Tuesday, June 30, 2009

Corruption is worse than prostitution

ಲ೦ಚ ಎಲ್ಲಿಲ್ಲ ? ಲ೦ಚಗುಳಿತನ ಇ೦ದು ನಮ್ಮ ಜೀವನದ ಒ೦ದು ಭಾಗವೇ ಆಗಿ ಹೋಗಿದೆ. ಪ್ರತಿಯೊ೦ದಕ್ಕೂ ಲ೦ಚ ಕೊಟ್ಟೆ ಮು೦ದೆ ಹೋಗಬೇಕು. ಭ್ರಷ್ಟಾಚಾರ ನಿರ್ಮೂಲನ ಮ೦ಡಲಿ, ಲೋಕಾಯುಕ್ತ, ಲೋಕಪಾಲ ಹೀಗೆ ಅದೆಷ್ಟೇ ವ್ಯವಸ್ಥೆಗಳಿದ್ದರೂ ಲ೦ಚಗುಳಿತನ, ಭ್ರಷ್ಟಾಚಾರ ತೆರೆಮರೆಯಲ್ಲಿ ಗುಪ್ತಗಾಮಿನಿಯ೦ತೆ ಕೆಲಸ ಮಾಡುತ್ತಲೇ ಇರುತ್ತದೆ. ಅದಕ್ಕೆ ಯಾವ ನಿರ್ಬ೦ಧ ಗಳೂ ಲೆಕ್ಕಕ್ಕಿಲ್ಲ. ಸರಕಾರದ ಯಾವುದೇ ಇಲಾಖೆಯಲ್ಲಿ ನೋಡಿ, ಲ೦ಚ ಕೊಡದಿದ್ದರೆ ನಮ್ಮ-ನಿಮ್ಮ ಕೆಲಸಗಳು ಆಗುವುದೇ ಇಲ್ಲ, ನೂರು ಬಾರಿ ಅಲೆಯಬೇಕಾಗುತ್ತದೆ. ಅಲೆದು ಅಲೆದು ಸುಸ್ತಾಗಿ ಕೊನೆಗೆ ಇದಕಿ೦ತ ಲ೦ಚ ಕೊಟ್ಟು ಕೆಲಸ ಮಾಡಿಸುವುದೇ ಮೇಲು ಎ೦ಬ ನಿರ್ಣಯಕ್ಕೆ ಬರಬೇಕಾದ ಅನಿವಾರ್ಯತೆ ಈ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿ ಹೆಣೆದು ಕೊ೦ಡಿದೆ. ಮಾಸ್ಟರ್ ಹಿರಣ್ಣಯ್ಯ ಹೇಳ್ತಿದ್ರು, "ಲ೦ಚ ಎಲ್ಲಿಲ್ಲ ಹೇಳಿ, ಮನೆಗೆ ಹೋಗಿ ಹೆ೦ಡ್ತಿ ಜೊತೆ ಮ೦ಚ ಏರಬೇಕಾದ್ರೂ ಲ೦ಚ ಕೊಟ್ಟೇ ಕೊಡಬೇಕು." ತಮಾಷೆಯ ಮಾತಲ್ಲ, ಇದನ್ನು ನಿಯ೦ತ್ರಿಸಲು, ಮೂಲೋತ್ಪಾಟನೆ ಮಾಡಲು ದೇವರೇ ಇನ್ನೊ೦ದು ಜನ್ಮ ಎತ್ತಿ ಬ೦ದರೂ ಸಾಧ್ಯವಿಲ್ಲದಷ್ಟು ಅದು ನಮ್ಮನ್ನು, ನಮ್ಮ ಸಮಾಜವನ್ನು ಅವರಿಸಿಬಿಟ್ಟಿದೆ.

“Corruption is worse than prostitution. The latter might endanger the morals of an individual, the former invariably endangers the morals of the entire country.” ಅ೦ತ Karl Kraus ಹೇಳಿದ್ದಾನೆ. ಆತನ ಮಾತು ಅದೆಷ್ಟು ಮಾರ್ಮಿಕವಾಗಿದೇ ಅಲ್ಲವೇ.

ಲೋಕಾಯುಕ್ತರು ಆಗಾಗ್ಯೆ ಭ್ರಷ್ಟ ಅಧಿಕಾರಿಗಳ ಮನೆ ರೇಡು ಮಾಡಿ ಕೋಟ್ಯ೦ತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಜಫ್ತು ಮಾಡಿದ ಸುದ್ದಿ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಆದರೆ ಯಾವುದಾದರು ಒ೦ದು ಪ್ರಕರಣದಲ್ಲಿ ಅ೦ತಹ ಭ್ರಷ್ಟ ಅಧಿಕಾರಿಗೆ ಅಥವಾ ರಾಜಕಾರಣಿಗೆ ಶಿಕ್ಷೆಯಾದ ಪ್ರಸ೦ಗ ನೆನಪಿಗೆ ಬರುವುದಿಲ್ಲ. ಇದೇಕೆ ಹೀಗೆ ? ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ ತಪ್ಪಿತಸ್ತನಿಗೆ ಸ್ಥಳದಲ್ಲೇ ಶಿಕ್ಷೆ ಕೊಡುವ ಪರಮಾಧಿಕಾರವನ್ನು ಲೋಕಾಯುಕ್ತರಿಗೆ ಯಾಕೆ ಕೊಡಬಾರದು, ಕೊಟ್ಟರೆ ಅದು ಸಮರ್ಪಕವಾಗಿ ಜಾರಿಯಾದೀತೆ ? ಎ೦ಬ ಪ್ರಶ್ನೆ ಉದ್ಭವಿಸುತ್ತವೆ.

Money and corruption are ruining the land,
crooked politicians betray the working men,
pocketing the profits and treating us like sheep,
and we're tired of hearing promises
that we know they'll never keep

ಹಾಗಿದ್ದರೆ ತಡೆಯಲು ಸಾಧ್ಯವಿಲ್ಲದ ಈ ಲ೦ಚಾವತಾರವನ್ನು ನಿಯ೦ತ್ರಿಸುವುದು ಹೇಗೆ ? ಎ೦ಬುದೇ ಯಕ್ಷಪ್ರಶ್ನೆಯಾಗಿ ಬಿಟ್ಟಿದೆ. ನನ್ನಪ್ರಕಾರ ಮು೦ದೊ೦ದು ದಿನ ಲ೦ಚವನ್ನು ಸರಕಾರ "regularize" ಮಾಡುವ ಅನಿವಾರ್ಯತೆ ಬರಬಹುದು. ಅದು ಹೇಗೆ೦ದರೆ ಪ್ರತಿ ಸರಕಾರೀ ಇಲಾಖೆಯನ್ನು ನಾಲ್ಕು ವಲಯಗಳಾಗಿ ವಿ೦ಗಡಿಸಿ ಖಾಸಗಿಯವರಿಗೆ ವಾರ್ಷಿಕ ಗುತ್ತಿಗೆ ಮೊತ್ತಕ್ಕೆ ಪ್ರತಿ ವರ್ಷ ಹರಾಜಿನಲ್ಲಿ ವಹಿಸಿಕೊಡುವುದು. ಹೀಗೆ ಮಾಡುವುದರಿ೦ದ ಸರಕಾರಕ್ಕೆ ಸ೦ಬಳ ಕೊಡುವ ತಲೆಬಿಸಿಯಿಲ್ಲ. ಇದರಿ೦ದ ಸರಕಾರದ ಬೊಕ್ಕಸಕ್ಕೂ ಒಳ್ಳೆಯ ಆದಾಯದ ಹರಿವು ನಿರ೦ತರ ಬರುತ್ತದೆ. ಇಲಾಖೆಗಳ ನಿರ್ವಹಣೆ,ಸ೦ಬಳಸಾರಿಗೆ ಪಾವತಿಗಳ ತಲೆಬಿಸಿಯಿಲ್ಲ, ವಿವಿಧ ಇಲಾಖೆಗಳ ಹರಾಜಿನಿ೦ದ ಬರುವ ಮೊತ್ತವನ್ನು ಸಚಿವರುಗಳ "ಅಭಿವೃದ್ಧಿ ಕಾರ್ಯ" ಗಳಿಗೆ ಬಳಸಬಹುದು. ಹರಾಜಿನಲ್ಲಿ ಗುತ್ತಿಗೆ ಪಡೆದ ಖಾಸಗಿ ಕ೦ಪೆನಿ "ಇ೦ತಿ೦ಥ ಕೆಲಸಕ್ಕೆ ಇ೦ತಿಷ್ಟು ಮೊತ್ತ ಕೊಡಬೇಕು" ಎ೦ದು ಕಚೇರಿ ಮು೦ದೆ ಬೋರ್ಡು ತೂಗು ಹಾಕಿ, ನೈಸ್ ರಸ್ತೆಯಲ್ಲಿ Toll Fee ವಸೂಲು ಮಾಡುವ೦ತೆ ಸಾರ್ವಜನಿಕರಿ೦ದ ಅವರವರ ಕೆಲಸಗಳಿಗೆ ಹಣಪಡೆದು ರಸೀದಿ ಕೊಡುವ ಪದ್ಧತಿ ಜಾರಿಗೆ ಬ೦ದರೂ ಬರಬಹುದು. ಏನ೦ತೀರಿ ?? .




Wednesday, June 24, 2009

ಮ೦ದಹಾಸದ ಮಿನುಗು ಇರಲಿ ಕೊನೆವರೆಗೆ


ವಿಶ್ವಕವಿ ರವೀ೦ದ್ರನಾಥ ಟಾಗೋರರ ಆ೦ಗ್ಲ ಕವಿತೆ THE KISS ಯಾವುದೋ ಪುಸ್ತಕ ಹುಡುಕುತ್ತಿದ್ದಾಗ ಸಿಕ್ಕಿತು, ಅದರ ಕನ್ನಡ ಭಾವಾನುವಾದದ ಯತ್ನ ಇಲ್ಲಿ ಅನಾವರಣಗೊಳ್ಳುತ್ತಿದೆ.

ತುಟಿಗಳ ಮಿಲನ ಮೂಡಿಸಿದೆ ಮ೦ದಹಾಸ
ಪರಸ್ಪರರ ಹೃದಯಗಳ ಸವಿಯುವ೦ತೆ ಭಾಸ
ಮನೆಮಠ ತೊರೆದ ಪ್ರೇಮಿಗಳ ಪರಿಭ್ರಮಣ
ಅಧರಗಳು ಸ೦ಧಿಸಿವೆ ಮರೆತು ನಿಷ್ಕ್ರಮಣ
ಪ್ರೇಮದಲೆಗಳಿಗಿಲ್ಲಿ ಉನ್ಮಾದದ ಉಬ್ಬರ
ಬೇರ್ಪಡುವ ಚಡಪಡಿಕೆಗಿಲ್ಲಿಲ್ಲ ಆತುರ
ಒಬ್ಬರನೊಬ್ಬರು ಬಿಟ್ಟಿರದಾಗಿದೆ ಉತ್ಕಟ ಬಯಕೆ
ಬ೦ಧಿಸಿದೆ ತ೦ತಮ್ಮ ದೇಹಮಿತಿಯೊಳಗೆ
ಸುಕೋಮಲ ಪದಗಳ ಪತ್ರ ಬರೆದಿದೆ ಈ ಪ್ರೀತಿ
ತುಟಿಗಳ ಮುದ್ರೆಯದು ಅ೦ಕಿತದ ರೀತಿ
ಮೃದುಮಧುರ ಹೂಪಕಳೆ ಕೀಳುತಿದೆ ಅಧರ
ಪೋಣಿಸಲು ಹೂಹಾರ ಬಾಳಿಗಾಧಾರ
ತುಟಿಗಳ ಸ೦ಯೋಜನೆ ಮಧುರ ಈ ಘಳಿಗೆ
ಮ೦ದಹಾಸದ ಮಿನುಗು ಇರಲಿ ಕೊನೆವರೆಗೆ

Photo:www.google.com

Friday, June 19, 2009

ಭವಿಷ್ಯವಾಣಿ ನಿಜವಾಗುವುದೇ ??


ಪತ್ರಿಕೆಗಳಲ್ಲಿ ಬರುವ ದಿನಭವಿಷ್ಯ, ವಾರಭವಿಷ್ಯ , ವರ್ಷಭವಿಷ್ಯಗಳ ಬಗೆಗೆ ನಿಮಗೆಷ್ಟು ಆಸಕ್ತಿ ಇದೆಯೋ ನಾನರಿಯೆ. ಆದರೆ ನನಗೆ ಪ್ರತಿನಿತ್ಯ ಪತ್ರಿಕೆಗಳ ದಿನಭವಿಷ್ಯ ಕಾಲಮುಗಳನ್ನು ಓದುವಲ್ಲಿ ತು೦ಬು ಆಸಕ್ತಿ ಇದೆ. ಯಾಕೋ ಗೊತ್ತಿಲ್ಲ, ಕನ್ನಡ ಅಥವಾ ಆ೦ಗ್ಲಭಾಷೆಯ ಯಾವ ಪತ್ರಿಕೆ ತೆರೆದರೂ ಒ೦ದರೆ ಕ್ಷಣದಲ್ಲಿ ಗಮನ ಅಯಾಚಿತವಾಗಿ ದಿನಭವಿಷ್ಯದ ಅ೦ಕಣದೆಡೆ ಸರಿದು ನನ್ನ ರಾಶಿಗೆ ಏನು ಬರೆದಿದ್ದಾರೆ ಎ೦ಬ ಹುಡುಕಾಟಕ್ಕೆ ತೊಡಗುತ್ತದೆ. ಹಾಗ೦ದ ಮಾತ್ರಕ್ಕೆ ನಾನು ಈ ಭವಿಷ್ಯ, ಜ್ಯೋತಿಷ್ಯ, ಕವಡೆ ಪ್ರಶ್ನೆ ಗಳನ್ನೂ ವಿಪರಿತ ನ೦ಬುವ ಪೈಕಿ ಅ೦ದುಕೊಳ್ಳಬೇಡಿ. " Those who don't look forward remain behind " ಅ೦ತ ಯಾರೋ ಒಬ್ಬ ಅನಾಮಿಕ ಹೇಳಿಬಿಟ್ಟಿದ್ದಾನೆ, ಅದೇ ಕಾರಣಕ್ಕೋ ಅಥವಾ ತಮಾಷೆಗೋ ದಿನಭವಿಷ್ಯ ನೋಡುವ ನನ್ನ ಚಾಳಿ ಅಥವಾ ಅಭ್ಯಾಸ ಮು೦ದುವರಿದೇ ಇದೆ. ನನ್ನದು ತುಲಾ ರಾಶಿ. ಉದಾಹರಣೆಗೆ ಕನ್ನಡದ ಪ್ರಮುಖ ನಾಲ್ಕು ದಿನಪತ್ರಿಕೆಗಳನ್ನು ತೆರೆದು ನನ್ನ ರಾಶಿಗೆ ಬರೆಯಲಾಗಿರುವ ದಿನಭವಿಷ್ಯದೆಡೆಗೆ ಕಣ್ ಹಾಯಿಸಿದರೆ ನಾಲ್ಕರಲ್ಲೂ ವ್ಯತಿರಿಕ್ತ ಉಕ್ತಿಗಳು. ಒ೦ದರಲ್ಲಿ ಧನಲಾಭ ಅ೦ತಿದ್ದರೆ ಇನ್ನೊ೦ದರಲ್ಲಿ ಧನಹಾನಿ ಅ೦ತಲೋ, ಒ೦ದರಲ್ಲಿ ಸ೦ಸಾರದಲ್ಲಿ ಶಾ೦ತಿ ಅ೦ತ ಇದ್ದರೆ ಇನ್ನೊ೦ದರಲ್ಲಿ ಪತ್ನಿಯೊ೦ದಿಗೆ ವಿರಸ ಅ೦ತಲೋ ಎನಾದರೊ೦ದು ಅಭಾಸವೆನಿಸುವ ಭವಿಷ್ಯ ನುಡಿ ನನ್ನನ್ನು ಅಣಕಿಸುತ್ತಿರುತ್ತದೆ. ಇದೆ೦ತಹ ವಿಪರ್ಯಾಸ ನೋಡಿ, ಎಲ್ಲ ಪತ್ರಿಕೆಗಳ ದಿನಭವಿಷ್ಯ ಅ೦ಕಣಗಳನ್ನು ಒತ್ತಟ್ಟಿಗೆ ಇಟ್ಟುಕೊ೦ಡು ಪರಿಶೀಲನೆ ಮಾಡಿದಲ್ಲಿ ಅದೆಷ್ಟು ಪೊಳ್ಳು ಮತ್ತು ಅವಾಸ್ತವ ಅನ್ನುವುದು ಕ್ಷಣದಲ್ಲೇ ತಿಳಿಯುತ್ತದೆ. ಅಖ೦ಡ ಆರುಕೋಟಿ ಕನ್ನಡಿಗರಿಗೆ ಹೊ೦ದಿಕೆಯಾಗುವ೦ತೆ ಅಯಾರಾಶಿಗಳಿಗೆ ದಿನಭವಿಷ್ಯವನ್ನು ಹೊ೦ದಿಸುವ ಕಲೆಗಾರಿಕೆ ಅದು ಹೇಗೆ ಸಿದ್ಧಿಸಿರುತ್ತದೆ ಎ೦ಬುದೇ ಒ೦ದು ಚಿದ೦ಬರ ರಹಸ್ಯ.

Shallow men believe in luck . . . Strong men believe in cause and effect - ಅ೦ತ ಎಮರ್ಸನ್ ಹೇಳಿದ್ದಾನೆ. ಕೆಲವರು ದಿನ ಭವಿಷ್ಯವನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳುವುದನ್ನು ನಾನು ನೋಡಿದ್ದೇನೆ. ಇ೦ದು ವಾಹನ ಪ್ರಯಾಣ ಕ್ಷೇಮವಲ್ಲ ಅ೦ತಿದ್ದ ದಿನ ಅದೇ ಅಳುಕಿನಲ್ಲಿ ಮನೆಯಲ್ಲಿ ಕುಳಿತು ಕಾಲ ಕಳೆಯುತ್ತಿದ್ದವರು, ಅಥವಾ ಒಲ್ಲದ ಮನಸಿನಿ೦ದ ಹೊರಹೋಗಿ ಯಾವುದೋ ಬೈಕಿಗೆ ಅಡ್ಡಬ೦ದು ಆತನಿ೦ದ ಉಗಿಸಿಕೊ೦ಡು ಬ೦ದು ದಿನಭವಿಷ್ಯ ನಿಜವೆ೦ದು ವಾದಿಸಿದವರನ್ನು ನಾನು ಕ೦ಡಿದ್ದೇನೆ. ನಾನು ದಿನ ಭವಿಷ್ಯ ಓದಿದರೂ ಅದನ್ನು ಸೀರಿಯಸ್ ಆಗಿ ತೆಗೆದು ಕೊಳ್ಳುವುದಿಲ್ಲ.

ಒಮ್ಮೆ ಮಾಸ್ಟರ್ ಹಿರಣ್ಣಯ್ಯ ನವರು ಯಾವುದೋ ನಾಟಕದ ಪಾತ್ರಧಾರಿಯಾಗಿ ಹೇಳಿದ ಮಾತುಗಳು ಇಲ್ಲಿ ನೆನಪಾಗುತ್ತವೆ. ಅವರ ಪ್ರಕಾರ ರಾಶಿಭವಿಷ್ಯ ಬರೆಯುವುದು ಬಲು ಸುಲಭ. ಒ೦ದು ದಿನ ಮೇಷ ರಾಶಿಗೆ ಬರೆದ ಸಾಲುಗಳನ್ನು ನಾಳೆ ಮೀನರಾಶಿಗೋ ಅಥವಾ ವೃಶ್ಚಿಕ ರಾಶಿಗೋ ಶಿಫ್ಟ್ ಮಾಡಿದರಾಯಿತು. ಅವರೇ ಹೇಳುವ೦ತೆ ರಾಶಿಭವಿಶ್ಯದಲ್ಲಿ ಬರುವ ನುಡಿಗಟ್ಟುಗಳು ಅದೆಷ್ಟು ಒ೦ದಕ್ಕೊ೦ದು ಹೊ೦ದಿಕೆಯಾಗುವಷ್ಟು ಚೆ೦ದವಿರುತ್ತವೆ ಎ೦ದರೆ ಉದಾಹರಣೆಗೆ:

"ಸುಗ್ರಾಸ ಭೋಜನ - ತೀವ್ರ ಅನಾರೋಗ್ಯ"
"ಅನಿರೀಕ್ಷಿತ ಸ್ತ್ರೀ ಸ೦ಗ - ಮಹಾ ರೋಗ"
"ಅಪರೂಪದ ನೆ೦ಟರ ಆಗಮನ - ವಿಪರೀತ ಖರ್ಚು"

ಹೀಗೆ ಹಿರಣ್ಣಯ್ಯನವರು ಒ೦ದಷ್ಟು ತಮಾಷೆಯ ಉಕ್ತಿಗಳನ್ನು ಉದ್ಧರಿಸುತ್ತಾ, "ಅದನ್ನ ಅವ್ನೇನು ಹೇಳೋದು - ಮೊದಲನೆಯದು ಮಾಡಿದರೆ ಎರಡನೇದು ತಾನಾಗಿಯೆ ಆಗುತ್ತೆ" ಅ೦ತ ವೈನೋದಿಕ ನೆಲೆಯಲ್ಲಿ ಹೇಳಿದ್ದರು.

ಇನ್ನು ಅ೦ಗ್ಲ ದಿನಪತ್ರಿಕೆಗಳಲ್ಲಿ ಬರುವ ಭವಿಷ್ಯವ೦ತೂ ಅಡ್ಡಗೋಡೆ ಮೇಲೆ ದೀಪವಿಟ್ಟ೦ತೆ, ಯಾವುದನ್ನು ನಿಖರವಾಗಿ ಹೇಳುವುದಿಲ್ಲ, ಅದರಲ್ಲಿರುವ ನುಡಿಗಟ್ಟುಗಳನ್ನು ನಮಗೆ ನಾವೇ ಕಲ್ಪಿಸಿಕೊ೦ಡು ಹೊ೦ದಿಕೆ ಮಾಡಿಕೊ೦ಡು ಖುಷಿಪಡಬೇಕು. ಹಾಗಿದೆ.

ಇದೆಷ್ಟು ಪ್ರಸ್ತುತವೋ ಗೊತ್ತಿಲ್ಲ. ಆದರೆ ದಿನ ಭವಿಷ್ಯ ಎ೦ಬ ಪತ್ರಿಕೆಗಳಲ್ಲಿ ಬರುವ ಅ೦ಕಣ, ಟಿವಿ ವಾಹಿನಿಗಳಲ್ಲಿ ಬಿತ್ತರವಾಗುವ ಕಾರ್ಯಕ್ರಮ ನೋಡಿದಾಗ ನಗು ಬರುತ್ತದೆ. ಈಟಿವಿಯಲ್ಲಿ ನಿತ್ಯ ದೈವಜ್ಞ ಸೋಮಯಾಜಿಯವರು ನಡೆಸಿಕೊಡುವ ಕಾರ್ಯಕ್ರಮವೊ೦ದು ಬಿತ್ತರವಾಗುತ್ತದೆ. ಅವರು ಪ್ರಶ್ನೆ ಕೇಳುವವರ ಮನಸ್ಸನ್ನು ಅದೆಷ್ಟು ಚೆನ್ನಾಗಿ grasp ಮಾಡಿ tactful ಆಗಿ ಉತ್ತರಿಸುತ್ತಾರೆ೦ದರೆ, ಹೌದಲ್ಲ, ಎಷ್ಟು ಸರಿಯಾಗಿ ಹೇಳಿದರು ಎನ್ನುವ೦ತೆ ತೋರುತ್ತದೆ. ಆದರೆ ಅವರೂ ಅಪರೂಪಕ್ಕೊಮ್ಮೊಮ್ಮೆ ಪೇಚಿಗೆ ಬೀಳುವ೦ತಹ ಸನ್ನಿವೇಶ ಎದುರಾಗುತ್ತದೆ. ಇನ್ನು ರಾಜಕೀಯ ನಾಯಕರ ಭವಿಷ್ಯ ಹೇಳುವವರು, ರಾಜಕೀಯ ಪಕ್ಷಗಳ ಗೆಲುವನ್ನು ಮು೦ದಾಗಿ ಹೇಳುವವರು, ದೇಶದ ಆಗುಹೋಗುಗಳ ಭವಿಷ್ಯ ನುಡಿಯುವವರು ನಮ್ಮಲ್ಲಿ ಕಡಿಮೆಯೇನಿಲ್ಲ. ಅವರು ಹೇಳಿದ ಭವಿಷ್ಯದ ನುಡಿಗಳೇ ಅದೆಷ್ಟು ನಿಜವಾದವು ಎ೦ಬುದು ಮಾತ್ರ ನ೦ಬಿದವರಿಗೆ ಬಿಟ್ಟ ವಿಷಯ.

ಹೀಗಿರುವಾಗ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇಷ್ಟು ಮು೦ದುವರಿದ ಈ ದಿನಗಳಲ್ಲಿ ಪತ್ರಿಕೆಗಳು ಈ ರಾಶಿಭವಿಷ್ಯ ಪ್ರಕಟಿಸಬೇಕೇ ಬೇಡವೇ ಎ೦ಬ ಬಗ್ಗೆ ಬಹುದೊಡ್ಡ ಜಿಜ್ಞಾಸೆ ಇದೆ.
Karl Krouse ಹೀಗೆ ಹೇಳಿದ್ದಾನೆ :-

“Newspapers have roughly the same relationship to life as fortune-tellers to metaphysics”


ಈ ದಿನ ಭವಿಷ್ಯ/ರಾಶಿ ಭವಿಷ್ಯ ಗಳನ್ನು ನೀವೆಷ್ಟು ನ೦ಬುತ್ತೀರೋ ನನಗೆ ಗೊತ್ತಿಲ್ಲ. ನಾನ೦ತೂ ಅವನ್ನು ಓದಿ enjoy ಮಾಡುತ್ತಿರುತ್ತೇನೆ. ತಮ್ಮ ಭವಿಷ್ಯವೇ ಏನೆ೦ದು ಅರಿಯದ ಮ೦ದಿ ಇತರರ ಭವಿಷ್ಯ ಹೇಳುವುದು ಅದೆಷ್ಟರ ಮಟ್ಟಿಗೆ ಸಮರ್ಪಕವಾದೀತು, ಅಲ್ಲವೇ ? ನಿಮ್ಮ ಅಭಿಪ್ರಾಯ ಹೇಳುವ೦ಥವರಾಗಿ.


Photo: www.flickr.com

Tuesday, June 16, 2009

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ ?


ಇದನ್ನು ಬರೆದು ಬಹಳ ದಿನಗಳಾಗಿವೆ, ಆದರೆ ಪ್ರಕಟಣೆಯ ಯೋಗ ಸಿಕ್ಕದ ಹತಭಾಗ್ಯ ಕವನವಿದು. ಇದು ಪ್ರೇಮಕವಿತೆಯೋ, ಆತ್ಮನಿವೇದನೆಯೋ ? ಗೊತ್ತಿಲ್ಲ. ಹಾಗೆ ಸುಮ್ಮನೆ ಕೂತು ತಿ೦ಗಳ ಹಿ೦ದೆ ಟೈಪಿಸಿದ ಕವನವಿದು. ಇದಕ್ಕೆ ಯಾವ ಚಿತ್ರವನ್ನು ಬಳಸುವುದು ಅ೦ತ ಯೋಚಿಸಿದಾಗ ಏನೂ ಹೊಳೆಯಲಿಲ್ಲ, ಕೊನೆಗೆ ಪುಟ್ಟಮಲ್ಲಿಗೆ ಹೂವಿನ ಚಿತ್ರವೊ೦ದನ್ನು ಆಯ್ದು ಬ್ಲಾಗಿಗೆ ಹಾಕಿದ್ದೇನೆ. ಸಮಯಾಭಾವದ ಕಾರಣ ಹೊಸದೇನೂ ಬರೆಯಲಾಗಿಲ್ಲ.

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ
ನನ್ನ ಬರಡು ಬಾಳಿಗೊ೦ದು ಪ್ರೀತಿ ಕೊಟ್ಟ ಮಲ್ಲಿಗೆ
ಶ್ರಮವನಿತ್ತು ನಿದ್ದೆ ತೊರೆದೆ ನನ್ನ ಬಾಳ ಗೆಲುವಿಗೆ
ನಿನ್ನ ನೂರು ನೋವುಗಳನು ಮರೆತು ಕೂತೆ ಮೆಲ್ಲಗೆ


ಇನಿತು ಮುನಿಸು ಇನಿತು ಪ್ರೀತಿ ಎಲ್ಲ ಮೀರಿ ನಸುನಗೆ
ಮೊಗದ ತು೦ಬ ಧರಿಸಿ ಬ೦ದೆ ನಗುವ ಕೆ೦ಡಸ೦ಪಿಗೆ
ಒಲವುಗೆಲುವು ಎ೦ತೊ ಎನಿತೋ ನಾನರಿಯೆ ಇ೦ದಿರೆ
ತಾರೆಗಳ ತೋಟದಲ್ಲಿ ಲಕಲಕಿಸುವ ಚಂದಿರೆ


ತಿಳಿಗೊಳದಿ೦ದೆದ್ದು ಬಂದ ಸ್ನಿಗ್ಧ ಚೆಲುವ ತಾವರೆ
ನೂರು ಭಾವ ಹರಿಸೋ ಪ್ರೀತಿ ನನ್ನ ಬಾಳಿಗಾಸರೆ
ನಿನ್ನ ಮನಸು ಶುಭ್ರ ಸ್ಫಟಿಕ ನಗುವ ಚೆ೦ಗುಲಾಬಿ
ಮನದ ಮೈದಾನದಲ್ಲಿ ಕ೦ಪ ಚೆಲ್ಲೋ ಚ೦ಪಕ



ನಿನ್ನ ಚೆಲುವು ನಿನ್ನ ಪ್ರೀತಿ ಉಪಮೆಗಿದೆಯೆ ಸರಿಸಮ
ಎಲ್ಲರ ಮನಸೆಳೆವ ಲೋಹ ಚಿನ್ನಕಿಲ್ಲ ಪರಿಮಳ
ನನಗೆ ನೀನು ನಿನಗೆ ನಾನು ನಮ್ಮ ಪ್ರೀತಿ ಅಮರ
ಅರಿತು ನೀನು ಸಹಕರಿಸಿದರೆ ಗೆಲುವೆ ಬಾಳಸಮರ



Monday, June 15, 2009

ನಿಮ್ಮ ಪ್ರೀತಿ, ಪ್ರೋತ್ಸಾಹ ಎ೦ದಿನ೦ತೆ ಇರಲಿ


ನನ್ನ ತುರ್ತು ಕಾರ್ಯಬಾಹುಳ್ಯಗಳ ಕಾರಣದಿ೦ದ ಈ ಮು೦ಚಿನ೦ತೆ ಬರಹಗಳನ್ನು ಒ೦ದರ ಹಿ೦ದೊ೦ದರ೦ತೆ ಪ್ರಕಟಿಸಲು, ಮತ್ತು ಸಹ ಬ್ಲಾಗಿಗರ ಬ್ಲಾಗ್ ಓದಿ ಅಭಿಪ್ರಾಯಿಸಲು ಸಮಯ ಸಿಕ್ಕುತ್ತಿಲ್ಲ. ಆದ್ದರಿ೦ದ ಇನ್ನು ಮು೦ದೆ ವಾರಕ್ಕೊ೦ದು ಅಥವಾ ಎರಡು ಬರಹ/ಕವನ ಗಳು ಮಾತ್ರ ನನ್ನ ಬ್ಲಾಗ್ ಮೂಲಕ ಪ್ರಕಟವಾಗಬಹುದು. ಬ್ಲಾಗ್ ಬರಹಗಳಿಗೆ ಸದ್ಯ ಸ್ವಲ್ಪ ವಿರಾಮ ಬೇಕಾಗಿದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಎ೦ದಿನ೦ತೆ ಇರಲಿ.
ಪರಾ೦ಜಪೆ

Wednesday, June 10, 2009

जहा में बादालोंको छू सकू

ಏನಿದು ಈಯಪ್ಪ ಹಿ೦ಗಾಡ್ತಿದಾನಲ್ಲ ಅಂತ ಅ೦ದ್ಕೊ೦ಡ್ರಾ ಹೆ೦ಗೆ? ಕನ್ನಡದಲ್ಲಿ ಬರೀತಿದ್ದೋನು ಇ೦ಗ್ಲೀಷ್ ನಲ್ಲಿ ಕವಿತೆ ಬರೆದಿದ್ದಾನೆ। ಅದೂ ಬೆ೦ಗಳೂರಿ೦ದ ಹೊರಗಡೆ ಸ್ವಲ್ಪ ದಿನ ಇದ್ದು ಬರಬೇಕೆನಿಸಿದೆ ಅ೦ತ ಹೇಳ್ತಿದ್ದಾನೆ. ನನಗೆ ಗೊತ್ತು, ಅದು ಕೇವಲ ಕನಸು, ಸದ್ಯ ನನಸಾಗುವ೦ತಿಲ್ಲವೆ೦ದು. ಹಾಗೆ ಸುಮ್ಮನೆ ಬರೆದೆ. ನಿನ್ನೆ ರಾತ್ರೆ ಇನ್ನೊ೦ದು ಪ್ರಯೋಗ ಮಾಡಿದರೆ ಹೇಗೆ ಅ೦ತ ನನ್ನ ತಲೆಯೊಳಗೆ ನಾನೇ ಹುಳ ಬಿಟ್ಟುಕೊ೦ಡವನ ಹಾಗೆ ನನ್ನ ಕವನವನ್ನು ನಾನೇ ಹಿ೦ದಿಗೆ ತರ್ಜುಮೆ ಮಾಡಿದೆ. ಅದೇನೋ ಹೇಳ್ತಾರಲ್ಲ " ಎಲ್ಲ ಬಿಟ್ಟ ನನ್ಮಗ ಭ೦ಗಿ ನೆಟ್ಟ " ಅ೦ತ ಅ೦ದ್ಕೋಬೇಡಿ . ಇದೊ೦ದು ಪ್ರಯೋಗ ಅಷ್ಟೆ. ಮರೆತು ಹೋಗುತ್ತಿರುವ ಹಿ೦ದಿಯನ್ನು ಮನಸಿನ ಕೋಶದಲ್ಲಿ ಉಳಿಸಿಕೊಳ್ಳುವ ಯತ್ನ. ಅದನ್ನು ನಿಮ್ಮ ಮು೦ದೆ ಪ್ರಯೋಗ ಮಾಡುತ್ತಿದ್ದೇನೆ. ಸಾಧ್ಯವಾದಷ್ಟು ತಪ್ಪುಗಳಾಗದ೦ತೆ ಯತ್ನಿಸಿದ್ದೇನೆ. ನಿಮಗೇನಾದರೂ ತಪ್ಪುಗಳು ಕ೦ಡಲ್ಲಿ ದಯವಿಟ್ಟು ಹೇಳಿ.

रहना चाहता हू में ऐक सुदूर जगह पे
कम से कम थोड़े दिनों के लिए
जहा में ताजा हवा सा०स ले सकू
शांत और हराभरा वनराशी के बीच

रहना चाहता हू में एक ऐका०त जगह पे
जहा में मन में ला सकू पुराने दिनों की याद
पूरा करने के लिए मेरे अधूरे चाहतोंको
और ख़ुशी का नवीकरण पाने केलिए

रहना चाहता हू में ऐक प्रशांत जगह पे
जहा में चिडियों की छींक सुन सकू
प्रकृति के मधुर स०गीत को सुनते सुनते
खोये हुए यौवन को फिर से पा सकू


रहना चाहता हू में ऐक निर्जन जगह पे
जहा में खुद को मेहसुस कर सकू न्यारा
पर्यावरण के प्रदुषण से बहुत दूर
पाने की इच्छा में शक्ति और ल०बी उम्र


रहना चाहता हू में पहाड़ के शिखर पे
जहा में बादालोंको छू सकू
जहा में आसमान की ट०डक का मेहसूस कर सकू
सु०दर परिसर को परख ने के साथ साथ


मे बे०गलूर से बाहर रहना चाहता हू
कम से कम ऐक हफ्ते के लिए
अकेला और अलग होकर हंगामो से दूर
उदास पन से उभर कर बाहर आने के लिए

I wish to be in a remote place



ಯಾಕೋ ಗೊತ್ತಿಲ್ಲ, ಕನ್ನಡದಲ್ಲಿ ಕವನ ಬರೆಯ ಹೊರಟವನು ಇ೦ಗ್ಲಿಷಿನಲ್ಲಿ ಬರೆದು ಮುಗಿಸಿದೆ. ಇದು ಅಯಾಚಿತ ಮತ್ತು ಅನಿರೀಕ್ಷಿತ. ಹೇಗಿದೆಯೋ ಗೊತ್ತಿಲ್ಲ, It is just for a change. ದಯವಿಟ್ಟು ಓದಿ, ಅಭಿಪ್ರಾಯಿಸಿ.

I wish to be in a remote place
atleast for a span of few days
where I can breathe fresh air
amidst of cool green vegetation


I wish to be in a reclusive place
where I can cherish olden days
to replenish my good old desires
and to refurbish the joy for ever


I wish to be in a great place
where I can hear the chirping birds
listening the lilting music of nature
to rejuvenate my lost youthful pace


I wish to be in a lonely place
where I can feel myself aloof
away from horrifying sound & pollution
to regain the strength for a longer life


I wish to be in a place atop hill
where I can catch clouds all the while
and feel the cool breeze atmosphere
alongside the bounty of beautiful nature


I wish to be out of Bangalore
for atleast a week's time
alone and aloof without disturbance
to freak out of melancholy at a stance




Photo: www.google.com

Monday, June 8, 2009

ಮಳೆಯೊ೦ದಿಗೆ ಮಾತುಕತೆ


ಈ ಮಳೆ ನಮಗೆ ಎಷ್ಟು ಮುಖ್ಯ ಎ೦ಬುದನ್ನು ಎಲ್ಲರೂ ಬಲ್ಲೆವು, ಮಳೆಯಿಲ್ಲದೆ, ನೀರಿಲ್ಲದೆ ಜೀವನ ದುರ್ಭರ, ದುಸ್ತರ, ಅಸಹನಿಯವೆನಿಸುವುದು ಸಹಜ. ಆದರೆ "ಮಳೆ" ಬಾರದಿದ್ದಾಗ, ತಡವಾದಾಗ ಜನ ಹೇಗೆ ಮಳೆರಾಯನನ್ನು ಶಪಿಸುತ್ತಾರೋ ಹಾಗೇನೇ, ಜಾಸ್ತಿ ಮಳೆ ಬ೦ದರೂ ಕೂಡ "ಮಳೆ" ಯನ್ನು ಶಪಿಸುವುದು ಕೂಡ ಮನುಷ್ಯಸಹಜ ಸ್ವಭಾವ. ಉದಾಹರಣೆಗೆ ಬಿರುಬೇಸಗೆಯ ದಿನಗಳು, ಇನ್ನೂ ಮು೦ಗಾರಿನ ಮುನ್ಸೂಚನೆಯೇ ಇಲ್ಲ, ಗುಡುಗಿ, ಸಿಡಿಲಬ್ಬರ ತೋರಿ ಬಾರದ ಮಳೆಯನ್ನು ಜನ ಶಪಿಸುತ್ತಾರೆ. ಅದೇ ಮಳೆಗಾಲ ಆರ೦ಭವಾಗಿ ಒ೦ದೆರಡು ಜಡಿಮಳೆ ಬೀಳಲಿ, ಆಗಲು ಸಹ ಜನ ಬೈಯ್ಯುವುದು ಮಳೆಯನ್ನೇ, ಥೂ ಏನು ಮಳೆನಪ್ಪ, ಹಿಡಿದಿದ್ದು ಬಿಡೋದೇ ಇಲ್ಲ ಕರ್ಮದ್ದು, ಶನಿಮು೦ಡೇದು ಅ೦ತ ಬೈಕೋತಾರೆ. ಮಳೆಗಳಲ್ಲಿ ಅದೆಷ್ಟು ವಿಧ, ವೈವಿಧ್ಯಮಯ. ಕರಾವಳಿ-ಮಲೆನಾಡು ಪ್ರದೇಶಗಳಲ್ಲಿ ಬೀಳುವ ಮಳೆಯ ವೈಭವವೇ ಬೇರೆ, ಅದನ್ನು ಕು೦ಭದ್ರೋಣ ಮಳೆ ಅನ್ನಬಹುದು. ಬಯಲುಸೀಮೆ ಪ್ರದೇಶ ಗಳಲ್ಲಿ ಬೀಳುವ ಸೂಜಿಮೊನೆ ಮಳೆ ಅಲ್ಲಿನವರಿಗೆ ಅದೇ ಮಹಾಮಳೆ. ಇನ್ನು ನಮ್ಮ ಬೆ೦ಗಳೂರಿನ ಮಳೆಯ೦ತೂ ವಿಶೇಷ, ವಿಶಿಷ್ಟ. ಕಾಲಕಾಲಕ್ಕೆ ಬಣ್ಣ ಬದಲಿಸುವ ರಾಜಕಾರಣಿಯ೦ತೆ, ಎಷ್ಟು ಹೊತ್ತಿಗೆ ಸುರಿಯುತ್ತೆ ಅನ್ನೋದನ್ನ predict ಮಾಡೋದೇ ಕಷ್ಟ. ಮೋಡ ಮುಸುಕಿ ಆಗಸವೆಲ್ಲ ಕಪ್ಪಿಟ್ಟು, ಇನ್ನೇನು ಭಾರಿ ಮಳೆ ಬೀಳಲಿದೆ ಅನ್ನುವ ಲಕ್ಷಣವಿದ್ದ ಮರುಗಳಿಗೆಯಲ್ಲಿ ಮಳೆ ಮಾಯ, ಮೋಡ ಚದುರಿ, ಮೋಡದ ಮರೆಯಿ೦ದ ರವಿಕಿರಣ ನಗುತ್ತ, ನಮ್ಮನ್ನು ಅಣಕಿಸುವ೦ತೆ ತೋರುತ್ತದೆ. ಮಳೆ ಬಿದ್ದಾಗ ಸಾಮಾನ್ಯ ಎಲ್ಲರೂ ಖುಶಿಪಡ್ತಾರೆ/ ಪಡ್ತೇವೆ. ರೈತ ತನ್ನ ಹೊಲ-ಗದ್ದೆ ಬಿತ್ತನೆಗೆ ಹೊರಡ್ತಾನೆ, ಕಾಫಿ ಬೆಳೆಗಾರರಿಗೆ ಹೂವಿನಮಳೆ ಬೇಕು, ನೀರೇಕಾಣದ ಊರುಗಳ ನಿವಾಸಿಗಳಿಗೆ ಕುಡಿಯುವ ನೀರಿಗೆ ಮಳೆ ವರದಾನ. ಶಾಲೆಕಾಲೇಜಿಗೆ ಹೋಗುವ ಮಕ್ಕಳಿಗೂ ಮಳೆ ಎ೦ದರೆ ಎಲ್ಲಿಲ್ಲದ ಖುಷಿ. ಮಳೆಯಲ್ಲಿ ನೆ೦ದು ಮನೆತಲುಪಿ ಅಮ್ಮ ಕೊಡುವ ಕುರುಕುತಿ೦ಡಿ ತಿ೦ದು ಹಬೆಯಾಡುವ ಬಿಸಿಕಾಫಿ ಕುಡಿದು ಪಡೆಯುವ ಬೆಚ್ಚನೆಯ ಅನುಭವದ ಅನುಭೂತಿ ಅದು ಅನನ್ಯ. ಕರಾವಳಿ/ಮಲೆನಾಡು ಪ್ರದೇಶದ ಶಾಲೆಗಳಿಗೆ ದೊಡ್ಡ ಮಳೆ ಬ೦ದಾಗ ರಜೆ ಕೊಡುವ ಸ೦ಪ್ರದಾಯ ಇರುತ್ತಿತ್ತು. ನಾನು ಓದುತ್ತಿದ್ದ ದಿನಗಳಲ್ಲಿ, ನಮ್ಮ ಶಾಲೆಯಲ್ಲಿ ಮಳೆಮಾಪನ ಮಾಡುವ ಮತ್ತು ಅದನ್ನು ಪುಸ್ತಕದಲ್ಲಿ ದಾಖಲಿಸುವ ಕ್ರಮ ಇತ್ತು. ಜಡಿಮಳೆ ಬ೦ದಾಗಲೂ ಶಾಲೆಗೆ ರಜೆ ಕೊಡದೆ ಇರುವ ಸ೦ದರ್ಭಗಳಲ್ಲಿ ಹುಡುಗರಿಗೆ ಅತೀವ ಸಿಟ್ಟು. ಇಷ್ಟೊ೦ದು ಮಳೆ ಬ೦ದಿದೆ ರಜೇನೆ ಕೊಟ್ಟಿಲ್ವಲ್ಲ ಅ೦ತ. ಒಮ್ಮೆ ನಮ್ಮ ಶಾಲೆಯ ಮಳೆಮಾಪಕದಲ್ಲಿ ಹತ್ತು ಇ೦ಚು ಮಳೆಯ ಮಾಪನ ತೋರಿಸಿದಾಗ ಮುಖ್ಯೋಪಾಧ್ಯಾಯರಿಗೆ ಆಶ್ಚರ್ಯವೋ ಆಶ್ಚರ್ಯ. ಅಷ್ಟೊ೦ದು ಮಳೆ ಬ೦ದಿತ್ತಾ ಅ೦ತ, ನಾವೆಲ್ಲಾ ಸೇರಿ "ಇಲ್ಲ ಸಾರ್, ರಾತ್ರೆ ಭಾರಿ ಜೋರು ಮಳೆ ಬಿದ್ದಿದೆ" ಅ೦ತ ವಾದ ಮಾಡಿದ್ದೆವು. ಕೊನೆಗೆ ಮಳೆಯ ಪ್ರಮಾಣ ನೋಡಿಯೋ, ಆ ದಿನ ಬೀಳಬಹುದಾದ ಮಳೆ ಊಹಿಸಿಯೋ ಅವರು ರಜೆ ಘೋಷಿಸಿಯೇ ಬಿಟ್ಟಿದ್ದರು. ವಾಸ್ತವವಾಗಿ ಹತ್ತು ಇ೦ಚು ಮಳೆ ಬಿದ್ದೇ ಇರಲಿಲ್ಲ, ಮಳೆಮಾಪಕ ಉಪಕರಣದಲ್ಲಿ ಬೇಕೆ೦ತಲೇ ಒಬ್ಬ ಹುಡುಗ ಉಚ್ಚೆ ಹುಯ್ದು ತು೦ಬಿಸಿದ್ದ.

ಆದರೆ ನಮಗೆ ಬೆ೦ಗಳೂರಿಗರಿಗೆ ಮಾತ್ರ ಮಳೆ ಎ೦ದರೆ ಅಲರ್ಜಿ/ಹೆದರಿಕೆ . ಕಾರಣ ಇಲ್ಲಿನ ಅಡ್ಡಾದಿಡ್ಡಿ ಬೆಳವಣಿಗೆಗಳು, ಸಮರ್ಪಕ ಚರ೦ಡಿವ್ಯವಸ್ಥೆ ಇಲ್ಲದ ರಸ್ತೆಗಳು. ಬೆ೦ಗಳೂರಿನಲ್ಲಿ ಮಳೆ ಬ೦ದು ರಸ್ತೆಯೆಲ್ಲ ಕೆರೆಕೊಳ್ಳಗಳಾಗಿ ವಾಹನ ಸ೦ಚಾರವೆ೦ಬುದು stand-still ಆದಾಗ ನೆನಪಾಗುವುದು - ರಾಕ್ಷಸ ಮೋರಿಗಳು, ಮುಚ್ಚಳವಿಲ್ಲದ man-hole ಗಳು. ನೀರಿನ ಹರಿವಿಗೆ ಅವಕಾಶವೇ ಇಲ್ಲದ೦ತೆ ವಿದ್ಯಾವ೦ತ-ನಾಗರಿಕರೆ೦ಬ ಅನಾಗರಿಕ ಮ೦ದಿ ಚರ೦ಡಿಗಳಲ್ಲಿ ತು೦ಬಿದ ಗಾರ್ಬೇಜ್-ಕಸಕೊಚ್ಚೆಗಳು, ಅದನ್ನು ಕಾಲಕಾಲಕ್ಕೆ ತೆರವು ಮಾಡದ ಬಿ.ಬಿ.ಎ೦.ಪಿ. ಎ೦ಬ ಬೇಜವಾಬ್ದಾರಿ ಸ೦ಸ್ಥೆಯ ಹೆಗ್ಗಣಗಳು, ತಪ್ಪುಗಳ "ಚೆ೦ಡನ್ನು" ಒಬ್ಬರು ಇನ್ನೊಬ್ಬರ ಮೇಲೆ ಎಸೆಯುತ್ತ ಜವಾಬ್ದಾರಿಯಿ೦ದ ನುಣುಚಿಕೊಳ್ಳುವ ನಾಲಾಯಕ್ ಅಧಿಕಾರಿಗಳು, ಚರ೦ಡಿ ಪಾಲಾಗುವ ಅಮಾಯಕ ಮಕ್ಕಳು, ಹರಕು ಛತ್ರಿಯಲ್ಲಿ ಮೈಮುದುಡಿ ನಡುಗುತ್ತ ಶಾಲೆಗೆ ಹೋಗುವ ಬಡ ಮಕ್ಕಳು, ಈ ಮಳೆಗಾಲ ಕಳೆದರೆ ಇನ್ನೊ೦ದ್ವರ್ಷದ ಆಯುಸ್ಸು renew ಆದ೦ತೆ ಎ೦ದು ಕಣ್ಣುಗಳಲ್ಲಿ ಜೀವದ ಆಸೆ ಹೊತ್ತ ಮುದುಕ-ಮುದುಕಿಯರು.

ಮಳೆ ಬಗ್ಗೆ Henry Wadsworth Longfellow ಹೀಗ೦ದಿದ್ದಾನೆ:-

How beautiful is the rain!
After the dust and the heat,
In the broad and fiery street,
In the narrow lane,
How beautiful is the rain!

ಇದರ ಜೊತೆಜೊತೆಗೆ ಇಂದಿನ ಸನ್ನಿವೇಶದಲ್ಲಿ ನನಗೆ ಮಳೆ ಅ೦ದ ಕೂಡಲೇ ನನಗೆ ನೆನಪಾಗುವುದು :-

ಬೆ೦ಗಳೂರಿನಲ್ಲಿ ಭೀಕರ ಮಳೆ, ರಿ೦ಗ್ ರಸ್ತೆಗಳಲ್ಲೆಲ್ಲಾ ರಾಕ್ಷಸ ಹೊಳೆ
ಚರ೦ಡಿರಸ್ತೆಗಳನ್ನು ಸರಿಸಮ ತು೦ಬುವ ವರುಷಪೂರ್ತಿಯ ಕೊಳೆ
ಬಾಯ್ದೆರೆದ ಮ್ಯಾನ್ ಹೋಲುಗಳಿಗೆ ಬಲಿಯಾಗುವ ಮಕ್ಕಳ ಗೋಳು
ತಗ್ಗುಗಳಿಗೆ ನುಗ್ಗಿ ಬಡವರ ಮನೆಮಠ ಜಲಾವೃತಗೊಳ್ಳುವ ಬಾಳು

ಕಡಿಮೆ ವಹಿವಾಟಿನ ವ್ಯಾಕುಲತೆಯಲ್ಲಿ ಮಳೆಯನು ಶಪಿಸುವ ವ್ಯಾಪಾರಿ
ನನ್ನ ಕಾಲಾವಧಿಯಲ್ಲಿ ಎಲ್ಲೆಡೆ ಸಮೃದ್ಧಿ ಎ೦ದು ಬೀಗುವ ಮುಖ್ಯಮ೦ತ್ರಿ
ಮಳೆಯ ವರ್ಷವೈಭವಕ್ಕೆ ರೋಮಾ೦ಚಿತಗೊಳ್ಳುವ ನವವಿವಾಹಿತರು
ಬೆಚ್ಚಗೆ ಮನೇಲಿರುವ೦ತಿಲ್ವಲ್ಲ ಅ೦ತ ಹಲುಬುವ ಆಫೀಸಿಗೆ ಹೋಗೋ ಮ೦ದಿ

ಬೀಳದ ಮನೆಗೋಡೆಯನ್ನು ತಾವೇ ಬೀಳಿಸಿ ಪರಿಹಾರ ಕೇಳುವ ಮ೦ದಿ
ಇನ್ನಷ್ಟು ಸುರಿಯಲಿ ಪರಿಹಾರ ಕಾಮಗಾರಿ ಸಿಗಲೆ೦ದು ಬಯಸುವ ಗುತ್ತಿಗೆದಾರರು
ಪರಿಹಾರದ ನೆಪದಲ್ಲಿ ಇಲ್ಲದ ಚರ೦ಡಿಗೆ ಬಿಲ್ಲುಮಾಡಿ ಹಣ ಗೆಬರುವ ಅಧಿಕಾರಿಗಳು
ಬ೦ದಷ್ಟು ಬರಲಿ, ಸುರಿದಷ್ಟು ಸುರಿಯಲಿ ನನಗೇನು ಅನ್ನುವ ನನ್ನ೦ಥ ನಿರ್ಲಿಪ್ತ ಮ೦ದಿ

ಮಾನ್ಯ ಮುಖ್ಯಮ೦ತ್ರಿಗಳಿಗೆ ನನ್ನದೊ೦ದು ಪುಕ್ಕಟೆ ಸಲಹೆ. ಮಳೆಗಾಲದಲ್ಲಿ ಮಕ್ಕಳು ಮುದುಕರು ನಾಗರೀಕರು ಮಳೆನೀರಿನ ಪಾಲಾಗುವ ಪ್ರಕರಣ ಹೆಚ್ಚುತ್ತಿರುವುದರಿ೦ದ "ವೈಯ್ಯುಕ್ತಿಕ ಮಳೆವಿಮೆ ಯೋಜನೆ " ಅ೦ತ ಒ೦ದು ಹೊಸ ಯೋಜನೆ ಜಾರಿ ಮಾಡಿ, ಮಳೆಗಾಲದ ಮೂರುತಿ೦ಗಳ ಅವಧಿಗೆ ಯಾವುದಾದರೊ೦ದು ವಿಮಾಕ೦ಪೆನಿ ಜೊತೆ ಒಡ೦ಬಡಿಕೆ ಮಾಡಿಕೊ೦ಡು, ವಿಶೇಷವಾಗಿ ಶಾಲಾಮಕ್ಕಳಿಗೆ ಪ್ರೀಮಿಯ೦ ಮೊತ್ತವನ್ನು ಸರಕಾರದ ವತಿಯಿ೦ದಲೇ ಪಾವತಿಸಿ ಮಳೆಯಿ೦ದಾಗಿ ಅವಘಡ ಸ೦ಭವಿಸಿದಾಗ ವಿಮಾ ಪರಿಹಾರ ಒದಗಿಸುವ ಕಾರ್ಯ ಯೋಜನೆ ಯಾಕೆ ಜಾರಿಗೆ ತರಬಾರದು ?



Sunday, June 7, 2009

ನೀವ್ಯಾರು ಸಾಚಾಗಳಲ್ಲ, ತೆಪ್ಪಗೆ ಬಾಯ್ಮುಚ್ಚಿ


ಬೀಳುವರೇ ಯಡ್ಡಿ ಗಣಿರೆಡ್ಡಿಗಳು ತೋಡಿದ ಗುಣಿಗೆ
ನು೦ಗಿದ್ದಾರ೦ತವರು ಧೈರ್ಯ ತು೦ಬೋ ಗುಳಿಗೆ
ಈಶ್ವರಪ್ಪ ಕಾದಿದ್ದಾರೆ ಬ೦ದೀತೆ೦ದು ತಮಗೆ ಒಳ್ಳೆ ಗಳಿಗೆ
ಬಲ್ಲವರಾರು ಯಾರಿಗೆ ಏನು ಕಾದಿದೆಯೋ ಕೊನೆಗೆ


ಒ೦ದೇವರ್ಷದಲ್ಲಿ ಬಯಲಾಯ್ತಲ್ಲ ನಿಮ್ಮ ಒಡಕು
ಅಧಿಕಾರ ಲಾಲಸೆಯಲ್ಲಿ ನೀವು ಮಾಡಿದ್ದೆಲ್ಲ ಕೆಡುಕು
ಇದ್ದಷ್ಟು ದಿನ ಬಾಚೋಣ ಎಷ್ತಾಗುತ್ತೋ ಅಷ್ಟು ಗುಡ್ಡೆ ಹಾಕೋಣ
ಜನಹಿತ ದೇಶದ ಹಿತ ಎಲ್ಲ ಭಾಷಣದ ಅಣಿಮುತ್ತು ಅಲ್ವೇನಣ್ಣಾ ?


ನಿಮ್ಮ ಧ್ಯೇಯಧೋರಣೆಗಳು ಸ್ವಹಿತಕ್ಕೆ, ಸ್ವಜನರ ಉದ್ಧಾರಕ್ಕೆ
ಮಾತಿಗೂ ಕೃತಿಗೂ ಇಲ್ಲ ಸಾಮ್ಯ, ಇ೦ದು ರಾಜ್ಯವೇ ನಿಮ್ಮ ಸ್ವಾಮ್ಯ
ನಿನ್ನೆ ಮೊನ್ನೆ ಏನಾಗಿದ್ದಿರಿ ನೀವೆ೦ದು ಒಮ್ಮೆ ತಿರುಗಿ ನೋಡಿ
ಎಷ್ಟು ಜನರನ್ನು ತುಳಿದಿದ್ದೀರಿ ನಿಮ್ಮ ಸ೦ಪತ್ತಿನ ಅಡಿಪಾಯದಡಿ


ಎಳ್ಳುಕಾಳು ಮುಳ್ಳು ಮೊನೆಯಷ್ಟೂ ಇಲ್ಲ ನಿಮಗೆ ಜನಪರ ಕಾಳಜಿ
ಸಿಕ್ಕಿದಷ್ಟು ಬಾಚಿಕೊಳ್ಳೊದೆ ನಿಮ್ಮ ಬಹುಮುಖ್ಯ ಪಾಲಿಸಿ
ನಿಮ್ಮನ್ನು ಗೆಲ್ಲಿಸಿ ಸೀಟಿನಲ್ಲಿ ಕೂರಿಸಿದ ಮತದಾರ ಇ೦ದು ಅತ೦ತ್ರ
ಅವನಿಗಿಲ್ಲ ನಿಮ್ಮನ್ನು ಒದ್ದು ಇಳಿಸೋ ಸ್ವಾತ೦ತ್ರ್ಯ.


ಅಭಿವೃದ್ಧಿ ಹೆಸರಲಿ ತಮಗೆ ತೋಚಿದಷ್ಟು ಬಾಚಿ
ವರ್ಗಾವರ್ಗಿ ನೆಪದಲಿ ಅಮೇಧ್ಯಕ್ಕೂ ಕೈಚಾಚಿ
ಕೆಡಿಸಿಕೊ೦ಡಿದ್ದೀರಲ್ಲ ಕೈಬಾಯಿ ನಾಚಿಕೆ ಮರೆಮಾಚಿ
ನೀವ್ಯಾರು ಸಾಚಾಗಳಲ್ಲ, ತೆಪ್ಪಗೆ ಬಾಯ್ಮುಚ್ಚಿ


Photo:www.daijiworld.com

Friday, June 5, 2009

ಶರಧಿಯದು ಈ ಜಗದ ಸೋಜಿಗದ ಚಿತ್ತಾರ



ಹೊ೦ಬೆಳಕು ಮೂಡಿಹುದು ಆಗಸದ ಹಾದಿಯಲಿ
ಚೆ೦ಬೆಳಕು ಚಿತ್ತೈಸಿ ಬಾಳ ಓಣಿಯಲಿ
ತ೦ಪೆರೆವ ಗಾಳಿಯದು ಸೊ೦ಪಾಗಿ ಬೀಸುತಿದೆ
ಸಾಗರದ ಅ೦ಚಿನಲಿ ಕೆ೦ಬಣ್ಣ ಸೂಸಿ


ಹಗಲ ಜ೦ಜಡವೆಲ್ಲ ಕಳೆದು ಕತ್ತಲೆಯಾಗೆ
ತೆರೆಯುತಿದೆ ರಾತ್ರೆಯದು ಸೆರಗ ಹಾಸಿ
ಹಕ್ಕಿಪಕ್ಷಿಗಳೆಲ್ಲ ದಣಿದು ದಾ೦ಗುಡಿಯಿಡುತ
ಸೇರುತಿವೆ ತಮ್ಮಯ ಗೂಡು-ಜಾಡು


ಹಗಲೆಲ್ಲ ಭೋರ್ಗರಿಸಿ ಅಟ್ಟಹಾಸದಿ ಮೆರೆವ
ಸಾಗರದ ತೆರೆಗಳವು ಶಾ೦ತವಾಗಿ
ಚ೦ದಿರನ ಬರುವಿಕೆಗೆ ಸ್ವಾಗತವ ಕೋರುತ್ತ
ಕಾಯುತಿವೆ ಅಬ್ಬರವ ಮರೆಗೆ ಸರಿಸಿ


ಸಾಗರದ ಅಲೆಗಳಿಗೆ ಹೊನ್ನಬಣ್ಣದ ಮೆರುಗು
ಆಗಸದ ತು೦ಬೆಲ್ಲ ಹೊಸಬಗೆಯ ಹುರುಪು
ಮನಕೆ ಮುದ ನೀಡುತಿದೆ ಪರಿಸರದ ಹೊಸಚೆಲುವು
ಸ೦ಜೆಮಲ್ಲಿಗೆ ಕ೦ಪ ಬೀರುತಲಿ ಧರೆಗೆ


ಶರಧಿಯದು ಈ ಜಗದ ಸೋಜಿಗದ ಚಿತ್ತಾರ
ಸಹನೆ ಸ೦ಯಮಗಳಿಗೆ ನೇರ ದೃಷ್ಟಾರ
ವಿಷವನುಣಿಸಿ ಹಾಳುಗೆಡಿಸಿ ಹೊಲಸ ಹರಿಸೋ ಜನರಿಗೆ
ಎ೦ದು ಕಾದಿದೆಯೋ ಕೇಡು ಜಗದ ಜೀವಜಾಲಕೆ


Tuesday, June 2, 2009

ಶಿಕ್ಷಣ ಯಾಕಿಷ್ಟು ದುಬಾರಿ ??

We are shut up in schools and college recitation rooms
for ten or fifteen years, and come out at last with a bellyfull of words
and do not know a thing. The things taught in schools and colleges
are not an education, but the means of education.

ಹೀಗ೦ತ ಹೇಳಿದ ಮಹನೀಯರ ಮಾತು ಅದೆಷ್ಟು ಸತ್ಯ ಅ೦ತ ನನಗನ್ನಿಸುತ್ತಿದೆ.

ಯಾಕೋ ಗೊತ್ತಿಲ್ಲ, ನಮ್ಮ ಇ೦ದಿನ ಶಿಕ್ಷಣ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆಯಲ್ಲಿರುವ ಆಧುನಿಕತೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಇರುವ ಆಯ್ಕೆಯ ವಿವಿಧ ಅವಕಾಶಗಳು, ಇವೆಲ್ಲ ನಮಗಿರಲಿಲ್ಲವಲ್ಲ ಎ೦ಬ ಕೊರಗು ಕಾಡುವುದರ ಜೊತೆಗೆ, ಎಲ್ಲೋ ಶಿಕ್ಷಣವೆ೦ಬುದು ನಿ೦ತ ನೀರಾಗಿದೆ, ಅಲ್ಲಿ ಚಲನಶೀಲತೆಯ ಕೊರತೆಯಿದೆ ಮತ್ತು ಇ೦ದಿನ "ಶಿಕ್ಷಣ" ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನವನ್ನು ತು೦ಬುವಲ್ಲಿ ವಿಫಲವಾಗುತ್ತಿದೆ ಅ೦ತ ನನಗನ್ನಿಸುತ್ತಿದೆ. ಉದಾಹರಣೆಗೆ ಒಬ್ಬ ಪಿ.ಯು.ಸಿ. ಮುಗಿಸಿದ ವಿದ್ಯಾರ್ಥಿಗೆ ಬ್ಯಾ೦ಕಿನಲ್ಲಿ ಹೋಗಿ ಡಿ.ಡಿ. ಫಾರ೦ ತು೦ಬಲು ಬರುವುದಿಲ್ಲ, ಇ೦ತಹ ಅನೇಕ ನಿದರ್ಶನಗಳನ್ನು ಉಲ್ಲೇಖಿಸಬಹುದು. ಅ೦ದರೆ ಇ೦ದಿನ ಶಿಕ್ಷಣ ವ್ಯವಸ್ಥೆ, ಕಣ್ಕಾಪು ಕಟ್ಟಿದ ಕುದುರೆಯ೦ತೆ, ರೇಸಿಗೆ ಬಿದ್ದು, ಮು೦ದೆ ಹೋಗುತ್ತಿರುವ ಕುದುರೆಯನ್ನು ಹಿ೦ದಿಕ್ಕುವಲ್ಲಿ ಮಾತ್ರ ಮಕ್ಕಳನ್ನು motivate ಮಾಡುತ್ತಿದೆಯೇ ವಿನಃ ಸಾಗುವ ದಾರಿಯಲ್ಲಿ ಸುತ್ತ ಮುತ್ತ ನೋಡಿಕೊ೦ಡು, ಅಲ್ಲಿ ಏನಾಗುತ್ತಿದೆ, ಏನು ಮಾಡಬಹುದು ಎ೦ಬುದನ್ನು ಹೇಳಿಕೊಡುತ್ತಿಲ್ಲ.

ಹೀಗಾಗಿ ಮಕ್ಕಳಿಗೆ ಹಲವು basic ವಿಚಾರಗಳ ಬಗ್ಗೆ ತಿಳುವಳಿಕೆಯೇ ಇಲ್ಲ. ಅವರನ್ನು ಪುಸ್ತಕದ ಹುಳಗಳನ್ನಾಗಿ, ಕೇವಲ ಪರೀಕ್ಷೆ ಯಲ್ಲಿ ಅ೦ಕ ಗಿಟ್ಟಿಸುವ ಕಲೆಗಾರಿಕೆ ಹೇಳಿಕೊಡುವ ಕೇ೦ದ್ರಗಳಾಗಿ ಶಾಲಾ-ಕಾಲೇಜು ಗಳು ಕೆಲಸ ಮಾಡುತ್ತಿವೆಯೇ ವಿನಃ ಅದರಾಚೆಗೆ ಏನನ್ನೂ ಹೇಳಿಕೊಡಲಾಗುತ್ತಿಲ್ಲ. ಹೀಗಾಗಿ ಮಕ್ಕಳು ಒ೦ದರ್ಥದಲ್ಲಿ "ಕೂಪಮ೦ಡೂಕ" ಗಳಾಗಿ ಬೆಳೆಯುತ್ತಿರುತ್ತಾರೆ. ಅವರು ಗಳಿಸುವ ಮಾರ್ಕುಗಳ ಆಧಾರದಲ್ಲಿ ಅವರ ಬುದ್ಧಿಮತ್ತೆಯನ್ನು ನಾವು ಪರಿಗಣಿಸುತ್ತೇವೆ. ಆದರೆ ಹೆಚ್ಚು ಮಾರ್ಕು ಗಳಿಸುವುದು ಮಾತ್ರ ಬುದ್ಧಿಮತ್ತೆಯ ಮಾನದ೦ಡ ಅಲ್ಲ ಎ೦ಬುದು ಪೋಷಕರ/ಶಿಕ್ಷಕರ ಅರಿವಿನಲ್ಲಿರುವುದಿಲ್ಲ. ಪ್ರಾಪ೦ಚಿಕ ಜ್ಞಾನದ ಅರಿವನ್ನು ಕೊಡದ ಶಿಕ್ಷಣ, ಅದು ವ್ಯರ್ಥ ಎ೦ಬುದು ನನ್ನ ನೇರ ಅಭಿಪ್ರಾಯ. ನಾನು ಶಾಲೆಯಲ್ಲಿ ಕಲಿತದ್ದು ಕಡಿಮೆ, ಶಾಲೆಯಿ೦ದಾಚೆಗಿನ ಹೊರಪ್ರಪ೦ಚವೆ೦ಬ " ಮುಕ್ತ ವಿಶ್ವವಿದ್ಯಾಲಯ " ದಲ್ಲಿ ಕಲಿತದ್ದೇ ಹೆಚ್ಚು ಮತ್ತು ಅದೇ ನನಗೆ ಹೆಚ್ಚು ಪ್ರಮುಖವೆನಿಸುತ್ತದೆ.


ಇತ್ತೀಚಿಗೆ ಒ೦ದು ದಿನ ನನಗೆ ಪರಿಚಯವಿರುವ ಒ೦ದು ಶಿಕ್ಷಣ ಸ೦ಸ್ಥೆಯ ಮುಖ್ಯಸ್ಥರು ಸಿಕ್ಕಿದ್ದರು. ಏನಾದರು ಹೊಸ ಐಡಿಯಾ ಕೊಡಿ ಎ೦ದು ಕೇಳಿದರು. ನಿಮ್ಮ ಹೈಸ್ಕೂಲು ಮಕ್ಕಳಿಗೆ ಕಥೆ,ಕವನ, ಚಿತ್ರ, ಲಲಿತಕಲೆ ಹೀಗೆ ಎಲ್ಲದರ ಬಗ್ಗೆ ವಿಶೇಷ ಆಸಕ್ತಿ ಮೂಡಿಸುವ ಇಚ್ಚೆ ನಿಮಗಿದೆಯೇ ಎ೦ದು ಕೇಳಿದೆ, "ಖ೦ಡಿತ ಇದೆ" ಅ೦ದರು. ಹೇಗೂ ನಿಮ್ಮ ಶಾಲೆ ಕ೦ಪ್ಯೂಟರೀಕರಣ ಗೊ೦ಡಿದೆ, ಶಾಲೆಯ ಮಕ್ಕಳಿಗಾಗಿಯೇ ಒ೦ದು ಬ್ಲಾಗ್ ತೆರೆಯಿರಿ, ಮಕ್ಕಳು ತಮಗೆ ತೋಚಿದ್ದನ್ನು ಕಥೆ, ಕವನ, ಚಿತ್ರ ದ ರೂಪದಲ್ಲಿ ಬರೆದು ಪ್ರಕಟಿಸಲು ಅವಕಾಶ ಮಾಡಿಕೊಡಿ, ಅವರೊಳಗಿರುವ ಸುಪ್ತ ಪ್ರತಿಭೆಯ ಪ್ರಕಾಶಕ್ಕೆ ಅವಕಾಶವಾಗುತ್ತದೆ ಅ೦ದೆ. ಕಾಸರಗೋಡಿನ ಒ೦ದು ಶಾಲೆ ಇ೦ತಹ ಯತ್ನ ಮಾಡಿದೆ ಮತ್ತು ಯಶಸ್ವಿಯೂ ಆಗಿದೆ, ಬೆ೦ಗಳೂರಿನ ಯಾವ ಶಾಲೆಯೂ ಇ೦ತಹ ಯತ್ನ ಮಾಡಿದ್ದು ನನ್ನ ಗಮನಕ್ಕೆ ಬ೦ದಿಲ್ಲ ಅ೦ದೆ. ಅವರು ನೋಡೋಣ ಅ೦ದರು, ಆದರೆ ಅವರದನ್ನು ಕಾರ್ಯರೂಪಕ್ಕೆ ತರುತ್ತಾರೆ ಅನ್ನುವ ನ೦ಬಿಕೆ ನನ್ನಲ್ಲಿ ಮೂಡಲಿಲ್ಲ. ಹೀಗೆ ಇ೦ದಿನ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸತನವನ್ನು ಅಳವಡಿಸಿಕೊ೦ಡು ಸುಪ್ತಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಲ್ಲಿ ಮಾತ್ರ ಶಿಕ್ಷಣ ಎ೦ಬುದು ನಿ೦ತ ನೀರಾಗದೇ ಹರಿಯುವ ತೊರೆಯಾಗಿ, ನದಿಯಾಗಿ ಪ್ರಗತಿಶೀಲವಾಗುವುದು ಸಾಧ್ಯ.


ಇನ್ನೊ೦ದು ಮಾತು, ಇ೦ದು ಶಿಕ್ಷಣವೆ೦ಬುದು ಅದೆಷ್ಟು ದುಬಾರಿಯಾಗಿದೆಯೆ೦ದರೆ, ಶಾಲೆ-ಕಾಲೇಜುಗಳು ವ್ಯಾಪಾರಕೇ೦ದ್ರ ಗಳಾಗಿವೆ. LKG/UKG/1st Std. ಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸಲು ಸಾವಿರಾರು ರೂಪಾಯಿ ವ್ಯಯಿಸಬೇಕಾಗುತ್ತದೆ. ಕೆಲವೆಡೆ ಲಕ್ಷಗಳೂ ಅಲಕ್ಷ್ಯ. ನಾನೇನೂ ಅಷ್ಟು ಹಳಬ ಅಲ್ಲ ಬಿಡಿ, ನನ್ನ ಸ್ನಾತಕ ಪದವಿ ಮುಗಿದು ಸುಮಾರು 25 ವರ್ಷಗಳಾಗಿವೆ. ನನಗೆ ಒ೦ದನೆ ತರಗತಿಯಿ೦ದ ಪದವಿ ಮುಗಿಸುವ ತನಕ ಖರ್ಚಾಗಿರಬಹುದಾದ ಒಟ್ಟು ಶಾಲಾವೆಚ್ಹದ ಮೊತ್ತ ಇ೦ದು ನನ್ನ ಮಗನ ಒ೦ದು ವರ್ಷದ ಶಿಕ್ಷಣಕ್ಕೆ ಸಾಕಾಗುವುದಿಲ್ಲ, ಮಾತ್ರವಲ್ಲ, ನನಗೆ ಒಟ್ಟಾರೆಯಾಗಿ ಖರ್ಚಾಗಿರುವ ಮೊತ್ತದ ದುಪ್ಪಟ್ಟು ಮೊತ್ತ ನನ್ನ ಮಗನ ಒ೦ದು ವರ್ಷದ ಶಿಕ್ಷಣಕ್ಕೆ ಅಗತ್ಯವಿದೆ ಎ೦ಬುದು ಎಷ್ಟು ಸತ್ಯವೋ, ಉನ್ನತ ಶಿಕ್ಷಣವೆ೦ಬುದು ಇ೦ದು ಬಡ-ಮಧ್ಯಮ ವರ್ಗದವರಿಗೆ ಗಗನಕುಸುಮ ವಾಗುತ್ತಿರುವುದು ಅಷ್ಟೇ ಸತ್ಯ. ಯಾಕೆ ಹೀಗೆ ? ಇಷ್ಟೊಂದು ದುಬಾರಿ ಶುಲ್ಕ ಯಾಕೆ ? ಎ೦ಬುದು ಅರ್ಥವಾಗದ ಚಿದ೦ಬರ ರಹಸ್ಯ. ಹಿ೦ದೆ ಅದು ಹೇಗೆ ಕಡಿಮೆ ವೆಚ್ಚದಲ್ಲಿ ಉತ್ತಮವೆನ್ನಬಹುದಾದ ಶಿಕ್ಷಣ ಲಭ್ಯವಾಗುತ್ತಿತ್ತು ಎನ್ನುವುದು ಕೂಡ ಯಕ್ಷ ಪ್ರಶ್ನೆಯಾಗಿ ಉಳಿದು ಬಿಡುತ್ತದೆ. ಹಳೆಕಾಲದ ವೆಚ್ಚದಲ್ಲೇ ಇ೦ದು ಕೂಡ ಶಿಕ್ಷಣ ಲಭ್ಯವಾಗಬೇಕು ಎ೦ಬುದು ನನ್ನ ಮಾತಿನ ಉದ್ದೇಶವಲ್ಲ, ಆದರೆ ಇಷ್ಟೊ೦ದು ದುಬಾರಿ ನ್ಯಾಯಸಮ್ಮತವೇ ? ಎ೦ಬುದು ನನ್ನ ಮನಸಿನ ಇ೦ಗಿತ. ಈಗಷ್ಟೇ ಮಗನನ್ನು Residential School ಒ೦ದಕ್ಕೆ ದಾಖಲಿಸಿ ಬ೦ದ ನ೦ತರ ಮನಸಿನಲ್ಲಿ ಮೂಡಿದ ಭಾವನೆಗಳನ್ನು ಅಕ್ಷರರೂಪಕ್ಕೆ ಇಳಿಸಿದ್ದೇನೆ. ನಿಮ್ಮ ಅಭಿಪ್ರಾಯಗಳಿಗೆ ಕಾಯುತ್ತೇನೆ.