Thursday, October 29, 2009

ಬಪ್ಪುದು ತಪ್ಪದು

ಬರಲಿದೆಯ೦ತೆ ಪ್ರಳಯ, ಜೀವಜಾಲ ಅಳಿವ ಸಮಯ
ಬೆ೦ಕಿಯ ಮಳೆಯೋ, ಜಲಸಮಾಧಿಯೋ, ಸುನಾಮಿಯೋ
ಅ೦ತ್ಯವೋ, ವಿನಾಶವೋ ವಿಕೃತಿಯೋ ಬಲ್ಲವರಿಲ್ಲ,
ದಿನಗಳೆಣಿಕೆಯಲ್ಲಿ ಬದುಕುವ೦ತಾಯ್ತಲ್ಲ ತ೦ದೇ

ಹಣಗಳಿಸಲು ಹೆಚ್ಚು ದಿನಗಳಿಲ್ಲೆ೦ದು ಬಗೆದ ನಮ್ಮ ಜಾಣ
ಜನನಾಯಕರು ಜಮಾಯಿಸುವಲ್ಲಿ ನಿರತರಾಗಿದ್ದರೆ
ವಿಪರೀತ ಸಾಲಸೋಲದಲ್ಲಿರುವ ಮಂದಿ ಬೇಗ ಮುಳುಗಡೆ
ಆಗಲಿ, ಸಾಲದೊ೦ದಿಗೆ ಬದುಕು ಸಮಾಪ್ತವಾಗಲೆ೦ದು ಕಾದಿದ್ದಾರೆ

ಮಾಯಾನಗರಿಯಲ್ಲಿ ಸೈಟುಕೊಳ್ಳಲು ಹವಣಿಸುತ್ತಿದ್ದ ಮಿತ್ರ
ಬದುಕುಳಿದರೆ 2013 ರಲ್ಲಿ ಕೊಳ್ಳೋಣ ಎ೦ದು ಹಾಯಾಗಿದ್ದಾನೆ
ಮಗನಿಗೆ ಲಕ್ಷ ಸುರಿದು ಮೆಡಿಕಲ್ ಸೀಟು ಕೊಡಿಸಬೇಕಾದ ತ೦ದೆ
ಹೊಸಮನೆ ಕಟ್ಟಬೇಕಾದ ಮಂದಿ ತೆಪ್ಪಗಾಗಿದ್ದಾರೆ

ನಾಳೆಯ ಆತ೦ಕವ ನೆನೆದು ಇ೦ದಿನ ಸುಖವ ಬಲಿಗೊಡುವುದೇಕೆ ?
ಕನ್ನಡಿಯೊಳಗಿನ ಗ೦ಟ ಕ೦ಡು ಸುಖಕೆ ಹಾತೊರೆವ೦ತೆ
ಬಪ್ಪುದು ತಪ್ಪದು, ನಾಳಿನ ಚಿ೦ತೆಗೆ ಇ೦ದೇ ಚಿತೆಯೇರುವುದೇತಕೆ ?
ಖೊಟ್ಟಿ ಜನರ ಮಾತ ಕೇಳಿ ಮರುಗುವುದನು ಬಿಡು ಮರುಳೇ

Thursday, October 8, 2009

ನೆನಪಿನ ಪುಟಗಳತ್ತ ಒ೦ದು ಹಿನ್ನೋಟ

ನನ್ನ ಬದುಕು ನನ್ನದು, ಅದು ನಿಮ್ಮ ಹಾಗಲ್ಲ, ಭಿನ್ನ,ಅ೦ತ ನಾನು ಹೇಳೋಲ್ಲ, ನೀವೂ ಇ೦ತಹದನ್ನು ಅನುಭವಿಸಿರುತ್ತೀರಿ, ಅ೦ತ ನಾನು ಬಲ್ಲೆ. ಎಲ್ಲರ ಜೀವನದಲ್ಲೂ ಒ೦ದಿಲ್ಲೊ೦ದು ವಿಧದ ತಮಾಷೆಯ, ವಿನೋದದ, ಸುಖದ ಉತ್ತುಂಗದ, ದುಃಖದ, ವಿಷಾದದ ಗಳಿಗೆ ಮಿಂಚಿನಂತೆ,ಕಾಮನಬಿಲ್ಲಿನ೦ತೆ ಹೀಗೆ ಬಂದು ಹಾಗೆ ಸರಿದು ಹೋಗಿರುತ್ತದೆ ಮತ್ತು ಸ್ಮೃತಿಪಟಲದಲ್ಲಿ,ನೆನಪಿನ ಜ್ನಾಪಕಚಿತ್ರಶಾಲೆಯಲ್ಲಿ ದಾಖಲಾಗಿ ಧೂಳು ಹಿಡಿದು ಮಸುಕಾಗಿರುತ್ತದೆ.ಕಳೆದು ಹೋದುದು ಅದು ಕಹಿಯೇ ಆಗಿದ್ದರೂ ರಸಗಳಿಗೆ, ಮುಂದೆ ಬರಲಿರುವುದು ಅದು ಸಿಹಿಯೆ೦ಬ ಭ್ರಮೆ ಇದ್ದರೂ ಅದು ಒಂದು ವಿಧದಲ್ಲಿ ಕಹಿಗುಳಿಗೆ ಅ೦ತ ನ೦ಬಿರುವವನು ನಾನು. ಹಾಗಿರುವುದರಿಂದ ಮುಂದಿನ ದಿನಗಳ ಕಹಿಗುಳಿಗೆ ಗಳನ್ನೂ ನೆನೆಯುತ್ತ, ಕಳೆದು ಹೋದ ದಿನಗಳ ರಸಗಳಿಗೆಗಳನ್ನು ಹಾಗೆ ಮೆಲುಕುಹಾಕುತ್ತಾ ನಿಮ್ಮೊಂದಿಗೆ ನನ್ನ ಶಾಲಾದಿನಗಳ ಘಟನಾವಳಿಗಳ ಗಂಟು ಬಿಚ್ಚುತ್ತೇನೆ.


ಅದು 1976 -77 ರ ದಿನಗಳು. ನಾನಾಗ ಹತ್ತನೇ ತರಗತಿಯಲ್ಲಿದ್ದೆ. ಸೋದರ ಮಾವನ ಮನೆಯಲ್ಲಿದ್ದೆ, ಅಲ್ಲಿಂದಲೇ ನಿತ್ಯ ಐದು ಕಿಮಿ ಕಾಲ್ನಡಿಗೆಯಲ್ಲಿ ನಡೆದು ಉಜಿರೆಯ ಎಸ್.ಡಿ.ಎ೦.ಹೈಸ್ಕೂಲಿಗೆ ಹೋಗಿ ಬರುತ್ತಿದ್ದೆ. ಕಾಲಿಗೆ ಚಪ್ಪಲಿ ಇದ್ದರೂ ಓಕೆ, ಇಲ್ಲದಿದ್ದರೂ ಓಕೆ, ಯಾವುದೇ ಹೆಚ್ಚುವರಿ ಸೌಲಭ್ಯಗಳಿಲ್ಲದ, ಅತೀ ಕಡಿಮೆ ಖರ್ಚಿನಲ್ಲಿ ಎಲ್ಲವೂ ನಡೆದುಹೋಗುತ್ತಿದ್ದ, ಚಿಮಣಿದೀಪದ ಅಡಿಯಲ್ಲಿ ಓದು-ಬರಹ ಸಾಗುತ್ತಿದ್ದ ದಿನಗಳವು.ಈಗಿನಂತೆ ಟಿವಿ ಮಾಧ್ಯಮಗಳ ಅಬ್ಬರವಿರಲಿಲ್ಲ,ಇದ್ದ ಒಂದೇ ಒಂದು ಮುರುಕಲು ಚಿತ್ರಮಂದಿರದಲ್ಲಿ ಬದಲಾದಾಗಲೆಲ್ಲಾ ಚಕ್ಕರ್ ಹೊಡೆದು ಸಿನಿಮಾ ನೋಡುವ ಕೆಟ್ಟ ಅಭ್ಯಾಸವೊಂದು ಬಿಟ್ಟರೆ ಮಿಕ್ಕಂತೆ ನಾನು ಸುಭಗ. ಆಗಿನ ದಿನಗಳಲ್ಲಿ ಸಿನಿಮಾ ನೋಡುವುದೆಂದರೆ ಅದರ ಸಂಭ್ರಮವೇ ಬೇರೆ. ಚಿತ್ರಮಂದಿರದ ಹೊರಗಡೆ ಚಿತ್ರದ ವಿವಿಧ ದೃಶ್ಯಾವಳಿಗಳ ಚಿತ್ರಗಳನ್ನು ತೂಗು ಹಾಕಿರುತ್ತದ್ದರು. ಮೊದಲ ದಿನ ಶಾಲೆ ಬಿಟ್ಟ ನ೦ತರ ಅದನ್ನು ನೋಡಿ ಬರುವುದು, ಆ ಚಿತ್ರಗಳನ್ನು ನೋಡಿಯೇ ಸಿನಿಮಾ ಚೆನ್ನಾಗಿದೆಯೇ ಇಲ್ಲವೇ ಎಂಬುದನ್ನು ಅ೦ದಾಜು ಮಾಡುವಷ್ಟು ವಿಮರ್ಶಾದೃಷ್ಟಿಕೋನ ಇತ್ತು. ಶಾಲೆಯ ಚಟುವಟಿಕೆಗಳ ಹೊರತಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಪ್ರೇಕ್ಷಕನೇ ಹೊರತು ಭಾಗಿಯಾಗಿದ್ದು ಅಪರೂಪವೆನಬೇಕು. ಹಳ್ಳಿಗಾಡಿನಿ೦ದ ಬ೦ದವನೆ೦ಬ ಕೀಳರಿಮೆಯೋ ಯಾಕೋ ಗೊತ್ತಿಲ್ಲ. ಸಹಪಾಠಿಗಳಿ೦ದ, ಅದರಲ್ಲೂ ಹೆಣ್ಮಕ್ಕಳಿ೦ದ "ಗಾ೦ಧಿ" ಎ೦ಬ ಉಪನಾಮವನ್ನು ಪಡಕೊ೦ಡಿದ್ದ, ಅಗತ್ಯಕ್ಕಿಂತ ಹೆಚ್ಚೆನಿಸುವಷ್ಟು ಸಭ್ಯನಾಗಿದ್ದ ಸಾಮಾನ್ಯ ಹುಡುಗ ನಾನು. ಉಳಿದ ಹುಡುಗರು ಕ್ಲಾಸಿಗೆ ಚಕ್ಕರ್ ಹೊಡೆದು ಮ್ಯಾಟಿನಿ ಷೋ ಗೆ ಹೋಗಬೇಕಾದರೆ ಕಿಟಿಕಿ ಹಾರಿ,ಮುಖ ಮುಚ್ಚಿಕೊಂಡು ಓಡಿ ಶಾಲೆಯಿಂದ ಹೊರ ಹೋಗುತ್ತಿದ್ದರೆ, ನಾನು ಶಿಕ್ಷಕರ ರೂಮಿನ ಮುಂದಿನ ಪ್ಯಾಸೇಜು ದಾಟಿ ಸಲೀಸಾಗಿ ಎಲ್ಲರೆದುರೇ ಶಾಲೆಯಿಂದ ಹೊರಹೋಗಿ ಸಭ್ಯವಾಗಿ ಚಕ್ಕರ್ ಹೊಡೆದು ಸಿನಿಮಾ ನೋಡುತ್ತಿದ್ದೆ. "ಇವನು ತು೦ಬಾ ಸಭ್ಯ, ಹಾಗೆಲ್ಲ ಮಾಡುವವನಲ್ಲ" ಎ೦ಬ ಶಿಕ್ಷಕ ವರ್ಗದ ಅತೀ ವಿಶ್ವಾಸದ ದುರ್ಬಳಕೆ ಯೆ೦ದು ನೀವ೦ದುಕೊ೦ಡರೆ ಅದಕ್ಕೆ ನಾನು ಹೊಣೆಯಲ್ಲ. ತುರ್ತುಪರಿಸ್ಥಿತಿಯ ಹಿಂಚುಮುಂಚಿನ ದಿನಗಳವು. ರಾಜಕೀಯದ ಕಾವು ಶಾಲೆಯ ಪರಿಸರದಲ್ಲೂ ಇತ್ತು.

ಈಗಿನಂತೆ ಮಕ್ಕಳಿಗೆ ಓದು, ಓದು ಅಂತ ತಲೆತಿನ್ನುವವರು ಆವಾಗ ಇರಲಿಲ್ಲ, ನಾವು ಆಡಿದ್ದೆ ಆಟ, ಓದಿದಷ್ಟೇ ಓದು, ಮನೆಯಲ್ಲಿ ಬಂದು ಶಾಲೆಯ ಚೀಲ ಬಿಚ್ಚುತ್ತಿದ್ದುದು ಅಪರೂಪ. ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆ ಇದ್ದರೂ ಅದಕ್ಕೆ ವಿಶೇಷ ತಯಾರಿಯೇನು ಇರಲಿಲ್ಲ.ಎಲ್ಲವೂ ಮಾಮೂಲು.ಶಾಲೆಯಲ್ಲಿ ನಾನು ಓದಿನಲ್ಲಿ ಕ್ಲಾಸಿಗೆ ಫಸ್ಟ್ ಬರುತ್ತಿದ್ದೆನಾದ್ದರಿಂದ ಶಿಕ್ಷಕರಿಗೂ ನಾನು ಅಚ್ಚುಮೆಚ್ಚು., ಅಲ್ಲದೆ ನನ್ನ ತಂದೆ ಕೂಡ ಕೆಲವರ್ಷಗಳ ಹಿಂದೆ ಅಲ್ಲಿ ಶಿಕ್ಷಕರಾಗಿದ್ದರಿಂದ ನಮ್ಮ ಮಾಸ್ತರರ ಮಗ ಎಂಬ ಪ್ರೀತಿಯೂ ಇತ್ತೆನ್ನಬಹುದು.

ಹತ್ತನೇ ತರಗತಿಯ ಪರೀಕ್ಷೆಗಳು ಆರ೦ಭವಾಗಿಯೇ ಬಿಟ್ಟವು. ಆದರೆ ಅದಕ್ಕೆ ತಯಾರಿ, ಓದಿನ ರಭಸ, ಒತ್ತಡ ಯಾವುದೂ ಇರಲಿಲ್ಲ. ಎಲ್ಲವೂ ಒತ್ತಡರಹಿತವಾಗಿ, ಸಹಜವಾಗಿ ಇರುತ್ತಿತ್ತು. ಪರೀಕ್ಷೆಯ ಸ೦ದರ್ಭದಲ್ಲಿಯೇ, ನಮ್ಮ ಸೋದರ ಮಾವನ ಆಡಳಿತದಲ್ಲಿದ್ದ ಸ್ಥಳೀಯ ದೇವಾಲಯದ ಸಹಾಯಾರ್ಥ ಉಜಿರೆಯ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಾಡಾಗಿತ್ತು. ನಮ್ಮದೇ ದೇವಸ್ಥಾನ ಅಂದ ಮೇಲೆ ನಾವೆಲ್ಲಾ ಅಲ್ಲಿರಲೆಬೇಕಲ್ಲ, ಪರೀಕ್ಷೆ ಇದೆಯಲ್ಲ, ನೀನು ಬರಬೇಡ ಅಂತ ಕೂಡ ಯಾರು ಹೇಳಿರಲಿಲ್ಲ. ಈಗಲಾದರೆ ನಾವು ಮಕ್ಕಳಿಗೆ ಬೈದು ಓದು ಅಂತ ರೂಮಿನಲ್ಲಿ ಕೂಡಿ ಹಾಕುತ್ತೇವಲ್ಲ, ಅಂತಹ ಯಾವ ಪ್ರಸಂಗವು ಆಗಿನ ನನ್ನ ಓದಿನ ದಿನಗಳಲ್ಲಿ ಇರಲೇ ಇಲ್ಲ, ಇದ್ದರೆ ನಾನು rank ಪಡೆದು ದೊಡ್ಡ ಹುದ್ದೆಗೆ ಹೋಗುತ್ತಿದ್ದೆನೋ, ಏನಾಗುತ್ತಿದ್ದೇನೋ ನನಗೆ ಗೊತ್ತಿಲ್ಲ.

ಗಣಿತದ ಪರೀಕ್ಷೆಯ ಹಿಂದಿನ ರಾತ್ರಿ ಉಜಿರೆಯ ಮೈದಾನದಲ್ಲಿ ರಾತ್ರಿಪೂರ್ತಿ ಯಕ್ಷಗಾನ. ನಾನು ಮತ್ತು ಸೋದರಮಾವನ ಮಗ ಯಕ್ಷಗಾನದ ಟೆ೦ಟಿನ ಗೇಟಿನಲ್ಲಿ ಕುಳಿತು ಟಿಕೇಟು ಪಡೆದು ಜನರನ್ನು ಒಳಬಿಡುವ ಕೆಲಸ ಮಾಡಿದೆವು. ರಾತ್ರಿ ಪೂರ್ತಿ ನಿದ್ದೆಗೆಟ್ಟು "ಬಪ್ಪನಾಡು ಕ್ಷೇತ್ರ ಮಹಾತ್ಮೆ" ನೋಡಿ ಮರುದಿನ ಗಣಿತದ ಪರೀಕ್ಷೆಗೆ ಅಲ್ಲಿಂದಲೇ ಹೋದೆ. ಮನೆಗೂ ಹೋದ ನೆನಪಿಲ್ಲ. ಪರೀಕ್ಷೆಯ ಹಾಲಲ್ಲಿ ಒ೦ದೆಡೆ ನಿದ್ದೆಯ ಮ೦ಪರು ಕಣ್ಣಿನಲ್ಲಿ ಸುರಿಯುತ್ತಿದ್ದರೆ, ಇನ್ನೊಂದೆಡೆ ಗಣಿತದ ಪ್ರಶ್ನೆಗಳನ್ನು ಬಿಡಿಸುವ ವೇಳೆ ಹಿಂದಿನ ರಾತ್ರಿ ನೋಡಿದ ಯಕ್ಷಗಾನದ ಕಿವಿಗಡಚಿಕ್ಕುವ ಚ೦ಡೆಯ ಸದ್ದು ಕೇಳುತ್ತಿತ್ತು, ಮತ್ತು ಸುಪ್ರಸಿದ್ಧ ಅರ್ಥಧಾರಿಗಳಾದ ಶೇಣಿ ಗೋಪಾಲಕೃಷ್ಣ ಭಟ್ಟರ "ಬಪ್ಪಬ್ಯಾರಿ" ಯ ಪಾತ್ರ ಕಣ್ಣ ಮುಂದೆ ಹಾದು ಹೋಗುತ್ತಿತ್ತು. ಅಂತೂ ಇಂತೂ ಬರೆದಾಯಿತು, ನನ್ನ ಹಿಂದೆ ಮುಂದೆ ಕುಳಿತಿದ್ದ ಸಹಪಾಠಿ ಮಿತ್ರರಾದ, ನಾರಾಯಣ ಗೌಡ, ನವೀನ, ರಮಾನಂದ, ಫ್ರಾನ್ಸಿಸ್ ಪಿ೦ಟೋ ಹೀಗೆ ಎಲ್ಲರ ಬಳಿಗೂ ನನ್ನ ಉತ್ತರ ಪತ್ರಿಕೆ invigilator ಕಣ್ಣು ತಪ್ಪಿಸಿ ಪ್ರವಾಸ ಮುಗಿಸಿ ಬಂತು. ಪರೀಕ್ಷೆಯಲ್ಲಿ ನನಗೆ 80 + ಅ೦ಕವೂ ಬಂದಿತ್ತು.

ಯಾಕೋ ಗೊತ್ತಿಲ್ಲ, ಬಾಲ್ಯದ ದಿನಗಳನ್ನು ಉಡಾಫೆಯಿಂದ, ನಿರ್ಲಕ್ಷದಿಂದ, ಗೊತ್ತುಗುರಿಯಿಲ್ಲದ, ದೂರದರ್ಶಿತ್ವ ವಿಲ್ಲದ ರೀತಿ ಕಳೆದು ತಪ್ಪು ಮಾಡಿದೆನೇ? ಅಥವಾ ಅದುವೇ ಸರಿಯೇ ಎನ್ನುವ ಜಿಜ್ಞಾಸೆ ನನ್ನಲ್ಲಿ ಆಗಾಗ ಕಾಡುತ್ತಿರುತ್ತದೆ. ನಮ್ಮ ಮಕ್ಕಳಿಗೀಗ ವಿಪರೀತ ಒತ್ತಡ ಹಾಕಿ ಓದು ಅಂತ ಸತಾಯಿಸುವುದು, ನಾವು ನಮ್ಮ ಶಾಲಾದಿನಗಳಲ್ಲಿ ಕಳೆದ ಗೊತ್ತುಗುರಿಯಿಲ್ಲದ, ನಿರ್ದಿಷ್ಟ ಕ್ರಮವಿಲ್ಲದ ಉಡಾಫೆ ದಿನಗಳ ಪಾಪ ಪ್ರಜ್ಞೆಯ ಕಾರಣದಿಂದಲೋ ಏನೋ ಅಂತ ಅನ್ನಿಸುತ್ತದೆ. The past cannot be changed. The future is yet in our power. ಯಾಕೋ ಇದನ್ನೆಲ್ಲಾ ನಿಮ್ಮಲ್ಲಿ ಹೇಳಬೇಕೆನಿಸಿತು, ಅದಕ್ಕಾಗಿ ಹೇಳಿದೆ.

Monday, October 5, 2009

ಚಿತ್ತ ಕಲಕಿದ ಹೂವೆ !!


ಚಿತ್ತ ಕಲಕಿದ ಹೂವೆ ನೀನೇಕೆ ನಲುಗಿರುವೆ
ಏಕೆ ಹೂಡಿಹೆ ನೀನು ಮೌನ ಸಮರ
ಭರದಿ ದಾ೦ಗುಡಿಯಿಡುತ ಓಡೋಡಿ ನಾ ಬ೦ದೆ
ನಿನ್ನ ಸಾ೦ಗತ್ಯವನು ಬಯಸಿ ಬಿಡದೇ
- - -
ನಿನಗೇಕೆ ಅರಿವಿಲ್ಲ ನನ್ನ ಮನದಿ೦ಗಿತವು
ನೀನಲ್ಲವೆ ನನ್ನ ಭವದ ಭಾಗ್ಯ
ಪ್ರತಿ ಹೆಜ್ಜೆಯಲು ನಿನ್ನ ನೂಪುರದ ಅನುರಣನ
ನೋವ ಜೊತೆ ನಲಿವಿನದು ಸಮರಸದ ಭಾವ
- - -
ಕುಸುಮಿಸುತ ಘಮಘಮಿಸಿ ಮನಕೆ ಮುದವನು ಇತ್ತು
ವಿರಮಿಸಿದೆ ಮಿರಮಿರನೆ ಮಿನುಗನಿತ್ತು
ನಿನ್ನ ನೋಟದ ಮಿನುಗ ಗುನುಗುತ್ತ ನಾ ಮರೆತೆ
ನನ್ನೆಲ್ಲ ಕಷ್ಟಗಳ ಬತ್ತದೊರತೆ
- - -
ಹುಣ್ಣಿಮೆಯ ಚ೦ದಿರನ ಮೊಗವು ತುಸು ಬಾಡಿರಲು
ಕಾರಣವೂ ಏನೆ೦ದು ತಿಳಿಯದಾಗಿಹೆ ನಾನು
ಲಗುಬಗೆಯ ಮಾತಿನಲಿ ನಗೆಯ ಹೊನಲನು ಹರಿಸಿ
ನನ್ನೆಲ್ಲ ದುಗುಡಗಳ ಸರಿಸು ದೂರ
- - -
ಕಾದಿರುವೆ ನಿನಗಾಗಿ ಎಲ್ಲ ಹ೦ಗನು ತೊರೆದು
ಲುಪ್ತವಾಗಿಹ ಮನವ ಸುಪ್ತಗೊಳಿಸಿ
ತೆರೆದಿಹುದು ನೋಡಲ್ಲಿ ಭವ್ಯ ಭವಿತವ್ಯ
ತೊರೆದು ಬಾ ನಿನ್ನೆಲ್ಲ ಚಿತ್ತ ಚಾ೦ಚಲ್ಯ

ಚಿತ್ರಕೃಪೆ :www।flickr.com