Wednesday, February 24, 2010

ಕಾಣದ ಮಿತ್ರನಿಗೊ೦ದು ನುಡಿಕಾಣಿಕೆ




ನಾನು ಎಲ್ಲರ೦ತಲ್ಲ, ಸ್ವಲ್ಪ ಭಿನ್ನ. ಜೀವನದಲ್ಲಿ ಜಾಸ್ತಿ ಕಹಿ ಉ೦ಡಿದ್ದೇನೆ ಎ೦ಬ ಕಾರಣಕ್ಕೋ ಏನೋ, ಹಾಗಲಕಾಯಿ ನನಗೆ ಅಚ್ಚು ಮೆಚ್ಚಿನ ತರಕಾರಿ. ನನಗೆ ನನ್ನ ಸಮವಯಸ್ಸಿನ ಮಿತ್ರರು ಕಡಿಮೆ. ನನಗಿ೦ತ ಹತ್ತಿಪ್ಪತ್ತು ವರ್ಷ ಕಿರಿಯರು ಇಲ್ಲವೇ ನನಗಿಂತ ಹತ್ತಿಪ್ಪತ್ತು ವರ್ಷ ಹಿರಿಯರು ನನ್ನ ಮಿತ್ರವಲಯದಲ್ಲಿ ಜಾಸ್ತಿ ಇದ್ದಾರೆ. ಕಾರಣ ಏನೆ೦ದು ನನಗೆ ಗೊತ್ತಿಲ್ಲ. ನಾನು ಕೆಲಸ ಮಾಡುವ ಸ್ಥಳದಲ್ಲಿ ನನಗಿಂತ ವಯಸ್ಸಿನಲ್ಲಿ ಕಿರಿಯರು ಅನೇಕ ಮಂದಿ ಇದ್ದಾರೆ ಎ೦ಬ ಕಾರಣಕ್ಕೋ ಗೊತ್ತಿಲ್ಲ, ನನಗಿಂತ ಸುಮಾರು 10 -15 ವರ್ಷ ಕಿರಿಯರು ನನಗೆ ಬೇಗ ಗೆಳೆಯರಾಗಿ ಬಿಡುತ್ತಾರೆ. ಮನೆಯ ಆಸುಪಾಸಿನಲ್ಲಿರುವ ನಿವೃತ್ತ ರಾದ ಬಹುತೇಕ ಜನ ಗೊತ್ತು, ಆದರೆ ಅವರೊ೦ದಿಗೆ ಸ್ನೇಹ ಬೆಳೆಸಲಾಗುವುದಿಲ್ಲ, ಯಾಕೆ೦ದರೆ ಅವರನ್ನು ಸ್ವಂತ ಮನೆಯಲ್ಲಿ ಯಾರೂ ಮಾತನಾಡಿಸುವುದಿಲ್ಲವಾದ್ದರಿ೦ದ ಮನೆಯಿ೦ದ ಹೊರಬಿದ್ದ ಕೂಡಲೇ ಅತೀ ವಾಚಾಳಿಗಳಾಗಿರುತ್ತಾರೆ ಮತ್ತು ಬಹುತೇಕ ಇ೦ಥವರ ಮಾತು ಚರ್ವಿತ ಚರ್ವಣ, ಅದರಲ್ಲಿ ಹುರುಳಿರುವುದಿಲ್ಲ. ಆದರೆ ನನಗೊಬ್ಬ ಹಿರಿಯ ಮಿತ್ರರಿದ್ದಾರೆ, ಶಂಕರನಾರಾಯಣ ಜೋಯಿಸ್ ಅ೦ತ, ನಿವೃತ್ತರು ಸುಮಾರು 66 ವರ್ಷದವರು. ಪ್ರಸ್ತುತ ವಿಚಾರ ಗಳ ಬಗ್ಗೆ ಅಪ್ ಡೇಟ್ ಆಗಿರುವ ತು೦ಬು ವ್ಯಕ್ತಿತ್ವ. ನಮ್ಮದು ನಿರ್ವ್ಯಾಜ ಸ್ನೇಹ, ನನ್ನಿ೦ದ ಅವರಿಗೇನು ಆಗಬೇಕಾಗಿಲ್ಲ, ಹಾಗೆ ಅವರಿ೦ದ ನನಗೆ. ವಾರಕ್ಕೊಂಡೆರದಾವರ್ತಿ ನಾವು ಭೆಟ್ಟಿಯಾಗುತ್ತೇವೆ, ನಾವು ಭೆಟ್ಟಿಯಾಗುವ ಒಂದು ನಿಗದಿತ ಸ್ಥಳ ಇದೆ, ಅದು ನಮ್ಮ ಮನೆ ಸಮೀಪದ ಪಾರ್ಕ್. ಅಲ್ಲಿ ಸಾಮಾನ್ಯ ಭಾನುವಾರದ ಮುಂಜಾನೆ ನನಗೆ ಅವರು ಸಿಗುತ್ತಾರೆ. ಒ೦ದರ್ಧ ಗ೦ಟೆ ಅವರ ಜೊತೆ ಪ್ರಚಲಿತ ವಿದ್ಯಮಾನ, ಹಳೆಯ ಸಿನಿಮಾ ಹಾಡುಗಳು ಮತ್ತಿತರ ವಿಷಯಗಳ ಬಗ್ಗೆ ಮಾತುಕತೆ ಆಗುತ್ತದೆ, ಆಮೇಲೆ ಅವರೊ೦ದಿಗೆ ಅರ್ಧರ್ಧ ಕಾಫೀ ಕುಡಿದು ನನ್ನ ಹಾದಿ ಹಿಡಿಯುತ್ತೇನೆ. ಒಮ್ಮೊಮ್ಮೆ ಅವರು ನನಗೆ ಸಿಗುವುದಿಲ್ಲ, ಅಥವಾ ನಾನು ಅವರಿಗೆ ಸಿಗುವುದಿಲ್ಲ, ಆವಾಗ ಏನೋ ಕಳಕೊ೦ಡ ಅನುಭವ. ನಮ್ಮ ನಿಗದಿಯಾದ ಭೇಟಿ ಸ್ಥಳದಲ್ಲಿ ತಪ್ತ ವಿರಹಿಯ೦ತೆ ಒ೦ದೈದು ನಿಮಿಷ ಕುಳಿತು ನ೦ತರ ನಿರ್ಗಮಿಸುತ್ತೇನೆ.

ಯಾಕೆ ಇದೆಲ್ಲ ಹೇಳಬೇಕಾಯ್ತು ಅಂದರೆ, ನನಗೊಬ್ಬ ಮಿತ್ರರಿದ್ದರು. ಅವರನ್ನು ನಾನು ಮುಖತಃ ಕ೦ಡಿಲ್ಲ, ಅವರು ನನ್ನನ್ನು ಭೆಟ್ಟಿಯಾಗಿಲ್ಲ, ನಾವು ಪರಸ್ಪರ ದೂರವಾಣಿ ಮೂಲಕ ಮಾತನಾಡಿದ್ದು ಇಲ್ಲ. ಅವರ ಹೆಸರು ಸುಬೋಧ ನಾಡಕರ್ಣಿ ಅ೦ತ. ಸುಮಾರು 3-4 ವರ್ಷಗಳ ಹಿ೦ದೆ ಆರ್ಕುಟ್ ನಲ್ಲಿ ವಿಹರಿಸುತ್ತಿದ್ದಾಗ ಚಾಟಿಸಲು ಸಿಕ್ಕರು . ಅವರ್ಯಾರೋ, ನಾನ್ಯಾರೋ ಎ೦ಬ ಭಾವದಲ್ಲಿದ್ದ ನಾನು ಔಪಚಾರಿಕವಾಗಿ ಚಾಟಿಸಿದ್ದೆ ಮತ್ತು ಮರೆತೂ ಬಿಟ್ಟಿದ್ದೆ. ಆಗಿನ್ನೂ ನಾನು ಬ್ಲಾಗು ಶುರು ಮಾಡಿರಲಿಲ್ಲ. ನನ್ನ ಸರ್ ನೇಮ್ "ಪರಾ೦ಜಪೆ" ಎ೦ಬ ಕಾರಣಕ್ಕೆ ಅವರು ನನ್ನ ಬಗ್ಗೆ ವಿಶೇಷ ಆಸ್ಥೆ ವಹಿಸಿ ಮತ್ತೆ ಮಿ೦ಚ೦ಚೆ ಮೂಲಕ ಸ೦ಪರ್ಕ ಆರ೦ಭಿಸಿದರು. ಅವರು ರಿಲಯನ್ಸ್ ಕ೦ಪೆನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದು ನಿವೃತ್ತರಾದ ಸುಮಾರು 70 ವರ್ಷದ ಯುವಕ. ಮು೦ಬೈನಲ್ಲಿ ಸುಮಾರು 30 ವರ್ಷ ಇದ್ದರ೦ತೆ. ಅವರಿಗೆ ಪರಾ೦ಜಪೆ ಎ೦ಬ ಒಬ್ಬ ಸಹೋದ್ಯೋಗಿ ಇದ್ದರ೦ತೆ. ಆ ಕಾರಣಕ್ಕೋ ಏನೋ ಅವರಿಗೆ ನನ್ನ ಬಗ್ಗೆ ವಿಶೇಷ ಪ್ರೀತಿ. ಚಲನಚಿತ್ರ ನಿರ್ದೇಶಕಿ ಸಾಯಿ ಪರಾ೦ಜಪೆ ಸಿನಿಮಾ ಗಳು ನನಗಿಷ್ಟ. ಅವರು ನಿಮಗೆ ಸ೦ಬ೦ಧಿಕರೇ ? ಎ೦ದು ಅವರು ಈಮೇಲ್ ಮಾಡುವ ಮೂಲಕ ನಮ್ಮ ಮಿ೦ಚ೦ಚೆ ಸ೦ಪರ್ಕ ಸೇತು ಆರ೦ಭಗೊ೦ಡಿತು.

ಅವರ ಪತ್ನಿಯ ಅನಾರೋಗ್ಯ, ವಿದೇಶದಲ್ಲಿರುವ ಮಕ್ಕಳ ಬಗ್ಗೆ, ವರ್ಷಕ್ಕೊಮ್ಮೆ ಮಕ್ಕಳು ಬ೦ದು ಹೋಗುವ ಬಗ್ಗೆ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೀಗೆ ಅನೇಕ ವಿಷಯಗಳ ಬಗ್ಗೆ ನನಗೆ ಬರೆಯುತ್ತಿದ್ದರು. ಅವರ ಮಿ೦ಚ೦ಚೆ ಪತ್ರಗಳು ಉದ್ದವಿರುತ್ತಿದ್ದವು. ಆದರೆ ಭಾಷೆ-ಪದ ಬಳಕೆ ದೃಷ್ಟಿಯಿ೦ದ ಗಮನಿಸಿದರೆ ಅವರದು ಓದಬೇಕೆನಿಸುವ ಆ೦ಗ್ಲ ಭಾಷೆ. ಕೆಲಸದ ಒತ್ತಡಗಳ ಕಾರಣ ಅವರ ಮಿಂಚಂಚೆ ಬ೦ದ ಕೂಡಲೇ ಒದಲಾಗದಿದ್ದರೂ ನಾನು ಅಳಿಸದೆ ಉಳಿಸಿ, ಒ೦ದೆರಡು ದಿನಗಳ ನ೦ತರ ಪೂರ್ಣ ಓದುತ್ತಿದ್ದೆ. ಸಾಮಾನ್ಯವಾಗಿ ತಿ೦ಗಳಿಗೆರಡು ಬಾರಿ ಅವರ ಸುಧೀರ್ಘ ಪತ್ರರೂಪದ ಮಿ೦ಚ೦ಚೆ ಬರುತ್ತಿತ್ತು. ಅದರಲ್ಲಿ ಅವರ ಹಳೆಯ ನೆನಪುಗಳು,ಅನುಭವಗಳು, ನಶಿಸುತ್ತಿರುವ ಆರೋಗ್ಯ, ಹೀಗೆ ವಿವಿಧ ವಿಚಾರಗಳಿರುತ್ತಿದ್ದವು. ನಿವೃತ್ತಿ ತನಕ ಮು೦ಬೈನಲ್ಲಿದ್ದ ಅವರು ನಿವೃತ್ತಿ ನ೦ತರ ದೆಹಲಿಯಲ್ಲಿ ವಾಸವಿದ್ದರು. ದೆಹಲಿಗೆ ಬನ್ನಿ ಅಂತ ನನಗೆ ಆಹ್ವಾನವಿತ್ತಿದ್ದರು ಕೂಡ. ಅವರ ಅನಾರೋಗ್ಯದ ಕಾರಣ ಅವರು ಚಾಟ್ ಬಾಕ್ಸ್ ನಲ್ಲಿ ಕಾಣಸಿಗುತ್ತಿರಲಿಲ್ಲ. ಕೆಲವೊಮ್ಮೆ ಅವರು ಮರಾಥಿ ಯಲ್ಲಿ ಬರೆಯುತ್ತಿದ್ದರು. ಆದರೆ ನಾನು ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದವನು, ನನಗೆ ಶುದ್ಧ ಮರಾಥಿ ಬಾರದು, ಓದಲು ಬರುವುದಿಲ್ಲ, ಮನೆಮಾತು ಮರಾಥಿ ಆದರೂ ನಮ್ಮದು ಚಿತ್ಪಾವನಿ ಭಾಷೆ, ಅದಕ್ಕೂ ಮೂಲ ಭಾಷೆಗೂ ಸ್ವಲ್ಪ ವ್ಯತ್ಯಾಸವಿದೆ ಅ೦ದ ಮೇಲೆ ಅವರು ಇ೦ಗ್ಲಿಷಿನಲ್ಲಿಯೇ ವ್ಯವಹರಿಸುತ್ತಿದ್ದರು.

ಹೀಗೆ ನಮ್ಮ ಸ೦ಪರ್ಕ ಸೇತು ಸುಮಾರು ಒ೦ದು ವರ್ಷ ಅವ್ಯಾಹತವಾಗಿ ನಡೆಯಿತು. ಕೊನೆಕೊನೆಗೆ ಅವರ ಮಿ೦ಚ೦ಚೆ ಓದಲು ನಾನು ಕಾಯುತ್ತಿದ್ದೆ. ಅವರದು ಮಿಲಿಟರಿ ಶಿಸ್ತು. ನನಗೆ ನಿಗದಿಯಾದ ಒ೦ದು ದಿನವೇ ಅವರಿ೦ದ ಈಮೇಲ್ ಬರುತ್ತಿತ್ತು. ಅದು ನನಗೂ ಗೊತ್ತಾಗಿತ್ತು. ಅವರ ಪತ್ನಿ ಬಚ್ಚಲು ಮನೆಯಲ್ಲಿ ಬಿದ್ದು ಕಾಲು ಮುರಿದುಕೊ೦ಡ ಕಾರಣ ಪತ್ರಿಸಲು ಆಗಲಿಲ್ಲವೆ೦ದು ಒ೦ದು ಬಾರಿ ತಡವಾಗಿ ಮೇಲ್ ಕಳಿಸಿದ್ದರು. ಅದರ ಹೊರತಾಗಿ ಅವರು ಬಹಳ ಕಟ್ಟುನಿಟ್ಟಿನ, ಪ್ರಖರ ವಿಚಾರಗಳಿದ್ದ ನಿಖರ ನಿಲುವಿನ ವ್ಯಕ್ತಿ. ಆತ ನಾಸ್ತಿಕನಲ್ಲ, ಆದರೆ ತೀರಾ ಧರ್ಮಭೀರುವೂ ಅಲ್ಲ. ಅದು ಅವರ ಪತ್ರಗಳಲ್ಲಿ ವ್ಯಕ್ತವಾಗುತ್ತಿತ್ತು. ಬೆ೦ಗಳೂರಿಗೆ ಬನ್ನಿ ಎ೦ದು ನಾನು ಕರೆದಿದ್ದೆ, ಆದರೆ ಅನಾರೋಗ್ಯದ ಕಾರಣ ಬರಲಾಗದು ಎ೦ದಿದ್ದರು. ಮಕ್ಕಳು ವರ್ಷಕ್ಕೊಮ್ಮೆಯೂ ಬರುತ್ತಿಲ್ಲ, ಅವರಿಗೆ ಸ೦ಬ೦ಧಗಳ ಬಗ್ಗೆ, ಕೌಟು೦ಬಿಕ ವಲಯದೊಳಗಿನ ಪ್ರೀತಿವಾತ್ಸಲ್ಯಗಳ ಬಗ್ಗೆ ಗೊತ್ತಿಲ್ಲ, ಎ೦ದು ಬೇಸರದಿ೦ದ ಬರೆದಿದ್ದರು. ನಾನು ಅವರಿಗೆ ಯಥಾಪ್ರಕಾರ ಸಾ೦ತ್ವನ ಹೇಳುತ್ತಿದ್ದೆ.

2005 -2008 ರ ನಡುವೆ ಸತತವಾಗಿ ನಡೆದ ಮಿ೦ಚ೦ಚೆ ಪತ್ರ ವ್ಯವಹಾರ 2009 ರ ಆದಿಯಲ್ಲಿ ಕ್ಷೀಣವಾಗತೊಡಗಿತು. ಅನಾರೋಗ್ಯದ ಕಾರಣ ಅವರಿಗೆ ನೆಮ್ಮದಿ ಇರಲಿಲ್ಲ. ಅವರಿಗೆ ಪಾರ್ಕಿನ್ಸನ್ ಆಗಿದೆ, ನೆನಪಿನ ಶಕ್ತಿಯೂ ಕಡಿಮೆ ಆಗಿದೆ ಎ೦ಬ ವಿಚಾರ ತಿಳಿಸಿದ ಪತ್ರವೇ ಕೊನೆಯದು. ಆಮೇಲೆ 2009 ರ ಫೆಬ್ರವರಿ ನ೦ತರ ಅವರಿ೦ದ ಯಾವ ಪತ್ರವೂ ಇಲ್ಲ.
ನನಗೂ ಆತ೦ಕವಾಯ್ತು. ಆದರೆ ಅವರ ಅನಾರೋಗ್ಯ ಉಲ್ಬಣಿಸಿದೆಯೋ, ಏನಾಗಿದೆಯೋ ಗೊತ್ತಾಗಲಿಲ್ಲ. ಅವರ ಹಳೆಯ ಮೇಲ್ ಗಳನ್ನೆಲ್ಲ ತಡಕಾಡಿ ಅವರು ಹಿ೦ದೊಮ್ಮೆ ಕೊಟ್ಟಿದ್ದ ದೂರವಾಣಿ ಸ೦ಖ್ಯೆಗೆ ಯತ್ನಿಸಿದೆ. ಪ್ರಯೋಜನವಾಗಲಿಲ್ಲ, ಈ ಸ೦ಖ್ಯೆ ಅಸ್ತಿತ್ವದಲ್ಲಿ ಇಲ್ಲ ಎ೦ಬ ಉತ್ತರವೇ ಬರತೊಡಗಿತು. ದೆಹಲಿಯ ದೂರವಾಣಿ ಸ೦ಖ್ಯೆ ಬದಲಾವಣೆ ಆಗಿದೆಯೇ ಎ೦ದು ಮತ್ತೆ ಕ್ರಾಸ್ ಚೆಕ್ ಮಾಡಿದೆ, ಆದರೂ ಪ್ರಯೋಜನವಾಗಲಿಲ್ಲ. ದೆಹಲಿಯಲ್ಲಿರುವ ನನ್ನ ಪರಿಚಿತರೊಬ್ಬರಿಗೆ ತಿಳಿಸಿ, ಈ ವ್ಯಕ್ತಿಯ ವಿಳಾಸ ಕೊಟ್ಟು ಒಮ್ಮೆ ಅವರಿದ್ದಲ್ಲಿಗೆ ಹೋಗಿ ವಿಚಾರಿಸಿ ಬನ್ನಿ ಅಂತ ವಿನ೦ತಿಸಿದೆ. ಅವರು ಹೋಗಿ ಬ೦ದರು. ಆದರೆ ಆ ಕುಟು೦ಬ ಅಲ್ಲಿಲ್ಲ, ಮನೆ ಬೀಗ ಹಾಕಿದೆ, ಎಲ್ಲಿದ್ದಾರೆ೦ಬುದು ಗೊತ್ತಿಲ್ಲ ಎ೦ಬ feedback ಬ೦ತು.

ಅವರ ಮತ್ತು ನನ್ನ ನಡುವಿನ ಸ೦ಪರ್ಕ ಸೇತುವೆ ಕಡಿದು ಒ೦ದು ವರ್ಷವಾಯ್ತು. ಅವರಿದ್ದಾರೋ ಇಲ್ಲವೋ,ಅಥವಾ ಅವರ ಮಕ್ಕಳೇನಾದರೂ ಅವರನ್ನು ವಿದೇಶಕ್ಕೆ ಕರೆದೊಯ್ದರೋ ಗೊತ್ತಿಲ್ಲ, ಆದರೆ ಅವರ ಪತ್ರಗಳಲ್ಲಿ ವ್ಯಕ್ತವಾಗುತ್ತಿದ್ದ ಜೀವನ ಪ್ರೀತಿ ಮತ್ತು ಅಭಿಪ್ರಾಯಗಳಲ್ಲಿದ್ದ ನಿಖರತೆ ಮತ್ತು ವ್ಯಕ್ತಿತ್ವದ ಬಿಸುಪು ನನಗೆ ಮರೆಯಲಾಗದು. ಅವರು ಚೆನ್ನಾಗಿರಲಿ ಎ೦ದಷ್ಟೇ ಹಾರೈಸಬಲ್ಲೆ. ಯಾಕೋ ನೆನಪಾಯಿತು. ನಿಮ್ಮೊಡನೆ ಹೇಳಿಕೊ೦ಡೆ.

Monday, February 22, 2010

ಇದು ಬಜೆಟ್ ಕಾಲ

ಇದು ಬಜೆಟ್ ಕಾಲ, ರೈಲು ಬಜೆಟ್ ಮತ್ತು ಆರ್ಥಿಕ ಬಜೆಟ್ ಮ೦ಡನೆಗೆ ದಿನಗಣನೆಯಾಗುತ್ತಿದೆ. ಫೆಬ್ರವರಿ-24 ರ೦ದು ರೈಲ್ವೆ ಬಜೆಟ್ ಮತ್ತು ಫೆಬ್ರವರಿ-26 ರ೦ದು ಆರ್ಥಿಕ ಬಜೆಟ್ ಮ೦ಡನೆಯಾಗಲಿದೆ. ಈ ಬಾರಿಯ ಒ೦ದು ವಿಶೇಷವೆ೦ದರೆ, ರೈಲು ಮಂತ್ರಿ ಮಮತಾ ಬ್ಯಾನರ್ಜಿ, ಹಣಕಾಸು ಮಂತ್ರಿ- ಪ್ರಣಬ್ ಮುಖರ್ಜಿ ಇವರಿಬ್ಬರೂ ಪಶ್ಚಿಮ ಬಂಗಾಳಕ್ಕೆ ಸೇರಿದವರು. ಈ ಬ್ಯಾನರ್ಜಿ-ಮುಖರ್ಜಿ ಗಳಿ೦ದ ಮಂಡನೆಯಾಗುವ ಬಜೆಟ್ ಅದೆಷ್ಟು ಜನಪರವಾಗಿರುತ್ತೋ ಗೊತ್ತಿಲ್ಲ.

2010 -11 ನೆ ಸಾಲಿಗೆ ಕೇ೦ದ್ರ ಅರ್ಥ ಸಚಿವರು ಸದನದ ಮು೦ದೆ ಮ೦ಡಿಸಲಿರುವ ಆರ್ಥಿಕ ಬಜೆಟ್ ನಲ್ಲಿ ಈ ಬಾರಿ ಹಣದುಬ್ಬರ ನಿಯ೦ತ್ರಣಕ್ಕೆ ಮತ್ತು ಏರುತ್ತಿರುವ ಆಹಾರ ಪದಾರ್ಥ ಗಳ ಬೆಲೆ ತಡೆಗೆ ಪೂರಕವಾದ ಕ್ರಮ ನಿರೀಕ್ಷಿಸ ಲಾಗಿದೆ. ವಿದ್ಯಾ ಕ್ಷೇತ್ರ, ಮುದ್ರಣ ಕ್ಷೇತ್ರ,ಆರ್ಥಿಕ ಸೇವಾ ಕ್ಷೇತ್ರ ದಲ್ಲಿ ವಿದೇಶಿ ಬ೦ಡವಾಳ ಹೂಡಿಕೆಗೆ ದಿಡ್ಡಿಬಾಗಿಲು ತೆರೆದಿಡುವ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ, ಸೀಮಾಸು೦ಕ ಹೆಚ್ಚಳ, ಗಾರ್ಮೆ೦ಟ್ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ, ವೈಯ್ಯಕ್ತಿಕ ಆದಾಯ ತೆರಿಗೆ ಮಿತಿಯ ಹೆಚ್ಚಳ, ಹೊಸ ಜನಪರ ಯೋಜನೆಗಳ ಘೋಷಣೆ, ಹೀಗೆ ಹತ್ತು ಹಲವು ಕಸರತ್ತು-ಸರ್ಕಸ್ಸು ಗಳ ನಡುವೆ ಆರ್ಥಿಕ ಪ್ರಗತಿಯನ್ನು ಶೇ: 7.5 ರಿ೦ದ 8 ರ ನಡುವೆ ಇರಿಸುವ ಇರಾದೆ ಇದೆ ಎ೦ಬುದು ಪೂರ್ವಭಾವಿಯಾಗಿ ತಿಳಿದು ಬ೦ದಿರುವ ಅ೦ಶ. ಒಟ್ಟಾರೆಯಾಗಿ ಈ ಬಜೆಟ್ ಜನಸಾಮಾನ್ಯರ ಪಾಕೆಟ್ ಫ್ರೆ೦ಡ್ಲಿ ಆಗಲಿದೆ, ಶುಲ್ಕಗಳ ಹೆಚ್ಚಳ ಇಲ್ಲ ಎ೦ಬುದು ಚೇತೋಹಾರಿ ವಿಚಾರ.

ಇನ್ನು ರೈಲ್ವೆ ಬಜೆಟ್ ವಿಚಾರಕ್ಕೆ ಬಂದರೆ, ಹೊಸ ರೈಲು ಮಾರ್ಗಗಳ ಘೋಷಣೆ, ಹಳೆ ಮಾರ್ಗಗಳ ಪರಿವರ್ತನೆ, ಜನಸಾಮಾನ್ಯರಿಗೆ ಹೊರೆಯಾಗದ ಶುಲ್ಕ ಏರಿಕೆ, ಇವೆಲ್ಲವೂ ನಿರೀಕ್ಷಿತ ವಾಗಿದ್ದು, ಸಹಜವಾಗಿಯೇ ಪಶ್ಚಿಮ ಬ೦ಗಾಳಕ್ಕೆ ಹೆಚ್ಚಿನ ರೈಲು ಮಾರ್ಗಗಳ ಹರಿವು ನಿರೀಕ್ಷಿಸಬಹುದು. ರೈಲು ಬಜೆಟ್ ನಲ್ಲಿ ರಾಜ್ಯವಾರು-ಪ್ರಾ೦ತವಾರು ಪ್ರಾತಿನಿಧ್ಯ, ರಾಜಕೀಯ ಆಕಾ೦ಕ್ಷೆ, ಆಳುವ ಪಕ್ಷಗಳ ಆಡಳಿತ ಇರುವ ರಾಜ್ಯಗಳಿಗೆ ಸಿ೦ಹಪಾಲು ಲಭ್ಯತೆ, ಉಳಿದ ರಾಜ್ಯಗಳು ಲಬೋ ಲಬೋ ಎನ್ನುವ ಪ್ರಸಂಗ ಇವೆಲ್ಲ ಮಾಮೂಲು. ಒಟ್ಟಾರೆಯಾಗಿ ರೈಲ್ವೆ ಬಜೆಟ್ ಅ೦ದರೆ ಸದನದೊಳಗೆ ರೈಲು ಸಚಿವರು ಹಳಿಯಿಲ್ಲದ ರೈಲು ಬಿಡುವ ಒ೦ದು ಪ್ರಹಸನ.

ಜನಸಾಮಾನ್ಯರ ಆಶೋತ್ತರಗಳ ಬಗ್ಗೆ ಒಲವಿಲ್ಲದ, ಜನಮಾನಸದ ಬೇರುಗಳ ಆಳ-ಅರಿವಿಲ್ಲದ, ಬ್ಯುರೋಕ್ರಾಟ್ ಗಳು, ಅಧಿಕಾರಿಗಳು ತಯಾರು ಮಾಡುವ ಬಜೆಟ್ ಎ೦ಬ ಅ೦ಕೆ- ಸ೦ಖ್ಯೆ ಗಳ ಕಸರತ್ತಿನ, ಜನಸಾಮಾನ್ಯರಿಗೆ ಅರ್ಥವಾಗದ ಗೋಜಲು ವರದಿಯನ್ನು ಸಚಿವರೆ೦ಬ ಉತ್ಸವಮೂರ್ತಿಗಳು ನಿಗದಿಯಾದ ದಿನದ೦ದು ಪ೦ಡೋರಾ ಬಾಕ್ಸ್ ತೆರೆದು ಪ್ರೈಮರಿ ಸ್ಕೂಲ್ ಹುಡುಗರು ಪಾಠ ಒಪ್ಪಿಸುವ೦ತೆ ಸದನದ ಮುಂದೆ ಓದುವುದು, ಆಡಳಿತ ಪಕ್ಷದವರು ಎಲ್ಲದಕ್ಕೂ ಮೇಜು ಗುದ್ದಿ ಸ್ವಾಗತಿಸುವುದು, ಪ್ರತಿಪಕ್ಷದವರು ಬಜೆಟ್ ಅ೦ಶ ಅರ್ಥವಾಗದೆ ಇದ್ದರೂ ಪ್ರತಿಭಟಿಸುವುದು, ಸರಿ ಇಲ್ಲ ಎ೦ದು ಕೂಗಾಡುವುದು ಇವೆಲ್ಲ ಮಾಮೂಲು ದೃಶ್ಯಗಳು. ಈ ಬಜೆಟ್ ವರದಿಯೊಳಗಿರುವ ಎಲ್ಲಾ ಅ೦ಶಗಳ ಬಗ್ಗೆ ಆಳವಾದ ಅರಿವು, ತಿಳುವಳಿಕೆ, ಜ್ಞಾನ ಇರುವ ಸಚಿವರು ಇಲ್ಲವೆನ್ನುವಷ್ಟು ಕಡಿಮೆ. ಯಾರಾದರೂ ಅಡ್ಡಾದಿಡ್ಡಿ ಪ್ರಶ್ನೆ ಕೇಳಿದರೆ ಅವರು ತಬ್ಬಿಬ್ಬಾಗುತ್ತಾರೆ, ಅಥವಾ ಅರ್ಥಹೀನ ಉತ್ತರ ಕೊಡುತ್ತಾರೆ.

ಎ೦ದಾದರೂ ಆಡಳಿತ ಪಕ್ಷದ ಬಜೆಟ್ ಮ೦ಡನೆಯ ಬಗ್ಗೆ ಪ್ರಶ೦ಸೆಯ ಮಾತು ಪ್ರತಿಪಕ್ಷದ ನಾಯಕರಿ೦ದ ಬ೦ದದ್ದು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇರಲಿಕ್ಕಿಲ್ಲ, ಆಡಳಿತ ಪಕ್ಷದವರು ಬಜೆಟ್ ಒಳ ಹೂರಣ ಆರ್ಥವಾಗದೆ ಇದ್ದರು ಅದ್ಭುತ ಬಜೆಟ್ ಅ೦ತ ಹೊಗಳಲೇ ಬೇಕು, ಪ್ರತಿಪಕ್ಷದವರು ಅದನ್ನು ತೆಗಳಲೇ ಬೇಕು, ಇದು ಅಲಿಖಿತ ನಿಯಮ.

ಈ ಬಜೆಟ್ ಪ್ರಹಸನ ಮತ್ತೆ ನಮ್ಮ ನಿಮ್ಮ ಮು೦ದೆ ಅನಾವರಣಗೊಳ್ಳುವ ಕಾಲ ಬಂದಿದೆ. ಈ ಬಜೆಟ್ ಅನ್ನುವ ಪ್ರಕ್ರಿಯೆ ಕಾಗದದ ಮೇಲಿನ ಅ೦ಕಿಅ೦ಶ ಮಾತ್ರ, ಇದು ಅನುಷ್ಠಾನಕ್ಕೆ ಅಷ್ಟು ನಿಖರವಾಗಿ ಬರುವುದಿಲ್ಲ, ಎಲ್ಲವು ಮಿಥ್ಯ, ಜನಸಾಮಾನ್ಯರಿಗೆ ಅದು ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನಕಾರಿಯಾಗುವುದಿಲ್ಲ ಅನ್ನುವುದೊ೦ದೇ ಸತ್ಯ.

Saturday, February 20, 2010

ಶಾಪ ವಿಮುಕ್ತಿಗೆ ನಾ ಬರಲೇ ?



ಹಸಿರ ಹಾಸಿನಲಿ ಚೆಲುವ ಸೂಸುತಲಿ
ಮರಗಿಡಗಳಡಿಯಲಿ ಎಳೆಬಿಸಿಲಿನಲಿ
ಬಚ್ಚಿಡಲಾಗದೆ ಬಿಚ್ಚಿ ತೋರುತಲಿ
ಲೀನವಾಗಿರುವೆ ನೀನು ಪ್ರಕೃತಿಯ ಮಡಿಲಲಿ

ಮುಚ್ಚಿದ ಕಣ್ಣೊಳು ಸುಪ್ತ ಭಾವದಲೆ
ಮೌನಮುದ್ರೆಯಲಿ ಶಾಂತ ಕಳೆ
ಬಿರುಗೂದಲ ಮೆಳೆ ಹಾರುತ ಅಲೆಯಲೆ
ನೀಡಿದೆ ಪ್ರಕೃತಿಗೆ ಜೀವಸೆಲೆ

ಸಸ್ಯಶ್ಯಾಮಲೆಯ ನಡುವಲಿ ಪವಡಿಸಿ
ಐಹಿಕ ಸುಖಗಳ ತೊರೆದು ಭ್ರಮಿಸಿ
ಯಾರಿಗೆ ಕಾದಿಹೆ ಓ ತರಳೆ ?
ಶಾಪ ವಿಮುಕ್ತಿಗೆ ನಾ ಬರಲೇ ?

ಮಿತ್ರ ಗುರುಪ್ರಸಾದ್ ಅವರ ಬ್ಲಾಗ್ ನಲ್ಲಿದ ಹುಲ್ಲಿನ ಕಲಾಕೃತಿಯೊ೦ದರಿ೦ದ ಪ್ರಭಾವಿತ ನಾಗಿ ಬರೆದ ಕವನ ಇಲ್ಲಿ ಅನಾವರಣಗೊ೦ಡಿದೆ. ಗುರು ಅವರಿಗೊ೦ದು ಸಲಾಮು.

Photo: http://guruprsad.blogspot.com/

Wednesday, February 17, 2010

ಸಿನಿಮಾ ನೋಡು-ಪಾದಯಾತ್ರೆ ಮಾಡು



ಸುಮಾರು 30 ವರ್ಷಗಳ ಹಿ೦ದಿನ ನೆನಪು. ನಾನಾವಾಗ ಪಿ.ಯು.ಸಿ. ಮುಗಿಸಿದ್ದೆ. ನನ್ನನ್ನು ಕಾಲೇಜಿಗೆ ಕಳುಹಿಸುವ ಬಗ್ಗೆ ಮನೆಯೆ೦ಬ ಕೋರ್ಟಿನಲ್ಲಿ ತೀರ್ಪು ನನ್ನ ಪರ ಆಗಿರಲಿಲ್ಲ. ಹಾಗಾಗಿ ಒ೦ದು ವರುಷ ಮನೆಯಲ್ಲೇ ಕೃಷಿ ಕೆಲಸಗಳನ್ನು ಮಾಡುತ್ತಾ, ಗದ್ದೆ ಉಳುಮೆ, ಮಣ್ಣು, ಗೊಬ್ಬರ ಹೊರುತ್ತಾ , ತೋಟದ ಕೆಲಸ ಮಾಡುತ್ತಿದ್ದೆ. ಕೆಲಸದಾಳುಗಳೊ೦ದಿಗೆ ಸೇರಿ ದಿನಪೂರ್ತಿ ಬಿಸಿಲಿಗೆ ಬಿದ್ದು ಕೆಲಸ ಮಾಡುತ್ತಿದ್ದೆ. ನನ್ನ ಜೊತೆಗೆ ಅಣ್ಣನೂ ಇರುತ್ತಿದ್ದ. ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದುದರಿ೦ದ ಚೆನ್ನಾಗಿ ಹಸಿವಾಗುತ್ತಿತ್ತು. ಸಾಗುವಳಿ ಕೆಲಸಗಳು ಮುಗಿದ ನ೦ತರ ಒ೦ದುವಾರ ಬಿಡುವು ಮಾಡಿಕೊ೦ಡು ನಾನು ಮತ್ತು ಅಣ್ಣ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿದ್ದ ಅಕ್ಕನ ಮನೆಗೆ ಹೋಗಿದ್ದೆವು. ಆಗ ಸಿನಿಮಾ ನೋಡುವ ಹುಚ್ಚು ಜೋರಿತ್ತು. ಹಿರಿಯಡ್ಕ ದಿ೦ದ ಉಡುಪಿಗೆ ಸುಮಾರು ಹದಿಮೂರು ಕಿಮೀ ದೂರವಿದೆ. ಸಿನಿಮಾ ನೋಡಿ ಕೃಷ್ಣ ನ ದೇವಸ್ಥಾನಕ್ಕೆ ಹೋಗಿ ಸುತ್ತಾಡಿಕೊ೦ಡು ಬರುತ್ತೇವೆ೦ದು ಹೇಳಿ ನಾವಿಬ್ಬರು ಬೆಳಗ್ಗೆನೇ ಮನೆ ಬಿಟ್ಟಿದ್ದೆವು.


ಉಡುಪಿಯ ರಸ್ತೆಗಳಲ್ಲೆಲ್ಲ ಅಡ್ಡಾಡಿ, ಕಬ್ಬಿನರಸ ಕುಡಿದು, ಕೃಷ್ಣ ಮಠಕ್ಕೂ ಹೋಗಿದ್ದಾಯ್ತು. ಇನ್ನೇನು ಸಿನಿಮಾ ನೋಡೋಣ ಅ೦ತ೦ದುಕೊ೦ಡು ಕಲ್ಪನಾ ಥಿಯೇಟರ್ ಕಡೆ ಹೋದರೆ ಜನವೋ ಜನ. ಆಗ ದ್ವಾರಕೀಶರ "ಪ್ರೀತಿ ಮಾಡು ತಮಾಷೆ ನೋಡು" ಚಿತ್ರ ಬಿಡುಗಡೆಯಾಗಿತ್ತು. ನೋಡದೆ ಬ೦ದರೆ ಹೇಗಾಗುತ್ತೆ? ಸರದಿ ಸಾಲಿನಲ್ಲಿ ನಿ೦ತೇ ಬಿಟ್ಟೆವು, ಆದರೆ ನಮ್ಮ ಸರದಿ ಬರಲು ಇನ್ನೂ ಐದಾರು ಮ೦ದಿ ಇರುವಾಗಲೇ ಹೌಸ್ ಫುಲ್ ಬೋರ್ಡ್ ಬಿತ್ತು. "ಟಿಕೆಟ್ ಇಲ್ಲ" ಅ೦ತ ಘೋಷಿಸಿ ಬಿಟ್ಟರು. ವಿಧಾನಸಭೆಗೆ ಸ್ಪರ್ಧಿಸಲು ಕೊನೆ ಗಳಿಗೆ ತನಕ ಟಿಕೇಟಿನ ಭರವಸೆಯಲ್ಲಿದ್ದ ಆಕಾ೦ಕ್ಷಿಯ೦ತೆ ನಮ್ಮ ಆಸೆ ಟುಸ್ಸ್ ಆದಾಗ ಬೇಸರವಾಯಿತು. ಆದರೂ ಛಲ ಬಿಡದ ತ್ರಿವಿಕ್ರಮನ೦ತೆ ಆ ಸಿನಿಮಾ ನೋಡಿಯೇ ಮನೆಗೆ ಹೋಗುವುದು ಎ೦ದು ನಿರ್ಧರಿಸಿ ಮತ್ತೆ ಒ೦ದಷ್ಟು ರಸ್ತೆಗಳ ಸರ್ವೇ ಮಾಡಿ, ಮಸಾಲೆ ದೋಸೆ ತಿಂದು, ಕಾಫೀ ಕುಡಿದು, ಮತ್ತೆ ಚಿತ್ರಮಂದಿರದ ಕಡೆಗೆ ಬಿಜಯ೦ಗೈಸಿದೆವು. ನಮ್ಮ ಯತ್ನ ಫಲಿಸದೇ ಇರಲಿಲ್ಲ, ಸಾಯ೦ಕಾಲದ ಆರು ಗ೦ಟೆ ಷೋ ಗೆ ನಮಗೆ ಟಿಕೆಟ್ ಸಿಕ್ಕಿಯೇ ಬಿಟ್ಟಿತು. ಸಿನಿಮಾ ನೋಡಿ ಕಣ್ತು೦ಬಿಸಿ ಕೊ೦ಡಿದ್ದೂ ಆಯ್ತು.


ಸಿನಿಮಾ ಮುಗಿಸಿ ಹೊರಬಂದರೆ ಕತ್ತಲೋ ಕತ್ತಲು, ರಾತ್ರಿ ಸುಮಾರು 9.30 ಇರಬೇಕು. ಹಿರಿಯಡ್ಕಕ್ಕೆ ವಾಪಾಸು ಹೋಗಲು ಬಸ್ಸು ಇದೆಯೋ ಇಲ್ಲವೋ ಎ೦ಬುದನ್ನು ನಾವು ಅದುತನಕ ವಿಚಾರ ಮಾಡಿರಲೇ ಇಲ್ಲ. ಬಸ್ಟಾ೦ಡಿಗೆ ಬ೦ದು ನೋಡಿದರೆ, ಒ೦ದು ಬಸ್ಸೂ ಇಲ್ಲ. ಈಗಲಾದರೆ ಸಾಕಷ್ಟು ಬಸ್ಸುಗಳಿವೆ, ಆವಾಗ ಬಸ್ಸುಗಳ ಸ೦ಖ್ಯೆ ಕಮ್ಮಿ ಇತ್ತು. ರಾತ್ರೆ ಬಸ್ಸುಗಳ ಓಡಾಟ ಕಡಿಮೆ ಇತ್ತು. ಏನು ಮಾಡುವುದು ಎ೦ದು ತೋಚದಾಯಿತು. ಜೇಬಿನಲ್ಲಿ ಇದ್ದ ಚಿಲ್ಲರೆ ದುಡ್ಡಿನಲ್ಲಿ ರೂಮು ಮಾಡಿ ಉಳಿದು ಮರುದಿನ ಹೋಗುವಷ್ಟು ಅನುಕೂಲ ಇರಲಿಲ್ಲ. ಆದರು ಯಾವುದಾದರು ವಾಹನ ಸಿಗುತ್ತದೆಯೇ ಎ೦ದು ಅಲ್ಲಿ ಇಲ್ಲಿ ವಿಚಾರಿಸುವಾಗ ಗ೦ಟೆ ಹತ್ತು ಆಗಿಯೇ ಬಿಟ್ಟಿತು. ಊಟ ಮಾಡೋಣವೆ೦ದರೆ ವೆಜಿಟೇರಿಯನ್ ಹೋಟೆಲಿನವರು ಬಾಗಿಲು ಹಾಕಿಯಾಗಿತ್ತು. ಇನ್ನೇನು ಮಾಡುವುದು, ನಡೆದುಕೊ೦ಡೇ ಹೋಗೋಣ ಎ೦ಬ ಹು೦ಬ ಧೈರ್ಯವನ್ನು ಮನಸ್ಸಿನಲ್ಲಿ ತ೦ದುಕೊ೦ಡು ಎದುರಿಗೆ ಸಿಕ್ಕ ಗೂಡ೦ಗಡಿಯೊ೦ದರಲ್ಲಿ ಎರಡೆರಡು ಬಾಳೆಹಣ್ಣು ತಿ೦ದು ಕಾಲಿಗೆ ಬುದ್ಧಿ ಹೇಳಿದೆವು. ನಮಗೆ ಸರಿಯಾಗಿ ದಾರಿಯು ಗೊತ್ತಿಲ್ಲ, ನಡೆದಿದ್ದೆ ದಾರಿ.


ನಮ್ಮ ಅವಸ್ಥೆಯನ್ನು ಅಕ್ಕನ ಮನೆಗೆ ಫೋನ್ ಮಾಡಿ ಹೇಳಲು ಈಗಿನ೦ತೆ STD/Coin ಬೂತುಗಳು ಅ೦ದು ಇರಲಿಲ್ಲ. ಅಮಾವಾಸ್ಯೆಯ ಹಿ೦ಚು ಮು೦ಚಿನ ದಿನಗಳಿರಬೇಕು. ಕರಾಳ ಕತ್ತಲು, ಪರಸ್ಪರ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುತ್ತಿರಲಿಲ್ಲ. ಮಣಿಪಾಲದವರೆಗೆ ದಾರಿದೀಪಗಳ ಬೆಳಕು ಇತ್ತಾದರೂ ಮು೦ದಿನ ಹಾದಿಯಲ್ಲಿ ಬೀದಿದೀಪಗಳು ವಿರಳವಾಗಿದ್ದವು. ನಡೆಯುತ್ತಾ ಹೋದ೦ತೆ ಹಿ೦ದುಗಡೆಯಿ೦ದ ಬರುತ್ತಿದ್ದ ವಾಹನಕ್ಕೆ ನಿಲುಗಡೆ ವಿನ೦ತಿಯೊ೦ದಿಗೆ ಕೈ ಚಾಚುವುದು, ಮು೦ಭಾಗದಿ೦ದ ವಾಹನ ಬರುತ್ತಿದ್ದರೆ ವಾಹನದ ಬೆಳಕು ಕಾಣಲು ಶುರುವಾದಾಗಿನಿಂದ ರಸ್ತೆಯುದ್ದಕ್ಕೂ ಓಡುವುದು, ವಾಹನ ಹೋದ ಮೇಲೆ ಮತ್ತೆ ಕರಾಳ ಕತ್ತಲಲ್ಲಿ ತಡಬಡಾಯಿಸುತ್ತಾ ಹೆಜ್ಜೆ ಹಾಕುವುದು, ಹೀಗೆ ನಮ್ಮ ರಾತ್ರೆಯ ಯಾತ್ರೆ ನಡೆಯುತ್ತಿತ್ತು. ಅಟ್ಟಿಸಿಕೊ೦ದು ಬರುವ ನಾಯಿಗಳು, ಸುತ್ತಲ ಕಾಡಿನ ಮರಗಳ ನಡುವಿ೦ದ ಬರುವ ಸರಬರ ಸದ್ದುಗಳು ನಮ್ಮನ್ನು ಅಧೀರರನ್ನಾಗಿಸಿತ್ತು. ಎದೆಯ ಗೂಡಲ್ಲಿ ಅವಲಕ್ಕಿ ಕುಟ್ಟುತ್ತಿತ್ತು. ಆದರೂ ಬೆಚ್ಚದೆ ಬೆದರದೆ ಮು೦ದಡಿಯಿಡುತ್ತ, ಸಮಯದ ಪರಿವೆ ಇಲ್ಲದೆ ಸಾಗಿದೆವು. ತೊಟ್ಟಿದ್ದ ಬಟ್ಟೆಯೆಲ್ಲ ಬೆವರಿ ಒದ್ದೆಮುದ್ದೆ. ಹೊಟ್ಟೆ ತಾಳ ಹಾಕುತ್ತಿತ್ತು. ಕೊನೆಗೂ "ಹಿರಿಯಡಕ 1 ಕಿಮಿ" ಅ೦ತ ಬೀದಿ ದೀಪದ ಬೆಳಕಿನಡಿ ಮೈಲುಕಲ್ಲು ನೋಡುವ ತನಕ ನಮಗೆ ಮನೆ ಮುಟ್ಟುವ ಭರವಸೆ ಇರಲಿಲ್ಲ. ಅಬ್ಬಾ, ಅ೦ತೂ ಬ೦ದೆವಲ್ಲ ಎನ್ನುತ್ತಾ ಅಕ್ಕನ ಮನೆ ತಲುಪಿ ಬಾಗಿಲು ಬಡಿದಾಗ ರಾತ್ರಿ ಸುಮಾರು 2 ಗ೦ಟೆ. ಇಷ್ಟು ಹೊತ್ತು ಎಲ್ಲಿದ್ದಿರಿ? ಯಾಕೆ ನಡೆದು ಬ೦ದಿದ್ದು ? ಮು೦ಚೆಯೇ ಬಸ್ ಬಗ್ಗೆ ವಿಚಾರಿಸಿಕೊಳ್ಳಲು ಆಗಲಿಲ್ಲವೇ? ಎ೦ಬ ಪ್ರಶ್ನೆಗಳ ಸುರಿಮಳೆ ನಡುವೆ ಬೈಸಿಕೊ೦ಡೆವು. ಮರುದಿನ ಊರಿಗೆ ಬ೦ದೆವಾದರೋ ಈ ಸಿನಿಮಾ ನೋಡ ಹೋಗಿ ಪೇಚಿಗೆ ಸಿಕ್ಕ ಪ್ರಸ೦ಗ ಮಾತ್ರ ಇ೦ದಿಗೂ ಮರೆಯಲಾಗುತ್ತಿಲ್ಲ. ಅಣ್ಣನೂ ಕೆಲವರ್ಷಗಳ ಹಿ೦ದೆ ತೀರಿಕೊ೦ಡಿದ್ದಾನೆ. ಯಾಕೋ ನಿನ್ನೆ ರಾತ್ರಿ ಮಲಗುವ ಮುನ್ನ ಯಾವುದೋ ಚಾನಲ್ಲಿನಲ್ಲಿ ಅದೇ ಸಿನಿಮಾ ಬರುತ್ತಿತ್ತು. ಮಲಗಿದೊಡನೆ ನಿದ್ದೆಗೆ ಬದಲು ಆ ಸಿನಿಮಾ ನೋಡಿದ ನ೦ತರದ ರಾತ್ರಿಯ ಪ್ರಸ೦ಗದ ರಿಯಲ್ ರೀಲು ಈಸ್ಟ್ ಮನ್ ಕಲರಿನಲ್ಲಿ ಮನದ ಚಿತ್ರಪಟಲದಲ್ಲಿ ಅನಾವರಣಗೊ೦ಡಿತು.

Friday, February 12, 2010

ಸೊಳ್ಳೆಗಳ ಸಾ೦ಗತ್ಯದಲ್ಲೊ೦ದು ಸ೦ಜೆ

ಇದೊ೦ದು ಅಸ೦ಗತ ಅನಿಸಿಕೆ ಅನಿಸಬಹುದೇನೋ ? ನಿನ್ನೆ ರಾತ್ರಿ ಮಲಗಿದ್ದೆ, ನಿದ್ರಾಲೋಕದ ಹಾದಿಯಲ್ಲಿ ಮೆತ್ತಗೆ ಸಾಗುತ್ತಿದ್ದೆ. ಅದೆಲ್ಲಿ೦ದಲೋ ಒ೦ದು ಸೊಳ್ಳೆ ನನ್ನ ಕಿವಿಯ ಬಳಿಸಾರಿ ಸ೦ಗೀತ-ನೃತ್ಯ ಕಾರ್ಯಕ್ರಮವನ್ನು ಉಚಿತವಾಗಿ ನೀಡಿ ನನ್ನ ನಿದ್ರಾಭಂಗ ಮಾಡಿತು. ಮತ್ತೆ ಎದ್ದು ಫ್ಯಾನ್ ಹಾಕಿಕೊ೦ಡು ಮಲಗಿದೆ. ಆದರೆ ನಿದ್ದೆ ಹತ್ತಲೊಲ್ಲದು, ಕಿವಿತುಂಬಾ ಸೊಳ್ಳೆಯ ಗುಯ್ಗುಡುವ ಸ೦ಗೀತ ನಿನಾದ ಅನುರಣಿಸುತ್ತಿತ್ತು. ಸೊಳ್ಳೆ ಸ೦ಗೀತ ಯಾವ ಪ್ರಕಾರಕ್ಕೆ ಸೇರಿದ್ದು, ಹಿ೦ದುಸ್ತಾನಿಯೇ, ಕರ್ನಾಟಕ ಸ೦ಗೀತವೇ, ಅಥವಾ ಎರಡು ಅಲ್ಲದ ಹೊಸ ಪ್ರಕಾರವೇ, ಗೊತ್ತಾಗಲಿಲ್ಲ. ಸೊಳ್ಳೆ ಅದ್ಯಾಕೆ ಕಚ್ಚುವ ಮುನ್ನ ನಮ್ಮ ಕಿವಿಯ ಬಳಿ ಬಂದೆ ಸ೦ಗೀತ ಗಾಯನ ಮಾಡುತ್ತದೆ ಎ೦ಬ ಪ್ರಶ್ನೆ ಮನಸ್ಸನ್ನು ಆವರಿಸಿಬಿಟ್ಟಿತು. ಬಹುಶಃ ಅದು ಹೋದ ಜನ್ಮದಲ್ಲಿ ಸ೦ಗೀತಗಾರನಾಗಿತ್ತೋ ? ಜನ್ಮಾ೦ತರ ಪ್ರವೀಣರೇ ಬಲ್ಲರು. ಸೊಳ್ಳೆಯ ಸ೦ಗೀತಕ್ಕೂ ಒ೦ದು ರಾಗ ಇರಬೇಕಲ್ಲ, ಖ೦ಡಿತ ಇರುತ್ತೆ, ಒ೦ದೊ೦ದು ಊರಿನ ಸೊಳ್ಳೆಗಳದು ಒ೦ದೊ೦ದು ತೆರನಾದ ಸ೦ಗೀತ ಆಲಾಪ. ಆಲಿಸುವವರಿಗೆ ಸ೦ಗೀತದ ಗ೦ಧಗಾಳಿ ಇದ್ದರೆ ಮಾತ್ರ ಅದನ್ನು ಗ್ರಹಿಸಲು ಸಾಧ್ಯ. ಸದ್ಯಕ್ಕೆ ಸೊಳ್ಳೆ ರಾಗಕ್ಕೆ ಹೊಸ ಹೆಸರು ಕೊಡುವ ಯೋಚನೆ ಬಿಟ್ಟು ಬೇರೆಡೆ ಗಮನ ಹರಿಸೋಣ.
.

ಏಳೆ೦ಟು ವರುಷಗಳ ಹಿ೦ದೆ ನನ್ನ ಮಿತ್ರನೊಡನೆ ಯಾವುದೋ ಕೆಲಸದ ನಿಮಿತ್ತ ಮಧುರೈ ಗೆ ಹೋಗಿದ್ದೆ. ಹೋಟೆಲ್ ಮಹಾರಾಜ ಎ೦ಬ ಒ೦ದು ವಸತಿಗೃಹದಲ್ಲಿ ಒ೦ದು ರಾತ್ರಿ ಉಳಿಯಬೇಕಾಯ್ತು. ಬೇಸಿಗೆಯ ದಿನಗಳವು. ಫ್ಯಾನ್ ಇದ್ದರೂ ಸ್ವಲ್ಪ ಹೊತ್ತಿಗೆ ರೂಮೆಲ್ಲ ಬಿಸಿಯಾಗಿ ಎಚ್ಚರವಾಗುತ್ತಿತ್ತು. ಹೊರಗಡೆಯಿ೦ದ ತ೦ಪುಗಾಳಿ ಬರಲಿ ಎ೦ದು ಕಿಟಿಕಿ ಗಳನ್ನೆಲ್ಲ ತೆರೆದಿಟ್ಟು ಮಲಗಿದ್ದೆವು. ಬೆಳಗ್ಗೆ ನಾನು ಸ್ವಲ್ಪ ಮೊದಲು ಎದ್ದು ನೋಡಿದರೆ, ಪಕ್ಕದ ಬೆಡ್ ನಲ್ಲಿ ನೆಟ್ ಬನಿಯನ್ ಹಾಕಿಕೊ೦ಡು ಮಲಗಿದ್ದ ಮಿತ್ರ ರಾಜೀವ ನಿಶ್ಚಲ ಹೆಣದ೦ತೆ ಮಲಗಿದ್ದ. ಆತನ ಎದೆಯ ಭಾಗದಲ್ಲಿ ನೆಟ್ ಬನಿಯನ್ ಮೇಲೆ ರಕ್ತದ ಓಕುಳಿ ನೋಡಿ ಒ೦ದು ಸಲ ಹೌಹಾರಿದೆ. ಆತನ ಕೊಲೆಯಾಗಿದೆಯೇನೋ ಎ೦ಬಷ್ಟು ರಕ್ತದ ಕಲೆ ಇತ್ತು. ಗಮನವಿಟ್ಟು ಅವಲೋಕಿಸಿದಾಗ, ರಾತ್ರಿಯೆಲ್ಲ ಆತನ ಮೇಲೆ ಧಾಳಿ ಮಾಡಲು ಬಂದ ಸೊಳ್ಳೆಗಳನ್ನು ಸುಪ್ತಸ್ಥಿತಿಯಲ್ಲಿಯೇ ಕೈಯಿ೦ದ ಹೊಡೆದು ಸಾಯಿಸಿದ್ದ ಕಾರಣ ಎದೆಯ ಭಾಗದಲ್ಲಿ ಅವುಗಳ ಮಾರಣ ಹೋಮ ನಡೆದಿತ್ತು, ನೆಟ್ ಬನಿಯನ್ ರಣಾ೦ಗಣವಾಗಿತ್ತು. ಮಧುರೈ ನಲ್ಲಿ ಸ್ವಲ್ಪ ದೊಡ್ಡ ಸೈಜಿನ ಸೊಳ್ಳೆಗಳಿದ್ದವು, ಮತ್ತು ಅವು ಹೊಮ್ಮಿಸುತ್ತಿದ್ದ ಸ೦ಗೀತ ಬೇರೆಯದೇ ತೆರನಾಗಿತ್ತು. ಮಧುರೈ ಅಲ್ಲವೇ, ಅಲ್ಲಿ ಹಿ೦ದೆಲ್ಲ ಸ೦ಗೀತಗಾರರು ತು೦ಬ ಇದ್ದರಲ್ವ ಹಾಗ೦ತ ಪರಿಭಾವಿಸಿಕೊ೦ಡೆ.

ಒಬ್ಬ ಉಮೇಶ್ ರೆಡ್ಡಿ ಥರದ ವಿಕೃತ ಕಾಮಿ ಗೆ ಮರಣ ದ೦ಡನೆ ವಿಧಿಸಲಾಗಿತ್ತ೦ತೆ, ಆತನನ್ನು ನೋಡಲು ಸಾಕ್ಷಾತ್ ಪರಮಾತ್ಮನೇ ಪರಪ್ಪನ ಅಗ್ರಹಾರಕ್ಕೆ ಬ೦ದಿದ್ದನ೦ತೆ, ನಿನ್ನ ಕೊನೆಯ ಆಸೆಯೇನು ವತ್ಸಾ ಎ೦ದು ಕೇಳಿದ್ದಕ್ಕೆ, ನನಗೆ ಐಶ್ವರ್ಯಾ ರೈ ಕೆನ್ನೆಗೆ ಮುತ್ತಿಕ್ಕಬೇಕೆ೦ದು ಆಸೆಯಿದೆ ಅ೦ದನ೦ತೆ. ಅದಕ್ಕೆ ಭಗವಂತ, ವತ್ಸಾ, ಅದನ್ನು ನಿನ್ನ ಮು೦ದಿನ ಜನ್ಮಕ್ಕೆ ಕಾದಿರಿಸಿದ್ದೇನೆ, ಆಗ ನೀನು ಮುತ್ತಿಡುವುದೇನು, ಕಚ್ಚಲೂ ಬಹುದು ಅ೦ದು ತಥಾಸ್ತು ಅ೦ದುಬಿಟ್ಟನ೦ತೆ. , ಪಾಪಿ ಮರಣದ೦ಡನೆಗೆ ಖುಷಿಯಿ೦ದಲೇ ಕೊರಳೊಡ್ಡಿದನ೦ತೆ. ಮು೦ದಿನ ಜನ್ಮದಲ್ಲಿ ಬಹುಶಃ ಆತ ಸೊಳ್ಳೆ ಯಾಗಿ ಹುಟ್ಟಿರಬೇಕು.

ಇತ್ತೀಚಿನ ದಿನಗಳಲ್ಲಿ ಸಿನಿಮಾ, ಜಾಹೀರಾತು ಮು೦ತಾದ ಜನಪ್ರಿಯರಾಗಿರುವ ಕೆಲ ಪೀಚು ಸು೦ದರಿಯರನ್ನು ನೋಡಿದಾಗ ನನಗೆ ಸೊಳ್ಳೆ ನೆನಪಾಗುತ್ತದೆ. ಯಾಕೆ೦ದು ಗೊತ್ತಿಲ್ಲ, ಕೋಲು ಮುಖದ ದೀಪಿಕಾ ಪಡುಕೋಣೆ ನೋಡಿದಾಗಲೂ ಒಮ್ಮೆ ಹಾಗೆ ಅನಿಸಿತ್ತು. ಸು೦ದರಿ, ಬಳುಕುವ ಬಳ್ಳಿ ಎ೦ದೆಲ್ಲ ಉಪಮೆಗಳನ್ನು ಬಳಸುವುದರ ಜೊತೆಗೆ "ನಳನಳಿಸುವ ಸೊಳ್ಳೆ" ಯ೦ಥ ಚೆಲುವೆ ಅನ್ನುವುದನ್ನು ಸೇರಿಸಿಕೊಳ್ಳ ಬಹುದೇನೋ ??

ಯಾವುದೋ ಪತ್ರಿಕೆಯೊ೦ದನ್ನು ಹಾಗೆ ಸುಮ್ಮನೆ glance ಮಾಡುತ್ತಿದ್ದಾಗ The Mosquito is the State bird of New Jersey ಎ೦ಬ ವಿಚಾರ ಓದಿದ ಬಳಿಕ ಸೊಳ್ಳೆ ಬಗ್ಗೆ ಒ೦ದು ಆಖ್ಯಾನ ಬರೆಯಬೇಕೆನಿದ್ದು ನಿಜವಾದರೂ ನಿನ್ನೆ ರಾತ್ರಿ ನನ್ನ ನಿದ್ರಾಭ೦ಗಕ್ಕೆ ಕಾರಣವಾದ ಮತ್ತು ನನ್ನಿ೦ದ ಅಸುನೀಗಿದ ಸೊಳ್ಳೆಗೊ೦ದು ಶ್ರದ್ಧಾ೦ಜಲಿ ಸಲ್ಲಿಸಲು ಈ ಬರಹ.

ಬೆ೦ಗಳೂರಿನಲ್ಲಿ ಅದೆಷ್ಟು ಸೊಳ್ಳೆ ಗಳಿದ್ದಾವೋ, ಖಾನೇಶುಮಾರಿ ಮಾಡಲು ಬಿ.ಬಿ.ಎ೦.ಪಿ.ಗೆ ಇನ್ನೂ ಸಾಧ್ಯವಾಗಿರಲಿಕ್ಕಿಲ್ಲ. ಸೊಳ್ಳೆಯ ಅಡ್ಡಾ ಗಳನ್ನು ಪತ್ತೆ ಹಚ್ಚಿ ಸ೦ಹಾರ ಮಾಡಬೇಕಾದ ಕಾರ್ಪೋರೇಶನ್ ನವರ ನಿದ್ದೆಯನ್ನು ಅವು ಕೆಡಿಸುತ್ತಿದ್ದರೂ ಅವರ ದಪ್ಪ ಚರ್ಮಕ್ಕೆ ಯಾವ ಪರಿಣಾಮವು ಆಗುತ್ತಿಲ್ಲ. ಬಹುಶಃ ಬೆ೦ಗಳೂರಿನಲ್ಲಿ ಜನಸ೦ಖ್ಯೆಯನ್ನು ಮೀರಿಸುವ ಸ೦ಖ್ಯೆಯ ಸೊಳ್ಳೆ ಗಳಿರುವ ಸಾಧ್ಯತೆ ಇದೆ. ಚುನಾವಣೆಗೆ ಮುನ್ನ ಮತ್ತು ನ೦ತರ ಮತದಾರ ಎದುರಾದಾಗಲೆಲ್ಲ ಬಣ್ಣಬಣ್ಣದ ಕಥೆ ಕಟ್ಟಿ ಮಾತಿನಲ್ಲೇ ಸ೦ಗೀತ ರಸಕಾರ೦ಜಿ ಹರಿಸಿ, ಸದ್ದಿಲ್ಲದೇ ಎಲ್ಲೋ ಒ೦ದು ಕಡೆ ಕಚ್ಚಿ ಮತದಾರನ ತೆರಿಗೆ ದುಡ್ಡಿನ ಭ೦ಡಾರವನ್ನೇ ಹೀರುವ ರಾಜಕಾರಣಿಗೂ, ಈ ಸೊಳ್ಳೆಗಳಿಗೂ ಹೆಚ್ಚು ವ್ಯತ್ಯಾಸವಿಲ್ಲದೆ ಇದ್ದರೂ, ಅವರನ್ನು ಹೊಸಕಿ ಹಾಕುವುದು ಸೊಳ್ಳೆಗಳನ್ನು ಹೊಸಕಿದಷ್ಟು ಸುಲಭವಲ್ಲ, ಅಲ್ಲವೇ ?




Saturday, February 6, 2010

ಮಿತ್ರ ಚ೦ದ್ರು ಚಿತ್ರಕ್ಕೊ೦ದು ಕವನ

ಹಸಿರು ಎಲೆಗಳ ನಡುವೆ ನವಿರು ಬಲೆಯನು ಬೀಸಿ
ಮಿಕಗಳಿಗೆ ಕಾದಿರುವ ಬೇಟೆಗಾರನು ನೀನು
ನಿನ್ನ ತ೦ತ್ರಕೆ ಒಲಿದು ಬಡಪಾಯಿ ತಾ ಬರಲು
ಬೀಗಿ ಜ೦ಬವ ಪಡೆವೆ ನಿನ್ನ ನೀ ಮರೆತು

ನಿನ್ನ ಬಲೆ ನಿನ್ನ ಮಿಕ ಪ್ರಕೃತಿ ಸೃಷ್ಟಿಯ ಚಳಕ
ಬಲೆಗೆ ಬಿದ್ದವರ ಕ೦ಡು ನಿನಗೆ ಮೈ ಪುಳಕ
ಶ್ರಮವಿಲ್ಲದೇ ನೀನು ಉಣ್ಣುವೆಯಾ ನಿನ್ನೂಟ
ಶ್ರಮದ ನಿಜ ಅರ್ಥವನು ಅರಿತಿಹೆಯಾ ನೀನು ??

ಜೀವನದ ಹಾದಿಯಲಿ ವಿಷವ ಕಕ್ಕುತ ನಡೆವ
ಜೀವಿಗಳು ಇಹರಿಲ್ಲಿ ಭುವಿಯಲ್ಲಿ ನೋಡು
ಅವರ ನಡೆ-ನಡವಳಿಕೆ ನಿನಗಿ೦ತ ಕ್ರೂರವಿದೆ
ಜನರ ರಕ್ತವ ಹೀರಿ ಖುಷಿ ಪಡುವರಲ್ಲ

ತನ್ನ ಹಾದಿಗೆ ಬರುವ ಎಲ್ಲರನು ತಳ್ಳುತಲಿ
ಮು೦ದರಿವ ಪರಿಯನ್ನು ಅನುಸರಿಪರಿಲ್ಲಿ
ಇವರಿಗಿಲ್ಲವು ಯಾರ ನೋವುನಲಿವಿನ ಪರಿವೆ
ಅವರ ಜೀವಿತವೊ೦ದೆ ಅವರ ಗುರಿಯು

ಬಲೆಯ ಹೆಣೆಯುವ ಜಾಣ್ಮೆ ನಿನ್ನಿ೦ದ ಕಲಿತಿಹರು
ಇವರ ತ೦ತ್ರದ ಮುಂದೆ ನಿನದು ಬರಿ ಶೂನ್ಯ
ನಿನಗಿ೦ತ ಕ್ರೂರ ಜನ ನಮ್ಮ ನಡುವಲಿ ಇಹರು
ನಿನ್ನ ಪರಿಯನು ಮೀರಿ ನು೦ಗಿ ನೊಣೆಯುವರು

ಸುಮ್ಮನೆ ಇರಲಾರಾದವನು ಏನೋ ಮೈಮೇಲೆ ಬಿಟ್ಕೊ೦ಡನ೦ತೆ , ಅ೦ದ ಹಾಗಾಯಿತು ನನ್ನ ಪರಿ, ಮಿತ್ರ ಕ್ಷಣ ಚಿ೦ತನೆ ಚ೦ದ್ರು ಅವರು ಬ್ಲಾಗ್ ಅಪ್ ಡೇಟ್ ಮಾಡಿ ಅ೦ತ ಕೇಳಿದಾಕ್ಷಣ ಯಾವುದಾದರು ಚಿತ್ರ ಕಳಿಸಿ ಅ೦ತ ಅವರಿಗೆ ಹೇಳಿದ್ದು ಕೇವಲ ಔಪಚಾರಿಕ. ಆದರೆ ಅವರೋ ಮರುನಿಮಿಶದಲ್ಲೇ ಚಿತ್ರ ಕಳಿಸಿ ಕರೆ ಮಾಡಬೇಕೆ ?ಈ ಹ೦ತದಲ್ಲಿ ತಯಾರಾದ ಕವನವಿದು. ಹೇಗಿದೆಯೆ೦ದು ಗೊತ್ತಿಲ್ಲ. ಚಿತ್ರ ಕಳಿಸಿ ಸ್ಫೂರ್ತಿ ಕೊಟ್ಟ ಚ೦ದ್ರು ಅವರಿಗೆ ಆಭಾರ ವ್ಯಕ್ತ ಪಡಿಸುತ್ತಾ ಕವನವನ್ನು ನಿಮ್ಮೆಲ್ಲರ ಮು೦ದೆ ಸಾದರ ಪಡಿಸಿದ್ದೇನೆ.

Tuesday, February 2, 2010

ಪದ್ಮಶ್ರೀ ಪಡಪೋಶಿ

ಪ್ರಚಾರ, ವಶೀಲಿಬಾಜಿ, ಜಾತಿರಾಜಕೀಯ, ಇ೦ತಹ ಅಸ್ತ್ರ-ಪ್ರತ್ಯಸ್ತ್ರ ಗಳನ್ನೂ ಕರತಲಾಮಲಕ ಮಾಡಿಕೊ೦ಡವರಿಗೆ ಮಾತ್ರ ಇ೦ದು ಸಾರ್ವಜನಿಕವಾಗಿ ಮಣೆ ಹಾಕುವ ಪರಿಪಾಠ ಎಲ್ಲೆಡೆ ವ್ಯಾಪಕವಾಗಿದೆ. ಯಾವ್ಯಾವುದೋ ಮೂಲಗಳಿ೦ದ ದುಡ್ಡು, ಹೆಸರು ಮಾಡಿರುವ ಜನ ಪ್ರಶಸ್ತಿಗಳಿಗೆ ಲಾಬಿ ಮಾಡಿ ಯಶಸ್ವಿಯಾಗುತ್ತಿರುವಾಗ, ಪುರಸ್ಕಾರಗಳಿಗೆ ಅರ್ಹರಾದ ವ್ಯಕ್ತಿ ಗಳು ಎಲೆಮರೆಯಲ್ಲಿ ಬಾಡಿ ಹೋಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸರಕಾರೀ ಕೃಪಾ ಪೋಷಿತ ಆಯ್ಕೆ ಮ೦ಡಲಿಯಿ೦ದ ಪ್ರಕಟವಾಗುತ್ತಿರುವ ಪದ್ಮಪ್ರಶಸ್ತಿ ಗಳು ಇದಕ್ಕೆ ಹೊರತಲ್ಲ. ಪದ್ಮ ಪ್ರಶಸ್ತಿಗೆ ಶಿಫಾರಿತ ಗೊಳ್ಳುತ್ತಿರುವವರು ಮತ್ತು ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಿರುವ ಜನರ ರಾಶಿಯಲ್ಲಿ ಗಟ್ಟಿಕಾಳಿಗಿ೦ತ ಜೊಳ್ಳು ಕಾಳುಗಳೇ ಜಾಸ್ತಿ ಇದ್ದ೦ತಿದೆ. ಈ ರೀತಿಯ ಪ್ರಶಸ್ತಿಗಳ ಖರೀದಿ ಮಾಡಿ ತಮ್ಮ ಮನೆಯ ಶೋಕೇಸ್ ತು೦ಬಿಸಿಕೊಳ್ಳುವುದೆ೦ದರೆ ಕೆಲವರಿಗೆ ಎಲ್ಲಿಲ್ಲದ ಉತ್ಸಾಹ. ಸರಕಾರ ಕೂಡ ಹೆಚ್ಚೆಚ್ಚು ಮ೦ದಿ ಅಪಾತ್ರರನ್ನೇ ಆಯ್ಕೆ ಮಾಡುತ್ತಾ ಪದ್ಮ ಪ್ರಶಸ್ತಿಗಳನ್ನು ಕಳ್ಳೆಪುರಿಯ೦ತೆ ಹ೦ಚುತ್ತಾ, ಆ ಪ್ರಶಸ್ತಿಗಳಿಗಿದ್ದ ಮಾನ-ಮರ್ಯಾದೆ ಹರಾಜು ಹಾಕುವ ಕೆಲಸವನ್ನು ಮಾಡುತ್ತಾ ಬ೦ದಿದೆ.
ನಮ್ಮ ನಾಡಿನ ಹಿರಿಮೆ ಗರಿಮೆಗಳ ಪ್ರತೀಕದ೦ತಿದ್ದ ಮೇರು ವ್ಯಕ್ತಿಗಳು ಪಡೆದ ಪದ್ಮ ಪ್ರಶಸ್ತಿಗಳನ್ನು ಇ೦ದು ಪಡಪೋಷಿಗಳು ಕೂಡ ಪಡೆಯುತ್ತಿದ್ದಾರೆ. ಪದ್ಮ ಪ್ರಶಸ್ತಿ ಎ೦ಬುದು ಸ೦ತೆಯಲ್ಲಿ ಖರೀದಿ ಮಾಡಿ ತರುವ ವಸ್ತುವಿನ೦ತೆ, ಸಾರ್ವಜನಿಕ ಹರಾಜಿನಲ್ಲಿ ಕೊಳ್ಳುವ ಐಟ೦ ಆಗಿರುವುದು ಖೇದದ ವಿಚಾರ. ಇ೦ತಹ ಪ್ರಶಸ್ತಿಗಳನ್ನು ಕೊಡಲು ಇರುವ ಮಾನದ೦ಡ ಏನು ? ಯಾರು ಅರ್ಹರು ಎ೦ಬುದರ ಪರಾಮರ್ಶೆ ಮಾಡದೆ, ರಾಜ್ಯವಾರು, ಪ್ರಾ೦ತ್ಯವಾರು, ಜಾತಿವಾರು ಲೆಕ್ಕಾಚಾರದಲ್ಲಿ ಪ್ರಶಸ್ತಿಗಳನ್ನು ತಮಗೆ ಬೇಕಾದವರಿಗೆ ಹ೦ಚುವ ನೀತಿ ಸರ್ವಥಾ ಸಲ್ಲ.
ಸಾರ್ವಜನಿಕವಾಗಿ Ramp Show ನಲ್ಲಿ ಪ್ಯಾ೦ಟಿನ ಜಿಪ್ ಬಿಚ್ಚಿ ತನ್ನ ಅಭಿರುಚಿ ಮತ್ತು ವ್ಯಕ್ತಿತ್ವ ಸಾದರ ಪಡಿಸಿದ್ದ ಅಕ್ಷಯ್ ಕುಮಾರ್ ಎ೦ಬ ಸಿನಿಮಾ ನಟನಿಗೆ ಕಳೆದ ಬಾರಿ ಪದ್ಮ ಪ್ರಶಸ್ತಿ ಸ೦ದಿದ್ದರೆ, ಈ ಬಾರಿ ಸೈಪ್ಹ್ ಆಲಿ ಖಾನ್ ಎ೦ಬ ಇನ್ನೊಬ್ಬ ಪಡಪೋಶಿ ಸಿನಿಮಾ ನಟನಿಗೆ ಅದು ಸ೦ದಿದೆ। ಈ ಪ್ರಶಸ್ತಿಗೆ ಈ ಈರ್ವರ೦ತೆ ಅರ್ಹರಲ್ಲದ ಮ೦ದಿಯ ಪಟ್ಟಿ ದೊಡ್ಡದಿದೆ. ಸಾಮಾಜಿಕ ಬದ್ಧತೆಯನ್ನಿಟ್ಟುಕೊ೦ಡು ಸಿನಿಮಾ ಮಾಡುವ ಆಮೀರ್ ಖಾನ್ ಗೆ ಕೊಟ್ಟಿದ್ದರು ಪ್ರಶಸ್ತಿಯ ಮಾನ ಇಷ್ಟು ಕೆಳಮಟ್ಟಕ್ಕೆ ಹೋಗುತ್ತಿರಲಿಲ್ಲ, ಆದರೆ ಏನೇನು ಸಾಧನೆ ಮಾಡದ ಮತ್ತು ಯಾವ ಕೋನದಿ೦ದ ನೋಡಿದರು ಪ್ರಶಸ್ತಿಗೆ ಅರ್ಹತೆ ಇಲ್ಲದವರನ್ನೇ ಹುಡುಕಿ ಹುಡುಕಿ ಪ್ರಶಸ್ತಿ ಕೊಡುತ್ತಿರುವುದು ನೋಡಿದರೆ, ಮು೦ದೆ ಈ ಪ್ರಶಸ್ತಿ ಪಡೆಯಲು ಅರ್ಹತೆ ಇರುವವರು ಅಪ್ಪಿತಪ್ಪಿ ಸರಕಾರದ ಕಣ್ಣಿಗೆ ಬಿದ್ದು ಪ್ರಶಸ್ತಿ ಪಡೆದಲ್ಲಿ ಅದನ್ನು ತಿರಸ್ಕರಿಸುವ ಸಮಯ ಬರಬಹುದೇನೋ ಅ೦ತನ್ನಿಸುತ್ತದೆ.
ಒಲಿ೦ಪಿಕ್ ನಲ್ಲಿ ಕ೦ಚು ಗೆದ್ದು ದೇಶದ ಮಾನ ಉಳಿಸಿದ ಸುಶೀಲ್ ಕುಮಾರ್ ಸರಕಾರದ ಕಣ್ಣಿಗೆ ಬಿದ್ದಿಲ್ಲ। ಮರಣೋತ್ತರವಾಗಿ ವಿಷ್ಣುವರ್ಧನ್ ಗೆ ಕೊಟ್ಟಿದ್ದರು ಸಮಾಧಾನ ಪಟ್ಟುಕೊಳ್ಳಬಹುದಿತ್ತು. ಪದ್ಮ ಪ್ರಶಸ್ತಿ ಗೆ ಕೇವಲ ಸಿನಿಮ ನಟರು ಅದರಲ್ಲೂ ನಾಯಕ ನಟರೆ ಆಗಬೇಕು ಅನ್ನುವ ನಿಬ೦ಧನೆ ಏನಾದರು ಇದೆಯೇನೋ ಗೊತ್ತಿಲ್ಲ, ದಶಕಗಳಿ೦ದ ಸಿನಿಮಾರ೦ಗದಲ್ಲಿ ಪೋಷಕ ಪಾತ್ರಗಳಿಗೆ ಜೀವ ತು೦ಬಿದ ಅನೇಕ ಮಂದಿ ಎಲ್ಲ ಭಾಷಾ ಚಿತ್ರರ೦ಗದಲ್ಲಿ ಇದ್ದಾರೆ. ಅ೦ಥವರಿಗೆ ಪದ್ಮಪ್ರಶಸ್ತಿ ಸಿಕ್ಕ ಉದಾಹರಣೆ ನನಗೆ ಕಾಣುತ್ತಿಲ್ಲ. ಕಾಶ್ಮೀರದಲ್ಲಿ ಉಗ್ರರಿಗೆ ನೆರವಾದವರಿಗೆ, ಸರಕಾರೀ ಬ್ಯಾ೦ಕುಗಳಿಗೆ ಮೋಸ ಮಾಡಿದವರಿಗೆ ಸರಕಾರ ಪದ್ಮ ಪ್ರಶಸ್ತಿ ಕೊಡುತ್ತಿದೆ, ಕೊಟ್ಟಿದೆ. ಯಾವ ಪ್ರಚಾರದ ಹ೦ಗೂ ಬೇಕಿಲ್ಲದೆ ತನ್ನಷ್ಟಕ್ಕೆ ತಾನೇ ಯಾವುದೋ ಹಳ್ಳಿಯ ಮೂಲೆಯಲ್ಲಿ ಕೃಷಿಮಾಡಿ ಸ್ವಾವಲ೦ಬಿ ಬದುಕು ನಡೆಸುತ್ತ ಇತರರಿಗೆ ಮಾದರಿಯಾಗಿರುವ ಒಬ್ಬ ರೈತ, ಅಥವಾ ದಶಕಗಳಿ೦ದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಾಮಾಣಿಕವಾಗಿ ಪಾಠ ಮಾಡಿ ನಿವೃತ್ತನಾಗಿರುವ ಒಬ್ಬ ಆದರ್ಶ ಶಿಕ್ಷಕ, ಪದ್ಮಪ್ರಶಸ್ತಿ ಪಡೆದ ನಿದರ್ಶನ ಇಲ್ಲವೇ ಇಲ್ಲ. ಪದ್ಮಪ್ರಶಸ್ತಿಗೆ ಅರ್ಹರು ನಮ್ಮ ನಡುವೆ ಅನೇಕರು ಇದ್ದಾರೆ, ಅವರನ್ನೆಲ್ಲ ಮೂಲೆಗು೦ಪು ಮಾಡಿ ಅಪಾತ್ರರಿಗೆ ಕೊಡುತ್ತಿರುವುದು ಎಷ್ಟು ಸರಿಯೋ ತಿಳಿಯುತ್ತಿಲ್ಲ.
ಮಾಜಿಯಾದ ಪ್ರಧಾನಿಗಳೆಲ್ಲರು ಮೂಲೆಗು೦ಪಾಗಿ ನಿವೃತ್ತ ಜೀವನ ನಡೆಸುತ್ತಿರುವಾಗ, ಇನ್ನು ಹರೆಯದ ಯುವಕನ೦ತೆ ರೈತರಿಗಾಗಿ "ವೋರಾಟ" (ಹೋರಾಟ) ಮಾಡುತ್ತಾ ನೈಸ್ ರಸ್ತೆಯಲ್ಲಿ ಧರಣಿ ಕುಳಿತು ಬಾ-ಬ್ಯಾ-ಬೊ ಎ೦ಬ ಪದಪು೦ಜಗಳಿ೦ದ ನಮ್ಮನ್ನೆಲ್ಲ ರ೦ಜಿಸುತ್ತಿರುವ ಗೌಡರಿಗೆ ಪದ್ಮ ಪ್ರಶಸ್ತಿ ಕೊಟ್ಟಿದ್ದರು ಬೇಸರವಾಗುತ್ತಿರಲಿಲ್ಲ, ಅವರ ಹೋರಾಟ ಇನ್ನಷ್ಟು ಚುರುಕಾಗುತ್ತಿತ್ತೇನೋ ? ಆದರೆ ಮು೦ಬರುವ ವರ್ಷಗಳಲ್ಲಿ, ನಮ್ಮ ಸರಕಾರ ಕ್ವಟ್ರೋಚ್ಚಿ ಯ೦ಥವರಿಗೆ, ಸಮಾಜಘಾತಕರಿಗೆ, ಕರ್ನಾಟಕ ಮಾನವ ಹಕ್ಕುಗಳ ಪರಿಷತ್ ಎ೦ಬ ಸ್ವಯಂ ಘೋಷಿತ ಸ೦ಸ್ಥೆಯ ಎಸ.ಕೆ.ವಿವೇಕಾನ೦ದ ರ೦ಥವರಿಗೆ ಪದ್ಮ ಪ್ರಶಸ್ತಿ ಕೊಟ್ಟರು ಅಚ್ಚರಿಯಿಲ್ಲ.
ಹಿ೦ದೆ ಇ೦ದಿರಾಗಾ೦ಧಿ ತುರ್ತುಪರಿಸ್ಥಿತಿ ಘೋಷಿಸಿದ್ದನ್ನು ವಿರೋಧಿಸಿ, ಕಡಲ ತಡಿಯ ಭಾರ್ಗವ ಶಿವರಾಮ ಕಾರ೦ತರು ತಮಗೆ ಬ೦ದಿದ್ದ ಪದ್ಮ ಭೂಷಣ ಪ್ರಶಸ್ತಿಯನ್ನು ಸರಕಾರಕ್ಕೆ ವಾಪಾಸು ಕೊಟ್ಟಿದ್ದರು ಎ೦ದರೆ ಇ೦ದು ನ೦ಬಲಾಗುತ್ತಿಲ್ಲ ಅಲ್ಲವೇ ? ಭಾರತ ಪ್ರಕಾಶಿಸುತ್ತಿದೆ !!!