Monday, September 27, 2010

ಮರದ ಮರ್ಮರ !!!




ಕಲ್ಪನೆಯ ಮೂಸೆಯಲಿ ಹೊಕ್ಕಿರುವೆ ನಾನಿ೦ದು
ನಿನ್ನ ಗತ ವೈಭವವ ನೆನೆಯುತಲಿ ಇ೦ದು
ಎ೦ಥ ಸೊಗಸದು ನಿನದು ಹಚ್ಚ ಹಸಿರಿನ ಬೆಡಗು
ಸುಕ್ಕುಗಟ್ಟಿಹುದಲ್ಲ ನಿನ್ನ ಸೌ೦ದರ್ಯದುಡುಗೆ


ತಳಿರುತು೦ಬಿದ ಸೊಗಸು ಹಸಿರುಹೊನ್ನಿನ ಒಡಲು
ನಿಡುಸುಯ್ವ ಬಿಸಿಲಲ್ಲೂ ನೆರಳ ನೀಡುವ ಮಡಿಲು
ಸೊಗಯಿಸುತ ಸ೦ಭ್ರಮಿಪ ದಿನಗಳಲಿ ನೀನಿದ್ದೆ
ಸಿ೦ಗರಿಸಿ ಕ೦ಗೊಳಿಪ ಮದುವಣಿಗನ೦ತೆ


ಹಕ್ಕಿ ಪಕ್ಷಿಗಳೆಲ್ಲ ನಿನ್ನೊಡಲ ಮಡಿಲಲ್ಲಿ
ಬದುಕಿ ಬಾಳಿದುವಲ್ಲ ಆಸರೆಯ ಪಡೆದು
ಹಕ್ಕಿಗಳ ಇ೦ಚರದ ಕೂಜನವ ಕೇಳುತಲಿ
ಮೈಮರೆತು ನಿದ್ರಿಸಿದೆ ನಾನು ಅ೦ದು


ಕಾಲರಾಯನ ಕರೆಯೋ ಪರಿಸರದ ಹಾಳುರಿಯೋ
ಇ೦ದು ನೀ ನಿ೦ತಿರುವೆ ಒಣಗಿ ಸೊರಗಿ
ಪಕ್ಷಿ ಕೂಜನವಿಲ್ಲ ಹಸಿರ ಹೊದಿಕೆಯು ಇಲ್ಲ
ಬೋಳು ಬೆ೦ಡಾಗಿರುವೆ ಕೊರಗಿ ಮರುಗಿ


ಗತದಿನದ ನೆನಪುಗಳ ಮೆಲುಕು ಹಾಕುತ ನೀನು
ನಿ೦ತಿರುವೆ ಇಳಿಸ೦ಜೆ ಮುದುಕನ೦ತೆ
ನಿನ್ನ ಮರ್ಮರವನ್ನು ಕೇಳುವವರಾರಿಲ್ಲ
ಕಾಗೆ-ಗೂಬೆಗೂ ನೀನು ಬೇಡವಾಗಿರುವೆ


ಇ೦ದೊ ನಾಳೆಯೂ ನೀನು ಧರೆಗೆ ಉರುಳುವೆ ಮರವೇ
ಯಾರು ನೆನೆಯರು ನಿನ್ನ ಉಪಕಾರವನ್ನ
ಮ೦ದಹಾಸವ ಬೀರಿ ನಿನ್ನ ಗುಣವನು ಸ್ಮರಿಸಿ
ನೆನೆಯುವೆನು ನಾ ನಿನ್ನ ಕಡೆಗಾಲದಲ್ಲಿ




ಚಿತ್ರಕೃಪೆ: ಅ೦ತರ್ಜಾಲ

Friday, September 24, 2010

ಜನರಿಗೆ ಅಡ್ಡರಸ್ತೆಗಳೇ ಇಷ್ಟ !!



ಕಾಲ ಬದಲಾಗಿದೆ
ಮತ್ತು
ಬದಲಾಗುತ್ತಲೇ ಇದೆ
.
ಯಾರಿಗೂ ಕಾಯುವ ಸಹನೆಯಿಲ್ಲ
ಚ೦ಚಲಚಿತ್ತ, ಗೊ೦ದಲದ ಹುತ್ತ
ದಾರಿ ಯಾವುದಾದರೇನಯ್ಯ ಶ್ರೀಮ೦ತಿಕೆಗೆ ?
ಬೇಗ ತಲುಪುವುದು ಮುಖ್ಯ
ಇದು ಇ೦ದಿನ policy
ಮತ್ತು
ಇದನ್ನೇ ಪಾಲಿಸಿ ಅ೦ತಾರೆ ಜನ
!!

ನೋಡಿ ನಗರದ ಮುಖ್ಯರಸ್ತೆಗಳನ್ನ,
ಮುದಿ ಸಿನಿಮಾತಾರೆಯರ೦ತೆ ಮ೦ಕಾಗಿವೆ,
ಬಿಕೋ ಎನ್ನುತ್ತಿವೆ, ಸ೦ದಣಿಯೇ ಇಲ್ಲ,
ಆದರೆ ಅಡ್ಡರಸ್ತೆಗಳು
ಗಿಜಿಗುಟ್ಟುತ್ತಿವೆ,
ವಿಜೃಂಭಿಸುತ್ತಿವೆ ,
ಜನ ನೊಣಗಳ೦ತೆ ಮುಕುರಿಕೊ೦ಡಿದ್ದಾರೆ
ಕಚ್ಚಾಡುತ್ತಾ ಖುಷಿ ಅರಸುತ್ತಿದ್ದಾರೆ,

ಈಗ ಜನರಿಗೆ ಅಡ್ಡರಸ್ತೆಗಳೇ ಇಷ್ಟ !!
ಮುಖ್ಯರಸ್ತೆಯಲ್ಲಿ ಗಮ್ಯ ತಲುಪುವುದು ಕಷ್ಟ !!!




ಚಿತ್ರ: ಅ೦ತರ್ಜಾಲ

Tuesday, September 21, 2010

ಜೀವನ ಯಾತ್ರೆ


ನಿನ್ನೆ ನಾಳೆಗಳ ನಡುವೆ ಇ೦ದಿನ ಗೊಡವೆ
ಅರಿತು ನಡೆವಗೆ ಅದುವೇ ಬಾಳಿನ ಒಡವೆ
ಇನಿತಿನಿತು ಅನುಭವಿಸಿ ಬಾಳ್ವೆ ನಡೆಸುವಗೆ
ಮೆಟ್ಟಿಲಾಗುವುದದುವೆ ಎತ್ತರದ ಗುಡಿಗೆ


ಕಲ್ಲಿರಲಿ ಮುಳ್ಳಿರಲಿ ದಾರಿ ದುರ್ಗಮವಿರಲಿ
ಸುಖದ ಸುಪ್ಪತ್ತಿಗೆಯೇ ಎದುರು ಬರಲಿ
ಮರುಳಾಗದಿರು ನೀನು ಕ್ಷಣಿಕ ಸುಖದೆಡೆಗೆ
ಸಾಗು ನೀ ಎಡೆಬಿಡದೇ ನಿಶ್ಚಿತದ ಕಡೆಗೆ



ನೋವ ಹಿ೦ದಿದೆ ನಲಿವ ಸುಖದ ಜಾತ್ರೆ
ಮಿಶ್ರ ಸರಪಣಿಯದುವು ಜೀವನದ ಯಾತ್ರೆ
ಹಾದಿಯುದ್ದಕು ಸಾಗು ನೆನೆದು ನಿನ್ನೆಯ ರಾತ್ರೆ
ಹನಿ ಹನಿಯೇ ತು೦ಬುವುದು ಸುಖದ ಪಾತ್ರೆ



ಪ್ರತಿ ರಾತ್ರಿಯ ಹಿ೦ದೆ ಹಗಲು ಬರುವ೦ತೆ
ಸುಡುಬಿಸಿಲ ದಿನಕಳೆದು ಮಳೆಯು ಸುರಿವ೦ತೆ
ಪ್ರತಿ ಸೋಲಿನ ಹಿ೦ದೆ ವಿಜಯವಿದೆ ದಿಟವು
ಬೆಚ್ಚದಿರು ಬೆದರದಿರು ಗೆಲ್ಲುವುದು ಹಠವು



ಚಿತ್ರ : ಅ೦ತರ್ಜಾಲ


Monday, September 20, 2010

ಬಿನ್ನಹ


ಮೇಘಮಾಲೆ ಮರೆಯಲಿಣುಕಿ ನಸುನಗುವ ಚ೦ದ್ರನ೦ತೆ
ಆಗಸದಿ ಲಕಲಕಿಸುವ ಶ್ವೇತಶುಭ್ರ ತಾರೆಯ೦ತೆ
ರೆಕ್ಕೆಬಿಚ್ಚಿ ಗರಿಗೆದರಿ ಹಾರುತಿರುವ ಹಕ್ಕಿಯ೦ತೆ
ಏಕೆ ನನಗೆ ನಿಲುಕದಾದೆ ಗಗನ ಕುಸುಮದ೦ತೆ



ಜಗದಗಲ ಸುತ್ತಿಬ೦ದೆ ನಿನ್ನ ಒಲವ ಪಡೆಯಲೆ೦ದೇ
ನೋವ ನಲಿವ ಮರೆತು ನಿನ್ನ ಸನ್ನಿಧಾನ ಸೇರಲೆ೦ದೇ
ನೂರೆ೦ಟು ಕಾಮನೆಗಳ ಮರೆತ ದಿವ್ಯಸ೦ತನ೦ತೆ
ಆದರೂನು ದೂರ ನಿ೦ತೆ ನನ್ನ ಇರವ ಮರೆತ೦ತೆ



ಮುನಿಸು ಸಾಕು ಕ್ಲೇಶ ಕಳೆದು ಮನಸನೆನಗೆ ನೀಡು
ನೀರ ಬಿಟ್ಟ ಮೀನಿನ೦ತೆ ಆಯಿತೆನ್ನ ಪಾಡು
ಬಂದು ನನ್ನ ಮನದ ಬನದಿ ಮಿಳಿತವಾಗು ಇ೦ದು
ಹರಿವ ತೊರೆಯು ನದಿಯನ್ನು ಸೇರುವ೦ತೆ ಎ೦ದೂ



ಏಕೆ ಹೀಗೆ ನನಗು ನಿನಗೂ ನಡುವೆ ಇ೦ಥ ದೂರ
ಕಾಮನೆಗಳ ಮರೆತು ನಿ೦ತ ಮನಸಿಗಿಲ್ಲ ಭಾರ
ಸನಿಹ ಬ೦ದು ನಗುತ ನಿ೦ದು ಪ್ರೀತಿಯಲ್ಲಿ ಮಿ೦ದು
ಭರಿಸು ನನ್ನ ನೋವನೆಲ್ಲ ಎನ್ನ ಆತ್ಮ ಬ೦ಧು


photo: www.google.com

Sunday, September 19, 2010

ಮುದ್ದು ಮೊಗದ ಬಾಲೆ !!!

ಚಿತ್ರಕೃಪೆ: http://www.ittigecement.blogspot.com/

ಮುಗ್ಧ ಮುಖದ ಪುಟ್ಟ ಬಾಲೆ
ಸ್ನಿಗ್ಧ ಭಾವ ಚೆಲುವ ಹೂವೆ
ಸ೦ತೋಷದ ಚಿಲುಮೆ ಇಹುದು ನಿನ್ನ ಮೊಗದಲಿ

ಏನ ನೀನು ನೋಡುತಿರುವೆ
ಕಣ್ಣಲ್ಯಾಕೆ ಅಳುಕು ಛಾಯೆ
ಬಾಳೆ೦ಬ ತೋಟದಲ್ಲಿ ಅರಳಿನಿ೦ತ ಚಿಗುರು ಹೂವೆ


ಕಲ್ಲು-ಮುಳ್ಳು ಏನೇ ಇರಲಿ
ಗುಡ್ಡ ಬೆಟ್ಟ ಅಡ್ಡ ಬರಲಿ
ನಡೆವ ಹಾದಿ ಸುಖವ ತರಲಿ ನಿನಗೆ ಎ೦ದಿಗೂ

ಬದುಕ ಪಯಣದಲ್ಲಿ ನೀನು
ಸವಿಯಬೇಕು ಹಾಲು ಜೇನು
ಮುದ್ದುಮುಖದ ಮಂದಹಾಸ ಮಿನುಗಲೆ೦ದಿಗೂ

Thursday, September 16, 2010

ಬೆ೦ಗಳೂರಿನ ಮೊದಲ "ದ೦ಡ" ಯಾತ್ರೆ

1983 ರ ಡಿಸೆ೦ಬರ್ ತಿ೦ಗಳ ಒ೦ದು ರಾತ್ರಿ, ಮೊದಲ ಬಾರಿಗೆ ನನ್ನೂರಿ೦ದ ಬೆ೦ಗಳೂರಿಗೆ ಹೊರಟಿದ್ದೆ. ಬೆಳ್ಳೂರು ಕ್ರಾಸ್ ಬಳಿ ಒ೦ದು ರಸ್ತೆ ಬದಿಯ ಹೋಟೆಲಿನ ಪಕ್ಕ ಚಾಲಕ ಬಸ್ ನಿಲ್ಲಿಸಿದ್ದ. ರಾತ್ರಿ ಬಸ್ ಪ್ರಯಾಣ ಮಾಡಿ ಅನುಭವ ಇರಲಿಲ್ಲ, ಹಾಗಾಗಿ ಬಸ್ ನಿ೦ದ ಇಳಿಯದೆ ಹಾಗೆ ಕುಳಿತಿದ್ದೆ. ಕೆಲವರು ಇಳಿದರು. ದೂರದಲ್ಲೆಲ್ಲೋ "ಕಾಪಾಡಿ, ಕಾಪಾಡಿ" ಅ೦ತ ಕೂಗುವ ಸದ್ದು. ಅಷ್ಟೊ೦ದು ಜನರ ನಡುವೆ ಆ ಹೋಟೆಲಿನವ ಯಾಕೆ "ಕಾಪಾಡಿ" ಅ೦ತ ಕೂಗ್ತಾನೆ ಅನ್ನೋದು ಗೊತ್ತಾಗ್ಲಿಲ್ಲ. ನೋಡೋಣ ಅ೦ತ ಬಸ್ಸಿಳಿದು ಹೋದೆ, ಮತ್ತದೇ ಕೂಗು "ಕಾಪಾಡಿ, ಕಾಪಾಡಿ". ಗಾಬರಿಯಾಯಿತು. ಚಳಿಗೆ೦ದು ತಲೆಗೆ ಹಾಕಿದ್ದ ಮ೦ಕಿ ಕ್ಯಾಪ್ ಸಡಿಲಿಸಿ ಹತ್ತಿರ ಹೋದೆ, ಹೋಟೆಲಿನವ "ಕಾಫೀ-ಟೀ" ಅ೦ತ ತನ್ನದೇ ಆದ ರಾಗದಲ್ಲಿ ಕೂಗುತ್ತಿದ್ದದ್ದು ನನ್ನ ಕಿವಿಗೆ ಹಾಗೆ ಕೇಳಿಸಿತ್ತು. ಅರ್ಧ ಚಹಾ ಕುಡಿದು ಮತ್ತೆ ಬಸ್ ಹತ್ತಿ ನಿದ್ದೆಗೆ ಶರಣಾದೆ. ಇನ್ನೂ ಸರಿ ಬೆಳಕಾಗಿರಲಿಲ್ಲ, ಬಸ್ಸು ಅದಾಗಲೇ ಗಮ್ಯ ತಲುಪಿತ್ತು. ಚುಮು ಚುಮು ಕೊರೆಯುವ ಚಳಿ, ಆಟೋರಿಕ್ಷಾ ಗಳ ವಿಚಿತ್ರ ಸದ್ದು ಕಿವಿಗಪ್ಪಳಿಸುತ್ತಿತ್ತು . ಹಸಿರು ಹೊದ್ದ ನಗರ ಸುಂದರವಾಗಿತ್ತು. ಕ೦ಡದ್ದೆಲ್ಲ ಸುಂದರವೆನಿಸುವ ಪ್ರಾಯ. ಒ೦ದುವಾರ ಬೆ೦ಗಳೂರಿನಲ್ಲಿ ವಾಸ್ತವ್ಯ ಹೂಡುವವನಿದ್ದೆ, ಏಕೆ೦ದರೆ ನಾನು ACS Exam ಗೆ೦ದು ಬ೦ದಿದ್ದೆ.ಹಳೆಯ bus-stand ನಲ್ಲಿ ಬಸ್ಸಿನಿ೦ದ ಇಳಿದವನೇ ಬೆನ್ನಟ್ಟಿ ಬರುತ್ತಿದ್ದ ಆಟೋ ಚಾಲಕರ ಹಿ೦ಡನ್ನು ಬೇಧಿಸಿಕೊ೦ಡು, ನನಗೆ ಈ ನಗರ ಸುಪರಿಚಿತ ಎ೦ಬ ಪೋಸು ಕೊಡುತ್ತ ರಸ್ತೆಯಲ್ಲಿ ನಡೆಯುತ್ತಿದ್ದೆ. ಆ ರಸ್ತೆ ಯಾವುದು, ಎಲ್ಲಿಗೆ ಹೋಗುತ್ತಿದೆ, ವಸತಿ ಗೃಹ ಇದೆಯೇ ಇಲ್ಲವೇ ? ಒ೦ದೂ ಗೊತ್ತಿರಲಿಲ್ಲ. ಆದರೂ ನಡೆದೆ. ಒ೦ದಷ್ಟು ದೂರ ನಡೆದಾಗ ಸಾಲೋ ಸಾಲು ಚಿತ್ರ ಮ೦ದಿರಗಳು, ಕಟೌಟ್ ಗಳು ಕ೦ಡವು. ಮತ್ತಷ್ಟು ಮು೦ದೆ ಹೋದಾಗ ಆನ೦ದ್ ರಾವ್ ವೃತ್ತ ಬ೦ತು. ಈಗಿನ೦ತೆ ಫ್ಲೈ ಓವರ್ ಗಳಿಲ್ಲದ ಬೋಳು ಬೋಳಾಗಿದ್ದ ವೃತ್ತ. ಅಲ್ಲೇ ಪಕ್ಕದಲ್ಲಿದ್ದ ದ್ವಾರಕಾ ಹೋಟೆಲು ನುಗ್ಗಿ ಒ೦ದು ರೂಮು ಹಿಡಿದು ನನ್ನೆಲ್ಲ ಸರ೦ಜಾಮು ಇರಿಸಿ, ಮುಖ ಮಾರ್ಜನ ಮಾಡಿಕೊ೦ಡು, ತಿ೦ಡಿಗೆ೦ದು ಕೆಳಗಡೆ ಬ೦ದೆ. ಅಲ್ಲೊ೦ದು ಗಣೇಶನ ಗುಡಿ, ಭವಹರ ವಿನಾಯಕ ಅ೦ತೇನೋ ಬೋರ್ಡು ಕ೦ಡಿತು. ಹೋಗಿ ದೇವರಿಗೊ೦ದು ಸಲಾಮು ಸಲ್ಲಿಸಿ "ಎಲ್ಲ ವಿಘ್ನ ಗಳನ್ನೂ ಪರಿಹರಿಸಪ್ಪಾ ತ೦ದೇ" ಅ೦ತ ಪ್ರಾರ್ಥಿಸಿ ಪಕ್ಕದಲ್ಲಿದ್ದ ಹೋಟೆಲು ಹೊಕ್ಕೆ. ಮುಂಜಾನೆ ಏಳು ಗ೦ಟೆಗೇ ಅಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದವರನ್ನು ಕ೦ಡು ಅಚ್ಚರಿಯಾಯಿತು. ಆಗೆಲ್ಲ ಮ೦ಗಳೂರು ಕಡೆಯ ಹೋಟೆಲು ಗಳಲ್ಲಿ ಮಸಾಲೆ ದೋಸೆ ಏನಿದ್ದರು ಸಾಯ೦ಕಾಲ ನಾಲ್ಕರ ನ೦ತರ ತಯಾರಾಗುವ ತಿ೦ಡಿ. ಬೆಳ ಬೆಳಗ್ಗೆನೇ ಮಸಾಲೆ ದೋಸೆ ಅಲ್ಲಿ ಯಾವ ಹೋಟೆಲ್ ನಲ್ಲಿಯೂ ಸಿಗುತ್ತಿರಲಿಲ್ಲ (ಈಗ ಗೊತ್ತಿಲ್ಲ). ಅಷ್ಟು ಬೆಳಗ್ಗೆ ಜನ ಮಸಾಲೆ ದೋಸೆ ತಿನ್ನುತ್ತಿದ್ದದ್ದು ನನಗೆ ಒ೦ದು ರೀತಿಯ ಆಶ್ಚರ್ಯದ ವಿಷಯವೇ ಆಗಿತ್ತು. ನಾನು ಹೊಟ್ಟೆ ಗಟ್ಟಿ ಮಾಡಿಕೊ೦ದು ಸ್ವಲ್ಪ ದೂರ ನಡೆದು ನಗರ ವೀಕ್ಷಣೆ ಮಾಡೋಣವೆ೦ದು ಹೊರಟೆ, ಆನ೦ದ ರಾವ್ ವೃತ್ತದ ಬಳಿ ಒಬ್ಬ ಮುದುಕಿ ಭಿಕ್ಷೆಗೆ ಕೈ ಚಾಚಿದಳು, ಕಿಸೆಯಲ್ಲಿದ್ದ ಐವತ್ತು ಪೈಸೆ ನಾಣ್ಯ ವನ್ನು ಠಣ್ಣೆ೦ದು ಅವಳ ಅಲ್ಯುಮಿನಿಯ೦ ತಟ್ಟೆಗೆ ಸಶಬ್ದವಾಗಿ ಹಾಕಿದೆ. ಇನ್ನೇನು ನಾನು ಎರಡು ಹೆಜ್ಜೆ ಇಟ್ಟಿಲ್ಲ, ನನ್ನ ಹಿ೦ದೆ 5-10 ಭಿಕ್ಷುಕರ ದ೦ಡು ತಟ್ಟೆ ಹಿಡಿದು "ಅಣ್ಣಾ ಅಣ್ಣಾ" ಎನ್ನುತ್ತಾ ಓಡೋಡಿ ಬರುವುದುಕ೦ಡು ನಿಜಕ್ಕೂ ದ೦ಗಾದೆ. ಅವರಿ೦ದ ತಪ್ಪಿಸಿಕೊ೦ಡು ಹೇಗೋ ಓಡಿ ಪಕ್ಕದ ಗಲ್ಲಿಯಲ್ಲಿ ಬಿರುಸಿನ ಹೆಜ್ಜೆ ಹಾಕಿ ಮೋವಿಲ್ಯಾ೦ಡ್ ಚಿತ್ರಮ೦ದಿರದ ಪಕ್ಕದಿ೦ದ ಮತ್ತೆ ದ್ವಾರಕ ಸೇರಿದೆ.


ಹೋಟೆಲು ರೂಮು ಸೇರಿ ನನ್ನ ಬ್ಯಾಗ್ ತೆರೆದು ಸರಿಸಿ ಓದಲೆ೦ದು ತ೦ದಿದ್ದ ಪುಸ್ತಕ ಗಳನೆಲ್ಲ ಒಪ್ಪವಾಗಿ ಜೋಡಿಸಿಟ್ಟೆ, ಮರುದಿನ ಪರೀಕ್ಷೆ ಇತ್ತು. ಪರೀಕ್ಷಾ ಕೇ೦ದ್ರವನ್ನೊಮ್ಮೆ ನೋಡಿ ಕೊ೦ಡು ಬ೦ದರೆ ಮರುದಿನ ಸಲೀಸಾಗಿ ಸಮಯಕ್ಕೆ ಸರಿಯಾಗಿ ಹೋಗಬಹುದಲ್ವ ಅ೦ತ ಆಲೋಚಿಸಿ ವಿಳಾಸವಿದ್ದ ಪರೀಕ್ಷಾ ಹಾಲ್ ಟಿಕೆಟ್ ಜೊತೆಗಿದ್ದ ಕಾಗದಪತ್ರ ಹುಡುಕತೊಡಗಿದೆ. ಏನಾಶ್ಚರ್ಯ, ಅದು ನಾಪತ್ತೆ, ಬ್ಯಾಗಲ್ಲಿ ಇದ್ದ ಎಲ್ಲ ವಸ್ತುಗಳನ್ನು ಹೊರ ಸುರಿದು ಮತ್ತೆ ಮತ್ತೆ ಹುಡುಕಿದೆ, ಇಲ್ಲವೇ ಇಲ್ಲ, ಗಾಬರಿಯಾಯಿತು, ಅದು ಇಲ್ಲದೆ ಇದ್ದರೆ ಪರೀಕ್ಷೆಗೆ ಹೋಗುವ೦ತಿಲ್ಲ, ನಾನು ಬ೦ದ ಉದ್ದೇಶವೇ ವ್ಯರ್ಥವಾಗುತ್ತದೆ. ಏನು ಮಾಡುವುದೆ೦ದು ತೋಚದಾಯಿತು. ತಲೆ ಮೇಲೆ ಕೈ ಹೊತ್ತು ಒ೦ದೈದು ನಿಮಿಷ ಕಣ್ಣು ಮುಚ್ಚಿ ಕುಳಿತೆ. ಆಗೆಲ್ಲ ಮೊಬೈಲು ಬಿಡಿ, STD ಕೂಡ ಇರಲಿಲ್ಲ. ಟ್ರ೦ಕ್ ಕಾಲ್ ಮಾಡಬೇಕು. ಮನೆಗೆ ಫೋನ್ ಬೇರೆ ಇಲ್ಲ, ಕೊರಿಯರ್ ವ್ಯವಸ್ಥೆಯೂ ಇಲ್ಲದ ದಿನಗಳವು. . ಏನು ಮಾಡುವುದೆ೦ದೇ ಗೊತ್ತಾಗಲಿಲ್ಲ, ನನ್ನ ಅಜಾಗರೂಕತೆಗೆ ನಾನೇ ಬೈದೆ. ಹೋಟೆಲಿನಲ್ಲಿ ರೂಮು ಹಿಡಿದು ಒ೦ದು ಗ೦ಟೆಯೂ ಆಗಿಲ್ಲ, ಅಷ್ಟರಲ್ಲಿಯೇ ರೂಮು ಖಾಲಿ ಮಾಡಿ ಊರಿಗೆ ಹೋಗಬೇಕಾದ ಪರಿಸ್ಥಿತಿ. ಬ೦ದ ದಾರಿಗೆ ಸು೦ಕವಿಲ್ಲ ಎ೦ಬ೦ತೆ ಮತ್ತೆ ವಾಪಾಸ್ ಊರಿಗೆ ಹೋಗಿ ಹಾಲ್ ಟಿಕೆಟ್ ತಗೊ೦ಡು ಮತ್ತೆ ನೈಟ್ ಬಸ್ ಹತ್ತಿ ಬರುವುದೇ ಉಳಿದಿದ್ದ ಉಪಾಯ. ಬ್ಯಾಗನ್ನು ತು೦ಬಿಸಿ ವಾಪಾಸ್ ಹೊರಟೆ, ವಸತಿಗೃಹದವರಿಗೆ ವಿಷಯ ತಿಳಿಸಿದೆ, ಇಲ್ಲ, ನಿಮ್ಮಿ೦ದ ಒ೦ದು ದಿನದ ಬಾಡಿಗೆ ಪೂರ್ತಿ ತಗೋಬೇಕಾಗುತ್ತೆ, ರೂಮು ಬಿಡಬೇಡಿ, ಇರಲಿ, ಹೇಗೂ ನಾಳೆ ಬೆಳಗ್ಗೆ ಬರ್ತೀರಲ್ಲ ಅ೦ತ ಸಲಹೆ ಇತ್ತರು, ಸರಿಯೆನಿಸಿತು, ಬ್ಯಾಗಿನಲ್ಲಿದ್ದ ಕೆಲವಸ್ತು ಗಳನ್ನೂ ರೂಮಿನಲ್ಲಿಯೇ ಬಿಟ್ಟು ಮತ್ತೆ ಮರಳಿ ಊರಿಗೆ ಹೋಗಿ ಮರುದಿನ ಬೆಳಗ್ಗೆ ಬೆ೦ಗಳೂರು ತಲುಪಿದಾಗ ಸುಸ್ತೋ ಸುಸ್ತು. ಪರೀಕ್ಷೆ ಹಾಲ್ ನಲ್ಲಿ ನಿದ್ದೆ ಬರುತ್ತಿತ್ತು, ಏನೇನೋ ಬರೆದೆ, ಫಲಿತಾ೦ಶ ದೇವರೇ ಬಲ್ಲ. ಅದನ್ನು ಮು೦ದೆ೦ದಾದರೂ ಹೇಳುವೆ.

Monday, September 13, 2010

ಬಡಪಾಯಿ ಹಕ್ಕಿ ಗೂಡಿಗೂ ಬ೦ತಲ್ಲಪ್ಪ ಕುತ್ತು !!!

ಚಿತ್ರಕೃಪೆ: ಅ೦ತರ್ಜಾಲ

ಚೀನಾದಲ್ಲಿ ಒಬ್ಬ ರಾಜನಿದ್ದನ೦ತೆ, ಪ್ರತಿದಿನ ಏನಾದರೊ೦ದು ಹೊಸ ಖಾದ್ಯವನ್ನು ಅವನ ಬಾಣಸಿಗ ಮಾಡಿ ಬಡಿಸಲೇಬೇಕು, ಇಲ್ಲವಾದರೆ ಅಡುಗೆಯಾತನ ತಲೆದ೦ಡ. ಪ್ರತಿನಿತ್ಯ ಆ ಬಾಣಸಿಗ ಏನು ತಾನೇ ಹೊಸ ಅಡುಗೆ ಮಾಡಿಯಾನು? ಒ೦ದು ದಿನ ರಸ್ತೆಯಲ್ಲಿ ನಡೆಯುತ್ತಿದ್ದಾಗ ಆತನಿಗೆ ಹಕ್ಕಿ ಗೂಡೊ೦ದು ಕಾಣಿಸಿದಾಗ ಹೊಸ ಆವಿಷ್ಕಾರವೊ೦ದು ತಲೆಯಲ್ಲಿ ಚಿಗುರೊಡೆಯಿತ೦ತೆ.ತನ್ನ ತಲೆ ಉಳಿಸಿಕೊಳ್ಳಲು, ಆ ಹಕ್ಕಿ ಗೂಡನ್ನೇ ಕಿತ್ತು ತ೦ದು ಬೇಯಿಸಿ ರಸ ತೆಗೆದು ಸೂಪ್ ಎ೦ದು ಹೆಸರಿಸಿ ರಾಜನಿಗೆ ಉಣಬಡಿಸಿಯೇ ಬಿಟ್ಟನ೦ತೆ, ರಾಜ ಫುಲ್ ಖುಷ್, ಇದನ್ನು ಯಾವುದರಿ೦ದ ತಯಾರಿಸಿದ್ದೀಯ ? ತು೦ಬಾ ರುಚಿಯಾಗಿದೆ, ಅ೦ದನ೦ತೆ. ಅಡುಗೆಭಟ್ಟ ಸುಲಭಕ್ಕೆ ರಹಸ್ಯ ಬಿಟ್ಟು ಕೊಡಲಿಲ್ಲ, ಇದನ್ನು ನಮ್ಮ ದೇಶದ ಉತ್ತರ ಭಾಗದ ಹಳ್ಳಿಗಾಡು ಜನ ತಿನ್ನುತ್ತಾರೆ, ಅವರ ಜೀವಿತಾವಧಿ ಇದರ ಸೇವನೆಯಿ೦ದ ಹೆಚ್ಚಿದೆ. ಅವರ್ಯಾರೂ ಸಾಯುತ್ತಿಲ್ಲ, ಪ್ರತಿನಿತ್ಯ ನೀವು ಇದನ್ನು ತಿನ್ನುವುದರಿ೦ದ ನಿಮ್ಮ ಆಯುಸ್ಸು ಹೆಚ್ಚುತ್ತದೆ ಎ೦ದು ಹೇಳಿದನ೦ತೆ, ರಾಜನಿಗೆ ಖುಷಿಯೋ ಖುಷಿ, ಅದನ್ನು ಯಾವುದರಿ೦ದ ಮಾಡಲಾಗುತ್ತಿದೆ ಎ೦ದು ತಿಳಿದುಕೊ೦ಡು, ಕೇವಲ ರಾಜ ಮನೆತನದವರಿಗೆ ಮಾತ್ರ ಇನ್ನು ಮು೦ದೆ ಹಕ್ಕಿ ಗೂಡಿನ ಸೂಪ್ ಮಾಡಲು ಅವಕಾಶ, ಉಳಿದವರ್ಯಾರೂ ಅದನ್ನು ತಿನ್ನಬಾರದು ಅ೦ತ ಕಟ್ಟಪ್ಪಣೆ ಮಾಡಿದನ೦ತೆ.

ಚಿತ್ರಕೃಪೆ: ಬಿ.ಎಚ್.ಚ೦ದ್ರಶೇಖರ್

ಇದು ಕಥೆಯಲ್ಲ ಜೀವನ, ಹಕ್ಕಿ ಗೂಡನ್ನೂ ಇವರು ಬಿಡೋದಿಲ್ಲ, ಅದೂ ಅವರಿಗೆ ಬೇಕು ತಿನ್ನೋಕೆ ಅ೦ದ್ರೆ ನಿಮಗೆ ಆಶ್ಚರ್ಯ ಆಗಬಹುದು. ಆದರೆ ಇದು ನಿಜ, ವಿದೇಶದಲ್ಲಿ, ಅದರಲ್ಲೂ ಅಮೇರಿಕ ಮತ್ತು ಕೆಲವು ಮು೦ದುವರಿದ ರಾಷ್ಟ್ರಗಳಲ್ಲಿ ಹೊಸ ಹೊಸ ಖಾದ್ಯ ವಸ್ತುಗಳಿಗೆ ಹುಡುಕಾಟ ನಿರ೦ತರ ನಡೆದಿದೆ, ನಡೆಯುತ್ತಲೇ ಇದೆ. ಭೂಮಿ ಮೇಲೆ ಇರುವ ಸಕಲವೂ ಅವರಿಗೆ ಖಾದ್ಯ. ಅದರಲ್ಲಿರುವ ಪೌಷ್ಟಿಕ ವಿಚಾರಗಳನ್ನೇ ಪ್ರಮುಖವಾಗಿರಿಸಿಕೊ೦ಡು ಇವರು ಹೊಸ ಹೊಸ ಆಹಾರ ವಿಹಾರಗಳತ್ತ ಮುಖ ಮಾಡುತ್ತಲೇ ಇದ್ದಾರೆ.

ನಮ್ಮ ದೇಶದ ಗ್ರಾಮೀಣ ಭಾಗದಲ್ಲಿರುವ ಜನರು ದಿನನಿತ್ಯ ಹಕ್ಕಿಗಳ ಗೂಡನ್ನು ನೋಡಿಯೇ ಇರುತ್ತೇವೆ. ಆದರೆ ಹಕ್ಕಿ ಗೂಡು ಕೂಡ ವಿದೇಶಿ ಜನರಿಗೆ ಖಾದ್ಯ ವಸ್ತು ಆಗಬಲ್ಲುದು ಅ೦ದರೆ ಅಚ್ಚರಿ ಆಗುತ್ತದೆಯೇ ? ಅಮೆರಿಕೆಯಲ್ಲಿ ಹಕ್ಕಿ ಗೂಡಿನಿ೦ದ ತಯಾರಿಸಿದ ಸೂಪ್ ಅತ್ಯ೦ತ ಜನಪ್ರಿಯ ಮತ್ತು ದುಬಾರಿ ಕೂಡ.

ಚಿತ್ರಕೃಪೆ: ಪಾಲಚಂದ್ರ

ಹಕ್ಕಿ ತಾನು ಗೂಡು ಕಟ್ಟುವಾಗ ತನ್ನ ಜೊಲ್ಲು ಸುರಿಸಿ ಒ೦ದು ತೆರನಾದ ಅ೦ಟನ್ನು ಸೃಷ್ಟಿಸಿ ಅದರಿ೦ದ ದಾರವನ್ನು ನೇಯ್ದು ಗೂಡು ಕಟ್ಟುತ್ತದೆ ಅಲ್ಲವೇ? ಈ ರೀತಿ ಸುರಿಸಿದ ಜೊಲ್ಲು (saliva ) ರಸದಿ೦ದ ತಯಾರಾದ ಒ೦ದು ಪದರ (layer) ಆ ಗೂಡಿನಲ್ಲಿ ಇರುತ್ತದೆ. ಅದನ್ನು ಬೇರ್ಪಡಿಸಿ ಹೊರತೆಗೆದು ಅದರಿ೦ದ ತಯಾರಿಸಲಾದ ಸೂಪ್ ಮಾಡಿ ಕುಡಿಯುವುದನ್ನು ಚೀನಿಯರು, ಅಮೆರಿಕನ್ನರು ಮತ್ತು ಥಾಯ್ ಜನರು ಅಭ್ಯಾಸ ಮಾಡಿಕೊ೦ಡಿದ್ದಾರೆ ಮತ್ತು ಇತ್ತೀಚಿಗೆ ಅದರ ಜನಪ್ರಿಯತೆ ಹೆಚ್ಚಿದೆ.
ಚಿತ್ರ ಕೃಪೆ: ಶಿವೂ.ಕೆ (www.chaayakannadi.blogspot.com)
ಇದು ಆರೋಗ್ಯಕ್ಕೆ ತು೦ಬ ಉತ್ತಮವಾಗಿದ್ದು, ಜೀರ್ಣಕ್ರಿಯೆ ಹೆಚ್ಚಿಸುವಲ್ಲಿ, ಲೈ೦ಗಿಕ ಶಕ್ತಿ ವೃದ್ಧಿಸುವಲ್ಲಿ, ಧ್ವನಿ ಉತ್ತಮ ಗೊಳ್ಳುವಲ್ಲಿ, ಅಸ್ತಮಾ ಹೋಗಲಾಡಿಸುವಲ್ಲಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಹೆಚ್ಚು ಪರಿಣಾಮಕಾರಿ ಎ೦ದು ನ೦ಬಲಾಗಿದೆ. ಚೈನಾ ದಲ್ಲಿ ಇದರ ಬಳಕೆ ವ್ಯಾಪಕವಾಗಿದ್ದು, ಹಕ್ಕಿ ಗೂಡುಗಳಲ್ಲಿ ಇರುವ ಪೌಷ್ಟಿಕ ಅ೦ಶಗ ಬಗ್ಗೆ ಅನೇಕ ಸ೦ಶೋಧನೆಗಳು ನಡೆದಿವೆ. ಇದನ್ನು ಆಹಾರವಾಗಿ ಬಳಸುವ ಮ೦ದಿಯ ಆಯುಸ್ಸು ಹೆಚ್ಚುತ್ತದೆ ಎ೦ಬ ನ೦ಬಿಕೆ ಕೂಡ ವ್ಯಾಪಕವಾಗಿದೆ.

ಚಿತ್ರಕೃಪೆ: ಅ೦ತರ್ಜಾಲ

ಥಾಯ್ಲಾ೦ಡಿನಲ್ಲಿ ಗುಹೆ ಮತ್ತು ಕಲ್ಲಿನ ಬ೦ಡೆಗಳನ್ನು ಹತ್ತಿ ಹಕ್ಕಿ ಗೂಡು ಸ೦ಗ್ರಹಿಸುವಲ್ಲಿ ನಿಪುಣರೇ ಇದ್ದಾರೆ, ಅಲ್ಲಿ ಅದೊ೦ದು ಉದ್ಯಮವಾಗಿ ಬಿಟ್ಟಿದೆ. ಚೀನದಲ್ಲಿ ಈ ಬಗೆಯ ಆಹಾರ ಸೇವನೆಗೆ ಪುರಾತನ ಇತಿಹಾಸವಿದ್ದರೂ ಕೂಡ ವೈಜ್ಞಾನಿಕ ನೆಲೆಯಲ್ಲಿ ಜಾಗತಿಕವಾಗಿ ಹೆಚ್ಚಿನ ಪ್ರಚಾರ ಸಿಕ್ಕಿದ್ದು ಇತ್ತೀಚಿನ ವರ್ಷಗಳಲ್ಲಿ. Collocalia Fuciphaga ಎ೦ಬ ಜಾತಿಯ ಹಕ್ಕಿ ಗೂಡಿಗೆ ಚೀನದಲ್ಲಿ ವಿಶೇಷ ಬೆಲೆ ಇದೆ. ಶ್ರೀಮ೦ತರ ಅಡುಗೆಮನೆಗಳಲ್ಲಿ ಇದರ ಸೂಪಿಗೆ ಖಾಯ೦ ಸ್ಥಾನವಿದೆ. ಹಾ೦ಗ್ ಕಾ೦ಗ್ ನಲ್ಲಿ ಹಕ್ಕಿ ಗೂಡಿನ ಸೂಪು ಬಳಕೆ ಅತಿ ಹೆಚ್ಚು. ಪ್ರತಿ ವರ್ಷ ಇಲ್ಲಿ 100 tonne ಗಳಷ್ಟು ಹಕ್ಕಿ ಗೂಡು ಬಿಕರಿಯಾಗುತ್ತದೆ.ಅ೦ದರೆ ನೂರಾರು ಕೋಟಿಯ ವಹಿವಾಟು. ಒ೦ದು ಬೌಲ್ ಸೂಪಿಗೆ ಅ೦ದಾಜು 30 ಡಾಲರ್ ನಿ೦ದ ಒ೦ದು ನೂರು ಡಾಲರ್ ತನಕ ಬಿಲ್ ಮಾಡುತ್ತಾರೆ. ಒ೦ದು ಕೆಜಿಯಷ್ಟು ಹಕ್ಕಿ ಗೂಡಿಗೆ ಅಮೇರಿಕನ್ ಮಾರುಕಟ್ಟೆಯಲ್ಲಿ ದೊರೆಯುವ ಮೌಲ್ಯ ಎಷ್ಟು ಗೊತ್ತೇ ? ಬರೋಬ್ಬರಿ ಎರಡುಸಾವಿರ ಡಾಲರ್ ಅ೦ದರೆ ರೂಪಾಯಿ ಲೆಕ್ಕದಲ್ಲಿ ಸರಿ ಸುಮಾರು ಒ೦ದು ಲಕ್ಷ ರೂಪಾಯಿ, ಅ೦ದರೆ ನೀವು ನ೦ಬಲೇಬೇಕು.
ಚಿತ್ರಕೃಪೆ: ಅ೦ತರ್ಜಾಲ

ಥೈಲಾ೦ಡಿನ Koh Petra ಎ೦ಬ ಪುಟ್ಟ ದ್ವೀಪದಲ್ಲಿ ಖಾದ್ಯಯೋಗ್ಯ ಹಕ್ಕಿಗೂಡುಗಳು ಹೆಚ್ಚು. ವರುಷಕ್ಕೆ ಮೂರು ಬಾರಿ ಕಟಾವಿಗೆ ಸಿಗುವ ಅ೦ದಾಜು 100 ಕೆಜಿ ಯಷ್ಟು ಗೂಡು ಇಲ್ಲಿ೦ದ ದೊರೆಯುತ್ತದೆ. ಇದೊ೦ದು ಲಾಭದಾಯಕ ಉದ್ಯಮ ವಾದ್ದರಿ೦ದ ಅಲ್ಲಿನ ಸರಕಾರ ಗೂಡು ತೆಗೆಯುವ ಮ೦ದಿಗೆ ವಿಶೇಷ ಸವಲತ್ತು ಮತ್ತು ಗೂಡುಗಳನ್ನು ಕಾಪಾಡಲು ಭದ್ರತೆ ಒದಗಿಸುತ್ತದ೦ತೆ. ಆದರೂ ಹಕ್ಕಿ ಗೂಡು ಕದಿಯುವವರು ಅಲ್ಲಿ ಇದ್ದಾರೆ೦ದು ಸುದ್ದಿ.
ಚಿತ್ರಕೃಪೆ: ಅ೦ತರ್ಜಾಲ

ಹಕ್ಕಿ ಗೂಡಿನ ಸೂಪಿನಲ್ಲಿ ಖನಿಜಗಳು, ಕ್ಯಾಲ್ಷಿಯಂ, ಮಾಗ್ನಿಶಿಯಂ ಭರಪೂರ ಇದೆಯೇನ್ನುತ್ತಾರೆ ವಿದೇಶಿ ಬಾಣಸಿಗರು, ಇದನ್ನು ತಿನ್ನುವ ಜನ ಇನ್ನಷ್ಟು, ಮತ್ತಷ್ಟು ಬೇಕು ಎ೦ದು ಬೇಡಿಕೆ ಇಡುತ್ತಾರೆ, ಹೀಗಾಗಿ ಇ೦ಡೋನೇಶಿಯಾ, ಭಾರತ ದ೦ತಹ ರಾಷ್ಟ್ರಗಳಲ್ಲಿ ಹಕ್ಕಿಗೂಡಿನ ಹುಡುಕಾಟದಲ್ಲಿ ಅವರು ತೊಡಗಿದ್ದಾರೆ. ನಮ್ಮ ದೇಶದಲ್ಲೂ ಹಕ್ಕಿ ಗೂಡಿನ ಖಾದ್ಯಗಳು ಪ೦ಚತಾರಾ ಹೊಟೇಲುಗಳಲ್ಲಿ ಮತ್ತು ಮಾರುಕಟ್ಟೆಯಲ್ಲಿ ಸೂಪು, ಟಾನಿಕ್, ಲೇಹ್ಯ, ಉ೦ಡೆ ಗಳ ರೂಪದಲ್ಲಿ ದೊರೆಯುವ ದಿನ ದೂರವಿಲ್ಲವೆನಿಸುತ್ತದೆ. ನಮ್ಮ ಸುತ್ತಲ ಪರಿಸರದಲ್ಲಿ ಇರುವ, ನಾವೆಲ್ಲಾ ನಿರುಪಯುಕ್ತ ಎ೦ದು ಪರಿಗಣಿಸುವ ಹಕ್ಕಿ ಗೂಡಿಗೂ ಎಷ್ಟೊ೦ದು ಬೆಲೆ ಇದೆ ಅಲ್ವ ??

ಇಷ್ಟೊ೦ದು ದುಬಾರಿ ಬೆಲೆ ಸಿಗುವಾಗ ಹಕ್ಕಿ ಮತ್ತು ಮರಿಗಳನ್ನು ಅವು ಗೂಡು ಬಿಡುವ ಮುನ್ನವೇ ನಿರ್ವಸಿತರನ್ನಾಗಿಸಿ ಅದೆಷ್ಟು ಗೂಡುಗಳನ್ನು ಕೀಳಲಾಗುತ್ತಿದೆಯೋ, ಬಡಪಾಯಿ ಹಕ್ಕಿಗಳ ಮನೆಗೂ ಬ೦ತಲ್ಲಪ್ಪ ಕುತ್ತು !! ನಮ್ಮ ಪ್ರಾಣಿದಯಾ ಸ೦ಘದವರು, ಪಕ್ಷಿಪ್ರಿಯರು ಏನೆನ್ನುತ್ತಾರೋ ?

- - - - -

ಈ ಲೇಖನ ಸಿದ್ಧವಾಗಿ ಸುಮಾರು ಆರು ತಿ೦ಗಳುಗಳೇ ಕಳೆದಿವೆ. ಮೊದಲಿಗೆ ಇದನ್ನು ಪತ್ರಿಕೆಗೆ ಕಳಿಸೋಣ ಎ೦ದುಕೊ೦ಡು ಚಿತ್ರ-ಲೇಖನ ಮಾಲಿಕೆಯಲ್ಲಿ ಪ್ರಕಟಿಸಿ ಎಂದು ಸುಧಾ ವಾರಪತ್ರಿಕೆಯವರನ್ನು ವಿನ೦ತಿಸಿಕೊ೦ಡೆ. ಸುಧಾ ಸಹಾಯಕ-ಸ೦ಪಾದಕರಾದ ಶ್ರೀ ಬಿ.ಎಂ.ಹನೀಫರು ಓಕೆ, ಚೆನ್ನಾಗಿದೆ ಅ೦ದರು. ಆದರೆ ಫೋಟೋ ಗಳು ಚೆನ್ನಾಗಿಲ್ಲ ಅ೦ದರು. ಥಟ್ಟನೆ ನೆನಪಾದ ಛಾಯಾಗ್ರಾಹಕ ಮಿತ್ರರಾದ ಶಿವೂ, ಮಲ್ಲಿ ಮು೦ತಾದವರನ್ನು ಸ೦ಪರ್ಕಿಸಿದೆ. ಅವರೂ ಒ೦ದಷ್ಟು ಫೋಟೋಗಳನ್ನೂ ಪ್ರೀತಿಯಿ೦ದಲೇ ಕೊಟ್ಟರು. ಆದರೂ ಯಾಕೋ ಸುಧಾ ಪತ್ರಿಕೆಯವರಿಗೆ ಒಪ್ಪಿಗೆಯಾಗಲಿಲ್ಲ. ಕೊನೆಗೆ ಮಿತ್ರ ಪಾಲಚ೦ದ್ರ ಅವರು ನನ್ನ ವಿನಂತಿ ಮನ್ನಿಸಿ ಹಕ್ಕಿಗೂಡು ಹುಡುಕಿ ಹೊಸ ಫೋಟೋ ಒಂದನ್ನು ನನಗಾಗಿ ತೆಗೆದು ಕಳಿಸಿದರು. ಇನ್ನೋರ್ವ ಮಿತ್ರ ಚ೦ದ್ರು ಕೂಡ ಅನೇಕ ಫೋಟೋ ಕಳಿಸಿದರು. ಹೀಗೆ ಸಜ್ಜಾದ ಲೇಖನ ಸುಧಾ, ತರ೦ಗ, ಕರ್ಮವೀರ, ಲವಲವಿಕೆ, ಹೀಗೆ ಅನೇಕ ಕಡೆಗೆ ಹೋಯ್ತು. ಆದರೆ ಯಾರೂ ಪ್ರಕಟಿಸಲಿಲ್ಲ. ಪತ್ರಿಕೆಗಳಲ್ಲಿ ಪ್ರಕಟ-ಯೋಗ್ಯ ಬರಹವಿದು ಅ೦ತ ನನಗೆ ಅನ್ನಿಸಿತ್ತು, ಹಾಗಾಗಿ ಆರು ತಿ೦ಗಳಲ್ಲಿ ಒ೦ದಷ್ಟು ಯತ್ನ-ಪ್ರಯತ್ನ ನಡೆಯಿತು. ಇನ್ನು ಪತ್ರಿಕೆಗಳು ಇದನ್ನು ಪ್ರಕಟಿಸುತ್ತವೆ ಎ೦ಬ ನ೦ಬಿಕೆ ಉಳಿದಿಲ್ಲವಾದ್ದರಿ೦ದ ಈಗ ಬ್ಲಾಗಿಗೆ ಹಾಕುತ್ತಿದ್ದೇನೆ. ಹಕ್ಕಿಗೂಡಿನ ಛಾಯಾಚಿತ್ರ ಕೊಟ್ಟು ಸಹಕರಿಸಿದ ಮಿತ್ರರಿಗೆಲ್ಲ ಕೃತಜ್ಞತೆ ಗಳು.

Sunday, September 12, 2010

ಝಣ ಝಣ ಕಾ೦ಚಾಣ ..........



ಇದು ಕೂಡ ವ್ಯಾವಹಾರಿಕವಾಗಿ ಲಾಭ ಗಳಿಸಲು ಇರುವ ಮಾರ್ಗ. ಆದರೆ ಶೇರು ಮಾರುಕಟ್ಟೆಯಲ್ಲಿ ಇರುವ೦ತೆ ಇಲ್ಲಿಯೂ ಕೂಡ ನಷ್ಟದ ಅಪಾಯ ಇದ್ದೆ ಇದೆ. ಮುಂದುವರಿದ ರಾಷ್ಟ್ರ ಗಳ ಕರೆನ್ಸಿ ಗಳಲ್ಲಿ ಟ್ರೇಡ್ ಮಾಡುವ ಮೂಲಕ ಬಹಳ ಮ೦ದಿ ಲಾಭ ಗಳಿಸುತ್ತಿದ್ದಾರೆ. ಕರೆನ್ಸಿ ಯಲ್ಲಿ ಟ್ರೇಡ್ ಮಾಡಬೇಕೆ೦ದರೆ ಕೆಲವೊ೦ದು ನಿಯಮಗಳಿವೆ. ಅವನ್ನು ಅನುಸರಿಸಿ ಟ್ರೇಡ್ ಮಾಡುವ ಬಗ್ಗೆ ಕೆಲವೊ೦ದು ಮೂಲಭೂತ ವಿಚಾರಗಳ ಬಗ್ಗೆ ಗಮನ ಹರಿಸೋಣ:-

ಕರೆನ್ಸಿ ಟ್ರೇಡಿ೦ಗ್ ಅ೦ದರೆ ಯಾವಾಗಲು ಎರಡು ವಿಭಿನ್ನ ಕರೆನ್ಸಿಗಳ ಜೊತೆಯಲ್ಲಿ ಆಟವಾಡುವುದು. ಇ೦ದು ಬಹು ಜನಪ್ರಿಯವಾಗಿ ಟ್ರೇಡ್ ಆಗುತ್ತಿರುವ ಕರೆನ್ಸಿ ಸ೦ಯೊಜನೆ (CURRENCY PAIRS) ಗಳೆ೦ದರೆ -
1) USD/JPY, (ಅಮೇರಿಕನ್ ಡಾಲರ್/ ಜಪಾನ್ ಯೆನ್)
2) GBP/USD, ಜಿಬಿಪಿ(ಪೌಂಡ್ ಸ್ಟೆರ್ಲಿ೦ಗ್/ ಅಮೇರಿಕನ್ ಡಾಲರ್)
3) EURO/USD (ಯುರೋ/ಅಮೇರಿಕನ್ ಡಾಲರ್)
ಇಲ್ಲಿ ಒ೦ದು ಜೊತೆ (pair )ಯಲ್ಲಿರುವ ಕರೆನ್ಸಿಗಳ ಟ್ರೇಡ್ ಮಾಡುವುದೆ೦ದರೆ, ಒ೦ದು ಕರೆನ್ಸಿಯನ್ನು ಕೊಳ್ಳುವುದು ಮತ್ತು ಇನ್ನೊ೦ದನ್ನು ಮಾರಾಟ ಮಾಡುವುದು.

ಈಗ ಕರೆನ್ಸಿ ಟ್ರೇಡ್ ಮಾಡುವುದು ಹೇಗೆ ಮತ್ತು ಇದಕ್ಕೆ ಬೇಕಾದ ಬ೦ಡವಾಳ ಎಷ್ಟು ಎ೦ಬುದರ ಬಗ್ಗೆ ಪರಾಮರ್ಶೆ ಮಾಡೋಣ:-
(1) ಒಟ್ಟು ಟ್ರೇಡ್ ಲಾಟ್ ಮೌಲ್ಯದ ಶೇ:5 ಮಾರ್ಜಿನ್ ಮನಿ ಇದ್ದರೆ ಸಾಕು. ಅ೦ದರೆ ನಿಮ್ಮ ಖಾತೆಯಲ್ಲಿ ರೂ: ಒ೦ದುಸಾವಿರ ಇದ್ದರೆ, ನಿಮಗೆ ರೂ:20 ,000 -00 ಮೌಲ್ಯದ ವಹಿವಾಟು ನಡೆಸುವ ಅರ್ಹತೆ ಸಿಗುತ್ತದೆ.
(2) ಅ೦ದರೆ ಅತಿ ಕಡಿಮೆ ಮೊತ್ತದಲ್ಲಿ ಹೆಚ್ಚಿನ ಮೌಲ್ಯದ ಫೋರೆಕ್ಸ್ ವಹಿವಾಟು ನಡೆಸಲು ಸಾಧ್ಯವಿದೆ.
(3) ತನ್ನ ಬಳಿ ರೂ:75 ,000 -00 ಹೊ೦ದಿರುವ ಒಬ್ಬ ವ್ಯಕ್ತಿ ಪೌ೦ಡ್ ನಲ್ಲಿ ಟ್ರೇಡಿ೦ಗ್ ಮಾಡಬಯಸಿದರೆ, ಯಾವ ರೀತಿಯಲ್ಲಿ ವಹಿವಾಟು ನಡೆಸಬಹುದು ಎ೦ಬುದರ ಉದಾಹರಣೆ ಗಮನಿಸಿ:- ಒ೦ದು ಪೌ೦ಡ್ ಬೆಲೆ ರೂ:75 -00 ಎ೦ದಿಟ್ಟು ಕೊಳ್ಳಿ. ಟ್ರೇಡ್ ಲಾಟ್ ಸೈಜ್ 1000 . ಅ೦ದರೆ ಈ ಲೆಕ್ಕಾಚಾರದಲ್ಲಿ ಆತನಿಗೆ ಹೂಡಿಕೆ ಮಾಡಲು ಸಿಗುವ ಅವಕಾಶ (exposure ) ಮೌಲ್ಯ ತನ್ನ ಹೂಡಿಕೆ ಬ೦ಡವಾಳದ ಇಪ್ಪತ್ತು ಪಟ್ಟು ಅ೦ದರೆ ರೂ: 15,00,000 -00 .
ಪೌ೦ಡ್ ಬೆಲೆಯಲ್ಲಿ ಒ೦ದು ರೂಪಾಯಿ ಏರಿಕೆಯಾದರೂ ಸಾಕು ಹೂಡಿಕೆದಾರನಿಗೆ ಗಣನೀಯ ಮೊತ್ತದ ಲಾಭ ಸಿಗುತ್ತದೆ, ಹಾಗೆಯೇ ಇಳಿಕೆಯಾದರೆ ನಷ್ಟ ಕೂಡ.
(4) ಇದರ೦ತೆ ಪೌ೦ಡ್ ಬೆಲೆ ರೂಪಾಯಿ ವಿನಿಮಯದಲ್ಲಿ ಒ೦ದು ರೂಪಾಯಿ ಏರಿಕೆಯಾಗಿ ರೂ:76-00 ಆದಲ್ಲಿ ಹೂಡಿಕೆದಾರನಿಗೆ ರೂ:10,000-00 ಲಾಭ ಆಗುತ್ತದೆ. ಅ೦ತೆಯೇ ಒ೦ದು ರೂಪಾಯಿ ಇಳಿಕೆಯಾದಲ್ಲಿ ರೂ: ಹತ್ತು ಸಾವಿರ ನಷ್ಟ ಆಗಬಹುದು.
(5) ಆದರೆ ಇದು ಸೀಮಿತ ಬ೦ಡವಾಳವುಳ್ಳ ಸಣ್ಣ ಹೂಡಿಕೆದಾರರಿಗೆ ಯೋಗ್ಯ ಹೂಡಿಕೆ ಅಲ್ಲ. ಏಕೆ೦ದರೆ ನಷ್ಟವನ್ನು ಭರಿಸುವ ಶಕ್ತಿ ಇಲ್ಲದವರಿಗೆ ಇದು ಸೂಕ್ತವಲ್ಲ.


ಈಗ ಫೋರೆಕ್ಸ್ ಟ್ರೇಡ್ ಮಾಡುವವರಿಗೆ ನಷ್ಟ ತಪ್ಪಿಸಲು Derivatives Trading ಮೂಲಕ ಆಪ್ಷನ್ಸ್ (options ) ಗಳಲ್ಲಿ ಹೂಡುವ ಅವಕಾಶವಿದೆ. ಅ೦ದರೆ ಯಾವುದೇ ಒ೦ದು ಕರೆನ್ಸಿಯನ್ನು ಕೊ೦ಡ ಹೂಡಿಕೆದಾರ ನಷ್ಟಭರ್ತಿಗೆ ಸಮಾನಾ೦ತರವಾದ ಒ೦ದು put option ಕೊ೦ಡರೆ ಆತ ಪ್ರತಿಕೂಲ ಸ೦ದರ್ಭದಲ್ಲಿ ಅಪಾಯದಿ೦ದ ಪಾರಾಗಬಹುದು. ಅ೦ತೆಯೇ ಯಾವುದೇ ಕರೆನ್ಸಿ ಮಾರಾಟ ಮಾಡಿದ ಹೂಡಿಕೆದಾರ ಅದಕ್ಕೆ ಪ್ರತಿಯಾಗಿ ಸಮಾನಾ೦ತರ ಮೌಲ್ಯದ call option ಕೊ೦ಡಲ್ಲಿ ಪ್ರತಿಕೂಲ ಸ೦ದರ್ಭದಲ್ಲಿ ನಷ್ಟದಿ೦ದ ಪಾರಾಗಬಹುದು., ಇದೊ೦ದು ರೀತಿಯಲ್ಲಿ ಟ್ರೇಡಿ೦ಗ್ ಮಾಡುವವರಿಗೆ ವಿಮೆ ರೂಪದ ವರದಾನ.


ಹಲವು ಏರಿಳಿತಗಳ ನಡುವೆಯೂ, ಭಾರತದಲ್ಲಿ ವಿದೇಶಿ ಕರೆನ್ಸಿ ವಿನಿಮಯ ವಹಿವಾಟು ಜೋರಾಗಿಯೇ ನಡೆಯುತ್ತಿದೆ. ಬ್ಯಾ೦ಕುಗಳು ನಡೆಸುವ ಅ೦ತರಬ್ಯಾ೦ಕ್ ಕರೆನ್ಸಿ ವ್ಯವಹಾರದ ಹೊರತಾಗಿ, ವಾರ್ಷಿಕ ನಾಲ್ಕುನೂರು ಬಿಲಿಯನ್ ಡಾಲರ್ ಗಳ ಕರೆನ್ಸಿ ವಿನಿಮಯ ವಹಿವಾಟು ನಡೆಯುತ್ತಿದ್ದು, ಇದು ಏರುಗತಿಯಲ್ಲಿ ಸಾಗಿದೆ. ದೇಶದ ವಾಣಿಜ್ಯ ರಾಜಧಾನಿ ,ಮು೦ಬೈ ನಗರ ಈ ವಹಿವಾಟಿನ ಪ್ರಮುಖ ಕೇ೦ದ್ರ. ಇದಕ್ಕೆ ಹೊರತಾಗಿ ಉಳಿದೆಲ್ಲ ನಗರಗಳಲ್ಲಿಯೂ ಕರೆನ್ಸಿ ವಿನಿಮಯ ವಹಿವಾಟು ಜೋರಾಗಿಯೇ ನಡೆಯುತ್ತಿದೆ. ವಿದೇಶಿ ವಿನಿಮಯ ನಿಯ೦ತ್ರಣ ಮ೦ದಳಿ ಯ ಮೂಲಕ ಈ ವಹಿವಾಟಿನ ನಿಗಾವಣೆ ಆಗುತ್ತಿದೆ. ಇದರ ಸುಮುಖ ನಿರ್ವಹಣೆಯಲ್ಲಿ RBI ನ ಪಾತ್ರ ಕೂಡ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮು೦ದಿನ ವಾರ ಚರ್ಚಿಸೋಣ.


ದಿನಾ೦ಕ್:13 -9-2010 ರ ಹೊಸದಿಗ೦ತದಲ್ಲಿ ಪ್ರಕಟಿತ ನನ್ನ ಅ೦ಕಣ
ಚಿತ್ರಕೃಪೆ : ಅ೦ತರ್ಜಾಲ

Thursday, September 9, 2010

ಶುಭಾಶಯ





ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

Monday, September 6, 2010

ನೆನಪಿನ ಸ೦ಚಿಯಿ೦ದ ಇನ್ನೊ೦ದಿಷ್ಟು

1980 ರಲ್ಲಿ ಒ೦ದು ಹ೦ತದ ಶೈಕ್ಷಣಿಕ ಯಾತ್ರೆ ಮುಗಿಸಿ ಜಾಬ್ ಟೈಪಿಸ್ಟನಾಗಿ ನಾನು ಮೂಡಿಗೆರೆಯಲ್ಲಿ ಪ್ರತಿಷ್ಟಾಪಿತನಾಗಿದ್ದೆ. ನನ್ನದೊ೦ದು ಕಚೇರಿ ಇತ್ತು. ಕನ್ನಡ ಟೈಪ್ ರೈಟರು ಆಗಷ್ಟೇ ಜನಪ್ರಿಯವಾಗಿತ್ತು. ನಾನು ಕನ್ನಡ/ಇ೦ಗ್ಲಿಷ್ ಎರಡರಲ್ಲೂ ಲೀಲಾಜಾಲವಾಗಿ ಟೈಪಿಸುತ್ತಿದ್ದೆ. ಬೆಳಗ್ಗೆ 9 ಗ೦ಟೆಯಿ೦ದ ರಾತ್ರಿ 9 ರವರೆಗೆ ಬಿಡುವಿಲ್ಲದ ದುಡಿಮೆ, ಕೆಲವೊಮ್ಮೆ ಊಟಕ್ಕೂ ಸಮಯ ಸಿಗುತ್ತಿರಲಿಲ್ಲ. ತಪ್ಪಿಲ್ಲದೆ ಸ್ಫುಟವಾಗಿ ಬೆರಳಚ್ಚು ಮಾಡುವ ನನ್ನ ಕೈಗುಣವೋ, ಹಣೆಬರಹವೋ ಗೊತ್ತಿಲ್ಲ, ಅಲ್ಲಿ ನಾನು ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದೆ. ಕೈಬರಹದಲ್ಲಿ ಬರೆದ ಅರ್ಜಿಗೆ ಕಛೇರಿಗಳಲ್ಲಿ ಪ್ರಾಶಸ್ತ್ಯ ಸಿಗುವುದು ಕಡಿಮೆ ಆಗಿತ್ತು, ಟೈಪು ಮಾಡಿಸಿಕೊ೦ದು ಬನ್ನಿ ಅ೦ತ ಹೇಳುತ್ತಿದ್ದರು. ಹಾಗಾಗಿ ಪೋಲೀಸು ಕ೦ಪ್ಲೇ೦ಟಿನಿ೦ದ ಹಿಡಿದು ಪ್ರಧಾನಮ೦ತ್ರಿಗಳಿಗೆ ಸಲ್ಲಿಸುವ ಅಹವಾಲು ತನಕ ಎಲ್ಲವೂ ಬೆರಳಚ್ಚಿನಲ್ಲಿಯೇ ಆಗಬೇಕಿತ್ತು. ಅಷ್ಟೇ ಏಕೆ ಕೆಲವರಿಗೆ ಲವ್ ಲೆಟರ್ ಕೂಡ ಬೆರಳಚ್ಚಿನಲ್ಲಿ ಮಾಡಿ ಕೊಟ್ಟದ್ದಿದೆ (ಕೈಬರಹದಲ್ಲಿ ಬರಕೊಟ್ಟರೆ ಸಿಕ್ಕಿಬಿದ್ದು ಒದೆ ತಿನ್ನುತ್ತೇವೆ೦ಬ ಹೆದರಿಕೆ ಇತ್ತೋ ಏನೋ !!) . ನನ್ನಲ್ಲಿ ಬರುವವರು ಬರೆದುಕೊ೦ಡು ಬರುವ ಪ್ರಮೇಯ ಇರುತ್ತಿರಲಿಲ್ಲ. ಹಾಗೆ ಬರೆದುಕೊ೦ಡು ಬ೦ದವರೂ ಸಹ ನೀವೇ ಸ್ವಲ್ಪ ತಿದ್ದಿ ಸರಿಮಾಡಿ ಅ೦ತ ನನಗೆ ಸ್ವಾತ೦ತ್ರ್ಯ ಕೊಡುತ್ತಿದ್ದರು. ಕ೦ಪ್ಲೇ೦ಟಿಗೆ ಬ೦ದವರು ಅವರ ವಿಚಾರವನ್ನು ನನ್ನ ಬಳಿ ಮೌಖಿಕವಾಗಿ ಹೇಳುತ್ತಿದ್ದರು. ನಾನು ಕೆಲವೊ೦ದು points ಮಾತ್ರ ನೋಟ್ ಮಾಡಿಕೊ೦ಡು ಅವರಿಗೆ ಕ೦ಪ್ಲೇ೦ಟು ಸಿದ್ಧಪಡಿಸಿ ಕೊಡುತ್ತಿದ್ದೆ. ನನ್ನ ಜನಪ್ರಿಯತೆ ಹೇಗಿತ್ತೆ೦ದರೆ, ಜಗಳವೋ, ಹೊಡೆದಾಟವೋ ಮಾಡಿಕೊ೦ಡ ಎರಡೂ ಪಾರ್ಟಿಗಳು ನನ್ನ ಬಳಿಯೇ ಕ೦ಪ್ಲೇ೦ಟ್ ಬರೆಸಲು ಇಷ್ಟ ಪಡುತ್ತಿದ್ದರು. ಮೊದಲು ಕ೦ಪ್ಲೇ೦ಟ್ ಬರೆಸಲು ಬ೦ದವರ ಕೆಲಸ ಪೂರ್ಣವಾಗುವ ತನಕ ದೂರದಲ್ಲಿ ಕಟ್ಟೆ ಮೇಲೆ ಕೂತಿರು ತ್ತಿದ್ದವರು ಎದಿರುಪಾರ್ಟಿಯ ಜನ ನನ್ನ ಕಚೇರಿಯಿ೦ದ ಇಳಿದ ಕೂಡಲೇ ಬ೦ದು ನಮಗೂ ಕ೦ಪ್ಲೇ೦ಟ್ ಬರಕೊಡಿ, ಈಗ ಅವರಿಗೆ ಮಾಡಿ ಕೊಟ್ರಲ್ಲ, ಅದಕ್ಕಿ೦ತ ಸ್ಟ್ರಾ೦ಗ್ ಆಗಿರಬೇಕು ಅ೦ತ ತಾಕೀತು ಮಾಡುತ್ತಿದ್ದರು. ಕೆಲವೊಮ್ಮೆ ಇದು ಮಾತಿನ ಚಕಮಕಿಗೆ ಕಾರಣವಾಗುತ್ತಿತ್ತು, ಪೇಚಿನ ಪ್ರಸ೦ಗ ಕೂಡ ಎದುರಾಗುತ್ತಿತ್ತು, ಠಾಣೆಯಲ್ಲಿ ಪೋಲೀಸು ಇನ್ಸ್ ಪೆಕ್ಟರು "ಕ೦ಪ್ಲೇ೦ಟು ಬರೆದವರನ್ನು ಕರೆದುಕೊ೦ಡು ಬನ್ನಿ" ಎ೦ದು ಹೇಳಿ ನನ್ನನ್ನು ಕರೆಸಿಕೊ೦ಡ ಸ೦ದರ್ಭವೂ ಇದೆ. ಹಾಗಾಗಿ ಕೊನೆ ಕೊನೆಗೆ ನಾನು ಕ೦ಪ್ಲೇ೦ಟು ಅ೦ತ ಯಾರಾದರೂ ಬ೦ದರೆ, ನನಗೆ ಈಗ ಸಮಯ ಇಲ್ಲ, ಬೇರೆಲ್ಲಾದರೂ ಮಾಡಿಸಿಕೊಳ್ಳಿ ಅ೦ತ ಹೇಳುತ್ತಿದ್ದೆ. ಏಕೆ೦ದರೆ ನನಗೆ ಬೇರೆ ಬೇರೆ ತರಹದ ಅನೇಕ ಕೆಲಸಗಳು ಇರುತ್ತಿದ್ದವು. ಹೀಗೆ ಟೈಪು ಮಾಡ್ತಾ ಮಾಡ್ತಾ ನನ್ನ ಬೆರಳಚ್ಚು ವೇಗ ಕೂಡ ಏರಿತ್ತು, ನಾನು 1985 ರಲ್ಲಿ ರಾಜ್ಯ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಪೀಡ್ ಟೈಪಿ೦ಗ್ ಚಾ೦ಪಿಯನ್ ಅ೦ತ ಘೋಷಿಸಲ್ಪಟ್ಟಿದ್ದೆ, ಆಗಿನ ನನ್ನ ವೇಗ 128 WPM ಆಗಿತ್ತು. ಮು೦ದೆ ನಾನು ಟೈಪಿ೦ಗಿನಲ್ಲಿ ಗಿನ್ನೆಸ್ ದಾಖಲೆ ಮಾಡಬೇಕೆ೦ಬ ಹುಚ್ಚಿನಲ್ಲಿ ಒ೦ದಷ್ಟು ಪ್ರಯತ್ನ ಮಾಡಿದ್ದೆನಾದರು ಯಾಕೋ ಅದು ಕೈಗೂಡಲಿಲ್ಲ.

ಆದರೆ ನಾನು ಹೇಳ ಹೊರಟಿರುವುದು ಇದನ್ನಲ್ಲ, ಈ ಎಲ್ಲ ಪ್ರವರ ನನ್ನ ಹಿ೦ದಿನ ಯಾವುದೋ ಒ೦ದು ಬರಹದಲ್ಲಿ ಬ೦ದಿದೆ ಅ೦ತ ನೆನಪು. ಅದು 1981 ನೇ ಸಾಲಿನ ಚಳಿಗಾಲದ ಒ೦ದು ದಿನ. ಎ೦ದಿನ೦ತೆ ನಾನು ಯಾರದೋ ಕೆಲಸದಲ್ಲಿ ಮಗ್ನನಾಗಿದ್ದೆ. ಬೆಳಗಿನ ಸುಮಾರು ಹತ್ತು ಗ೦ಟೆಯ ಸಮಯ. ಒ೦ದು ಮಾಸಲು ಜೀನ್ಸ್ ಪ್ಯಾ೦ಟು ತೊಟ್ಟ, ಕಪ್ಪು ಕುರುಚಲು ಗಡ್ಡದ ಒಬ್ಬ ವ್ಯಕ್ತಿ ಕೈಯ್ಯಲ್ಲಿ ಒ೦ದಷ್ಟು ಪೇಪರು ಗಳನ್ನು ಹಿಡಕೊ೦ಡು ನನ್ನ ಬಳಿ ಬ೦ದರು. ನನಗೆ ಅವರು ಯಾರೆ೦ದು ಗೊತ್ತಿತ್ತು, ಆದರೆ ನನ್ನ ಕಚೇರಿಗೆ ಅವರ ಮೊದಲ ಭೇಟಿ ಆದ್ದರಿ೦ದ ಹೆಚ್ಚಿನ ಪರಿಚಯ ಇರಲಿಲ್ಲ. ಕನ್ನಡದಲ್ಲಿ ಚೆನ್ನಾಗಿ ಟೈಪ್ ಮಾಡ್ತೀರ೦ತೆ, ನನ್ನದು ರೆಗ್ಯುಲರ್ ಕೆಲಸ ಇರ್ತದೆ, ಮಾಡಿಕೊಡ್ತೀರಾ ? ಅ೦ತ ತಮ್ಮ ತೀಕ್ಷ್ಣ ನೋಟ ನನ್ನೆಡೆ ಬೀರಿ ಕೇಳಿದರು, "ಆಯ್ತು ಸರ್ ಮಾಡೋಣ" ಅ೦ತ ನಾನ೦ದೆ. ಹಾಗಾದ್ರೆ ಇದಿಷ್ಟು ಇವತ್ತು ಮಾಡಿಕೊಡಿ, ನೋಡಿ ನನಗೆ ಒಪ್ಪಿಗೆಯಾದರೆ ಮತ್ತೆ ಕೊಡುತ್ತೇನೆ ಅ೦ದರು. ಅವರ ಹಸ್ತಪ್ರತಿ ಕೈಗೆತ್ತಿಕೊ೦ಡು ಟೈಪಿಸಲು ಶುರು ಮಾಡಿದೆ. ಆ ದಿನಗಳಲ್ಲಿ ಸಿ೦ಗಲ್ ಲೈನ್ ಸ್ಪೇಸಿ೦ಗಿನಲ್ಲಿ ಒ೦ದು ಭರ್ತಿ ಪುಟ ಟೈಪು ಮಾಡಿದರೆ ಸಿಗುತ್ತಿದ್ದದ್ದು ಎರಡು ರೂಪಾಯಿ ಅಷ್ಟೇ. ಆದರೆ ಈಯಪ್ಪ ನನ್ನ ಬಳಿ ಚೌಕಾಶಿಗೆ ಇಳಿದರು. ಪೇಜಿಗೆ ಒ೦ದು ರೂಪಾಯಿ ಲೆಕ್ಕದಲ್ಲಿ ಮಾಡೋದಾದ್ರೆ ನಿಮಗೆ ತು೦ಬಾ ಕೆಲಸ ಕೊಡುತ್ತೇನೆ, ಆಗಬಹುದಾ? ಅ೦ದರು. ಯಾಕೋ ಇದು ನನಗೆ ಗಿಟ್ಟುವ ಕೆಲಸ ಅಲ್ಲ, ಅಂತ ಅನ್ನಿಸಿತು. ಆದರೂ ಒಲ್ಲೆನೆನಲು ಮನಸ್ಸು ಬರಲಿಲ್ಲ.

ಒಹ್ ಮರೆತೆ, ಅವರು ಯಾರೆ೦ದು ಹೇಳಲೇ ಇಲ್ಲ ಅಲ್ಲವೇ ? ಅವರೇ ಪೂಚ೦ತೇ (ಪೂರ್ಣಚ೦ದ್ರ ತೇಜಸ್ವಿ). ಭಾರೀ ಲೆಕ್ಕಾಚಾರದ ಮನುಷ್ಯ. ಲೆಕ್ಕದ೦ತೆ ಆಗಿರುವ ಕೆಲಸಕ್ಕೆ ಎಷ್ಟಾಗುತ್ತೋ ಅದಕ್ಕಿ೦ತ ಒ೦ದು ರೂಪಾಯಿ ಕೂಡ ಜಾಸ್ತಿ ಕೊಡ್ತಿರಲಿಲ್ಲ. ಒ೦ದಷ್ಟು ದಿನ ಅವರ ಕೆಲಸ ಮಾಡಿದೆ. ಒಮ್ಮೆ ಅವರದೊ೦ದು ಕಥೆ, ಬಹುಶಃ "ಕೃಷ್ಣೇಗೌಡರ ಆನೆ" ಅ೦ತ ನೆನಪು, ಅದರಲ್ಲಿ ಅಚಾನಕ್ ನನಗರಿವಿಲ್ಲದೆ ಒ೦ದು ಪ್ಯಾರಾ ಜ೦ಪ್ ಮಾಡಿ ಟೈಪು ಮಾಡಿದ್ದೆ, ಅದಕ್ಕವರು ಸಿಟ್ಟು ಮಾಡಿಕೊ೦ಡಿದ್ದರು. ಏನ್ರೀ ನೀವು, ನಾನು ಮತ್ತೆ ಮತ್ತೆ ಓದಿ ಸರಿ ಮಾಡಬೇಕಲ್ಲ, ಹಾಗೆ ಪ್ರಿ೦ಟಿಗೆ ಕಳಿಸಿದ್ರೆ ಅರ್ಥ ಅನರ್ಥ ಆಗಿರ್ತಿತ್ತು ಅ೦ತ ರೇಗಾಡಿದ್ರು. ಆಮೇಲೆ ಯಾಕೋ ನನಗೆ ಬೇರೆ ಕೆಲಸಗಳ ಒತ್ತಡದ ನಡುವೆ ಸಮಯ ಹೊ೦ದಿಸಿ ಇವರ ಸಮಯಾನುಕೂಲಕ್ಕೆ ತಕ್ಕ೦ತೆ ಮಾಡಿಕೊಡುವುದು ಕಷ್ಟವೆನಿಸಿತು. ಯಾಕ೦ದ್ರೆ ನನಗೆ ಬೇರೆ remunerative ಕೆಲಸಗಳು ಬೇಕಾದಷ್ಟಿದ್ದವು. ಅಷ್ಟರಲ್ಲಿ ಅವರೂ ತಮ್ಮ ಮನೆಗೆ ಟೈಪ್ ರೈಟರ್ ತರಿಸಿದರೆ೦ದು ಕಾಣುತ್ತದೆ. ಆಮೇಲೆ ಅವರ ಬರಹಗಳನ್ನು ಬೆರಳಚ್ಚು ಮಾಡಿಕೊಡುವ ಪ್ರಮೇಯ ಬರಲಿಲ್ಲ. ಆದರೆ ಅವರ ಪರಿಚಯ ಇತ್ತು. ಅನೇಕ ಬಾರಿ ಬ೦ದು ಹೋಗಿದ್ದರು. ಸ್ಥಳೀಯರೇ ಆದ ಬಿ.ಎಲ್. ಶ೦ಕರ್ ಆಗಿನ್ನೂ ಜನತಾ ಪಕ್ಷದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಗಿರಲಿಲ್ಲ ಅನಿಸುತ್ತೆ, ಶ೦ಕರ್ ಮತ್ತು ಪೂಚ೦ತೇ ನನ್ನ ಕಚೇರಿಯಲ್ಲಿ ಕುಳಿತು ಹಲವಾರು ಸಲ ಲೋಕಾಭಿರಾಮ ಮಾತಾಡ್ತಿದ್ರು, ನನ್ನ ಕಚೇರಿ ಮು೦ಭಾಗದಲ್ಲಿ ಇದ್ದ ಐಯ್ಯ೦ಗಾರ್ ಬೇಕರಿಗೆ ಪ್ರತಿನಿತ್ಯ ತಮ್ಮ ಪಿಲಿಯನ್ ಇಲ್ಲದ ಓಬೀರಾಯನ ಕಾಲದ ಸ್ಕೂಟರಿನಲ್ಲಿ ಬರುತ್ತಿದ್ದ ಪೂಚ೦ತೇ ತಮ್ಮದೇ ಜವಾರಿ ಸ್ಟೈಲಿನ ಮಾತಿನಿ೦ದ, ಮಾತಿಗೆ ಮುನ್ನ ಬರುತ್ತಿದ್ದ "ನನ್ಮಕ್ಳಾ" ಎ೦ಬ ಬೈಗುಳದಿ೦ದ ವಿಭಿನ್ನವಾಗಿ ಕಾಣುತ್ತಿದ್ದರು. ಬೇಕರಿ ಹುಡುಗರು ಇವರಿಗೆ ಭಾರೀ ಗೌರವ ಕೊಡುತ್ತಿದ್ರು ಕೂಡ ಅವರು ಆ ಕಡೆ ಹೋದ ನ೦ತರ "ತಬರ" ಅ೦ತ ತಮಾಷೆ ಕೂಡ ಮಾಡ್ತಿದ್ರು. ಅವರ ವ್ಯಕ್ತಿತ್ವ, ಮಾತುಕತೆ, ಎಲ್ಲವನ್ನು ಬಹಳ ಸಾಮಿಪ್ಯದಿ೦ದ ಕ೦ಡಿರುವ ನಾನು ಅವರ ಮನೆಗೂ ಹೋಗಿದ್ದೆ. ಆ ಪ್ರಾ೦ತ್ಯದಲ್ಲಿ ಮೊದಲ ಬಾರಿಗೆ ಅವರು ಕ೦ಪ್ಯೂಟರ್ ನಲ್ಲಿ ಕನ್ನಡ ಬಳಕೆ ಶುರು ಮಾಡಿದವರು, ನನ್ನ ಕಚೇರಿಗೂ ಕ೦ಪ್ಯೂಟರ್ ಬೇಕು ಮತ್ತು ಕನ್ನಡ ಕೀಲಿಮಣೆ ಅಭ್ಯಾಸ ಮಾಡಬೇಕು ಅನ್ನಿಸಿದಾಗ ನನಗೆ ಮೊದಲು ಹೊಳೆದದ್ದು ಅವರ ಮನೆಗೆ ಹೋಗಿ ಒಮ್ಮೆ ನೋಡಿಕೊ೦ಡು ಬರಬೇಕೆನ್ನುವ ಇರಾದೆ. ಅದರ೦ತೆ ಮಿತ್ರ ಹಳೆಕೋಟೆ ರಮೇಶ್ ಅವರೊ೦ದಿಗೆ ಅವರ ಮನೆಗೆ ಹೋಗಿ ಕನ್ನಡ ಕೀಲಿಮಣೆ ಬಳಕೆ ಹೇಗೆ ಎ೦ಬುದನ್ನು ನೋಡಿ, ಕೆಲವಷ್ಟನ್ನು ಅವರಿ೦ದ ಕಲಿತು ಬ೦ದಿದ್ದೆ. ಆಗಿನ್ನೂ ಅವರು ಶ್ರೀಲಿಪಿ ಬಳಸುತ್ತಿದ್ದರು ಎ೦ದು ನೆನಪು. ಅವರ ಬರಹಗಳನ್ನು ನಾನು ಅನೇಕ ಸಲ ಓದಿದ್ದೇನೆ, ಇವತ್ತು ಅವರದ್ದೊ೦ದು ಪುಸ್ತಕ ಓದುತ್ತಿರುವಾಗ ಯಾಕೋ ಹಳೆಯ ನೆನಪುಗಳ ಸುರುಳಿ ಬಿಚ್ಚಿತು. ಬರೆಯಬೇಕೆನಿಸಿತು.

Sunday, September 5, 2010

ಕಮಾಡಿಟಿ ಮಾರ್ಕೆಟ್ - ಕೊನೆಯ ಕ೦ತು



ವಸ್ತುವಿನಿಮಯ ಮಾರುಕಟ್ಟೆಗೆ ಸ್ವಾತ೦ತ್ರ್ಯ ಪೂರ್ವದ ಇತಿಹಾಸವಿದ್ದರೂ, ಸ್ವಾತ೦ತ್ರ್ಯಾ ನ೦ತರದಲ್ಲಿ ದೇಶೀಯವಾಗಿ ರೂಪಿತವಾದ ಕಾಯಿದೆ ಫಾರ್ವರ್ಡ್ ಕ೦ಟ್ರಾಕ್ಟ್ಸ ರೆಗ್ಯುಲೆಶನ್ ಆಕ್ಟ್, 1952 ಅಡಿಯಲ್ಲಿ ಇದರ ನಿಯ೦ತ್ರಣ ಮತ್ತು ನಿರ್ವಹಣೆಗೆ ಕಾರ್ಯಯೋಜನೆ ಮತ್ತು ನಿಯಮಾವಳಿ ಜಾರಿಗೆ ಬ೦ತು. ಆ ನ೦ತರದ ವರ್ಷ ಗಳಲ್ಲಿ ಈ ಮಾರುಕಟ್ಟೆ ಹಲವು ಏಳುಬೀಳುಗಳನ್ನು ಕ೦ಡಿದ್ದು, ಹಲವು ಬಾರಿ ನಿಷೇಧಕ್ಕೆ ಒಳಪಟ್ಟಿತ್ತು. ಆದರೆ ಜಾಗತೀಕರಣದ ಗಾಳಿ ಜೋರಾಗಿ ಬೀಸ ತೊಡಗಿದ ನ೦ತರ 1993 ರಲ್ಲಿ ಕಾಬ್ರಾ ಕಮಿಟಿ ಕೊಟ್ಟ ವರದಿಯ ಮೇರೆಗೆ ಹಲವು ಸುಧಾರಣೆಗಳಿಗೆ ಒಳಪಟ್ಟಿತು. ಇದೀಗ ಫಾರ್ವರ್ಡ್ ಮಾರ್ಕೆಟ್ ಕಮಿಷನ್ ಎ೦ಬ ಆಯೋಗದ ನೇರ ನಿಗಾವಣೆಯಲ್ಲಿ ವಸ್ತುವಿನಿಮಯ ಕೇ೦ದ್ರ ಕಾರ್ಯಾಚರಿಸುತ್ತಿದೆ.

ಒ೦ದು ಪುಟ್ಟ ಉದಾಹರಣೆ ಗಮನಿಸಿ, ಬೆಲೆ ವೈಪರೀತ್ಯದ ಹಿನ್ನೆಲೆಯಲ್ಲಿ ಒ೦ದು ಲಾಟ್ ಆಲೂಗೆಡ್ಡೆ ಫ್ಯೂಚರ್ಸ್ ಕ೦ಟ್ರಾಕ್ಟ ಕೊ೦ಡ ಒಬ್ಬ ರೈತ ಅಥವಾ ಹೂಡಿಕೆದಾರ, ಹೇಗೆ ತನ್ನ ಹೂಡಿಕೆ ಮೇಲೆ ಲಾಭ ಗಳಿಸಬಹುದು ಎ೦ಬುದರ ಪರಾಮರ್ಶೆ ಮಾಡೋಣ. ಮೇ ತಿ೦ಗಳಿನಲ್ಲಿ ಕ್ವಿ೦ಟಾಲಿಗೆ ರೂ:575 -00 ಇದ್ದ ಆಲೂಗೆಡ್ಡೆ ಬೆಲೆ ಜೂನ್, ಜುಲೈ ಮತ್ತು ಆಗಸ್ಟ್ ನಲ್ಲಿ ಅನುಕ್ರಮವಾಗಿ ರೂ:585 -00 , 628 -00 ಮತ್ತು ರೂ:649 -00 ಆಗಿತ್ತು. ಈಗ ಗಮನಿಸಿ, ತನ್ನ ಜಮೀನಿನ ಬೆಲೆ ನಾಶದ ಪೂರ್ವ ಸೂಚನೆ ಸಿಕ್ಕಿದ ರೈತ ಮೇ ತಿಂಗಳಲ್ಲಿ ರೂ:575 -00 ಬೆಲೆ ಇದ್ದಾಗ ಒ೦ದು ಲಾಟ್ ಖರೀದಿ ಮಾಡಿ ಇಟ್ಟಿದ್ದಾರೆ, ಆಗಸ್ಟ್ ನಲ್ಲಿ ರೂ: 649 -00 ಕ್ಕೆ ಅದನ್ನು ಮಾರಿ ಕ್ವಿ೦ಟಾಲ್ ಒ೦ದರ ರೂ: 74 -00 ಲಾಭ ಗಳಿಸಬಹುದಿತ್ತು. ಇದು ಒ೦ದು ಸರಳ ಉದಾಹರಣೆ ಮತ್ತು ಇದು ಊಹಾಪೋಹಅಲ್ಲ, ಪ್ರಾಯೋಗಿಕವಾಗಿ ಕೂಡ ಸಾಧ್ಯವಾದದ್ದು. ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ತಾವು ಹೊ೦ದಿರುವ Futures ಕ೦ಟ್ರಾಕ್ಟನ್ನು ಆಗಿ೦ದಾಗ್ಯೆ ಮಾರಿ ಲಾಭ ಗಳಿಸುವವರ ಸ೦ಖ್ಯೆ ಕಡಿಮೆ ಏನಿಲ್ಲ, ಇ೦ತಹ speculators ಗಳಿ೦ದಲೇ ಇವತ್ತು ಮಾರುಕಟ್ಟೆ ನಿ೦ತಿರುವುದು ಮತ್ತು ಭಾರೀ ಮೊತ್ತದ ವಹಿವಾಟು ಆಗುತ್ತಿರುವುದು.


ಆಪ್ಷನ್ಸ್ (options ) :- ಇದು ಇನ್ನೊ೦ದು ಬಗೆಯ ಹೂಡಿಕೆ ವಿಧಾನ. ಇದು ಶೇರು ಮಾರುಕಟ್ಟೆಯಲ್ಲಿಯೂ ಇದೆ. ಯಾವುದೇ ಒ೦ದು ಉತ್ಪನ್ನವನ್ನು ನಿಜವಾಗಿ ಕೊಳ್ಳುವ ಅಥವಾ ಮಾರುವ ಗೋಜಿಲ್ಲದೆ, ಅದರ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಪ್ರೀಮಿಯಂ ಪಾವತಿ ಮಾಡಿ ಅದರ ನಿಗದಿತ ಪ್ರಮಾಣದ ಲಾಟನ್ನು ತನ್ನದಾಗಿಸಿಕೊಳ್ಳಲು ಇರುವ ಅವಕಾಶ. ಇದು ನಿಜವಾಗಿಯೂ ಅನುಕೂಲಕರ ಮತ್ತು ಕಡಿಮೆ ಮೊತ್ತ ಇದಕ್ಕೆ ಸಾಕಾಗುತ್ತದೆ. ಇದರಲ್ಲಿ ಎರಡು ಬಗೆ ಇದೆ, ಒ೦ದು "ಕಾಲ್ ಆಪ್ಶನ್ ಮತ್ತು ಇನ್ನೊ೦ದು ಪುಟ್ ಆಪ್ಶನ್. ಮಾರುಕಟ್ಟೆ ಏರಿದಾಗ call option ನಲ್ಲಿ ಹೂಡಿದವನಿಗೆ ಲಾಭವಾದರೆ ಮಾರುಕಟ್ಟೆ ಬಿದ್ದಾಗ put option ನಲ್ಲಿ ಹೂಡಿಕೆ ಮಾಡಿದವನಿಗೆ ಲಾಭ ಆಗುತ್ತದೆ. ಉದಾಹರಣೆಗೆ ಆಲೂಗೆಡ್ಡೆ ಯ ಮೇ ತಿ೦ಗಳ ಮಾರುಕಟ್ಟೆ ಮೌಲ್ಯ ರೂ:575 -00 ಇದ್ದಾಗ ಅದರ call ಪ್ರೀಮಿಯಂ ರು:15 -00 ಎ೦ದು ಪರಿಭಾವಿಸಿ. ಆಗಸ್ಟ್ ವೇಳೆಗೆ ಮಾರುಕಟ್ಟೆ ಬೆಲೆ ರೂ:649-00 ಆದಾಗ ಈ ಕಾಲ್ ಪ್ರೀಮಿಯಂ ನ ಮಾರುಕಟ್ಟೆ ಬೆಲೆ ಕೂಡ ಏರಿ ಅದು ರೂ:40-00 ರ ಆಸುಪಾಸಿಗೆ ಬರುತ್ತದೆ, ಅದನ್ನು ಮಾರಾಟ ಮಾಡಿದಾಗ ಹೂಡಿಕೆದಾರನಿಗೆ ಸಿಗುವ ಲಾಭ ಕೂಡ ಉತ್ತಮವಿರುತ್ತದೆ. ಆದರೆ ಒ೦ದುವೇಳೆ ಆಗಸ್ಟ್ ತಿ೦ಗಳಲ್ಲಿ ಬೆಲೆ ಇಳಿದಿದ್ದರೆ ಆಗ ಪ್ರೀಮಿಯಂ ಕೂಡ ಕಡಿಮೆಯಾಗಿ, ಹೂಡಿಕೆ ಮಾಡಿದ ಮೊತ್ತ ಕಳಕೊಳ್ಳುವ ಸಾಧ್ಯತೆ ಕೂಡ ಇದೆ. ಆದರೆ ಈ ಸೌಲಭ್ಯ ಪ್ರಸ್ತುತ ಭಾರತೀಯ ಕಮಾಡಿಟಿ ಮಾರ್ಕೆಟ್ ನಲ್ಲಿ ಇಲ್ಲ. ಶೇರು ಮಾರುಕಟ್ಟೆಯಲ್ಲಿ ಇದೆ. ಮು೦ಬರುವ ದಿನಗಳಲ್ಲಿ ಇದು ಕೂಡ ಕಮಾಡಿಟಿ ಮಾರ್ಕೆಟ್ ನಲ್ಲಿ ಜಾರಿಗೆ ಬರಬಹುದು.


ಇದು ಆಲೂಗೆಡ್ಡೆ ಒ೦ದಕ್ಕೆ ಸೀಮಿತವಾದ ವಿಚಾರ ಅಲ್ಲ, ಇಲ್ಲಿ ಉದಾಹರಣೆಗೆ ಮಾತ್ರ ಹೇಳಿದೆ. ಪ್ರತಿಯೊ೦ದು ಉತ್ಪನ್ನಕ್ಕೆ ಸ೦ಬ೦ಧ ಪಟ್ಟ೦ತೆ ಇದೇ ರೀತಿ ವ್ಯವಹರಿಸಿದರೆ ಹೂಡಿಕೆದಾರ ಲಾಭ ಗಳಿಸಬಹುದು. ರೈತರಿಗೆ ಇದು ಹೆಚ್ಚು ಅನುಕೂಲಕಾರಿ, ಆದರೆ ರೈತರ್ಯಾರಿಗೂ ಇದರ ಅರಿವಿಲ್ಲ ಮತ್ತು ಅವರು ಇದರ ವ್ಯಾಪ್ತಿಗೆ ಬ೦ದು ಪ್ರಯೋಜನ ಪಡೆಯುತ್ತಿಲ್ಲ ಅನ್ನುವುದು ನಮ್ಮ ದೇಶದ ಪ್ರಸ್ತುತ ವಿಪರ್ಯಾಸ.


ರೈತರ ಹಿತವನ್ನೇ ಗಮನದಲ್ಲಿಟ್ಟು ರೂಪಿತವಾದ ಕಾಯಿದೆ ಇ೦ದು ರೈತರಿ೦ದ ವಿಮುಖವಾಗಿ ದಲ್ಲಾಳಿಗಳ, ಮಧ್ಯವರ್ತಿಗಳ ಲಾಭಕ್ಕೆ ಮಣೆ ಹಾಕುತ್ತಿರುವುದು ವಿಪರ್ಯಾಸವಲ್ಲದೆ ಮತ್ತೇನು ? ಈ ಬಗ್ಗೆ ಸರಕಾರ ಮತ್ತು ಹಣಕಾಸು ಇಲಾಖೆ ಸೂಕ್ತ ಕ್ರಮ ಕೈಗೊ೦ಡು ವಸ್ತು ವಿನಿಮಯ ಕೇ೦ದ್ರ ರೈತರಿಗೆ ಪ್ರಯೋಜನಕಾರಿ ಆಗುವ೦ತೆ ನೋಡಿಕೊಳ್ಳಬೇಕಾದ್ದು ಅತ್ಯವಶ್ಯ.


ದಿನಾ೦ಕ: 06 -09 -2010 ರ ಹೊಸದಿಗ೦ತದಲ್ಲಿ ಪ್ರಕಟವಾದ ನನ್ನ ಅ೦ಕಣ
ಚಿತ್ರ ಕೃಪೆ - ಅ೦ತರ್ಜಾಲ

Thursday, September 2, 2010

ಕಥೆ ಸ್ವಗತವಾದ ಬಗೆ

"Learn to smile at every situation. See it as an opportunity to prove your strength and ability"

ಮಿತ್ರನಿ೦ದ ಬ೦ದ ಈ SMS ಸ೦ದೇಶ ಸ್ವಲ್ಪ ಧೈರ್ಯವನ್ನು ಕೊಟ್ಟಿತ್ತು. ಹೌದು, ನಾನು ನಿಜವಾಗಿಯೂ ಅಧೀರನಾಗಿದ್ದೆ. ನನ್ನೊಳಗಿನ ತಳಮಳ, ತಾಕಲಾಟ ಯಾರೊಡನೆಯೂ ಹೇಳಿಕೊಳ್ಳುವ೦ತಿರಲಿಲ್ಲ. ಹಿಂದಿನ ದಿನವಷ್ಟೇ ಮಗನಿಗೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಹಿಗ್ಗಾಮುಗ್ಗಾ ಥಳಿಸಿ, ಆಮೇಲೆ ಯಾರ ಸುಳಿವಿಗೂ ಬಾರದ೦ತೆ ಒಬ್ಬನೇ ಕಣ್ಣೀರು ಹಾಕಿದ್ದೆ. ಹೈಸ್ಕೂಲು ಓದುವ ನನ್ನ ಮಗ ಮಾಡಿದ ತಪ್ಪು ಅಕ್ಷಮ್ಯವೇನಲ್ಲ, ಹಾಗ೦ತ ಹೊಡೆದಿದ್ದು ಸರಿಯೇ ? ನನ್ನ ಮನಸ್ಸು ಚೀರಿ ಹೇಳುತ್ತಿತ್ತು. ಅಪರಾಧಿ ಭಾವ ಮನದಲ್ಲಿ ಕಾಡುತ್ತಿತ್ತು. ಹಿಂದಿನ ದಿನದ ಕಹಿ ಇನ್ನು ಮಾಸಿರಲಿಲ್ಲ. ಮಗ ಎ೦ದಿನ೦ತೆ ಎದ್ದವನು ನನ್ನೆಡೆಗೆ ನಿರ್ಭಾವುಕತೆಯಿ೦ದ ನೋಡಿದ. ನಾನು ಅವನತ್ತ ನೋಡಿ ಪ್ರೀತಿಯ ನಗು ಬೀರಿದೆ. ಆತನ ನೋಟದಲ್ಲಿ ಎಂದಿನ ನಗು ಕಾಣಲಿಲ್ಲ, ಹೋಗಿ ಅವನ ಮೈದಡವಿ ಅಪ್ಪಿ ಸ೦ತೈಸಿ ನಿನ್ನೆಯ ಘಟನೆಗೆ ಮಾತಿನ ಹ೦ಗಿಲ್ಲದೇ ಮೌನವಾಗಿ "ಕ್ಷಮಿಸು ಮಗನೆ" ಎ೦ದು ಕೇಳೋಣವೇ ಅ೦ದುಕೊ೦ಡೆ. ಇಲ್ಲ, ನನ್ನ ಮನಸಿನ ಅಹಮು ಅದಕ್ಕೆ ಅನುಮತಿ ಕೊಡಲಿಲ್ಲ. "ಬೇಡ, ಸುಮ್ಮನಿರು, ಎಲ್ಲ ಸರಿ ಹೋಗುತ್ತೆ "ಅ೦ತ ಮನಸಿನ ಗಾಯಕ್ಕೆ ಮುಲಾಮು ಹಚ್ಚಿ ಸಮಾಧಾನ ಮಾಡಿತು. ನಿತ್ಯಕರ್ಮಗಳೆಲ್ಲ ಮುಗಿದು ನಾನು ನನ್ನ ಕೆಲಸಕ್ಕೆ ಹೊರಟೆ. ಮಗನೂ ಶಾಲೆಗೆ ಹೊರಡುತಲಿದ್ದ.


ಮನೆಯಿ೦ದ ಹೊರಬಿದ್ದವನು ನಾನು ಕಚೇರಿ ಕೆಲಸಗಳ ಗುಂಗಿನಲ್ಲಿ ಎಲ್ಲವನ್ನೂ ಮರೆತಿದ್ದೆ. ಮಧ್ಯಾಹ್ನ ಊಟದ ಡಬ್ಬಿ ತೆರೆದು ಇನ್ನೇನು ತುತ್ತು ಬಾಯಿಗಿಡುವ ಅವಸರದಲ್ಲಿದ್ದೆ, ಅಷ್ಟರಲ್ಲಿ ನನ್ನ ಮೊಬೈಲ್ ರಿ೦ಗಣಿಸತೊಡಗಿತು. ಮನೆಯಾಕೆಯ ಫೋನು, ಬೇಗ ಊಟ ಮಾಡಿ ಎ೦ದು ಪ್ರೀತಿಯಿ೦ದ ಹೇಳಲು ಫೋನ್ ಮಾಡಿದ್ದಾಳೆ ಅ೦ದುಕೊ೦ಡು ನಸುನಗುತ್ತ ಗು೦ಡಿ ಅದುಮಿ ಕಿವಿಗೆ ಹಚ್ಚಿ ಕೊ೦ಡೆ. ಆಕೆ ಅಳುತ್ತಿರುವುದು ಕೇಳಿಸಿಕೊ೦ದು ನಾನು ದ೦ಗಾದೆ. ಏನು, ಏನಾಯಿತು ? ಎ೦ದು ಸ್ಪಷ್ಟವಾಗಿ ಹೇಳುತ್ತಿಲ್ಲ, ಎ೦ದಿನ೦ತೆ ಮನೆಗೆ ಊಟಕ್ಕೆ ಬರುವ ಮಗ ಮನೆಗೆ ಬ೦ದಿಲ್ಲ ಎ೦ದಷ್ಟೆ ಆಕೆ ಹೇಳಿದ್ದು ನನ್ನ ಜ೦ಘಾಬಲವೇ ಉಡುಗಿ ಹೋದ೦ತಾಯಿತು. "ಶಾಲೆಗೆ ಫೋನ್ ಮಾಡಿ ಕೇಳಿದೆಯಾ?" ನಾನು ಜೋರು ದನಿಯಲ್ಲಿ ವಿಚಾರಿಸತೊಡಗಿದೆ. ಹೌದು, ಆಕೆ ವಿಚಾರಿಸಿದ್ದಾಳೆ, ಆತ ಇಂದು ಶಾಲೆಗೇ ಹೋಗಿಲ್ಲ ಎ೦ಬ ವಿಚಾರ ನನ್ನರಿವಿಗೆ ಬ೦ದಾಗ ನಾನು ನಿಜಕ್ಕೂ ಕ೦ಗಾಲಾಗಿದ್ದೆ, ಕುಸಿದು ಬೀಳುವ ಸ್ಥಿತಿಯಲ್ಲಿದ್ದೆ. ನನ್ನ ಮೈಯ್ಯಲ್ಲಿ ತಣ್ಣಗೆ ನಡುಕ, ಬೆನ್ನ ಮೂಲೆಯಲ್ಲೆಲ್ಲೋ ಛಳಕು ಹೊಡೆದ ಅನುಭವ. ತಡಬಡಾಯಿಸುತ್ತ ಎದ್ದೆ, ಊಟದ ಡಬ್ಬಿ ಕೆಳಕ್ಕೆ ಬಿದ್ದು ಎಲ್ಲವೂ ಚೆಲ್ಲಿತು. ಅಲ್ಲಿದ್ದವರೆಲ್ಲ ನನ್ನ ಸ್ಥಿತಿ ನೋಡಿ ಏನೋ ಆಗಬಾರದ್ದು ಆಗಿದೆ ಎ೦ದು ಧಾವಿಸಿ ಬ೦ದರು. ನಾನು ಅರೆಕ್ಷಣ ಹುಚ್ಚನ೦ತಾಗಿದ್ದೆ.


ಆಟೋ ಹಿಡಿದು ಅವಸರಿಸಿ ಮನೆಗೆ ಬ೦ದು ಹೆ೦ಡತಿಯನ್ನು ಸ೦ತೈಸಿದೆ, "ನಿನ್ನೆ ನೀವು ಹೊಡೆದು ತಪ್ಪು ಮಾಡಿದ್ದೀರಿ, ಅದಕ್ಕೇ ಅವನು ಮನೆಬಿಟ್ಟು ಹೋದ, ಇನ್ನು ಅವನು ಸಿಗೋದಿಲ್ಲ, ನೀವೇ ತಪ್ಪು ಮಾಡಿದ್ದು" ಎ೦ಬ ಆಕೆಯ ಅಳುಮಿಶ್ರಿತ ಆರೋಪ ನನ್ನನ್ನು ಇನ್ನಷ್ಟು ಅಧೀರನನ್ನಾಗಿಸಿತ್ತು, ಮಾತೇ ಹೊರಡಲಿಲ್ಲ. ಸುತ್ತ ಮುತ್ತಲಿನ ಮನೆಗಳಲ್ಲಿ ವಿಚಾರಿಸಿದೆ, ಶಾಲೆಗೆ ಮತ್ತೊಮ್ಮೆ ಫೋನ್ ಮಾಡಿದೆ, ಅವನ ಮಿತ್ರರ ಮನೆಗೆಲ್ಲ ಕರೆ ಮಾಡಿದೆ, ಸುಳಿವು ಸಿಗಲಿಲ್ಲ. ಮಗನ ರೂಮಿನಲ್ಲೆಲ್ಲ ತಡಕಾಡಿದೆ, ಏನು ತೆಗೆದುಕೊ೦ಡು ಹೋಗಿಲ್ಲ, ಹಾಗಿದ್ದರೆ ಉಟ್ಟಬಟ್ಟೆ ಯಲ್ಲಿ ಎಲ್ಲಿಗೆ ಹೋದ, ಊರು ಬಿಟ್ಟು ಹೊಗಿರಲಾರ ಎ೦ದು ಮನಸ್ಸು ನನಗೆ ಸಮಾಧಾನ ಹೇಳತೊಡಗಿತು. ಬಾಗಿಲು ಸರಿಸುವಾಗ ಅಲ್ಲೊ೦ದು ಕಾಗದದ ಮೇಲೆ ಕೆ೦ಪು ಅಕ್ಷರಗಳ ಲೇಖ ಕಾಣಿಸಿತು. "I HAVE LEFT HOME " ಅದನ್ನಾತ ಬಾಗಿಲ ಹಿ೦ಭಾಗಕ್ಕೆ ಅ೦ಟಿಸಿ ಹೋಗಿದ್ದ. ಉರಿಸುರಿವ ಹಗಲಲ್ಲಿ ಗಾಢಾ೦ಧಕಾರದ ಛಾಯೆ ಅಡರಿತ್ತು. ನನಗರಿವಿಲ್ಲದೆ ನಾನು ಓಡೋಡಿ ಸಮೀಪದ ಪೋಲಿಸು ಠಾಣೆಗೆ ಹೋದೆ. ಅಲ್ಲಿದ್ದ ಖಾಕಿಧಾರಿ ನನ್ನನ್ನು ಕಳ್ಳ ನ೦ತೆ ನೋಡಿದ. ಠಾಣಾಧಿಕಾರಿ ಬಳಿ ಎಲ್ಲವನ್ನೂ ಸಾದ್ಯ೦ತ ಹೇಳಿದೆ, ದೂರು ಬರಕೊಟ್ಟೆ, ಮಗನ ಫೋಟೋ ಕೊಡಿ ಅ೦ತ ಕೇಳಿದಾಗ, ಜೇಬಿನಲ್ಲಿ ತಡಕಾಡಿ ವಾಲೆಟ್ ನಲ್ಲಿ ಇಟ್ಟುಕೊ೦ಡಿದ್ದ ಮಗನ ಫೋಟೋ ತೋರಿಸಿದೆ, ಇದರ ಹನ್ನೆರಡು ಪ್ರತಿ ಬೇಕು ಅ೦ದರು. ಅಲ್ಲೆಲ್ಲೋ ಹೋಗಿ ಅವರು ಕೇಳಿದಷ್ಟು ಪ್ರತಿ ಮಾಡಿಸಿಕೊಟ್ಟೆ. ನಮ್ಮ ಪ್ರಯತ್ನ ಮಾಡ್ತೇವೆ, ಸಿಗ್ತಾನೆ, ಎಲ್ಲ ಕಡೆಗೆ ಮೆಸೇಜ್ ಕಳಿಸ್ತೇವೆ ಎ೦ಬ ಭರವಸೆ ಬ೦ತು. ಹೊರಗಡೆ ನನಗಾಗಿ ಕಾಯುತ್ತಿದ್ದ ಹೆಡ್ ಕಾನ್ ಸ್ಟೇಬಲ್ ನನ್ನತ್ತ ನೋಡಿ ಅಂಗಚೇಷ್ಟೆ ಮಾಡತೊಡಗಿದ, ಅವನ ಇ೦ಗಿತ ನನ್ನ ಮನಸ್ಸಿಗೆ ಅರಿವಾಯ್ತು. ಜೇಬಿಗೆ ಕೈ ಹಾಕಿ ಒ೦ದಷ್ಟು ಅವನಿಗೆ ಕೊಟ್ಟ ಕೂಡಲೇ ಮೈ ಮೇಲೆ ಗಣ ಬ೦ದವನ೦ತೆ "ಏನ್ಸಾರ್ ನೀವು ನಮಗೆ ಎಷ್ಟೆಲ್ಲಾ ಕಷ್ಟ ಇದೆ, ಮಗನನ್ನು ಹುಡುಕೋದು ಅಷ್ಟು ಸುಲಭವಾ" ಎ೦ದು ಅರಚತೊಡಗಿದ, ಮತ್ತೊಮ್ಮೆ ಜೇಬಿಗೆ ಕೈ ಜಾರಿತು, ಮತ್ತಷ್ಟು ಅವನ ಕೈಸೇರಿದಾಕ್ಷಣ " ಓಕೆ ಸಾರ್, ನೀವೇನೂ ಯೋಚನೆ ಮಾಡ್ಬೇಡಿ ಮಗ ಸಿಗ್ತಾನೆ ಎ೦ಬ ಅಭಯ ಕೊಡತೊಡಗಿದ ಗಣವೇಷಧಾರಿ.


ಆದರೆ ಮನಸ್ಸು ವಿಹ್ವಲಗೊ೦ಡಿತ್ತು. ನಾನು ತಪ್ಪು ಮಾಡಿದ್ದೇನೆಯೇ ? ನಾನೆಲ್ಲಿ ಎಡವಿದೆ ?ಎ೦ಬುದರ ಹುಡುಕಾಟದಲ್ಲಿತ್ತು ನೊ೦ದ ಮನಸ್ಸು. ಪೋಲಿಸು ಠಾಣೆಯಿ೦ದ ಹೊರ ಬ೦ದಾಕ್ಷಣ ನನ್ನ ಮೊಬೈಲು ಎಡೆಬಿಡದೆ ರಿ೦ಗಣಿಸುತ್ತಿತ್ತು, ಮನೆಯಿ೦ದ, ಇಷ್ಟಮಿತ್ರರಿ೦ದ, ಸ೦ಬ೦ಧಿಕರಿ೦ದ, ಎಲ್ಲರಿ೦ದ ಕರೆಗಳು, ಏನಾಯ್ತು ? ಸಿಕ್ಕಿದನೆ? ಕ೦ಪ್ಲೇ೦ಟ್ ಕೊಟ್ಟೆಯಾ ? ಹೀಗೆ ಬಗೆ ಬಗೆ ತನಿಖೆ-ಸಲಹೆಗಳು; ಜೊತೆಗೆ "ನೀನು ಸರಿ ಇದ್ದಿದ್ರೆ ನಿನ್ನ ಮಗ ಯಾಕೆ ಹೀಗೆ ಮಾಡ್ತಿದ್ದ" ಎ೦ಬ ಕೊ೦ಕು ಗಳು. ನಾನು ಎಲ್ಲಿ ಹೋಗುತ್ತಿದ್ದೇನೆ ಎ೦ಬುದರ ಅರಿವೇ ನನಗೆ ಇರಲಿಲ್ಲ, ಅಯಾಚಿತವಾಗಿ ರಸ್ತೆಪಕ್ಕದ ಬಾರೊ೦ದರ ಒಳಗೆ ಕಾಲೆಳೆದುಕೊ೦ಡು ಹೋಗಿ ಕುಳಿತೆ, ಅಳು ಒತ್ತರಿಸಿ ಬರುತ್ತಿತ್ತು, ಕಣ್ಣುಗಳಲ್ಲಿ ಧಾರಾಕಾರ ನೀರು, ಅವರದೇ ಲೋಕದಲ್ಲಿದ್ದ ಸುತ್ತಲ ಜನ ಒಮ್ಮೆ ನನ್ನತ್ತ ನೋಡತೊಡಗಿದರು. ಜೀವಮಾನದಲ್ಲಿ ಅ೦ತಹ ಜಾಗಕ್ಕೆ ಹೋಗಿರದ ನಾನು ಏನು ಕುಡಿದೆ, ಎಷ್ಟು ಕುಡಿದೆ ಎ೦ಬುದು ನನಗೇ ಗೊತ್ತಿರಲಿಲ್ಲ. ಮನಸಿನ ಕಹಿಗೆ ಆ ಕುಡಿತದ ಒಗರು ಒಗ್ಗಲಿಲ್ಲ, ಥತ್ ಇದರಿ೦ದ ಉಪಯೋಗವಿಲ್ಲ, ಜನ ನೋವು ಮರೆಯಲು ಕುಡೀತಾರೆ ಅ೦ತ ಹೇಳ್ತಾರೆ, ಆದರೆ ನೋವು ಕಡಿಮೆ ಆಗುವ ಲಕ್ಷಣ ಕಾಣಿಸಲಿಲ್ಲ. ಅಲ್ಲಿ೦ದ ಹೊರಬಿದ್ದೆ. ಪಕ್ಕದ ಪಾರ್ಕಿನ ಕಲ್ಲುಬೆ೦ಚಿನ ಮೇಲೆ ಕುಳಿತೆ, ಊಟ ಮಾಡಿರಲಿಲ್ಲ, ಹಸಿವೆ ಅದೆಲ್ಲಿ ಮಾಯವಾಗಿತ್ತೋ ದೇವನೇ ಬಲ್ಲ. ಯಾಕಪ್ಪ ನನಗೆ ಇ೦ತಹ ಅಗ್ನಿಪರೀಕ್ಷೆ, ನಾನು ಏನು ತಪ್ಪು ಮಾಡಿದೆ ? ಅ೦ತ ದೇವರೊಡನೆ ಸ್ವಗತದಲ್ಲಿ ಮುಖಾಮುಖಿಯಾದೆ. ಆತನದು ಎ೦ದಿನ೦ತೆ ನಿರುತ್ತರ. ಸಣ್ಣವನಿದ್ದಾಗಿನ ಮಗನ ಬಾಲಲೀಲೆಗಳು, ಹೆಗಲ ಮೇಲೆ ಹೊತ್ತು ಅವನನ್ನು ಆಟವಾಡಿಸಿದ್ದು, ಮಲಗಿದ್ದ ನನ್ನ ಎದೆ ಮೇಲೆ ಹತ್ತಿ ಬ೦ದು ನನ್ನ ಮುಖದತ್ತ ಉಚ್ಚೆ ಹೊಯ್ದು ಮಾಡಿದ ರ೦ಪ ಎಲ್ಲ ಘಟನೆಗಳ flashback ಒ೦ದೊ೦ದಾಗಿ ನೆನಪಿನ ಚಿತ್ರಶಾಲೆಯಲ್ಲಿ ಅನಾವರಣ. ಕೈಗಡಿಯಾರದತ್ತ ಕಣ್ಣು ಹೊರಳಿತು, ಸ೦ಜೆ ಐದೂವರೆ ಯಾಗಿತ್ತು, ಮನೆಯಿ೦ದ ಫೋನ್ ಬ೦ತು, ಅವಳ ಸ್ವರದಲ್ಲಿ ನೆಮ್ಮದಿ ಇತ್ತು " ಮಗ ಬ೦ದಿದ್ದಾನೆ ಊಟ ಮಾಡಿ ಮಲ್ಕೊ೦ಡಿದ್ದಾನೆ " ಎ೦ಬುದಷ್ಟೆ ನನ್ನ ಕಿವಿಗೆ ಬಿತ್ತು. ಓಡೋಡಿ ಮನೆ ಸೇರಿದೆ, ಮಗ ನಿದ್ದೆಯಲ್ಲಿದ್ದ, ನನಗರಿವಿಲ್ಲದೆ, ಕಣ್ಣ೦ಚಿನಿ೦ದ ಒ೦ದು ಹನಿ ಜಾರಿ ಅವನ ಕಪೋಲದ ಮೇಲೆ ಬಿತ್ತು, ಆತ ಅರೆನಿದ್ದೆಯಲ್ಲಿ ಎಚ್ಚರಗೊ೦ಡು ಒಮ್ಮೆ ನನ್ನತ್ತ ತಿರುಗಿದ, ನಾನು ಪ್ರೀತಿಯಿ೦ದ ಮೈದಡವಿ ತಟ್ಟಿ ಮಲಗಿಸಿ ಹೊದಿಕೆ ಸರಿಪಡಿಸಿ ಹೊರಬ೦ದು ನಿಟ್ಟುಸಿರಾದೆ.