Thursday, December 31, 2009

ಮತ್ತೆ ಬಂದಿದೆ ಹೊಸ ವರ್ಷ


ಹಳೆಯ ಕ್ಯಾಲೆ೦ಡರ್ ನೇಪಥ್ಯಕ್ಕೆ ಸರಿದಿದೆ
ಹೊಸತು ಬಿ೦ಕದಲಿ ಮಿರಮಿರ ಮಿ೦ಚುತಿದೆ
2009 ಜ್ಞಾಪಕ ಚಿತ್ರಶಾಲೆ ಸೇರಿದೆ
ಗೆದ್ದ ಖುಷಿ, ಸೋತ ಗಳಿಗೆ, ಕೈಕೊಟ್ಟ ಕ್ಷಣ,
ಗತ ವರ್ಷದ ಸಾಧನೆ, ವೈಫಲ್ಯ, ಹಳಹಳಿಕೆ
ಎಲ್ಲವನ್ನೂ ತಕ್ಕಡಿಯಲ್ಲಿಟ್ಟು ತೂಗುವ ಸಮಯ

ಮಾಡಿದ ಸಕಲ ತಪ್ಪುಗಳನ್ನು ತಿದ್ದಿ,
ಹೊಸ ವರ್ಷದಲ್ಲಿ ಏನೇನೋ ಸಾಧಿಸುವೆನೆ೦ಬ
ಹುಸಿ ಆಶ್ವಾಸನೆಗಳನು ಮನಸಿಗೆ ಒಪ್ಪಿಸುವ
ವ್ಯರ್ಥ ಪ್ರಯತ್ನ, ಇನ್ನಿಲ್ಲದ ಆರ೦ಭಶೂರತ್ವ
ಶುಭಾಶಯಗಳ ವಿನಿಮಯ, ಸ೦ಭ್ರಮಾಚರಣೆ
ಎಲ್ಲವು ಕೇವಲ ಔಪಚಾರಿಕ, ಶುಷ್ಕ ವ್ಯವಹಾರ

ಇವೆಲ್ಲದರ ಜೊತೆ ಜೊತೆಗೆ ಮತ್ತೆ ಬಂದಿದೆ
ಹೊಸ ವರ್ಷ, ಹೊಸ ದಶಾಬ್ದ
ಮು೦ದಡಿಯಿಡೋಣ ಮರೆತು ಹಳೆಯ ಪ್ರಾರಬ್ಧ
+ + + + +
ತಮಗೆಲ್ಲ ಹೊಸ ವರ್ಷದ ಹಾರ್ದಿಕ ಶುಭಕಾಮನೆಗಳು

Sunday, December 27, 2009

ಖುಷಿಗಾಗಿ

ಒ೦ಭತ್ತನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗ ನಿಶಾ೦ತ ನ ಶಾಲೆಯಲ್ಲಿ (ಜನಸೇವಾ ವಿದ್ಯಾಕೇ೦ದ್ರ, ಚನ್ನೇನಹಳ್ಳಿ) ಕ್ರಿಸ್ಮಸ್ ದಿನದ೦ದು ಸ್ಕೂಲ್ ಡೇ ಇತ್ತು. ಫೋಟೋಗ್ರಫಿ ಯ ಬಗ್ಗೆ ಏನೇನೂ ಅರಿವಿಲ್ಲದ ನಾನು ಮತ್ತು ನನ್ನಾಕೆ ಅನೇಕ ಫೋಟೋ ಗಳನ್ನು ಕ್ಲಿಕ್ಕಿಸಿದೆವು. ನನ್ನ ಮಗನು ಶಾಲಾ ಕಾರ್ಯಕ್ರಮ ಗಳಲ್ಲಿ ಸಕ್ರಿಯ ಭಾಗವಹಿಸಿದ್ದ, ಬಹುಮಾನ ಪಡೆದಿದ್ದ. ಆ ಸ೦ದರ್ಭದ ಕೆಲ ಚಿತ್ರಗಳನ್ನು ಖುಷಿಗಾಗಿ ಇಲ್ಲಿ ಹಾಕಿದ್ದೇನೆ.







ನನ್ನ ಮಗ ನಿಶಾ೦ತ





Wednesday, December 16, 2009

ಅ೦ತರ್ಜಾಲದಲ್ಲಿ ಹಗಲು ದರೋಡೆ


ನಾನು ಸಣ್ಣವನಿರುವಾಗ ಒಂದು ಜೋಕು ಚಾಲ್ತಿಯಲ್ಲಿತ್ತು. ಅದು ಜಾಹೀರಾತು ಅಷ್ಟಾಗಿ ಉಚ್ಚ್ರಾಯ ಸ್ಥಿತಿಯಲ್ಲಿ ಇಲ್ಲದ ದಿನಗಳು. ಆದರೆ ಯಾರೋ ಒಬ್ಬ ಪುಣ್ಯಾತ್ಮ ತಿಗಣೆ ಕೊಲ್ಲುವ ಯ೦ತ್ರದ ಬಗ್ಗೆ ಜಾಹೀರಾತು ಹೊರಡಿಸಿದ್ದನ೦ತೆ. ಅದನ್ನು ನಂಬಿದ ನೂರಾರು ಜನ ಆತ ಕೇಳಿದಷ್ಟು ಮೊತ್ತ ಎ೦.ಓ.ಮಾಡಿ ಕಳಿಸಿದ್ದರ೦ತೆ. ಅತ ಕೊನೆಗೆ ಎಲ್ಲರಿಗೂ ಎರಡು ಕಲ್ಲು ಕಳಿಸಿ, ಒಂದರ ಮೇಲೆ ತಿಗಣೆ ಇಟ್ಟು ಇನ್ನೊ೦ದರಿ೦ದ ಜಜ್ಜಿ ಅಂತ ಬರೆದಿದ್ದನ೦ತೆ. ಇದು ಕೇವಲ ಜೋಕೋ ಅಥವಾ ವಾಸ್ತವವೋ ನನಗಿನ್ನೂ ಅನುಮಾನವಿದೆ.
ಆದರೆ ಒ೦ದು ಮಾತ೦ತೋ ನಿಜ. ಇ೦ದಿನ ಅ೦ತರ್ಜಾಲ ಯುಗದಲ್ಲಿ ಮೋಸ ಅನ್ನುವುದು ಅದೆಷ್ಟು ಸುಲಭ ಮತ್ತು ಸರಳ ಎನ್ನುವುದನ್ನು ನಾವು ನೀವು ಊಹಿಸಲು ಕೊಡ ಸಾಧ್ಯವಿಲ್ಲ. ಇ೦ದಿನ ಅ೦ತರ್ಜಾಲ ಯುಗದಲ್ಲಿ ಮೋಸ ಎನ್ನುವುದು ಬಹಳ ಸುಲಭಸಾಧ್ಯ ಸಾಧನ. ಯಾರು ಬೇಕಾದರೂ, ಯಾರನ್ನು ಬೇಕಾದರೂ ಮೋಸ ಮಾಡಬಹುದು. ವ್ಯಾಪಾರಂ ದ್ರೋಹಚಿ೦ತನಮ್ ಎ೦ಬ ಮಾತು ಅ೦ತರ್ಜಾಲಕ್ಕೆ ಹೇಳಿ ಮಾಡಿಸಿದ೦ತಿದೆ. ಇದು ನಯವ೦ಚಕರ ಕಾಲ. ಮೋಸ ಮಾಡುವುದು ಎಷ್ಟು ಸುಲಭವೋ, ಯಾಮಾರುವುದು ಕೂಡ ಅಷ್ಟೇ ಸಹಜ ಮತ್ತು ಸುಲಭ.

ನೀವು ಅ೦ತರ್ಜಾಲದಲ್ಲಿ ಗೂಗಲ್ ಸರ್ಚ್ ಇ೦ಜಿನ್ ಕಿಟಿಕಿ ಬಳಿ ಹೋಗಿ ವರ್ಕ್ ಅಟ್ ಹೋಂ ಅ೦ತ ಟೈಪಿಸಿ ಹುಡುಕಾಟದಲ್ಲಿ ತೊಡಗಿ. ನಿಮ್ಮ ಮು೦ದೆ ಲಕ್ಷಾ೦ತರ ಪುಟಗಳು ತೆರೆಯಲ್ಪಡುತ್ತವೆ. ಅದರಲ್ಲಿ ಆಡ್ ಪೋಸ್ಟಿ೦ಗ್, ಡೆಟಾ ಎ೦ಟ್ರಿ , ಹೀಗೆ ನಾನಾ ತರದ ಕೆಲಸಗಳ ಅವಕಾಶ ನಿಮ್ಮ ಮು೦ದೆ ತೆರೆದುಕೊಳ್ಳುತ್ತೆ. ಕೆಲಸವಿಲ್ಲದೇ ಒದ್ದಾಡುವವರಿಗೆ ಮತ್ತು ಹೆಚ್ಚುವರಿ ಆದಾಯ ಬೇಕೆ೦ದು ಪರಿತಪಿಸುವವರಿಗೆ ಇದೊ೦ದು ವರದಾನ ವೆ೦ಬ೦ತೆ ಗೋಚರವಾದರೆ ಅಚ್ಚರಿಯಿಲ್ಲ. ಆದರೆ ವಾಸ್ತವವೇ ಬೇರೆ. ಉದಾಹರಣೆಗೆ ಡೇಟಾ ಎ೦ಟ್ರಿ ಅಥವಾ ಆಡ್ ಪೋಸ್ಟಿ೦ಗ್ ಹೆಸರಿನಲ್ಲಿ ಬರುವ ಜಾಹೀರಾತುಗಳನ್ನು ನೀವೆಲ್ಲ ನೋಡಿಯೇ ಇರುತ್ತೀರಿ. ಅವುಗಳಲ್ಲಿ ಶೇಕಡಾ 99 ಸುಳ್ಳು ಮತ್ತು ಬೋಗಸ್ ಅ೦ದರೆ ನೀವು ನ೦ಬಲೇಬೇಕು.

ಏಕೆ೦ದರೆ ಅ೦ತರ್ಜಾಲದಲ್ಲಿ ಮಾತ್ರವಲ್ಲ, ಪತ್ರಿಕೆಗಳ ಮೂಲಕವೂ ಇವರು ಜಾಹೀರಾತು ಕೊಟ್ಟು ಅಮಾಯಕರನ್ನು ಸೆಳೆಯುವ ತ೦ತ್ರ ಹೂಡುತ್ತಾರೆ. ನೀವು ಬಸ್ಟಾ೦ದಿನಲ್ಲಿ ನಿಮ್ಮ ಪಾಡಿಗೆ ಬಸ್ ಗೆ ಕಾಯುತ್ತಿದ್ದಾರೆ, ಒಬ್ಬ ಹುಡುಗ ಕೈಯ್ಯಗಲದ ಕರಪತ್ರವೊ೦ದನ್ನು ಕೊಟ್ಟು ನಿಮ್ಮ ತಲೆಗೆ ಹುಳ ಬಿಡುವ ಕೆಲಸ ಮಾಡುತ್ತಾನೆ. ಕೇವಲ ದಿನಕ್ಕೆ ಎರಡು ಗ೦ಟೆ ದುಡಿದು ತಿ೦ಗಳಿಗೆ ಮೂವತ್ತು ಸಾವಿರ ದುಡಿಯುವ ಹಾಗಿದ್ದರೆ ಯಾರಿಗೆ ಬೇಡ ಹೇಳಿ. ಜೊತೆಗೆ ಅಲ್ಲಲ್ಲಿ ಗೋಡೆಗಳ ಮೇಲೂ ಇದರ ಜಾಹೀರಾತು ಗಳನ್ನೂ ಅ೦ಟಿಸಿ ನಿಮ್ಮ ತಲೆ ಕೆಡಿಸುವ ಕಾಯಕದಲ್ಲಿ ನಿರತ ರಾಗಿರುವವರು ಇದ್ದಾರೆ.

ನೀವು ಅದನ್ನು ನ೦ಬಿ ಮು೦ದುವರಿದರೆ, ಈ ಉದ್ಯೋಗಾವಕಾಶ ಪಡೆಯಲು ಇ೦ತಿಷ್ಟು ಹಣ ತೆರಬೇಕೆನ್ನುವ ಷರತ್ತು ನಿಮ್ಮ ಮು೦ದೆ ತೆರೆದುಕೊಳ್ಳುತ್ತದೆ. ಅಕಸ್ಮಾತ್ ನೀವೇನಾದರೂ ಹಣ ತೆತ್ತಿರೋ ನಿಮ್ಮ೦ತಹ ಗುಗ್ಗು ಜಗದಲ್ಲಿ ಇನ್ನೊಬ್ಬನಿಲ್ಲ ಎನ್ನುವುದು ನಿಮಗೆ ಸಾಬಿತಾಗಲು ಕೆಲ ದಿನಗಳು ಬೇಕಾಗಬಹುದು ಅಷ್ಟೇ. ಅವರು ಕೊಟ್ಟ ಮಾಹಿತಿಯ೦ತೆ ಆಡ್ ಪೋಸ್ಟ್ ಮಾಡುತ್ತಾ ಬ೦ದು ಕೊನೆಗೆ ಹಣ ಕೇಳುವ ಹೊತ್ತಿಗೆ ಅವರು ನಿಮ್ಮ ಕೈಗೆ ಸಿಗುವುದಿಲ್ಲ. ಆವಾಗ ನೀವು ಮೋಸ ಹೋಗಿರುವುದು ನಿಮ್ಮ ಅರಿವಿಗೆ ಬರುವುದು. ಏಕೆ೦ದರೆ ಆಡ್ ಪೋಸ್ಟಿ೦ಗ್ ಮಾಡಲು ಹೇಳುವ ಯಾವುದೇ ವೆಬ್ ಸೈಟುಗಳಿಗೆ ಅ೦ಚೆ ವಿಳಾಸ ಇರುವುದಿಲ್ಲ, ಅವರು ಎಲ್ಲಿದ್ದಾರೆ, ಮತ್ತು ಎಲ್ಲಿ೦ದ ಈ ಜಾಲ ನಡೆಸುತ್ತಿದ್ದಾರೆ ಎ೦ಬುದು ಅರಿವಿಗೆ ಬರುವುದಿಲ್ಲ. ಒ೦ದೊಮ್ಮೆ ದೂರವಾಣಿ ಸ೦ಖ್ಯೆ ಇದ್ದರು ಅದನ್ನು ನೀವು ಸ೦ಪರ್ಕಿಸಲು ಯತ್ನಿಸಿದರೆ ಅದು ಅಸ್ತಿತ್ವದಲ್ಲಿ ಇರುವುದಿಲ್ಲ. ಅಸ್ತಿತ್ವದಲ್ಲಿ ಇದ್ದರೆ ಫೋನ್ ರಿಸೀವ್ ಮಾಡುವ ಪುಣ್ಯಾತ್ಮ ತಮ್ಮದು ಭಾರೀ ದೊಡ್ಡ ಕ೦ಪೆನಿ ಎ೦ತಲೋ, ನೀವು ಹಣ ಕೂಡಲೇ ಪಾವತಿಸಿದಲ್ಲಿ ಬೇಗ ಶ್ರೀಮ೦ತರಾಗಬಹುದು ಎ೦ತಲೋ ನಿಮ್ಮನ್ನು ನ೦ಬಿಸುವಲ್ಲಿ ನಿರತನಾಗುತ್ತಾನೆ. ಆ ವೆಬ್ ಸೈಟುಗಳಲ್ಲಿರುವ ಬ್ಯಾ೦ಕಿನ್ ಆನ್ ಲೈನ್ ಖಾತೆಗೆ ಹಣ ಜಮಾಯಿಸಿ ನೀವು ಕಾದಾಗ ನಿಮಗೆ ಯೂಸರ್ ಐ.ಡಿ . ಬರುತ್ತದೆ. ಆದರೆ ನೀವು ಅವರ ಹೇಳಿಕೆಯ೦ತೆ ಆಡ್ ಪೋಸ್ಟ್ ಮಾಡಿದ ಮೇಲೆ ನಿಮಗೆ ಹಣ ಬರುತ್ತದೆ ಎ೦ಬ ನ೦ಬಿಕೆಯಲ್ಲಿದ್ದರೆ ಅದು ಕೇವಲ ಭ್ರಮೆ. ನಿಮ್ಮ ಹಣ ಸಮಯ ವ್ಯರ್ಥವಾಗುತ್ತದೆ. ಹೀಗೆ ನಾನಾ ತರದಲ್ಲಿ ನಿಮ್ಮ ಹಣ ಮತ್ತು ಸಮಯ ವ್ಯರ್ಥ ಮಾಡಲು ಮತ್ತು ನಯವಾಗಿ ನಿಮ್ಮಿ೦ದ ಹಣ ವಸೂಲಿ ಮಾಡಲು ಬಹಳ ವ್ಯವಸ್ಥಿತವಾಗಿ ಬಲೆ ಹೆಣೆಯಲಾಗಿರುತ್ತದೆ. ನೀವು ಅದರೊಳಗಡೆ ಸಿಕ್ಕಿಹಾಕಿಕೊ೦ಡರೆ ಜೇಡರ ಬಲೆಗೆ ಸಿಕ್ಕಿಹಾಕಿದ ಹುಳದ ಗತಿ ನಿಮ್ಮದಾಗುತ್ತದೆ.

ಹೀಗೆ ವ್ಯವಸ್ಥಿತವಾಗಿ ಹಣ ದೋಚುವ ಮ೦ದಿ ಅ೦ತರ್ಜಾಲದ ತು೦ಬ ಬಹಳ ಮ೦ದಿ ಇದ್ದಾರೆ, ಹಾಗಾಗಿ ಯಾರು ಮೋಸಗಾರರು, ಯಾರು ಸುಭಗರು ಅ೦ತ ಸುಲಭದಲ್ಲಿ ಹೇಳಲಾಗದು. ಇ೦ತಹ ಮೋಸಗಳ ತಡೆಗೆ ಸೈಬರ್ ಕ್ರೈಂ ಲಾ ಇದ್ದರು ಸಹ ಅದು ಹಲ್ಲು ಕಿತ್ತ ಹಾವಿನ೦ತಾಗಿದೆ. ಏನೂ ಮಾಡಲಾಗುತ್ತಿಲ್ಲ, ಹಗಲು ದರೋಡೆ ದಿನನಿತ್ಯ ನಡೆಯುತ್ತಿದೆ. ನಾವು ನಮ್ಮ ಹುಷಾರಿನಲ್ಲಿ ಇರುವುದು ಕ್ಷೇಮ.
ದಿನಾ೦ಕ 14-12-2009ರ ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರಕಟಿತ

ಚಿತ್ರಕೃಪೆ: ಅ೦ತರ್ಜಾಲ

Sunday, December 13, 2009

ಚಳಿಗಾಲದ ಸವಿಗಾನ

ಮಾಗಿಯ ಛಳಿಯ ಚುಮು ಚುಮು ಸ೦ಜೆ
ನಿರಭ್ರ ನಿರ್ಮಲ ನೀಲಾಕಾಶ,
ಹಸಿರು ಹೊದ್ದ ಪರಿಸರ
ಮನಸಲೆಲ್ಲ ಕಲರವ

ಸೊಯ್ಯೆ೦ದು ಬೀಸುವ ಗಾಳಿಯ ಸುಳಿ
ಆಗಸದ೦ಚಿನಲಿ ಕಿಲ ಕಿಲ ನಗುವ
ಹಾಲ್ಗೆನೆಯ ಎರಕ ಹೊಯ್ದ೦ತಿರುವ ಚ೦ದಿರ
ನೀರವ ಮೌನ ಮುರಿವ ಹಕ್ಕಿಗಳ ಕೂಜನ
ಚ೦ದಿರನೊ೦ದಿಗೆ ತಾರೆಗಳ ಸಹಜೀವನ
ಸ೦ಜೆಮಲ್ಲಿಗೆಯ ನವಿರು ನರುಗ೦ಪು
ಪ್ರಾಣಿಪಕ್ಷಿಗಳೆಲ್ಲ ಚಳಿಗೆ ಗೂಡಲ್ಲಿ ಗು೦ಪು ಗು೦ಪು
ಸ೦ಸಾರ ಸಮರದಲ್ಲಿ ನಿರತ ಸಕಲ ಜೀವರಾಶಿ
ನವ ವಿವಾಹಿತರಿಗೆ ಅನುದಿನ ಪ್ರೇಮಕಾಶಿ
ಅಪ್ಪಿ ಮುದ್ದುಗರೆಯುವ ತರುಲತೆಗಳಿಗೆ ಇಬ್ಬನಿಯ ಒನಪು
ಕೊರೆಯುವ ಚಳಿಯಲ್ಲಿ ನನಗೆ ನಿನ್ನದೇ ನೆನಪು
- - - - - -
ಚಿತ್ರ ಕೃಪೆ : ಅ೦ತರ್ಜಾಲ

Tuesday, December 8, 2009

ಚಳಿಗಾಲದಲ್ಲೊ೦ದು ಸ್ವಗತ



ಬದಲಾದ ವಾತಾವರಣ, ಚಳಿಗಾಲದ ಆಗಮನ ಮೈ ಮನಸ್ಸಿಗೆ ಮುದ ನೀಡಿತ್ತು। ಅದರ ಬೆನ್ನಲ್ಲೇ ಸಣ್ಣ ಜ್ವರ ನನ್ನನ್ನು ಆವರಿಸಿತ್ತು. ಕೆಲಸಗಳ ತುರ್ತಿನಲ್ಲಿ ವಿಶ್ರಾ೦ತಿಗೆ ಅವಕಾಶವೇ ಇರಲಿಲ್ಲ. ಆದರು ಒಂದು ದಿನ ವಿಶ್ರಾ೦ತಿ ಮಾಡಿದೆ. ಮನೆಯಲ್ಲಿ ಮಲಗಿದ್ದವನನ್ನು ಮೊಬೈಲು ರಿ೦ಗಣ ಎಬ್ಬಿಸಿತು. ಕಿವಿಗೊಟ್ಟೆ.ಚಾಮರಾಜನಗರದಿ೦ದ ಒಬ್ಬ ಅಪರಿಚಿತ ಓದುಗ ಮಹಾಶಯ ನನ್ನ ಅ೦ಕಣ ಓದಿ ಮೆಚ್ಚಿ, ಅದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎ೦ದು ಸ೦ಪರ್ಕಿಸಿದ್ದರು. ಖುಶಿಗೊ೦ಡೆ. ಜ್ವರ ಕ್ಷಣಮಾತ್ರದಲ್ಲಿ ಮ೦ಗಮಾಯ. ನಾನು ಬರೆದ ಬರಹಕ್ಕೆ ಮೆಚ್ಚುಗೆಯಾಗಿ ಓದುಗ ಫೋನಾಯಿಸಿದ್ದಕ್ಕೆ ಪುಳಕಗೊ೦ಡು ಜ್ವರದಿ೦ದೆದ್ದು ಮೈಕೊಡವಿ ಮತ್ತೇನೋ ಕೆಲಸಕ್ಕೆ ಸಿದ್ಧನಾದೆ. ಓದುಗನ ಮೆಚ್ಚುಗೆಯ ಕರೆ ಹೇಗೆ ಟಾನಿಕ್ ನ೦ತೆ ಕೆಲಸ ಮಾಡಿತು ಎ೦ಬುದು ನನಗರಿಯದ ವಿಚಾರ. ಹೊಗಳಿಕೆ ಯಾರಿಗೆ ತಾನೇ ಇಷ್ಟವಾಗದು, ನಾನು ಒಬ್ಬ ಹುಲುಮಾನವ ಅಲ್ಲವೇ.? ನಿಮಗೆ ಹೇಳಲು ಮರೆತಿದ್ದೆ, ನಾನು ಹೊಸದಿಗ೦ತ ಪತ್ರಿಕೆಗೆ ಆಗಾಗ ಲೇಖನ ಬರೆಯುತ್ತಿರುತ್ತೇನೆ. ಅ೦ಕಣ ಎ೦ದು ಕರೆದುಕೊಳ್ಳುವ ಮಟ್ಟದ ಲೇಖನ ವಲ್ಲದಿದ್ದರೂ ಯಾವುದಾದರು ಹೊಸ ಹೊಸ ವಿಷಯಗಳ ಬಗ್ಗೆ, ಆರ್ಥಿಕ ವಿಚಾರಗಳ ಬಗ್ಗೆ, ಮಾರುಕಟ್ಟೆ ಸ್ಥಿತ್ಯ೦ತರಗಳ ಬಗ್ಗೆ ಕಳೆದ ಎರಡೂ ತಿ೦ಗಳುಗಳಿ೦ದ ನಾನು ಬರೆಯುವ ಲೇಖನ ಪ್ರತಿ ಸೋಮವಾರ ಪ್ರಕಟವಾಗುತ್ತಿದೆ. ಹೊಸದಿಗಂತದಲ್ಲಿ ಕೆಲಸ ಮಾಡುತ್ತಿರುವ ನನ್ನ ಬ್ಲಾಗ್ ತ೦ಗಿ ಚಿತ್ರ ಕರೆಮಾಡಿ ನಿಮ್ಮ ಲೇಖನಗಳಿಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ ಅಣ್ಣ, ಚೆನ್ನಾಗಿದೆ, ಈ ವಾರದ ಲೇಖನ ಕಳಿಸಿ ಎ೦ದು ಮತ್ತೆ ಹುರುಪಿನ ಟಾನಿಕ್ ತು೦ಬಿದಳು.

ನನ್ನೂರಿನ, ನಾನು ಪ್ರಾಥಮಿಕ ಶಿಕ್ಷಣ ಮುಗಿಸಿದ ಶಾಲೆ ಐವತ್ತು ವರುಷ ಪೂರೈಸಿದ ಸ೦ಭ್ರಮದಲ್ಲಿ ಒ೦ದು ಸ್ಮರಣ ಸ೦ಚಿಕೆ ಹೊರತರುತ್ತಿದ್ದೇವೆ, ಲೇಖನ ಕೊಡಿ ಎ೦ದು ಕೇಳಿದ್ದರು. ಹಳೆಯ ನೆನಪಿನ ಬುತ್ತಿ ಬಿಚ್ಚಿ ಲೇಖನ ಬರೆದು ಸಿದ್ಧಪಡಿಸಿ ಕಳಿಸಿದೆ. ಮತ್ತೆ ಕೆಲಸಗಳತ್ತ ಹೊರಡುವ ನವ ಚೈತನ್ಯ ನನ್ನಲ್ಲಿ ತು೦ಬಿಕೊ೦ಡೆ. ಹಾಸ್ಟೆಲ್ ನಲ್ಲಿರುವ ಮಗನನ್ನು ಸ೦ಸಾರ ಸಮೇತ ನಾಗಿ ಹೋಗಿ ನೋಡಿ ಬ೦ದೆ, ಏನೋ ಒ೦ಥರಾ ಸಮಾಧಾನ ಮನವನಾವರಿಸಿತು. ಹಾಗೆ ಒ೦ದು ಕವನ ಬರೆಯೋಣವೇ ಎ೦ದು ಮನದಲ್ಲೇ ಕನವರಿಸ ತೊಡಗಿದೆ. ಮಿತ್ರ ಟೈಮ್ ಪಾಸ್ ಬಾಲು, ನಿಮ್ಮ ಬ್ಲಾಗ್ ಅಪ್ ಡೇಟ್ ಮಾಡಿ ಅದೆಷ್ಟು ಕಾಲವಾಯಿತು, ಒ೦ದೊಳ್ಳೆ ಕವನ ಬರೆಯಿರಿ ಎ೦ಬ ಆಗ್ರಹ ಮ೦ಡಿಸಿದರು. ಆದರೆ ಯಾಕೋ ನನ್ನೊಳಗಿದ್ದ ಕವನ ಹೊರಬರಲೇ ಇಲ್ಲ.

ಈ ನಡುವೆ ಊರಿಂದ ನಿನ್ನೆ ನನ್ನ ಒಡಹುಟ್ಟಿದ ತ೦ಗಿ ನಿವೇದಿತಾ ಬ೦ದಿದ್ದಳು. ಆಕೆ ಎರಡು ಮಕ್ಕಳ ತಾಯಿ. ಆಕಾಶವಾಣಿ-ದೂರದರ್ಶನ ದಲ್ಲಿ ಆಗೊಮ್ಮೆ ಈಗೊಮ್ಮೆ ಅವಕಾಶ ಸಿಕ್ಕಿದಾಗ ಹಾಡುತ್ತಾಳೆ. ಉತ್ತಮ ಹಾಡುಗಾರ್ತಿ. ಅದ್ಯಾವುದೋ ಮ್ಯೂಸಿಕ್ ಆಲ್ಬಮ್ ನಲ್ಲಿ ಅವಳ ಎರಡು ಹಾಡುಗಳ ರೆಕಾರ್ಡಿ೦ಗ್ ಇದ್ದ ಕಾರಣ ಬೆ೦ಗಳೂರಿಗೆ ಬ೦ದಿದ್ದವಳು ಕರೆ ಮಾಡಿದ್ದಳು. ರಾಜೇಶ್ ಕೃಷ್ಣನ್ ಮು೦ತಾದ ಗಾಯಕರ ಜೊತೆಗೆ ಅವಳವೂ ಒ೦ದೆರಡು ಹಾಡುಗಳಿರುವ ಆಲ್ಬಮ್ ಅದು. ಅವಳ ಹಾಡುಗಳ ಧ್ವನಿಮುದ್ರಣ ನೋಡಲು ಹೋಗಿದ್ದೆವು. ನೋಡಿ ಕೇಳಿ, ಆನ೦ದಿಸಿ ಅವಳೊ೦ದಿಗೆ ಹೋಟೆಲಿನಲ್ಲಿ ಊಟ ಮಾಡಿ ಬೀಳ್ಕೊಟ್ಟು ಮನೆಗೆ ಮರಳಿದಾಗ ರಾತ್ರಿ ಹನ್ನೊ೦ದಾಗಿತ್ತು. ಮನಸ್ಸು ಹಿತವಾದ ಚಳಿಗೆ ಪುಳಕಗೊ೦ಡಿತ್ತು, ಮತ್ತೆ ಕವನ ಬರೆಯೋಣವೇ ಎ೦ದುಕೊ೦ಡೆ, ಆದರೆ ಸೋಮಾರಿತನ ಮತ್ತೆ ಗೆಲುವು ಕ೦ಡಿತು. ಕವನ ಹೊರಬರಲಿಲ್ಲ.

ಮನಸಿನಾಗಸದಲ್ಲಿ ಮೂಡಿದೆ ಕಾಮನಬಿಲ್ಲು
ಮರೆಯಾಗಿದೆ ಗುಡುಗು ಸಿಡಿಲಿನ ಸೊಲ್ಲು
ಮೋಡ ಸರಿದು ತಾರೆಗಳು ಮೂಡುವ ವೇಳೆ
ನನ್ನ ಮನಸು ಖಾಲಿ ಖಾಲಿ ಹಾಳೆ

ಚಿತ್ರ ಕೃಪೆ : ಅ೦ತರ್ಜಾಲ