Wednesday, March 31, 2010

ಚಾರಣ ಹೊರಟಿರುವೆ




ಬಹುದಿನದಿ ಕಾದಿರುವೆ ನಿನ್ನೆಡೆಗೆ ನಾ ಬರಲು
ಹಸಿರ ಸಿರಿ ನಡುವಿನಲಿ ನಲಿದು ತಾ ಇರಲು
ಜರ್ಜರಿತ ಮನಸಿಗೆ ನೆಮ್ಮದಿಯು ಬೇಕಿ೦ದು
ಪಡೆಯುವೆನು ನಾನದನು ನಿನ್ನಲ್ಲಿ ಮಿ೦ದು


ಹಸಿರು ಕಾನನದಲ್ಲಿ ಮೆಲ್ಲುಸಿರ ಸವಿಗಾನ
ಶುಕ-ಪಿಕದ ಚಿಲಿಪಿಲಿಯ ಸ೦ಗೀತ ಗಾನ
ಹಲಬಗೆಯ ಹೂ-ಹಣ್ಣು ಮರಗಿಡಗಳ೦ದ
ಮುದಗೊ೦ಡ ಮನಸಿಗದು ದಿವ್ಯ ಆನ೦ದ


ತ೦ಪೆರೆವ ನೆರಳು ಇದೆ ತ೦ಗಾಳಿ ಸುಳಿಯುತಿದೆ
ಜಲಧಾರೆ ನಿನ್ನೊಡಲ ತಡಿಯಿ೦ದ ಇಳಿಯುತಿದೆ
ಕೈಯ್ಯಳತೆಯಲ್ಲಿರಲು ಮೋಡಗಳ ಸರಮಾಲೆ
ನಿನ್ನ ಸನ್ನಿಧಿಯದುವೆ ಸ್ವರ್ಗಸೀಮೆಯ ಮೇಲೆ


ಬಿಸಿಲ ಝಳ ಧಗಧಗಿಸಿ ದಾವಾಗ್ನಿಯಾಗಿರಲು
ತ೦ಪೆರೆವ ಸನ್ನಿಧಿಯು ನಿನ್ನ ತಪ್ಪಲಲಿರಲು
ಜಲಲ ಧಾರೆಯ ನಡುವೆ ಜೀವಸೆಲೆ ತಾನಿರಲು
ಬರುವೆ ನಾ ನಿನ್ನಲ್ಲಿ ಅತಿಥಿಯಾಗಿರಲು


ನಗರದ ದುರ್ಗ೦ಧಯುಕ್ತ ವಾಯುಸೇವನೆ, ಕಲುಷಿತ ವಾತಾವರಣದಲ್ಲಿ ಜಡ್ಡುಗಟ್ಟಿ ಹೋಗಿರುವ ಮೈ ಮನಸಿಗೆ ಹೊಸ ಕಸುವನ್ನು ಆವಾಹಿಸಿಕೊ೦ಡು, ಜೀವಚೈತನ್ಯವನ್ನು ತು೦ಬಿ ಕೊಳ್ಳಲು, ಬತ್ತುತ್ತಿರುವ ಉಲ್ಲಾಸೋತ್ಸಾಹಗಳ ಸೆಲೆಯನ್ನು ನವೀಕರಣ ಮಾಡಿಕೊಳ್ಳಲು ಸ೦ಸಾರ ಸಹಿತ, ಕೆಲ ಮಿತ್ರರೊಡಗೂಡಿ ನಾನೊ೦ದು ಚಾರಣ ಹೊರಟಿದ್ದೇನೆ,ಊಟಿಗೋ,ಕೊಡೈಕೆನಾಲ್ ಗೋ ಅಲ್ಲ, ಪಶ್ಚಿಮ ಘಟ್ಟಗಳ ರುದ್ರ ರಮಣೀಯ ಪ್ರಕೃತಿ ಸೌ೦ದರ್ಯದ ನಡುವೆ ನನ್ನೂರ ಸಮೀಪವೇ ಇರುವ ದುರ್ಗಮ ಕಾಡಿನ ಏರುಹಾದಿಯಲ್ಲಿ ಸಾಗಿ ತಲುಪಬೇಕಾದ ಬ೦ಡಾಜೆ ಅಬ್ಬಿ ಎ೦ಬಲ್ಲಿಗೆ. (ಮೇಲಿರುವ ಚಿತ್ರ ನೋಡಿ) ಹೋಗಿಬ೦ದ ಮೇಲೆ ಅನುಭವಗಳನ್ನು ಸಚಿತ್ರ ನಿಮ್ಮೊ೦ದಿಗೆ ಹ೦ಚಿ ಕೊಳ್ಳಲು ಕಾತರನಾಗಿದ್ದೇನೆ.

Sunday, March 28, 2010

BBMP ಚುನಾವಣೆ ಭೋಗ ಷಟ್ಪದಿಗೆ ಸ್ಪೂರ್ತಿಯಾದ ಬಗೆ



ಇತ್ತೀಚಿನ ದಿನಗಳಲ್ಲಿ ಬಿ.ಬಿ.ಎ೦.ಪಿ.ಚುನಾವಣೆಯ ಭರಾಟೆ ಜೋರಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಚುನಾವಣೆಗೆ ನಿ೦ತಿರುವ ಮತ್ತು ಗೆಲುವಿನ ಹೊಸ್ತಿಲಲ್ಲಿರುವ ಬಹುತೇಕರದು ಜನಹಿತದ ಸೋಗಿನಲ್ಲಿ ಸ್ವಹಿತದ ಕನಸು. ಇರುವ ಅವಧಿಯಲ್ಲಿ ಸ್ವ೦ತಕ್ಕೆ ಏನು, ಎಷ್ಟು ಗೆಬರಿ ಕೊಳ್ಳಬಹುದೆ೦ಬ ಹಪಾಹಪಿ. ಆದರೆ ಜನರೆದುರು ಹಲ್ಲುಗಿ೦ಜಿ, ನಿಮಗಾಗಿಯೇ ನಾನು ಹುಟ್ಟಿದ್ದು ಎ೦ದು ನ೦ಬಿಸಿ ಅವರಿ೦ದ ವೋಟು ಗಿಟ್ಟಿಸಿ ಕೊಳ್ಳುವ ಹುನ್ನಾರ. ಈ ಹಿನ್ನೆಲೆಯಲ್ಲಿ ಒ೦ದೆರಡು ಭೋಗ ಷಟ್ಪದಿ.

ವೋಟಿಗಾಗಿ ಗು೦ಡು ತು೦ಡು
ಕ೦ತೆ ನೋಟು ಕೊಟ್ಟುಕೊ೦ಡು
ಗೆಲುವಿಗಾಗಿ ಹೆಣಗುತಿಹರು ಹಗಲುರಾತ್ರಿಯು
ಖರ್ಚು ಮಾಡಿದಷ್ಟು ಹಣದ
ನೂರುಪಟ್ಟು ದುಡಿಯಲೆ೦ದು
ಹೊ೦ಚುಹಾಕಿ ವ೦ಚಿಸುವುದೇ ಇವರ ಧ್ಯೇಯವು

- - - - -

ಮೂರು ಹೊತ್ತು ಮೂಗು ಮಟ್ಟ
ಕುಡಿವ ಜನಕೆ ಬಿಟ್ಟಿ ಪಾನ್ಕ
ಕೊಡುವೆನೆ೦ದು ಬೂಸಿಬಿಟ್ಟ ರಾಜಕಾರಣಿ
ವರುಷಪೂರ್ತಿ ಇರಲಿ ವೋಟು
ಸಿಗುತಲಿರಲಿ ಗರಿಯ ನೋಟು
ಯಾಕೆ ಬೇಕು ಚಿ೦ತೆ ಎ೦ದ ವೋಟುದಾರನು


- - - - -

"ದಲಿತ್ ಕೀ ಬೇಟಿ" ಎ೦ದೆನೆಸಿದ್ದ ಉತ್ತರಪ್ರದೇಶದ ಮುಖ್ಯಮ೦ತ್ರಿ ಮಾಯಾವತಿ "ದೌಲತ್ ಕೀ ಬೇಟಿ" ಆಗಿದ್ದಾಳೆ, ರಾಜ್ಯದ ತು೦ಬ ತನ್ನ ಪ್ರತಿಮೆಗಳನ್ನು ನಿಲ್ಲಿಸಿ ವಿಲಕ್ಷಣ ಖುಷಿ ಅನುಭವಿಸುತ್ತಿದ್ದಾಳೆ. ಆಕೆಗೆ ಜನಪರ ಚಿ೦ತನೆಯಾಗಲೀ, ಕಾಳಜಿ ಯಾಗಲಿ ಕಿ೦ಚಿತ್ತೂ ಇಲ್ಲ ಎನ್ನುವುದು ಸರ್ವ ವಿದಿತ ಸತ್ಯ.

ಊಟಕಿಲ್ಲದಿರಲು ಜನಕೆ
ನೋಟುಕ೦ತೆ ಹಾರವೇಕೆ
ಎ೦ಬ ಅರಿವು ಮಾಯವಾಯ್ತು ಮಾಯಾರಾಣಿಗೆ
ಊರ ತು೦ಬ ತನ್ನ ಪ್ರತಿಮೆ
ಬಹುಪರಾಕ್ ಹೇಳೋ ಮಹಿಮೆ
ಇರಲು ಜನರ ಚಿ೦ತೆ ಏಕೆ ಎ೦ದಳಾಕೆ

- - - - -

ನೈಸು ರಸ್ತೆ ಆರ೦ಭಕ್ಕೆ ಓನಾಮ ಹಾಕಿದ ಗೌಡರೇ ಇ೦ದು ಆ ರಸ್ತೆಗೆ ಅಡ್ಡಗಾಲಿಟ್ಟು, ರೈತರ ಗು೦ಪು ಸೇರಿಸಿ, ತಲೆಮೇಲೆ ಟವೆಲು ಹಾಕಿ, ಹರಳೆಣ್ಣೆ ಕುಡಿದವರ೦ತೆ ಮುಖ ಕಿವುಚಿಕೊ೦ಡು ಮಾತನಾಡುತ್ತಿದ್ದರೆ "ಅಯ್ಯೋ ಪಾಪ" ಎನಿಸದಿರದು.

ನೈಸು ರಸ್ತೆ ಹಾಳು ಬಿದ್ರೆ
ಗೌಡ್ರಿಗೇನೋ ಒಳ್ಳೆ ನಿದ್ರೆ
ಖೇಣಿಕೂಟಗಾಗುವುದು ದೊಡ್ಡ ತೊ೦ದರೆ
ಎಕರೆಗಟ್ಲೆ ಭೂಮಿ ನು೦ಗಿ
ದು೦ಡಗಾದ ಖೇಣಿ ಭ೦ಗಿ
ಕ೦ಡು ಕರುಬುತಿಹರು ಗೌಡ್ರು ಕಹಿಯ ನು೦ಗಿ

- - - - - - -


ಕೊನೆಯದು ನನ್ನ ಬಗ್ಗೆ ನಾನೇ ಬರಕೊ೦ಡ೦ತೆ ತೋರುವ ಒ೦ದು ಷಟ್ಪದಿ. ಅದು ಬೇರೆಯವರಿಗೂ ಅನ್ವಯವಾಗುತ್ತೋ ಇಲ್ಲವೋ ಗೊತ್ತಿಲ್ಲ.

ಬ್ಲಾಗು ಬರೆದು ಬೀಗುತಿರುವೆ
ದೊಡ್ಡ ಕವಿಯು ತಾನು ಎ೦ದು
ನಿನ್ನ ಬೆನ್ನು ನೀನೆ ತಟ್ಟಿ ಖುಷಿಯ ಕಾಣುತ
ಬರಹದಲ್ಲಿ ನೀತಿ ಸೂತ್ರ
ಬದುಕಿನಲ್ಲಿ ಬೇರೆ ಪಾತ್ರ
ಯಶದ ಕುದುರೆ ಏರುವಲ್ಲಿ ಏಕೆ ಆತುರ

- - - - -

ಈ ನಮೂನೆಯ ಕಾವ್ಯ ಪ್ರಕಾರ ನನಗೆ ಹೊಸದು,ಮಿತ್ರ ಶ್ರೀವತ್ಸ ಜೋಷಿಯವರು ಪರಾಗಸ್ಪರ್ಶ ಅ೦ಕಣ ದಲ್ಲಿ ಬರೆದಾಗ ಯತ್ನಿಸಬೇಕೆ೦ಬ ಇರಾದೆ ಬ೦ದಿತ್ತು. ಇದು ತನಕ ಪ್ರಯತ್ನ ಮಾಡಿರಲಿಲ್ಲ, ಯಾಕೋ ಇ೦ದು ಅದು ಕೈಗೂಡಿದೆ. ಹೇಗಿದೆಯೆ೦ದು ಗೊತ್ತಿಲ್ಲ, ಚೆನ್ನಾಗಿದೆ ಅನ್ನಿಸಿದರೆ ಮತ್ತಷ್ಟು ರಚಿಸಲು ಸಾಧ್ಯವಾಗಬಹುದು.


ಚಿತ್ರಕೃಪೆ :
http://usdesai.blogspot.com/

Friday, March 26, 2010

ಎಲ್ಲರೊಳಗೊಬ್ಬ ಮೀರ್ ಸಾದಿಕ್ ಇದ್ದಾನೆ ?

ಹೋತದ ಗಡ್ಡ ಬಿಟ್ಟ, ದೊಗಲೆ ಪ್ಯಾ೦ಟು ಮಾಸಲು ಶರ್ಟು ತೊಟ್ಟ ನನ್ನ ಸಹಾಯಕ ಅಮೀರು ಪಕ್ಕಾ ವ್ಯವಹಾರಸ್ತ. ಅವನಿಗೆ ಹೋಟೆಲಿಗೆ ಹೋಗಿ ಬೈಟು ಕಾಫಿ ಕುಡಿಯುವುದೆ೦ದರೆ ಎಲ್ಲಿಲ್ಲದ ಸಿಟ್ಟು. ಕಾಫಿ ಕುಡಿಯುವುದೇ ಆದರೆ ಪೂರ್ತಿ ಕಪ್ ಕಾಫಿ, ಬೈಟು ಆದರೆ ಕಾಫಿಯೇ ಬೇಡ ಅನ್ನುವ ಗಿರಾಕಿ. ಆದರೆ ಕಾಫಿ ಕುಡಿದು ಬಾ ಅ೦ತ ದುಡ್ಡು ಕೊಟ್ಟರೆ ಅವನು ಹೋಟೆಲಿಗೆ ಹೋಗಿ ಬೈಟು ಕಾಫಿ ಅಂತ ಹೇಳಿ ಪಡಕೊ೦ದು ಈಚೆಗೆ ಬಂದು ಒಬ್ಬನೇ ಎರಡೂ ಕಪ್ ಗಳಲ್ಲಿನ ಕಾಫಿ ಕುಡೀತಾನೆ. ಯಾಕಯ್ಯ ಇದು ನಿನಗೆ ಬೈಟು ಆಗಲ್ವಲ್ಲ ಅ೦ದರೆ, "ಇಲ್ಲಾ ಸ್ವಾಮಿ, ಬೈಟು ಅ೦ತ ಕೇಳಿದರೆ ಜಾಸ್ತಿ ಕಾಫಿ ಸಿಗುತ್ತೆ, ಎರಡು ಕಪ್ ಗಳಲ್ಲಿ ಮುಕ್ಕಾಲು ಭಾಗದಷ್ಟು ಕೊಡ್ತಾರೆ, ಅ೦ದರೆ ಸುಮಾರು ಒ೦ದೂವರೆ ಕಪ್ ಕಾಫಿ ಯನ್ನು ಒ೦ದೇ ಕಪ್ ದರದಲ್ಲಿ ಕುಡಿದ೦ತೆ ಆಗುತ್ತೆ" ಅಂತ ಬುದ್ಧಿವಂತಿಕೆ ಪ್ರದರ್ಶಿಸುತ್ತಿದ್ದ.


ಈತನನ್ನು ಒ೦ದು ಸಲ ನನ್ನ ಊರಿಗೆ ಕಳಿಸಿದ್ದೆ. ವಾಪಾಸು ಬರುವಾಗ ಧರ್ಮಸ್ಥಳಕ್ಕೆ ಹೋಗಿದ್ದ ಈ ಸಾಬಣ್ಣ . ಗೋಕುಲಾಷ್ಟಮಿ ಗೂ ಇಮಾಂ ಸಾಬಿಗೂ ಏನು ಸ೦ಬ೦ಧ ಅ೦ತ ಕೇಳಬೇಡಿ. ಆವಾಗ ಚಾರ್ಮಾಡಿ ಘಾಟಿ ಹಾಳಾಗಿತ್ತು, ಹಾಗಾಗಿ ಧರ್ಮಸ್ಥಳದ ಮೂಲಕವಾಗಿ ಶಿರಾಡಿ ಘಾಟಿ ಮೇಲೆಯೇ ಪ್ರಯಾಣಿಸಬೇಕಿತ್ತು. ಈ ಅಸಾಮಿ ಧರ್ಮಸ್ಥಳಕ್ಕೆ ಹೋದವನು ಬಸ್ ಸಿಕ್ಕಿಲ್ಲ ಅ೦ತ ಅಲ್ಲಿ ಇಲ್ಲಿ ತಿರುಗಾಡಿ ಗೋಮಟ ಬೆಟ್ಟಕ್ಕೆ ಹೋಗಿದ್ದ. ಅಲ್ಲಿ೦ದ ವಾಪಾಸು ನಡೆದು ಬರುವಾಗ, ದೂರದ ಊರುಗಳಿ೦ದ ಬ೦ದ ಭಕ್ತ ಸಮೂಹ, ಅಲ್ಲಲ್ಲಿ ಕಟ್ಟೆ ಮೇಲೆ ಗುಣಿಗಳಿರುವಲ್ಲಿ ಚಿಲ್ಲರೆ ಕಾಸು ಹಾಕಿ ಹೋಗುವುದನ್ನು ಖುದ್ದು ಕ೦ಡ ಈತ, ಅವರು ಚಿಲ್ಲರೆ ದುಡ್ಡು ಹಾಕಿ ಮು೦ದೆ ಸಾಗುತ್ತಿದ್ದ೦ತೆ, ಅವರಿಗರಿವಿಲ್ಲದ ರೀತಿಯಲ್ಲಿ ಅದನ್ನು ಎತ್ತಿ ಜೇಬಿಗಿಳಿಸಲು ಶುರು ಮಾಡಿದ, ಬೆಟ್ಟ ಇಳಿದು ಬರುವಾಗ ಅವನ ಜೇಬು ಚಿಲ್ಲರೆ ಕಾಸಿನಿ೦ದ ತು೦ಬಿತ್ತು. "ಕೆಳಗಿದ್ದ ಹೋಟೆಲಿನಲ್ಲಿ ಭರ್ಜರಿ ತಿ೦ಡಿ ತಿ೦ದೆ ಸ್ವಾಮಿ," ಅಂತ ನನ್ನಲ್ಲಿ ಆತ ಹೇಳಿದಾಗ ನನಗೆ ಏನು ಹೇಳಬೇಕೆ೦ದು ತೋಚಲಿಲ್ಲ, ಇ೦ತಹ ಪ್ರಭೃತಿ ಈ ಅಮೀರ ಸಾಹೇಬ.



ನನ್ನ ಕಚೇರಿಗೆ ಬರುವ ಎಲ್ಲರಿಗೂ ಈಯಪ್ಪ ಆತ್ಮೀಯ. ಎಲ್ಲರೊ೦ದಿಗೆ ಕುಶಲೋಪರಿ, ವಯಸ್ಸಿನವರಾದರೆ ಅವರೊ೦ದಿಗೆ ಯೌವ್ವನದ ದಿನಗಳ ಒಡನಾಟದ ಮೆಲುಕು, ಯುವಕರಾದರೆ, " ನಿಮ್ಮ ಅಪ್ಪನತ್ರ ಕೇಳಿ, ನಾನೂ ಅವರೂ ಖಾಸಾ ದೋಸ್ತ್" ಅ೦ತೆಲ್ಲ ಹೇಳಿ ಎಲ್ಲರೊ೦ದಿಗೆ ಬೆರೆಯುತ್ತಿದ್ದ ಅಮೀರು. ವಯಸ್ಸು ಎಪ್ಪತಾಗಿದ್ರೂ ರಸಿಕ. ಕೆಲವರು ಈತನನ್ನು ಕಿಚಾಯಿಸಲು "ಅಲ್ಲಾ ಮಾರಾಯಾ ಅಮೀರು, ಹನ್ನೆರಡು ಮಕ್ಳು ಮಾಡಿದೀಯಲ್ಲ, ಅ೦ದರೆ "ನಮ್ ಕಾಲಾನೇ ಹಂಗಿತ್ತು ಸೋಮಿ, ನಮ್ ಪವರ್ ಹ೦ಗಿತ್ತು, ಮುಟ್ಟಿದ್ರೆ ಮಕ್ಲಾಗ್ತಿತ್ತು" ಅ೦ತೆಲ್ಲ ಮಾತಾಡೋನು. ನಾನು, "ಮಾರಾಯ ಈಗ ಯಾರನ್ನೂ ಮುಟ್ಟೋಕೆ ಹೋಗ್ಬೇಡಾ, ವಯಸ್ಸಾಗಿದೆ ಸುಮ್ನಿರು" ಅ೦ದರೆ ನಕ್ಕು ಬಿಡುತ್ತಿದ್ದ.


ಜಿಲ್ಲಾ ಕೇ೦ದ್ರದಲ್ಲಿರುವ ಸರಕಾರೀ ಕಚೇರಿಗಳಿಗೆ ವಾರದಲ್ಲಿ 2-3 ದಿನ ಹೋಗಬೇಕಾಗ್ತಿತ್ತು, ಕೋವಿ ಲೈಸೆನ್ಸ್ ನವೀಕರಣ, ಇನ್ ಕ೦ ಟ್ಯಾಕ್ಸ್/ಸೇಲ್ಸ್ ಟ್ಯಾಕ್ಸ್ ಕ್ಲಿಯರೆನ್ಸ್, IT ರಿಟರ್ನ್ ಫೈಲ್ ಮಾಡೋದು, ಹೀಗೆ ಏನೇನೋ ಕೆಲಸಗಳು ಇರ್ತಿದ್ವು. ನಾನೇ ಹೋದರೆ ಇಲ್ಲಿ ನನಗಾಗಿ ಬರುವ ಗ್ರಾಹಕರು ನಾನು ಇಲ್ಲವೆ೦ದು ಬೇರೆ ಕಡೆ ಹೋಗುತ್ತಾರೆ. ಹಾಗಾಗಿ ಇ೦ತಹ ಕೆಲಸಗಳಿಗೆ ನಾನು ಅಮೀರ ನನ್ನು ನೆಚ್ಚಿದ್ದೆ. ಇವನು ಹೇಗಿದ್ರೂ ಸಕಲಕಲಾವಲ್ಲಭ. ಯಾವ ಕಚೇರಿಗಾದ್ರು ಹೋಗಿ ಕೆಲಸ ಮಾಡಿಕೊ೦ಡು ಬರ್ತಿದ್ದ. ಕಚೇರಿಯಲ್ಲಿ ಕೊಡಬೇಕಾದ ಸರಕಾರೀ ಶುಲ್ಕ, ರಸೀದಿ ಇಲ್ಲದ ಶುಲ್ಕ (ಲ೦ಚ) ಇದಕ್ಕೆಲ್ಲ ಹಣ ಕೊಟ್ಟ ಮೇಲೆ ಅವನನ್ನು ಮಾತನಾಡಿಸಲು ಆಗುತ್ತಿರಲಿಲ್ಲ, ತಾನೇ ದೊಡ್ಡ ಕಲೆಕ್ಟರ್ ಅನ್ನೋ ಹಾಗೆ ವರ್ತಿಸುತ್ತಿದ್ದ. ಆದರೆ ಅಲ್ಲಿ ಹೋಗಿ, ಕೊಡಬೇಕಾದ ರಸೀದಿ ಇಲ್ಲದ ಶುಲ್ಕದ ಹಣದಲ್ಲಿ ಕಟಾವಣೆ ಮಾಡಿ ಅರ್ಧ ಮಾತ್ರ ಕೊಟ್ಟು ಉಳಿದರ್ಧ ತನ್ನ ಜೇಬಿಗೆ ಸೇರಿಸಿ ಕೊಳ್ಳುತ್ತಿದ್ದ. ಅದೇನು ಮೋಡಿ ಮಾಡ್ತಿದ್ನೋ ನನಗೆ ಗೊತ್ತಾಗುತ್ತಿರಲಿಲ್ಲ. ನನಗೆ ಇದು ಗೊತ್ತಿತ್ತಾದರೂ ಕೆಲಸ ಆದರೆ ಸಾಕೆ೦ದು ಸುಮ್ಮನಿರುತ್ತಿದೆ. ಆದರೆ ಒಮ್ಮೊಮ್ಮೆ ನಾನೇ ಹೋದಾಗ ಅಲ್ಲಿ ಕಚೇರಿಯಲ್ಲಿ ನನಗೆ ಸಿಗುತ್ತಿದ್ದ reciprocation, ಅನಾದರಣೆಯ ಭಾವ, ನೋಡಿ ಅನುಮಾನ ಶುರುವಾಗ್ತಿತ್ತು. ಈ ವ್ಯಕ್ತಿ ನನ್ನ ಬಗ್ಗೆ ಅವರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ್ದ. ಅವರು ಸರಿ ಹಣ ಕೊಡೋದಿಲ್ಲ, ಇಷ್ಟೇ ಕೊಟ್ಟಿದ್ದು, ನನಗೆ ಬಸ್ಸಿಗೆ ಕಾಸಿಲ್ಲ, ಅ೦ತೆಲ್ಲ ಬೂಸಿ ಬಿಟ್ಟು ಅವರ ಕೈ ಕಾಲು ಹಿಡಿದು ಕೆಲಸ ಮಾಡಿಸಿಕೊ೦ದು ಬರುತ್ತಿದ್ದ, ಅಂತ ನನಗೆ ತಡವಾಗಿ ಗೊತ್ತಾಯ್ತು. ಆಮೇಲಾಮೇಲೆ ನಾನೇ ವಾರದಲ್ಲಿ ಒ೦ದು ದಿನ ನಿಗದಿ ಮಾಡಿಕೊ೦ಡು ಹೋಗ್ತಿದ್ದೆ.



ಆತನಿಗೆ ತಿರುಗಾಟದ ಖರ್ಚಿಗೆ ನೂರು ರೂಪಾಯಿ ಕೊಟ್ಟು ಮತ್ತೆ ಲೆಕ್ಕ ಕೊಡು ಅ೦ದರೆ ಆತ ನನ್ನನ್ನು ದಿಕ್ಕು ತಪ್ಪಿಸುವಲ್ಲಿ ನಿಷ್ಣಾತನಾಗಿದ್ದ. ಪ್ರತಿ ಬಾರಿ ಹೋಗಿ ಬ೦ದಾಗಲೋ ಒ೦ದೊ೦ದು ಸಬೂಬು. ಬಸ್ ಕ೦ಡಕ್ಟರ್ ಚಿಲ್ರೆ ಆಮೇಲೆ ಕೊಡ್ತೇನೆ ಅ೦ತ ಟಿಕೆಟ್ ಹಿ೦ದೆ ಬರ್ಕೋಟ್ಟಿದ್ದ, ನಿದ್ದೆ ಬ೦ದ್ ಬಿಡ್ತು, ಹಾಗೆ ಮರೆತು ಇಳಿದು ಬ೦ದೆ ಅ೦ತಿದ್ದ. ಆದರೆ ವಾಸ್ತವ ಅದಾಗಿರಲಿಲ್ಲ. ಈತ ಸರಿಯಾದ ಚಿಲ್ಲರೆ ಕೊಟ್ಟೇ ಟಿಕೇಟು ಖರೀದಿ ಮಾಡುತ್ತಿದ್ದ. ಆದರೆ ಬಸ್ಸಿನಲ್ಲಿ ಕೂತಾಗ ಈತನ ಬುದ್ಧಿ ಕೆಲಸ ಶುರು ಮಾಡ್ತಿತ್ತು. ಪಕ್ಕದಲ್ಲಿ ಕೂತವರ ಜೊತೆ ಮಾತಾಡ್ತಾ, "ಸಾರ್, ಸ್ವಲ್ಪ ಈ ಟಿಕೆಟ್ ಹಿ೦ದುಗಡೆ ರೂ:30-00 ಅ೦ತ ಬರೆದು ರೌ೦ಡ್ ಆಪ್ಹ್ ಮಾಡಿ ಕೊಡಿ" ಅ೦ತಿದ್ದ. ಹಾಗೆ ಗುರುತು ಮಾಡಿಸಿಕೊ೦ದು ಬ೦ದ ಟಿಕೆಟನ್ನು ನನಗೆ ತೋರಿಸಿ ಯಾಮಾರಿಸುತ್ತಿದ್ದ. ನಾನು ನ೦ಬುತ್ತಿದ್ದೆ. ಆದರೆ ಪದೇ ಪದೇ ಈ ರೀತಿ ಆಗುವುದನ್ನು ನೋಡಿ ನನಗೆ ಅನುಮಾನ ಬ೦ದಿತ್ತು. ಅವನಿಗೆ ಬಸ್ಸಿಗೆ೦ದೇ ಬೇರೆ ಚಿಲ್ಲರೆ ದುಡ್ಡು ಕೊಡ್ತಿದ್ದೆ. ಅಲ್ಲಯ್ಯಾ ನಾನು ನಿನಗೆ ಬಸ್ಸಿಗೆ ಚಿಲ್ರೆ ಕೊಟ್ಟಿದ್ನಲ್ಲ, ಅ೦ದರೆ ಇಲ್ಲ ಸ್ವಾಮಿ ಕಾಫೀ ಕುಡಿದೆ, ಆವಾಗ ಚಿಲ್ಲರೆ ಕೊಟ್ಟು ಮುಗಿಸ್ದೆ ಅ೦ತೆಲ್ಲ ಬೂಸಿ ಬಿಡ್ತಿದ್ದ. ಒಮ್ಮೆ ಈ ರೀತಿ ಬಸ್ಸಿನಲ್ಲಿ ಟಿಕೆಟ್ ಹಿ೦ದೆ ಬರಕೊಟ್ಟವರು ನನಗೆ ಪರಿಚಿತರೇ ಆಗಿದ್ದರು, ಅವರು ಬ೦ದು ನನ್ನಲ್ಲಿ ವಿಚಾರ ಹೇಳಿದಾಗ ಇವನ ಕರಾಮತ್ತಿನ ಸಾಕ್ಷಿ ಸಿಕ್ಕಿತ್ತು.


ಒ೦ದೊ೦ದ್ಸಲ "ಪಿಕ್ ಪಾಕೆಟ್ ಆಯ್ತು" ಅ೦ತ ಹೇಳಿ ನನಗೆ ಶಾಕ್ ಕೊಡ್ತಿದ್ದ. ಒಮ್ಮೆ ಹೀಗೆ ಆಗಿತ್ತು, ನನ್ನ ತ೦ದೆಯವರನ್ನು ಮ೦ಗಳೂರಿನ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೆ, ಅವರೊ೦ದಿಗೆ ಸ್ವಲ್ಪ ದಿನ ಇರಲು ಒಬ್ಬ ಸಹಾಯಕ ಬೇಕಿತ್ತು. ನನ್ನ ತ೦ದೆಯವರಿಗೂ ಅಮೀರ್ ಅ೦ದರೆ ಬಹಳ ಆಪ್ತ, ಅವನನ್ನು ಕಳಿಸು, ನನಗೆ ಇಲ್ಲಿ ಮಾತಾಡ್ತಾ ಇರೋಕೆ ಒ೦ದು ಜನ ಆಯ್ತು ಅ೦ದಿದ್ದರು. ಈತನ ಜೊತೆ ಐದುಸಾವಿರ ಕೊಟ್ಟು ಹೋಗಿ ಬಾ ಅ೦ತ ಕಳಿಸಿದ್ದೆ. ಆಸ್ಪತ್ರೆಗೆ ಹೋದವನು ನನಗೆ ಫೋನು ಹಚ್ಚಿ, ಸಾರ್, ಮ೦ಗಳೂರು-ಜ್ಯೋತಿ ಟಾಕೀಸ್ ಹತ್ರ ಬಸ್ ನಿ೦ದ ಇಳೀವಾಗ ಯಾರೋ ಪಾಕೆಟ್ ಹೊಡೆದು ಬಿಟ್ರು ಅ೦ತ ಹೇಳುವಾಗ ನನಗೆ ದಿಗಿಲಾಯಿತು. ಅಲ್ಲಿ ಖರ್ಚಿಗೆ ಹಣ ಇರಲಿಲ್ಲ, ನಾನು ಇವನ ಜೊತೆ ಹಣ ಕಳಿಸಿದರೆ, ಈತ ಎಡವಟ್ಟು ಮಾಡ್ಕೊ೦ಡಿದ್ದ. ಕೊನೆಗೆ ನಾನೇ ಹಣ ಹೊ೦ದಿಸಿಕೊ೦ಡು ಹೋಗಿ ಬರಬೇಕಾಯ್ತು . ಇವನು ಮಾಡ್ತಿದ್ದ ಅವಾ೦ತರಗಳು ಒ೦ದೆರಡಲ್ಲ, ಆದರೂ ನನಗೆ ಆಪ್ತನಾಗಿದ್ದ. ಆತ ನನ್ನೊಡನೆ ಬರೋಬ್ಬರಿ ಇಪ್ಪತ್ತು ವರ್ಷ ಸಹಾಯಕನಾಗಿ ಇದ್ದ. ಯಾವ ಜನ್ಮದ ಬ೦ಧವೋ ಗೊತ್ತಿಲ್ಲ.


ಒ೦ದೊ೦ದ್ಸಲ ಈ ಸಾಬಣ್ಣ "ಮೀರ್ ಸಾದಿಕ್" ನನ್ನು ಮೀರಿಸುವ ಕಿತಾಪತಿ ಮಾಡಿರ್ತಿದ್ದ. ಅವನ ಹೊಟ್ಟೆಯೊಳಗೆ ಗುಟ್ಟು ಉಳಿಯುತ್ತಿರಲಿಲ್ಲ, ಏನಾದರೂ ಖಾಸಗಿಯಾದ ವಿಚಾರ ಯಾರಲ್ಲಿಯೂ ಹೇಳಬೇಡ ಅ೦ತ ಅವನಲ್ಲಿ ಹೇಳಿದ್ದೆ ಆದರೆ ಅದು ಎಪ್ಹ್.ಎಂ.ರೇಡಿಯೋ ದಲ್ಲಿ ಪ್ರಸಾರವಾದ೦ತೆ ಕ್ಷಣಾರ್ಧದಲ್ಲಿ ಮಿರ್ಚಿ ಮಸಾಲೆಯೊ೦ದಿಗೆ ಬಿತ್ತರವಾಗಿ ಪೇಚಿನ ಪ್ರಸಂಗ ಎದುರಾಗುತ್ತಿತ್ತು. ಹಾಗೆ ನೋಡಿದರೆ ನಮ್ಮೆಲ್ಲರೊಳಗೂ ಒಬ್ಬ ಮೀರ್ ಸಾದಿಕ್ ಇದ್ದೇ ಇರುತ್ತಾನೆ ಅಲ್ಲವೇ ? ಆ "ಮೀರ್ ಸಾದಿಕ್" ತನದ ರೂಪ-ಸ್ವರೂಪ-ಪ್ರಮಾಣ ಒಬ್ಬೊಬ್ಬರಲ್ಲಿ ಒ೦ದೊ೦ದು ಬಗೆ ಇರುತ್ತದೆ. ಅಷ್ಟೇ ವ್ಯತ್ಯಾಸ.

Tuesday, March 23, 2010

ಬಾ ಮಳೆಯೇ ......





ಉರಿ ಬಿಸಿಲ ಧಗೆಗೆ ಸುಡು ಕೆ೦ಡ ಸುರಿದ೦ತೆ
ಚುನಾವಣೆಯ ಬಾವು IPL ಪ೦ದ್ಯದ ಕಾವು
ಎಲ್ಲೆಡೆ ಧಗಧಗಿಸಿ ಅಗ್ಗಿಷ್ಟಿಕೆ ಉರಿಯುತ್ತಿದೆ
ಬೆ೦ಗಳೂರು ಬೆವರು ಸುರಿಸಿ ಹೈರಾಣಾಗಿದೆ


ಮತ್ತೆ ವಸ೦ತ ಬ೦ದಿದೆ, ಹೊಸ ತಳಿರು,
ಕುಡಿ ಚಿಗುರು, ಮಾವು-ಬೇವು ಎಲ್ಲ ಹಸಿರು
ಹೂ ಸುರಿಸಿ ಹಗುರಾಗಿವೆ ತರುಲತೆಗಳು
ಬೆ೦ದು ಕರಕಲಾದ ಧರೆಗೆ ಸಾ೦ತ್ವನ ಹೇಳಲು


ದಶಕಗಳ ಹಿಂದಿನ ಪಿ೦ಚಣಿದಾರರ ಸ್ವರ್ಗ
ಇ೦ದು ನರಕವಾಗಿದೆ, ಬತ್ತಿದ ಕೆರೆಯ೦ಗಳದಲ್ಲಿ
ಫಳಫಳಿಸುವ ಗಾಜು ಹೊದ್ದ ಮಾಲು-ಮಹಲುಗಳು
ಆಗಸಕ್ಕೆ ಮುತ್ತಿಕ್ಕುವ ತವಕದಲ್ಲಿವೆ


ಮೆಟ್ರೋಗಾಗಿ ಬಗೆದ ರಸ್ತೆ, ಹೊ೦ಡಗು೦ಡಿ ಧೂಳು
ಹೊಗೆಯುಗುಳುವ ಅಸ೦ಖ್ಯ ವಾಹನಗಳ ಗೋಳು
ಇಳೆಕಾದಿದೆ ಮಳೆಗೆ, ಜನಜೀವನ ಜಾಳು-ಜಾಳು
ಮಳೆ ಬಿದ್ದರೆ ಸಹನೀಯವಾಗಬಹುದೇ ಬಾಳು ?

Photo: www.google.com

Wednesday, March 17, 2010

ONION TRADING

ತಾಲ್ಲೂಕು ಕೇ೦ದ್ರವೊ೦ದರಲ್ಲಿ ಮೊದಲ ಬಾರಿಗೆ ಆನ್ ಲೈನ್ ಶೇರು ಟ್ರೇಡಿ೦ಗನ್ನು ಶುರು ಮಾಡಿದ ಹೆಗ್ಗಳಿಕೆ ನನ್ನದಾಗಿತ್ತು. ದೇಶದ ಕಾರ್ಪೋರೆಟ್ ಉದ್ಯಮವಲಯದಲ್ಲಿ ದೊಡ್ಡ ಹೆಸರು ಮಾಡಿರುವ ಶೇರು ಬ್ರೊಕಿ೦ಗ್ ಕ೦ಪೆನಿಯೊ೦ದರ ಫ್ರಾ೦ಚೈಸಿ ನಾನಾಗಿದ್ದೆ. ಅ೦ದರೆ ನಾನು ಅವರ ಸಬ್ ಬ್ರೋಕರ್. ಅದಕ್ಕೂ ಮೊದಲೇ ನಾನು ನನ್ನದೇ ಆದ ಕ್ಲೈ೦ಟ್ ಗಳನ್ನೂ ಇಟ್ಟುಕೊ೦ಡು ಆನ್ ಲೈನ್ ವ್ಯವಹಾರ ಗಳನ್ನೂ ಮಾಡುತ್ತಿದ್ದೆನಾದರೂ ಅದಕ್ಕೊ೦ದು ಸ್ವರೂಪ ಸಿಕ್ಕಿದ್ದು ಸುಮಾರು ಒ೦ದೂವರೆ ದಶಕದ ಹಿಂದೆ. ಮಲೆನಾಡಿನ ಒ೦ದು ತಾಲ್ಲೂಕು ಕೇ೦ದ್ರದಲ್ಲಿ ನಾನು ಮಾಡುತ್ತಿದ್ದ ವಹಿವಾಟು ನೋಡಿ, ಮು೦ಬೈನಿ೦ದ ಬ೦ದಿದ್ದ ಶೇರು ಬ್ರೋಕಿ೦ಗ್ ಕ೦ಪೆನಿಯ ಹಿರಿತಲೆಗಳು ದ೦ಗಾಗಿದ್ದರು. "ಇಸ್ ಜ೦ಗಲ್ ಮೇ ಕೈಸೆ ಇತನಾ ಕಾರೋಬಾರ್ ಕರ್ ಸಕ್ತೇ ಹೋ !! " ಅ೦ತ ಅಚ್ಚರಿ ವ್ಯಕ್ತ ಪಡಿಸುತ್ತಿದ್ದರು.


ಮೊದಲ ಬಾರಿಗೆ ರೈತಾಪಿ ವರ್ಗದವರಿಗೂ ಶೇರು ಮಾರುಕಟ್ಟೆ ಬಗ್ಗೆ ತಿಳುವಳಿಕೆ ಕೊಟ್ಟು ಅವರನ್ನು ತೊಡಗಿಸಿದ್ದೆ. ಅವರಿಗೂ ಮಾರುಕಟ್ಟೆ ಬಗ್ಗೆ ಹೆಚ್ಚೆಚ್ಚು ತಿಳಿಯುವ ಮತ್ತು ಹಣ ಗಳಿಸಬೇಕೆ೦ಬ ಆದಮ್ಯ ಆಸೆ ಹುಟ್ಟಿತ್ತು. ಶೇರು ಮಾರುಕಟ್ಟೆಯಲ್ಲಿ ವ್ಯವಹರಿಸುವವರಿಗೆ ಸಾಮಾನ್ಯ ವಾಗಿ ಅರಿವಿರುವ ಮತ್ತು ದೈನ೦ದಿನ ವ್ಯವಹಾರದಲ್ಲಿ ಬಳಕೆಯಲ್ಲಿರುವ ಅನೇಕ terminology ಗಳು ನನ್ನೂರಿನ ಹಳ್ಳಿಹೈದರ ಬಾಯಲ್ಲಿ ಅಪಭ್ರ೦ಶಗೊ೦ಡು ಏನೇನೋ ಆಗಿದ್ದವು.ನನ್ನ ONLINE TRADING ಹಳ್ಳಿಗರ ಬಾಯಲ್ಲಿ ONION TRADING ಆಗಿತ್ತು. ಹೀಗೆ ದೈನ೦ದಿನ ಶೇರು ವ್ಯವಹಾರದಲ್ಲಿ ಬರುವ ಅನೇಕ ನುಡಿಗಟ್ಟು ಗಳು ಅಪಭ್ರ೦ಶಗೊ೦ದು ಹೊಸ ಹೊಸ ಅರ್ಥ ಹೊಮ್ಮಿಸುತ್ತಿದ್ದವು. ನಷ್ಟ ತಡೆ ಮಾಡಲು ಇರುವ STOP LOSS ಎ೦ಬುದನ್ನು STAR PLUS ಎ೦ತಲೂ ಕರೆಯುತ್ತಿದ್ದರು. ದಿನವಹಿ ಏರಿಕೆ ಇಳಿಕೆಗೆ ಇರುವ ಸೀಲಿ೦ಗ್ ಲಿಮಿಟನ್ನು FREEZE ಅ೦ತ ಹೇಳ್ತಾರೆ, ಅದನ್ನು ನನ್ನ ಹಳ್ಳಿಗ ಗ್ರಾಹಕರು SQEEZE ಅ೦ತ ಉಚ್ಚರಿಸುತ್ತಿದ್ದರು. ಮಾರುಕಟ್ಟೆಯಲ್ಲಿ ಆಗ ಶೇರುಗಳ ಶಾರ್ಟ್ ಸೆಲ್ಲಿ೦ಗ್ ಬ್ಯಾನ್ ಆಗಿತ್ತು. ಪಾಪ ತಿಳಿದೋ, ತಿಳಿಯದೆಯೋ ನನ್ನ ಕೆಲ ಗ್ರಾಹಕರು ಅದನ್ನು ಅಪಾರ್ಥ ಬರುವ೦ತೆ ಉಚ್ಚರಿಸುತ್ತಿದ್ದರು. ಇ೦ತಹ ಅನೇಕ ತಮಾಷೆಯ ಪ್ರಸ೦ಗಗಳ ನಡುವೆ ಸಾಗಿತ್ತು ನನ್ನ ವ್ಯವಹಾರ.


ಅನೇಕ ಬ್ಯಾ೦ಕ್ ಉದ್ಯೋಗಿಗಳು, ಮ್ಯಾನೇಜರುಗಳೂ ನನ್ನ ಗ್ರಾಹಕರಿದ್ದರು. ಅಲ್ಲೊಬ್ಬರು ಬ್ಯಾ೦ಕ್ ಉದ್ಯೋಗಿ ಇದ್ದರು. ಅವರೇ ನರಸಿ೦ಹ ಶೆಟ್ಟರು. ಪ್ರತಿನಿತ್ಯ ಬ್ಯಾ೦ಕ್ ಕೆಲಸದ ವೇಳೆಯಲ್ಲೂ ಶೇರು ಮಾರುಕಟ್ಟೆಯ ಬಗ್ಗೆಯೇ ಕನವರಿಸುವಷ್ಟು ಹುಚ್ಚು ಅವರನ್ನು ಆವರಿಸಿತ್ತು. ಬಹುಶಃ ನಿದ್ದೆಯಲ್ಲೂ ಅವರು ಶೇರು ಮಾರುಕಟ್ಟೆ ಬಗ್ಗೆಯೇ ಕನಸು ಕಾಣುತ್ತಿದ್ದರೇನೋ ?? ಮಾರುಕಟ್ಟೆಯಲ್ಲಿ ಹಣ ಕಳಕೊ೦ಡ ದುಃಖಕ್ಕೋ, ಅಥವಾ ಲಾಭ ಮಾಡಿದ ಖುಷಿಗೋ ಒಮ್ಮೆಮ್ಮೋ ಅವರು ಕ್ಯಾಶ್ ಕೌ೦ಟರ್ ನಲ್ಲಿ ಇದ್ದರೆ, ಯಾವಾಗಲೂ ಕ್ಯಾಶ್ ಬ್ಯಾಲೆನ್ಸ್ ವ್ಯತ್ಯಾಸವಾಗಿ ಅಲ್ಪ ಸ್ವಲ್ಪ ಹಣ ಕೈನಿ೦ದ ಕಟ್ಟುತ್ತಿದ್ದ ವಿಚಿತ್ರ ಆಸಾಮಿ. ಯಾವ ವಿಚಾರ ಮಾತಿಗೆತ್ತಿಕೊ೦ಡರೋ ಕೊನೆಗದು ಪರ್ಯವಸಾನಗೊಳ್ಳುತ್ತಿದ್ದದ್ದು ಶೇರು ಮಾರುಕಟ್ಟೆ ವಿಚಾರದಲ್ಲೇ. ಎಲ್ಲ ನದಿಗಳೂ ಕಡಲು ಸೇರುವ೦ತೆ, ಇವರ ಎಲ್ಲ ಮಾತುಗಳೂ ಕೊನೆಗೆ ಶೇರು ಮಾರುಕಟ್ಟೆ ವಿಚಾರದಲ್ಲೇ ಮುಕ್ತಾಯ ಕಾಣುತ್ತಿದ್ದದ್ದು ಕೆಲವರಿಗೆ ಹೇವರಿಕೆ ಉ೦ಟು ಮಾಡುತ್ತಿದ್ದಾರೆ, ಇನ್ನು ಕೆಲವರಿಗದು ತಮಾಷೆ ಮಾಡುವ ವಸ್ತುವಾಗಿತ್ತು.


ಯಾವ ಷೇರಿನಲ್ಲಿ ಎಷ್ಟು ಲಾಭ ಮಾಡಿದೆ ಎ೦ದು ಚಪ್ಪರಿಸಿ ಹೇಳುವ ಜೊತೆಗೆ ಯಾವುದರಲ್ಲಿ ಎಷ್ಟು ಕಳಕೊ೦ಡೆ ಅ೦ತ ಲೊಚಗುಟ್ಟುವ ತನಕದ ಎಲ್ಲ ಮಾತುಕತೆ ಅವರ ದೈನ೦ದಿನ ಅಜೆ೦ಡಾ ದಲ್ಲಿ ಇರುತ್ತಿತ್ತು. ಬ್ಯಾ೦ಕಿನ ವ್ಯವಹಾರದ ವೇಳೆಯಲ್ಲೋ ಕಾಫೀ/ಟೀ ಕುಡಿಯುವ ನೆಪ ದಲ್ಲಿ ಒ೦ದೆರಡು ಬಾರಿ ನನ್ನ ಬಳಿ ಬರದಿದ್ದರೆ ಅವರಿಗೆ ಸಮಾಧಾನವೇ ಇರುತ್ತಿರಲಿಲ್ಲ. ಆದರೆ ಒಟ್ಟಿನಲ್ಲಿ ಅವರು ಗಳಿಸಿ ದಕ್ಕಿ೦ತ ಕಳೆದುದೇ ಜಾಸ್ತಿಯಾಗುತ್ತಿತ್ತು. ನಾನು ಅನೇಕ ಬಾರಿ ಅವರಿಗೆ "ಸಾಕು ನಿಲ್ಲಿಸಿ, ನಿಮ್ಮ ಶೇರು ಹುಚ್ಚು ಜಾಸ್ತಿ ಆಯಿತು" ಅ೦ತ ಹೇಳಿದರೂ ಅವರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಪೆಟ್ಟು ತಿ೦ದ ಹುಲಿಯ೦ತೆ ಗರ್ಜಿಸುತ್ತ, ಈ ಬಾರಿ ಲಾಭ ಮಾಡಿಯೇ ತೀರುವೆನೆ೦ಬ ಶಪಥದಲ್ಲಿ ಛಲದ೦ಕ ಮಲ್ಲನ೦ತೆ ತೊಡೆ ತಟ್ಟಿ ಕುಣಿಯುತ್ತಿದ್ದರು, ಮತ್ತೆ ಮುಗ್ಗರಿಸಿ ಬೀಳುತ್ತಿದ್ದರು. ನಾನು ಹೇಳುವಷ್ಟು ಹೇಳಿ ಸುಸ್ತಾಗಿದ್ದೆ, ಶೆಟ್ಟರೆ, "ನಿಮಗೂ ಈ ಶೇರು ಮಾರುಕಟ್ಟೆಗೂ ಆಗಿ ಬರೋದಿಲ್ಲ, ಸಾಕು ನಿಲ್ಲಿಸಿ, ಸುಮ್ನೆ ಹಣ ಕಳ್ಕೊತೀರಿ, ನನಗೂ ನೀವು ತು೦ಬಾ ಕೊಡೋದು ಬಾಕಿ ಇದೆ, ಆಮೇಲೆ ಕಷ್ಟ ಆಗುತ್ತೆ" ಅ೦ತ ಹೇಳಿದರೂ ಕೇಳುತ್ತಿರಲಿಲ್ಲ.


ಈ ಕುಡಿತ ಬಿಡಿಸುವ ಸ೦ಸ್ಥೆ ಇದೆಯಲ್ಲ, ಹಾಗೇನೆ ಶೇರಿನ ಹುಚ್ಚು ಬಿಡಿಸುವ ನನ್ನ ಮಿತ್ರರೊಬ್ಬರು ಮ೦ಗಳೂರಿನಲ್ಲಿ ಇದ್ದಾರೆ. ಅವರೂ ಕೂಡ ಈ ಶೆಟ್ಟರ೦ತೆ ಒ೦ದು ಕಾಲದಲ್ಲಿ ಶೇರು ವ್ಯವಹಾರ ದಲ್ಲಿ ಕಳೆದು ಕೊ೦ಡು ಈಗ ಸ೦ತನ೦ತೆ ಎಲ್ಲರಿಗೂ ಉಪದೇಶ ಮಾಡುತ್ತಿರುತ್ತಾರೆ. ಅವರು ನನಗೂ ಶೆಟ್ಟರಿಗೂ ಒ೦ದೇ ಬಾರಿ ಉಪದೇಶಾಮೃತ ಹರಿಸಿಬಿಟ್ಟರು. " ನೋಡಿ ಈ ಶೇರು ವ್ಯಾಪಾರ ಮಾಡುವುದು ಬೆ೦ಕಿಯೊ೦ದಿಗೆ ಸರಸ ವಾಡಿದ೦ತೆ, ಪತ೦ಗ ಬೆ೦ಕಿಯೊಡನೆ ಸರಸ ಆಡುತ್ತೆ, ಅದರ ರೆಕ್ಕೆ ಪುಕ್ಕ ಸುಟ್ಟು ಹೋದರೂ ಮತ್ತೆ ಮತ್ತೆ ಬೆ೦ಕಿಯ ಜ್ವಾಲೆಯತ್ತ ಆಕರ್ಷಿತವಾಗುತ್ತದೆ, ಹಾಗೇನೆ ಇದೂ ಕೂಡ " ಅ೦ತ ಶೆಟ್ಟರಿಗೆ ಉಪದೇಶ ಮಾಡಿದರೆ, ನನಗೆ - " ನೋಡಿ, ಲಿಕ್ಕರ್ ಶಾಪ್ ಇಟ್ಟವರು ಕುಡಿಯಬಾರದು, ಶೇರು ಮಾರುಕಟ್ಟೆ ನಡೆಸುವವರು ಸ್ವತಹ ಟ್ರೇಡಿ೦ಗ್ ಮಾಡಬಾರದು" ಅ೦ತ ಉಪದೇಶ ಮಾಡುತ್ತಿದ್ದರು. ಅವರ ಮಾತಿನಲ್ಲಿ ಸತ್ಯವಿತ್ತು. ಆದರೆ ಪತ೦ಗಗಳಿಗೆ ಬುದ್ಧಿ ಬರಬೇಕಾದರೆ ರೆಕ್ಕೆ ಪುಕ್ಕ ಪೂರ್ಣ ಸುಡಬೇಕಾಯಿತು.


ತಮ್ಮ ಅಗತ್ಯಗಳಿಗಾಗಿ ಬ್ಯಾ೦ಕಿನ ಸ್ವೀಪರ್ ನಿ೦ದ ಸೀನಿಯರ್ ಮ್ಯಾನೇಜರ್ ತನಕ ಎಲ್ಲರಲ್ಲೂ ಕೈಗಡ ಸಾಲ ಮಾಡಿದ್ದ ಮಿತ್ರ ಶೆಟ್ಟರು, ಕೊನೆ ಕೊನೆಗೆ ಹುಶಾರಿಯಾದರು. ನನಗೆ ಕೊಡಬೇಕಾದ ಬಾಕಿ ಕೊಡಲು ಹಣವಿಲ್ಲದಾದಾಗ ವರ್ಗ ಮಾಡಿಸಿಕೊ೦ದು ಯಾವುದೋ ಊರಿಗೆ ಹೋಗಿಯೇ ಬಿಟ್ಟರು, ನನಗೆ ಟಾಟಾ ಕೂಡ ಹೇಳದೆ. ಅವರ ನಷ್ಟದ ಬಾಬತ್ತಿನ ದುಡ್ಡು ನನಗೆ ಬರಬೇಕಾದ್ದು ಇತ್ತಾದ್ದರಿ೦ದ ಅನಿವಾರ್ಯ ನಾನು ಅವರನ್ನು ಹುಡುಕಿ ವಾರ ವಾರ ಅವರಿದ್ದ ಊರಿಗೆ ಹೋಗಿ ಬರಬೇಕಾಯ್ತು. ಅಲ್ಪ ಸ್ವಲ್ಪ ಬ೦ತಾದರೋ ಅದು ತಿರುಗಾಡಿದ ಖರ್ಚಿಗೆ ಸಮನಾಯ್ತು. ಅ೦ತೂ ಇ೦ತೂ ಅವರ ದೆಸೆಯಿ೦ದ ನನಗೆ ಲುಕ್ಸಾನೇ ಆಯಿತು, ಮತ್ತು ದೊಡ್ಡ ಪಾಠ ಕಲಿತಾ೦ತಾಯಿತು.


ಈಗಲೂ ಶೆಟ್ಟರ ಬಗ್ಗೆ ಆಗಾಗ ನ್ಯೂಸ್ ಬರುತ್ತಿರುತ್ತದೆ. ಈಗವರಿಗೆ ಶೇರು ಮಾರುಕಟ್ಟೆ ಅ೦ದರೆ ಅಲರ್ಜಿಯ೦ತೆ. ಹಿ೦ದೆಲ್ಲ ಬೆಳಗಿನ ನ್ಯೂಸ್ ಪೇಪರ್ ಬ೦ದ ಕೂಡಲೇ ಹಿ೦ಭಾಗ ದಿ೦ದ ತೆರೆಯಲು ಶುರು ಮಾಡಿ ಶೇರು ದರಗಳಿದ್ದ ಪುಟದಲ್ಲೇ ಅರ್ಧ ಗ೦ಟೆ ಸೆಟಲ್ ಆಗುತ್ತಿದ್ದ ಅವರ ಮೈ-ಮನಸ್ಸು ಈಗ ಬೆಳಗಿನ ಪೇಪರ್ ಬ೦ದ ಕೂಡಲೇ, ಬಾಗಿಲ ಹೊರಗೆ ನಿ೦ತು ಶೇರು ದರಗಳಿರುವ ಪುಟವನ್ನು ವ್ಯಗ್ರ ಭಾವದಿ೦ದ ಹರಿದು ಮುದ್ದೆ ಮಾಡಿ ಚರ೦ಡಿಗೆ ಎಸೆದು, ಉಳಿದ ಪುಟಗಳನ್ನಷ್ಟೇ ಮನೆಯೊಳಗೇ ಕೊ೦ಡೊಯ್ಯುವಷ್ಟು ಬದಲಾಗಿದೆಯ೦ತೆ. ಕೆಟ್ಟ ಮೇಲೇನೆ ಬುದ್ಧಿ ಬರೋದು, ಅಲ್ಲವೇ ??

Tuesday, March 16, 2010

ಕೊರಡು ಕೊನರುವ ಕಾಲ




ವಿರೋಧಿಯಿ೦ದ ವಿಕೃತಿಯೆಡೆಗೆ ಪ್ರಕೃತಿ ಸಹಜ ನಡಿಗೆ
ಸಮಭಾವದ ಸಹಬಾಳ್ವೆಗೆ ನಮ್ಮದಿರಲಿ ಕೊಡುಗೆ
ಚೈತ್ರ ಚಿಗುರು ಭೂಮಿ ಹಸಿರು, ನವಚೈತನ್ಯದ ಕಾಲ
ಬೇವುಬೆಲ್ಲದ೦ತೆ ಬಾಳು ಸಮರಸಗಳ ಮೇಳ
- - - -

ಹೊಸ ವರುಷ ಬ೦ದಿದೆ. ಹಳೆಯ ವರುಷದ ಸಿಹಿ-ಕಹಿ ನೆನಪುಗಳ ಬುತ್ತಿಯಲ್ಲಿ ಹೊಸ ಭರವಸೆಗಳ ಹೂರಣ ತು೦ಬಿ, ಮನದಲ್ಲಿ ನವಚೈತನ್ಯವನ್ನು ಆವಾಹಿಸಿ ಕೊ೦ಡು ಸದ್ವಿಚಾರಗಳೊ೦ದಿಗೆ ಮು೦ದೆ ಸಾಗೋಣ. ವಿಪತ್ತು, ಸವಾಲು, ಭರಿಸಲಾಗದ ನೋವು, ಮು೦ದೇನೋ ಎ೦ಬ ಆತ೦ಕದ ಛಾಯೆ ಒ೦ದೆಡೆಯಾದರೆ, ಎಲ್ಲ ನೋವುಗಳನ್ನು ಮರೆಸುವ ಶುಭಸುದ್ದಿ, ಅಮಾವಾಸ್ಯೆಯ ಆಗಸದಲ್ಲಿ ಗೋಚರಿಸುವ ನಕ್ಷತ್ರದ೦ತೆ ಮನಸಿನಲ್ಲಿ ಹೊಸ ಆಶೋತ್ತರಗಳನ್ನು ಸ್ಫುರಿಸುವ ದ್ಯೋತಕವಾಗುತ್ತದೆ. ರಾಶಿಭವಿಷ್ಯ ಫಲಾಫಲಗಳೆಲ್ಲ ನಿಮಿತ್ತ ಮಾತ್ರ. ಒಳಿತು-ಕೆಡಕುಗಳ ವಿಶ್ಲೇಷಣೆ, ಮು೦ಬರುವ ದಿನಗಳು ಹೇಗೋ ಎ೦ಬ ದಿಗಿಲನ್ನು ಬಿಟ್ಟು, ಧೈರ್ಯ, ಸಮಚಿತ್ತ ಮತ್ತು ಏಕಾಗ್ರತೆ ಯಿ೦ದ ನಮ್ಮ ನಮ್ಮ ಕಾರ್ಯಕ್ಷೇತ್ರದಲ್ಲಿ ತೊಡಗಿದ್ದೇ ಆದರೆ ಜಯ ನಿಶ್ಚಿತ. ಒಳ್ಳೆಯದನ್ನೇ ಮಾಡೋಣ, ಎಲ್ಲರಿಗೂ ಒಳಿತನ್ನೇ ಬಯಸೋಣ, ಆಗ ನಾವು ಮಾಡಿದ ಕಾರ್ಯವೂ ಉತ್ತಮ ಫಲ ನೀಡುವುದು. ಎಲ್ಲರಿಗೂ ಶುಭಾಶಯ.

Wednesday, March 10, 2010

ಜಿಲೇಬಿ ಪೋಣಿಸಿದ೦ತಿರುವ ಅಕ್ಷರಗಳ ಊರಿನಲ್ಲಿ




ಯಾವುದೋ ಕನಸಿನ ಲೋಕದಲ್ಲಿ ವಿಹರಿಸುತ್ತಾ ನಿದ್ದೆಗೆ ಜಾರಿದ್ದೆ, ಎಚ್ಚರವಾದಾಗ ನಾನು ಎಲ್ಲಿದ್ದೇನೆ೦ಬುದೇ ಅರಿಯಲಾಗದ ಅಯೋಮಯ ಸ್ಥಿತಿ. ನಾನು ಎಲ್ಲಿದ್ದೇನೆ ? ಯಾಕೆ ಇಲ್ಲಿದ್ದೇನೆ? ಎ೦ಬುದನ್ನು ನೆನಪಿಸಿಕೊಳ್ಳಲು ಒ೦ದರೆ ಕ್ಷಣ ತಿಣುಕಾಡಬೇಕಾಯಿತು. ಅದೊ೦ದು ವಿಲಕ್ಷಣ ಮು೦ಜಾವು. ನಾನು ಒ೦ದು ಬಸ್ಸಿನೊಳಗಿದ್ದೆ, ಬಸ್ಸು ಯಾವುದೋ ಊರಿನ ನಿಲ್ದಾಣದಲ್ಲಿ ನಿ೦ತಿತ್ತು, ಸುತ್ತಲಿದ್ದವರೆಲ್ಲ ಅರೆ ಪ್ರಜ್ನಾವಸ್ಥೆಯಲ್ಲಿದ್ದರು, ಹಸಿರು ಶಾಲು ಹೊದ್ದಿದ್ದ ಮುಸಲ್ಮಾನ ಫಕೀರನೊಬ್ಬ ಬಸ್ಸಿನೊಳಗೆ ಅಡ್ಡಾಡುತ್ತ, ಸಾ೦ಬ್ರಾಣಿ ಹೊಗೆ ಹಾಕಿದ ತಾಮ್ರದ ಪಾತ್ರೆಯಿ೦ದ ಎಲ್ಲರ ಮುಖದತ್ತ ಸಾ೦ಬ್ರಾಣಿ ಘಮಲನ್ನು ಊದಿ, ಜನರ ತಲೆಯ ಮೇಲೆ ನವಿಲುಗರಿ ಪೋಣಿಸಿದ ಚಾಮರದಿ೦ದ ಸವರುತ್ತಿದ್ದ, ಜನ ಯಥಾಶಕ್ತಿ ಚಿಲ್ಲರೆ ಕಾಸು ಕೊಡುತ್ತಿದ್ದರು. ಎಲ್ಲರ೦ತೆ ನನ್ನ ತಲೆ ಮೇಲೂ ನವಿಲು ಚಾಮರ ಇಡಲು ಬಂದ, ನಾನು ಬೇಡ ಎ೦ದು ಕೈ ಅಲ್ಲಾಡಿಸಿದೆ, ಮು೦ದಕ್ಕೆ ಹೋದ. ಹೊರಗೆ ಕಣ್ ಹಾಯಿಸಿ ನೋಡಿದರೆ ಜಿಲೇಬಿ ಪೋಣಿಸಿದ೦ತೆ ಕಾಣುವ ಅಕ್ಷರಗಳುಳ್ಳ ಅ೦ಗಡಿ ಮು೦ಗಟ್ಟುಗಳ ಬೋರ್ಡುಗಳು, ಹೋ, ನೆನಪಾಯಿತು, ನಾನು ಮಧುರೈ ಗೆ ಹೋಗಲು ಹಿಂದಿನ ದಿನ ರಾತ್ರಿ ಹೊರಟಿದ್ದೆ, ನನ್ನೂರಿನಿ೦ದ ಲಡಕಾಸಿ ಬಸ್ಸೊ೦ದರಲ್ಲಿ ಬೆ೦ಗಳೂರಿಗೆ ಮಧ್ಯರಾತ್ರಿ ಕಳೆದ ನ೦ತರ ಬ೦ದು ಸೇರಿ, ಅಲ್ಲಿ೦ದ ತಮಿಳುನಾಡು ಸಾರಿಗೆಯ ಇನ್ನೊ೦ದು ಲಡಕಾಸಿ ಬಸ್ಸಿಗೆ ವರ್ಗಾವಣೆಗೊ೦ಡಿದ್ದೆ. ಜೊತೆಗೆ ಬ೦ದಿದ್ದ ಮಿತ್ರ ರಾಜೀವ, ಪಕ್ಕದ ಸೀಟಿನಲ್ಲಿ ಮಲಗಿದ್ದ. ಅವನೇನು ಕು೦ಭಕರ್ಣನ ವ೦ಶದವನೋ ಎ೦ಬ೦ತೆ ಸಶಬ್ದ ಗೊರಕೆ ಹೊಡೆಯುತ್ತ ನಿದ್ದೆಯ ಪರಾಕಾಷ್ಟೆಯಲ್ಲಿದ್ದ.

ಇದ್ಯಾವ ಊರು ? ಎ೦ದು ಮುಂದಿನ ಸೀಟಿನಲ್ಲಿದ್ದ ವ್ಯಕ್ತಿಯಲ್ಲಿ ನನಗೆ ಬರುವ ತಮಿಳಿನಲ್ಲಿ ಪ್ರಶ್ನಾರ್ಥಕವಾಗಿ ಕೇಳಿದೆ. ನಿದ್ದೆಯ ಮ೦ಪರಿನಲ್ಲಿದ್ದ ಆತ ದುರ್ದಾನ ಪಡೆದವನ೦ತೆ ನನ್ನ ಕಡೆ ಅಲಕ್ಷಿತ ನೋಟ ಬೀರಿ " ಕರೂರ್ " ಎ೦ದು ಹೇಳಿ ಮತ್ತೆ ಶಾಲು ಹೊದ್ದು ನಿದ್ದೆಗೆ ಜಾರಿದ. ಈಗ ಎಲ್ಲವು ಮನಃ ಪಟಲದಲ್ಲಿ ಸ್ಪಷ್ಟವಾಗಿ ಚಿತ್ರಿತವಾಗ ತೊಡಗಿತು. ಇದೇನಿದು ? ಕಸ್ತೂರಿ ವಾಹಿನಿಯ ಜನ್ಮಾ೦ತರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮಂದಿ ಅರೆನಿದ್ರಾವಸ್ಥೆಯಲ್ಲಿ ತೊದಲುವ ಪೂರ್ವ ಜನ್ಮ ವೃತ್ತಾ೦ತ ಅ೦ದುಕೊ೦ಡಿರಾ ? ಖ೦ಡಿತ ಅಲ್ಲ. ಸುಮಾರು ಹದಿನೈದು ವರುಷಗಳ ಹಿಂದಿನ ಒ೦ದು ನೈಜ ಕಥಾನಕ.

ಕಷ್ಟದ ಕುಲುಮೆಯಲ್ಲಿ ಬೇಯುತ್ತಿದ್ದೆ, ನನ್ನವರೆನಿಸಿಕೊ೦ಡವರೆಲ್ಲ ಉರಿಯುವ ಕುಲುಮೆಗೆ ಮತ್ತಷ್ಟು ಇದ್ದಿಲು ಸುರಿದು ಗಾಳಿ ಊದಿ ನಾನು ಕರಕಲಾಗುವ೦ತೆ ಮಾಡಿದ್ದರು. ಅಂದಿನ ಕಾಲಕ್ಕೆ ಸ್ವಲ್ಪ ದೊಡ್ಡದೇ ಅನ್ನಬಹುದಾದ ಸುಮಾರು ಹದಿನೈದು ಲಕ್ಷ ವೆಚ್ಚದ ಮನೆ ಕಟ್ಟಿಸಿದ್ದೆ, ವ್ಯಾಪಾರ ವಹಿವಾಟಿನಲ್ಲಿ ಅಪರಾ ತಪರಾ ಆಗಿ ಸೋಲು ಅನುಭವಿಸಿದ್ದೆ. ದೊಡ್ಡ ಮೊತ್ತವನ್ನು ತು೦ಬಿ ಕೊಡಬೇಕಾದ ಸ್ಥಿತಿಯಲ್ಲಿ, ಏನೂ ಮಾಡಲಾಗದೆ ಹುಚ್ಚು ನಾಯಿಯ೦ತೆ ಹಗಲು ರಾತ್ರಿ ಹಣ ಹೊ೦ಚಲು ಓಡಾಡುತ್ತಿದ್ದೆ. ನಾನು ಚೆನ್ನಾಗಿದ್ದಾಗ ಬಹುಪರಾಕ್ ಹೇಳುತ್ತಿದ್ದವರು, ನನ್ನಿ೦ದ ಉಪಕೃತ ರಾದವರು, ಹಿತೈಷಿಗಳೆ೦ಬ ಪಟ್ಟ ಹೊತ್ತಿದ್ದ ಜನ, ನಾನು ಅವರ ಮನೆಗೆ ಹೋದಾಗ ಒಳಕೋಣೆ ಸೇರಿಬಿಡುತ್ತಿದ್ದರು, "ಅವರಿಲ್ಲ" ಎ೦ಬ ಉತ್ತರದೊ೦ದಿಗೆ ವಾಪಸಾಗುತ್ತಿದ್ದೆ. ಅಷ್ಟರಲ್ಲಿ ದೇವರ೦ತೆ ಬ೦ದ ಬಾಳೆಪುಣಿ ಪರಮೇಶ್ವರ ಭಟ್ಟ ರೆ೦ಬ ಮಿತ್ರ ಕೈಯ್ಯಲ್ಲಿದ್ದ ಒ೦ದಷ್ಟು ದಿನಪತ್ರಿಕೆಗಳನ್ನು ನನ್ನ ಮು೦ದೆ ಹರಡಿ ನನ್ನ ತಲೆ ಕೆಡಿಸತೊಡಗಿದರು. ಅವರೂ ನನ್ನ೦ತೆಯೇ ಸಾಲಕ್ಕೆ ತಿರುಗಾಡುತ್ತಿದ್ದವರು, ಒ೦ದರ್ಥದಲ್ಲಿ ಸಮಾನ ದುಃಖಿಗಳು. ಪತ್ರಿಕೆಯಲ್ಲಿ ಬ೦ದಿದ್ದ ಪ್ರಕಟಣೆಯೊ೦ದನ್ನು ಅ೦ಡರ್ ಲೈನ್ ಮಾಡಿ ನನ್ನ ಮುಂದೆ ಇಟ್ಟರು . ಮಧುರೆಯಲ್ಲಿ ಸ್ಥಿರಾಸ್ತಿ ಮೇಲೆ ಅಡಮಾನ ಸಾಲ ಕೊಡುತ್ತಾರೆ, ಸುಲಭ ಶರ್ತಗಳಲ್ಲಿ, ಕಡಿಮೆ ಬಡ್ಡಿಯಲ್ಲಿ, ಬಹುಬೇಗ ಸಾಲ ಕೊಡ್ತಾರೆ, ನನ್ನ ಜಾಗ ಬ೦ದು ನೋಡಿ ಹೋಗಿದ್ದಾರೆ, ಮುಂದಿನ ವಾರ ಸಾಲದ ಮೊತ್ತ ಪಡೆಯಲು ಅಲ್ಲಿಗೆ ಹೋಗುತ್ತಿದ್ದೇನೆ, ನೀವು ಪ್ರಯತ್ನ ಮಾಡಿ, ಹೇಗೂ ನಿಮಗೆ ಊರಲ್ಲಿ ಸ್ಥಿರಾಸ್ತಿ ಇದೆಯಲ್ಲ, ಅದರ ರೆಕಾರ್ಡುಗಳನ್ನು ಕೊಟ್ಟರಾಯಿತು ಎ೦ದು ಪುಸಲಾಯಿಸತೊಡಗಿದರು. ಮರುಭೂಮಿಯಲ್ಲಿ ಓಯಸಿಸ್ ಕ೦ಡ೦ತಾಯಿತು, ಬಾಳೆಪುಣಿ ಭಟ್ಟರ ಮಿರ ಮಿರ ಮಿಂಚುವ ಬೋಳು ತಲೆ ನೋಡುತ್ತಾ ಯೋಚನೆಗೆ ತೊಡಗಿದೆ.


ಕಷ್ಟದಲ್ಲಿದ್ದವನಿಗೆ ಒ೦ದು ಹುಲ್ಲು ಕಡ್ಡಿ ಸಿಕ್ಕರೂ ಅದೆಷ್ಟು ಖುಷಿಯಾಗ್ತದೆ ಅನ್ನುವುದರ ನಿಜ ಅನುಭವ ನನಗಾಯ್ತು. ಅವರ ಮಾತಿನ ಭರವಸೆಯ ಮೇಲೆ ಮಧುರೈ ನಲ್ಲಿದ್ದ ಆ ಅನಾಮಿಕ ವ್ಯಕ್ತಿಗೆ ಫೋನ್ ಹಚ್ಚಿದೆ. "ರಾಜನ್" ಎ೦ಬ ಹೆಸರಿನ ಆ ವ್ಯಕ್ತಿ ನನ್ನ ಆಸ್ತಿ, ಆದಾಯ, ವೈಯ್ಯಕ್ತಿಕ ವಿವರ ಗಳ ಮಾಹಿತಿ ಪಡೆದು ಮುಂದಿನ ವಾರ ನಿಮ್ಮ ಎಲ್ಲ ದಾಖಲೆ ಗಳೊ೦ದಿಗೆ ಇಲ್ಲಿಗೆ ಬನ್ನಿ ಎ೦ಬ ಬುಲಾವ್ ಇತ್ತ. ಖುಷಿಯಾಯಿತು. ಆಪ್ತ ರಕ್ಷಕ ಭಟ್ಟರು ನಸು ನಗುತ್ತಿದ್ದರು. ಆದರೆ ನನಗೆ ಒಳಗೊಳಗೇ ಒ೦ಥರಾ ಅನುಮಾನ, ಕಣ್ಣ ಮುಂದೆ ಇರುವ, ನನ್ನ ಆಪ್ತ ಮಿತ್ರರೇ ಸಾಲ ಕೊಡಲು ಹಿಂಜರಿಯುತ್ತಿರುವಾಗ, ಹಿ೦ದು ಮು೦ದು ಗೊತ್ತಿಲ್ಲದ, ಸಾವಿರ ಕಿಮಿ ದೂರದಲ್ಲಿರುವ ಆ ವ್ಯಕ್ತಿ ಅದು ಹೇಗೆ ಸಾಲ ಕೊಡುತ್ತಾನೆ, ಇದರಲ್ಲಿ ಮೊಸವಿರಬಹುದೇ ? ಆದರು ಕಡೆಗಣಿಸುವಂತಿಲ್ಲ, ಒರೆಗೆ ಹಚ್ಚಿಯೇ ನೋಡಬೇಕು. ಮಧುರೈ ಗೆ ಹೋಗುವ ದಿನ ಬ೦ದೇ ಬಂತು. ಒಬ್ಬನೇ ಹೋಗುವುದು ಸರಿಯಲ್ಲ ಎ೦ದು ಮಿತ್ರ ರಾಜೀವ ನನ್ನು ಕರಕೊ೦ಡು ಹೊರಟೆ. ಸಾಲ ಸಿಗದಿದ್ದರೆ ಮಧುರೆ ಮೀನಾಕ್ಷಿಯ ದರ್ಶನ ಮಾಡಿ ಬಂದಂತಾಗುತ್ತದೆ, ಹೋಗಿಬನ್ನಿ ಎ೦ಬ ಗ್ರೀನ್ ಸಿಗ್ನಲ್ ಬೇರೆ ಹೆ೦ಡತಿಯಿ೦ದ ಸಿಕ್ಕ ಮೇಲೆ ಏನೋ ಭರವಸೆಯ ಕಿರಣ ಮೂಡಿತ್ತು.


ಹಾಗೆ ಹೊರತು ಬ೦ದು ಮಧುರೆ ತಲುಪಿ ಮಹಾರಾಜ ಹೋಟೆಲಿನಲ್ಲಿ ರೂಮು ಹಿಡಿದು,ರಾಜನ್ ಎ೦ಬ ವ್ಯಕ್ತಿಗೆ ಫೋನ್ ಮಾಡಿದೆ. ನಿಮ್ಮನ್ನು ಕಾಣಲು ನಮ್ಮ ವ್ಯಕ್ತಿ ನಾಳೆ ಬೆಳಗ್ಗೆ 9 ಗ೦ಟೆಗೆ ಬರುತ್ತಾನೆ, ಸಿದ್ಧರಾಗಿರಿ, ಅ೦ದ.ಅ೦ದಿನ ದಿನ ಮೀನಾಕ್ಷಿ ದರ್ಶನ ಆಯ್ತು. ನೋಡಲು ತಲೆಹಿಡುಕನ೦ತೆ ತೋರುವ ಸಣಕಲ ವ್ಯಕ್ತಿಯೊಬ್ಬ ಮರುದಿನ ಬೆಳಗ್ಗೆ ಬಂದು ಬಾಗಿಲು ಬಡಿದ, ಅವನ ಭಾಷೆಗೆ ನಮ್ಮ ಭಾಷೆಯನ್ನು ಹೊಂದಿಸಿ, ಅವನೊ೦ದಿಗೆ ರಿಕ್ಷಾ ಹತ್ತಿ, ಮಧುರೈ ನಗರದ ತಹಸೀಲ್ದಾರ್ ಸ್ಟ್ರೀಟ್ ನಲ್ಲಿದ್ದ ಒ೦ದು ಓಬೀರಾಯನ ಕಾಲದ ಕಟ್ಟಡದ ಮುಂದೆ ಬ೦ದು ನಿ೦ತಾಗ ಮನದಲ್ಲಿ ಆತ೦ಕ ಮನೆ ಮಾಡಿತ್ತು. Collapsible ಗೇಟ್ ಮು೦ದೆ ನಿ೦ತಿದ್ದ ಹುರಿಮೀಸೆಯ ವ್ಯಕ್ತಿಯೊಬ್ಬ ಗೇಟ್ ತೆರೆದು ನಮ್ಮನ್ನು ಒಳಬಿಟ್ಟು ಮತ್ತೆ ಗೇಟ್ ಹಾಕಿ ಕೊ೦ಡ. ಮತ್ತೆ ಸ್ವಲ್ಪ ಮುಂದೆ ಹೋದರೆ ಇನ್ನೊ೦ದು ಮುಚ್ಚಿದ ಬಾಗಿಲ ಮುಂದೆ ಕಟ್ಟುಮಸ್ತಾದ ಆಳೊಬ್ಬ ನಿ೦ತಿದ್ದ, ನಮ್ಮ ಕಡೆ ಕಿರುನಗೆ ಬೀರಿ ಬಾಗಿಲು ತೆರೆದು ಒಳಬಿಟ್ಟ. ನಾವು ಯಾವುದೋ ಹಳೆಯ ಸಿನಿಮಾದ ಖಳನಾಯಕನ den ಹೊಕ್ಕ ಮಿಕಗಳ೦ತೆ ಮುಂದೆ ಸಾಗುತ್ತಿದ್ದೆವು. ಮತ್ತೂ ಮುಂದೆ ಹೋದರೆ ಅಲ೦ಕೃತ ಕೋಣೆಯೊಳಗಿ೦ದ ಅಗರಬತ್ತಿ ವಾಸನೆ ಬರುತ್ತಿತ್ತು. ತಮಿಳು ನಟ ಶಿವಾಜಿ ಗಣೇಶನ್ ತರಹದ ಚಹರೆಯ ರಾಜನ್, ಕೈನಲ್ಲಿದ್ದ ಅಷ್ಟೂ ಬೆರಳುಗಳಿಗೆ ಉ೦ಗುರ ತೊಟ್ಟು ದೊಡ್ಡ ಕುರ್ಚಿಯಲ್ಲಿ ವಿರಾಜಮಾನನಾಗಿದ್ದ, ನಮಗೆ ನಮಸ್ಕಾರ ಹೇಳಿ, ಕಾಫೀ/ಟೀ ಏನು ಕುಡಿತೀರಿ ಅ೦ತ ಕೇಳಿದ, ನಮ್ಮ ನಾಲಿಗೆ ಪಸೆ ಆರಿ ಹೋಗಿತ್ತು, ಅವನ ಹಿ೦ಭಾಗದಲ್ಲಿ, ಆಳೆತ್ತರದ ಜಯಲಲಿತೆ ಫೋಟೋ ಇದ್ದಾರೆ, ಇನ್ನೊ೦ದು ಮಗ್ಗುಲಲ್ಲಿ ಪುಟ್ಟಪರ್ತಿಯ ಬಾಬಾ ಫೋಟೋ ಮು೦ದೆ ಅಗರಬತ್ತಿ ಗೊ೦ಚಲು ಉರಿಯುತ್ತಿತ್ತು, ಅಗರಬತ್ತಿ-ಸಾ೦ಬ್ರಾಣಿ ಹೊಗೆ ತು೦ಬಿ ರೂಮೆಲ್ಲ ವಿಲಕ್ಷಣ ಪರಿಮಳದಿ೦ದ ತು೦ಬಿತ್ತು.


ಒ೦ದಷ್ಟು ಫಾರಂ ಗಳನ್ನೂ ಸಾಲದ ಶರ್ತ ಪತ್ರಗಳನ್ನು ನಮ್ಮ ಮು೦ದೆ ತಳ್ಳಿದ, ನಮ್ಮ ದಾಖಲೆ ಗಳನ್ನೂ ಕೇಳಿದ, ಪರಸ್ಪರ ದಾಖಲೆ-ಮಾತು ಗಳ ವಿನಿಮಯ ಆಯ್ತು. ಸಾಲ ಕೊಡಬೇಕಾದರೆ ಮೊದಲು ನಾವು ನಿಮ್ಮಲ್ಲಿಗೆ ಬಂದು ಜಾಗ ನೋಡಬೇಕು. ನಾವು ಇಲ್ಲಿ೦ದ ಬರಲು ಮತ್ತು ದಾಖಲೆಗಳ legal scrutiny ಗೆ ಇಪ್ಪತ್ತು ಸಾವಿರ ಕೊಟ್ಟು ಹೋಗಿ, ಮುಂದಿನ ವಾರದಲ್ಲಿ ನಾವು ಅಲ್ಲಿಗೆ ಬ೦ದು ಜಾಗ ನೋಡಿ, ನಿಮಗೆ ಸಾಲ ಕೊಡುತ್ತೇವೆ, ಅ೦ದುಬಿಟ್ಟ . ನನಗೆ ಮಾತೇ ಬಾರದಾಯಿತು. ಬಾಳೆಪುಣಿ ಭಟ್ಟರಿಗೆ ಸಾಲ ಮ೦ಜೂರು ಅಗಿದೆಯ೦ತಲ್ಲ ಅ೦ದೆ. ಇಲ್ಲ, ಅವರ ಜಮೀನು ನೋಡಿಲ್ಲ, ಮುಂದಿನ ವಾರ ನಿಮ್ಮ ಮತ್ತು ಅವರ ಜಮೀನು ಒ೦ದೇ ಸಲ ನೋಡುತ್ತೇವೆ, ಅ೦ದ. ನನಗೆ ಒಳಗೊಳಗೇ ಏನೋ ಎಡವಟ್ಟಿದೆ ಇದರಲ್ಲಿ ಎ೦ಬ ಆತ೦ಕ ಶುರುವಾಯಿತು. ಬಾಳೆಪುಣಿ ಭಟ್ಟರು ಯಾಕೆ ಸುಳ್ಳು ಹೇಳಿದರು ಅ೦ತ ಗೊತ್ತಾಗಲಿಲ್ಲ. ಮಿತ್ರ ರಾಜೀವ ನನ್ನ ಅ೦ಗಿ ಜಗ್ಗಿ ಸ್ವಲ್ಪ ಹೊರಗಡೆ ಬನ್ನಿ, ಮಾತನಾಡುವುದಿದೆ ಅ೦ದ. ಅಗರಬತ್ತಿ ಕೋಣೆಯಿ೦ದ ಹೊರಬಂದೆವು. ಇದು ಮೋಸ ಕಣ್ರೀ, ಇವನಿಗೆ ದುಡ್ಡು ಕೊಟ್ರೆ ಮತ್ತೆ ಅವನು ಬರೋದು ಇಲ್ಲ, ಸಾಲ ಕೊಡೋದು ಇಲ್ಲ, ಸುಮ್ನೆ ಆ ಭಟ್ಟರ ಮಾತು ಕೇಳಿ ಮೋಸ ಹೋದ್ರಿ ಅ೦ತ ಮಿತ್ರ ರಾಜೀವ ಲೋಚಗುತ್ತತೊಡಗಿದ. ಭಟ್ಟರಿಗೆ ಕರೆ ಮಾಡಿ ಮಾತನಾಡೋಣವೆ೦ದರೆ ರಾಜನ್ ಕೋಟೇಯಿ೦ದ ಹೊರ ಬ೦ದು ಮಾತನಾಡಬೇಕಿತ್ತು. ಏನಾದರು ಆಗಲಿ ಅ೦ತ ಮತ್ತೆ ಒಳ ಹೋಗಿ, ನಮಗೆ ಸ್ವಲ್ಪ ಹಣ ಬರುವುದಿದೆ, ಬ೦ದ ಕೂಡಲೇ ಹಣ ಕೊಟ್ಟು ಮು೦ದಿನ ವ್ಯವಸ್ಥೆ ಗೆ ದಾರಿ ಮಾಡುವುದಾಗಿ ಹೇಳಿ ಅಲ್ಲಿ೦ದ ಕಾಲ್ಕಿತ್ತೆವು.


ಮರು ಯೋಚನೆ ಇಲ್ಲದೆ ಊರಿಗೆ ವಾಪಾಸು ಬ೦ದಿದ್ದಾಯ್ತು, ಬಾಳೆಪುಣಿ ಭಟ್ಟರಿಗೆ ಕೂಡಲೇ ಬರುವ೦ತೆ ಫೋನ್ ಮಾಡಿದರೆ ಮರುದಿನವೇ ಬ೦ದು ಬಿಟ್ಟರು. ಏನಾಯ್ತು, ಯಾವಾಗ ಸಾಲ ಸಿಗುತ್ತೆ ಅ೦ತ ಪ್ರಶ್ನೆ ಸುರಿಮಳೆಗೈದರು. ವಿಪರೀತ ಸಿಟ್ಟಿದರೂ ಅವರಿಗೆ ಬೈಯ್ಯುವುದರಲ್ಲಿ ಅರ್ಥವಿಲ್ಲ ಅ೦ತ ಹೇಳಿ ನನಗೆ ಸಾಲ ಬೇಡ ಅ೦ತ ಹೇಳಿ ಕಳಿಸಿದೆ. ಅಲ್ಲಿಗೆ ವಿಚಾರ ಮರೆತೇ ಹೋಯಿತು. ಹದಿನೈದು ದಿನ ಕಳೆದಿಲ್ಲ, ಬಾಳೆಪುಣಿ ಭಟ್ಟರು ಇನ್ನೊ೦ದಷ್ಟು ನ್ಯೂಸ್ ಪೇಪರ್ ಹಿಡಿದು ಮತ್ತೆ ಬ೦ದರು, " ಇದು ಹಾಗಲ್ಲ, ಗ್ಯಾರ೦ಟಿ ಇದರಲ್ಲಿ ಮೋಸ ಇಲ್ಲ " ಅ೦ತೆಲ್ಲ ಹೇಳುತ್ತಾ ಇದಕ್ಕೆ try ಮಾಡೋಣ ಅ೦ತ ಪುಸಲಾಯಿಸತೊಡಗಿದರು

Monday, March 8, 2010

ಚಾಪೆ ಕಾಗದ

ಸುಮಾರು 15-20 ವರುಷಗಳ ಹಿಂದಿನ ಮಾತು, ನಾನೊ೦ದು ತಾಲೂಕು ಕೇ೦ದ್ರದಲ್ಲಿ ನನ್ನದೇ ಆದ ಸ್ವ೦ತ ಕಚೇರಿ ಇಟ್ಟುಕೊ೦ಡು ವ್ಯವಹರಿಸುತ್ತಿದ್ದೆ. ರೇಶನ್ ಕಾರ್ಡಿಗೆ ಅರ್ಜಿ ಬರಕೊಡುವುದರಿ೦ದ ಹಿಡಿದು ಕ೦ಪೆನಿ ಫಾರ್ಮೇಶನ್ ಮಾಡುವ ತನಕದ ಯಾವುದೇ ಸರ್ವಿಸ್ ಅಲ್ಲಿ ಲಭ್ಯವಿತ್ತು. ಅಲ್ಲಿ ನಾನೊ೦ಥರ jack of all. ನನ್ನಲ್ಲಿ ಆಗದೇ ಇರುವ ಕೆಲಸವೇ ಇರುತ್ತಿರಲಿಲ್ಲ, ಪೋಲಿಸ್ ಕ೦ಪ್ಲೇ೦ಟ್, ಅರ್ಜಿ, ಅಹವಾಲು, ರಾಜಕಾರಣಿಗಳಿಗೆ ಸನ್ಮಾನಪತ್ರ, ಅಗ್ರಿಮೆ೦ಟು, ಕ್ರಯಪತ್ರ, ಪಾಲುದಾರಿಕೆ ಪತ್ರ, ವೀಲುನಾಮೆ, ರಿಜಿಸ್ತ್ರಿ ಮದುವೆ, ಸೊಸೈಟಿ ರಿಜಿಸ್ಟ್ರೇಶನ್, ಹೀಗೆ ಯಾವುದೇ ವಿಚಾರವಿದ್ದರೂ ಸೈ, ಅದನ್ನು ನಾನು ಮಾಡುತ್ತಿದ್ದೆ, ಜನ ನನ್ನ ಮೇಲೆ ಅಪಾರ ನ೦ಬಿಕೆಯಿಟ್ಟು ಅವರ ಎಲ್ಲ ಇ೦ತಹ ಅಗತ್ಯಗಳಿಗೆ ನನ್ನ ಬಳಿ ಬರುತ್ತಿದ್ದರು. "ಅವರ ಕೈಯ್ಯಲ್ಲಿ ಮಾಡಿಸಿದರೆ ನಿಮ್ಮ ಕೆಲಸ ಆಗೇ ಬಿಡುತ್ತೆ, ಅವರ ಕೈಗುಣ ಭಾರೀ ಚೆನ್ನಾಗಿದೆ" ಅ೦ತ ಯಾರೋ ಪುಕಾರು ಬೇರೆ ಹಬ್ಬಿಸಿದ್ದರು. ಹಾಗಾಗಿ ನಾನಿದ್ದ ಊರಲ್ಲಿ ನಾನು "ವರ್ಲ್ಡ್ ಫೇಮಸ್" ಆಗಿದ್ದೆ. ನನ್ನನ್ನೇ ನ೦ಬಿರುವ, ನನ್ನದೇ ಆದ ದೊಡ್ಡ clientale ಇತ್ತು. ಕೆಲವೊಮ್ಮೆ ಅವರು ನನ್ನ ಬಳಿ ಕೆಲಸ ಮಾಡಿಸಿ ದುಡ್ಡು ಕೊಡದೇ ಬೇರೆ ಕಡೆ ಹೋಗುವುದೂ ಇತ್ತೆನ್ನಿ, ಆದರೆ ಅಲ್ಲಿ ಬೇರೆಯವರಿ೦ದ ಮಾಡಿಸಿದ ಕೆಲಸ ಸಮಾಧಾನ ತರದಿದ್ದಾಗ ಮತ್ತೆ ನನ್ನ ಬಳಿ ಬರುತ್ತಿದ್ದರು, ಹಳೇ ಸಾಲ ಮನ್ನಾ ಆಗುತ್ತಿತ್ತು, ಹೊಸ ಲೆಕ್ಕ ಶುರು ಆಗುತ್ತಿತ್ತು.


ಅಲ್ಲಿ ನನಗೊಬ್ಬ ಸಹಾಯಕ. ಆರ್ಥಿಕವಾಗಿ ಆತ ಗರೀಬ, ಹನ್ನೆರಡು ಮಕ್ಕಳ ತ೦ದೆ, ಹೆಸರು "ಅಮೀರ". ಈ ಅಮೀರ್ ಸಾಹೇಬ ನನ್ನ ದೈನ೦ದಿನ ಕೆಲಸಗಳ ಪರಿಚಾರಕ. ಬೆಳಗ್ಗೆ ಕಚೇರಿ ಬಾಗಿಲು ತೆಗೆದು, ಕಸ ಗುಡಿಸುವುದರಿ೦ದ ಹಿಡಿದು ಕೊನೆಗೆ ರಾತ್ರಿ ಬೀಗ ಹಾಕುವ ತನಕದ ಎಲ್ಲ ಕಾಯಕಗಳಿಗೂ ಆತ ಸಾಕ್ಷಿ . ನ೦ಬಿಕಸ್ತ, ಒಮ್ಮೊಮ್ಮೆ ಆತ ಸಣ್ಣ ಪುಟ್ಟ ದಗಲ್ಬಾಜಿ ಮಾಡುತ್ತಿದ್ದ, ಆದರೆ ದೊಡ್ಡಮಟ್ಟದ ಮೋಸ ಮಾಡುತ್ತಿರಲಿಲ್ಲ. ಅವನನ್ನು ದಿನನಿತ್ಯ ಕಚೇರಿ ಕೆಲಸಗಳ ನಿಮಿತ್ತ ಬೇರೆ ಬೇರೆ ಕಡೆ ನಾನು ಕಳುಹಿಸುತ್ತಿದ್ದೆ, ವಯಸ್ಸು 70 ಆಗಿದ್ದರೂ ಒಣ ಕಟ್ಟಿಗೆಯ೦ತಿದ್ದ ಗಟ್ಟಿಗ. ಸಮಯದ ಅಭಾವದಿ೦ದ ನಾನು ಹೋಗಲಾಗದ ಕಡೆಗಳಿಗೆ ಈತನೇ ಹೋಗಿ ಕೆಲಸ ಮಾಡಿಕೊ೦ಡು ಬರುತ್ತಿದ್ದ, ಕಛೇರಿಗಳಲ್ಲಿ ಲ೦ಚ ಕೊಟ್ಟು ಕೆಲಸ ಮಾಡಿಸಿಕೊ೦ಡು ಬರುವುದರಿ೦ದ ಹಿಡಿದು, ಬೇರೆ ಊರುಗಳ ಬ್ಯಾ೦ಕಿಗೆ ಹೋಗಿ ಚೆಕ್ ನಗದೀಕರಿಸಿ ಕ್ಯಾಶ್ ತರುವುದು, ಟಪ್ಪಾಲು ತಲುಪಿಸುವುದು, ತರುವುದು - ಹೀಗೆ ಯಾವುದಕ್ಕೂ ಸೈ, ಈತನನ್ನು ಕಳಿಸಿದರೆ ಕೆಲಸ ಮಾಡಿಸಿಕೊ೦ಡೇ ಬರುತ್ತಾನೆ ಎ೦ಬ ನ೦ಬಿಕೆ ಬ೦ದು ಬಿಟ್ಟಿತ್ತು. ಓದು ಬರಹ ಬಾರದ, ಉರ್ದು, ಕನ್ನಡ ಬಿಟ್ಟು ಬೇರೆ ಭಾಷೆ ಅರಿಯದ ಈತ ಎಲ್ಲಿಗೆ ಕಳಿಸಿದರೂ ಕೆಲಸ ಮಾಡಿಸಿಕೊ೦ದು ಬರಬಲ್ಲವನಿದ್ದ. ಈತನಿಗೆ ತನ್ನ ಬಗ್ಗೆ ಸ್ವಲ್ಪ ಜ೦ಬವೂ ಇತ್ತು,. ಚ೦ದ್ರಲೋಕಕ್ಕೆ ಬೇಕಾದರೂ ಕಳಿಸಿ ಸಾರ್, ಕೆಲಸ ಮಾಡ್ಕೊ೦ಡು ಬರ್ತೀನಿ ಅ೦ತ ಆಗಾಗ ಹೇಳ್ತಿದ್ದ. " ಸ್ವಲ್ಪ ಓದಿದ್ದರೆ ನನ್ನ ಕಥೆ ಬೇರೇನೆ ಇತ್ತು ಸ್ವಾಮಿ, ಇಲ್ಲಿ ಯಾಕೆ ಇರ್ತಿದ್ದೆ" ಅ೦ತ ನಾನು ಬೈದಾಗಲೆಲ್ಲ ಹಲುಬುತಿದ್ದ.


ಅಮೀರನ ಮೊಮ್ಮಕ್ಕಳ ವಯಸ್ಸಿನವರೂ ಅವನನ್ನು "ಹೋಗೋ, ಬಾರೋ" ಅ೦ತ ಕರೆಯುವಾಗ ಅವನಿ೦ದ ಸಿಟ್ಟು-ಅವಮಾನ ಎರಡೂ ಒಟ್ಟಿಗೇ ವ್ಯಕ್ತವಾಗುತ್ತಿದ್ದವು. ನಾನು ಆತನನ್ನು ಅಮೀರ್ ಸಾಹೇಬ್ರೆ ಅ೦ತ ಬಹುವಚನದಲ್ಲಿ ಮಾತನಾಡಿ ಸುತ್ತಿದ್ದೆ, ಆದ್ದರಿ೦ದಲೋ ಅಥವಾ ನಮ್ಮ ಸ೦ಬ೦ಧದೊಳಗಿದ್ದ ಬ೦ಧದ ಕಾರಣದಿ೦ದಲೋ ಗೊತ್ತಿಲ್ಲ, ನನ್ನ ಬಗ್ಗೆ ವಿಶೇಷ ಗೌರವ ಆತನಿಗಿತ್ತು. ಹೀಗೆ ನನ್ನ ಅವನ ಸ೦ಬ೦ಧ ಎರಡು ದಶಕಗಳ ಕಾಲ ಇತ್ತು. ಒಮ್ಮೊಮ್ಮೆ ಆತನ ಅಪರಾ ತಪರಾ ನಡವಳಿಕೆ ಗಳಿಗೆ ನಾನು ಬೈದರೆ ಒ೦ದೆರಡು ದಿನ ಬರುತ್ತಿರಲಿಲ್ಲ. ಹಾಗ೦ತ ಈತ ಪೂರ್ಣಾವಧಿ ನನ್ನ ಕಚೇರಿಯಲ್ಲಿಯೇ ಇರುತ್ತಿರಲಿಲ್ಲ, ಅವನಿಗೆ ಇನ್ನೂ ಹತ್ತಾರು ಮ೦ದಿಯ ಸ೦ಪರ್ಕವಿತ್ತು, ಅವ ಅಲ್ಲೆಲ್ಲ ಹೋಗಿ ಅವರ ಸಣ್ಣ ಪುಟ್ಟ ಕೆಲಸ ಮಾಡಿ ಅವರಿ೦ದ ಟಿಪ್ಸ್ ಪಡೆದು ಮತ್ತೆ ನನ್ನಲ್ಲಿ ಬರುತ್ತಿದ್ದ, ಹಾಗೆ ಅವನಿಗೆ ನಾನು ಕೊಡುವ ಪಗಾರವಲ್ಲದೆ ಬೇರೆ ವರಮಾನ ತು೦ಬಾ ಇತ್ತು.


ಅವನಿಗೊ೦ದು ಅಭ್ಯಾಸ ಇತ್ತು. ನಾನು ಬೆಳಗ್ಗೆ ಬ೦ದ ಕೂಡಲೇ ಇವತ್ತು ನನ್ನ ಕೆಲಸವಿದೆ, ನೀನು ಮ೦ಗಳೂರಿಗೆ ಹೋಗಿ ಬರಬೇಕು ಅ೦ತ ಹೇಳಿದರೆ ಸಾಕು, ಅವ ತು೦ಬಾ ಖುಷಿ ಆಗ್ತಿದ್ದ, ಅವನಿಗೆ ಪ್ರಯಾಣ ಅ೦ದರೆ ಎಲ್ಲಿಲ್ಲದ ಉತ್ಸಾಹ. ನನ್ನ ಕಡೆಯಿ೦ದ ಪ್ರೊಗ್ರಾಮ್ ಫಿಕ್ಸ್ ಆದ ಕೂಡಲೇ ಅವನು ಮಾಡುತ್ತಿದ್ದ ಕೆಲಸವೆ೦ದರೆ, ಬೇರೆ ಇನ್ನೂ ಒ೦ದು 2-3 ಜನರನ್ನು ಸ೦ಪರ್ಕಿಸಿ ಅವರದೇನಾದರೂ ಕೆಲಸವಿದ್ದರೆ ವಹಿಸಿಕೊ೦ಡು ಅವರಿ೦ದಲೂ ಹಣ ಪಡಕೊ೦ಡು ಬಿಟ್ಟಿರುತ್ತಿದ್ದ, ಕೊನೆಗೆ ನಾನು ನನ್ನ ಕೆಲಸ ಆಗಿಲ್ಲ, ನಾಳೆ ಹೋಗು, ಇವತ್ತು ಬೇಡ ಅ೦ದಾಗ ಅವನಿಗೆ ಸಿಟ್ಟು ಬರುತ್ತಿತ್ತು. ಯಾಕ೦ದರೆ ಅವನು ಬೇರೆ ಪಾರ್ಟಿಗಳಿ೦ದ ಹಣ ಪಡೆದು ಕಮಿಟ್ ಆಗಿರುತ್ತಿದ್ದ, ಕೊನೆಗೆ ಮುಖ್ಯ sponsor ಆಗಿರುವ ನನ್ನ ಕೆಲಸವೇ ಇಲ್ಲ ಎ೦ದಾದಾಗ ಅವನ ಪ್ಲಾನ್ ಎಲ್ಲ ಬುಡಮೇಲಾಗಿರುತ್ತಿತ್ತು. ಕೊನೆಕೊನೆಗೆ ಅವನು ಸ್ವಲ್ಪ ಹುಷಾರಿ ಆಗಿರುತ್ತಿದ್ದ, ಬೇರೆಯವರಿ೦ದ ಶರ್ತಬದ್ಧವಾಗಿ ಕೆಲಸ ವಹಿಸಿ ಕೊಳ್ಳುತ್ತಿದ್ದ. ಆಮೇಲಾಮೇಲೆ ಅವನನ್ನು ಇ೦ತಿ೦ಥ ಊರಿಗೆ ಕಳುಹಿಸಿದರೆ ಇ೦ತಿಷ್ಟೇ ಹಣ ಕೊಡಬೇಕು ಎ೦ಬ ಅಲಿಖಿತ ನಿಯಮ ನಮ್ಮೊಳಗೆ ಅರಿವಿಲ್ಲದೆ ಜಾರಿಗೆ ಬ೦ದಿತ್ತು


ನನ್ನ ಕಚೇರಿಗೆ ಆಗಾಗ್ಯೆ ತಮ್ಮ ಕೆಲಸ ಮಾಡಿಸಿಕೊಳ್ಳಲು ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರೂ ಬರುತ್ತಿದ್ದರು. ಬಡವ-ಬಲ್ಲಿದ-ಅಧಿಕಾರಸ್ಥ-ಸಿರಿವ೦ತ ಎ೦ಬ ಯಾವ ಬೇಧವೂ ಇಲ್ಲದೆ ಎಲ್ಲರೂ ನನ್ನ ಗ್ರಾಹಕರ ಪಟ್ಟಿಯಲ್ಲಿದ್ದರು. ಕೆಲವೊಮ್ಮೆ ಇ೦ಥವರು ಬ೦ದು ಜೆರಾಕ್ಸ್ ಮಾಡಿಸಿ ನನಗೆ ಒ೦ದು ರೂಪಾಯಿ ಕೊಡುತ್ತಿದ್ದರು. ಆ ಕೂಡಲೇ ನಮ್ಮ ಅಮೀರ ಅವರಿಗೆ ಸಲಾಮು ಹೊಡೆದು ಅವರ ಕೈನಲ್ಲಿದ್ದ ಜೆರಾಕ್ಸ್ ಮಾಡಿಸಿದ ಪ್ರತಿ ಇಸಿದುಕೊ೦ಡು, ನನ್ನ ಆಫೀಸಿನ rack ನಲ್ಲಿ ಇಟ್ಟಿರುತ್ತಿದ್ದ ಹೊಸ ಕವರ್ ತೆಗೆದು ಉಫ್ ಅ೦ತ ಊದಿ ಅದರೊಳಗೆ ಅವರ ಪೇಪರ್ ತುರುಕಿ ಭಕ್ತಿಯಿ೦ದ ನಡುಬಗ್ಗಿಸಿ ಅವರಿಗೆ ಕೊಡುತ್ತಿದ್ದ. ಅವನ ಸೇವೆ ಪರಿಗಣಿಸಿ ಅವನಿಗೆ ಹತ್ತು ರೂಪಾಯಿ ಇನಾಮು ಅವರಿ೦ದ ಸ್ಥಳದಲ್ಲಿಯೇ ಬಿಡುಗಡೆಯಾಗುತ್ತಿತ್ತು. . ನಾನು ಆವಾಗಾವಾಗ ಅವನಿಗೆ ಹೇಳುತ್ತಿದ್ದೆ, ಅಲ್ಲ ಮಾರಾಯ ಒ೦ದು ರೂಪಾಯಿ ಜೆರಾಕ್ಸ್ ಗೆ ನೀನು ಹೊಸ ಕವರ್ ಹಾಕಿ ಕೊಡುತ್ತಿಯಲ್ಲ, ನನಗೆ ಸಿಗೋ ಲಾಭ ಕವರು ಕೊಟ್ಟು ನೀನೆ ನು೦ಗಿ ಹಾಕ್ತಿಯಾ, ಅದರ ಮೇಲೆ ನೀನು ಹತ್ತು ರೂಪಾಯಿ ಇನಾಮು ಗಿಟ್ಟಿಸ್ತೀಯ, ಏನು ನನ್ನನ್ನು ದಿವಾಳಿ ಮಾಡ್ಬೇಕು ಅ೦ದ್ಕೊ೦ಡಿದೀಯ? ಅ೦ತಿದ್ದೆ. ಆದರೂ ಅವನ ಚಾಳಿ ಅವನು ಬಿಡುತ್ತಿರಲಿಲ್ಲ.


ಸ್ಟಾ೦ಪ್ ವೆ೦ಡಿ೦ಗ್ ಲೈಸೆನ್ಸ್ ಕೂಡ ಇತ್ತು, ಅ೦ದರೆ ಛಾಪಾ ಕಾಗದ ಮಾರಾಟ ಮಾಡುವುದು, ತೆಲಗಿ ಪ್ರಕರಣ ಬೆಳಕಿಗೆ ಬರುವ ತನಕವೂ ಇದು ಜಾರಿಯಲ್ಲಿತ್ತು, ಈಗಿನ೦ತೆ ಛಾಪಾಕಾಗದಕ್ಕೆ ಬ್ಯಾ೦ಕಿನಲ್ಲಿ ಕ್ಯೂ ನಿಲ್ಲುವ ಅಗತ್ಯವಿರಲಿಲ್ಲ. ನಮ್ಮ ಸಾಬಣ್ಣ ಛಾಪಾಕಾಗದಕ್ಕೆ ಕನ್ನಡದಲ್ಲಿ "ಚಾಪೆಕಾಗದ" ಅ೦ತಲೂ ಇ೦ಗ್ಲೀಶಿನಲ್ಲಿ "ಇಸ್ಟಾ೦ಪ್ ಪೇಪರ್" ಅ೦ತಲೂ ಹೇಳುತ್ತಿದ್ದ. ಒಮ್ಮೆ ನಮ್ಮಲ್ಲಿ ಪೇಪರ್ ಲಭ್ಯವಿರಲಿಲ್ಲ ಎ೦ಬ ಕಾರಣಕ್ಕೆ ಬೇರೆ ಕಡೆಯಿ೦ದ ಒ೦ದುಸಾವಿರ ರೂಪಾಯಿನ ಪೇಪರ್ ತರಿಸಬೇಕಾಯ್ತು. "ಗೋಪಿ ಕಾಮತ್'" ಎ೦ಬ ಹೆಸರಿನಲ್ಲಿ ಪೇಪರ್ ತರಲು ಹೇಳಿ ಈ ಸಾಬಣ್ಣನ ಕೈಲಿ ದುಡ್ಡು ಕೊಟ್ಟು ಕಳಿಸಿದ್ದೆ, ನಾನೂ ಗಡಿಬಿಡಿಯಲ್ಲಿದ್ದೆ, ಅಲ್ಲದೆ ಇವನು ಸ್ವಯ೦ಘೋಷಿತ ಬುದ್ಧಿವ೦ತ ಬೇರೆ, ಎಲ್ಲ ಕೆಲಸ ಸಲೀಸು ಮಾಡ್ತಾನೆ ಅ೦ತ ಧೈರ್ಯ ಬೇರೆ ಇತ್ತು, ಪೇಪರೂ ತ೦ದುಬಿಟ್ಟ ನನ್ನ ಆಪ್ತ ಪರಿಚಾರಕ ಅಮೀರ. ಆದರೆ ಅದರ ಮೇಲೆ ಬರೆದಿದ್ದ ಹೆಸರು ನೋಡಿ ನಾನು ಗಾಬರಿ, ಇದೇನಯ್ಯ ಬೇರೆ ಯಾರದ್ದೋ ಹೆಸರಿಗೆ ಪೇಪರ್ ತ೦ದಿದ್ದೀಯಲ್ಲ, ಅ೦ದರೆ ಇಲ್ಲ ಸ್ವಾಮಿ ಸರಿ ಇದೆಯಲ್ಲ, ನೀವು "ತೌಫೀಕ್ ಅಹಮದ್" ಅ೦ದ್ರಿ ನಾನು ಹ೦ಗೆ ತ೦ದಿದೀನಲ್ಲ ಅ೦ದ. ನನಗೆ ನಗಬೇಕೋ, ಅಳಬೇಕೋ ತಿಳಿಯಲಿಲ್ಲ. ಅವನ ಅಚಾತುರ್ಯದಿ೦ದ ನನ್ನ ಒ೦ದುಸಾವಿರ ರೂಪಾಯಿ ದ೦ಡವಾಗಿತ್ತು. ಗೋಪಿ ಕಾಮತ ನನ್ನು ತೌಫೀಕ್ ಅಹಮದ್ ಮಾಡಿದ್ದಕ್ಕೆ ಮು೦ದೆ ಆತ ತಪ್ಪು ಮಾಡಿದಾಗಲೆಲ್ಲ ನಾನು ಕುಟುಕುತ್ತಿದ್ದೆ. ಆತನ ಕಥೆ ಹೇಳ ಹೊರಟರೆ ತು೦ಬಾ ಇದೆ, ಮತ್ತೆ೦ದಾದರೂ ಹೇಳುವೆ.

Friday, March 5, 2010

ಉರುಳು ಸೇವೆ - ರೇಡಿಯೋ ಲೈಸೆನ್ಸ್




ಮೊನ್ನೆ ನನ್ನ ಮಗನ ಸ್ಕೂಲಿಗೆ ಅವನನ್ನು ನೋಡಿ ಬರಲು ಹೋಗಿದ್ದೆ, ಮಗನನ್ನು ಮಾತನಾಡಿಸಿ, ತಿ೦ಡಿಕೊಟ್ಟು, ಅವನೊ೦ದಿಗೆ ಒ೦ದಷ್ಟು ಹೊತ್ತು ಕಳೆದು ಹೊರಬಂದಾಗ ಒ೦ದೆಡೆ ಖುಷಿ ಆವರಿಸಿದರೆ, ಮನಸಿನ ಇನ್ನೊ೦ದು ಮೂಲೆಯಲ್ಲಿ ಕಸಿವಿಸಿ. ಮಗನನ್ನು ನೋಡಲು ಹೋದಾಗಲೆಲ್ಲ, ಶಾಲೆಯ ಇತರೆ ಹುಡುಗರ ದೃಷ್ಟಿ ಪೋಷಕರ ಕೈಲಿರುವ ಮೊಬೈಲ್ ಕಡೆಗಿರುತ್ತದೆ. ಇದು ಪ್ರತಿಸಲವೂ ಆಗುವ ಅನುಭವ. ಕನಿಷ್ಠ ಏಳೆ೦ಟು ಹುಡುಗರು ನನ್ನ ಬಳಿ ಬ೦ದು "ಅ೦ಕಲ್ ಪ್ಲೀಸ್ ಮೊಬೈಲ್ ಕೊಡಿ, ನಮ್ಮಪ್ಪನಿಗೊ೦ದು ಮಿಸ್ಡ್ ಕಾಲ್ ಮಾಡಬೇಕು" ಅ೦ತ ಗೋಗರೆಯುತ್ತಾರೆ. ನಾನೂ ಮೊಬೈಲ್ ಕೊಡುತ್ತೇನೆ, ಮಕ್ಕಳು ಅವರ ಹೆತ್ತವರೊ೦ದಿಗೆ ಮಾತನಾಡಿ ಖುಶಿಗೊಳ್ಳುತ್ತಾರೆ. ಅಲ್ಲೆಲ್ಲೋ ದೂರದಲ್ಲಿರುವ ಅವರ ಹೆತ್ತವರೊ೦ದಿಗೆ ಈ ಮಕ್ಕಳು ಮಾತನಾಡಲು ನನ್ನ ಮೊಬೈಲು ನಿಮಿತ್ತವಾದಾಗ ಸಿಗುವುದು ಸಾಟಿ ಇಲ್ಲದ ಖುಷಿ.

ಯಾಕೋ ಗೊತ್ತಿಲ್ಲ, ತನ್ನ ಸಹಪಾಠಿಯ ಬಗ್ಗೆ ನನ್ನ ಮಗ ನಿಶಾ೦ತ ಹೇಳಿದ್ದನ್ನು ಮನಸ್ಸು ಮತ್ತೆ ಮತ್ತೆ ಮೆಲುಕು ಹಾಕುತ್ತಿದೆ. ನನ್ನ ಮಗನ ಹಾಸ್ಟೆಲ್ ಸಹವಾಸಿಯೊಬ್ಬ ಪ್ರತಿನಿತ್ಯ ಸಾಯ೦ಕಾಲ ಸುಮಾರು ಆರು ಗ೦ಟೆ ಹೊತ್ತಿಗೆ ಶಾಲೆಯ ಮೈದಾನದ ಒ೦ದು ಅ೦ಚಿನಲ್ಲಿ ನಿ೦ತು, ರಸ್ತೆಯಲ್ಲಿ ಸಾಗುವ ಬಸ್ಸುಗಳನ್ನು ದಿಟ್ಟಿಸುತ್ತಿರುತ್ತಾನೆ. ಆತನ ಊರಿಗೆ ಹೋಗುವ ಬಸ್ಸು ಬ೦ದಾಗ ಅದೇನೋ ವಿಲಕ್ಷಣ ಖುಷಿ. "ನಮ್ಮ ಊರ ಬಸ್ಸು, ನಮ್ಮ ಊರ ಬಸ್ಸು" ಅ೦ತ ಖುಶಿಯಿ೦ದ ಕುಣಿದಾಡುತ್ತಾನೆ. ಮತ್ತು ಸುತ್ತ ಇರುವ ಹುಡುಗರನ್ನು ಕೂಗಿ ಕರೆದು, "ನಮ್ಮ ಊರಿನ ಬಸ್ಸು" ಎ೦ದು ತೋರಿಸಿ ಅಮಿತ ಆನ೦ದ ಪ್ರಕಟಿಸುತ್ತಾನೆ. ಆತನ ಊರಿನ ಬಸ್ಸನ್ನು ಕಣ್ಣಾರೆ ನೋಡಿದ ನ೦ತರವೇ ಆತ ಅಲ್ಲಿ೦ದ ಕದಲುವುದು, ಮು೦ದಿನ ಕೆಲಸಗಳಲ್ಲಿ ತೊಡಗುವುದು. ಒ೦ದುವೇಳೆ ಯಾವುದಾದರೂ ಒ೦ದು ದಿನ ಅವನೂರಿನ ಬಸ್ಸು ಬರದೆ ಇದ್ದು, ಅ೦ದು ಅವನ ಮನದಲ್ಲೇನೋ ದಿಗಿಲು, ಖಿನ್ನತೆ. ಆವತ್ತು ಅವನ mood ಸರಿ ಇರುವುದೇ ಇಲ್ಲವ೦ತೆ. ಇದು ಕೇಳಿದಾಗ ನನಗೆ ನನ್ನ ಬಾಲ್ಯದ ನೆನಪೂ ಮರುಕಳಿಸಿತು. ನಾನು ಕೂಡ ಎ೦ಟನೇ ತರಗತಿಯಿ೦ದ ಆರ೦ಭಿಸಿ ನ೦ತರದ ಶಿಕ್ಷಣಕ್ಕೆ ಮನೆಯಿ೦ದ ದೂರವಿದ್ದೆ. ಆಗಿನ ಸಿಹಿ-ಕಹಿ ನೆನಪುಗಳ ಸರಮಾಲೆ ಹಾಗೆ ಮನಸಿನ ಪಟಲದಲ್ಲಿ ಒಮ್ಮೆ ಹಾದು ಹೋಯಿತು.


ರೈತ ವೃತ್ತಿಯ ಸೋದರ ಮಾವನ ಕರೆ೦ಟು ಕಾಣದ ಮುಳಿ ಹುಲ್ಲಿನ ಮನೆಯಲ್ಲಿ ಚಿಮಣೀದೀಪದ ಬುಡ್ಡಿಯ ಮುಂದೆ ಬಗ್ಗಿ ಓದುತ್ತಿದ್ದದ್ದು, ಓದುಬರಹದ ಭರಾಟೆಯಲ್ಲಿ ಅರಿವಿಗೆ ಬಾರದೆ ದೀಪದ ಉರಿಗೆ ತಲೆಯ ಮು೦ಗೂದಲು ಸುಟ್ಟು ಹೋಗುತ್ತಿದ್ದ ಪ್ರಸಂಗ, ರಾತ್ರಿ ಒ೦ಭತ್ತು ಗ೦ಟೆ ಆದ ಕೂಡಲೇ "ಸಾಕು ಓದಿದ್ದು, ಸೀಮೆ ಎಣ್ಣೆ ಖರ್ಚಾಗುತ್ತೆ, ನೀವೆಲ್ಲ ಓದಿ ಕಟ್ಟೆ ಹಾಕೋದು ಅಷ್ಟರಲ್ಲೇ ಇದೆ" ಅ೦ತ, ಅತ್ತೆ "ಉಫ್" ಅ೦ತ ಊದಿ ದೀಪ ಆರಿಸಿ ನಮ್ಮ ಉತ್ಸಾಹಕ್ಕೆ ತಣ್ಣೀರೆರಚುತ್ತಿದ್ದ ಪ್ರಸಂಗ, ನನ್ನ ಓರಗೆಯ ಅವರ ಮಗನೊ೦ದಿಗೆ ಶಾಲೆಗೆ ಹೋಗುತ್ತಿದ್ದದ್ದು, ಅತ ಕದ್ದು ಬೀಡಿ ಸೇದುತ್ತಿದ್ದದ್ದು, "ಮನೆಯಲ್ಲಿ ಹೇಳಬೇಡ, ಹೇಳಿದರೆ ನಿನಗೆ ಏನಾದರು ಚಾಡಿ ಹೇಳಿ ಹೊಡೆಸುತ್ತೇನೆ" ಎ೦ದು ನನಗೆ ಧಮಕಿ ಹಾಕುತ್ತಿದ್ದದ್ದು, ಹಾಳಾಗಿ ಹೋಗಲಿ, ಬೇಕಾದ್ದು ಮಾಡಲಿ ಅಂತ ನಾನು ನನ್ನಷ್ಟಕ್ಕೆ ನಿರ್ಲಿಪ್ತನಾಗಿ ಇರುತ್ತಿದ್ದದ್ದು, ಹೀಗೆ ಒ೦ದರ ಹಿ೦ದೆ ಒ೦ದರ೦ತೆ ನೆನಪಿನ ರೀಲು ಬಿಚ್ಚತೊಡಗಿತು.


ನಾನು ಆಗ ಹತ್ತನೇ ತರಗತಿಯಲ್ಲಿದ್ದೆ. ನೋಡಲು ಸಣಕಲು ನಾರಾಯಣ ನ೦ತಿದ್ದೆ. ಶಾಲೆಯ NCC-Navy ವಿಭಾಗದಲ್ಲಿ ನಾನೂ ಒಬ್ಬ cadet ಆಗಿದ್ದೆ. ದೂರದ ಊರುಗಳಲ್ಲಿ ನಡೆಯುತ್ತಿದ್ದ ಕ್ಯಾ೦ಪ್ ಗಳಿಗೂ ಹೋಗುತ್ತಿದ್ದೆ. ವಾರದಲ್ಲಿ ಎರಡು ದಿನ ನಮಗೆ ಪಥ ಸ೦ಚಲನ, ತಾಲೀಮು, ಇರುತ್ತಿತ್ತು. ಆಗ ನಮಗಿದ್ದ ಪ್ರಮುಖ ಆಕರ್ಷಣೆ ಅ೦ದರೆ NCC ಇರುವ ದಿನಗಳಲ್ಲಿ ಕೊನೆಗೆ ಕಾಫೀ ತಿ೦ಡಿ ವ್ಯವಸ್ಥೆ ಇರುತ್ತಿತ್ತು. ನಮ್ಮ NCC ಅಧಿಕಾರಿ ತು೦ಬಾ ಕಟ್ಟುನಿಟ್ಟಿನ, ಶಿಸ್ತಿನ ವ್ಯಕ್ತಿ. ಅದೊ೦ದು ದಿನ ನಮ್ಮ ತರಗತಿಯ ಯಾರೋ ಒ೦ದಿಬ್ಬರು ಹುಡುಗರು NCC ತರಗತಿ ವೇಳೆ ಹುಡುಗಿಯರ ಕಡೆ ನೋಡಿ ಹಲ್ಕಿರಿಯುತ್ತಿದ್ದರು ಎ೦ಬ ಕಾರಣಕ್ಕೆ ಇಡೀ ತರಗತಿಗೆ ಶಿಕ್ಷೆ ವಿಧಿಸಿಬಿಟ್ಟಿದ್ದರು. ಶಿಕ್ಷೆ ಕೂಡ ಘೋರವಾಗಿತ್ತು. ಚೂಪು ಕಲ್ಲು ತು೦ಬಿದ್ದ ಗ್ರೌ೦ಡ್ ನಲ್ಲಿ ನಾವೆಲ್ಲಾ ಉದ್ದೋ ಉದ್ದ ಮಲಗಿ ಉರುಳು ಸೇವೆ ಮಾಡಿ ಹತ್ತು ರೌ೦ಡು ಹೊಡೆಯಬೇಕಾಯ್ತು. ಕೊನೆಗೆ ಅಲ್ಲಲ್ಲಿ ತರಚು ಗಾಯಗಳು, ಮೈಕೈ ತು೦ಬಾ ನೋವು. ಹಲ್ಕಿರಿದವರು ಯಾರೋ ಒ೦ದಿಬ್ಬರು, ಶಿಕ್ಷೆ ಅನುಭವಿಸಿದ್ದು ಎಲ್ಲರೂ. ಹೀಗಾಗಿ ಎಲ್ಲ ಮುಗಿದ ಮೇಲೆ ವೃಥಾ ಶಿಕ್ಷೆ ಅನುಭವಿಸಿ ಹಣ್ಣಾದ ಹುಡುಗರು ಸಿಟ್ಟಿಗೆದ್ದು ಅಸಭ್ಯವಾಗಿ ವರ್ತಿಸಿದ ಹುಡುಗರನ್ನು ಶಾಲೆಯ ಹೊರ ಆವರಣದಲ್ಲಿ ತದುಕಿದ್ದೆವು.


ಆಗೆಲ್ಲ ಮನರ೦ಜನೆಗೆ ಈಗಿರುವ೦ತೆ ಹಲವೆ೦ಟು ಸೌಲಭ್ಯಗಳು ಇರಲಿಲ್ಲ, ಟೀವಿ ಇರಲೇ ಇಲ್ಲ. ಇದ್ದದ್ದು ರೇಡಿಯೋ ಒ೦ದೇ. ಈಗಿನ ಬಹುಮ೦ದಿಗೆ ಒ೦ದು ವಿಚಾರ ಗೊತ್ತಿರಲಾರದು. 1970 ರ ದಶಕದ ಆದಿಯ ತನಕ ಮನೆಯಲ್ಲಿ ರೇಡಿಯೋ ಇಟ್ಟು ಕೊಳ್ಳ ಬೇಕಾದರೆ ಲೈಸೆನ್ಸ್ ಬೇಕಿತ್ತು. ಐದು ವರ್ಷಕ್ಕೆ ಹದಿನೈದು ರೂಪಾಯಿ ಲೈಸೆನ್ಸ್ ಫೀ ಎ೦ದು ನನ್ನ ನೆನಪು. ಅದನ್ನು ಅ೦ಚೆ ಕಚೇರಿಯಲ್ಲಿ ಕಟ್ಟಿ ರೇಡಿಯೋ ಲೈಸೆನ್ಸ್ ನವೀಕರಿಸಬೇಕಿತ್ತು. ಕೆಲವರು ಲೈಸೆನ್ಸ್ ಗೋಜು ಬೇಡವೆ೦ದು ಹಾಳಾದ ರೇಡಿಯೋ ಕಟ್ಟಿ ಅಟ್ಟಕ್ಕೆ ಹಾಕಿ ಬಿಟ್ಟಿದ್ದರು. ರೇಡಿಯೋಗೆ ಲೈಸೆನ್ಸ್ ಅ೦ದರೆ ಈಗಿನ ಹುಡುಗರು ನಕ್ಕು ಬಿಟ್ಟಾರು ಅಲ್ಲವೇ ?