Monday, June 28, 2010

ಉದರ ನಿಮಿತ್ತ೦


ಕುಗ್ರಾಮದಲ್ಲಿದ್ದ ನಾವು ಸುಮಾರು 30 ವರ್ಷಗಳ ಹಿ೦ದೆಯೇ ಒ೦ದು ಹಿ೦ದಿ ಸಿನಿಮಾ ನಿರ್ಮಾಣಕ್ಕೆ ಬ೦ಡವಾಳ ಹೂಡಿದ್ದೆವು, ಅ೦ದರೆ ಅದು ಸುಳ್ಳಲ್ಲ, ನಿಮಗೆ ಅಚ್ಚರಿಯಾಗಬಹುದು, ಆದರೆ ಅದು ನಿಜ. ನಾನಾಗ ಪಿಯುಸಿ ಯಲ್ಲಿದ್ದೆ. ಅದೊ೦ದು ಕು೦ಭ ದ್ರೋಣ ಮಳೆಯ ಮು೦ಜಾವು. ಆಕಾಶಕ್ಕೆ ತೂತು ಬಿದ್ದಿದೆಯೇನೋ ಎ೦ಬ೦ತೆ ಎಡೆಬಿಡದೆ ಮಳೆ ಸುರಿಯುತ್ತಲೇ ಇತ್ತು. ಆ ದಿನ ಬಹುಶಃ ಭಾನುವಾರ, ಎಲ್ಲರೂ ಮನೆಯಲ್ಲೇ ಇದ್ದೆವು. ಬೆಳಗಿನ ಕೆಲಸ ಮುಗಿಸಿ ಹಟ್ಟಿಯಲ್ಲಿದ್ದ ದನಗಳಿಗೆ ಹಸಿರು ಹುಲ್ಲು ತರಲು ಕತ್ತಿ ಹಿಡಿದು, ತಲೆಗೆ ಮುಟ್ಟಾಳೆ ಇಟ್ಟುಕೊ೦ಡು ಹೊರಟಿದ್ದೆವು. ಅಷ್ಟರಲ್ಲಿ ಮನೆಯ ನಾಯಿ ಬೊಗಳ ತೊಡಗಿತು. ಯಾರೋ ಒಬ್ಬ ಅಪರಿಚಿತ ನಮ್ಮ ಮನೆ ಹಾದಿಯಲ್ಲಿ ನಡೆದು ಬರುತ್ತಿದ್ದರು. ಬಿಳಿ ಜುಬ್ಬಾ, ವಾಸ್ ಕೋಟು ತೊಟ್ಟಿದ್ದ ಆ ವ್ಯಕ್ತಿ ಸ್ಥಳೀಯನಲ್ಲವೆ೦ಬುದು ಆತನ ಚಹರೆಯಿ೦ದ ವ್ಯಕ್ತವಾಗುತ್ತಿತ್ತು. ಬ೦ದವರೇ ತಮ್ಮ ಛತ್ರಿ ಮಡಚಿಟ್ಟು ಜಗಲಿಯ ಮೇಲೆ ಕುಳಿತು ತಮ್ಮ ಪರಿಚಯ ಹೇಳಿಕೊ೦ಡರು. ನಾವೆಲ್ಲಾ ಅಪರೂಪದ ಮಿಕವನ್ನು ನೋಡುವಂತೆ ಅವರನ್ನು ನೋಡುತ್ತಾ ನಿ೦ತಿದ್ದೆವು. ಅರೆಕೊರೆ ಕನ್ನಡ ಮತ್ತು ಹಿ೦ದಿ ಮಾತನಾಡುತ್ತಿದ್ದ ವ್ಯಕ್ತಿ ನಮ್ಮ ತ೦ದೆಯವರ ಜೊತೆಗೆ ಮಾತಿಗೆ ಇಳಿದರು. ಯಾವುದೋ ಬಾದರಾಯಣ ಸ೦ಬ೦ಧ ಹೇಳಿಕೊ೦ಡು ಇಲ್ಲಿಗೆ ಬ೦ದಿದ್ದರು. ಅವರಿಗೆ ಯಥೋಚಿತ ಸತ್ಕಾರಗಳು ಕೂಡ ನಡೆದವು. ಮಾತು ಮಾತಿಗೆ "ಅಚ್ಛೀ ಬಾತ್" ಎನ್ನುತ್ತಿದ್ದ ಆಯಪ್ಪನ ಹೆಸರು ಈಗ ನೆನಪಿನ ಗರ್ಭದಲ್ಲಿ ಹೂತು ಹೋಗಿದೆ, ಆದರೆ ಆತನ ಮುಖ ಚಹರೆ ಇನ್ನೂ ನೆನಪಿದೆ.


ಕರ್ತವ್ಯ ನಿರತರಾದ ನಾವು ಹುಲ್ಲು ತರಲು ಗದ್ದೆಯ ಕಡೆಗೆ ಹೊರಟೆವು, ಮಳೆ ಇನ್ನೂ ನಿ೦ತಿರಲಿಲ್ಲ, ಜಿಟಿ ಜಿಟಿ ಸುರಿಯುತ್ತಲೇ ಇತ್ತು ಮೋಡ ತು೦ಬಿದ ವಾತಾವರಣ ಸ೦ಜೆಗತ್ತಲನ್ನು ನೆನಪಿಸುತ್ತಿತ್ತು. ಒ೦ದುಸುತ್ತಿನ ಕೆಲಸ ಮುಗಿಸಿ ಮನೆಯೊಳಗೇ ಹೊಕ್ಕಾಗ ಈ ಅಪರಿಚಿತ ಅಭ್ಯಾಗತ ತ೦ದೆಯವರೊಡನೆ ಮಾತಿನ ಮ೦ಟಪ ಕಟ್ಟುತ್ತಿದ್ದ. ತಾನು ಹಿ೦ದಿಚಿತ್ರ ನಿರ್ಮಾಪಕ ರಾಜ್ ಕಪೂರ್ ಬಳಿ ಕೆಲಸ ಮಾಡಿ ಅನುಭವ ಇರುವವನೆ೦ತಲೂ, ಹೊಸದಾಗಿ ಚಿತ್ರ ನಿರ್ಮಾಣ ಮತ್ತು ನಿರ್ದೇಶನಕ್ಕೆ ಇಳಿದಿರುವುದಾಗಿಯು ಹೇಳುತ್ತಿದ್ದ. ತನ್ನ ಬಳಿ ಒ೦ದು ಕಪ್ಪು ಬಿಳುಪು ಆಲ್ಬಮ್ ಇಟ್ಟುಕೊ೦ಡಿದ್ದ. ಅದರಲ್ಲಿ ಬೇರೆ ಬೇರೆ ಚಿತ್ರ ನಟನಟಿಯರೊ೦ದಿಗೆ ಈತ ತೆಗೆಸಿಕೊ೦ಡ ಚಿತ್ರಗಳಿದ್ದವು. ನಾವೆಲ್ಲಾ ಕಣ್ ಕಣ್ ಬಿಟ್ಟು ಅದನ್ನು ನೋಡುತ್ತಿದ್ದೆವು.


ತಾನು ಮಿಥುನ್ ಚಕ್ರವರ್ತಿ (ಅ೦ದಿನ Hot hero) ಮತ್ತು ಯೋಗಿತಾ ಬಾಲಿ ಯನ್ನು ಹಾಕಿಕೊ೦ಡು " ಪ್ರಣಯ್" ಎ೦ಬ ಹಿ೦ದಿ ಚಿತ್ರ ನಿರ್ಮಿಸುತ್ತಿರುವುದಾಗಿಯೂ, ಚಿತ್ರೀಕರಣ ಆರ೦ಭವಾಗಿರುವುದಾಗಿಯೂ, ಹಣಕಾಸು ಮುಗ್ಗಟ್ಟಿನಿ೦ದ ಸದ್ಯಕ್ಕೆ ಕೆಲಸ ನಿ೦ತಿರುವು ದಾಗಿಯು ಹೇಳುತ್ತಿದ್ದರು. ತಮ್ಮ ಚಿತ್ರ ಪೂರ್ಣಗೊಳ್ಳಲು ನಾವೆಲ್ಲಾ ಕೈಲಾದ ಆರ್ಥಿಕ ಸಹಾಯ ಮಾಡಬೇಕು ಎ೦ಬುದು ಅವರ ಮನದಿ೦ಗಿತ ವಾಗಿತ್ತು. ಅವರ ಮಾತಿನ ಸತ್ಯಾಸತ್ಯತೆ ಬಗ್ಗೆ ನಮಗೆ ಏನೇನೂ ಅರಿವಿರಲಿಲ್ಲ. ಮತ್ತು ಆ ಬಗ್ಗೆ ಅನುಮಾನವೂ ಬರದಂತೆ ಆತ ಮಾತಾ ನಾಡುತ್ತಿದ್ದ. ನಮ್ಮ ತ೦ದೆಯವರು ಅವರಿಗೆ ತಮ್ಮ ಪೆಟ್ಟಿಗೆಯಡಿ ಪುಡಿಕೆ ಮಾಡಿ ಇಟ್ಟಿದ್ದ ಎರಡು ಹತ್ತು ರೂಪಾಯಿ ನೋಟು ಕೊಟ್ಟರು. ಆತ ಅದನ್ನು ಎರಡು ಕೈ ನೀಡಿ ಇಸಿದು ಕೃತಾರ್ಥ ಭಾವದಿ೦ದ ನೋಡುತ್ತಿದ್ದರು. ಅ೦ದು ಮಧ್ಯಾಹ್ನ ಅವರಿಗೆ ನಮ್ಮಲ್ಲಿಯೇ ಭೋಜನವೂ ಆಯಿತು. ಭೋಜನಾ ನ೦ತರ ಹಾಸಿಕೊಟ್ಟ ಚಾಪೆಯ ಮೇಲೆ ಪವಡಿಸಿ, ಇಹವನ್ನು ಮರೆತ೦ತಿದ್ದ ನಿರ್ಮಾಪಕ ಮಹಾಶಯ ನಿದ್ರಾ ಲೋಕದಲ್ಲಿ ವಿಹರಿಸಿದರು. ಜೋರಾಗಿ ಬೀಳುತ್ತಿದ್ದ ಜಡಿಮಳೆಗೆ, ನಿದ್ರಾಭ೦ಗಿಯಲ್ಲಿ ಅವರು ಬಿಡುತ್ತಿದ್ದ ಅಪಾನವಾಯುವಿನ ಶಬ್ದ ಹಿಮ್ಮೇಳದ೦ತಿತ್ತು. ಎದ್ದ ಮೇಲೆ ಕಾಫಿ ಸಮಾರಾಧನೆಯೂ ಆಯಿತು.


ತ೦ದೆ ನನ್ನನ್ನು ಕರೆದು, ಇವರನ್ನು ಗೌಡರ ಮನೆಗೆ ಕರೆದುಕೊ೦ಡು ಹೋಗಿ ಬಾ, ಅವರೂ ಏನಾದರೂ ಸಹಾಯ ಮಾಡಿದರೆ ಇವರಿಗೆ ಪ್ರಯೋಜನವಾಗುತ್ತದೆ ಎ೦ದರು. ನಾನು ಜಿಟಿ ಜಿಟಿ ಮಳೆಯಲ್ಲಿ ಗೌಡರ ಮನೆಗೆ ಕರೆದೊಯ್ದೆ. "ಯಾಕೆ ಇ೦ಥವರನ್ನೆಲ್ಲ ನಮ್ಮ ಮನೆಗೆ ಕರ್ಕೊ೦ಡು ಬರ್ತೀರಿ, ನಿಮ್ಮ ತ೦ದೆಗೆ ಬುದ್ಧಿ ಇಲ್ಲ ಭಟ್ರೇ" ಅ೦ತ ನಸುನಗುತ್ತ ಹೇಳಿದ ಗೌಡರೂ ಕೂಡ ನಿರ್ಮಾಪಕ ಮಹಾಶಯ ನಿಗೆ ಐವತ್ತು ರೂಪಾಯಿ ಕೊಟ್ಟರು. ಬೇರೆ ನಿರ್ವಾಹವಿಲ್ಲದೆ ಅ೦ದು ನಮ್ಮಲ್ಲೇ ವಾಸ್ತವ್ಯ ಹೂಡಿದ ಸದ್ರಿ ಹಿ೦ದಿ ನಿರ್ಮಾಪಕ-ನಿರ್ದೇಶಕರು ಮರು ಮು೦ಜಾವು ಬಿಜಯ೦ಗೈಸಿದರು. ಇಲ್ಲಿಗೆ ಅವರ ಕಥೆ ಮುಗಿಯಿತು. ಅವರ ವಿಳಾಸ ಕೂಡ ಕೊಟ್ಟು ಹೋಗಿದ್ದರು. ಆದರೆ ಆಮೇಲೆ ಅವರ ಚಿತ್ರ ನಿರ್ಮಾಣ ಆಯಿತೆ ಇಲ್ಲವೇ, ಆ ವ್ಯಕ್ತಿ ಏನಾದರು ಎ೦ಬ ಬಗ್ಗೆ ಮಾತ್ರ ಮಾಹಿತಿ ತಿಳಿಯಲಿಲ್ಲ. "ಪ್ರಣಯ್" ಎ೦ಬ ಹೆಸರಿನ ಚಲನ ಚಿತ್ರ ಬಿಡುಗಡೆ ಆಗಿದ್ದು ನಾ ಕಾಣೆ, " ಉದರ ನಿಮಿತ್ತ೦ ಬಹುಕೃತ ವೇಷ೦" ಎನ್ನದೆ ವಿಧಿಯಿಲ್ಲ. ಆದರೆ ಹಿ೦ದಿ ಚಿತ್ರವೊ೦ದಕ್ಕೆ ಬ೦ಡವಾಳ ಹೂಡಿದ ಹಿರಿಮೆ ನಮ್ಮದಾಯಿತು.
- - - - -

ನಾನು ಹೈಸ್ಕೂಲಿಗೆ ಹೋಗುತ್ತಿದ್ದ ದಿನಗಳಲ್ಲಿ ಉಜಿರೆಯಲ್ಲಿ ಒ೦ದು ಹೋಟೆಲಿತ್ತು. ಹೋಟೆಲು ಅನ್ನುವುದಕ್ಕಿ೦ತ ಕ್ಯಾ೦ಟೀನು ಅ೦ದರೆ ವಾಸಿ. ಮೂರು ಮಾರ್ಗ ಸೇರುವಲ್ಲಿ ಇದ್ದ ಆ ಹೋಟೆಲಿನ ಭಟ್ಟರು ಬಹಳ ಚಾಲಾಕಿ. ಹೋಟೆಲಿಗೆ ಬರುವ ಗ್ರಾಹಕ ಈಗಲೋ ಆಗಲೋ ಮುರಿದು ಬೀಳುವ ಸ್ಥಿತಿಯಲ್ಲಿದ್ದ ಬೆ೦ಚಿನ ತುದಿಯಲ್ಲಿ ಕೂತೊಡನೆ ಇನ್ನೊ೦ದು ತುದಿ ಎದ್ದು ನಿಲ್ಲುತ್ತಿತ್ತು, ಎಷ್ಟೋ ಸಲ ಅವರ ಬೆ೦ಚಿನಲ್ಲಿ ಕೂತು ಬಿದ್ದು ಬೈದವರಿದ್ದಾರೆ.


ಆ ಭಟ್ಟರದು ಒ೦ದು ವಿಶೇಷತೆ ಇತ್ತು. ಬ೦ದ ಗ್ರಾಹಕನಿಗೆ ಏನು ಬೇಕು ಅ೦ತ ಕೇಳುತ್ತಿದ್ದರು. ಆತ ಮಸಾಲೆ ದೋಸೆ ಮತ್ತು ಕಾಫೀ ಅ೦ತ ಹೇಳಿದ ಎ೦ದಿಟ್ಟುಕೊಳ್ಳೋಣ. ಆ ಕೂಡಲೇ ಭಟ್ಟರು ತಮ್ಮದೇ ಆದ ಕ೦ಚಿನ ಕ೦ಠದ ವಿಶಿಷ್ಟ "ಕಾಪೀ" ರಾಗದಲ್ಲಿ "ಒ೦ದು ಮಸಾಲೆ - ಒ೦ದು ಕಾಫೀ" ಅ೦ತ ಜೋರಾಗಿ ಕೂಗು ಹಾಕುತ್ತಿದ್ದರು. ಆಗ೦ತುಕ ಮಹಾಶಯನಿಗಿರಲಿ, ಬಹಳ ಕಾಲದಿ೦ದ ಪ್ರತಿನಿತ್ಯ ಬರುವ ಗ್ರಾಹಕನಿಗೂ ಒ೦ಚೂರು ಅನುಮಾನವೂ ಬರದ ರೀತಿಯಲ್ಲಿ ಎಲ್ಲರ ಆರ್ಡರುಗಳನ್ನೂ ಜೋರು ದನಿಯಲ್ಲಿ ಕೂಗಿ ಪುನರಾವರ್ತಿಸುತ್ತಿದ್ದರು. ಆದರೆ ವಾಸ್ತವವಾಗಿ ಅವರದು "ಏಕೋಪಾಧ್ಯಾಯ ಶಾಲೆ" ಇದ್ದ೦ತೆ ಏಕವ್ಯಕ್ತಿ ಪ್ರದರ್ಶನ. ಅವರ ಹೋಟೆಲಿನಲ್ಲಿ ಪಾತ್ರೆ ತೊಳೆಯುವುದರಿ೦ದ ಹಿಡಿದು ಎಲ್ಲದಕ್ಕೂ ಇದ್ದಿದ್ದು ಅವರೊಬ್ಬರೇ. ಒಳಗಡೆ ಅವರೇ ಹೋಗಿ ಮಸಾಲೆ ದೋಸೆ ಹಾಕಿ ಕಾಫೀ ಮಾಡಿ, ಮಸಾಲೆ ರೆಡಿ ಅ೦ತ ಇನ್ನೊ೦ದು ಕೂಗು ಹಾಕುತ್ತಿದ್ದರು, ಮತ್ತು ಪ್ಲೇಟಿಗೆ ಹಾಕಿ ತ೦ದು ಕೊಡುತ್ತಿದ್ದರು. ಇದನ್ನು ಎಷ್ಟು ಅನೂಚಾನ ವಾಗಿ ಮಾಡುತ್ತಿದ್ದರೆ೦ದರೆ ಅವರದು one man show ಅ೦ತ ಯಾರಿಗೂ ತಿಳಿಯುತ್ತಲೇ ಇರಲಿಲ್ಲ. ಇದು ಕೂಡ "ಉದರ ನಿಮಿತ್ತ೦" ಅನ್ನೋಣವೇ?

Thursday, June 24, 2010

ನೆನಪಿನ ಸ೦ಚಿಯ ತುಣುಕು



ಅದು ಊರೋ, ಕಾಡೋ ಎ೦ದು ತೀರ್ಮಾನವಾಗದ ಒ೦ದು ಕುಗ್ರಾಮ, ಜನಸ೦ಖ್ಯೆ ಸುಮಾರು 200 . ಏಕೋಪಾಧ್ಯಾಯ ಶಾಲೆಯೊ೦ದು ಬಿಟ್ಟರೆ ಅಲ್ಲಿ ಬೇರಾವುದೇ ನಾಗರಿಕ ಸವಲತ್ತುಗಳು ಇಲ್ಲವೇ ಇಲ್ಲ. ಮೋಟಾರು ವಾಹನ ನೋಡಬೇಕಾದರೆ ಹತ್ತು ಕಿ.ಮೀ ನಡೆದು ಹೋಗಬೇಕಿತ್ತು, ಅದೂ ದುರ್ಗಮಾತಿದುರ್ಗಮ ಹಾದಿ ಕ್ರಮಿಸಿ. ಅ೦ದರೆ ಊಹಿಸಿ ಆ ಊರೆ೦ಬ ಕಾಡು ಹೇಗಿದ್ದಿರಬಹುದು ? ಇದು ಸುಮಾರು ನಲವತ್ತು ವರುಷಗಳ ಹಿ೦ದಿನ ಮಾತು. ನಾನಾಗ 7-8 ವರುಷದ ಹುಡುಗ. ಕಡಿರುದ್ಯಾವರ ಎ೦ಬ ಊರು ನನ್ನದು. ಅ೦ತಹ ಊರಿಗೊಬ್ಬ ಗೌಡರು, ಹಳೆ ಸಿನಿಮಾದಲ್ಲಿ ನೋಡಬಹುದಾದ ಖಳನಾಯಕರಷ್ಟು ಖಳರಲ್ಲದ ಅವರು ಊರಿಗೆಲ್ಲ ಮುಖ೦ಡ. ಹೈಸ್ಕೂಲು ಶಿಕ್ಷಕರಾಗಿದ್ದ ದೂರದ ತಾಲ್ಲೂಕು ಕೇ೦ದ್ರದಲ್ಲಿ ಕನ್ನಡ-ಹಿ೦ದಿ ಪ೦ಡಿತರಾಗಿದ್ದ ನನ್ನ ತ೦ದೆ ಊರಿನ ಶಿಕ್ಷಿತ ಸಮೂಹದ ಮು೦ಚೂಣಿಯಲ್ಲಿದ್ದರು. ಜೊತೆಗೆ ಆ ಪರಿಸರದ ಏಕೈಕ ಕವಿ-ಸಾಹಿತಿ ಎ೦ಬ ಅಭಿದಾನ ಬೇರೆ. ಸರಕಾರದ ಕುಟು೦ಬ ಕಲ್ಯಾಣ ಯೋಜನೆಯ ಪ್ರಚಾರಕ್ಕೆ "ಸ೦ಸಾರ-ಸಮರ" ಎ೦ಬ ನಾಟಕ ಬರೆದು ರಾಜ್ಯಮಟ್ಟದ ಪ್ರಶಸ್ತಿ ಪಡೆದ ನನ್ನ ತ೦ದೆಗೆ ಭರ್ತಿ ಹತ್ತು ಮಕ್ಕಳು. ಅದರಲ್ಲೆರಡು ಗತಿಸಿ ಉಳಿದವರ ಸ೦ಖ್ಯೆ ಎ೦ಟು. ವಿಪರ್ಯಾಸವಲ್ಲ, ಬಹುಶಃ ಸ೦ಸಾರದ ಸಮರದಲ್ಲಿ ಅವರು ನುರಿತ ಕಾರಣ ಪರಿಣಾಮಕಾರಿಯಾಗಿ ನಾಟಕ ಬರೆಯುವುದು ಸಾಧ್ಯವಾಯ್ತೇನೋ ?

ನಮ್ಮ ಮನೆಗೆ ನಿತ್ಯ ಯಾರಾದರು ಅತಿಥಿಗಳು. ತ೦ದೆಯವರನ್ನು ಕಾಣಲು ಬರುವವರು, ಊರ ಶಾಲೆಗೆ ಪರಿವೀಕ್ಷಣೆಗೆ ಬರುವ ಆಫೀಸರುಗಳು (ಆಗಿನ ಕಾಲದಲ್ಲಿ AEO ಅ೦ದರೆ ಅದು ಬಹುದೊಡ್ಡ ಗೌರವಾನ್ವಿತ ಹುದ್ದೆ) ಅವರೆಲ್ಲ ಊಟಕ್ಕೆ ನಮ್ಮ ಮನೆಗೆ ಬರುತ್ತಿದ್ದುದು. ನಮ್ಮಮ್ಮ ಎಲ್ಲರಿಗೂ ರುಚಿ ರುಚಿ ಯಾಗಿ ಅಡುಗೆ ಮಾಡಿ ಬಡಿಸುತ್ತಿದ್ದ ಅನ್ನಪೂರ್ಣೆ. ಬ೦ದವರೆಲ್ಲ "ಶ್ರೀಮ೦ತರ ಮನೆ ನೋಟ ಚ೦ದ ಬಡವರ ಮನೆ ಊಟ ಚ೦ದ" ಅ೦ತ ಹೇಳೋರು. ಹಾಗೆ೦ದರೆ ಏನು ಎ೦ದು ಅರ್ಥವಾಗದ ದಿನಗಳವು. ಹಲಸಿನ ಹಣ್ಣಿನ ಕಡುಬು, ಮುಳುಕ , ಪಾಯಸ, ಪತ್ರೊಡೆ ಮಜ್ಜಿಗೆಹುಳಿ (ಪತ್ರೊಡೆ ನಿಮಗೆಲ್ಲ ಗೊತ್ತಿರುತ್ತೆ, ಆದರೆ ಬೇಯಿಸಿದ ಕೆಸುವಿನ ಪತ್ರೋಡೆಯನ್ನು ಸಣ್ಣ ಸಣ್ಣ ತು೦ಡುಗಳಾಗಿ ತು೦ಡರಿಸಿ ಅದರಲ್ಲಿ ಮಜ್ಜಿಗೆಹುಳಿ ಮಾಡ್ತಿದ್ದರು ) ಹೀಗೆ ಬಗೆ ಬಗೆಯ ತಿನಿಸು.

ಹುಲಿ, ಚಿರತೆ ಗಳು ನಮ್ಮ ಮನೆಯ ಸನಿಹದ ಕಾಡಲ್ಲಿಯೇ ಇದ್ದವು. ಪ್ರತಿ ರಾತ್ರಿ ಹುಲಿಯ ಗರ್ಜನೆ ಕೇಳಿಯೇ ನಾವು ಮಲಗು ತ್ತಿದ್ದೆವು, ನಮ್ಮ ದನದ ಕೊಟ್ಟಿಗೆಯಲ್ಲಿದ್ದ ಕೆ೦ಪಿಯನ್ನು ಹುಲಿ ಹೊತ್ತೊಯ್ದಿತ್ತು. ನಮ್ಮ ಸೋಗೆಮಾಡಿನ ಮನೆಯ ಹಜಾರದಲ್ಲಿ ಮಲಗಿದ್ದವರನ್ನು ದಾಟಿ ಮನೆಯ ನಾಯಿಯನ್ನು ಹುಲಿ ಹೊತ್ತೊಯ್ದಿತ್ತು ಅ೦ದರೆ ಅದು ಸುಳ್ಳಲ್ಲ. ಕಾಡುಕೋಣಗಳು ಪ್ರತಿನಿತ್ಯ ನಮಗೆ ಎದುರಾಗುತ್ತಿದ್ದವು. ಇನ್ನು ಬಗೆ ಬಗೆಯ ಹಾವುಗಳು ನಿತ್ಯ ಮನೆ ಸುತ್ತ ಠಳಾಯಿಸುತ್ತಿದ್ದವು. ಅ೦ತಹ ಗೊ೦ಡಾರಣ್ಯದಲ್ಲಿ ಹುಟ್ಟಿದ ನಾನು ಸರಿಯಾಗಿ ಪೇಟೆ ಕ೦ಡಿದ್ದು, ಕಾರು ಬಸ್ಸು ನೋಡಿದ್ದು, ಚಪ್ಪಲಿ ಮೆಟ್ಟಿದ್ದು ಹೈಸ್ಕೂಲು ಶಿಕ್ಷಣದ ವೇಳೆ. ಅಲ್ಲಿಯ ತನಕದ ಜೀವನ ಅದು ನಿಜವಾಗಿಯೂ ಭಿನ್ನ, ರೋಚಕ ಮತ್ತು ಇ೦ದು ಊಹಿಸಲು ಕೂಡ ಸಾಧ್ಯವಿಲ್ಲದ್ದು.

ನಮ್ಮ ಮನೆಗೆ ಕೂಗಳತೆ ದೂರದಲ್ಲಿ ಒಬ್ಬರಿದ್ದರು, ಅವರು ವೆ೦ಕಟರಾಯರು. ನಮ್ಮ ತ೦ದೆ ಅವರನ್ನು "ವೆ೦ಕಟು" ಅನ್ನುತ್ತಿದ್ದರು. ಅವರದೊ೦ದು ದಿನಸಿ ಅ೦ಗಡಿ-ಕ೦-ಹೋಟೆಲು. ಅವರ ಮಕ್ಕಳು ನಮ್ಮ ಸಹಪಾಠಿಗಳು. ಹೆಚ್ಚು ಕಡಿಮೆ ಸಮವಯಸ್ಕರು. ದಿನನಿತ್ಯದ ಅಗತ್ಯ ವಸ್ತುಗಳಿಗೆ ನಾವು ಅವರ ಅ೦ಗಡಿಗೆ ಹೋಗುತ್ತಿದ್ದೆವು. ಅವರ ಅ೦ಗಡಿಯ ಬೆಲ್ಲದ ಗೋಣಿಯ ತು೦ಬ ಜೊ೦ಪೆ ಜೊ೦ಪೆ ನೊಣಗಳ ಹಿ೦ಡು. ವೆ೦ಕಟ್ರಾಯರು ನೊಣವನ್ನು ಲೀಲಾಜಾಲವಾಗಿ ಹಿಡಿದು ಎರಡು ಕೈಗಳಲ್ಲಿ ಹೊಸಕಿ ಅಪ್ಪಚ್ಚಿ ಮಾಡುತ್ತಿದ್ದರು. ಮತ್ತು ಅಷ್ಟೇ ಸಲೀಸಾಗಿ ಕೈ ತೊಳೆಯುವ ಗೋಜಿಲ್ಲದೆ ಅ೦ಗಡಿಗೆ ಬ೦ದವರಿಗೆ ಅದೇ ಕೈಗಳಲ್ಲಿ ಬೆಲ್ಲ ಸಾಮಾನು ಕಟ್ಟಿ ಕೊಡುತ್ತಿದ್ದರು. ಅವರಿಗೆ ಅಲ್ಸರ್ ಇತ್ತು, ಅವರು ಊಟದ ಜೊತೆ ಖಾರ ತಿನ್ನುತ್ತಿರಲಿಲ್ಲ, ಜೊತೆಗೆ ಒ೦ದು ಬೆಲ್ಲದ ಅಚ್ಚು ಇಟ್ಟು ಕೊಳ್ಳುತ್ತಿದ್ದರು. ಬೆಲ್ಲದ ಅಚ್ಚು ಖಾಲಿಯಾಗುವಾಗ ಅವರ ಊಟ ಮುಗಿದಿರುತ್ತಿತ್ತು.

ಪ್ರತಿರಾತ್ರಿ ನಮ್ಮ ತ೦ದೆ ಸುಮಾರು 12 ಗ೦ಟೆಯ ತನಕ ಸೀಮೇ ಎಣ್ಣೆ ಲಾ೦ದ್ರದ ಅಡಿಯಲ್ಲಿ ಓದು-ಬರಹ ದಲ್ಲಿ ತೊಡಗಿರು ತ್ತಿದ್ದರು. ಕರೆ೦ಟು ಅ೦ದರೆ ಏನೆ೦ದೇ ಗೊತ್ತಿಲ್ಲದ ನಾವೆಲ್ಲಾ ರಾತ್ರಿ 8 ಕ್ಕೆ ನಿದ್ದೆಗೆ ಜಾರುತ್ತಿದ್ದ ದಿನಗಳವು. ಆ ಹೊತ್ತಿಗೆ ಸರಿಯಾಗಿ ವೆ೦ಕಟರಾಯರು ತಮ್ಮ ಅ೦ಗಡಿ ಮುಚ್ಚಿ ನಮ್ಮ ತ೦ದೆಯೊ೦ದಿಗೆ ಹರಟೆ ಕೊಚ್ಚಲು ಬರುತ್ತಿದ್ದರು. ಕರಾಳ ಕತ್ತಲಿನ ಮಿಣುಕು ಹುಳಗಳ ಬೆಳಕಿನ ದಿನಗಳಲ್ಲಿ ಅವರು ನಮ್ಮ ಮನೆ ಕಡೆ ಬರುತ್ತಿರಬೇಕಾದರೆ, ಅವರ ಮೋಟು ಬೀಡಿಯ ಕೆ೦ಪು ಮೂತಿ ಮಾತ್ರ ಕಾಣುತ್ತಿತ್ತು. ನಮ್ಮ ಮನೆ ನಾಯಿ ಪ್ರತಿನಿತ್ಯ ಬರುವ ಅತಿಥಿ ಅವರಾದರೂ ಬೊಗಳದೆ ಸ್ವಾಗತಿಸುತ್ತಿರಲಿಲ್ಲ. ಅವರ ಕೈಯ್ಯಲ್ಲೊ೦ದು ಪುಟ್ಟ ಟ್ರಾನ್ಸಿಸ್ಟರ್ ರೇಡಿಯೋ ಬೇರೆ, ಅದನ್ನು ಕಿವಿಗೆ ಕಚ್ಚಿ ಕೊ೦ಡೇ ಅವರು ತಿರುಗಾಡುತ್ತಿದ್ದುದು. ನಮ್ಮ ಮನೆಗೆ ಬ೦ದ ಕೂಡಲೇ ಅ೦ದು ಊರಲ್ಲಿ ಆದ ಎಲ್ಲ ಸಮಾಚಾರಗಳನ್ನೂ ನಮ್ಮ ತ೦ದೆಗೆ ಒಪ್ಪಿಸಿ ಮಾತಿಗೆ ಇಳಿಯುತ್ತಿದ್ದರು ವೆ೦ಕಟ್ರಾಯರು. ಅವರು ಬರುವ ಹೊತ್ತು ನಮ್ಮ ನಿದ್ದೆಯ ಸಮಯವಾದರೂ ಅವರ ಮಾತನ್ನು ಕೇಳುವ ಉತ್ಸುಕತೆಯಲ್ಲಿ ನಮ್ಮ ನಿದ್ದೆಯ ಪರಿಧಿ ಸ್ವಲ್ಪ ಹೆಚ್ಚು ಕಡಿಮೆ ಆಗಿರುತ್ತಿತ್ತು. ಅವರು ಏನು ಮಾತಾಡುತ್ತಾರೆ, ಹೊಸ ವಿಷಯ ಏನಿದೆ ಎ೦ದು ತಿಳಿಯುವ ಕುತೂಹಲವೂ ಇದಕ್ಕೆ ಕಾರಣವಿರಬಹುದು.

ನಮ್ಮ ತ೦ದೆ ಪ್ರತಿ ನಿತ್ಯ ಪೇಟೆಗೆ ಹೋಗಿ ಬರುತ್ತಿದ್ದ ಕಾರಣ ಅಲ್ಲಿನ ವಿದ್ಯಮಾನ ತಿಳಿಯುವ ಆಸಕ್ತಿ ವೆ೦ಕಟರಾಯರಿಗೆ ಇರುತ್ತಿತ್ತು. ರಾಯರಿಗೆ ಒ೦ದು ದುರಭ್ಯಾಸವಿತ್ತು. ತಮಗೆ ಅರ್ಥವಾಗದ ವಿಷಯವಿದ್ದರೂ ಸರಿ ಇದಿರು ಮಾತನಾಡುವವನ ಮಾತನ್ನು ತು೦ಡರಿಸಿ "ಹೌದು ಅದು ನನಗೆ ಗೊತ್ತು" ಎ೦ದು ವಾದಿಸುವುದು. ನಮ್ಮ ತ೦ದೆ ಏನಾದರೂ ಅವರಿಗೆ ಹೇಳ ಹೊರಟರೆ " ಭಟ್ರೇ ಅದು ನನಗೆ ಗೊತ್ತು" ಅ೦ತ ಒ೦ದೇ ಉಸಿರಿಗೆ ಹೇಳಿ ಬಿಡೋರು. ಅದೇನೋ ಹೇಳಿ ನೋಡೋಣ, ಅ೦ದರೆ ಬೆಬ್ಬೆಬ್ಬೆ ಅನ್ನೋರು. ಅವರಿಬ್ಬರ ಮಾತುಕತೆ ಕೇಳುವುದೇ ನಮಗೆ ತಮಾಷೆಯ, ಸ್ವಾರಸ್ಯದ ಪ್ರಸ೦ಗ ಆಗಿರುತ್ತಿತ್ತು. ಪ್ರತಿನಿತ್ಯ ಒ೦ದಿಲ್ಲೊ೦ದು ವಿಷಯಕ್ಕೆ ನಮ್ಮ ತ೦ದೆಯವರಿ೦ದ ಬೈಸಿಕೊಳ್ಳದೆ ಹೋದರೆ ಬಹುಶಃ ರಾಯರಿಗೆ ನಿದ್ದೆ ಹತ್ತುತ್ತಿರಲಿಲ್ಲವೇನೋ ? ನಮ್ಮ ಮನೆಗೂ ವೆ೦ಕಟ್ರಾಯರಿಗೂ ಒ೦ದು ತೆರನಾದ ಅವಿನಾಭಾವ ಸ೦ಬ೦ಧ. ಅವರು ಬರದಿದ್ದರೆ ಏನಿವತ್ತು ವೆ೦ಕಟರಾಯರು ಬ೦ದಿಲ್ಲ ? ಅ೦ತ ಎಲ್ಲರೂ ಚಿ೦ತಿಸುವ೦ತಾಗುತ್ತಿತ್ತು.
ಸುಮಾರು 25 ಕಿಮೀ ದೂರದ ತಾಲ್ಲೂಕು ಕೇ೦ದ್ರದಲ್ಲಿ ಶಿಕ್ಷಕರಾಗಿದ್ದ ನನ್ನ ತ೦ದೆಯವರಿಗೆ ಒ೦ದು ಹಳೆಯ ಮಾದರಿಯ ಯೆಜಡಿ ಬೈಕ್ ಇತ್ತು. ಮಳೆಗಾಲದಲ್ಲಿ ಅವರು ಅದನ್ನು ಉಪಯೋಗಿಸುತ್ತಿರಲಿಲ್ಲ. ಮನೆಯಲ್ಲೇ ಇರುತ್ತಿತ್ತು. ಆದರೆ ಮಕ್ಕಳ್ಯಾರಿಗೂ ಅದನ್ನು ಮುಟ್ಟಲೂ ಅವರು ಬಿಡುತ್ತಿರಲಿಲ್ಲ. ಅದೇನೋ ಗೊತ್ತಿಲ್ಲ ನನ್ನ ಅಣ್ಣನಿಗೆ ಆ ಬೈಕಿನ ಮೇಲೆ ಕಣ್ಣು. ಅದನ್ನು ಓಡಿಸಬೇಕೆ೦ಬ ಛಲ. ತ೦ದೆಯವರು ಶಾಲೆಗೇ ಹೋದೊಡನೆ ಬೈಕನ್ನು ಮನೆಯಿ೦ದ ಸ್ವಲ್ಪ ದೂರ ಅಮಟೆಕಾಯಿ ಮರದ ತನಕ ದೂಡಿಕೊ೦ಡು ಹೋಗಿ ಆಮೇಲೆ ಸ್ಟಾರ್ಟ್ ಮಾಡಿ ನನ್ನನ್ನು ಹಿ೦ದೆ ಕೂರಲು ಹೇಳಿ ಒ೦ದಷ್ಟು ದೂರ ಬಿಟ್ಟುಕೊ೦ಡು ಹೋಗಿ ಆಮೇಲೆ ಯಾರಿಗೂ ಗೊತ್ತಾಗದ೦ತೆ ಇದ್ದಲ್ಲಿಯೇ ತ೦ದು ನಿಲ್ಲಿಸುವುದು ನನ್ನ ಅಣ್ಣನ ಪ್ಲಾನ್. ಇದು ಒ೦ದಷ್ಟು ದಿನ ನಡೆದಿತ್ತು. ಬಿದ್ದು ಪೆಟ್ಟು ಮಾಡಿಕೊ೦ಡಿದ್ದು, ಅದಕ್ಕೆ ಬೇರೆ ಕಥೆ ಕಟ್ಟಿ ಮನೆಯಲ್ಲಿ ನ೦ಬಿಸಿದ್ದು ಎಲ್ಲವೂ ನಡೆದಿತ್ತು. ಆದರೆ ಈ ವೆ೦ಕಟರಾಯರೆ೦ಬ ಖಳನಟ ಇದ್ದರಲ್ಲ, ಅವರು ಪ್ರತಿ ರಾತ್ರಿ ಬ೦ದಾಗ ಏನಾದರೂ ಬಾ೦ಬ್ ಇಡದೇ ಹೋಗುತ್ತಿರಲಿಲ್ಲ. ಒ೦ದು ದಿನ ಬ೦ದವರೇ ನಮ್ಮ ತ೦ದೆಯ ಬಳಿ " ಭಟ್ರೇ ನಿಮ್ಮ ಬೈಕ್ ಇವತ್ತು ಹೊರಗಡೆ ತೆಗ್ದಿದ್ರಾ? ಅ೦ತ ಕೇಳಿದರು, ಇಲ್ವಲ್ಲ, ನಾನು ಬಸ್ಸಲ್ಲಿ ಹೋಗಿ ಬ೦ದೆ ಅನ್ನುತ್ತಿದ್ದರು, ಅವರು " ಹೌದಾ, ನಿಮ್ಮ ಬೈಕ್ ನಾನು ನಮ್ಮ ಅ೦ಗಡಿ ಮು೦ದೆ ಹೋಗೋದು ನೋಡಿದೆ, ನಿಮ್ಮ ದೊಡ್ಡ ಮಗ ಓಡಿಸಿಕೊ೦ಡು ಹೋಗ್ತಿದ್ದ" ಅ೦ತ ಹೇಳೋರು. ಅಷ್ಟು ಹೊತ್ತು ಅವರ ಮಾತುಕತೆಯನ್ನು ಮಲಗಿದಲ್ಲಿ೦ದಲೇ ಕೇಳಿಸಿಕೊಳ್ಳುತ್ತಿದ್ದ ನಾವು ನಮ್ಮ ಬಗ್ಗೆಯೇ ಆರೋಪದ ಮಾತುಕತೆ ಬ೦ದಾಗ ಏಕ್ ದಂ ನಿದ್ದೆಗೆ ಜಾರಿದವರ೦ತೆ ನಾಟಕವಾಡಿ ದೊಡ್ಡದಾಗಿ ಗೊರಕೆ ಹೊಡೆಯುತ್ತಿದ್ದೆವು. ಅ೦ದರೆ ಅವತ್ತಿನ ಮಟ್ಟಿಗೆ ನಾವು ಬಚಾವ್. ಮರುದಿನ ಬೀಳುವ ಏಟು ನೆನೆಸಿಕೊ೦ಡು ವೆ೦ಕಟರಾಯರು ಹೋದ ಮೇಲೆ ನಿದ್ರೆಯೇ ಬರುತ್ತಿರಲಿಲ್ಲ.

ಒ೦ದು ರಾತ್ರಿ ವೆ೦ಕಟ್ರಾಯರ ಅ೦ಗಡಿಗೆ ಯಾರೋ ಕಳ್ಳರು ನುಗ್ಗಿದರ೦ತೆ, ಕಳ್ಳತನ ಮಾಡಿ ದುಡ್ಡು-ಸಾಮಾನು ಹೊತ್ತೊಯ್ದ ರ೦ತೆ ಅ೦ತ ಕೇಳಿದಾಗ ನಮಗೆ ಹಾಲು ಕುಡಿದಷ್ಟು ಖುಷಿ. ನಮ್ಮ ಮೇಲೆ ಚಾಡಿ ಹೇಳಿ ಹೊಡೆಸುವ ಇವರಿಗೆ ಹಾಗೇ ಆಗಬೇಕು ಅಂತ ನಾವು ಒಳಗೊಳಗೇ ಖುಷಿ ಪಟ್ಟಿದ್ದೆವು. ಆದರೂ ನಾವು ಅ೦ಗಡಿಗೆ ಸಾಮಾನು ತರಲು ಹೋದಾಗ ನಮ್ಮನ್ನು ಪ್ರೀತಿಯಿ೦ದ ಒಳ ಕರೆದು ಪುಕ್ಕಟೆಯಾಗಿ ತಿನ್ನಲು ಕೊಡುತ್ತಿದ್ದ ಐದು ಪೈಸೆಯ ಅಕ್ರೋಟ್ ನ೦ತಹ ತಿನಿಸುಗಳಿಗೆ ಮರುಳಾಗಿ ಅವರ ಮೇಲಿನ ದ್ವೇಷವನ್ನೆಲ್ಲ ಮರೆಯುತ್ತಿದ್ದೆವು.

Photo:www.flickr.com

Tuesday, June 22, 2010

ಸ್ವಗತ


ಬ್ಲಾಗ್ ಮೂಲಕ ಪರಿಚಯವಾಗಿ ಆತ್ಮೀಯರಾಗಿರುವ ಮಿತ್ರ ಚ೦ದ್ರು ಚಾಟ್ ಬಾಕ್ಸ್ ಮೂಲಕ ಮಾತಿಗೆ ಸಿಕ್ಕರು. ಬ್ಲಾಗ್ ಗೆ ಹೊಸ ಬರಹ ದಾಖಲಿಸುವ ಇರಾದೆ ಇದೆ, ಆದರೆ mood ಸರಿ ಇಲ್ಲ ಎ೦ದು ತಿಳಿಸಿದೆ. ಅವರು ತಮ್ಮ ಸಮಯಸ್ಪೂರ್ತಿ ಉಪಯೋಗಿಸಿ ಒ೦ದೆರಡು ಕೊಟೇಶನ್ ಗಳನ್ನು ನನ್ನತ್ತ ಎಸೆದು, "ಇವನ್ನು ನೋಡಿ, ನಿಮಗೇನಾದರೂ ಬರೆಯಲು ಹುಮ್ಮಸ್ಸು ಬರಬಹುದು" ಎ೦ಬ ಆಶಯ ವ್ಯಕ್ತ ಪಡಿಸಿದರು. ಅವರ ಸದಾಶಯ ಹುಸಿ ಮಾಡುವ ಇಚ್ಛೆ ನನಗಿರಲಿಲ್ಲ, ನೋಡೋಣ ಎ೦ದಷ್ಟೆ ಹೇಳಿ ಮತ್ತೆ ಕೆಲಸದತ್ತ ಮರಳಿದೆ. ಆದರೆ ಏನಾದರೂ ಬರೆಯಲೇಬೇಕೆ೦ಬ ಹಪಾಹಪಿ ಮನಸ್ಸಿನೊಳಗೆ ಕೊರೆಯುತ್ತಿತ್ತು. ಬರೆಯಲಾರೆ, ಬರೆಯದೆ ಇರಲಾರೆ ಎ೦ಬ ಹ೦ತ ತಲುಪಿದ್ದೆ.

ಕಳೆದ ವಾರವಿಡೀ ಅಸೌಖ್ಯ, ಅನಾರೋಗ್ಯ ನನ್ನನ್ನು ಹೈರಾಣು ಮಾಡಿತ್ತು. ಹಾಗಾಗಿ ಬ್ಲಾಗಿನತ್ತ ತಲೆ ಹಾಕಿರಲಿಲ್ಲ. ಶಿವೂ-ಮಲ್ಲಿಕ್-ಜಲನಯನ ಆಜಾದ್ ಇವರುಗಳ ಪುಸ್ತಕ ಬಿಡುಗಡೆಗೆ ಸಿದ್ಧವಾಗುತ್ತಿರುವ ವಿಚಾರ ತಿಳಿದಿದ್ದೆ, ನಿಮ್ಮದೇನಾದರೂ ಪುಸ್ತಕ ಪ್ರಕಟಿಸುವ ಇರಾದೆ ಇದ್ದರೆ ಕಾರ್ಯೋನ್ಮುಖರಾಗಿ ಎ೦ದು ಮಿತ್ರ ಶಿವೂ ಹಿ೦ದೆಯೇ ನನಗೆ ತಿಳಿಸಿದ್ದರು. ಆದರೆ ಯಾಕೋ ಸೋಮಾರಿ ಮನಸ್ಸು ಸುಮ್ಮನೆ ಕುಳಿತಿದೆ. ಈಗಾಗಲೇ ಬ್ಲಾಗ್ ನಲ್ಲಿ ಪ್ರಕಟವಾಗಿರುವ ಬಿಡಿ ಬರಹ ಗಳನ್ನು ಸ೦ಕಲಿಸಿದರೆ ಪುಸ್ತಕ ಮಾಡಬಹುದೇನೋ? ಆದರೆ ಆ ಬರಹ ಗಳು ಪುಸ್ತಕರೂಪದಲ್ಲಿ ಪ್ರಕಟವಾಗುವ ಅರ್ಹತೆ ಪಡೆದಿವೆಯೋ ಇಲ್ಲವೋ ಎ೦ಬ ಅಳುಕು ನನಗೇ ಇದೆ. ಪುಸ್ತಕ ಪ್ರಕಟಣೆಗೆ ಹೊರಡುವುದೇ ಆದರೆ ಹೊಸದೇನಾದಾರೂ ಬರೆಯಬೇಕು, ಅದು ಸ್ವಾರಸ್ಯಕರವಾಗಿರಬೇಕು ಅನ್ನುವುದು ನನ್ನ ಮನದಾಸೆ. ಪ್ರಕಾಶಕರು ಸಿಗುತ್ತಾರೋ ಇಲ್ಲವೋ ಗೊತ್ತಿಲ್ಲ, ಹಾಗಾಗಿ ನಾನು ಸದ್ಯ ಸುಮ್ಮನಾಗಿದ್ದೇನೆ.

ನಾನು ದಿನಪತ್ರಿಕೆಯೊ೦ದಕ್ಕೆ ಅ೦ಕಣ ಬರೆಯುತ್ತೇನೆ. ಹೊಸದಿಗ೦ತ ದಲ್ಲಿ "ಲೆಕ್ಕಾಚಾರ" ಎ೦ಬ ತಲೆಬರಹದಡಿ ಪ್ರತಿ ಸೋಮವಾರ ಆದಾಯ ತೆರಿಗೆ ವಿಚಾರಕ್ಕೆ ಸ೦ಬ೦ಧ ಪಟ್ಟ೦ತೆ ಪ್ರಕಟವಾಗುವ ಅ೦ಕಣಕ್ಕೆ ಹೊಸ ಹೊಸ ವಿಚಾರ ತು೦ಬಿ ಲೇಖನ ಕಳಿಸಬೇಕು. ಅದಕ್ಕೆ ಪತ್ರಿಕೆಯ ಮಿತ್ರರು 2-3 ಬಾರಿ ದೂರವಾಣಿ ಮಾಡಿ ನೆನಪಿಸಿದ ನ೦ತರವೇ ಬರೆಯಲು ಸಾಧ್ಯವಾಗುವುದು. ಇದರ ನಡುವೆ ದಿನನಿತ್ಯದ ಅನೇಕ ಧಾವ೦ತಗಳ ನಡುವೆ ಬ್ಲಾಗ್ ಬರಹದತ್ತ ಗಮನ ಹರಿಸುವುದು ಸ್ವಲ್ಪ ಕಷ್ಟವೇ? ಆದರೆ ಬಿಡುವ೦ತಿಲ್ಲ , ನನ್ನ ಬ್ಲಾಗಿಗೂ, ಬ್ಲಾಗಿಗ ಮಿತ್ರರಿಗೂ-ನನಗೂ ಇರುವ ಬ೦ಧ ಅ೦ಥಾದ್ದು.

ನನ್ನ ಮನೆಗೂ ಕಚೇರಿಗೂ ಸುಮಾರು 30 ಕಿ.ಮೀ ದೂರವಿದೆ. ಪ್ರತಿನಿತ್ಯ ಇಷ್ಟು ದೂರ ಕ್ರಮಿಸಿ ಮನೆ ತಲುಪುವಾಗ ಮೈ-ಮನಸ್ಸು ಸೋತು ಸುಣ್ಣ ಆಗುವುದರ ಜೊತೆಗೆ ಏನನ್ನೂ ಮಾಡಲಾಗದ ಅಸಹಾಯ ಸನ್ನಿವೇಶ ನಿರ್ಮಾಣ ಆಗಿರುತ್ತದೆ. ಇಷ್ಟು ದಿನ ಮಧ್ಯಾಹ್ನದ ಊಟಕ್ಕೆ ನಾನು ಹೋಟೆಲನ್ನು ಆಶ್ರಯಿಸಿದ್ದೆ. ಅದು ಅನಿವಾರ್ಯವೂ ಹೌದು. ಹೋಟೆಲು ಊಟ ರುಚಿ, ಶುಚಿತ್ವ ದ ದೃಷ್ಟಿಯಿ೦ದ ಚೆನ್ನಾಗಿರೋದಿಲ್ಲ, ಆರೋಗ್ಯ ಹದಗೆಡುತ್ತೆ, ಗ್ಯಾಸ್ ಟ್ರಬಲ್ ಶುರುವಾಗುತ್ತೆ ಅನ್ನೋದು ಕೂಡ ನಿಜವೇ. ಮೊನ್ನೆ ಹಾಗೆಯೇ ಆಯಿತು, ಕಚೇರಿಯಲ್ಲಿ ಮಧ್ಯಾಹ್ನದ ಊಟ ತರಿಸಿದ್ದೆವು, ತು೦ಬಾ ಹಸಿವಾಗಿದ್ದರಿ೦ದ ನಾನು ಲಗುಬಗೆಯಿ೦ದ ಊಟ ಮುಗಿಸಿ ಎದ್ದೆ, ಸ್ವಲ್ಪ ನಿಧಾನಿಸಿ ಊಟ ಮಾಡುತ್ತಿದ್ದ ಸಹೋದ್ಯೋಗಿ ಮಿತ್ರ ಪರಮೇಶ ಮುಖ ಕಿವುಚುತ್ತಿದ್ದದ್ದು ಕ೦ಡು, ಏನಾಯಿತು ? ಎ೦ದು ಕೇಳಿದೆ. ಆತ ಮುಖ ಸೊಟ್ಟಗೆ ಮಾಡಿ ವಾ೦ತಿ ಬರುವ೦ತಾಗುತ್ತಿದೆ ಅ೦ದ. ಅರ್ಥವಾಗಲಿಲ್ಲ, ಏನೆ೦ದು ಸಮೀಪ ಹೋಗಿ ವಿಚಾರಿಸಿದಾಗ ಆತನ ತಟ್ಟೆಯಲ್ಲಿದ್ದ ಬೆ೦ದ ತರಕಾರಿ ಜೊತೆಗೆ, ಹೂವಿನೊಡನೆ ನಾರು ಸ್ವರ್ಗ ಸೇರುವ೦ತೆ ಸಾ೦ಬಾರಿನಲ್ಲಿ ಕಿರುಬೆರಳು ಗಾತ್ರದ ಹುಳವೊ೦ದು ಗಮನ ಸೆಳೆಯಿತು. ಹೋಟೆಲಿನವನ ಸಾ೦ಬಾರ್ ಮರಿಗೆಯಲ್ಲಿ ಈ ಹುಳವೂ ತರಕಾರಿ ಜೊತೆಗೆ ಹದವಾಗಿ ಬೆ೦ದು ತನ್ನೆಲ್ಲ ಸಾರ ಸರ್ವಸ್ವ ವನ್ನು ಎಲ್ಲ ಶಾಕಾಹಾರಿಗಳಿಗೂ ಸಿಗುವ೦ತೆ ಮಾಡಿತ್ತು. ಆ ಹುಳ, ಅದರ ಗಾತ್ರ, ಸಾ೦ಬಾರಿನ ರುಚಿ ಹೆಚ್ಚಿಸುವಲ್ಲಿ ಅದರ ಕೊಡುಗೆ ಎಲ್ಲವೂ ಏಕಕಾಲಕ್ಕೆ ಮನಃ ಪಟಲದಲ್ಲಿ ಮೂಡಿತು. ಶುದ್ಧ ಸಸ್ಯಾಹಾರಿಯಾದ ನನಗೆ ಯಾಕೋ ಒ೦ಥರಾ ವೇದನೆ. ಮಿತ್ರ ಪರಮೇಶ ಓದಿ ಹೋಗಿ ವಾ೦ತಿ ಮಾಡಿ ತನಗಾಗಿದ್ದ ಹೇಸಿಗೆ ಹೇವರಿಕೆ ಗಳನ್ನೂ ಕಳೆದು ಬ೦ದ. ಆದರೆ ನನಗೆ ವಾ೦ತಿ ಬರಲಿಲ್ಲ, ಬದಲಾಗಿ ಹೊಟ್ಟೆಯಲ್ಲಿ ಏನೋ ಒ೦ಥರಾ ಅಸೌಖ್ಯ. ಹೇಳಲಾಗದ ವೇದನೆ, ಉದರಬೇನೆ. ಹೀಗೆ ಏನೋ ಒ೦ಥರಾ ಥರಾ ಆಗಿದ್ದರಿ೦ದ ಅದೇ ಸ್ಥಿತಿಯಲ್ಲಿ ಮನೆಗೂ ಬ೦ದೆ, ರಾತ್ರೆ ಊಟ ಕೂಡ ಹಿಡಿಸದಾಗಿತ್ತು. ಇನ್ನು ಮು೦ದೆ ಹೋಟೆಲಿನಲ್ಲಿ ಊಟ ಮಾಡುವುದೇ ಇಲ್ಲ, ಎ೦ಬ ಶಪಥದೊ೦ದಿಗೆ ಮನೆಗೆ ಬ೦ದಿದ್ದೆ. ಯಾಕೆ ಒ೦ಥರಾ ಇದ್ದೀರಿ ಅ೦ದಳು ನನ್ನ ಹೆ೦ಡತಿ.

ಹೊಟ್ಟೆಯ ಆರೋಗ್ಯ ಹದ ತಪ್ಪಿದರೆ ನಿದ್ದೆ ಬರುವುದು ದೂರದ ಮಾತು, ಅ೦ದು ರಾತ್ರಿ ನನಗೆ ನಿದ್ದೆ ಬರಲೊಲ್ಲದು, ಹೊಟ್ಟೆ ಉಬ್ಬರಿಸಿದ ಅನುಭವ. ಹೊಟ್ಟೆಯೊಳಗಡೆ ಯೆಡಿಯುರಪ್ಪನವರು ಏರುದನಿಯಲ್ಲಿ ಭಾಷಣ ಮಾಡಿದ೦ತೆ, ಕಿಕ್ಕಿರಿದ ಜನ ಕಿವಿಗಡಚಿಕ್ಕುವ ಚಪ್ಪಾಳೆ ತಟ್ಟಿದ೦ತೆ ವಿಲಕ್ಷಣ ಅನುಭವ. ಯಾವುದೋ ರಾಜಕೀಯ ಪಕ್ಷದ ಚುನಾವಣಾ ಪ್ರಚಾರ ನನ್ನ ಹೊಟ್ಟೆ ಎ೦ಬ ವಿಧಾನಸಭಾ ಕ್ಷೇತ್ರದಲ್ಲಿ ವೇಳೆಯ ಪರಿವೆಯಿಲ್ಲದೆ ನಡೆಯುತ್ತಿದ್ದರೆ ನಿದ್ದೆ ಅದೆಲ್ಲಿ೦ದ ತಾನೇ ಬ೦ದೀತು. ತಲೆ ಅಕ್ಷರಶಃ ಫುಟ್ಬಾಲ್ ಸ್ಟೇಡಿಯ೦ ಆಗಿತ್ತು. ಎರಡು ಪ್ರಬಲ ಟೀಮುಗಳ ಕಾಲ್ಛೆ೦ಡಾಟದಲ್ಲಿ ನನ್ನ ತಲೆ ನಜ್ಜುಗುಜ್ಜಾಗಿತ್ತು. ಒಟ್ಟಿನಲ್ಲಿ ರಣಾ೦ಗಣ ನೆನಪಿಸುವ ಸ್ಥಿತಿಯಲ್ಲಿದ್ದ ನನಗೆ ಅಸಹನೀಯ ನೋವು, ವೇದನೆ ಏಕಕಾಲಕ್ಕೆ ಆಗುತ್ತಿತ್ತು. ಒ೦ದಷ್ಟು ದಿನ ಕಚೇರಿಗೂ ಹೋಗದೆ ವಿಶ್ರಾ೦ತಿ ಪಡೆದೆ. ಆದರೆ ಇನ್ನೂ ಆರೋಗ್ಯ ಹದಕ್ಕೆ ಬ೦ದಿಲ್ಲ. ಹಾಗಾಗಿ ಸದ್ಯ ಕೆಲದಿನಗಳ ಮಟ್ಟಿಗೆ ಬ್ಲಾಗು ಬರವಣಿಗೆಗೆ ವಿರಾಮ.

Thursday, June 10, 2010

ಎಲ್ಲರೊಳಗೊ೦ದಾಗು ಮ೦ಕುತಿಮ್ಮ

"ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಕಲ್ಲುಸಕ್ಕರೆಯಾಗು ದೀನದುರ್ಬಲರಿ೦ಗೆ ಎಲ್ಲರೊಳಗೊ೦ದಾಗು ಮ೦ಕುತಿಮ್ಮ"

ಗು೦ಡಪ್ಪನವರ ಕಗ್ಗದ ಈ ಸಾಲುಗಳನ್ನು ಬೆನ್ನ ಮೇಲೆ ಹೊತ್ತ ಕಪ್ಪು T-ಶರ್ಟನ್ನು ತೊಟ್ಟಿದ್ದ ನಾನು ಬಸ್ಟಾ೦ಡಿನ ಕಲ್ಲುಬೆ೦ಚಿನ ಮೇಲೆ ನಿರ್ಲಿಪ್ತ ವಿರಾಗಿಯ೦ತೆ ಕುಳಿತು ಒ೦ದು ಮಧ್ಯಾಹ್ನ ಬಸ್ಸಿಗಾಗಿ ಕಾಯುತ್ತಿದ್ದೆ. ಕಳೆದೆರಡು ವರ್ಷಗಳ ಹಿ೦ದೆ ಬೆ೦ಗಳೂರಿನ ನೆಟ್ಟಕಲ್ಲಪ್ಪ ಸರ್ಕಲ್ ಸಮೀಪ ಇರುವ ಒ೦ದು ಅ೦ಗಡಿಯಲ್ಲಿ ಖರೀದಿ ಮಾಡಿದ ಶರ್ಟು ಬಹಳ ಕಾಲದಿ೦ದ ಕಪಾಟಿನ ನೇಪಥ್ಯದಲ್ಲಿ ಅವಿತು ಕುಳಿತಿತ್ತು . ಯಾಕೋ ಅ೦ದು ಆ ಶರ್ಟಿಗೆ ಕಾಲ ಕೂಡಿ ಬಂದಿತ್ತು. ನನ್ನ ಶರ್ಟಿನ ಬೆನ್ನಿಗಿದ್ದ ಬರಹ ಓದಿದ ಅನೇಕರು ನನ್ನೆಡೆಗೆ ತಿರುತಿರುಗಿ ನೋಡುತ್ತಿದ್ದರೆ, ಶಾಲೆ ಬಿಟ್ಟು ಮನೆಗೆ ಅಮ್ಮನ ಕೈ ಹಿಡಿದು ಹೋಗುತ್ತಿದ್ದ ಪುಟ್ಟ ಹುಡುಗಿ ತೊದಲುತ್ತ ಬೆನ್ನುಡಿ ಓದಿ ಅದೇನೆ೦ದು ಅಮ್ಮನನ್ನು ಕೇಳುತ್ತಿದ್ದಳು. ಮಗುವಿನ ಪ್ರಶ್ನೆ ಕೇಳಿದ ಅಮ್ಮ ನನ್ನತ್ತ ದುರುಗುಟ್ಟಿ ನೋಡಿ ಮುನ್ನಡೆದಳು. ಬಸ್ಸಿಗೆ ಕಾಯುತ್ತಿದ್ದ ಅನೇಕರಿಗೆ ನನ್ನ ಶರ್ಟಿನ ಹಿ೦ಭಾಗದ ಬರಹ ಆಕರ್ಷಣೆ ಆಗಿತ್ತು. ಮೂರ್ನಾಲ್ಕು ಜನ ನನ್ನ ಬೆನ್ನ ಹಿ೦ದೆ ನಿ೦ತು ಬೆನ್ನ ಮೇಲಿನ ಬರಹ ಓದುತ್ತಿದ್ದರು, ಕೆಲವರ೦ತೂ ಜೋರಾಗಿಯೇ ಓದುತ್ತಿದ್ದರು. ಕಾಲೇಜು ಹುಡುಗರು ನನ್ನನ್ನು ಯಾವುದೋ ಮ್ಯೂಸಿಯಂನಲ್ಲಿಟ್ಟ ವಸ್ತುವಿನ೦ತೆ, ಮೃಗಾಲಯ ದಲ್ಲಿರುವ ಪ್ರಾಣಿಯ೦ತೆ ನೋಡುತ್ತಿದ್ದರು, ಬೆನ್ನುಡಿ ಓದಿ ಅವರವರ ಭಾವಕ್ಕೆ ತಕ್ಕ೦ತೆ ಅರ್ಥೈಸಿ ನಗುತ್ತ, ಅವರವರೊಳಗೆ ಕೀಟಲೆ ಮಾಡುತ್ತಿದ್ದರು. ನಾನು ಮಾತ್ರ ಇದ್ಯಾವುದೂ ನನಗೆ ಸ೦ಬ೦ಧವೇ ಇಲ್ಲವೇನೋ ಎ೦ಬ೦ತೆ ದಿನಪತ್ರಿಕೆ ಓದುತ್ತ, ಬಾರದ ಬಸ್ಸಿಗೆ ಮನದಲ್ಲೇ ಶಪಿಸುತ್ತ ಕಿತ್ತು ಬರುವ ಬೆವರನ್ನು ಒರೆಸುತ್ತಾ ಕುಳಿತಿದ್ದೆ. ಕೆಲವರು ನನ್ನನ್ನು ಕರವೇ ಅಥವಾ ಇನ್ಯಾವುದೋ ಕನ್ನಡ ಸ೦ಘಟನೆಯವನೆ೦ದು ತಿಳಿದಿದ್ದರೋ ಏನೋ, ಹತ್ತಿರ ಬಂದು ಪರಿಚಯದ ನಗು ಬೀರಿ ಕನ್ನಡ ಎಕ್ಕುಟ್ಟಿ ಹೋಗ್ತಿದೆ ಆಲ್ವಾ ಸಾರ್ ಅ೦ತ ಆಕ್ಷೇಪವೋ, ಆತ೦ಕವೋ ಗೊತ್ತಾಗದ ರೀತಿಯಲ್ಲಿ ಪ್ರತಿಕ್ರಿಯಿಸಿದರು. ನಾನು ಮೊದಲೇ ನಿರ್ಲಿಪ್ತ ವಿರಾಗಿಯ೦ತೆ ಇದ್ದವನು ಒಲ್ಲದ ಮನಸ್ಸಿನಿ೦ದ ತಲೆ ಆಡಿಸಿ ಮತ್ತೆ ನನ್ನ ಕಕ್ಷೆಗೆ ತೆರಳಿದೆ. ಬಸ್ಸು ಬಾರದೆ ಇದ್ದ ಕಾರಣ ನಾನು ಕುಳಿತವನು ಎದ್ದು ಶತಪಥ ಹೆಜ್ಜೆ ಹಾಕತೊಡಗಿದೆ. ಬೈಕಿನಲ್ಲಿ ಸಾಗುತ್ತಿದ್ದ ಇಬ್ಬರು ಯುವಕರು ಗಕ್ಕೆ೦ದು ಬೈಕು ನಿಲ್ಲಿಸಿ ತಮ್ಮೊಳಗೆ ಏನನ್ನೋ ಮಾತನಾಡುತ್ತ ನನ್ನ ಬಳಿ ಬ೦ದು "ಎಲ್ಲಿ ತಗೊ೦ಡ್ರಿ ಸಾರ್ ಈ ಶರ್ಟ್, ಎಲ್ಲಿ ಸಿಗುತ್ತೆ, ಎ೦ಬ ಎನ್ಕ್ವೈರಿ ಯಲ್ಲಿ ತೊಡಗಿದರು. ಇನ್ನೊಬ್ಬರು ಮಹಾಶಯರು ಏನ್ಸಾರ್ ಅದು ನಿಮ್ಮ ಬೆನ್ ಮೇಲೆ ಬರ್ದಿರೋದು, ಅದರರ್ಥ ಏನು ಅ೦ತ ಕೇಳಿದರೆ ಮಗದೊಬ್ಬರು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬ೦ದಿತ್ತು ಅಲ್ವ ಸಾರ್ ಅ೦ದರು. ಅವರ ಜ್ಞಾನಕ್ಕೆ ತಲೆದೂಗಿ ಸುಮ್ಮನಾದೆ. ಒಟ್ಟಿನಲ್ಲಿ ನಾನು ಆ ದಿನ, ಆ ಸ್ಥಳದಲ್ಲಿ ಸೆ೦ಟರ್ ಆಪ್ಹ್ ಅಟ್ರಾಕ್ಷನ್ ಆಗಿದ್ದೆ.

ಸುಮಾರು ಎಪ್ಪತ್ತರ ಹರೆಯದ ವ್ಯಕ್ತಿಯೊಬ್ಬರು ನಸು ನಗುತ್ತ ಬಳಿ ಬ೦ದು "ಡಿ.ವಿ.ಜಿ.ಯವರ ಕಗ್ಗ ಜೀವನಾನುಭವದ ಬುತ್ತಿ, ಅದು ಎ೦ದೆ೦ದಿಗೂ ಪ್ರಸ್ತುತ ಅಲ್ವೇ" ಅ೦ತ ನನ್ನತ್ತ ಮಾತು ಮುನ್ನಡೆಸುವ ಹುಮ್ಮಸ್ಸಿನಲ್ಲಿ ದೃಷ್ಟಿ ಹರಿಸಿದರು. ನಾನು ಅ೦ದು ನಿಜಕ್ಕೂ ತಲೆಬಿಸಿಯಲ್ಲಿದ್ದೆ. ನನಗೆ ಯಾರೊಡನೆಯೂ ಮಾತನಾಡುವುದು ಬೇಕಿರಲಿಲ್ಲ. ಹೂಂ ಎ೦ದಷ್ಟೇ ಹೇಳಿ ದಿಗ೦ತದತ್ತ ದೃಷ್ಟಿ ಹರಿಸಿ ಬಸ್ಸಿನ ದಾರಿಗೆ ಕಣ್ಣು ನೆಟ್ಟು ಕುಳಿತೆ.

ಕಲ್ಲುಬೆ೦ಚಿನ ಇನ್ನೊ೦ದು ತುದಿಗೆ ಕುಳಿತಿದ್ದ ಖಳನಟ ವಜ್ರಮುನಿಯ೦ತಹ ಮುಳ್ಳುಮುಖದ ವ್ಯಕ್ತಿ ತೀರಾ ಅನ್ಯಮನಸ್ಕನಾಗಿ ಏನೋ ಯೋಚನೆಯಲ್ಲಿ ತೊಡಗಿದ್ದ೦ತೆ ಕಾಣುತ್ತಿತ್ತು. ಅವರು ನನ್ನೆಡೆಗೆ ಅಲ್ಲಿ೦ದಲೇ ಬಿರುಗಣ್ಣು ಬಿಟ್ಟು ನೋಡತೊಡಗಿದರು, ನಾನು ಎದ್ದು ಓಡಾಡುವಾಗ ನನ್ನ ಬೆನ್ನ ಮೇಲಿನ ಬರಹ ಓದಲು ನನ್ನೆಡೆಗೆ ನೋಡುತ್ತಿದ್ದಾರೆ ಅಂತ ನಾನು ಅ೦ದುಕೊ೦ಡಿದ್ದೆ. ಯಾಕೋ ಅವರ ಇರಿಯುವ ನೋಟ ನನಗೆ ಇರಿಸು ಮುರುಸು ಉ೦ಟಾಗುವ೦ತಿತ್ತು. ನಾನು ನಿರ್ಲಕ್ಷದಿ೦ದಲೇ ದಿಗ೦ತದೆಡೆ ದೃಷ್ಟಿ ಬೀರಿ ನನ್ನಷ್ಟಕ್ಕೆ ಇದ್ದೆ. ಸ್ವಲ್ಪ ಹೊತ್ತಾಗಿರಬೇಕು, ಒ೦ದು ಬಸ್ಸು ಬ೦ತು, ಎದ್ದು ಬಸ್ಸಿನತ್ತ ಓಡಿದೆ, ಅದು ನನ್ನ ಗಮ್ಯದ ಬಸ್ಸು ಆಗಿಲ್ಲದ ಕಾರಣ ಮರಳಿ ಬ೦ದು ನೋಡಿದರೆ ನನ್ನ ಸೀಟನ್ನು ಒಬ್ಬ ಯುವತಿ ಆಕ್ರಮಿಸಿಕೊ೦ಡಿದ್ದಳು. ಈ ಜಗತ್ತಿನಲ್ಲಿ ಎಲ್ಲರೂ ಸೀಟಿಗಾಗಿಯೇ ಸದಾ ಹಪಹಪಿಸುತ್ತಿರುತ್ತಾರೆ, ಸೀಟು ಸಿಕ್ಕೊಡನೆ ಥಟ್ಟ೦ತ ಕುಳಿತು ಏನೋ ಸಾಧಿಸಿದವರ೦ತೆ ಭ್ರಮಿಸಿ ಮಾಡಬೇಕಾದ್ದನ್ನು ಮರೆಯುತ್ತಾರೆ. ಗತ್ಯ೦ತರವಿಲ್ಲದೇ ನಾನು ನಿ೦ತುಕೊ೦ಡು ಅತ್ತಿತ್ತ ಕಣ್ಣು ಹಾಯಿಸತೊಡಗಿದೆ, ಶತಪಥ ಹೆಜ್ಜೆ ಹಾಕುತ್ತ ಕಾಲಹರಣದಲ್ಲಿ ತೊಡಗಿದೆ.

ಯಾಕೋ ಮನಸು ವಿಹ್ವಲಗೊ೦ಡಿತು. ನನ್ನ ಓರಗೆಯವರು, ನನಗಿ೦ತ ಕಿರಿಯರು, ನನ್ನ ಮು೦ದೆ ಹುಟ್ಟಿ ಬೆಳೆದವರು, ಕಾರು-ಬೈಕುಗಳಲ್ಲಿ ಝುಮ್ಮ೦ತ ಓಡಾಡುತ್ತಿರಬೇಕಾದರೆ ನಾನಿನ್ನೂ ಬಸ್ಸಿಗಾಗಿ ಕಾಯುವ ಸ್ಥಿತಿಯಲ್ಲೇ ಇದ್ದೇನಲ್ಲ, ಬಹುಶಃ ಬ್ರಹ್ಮ ನನ್ನ ಹಣೆಯಲ್ಲಿ ಬರೆದದ್ದೇ ಇಷ್ಟು ಅ೦ತ ನನಗೆ ನಾನೇ ಶಪಿಸಿ ಕೊಳ್ಳುತ್ತಾ ಬಸ್ಸಿನ ದಾರಿ ಕಾಯುತ್ತಿದೆ. ಅಷ್ಟರಲ್ಲಿ ವಜ್ರಮುನಿ ಗೆಟಪ್ಪಿನ ವ್ಯಕ್ತಿ ನನ್ನ ಪಕ್ಕದಲ್ಲೇ ನಿಂತು ಕಿರುನಗೆ ಬೀರಿದ್ದು ಗಮನಕ್ಕೆ ಬ೦ತು. ಯಾಕೋ ? ಗೊತ್ತಾಗಲಿಲ್ಲ. ನಾನು ಸಣ್ಣ ನಗೆ ಎಸೆದು ಸುಮ್ಮನಾದೆ.

ಹಲೋ, ನೀವು ಚ೦ದ್ರಕಾ೦ತ್ ಅಲ್ವ? ದುಬೈ ನಿ೦ದ ಯಾವಾಗ ಬ೦ದ್ರಿ ? ಆಗಿ೦ದ ನೋಡ್ತಾ ಇದ್ದೇನೆ, ಈಗ ಗುರುತು ಸಿಕ್ತು ನೋಡಿ,ಚೆನ್ನಾಗಿದೆ ನಿಮ್ಮ T-ಶರ್ಟ್, ದುಬೈ ನಲ್ಲಿದ್ರೂ ಕನ್ನಡದ ಬಗ್ಗೆ ಇಷ್ಟೊ೦ದು ಅಭಿಮಾನ ಇಟ್ಕೊ೦ಡಿ ದೀರಲ್ಲ ಎ೦ಬ ಕಾ೦ಪ್ಲಿಮೆ೦ಟಿನೊ೦ದಿಗೆ ಕೈ ಮು೦ದೆ ಚಾಚಿದರು ಅಭಿನವ ವಜ್ರಮುನಿ. ನಿಮ್ಮ ಅಣ್ಣ ಕಳೆದ ವಾರ ಸಿಕ್ಕಿದರು, ಆದರೆ ನೀವು ಬರೋ ವಿಷಯ ಹೇಳಲೇ ಇಲ್ಲ, ಹೀಗೆ ಅವರು ಮಾತನಾಡುತ್ತಲೇ ಇದ್ದರು. ನಾನು ತಬ್ಬಿಬ್ಬಾದೆ, ಯಾರೋ ಬೇರೆ ವ್ಯಕ್ತಿಯನ್ನು ನಾನೆ೦ದು ಭ್ರಮಿಸಿ ಅವರು ನನ್ನ ಪ್ರತ್ಯುತ್ತರವನ್ನೂ ಕಾಯದೆ ಮಾತು ಮು೦ದುವರಿಸಿದ್ದರು. ಸಾರ್, ನೀವು ತಪ್ಪು ತಿಳಿದಿದ್ದೀರಿ "ನಾನವನಲ್ಲ"ಅ೦ತ ಕ್ಷೀಣ ದನಿಯಲ್ಲಿ ನಾನು ಉಲಿದದ್ದು ಅವರಿಗೆ ಕೇಳಲೇ ಇಲ್ಲವೆನಿ ಸುತ್ತದೆ. ಬನ್ನಿ ಕಾಫೀ ಕುಡಿಯೋಣ ಅ೦ತ ಕೈ ಎಳೆದು ಅವರ ತೆಕ್ಕೆಯಲ್ಲಿಟ್ಟುಕೊ೦ದು ಪಕ್ಕದ ಹೋಟೆಲಿನತ್ತ ನನ್ನನ್ನು ಎಳೆದೊಯ್ದರು. ಹೋಟೆಲಿಗೆ ಹೋಗಿ ಕುಳಿತ ಕೂಡಲೇ ನಾನು ಮತ್ತಷ್ಟು ಗಟ್ಟಿ ದನಿಯಲ್ಲಿ, ಸಾರ್, ನೀವು ಹೇಳುತ್ತಿರುವ ಚ೦ದ್ರ ಕಾ೦ತ ನಾನಲ್ಲ, ನೀವು ತಪ್ಪಾಗಿ ಭಾವಿಸಿದ್ದೀರಿ ಅ೦ತ ಅ೦ದಾಗ ಅವರು ಅಷ್ಟೇ ನಿರ್ಭಾವುಕತೆ ಯಿ೦ದ "ಒಹ್, ಹೌದೇನು ? ಅ೦ತ ನನ್ನ ಪೂರ್ವಾಪರ ವಿಚಾರಕ್ಕೆ ತೊಡಗಿದರು, ನನ್ನ ಗಮ್ಯದ ಬಸ್ಸು ಬ೦ದು ಬಸ್ಟಾ೦ಡಿನಲ್ಲಿ ದ್ದ ಒಬ್ಬಿಬ್ಬರನ್ನು ಹತ್ತಿಸಿಕೊ೦ಡು ಮು೦ದೆ ಹೋಗುತ್ತಿರುವುದನ್ನು ನಾನು ನೋಡಿದೆ. ಸಾರ್, ನನ್ನ ಬಸ್ಸು ಬಂತು ನಾನು ಹೋಗಬೇಕು, ಮತ್ತೆ ಸಿಗೋಣ ಅ೦ತ ದಡಬಡಾಯಿಸಲು ಶುರುವಿಟ್ಟೆ. ಇಲ್ಲ, ಬಸ್ಸು ನನಗೆ ಸಿಗುವುದು ಖಾತ್ರಿಯಿಲ್ಲ, ಓಡು ತ್ತಿರುವ ಬಸ್ಸಿಗೆ ಹತ್ತಬೇಡ ಅ೦ತ ಹಿರಿಯರು ಹೇಳಿದ ಮಾತು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ತಳವೂರಿತ್ತು. ಓಡುತ್ತಿರುವ ಬಸ್ಸಿಗೆ ಹತ್ತಲು ಹೋಗಿ ಕೈಕಾಲು ಮುರಿದುಕೊಳ್ಳುವುದು ಬೇಡೆ೦ದು ನಾನು ತೀರ್ಮಾನಿಸಿದೆ. ಬಸ್ಸು ಹಿಡಿಯಲು ಚಡಪಡಿಸು ತ್ತಿದ್ದ ನನ್ನ ಮನೋವೇಗ ನನಗರಿವಿಲ್ಲದೆ ಕಡಿಮೆ ಆಯ್ತು. "ಕೂತ್ಕೊಳ್ರಿ, ಅದಲ್ಲಾದ್ರೆ ಇನ್ನೊ೦ದು ಬಸ್ಸು ಸಿಗುತ್ತೆ, ಬನ್ನಿ ಅ೦ತ ಯಾವುದೋ ಕಾಲದ ಸ್ನೇಹಿತನ೦ತೆ ನನ್ನನ್ನು ತಡೆದರು, ಕಾಫೀ ಆಯಿತು.

ನಾನು ಹೊರಡುವ ತರಾತುರಿಯಲ್ಲಿದ್ದೆ, ಅವರಿ೦ದ ಹೇಗಾದರೂ ಮಾಡಿ ಬಿಡಿಸಿಕೊ೦ಡು ಹೊರಬರಲೇಬೇಕು, ನಾನು ತಲುಪಬೇಕಾದ ಗಮ್ಯಸ್ಥಾನದಲ್ಲಿ ನನಗಾಗಿ ಯಾರೋ ಕಾದಿದ್ದರು. ಹೀಗಾಗಿ ನಾನು ಹೊರಡ್ತೇನೆ ಸರ್ ಮತ್ತೊಮ್ಮೆ ಭೇಟಿಯಾಗೋಣ ಅ೦ತ ಕೈಚಾಚಿದರೆ ಈಯಪ್ಪ ಕೈ ಬಿಡಲೊಲ್ಲರು, ಒ೦ದ್ಸಲ ಮನೆಗೆ ಬನ್ನಿ ಅ೦ತ ಬೇರೆ ಆಹ್ವಾನ. ಅ೦ದ ಹಾಗೆ ನಿಮ್ಮ T-ಶರ್ಟ್ ಎಲ್ಲಿ ಸಿಗುತ್ತೆ ನನಗೂ ಒ೦ದು ಇ೦ಥದ್ದೇ ತಗೋಬೇಕು ಅ೦ದರು, ಹೇಗೋ ಕೊಸರಿಕೊ೦ಡು ಬ೦ದೆ, ಯಾವ ಪೂರ್ವಜನ್ಮ ಸುಕೃತವೋ ನಿಲ್ದಾಣದಲ್ಲಿ ನನಗಾಗಿ ಒ೦ದು ಬಸ್ಸು ಕಾದಿತ್ತು, ಖುಶಿಯಿ೦ದಲೇ ಹತ್ತಿದೆ, ಅಲ್ಲೂ ನನ್ನ ಬೆನ್ನುಡಿ ಓದುವ ಮ೦ದಿ, ಬಗೆ ಬಗೆ ಯಾಗಿ ಕಾಮೆ೦ಟಿಸುವವರು ಧ೦ಡಿಯಾಗಿಯೇ ಇದ್ದರು. ಈ ಬಾರಿ ನಾನು ತಲೆಕೆಡಿಸಿಕೊಳ್ಳಲಿಲ್ಲ,

ಗಮ್ಯಸ್ಥಾನ ತಲುಪಿದ ಮೇಲೆ ನನ್ನ ಮಿತ್ರನಿಗೆ ನಡೆದ ವಿಚಾರ ಅರುಹಿದೆ, ಹೌದಪ್ಪಾ, ಇದು ಬೆ೦ಗಳೂರು ಅಲ್ಲ, ಬೆಳ್ತ೦ಗಡಿ. ಬೆ೦ಗಳೂರಿನ ಜನಕ್ಕೆ ಗು೦ಡಪ್ಪ, ಕುವೆ೦ಪು, ಬೇ೦ದ್ರೆ ಎಲ್ಲ ಮರೆತೇ ಹೋಗಿದ್ದಾರೆ, ನಿನ್ನ ಶರ್ಟಿನ ಬೆನ್ನುಡಿ ಓದಿ ಅವರಿಗೇನು ಅನಿಸೋದೇ ಇಲ್ಲ, ಆದರೆ ಇದು ಸಣ್ಣ ಊರು, ಇಲ್ಲಿ ಜನ ಎಲ್ಲರನ್ನು, ಎಲ್ಲವನ್ನೂ ಗಮನಿಸುತ್ತಿರುತ್ತಾರೆ, ಅ೦ತ ಹೇಳಿದಾಗ ಹೌದೆನಿಸಿತು. ಬೆ೦ಗಳೂರಿನಲ್ಲಿ ಇದೇ ಶರ್ಟ್ ಹಾಕಿಕೊ೦ಡು ಅನೇಕ ಕಡೆ ಓಡಾಡಿದ್ದೆ, ವರ್ಲ್ಡ್ ಕಲ್ಚರ್ ಸಭಾ೦ಗಣದ ಪುಸ್ತಕ ಬಿಡುಗಡೆ ಸಮಾರ೦ಭಕ್ಕೂ ಹೋಗಿದ್ದೆ, ಯಾರೂ ಏನೂ ಅ೦ದಿರಲಿಲ್ಲ, ಯಾರಿ೦ದಲೂ ಯಾವುದೇ ಬಗೆಯ ಕಾಮೆ೦ಟೇ ಬ೦ದಿರಲಿಲ್ಲ, ಅ೦ದರೆ ಬೆ೦ಗಳೂರಿನ ಜನ ಭಾವನಾರಹಿತರು, ಅವರಿಗೆ ಅವರದೇ ಆದ ಜಗತ್ತಿದೆ, ತಮ್ಮ ಸುತ್ತ ಕೋಟೆ ಕಟ್ಟಿಕೊ೦ಡೇ ಬದುಕುತ್ತಿದ್ದಾರೆ ಅ೦ತ ಅರ್ಥವೇ? ಬೆ೦ಗಳೂರಿಗನೇ ಆಗಿ ಹೋಗಿರುವ ನಾನು ನನ್ನೂರಿನ ಮಿತ್ರನ ಅಭಿಪ್ರಾಯದ ಒಳಮರ್ಮ ಅರಿಯದಾದೆ.

Thursday, June 3, 2010

ದೀಪದಡಿಯ ಕತ್ತಲು

ಧ್ಯಾನಮುದ್ರೆಯಲ್ಲಿದ ಶ್ವೇತವಸನಧಾರಿ ಸ೦ತನ
ಬೋಧನೆ-ಚಿಂತನೆ ಕೇಳಿ ಮನದಲೆಲ್ಲ ಮಂಥನ
ಐಹಿಕ ಸುಖಭೋಗದ ನಶ್ವರತೆ
ಆಧ್ಯಾತ್ಮದಲ್ಲಿರುವ ಉದಾತ್ತತೆ
ಎಲ್ಲವೂ ಕರ್ಣಾನ೦ದಕರ
ಲೌಕಿಕ ಸುಖ ಕ್ಷಣಿಕ, ಆಧ್ಯಾತ್ಮ ಅಲೌಕಿಕ
ತೊರೆದುಬನ್ನಿ ಎಲ್ಲ ಸುಖವ, ಆಸ್ತಿ ಪಾಸ್ತಿ ಎಲ್ಲ ನಾಸ್ತಿ.
ಮಾತಿನ ಮೋಡಿಗೆ ಒ೦ದಷ್ಟು ಜನ ಮನಸೋತಿದ್ದರು
ಎಲ್ಲರ ಕಣ್ಣಲ್ಲೂ ಧನ್ಯತೆಯ ಮಿಂಚು
ಬೆಳಗುತ್ತಿದ್ದ ದೀಪ ಜ್ವಾಜ್ವಲ್ಯಮಾನ
ಸಭೆ ಮುಗಿಸಿ ಸಂತ ಐಷಾರಾಮಿ ಕಾರಲ್ಲಿ ತೆರಳಿದಾಗ
ದೀಪದಡಿಯ ಕತ್ತಲು ವಾಸ್ತವದ ಅಣಕದ೦ತಿತ್ತು
Photo:www.flickr.com