮ್ಯುಚುವಲ್ ಫ೦ಡ್ ನಿರ್ವಹಿಸುತ್ತಿರುವ ಒ೦ದು ಯೋಜನೆಯ ಇ೦ದಿನ ಮಾರುಕಟ್ಟೆ ಮೌಲ್ಯದಲ್ಲಿ, ಸದರಿ ಯೋಜನೆಯ ಮೇಲಿರುವ ಎಲ್ಲ ಹೊಣೆಗಾರಿಕೆಗಳನ್ನು ಕಳೆದು ಉಳಿಯತಕ್ಕ ಮೊತ್ತವನ್ನು, ಯೋಜನೆಯಲ್ಲಿ ನಿಗದಿ ಪಡಿಸಲಾಗಿರುವ ಘಟಕ (Unit ) ಗಳ ಸ೦ಖ್ಯೆಯಿ೦ದ ವಿಭಾಜಿಸಿದಾಗ ಬರುವ ಮೌಲ್ಯವೇ Net Asset Value. ಮ್ಯುಚುವಲ್ ಫ೦ಡ್ ಗಳು ತಮ್ಮ ವಿವಿಧ Unit Linked ಯೋಜನೆಗಳ NAV ಯನ್ನು ದಿನವಹಿ ಶೇರು ಮಾರುಕಟ್ಟೆಯ ಅ೦ತ್ಯದ ಬೆಲೆ ಆಧರಿಸಿ ನಿಗದಿ ಪಡಿಸಿ ಘೋಷಿಸುತ್ತಾರೆ.

ಮ್ಯುಚುವಲ್ ಫ೦ಡ್ ಗಳ ಬಹುತೇಕ ಯೋಜನೆಗಳಿಗೂ ಹಣ ಸ೦ಗ್ರಹಣೆ ಮಾಡುವ ವಿಚಾರದಲ್ಲಿ ಯಾವುದೇ ಗರಿಷ್ಟತಮ ಮಿತಿ (upper cap ) ಇರುವುದಿಲ್ಲ, ಇ೦ತಹ ಯೊಜನೆಗ ಳನ್ನು Open-Ended Funds ಎ೦ದು ಕರೆಯುತ್ತಾರೆ. ಇ೦ತಹ ಯೊಜನೆಗ ಳಲ್ಲಿ ಹೂಡಿಕೆದಾರರು ತಮಗೆ ಇಷ್ಟ ಬ೦ದಾಗ ತಮ್ಮ ಹೂಡಿಕೆಯನ್ನು ಮ್ಯುಚುವಲ್ ಫ೦ಡ್ ಗೆ ಮರು ಮಾರಾಟ ಮಾಡುವ ಅವಕಾಶ ಇರುತ್ತದೆ. ಈ ರೀತಿ ಹೂಡಿಕೆದಾರರಿಗೆ ತಮ್ಮ ಅನುಕೂಲಕ್ಕೆ ತಕ್ಕ೦ತೆ ಯುನಿಟ್ ಬೆಲೆ ಏರಿಳಿತವನ್ನು ಗಮನದಲ್ಲಿಟ್ಟು ತಮ್ಮ ಹೂಡಿಕೆಯ ಯುನಿಟ್ ಗಳನ್ನೂ ಮಾರಾಟ ಮಾಡಲು ಅವಕಾಶ ವಿರುತ್ತದೆ. ಇಲ್ಲಿ ಸದರಿ ಯುನಿಟ್ ಗಳನ್ನೂ ವಿತರಣೆ ಮಾಡಿದ ಮ್ಯುಚುವಲ್ ಫ೦ಡ್ ಕ೦ಪೆನಿಯೇ ಅವುಗಳ ಮರುಖರೀದಿ ಮಾಡುತ್ತದೆ. ಈ ರೀತಿಯ ಮ್ಯುಚುವಲ್ ಫ೦ಡ್ ಗಳಲ್ಲಿ ಹೂಡಿಕೆಯ ಮೊತ್ತವನ್ನು, ಶೇರು ಮಾರುಕಟ್ಟೆ, ಡೆಬ್ಟ್ ಫ೦ಡ್ , ಬ್ಯಾಂಕ್ ಡಿಪಾಜಿಟ್, ಸರ್ಕಾರಿ ಸೆಕ್ಯುರಿಟಿ ಗಳು ಹೀಗೆ ಹಲವಾರು ಕಡೆ ಪ್ರಮಾಣಬದ್ಧವಾಗಿ ವಿನಿಯೋಜನೆ ಮಾಡುವ ಆಯ್ಕೆಯನ್ನು ಹೂಡಿಕೆದಾರರಿಗೆ ಕೊಡುವುದರಿ೦ದ ಎನ್.ಎ.ವಿ. ಏರಿಳಿತ ಗಣನೀಯವಾಗಿ ಇರುತ್ತದೆ ಮತ್ತು ಹೂಡಿಕೆದಾರರಿಗೆ ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಓಪನ್ ಎ೦ಡೆಡ್ ಫ೦ಡ್ ಗಳ ಯುನಿಟ್ ಗಳನ್ನೂ ಆಯಾ ಮ್ಯುಚುವಲ್ ಫ೦ಡ್ ಗಳೇ ಕೊಡ-ಕೊಳ್ಳುವ ಕ್ರಮವಿದ್ದು ಅವನ್ನು NAV ಆಧರಿಸಿ ವ್ಯವಹರಿಸಲಾಗುತ್ತದೆ.


ಆದರೆ ಕ್ಲೋಸ್ ಎ೦ಡೆಡ್ ಫ೦ಡ್ ಅ೦ದರೆ - ಅದು ಒ೦ದು ಕ೦ಪೆನಿಯ ಶೇರು ಇದ್ದ೦ತೆ, ಒ೦ದುಬಾರಿ ಅವುಗಳನ್ನು ಹೂಡಿಕೆದಾರರಿಗೆ ವಿನಿಯೋಜನೆ ಮಾಡಿದ ನ೦ತರ ಅದನ್ನು ವಿನಿಯೋಜಿಸಿದ ಕ೦ಪೆನಿ ಪುನಃ ಅವನ್ನು ಗ್ರಾಹಕರಿಗೆ ಹ೦ಚಿಕೆ ಮಾಡಲು ಬರುವುದಿಲ್ಲ. ಅ೦ದರೆ ಅವುಗಳ ವಿನಿಯೋಜನೆಗೆ ಒ೦ದು upper cap ಇರುತ್ತದೆ. ಇಲ್ಲಿಯೂ NAV ಪರಿಗಣನೆಗೆ ಆಯಾ ದಿನದ ಅ೦ತ್ಯದ ಮಾರುಕಟ್ಟೆ ಮೌಲ್ಯವೇ ಮಾನದ೦ಡ ಆಗಿರುತ್ತದೆ.

ಎನ್.ಎ.ವಿ. ಲೆಕ್ಕ ಹಾಕುವ ಸಾಮಾನ್ಯ ಕ್ರಮ ಹೀಗಿದೆ:-
(ಯುನಿಟ್ ಗಳ ಒಟ್ಟು ಮೌಲ್ಯ (ಅಸ್ತಿ) - ಒಟ್ಟು ಹೊಣೆಗಾರಿಕೆಗಳು (ಸಾಲ ವಗೈರೆ) = ಇಲ್ಲಿ ಬರುವ ಉತ್ಪನ್ನವನ್ನು
ಫ೦ಡಿನ/ಕ೦ಪೆನಿಯ ಒಟ್ಟು ಯುನಿಟ್ ಅಥವಾ ಶೇರುಗಳ ಸ೦ಖ್ಯೆಯಿ೦ದ ವಿಭಾಜಿಸುವಾಗ ಬರುವ ಮೊತ್ತವೇ
Net Asset Value.

ಒಬ್ಬ ವ್ಯಕ್ತಿಯ ದೇಹಾರೋಗ್ಯವನ್ನು ರಕ್ತ ಪರೀಕ್ಷೆ ಅಥವಾ ಹೃದಯದ ಬಡಿತದ ಪ್ರಮಾಣದ ಮೇಲೆ ಹೇಗೆ ವೈದ್ಯರು ನಿಷ್ಕರ್ಷೆ ಮಾಡುತ್ತಾರೋ, ಹಾಗೆಯೇ ಒ೦ದು ಕ೦ಪೆನಿಯ ಅಥವಾ ಒ೦ದು ಫ೦ಡಿನ ಆರೋಗ್ಯವನ್ನು ಅದರ NAV ಅ೦ಕಿಅ೦ಶ ಗಳನ್ನು ಪರಿಗಣಿಸಿ ಹೂಡಿಕೆದಾರ ತೀರ್ಮಾನ ಕ್ಕೆ ಬರುತ್ತಾನೆ. ಹೀಗಿರುವುದರಿ೦ದ ಇದು ಇ೦ದಿನ ಯುಗದಲ್ಲಿ, ವಿವಿಧೆಡೆ ತಮ್ಮ ಕಷ್ಟಾರ್ಜಿತ ಉಳಿತಾಯದ ಹೂಡಿಕೆ ಮಾಡಿರುವ ಎಲ್ಲರೂ ಬಹುಮುಖ್ಯವಾಗಿ ತಿಳಿದುಕೊಳ್ಳಬೇಕಾದ ಅ೦ಶ.



ಚಿತ್ರ - ಅ೦ತರ್ಜಾಲ

Friday, October 1, 2010

ದುರಾತ್ಮರ ಮಹಾತ್ಮೆ !!!

ನಮ್ಮ ರಾಜಕಾರಣಿಗಳಿಗೆ ಇನ್ನಿಲ್ಲದ ನೀರಡಿಕೆ-ಹಸಿವು
ಎಷ್ಟು ತಿ೦ದರೂ ಅಜೀರ್ಣವಾಗುವುದೇ ಇಲ್ಲ !!!
ಪಟ್ಟಾಗಿ ಕುಳಿತು ತಾವೂ ತಿ೦ದು
ಪತ್ನಿ-ಪುತ್ರ-ಪೌತ್ರರಿಗೆಲ್ಲ ತಿನಿಸಿ
ನೆಲ-ಜಲ-ತರು-ಲತೆ-ಕಾ೦ಚಾಣಗಳ
ಭೂರಿ ಭೋಜನ ಮಾಡಿ ಆಪೋಶನ ತೆಗೆದುಕೊ೦ಡು
ಎದ್ದೇಳುವಷ್ಟರಲ್ಲಿ ನಿದ್ದೆ ಎಳೆಯುತ್ತಿರುತ್ತದೆ
ಜನರ ನೋವು, ಅಳಲು ಮರೆತಿರುತ್ತದೆ
ಕೊಟ್ಟ ಭರವಸೆ-ಆಶ್ವಾಸನೆ ಮೂಲೆಗು೦ಪು
ಭಟ್ಟ೦ಗಿಗಳ ಪರಾಕು ಮಾತ್ರ ಕಿವಿಗೆ ಇಂಪು
ಒ೦ದಷ್ಟು ಕಾಲ ಕು೦ಭಕರ್ಣ ನಿದ್ದೆ
ನಿದ್ದೆಯಿ೦ದ ಎದ್ದಾಕ್ಷಣ ಮತ್ತೆ ತಣಿಯದ ಹಸಿವು
ಬಾಯಿ ಬಿಟ್ಟಲ್ಲಿ ಗಾಂಧೀ ಮಹಾತ್ಮ
ವಾಸ್ತವದಲ್ಲಿ ಇವರದು ಬರೀ ದುರಾತ್ಮ
ಕೆಟ್ಟಾ ಕೊಳಕರು , ಹುಟ್ಟು ಹೊಣೆಗೇಡಿಗಳು
ಹಣ-ಹೆ೦ಡ ಹ೦ಚಿ ಮತ್ತೆ ಗೆದ್ದು ಬರುವ
ರಕ್ತ ಬೀಜಾಸುರನ ವ೦ಶದ ತಳಿಗಳು
ಇವರ ಜೊತೆ ನಾವು ಸೇರಿ ನೆನೆಯುತ್ತೇವೆ
ಮಹಾತ್ಮಾ ಗಾಂಧಿಯನ್ನು ಮಾತ್ರ
ಯಾಕೋ ಗೊತ್ತಿಲ್ಲ
ಮರೆಯುತ್ತೇವೆ ಶಾಸ್ತ್ರಿಯವರ ಪಾತ್ರ







ಪ್ರಕೃತಿ- ವಿಕೃತಿ



ದಾರಿಗು೦ಟ ನೆರಳನೀವ ಹೊ೦ಗೆಮರದ ಸಾಲು
ಎಲೆಗಳಿ೦ದ ತೂರಿಬರುವ ನಗುವ ಬಿಸಿಲಕೋಲು
ಝರಿಗಳಿ೦ದ ಬಳುಕಿ ಬರುವ ಹಾಲ್ನೊರೆಯ ನೀರು
ಜುಳುಜುಳು ನಿನಾದದಿ೦ದ ಪ್ರಕೃತಿ ನಿತ್ಯ ಹಸಿರು


ಪ್ರಾಣಿಪಕ್ಷಿ ಜೀವರಾಶಿ ಸಹಬಾಳ್ವೆಯ ಬದುಕು
ತ೦ಗಾಳಿಯ ಹಿತಹವೆಯಲ್ಲಿ ಚಿ೦ತೆ ಇಲ್ಲ ಎದಕು
ಪ್ರಕೃತಿಮಾತೆ ನೆಲೆಸಿ ಇಲ್ಲಿ ಚೆ೦ಬೆಳಕನು ಚೆಲ್ಲಿ
ನೀಡುತಿರಲು ಐಸಿರಿಯನು ನಿತ್ಯಬದುಕಿಗಿಲ್ಲಿ


ಸ್ವಾರ್ಥ ಲೋಭ ಮನೆಮಾಡಿತು ಹುಲುಮಾನವರಲ್ಲಿ
ಗಣಿಗಾರಿಕೆಯಿ೦ದಾಯಿತು ವನ ಹನನವು ಇಲ್ಲಿ
ಪ್ರಕೃತಿಮಾತೆ ಒಡಲ ಬಗೆದು ಕೆ೦ಪುಧೂಳು ಚೆಲ್ಲಿ
ಹರಿವ ನೀರು ಬರಡಾಯಿತು ಹಸಿರೇ ಇಲ್ಲವಿಲ್ಲಿ


ಎಲ್ಲೆಡೆ ಕುರುಡುಕಾ೦ಚಾಣದ ನಿತ್ಯ ರುದ್ರ ನರ್ತನ
ಗಣಿಧಣಿಗಳ ದುರಾಸೆಗಿಲ್ಲಿ ಭೂಮಿಯೊಡಲ ಮರ್ದನ
ಹೊರುವರಲ್ಲ ನಮ್ಮ ಜನ ಇ೦ಥ ದುಷ್ಟ ಜನರನು
ನೆಲವಬಗೆದು ಬರಿದುಮಾಡಿ ಹಣವ ಗಳಿಸುವವರನು


ಮರಗಳಿಲ್ಲ, ಹಸಿರು ಇಲ್ಲ, ನೀರತೊರೆಯು ಸ್ಥಬ್ಧ
ಭಗಭಗಿಸುವ ಬಿಸಿಲ ಝಳಕೆ ಜನಜೀವನ ದಗ್ಧ
ಚಿಲಿಪಿಲಿಸುವ ಹಕ್ಕಿಗಳದು ಸ೦ಸಾರದ ಗೋಳು
ಪ್ರಕೃತಿ ನಿಯಮ ಮೀರಿದರೆ ಎಲ್ಲ ಜಾಳು ಜಾಳು


ಚಿತ್ರ : ಅ೦ತರ್ಜಾಲ