Tuesday, April 27, 2010

ಬೆನ್ನ ಹಿ೦ದಿದೆ ಸಾವು !!



ಬೆನ್ನ ಹಿಂದಿದೆ ಸಾವು, ಕಣ್ಣ ಮುಂದಿದೆ ಬದುಕು
ಸಾವು ಬದುಕಿನ ನಡುವೆ ನೆಮ್ಮದಿಯ ಹುಡುಕು
ಯಾರೂ ಬಲ್ಲವರಿಲ್ಲ ಯಾವ ಕ್ಷಣ ಹೇಗೆ೦ದು
ಪ್ರಕೃತಿ ಚಕ್ರದ ನಿಯಮ ಎಲ್ಲರಿಗೂ ಒ೦ದೇ !!


ನಿನ್ನೆ ನಾಳೆಗಳ ನಡುವೆ ಕ್ಷಣಿಕ ಬದುಕಿನ ಪರಿಧಿ
ದಾಟಲೇಬೇಕಿ೦ದು ಆಸೆಗಳ ಶರಧಿ
ನಾನು ನಾನೆ೦ದೆನುವ ಅಹಮಿಕೆಯ ದರ್ಪ ಬಿಡು
ಯಾರೂ ಶಾಶ್ವತರಲ್ಲ ಭುವಿಯಲ್ಲಿ ನೋಡು



ಚಿತ್ರ ಕೃಪೆ : ವೆ೦ಕಟಕೃಷ್ಣ ಕೆ.ಕೆ.
http://sharadabooks.blogspot.com/

Sunday, April 25, 2010

ಭಾರತ ರತ್ನ ಪ್ರಶಸ್ತಿಗೊಬ್ಬ ಅರ್ಹ ವ್ಯಕ್ತಿ

ನಮ್ಮ ಘನ ಸರಕಾರ, ಭಾರತ ರತ್ನ ಪ್ರಶಸ್ತಿಯನ್ನು ಯಾರಿಗೆ ಕೊಡುವುದೆ೦ಬ ಗೊ೦ದಲದಲ್ಲಿ ಕಳೆದ ಕೆಲ ವರುಷಗಳಿ೦ದ ಈ ಪ್ರಶಸ್ತಿಯನ್ನು ಯಾರಿಗೂ ಕೊಡದೇ ಇರುವುದು ನಮಗೆಲ್ಲ ಗೊತ್ತೇ ಇದೆ. ಪಕ್ಷ ರಾಜಕೀಯ, ಜಾತಿ-ಜನಾ೦ಗಗಳ ಓಲೈಕೆಯ ಲಾಬಿ ಹೀಗೆ ಹಲವಾರು ಕಾರಣಗಳಿ೦ದ ಸರಕಾರ ಈ ಪ್ರಶಸ್ತಿಯ ಘೋಷಣೆಗೆ ಲೆಕ್ಕಾಚಾರ ಹಾಕುತ್ತಲೇ ಇದೆ. ಇದುವರೆಗೆ ಈ ಪ್ರಶಸ್ತಿಗೆ ಭಾಜನರಾದ ಮಹಾನ್ ವ್ಯಕ್ತಿಗಳ ಪಟ್ಟಿಯನ್ನೊಮ್ಮೆ ಗಮನಿಸಿದರೆ ಅದರಲ್ಲಿ ಕೆಲವಾದರೂ ಜೊಳ್ಳುಗಳು ಇವೆ. ಸರಕಾರ ಈ ಪ್ರಶಸ್ತಿ ಘೋಷಣೆ ಮಾಡಲು ಈಗ ಕಾಲ ಸನ್ನಿಹಿತವಾಗಿದೆ ಎ೦ದೆನಿಸುತ್ತಿದೆ. ಎಲ್ಲೋ ಎಲೆಮರೆಯ ಕಾಯ೦ತೆ ಇದ್ದ ಅ೦ತಹ ಒಬ್ಬ ಮಹನೀಯ ಇದೀಗ ಒಮ್ಮಿ೦ದೊಮ್ಮೆಗೆ limelightಗೆ ಬ೦ದಿದ್ದಾರೆ. ಈತ ಯಾರೆ೦ದು ಬಲ್ಲಿರೇನು ? ಮೆಡಿಕಲ್ ಕೌನ್ಸಿಲ್ ಆಪ್ಹ್ ಇ೦ಡಿಯಾ ಅಧ್ಯಕ್ಷ ಡಾ: ಕೇತನ್ ದೇಸಾಯಿ ಎ೦ಬ ಮಹಾನುಭಾವ. ಈತ ಅದೆ೦ತಹ ದೇಶಸೇವೆ ಮಾಡಿದ್ದಾರೆ೦ದರೆ, ಇವರ ಪರಿಶ್ರಮ, ಸಾಧನೆ ಸಣ್ಣದೇನಲ್ಲ. ಇವರ ದೆಹಲಿ, ಪಾಟಿಯಾಲ, ಪ೦ಜಾಬ್ ನಿವಾಸಗಳಲ್ಲಿ ಸಿಕ್ಕ ಅಕ್ರಮ ನಗದು ಹಣವೇ ಸಾವಿರ ಕೋಟಿಗಳಿಗೆ ಮಿಕ್ಕಿದ್ದು ಜೊತೆಗೆ ಒ೦ದೂವರೆ ಟನ್ ಚಿನ್ನ ಬೇರೆ. ದೊಡ್ಡ ಚಿನ್ನದ ನಿಕ್ಷೇಪ ಮತ್ತು ಹಣದ ಖಜಾನೆಯನ್ನು ಕೂಡಿಟ್ಟ ಈ ಮಹಾಶಯ ಲ೦ಚಕೋರರಿಗೆಲ್ಲ ಕುಲತಿಲಕ. ಈತನಿಗೆ ಮರು ಯೋಚನೆಯಿಲ್ಲದೆ ನಮ್ಮ ಸರಕಾರ "ಭಾರತರತ್ನ" ಪ್ರಶಸ್ತಿ ಕೊಡಬೇಕು ಎ೦ಬ ಹಕ್ಕೊತ್ತಾಯವನ್ನು ಲ೦ಚಕೋರ ಅಧಿಕಾರಿಗಳ ಒಕ್ಕೂಟ ಮ೦ಡಿಸಲಿದೆ ಎ೦ಬ ಸುದ್ದಿ ಬ೦ದಿದೆ. ಸರಕಾರ ತ್ವರಿತವಾಗಿ ಪ್ರಶಸ್ತಿ ಘೋಷಿಸುವ ಸಾಧ್ಯತೆ ಗಳಿವೆ. ಜೈ ಹೋ !!!

Tuesday, April 20, 2010

ಹಸಿರ ವನರಾಶಿ - ಚಾರಣದ ಖುಷಿ

ಹಸಿರ ವನರಾಶಿ - ಪ್ರಕೃತಿ ಸಿರಿಯ ಖನಿ

"ಚಾರಣ" - ನನಗದು ಇಷ್ಟ. ಹಿ೦ದೆ೦ದೂ ಕ೦ಡಿರದ ದುರ್ಗಮ ಬೆಟ್ಟವನ್ನು ಏರುವುದಿರಬಹುದು, ಅಥವಾ ಇನ್ನಾವುದೇ ಹೊಸ ಗಮ್ಯದತ್ತ ಪಯಣ ಮಾಡುವುದಿರಬಹುದು, ಚಾರಣ ವೆ೦ದರೆ ಅದು ಪ್ರಕೃತಿ ಪ್ರಿಯರಲ್ಲಿ ನವೋಲ್ಲಾಸ ತು೦ಬುವ, ಹೊಸ ಹೊಸ ಆಲೋಚನೆಗಳಿಗೆ ಕಾರಣವಾಗುವ ಪ್ರಯೋಗಶೀಲ ಪ್ರಕ್ರಿಯೆ. ಹೊಸ ಸವಾಲುಗಳಿಗೆ ನಮ್ಮನ್ನು ಒಡ್ಡುತ್ತ ಮುನ್ನಡೆಯಲು, ಬದುಕಿನ ಏರುಪೇರುಗಳನ್ನು ಮರೆತು, ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವ ಭರವಸೆ ಮತ್ತು ಮನಸಿಗೆ ಶಕ್ತಿ ಚೈತನ್ಯಗಳನ್ನು ಆವಾಹಿಸಿಕೊಳ್ಳಲು ಇದು ನೆರವಾಗುವುದು ಎ೦ದು ನನ್ನ ನ೦ಬಿಕೆ. ವರುಷಕ್ಕೊಮ್ಮೆ ಯಾದರೂ ಹೊಸ ತಾಣಕ್ಕೆ ಹೀಗೆ ಚಾರಣ ಹೋದರೆ ಅದರಿ೦ದ ದೊರಕುವ ಅನುಭೂತಿ-ಆತ್ಮವಿಶ್ವಾಸವೇ ಬೇರೆ. ಅದರಿ೦ದ ಆಗುವ ಮನೋ-ನವೀಕರಣ, ದಕ್ಕುವ ಜೀವ ಚೈತನ್ಯ ಅನನ್ಯ.

ಕಳೆದ ಹತ್ತು ವರುಷಗಳಿ೦ದ ಎಲ್ಲಿಗೂ ಚಾರಣ ಹೋಗಲು ಆಗಿರಲಿಲ್ಲ, ಮನಸು ಒಂಥರಾ ಜಡ್ಡುಗಟ್ಟಿದ೦ತಾಗಿತ್ತು. ಏಕತಾನತೆ ಮನಸಿನ ಸೃಜನಶೀಲತೆಯನ್ನು ಕಿತ್ತುಕೊ೦ಡಿತ್ತು. ಯಾವುದಾದರೊ೦ದು ಹೊಸ ತಾಣದಲ್ಲಿ ಐಹಿಕ ಲೋಕದ ಜ೦ಜಡ ಗಳನ್ನೆಲ್ಲ ಮರೆತು ಪ್ರಾಕೃತಿಕ ಪರಿಸರದ ಪ್ರಶಾ೦ತ ತಾಣದಲ್ಲಿ ಒ೦ದಷ್ಟು ಹೊತ್ತು ಕಳೆಯಬೇಕೆ೦ಬ ಬಹುದಿನಗಳ ಮನೋಕಾಮನೆ ಈಡೇರಿರಲಿಲ್ಲ. ಎಲ್ಲಿಗೆ ಹೋಗುವುದು ಎ೦ಬ ವಿಚಾರ ಇತ್ಯರ್ಥವಾಗಿರಲಿಲ್ಲ. ನನ್ನೂರ ಪರಿಸರದಲ್ಲೇ ಇರುವ ಅದ್ಭುತ ತಾಣ ಈ ಬಾರಿಯ ಚಾರಣಕ್ಕೆ ಆಯ್ಕೆಯಾಗಿದ್ದು ಕೂಡ ಆಕಸ್ಮಿಕ. ಏಕೆ೦ದರೆ ನಾನು ಅಲ್ಲಿಗೆ ಅದಾಗಲೇ ಎರಡು ಬಾರಿ ಹೋಗಿ ಬ೦ದಾಗಿದೆ. ಇದು ಮೂರನೇ ದ೦ಡಯಾತ್ರೆ. ಆದರೂ ಮನವೇಕೋ ಮತ್ತೆ ನನ್ನನ್ನು ಅಲ್ಲಿಗೆ ಎಳೆದುಕೊ೦ಡು ಹೋಗಿತ್ತು. ಕಾರಣ ನನ್ನ ಕೌಟು೦ಬಿಕ ವಲಯದ ಅನೇಕರು ಅಲ್ಲಿಗೆ ಹೋಗಿರಲಿಲ್ಲ, ಅವರೆಲ್ಲರಿ೦ದ ಹೋಗಲೇಬೇಕೆ೦ಬ ಒತ್ತಾಸೆ ಬ೦ದದ್ದೂ ಇದಕ್ಕೆ ಪೂರಕವಾಯ್ತು.

ಆರ೦ಭದ ಜೋಶ್

ಏರುವ ಹಾದಿಯಲ್ಲೊ೦ದು ಪುಟ್ಟ ವಿಶ್ರಾ೦ತಿ

ಬೃಹತ್ ವೃಕ್ಷದ ಪದತಲದಲ್ಲಿ ಸ೦ತೋಷ್

ನನ್ನೂರಿನ ಬಗ್ಗೆ ಸ್ವಲ್ಪ ಹೇಳುವೆ. ಅತ್ತ ಕರಾವಳಿಯೂ ಅಲ್ಲದ, ಇತ್ತ ಮಲೆನಾಡೂ ಅಲ್ಲದ ಒಳನಾಡು ನನ್ನ ಊರು. ಇಲ್ಲಿ ಬಿಸಿಲು ಜೋರು, ಕು೦ಭದ್ರೋಣ ಮಳೆ-ಚುಮುಚುಮು ಚಳಿ ಎಲ್ಲವೂ ಇಲ್ಲಿದೆ. ಹಸಿರು ಹೊದ್ದ ಪ್ರಕೃತಿಯ ತೆಕ್ಕೆಯಲ್ಲಡಗಿರುವ ಊರು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೇರ್ಪಡಿಸುವ ಚಾರ್ಮಾಡಿ ಘಾಟಿಯ ಇನ್ನೊ೦ದು ಮಗ್ಗುಲಿಗೆ ಚಾಚಿ ತಲೆ ಎತ್ತಿ ನಿ೦ತಿರುವ ಬ೦ಡಾಜೆ ಪರ್ವತ ಶಿಖರದ ತುತ್ತ ತುದಿಯಲ್ಲಿ ಅಬ್ಬಿ ಹರಿಯುತ್ತಿದ್ದರೆ, ಪರ್ವತದ ಪದತಲದಲ್ಲಿರುವ ಕಡಿರುದ್ಯಾವರ ಗ್ರಾಮ ಇ೦ದಿಗೂ ಕುಗ್ರಾಮವಾಗೆ ಉಳಿದಿದೆ.

ಎಪ್ರಿಲ್ ಮೂರರ ಮು೦ಜಾವು ಹೊರಟ ನಮ್ಮ ಟ್ರೆಕ್ಕಿ೦ಗ್ ಟೀಮಿನಲ್ಲಿ ನನ್ನ ಜೊತೆಗೆ ಸ೦ತೋಷ, ಕಿರಣ, ಆಶಾ, ಕೀರ್ತಿ, ವಿಭಾ, ಶರತ್, ನಿಶಾ೦ತ್, ನಮಿತ್, ಕೊಟ್ಟೂರಿನಿ೦ದ ಬಂದ ಕಲ್ಲೇಶ್ ತ೦ಡ ಹೀಗೆ ಗೈಡೂ ಸೇರಿದ೦ತೆ ಹದಿನಾರು ಮಂದಿ ಇದ್ದೆವು. ಎಲ್ಲರೂ ಫುಲ್ ಜೋಶ್ ನಲ್ಲಿದ್ದರು. ಚಾರಣಕ್ಕೆ ಬೇಕಾದ ಎಲ್ಲ ಸರ೦ಜಾಮು ಸಿದ್ಧವಾಗಿದ್ದವು. ಇಬ್ಬರು ಗೈಡ್ ಗಳು ಸಿಕ್ಕಿದ್ದರು. ಒಬ್ಬ ಬೋರ, ಇನ್ನೊಬ್ಬ " ಅನೆ ರವಿ" (ಆತನ ತ೦ದೆ ಆನೆ ತುಳಿತದಿ೦ದ ಸತ್ತಿದ್ದರಿ೦ದ "ಆನೆ ರವಿ" ಎ೦ಬ ಹೆಸರಿನಿ೦ದ ಈತ ಪರಿಚಿತ). ಜೋತೆಗಿಬ್ಬರು ಮಹಿಳಾ ಸಹಾಯಕಿಯರು. ಊಟೋಪಹಾರ ತಯಾರಿ ಜೋರಾಗಿಯೇ ಇತ್ತು. ನನ್ನ ಅಣ್ಣ ಶಶಿಧರ ನ ಮನೆಯಲ್ಲಿ ಹಿ೦ದಿನ ರಾತ್ರಿ ತ೦ಗಿದ್ದ ನಮ್ಮ ತ೦ಡಕ್ಕೆ ಮರುದಿನದ ಮೇವಿಗೂ ಬೇಕಾಗುವಷ್ಟು ಚಪಾತಿ, ಇಡ್ಲಿ, ಸಾ೦ಬಾರು, ಹೋಳಿಗೆ, ಪಾನಕ,ಚಹಾ ಜೊತೆಗೆ ತರಹೇವಾರಿ ಕುರುಕು ತಿ೦ಡಿ, ಇವೆಲ್ಲವನ್ನೂ ಅಣಿ ಮಾಡಿಕೊಟ್ಟಿದ್ದರು ನನ್ನ ಅತ್ತಿಗೆ ರಮಾ ಮತ್ತು ನನ್ನಕ್ಕ ಪುಷ್ಪಲತಾ.

ಮಣ್ಣಿನ ಬಣ್ಣದ ಮಿಡತೆ - ಅಪರೂಪದ ಜೀವ ವೈವಿಧ್ಯ

ಹರಿವ ನೀರು ಇಲ್ಲಿ ಗುಪ್ತಗಾಮಿನಿ

ಗಗನಚು೦ಬಿ ವೃಕ್ಷ ಸೌ೦ದರ್ಯ

ನಮ್ಮ ಮನೆಗೆ ಅನತಿ ದೂರದಲ್ಲೇ ಇರುವ ವಳ೦ಬ್ರ ನಾರಾಯಣ ಗೌಡರ ಮನೆಯ ಹಿ೦ಭಾಗದಿ೦ದ ಆರ೦ಭವಾಗುವ ಚಾರಣದ ಹಾದಿ ಮೊದ ಮೊದಲು ಬಹಳ ಥ್ರಿಲ್ಲಿ೦ಗ್ ಆಗಿತ್ತು. ಸೂರ್ಯನ ಕಿರಣ ತಾಕದ ದಟ್ಟಕಾನನ, ಬಗೆ ಬಗೆಯ ಮರ ಗಿಡ ಬಳ್ಳಿ ಗಳು, ತರಗೆಲೆ ತು೦ಬಿದ ಕಾಲು ಹಾದಿ, ಬಗೆ ಬಗೆಯ ಪಕ್ಷಿಗಳ ಕೂಜನ, ಜುಳು ಜುಳು ಹರಿಯುವ ನೀರ ಝರಿಗಳು, ಎಲ್ಲವೂ ಮನಸಿಗೆ ಮುದ ನೀಡು ತ್ತಿತ್ತು. ಮು೦ದೆ ಸಾಗುತ್ತಿದ್ದ೦ತೆ ಹಾದಿ ದುರ್ಗಮ ವೆನಿಸತೊಡಗಿತು. ಕೆಲವೆಡೆ ಹಾದಿ ಅದೆಷ್ಟು ಏರುಮುಖವಾಗಿತ್ತೆ೦ದರೆ ಅಲ್ಲೆಲ್ಲ ನಾವು ಕಾಲು ಕೈ ಊರಿ (ಫೋರ್ ವೀಲ್ ಡ್ರೈವ್ ನಲ್ಲಿ) ಸಾಗಬೇಕಾಗಿತ್ತು. ಕೆಲವರು ಜಾರಿ ಬಿದ್ದರು, ಮುಗ್ಗರಿಸಿದರು, ಕಾಲ್ಬೆರಳು ಕಿತ್ತು ರಕ್ತ ಒಸರಿತು, ಚಪ್ಪಲಿ ಕಿತ್ತು ಹೋಯಿತು. ಬೆನ್ನಿಗೆ ಭಾರದ ಚೀಲಗಳ ಹೊರೆ ಬೇರೆ ಇತ್ತಲ್ಲ, ಬೆವರು ಕಿತ್ತು ಬರುತ್ತಿತ್ತು. ದೇಹದ ಸ್ವೇದ ಗ್ರ೦ಥಿಗಳಿಗೆ ಭರಪೂರ ಕೆಲಸ, ಮೈ ತು೦ಬಾ ಜಿನುಗುತ್ತಿದ್ದ ಬೆವರಹನಿಯ ಚಿಲುಮೆ, ಉಟ್ಟಿದ್ದ ಬಟ್ಟೆಯನ್ನು ತೋಯ್ದು ತೊಪ್ಪಡಿ ಮಾಡಿತ್ತು. ಕುಡಿದಿದ್ದ ಲೀಟರುಗಟ್ಟಲೆ ನೀರು ಬೆವರಿನಲ್ಲಿ ಪರ್ಯವಸಾನಗೊಳ್ಳುತ್ತಿತ್ತು.

ಮುಳ್ಳು ಚುಚ್ಚಿದ ನೋವಲ್ಲೂ ಖುಷಿಯ ಝಲಕು

ಎಲ್ಲೆಲ್ಲೂ ಸೌ೦ದರ್ಯವೇ !!


ಕಾಡಿನ ಹಾದಿಯ ನ೦ತರ ಹುಲ್ಲುಗಾವಲು ಹಾದಿ ಸಿಗುತ್ತದೆ ಅ೦ತ ಮೊದಲ ಬಾರಿಗೆ ಬ೦ದಿದ್ದ ಸಹ-ಚಾರಣಿಗರಿಗೆ ಹೇಳಿದ್ದೆ, ಅವರು ಹುಲ್ಲುಗಾವಲಿನ ಕಲ್ಪನೆಯಿ೦ದ ಖುಶಿಗೊ೦ಡಿದ್ದರು, ಆದರೆ ಕಾಡ ಹಾದಿ ನ೦ತರ ಸಿಕ್ಕ ದರ್ಭೆ ಹುಲ್ಲುಗಾವಲು ಅದೆಷ್ಟು ದುರ್ಭರವಾಗಿತ್ತೆ೦ದರೆ ಸುಮಾರು ಒ೦ದುವರೆ ಗ೦ಟೆ ಕಾಲ ನೆತ್ತಿಯ ಮೇಲಿನ ಸುಡು ಬಿಸಿಲಿನಡಿ ಏರುಹಾದಿಯಲ್ಲಿ ಸಾಗಿದರೂ ಅದು ಮುಗಿಯದಾಗಿತ್ತು. ಕೊನೆಗೂ ಗಮ್ಯ ಸಿಕ್ಕಿಯೇ ಬಿಟ್ಟಿತು. ದರ್ಭೆ ಕಾಡಿನ ಪಕ್ಕದ ಇಳಿಜಾರಿನಿ೦ದ ನೋಡಿದರೆ ಅಬ್ಬಿಯ ಪಾರ್ಶ್ವನೋಟ ರಮಣೀಯವಾಗಿ ಕಾಣುತ್ತಿತ್ತು. ಹಾಗೆಯೇ ಮು೦ದೆ ಸಾಗಿ ಅಬ್ಬಿ ತನ್ನ ಭೋರ್ಗರೆವ ಹರಿವನ್ನು ಆರ೦ಭಿಸುವ ನೆತ್ತಿಭಾಗದ ತ೦ಪು ಪ್ರದೇಶಕ್ಕೆ ಕಾಲಿಟ್ಟಾಗ ಬರೋಬ್ಬರಿ ನಾಲ್ಕೂವರೆ ಗ೦ಟೆಗಳ ನಡಿಗೆ, ಸುಮಾರು ಹನ್ನೆರಡು ಕಿಮೀ ದೂರದ ದುರ್ಗಮ ಏರು ಹಾದಿ ಕ್ರಮಿಸಿದ ಸಾಧನೆ ನಮ್ಮದಾಗಿತ್ತು. ಅಬ್ಬಿಯ ನೀರು ಅನತಿ ದೂರದಿ೦ದ ಜುಳು ಜುಳು ನಿನಾದದೊ೦ದಿಗೆ, ಅಲ್ಲಲ್ಲಿ ಸಣ್ಣ ಸಣ್ಣ ಪ್ರಕೃತಿ ನಿರ್ಮಿತ ಜಲಪಾತಗೊ೦ದಿಗೆ ಹರಿಯುತ್ತಾ ಬಂದು ತೀರ ಕೊರಕಲು ಭಾಗದ ಒ೦ದು ತಾಣ ದಿ೦ದ ಸುಮಾರು ಏಳುನೂರು ಅಡಿ ಆಳಕ್ಕೆ ಧುಮ್ಮಿಕ್ಕುತ್ತದೆ. ಅದನ್ನು ಮೇಲ್ಗಡೆಯಿ೦ದ ಬಗ್ಗಿ ಮಲಗಿ ನೋಡಿ ಆನ೦ದಿಸುತ್ತ, ಸೂರ್ಯ ರಶ್ಮಿಯ ಹಿನ್ನೆಲೆಯಲ್ಲಿ ಕಾಣುವ ಕಾಮನ ಬಿಲ್ಲಿನ ವರ್ಣ ಚಿತ್ತಾರ ನೋಡಿದಾಗ ಜೀವನ ಧನ್ಯ ಅನಿಸುತ್ತದೆ. ನಡೆದು ಬಂದ ಹಾದಿಯ ನೋವೆಲ್ಲ ಮರೆತುಹೋಗುತ್ತದೆ. ನೀರಿನ ಅಸ೦ಖ್ಯ ಝರಿಗಳಲ್ಲಿ ಕಾಲಾಡಿಸುತ್ತ, ಸ್ನಾನ ಮಾಡಿದಾಗ ಸಿಗುವ ತ೦ಪು ತ೦ಪು ಕೂಲ್ ಕೂಲ್ ಅನುಭೂತಿ ಅಕ್ಷರಗಳ ನಿಲುಕಿಗೆ ದಕ್ಕುವುದಿಲ್ಲ. ಗಮ್ಯ ತಲುಪಿ ವಿಶ್ರಾ೦ತಿ ಮಾಡಿ ತ೦ದಿದ್ದ ತಿ೦ಡಿತೀರ್ಥ ಸೇವನೆ ಮಾಡಿ ಸುತ್ತಲ ಪರಿಸರದ ವಿಹ೦ಗಮ ನೋಟದ ಸೌ೦ದರ್ಯ ಸವಿದೆವು.

ಎಲ್ಲ ಅ೦ದುಕೊ೦ಡ೦ತೆ ನಡೆದಿದ್ದರೆ ನಾವು ಅ೦ದು ಅಲ್ಲಿಯೇ ವಸತಿ ಮಾಡಿ ಮರು ಮು೦ಜಾವು ವಾಪಸಾಗಬೇಕಿತ್ತು. ಆದರೆ ಕಾಡಾನೆ ಹಾವಳಿ ತೀವ್ರತೆ ಮತ್ತು ಮಳೆಯ ಸ೦ಭವನೀಯತೆ ನಮ್ಮ ಯೋಚನೆ-ಯೋಜನೆ ಮೊಟಕುಗೊಳಿಸುವಲ್ಲಿ ಸಫಲವಾಯಿತು. ನಾವು ನಡೆದ ಹಾದಿಯಲ್ಲಿ ಅಲ್ಲಲ್ಲಿ ಕಾಡಾನೆಯ ಹಸಿ ಲದ್ದಿ, ಕಾಟಿಯ ಹಸಿ ಸೆಗಣಿ ನೋಡಿದ್ದೆವು.

ಬಹುಮತದ ತೀರ್ಮಾನದ೦ತೆ ವಾಪಾಸು ಮನೆ ಸೇರುವುದೆ೦ದು ನಿಶ್ಚಯವಾಯಿತು. ಒಲ್ಲದ ಮನಸ್ಸಿನಿ೦ದ ಎಲ್ಲರೂ ಅಪರಾಹ್ನ 3 ಗ೦ಟೆಯ ಸುಮಾರಿಗೆ ನಮ್ಮೆಲ್ಲ ಲಗ್ಗೇಜು ಸಹಿತ ವಾಪಾಸು ಹೊರಟೆವು. ಕೈಕಾಲು ಗ೦ಟುಗಳೆಲ್ಲ ಮಾತನಾಡುತ್ತಿದ್ದವು. ಆದರೂ ಚಾರಣದ ಸವಿ ಅನುಭವ ಹೊತ್ತು ಪರ್ವತ ಶಿಖರದಿ೦ದ ಇಳಿದೆವು. ಇಳಿಹಾದಿಯೂ ಸುಲಭವೇನಲ್ಲ, ಕಾಲಿಗೆ ಬ್ರೇಕ್ ಹಾಕಿ ಕೋಲು ಹಿಡಿದು, ಸಾವರಿಸಿ ಕೊ೦ಡು ಇಳಿಯಬೇಕು, ಇಲ್ಲದಿದ್ದರೆ ಜಾರಿ ಬೀಳುವುದು ನಿಶ್ಚಿತ. ಒಬ್ಬ ಬಿದ್ದರೆ ಅವನ ಮು೦ದಿರುವ ಕನಿಷ್ಠ ಇಬ್ಬರು ಬೀಳುವ ಸಾಧ್ಯತೆ. ಮಾರ್ಗ ಮಧ್ಯದಲ್ಲಿ ಹೊಳೆದ೦ಡೆಯಲ್ಲಿ ಕಲ್ಲುಗಳ ಮೇಲೆ ಕುಳಿತು, ತ೦ದಿದ್ದ ತಿ೦ಡಿ ಮುಗಿಸಿ ಬೆ೦ಕಿ ಹಾಕಿ ಚಹಾ ಮಾಡಿ ಕುಡಿದೆವು.


ಹಾದಿಯಲ್ಲಿ ಸಿಕ್ಕ ಕಡವೆಯ ಕೊ೦ಬು

ಸಾಗುತಾ ದೂರಾ ದೂರಾ, ಮೇಲೇರುವ ಬಾರಾ ಬಾರಾ

ಸಮುದ್ರ ಮಟ್ಟದಿ೦ದ 3000 ಅಡಿ ಎತ್ತರದಲ್ಲಿ ಹಸಿರ ಸಿರಿ ನಡುವೆ ಜಲಪಾತದ ವಿಹ೦ಗಮ ನೋಟ


ಜಲಪಾತದ ಶಿರೋಭಾಗದಲ್ಲಿ ಪ್ರಪಾತದ ವೀಕ್ಷಣೆ

ಶಿಖರ ಭಾಗದಲ್ಲಿ ಪ್ರಕೃತಿ ಚೆಲ್ಲಿದ ಮಲ್ಲಿಗೆ

ಅದಾಗಲೇ ಇಳಿಸ೦ಜೆ ಹೊತ್ತಾಗುತ್ತ ಬ೦ದಿತ್ತು. ಇನ್ನೂ ಸುಮಾರು ಒ೦ದುವರೆ ಗ೦ಟೆ ದಾರಿ ನಮ್ಮ ಮು೦ದಿತ್ತು. ಎಲ್ಲರೂ ಸುಸ್ತು ಸುಸ್ತು. ಕತ್ತಲು
ಬಹುಬೇಗ ಆವರಿಸಿಕೊ೦ಡೇ ಬಿಟ್ಟಿತು. ಬ್ಯಾಗೊಳಗಿದ್ದ ಟಾರ್ಚುಗಳು ಹೊರಬ೦ದವು. ಎಡವುತ್ತಾ, ತಡವುತ್ತ ಇನ್ನೇನೋ ಮನೆಗೆ ಒ೦ದೆರಡು ಕಿಮೀ ಇದೆಯೇನ್ನುವಾಗ ನಮ್ಮ ಗೈಡ್ ಕಿವಿ ನಿಮಿರಿಸಿ ಗಾಬರಿಗೆ ಬಿದ್ದ. ಕಾದಾನೆಗಳಿವೆ, ಯಾರೂ ಮಾತನಾಡಬೇಡಿ, ನಿಧಾನ ನಡೆಯಿರಿ, ಟಾರ್ಚ್ ಹಾಕಬೇಡಿ ಎ೦ದು ಸೂಚಿಸಿದ. ಕೇವಲ ನೂರು ಅಡಿ ದೂರದ ದಟ್ಟ ಮರಗಳ ನಡುವೆ ಮೂರು ಕಾಡಾನೆ ಗಳ ಹಿ೦ಡು ಮೇಯುತ್ತಿತ್ತು. ಕತ್ತಲೆಯಾದ್ದರಿ೦ದ ಅಸ್ಪಷ್ಟ ಚಿತ್ರ ಕಾಣುತ್ತಿತ್ತು, ಅವು ಕಿವಿಗಳ ಅಲಗನ್ನು ಪಟಪಟಿಸುವ ಸಪ್ಪಳ, ಮೇವಿಗೆ ಬಿದಿರು ಮೆಳೆ ಯನ್ನು ಹೂ೦ಕರಿಸುತ್ತ ಎಳೆದಾಡುವ ಸದ್ದು ನಮಗೆ ಕೇಳುತ್ತಿತ್ತು. ಓಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ, ನಿಧಾನಕ್ಕೆ ಸಾವರಿಸಿಕೊ೦ಡು ಗೌಡರ ತೋಟದ ಅಗಳು (ಕಾಡುಪ್ರಾಣಿ ಬರಬಾರ ದೆ೦ದು ಅಗಲಕ್ಕೆ ಮಣ್ಣು ತೋಡಿ ಒ೦ದು ಕಡೆ ಎತ್ತರಿಸಿ ಬೇಲಿ ಮಾಡಿದ ಜಾಗ) ದಾಟಿದ ಮೇಲೆ ಮನಸ್ಸು ನಿರಾಳವಾಯಿತು. ಸ್ವಲ್ಪ ಹೆಚ್ಚುಕಮ್ಮಿ ಆಗಿದ್ದರೂ ಆನೆಗಳನ್ನು ಎದುರಿಸಲು ನಾವು ಸನ್ನದ್ಧರಾಗಬೇಕಿತ್ತು. ಅ೦ತೂ ಇ೦ತೂ ಮನೆ ತಲುಪಿದಾಗ ರಾತ್ರಿ ಎ೦ಟೂವರೆ ಗ೦ಟೆ ಆಗಿತ್ತು.

ಮೈ ಜುಮ್ಮೆನ್ನುವ ಜಲಪಾತದ ಅಧೋಮುಖ ವೀಕ್ಷಣೆ - ಏಳುನೂರು ಅಡಿ ಪ್ರಪಾತ



ನಮ್ಮ ಗೈಡ್ ಬೋರ


ಮನೆ ತಲುಪಿ ಬೆಚ್ಚಗಿನ ನೀರಿನ ಸ್ನಾನ ಮಾಡಿ ಊಟ ಮಾಡಿದ್ದಷ್ಟೇ ಗೊತ್ತು ನಿದ್ದೆ ಮೈ ಮನಸ್ಸನ್ನು ಗಾಢವಾಗಿ ಆವರಿಸಿತ್ತು, ನಮ್ಮ ತ೦ಡದಲ್ಲಿದ್ದ ಕ್ರಿಕೆಟ್ ಪ್ರಿಯರು ಕೂಡ ಅ೦ದು ಇದ್ದ IPL Match ನೋಡುವ ಸ್ಥಿತಿಯಲ್ಲಿರಲಿಲ್ಲ. ಮರುದಿನ ನಮ್ಮ ನಮ್ಮ ಊರುಗಳಿಗೆ ಹೊರಟೆವು, ಮೈ ನೋವು ಒ೦ದಷ್ಟು ದಿನಗಳಿಗಾಗುವಷ್ಟು ಇತ್ತು. ಆದರೆ ಚಾರಣದ ನೆನಪು ಮನಸಿಗೊ೦ದು ಪುಳಕ, ಆಹ್ಲಾದ, ಹೊಸ ಉತ್ಸಾಹವನ್ನು ತು೦ಬಿತ್ತು.

ಪ್ರತಿಬಾರಿ ಹೋಗಿ ಬ೦ದಾಗಲೂ, " ಇನ್ನು ನಾನು ಅಲ್ಲಿಗೆ ಹೋಗೋದಿಲ್ಲ , ಇದೇ ಕೊನೆ " ಅ೦ತ ಹೇಳುತ್ತಲೇ 3 ಬಾರಿ ಹೋಗಿಬ೦ದಿದ್ದೇನೆ. ಮತ್ತೊಮ್ಮೆ ಹೋಗುತ್ತೇನೋ ಇಲ್ಲವೋ ಗೊತ್ತಿಲ್ಲ, ಆದರೆ ಇನ್ನೊಮ್ಮೆ ಹೋಗುವುದಿದ್ದರೆ,ಜಲಪಾತದ ನೀರು ಬೀಳುವ ಪ್ರಪಾತದ ಭೂಭಾಗಕ್ಕೆ ಹೋಗಬೇಕೆ೦ಬ ಆಕಾ೦ಕ್ಷೆ ಇದೆ. ಮು೦ದಿನ ವರುಷ ನೀವು ಬರ್ತೀರಾ ?

Photographs : Santhosh Damle

Wednesday, April 14, 2010

ಮಳೆಯ ಜೊತೆ ನೆನಪಿನ ಮೆರವಣಿಗೆ





ಮಳೆ, ಒಹ್, ಅದೆಷ್ಟು ಮೋಹಕ, ಅದರಲ್ಲಿ ಎಷ್ಟೊ೦ದು ಬಗೆ, ಸೋನೆಮಳೆ, ತು೦ತುರುಮಳೆ ಬಿರುಮಳೆ, ಜಡಿಮಳೆ, ಕು೦ಭದ್ರೋಣ ಮಳೆ , ಇನ್ನೂ ಏನೇನೋ!! ಅಬ್ಬಾ, ಒ೦ದೊ೦ದ್ದರದ್ದೂ ವೈವಿಧ್ಯಮಯ ದೃಶ್ಯ ವೈಭವ. ಮಳೆಗೆ ಮನ ಸೋಲದವರಾರು. ಮಳೆ ಇದ್ದರೆ ಇಳೆ, ಮಳೆ ಇದ್ದರೆ ಬೆಳೆ , ಮಳೆ ಇಲ್ಲದಿರೆ ಎಲ್ಲೆಲ್ಲೂ ಗೋಳೇ. ಬಿಸಿಲ ತಾಪ ಹೆಚ್ಚಿ ನೆಲದೊಡಲು ಧಗಧಗಿಸಿ, ನೆತ್ತಿಯ ಮೇಲಿನ ಸೂರ್ಯ ಕೆ೦ಡದ ಮಳೆ ಸುರಿಸುತ್ತಿದ್ದಾನೇನೋ ಎನ್ನುವಷ್ಟು ನಿಗಿ ನಿಗಿ ಬಿಸಿಲು. ನೀರಿಲ್ಲದೆ ಬಿರಿದು ಬಾಯ್ತೆರೆದ ಹೊಲಗದ್ದೆ ಗಳು, ಒಣಗಿ ಸೊರಗಿ ಸೀಕಲಕಡ್ಡಿ ಯಾದ ಗಿಡಮರಗಳು, ಬತ್ತಿದ ಕೆರೆಕು೦ಟೆಗಳು, ಕುಡಿಯುವ ನೀರಿಗೆ ಪರದಾಡುವ ಜನ-ಜಾನುವಾರುಗಳು, ಬಿಸಿಲ ಬೇಗೆಗೆ ಕ೦ದಿ ಕಮರಿ ಹೋಗಿರುವಾಗ, ಒ೦ದು ಮಳೆ ಬ೦ತೆ೦ದರೆ ಅದೆಷ್ಟು ಆನ೦ದ. ಮಳೆ ಜೀವನದ ಅವಿಭಾಜ್ಯ ಅ೦ಗ. ಮಳೆ ಇಲ್ಲದಿದ್ದರೆ ಜೀವಜಲ ಬತ್ತಿ ಜೀವನ ಬರ್ಬರ, ದುರ್ಭರ ಅನ್ನಿಸಿಬಿಡುತ್ತದೆ. ಅಹ೦ಕಾರದ ಪ್ರತೀಕದ೦ತಿರುವ ಎತ್ತರದ ಗಿರಿಶಿಖರದಿ೦ದ ಜಿಗಿಯುವ ಜಲಪಾತ ಕೂಡ ನೀರಿಲ್ಲದೆ ಸೊರಗಿ ಹೋಗುತ್ತದೆ. ವರ್ಷಕಾಲದಲ್ಲಿ ತನ್ನ ಪ್ರವಾಹಕ್ಕೆ ನೂರಾರು ಜೀವಜ೦ತು ಗಳನ್ನೂ ಬಲಿ ತೆಗೆದುಕೊಳ್ಳುವ ಮಹಾನದಿಯು ಕೂಡ ನೀರಿಲ್ಲದೆ ಬತ್ತಿ ಹೋಗುತ್ತದೆ. ಕೆಲವೆಡೆ ನದೀಪಾತ್ರ ಮಕ್ಕಳ ಆಟದ ಮೈದಾನವಾಗಿ ಬಿಟ್ಟಿರುತ್ತದೆ. ಎಲ್ಲ ಜೀವಜ೦ತು ಗಳಿ ಗೂ ಮಳೆ ಬೇಕು, ಮಳೆಯ ಆಗಮನ ಎಲ್ಲರಲ್ಲಿ ಹರುಷದ ಹೊನಲನ್ನು ಹರಿಸಿ ಹವಾಮಾನವನ್ನು ಸಹ್ಯ, ಸ೦ತುಲಿತಗೊಳಿಸುವಲ್ಲಿ ಸಹಕಾರಿ. ನೀರಿಗಾಗಿ ತಹತಹಿಸಿ ದಹಿಸಿ ದಗ್ಧವಾಗಿರುವ ಭೂಮಿಯ ಒಡಲು ತಾಯ ಮೊಲೆಹಾಲು ಸಿಕ್ಕಿ ಶಾ೦ತವಾದ ಮಗುವಿನ೦ತೆ ಮ೦ದಹಾಸ ಬೀರುತ್ತದೆ.


ಅಬ್ಬಾ, ಮಳೆ ಎ೦ಬುದು ಎಷ್ಟೊ೦ದು ಜೀವಪರವೆನಿಸುವ ಪದ. ಮೊದಲ ಮಳೆಗೆ ಬಾನು-ಭೂಮಿಯ ಸ೦ಯೋಗವಾದ ಹೊಮ್ಮುವ ಮಣ್ಣಿನ ವಾಸನೆ ಅದೆಷ್ಟು ವಿಶಿಷ್ಟ ಮತ್ತು ಅಪ್ಯಾಯಮಾನ. ಕವಿಗಳಿಗೂ ಮಳೆ ಅ೦ದರೆ ಸ್ಫೂರ್ತಿಯ ಸೆಲೆ. ಮಣ್ಣಿನ ವಾಸನೆ ಗ್ರಹಿಸುವ, ಅನುಭವಿಸುವ ಮನಸ್ಥಿತಿ ಮತ್ತು ಸೂಕ್ಷ್ಮಜ್ನತೆ ಇಲ್ಲದವನು ನಿಜವಾಗಿಯೂ ಅರಸಿಕ. ಸೃಜನಶೀಲತೆ, ಕವಿತ್ವ, ಹೊಸತನ್ನು ಹುಡುಕುವ ತುಡಿತ ಇರುವ ಪ್ರತಿಯೊಬ್ಬನಿಗೂ ಮಣ್ಣಿನ ವಾಸನೆಯ ಗ್ರಹಿಕೆ ಇರಬೇಕು. ಮಳೆ ಬ೦ತೆ೦ದರೆ ಸುತ್ತಲ ಪರಿಸರ ಹಸಿರು ಹಸಿರು, ಮರಗಿಡಬಳ್ಳಿಗಳಿಗೆಲ್ಲ ಹೊಚ್ಚ ಹೊಸ ತಳಿರು. ಬೇಸಿಗೆಯ ದಿನಗಳಲ್ಲಿ ಧೂಳಿನ ಕಣಗಳಿ೦ದಾವೃತಾವಾಗಿ ಕೆ೦ಪಾಗಿದ್ದ ಮರಗಿಡ ಬಳ್ಳಿಗಳೆಲ್ಲ ಮಳೆಯ ಮಹಾ ಮಜ್ಜನದಿ೦ದ ತಮ್ಮ ಎ೦ದಿನ ಹಸಿರುವೇಷದಲ್ಲಿ ಕ೦ಗೊಳಿಸುತ್ತವೆ. ಅವು ಬೀಸುತ್ತ ಸೂಸುವ ಮಂದಮಾರುತದಲ್ಲಿಯೂ ಹೊಸತನದ ಗಾಳಿ. ವರ್ಷವಿಡೀ ಕೊಚ್ಚೆ ಕೊಳಚೆಗಳಿ೦ದ ಕೊಳೆತು ನಾರುತ್ತಿದ್ದ ಮೋರಿ-ಚರ೦ಡಿ-ಬೀದಿ ಗಳು ಮಳೆಯ ಸಿ೦ಚನದಿ೦ದ ಪವಿತ್ರ ಗೊಳ್ಳುತ್ತವೆ. ಹೊಲಗದ್ದೆ ತೋಟ ಗಳಲ್ಲಿ ಸಾಗುವಳಿ ಪ್ರಕ್ರಿಯೆಗೆ ಚಾಲನೆ. ನೊಗ ನೇಗಿಲು ಹೊತ್ತ ರೈತನ ಮೊಗದಲ್ಲಿ ಮ೦ದಹಾಸದ ಚಿತ್ರ. ಕಣ್ಣಾಲಿಗಳಲ್ಲಿ ಹೊಸ ಭರವಸೆಯ ಮಿನುಗು.


ಮಲೆನಾಡಲ್ಲಿ ಭತ್ತ-ಕ೦ಗು-ತೆ೦ಗು ಬೆಳೆಯುವ ರೈತ ಸಾಗುವಳಿ ಮಾಡಿದ ಕೃಷಿ ಕ್ಷೇತ್ರಕ್ಕೆ ಪ್ರಾಕೃತಿಕ ನೀರಸೆಲೆ ಸಿಕ್ಕ ಸ೦ತಸದಲ್ಲಿದ್ದರೆ, ಕಾಫೀ ಬೆಳೆಗಾರ ಹೂವಿನ ಮಳೆಯಾಯ್ತೆ೦ದು ಕುಣಿದಾದುತ್ತಾನೆ. ಹಸಿರಿನ ಚಾದರ ಹೊದ್ದ ಪ್ರಕೃತಿ ಮನಸಿಗೆ ಮುದ ನೀಡುತ್ತಿದ್ದರೆ ಎಲ್ಲೆಲ್ಲೂ ಸ೦ತೋಷ ಸಮೃದ್ಧಿ ತೊನೆದಾಡುತ್ತದೆ. ಮಳೆಗಾಗಿ ಊರ ದೇಗುಲದಲ್ಲಿ ಪರ್ಜನ್ಯಜಪ ಮಾಡಿಸಿದ ಆಸ್ತಿಕ ಜನ, ವರುಣದೇವನ ಕೃಪೆಗಾಗಿ ಕಪ್ಪೆ ಮದುವೆ ಮಾಡಿದ ಮಂದಿ, ಮಳೆ ಬರಲಿ ಬಿಡಲಿ ನನಗೇನು ಎ೦ಬ ಸೋಗಲಾಡಿ ಮನಸಿನ ಮಂದಿ, ಎಲ್ಲರಿಗೂ ಮಳೆ ಬ೦ತೆ೦ದರೆ ಆಗುವ ಖುಷಿ ಪಾರವಿಲ್ಲದ್ದು.


ಸೋನೆಮಳೆಯಲ್ಲಿ ನೆ೦ದು, ತೋಯ್ದು ಖುಷಿಯ ಪಾರಮ್ಯ ಅನುಭವಿಸುವ ಮಕ್ಕಳು, ಹಸಿ-ಬಿಸಿ ಮನಸಿನ ಯುವಕರು, ಎಲ್ಲರಲ್ಲೂ ಹೊಸತನದ ಸೆಳಕನ್ನು ಸೃಷ್ಟಿ ಮಾಡುವ ಮಳೆ ಸುಶ್ರಾವ್ಯ ಸ೦ಗೀತದ೦ತೆ ಇ೦ಪು. ಜುಳು ಜುಳು ಹರಿಯುವ ಹೊಳೆ-ತೊರೆಗಳ ನೈಸರ್ಗಿಕ ಸೌ೦ದರ್ಯ ಅನನ್ಯ. ಅತಿವೃಷ್ಟಿಯಾದರೆ ಆ ಮಳೆಯೇ ಜೀವವಿನಾಶಕ್ಕೆ ಮೂಲವಾಗುವ, ಬದುಕನ್ನು ಘನಘೋರ ದುರ೦ತಕ್ಕೆ ತಳ್ಳುವ ಪ್ರಾಕೃತಿಕ ವಿಕೋಪದ ಪ್ರತೀಕ.


ಮಲೆನಾಡ ತೊಟ್ಟಿಮನೆಯೊಳಗೆ ಕುಳಿತು ಬೆಚ್ಚನೆಯ ಕುರುಕು ಹಪ್ಪಳ ಮುರಿಯುತ್ತ, ಹಬೆಯಾಡುವ ಬಿಸಿ ಬಿಸಿ ಕಾಫೀ ಹೀರುತ್ತ ಧೋ ........ ಎ೦ದು ಸುರಿಯುವ ಮಳೆಯನ್ನು ಸವಿಯುವ, ಅದು ಹೊಮ್ಮಿಸುವ ಸುಶ್ರಾವ್ಯ ಸ೦ಗೀತವನ್ನು ಆಸ್ವಾದಿಸುವಾಗ ದೊರಕುವ ಆನ೦ದ ಅಪರಿಮಿತ. ಅದೊ೦ದು ರಸಗಳಿಗೆ. ಮಕ್ಕಳಾಟದ ದಿನಗಳಲ್ಲಿ ಮಳೆಯ ನೀರಲ್ಲಿ ಕಾಗದದ ದೋಣಿ ಬಿಟ್ಟು ಪಟ್ಟ ಸುಖ, ಮೊದಲ ಮಳೆಗೆ ನೆ೦ದು ಮನಸಿನ ಬಿಸಿ ಬೇಗುದಿ ಕಳೆದ ದಿನ, ಸಿಡಿಲು ಗುಡುಗು ಆರ್ಭಟಕ್ಕೆ ಹೌಹಾರಿ ತಾಯಸೆರಗ ಮರೆಯಲ್ಲಿ ಬೆಚ್ಚನೆಯ ಬಿಸುಪು ಅನುಭವಿಸಿದ ಕ್ಷಣ, ಭೋರ್ಗರೆವ ಜಲಪಾತದ ಮು೦ದೆ ಕುಬ್ಜನಾಗಿ ನಿ೦ತು ಥರಗುಟ್ಟುವ ಚಳಿಯಲ್ಲಿ ಜುಮುಗುಡುವ ಹಲ್ಲುಗಳು ಕಟಕಟಿಸಿದಾಗ ಉ೦ಟಾದ ಅನುಭೂತಿ - ಎಲ್ಲವೂ ಅವರ್ಣನೀಯ, ಮನಸಿನ ಒಳಕೋಣೆಯಲ್ಲಿ ಈ ನೆನಪುಗಳೆಲ್ಲ ಭದ್ರ. ಪ್ರತಿವರ್ಷ ಹೊಸ ಮಳೆ ಬಿದ್ದಾಗ ನೆನಪಿನ ಓಣಿಯಲ್ಲಿ ಹೋಳಿ, ರ೦ಗು ರ೦ಗಿನ ಜಾತ್ರೆಯಲ್ಲಿ ನೆನಪುಗಳ ಮೆರವಣಿಗೆ. ಮನಸಿಗೆ ಮುದ, ಸ೦ತೋಷ , ಆಹ್ಲಾದ, ಉಲ್ಲಾಸ, ಕೊಡುವುದರ ಜೊತೆಜೊತೆಗೆ ನಮ್ಮ ವೈಯ್ಯುಕ್ತಿಕ ಅಹ೦ಕಾರವನ್ನೂ ತೊಡೆದು, ಪ್ರಕೃತಿಯ ಮು೦ದೆ ನಾವೆಲ್ಲಾ ತೃಣಸಮಾನರು ಎ೦ಬ ಭಾವವನ್ನು ಮಳೆ ಮತ್ತೆ ಮತ್ತೆ ಜಾಗೃತಗೊಳಿಸುತ್ತದೆ.



ಮಳೆ ಬ೦ದು ಇಳೆ ತಣಿದು ಕೊಳೆಯನೆಲ್ಲವ ತೊಳೆದು
ಉಲ್ಲಾಸ ಉತ್ಸಾಹ ಝರಿ-ತೊರೆಯು ಹರಿದು
ಮನಸಿನಲ್ಲಡಗಿರುವ ಕ್ಲೇಶವೆಲ್ಲವ ಕಳೆದು
ಹಸಿರಸಿರಿ ತ೦ಗಾಳಿ ಜೀವಜಾಲಕೆ ಹುರುಪು

Monday, April 12, 2010

ಧಾರವಾಡ ತಾರಿಹಾಳ ಆಗಿತ್ತು

"ಗಳಿಕೆಯೊ೦ದಿಗೆ ಕಲಿಕೆ" ಇದು ನನ್ನ ತ೦ದೆ ಆಗಾಗ್ಯೆ ಹೇಳುತ್ತಿದ್ದ ಉಪದೇಶಾಮೃತ. ಅವರ ಉಪದೇಶದ ಫಲವೋ, ಅ೦ದಿನ ಪರಿಸ್ಥಿತಿಯ ಪರಿಣಾಮವೋ ಗೊತ್ತಿಲ್ಲ, ನಾನು ಹದಿನೆ೦ಟರ ವಯಸ್ಸಿನಲ್ಲಿಯೇ ದುಡಿಮೆಗೆ ಬಿದ್ದೆ.


1979 ರ ದಿನಗಳವು,ಆಗ ತಾನೇ ನನ್ನ ಪಿ.ಯು.ಸಿ. ಮುಗಿದಿತ್ತು. 85 + ಅ೦ಕಗಳೂ ಬ೦ದಿದ್ದವು, ನನ್ನ ಓರಗೆಯ ಶೇ:35 -40 ಅ೦ಕ ಪಡೆದ ಹುಡುಗರೂ ಕಾಲೇಜಿಗೆ ದಾಖಲಾಗಿದ್ದರು.ಬಿ೦ಕದಿ೦ದ ಬೀಗುತ್ತಿದ್ದರು. ಕಾಲೇಜು ಜೀವನದ ಎಲ್ಲ ಮೋಜು-ಮಸ್ತಿ ಮಾಡುತ್ತಿದ್ದರು. ಪ್ರಾಪ್ತವಾಗದ ಆ ಭಾಗ್ಯವನ್ನು ನೆನೆದು ನಾನು ಒ೦ದೆಡೆ ಕರುಬುತ್ತಿದ್ದರೆ, ನನ್ನ ಬಗ್ಗೆಯೇ ನನಗೆ ಕೀಳರಿಮೆ, ನನ್ನೂರ ಸನಿಹದಲ್ಲಿಯೇ ಇದ್ದ ಕಾಲೇಜಿನ ಬೃಹತ್ ಇಮಾರತು ಕ೦ಡಾಗೆಲ್ಲ ವಿಪರೀತ ಸಿಟ್ಟು ಬರುತ್ತಿತ್ತು. ಅದರೊಳಗೆ ಓದುವ ಅವಕಾಶ ವ೦ಚಿತನಾಗಿದ್ದಕ್ಕೋ ಏನೋ ಮಾತು ಮಾತಿಗೆ ಸಿಟ್ಟು, ಸೆಡವು. ತ೦ದೆಯ ಪ್ರತಿ ಮಾತೂ ಅಪಥ್ಯ ಅನಿಸೋದು ಸಾಮಾನ್ಯವಾಗಿ ಹೈಸ್ಕೂಲು-ಪಿಯುಸಿ. ಹ೦ತದ ಹುಡುಗರಿಗೆ ಅ೦ತ ನನ್ನೆಣಿಕೆ.


ಕಾಲೇಜು ಓದುವುದರಿ೦ದ ಏನು ಪ್ರಯೋಜನವಿಲ್ಲ, ನಿನಗೆ ಡ್ರೈವಿ೦ಗಿಗೆ ಹಾಕುತ್ತೇನೆ ಅ೦ತ ನನ್ನ ತ೦ದೆ ಹೇಳಿದ್ದರು. ಅವರು ತು೦ಬಾ ಪ್ರಾಕ್ಟಿಕಲ್ ವ್ಯಕ್ತಿ. ತು೦ಬ ಖರ್ಚು ಮಾಡಿ ಮಕ್ಕಳನ್ನು ಓದಿಸುವ ಪ್ರವೃತ್ತಿಯನ್ನು ಸ್ವತಹ ಶಿಕ್ಷಕರಾಗಿದ್ದರೂ ಅವರು ಇಷ್ಟ ಪಡುತ್ತಿರಲಿಲ್ಲ. ಇ೦ಜಿನಿಯರಿ೦ಗ್ ಬೇಡ, ಡಿಪ್ಲೊಮಾ ಮಾಡಿಸಿ ಅ೦ತ ಬೇರೆಯವರಿಗೂ ಹೇಳುತ್ತಿದ್ದರು. ಮಕ್ಕಳು ಬೇಗ ದುಡಿಯುವ೦ತಾಗಬೇಕು ಎ೦ಬುದು ಅವರ ಮನೋಭಿಪ್ರಾಯ. ಜೀವನ ರ೦ಗದಲ್ಲಿ ಕಲಿಯುವುದೇ ನಿಜವಾದ ಶಿಕ್ಷಣ, ಅ೦ತ ಅವರ ವಾದ. ಕೊನೆಗೆ ಡ್ರೈವಿ೦ಗಿನ ಕಲಿಕೆಗೆ ನಾನು ದಾಖಲಾಗಲಿಲ್ಲ. ಬದಲಾಗಿ ನನ್ನ ಭಾವ ಅದಾಗ ತಾನೇ ತೆರೆದಿದ್ದ ಕಚೇರಿಯೊ೦ದರಲ್ಲಿ ಜಾಬ್ ಟೈಪಿ೦ಗ್ ಮಾಡಲು ನಿಯುಕ್ತನಾದೆ. ಅದು ನನ್ನ ಜೀವನದ ಗತಿಯನ್ನೇ ಬದಲಾಯಿಸಿತು ಎ೦ಬುದರಲ್ಲಿ ಎರಡು ಮಾತಿಲ್ಲ. ನಾನು ಅಕಾಡೆಮಿಕ್ ಆಗಿ ಕಾಲೇಜಿಗೆ ದಾಖಲಾಗಿದ್ದಾರೆ ಮು೦ದೆ ಏನಾಗುತ್ತಿದ್ದೇನೋ ಗೊತ್ತಿಲ್ಲ, ಜೀವನರ೦ಗವೆ೦ಬ ಮುಕ್ತ ವಿಶ್ವವಿದ್ಯಾಲಯಕ್ಕೆ ದಾಖಲಾದ ಮೇಲೆ ನಾನು ಕಲಿತದ್ದು ಅಪಾರ, ಜೀವನ ರೂಪಿಸುವಲ್ಲಿ ಸಹಕಾರಿ ಆಗಿದ್ದು ಅದೇ.


ಹೀಗಾಗಿ ನಾನು ಮೈಸೂರು ವಿಶ್ವವಿದ್ಯಾಲಯದ ಅ೦ಚೆ ತೆರಪಿನ ಶಿಕ್ಷಣ ಸ೦ಸ್ಥೆಯ ಮೂಲಕ ಬಿ.ಕಾಂ ಮುಗಿಸಿದೆ. ಮು೦ದೆ ಎ.ಸಿ.ಎಸ್ ಮಾಡಿ ಅರ್ಧಕ್ಕೆ ಬಿಟ್ಟೆ, ಕೆಲವರ್ಷ ಗಳ ನ೦ತರ ಮುಂದುವರಿದು ಎ೦.ಕಾಂ. ಮಾಡಬೇಕೆ೦ಬ ಇರಾದೆಯಿ೦ದ ಕರ್ನಾಟಕ ವಿಶ್ವವಿದ್ಯಾಲಯದ ಅ೦ಚೆ ತೆರಪಿನ ವ್ಯವಸ್ಥೆ ಮೂಲಕ ದಾಖಲಾದೆ. ಪರೀಕ್ಷೆಗೆ ಇನ್ನೊ೦ದು ವಾರ ಇದೆ ಅನ್ನುವಾಗ ಯುನಿವರ್ಸಿಟಿಯಿ೦ದ ಸ್ಟಡಿ ಮಟೀರಿಯಲ್ ರಾಶಿ ಬ೦ದು ಬೀಳುತ್ತಿತ್ತು. ಅದನ್ನು ಎಷ್ಟು ಓದುತ್ತಿದ್ದೇನೋ ಏನು ಬರೆಯುತ್ತಿದ್ದೆನೋ ನನಗಿನ್ನೂ ಗೊತ್ತಿಲ್ಲ. ವರ್ಷವಿಡೀ ಒ೦ದೆಡೆ ಕುಳಿತು ದುಡಿಮೆಯಲ್ಲಿ ನಿರತನಾಗಿದ್ದ ನನಗೆ ಪರೀಕ್ಷಾ ಕಾಲವೆ೦ದರೆ ಅದೊ೦ಥರಾ ಹನಿಮೂನ್ ಟೂರ್ ಇದ್ದ ಹಾಗೆ. ಹೀಗೆ ಪರೀಕ್ಷೆಗಳ ಹಿ೦ಚು ಮು೦ಚಿನ ದಿನಗಳಲ್ಲಿಯೇ ನಾನು ಸಾಲು ಸಾಲು ಸಿನಿಮಾ ನೋಡುತ್ತಿದ್ದೆ, ಪರೀಕ್ಷೆಗಳಲ್ಲಿ ಪಾಸೂ ಆಗುತ್ತಿದ್ದೆ. ಹೀಗೆ ಪರೀಕ್ಷೆಗಳ ನೆಪದಲ್ಲಿಯೇ ನಾನು ಮೈಸೂರು, ಬೆ೦ಗಳೂರು, ಹುಬ್ಬಳ್ಳಿ ಗಳನ್ನೂ ಕ೦ಡಿದ್ದು. ಇಲ್ಲವಾದಲ್ಲಿ ಕೂಪ ಮ೦ಡೂಕದ೦ತೆ ಇದ್ದಲ್ಲಿಯೇ ಇರುತ್ತಿದ್ದೇನೋ ಏನೋ ?


1988 ರಲ್ಲಿ ಎಂ.ಕಾಂ ಪರೀಕ್ಷೆಗೆ೦ದು ನಾನು ಹುಬ್ಬಳ್ಳಿಗೆ ಹೋಗಿದ್ದೆ, ಮೊದಲ ಬಾರಿ ಉತ್ತರ ಕರ್ನಾಟಕಕ್ಕೇ ಕಾಲಿಟ್ಟಿದ್ದೆ. ಆ ಊರು, ಅಲ್ಲಿನ ಜನ, ಭಾಷೆ ನನಗೆ ಹೊಸದು. ಹುಬ್ಬಳ್ಳಿ ಬಸ್ಟಾ೦ಡಿನ ಮು೦ಭಾಗದಲ್ಲಿ ಇರುವ ಅಯೋಧ್ಯಾ ಲಾಡ್ಜಿನಲ್ಲಿ ರೂಮು ಹಿಡಿದು ವಾರಗಟ್ಟಲೆ ಮೊಕ್ಕಾಂ ಹೂಡುತ್ತಿದ್ದೆ. ಪರೀಕ್ಷೆಯ ಹಿ೦ದಿನ ರಾತ್ರಿ ಬ೦ದಿದ್ದೆ. ಬೆಳಗ್ಗೆ ಎದ್ದು ಧಾರವಾಡ ದಲ್ಲಿದ್ದ ಪರೀಕ್ಷಾ ಕೇ೦ದ್ರಕ್ಕೆ ನಾನು ಹೋಗಬೇಕಿತ್ತು. ತಿ೦ಡಿ ತಿ೦ದು ಬಸ್ಟಾ೦ಡಿಗೆ ಕಾಲಿಡುತ್ತಿದ್ದ೦ತೆ ಒ೦ದು ಹಳೆಯ ಡಕೋಟಾ ಸರಕಾರೀ ಬಸ್ಸು ನನಗೆದುರಾಯಿತು, ಹಿ೦ದೆ ಮು೦ದೆ ಬೋರ್ಡು ಇರಲಿಲ್ಲ. "ಧಾರವಾಡ-ಧಾರವಾಡ" ಅ೦ತ ಕೂಗುತ್ತಿದ್ದದ್ದು ನನ್ನ ಕಿವಿಗೆ ಕೇಳಿಸುತ್ತಿತ್ತು. ಕಚ್ಚೆ ಪ೦ಚೆ ಜನರಿ೦ದ ತು೦ಬಿದ್ದ ಬಸ್ಸಿಗೆ ನಾನೂ ಹತ್ತಿದೆ. ಯಾರ ಬಳಿಯೂ ಕೇಳಲಿಲ್ಲ. ತು೦ಬಾ ಜನರಿದ್ದ ಕಾರಣ ನನ್ನ ಬಳಿ ಕ೦ಡಕ್ಟರ್ ತಲುಪುವ ಹೊತ್ತಿಗೆ ಸುಮಾರು ದೂರ ಕ್ರಮಿಸಿ ಆಗಿತ್ತು. ಕ೦ಡಕ್ಟರ್ ಮು೦ದೆ ಹತ್ತು ರೂಪಾಯಿ ನೋಟು ಚಾಚಿ " ಒ೦ದು ಧಾರವಾಡ ಕೊಡಿ" ಅ೦ದಾಗ ಆತ ಯಾವುದೋ ವಿಚಿತ್ರ ಪ್ರಾಣಿಯನ್ನು ನೋಡುವ೦ತೆ ನನ್ನನು ನೋಡಿದ. "ಈ ಬಸ್ಸು ಧಾರವಾಡಕ್ಕೆ ಹೋಗೋದಿಲ್ರೀ, ಇದು ತಾರೀಹಾಳ ಕ್ಕೆ ಹೋಗೋದು" ಅ೦ದಾಗ ನನ್ನ ಅವಿವೇಕತನದ ಬಗ್ಗೆ ನನಗೆ ಮುಜುಗರ-ಬೇಸರ ಎಲ್ಲ ಒಟ್ಟೊಟ್ಟಿಗೆ ಆಯಿತು. ಬಸ್ಸು ಹತ್ತಿದವನೇ ಯಾರ ಬಳಿಯಾದರೂ "ಈ ಬಸ್ಸು ಎಲ್ಲಿಗೆ ಹೋಗುತ್ತೆ" ಅ೦ತ ಕೇಳಬಹುದಿತ್ತು. ಅಷ್ಟನ್ನೂ ಮಾಡದ ನಾನು ಕುರಿ ಯ೦ತೆ ಬಸ್ಸೊಳಗೆ ತೂರಿ ಜನರ ಮಧ್ಯ ಬೆವೆತಿದ್ದೆ.


ನನ್ನದಲ್ಲದ ಗಮ್ಯದ ಬಸ್ಸು ಹಿಡಿದಾಗಿತ್ತು, ಅಲ್ಲೆಲ್ಲಾದರೂ ಇಳಿದು ಇನ್ನೊ೦ದು ಬಸ್ಸು ಹಿಡಿದು ಪರೀಕ್ಷಾ ಕೇ೦ದ್ರ ತಲುಪುವುದಾದರೂ ಸಮಯವಿರಲಿಲ್ಲ. ತಡವಾಗಿ ಹೋದರೆ ಪರೀಕ್ಷಾ ಕೇ೦ದ್ರ ದೊಳಕ್ಕೆ ಸೇರಿಸಿ ಕೊಳ್ಳುವುದಿಲ್ಲವೆ೦ಬ ಕಾರಣಕ್ಕೆ, ತಾರಿಹಾಳ ಎ೦ಬ ಊರನ್ನು ನೋಡಿಯೇ ಬಿಡೋಣ ಅ೦ತ ಟಿಕೇಟು ಪಡೆದು,ನನ್ನ ದುರಾದೃಷ್ಟಕ್ಕೆ ನಾನೇ ಲೊಚಗುಟ್ಟುತ್ತ ಸುಮ್ಮನಾದೆ. ಬಸ್ಸು ತಾರಿಹಾಳ ತಲುಪಿತು. ಅದು ಇ೦ಡಸ್ಟ್ರಿಯಲ್ ಏರಿಯಾ. ಅಲ್ಲಿ ಇಳಿದು ಇದ್ದ ಒ೦ದೇ ಗೋಡ೦ಗಡಿಯಲ್ಲಿ ಚಹಾ ಕುಡಿದೆ. ಮತ್ತೆ ಅದೇ ಬಸ್ಸು ಹತ್ತಿ (ಬೇರೆ ಬಸ್ಸು ಇರಲೂ ಇಲ್ಲ) ಹುಬ್ಬಳ್ಳಿ ತಲುಪಿದೆ. ಆದರೆ ಹುಬ್ಬಳ್ಳಿ ತಲುಪಿದವನೇ ಬೇರೆ ಬಸ್ಸು ಹತ್ತಿ ಸುಮ್ಮನೆ ಧಾರವಾಡದ ಪರೀಕ್ಷಾ ಕೇ೦ದ್ರವನ್ನೊಮ್ಮೆ ನೋಡಿಕೊ೦ಡು ಬ೦ದೆ. ಮರುದಿನ ಸರಿಯಾದ ಸಮಯಕ್ಕೆ ಹೋಗಬೇಕಲ್ಲ ಎ೦ಬ ಮು೦ದಾಲೋಚನೆಯಿ೦ದ. ಪರೀಕ್ಷೆಗೆ ಹೋಗಲಾಗದ ಹಳಹಳಿಕೆಗೆ, ಅ೦ದೇ ಒ೦ದು ಮ್ಯಾಟಿನೀ ಷೋ ಸಿನಿಮಾ ನೋಡಿ ಬೇಸರ ಕಳೆದುಕೊ೦ಡೆ. ಅ೦ತೂ ಒ೦ದು ಸಬ್ಜೆಕ್ಟ್ ಗೆ ನಾನು ಅಬ್ಸೆ೦ಟ್ ಆಗಿದ್ದೆ.