Monday, November 30, 2009
ಮನಸಿಗೂ ಮ೦ಜು ಕವಿದಿದೆ
Thursday, November 19, 2009
ಹೀಗೊ೦ದು "ವಿದಾಯ ಲೇಖ"

ಯಾಕೋ ಮನಸ್ಸು ಭಾರವೆನಿಸುತ್ತಿದೆ, ದಶಕಗಳಿಂದ ಅನಭಿಷಿಕ್ತ ರಾಜನ೦ತಿದ್ದ ನಾನು ಅಜ್ಞಾತವಾಸಕ್ಕೆ ಹೋಗುವ ಕಾಲ ಸನ್ನಿಹಿತ ವಾಗಿದೆ. ಅಸ೦ಖ್ಯ ಜನರಿಗೆ ನಾನು ಆಶ್ರಯ ನೀಡಿದೆ, ಭರವಸೆಯ ಬೆಳಕನ್ನು ಕೊಟ್ಟೆ, ಗಮ್ಯ ತಲುಪಲು ದಾರಿ ತೋರಿದೆ. ಜೀವನದಲ್ಲಿ ಸೋತ ಅದೆಷ್ಟು ಹತಭಾಗ್ಯರು, ಕನಸಿನ ಜೋಳಿಗೆಯನ್ನು ಬಗಲಲ್ಲಿಟ್ಟುಕೊ೦ಡು, ಭಾರ ಹೃದಯ ಹೊತ್ತು ನನ್ನಲ್ಲಿಗೆ ಬಂದರು, ಅವರಿಗೆ ನೀರು ನೆರಳು ಕೊಟ್ಟು ಸಲಹಿದೆ, ಸಂತೈಸಿದೆ, ಕ್ಷಣಮಾತ್ರದ ಸಾಂತ್ವನ ಕೊಟ್ಟೆ, ಬದುಕಲು ನೂರೆ೦ಟು ಮಾರ್ಗಗಳಿವೆ ಎ೦ಬ ಅರಿವನ್ನು ಮೂಡಿಸಿದೆ. ನನ್ನ ಮನೆಗೆ ಬಂದು ಹೋದವರು ಲಕ್ಷ ಲಕ್ಷ ಜನ, ಎಲ್ಲರ ಬಾಯಲ್ಲೂ ನನ್ನ ಹೆಸರು ರಾರಾಜಿಸುತ್ತಿತ್ತು, ಅನುರಣಿಸುತ್ತಿತ್ತು. ದೇಶ-ವಿದೇಶಗಳ ಅದೆಷ್ಟು ಜನ ತಮ್ಮ ಖುಷಿಯ, ನೋವಿನ, ಆತ೦ಕದ ಅರೆ ಕ್ಷಣಗಳನ್ನು ನನ್ನ ಮನೆಯಲ್ಲಿ ಕಳೆದರೋ, ನನ್ನ ಮನೆಗೆ ಬಂದು ಹೋದಾಗ ಅವರಿಗಾದ ಅನುಭೂತಿ ಅದೆಷ್ಟು ಅಪರೂಪ ವೋ, ನಾನರಿಯೆ. ಹಲವಾರು ಭಾಷೆ, ದೇಶಗಳ, ಜಾತಿ-ವಿಜಾತಿಗಳ ಬೇಧಭಾವವಿಲ್ಲದೆ ಎಲ್ಲರೊಳಗೊ೦ದಾಗಿ ಬಂದರು, ಹೋದರು. ಜಗವೆಲ್ಲ ಮಲಗಿರಲು ನಾನು ಎದ್ದಿರುತ್ತಿದ್ದೆ, ನನ್ನ ಮನೆಗೆ ಬಂದವರ ಕುಶಲ-ಕ್ಷೇಮ ವಿಚಾರಿಸುತ್ತಿದ್ದೆ, ಅನ್ನ-ನೀರು ಸಿಗುವಂತೆ ನೋಡಿಕೊಳ್ಳುತ್ತಿದ್ದೆ, ಅವರ ಗಮ್ಯ ತಲುಪಲು ದಾರಿ ತೋರುತ್ತಿದ್ದೆ. ಕಳ್ಳರು, ಸುಳ್ಳರು, ಸುಭಗರು, ತಲೆಹಿಡುಕರು, ಪು೦ಡುಪೋಕರು, ಹೀಗೆ ಎಲ್ಲರನ್ನು ನಾನು ಸಮಭಾವದಿ೦ದ, ಸಮಚಿತ್ತದಿ೦ದ ಪೊರೆದೆ. ನನ್ನ ಮಡಿಲಲ್ಲಿ ತಮ್ಮ ಬದುಕಿನ ಅನ್ನ ಕ೦ಡುಕೊ೦ಡ ವರೆಷ್ಟೋ, ತೊರೆದು ಹೋದವರೆಷ್ಟೋ, ಲೆಕ್ಕವಿಟ್ಟಿಲ್ಲ. ಬಣ್ಣಬಣ್ಣದ ಜನ, ಬಣ್ಣದ ಮಾತಿನಿ೦ದ ಮರುಳು ಮಾಡುವ ಜನ, ಮರುಳಾಗುವ ಜನ, ಸುಲಿಗೆ,ಜಗಳ, ಕದನ, ಮಾಡುವ ತರಹೇವಾರಿ ಜನರನ್ನು ನಾನು ಮೂಕ ಭಾವದಿಂದ ಸಾಕ್ಷೀಕರಿಸಿದೆ.
ನನ್ನ ಮನೆಗೆ,ಮನೆಯಂಗಳಕ್ಕೆ ಕಾಲಿಟ್ಟ ಅಸ೦ಖ್ಯ ಜನರಿಗೆ ನನ್ನ ನೆನಪು ಸದಾ ಕಾಡುತ್ತಿರುತ್ತದೆ. ಬಡವ-ಬಲ್ಲಿದನೆ೦ಬ ಬೇಧವಿಲ್ಲದೆ ಎಲ್ಲರತ್ತ ನನ್ನ ನೋಟ ಒ೦ದೇ ಆಗಿತ್ತು, ಅವನು ಸೂಟುಬೂಟು ತೊಟ್ಟು ಮೈತು೦ಬ ಅತ್ತರು ಪೂಸಿ ಜೇಬು ತು೦ಬಾ ಧನಕನಕಗಳನ್ನು ತು೦ಬಿ ಬ೦ದವನಿರಬಹುದು, ಇಲ್ಲವೇ ಸ್ನಾನ ಮಾಡಿ ಅದೆಷ್ಟೋ ದಿನ ಕಳೆದ ಕೊಳೆತು ನಾರುವ, ಬರಿಗಾಲ ಫಕೀರ ನಿರಬಹುದು, ಎಲ್ಲರನ್ನೂ ನಾನು ಪೊರೆದೆ, ಪ್ರೀತಿಸಿದೆ, ನೆರಳಿತ್ತೆ, ಮೈದಡವಿದೆ. ಯಾವ್ಯಾವುದೋ ಊರುಗಳಿ೦ದ ಓಡಿಬಂದ, ಬದುಕಿಗಾಗಿ ಉದ್ಯೋಗ ಅರಸುತ್ತ ಬಂದವರಿಗೆ ತಾಯಾದೆ, ಅವರ ಕಣ್ಣಿರೋರಿಸಿದೆ.
ಅವರೆಲ್ಲರ ಆಸೆ, ಹತಾಶೆ, ನೋವು, ನರಳಿಕೆ, ಆತ೦ಕ, ಸುಖ, ಕನಸು, ಕನವರಿಕೆ ಗಳಿಗೆ ಇ೦ಬು ಕೊಟ್ಟೆ. ಆದರೆ ನಾನೇ ಇ೦ದು ಎಲ್ಲರ ನೆನಪುಗಳ ಜೋಳಿಗೆಯನ್ನು ಹೊತ್ತು ಅಜ್ನಾತವಾಸಕ್ಕೆ ಹೋಗುತ್ತಿದ್ದೇನೆ, ನನ್ನ ಮನೆ ಕೆಡವುತ್ತಿದ್ದಾರೆ, ಹೊಸ ಮನೆ, ಹೊಸ ರೂಪ, ಹೊಸ ವಿನ್ಯಾಸಕ್ಕೆ ದಾರಿ ಮಾಡಿಕೊಡುತ್ತಾ, ನಿಮ್ಮೆಲ್ಲರ ಆಶೋತ್ತರ ಗಳಿಗೆ ಸಾಕ್ಷಿಯಾಗಿದ್ದ ನಾನು ಭಾರವಾದ ಹೃದಯ ದೊ೦ದಿಗೆ, ತೆರಳುತ್ತಿದ್ದೇನೆ. ಚಿಂತೆ ಬೇಡ, ಮತ್ತೆ ಮರಳುವೆ, ನಿಮ್ಮೆಲ್ಲರನ್ನು ಸಲಹುವೆ. ಇ೦ತಿ ನಿಮ್ಮ ಪ್ರೀತಿಯ - ಮೆಜೆಸ್ಟಿಕ್ ಬಸ್-ಸ್ಟಾ೦ಡ್, ಬೆ೦ಗಳೂರು
Wednesday, November 18, 2009
ಬಾ-ನಲ್ಲೆ !!

ಅಲೆಯ ಉಬ್ಬರವಿಳಿತ ಉನ್ಮಾದ ತೋರುತಿದೆ
ನಿತ್ಯನೂತನ ಬಯಕೆ ಸಾಗರದ ಅಲೆಯಲಿದೆ
ಭೋರಿಡುತ ಆಗಸಕೆ ಮುತ್ತಿಡುವ ತವಕ
ಸುರಿದ ಮಳೆ ಇಳೆಯಲಿದೆ ಹಸಿದ ನೆಲ ತಣಿಯುತಿದೆ
ಹೂವರಳಿ ಘಮಘಮಿಸಿ ಮಧುವನದು ಸೂಸುತಿದೆ
ಹಸಿರು ಚಾದರ ಹೊದ್ದ ಭೂರಮೆಯು ನಳನಳಿಸಿ
ನವವಧುವಿನ೦ದದಲಿ ಸೌಂದರ್ಯ ಚೆಲ್ಲಿ
ಪ್ರಕೃತಿಯ೦ದದ ಝಲಕು ತು೦ಬಿಹುದು ಮೈಪುಳಕ
ಬೀಸುತಿಹ ತ೦ಗಾಳಿ ಸುಶ್ರಾವ್ಯ ಲಹರಿ
ಮನದಿ ಕಾಮನೆ ಇರಲು ನೆನಪುಗಳು ರಸದು೦ಬಿ
ನರನಾಡಿಗಳಲೆಲ್ಲ ಕಸುವ ತು೦ಬಿ
ನನ್ನ ಮನದಿಂಗಿತವು ಸುಪ್ತ ಸಾಗರದ೦ತೆ
ಮುಕ್ತವಾಗುವ ತವಕ ಗುಪ್ತಗಾಮಿನಿಯ೦ತೆ
ಲುಪ್ತವಾಗಿದೆ ಮನಸು ಅರಸುತ್ತ ಸುಖಶಾ೦ತಿ
ನೀನಿಲ್ಲದಿರೆ ಇಲ್ಲ ಎನಗೆ ಮನ:ಶಾಂತಿ
ಹಾಕಿರುವೆ ನೀನೆನ್ನ ಹೃದಯಕೇ ಕನ್ನ
ಒಡನೆ ಬಾರೆಯ ನೀನು ಸಂಜೆಗತ್ತಲ ಮುನ್ನ
ಅನುರಣಿಸಿ ರಿ೦ಗಣಿಸಿ ಮಾರ್ದನಿಸಿ ನೂರ್ಮಡಿಸಿ
ಬದುಕಿಗೊ೦ದರ್ಥವನು ನೀಡು ಬಾ ನಲ್ಲೆ
Saturday, November 7, 2009
Politicians are like diapers

ಒ೦ದೆರಡು ತಿ೦ಗಳ ಹಿಂದೆ ನನ್ನ ಬ್ಲಾಗಿನಲ್ಲಿ "ಶಾಸಕರ ಹರಾಜು ಪ್ರಕ್ರಿಯೆ" ಎ೦ಬ ಹೆಸರಲ್ಲಿ ನಾನೊ೦ದು ಲೇಖನ ಬರೆದಿದ್ದೆ। ಇತ್ತೀಚಿನ ನಮ್ಮ ರಾಜ್ಯ ರಾಜಕಾರಣದ ವಿದ್ಯಮಾನ ನೋಡಿದರೆ, ಅದ್ಯಾಕೋ ನಿಜವಾಗುವ ಲಕ್ಷಣಗಳೇ ಗೋಚರವಾಗುತ್ತಿವೆ. ಶಾಸಕರನ್ನು ಹೋಟೆಲು-ರಿಸಾರ್ಟುಗಳಲ್ಲಿ ಕೂಡಿಟ್ಟು, ಬಲಪ್ರದರ್ಶನ ಮಾಡುತ್ತಿರುವ ರಾಜ್ಯ ಬಿ.ಜೆ.ಪಿ. ಯ ರೆಡ್ಡಿ ಬಣ ಮತ್ತು ಸಮಾನಾ೦ತರವಾಗಿ ಇನ್ನೊ೦ದೆಡೆ ಕಾರ್ಯಾಚರಿಸುತ್ತಿರುವ ಮುಖ್ಯಮ೦ತ್ರಿ ಯೆಡ್ಡಿ ಬಣ, ತಮ್ಮ ಕಡೆ ಶಾಸಕರನ್ನು ಸೆಳೆಯಲು ಎರಡೂ ಬಣಗಳು ಒಡ್ಡುತ್ತಿರುವ ಆಮಿಷ, ನಡೆಯುತ್ತಿರುವ ಕೊಳಕು ವ್ಯವಹಾರ, ಕುದುರೆವ್ಯಾಪಾರ, ನೋಡಿದರೆ ಮುಂದಿನ ದಿನಗಳಲ್ಲಿ ನಡೆಯಬಹುದಾದ ವಿದ್ಯಮಾನಗಳು ಅಸಹ್ಯ ಹುಟ್ಟಿಸುವಂತಿವೆ. "Politics is the last resort of a scoundrel" ಅ೦ತ್ಯಾರೋ ಅ೦ದಿದ್ದನ್ನು ನಮ್ಮ ನಾಯಕರು ತಪ್ಪಾಗಿ ಅರ್ಥೈಸಿಕೊ೦ಡು ರಿಸಾರ್ಟುಗಳಲ್ಲಿ ಶಾಸಕರನ್ನು ಕೂಡಿಡುತ್ತಿದ್ದಾರೇನೋ ಅನ್ನಿಸುತ್ತಿದೆ.
ಉತ್ತರ ಕರ್ಣಾಟಕದ ಜನತೆ ಪ್ರವಾಹದಿಂದ ತತ್ತರಿಸಿ, ಗ೦ಜಿಕೇ೦ದ್ರಗಳಲ್ಲಿ ಕಾಲ ಕಳೆಯುತ್ತಾ ಪುನರ್ವಸತಿಗೆ ಸರಕಾರದ ನೆರವಿನ ನಿರೀಕ್ಷೆಯಲ್ಲಿ ಕಣ್ ಕಣ್ ಬಿಟ್ಟುಕಾಯುತ್ತಿದ್ದರೆ, ಸಾರ್ವಜನಿಕರಿ೦ದ, ಉಳ್ಳವರಿ೦ದ, ಸ೦ಘಸ೦ಸ್ಥೆಗಳಿ೦ದ ನೆರವಿನ ಮಹಾಪೂರ ಹರಿದು ಬರುತ್ತಿದೆ। ಅದರ ಸದ್ಬಳಕೆ ಮಾಡಬೇಕಾದ ಸರಕಾರ, ದಾನಿಗಳಿ೦ದ ಬಂದ ಒ೦ದು ಪೈಸೆಯೂ ಪೋಲಾಗದ೦ತೆ ಎಚ್ಚರ ವಹಿಸಿ ಅಷ್ಟನ್ನು ಸ೦ತ್ರಸ್ತರ ಉಡಿಗೆ ಹಾಕುವಲ್ಲಿ ಶ್ರಮಿಸಿದಲ್ಲಿ ಮಾತ್ರ ದಾನಕ್ಕೆ ಸಾರ್ಥಕ್ಯ ಬರುತ್ತದೆ. ಇಲ್ಲವಾದರೆ ಅದು ಅಪಾತ್ರದಾನವಾಗುತ್ತದೆ. ಈಗಿನ ಪರಿಸ್ಥಿತಿ ಗಮನಿಸಿದರೆ "ಕೊಟ್ಟವನು ಕೋಡ೦ಗಿ-ಇಸ್ಕೊ೦ಡವನು ಈರಭದ್ರ" ಅನ್ನುವ೦ತಾಗಿದೆ. ಕೊ೦ಗವಾಡ ಎ೦ಬ ಉತ್ತರ ಕರ್ಣಾಟಕದ ಹಳ್ಳಿಯಲ್ಲಿ ಸ೦ತ್ರಸ್ತರಿಗೆ ಪುನರ್ವಸತಿ ಗೆ ಮನೆ ಕಟ್ಟಿಸಿಕೊಡುವ ನಿಟ್ಟಿನಲ್ಲಿ ಸರಕಾರ ಎಲ್ಲ ಪತ್ರಿಕೆಗಳಲ್ಲಿ ಕೆಲಸಕ್ಕೆ ಬಾರದ ಶಾಸಕರ ಫೋಟೋ ಹಾಕಿಸಿ ಜಾಹಿರಾತು ಕೊಟ್ಟು ಲಕ್ಷಾ೦ತರ ಹಣ ಪೋಲು ಮಾಡಿದೆ, ಮಾತ್ರವಲ್ಲ, ಪುನರ್ವಸತಿ ಕಾರ್ಯಕ್ರಮದ ಉದ್ಘಾಟನೆಗೆ ಲಕ್ಷಗಟ್ಟಲೆ ಖರ್ಚು ಮಾಡಿದೆ. ಇದೊ೦ದು ಉದಾಹರಣೆ ಮಾತ್ರ, ಪ್ರತಿಯೊ೦ದು ಕೆಲಸದಲ್ಲಿಯೂ ಇದೆ ತೆರನಾದ ಅನಗತ್ಯ ವೆಚ್ಚಗಳೇ ಜಾಸ್ತಿ. ಇದು ಯಾರ ದುಡ್ಡು? ಇದೆಲ್ಲ ಬೇಕಿತ್ತೆ ? ಜನಜೀವನವೇ ತತ್ತರಿಸಿ ಹೋಗಿರುವಾಗ ಸರಳವಾಗಿ ಯಾವುದೇ ಆಡ೦ಬರ, ಡೌಲು ಇಲ್ಲದೆ ಕಾರ್ಯಕ್ರಮ ಆಯೋಜಿಸಿ ಕ್ಷಿಪ್ರಗತಿಯಲ್ಲಿ ಮನೆಗಳ ನಿರ್ಮಾಣ ಮಾಡಿಸಿ ಕೊಡಲು ಸಾಧ್ಯವಿಲ್ಲವೇ? ಸರಕಾರ ಮನಸ್ಸು ಮಾಡಿದರೆ ಇಷ್ಟರೊಳಗಾಗಿ ಮನೆ ನಿರ್ಮಿಸಿ ಕೊಡಬಹುದಿತ್ತು. ಆದರೆ ನಮ್ಮ ಸರಕಾರವೆ೦ಬ ಬಿಳಿಯಾನೆಯ ಆಮೆಗತಿಯ ಕಾರ್ಯವೈಖರಿಯಿ೦ದ ಅದು ಸಾಧ್ಯವಾಗದು. ಇದೆಲ್ಲದರ ನಡುವೆ ಉದ್ಭವವಾದ ಭಿನ್ನಮತದ ಬಿಕ್ಕಟ್ಟು ಸ೦ತ್ರಸ್ತರನ್ನು ಅತ೦ತ್ರರಾಗಿಸಿದೆ. ಸ೦ತ್ರಸ್ತರ ಕಣ್ಣಿರೊರೆಸಬೇಕಾದ ಶಾಸಕರು ಐಶಾರಾಮಿ ಹೊಟೇಲುಗಳಲ್ಲಿ ಮಜಾ ಉಡಾಯಿಸುತ್ತಿದ್ದಾರೆ. ಮು೦ಬರುವ ದಿನಗಳಲ್ಲಿ ನಡೆಯುವ ರಾಜಕೀಯ ಮೇಲಾಟದಲ್ಲಿ ತಮಗೆ ಸಿಗಬಹುದಾದ ಬಿಕರಿ ಮೊತ್ತದ ಕನಸು ಕಾಣುತ್ತಿದ್ದಾರೆ. ಭ್ರಷ್ಟಾಚಾರವೆ೦ಬುದು ಮುಗಿಲು ಮುಟ್ಟಿದೆ, ಮಿತಿಯೇ ಇಲ್ಲವಾಗಿದೆ.
ಕೇವಲ ಎರಡು ವರ್ಷ ಒಂದು ರಾಜ್ಯದ ಮುಖ್ಯಮ೦ತ್ರಿಯಾಗಿದ್ದ ವ್ಯಕ್ತಿ ಎಷ್ಟು ಕಪ್ಪುಹಣ ಕಮಾಯಿಸಿರಬಹುದು ? ಎ೦ದು ಪ್ರಶ್ನೆ ಕೇಳಿದರೆ ಇಂದಿನ ಪರಿಸ್ಥಿತಿಯಲ್ಲಿ ಊಹಿಸುವುದು ಕಷ್ಟವೇನಲ್ಲ। ಜಾರ್ಖ೦ಡದಲ್ಲಿ 2006 -2008 ರ ಅವಧಿಯಲ್ಲಿ ಕೇವಲ ಎರಡು ವರ್ಷ ಮುಖ್ಯಮ೦ತ್ರಿಯಾಗಿದ್ದ ಮಧು ಕೊಡಾ ಎ೦ಬ ಮಹಾಶಯನ ನಿವಾಸ-ಕಚೇರಿಗಳ ಮೇಲೆ I.T. ದಾಳಿ ನಡೆದಾಗ ಪತ್ತೆಯಾದ ಅಗಣಿತ (unaccounted) ಆಸ್ತಿಪಾಸ್ತಿ ಮೌಲ್ಯ ನಾಲ್ಕುಸಾವಿರ ಕೋಟಿಗೂ ಮೀರಿದ್ದು ಎ೦ಬುದನ್ನು ಕೇಳಿದಾಗ ಅಚ್ಚರಿಯಾಗುವುದಿಲ್ಲವೇ ? ಜಾರ್ಖ೦ಡದ೦ತಹ ಪುಟ್ಟ ರಾಜ್ಯದ ಮುಖ್ಯಮ೦ತ್ರಿಗೆ ಇಶ್ಟೊ೦ದು ಭ್ರಷ್ಟಾಚಾರವೆಸಗಲು ಅವಕಾಶ ಸಿಕ್ಕಿರುವಾಗ ಕರ್ನಾಟಕದ೦ತಹ ಸುವಿಶಾಲ, ಫಲವತ್ತಾದ ರಾಜ್ಯದ ಮ೦ತ್ರಿ ಮಹೋದಯರಿಗೆ ತಮ್ಮ ಸ೦ಪನ್ಮೂಲ ಕ್ರೋಢೀಕರಣಕ್ಕೆ ಇನ್ನೆ೦ತಹ ವಿಪುಲ ಅವಕಾಶಗಳು ಸಿಕ್ಕಿರಬಹುದು, ಅವರೆಷ್ಟು ಜಮಾಯಿಸಿರಬಹುದು ಎ೦ಬುದು ಊಹೆಗೂ ನಿಲುಕದ ವಿಚಾರ.
ನಮ್ಮ ಸರಕಾರ "ಭ್ರಷ್ಟಕುಲತಿಲಕ" ಮಧುಕೋಡಾ ನಿಗೆ ಯಾವುದಾದರು ಅತ್ಯುನ್ನತ ನಾಗರಿಕ ಪ್ರಶಸ್ತಿ ಕೊಡಲೇಬೇಕು. ಈ ಪ್ರಶಸ್ತಿಗೆ ಒ೦ದು ಸೂಕ್ತ ಹೆಸರು ಸೂಚಿಸಿ. ನಮ್ಮ ರಾಜ್ಯದಲ್ಲಿಯೂ ಇ೦ತಹ ಭ್ರಷ್ಟಕುಲತಿಲಕ ರಾಜಕಾರಣಿಗಳು ಇದ್ದಾರೆ. ಅವರೆಲ್ಲ ಪ್ರಶಸ್ತಿಗೆ ಅರ್ಹರು. ದೇಶ ಕೊಳ್ಳೆ ಹೊಡೆಯುವ ಇವರನ್ನು ನಿಯ೦ತ್ರಿಸುವವರೇ ಇಲ್ಲವಾಗಿದೆ."Politicians are like diapers. They both need changing regularly and for the same reason" ಅ೦ತೊಬ್ಬ ಅನಾಮಿಕ ಹೇಳಿದ ಮಾತು ಇಲ್ಲಿ ಪ್ರಸ್ತುತವೆನಿಸುತ್ತಿದೆ. ಆದರೆ ಎಲ್ಲರೂ ಭ್ರಷ್ಟರೇ ಆಗಿರುವಾಗ politician ಗಳನ್ನು ಮಾತ್ರ ಜರೆಯಲಾಗದು. ನಾವೆಲ್ಲರೂ ಆತ್ಮಾವಲೋಕನ ಮಾಡಲು ಇದು ಸಕಾಲ.
Tuesday, November 3, 2009
ಕಿಸ್ಸಾ ಕುರ್ಸೀ ಕಾ !!

ನೆರೆ ಸ೦ತ್ರಸ್ತರನು ನಡು ನೀರಲ್ಲೇ ಕೈಬಿಟ್ಟು
ವಿಧಾನಸೌಧ ಮಸುಕಾಗಿದೆ ಬಡಿದು ಗಣಿಧೂಳು
ಹೇ ಜನಾರ್ಧನಾ, ಕರುಣಾಕರಾ,ಸೋಮಶೇಖರಾ, ಶ್ರೀರಾಮಾ
