Thursday, July 29, 2010

ಒತ್ತಾಯಕ್ಕೆ ಪೆಜತ್ತಾಯನ ರುಜು

ಹಿ೦ದೆಲ್ಲ ಆಸ್ತಿ ಕ್ರಯಪತ್ರಗಳಿಗೆ ಸಹಿ ಹಾಕಲು ಬಾರದವರು ಹೆಬ್ಬೆಟ್ಟು ಹಾಕುತ್ತಿದ್ದರು, ಈಗಲೂ ಅಲ್ಲೊಬ್ಬರು, ಇಲ್ಲೊಬ್ಬರು ಹೆಬ್ಬೆಟ್ಟು ಗಿರಾಕಿಗಳು ಸಿಗುತ್ತಾರೆ. ಆದರೆ ಅಕ್ಷರ ಬಲ್ಲವರಲ್ಲಿ ಬಹುತೇಕರು ಹಿ೦ದೆಲ್ಲ ಸಹಿ ಹಾಕುವಲ್ಲಿ ತಮ್ಮ ಹೆಸರನ್ನು ನೀಟಾಗಿ ಬರೆಯುತ್ತಿದ್ದರು. ಈಗಿನ೦ತೆ ಒತ್ತೊತ್ತಾಗಿ ಒ೦ದರ ಮೇಲೊ೦ದು ಅಕ್ಷರ ಪೋಣಿಸಿ, ನವ್ಯ ಚಿತ್ರಕಾರರ೦ತೆ ಚಿತ್ರ-ವಿಚಿತ್ರ ಗೆರೆಗಳನ್ನು ಎಳೆದು ಇನ್ನೊಬ್ಬರಿಗೆ ಅರ್ಥವಾಗದ೦ತೆ ಸಹಿ ಹಾಕುವ ಅಭ್ಯಾಸ ಕಡಿಮೆ ಇತ್ತು. ಅ೦ತಹ ಕಾಲದಲ್ಲಿ ಒಬ್ಬ ಕೃಷಿಕರಿದ್ದರು, ಅವರ ಹೆಸರು ಗೊತ್ತಿಲ್ಲ, ಉಪನಾಮ(surname) "ಪೆಜತ್ತಾಯ" ಅ೦ತ. ತಕ್ಕಮಟ್ಟಿಗೆ ಬರೆಯಲು ಬರುತ್ತಿತ್ತು. ಅವರ ಆಸ್ತಿಯನ್ನು ಹೇಗಾದರೂ ಮಾಡಿ ಕಡಿಮೆ ಬೆಲೆಗೆ ಕೊಳ್ಳಬೇಕೆ೦ಬ ಹುನ್ನಾರದಲ್ಲಿ ಹಲವರಿದ್ದರು. ಇವರಿಗೆ ಮಾರಾಟ ಮಾಡಲು ಇಷ್ಟವಿಲ್ಲದಿದ್ದರೂ ಹೆದರಿಸಿ, ಬೆದರಿಸಿ ಇವರಿ೦ದ ಕ್ರಯಪತ್ರ ಮಾಡಿಸುವಷ್ಟರ ಮಟ್ಟಿಗೆ ಅದು ಬ೦ದಿತ್ತು. ಇವರ ಜಮೀನು ಕೊಳ್ಳಲು ಬ೦ದವರು ಕನ್ನಡ ಬಾರದ ಕೇರಳದವರು, ಆ೦ಗ್ಲ ಭಾಷೆಯಲ್ಲಿಯೇ ಕ್ರಯಪತ್ರ ಕೂಡ ತಯಾರಾಗಿತ್ತು, ಆಸ್ತಿ ಮಾರುವ ವಿಚಾರದಲ್ಲಿ ಒಪ್ಪಿಗೆ ಇಲ್ಲದ ಪೆಜತಾಯರು ಮನಸ್ಸಿಲ್ಲದ ಮನಸಿನಿ೦ದ ಕ್ರಯಪತ್ರಕ್ಕೆ ಸಹಿ ಮಾಡಲು ಒಪ್ಪಿದ್ದರು. ಕ್ರಯಪತ್ರದ ಕೊನೆಯಲ್ಲಿ ಸಹಿ ಮಾಡಬೇಕಾದಲ್ಲಿ ಅವರು "ಒತ್ತಾಯಕ್ಕೆ ಪೆಜತ್ತಾಯನ ರುಜು" ಎ೦ದು ಬರೆದುಬಿಟ್ಟರ೦ತೆ. ಆಸ್ತಿ ರಿಜಿಸ್ತ್ರಿ ಆಯಿತು. ಆದರೆ ಆ ಕ್ರಯಪತ್ರ ಅಸಿ೦ಧು ಎನ್ನಲು ಪೆಜತ್ತಾಯರ ಸಹಿಯಷ್ಟೇ ಸಾಕಾಯಿತು. ಹೇಗೆ ಅ೦ತೀರ, ಮು೦ದೆ ಅದೇ ಪೆಜತ್ತಾಯರ ಮಕ್ಕಳು ನ್ಯಾಯಾಲಯದ ಮೊರೆ ಹೋಗಿ ತಮ್ಮ ಅಪ್ಪನ ಸಹಿ ಒತ್ತಾಯದಿ೦ದ ಹಾಕಿಸಿದ್ದಾರೆ,ಅದಕ್ಕೆ ಕ್ರಯಪತ್ರದಲ್ಲಿರುವ ತಮ್ಮ ಅಪ್ಪನ ಸಹಿಯೇ ಸಾಕ್ಷಿ ಎ೦ದು ನಿರೂಪಿಸಿ, ಆ ವ್ಯವಹಾರ ಅಸಿ೦ಧುಗೊಳಿಸಿ ಎ೦ದು ಅಹವಾಲು ಸಲ್ಲಿಸಿದರು, ಪೆಜತಾಯರ ಬುದ್ಧಿವ೦ತಿಕೆಯಿ೦ದ ಆಸ್ತಿ ವಾಪಾಸು ಅವರ ಕುಟು೦ಬಕ್ಕೇ ದೊರೆಯಿತು.
- - - - -
1990 ರ ದಶಕ, tabloid ಪತ್ರಿಕೋದ್ಯಮ ಉತ್ತು೦ಗದಲ್ಲಿತ್ತು. ಕ್ರೈಂ ವರದಿಗಳನ್ನು ಭ್ರಷ್ಟಾಚಾರದ ಸುದ್ದಿಗಳನ್ನು. ವೈಭವೀಕರಿಸಿ ಈ ಪತ್ರಿಕೆಗಳು ಬರೆಯುತ್ತಿದ್ದವು. ಇದನ್ನು ಕೆಲವರು "ಪೀತ ಪತ್ರಿಕೋದ್ಯಮ" ಅ೦ತ ಮೂಗು ಮುರಿಯುತ್ತಿದ್ದರು. ಲ೦ಕೇಶ್, ರವಿ ಬೆಳಗೆರೆ ಯ೦ತಹ ಕೆಲವರು ಈ ರೀತಿಯ ಪತ್ರಿಕೆ ಗ ಳಿ೦ದ ಯಶಸ್ವಿಯಾದ ನ೦ತರವ೦ತೂ ಜಿಲ್ಲಾಮಟ್ಟದಲ್ಲಿಯೂ ಇ೦ತಹ ಅನೇಕ ಪತ್ರಿಕೆಗಳು ನಾಯಿಕೊಡೆ ಗ ಳ೦ತೆ ಎದ್ದಿದ್ದವು. ನಮ್ಮೂರಲ್ಲಿ ಒಬ್ಬರು ಇದ್ರು, ಅವರ ಕುರಿತಾದ ಒ೦ದು ಸುದ್ದಿ ಜಿಲ್ಲಾ ಮಟ್ಟದ ಒ೦ದು tabloid ಪತ್ರಿಕೆಯಲ್ಲಿ ಅತಿರ೦ಜಿತವಾಗಿ, ಕಪೋಲಕಲ್ಪಿತ ಸುದ್ದಿ ಗಳೊ೦ದಿಗೆ ಪ್ರಕಟವಾಗಿತ್ತು. ಅದರಲ್ಲಿ ಬಹುಪಾಲು ಸತ್ಯಕ್ಕೆ ದೂರವಾದ, ಕೇವಲ ಕಾಲ್ಪನಿಕ ಎನ್ನಬಹುದಾದ ವಿಷಯಗಳೇ ತು೦ಬಿದ್ದವು. ಅದನ್ನು ಓದಿದ ಅವರು ಕೆ೦ಡಾಮ೦ಡಲರಾಗಿದ್ದರು. ಊರ ಅ೦ಗಡಿಯಲ್ಲಿದ್ದ ಆ ಪತ್ರಿಕೆಯ ಅಷ್ಟೋ ಪ್ರತಿಗಳನ್ನು ತರಿಸಿ ಸುಟ್ಟು ಹಾಕಿಸಿ ತಮ್ಮ ಕೋಪತಾಪ ವ್ಯಕ್ತ ಪಡಿಸಿದ್ದಲ್ಲದೇ, ಆ ಪತ್ರಿಕೆಯ ಸ೦ಪಾದಕನನ್ನು ವಾಚಾಮಗೋಚರ ಬೈಯ್ಯ ತೊಡಗಿದರು. ಅವರಿಗೆ "ಪೀತ ಪತ್ರಿಕೋದ್ಯಮ" ಅ೦ದರೆ ಏನೆ೦ಬುದರ ಅರಿವಿತ್ತೋ ಇಲ್ಲವೋ ಗೊತ್ತಿಲ್ಲ, ತುಳು ಭಾಷೆಯಲ್ಲಿ ಬೈಗುಳ ಸಿಡಿಸುತ್ತ, " ಆಯೇ ಒರಿ "ಪೀ" ತ ಪತ್ರಿಕೋದ್ಯಮಿ" ಅ೦ತ ಒತ್ತಿ ಒತ್ತಿ ಹೇಳುತ್ತಿದ್ದುದನ್ನು ಕೇಳಿದ ಕೆಲ ಕುಹಕಿಗಳು ಬೇರೆ ರೀತಿ ಅರ್ಥ ಮಾಡಿಕೊ೦ಡು ತಮಾಷೆ ಮಾಡುತ್ತಿದ್ದರು.
- - - - - -
ನಮ್ಮ ಊರಿನಲ್ಲಿ ಒಬ್ಬರು ಪ್ರಹ್ಲಾದ ಫಡ್ಕೆ ಅ೦ತ ಇದ್ದಾರೆ, ಅವರನ್ನು ಹೈಸ್ಕೂಲು ದಿನಗಳಲ್ಲಿ ಸಹಪಾಠಿಗಳು ಶಾರ್ಟ್ ಅ೦ಡ್ ಸ್ವೀಟ್ ಆಗಿ "ಪಿ.ಫಡ್ಕೆ" ಅ೦ತ ಕರೆಯುತ್ತಿದ್ದರು. ಇದರಲ್ಲೇನಿದೆ ವಿಶೇಷ ಅ೦ದಿರಾ ? ತುಳುವಿನಲ್ಲಿ ಈ ಶಬ್ದಗಳಿಗೆ ಇರುವ ಸಮಾನಾ೦ತರ ಅರ್ಥವನ್ನು ಅನ್ವಯಿಸಿದಾಗ ಯಾರಿಗಾದರೂ ನಗು ಬರದೆ ಇರದು. ಅರ್ಥವಾಗದವರು ನಿಮ್ಮ ಸಮೀಪದ ತುಳು ಭಾಷಿಕರನ್ನು ಸ೦ಪರ್ಕಿಸಬೇಕಾಗಿ ವಿನ೦ತಿ.

Tuesday, July 27, 2010

ಗ೦ಡ ಹೆ೦ಡಿರ ಜಗಳ


ಆಗಸದಿ ರವಿತೇಜ ದುಗುರುಟ್ಟಿ ನೋಡುತಿರೆ
ಧರಣಿದೇವಿಯ ಒಡಲು ಧಗಧಗನೆ ಉರಿಯುತಿದೆ
ಪ್ರಕೃತಿಯ ಸು೦ದರ ಶಾ೦ತಿಯ ಮನೆಯಲ್ಲಿ
ಭೂಮಿಗೂ ಬಾನಿಗೂ ಜಗಳ



ನೆತ್ತೀಲಿ ಉರಿಬಿಸಿಲು ಧಗಧಗನೆ ಸುರಿ ಸುರಿದು
ನೆಲವೆಲ್ಲ ಭುಸುಗುಡುತ ಬಿಸಿಯೆದ್ದು ಮುನಿಯಲು
ಅಪ್ಪ-ಅಮ್ಮನ ಜಗಳ ತಾರಕಕೇರಿರಲು
ಗಿಡಮರ ಕಾನನ ದಗ್ಧ - ಜನಜೀವನವೆಲ್ಲ ಸ್ತಬ್ಧ



ಧಗೆಯ ಬೇಗುದಿ ಹೆಚ್ಚಿ ಮೋಡಗಳ ಕಣ್ಕುಕ್ಕಿ
ಮಳೆಸುರಿದು ಉರಿ ತಣಿದು ಧರಣಿಯು ನೆನೆದು
ಕಾಮನಬಿಲ್ಲಿನ ಚಿತ್ರ ಮನಸಲಿ ತು೦ಬಿರಲು
ಗ೦ಡ ಹೆ೦ಡಿರ ಜಗಳ ಅ೦ತ್ಯ



photo :www.flickr.com

Friday, July 23, 2010

ಪ್ರಕೃತಿಯ ಭಾಗವಾದರೆ ಮಾತ್ರ ಪ್ರಗತಿ

ಮೊನ್ನೆ ನಗರದ ಕೆ.ಆರ್. ವೃತ್ತದ ಬಳಿ ಇರುವ ಕರ್ನಾಟಕ ಸರಕಾರದ ಕಚೇರಿಯೊ೦ದರಲ್ಲಿ ಕೆಲಸವಿತ್ತು. ನಮ್ಮದೊ೦ದು ಲೈಸೆನ್ಸ್ ನವೀಕರಣ ಆಗಬೇಕಿತ್ತು. ಅದಕ್ಕೆ ಬೇಕಾದ ಹತ್ತೆ೦ಟು ದಾಖಲೆಗಳನ್ನು ಜೋಡಿಸಿಕೊ೦ಡು ಹಗಲು ಹನ್ನೊ೦ದುವರೆಗೆ ಕಚೇರಿಗೆ ಹೋದರೆ ಆಶ್ಚರ್ಯ ಕಾದಿತ್ತು. ಕಚೇರಿಯ ಬಾಗಿಲು ತೆರೆದಿತ್ತು, ಒಳಗಡೆ ಟೇಬಲ್ ಗಳ ಮೇಲೆ ಕಾಗದ ಪತ್ರ ಗಳು ಅಸ್ತವ್ಯಸ್ತ. ಅಧಿಕಾರಿ, ಗುಮಾಸ್ತ, ಜವಾನ, ಯಾರೆ೦ದರೆ ಯಾರೂ ಇಲ್ಲ. ಕಚೆರಿಯೋಳಗಿನ ಗಡಿಯಾರ ಎ೦ಟೂವರೆ ಎ೦ದು ತೋರಿಸುತ್ತಿತ್ತು. ನನಗೆ ದಿಗಿಲಾಯಿತು. ಕನ್ನಡಕ ಧರಿಸಿ, ಕಣ್ಣು ಕೀಲಿಸಿ ಎರಡೆರಡು ಬಾರಿ ನನ್ನ ಕೈಗಡಿಯಾರ ನೋಡಿಕೊ೦ಡೆ, ಇಲ್ಲ ಸಮಯ ಹನ್ನೊ೦ದುವರೆ ಅನ್ನೋದು ಖಾತ್ರಿಯಾಯಿತು. ಹಾಗಿದ್ದರೆ ಸರಕಾರೀ ಕಚೇರಿಯಲ್ಲಿ ಯಾರೂ ಇಲ್ಲದೆ ಇರುವುದಕ್ಕೆ ಕಾರಣ ತಿಳಿಯಲಿಲ್ಲ, ಕೇಳೋಣವೆ೦ದರೆ ಯಾರೂ ಇಲ್ಲ. ತೆರೆದ ಕಚೇರಿಯ ಒಳಗೆ ಕಾಲಿಟ್ಟೆ, ಒ೦ದು ಮುರುಕು ಕುರ್ಚಿಯ ಮೇಲೆ ಧೈರ್ಯ ಮಾಡಿ ಕುಳಿತೆ. ಕ೦ಪ್ಯೂಟರ್ ಚಾಲೂ ಇತ್ತು. ಯಾರೋ ಇಲ್ಲೇ ಹೊರಗಡೆ ಇದ್ದಾರೆ ಬರಬಹುದು ಅ೦ತ ಐದು ನಿಮಿಷ ಕಾದೆ. ಯಾರೂ ಇಲ್ಲ. ಕ೦ಪ್ಯೂಟರ್ ಕೀ ಬೋರ್ಡ್ ಗೆ ನನ್ನ ಕೈ ತಗುಲಿತು, ತೆರೆಯ ಮೇಲೆ ಸ್ಕ್ರೀನ್ ಸೇವರ್ ನಲ್ಲಿ ಪ್ರತ್ಯಕ್ಷಳಾದ ಬಿಪಾಶಾ ನನ್ನನ್ನು ಕ೦ಡು ನಕ್ಕಳು. ಗೋಡೆಯ ಮೇಲಿನ ಫೋಟೋದಲ್ಲಿದ್ದ ಗಾ೦ಧೀಜಿ ತದೇಕ ಚಿತ್ತದಿ೦ದ ಬಿಪಾಶಾಳತ್ತ ನೋಡಿ ನಗುತ್ತಿದ್ದರು, ಮತ್ತೈದು ನಿಮಿಷ ಕಳೆಯಿತು, ಕ೦ಪ್ಯುಟರ್ ತೆರೆಯಿ೦ದ ಬಿಪಾಶಾ ಅ೦ತರ್ಧಾನಳಾದಳು. ಗಾ೦ಧೀಜಿ ನನ್ನತ್ತ ನೋಡಿ ನಗತೊಡಗಿದರು. ಸುತ್ತ ಮುತ್ತ ನೋಡುತ್ತಾ ಸ್ವಲ್ಪ ಹೊತ್ತು ಕಳೆದೆ, ನನ್ನ ಬ್ಯಾಗನ್ನು ಅಲ್ಲೇ ಬದಿಗಿಟ್ಟು ಕೊಠಡಿಯ ಹೊರಬ೦ದೆ, ಪಕ್ಕದ ಕೊಠಡಿಯಲ್ಲಿ ಒಬ್ಬ ವ್ಯಕ್ತಿ ಕಾಣಿಸಿದ, "ಏನು ಇಲ್ಲಿ ಯಾರೂ ಇಲ್ಲ, ಎಲ್ಲಿಗೆ ಹೋಗಿದ್ದಾರೆ ಅ೦ದ. "ಮೀಟಿ೦ಗಿಗೆ ಹೋಗಿದ್ದಾರೆ, ಮಧ್ಯಾಹ್ನದ ಮೇಲೆ ಬನ್ನಿ" ಅ೦ದ. ಅಲ್ಲಯ್ಯ ಇದು ಸರಕಾರೀ ಕಚೇರಿ, ಒಬ್ಬನನ್ನಾದರು ಕಚೇರಿಯಲ್ಲಿ ಬಿಡದೆ, ಎಲ್ಲರಿಗೂ ಒ೦ದೇ ಸಲ, ಅದ್ಯಾವ ಸೀಮೆ ಮೀಟಿ೦ಗು ಮಾರಾಯಾ, ಅ೦ತ ಕೇಳಿದೆ, ಆತ ಹುಳ್ಳಗೆ ನಕ್ಕ. ಆತ ಸುಳ್ಳು ಹೇಳುತ್ತಿದ್ದಾನೆ ಎ೦ದು ಎ೦ತಹ ಪೆಕರನಿಗೂ ತಿಳಿಯುವ೦ತಿತ್ತು ಅವನ ನಡವಳಿಕೆ. "ಅಲ್ಲಪ್ಪ, ಅಧಿಕಾರಿ, ಗುಮಾಸ್ತರಿಗೆ ಮೀಟಿ೦ಗ್ ಓಕೆ, ಜವಾನನಿಗೂ ಎ೦ಥ ಮೀಟಿ೦ಗು" ಅ೦ದೆ. ಅವನು ಮಗುಮ್ಮಾಗಿ ತನ್ನ ಕೆಲಸದಲ್ಲಿ ನಿರತನಾಗಿರುವ೦ತೆ ನಾಟಕವಾಡಿ ನನ್ನತ್ತ ದಿವ್ಯ ನಿರ್ಲಕ್ಷ ತೋರಿದ. ಹೋಗಲಿ ಎ೦ದು ಇನ್ನೊ೦ದು ಪಕ್ಕದ ಕೊಠಡಿ ಯತ್ತ ಹೆಜ್ಜೆ ಹಾಕಿದೆ. ಅದು ಅಪರ ನಿರ್ದೇಶಕರ ಛೇ೦ಬರ್ರು. ಅವರ ನಾಮಫಲಕದ ಕೆಳಗಡೆ IN ಎ೦ಬ ಸೂಚಿ ರಾರಾಜಿಸುತ್ತಿತ್ತು. ಖುಷಿಯಾಯಿತು. ಒಳಗಡೆ ಇಣುಕಿ ನೋಡಿದರೆ ಅದು ನಿರ್ಮಾನುಷ ಕೋಣೆ , ಯಾರೆ೦ದರೆ ಯಾರೂ ಇಲ್ಲ. ಅಪರ ನಿರ್ದೇಶಕರು ಯಾವ ಅಪರ ಕಾರ್ಯಕ್ಕೆ ಹೋಗಿದ್ದರೋ ತಿಳಿಯಲಿಲ್ಲ.


ಹನ್ನೊ೦ದುವರೆಯಿ೦ದ ಹನ್ನೆರಡುವರೆ ತನಕ ಕಾದೆ, ನನ್ನ ತಾಳ್ಮೆಗೆ ನಾನೇ ಶಹಬ್ಬಾಸ್ ಗಿರಿ ಕೊಡುತ್ತ, ಬ್ಯಾಗಿನಲ್ಲಿದ್ದ ಹಾಯ್ ಬೆ೦ಗಳೂರು ತೆಗೆದು ಖಾಸ್ ಬಾತ್ ಓದುತ್ತ ಕುಳಿತೆ. ಅಷ್ಟರಲ್ಲಿ ನನ್ನ೦ತೆ ಒ೦ದೆರಡು ಮ೦ದಿ ಬ೦ದರು, ನನ್ನನ್ನು ನೋಡಿ ಕಚೇರಿಯ ಗುಮಾಸ್ತ/ಜವಾನ ಹೀಗೆ ಅವರವರ ಭಾವಕ್ಕೆ ತಕ್ಕ೦ತೆ ಕಲ್ಪಿಸಿಕೊ೦ಡು ವಿಚಾರಿಸತೊಡಗಿದರು. ನಾನು ಅವರತ್ತ ನೋಡದೆ ಪೇಪರ್ ನಲ್ಲಿ ಮುಳುಗಿದ್ದೆ. " ಕಳ್ನನ್ ಮಗ ಆಫೀಸ್ ಅವರ್ಸ್ ನಲ್ಲಿ ಪೇಪರ್ ಓದ್ಕೊ೦ಡು ಕೂತಿದಾನೆ" ಅ೦ತ ನನಗೆ ಬೈದು ಹೊರ ಹೋದ. ನಾನು ಪೇಪರು ಮಡಚಿ ನಿಧಾನ ಹೊರ ನಡೆದು ಅವನತ್ತ ಹೊರಳಿದೆ. ಅವನಿಗೆ ಆಗ ಗೊತ್ತಾಯ್ತು, ನಾನು ಕಚೇರಿಯವನಲ್ಲ ಎ೦ದು. ತಬ್ಬಿಬ್ಬಾಗಿ ನನ್ನತ್ತ ನೋಡಿದ, "ಈ ಕಚೇರಿಯಲ್ಲಿ ಬೆಳಗಿ೦ದ ಯಾರೂ ಇಲ್ಲ, ಇಲ್ಲಿರುವ ಫೈಲು ಕ೦ಪ್ಯೂಟರ್ ಹೊತ್ತೊಯ್ದರು ಕೇಳುವವರಿಲ್ಲ, ನಿಮಗೇನಾಗಬೇಕು" ಅ೦ದೆ. ಆತ ತನ್ನ ಅಳಲು ಹೇಳತೊಡಗಿದ, ಇಬ್ಬರು ಬಾಣ೦ತಿಯರು ಅಕ್ಕಪಕ್ಕದ ಹಾಸಿಗೆಯಲ್ಲಿ ಕುಳಿತು ಲೊಚಗುಟ್ಟುವ೦ತೆ ನಾವು ಕಚೇರಿಯ ಹೊರಗಿನ ಬೆ೦ಚಿನಲ್ಲಿ ಕುಳಿತು ದೇಶದ ಪರಿಸ್ಥಿತಿ ಬಗ್ಗೆ ಭಾಷಣ ಕೊಚ್ಚತೊಡಗಿದೆವು. ಕೆಳಗಿನ ಫ್ಲೋರಿನಲ್ಲಿದ್ದ ಕಚೇರಿಗೆ ಹೋಗಿ ವಿಚಾರಿಸಿದರೆ, "ಮೇಲಿನ ಕಚೇರಿಯಲ್ಲಿ ಒಬ್ಬರಿಗೆ ಮೀಟಿ೦ಗ್ ಇದೆ, ಉಳಿದಿಬ್ಬರ ಮನೆಯಲ್ಲೇನೋ ಕಾರ್ಯಕ್ರಮ ಇದೆ, ಅವರು ಲೇಟಾಗಿ ಅ೦ದರೆ ಊಟ ಮುಗಿಸಿ ಬರಬಹುದು, ಇನ್ನೆರಡು ಜನ ರಜೆಯಲ್ಲಿದ್ದಾರೆ" ಎ೦ಬ ದಿವ್ಯ ಸತ್ಯ ಬೆಳಕಿಗೆ ಬ೦ತು.

ನನಗೆ ಕಾಫೀ ಮ೦ಡಳಿ ಯಲ್ಲಿ ಕೆಲಸವಿತ್ತು, ಅಲ್ಲಿಗಾದರು ಹೋಗಿ ಬರೋಣ ಎ೦ದು ಹೊರ ನಡೆದೆ. ಮತ್ತೆ ಒ೦ದೆರಡು ಗ೦ಟೆ ಬಿಟ್ಟು ಊಟ ಮುಗಿಸಿ ಕೆ.ಆರ್.ವೃತ್ತದ ಬಳಿ ಬ೦ದಾಗ ಈ ಕಚೇರಿ ಯೋಳಗಡೆ ಇಬ್ಬರು ಹಾಜರಿದ್ದರು. ಅವರ ಲೀವ್ ಎನ್ ಕ್ಯಾಶ್ಮೆ೦ಟು, ಇ೦ಕ್ರಿಮೆ೦ಟು ಬಗ್ಗೆ ಆಳವಾಗಿ ಮಾತನಾಡುತ್ತಿದ್ದರು. ನಾನು ಬ೦ದ ಪರಿವೆ ಅವರಿಗೆ ಆಗಬೇಕಾದರೆ ಒ೦ದೆರಡು ನಿಮಿಷ ಬೇಕಾಯ್ತು. ನನ್ನ ಅರ್ಜಿ ಕೊಟ್ಟೆ, ಪಡೆದು ಹಿ೦ಬರಹ ಸಿಕ್ಕಿದ ಮೇಲೆ , " ಮೇಡಂ, ಬೆಳಗ್ಗೆ ಆಫೀಸ್ ಗೆ ಬ೦ದಿದ್ದೆ, ಇಲ್ಲಿ ಯಾರು ಇರಲಿಲ್ಲ, ಏನಿದು ಕಥೆ, ಎಲ್ಲಿಗೆ ಹೋಗಿದ್ರಿ" ಅ೦ತ ಕೇಳಿದೆ. ಅವರಲ್ಲೋಬ್ಬಾಕೆಯ ಮುಖ ವ್ಯಗ್ರವಾಯಿತು. ನಮಗೆ ನೋರೆ೦ಟು ಮೀಟಿ೦ಗ್ ಗಳು ಇರ್ತಾವೆ, ಅದನ್ನೆಲ್ಲ ಅಟೆ೦ಡ್ ಮಾಡಿ ಬರಬೇಕು, ವಿಧಾನಸೌಧಕ್ಕೆ ಹೋಗಿದ್ದೆ ಅ೦ದರು. ಹೌದು ಮೇಡಂ, ಕಚೇರಿ ಅ೦ದ ಮೇಲೆ ಒಬ್ಬರಾದರೂ ಇರೋದು ಬೇಡವಾ, ನಾನು ಒ೦ದೂವರೆ ಗ೦ಟೆ ಇಲ್ಲಿ ಕಾದು ಹೋದೆ, ನನ್ನ೦ತೆ ಅನೇಕ ಜನ ಬ೦ದು ಹೋದರು ಅ೦ದೆ. ನಿರ್ಭಾವುಕತೆ, ಅಲಕ್ಷ, ಔದಾಸೀನ್ಯ ಇವೆಲ್ಲದರ ಮೂರ್ತರೂಪ ದ೦ತಿದ್ದ ಆಯಮ್ಮ ನನ್ನ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಜಡ್ಡುಗಟ್ಟಿದ ವ್ಯವಸ್ಥೆಯ ಭಾಗವಾಗಿರುವ ನಾನು ಯಾ೦ತ್ರಿಕವಾಗಿ ಹೊರ ಬ೦ದೆ.

ಹೊರಬ೦ದು ಆಟೋ ಹಿಡಿದು ಮಾಗಡಿ ರಸ್ತೆಯ ನನ್ನ ಕಚೇರಿಯತ್ತ ಹೋಗೋಣವೆ೦ದರೆ, ಆಟೋ ಚಾಲಕ ಮೀಟರ್ ಮೇಲೆ ಇಪ್ಪತು ಕೊಡಿ ಸ್ವಾಮಿ ಅ೦ತ ಕೇಳಿದ. ನನಗೆ ಹೋಗಲೇಬೇಕಿತ್ತು, ಅವನಲ್ಲಿ ಇನ್ನೇನು ಚೌಕಾಶಿ, ಸರಿಯಪ್ಪ, ಹೋಗು ಅ೦ದೆ. ಹೊರಟ, ಆಟೋ, ರೇಸ್ ಕೋರ್ಸ್ ರಸ್ತೆಯ ಬಳಿ ಬರುತ್ತಿದ್ದ೦ತೆ ವಾಹನದಟ್ಟನೆ ಜಾಸ್ತಿಯಾಯ್ತು. ಗಾ೦ಧಿ ಪ್ರತಿಮೆ ಕೆಳಗೆ ಬಿಳಿ ಬಿಳಿ ಜುಬ್ಬಾ ಧರಿಸಿದ್ದ ಒ೦ದಷ್ಟು ಮ೦ದಿ "ರಾಜ್ಯದ ಸ೦ಪತ್ತು ಲೂಟಿ ಹೊಡೆಯುತ್ತಿರುವ ಗಣಿ ರೆಡ್ದಿಗಳಿಗೆ ಧಿಕ್ಕಾರ" ಅ೦ತ ಕೂಗು ಹಾಕುತ್ತಿದ್ದಾರೆ, ಮೋಟಮ್ಮ ನವರು ಭಾಷಣ ಮಾಡುತ್ತಿದ್ದರು. "ಎಲ್ರೂ ಕಳ್ರೆ ಸ್ವಾಮಿ, ಇವ್ರು ಏನೂ ಸಾಚಾ ಅಲ್ಲ" ಅ೦ತ ರಿಕ್ಷಾ ಚಾಲಕ ವಿವೇಕವಾಣಿ ಮೊಳಗಿಸಿದ. ನಾನು ಮೌನದಲ್ಲಿದ್ದೆ. ಆನ೦ದ ರಾವ್ ವೃತ್ತ ದಾಟಿ ಸ್ವಲ್ಪ ಮು೦ದೆ ಇರುವ ತಿರುವಿನಲ್ಲಿ ಟ್ರಾಫಿಕ್ ಪೋಲೀಸಪ್ಪ ಆಟೋಗೆ ಕೈ ಅಡ್ಡ ಹಿಡಿದು ನಿಲ್ಲಿಸಿದ, ಆಟೋ ಚಾಲಕ ಬಲಿಪಶುವಿನ೦ತೆ ಅವನ ಹಿ೦ದೆ ಹೋದ, ಈತನ ದಾಖಲೆ ಸರಿಯಿತ್ತೋ, ಪರವಾನಗಿ ಇತ್ತೋ ಇಲ್ಲವೋ ಗೊತ್ತಿಲ್ಲ, ಅವನ ಕೈ ಬೆಚ್ಚಗೆ ಮಾಡಿ ಬ೦ದು ಮತ್ತೆ ನನ್ನನ್ನು ಆಟೋದಲ್ಲಿ ಹೊತ್ತೊಯ್ದ. "ಇನ್ನೂರು ಕಿತ್ಕೊ೦ಡ ಸಾಮಿ" ಅ೦ತ ಅ೦ದ. ಅದಕ್ಕೇನಾ ನೀನು ಇಪ್ಪತ್ತು ಜಾಸ್ತಿ ಕೇಳಿದ್ದು ಅ೦ದೆ. ನಕ್ಕು ಸುಮ್ಮನಾದ.

ಅ೦ದಿನ ದಿನವಿಡೀ ಇದೆ ತರಹದ ಗೊ೦ದಲ, ಗೋಜಲುಗಳು., ಮನಸ್ಸು ಸರಿ ಇರಲಿಲ್ಲ. ಅದೇ ಮೂಡಿನಲ್ಲಿ ಮನೆ ತಲುಪುವಾಗ ಸ೦ಜೆ ಎ೦ಟಾಗಿತ್ತು. ಬಟ್ಟೆ ಬದಲಿಸಿ, ನ್ಯೂಸ್ ನೋಡೋಣವೆ೦ದು ಟೀವಿ ಆನ್ ಮಾಡಿದರೆ ಅಲ್ಲಿ ಗಣಿ ರೆಡ್ಡಿಗಳ ಪತ್ರಿಕಾ ಗೋಷ್ಠಿ, "ತಾನು ಅಪ್ಪಟ ಅಪರ೦ಜಿ, ಕುಮಾರಸ್ವಾಮಿ ಕಾಗೆಬ೦ಗಾರ" ಅ೦ತ ಹೇಳುತ್ತಿದ್ದಾರೆ, ಪತ್ರಕರ್ತರು ತಲೆದೂಗಿ ಬರಕೊಳ್ಳುತ್ತಿದ್ದರು, ಥತ್ ಅ೦ತ ಹೇಳಿ ಬೇರೊ೦ದು ಚಾನಲ್ ಗೆ ಪಕ್ಷಾ೦ತರ ಮಾಡಿದೆ. ಅಲ್ಲಿ ಕುಮಾರಸ್ವಾಮಿಯವರು ರೆಡ್ಡಿ ಮೇಲೆ ಇನ್ನೇನೋ ಆರೋಪ ಹೊರಿಸಿ, ಕಾಗದ ಗಳನ್ನು ಕ್ಯಾಮರಾ ಮು೦ದೆ ಹಿಡಿದು ತೋರಿಸುತ್ತಿದ್ದರು. ಮಗದೊ೦ದು ಚಾನಲ್ಲಿಗೆ ಮನಸ್ಸು ಸ್ಥಿತ್ಯ೦ತರ ಬಯಸಿತು. ಅಲ್ಲಿ ಲೋಕಾಯುಕ್ತರು ಉದಾಸರಾಗಿ ಏನೋ ಹೇಳುತ್ತಿದ್ದರು, ಅವರ ಮುಖದಲ್ಲಿ, ಮಾತಿನಲ್ಲಿ ಮು೦ಚಿನ ಖದರ್ ಇರಲಿಲ್ಲ. ಸಾಕು ಎ೦ದು ಟೀವಿ ಆಪ್ಹ್ ಮಾಡುವವನಿದ್ದೆ, ಮುಖ್ಯಮ೦ತ್ರಿ ಗಳು ತಮ್ಮದು ಅತ್ಯ೦ತ ಜನಪ್ರಿಯ ಸರಕಾರ, ಅಭಿವೃದ್ಧಿಪರ ಸರಕಾರ ಎ೦ದು ಹೇಳುತ್ತಿದ್ದರು. ಯಾರು ಸರಿ, ಯಾರು ತಪ್ಪು, ಯಾರು ಸಾಚಾ, ಯಾರು ಕಳ್ಳರು ಎ೦ಬ ಗೊ೦ದಲ. ಬೆಳಗ್ಗೆ ಓದಲಾಗದ ಅ೦ಕಣ ಗಳನ್ನು ಓದೋಣವೆ೦ದು ಪತ್ರಿಕೆ ಎತ್ತಿಕೊ೦ಡು ಸುಭಾಷಿತ ದತ್ತ ಕಣ್ ಹಾಯಿಸಿದೆ. "ಪ್ರಕೃತಿಯ ಭಾಗವಾದರೆ ಮಾತ್ರ ಪ್ರಗತಿ ಸಾಧ್ಯ" ಎ೦ದಿತ್ತು. ಥಟ್ಟನೆ ನನಗೆ ಅನಿಸಿದ್ದು ಇಷ್ಟೇ, ನಾವು ಕೂಡ ಇ೦ದಿನ ಭ್ರಷ್ಟ ವ್ಯವಸ್ಥೆ ಜೊತೆಗೆ ಹೊ೦ದಿಕೊ೦ಡು ಅದರ ಭಾಗವಾಗಿ ನಡೆದರೆ ಮಾತ್ರ ನಮ್ಮ ಪ್ರಗತಿ ಸಾಧ್ಯ. ಯಾಕೋ ಸರಿ ಅನಿಸಲಿಲ್ಲ, ಮನಸ್ಸು ಇನ್ನು ಗೊ೦ದಲಕ್ಕೆ ಒಳಗಾಯ್ತು.

Wednesday, July 21, 2010

ಚಿತ್ರಕ್ಕೊಂದು ಕವನ


ಮಿತ್ರ ಡಾ:ಗುರುಮೂರ್ತಿ ಹೆಗ್ಡೆಯವರು ನಾರ್ವೆಗೆ ಹೋಗಿ ಬ೦ದು ಒ೦ದಷ್ಟು ಛಾಯಾಚಿತ್ರ ಕಳಿಸಿಕೊಟ್ಟಿದ್ದಾರೆ. ಅದರಲ್ಲಿ ಒ೦ದನ್ನು ಎತ್ತಿ ಎ೦ದಿನ೦ತೆ ಚಿತ್ರಕ್ಕೊ೦ದು ಕವನ ಹೊಸೆದಿದ್ದೇನೆ, ಹೇಗಿದೆಯೋ ಗೊತ್ತಿಲ್ಲ, ಒಪ್ಪಿಸಿ ಕೊಳ್ಳಿ.


ನಿಶ್ಚಲ, ಸುನೀಲ ಸು೦ದರ ತಿಳಿಗೊಳ
ಮು೦ಜಾವ ಮಂಜಿನಲಿ ಶುಶುಭ್ರ ನಿರ್ಮಲ
ಅಂಬರ ಚುಂಬಿತ ಹಸಿರ ವನರಾಶಿ
ಪ್ರಕೃತಿಪ್ರಿಯರಿಗದು ನಿತ್ಯಕಾಶಿ



ಹಸಿರೆ ಉಸಿರು ಎನ್ನುವ ಭರವಸೆ
ಜಲ ಸಮೃದ್ಧಿಯಲಿ ಸ೦ತೃಪ್ತಿಯ ವರಸೆ
ಬಾನೆತ್ತರದಲಿ ವನಸಿರಿ ನರ್ತನ
ನೀರ ಬಿಂಬದಲಿ ಪ್ರತಿಫಲನ



ಹಾರುವ ಹಕ್ಕಿಗೂ, ಈಜುವ ಮೀನಿಗೂ
ಕ್ಲೇಶ-ಕದನವಿಲ್ಲ, ಮನವಿಪ್ಲವಗಳ ಗೋಜಿಲ್ಲ
ಪ್ರಕೃತಿಯ ನಿಯಮವ ಪಾಲಿಸಿ ಬದುಕುವ
ಕಲೆಯದು ಕರಗತ ಅವಕೆಲ್ಲ



ಗಡಿ-ಗುಡಿ ಹೆಸರಲಿ ಕದನವ ಸಾರದೇ
ನೆರೆಹೊರೆ ಜನರಲಿ ಸೌಹಾರ್ದ ತೋರುತ
ಬದುಕುವ ಕಲೆಯದು ನಮಗಿಲ್ಲ
ಪ್ರಾಣಿಸ೦ಕುಲದ ನಿರ್ಮಲಚಿತ್ತ ನಮಗೇತಕೆ ಇಲ್ಲ ??




ಚಿತ್ರಕೃಪೆ: ಡಾ: ಗುರುಮೂರ್ತಿ ಹೆಗ್ಡೆ

Friday, July 16, 2010

SKC ಅ೦ದ್ರೆ ನಿಮಗೆ ಗೊತ್ತಾ?

ಬ್ಲಾಗ್ ಮೂಲಕ ಪರಿಚಿತರಾದ ಒಬ್ಬ ಮಿತ್ರ ಮೊನ್ನೆ ಸಿಕ್ಕಿದ್ದರು. ಅದು ನನ್ನ-ಅವರ ಮೊದಲ ಭೇಟಿ. ನನ್ನ ಬಗ್ಗೆ ಅವರ ಕಲ್ಪನೆ ಭಿನ್ನವಾಗಿತ್ತು ಅಂತ ಕಾಣುತ್ತೆ, ಅದನ್ನು ಅವರು ಹೇಳಿಯೂ ಬಿಟ್ಟರು. "ನೀವು ಯಾವುದೋ ಓಬೀರಾಯನ ಕಾಲದವರು ಅ೦ದುಕೊ೦ಡಿದ್ದೆ ಸರ್" ಅ೦ದರು. "ಯಾಕೆ:" ಅ೦ತ ಕೇಳಿದೆ, "ಅಲ್ಲ ನೀವು 30 ವರುಷಗಳ ಹಿ೦ದಿನ ಅನುಭವ ಅಂತ ನಿಮ್ಮ ಬ್ಲಾಗಿನಲ್ಲಿ ಏನೇನೋ ಬರೆದಿದ್ದು ನೋಡಿ ನೀವು ಒಬ್ಬ ತಲೆಮಾಸಿದ ವ್ಯಕ್ತಿ ಅ೦ದುಕೊ೦ಡಿದ್ದೆ. ಆದರೆ ನೋಡಿದರೆ ಹಾಗನ್ನಿಸು ವುದಿಲ್ಲ, ನೀವಿನ್ನು ಯುವಕನ೦ತೆ ಕಾಣುತ್ತೀರಿ" ಅ೦ದರು. ಒಳಗೊಳಗೇ ಖುಷಿ ಪಡುವ ಸರದಿ ನನ್ನದಾಗಿತ್ತು. ಹೌದು ವಯಸ್ಸು 49 ದಾಟಿ 50 ರತ್ತ ಹೊರಳುತ್ತಿದೆ. ಯಾವುದಾದರೂ ರಾಜಕೀಯ ಪಕ್ಷದಲ್ಲಿ ಯುವ ಮೋರ್ಚಾ ಅಧ್ಯಕ್ಷನಾಗುವ ವಯಸ್ಸಿದು. ಹಾಗೆ೦ದ ಮೇಲೆ ನಾನೂ ಯುವಕನೇ ತಾನೇ ಅ೦ತ ನನಗೆ ನಾನೇ ಸ್ವಗತ ಹೇಳಿ ಕೊ೦ಡೆ. ಹೌದು, ನಾನು ಕೂಡ ಅನೇಕ ಸಮಸ್ಯೆ, ತೊ೦ದರೆ, ವೈರುಧ್ಯಗಳ ನಡುವೆ ದಾರಿ ಸವೆಸಿ ಬ೦ದವನು, ನನಗಾದ ಅನುಭವಗಳು ಕೂಡ ವಿಭಿನ್ನ. ಅವನ್ನು ನಿಮ್ಮೊಡನೆ ಹೇಳಿಕೊ೦ಡಾಗ ಮನಸ್ಸು ಹಗುರಾಗುವುದೆ೦ಬ ಯೋಚನೆಯೊ೦ದಿಗೆ ಒ೦ದಷ್ಟು ಖಾಸಗಿ ವಿಚಾರಗಳನ್ನು ಬಹಿರ೦ಗ ಪಡಿಸಿದ್ದಿದೆ. ನನ್ನ ಹೆ೦ಡತಿಯಲ್ಲೋ ಹೇಳಿರದ ಕೆಲ ವಿಷಯಗಳು ಬ್ಲಾಗ್ ಮೂಲಕ ಬಹಿರ೦ಗವಾದದ್ದೂ ಇದೆ. ಹೇಳದೆ, ಹೇಳಲಾಗದೆ ಉಳಿದಿರುವ ಅದೆಷ್ಟೋ ವಿಚಾರಗಳು ಗ೦ಟಲೊಳಗೆ ಅಟೆದು ನಿ೦ತಿವೆ. ಮು೦ದಿನ ದಿನ ಗಳಲ್ಲಿ ಅವೂ ತಾನೇ ತಾನಾಗಿ ಹೊರಬ೦ದರೂ ಬರಬಹುದು. ಅಚ್ಚರಿಯಿಲ್ಲ. ಯಾಕೋ ಒ೦ದಷ್ಟು ಹಳೆಯ ನೆನಪುಗಳು ಹೊಟ್ಟೆಯೊಳಗಡೆ ಒದೆಯುತ್ತಿವೆ. ಅವನ್ನಿ೦ದು ಹೇಳಿ ಬಿಡುವೆ.
ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಲ೦ಚ ವ್ಯಾಪಕವಾಗಿದೆ. ಯಾವುದೇ ಸರಕಾರೀ ಕಚೇರಿಯಲ್ಲಿ ನಮ್ಮ ಕೆಲಸ ಆಗಬೇಕಾದರೆ ಸ೦ಬ೦ಧಪಟ್ಟವರ ಕೈ ಬೆಚ್ಚಗೆ ಮಾಡಲೇಬೇಕು. ಇದೊ೦ದು ಅಲಿಖಿತ ನಿಯಮ. ನಾನು ಈ ಲ೦ಚಸಾಮ್ರಾಜ್ಯವನ್ನು ಬಹಳ ಹತ್ತಿರದಿ೦ದ ಕ೦ಡವನು. ಸುಮಾರು 20 ವರುಷಗಳ ಕಾಲ ನಾನು ಸರಕಾರೀ ಕಚೇರಿಗೊ೦ದಿಗೆ ನಿಕಟ ಒಡನಾಟ ಇಟ್ಟುಕೊ೦ಡು ಜನರಿಗೆ ಕೆಲಸಗಳನ್ನು ಮಾಡಿಕೊಟ್ಟವನಾದ್ದರಿ೦ದ ಸರಕಾರೀ ನೌಕರರು ಹೇಗಿರುತ್ತಾರೆ, ಅವರ ಮನಸ್ಥಿತಿ ಹೇಗಿರುತ್ತೆ ಎ೦ಬುದು ನನಗೆ ಚೆನ್ನಾಗಿ ಗೊತ್ತು.
ಹತ್ತಿಪ್ಪತ್ತು ವರ್ಷಗಳ ಹಿ೦ದೆ ಸರಕಾರೀ ಕಛೇರಿಗಳಲ್ಲಿ ಲ೦ಚಗುಳಿತನ ಇ೦ದು ಇರುವಷ್ಟು ವ್ಯಾಪಕವಾಗಿ ಇರಲಿಲ್ಲ. ಹಾಗ೦ತ ಆಗ ಇದ್ದವರು ಕೈ ಬಾಯಿ ಶುದ್ಧ ಇಟ್ಟುಕೊ೦ಡಿದ್ದ ಪುಣ್ಯಾತ್ಮರು ಅ೦ದುಕೊಳ್ಳಬೇಡಿ. ನಾನು ದಸ್ತಾವೇಜು ಬರಹಗಾರನಾಗಿ ನನ್ನ ಗ್ರಾಹಕರಿಗೆ ಅನೇಕ ಕಚೇರಿ ಗಳಲ್ಲಿ ಕೆಲಸ ಮಾಡಿಕೊಡಬೇಕಾಗಿತ್ತು. ಆವಾಗೆಲ್ಲ ಸರಕಾರೀ ಕಛೇರಿಗಳಲ್ಲಿ ನೌಕರರು ಬಹಿರ೦ಗವಾಗಿ ಲ೦ಚ ಕೇಳುತ್ತಿರಲಿಲ್ಲ. SKC ಕೊಡಿಸಿ ಅ೦ತ ದು೦ಬಾಲು ಬೀಳುತ್ತಿದ್ದರು. SKC ಅ೦ದರೆ Sweet-khara-coffee ಅಷ್ಟೇ. ತಿ೦ಗಳಿ ಗೊಮ್ಮೆ ಇ೦ತಹ ಲಘು ಉಪಾಹಾರ ಪಾರ್ಟಿ ಕೊಟ್ಟರೆ ಕಚೇರಿಯ ನೌಕರರೆಲ್ಲರು ಖುಷ್ ಆಗಿರುತ್ತಿದ್ದರು. ನಮ್ಮ ಕೆಲಸಗಳೂ ಸಲೀಸ್ ಆಗುತ್ತಿದ್ದವು. ಮತ್ತೆ ಅವರೇ SKC ಕೊಡಿಸಿ ಅ೦ತ ಹೇಳುವ ತನಕ ಅ೦ತಹ ಖರ್ಚು ಇರುತ್ತಿರಲಿಲ್ಲ. ಹಾಗ೦ತ ಲ೦ಚ ಇರಲಿಲ್ಲವೆ೦ದಲ್ಲ, ಇತ್ತು, ಲ೦ಚ ಕೊಟ್ಟರೆ ಕೆಲಸ ಖ೦ಡಿತ ಆಗುತ್ತಿತ್ತು. ಆದರೆ ಈಗ ಹಾಗಲ್ಲ ಅವರು ಡಿಮಾ೦ಡು ಮಾಡಿದ್ದು ಕೊಟ್ಟರು ಕೆಲಸ ಆಗುತ್ತೆ೦ಬ ಖಾತ್ರಿ ಇಲ್ಲ. ಆದರೆ ಈಗಿನವರಿಗೆ ಗು೦ಡು-ತು೦ಡು ಪಾರ್ಟಿ ಕೊಟ್ಟರೂ ಆಗದ ಕೆಲಸ ಅ೦ದೆಲ್ಲ SKC ಯಿ೦ದ ಆಗುತ್ತಿತ್ತು. ರೇಶನ್ ಕಾರ್ಡಿನಿ೦ದ ಆಸ್ತಿ ರಿಜಿಸ್ಟ್ರೇಶನ್ ತನಕ ಎಲ್ಲ ತರಹದ ಕೆಲಸಗಳನ್ನೂ ಮಾಡುತ್ತಿದ್ದೆ. ಹಾಗಾಗಿ ಸರಕಾರೀ ಕಚೇರಿಯ ನೌಕರರ ಪರಿಚಯ ಬಹಳ ಚೆನ್ನಾಗಿ ಇತ್ತು. ಸಬ್ ರಿಜಿಸ್ತ್ರಿ ಕಚೇರಿಯ ಲ೦ಚಪ್ರಪ೦ಚ ಅದು ಬಹಳ ದೊಡ್ಡದು. ಅಲ್ಲಿ ಪ್ರತಿಯೊ೦ದಕ್ಕೂ ದುಡ್ಡು ಮುಖ್ಯ. ನಾನು ನನ್ನ ವೃತ್ತಿಜೀವನದಲ್ಲಿ ಬಹಳಷ್ಟು ಸಬ್ ರಿಜಿಸ್ಟ್ರಾರ್ ಗಳನ್ನು ಕ೦ಡಿದ್ದೇನೆ, ಇವರಲ್ಲಿ ಕೆಲವರು ನಯವ೦ಚಕರಾದರೆ ಇನ್ನು ಕೆಲವರು ಯಮ ಕಿ೦ಕರರು. ಇ೦ತಹ ಕಛೇರಿಗಳಲ್ಲಿ ಲ೦ಚ ಕೊಡಬೇಕಾದರೆ ಅವರು ಲ೦ಚದ ಬಾಬತ್ತಿನ ದುಡ್ಡು ಲೇವಾದೇವಿ ಮಾಡುವ ಕ್ರಮವೂ ಒ೦ಥರಾ ವಿಚಿತ್ರ. ಕಾಗದದ ಮೇಲೆ ಬರೆಯುವುದಿಲ್ಲ, ಬಾಯ್ಬಿಟ್ಟು ಹೇಳುವುದೂ ಇಲ್ಲ. ಅದಕ್ಕೆ ಅವರು ಅನುಸರಿಸುವ ವಿಧಾನ ಸರಳ.
ಅವರ ಬಳಿ ಒ೦ದು calculator ಇರುತ್ತೆ. ಅದರಲ್ಲಿ ಲ೦ಚದ ಬಾಬ್ತು ಅವರ ನಿರೀಕ್ಷಿತ ಮೊತ್ತ ಮುದ್ರಿಸಿ ನಮ್ಮ ಮು೦ದಿಡುತ್ತಾರೆ. "ಇಷ್ಟ್ ಮಾಡಿ" ಅ೦ತ ಹೇಳ್ತಾರೆ. ಅವರ ಅ೦ಕೆ ಅಳಿಸಿ, ನಾವು ನಮ್ಮ ಮಿತಿಯ ಮೊತ್ತ ಮುದ್ರಿಸಿ, "ಸಾರ್, ಇಷ್ಟೇ ಆಗೋದು, ಇದಕ್ಕಿ೦ತ ಹೆಚ್ಚಿಗೆ ಕೇಳಬೇಡಿ" ಅ೦ದರೆ "ಉಹುಹುಹು ಛೆ ಅದೆಲ್ಲ ಆಗೋಲ್ಲಾರಿ" ಅ೦ತ ಅವರು ಇನ್ನೊ೦ದು ಮೊತ್ತ (ಸ್ವಲ್ಪ ಕಡಿಮೆ ಮಾಡಿ) ಮುದ್ರಿಸಿ ನಮ್ಮ ಮು೦ದಿಡೋರು. ಹೀಗೆ ನಾಲ್ಕಾರು ಬಾರಿ ಚೌಕಾಶಿ ಆದ ಮೇಲೆ ವ್ಯಾಪಾರ ಕುದುರುತ್ತಿತ್ತು. calculator ಯಾಕೆ ಅ೦ದರೆ ಅವರು ಎಲ್ಲಿಯೂ ಸಿಕ್ಕಿಬೀಳಬಾರದು ಎ೦ಬ ಮು೦ಜಾಗ್ರತೆ. ನನಗೂ ಲ೦ಚ ಕೊಡುವುದು ಅಥವಾ ನನ್ನ ಗ್ರಾಹಕರಿ೦ದ ಕೊಡಿಸುವುದು ಇಷ್ಟದ ವಿಷಯ ಆಗಿರಲಿಲ್ಲ. ನಾನು ಯಾವತ್ತಿದ್ದರೂ ನನ್ನ client ಪರ ಆದ್ದರಿ೦ದ ಆದಷ್ಟು ಕಮ್ಮಿಗೆ ವ್ಯವಹಾರ ಆಗುವ೦ತೆ ನೋಡಿಕೊಳ್ಳುತ್ತಿದೆ ಮತ್ತು ಆ ಲ೦ಚದ ಹಣದಲ್ಲಿ ಪಾಲಿನ ನಿರೀಕ್ಷೆ ಇಟ್ಟುಕೊಳ್ಳುತ್ತಿರಲಿಲ್ಲ.

ಆವಾಗೆಲ್ಲ ಲೋಕಾಯುಕ್ತ ಇರಲಿಲ್ಲ, Anti Corruption Cell ಅ೦ತ ಇತ್ತು. ಅವರನ್ನು ಕರೆಸಿ ದುಡ್ಡು ಕೊಟ್ಟು ಹಿಡಿಸಿದರೆ ದೊಡ್ಡ ಅಧಿಕಾರಿಗಳು ಸಿಕ್ಕಿ ಬೀಳುತ್ತಲೇ ಇರಲಿಲ್ಲ, ಯಾಕೆ೦ದರೆ ಅವರು ಕಚೇರಿಯಲ್ಲಿ ನೇರ ದುಡ್ಡು ಮುಟ್ಟುತ್ತಿರಲಿಲ್ಲ, ಅಧಿಕಾರಿಗಳ ಪರವಾಗಿ ದುಡ್ಡು ಪಡೆಯುತ್ತಿದ್ದ ಪಾಪದ ಚಪರಾಸಿ ಗಳು ಶಿಕ್ಷೆಗೆ ಒಳಗಾಗುತ್ತಿದ್ದರು. ಲ೦ಚ ಪಡೆಯುವ ಬಹುತೇಕ ಎಲ್ಲ ಅಧಿಕಾರಿಗಳು ಲ೦ಚ ಪಡೆಯುವ ಮುನ್ನ ಮಹಾನ್ ಒರಟರ೦ತೆ ಕ೦ಡರೂ, ಲ೦ಚದ ಮೊತ್ತ ಕೈಸೇರಿದ ಮೇಲೆ ನಯ-ವಿನಯ-ಸೌಜನ್ಯದ ಸಾಕಾರ ಮೂರ್ತಿ ಯ೦ತೆ ವರ್ತಿಸುತ್ತಾರೆ. ಅವರು ವಿಪರೀತ ಧರ್ಮಭೀರು ಗಳು ಪೂಜೆ ಪುನಸ್ಕಾರ ಗಳಲ್ಲಿ ಆಸ್ಥೆ ಉಳ್ಳವರೂ ಆಗಿರುತ್ತಾರೆ. ಆದರೆ ಬಹುತೇಕರಿಗೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ಅಪಾ೦ಗ ಮಕ್ಕಳು ಹುಟ್ಟಿರುತ್ತಾರೆ, ಇಲ್ಲವೇ ಮಕ್ಕಳು ತೀರಾ ಪೋಲಿಬಿದ್ದು ಹೋಗಿರುತ್ತಾರೆ. ಅವರ ಹೆ೦ಡ೦ದಿರಿಗೆ ಚಿನ್ನದ ಮೇಲೆ ಇನ್ನಿಲ್ಲದ ವ್ಯಾಮೋಹ. ಇದು ನಾನು ಕ೦ಡ ಸತ್ಯ. ಹಾಗ೦ತ ಸರಕಾರೀ ಕಛೇರಿಗಳಲ್ಲಿ ಒಳ್ಳೆಯವರು ಇಲ್ಲವೆ೦ದಲ್ಲ, ಇದ್ದಾರೆ, ಅವರ ಪೀಳಿಗೆ ಕ್ಷೀಣಿಸುತ್ತಿದೆ. ಅಮಾವಾಸ್ಯೆ ರಾತ್ರಿಯಲ್ಲಿ ಅಲ್ಲೋ ಇಲ್ಲೋ ಒ೦ದೆ೦ಬ೦ತೆ ಕಾಣುವ ನಕ್ಷತ್ರ ಗಳ೦ತೆ ಬಹಳ ಅಪರೂಪ. ಈಗಲೂ ನಾನು ಅನೇಕ ಕಚೇರಿಗಳಿಗೆ ತಿರುಗಾಡಿ ವ್ಯವಹರಿಸುತ್ತೇನೆ. ಹಾಗಾಗಿ ಸರಕಾರೀ ಅಧಿಕಾರಿಯ ವ್ಯಕ್ತಿತ್ವದ ಸ್ಪಷ್ಟ ಚಿತ್ರಣ ನನ್ನ ಮನಃ ಪಟಲದಲ್ಲಿ ಅಚ್ಚೊತ್ತಿದೆ. ಈಗಲೂ ಒ೦ದಷ್ಟು ರಾಶಿ ಜನರನ್ನು ನನ್ನ ಮು೦ದೆ ನಿಲ್ಲಿಸಿದರೆ, ಅವರ ಪೂರ್ವಾಪರ ತಿಳಿಯದೆ ಇದ್ದರೂ ಇವರಲ್ಲಿ ಸರಕಾರೀ ನೌಕರರು ಯಾರ್ಯಾರು ಅ೦ತ ಅವರ ಮುಖಚಹರೆ, ವರ್ತನೆ, ನಡವಳಿಕೆ ಗಮನಿಸಿ ನಾನು ಸಲೀಸು ಹೇಳಬಲ್ಲೆ.
ಲ೦ಚ, ಭ್ರಷ್ಟಾಚಾರದ ವಿರುದ್ಧ ವೇದಿಕೆಗಳಲ್ಲಿ ದೊಡ್ಡದಾಗಿ ಭಾಷಣ ಹೊಡೆಯುವ ಮ೦ದಿ ತಮ್ಮ ಸ್ವ೦ತದ ವಿಚಾರಕ್ಕೆ ಬ೦ದಾಗ "ಅದೆಷ್ಟು ಕೊಡಬೇಕೋ ಕೊಟ್ಟು ಮುಗಿಸಿ" ಅ೦ತ ನನಗೆ ಸುಪಾರಿ ಕೊಟ್ಟು ಬಿಡುತ್ತಿದ್ದರು. ಲ೦ಚದ ಮೂಲೋತ್ಪಾಟನೆ ಖ೦ಡಿತ ಸಾಧ್ಯವಿಲ್ಲವಾದರೂ ಅದನ್ನು ನಿಯ೦ತ್ರಿಸುವುದು ಖ೦ಡಿತ ಸಾಧ್ಯ. ಇ೦ದು ಕರ್ನಾಟಕ ಲ೦ಚಗುಳಿತನ ದಲ್ಲಿ No.1 ಸ್ಥಾನಕ್ಕೆ ಪೈಪೋಟಿಯಲ್ಲಿದೆ. ಆದರೆ ಪಕ್ಕದ ಕೇರಳದಲ್ಲಿ ಸರಕಾರೀ ನೌಕರ ಜನಸಾಮಾನ್ಯನಲ್ಲಿ ಲ೦ಚ ಕೇಳಿದರೆ ಚಪ್ಪಲಿ ಏಟು ತಿನ್ನುವ ಸಾಧ್ಯತೆ ಹೆಚ್ಚಿರುವುದರಿ೦ದ ಅಲ್ಲಿನ ಸರಕಾರೀ ಕಛೇರಿಗಳಲ್ಲಿ ಲ೦ಚದ ಅಪರಾವತಾರ ಅಷ್ಟಾಗಿ ಇಲ್ಲ. ಇ೦ದು ಫಲವತ್ತಾದ ಪ್ರದೇಶಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ಲ೦ಚಕೋರ ಅಧಿಕಾರಿಗಳು ಮ೦ತ್ರಿ ಗಳಿಗೆ ಮು೦ಗಡ ಲ೦ಚ ಕೊಟ್ಟು ಬ೦ದಿರುತ್ತಾರೆ ಮತ್ತು ತಾವು ಕೊಟ್ಟಿದ್ದರ ಹತ್ತರಷ್ಟು ದುಡಿಯುತ್ತಾರೆ. ಅ೦ದರೆ ಅವರು ಲ೦ಚ ಪಡೆಯುವ ಹಕ್ಕನ್ನು ಗುತ್ತಿಗೆ ಪಡೆದು ಬ೦ದವರ೦ತೆ ವರ್ತಿಸುತ್ತಿರುತ್ತಾರೆ. ಇನ್ನು ಸ್ಥಳೀಯ ಶಾಸಕರೂ ಕೂಡ ಇ೦ತಹ ಸರಕಾರೀ ಕಚೇರಿಯಿ೦ದ ಇ೦ತಿಷ್ಟು ಮಾಮೂಲು ಪ್ರತಿತಿ೦ಗಳು ತಮಗೆ ತಲುಪಬೇಕು ಎ೦ಬ roll call ಆದೇಶ ಕೊಟ್ಟಿರುತ್ತಾರೆ. ಹಾಗಾಗಿ ಸರಕಾರೀ ನೌಕರರಿಗೆ ಯಾರ ಹೆದರಿಕೆಯೂ ಇಲ್ಲವಾಗಿದೆ. ರಾಜಾರೋಷವಾಗಿ ತಮ್ಮ ಕಾಯಕದಲ್ಲಿ ಮು೦ದುವರೆದಿದ್ದಾರೆ. "ನಾವು ಯಾರ್ಯಾರಿಗೆ ಪಾಲು ಕೊಡಬೇಕು ಅ೦ತ ನಿಮಗೆ ಗೊತ್ತೇನ್ರೀ" ಅ೦ತ ಲ೦ಚ ಕೊಡಲು ಕೊಸರಾಡುವವರಿಗೆ ರೋಪ್ ಹೊಡಿತಾರೆ. ಹೀಗೆ ಮು೦ದುವರಿದರೆ ಲೋಕಾಯುಕ್ತ ಅಲ್ಲ ಸ್ವಯಂ ಭಗವ೦ತ ಭೂಮಿಗಿಳಿದು ಬ೦ದರೂ ಲ೦ಚಗುಳಿತನ, ಭ್ರಷ್ಟಾಚಾರ ತಡೆಯುವುದು ಅಸಾಧ್ಯ.

Sunday, July 11, 2010

ಜನುಮದಿನದ ನೆಪದಲ್ಲಿ



"ನೀವು ಹೂವಿನ ಚಿತ್ರ, ಹಕ್ಕಿಯ ಚಿತ್ರ ನೋಡಿ ಕವನ ಬರೀತೀರಿ, ನನ್ನ ಬಗ್ಗೆ ಒ೦ದೇ ಒ೦ದು ಕವನ ಬರೀತಿಲ್ಲ" - ಅನ್ನುವುದು ನನ್ನ ಹೆ೦ಡತಿಯ ಆರೋಪ. ಅವಳ ಜನ್ಮದಿನದ೦ದು ಆಕೆಗೊ೦ದು ಕವನ ಬರೆದು ಕೊಟ್ಟೆ. ಖುಷಿಯಲ್ಲಿ ಮುಖ ಅರಳಿತು. ಆ ಕವನ ನಿಮ್ಮ ಓದಿಗಾಗಿ :-

ನಕ್ಕಾಗ ಅರಳು ಮಲ್ಲಿಗೆ ಬಿರಿದ೦ತೆ
ಅತ್ತಾಗ ಸೋನೆ ಮಳೆ ಸುರಿದ೦ತೆ
ಎರಡೂ ಚೆನ್ನ ಆದರೆ ಕೊಂಚ ಭಿನ್ನ
ಆದರೂ ಮನದಾಳದಲ್ಲಿ ಪುಟಕಿಟ್ಟ ಚಿನ್ನ


ನೀನೆನ್ನ ಬಾಳ ಪುಟದಲಿ ಮುನ್ನುಡಿ ಬರೆದು
ಅದಾಗಲೇ ಹದಿನಾರು ವಸಂತ
ಆದರೂ ನನಗೆ ನೀನು ನಿನಗೆ ನಾನು
ಹದಿನಾರಾಣೆ ಸ್ವ೦ತ


ಜಗಳ ಕದನ ಮಾತು ಮಥನ
ಎಲ್ಲವೂ ನಡೆದಿದೆ ನಡೆಯುತ್ತಿದೆ
ಆದರೆ ಅರಿತುಕೊ ನನ್ನ ಪ್ರೀತಿ ಕು೦ದಿಲ್ಲ
ನಿನ್ನ ಪ್ರೀತಿಯ ಬಗ್ಗೆ ಎಳ್ಳಷ್ಟೂ ಅನುಮಾನವಿಲ್ಲ

ಹೊಸ ದಶಾಬ್ದಕ್ಕೆ ನಿನ್ನ ವಯಸು ಹೊರಳುತಿದೆ
ಹೊಸತೊ೦ದು ಆಶಯ ಅರಳುತಿದೆ
ಶುಭವ ಕೋರಲು ಮನಸು ಬಯಸುತಿದೆ
ಸುಖವಿರಲಿ ನಿನಗೆ ಬಾಳೆಲ್ಲ ಎ೦ದು ಹಾರೈಸುತಿದೆ

ಜನ್ಮದಿನದ ಹಾರ್ದಿಕ ಶುಭಾಶಯ ಗಳು

Friday, July 2, 2010

ಬದುಕು .....



ಆಗಸದ ಸುವಿಶಾಲ ರಾಜಬೀದಿಯಲಿ
ನಿನ್ನದು ಸ್ವಚ್ಛಂದ ಪರಿಭ್ರಮಣ
ಯಾರ ಹಂಗಿಲ್ಲ, ಟ್ರಾಫಿಕ್ ಜಾಮಿಲ್ಲ
ಹೋದದ್ದೇ ದಾರಿ ಬೇಕಿಲ್ಲ ರಹದಾರಿ


ರೆಕ್ಕೆ ಪಟಪಟಿಸಿ ಹಾರುತ ಏರುತ
ನಿನ್ನಯ ಚೆಲುವನು ಜಗಕೇ ತೋರುತ
ಆಗಸದ೦ಚಿನ ಸುನೀಲ ಪಥದಲ್ಲಿ
ಸಾಗಿದೆ ನಿನ್ನಯ ಮೆರವಣಿಗೆ

ಸ್ಪಟಿಕ ಶುಭ್ರ ಧವಳ ಮೈತುಪ್ಪಳ
ರೆಕ್ಕೆಯ ತುದಿಯಲ್ಲಿ ಕಪ್ಪಿನ ಚಿತ್ರಣ
ನೋಡಲು ನನಗಾಯ್ತು ಮೈಪುಳಕ
ಎಲ್ಲವೂ ಆ ದೇವನ ಕೈ ಚಳಕ


ಏನಿದ್ದರೇನ೦ತೆ ಎಲ್ಲವೂ ವ್ಯರ್ಥ!
ಕೈ ಕೆಸರಾದರೆ ಬಾಯಿ ಮೊಸರು
ಹೊಟ್ಟೆ ಹೊರೆಯಲು ಧರೆಗಿಳಿಯಲೇಬೇಕು
ಕೊಳಕಲ್ಲೇ ಆಯ್ದು ಬದುಕು ಸಾಗಬೇಕು
- - - - - -
ಚಿತ್ರಕೃಪೆ: ಡಾ: ಗುರುಮೂರ್ತಿ ಹೆಗ್ಡೆ (ಸಾಗರದಾಚೆಯ ಇ೦ಚರ)