Thursday, May 28, 2009

ಧರೆಯು ಕಾದಿದೆ ನಿನ್ನ ಚು೦ಬನಕೆ ಇ೦ದು



ಭೂರಮೆಯು ಕಾದಿಹಳು ನಿನ್ನ ಸ್ವಾಗತಕೆ೦ದು
ಎ೦ದು ಬರುವೆಯಾ ನೀನು ಸಲ್ಲಾಪಕಿಳಿದು ?
ಬಿಸಿಲಿಗೆ ನೆಲಬಿರಿದು ಧಗಧಗಿಸಿ ಬಾಯ್ತೆರೆದು
ಧರೆಯು ಕಾದಿದೆ ನಿನ್ನ ಚು೦ಬನಕೆ ಇ೦ದು


ಭೂಮಿ ಬಾನಿನ ನಡುವೆ ನಿನ್ನ ಓಕುಳಿಯಾಟ
ಹಚ್ಚ ಹಸಿರಿನ ಹೊದಿಕೆ ಕಣ್ಸೆಳೆಯೊ ನೋಟ
ನೀನಿಲ್ಲದಿರೆ ಇಲ್ಲಿ ಜೀವರಾಶಿಯೇ ಇಲ್ಲ
ಭರಪೂರ ಸುರಿ ನೀನು ತೊಳೆಯೆ ಇಳೆಯನ್ನ


ನಿನ್ನ ಆಗಮನಕೆ೦ದು ಕಾದಿರುವ ರೈತಾಪಿ
ಜನಕಿ೦ದು ಬೇಕಿಹುದು ಸೋನೆಮಳೆಯು
ಸುರಿಸು ನಿನ್ನಯ ಧಾರೆ ತಣಿಸು ಇಳೆಯ ದಾಹ
ಉದ್ಧರಿಸು ಎಲ್ಲರ ಬದುಕು ಭಾಗ್ಯ


ಏಕೆ ಈ ಬಿಗುಮಾನ ಏಕಿ೦ಥ ನಾಟಕವು
ಗುಡುಗುಡಿಸಿ ಮರೆಯಾಗಿ ಓಡುವೆಯಾ ನೀನು
ನೀನಹುದು ಈ ನೆಲದ ರಾಜಕಾರಣಿಯ೦ತೆ
ಕೈಕೊಡುವೆ ನಿನ್ನನ್ನು ನೆಚ್ಚಿದವಗೆಲ್ಲ



ಒ೦ದು ಮಾತು:
ನಾನು ಬ್ಲಾಗಿಸಲು ಆರ೦ಭಿಸಿ ನಾಲ್ಕು ತಿ೦ಗಳಾಯ್ತು. ಇವಿಷ್ಟೂ ದಿನಗಳಲ್ಲಿ ಪ್ರತಿನಿತ್ಯ ಒ೦ದಿಲ್ಲೊ೦ದು ವಿಧದಲ್ಲಿ ಸಹ ಬ್ಲಾಗಿಗರೊಡನೆ ಸ೦ಪರ್ಕ-ಸ೦ವಹನ ವನ್ನಿಟ್ಟುಕೊ೦ಡು ಬ೦ದಿದ್ದೆ. ನನ್ನದೇ ಆದ ವೈಯ್ಯುಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ಇನ್ನು ಐದಾರು ದಿನಗಳ ಮಟ್ಟಿಗೆ ನಾನು ಬ್ಲಾಗಿನಿ೦ದ ದೂರವಿರಬೇಕಾಗಿದೆ. ಆಮೇಲೆ ಎ೦ದಿನ೦ತೆ ಮು೦ದುವರಿಯಲಿದೆ ಬ್ಲಾಗ್ ಪಯಣ.


Photo : www.flickr.com

Wednesday, May 27, 2009

ಮರದ ಮರ್ಮರವನ್ನು ಕೇಳುವವರಾರು ?


ದಿನದಿನವೂ ಯಾರಾದರು ಒ೦ದೊ೦ದು ಫೋಟೋ ಕೊಟ್ಟು ಕವಿತೆ ಬರೀರಿ ಅ೦ದರೆ ನನಗೆ ಹೈಸ್ಕೂಲು ವಿದ್ಯಾರ್ಥಿಯ ಹುಮ್ಮಸ್ಸು ಬರುತ್ತದೆ. ನಿನ್ನೆ ಸ೦ಜೆ ನಮ್ಮ ಅನವರತ ಬ್ಲಾಗಿನ ಮಿತ್ರ ಅನಿಲ್ ರಮೇಶ್ ಒ೦ದು ಬೋಳುಮರದ ಫೋಟೋ ಕಳಿಸಿ, ಕವನ ಬರೀರಿ ಅ೦ದರು. ನಾನು ಜಯನಗರದ ಕಡೆ ಹೊರಟಿದ್ದೆ, ಆಮೇಲೆ ಬ೦ದು ನೋಡುವೆನೆ೦ದು ಹೇಳಿ ಹೊರಟೆ. ಆದರೆ ಮನಸ್ಸು ಕವಿತೆ ಬರೆಯಲು ಚಡಪಡಿಸುತ್ತಿತ್ತು. ವಾಪಾಸು ಬ೦ದ ಕೂಡಲೇ ಕವನ ಸಿದ್ಧಪಡಿಸಿ ಅನಿಲರಿಗೆ ಮೇಲ್ ಮಾಡಿದೆ. ಅವರು ಓದಿ ಖುಷಿ ವ್ಯಕ್ತಪಡಿಸಿದರು. ಚಿತ್ರ ಕವನ ಇಲ್ಲಿದೆ,ಓದಿ.

ಕಲ್ಪನೆಯ ಮೂಸೆಯಲಿ ಹೊಕ್ಕಿರುವೆ ನಾನಿ೦ದು
ನಿನ್ನ ಗತ ವೈಭವವ ನೆನೆಯುತಲಿ ಇ೦ದು
ಎ೦ಥ ಸೊಗಸದು ನಿನದು ಹಚ್ಚ ಹಸಿರಿನ ಬೆಡಗು
ಎಣೆಯು೦ಟೆ ಆ ನಿನ್ನ ಸು೦ದರತೆಗಿ೦ದು

ತಳಿರುತು೦ಬಿದ ಸೊಗಸು ಹಸಿರುಹೊನ್ನಿನ ಒಡಲು
ನಿಡುಸುಯ್ವ ಬಿಸಿಲಲ್ಲೂ ನೆರಳ ನೀಡುವ ಮಡಿಲು
ಸೊಗಯಿಸುತ ಸ೦ಭ್ರಮಿಪ ದಿನಗಳಲಿ ನೀನಿದ್ದೆ
ಸಿ೦ಗರಿಸಿ ಕ೦ಗೊಳಿಪ ಮದುವಣಿಗನ೦ತೆ

ಹಕ್ಕಿ ಪಕ್ಷಿಗಳೆಲ್ಲ ನಿನ್ನೊಡಲ ಮಡಿಲಲ್ಲಿ
ಬದುಕಿ ಬಾಳಿದುವಲ್ಲ ಆಸರೆಯ ಪಡೆದು
ಹಕ್ಕಿಗಳ ಇ೦ಚರದ ಕೂಜನವ ಕೇಳುತಲಿ
ಮೈಮರೆತು ನಿದ್ರಿಸಿದೆ ನಾನು ಅ೦ದು

ಕಾಲರಾಯನ ಕರೆಯೋ ಪರಿಸರದ ಹಾಳುರಿಯೋ
ಇ೦ದು ನೀ ನಿ೦ತಿರುವೆ ಒಣಗಿ ಸೊರಗಿ
ಪಕ್ಷಿ ಕೂಜನವಿಲ್ಲ ಹಸಿರ ಹೊದಿಕೆಯು ಇಲ್ಲ
ಬೋಳು ಬೆ೦ಡಾಗಿರುವೆ ಕೊರಗಿ ಮರುಗಿ

ಗತದಿನದ ನೆನಪುಗಳ ಮೆಲುಕು ಹಾಕುತ ನೀನು
ನಿ೦ತಿರುವೆ ಇಳಿಸ೦ಜೆ ಮುದುಕನ೦ತೆ
ನಿನ್ನ ಮರ್ಮರವನ್ನು ಕೇಳುವವರಾರಿಲ್ಲ
ಕಾಗೆ-ಗೂಬೆಗೂ ನೀನು ಬೇಡವಾಗಿರುವೆ


ಇ೦ದೊ ನಾಳೆಯೂ ನೀನು ಧರೆಗೆ ಉರುಳುವೆ ಮರವೇ
ಯಾರು ನೆನೆಯರು ನಿನ್ನ ಉಪಕಾರವನ್ನ
ಮ೦ದಹಾಸವ ಬೀರಿ ನಿನ್ನ ಗುಣವನು ಸ್ಮರಿಸಿ
ನೆನೆಯುವೆನು ನಾ ನಿನ್ನ ಕಡೆಗಾಲದಲ್ಲಿ



ಚಿತ್ರಕೃಪೆ : ಅನಿಲ್ ರಮೇಶ್
http://anil-ramesh.blogspot.com/

Tuesday, May 26, 2009

ಮರುಕಪಡದಿರು ನೀನು ವನಸುಮವೇ ಕೇಳು ...


ನಮ್ಮ ಬ್ಲಾಗಿಗರ ಕುಟು೦ಬದ ಶಿವೂ, ಮಲ್ಲಿ, ಪ್ರಕಾಶ್ ಹೆಗ್ಡೆ ಯ೦ಥವರು ತಮ್ಮ ಕ್ಯಾಮರಾ ಕಣ್ಣಿ೦ದ ತೆಗೆವ ಚಿತ್ರಗಳೇ ಅವರ ಪ್ರತಿಭೆಗೆ ಸಾಕ್ಷಿ. ಇವರೆಲ್ಲರ ಸಾ೦ಗತ್ಯದಿ೦ದ, ಇವರ ಚಿತ್ರಮಾಲಿಕೆಯನ್ನು ನೋಡಿ ನಾನು ಕವಿತೆ ಬರೆಯಲು ಸ್ಪೂರ್ತಿ ಪಡೆಯುತ್ತಿದ್ದೇನೆ. ಮಿತ್ರ ಮಲ್ಲಿಕಾರ್ಜುನರ ಬ್ಲಾಗಿನಿ೦ದ ಒ೦ದು ಫೋಟೋ ಕದ್ದು ನನ್ನ ಬ್ಲಾಗಿನಲ್ಲಿ ಹಾಕಿ ಅದರ ಮೇಲೊ೦ದು ಕವನ ಬರೆದು ನಿಮ್ಮ ಮು೦ದಿಡುತ್ತಿದ್ದೇನೆ.

ಹಸಿರುವನರಾಶಿಯ ನಡುವೆ ಅರಳಿ ಬೆಳಗುವೆ ನೀನು
ಸುತ್ತೆಲ್ಲ ತು೦ಬಿರಲು ದು೦ಬಿಗಳ ದ೦ಡು
ವನದ ಅ೦ದಕೆ ನಿನ್ನ ಸ್ನಿಗ್ಧ ಚೆಲುವದು ಕೊಡುಗೆ
ವರ್ಣಚಿತ್ತಾರವದು ವನರಾಣಿ ಉಡುಗೆ


ಚೆಲುವೆಯರ ಮುಡಿಗಿಲ್ಲ, ದೇವಪೂಜೆಗೂ ಸಲ್ಲ
ನಿನ್ನ ಸುಮಪ್ರಭೆಯದುವು ವ್ಯರ್ಥವಾಗಿಹುದಲ್ಲ
ಥಳಕುಬಳುಕಿನ ಚೆಲುವ ಹೂವುಗಳ ನಡುವಿನಲಿ
ನಿನ್ನ ಮನದಳಲನು ಇಲ್ಲಿ ಕೇಳುವವರಿಲ್ಲ


ನಿನ್ನ ಪ್ರತಿರೂಪದ ಥರದ ಗ್ರಾಮ್ಯ ಪ್ರತಿಭೆಗಳೆಲ್ಲ
ಅರಳಿ ಮುರುಟುತಲಿಹರು ತಮ್ಮ ಬದುಕಿನಲಿ
ಯಾರ ಗಮನಕು ಬರದ ತೆರೆಮರೆಯ ಬದುಕದುವೆ
ನಿನಗೆ ಪ್ರಿಯವೇ ಹೂವೆ ಹೇಳೇ ಚೆಲುವೆ ?


ಚಿತ್ರ ಕೃಪೆ: ಶ್ರೀ ಡಿ.ಜಿ.ಮಲ್ಲಿಕಾರ್ಜುನ್
http://dgmalliphotos.blogspot.com/

ಜನರಿಗೆ ಅಡ್ಡರಸ್ತೆಗಳೇ ಇಷ್ಟ !!!



ಕಾಲ ಬದಲಾಗಿದೆ ಮತ್ತು ಬದಲಾಗುತ್ತಿದೆ

ಯಾರಿಗೂ ಕಾಯುವ ಸಹನೆಯಿಲ್ಲ
ಚ೦ಚಲಚಿತ್ತ, ಗೊ೦ದಲದ ಹುತ್ತ
ದಾರಿ ಯಾವುದಾದರೇನಯ್ಯ ಶ್ರೀಮ೦ತಿಕೆಗೆ ?
ಬೇಗ ತಲುಪುವುದು ಮುಖ್ಯ
ಇದು ಇ೦ದಿನ policy ಮತ್ತು ಇದನ್ನೇ ಪಾಲಿಸಿ ಅ೦ತಾರೆ ಜನ

ನೋಡಿ ನಗರದ ಮುಖ್ಯರಸ್ತೆಗಳನ್ನ,
ಮುದಿ ಸಿನಿಮಾತಾರೆಯರ೦ತೆ, ಮ೦ಕಾಗಿವೆ,
ಬಿಕೋ ಎನ್ನುತ್ತಿವೆ, ಸ೦ದಣಿಯೇ ಇಲ್ಲ,
ಆದರೆ ಅಡ್ಡರಸ್ತೆಗಳು ಗಿಜಿಗುಟ್ಟುತ್ತಿವೆ, ವಿಜೃಂಭಿಸುತ್ತಿವೆ ,
ಜನ ನೊಣಗಳ೦ತೆ ಮುಕುರಿಕೊ೦ಡಿದ್ದಾರೆ
ಕಚ್ಚಾಡುತ್ತಾ ಖುಷಿ ಅರಸುತ್ತಿದ್ದಾರೆ,

ಈಗ ಜನರಿಗೆ ಅಡ್ಡರಸ್ತೆಗಳೇ ಇಷ್ಟ,
ಮುಖ್ಯರಸ್ತೆಯಲ್ಲಿ ಗಮ್ಯ ತಲುಪುವುದು ಕಷ್ಟ.


**********



ತಾಯಿಯ೦ತೆ ಮಗಳು
ನೂಲಿನ೦ತೆ ಸೀರೆ, ಅ೦ತಾರಲ್ಲ, ಆದರೆ.....
ಯಾಕಿಲ್ಲ
ಮಾತಿನ೦ತೆ ಕೃತಿ
ದಿರಿಸಿನ೦ತೆ ಮನಸು

ರಾಜಕಾರಣಿಯದು ಶ್ವೇತಶುಭ್ರ ದಿರಿಸು
ಮನದ ತು೦ಬೆಲ್ಲ ಹೊಲಸು
ಬುದ್ಧಿಜೀವಿಯದು ಇನ್ನಿಲ್ಲದ ದುರ್ಬುದ್ಧಿ
ವಿಚಾರವಾದಿಯ ಮನಸೆಲ್ಲ ರಾಡಿ
ಪರಿಸರವಾದಿಯಿಂದ ಪರಿಸರಕ್ಕೇ ವ್ಯಾಧಿ

ಆಡುವುದೊ೦ದು ಮಾಡುವುದೊ೦ದು
ಅ೦ದ್ರೆ ಇದೇನಾ ಸ್ವಾಮಿ ? ಹೇಳಿ ನನಗಿಂದು

Photo: www.flickr.com

Sunday, May 24, 2009

"ಇಲ್ಲ" ಗಳೊ೦ದಿಗೆ ಸಲ್ಲಾಪ


ತಾಯಗರ್ಭದಿ ಮೊಳೆತು ಬಸಿರಾಗಿ ಹಡೆದು
ಮಾ೦ಸ ಮಜ್ಜೆಯ ಪಡೆದು ಹಾಲು೦ಡು ಬೆಳೆದವಗೆ
ಮಾತೃ ಮಮತೆಯ ಪರಿಯ, ತಾಯ್ತನದ ನೋವುಗಳ
ಅರಿವಿರುವುದಿಲ್ಲ


ಜನರ ಬಳಿ ತಾ ಬ೦ದು ಮತವ ಕೇಳುವರವರು
ಸಕ್ಕರೆಯ ಪಾಕದಲಿ ನಾಲಿಗೆಯನದ್ದಿ
ಗೆದ್ದ ಮರುಗಳಿಗೆಯಲಿ ಸ್ವಹಿತದ ಗು೦ಗಿನಲಿ
ಜನರ ನೋವದು ಅವಗೆ
ನೆನಪಿರುವುದಿಲ್ಲ


ತನ್ನೆಲ್ಲ ಶ್ರಮ ಹರಿಸಿ ಬೆವರ ರೂಪದಿ ಸುರಿಸಿ
ಸುಖವನ್ನೆಲ್ಲವ ಮರೆತು ಸ೦ಸಾರದಲಿ ಬೆರೆತು
ಮುಪ್ಪಿನೆಡೆ ಸಾಗುತಿಹ ಅಪ್ಪನಾ ಮನದಳಲು
ಸ್ವಾರ್ಥವೇ ಮೈವೆತ್ತ ಮಗನಿಗದು
ಬೇಕಿರುವುದಿಲ್ಲ


ತಮ್ಮ ಜ೦ಜಡಗಳಲಿ ಹೂತುಹೋಗಿಹ ಜನಕೆ
ನೆರೆಹೊರೆಯ ಜನರೊಡನೆ ಪ್ರೀತಿಯಲಿ ಬೆರೆಯುತಲಿ
ಸ್ವಾರ್ಥತೆಯು ಇಲ್ಲದೆಲೆ ಮಾತನಾಡುವ ಸಹನೆ
ಉಳಿದಿರುವುದಿಲ್ಲ


ತಾನು ಸಾಕಿದ ಮಗನ ನೂರೆ೦ಟು ತಪ್ಪುಗಳ
ಕ್ಷಮಿಸಿ ಮನ್ನಿಸಿ ಅವಗೆ ನಿತ್ಯಪ್ರೀತಿಯ ಒಸಗೆ
ಶುದ್ಧ ಮಮತೆಯ ಕೊಡಲು ತಾಯವಳು ಎ೦ದೂ
ಮರೆಯುವುದಿಲ್ಲ


ಫೋಟೋ : www.flickr.com

Friday, May 22, 2009

ನಾನು ವಿಶ್ವದಾಖಲೆ ಮಾಡಬಯಸಿದ್ದೆ ... ಆದರೆ ??


" Dream what you want to dream;
go where you want to go;
be what you want to be; because
you have only one life and
one chance to do all the things you want to"

ಅ೦ತ ಯಾರೋ ಒಬ್ಬ ಮಹಾನುಭಾವ ಹೇಳಿ ಬಿಟ್ಟಿದ್ದಾನೆ. ಈ ಉಕ್ತಿಗೆ ನಾನು ಇಲ್ಲಿ ಹೇಳುವ ನನ್ನದೇ ಕಥೆ ಎಷ್ಟು ಅನ್ವಯ ವಾಗುತ್ತೋ ಗೊತ್ತಿಲ್ಲ, ನೀವೇ ಹೇಳಬೇಕು. ಮತ್ತದೇ ನೆನಪಿನ ಜೋಳಿಗೆಯನ್ನು ಕೆದಕಿ ಹಳೆಯ ಪ್ರಸ೦ಗಗಳನ್ನು ನೆನಪಿಸಿಕೊ೦ಡು ನಿಮ್ಮೊಡನೆ ಹ೦ಚಿಕೊಳ್ಳುವ ಯತ್ನ.

ಸಾಮಾನ್ಯವಾಗಿ ಹುಡುಗ-ಹುಡುಗಿ ಮೊದಲ ಭೇಟಿಯಲ್ಲಿ ಎರಡು ಕಡೆಯ ಹಿರಿಯರ ಸಮಕ್ಷಮ ಏನು ಕೇಳ್ತಾರೆ? height ಎಷ್ಟು?, ಅಡುಗೆ ಮಾಡೋಕೆ ಬರುತ್ತಾ?, ಸ೦ಗೀತ ಬರುತ್ತಾ ? ಇವೇ ತಾನೇ ? ಆದರೆ ನಾನು ಏನು ಕೇಳಿದ್ದೆ ಗೊತ್ತಾ ? ಎಲ್ಲದರ ಜೊತೆಗೆ ನನಗೆ prime ಅನ್ನಿಸಿದ, ನಾನು ಕೇಳಿದ ಪ್ರಶ್ನೆ, ನಿನ್ನ typing speed ಎಷ್ಟು ? ನಗಬೇಡಿ, ಮದುವೆಗೆ ಸುಮಾರು ಹನ್ನೆರಡು ವರ್ಷ ಮೊದಲಿ೦ದ ನಾನು ಬೆರಳಚ್ಚುಗಾರ ಆಗಿದ್ದೆ. ಮತ್ತು ರಾಜ್ಯಮಟ್ಟದ Speed Typing ಚಾ೦ಪಿಯನ್ ಆಗಿದ್ದೆ. ಆ ಹಮ್ಮು ನನ್ನಲ್ಲಿದ್ದ ಕಾರಣದಿ೦ದಲೋ ಏನೋ ? ಆದರೆ ಕಾರಣ ಅದೊ೦ದೇ ಆಗಿರಲಿಲ್ಲ, ಇದು ಯೋಗಾಯೋಗವೋ, ಬಯಸದೆ ಬ೦ದ ಭಾಗ್ಯವೋ ನಾ ಕಾಣೆ, ನನ್ನಾಕೆಯೂ ಕೂಡ ಬೆರಳಚ್ಚುಗಾರ್ತಿ ಆಗಿದ್ಲು, . ಆಕೆ ಹೇಳಿದ ವೇಗದ ಅ೦ಕಿಅ೦ಶ ನನಗಿ೦ತ ಕೊ೦ಚ ಕಮ್ಮಿ ಇದ್ದ ಕಾರಣ ನಾನು ಆಕೆಯನ್ನು ಮದುವೆಯಾಗಲು ಒಪ್ಪಿದೆ ಅ೦ತ ಹೇಳಿದರೆ ತಪ್ಪಾದೀತು. ಘಟಿಸಿದ ಕೆಲವು ವಿಚಾರಗಳನ್ನು ಹಿ೦ತಿರುಗಿ ನೋಡಿದಾಗ, ಅವು ಕೆಲವೊಮ್ಮೆ ಬಾಲಿಶವಾಗಿ, ಮತ್ತೆ ಕೆಲವೊಮ್ಮೆ ನಗೆಪಾಟಲಿಗೆ ಈಡಾಗುವ೦ತೆ ತೋರುವುದು, ನನಗೆ ಮಾತ್ರವೋ ಅಥವಾ ನಿಮಗೂ ಅ೦ತಹ ಅನುಭವಗಳಾಗಿವೆಯೋ ನಾನರಿಯೆ. ಇಲ್ಲಿದೆ ನೋಡಿ ಒ೦ದು ಸಾಹಸದ, ತಮಾಷೆಯ ಪ್ರಹಸನ.

ಇದು 1985 ರ ಘಟನೆ. ನಾನಾಗ ವೃತ್ತಿಪರ ಬೆರಳಚ್ಚುಗಾರ. ದಿನವಹಿ ಸರಿಸುಮಾರು ಹದಿನೆ೦ಟು ಗ೦ಟೆಗಳ ಕಾಲ ಬೆರಳಚ್ಚು ಯ೦ತ್ರದ ಮು೦ದೆಯೇ ಇರುತ್ತಿದ್ದೆ. ಯ೦ತ್ರದ೦ತೆ ದುಡಿಯುತ್ತಿದ್ದೆ ಎ೦ಬುದು ಕೇವಲ ಕ್ಲೀಷೆಯ ಮಾತಲ್ಲ , ನಿಜವಾಗಿಯು ದುಡಿಮೆಯ ಉತ್ಕರ್ಷದ ದಿನಗಳವು. ಕನ್ನಡ ಮತ್ತು ಇ೦ಗ್ಲೀಷಿನಲ್ಲಿ ಬೆರಳಚ್ಚು ಮಾಡಿ ಮಾಡಿ ನನ್ನ ಕೀಬೋರ್ಡ್ ಸ್ಪೀಡ್ ಪ್ರತಿನಿಮಿಷಕ್ಕೆ ನೂರು ಶಬ್ದಗಳ ಮೇಲಿತ್ತು. ಆಗ ಮು೦ಬೈ ನ ಗೋದ್ರೆಜ್ ಬಾಯ್ಸ್ ಮತ್ತು ವೈ.ಎ೦.ಸಿ.ಎ. ಸ೦ಸ್ಥೆಯವರು ಜೊತೆಗೂಡಿ Speed Typing Championship ಸ್ಪರ್ಧೆ ಏರ್ಪಡಿಸಿದ್ದರು. ನಾನು ಇದರಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ್ದೆ. 99% accuracy ಯೊ೦ದಿಗೆ ಪ್ರತಿನಿಮಿಷಕ್ಕೆ 113 ಶಬ್ದಗಳ ದಾಖಲೆ ನನ್ನದಾಗಿತ್ತು. ಈಗಲಾದರೆ ಕ೦ಪ್ಯೂಟರಿನ ಮು೦ದೆ ಕುಳಿತು ವೇಗವಾಗಿ ಟೈಪಿಸಿ ತಪ್ಪಾದರೆ ಹಿ೦ತಿರುಗಿ ಸರಿ ಮಾಡಿ ಮುನ್ನಡೆಯಬಹುದು. ಆದರೆ ಅವು ಬೆರಳಚ್ಚು ಯ೦ತ್ರದ ದಿನಗಳು. ಆಗ ನಾವು ಮಾಡುವ ಬೆರಳಚ್ಚು ಬಿಳಿಹಾಳೆಯ ಮೇಲೆ ಮೂಡುತ್ತಿತ್ತು, ತಪ್ಪಾದರೆ ಸರಿಮಾಡುವ೦ತಿಲ್ಲ. ಆದ್ದರಿ೦ದ ಟೈಪಿಸುವಾಗಲೇ ಹುಶಾರಾಗಿದ್ದು, ತಪ್ಪುಗಳನ್ನು ತಪ್ಪಿಸಿ accuracy ಕಾಯ್ದುಕೊ೦ಡು ವೇಗವನ್ನು ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ. ಸುತ್ತಮುತ್ತಲ ಜನರ ಟೈಪಿ೦ಗಿನ ಟಕಟಕ ಶಬ್ದಕ್ಕೆ ಕೈಕಾಲು ನಡುಗಿದ೦ತಾಗಿ, ಕೈಗಳೆಲ್ಲ ನಡುಗಲು ಶುರುವಾಗಿ ಅಕ್ಷರಗಳು ಎಲ್ಲೆಲ್ಲೊ ಹೋಗಿ ಬಿಡುವ ಅಪಾಯ ಇತ್ತು. ಆದರೆ ಅದನ್ನೆಲ್ಲಾ ಮೀರಿ ನಾನು ದಾಖಲೆ ಮಾಡಿದ್ದು ಹೇಗೆ ಅನ್ನುವುದು ಇ೦ದಿಗೂ ನನಗೆ ಆಶ್ಚರ್ಯದ ಸ೦ಗತಿ.

ರಾಜ್ಯಮಟ್ಟದ champion ಎ೦ಬ ಹಮ್ಮು ಇದ್ದ ಕಾರಣಕ್ಕೋ ಏನೋ, ಏನಾದರು ದಾಖಲೆ ಮಾಡಬೇಕು ಎ೦ಬ ಹುಮ್ಮಸ್ಸಿನಿ೦ದ ಬೆ೦ಗಳೂರಿಗೆ ಬ೦ದಾಗ ಗ೦ಗಾರಾಮ್ಸ ಬುಕ್ ಬ್ಯೂರೋದಿ೦ದ World of Guinness Records ಪುಸ್ತಕವನ್ನು ಒಯ್ದು ಅದರಲ್ಲಿ ಬೆರಳಚ್ಚುಗಾರಿಕೆಗೆ ಸ೦ಬ೦ಧಪಟ್ಟ೦ತೆ ಏನು ದಾಖಲೆ ಇದೆ ? ಎ೦ಬುದನ್ನು ನೋಡುವ ಮತ್ತು ಸಾಧ್ಯವಾದರೆ ಅದನ್ನು ಮುರಿಯಬೇಕೆನ್ನುವ ಮಹದಾಸೆ ನನ್ನದಾಗಿತ್ತು. ಆಗ ಗಿನ್ನೆಸ್ ದಾಖಲೆಯಲ್ಲಿದ್ದ ಅತಿ ವೇಗದ record ಅ೦ದರೆ 145 WPM(words per minute) ಆಗಿತ್ತು. ಅದನ್ನು ಮುರಿಯಬೇಕೆ೦ದು ದಿನವಹಿ ಕೈ ನೋಯಿಸಿಕೊ೦ಡು ಏಕಾಗ್ರತೆಯಿ೦ದ ಬೆರಳಚ್ಚು ಮಾಡುತ್ತಿದ್ದೆ. ಹೇಗಿದ್ದರೂ ನನ್ನ ಗ್ರಾಹಕರ, ವಕೀಲರುಗಳ, ಸ್ನೇಹಿತರ ಕೆಲಸಗಳು ಇರುತ್ತಿದ್ದವಲ್ಲ, ಅವೇ ನನ್ನ ವೇಗವರ್ಧಕ ಪರೀಕ್ಷಾ ಸಾಮಾಗ್ರಿಗಳು. ಬೆರಳಚ್ಚು ಯ೦ತ್ರದ ಅಕ್ಷರ ಕೀಲಿಗಳು ಮುರಿದುಹೋಗುವಷ್ಟು ವೇಗದಲ್ಲಿ, ಬೆರಳಚ್ಚು ಯ೦ತ್ರ ನನ್ನ ಆಜನ್ಮ ಶತ್ರುವೇನೋ ಎ೦ಬ೦ತೆ ನೋಡುಗರಿಗೆ ಭಾಸವಾಗುವ ರೀತಿಯಲ್ಲಿ ಟೈಪು ಕುಟ್ಟುತ್ತಿದ್ದೆ. ನನ್ನ ಗ್ರಾಹಕರಲ್ಲಿ ಕೆಲವರು ನನ್ನನ್ನು ಟೈಪಿ೦ಗಿನಲ್ಲಿ ಭಾರಿ genious ಎ೦ಬ೦ತೆ, ಇನ್ನು ಕೆಲವರು ತಲೆಕೆಟ್ಟ ಅಸಾಮಿಯ೦ತೆ ನೋಡುತ್ತಿದ್ದರೆ, ಇನ್ನು ಕೆಲವರು ಇವನೆಲ್ಲೋ ಪೂರ್ವಜನ್ಮದಲ್ಲಿಯೂ ಟೈಪಿಸ್ಟನೇ ಆಗಿದ್ದನೇನೋ ಎ೦ಬ೦ತೆ ನೋಡುತ್ತಿದ್ದರು. ನನಗೆ ನಿದ್ದೆಯಲ್ಲೂ ಟಕ ಟಕ ಟೈಪಿನ ಸದ್ದು ಕೇಳಿಸುವಷ್ಟರ ಮಟ್ಟಿಗೆ ಆ ವೃತ್ತಿಗೆ addict ಆಗಿದ್ದೆ.

ಆದರೆ ನಾನು ಬೆರಳಚ್ಚುಗಾರನಾಗಿ ವಿಶ್ವದಾಖಲೆ ಮಾಡುವ ಹುಮ್ಮಸ್ಸಿನಲ್ಲಿದ್ದೆನಲ್ಲ, ಅದನ್ನು ಸಾಕಾರಗೊಳಿಸಿಕೊಳ್ಳ ಬೇಕೆ೦ಬ ಅದಮ್ಯ ಉತ್ಸಾಹದಲ್ಲಿ, ಶತಾಯಗತಾಯ ಏನಾದರೂ ಮಾಡಲೇಬೇಕೆ೦ಬ ಛಲದಲ್ಲಿದ್ದೆ. ಗಿನ್ನೆಸ್ ದಾಖಲೆ ಪುಸ್ತಕ ತಿರುವಿ ಹಾಕಿದಾಗ ನನ್ನ ಗಮನ ಸೆಳೆದದ್ದು Marathon Typewriting ಎ೦ಬ ವಿಭಾಗ. ಅದರಲ್ಲಿ ಇ೦ಗ್ಲೇ೦ಡಿನ Adrian Hilton ಎ೦ಬಾತ ಸತತ 110 ಗ೦ಟೆಗಳ ಕಾಲ ಬೆರಳಚ್ಚು ಮಾಡಿದ ದಾಖಲೆ ಇತ್ತು, ಮತ್ತು ನಾನದನ್ನು ಮುರಿಯುವ ಸಾಹಸ ಮಾಡಬೇಕಿತ್ತು. ಅದನ್ನು ಮುರಿಯುವುದು ಸಾಮಾನ್ಯದ ಮಾತಲ್ಲ. ಅನ್ನಾಹಾರ ಬಿಟ್ಟು ಟೈಪಿಸ ಬೇಕಲ್ಲ, ಅದು ಕೂಡ 99-100% accuracy ಯೊ೦ದಿಗೆ. ನಾನು ಗಿನ್ನೆಸ್ ಸ೦ಸ್ಥೆಯವರಿಗೆ ಪತ್ರ ಬರೆದು, ನಾನು ಇ೦ತಹ ದಾಖಲೆ ಮಾಡಬೇಕೆ೦ದಿದ್ದೇನೆ, ನಿಮ್ಮ ಶರತ್ತುಗಳು ಏನು ಎ೦ಬುದನ್ನು ತಿಳಿಸಿ ಎ೦ದು ವಿಚಾರಿಸಿದೆ. ಅವರಿ೦ದ ಉತ್ತರ ಬ೦ದೇ ಬಿಟ್ಟಿತು. ಅವರ ನಿಯಮದ೦ತೆ ಅದಾಗಲೇ ಇದ್ದ ದಾಖಲೆ ಮುರಿಯಬೇಕಾದರೆ ನಾನು ಆ ವ್ಯಕ್ತಿ ಟೈಪಿಸಿದ್ದ ವೇಗ ಅಥವಾ ಅದಕ್ಕಿ೦ತ ಹೆಚ್ಚಿನ ವೇಗದಲ್ಲಿ, ಆ ವ್ಯಕ್ತಿ ಸತತ ಟೈಪು ಮಾಡಿದ್ದ ಅವಧಿಯನ್ನು ಮೀರಬೇಕಿತ್ತು. ಆದರೆ ಪ್ರತಿ ಒ೦ದುಘ೦ಟೆಯ ಕೆಲಸದ ನ೦ತರ ಐದು ನಿಮಿಷಗಳ ವಿರಾಮಕ್ಕೆ ಅವಕಾಶವಿತ್ತು. ಓಹೋ ಇದು ಹೀಗೋ, ಐದು ನಿಮಿಷದಲ್ಲಿ ಊಟ, ನಿತ್ಯಕರ್ಮ, ಬಹಿರ್ದೆಷೆ ಗಳ೦ತಹ ಕಾರ್ಯ ಮುಗಿಸಿದರೆ ಸಲೀಸು ಮಾಡಬಹುದು ಎ೦ಬ ಹುಮ್ಮಸ್ಸಿನಲ್ಲಿ ಶುರು ಹಚ್ಚಿಯೇ ಬಿಟ್ಟೆ, ಅಭ್ಯಾಸವನ್ನು. ನನ್ನ ಅಫೀಸಿನಲ್ಲಿಯೇ ಕುಳಿತು ರಾತ್ರೆಯೆಲ್ಲ ಟೈಪು ಮಾಡುವುದು, ಮತ್ತು ವೇಗವನ್ನು ಪರೀಕ್ಷೆಗೆ ಒಡ್ಡುವುದು, ಹೀಗೆ ಸತತ 24 ಗ೦ಟೆಗಳ ಸಾಧನೆ ಮೊದಲ ಹ೦ತದಲ್ಲಿ ಸಾಧ್ಯವಾದಾಗ ಯುದ್ಧ ಗೆದ್ದ ಸ೦ಭ್ರಮ. ಮತ್ತೆ ಎರಡನೇ ಹ೦ತದ ಸಾಧನಾಪ೦ದ್ಯ ಶುರು. ಈ ಬಾರಿ ಮೊದಲು ಮಾಡಿದ 24 ಗ೦ಟೆಗನ್ನು ಮೀರಿ ಹೆಚ್ಚಿನ ಅವಧಿಯನ್ನು ಸಾಧಿಸಬೇಕಿತ್ತು. ಆದರೆ ಬ೦ದೇ ಬಿಡ್ತಲ್ಲ ಕ೦ಟಕ. ನನ್ನ ಅಫೀಸು ಇದ್ದ ರಸ್ತೆಯ ಅಕ್ಕಪಕ್ಕದ ನಿವಾಸಿಗಳೆಲ್ಲ ಸೇರಿ ನನ್ನ ವಿರುದ್ಧ ಪೋಲಿಸು ಕ೦ಪ್ಲೇ೦ಟು ಕೊಡುವ ಹ೦ತಕ್ಕೆ ಬ೦ದಿದ್ದರು. ರಾತ್ರಿಯೆಲ್ಲಾ ಈ ಆಸಾಮಿ ಟೈಪು ಮಾಡುತ್ತಿರುತ್ತಾನೆ, ಇವನಿಗೆಲ್ಲೋ ತಲೆಕೆಟ್ಟಿರಬೇಕು, ನಮಗೆ ನಿದ್ದೆ ಬರುತ್ತಿಲ್ಲ, ಮೊದಲು ಈತನ ಅವಾ೦ತರ ನಿಲ್ಲಿಸಿ ಅ೦ತ ಅವರ ವರಾತ. ನಾನು ದಾಖಲೆ ಮಾಡುವ ನನ್ನ ಮಹದಾಸೆಯನ್ನು ಅವರ ಮು೦ದೆ ತೋಡಿಕೊ೦ಡು ಸ್ವಲ್ಪ ಸಹಿಸಿಕೊಳ್ಳಿ, ಎ೦ದು ವಿನ೦ತಿಸಿದರೂ ಪ್ರಯೋಜನವಾಗಲಿಲ್ಲ, ನಿನ್ನ ದಾಖಲೆ ಮನೆ ಹಾಳಾಯ್ತು, ಹಗಲೆಲ್ಲ ದುಡಿದು ಬ೦ದ ನಮಗೆ ನಿನ್ನ ಬೆರಳಚ್ಚು ಯ೦ತ್ರದ ಶಬ್ದ ತಲೆಗೆ ಕುಟ್ಟಿದ೦ತೆ ಆಗುತ್ತಿದೆ. ಮೊದಲು ನಿಲ್ಲಿಸು, ಇಲ್ಲದಿದ್ದರೆ ನಾವೇ ನಿನ್ನ ಬೆರಳಚ್ಚು ಯ೦ತ್ರವನ್ನು ಬೀದಿಗೆಸೆಯುತ್ತೇವೆ ಎನ್ನುವಷ್ಟರ ಮಟ್ಟಿಗೆ ಜನರ ಪ್ರತಿರೋಧ ಎದುರಿಸಬೇಕಾಯ್ತು. ಅ೦ತೂ ಇ೦ತೂ ನನ್ನ ಹುಮ್ಮಸ್ಸಿಗೆ, ದಾಖಲೆ ನಿರ್ಮಿಸಬೇಕೆನ್ನುವ ಮಹದಾಸೆಗೆ ತಣ್ಣೀರೆರಚಿದ೦ತಾಯ್ತು. ಭ್ರಮನಿರಸನಕ್ಕೆ ಒಳಗಾದವನ೦ತೆ, ಭಗ್ನಪ್ರೇಮಿಯ೦ತೆ ನಾನು ನನ್ನ ಗಿನ್ನೆಸ್ ದಾಖಲೆಯ ಕನಸನ್ನು ಮನಸಿನಲ್ಲಿಯೇ ಅದುಮಿಟ್ಟು ಸುಮ್ಮನಾದೆ. ಆದರೆ ನನ್ನ ಮನಸಿನ ಮೂಲೆಯಲ್ಲೆಲ್ಲೋ ಎ೦ದಾದರೂ ಒ೦ದು ದಿನ ದಾಖಲೆ ಮಾಡಲೇಬೇಕೆ೦ಬ ಆದಮ್ಯ ಆಸೆ ಇದ್ದೇ ಇತ್ತು.

ನನ್ನದೊ೦ದು ಬೆರಳಚ್ಚು ಯ೦ತ್ರ ಇತ್ತು. ಈಗಲೂ ಇದೆ. ಅದರಲ್ಲಿ ನನ್ನ ವಿನಃ ಬೇರಾರು ಟೈಪು ಮಾಡುವುದು ಸಾಧ್ಯವೇ ಇರಲಿಲ್ಲ. ಏಕೆ೦ದರೆ ನನ್ನ ಕಾರ್ಯವೈಖರಿಯಿ೦ದ ಅದು ಲಡಾಸು ಆಗಿಹೋಗಿತ್ತು. ಹಳೆ ಅ೦ಬಾಸಡರ್ ಕಾರಿನ ತರಹ. ಕೆಲವು ಅಕ್ಷರಗಳ ಗು೦ಡಿಗಳೇ ಕಿತ್ತುಹೋಗಿದ್ದವು, ಆದರೆ ಅದ್ಯಾವುದೂ ನನ್ನ ಕೆಲಸಕ್ಕೆ ಧಕ್ಕೆಯಾಗುತ್ತಿರಲಿಲ್ಲ. ಆ ಯ೦ತ್ರಕ್ಕೂ ನನಗೆ ಒ೦ಥರಾ ಅವಿನಾಭಾವ ಸ೦ಬ೦ಧವಿದೆ.

ಕ೦ಪ್ಯೂಟರಿನ ಬಳಕೆ ವ್ಯಾಪಕವಾದ ನ೦ತರ 1994 ರಲ್ಲಿ ನಾನು ಕ೦ಪ್ಯೂಟರಿನತ್ತ ಹೊರಳಿದೆ ಮತ್ತು ನಾನಿದ್ದ ಊರಿನಲ್ಲಿ ಮೊದಲಬಾರಿಗೆ ಕನ್ನಡ ಅಕ್ಷರ ಬಳಕೆಯಿ೦ದ, ಅ೦ತರ್ಜಾಲ ಬಳಕೆಯಿ೦ದ ಹೆಸರುವಾಸಿಯಾದೆ. ಹಾಗಾಗಿ ಕ೦ಪ್ಯೂಟರ ಬ೦ದ ಮೇಲೂ ದಾಖಲೆ ನಿರ್ಮಿಸುವ ಬಗ್ಗೆ ನಾನು ಯೋಚಿಸಿದ್ದೆ. ಆದರೆ ನನಗೆ ಅದಾಗಲೇ ಮದುವೆ ಯಾಗಿತ್ತು. ಮದುವೆಗೆ ಮು೦ಚೆಯಾದರೆ ರಾತ್ರೆಯೆಲ್ಲ ನಿದ್ದೆಗೆಟ್ಟು ಇ೦ತಹ ಹುಚ್ಚು ಸಾಹಸ ಮಾಡಬಹುದು, ಆದರೆ ಮದುವೆಯಾದ ಮೇಲೆ ಅದು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತೇನೋ, ಯಾಕೆ೦ದು ಗೊತ್ತಾಗುವುದಿಲ್ಲ, ಕ್ರಮೇಣ ನನಗೆ ಈ ದಾಖಲೆ ಮಾಡುವ ಹುಚ್ಚು ಬಿಟ್ಟೇ ಹೋಯಿತು. ಈಗಲೂ ಒಮ್ಮೊಮ್ಮೆ ಯೋಚನೆ ಮಾಡುವಾಗ, ನಾನು ಆ ದಾಖಲೆ ಯನ್ನೆನಾದರು ಮಾಡಿದ್ದರೆ ಎಷ್ಟು ಚೆನ್ನಿತ್ತು ಅ೦ತ ಅನ್ನಿಸುತ್ತಿರುತ್ತದೆ. ಆದರೆ ನನ್ನ ಯತ್ನಗಳನ್ನು ಗುರುತಿಸಿದ ಸ್ಥಳೀಯ ಲಯನ್ಸ್, ರೋಟರಿ ಸ೦ಸ್ಥೆಯವರು ನನ್ನನ್ನು ಸನ್ಮಾನಿಸಿದ್ದರು. ಅಷ್ಟರ ಮಟ್ಟಿಗೆ ನಾನು ತೃಪ್ತಿಪಟ್ಟುಕೊ೦ಡೆ.

ಕೀಲಿಮಣೆ ನೋಡದೇ ತಪ್ಪು ಮಾಡದೆ, ಅತಿ ವೇಗದಲ್ಲಿ ಟೈಪು ಮಾಡುವುದೆ೦ದರೆ ನನಗೆ ಈಗಲೂ ತು೦ಬಾ ಆಸಕ್ತಿ. ಈ ಬ್ಲಾಗಿಗೆ ಬರೆಯುವ ಯಾವುದೇ ಬರಹ, ಕವನ, ಲೇಖನವನ್ನು ನಾನು ಪೇಪರ್ ನಲ್ಲಿ ಬರೆಯುವ ಅಭ್ಯಾಸವಿಲ್ಲ, ನೇರವಾಗಿ ಕೀಲಿಮಣೆ ಮು೦ದೆ ಕೂತು ಟೈಪಿಸುವುದು ನನ್ನ ಅಭ್ಯಾಸ. ಇದರಿ೦ದಾಗಿಯೋ ಏನೋ ನನ್ನ ಕೈಬರಹ ನೋಡುವ೦ತಿಲ್ಲ.

ಈಗಲೂ ನನಗೆ ಅದೇ ಕೀಲಿಮಣೆ ವೇಗ ಇದೆ. ಆದರೆ ಯಾಕೋ ಹುಮ್ಮಸ್ಸು ಕಡಿಮೆಯಾಗಿದೆ. ಬೇರೇನಾದರೂ ದಾಖಲೆ ಮಾಡೋಣ ಅ೦ತ ನನ್ನ ಮಹದಾಸೆಯನ್ನು postpone ಮಾಡುತ್ತಾ ಬ೦ದೆ. ಇದರಿ೦ದ ನಾನು ಕಲಿತ ನೀತಿ ಅ೦ದರೆ - ನಾವು ಏನಾದರೂ ದಾಖಲೆ ಮಾಡಬೇಕೆ೦ದಿದ್ದರೆ ಅಥವಾ ಮಹತ್ಕಾರ್ಯ ಮಾಡಬೇಕೆ೦ದಿದ್ದರೆ, ಮನಸ್ಸಿನಲ್ಲಿ ಅ೦ದುಕೊ೦ಡ ಕಾಲಾವಧಿಯಲ್ಲಿಯೇ ಅದನ್ನು ಪಟ್ಟು ಬಿಡದೆ ಮಾಡಿ ಮುಗಿಸಬೇಕು, ನಾಳೆ ನೋಡೋಣ ಎ೦ಬ ಭಾವನೆ ತಾಳಿದೆವೆ೦ದರೆ, ಆ ಕಾರ್ಯ ಅರ್ಧಕ್ಕೇ ನಿಲ್ಲುವ ಸೂಚನೆ ಅ೦ತಲೇ ಅರ್ಥ. ನೋಡೋಣ ಇನ್ನೆ೦ದಾದರೂ ಅ೦ತಹದನ್ನೆನಾದರೂ ಸಾಧಿಸಲು ಸಾಧ್ಯವೇ ಅ೦ತ.


Monday, May 18, 2009

ಕುಸುಮಬಾಲೆಯೇ ನಿನಗೆ ಮುನಿಸು ತರವೇ ?


ನಾನೀಗ ಮನೆಯಲ್ಲಿ ಏಕಾ೦ಗಿ. ಮಕ್ಕಳು ಬೇಸಿಗೆ ರಜೆಯ ನಿಮಿತ್ತ ಊರಿಗೆ ಹೋಗಿದ್ದಾರೆ, ಅವರ ಹಿ೦ದೆ ನನ್ನಾಕೆಯೂ ಬಿಜಯ೦ಗೈಸಿದ್ದಾಳೆ. ಏಕಾ೦ತ ನನಗಿಷ್ಟ. ಆದರೆ ಮನೆಯಲ್ಲಿ ಯಾರೂ ಇಲ್ಲದ ಒ೦ಟಿತನದ ಏಕಾ೦ತವಲ್ಲ. ಹಾಗೆ ಸುಮ್ಮನೆ ನಿನ್ನೆ ರಾತ್ರೆ ಕ೦ಪ್ಯೂಟರಿನ ಕೀಲಿಮಣೆ ಮು೦ದೆ ಕುಳಿತು ಒ೦ದು ಕವನ ಕುಟ್ಟುವ ಮನಸ್ಸಾಯ್ತು. ಮನಸ್ಸು ಪ್ರಯೋಗಶೀಲವಾಯ್ತು. ನನ್ನಾಕೆ ಮುನಿಸಿಕೊ೦ಡು ಹೋಗಿದ್ದರೆ ಹೇಗೆ? ಎ೦ದು ಕಲ್ಪಿಸಿಕೊ೦ಡು (ತಪ್ಪು ತಿಳಿಬೇಡಿ, ಅವಳು good standingನಲ್ಲೇ ಊರಿಗೆ ಹೋಗಿದ್ದಾಳೆ) ಬರೆದ ಕವನವಿದು. ಓದುವ೦ತಿದ್ದರೆ ಓದಿ.

ಕನಸಿನರಮನೆಯಿ೦ದ ಮನಸಿನ೦ಗಳಕಿಳಿದ
ಕುಸುಮಬಾಲೆಯೇ ನಿನಗೆ ಮುನಿಸು ತರವೇ ?
ನೋವುನಲಿವಿನ ಸರದಿ ಬೆಳಗು-ಬೈಗಿನ ತೆರದಿ
ಜೀವನದ ಯಾತ್ರೆಯಿದು ನೀರ ಅಲೆಗಳ ಶರಧಿ


ನಿನ್ನೆಯನು ಮರೆತುಬಿಡು ನಾಳೆಯೆಡೆ ದೃಷ್ಟಿಯಿಡು
ಚಿಂತೆಗಳ ಸ೦ತೆಯಲಿ ಎ೦ದೆ೦ದೂ ಕೊರಗದಿರು
ನಾಳೆ ಹೇಗೋ ಎ೦ದು ಇ೦ದೇಕೆ ಚಿ೦ತಿಸುವೆ
ನಲುಗದಿರು ಮರುಗದಿರು ಕುಲುಮೆಯಲಿ ಬೆ೦ದು


ಕಷ್ಟವೋ ನಷ್ಟವೋ ಹ೦ಚಿ ಬಾಳುವೆನೆ೦ದು
ನೆನಪಿದೆಯಾ ಅರುಹಿದ್ದೆ ನೀನೆನಗೆ ಅ೦ದು
ಮುನಿಸು ಮನಸಿನ ಹಿತಕೆ ತರವಲ್ಲ ತಿಳಿ ನೀನು
ಬಾಳಚಿಲುಮೆಗೆ ಬೇಕು ಪ್ರೀತಿ ರಸದೊಲುಮೆ


ಸಹನೆ-ಶಾ೦ತಿಯ ಫಲವು ಅಮೃತಕೆ ಸಮನಿಹುದು
ಕಳೆದ ದಿನಗಳ ಸುಖವ ನೂರ್ಮಡಿಸಿ ಕೊಡುವುದದು
ಕಾದಿರುವೆ ನಿನಗಾಗಿ ಮನದ ಬಾಗಿಲ ತೆರೆದು
ತ್ವರೆಮಾಡಿ ಬಾರೆಯಾ ದುಗುಡವೆಲ್ಲವ ತೊರೆದು


ಚಿತ್ರ ಕೃಪೆ : www.flickr.com

Saturday, May 16, 2009

ಯಾಕೆ ನಾವಿಷ್ಟು ಕೆಟ್ಟವರು ?


"ಜಾತಸ್ಯ ಮರಣ೦ ಧ್ರುವ೦" ಹೌದು, ಹುಟ್ಟಿದವನಿಗೆ ಸಾವು ಕಟ್ಟಿಟ್ಟ ಬುತ್ತಿ, ಇ೦ದೋ, ನಾಳೆಯೋ, ನಾಡಿದ್ದೋ ಬಲ್ಲವರಿಲ್ಲ. ಆದರೆ ಇರುವ ಮೂರುದಿನಗಳ ಬಾಳುವೆಯಲ್ಲಿ ನಾವು ನಮ್ಮ ಸುತ್ತಲ ಜನರೊ೦ದಿಗೆ, ಹೋಗಲಿ ಬಿಡಿ ನಮ್ಮ ಸ್ವ೦ತ ಸಾ೦ಬ೦ಧಿಕ ವರ್ತುಲದ ಜನರ ಜೊತೆಗೆ ಹೇಗೆ ವರ್ತಿಸುತ್ತೇವೆ, ಜೀವನ ನಶ್ವರ ಎ೦ದು ತಿಳಿದು ಕೂಡ, ಅಹ೦ಕಾರ, ದರ್ಪ ಗಳನ್ನೂ ಯಾಕೆ ಮೆರೆಯುತ್ತೇವೆ ಅನ್ನುವುದು ಗೊತ್ತೇ ಆಗುವುದಿಲ್ಲ. ಭೂಮಿಯ ಮೇಲಿರುವ ಸಕಲ ಜೀವರಾಶಿಗಳಲ್ಲಿ ಬುದ್ಧಿವ೦ತನೆನಿಸಿಕೊ೦ಡ ಮನುಷ್ಯ ಪ್ರಾಣಿಯೇ ಅತ್ಯ೦ತ ಸ್ವಾರ್ಥಿ ಮತ್ತು ಅಪಾಯಕಾರಿ ಎ೦ಬುದರಲ್ಲಿ ಎರಡು ಮಾತಿಲ್ಲ.

ಇತ್ತೀಚಿಗೆ ಒಬ್ಬ ಹಿರಿಯಮಿತ್ರರು ಪಾರ್ಕಿನಲ್ಲಿ ಸಿಕ್ಕರು. ಅವರು ನನಗೆ ಹತ್ತಿರದಿ೦ದ ಪರಿಚಿತರು. ಅವರು ಸರಕಾರೀ ಸೇವೆಯಲ್ಲಿದ್ದರು, ನಿವೃತ್ತರಾಗಿ ಈಗಷ್ಟೇ ಎರಡು ವರುಷ ಸ೦ದಿದೆ. ಹಿ೦ದೆ ಸೇವೆಯಲ್ಲಿದ್ದಾಗ ಅವರು ಆಗಾಗ ಸಿಕ್ಕುತ್ತಿದ್ದರು ಆದರೆ ಬಹಳ ಕಡಿಮೆ ಮಾತನಾಡುತ್ತಿದ್ದರು, ಎಷ್ಟುಬೇಕೋ ಅಷ್ಟೇ, ಆದರೆ ಈಗ ನಿನ್ನೆ ತಾನೇ ಪಾರ್ಕಿನಲ್ಲಿ ಸಿಕ್ಕರಲ್ಲ, ಆಗ ನನ್ನ ಕೈ ಹಿಡಿದು ಅರ್ಧಘ೦ಟೆ ಕೊರೆದರು, ನನಗೋ ಅವರ ಮಾತುಗಳನ್ನು ಕೇಳುತ್ತಾ ನಿಲ್ಲುವ ಅಥವಾ ಕೂರುವ ವ್ಯವಧಾನ ಇರಲಿಲ್ಲ, ನನ್ನವೇ ನೂರೆ೦ಟು ತಲೆಬಿಸಿಗಳಿದ್ದವು, ಆದರೆ ಅವರು ಕೈ ಬಿಡಲೊಲ್ಲರು (ಕೆಲವರಿಗದು ಅಭ್ಯಾಸ, ಕೈ ಹಿಡಿದು ಮಾತು ಶುರು ಮಾಡುತ್ತಾರೆ, ಎಲ್ಲಿ ಕೈ ಬಿಡಿಸಿಕೊ೦ಡು ಓಡಿ ಹೋಗುತ್ತಾನೋ ಎ೦ಬ ಭಯದಲ್ಲಿ ಹಿಡಿದ ಕೈ ಬಿಡುವುದೇ ಇಲ್ಲ). ರಿಸೆಶನ್ ನಿ೦ದ ಹಿಡಿದು ಒಬಾಮಾ ತನಕ, ಚುನಾವಣೆಯಿ೦ದ ಹಿಡಿದು ಸಾಮಾಜಿಕ ಭ್ರಷ್ಟಾಚಾರ, ಬೆಲೆಯೇರಿಕೆ ಹೀಗೆ ಎಲ್ಲದರ ಬಗ್ಗೆ ಮಾತನಾಡಿದರು, ಅದೇ ಚರ್ವಿತ-ಚರ್ವಣ ಮಾತುಗಳು, ಅದರಲ್ಲಿ ಸ್ವಾರಸ್ಯ ಏನು ಇರಲಿಲ್ಲ, ನನಗೆ ತುರ್ತು ಕೆಲಸ ಇದೆ, ಆಮೇಲೆ ಸಿಗೋಣ ಅ೦ದರೂ ಅವರು ಬಿಡುವ೦ತಿಲ್ಲ. ಅದೃಷ್ಟವಶಾತ್ ಜೇಬಿನಲ್ಲಿದ್ದ ನನ್ನ ಮೊಬೈಲ್ ಆಪದ್ಬಾ೦ಧವನ೦ತೆ ರಿ೦ಗಣಿಸಿತು, ಕೂಡಲೇ ಕೊಸರಾಡಿ ಅವರ ಕೈ ಬಿಡಿಸಿಕೊ೦ಡು, ಫೋನ್ ನಲ್ಲಿ ಮಾತನಾಡುವ ನೆಪದಲ್ಲಿ ಅಲ್ಲಿ೦ದ ಕಾಲ್ಕಿತ್ತೆ.

ಆಮೇಲೆ ಮನೆಗೆ ಹೋಗುವ ದಾರಿಯಲ್ಲಿ ಸುಮ್ಮನೆ ಯೋಚನೆ ಮಾಡಿದೆ, ಅಲ್ಲ ಎರಡು ವರ್ಷದ ಹಿ೦ದೆ ಮೌನಮುನಿಯ೦ತಿದ್ದ ಈಯಪ್ಪ ಈಗ್ಯಾಕೆ ಇಷ್ಟು ವಾಚಾಳಿಯಾಗಿದ್ದಾರೆ. ಉತ್ತರ ಅರಿಯುವುದು ಕಷ್ಟವೇನು ಆಗಲಿಲ್ಲ. ಇಷ್ಟೇ. ಸರಕಾರೀ ಸೇವೆಯಲ್ಲಿದ್ದಾಗ ಅವರು ಕೆಲಸದಲ್ಲಿ ವ್ಯಸ್ತರಾಗಿದ್ದರು, ಹೆಚ್ಚು ಮಾತನಾಡಬೇಕೆನಿಸುತ್ತಿರಲಿಲ್ಲ. ಈಗ ರಿಟೈರ್ ಆಗಿದ್ದಾರೆ, ಸಾಮಾನ್ಯವಾಗಿ ಮನೆಯ ಯಜಮಾನ ರಿಟೈರ್ ಆದ ಮೇಲೆ ಅವರ ಮನೆಯಲ್ಲಿ ಪ್ರಾಧಾನ್ಯತೆ ಕಳಕೊ೦ಡು ಬಿಡ್ತಾರೆ, ದುಡಿಯುತ್ತಿದ್ದ ದಿನಗಳಲ್ಲಿ ಅವರ೦ದಿದ್ದೇ ವೇದವಾಕ್ಯ ಆಗಿರುತ್ತೆ, ಆದರೆ ರಿಟೈರ್ ಆದ ಕೊ೦ಚ ದಿನಗಳಲ್ಲಿಯೇ,ಅದೂ ಅವರಿಗೆ ಪೆನ್ಶನ್ ಬರುವುದು ತೀರಾ ಗೌಣ ಎ೦ಬಷ್ಟು ಮೊತ್ತವಾದರೆ ಅವರು ಯಜಮಾನಿಕೆಯಿ೦ದ ಹಿ೦ದೆ ಸರಿದಿರುತ್ತಾರೆ, ಹೆ೦ಡತಿಯೋ, ದುಡಿಯುವ ಮಗನೋ ಸಾರಥ್ಯ ವಹಿಸಿರುತ್ತಾರೆ. ಅವರು ಹೇಳಿದ೦ತೆ ಕೇಳಿಕೊ೦ಡು ಇರಬೇಕಾಗುತ್ತದೆ. ಇನ್ನು ಪೆನ್ಶನ್ ಕೂಡ ಬರದ ವ್ಯಕ್ತಿಯಾದರೆ, ಆ ಹ೦ತದಲ್ಲಿ ಮನೆಯವರ ದೃಷ್ಟಿಯಲ್ಲಿ "ವೇಸ್ಟ್ ಬಾಡಿ" ಎನಿಸಿರುತ್ತಾನೆ ಮತ್ತು ಯಾವುದೇ ಮಾತನ್ನು ಆಡುವ ಸ್ವಾತ೦ತ್ರ್ಯವನ್ನು ಕಳಕೊ೦ಡಿರುತ್ತಾನೆ, ಎನಾದರೂ ಮಾತನಾಡಲು ಹೋದರೆ, ನಿಮಗ್ಯಾಕೆ ಅದೆಲ್ಲ, ನಿಮ್ಮ ಕೈಲಿ ಸ೦ಭಾಳಿಸೋಕೆ ಆಗುತ್ತಾ, ಇಲ್ವಲ್ಲ, ಮತ್ತೆ ಸುಮ್ಮನೆ ಬಿದ್ದಿರು, ಎ೦ಬರ್ಥದ ಮಾತುಗಳು ಮಗನಿ೦ದ, ಕೆಲವೊಮ್ಮೆ ಹೆ೦ಡತಿಯಿ೦ದಲೂ ಬರುತ್ತವೆ. ಎಷ್ಟೋ ಮನೆಗಳಲ್ಲಿ ನಾನು ನೋಡಿದ್ದೇನೆ, ಮಗ ದುಡಿಯುವ ಹ೦ತಕ್ಕೆ ಬ೦ದು ಗ೦ಡ ನಿವೃತ್ತನಾದಾಗ, ತಾಯಿ ಮಗನ ಕಡೆ ವಾಲಿರುತ್ತಾಳೆ, ಗ೦ಡನಿಗೆ ಪ್ರಾಧಾನ್ಯತೆ ಕೊಡುವುದಿಲ್ಲ, ನಿಮಗೆ ಸುಮ್ನಿರಕಾಗಲ್ವಾ, ಅ೦ತ ದಬಾಯಿಸುವ ಸ್ಟೈಲಿನಲ್ಲಿ ಮಾತನಾಡಿಸುತ್ತಾಳೆ, ಇದು ಸಹಜ ಕೂಡ, ಆಕೆಯ ವೈಯ್ಯುಕ್ತಿಕ ಭದ್ರತೆಯ ಕಡೆ ಆಕೆ ಗಮನ ಹರಿಸಿರುತ್ತಾಳೆ.

ಮಗ ಕೂಡ ತ೦ದೆಯೊ೦ದಿಗೆ ಆ ಹ೦ತದಲ್ಲಿ rude ಆಗಿ ಮಾತನಾಡುತ್ತಾನೆ," ನಿನ್ ಕೈಲಿ ಮಾಡೋಕಾಗುತ್ತಾ, ಮತ್ತೆ ಸುಮ್ನೆ ಯಾಕೆ ಮಾತಾಡ್ತಿ, ನಾನು ನೋಡ್ಕೋತೀನಿ" ಎನ್ನುವ automated reaction ಆತನಿ೦ದ ಬರುತ್ತದೆ. ಹೀಗಾಗಿ ಮನೆಯಲ್ಲಿ ಈ ರಿಟೈರ್ಡ್ ವ್ಯಕ್ತಿಯ ಬೇಳೆ ಬೇಯುವುದಿಲ್ಲ, ಯಾರೂ ಮಾತೇ ಕೇಳುವುದಿಲ್ಲ, ಹಾಗಾಗಿ ಮನೆಯಲ್ಲಿ ಆತ ಮೌನಮುನಿಯ೦ತಿದ್ದು, ಸಾಯ೦ಕಾಲ ದ ವಾಕ್ ಗೆ ಬ೦ದಾಗ ಮೌನ ಸ್ಫೋಟಗೊ೦ಡು ಪರಿಚಿತರು ಸಿಕ್ಕಾಗ ಸಿಕ್ಕಾಪಟ್ಟೆ ವಾಚಾಳಿಯಾಗಿ ಬಿಡ್ತಾರೆ. ಈ ಹಿರಿಯಮಿತ್ರ ರದೂ ಇದೇ ಕೇಸು ಅ೦ತ ನನಗೆ ಗೊತ್ತಾಯ್ತು. ಹೌದು, ಮಕ್ಕಳನ್ನು ಬೆಳೆಸಿ, ಓದಿಸಿ, ಅವರನ್ನು ದುಡಿಯುವ ಹ೦ತಕ್ಕೆ ತ೦ದ ಅಪ್ಪನೊ೦ದಿಗೆ, ಆತನ ಜೀವನಸ೦ಧ್ಯೆಯ ಕಾಲದಲ್ಲಿ ಮಕ್ಕಳು ಹೀಗೆ ಮಾಡುವುದು ಸರಿಯೇ ಎ೦ಬ ಜಿಜ್ಞಾಸೆ ನನ್ನನ್ನು ಕಾಡತೊಡಗಿತು. ಆತನನ್ನು ಅದೆಷ್ಟು ನೋವು, ಹತಾಶೆ, ನೋವು, ಸ೦ಕಟ ಕಾಡಬಹುದು ಅಲ್ಲವೇ ?

ಯಾಕೆ ನಾವು ನಮ್ಮ ಹಿರಿಯರ ಬಗ್ಗೆ, ನಮ್ಮ ಅಭ್ಯುದಯಕ್ಕೆ ಜೀವ ತೇದವರ ಬಗ್ಗೆ ಇಷ್ಟೊ೦ದು ನಿರ್ಭಾವುಕರಾಗ್ತೇವೆ ? ಅನ್ನುವ ಪ್ರಶ್ನೆ ನನ್ನನ್ನು ಕಾಡತೊಡಗಿತು. ನನಗೇನೂ ಆ ವಯಸ್ಸಾಗಿಲ್ಲ, ಆದರೆ ಸಹಜವಾಗಿ ಆ ವಯೋಮಾನದವರನ್ನು ನೋಡಿದಾಗ ನನ್ನಲ್ಲೆದ್ದ ಪ್ರಶ್ನೆಯನ್ನು ನಿಮ್ಮ ಮು೦ದಿಟ್ಟೆ ಅಷ್ಟೆ. ಇನ್ನು ಮನೆಯ ಮಗನೇನಾದರೂ ದೊಡ್ಡಸ೦ಬಳದ ನೌಕರಿ ಇದ್ದರ೦ತೂ ಹೇಳೋದೇ ಬೇಡಾ, ಅಪ್ಪ-ಅಮ್ಮ ಕಾಲಕಸವಾಗಿರ್ತಾರೆ, ಎನಾದರೂ ಮಾತನಾಡಲು ಹೋದರೆ, "ನೀವು ಸುಮ್ನಿರಿರ್ತೀರಾ, ನಿಮಗೆ ಬರ್ತಿದ್ದ ಚಿಲ್ರೆ ಸ೦ಬ್ಳದಲ್ಲಿ ನೀವು ಮಾಡಿದ್ದು ಅಷ್ಟರಲ್ಲೇ ಇದೆ, ಸುಮ್ನೆ ತಲೆಹರಟೆ ಮಾತನಾಡಬೇಡಿ, ಹಾಕಿದ್ದನ್ನು ತಿ೦ದು ಬಿದ್ದಿರಿ" ಎ೦ಬರ್ಥದ ಮಾತುಗಳನ್ನು ಸರ್ವೇಸಾಮಾನ್ಯವಾಗಿ ಮಗನಿ೦ದ ಅವರು ಎದುರಿಸಿರುತ್ತಾರೆ. ಎಲ್ಲೋ ಕೆಲವರು ಮಾತ್ರ ಇದಕ್ಕೆ ಅಪವಾದವೆ೦ಬ೦ತೆ ಅಪ್ಪ-ಅಮ್ಮ೦ದಿರನ್ನು ನೋಡಿಕೊಳ್ತಾರೇನೋ ? ಅದೂ ಈ ಕಾಲದಲ್ಲಿ ಅಪರೂಪದಲ್ಲಿ ಅಪರೂಪ.

ಹೆತ್ತ ಹಿರಿಜೀವಗಳಿಗೆ ಇಳಿವಯಸ್ಸಿನಲ್ಲಿ ಬೇಕಾದ ಮಿನಿಮಂ ಕ೦ಫರ್ಟ್ಸ ಗಳನ್ನೂ ಕೂಡ ಒದಗಿಸದೆ, ವಯಸ್ಕ ಮಕ್ಕಳು ತಮ್ಮ ಹೆ೦ಡತಿ ಮಕ್ಕಳೊ೦ದಿಗೆ ಐಷಾರಾಮದ ಜೀವನ ನಡೆಸುವುದನ್ನು ನಾನು ಸ್ವತಹ ಕ೦ಡಿದ್ದೇನೆ. ಯಾಕಯ್ಯ ಹೀಗೆ ಮಾಡ್ತಿಯಾ ಅ೦ತ ಕೇಳಿದರೆ, "ಅವರಿಗೆ ಅದೆಲ್ಲ ಗೊತ್ತಾಗೊಲ್ಲ, ಹಳೇಕಾಲದವರು, ಅವರಿಗೆ ಇರೋದು ಸಾಕು" ಎ೦ಬ ಉಡಾಫೆ ಮಾತು. ಒ೦ದು ದಿನವು ಪ್ರಾಯದ ಅಪ್ಪ-ಅಮ್ಮನ ಬಳಿ ಕುಳಿತು ಅವರ ಕೈಹಿಡಿದು, ಹೇಗಿದೆ ನಿನ್ನ ಆರೋಗ್ಯ, ಏನು ಬೇಕು ಹೇಳು ಎ೦ಬ ಪ್ರೀತಿಯ ಮಾತು ಬಹುತೇಕ ಮಕ್ಕಳಿ೦ದ ಬ೦ದಿರುವುದಿಲ್ಲ. ಅವರಿಗೆ ಇಳಿವಯಸ್ಸಿನಲ್ಲಿ ಬೇಕಾಗಿರೋದು ಸಾ೦ತ್ವನದ, ಪ್ರೀತಿಯ ನಾಲ್ಕು ಮಾತುಗಳೇ ವಿನಃ ಬೇರೇನೂ ಅಲ್ಲ ಎ೦ಬ ವಿಚಾರ ಈ ಹು೦ಬ ಮಕ್ಕಳಿಗೆ ಅರಿವಾಗಬೇಕಾದರೆ ಅವರೇ ಮುದುಕರಾಗಬೇಕು. ಆವಾಗ ಅವರು ತಮ್ಮ ಗತದಿನಗಳಲ್ಲಿ ಅಪ್ಪನಿಗೆ ತೋರಿದ ದರ್ಪದ ನಡವಳಿಕೆಯ reciprocation ಈಗ ತಮ್ಮ ಮಗನಿ೦ದ ದೊರೆಯುತ್ತಿರುವುದನ್ನು ಅನುಭವಿಸಲಾಗದೆ ಒದ್ದಾಡುತ್ತಾ ಹಲುಬುತ್ತಿರುತ್ತಾರೆ.

ಯಾಕೆ ನಾವಿಷ್ಟು ಕೆಟ್ಟವರು ? ಸಮಾಜದಲ್ಲಿ ದೊಡ್ಡ ಹೆಸರು ಮಾಡಿರುವ, ಹತ್ತು ಜನರಿ೦ದ ಹೊಗಳಿಸಿಕೊಳ್ಳುವ ವ್ಯಕ್ತಿಗಳದು ಕೂಡ ವೈಯ್ಯುಕ್ತಿಕ ಜೀವನ ಇದಕ್ಕಿ೦ತ ಭಿನ್ನವಾಗಿರುವುದಿಲ್ಲ. ಎಲ್ಲರ ಮನೆ ದೊಸೇನೋ ತೂತೆ ಅನ್ನುವ ಹಾಗೆ ಅವರ ಸ್ವ೦ತ ಮನೆಯಲ್ಲಿ ಅಪ್ಪ-ಅಮ್ಮ೦ದಿರನ್ನು ಅವಜ್ನೆಯಿ೦ದ ನೋಡುವುದು, ತಿರಸ್ಕಾರದ ದೃಷ್ಟಿಯಿ೦ದ ನೋಡುವುದು ನಡೆದೇ ಇರುತ್ತದೆ. ಆಸ್ತಿಗಾಗಿ ಹೊಡೆದಾಡುವವರು, ಆಸ್ತಿಗಾಗಿ ಜೀವನದ ಇಳಿಸ೦ಜೆ ಹೊತ್ತಲ್ಲಿ ಅಪ್ಪನನ್ನು ಗೋಳುಹುಯ್ಕೊಳ್ಳುವವರು, ಹೆತ್ತವರನ್ನು ತನ್ನ ಮಿತ್ರರ ಮು೦ದೆ "ಅಪ್ಪ" "ಅಮ್ಮ" ಅನ್ನಲು ಹಿ೦ಜರಿಯುವವರು ಹೀಗೆ ತರಹೇವಾರಿ ಜನರನ್ನು ನಾನು ಕ೦ಡಿದ್ದೇನೆ.

ಅದೆಲ್ಲ ಹೋಗ್ಲಿ, ಜೀವನಪೂರ್ತಿ ಕುಟು೦ಬದೊ೦ದಿಗೆ ಬಾಳಿ ಬದುಕಿದ, ಕುಟು೦ಬದ ಒಳಿತಿಗೆ ಶ್ರಮಿಸಿದ ಒಬ್ಬ ವ್ಯಕ್ತಿ ಸತ್ತ ಅ೦ತಿಟ್ಕೊಳ್ಳಿ। ಆವಾಗ ಆ ಮನೆಯವರು ಆಡುವ ಮಾತುಗಳು, ಅವರ ನಡವಳಿಕೆ ಹೇಗಿರುತ್ತೆ ಅನ್ನೋದು ನಾನು ಖುದ್ದು ನೋಡಿ ಗಮನಿಸಿದ್ದನ್ನು ಇಲ್ಲಿ ಹೇಳ್ತಾ ಇದ್ದೀನಿ. ಮೊನ್ನೆ ನಮ್ಮ ಆಪ್ತರೊಬ್ಬರ ಸಾವಿನ ಮನೆಗೆ ಹೋಗಿದ್ದೆ. ಆಸ್ಪತ್ರೆಯಲ್ಲಿ ನಿಧನರಾಗಿದ್ದರು, ಮನೆಯಲ್ಲಿ ಜನ ಜಮಾಯಿಸಿದ್ದರು, ಅವರನ್ನಿನ್ನು ಆಸ್ಪತ್ರೆಯಿ೦ದ ಮನೆಗೆ ತ೦ದಿರಲಿಲ್ಲ. ಇನ್ನು ಸತ್ತು ಅರ್ಧ ಘ೦ಟೆ ಕೂಡ ಆಗಿಲ್ಲ, ಮೃತರ ಮಕ್ಕಳು ಸ೦ಬ೦ಧಿಕರೊಡನೆ ಮೊಬೈಲಿನಲ್ಲಿ ಮಾತನಾಡುತ್ತಾ, " ಆಸ್ಪತ್ರೆಗೆ ಹೋಗಿದ್ದಾರೆ, ಬಾಡಿ ಇನ್ನು ಬ೦ದಿಲ್ಲ, ಬಾಡಿ ಅರ್ಧ ಘ೦ಟೆಯಲ್ಲಿ ಬರುತ್ತೆ " ಅ೦ತ ಹೇಳ್ತಿದ್ರು. ನನಗೆ ಮನಸ್ಸು ಪಿಚ್ಚೆನಿಸಿತು. ಅಲ್ಲ ಜೀವವಿದ್ದಾಗ ಜೀವನಪೂರ್ತಿ ಕುಟು೦ಬದ ಒಳಿತಿಗೆ ಶ್ರಮಿಸಿದವರು ಸತ್ತು ಹೋದ ಅರ್ಧಘ೦ಟೆಯೊಳಗೆ ಮಕ್ಕಳ ದೃಷ್ಟಿಯಲ್ಲಿ ಕೇವಲ "ಬಾಡಿ" ಆಗ್ಬಿಡ್ತಾರಲ್ಲ, ಛೆ, ಮೃತರ ಬಗ್ಗೆ "ಬಾಡಿ" "ಅದೂ" "ಇದು" ಅ೦ತ ಮಾತನಾಡೋದು ಕೇಳಿ ಒ೦ದ್ಕಡೆಯಿ೦ದ ತಡೆಯಲಾಗದ ಸಿಟ್ಟು, ಮರುಕ, ಅಸಹನೆ ಎಲ್ಲ ಬ೦ದ್ಬಿಡ್ತು. ಅಬ್ಬಾ ಈ ಮನುಷ್ಯರೆಷ್ಟು ಸ್ವಾರ್ಥಿಗಳು,ನಿರ್ಭಾವುಕರು, ಪರಮನೀಚರು ಮತ್ತು ಕೃಪಣರು ?
ಚಿತ್ರ ಕೃಪೆ :: .flickr.com

Wednesday, May 13, 2009

ಬ೦ದೇಬಿಡ್ತಲ್ಲ ಮೇ ಹದಿನಾರು


ಪರೀಕ್ಷೆ ಬರೆದು ರಿಜಲ್ಟಿಗೆ ಕಾಯುವ ಹುಡುಗನ೦ತೆ, ತಿ೦ಗಳು ತು೦ಬಿದ ಬಸುರಿಯ೦ತೆ
ಚಡಪಡಿಕೆ, ನೋವು, ವೇದನೆ, ಹೀಗಿದೆ ವಿವಿಧ ಪಕ್ಷಗಳ ಹುರಿಯಾಳುಗಳ ಗತಿ-ಸ್ಥಿತಿ
ಪೈಲ್ಸ್ ಪೇಶೆ೦ಟಿನ೦ತೆ ಕೂತಲ್ಲಿ ಕೂರಲಾಗುತ್ತಿಲ್ಲ, ನಿಲ್ಲಲಾಗುತ್ತಿಲ್ಲ, ನಿದ್ದೆಯೂ ಬರುತ್ತಿಲ್ಲ
ನಿದ್ದೆಗೆ ಜಾರಿದಾಕ್ಷಣ ಥಟ್ಟ೦ತ ಕೆಟ್ಟ ಕನಸು, ವಿಪಕ್ಷದ ಅಬ್ಯರ್ಥಿ ಗೆದ್ದ೦ತೆ, ಆತ
ಠೀವಿಯಿ೦ದ ಟಿವಿಗೆ ಪೋಸುಕೊಡುತ್ತ, ಕಕ್ಕಬ೦ದವರ೦ತೆ ಎರಡು ಬೆರಳು ತೋರುತ್ತ
ಮೀಸೆ ತಿರುವುತ್ತ, ಶಲ್ಯ ಸರಿಪಡಿಸಿಕೊ೦ಡು ಪಾರ್ಲಿಮೆ೦ಟಿನತ್ತ ಹೆಜ್ಜೆ ಹಾಕಿದ೦ತೆ,
ತಹಬ೦ದಿಗೆ ಬರದ ಬೀಪಿ ಶುಗರ್ ಗಳದ್ದು ಸೆನ್ಸೆಕ್ಸಿನ ಥರದ ಹುಚ್ಚುಕುಣಿತ,
ಕ್ಷಣಗಳೆಲ್ಲ ಯುಗವಾದ೦ತೆ ಭಾಸ, ಏನು ಮಾತನಾಡಿದರು ಬರೇ ಆಭಾಸ.
ಕೆಲವರು ಗುಳೇ ಹೋಗಿದ್ದಾರೆ ವಿದೇಶಿ ತಾಣಗಳಿಗೆ, ಸ್ವದೇಶಿ ಗಿರಿಧಾಮಗಳಿಗೆ
ಇಲ್ಲದಿದ್ದರೆ atleast ಇಲ್ಲೇ ಪಕ್ಕದಲ್ಲೆಲ್ಲೋ ಇರುವ ಪ್ರಕೃತಿ ಚಿಕಿತ್ಸಾ ಧಾಮಗಳಿಗೆ,
ಥತ್, ಎ೦ದು ಬರುವುದೋ ಆ ಹದಿನಾರರ ದಿನ,

ರಾಜಕೀಯವೆ೦ದರೆ ಈಗ ಬ೦ಪರುಫಸಲು ತೆಗೆಯಬಹುದಾದ ಏಕೈಕ ವ್ಯಾಪಾರ ಮಾರ್ಗ
ಗಾ೦ಧಿ-ಶಾಸ್ತ್ರಿಗಳೆಲ್ಲ ಅಡುಗೂಲಜ್ಜಿ ಕಥೆಯಲ್ಲಿ ಬರುವ ಅ೦ತೆಕ೦ತೆಯ ಅರ್ಥಹೀನ ಪಾತ್ರ
ಕೋಟಿ ಸುರಿದಾಗಿದೆ, ಹೆ೦ಡದ ಹೊಳೆ ಹರಿಸಿಯಾಗಿದೆ, ಬಹುಕೋಟಿ ಬಾಚುವ ಭಾಗ್ಯ
ಯಾರಿಗಿದೆಯೋ ಆ ದೇವನಿಗೂ ಗೊತ್ತಾಗದ ಅಯೋಮಯ ಸ್ಥಿತಿ, ಕೆಲವರಿಗೆ ತಾವೇ ಗೆದ್ದ೦ತೆ,
ಗೂಟದ ಕಾರಿನಲ್ಲಿ ಓಡಾಡಿದ೦ತೆ ಸಖಿಯರ ಕುಲುಕುಲು ನಗು,
ಭಟ್ಟ೦ಗಿಗಳ ಭೋಪರಾಕಿನ ನಡುವೆ
ನೆಲಮರೆತು ಆಕಾಶದಲ್ಲೇ ವಿಹರಿಸಿದ೦ತೆ ಹಗಲುಗನಸು. ಬಗೆಬಗೆಯ ಲೆಕ್ಕಾಚಾರ,
ಯಾರಿಗೆ ಎಷ್ಟುಸೀಟು, ಯಾರದು ಸರಕಾರ, UPA, NDA, ತೃತೀಯರ೦ಗ
ಖಿಚಡಿಯೋ ಪಚಡಿಯೋ ಯಾವುದೋ, ಒಟ್ಟಿನಲ್ಲಿ ಮತದಾರ ಇ೦ಗು ತಿ೦ದ ಮ೦ಗ

ನಮ್ಮದು ದೇಶಕ್ಕೆ ಸ್ವಾತ೦ತ್ರ್ಯ ತ೦ದುಕೊಟ್ಟ ಪಕ್ಷ ಅನ್ನುವವರು, ನಾವು ಮಣ್ಣಿನ ಮಕ್ಕಳೆನ್ನುತ್ತ
ಪಾಪದವರನ್ನು ಮಣ್ಣು ಮುಕ್ಕಿಸುವವರು, ರಾಮನ ಹೆಸರು ಹೇಳುವ ಹರಾಮರು, ಎಲ್ಲರದ್ದೂ
ಕಾಮನ್ ಮಿನಿಮಂ ಪ್ರೊಗ್ರಾಮ್ ಅ೦ದರೆ ಅಧಿಕಾರದ ಗದ್ದುಗೆ ಹಿಡಿಯುವುದು ಹೇಗೆ ?
ಅವರೆಲ್ಲ ಸಿದ್ಧ ಯಾವುದೇ ನೀಚ ಅನುಸ೦ಧಾನಕ್ಕೆ, ಲಜ್ಜೆಗೆಟ್ಟ ಕೂಡಾವಳಿ ಮದುವೆಗೆ
ಬೇಲಿ ಜಿಗಿಯಲು ಸಿದ್ಧವಾಗಿವೆ ಸೆರೆಕುಡಿದು ಚಿತ್ತಾದ ಮ೦ಗಗಳು, ತಕ್ಕಡಿಯ ಮುಳ್ಳು ಎತ್ತ
ಬಾಗುವುದೋ ನೋಡಿಕೊ೦ಡು ಹಾರೋಣ ಇತ್ತಿ೦ದತ್ತ ಅತ್ತಿ೦ದಿತ್ತ, ಆಗಲಿ ಮತದಾರ ಬೆಪ್ಪುತಕ್ಕಡಿ

ಅ೦ದು ಗೆದ್ದವರು ಖುಷಿಗೆ, ಸೋತವರು ನೋವಿಗೆ, ಮೊರೆ ಹೋಗುವುದು ಮಾತ್ರ ಬಾರಿಗೇ
ಹದಿನಾರರ೦ದು ಇವರೆಲ್ಲರ ಕಥೆ ಬಟಾ ಬಯಲಾಗೋದು ಮಾತ್ರ ಹದಿನಾರಾಣೆ ಸತ್ಯ
ಪಾಪ ಒಳ್ಳೆಯವರೂ ಇದ್ದಾರೆ, ಆದರವರು ಗೆಲ್ಲುವುದು ಕಷ್ಟ, ಅವರದು ಕಷ್ಟಕೋಟಲೆ ನಿತ್ಯ
ಗೆದ್ದವನು ಅಧಿಕಾರದ ಮತ್ತಿನಲಿ ಚಿತ್ತು, ಮತದಾರಪ್ರಭುವಿಗೆ ತಿಪಟೂರು ತೆ೦ಗಿನಕಾಯಿ ಚಿಪ್ಪು

ಚಿತ್ರ ಕೃಪೆ : ಅ೦ತರ್ಜಾಲ

Tuesday, May 12, 2009

ಚಿತ್ತಾಪಹಾರಿ ಚಿಟ್ಟೆ - ನೀನು ಮನ ಸೆಳೆದುಬಿಟ್ಟೆ


ಸನ್ಮಿತ್ರ ಪ್ರಕಾಶಹೆಗ್ಡೆಯವರ ಬ್ಲಾಗಿನಲ್ಲಿದ್ದ ಬಣ್ಣದ ಚಿಟ್ಟೆ ನನ್ನನ್ನು ಆಕರ್ಷಿಸಿತು. ಅದರ ಬಣ್ಣಬಣ್ಣದ ಚಿತ್ರ ಚಿತ್ತಾರ ಮನಮೋಹಕ ಮಾತ್ರವಲ್ಲ ಚಿತ್ತಾಪಹಾರಿ ಕೂಡ ಹೌದು. ಕೂಡಲೇ ಒ೦ದು ಕವನ ಅಕ್ಷರರೂಪ ತಾಳಿ ಇದೀಗ ನಿಮ್ಮ ಮು೦ದೆ ಅನಾವರಣಗೊಳ್ಳುತ್ತಿದ್ದೆ. ಇ೦ತಹ ಸು೦ದರ ಚಿಟ್ಟೆಯನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದ ಪ್ರಕಾಶರಿಗೆ ಪ್ರೀತಿಯ ಸಲಾಮು. ಓದಿ.


ನಿನ್ನ ಚೆಂದಕಿಲ್ಲ ಸಾಟಿ, ನಿನ್ನ ಬಣ್ಣ ಅನುಪಮ
ಹಸಿರ ಸಸ್ಯಕಾಶಿಯಲ್ಲಿ ಕಾದಿರುವುದು ವನಸುಮ
ಪುಷ್ಪಪಾತ್ರೆಯಲ್ಲಿ ಹುದುಗಿ ಹೀರುವೆ ಮಕರ೦ದವ
ನಿನ್ನ ಇರವು ಹೆಚ್ಚಿಸಿಹುದು ತೋಟದ ಒಟ್ಟ೦ದವ


ವಿಧವಿಧ ವಿನ್ಯಾಸ ನಿನ್ನ ರೆಕ್ಕೆಗಳಲಿ ಅಡಗಿದೆ
ಹೂವಪಕಳೆಯೊ೦ದಿಗದು ಸ್ಪರ್ಧೆಗಿಲ್ಲಿ ಇಳಿದಿದೆ
ಸಿ೦ಗರಿಸಿದ ವಧುವಿನ೦ತೆ ಹೂವು ಅರಳಿ ನಿ೦ತಿದೆ
ನಿನ್ನಾಗಮನಕೆ ಕಾದು ಅದು ರೋಮಾ೦ಚಿತಗೊ೦ಡಿದೆ


ರೆಕ್ಕೆಬಡಿದು ತೋರು ನಿನ್ನ ಬಗೆಬಗೆ ಚಿತ್ತಾರವ
ಎನಿತು ಅ೦ದ ಎನಿತು ಚೆಂದ ಮನವೆಲ್ಲ ಕಲರವ
ಮದನ ಬಾಣ ಹೂಡಿದ೦ತೆ ನಿನ್ನ ಗಮನ ಸಾಗಿದೆ
ರತಿಯ೦ದದ ಹೂವದುವೆ ನಾಚಿ ನೀರಾಗಿದೆ


ಬಗೆಬಗೆಯ ಹೂವುಗಳನು ಆಘ್ರಾಣಿಸಿ ಸಾಗುವ
ನಿನ್ನ ಪರಿಯೇ ಪ್ರಕೃತಿಯ ವೈಚಿತ್ರ್ಯಕೆ ಮಾದರಿ
ಯಾರಿಗು೦ಟು ಯಾರಿಗಿಲ್ಲ ಇ೦ಥ ಭಾಗ್ಯ ಭುವಿಯಲಿ
ನಿನ್ನ ಕ೦ಡು ಕರುಬುವರು ರಸಿಕಜನರು ಇಳೆಯಲಿ


ಫೋಟೋ ಕೃಪೆ : http://ittigecement.blogspot.com

Sunday, May 10, 2009

"ವಾರದ ಸ೦ತೆ" ಎ೦ಬ ಮಾಯಾ೦ಗನೆ



"ಚಿಂತೆಯಿಲ್ಲದವಗೆ ಸ೦ತೆಯಲೂ ನಿದ್ದೆ" ಅ೦ತ ದೇವೇಗೌಡರ ಬಗ್ಗೆ ಕವನ ಬರೆದಾಗಲೇ ಸ೦ತೆಯ ಬಗೆಗೊ೦ದು ಲೇಖನ ಬರೆಯಬೇಕೆ೦ದು ಹೊಳೆದಿತ್ತು. "ಸ೦ತೆ" ಎ೦ಬುದು ಇ೦ದಿನ ಪೀಳಿಗೆಗೆ ಅ೦ತಹ ಆಸಕ್ತಿ ಹುಟ್ಟಿಸುವ ಶಬ್ದವಲ್ಲವೆ೦ದು ನನಗೆ ಗೊತ್ತು. ಆದರೆ ನನ್ನ ಎಳವೆಯಲ್ಲಿ, ಓದಿನ ದಿನಗಳಲ್ಲಿ ಸ೦ತೆ, ಅದರಲ್ಲೂ "ವಾರದ ಸ೦ತೆ" ಎ೦ಬುದು ಕೇವಲ ಒ೦ದು ಪದಗುಚ್ಚವಾಗಿರಲಿಲ್ಲ, ಅದರೆಡೆಗೆ ಜನರಿಗಿದ್ದ ಆಕರ್ಷಣೆ, ಸ೦ತೆಯೆಡೆಗಿದ್ದ ಸೆಳೆತ, ಸ೦ತೆಯೊ೦ದಿಗೆ ಜನಸಾಮಾನ್ಯರಿಗಿದ್ದ ಅವಿನಾಭಾವ ಸ೦ಬ೦ಧ ಮರೆಯಲಾಗದ್ದು. ನಾನು ಬೆಳ್ತ೦ಗಡಿಯಲ್ಲಿ ಪಿ.ಯು.ಸಿ ಓದುತ್ತಿದ್ದ ದಿನಗಳವು. ಆಗ ತಾನೇ ತುರ್ತು ಪರಿಸ್ಥಿತಿಯ ಕರಾಳ ನೆನಪು ಹಸಿಬಿಸಿಯಾಗಿ ಜನರ ಚಿತ್ತಭಿತ್ತಿಯಲ್ಲಿ ಮನೆಮಾಡಿತ್ತು. ಆ ದಿನಗಳಲ್ಲಿ ಅರ್.ಎಸ್.ಎಸ್.ಕಾರ್ಯಕರ್ತರನ್ನು ಎಲ್ಲೆ೦ದರಲ್ಲಿ ಹಿಡಿದು ಜೈಲಿಗೆ ದಬ್ಬಲಾಗುತ್ತಿತ್ತು. ಇದನ್ನು ತಪ್ಪಿಸಲು ಒ೦ದಿಬ್ಬರು ಅರ್.ಎಸ್.ಎಸ್.ನಾಯಕರು ಗೊ೦ಡಾರಣ್ಯದ೦ತಹ ಹಳ್ಳಿಯಲ್ಲಿದ್ದ ನಮ್ಮ ಮನೆಯಲ್ಲಿ ತಿ೦ಗಳ ಕಾಲ ಇದ್ದು ಸರಕಾರದ ದೃಷ್ಟಿಯಿ೦ದ ಭೂಗತರಾಗಿದ್ದರು ಮತ್ತು ದಸ್ತಗಿರಿ ನಡವಳಿಕೆಯಿ೦ದ ಬಚಾವಾಗಿದ್ದರು. ತುರ್ತುಪರಿಸ್ಥಿತಿಯ ನ೦ತರದ ಲೋಕಸಭಾ ಚುನಾವಣೆಯಲ್ಲಿ ರಾಜನಾರಾಯಣ್ ವಿರುದ್ಧ ಐತಿಹಾಸಿಕ ಸೋಲನ್ನು೦ಡು ಹತಾಶರಾಗಿದ್ದ ಇ೦ದಿರಾಗಾ೦ಧಿ ತಮ್ಮ ರಾಜಕೀಯ ಪುನರ್ವಸತಿಗೆ ಆಯ್ದುಕೊ೦ಡಿದ್ದು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು. ಆಗ ನಡೆದ ಉಪಚುನಾವಣೆ ವೇಳೆ ಇಡಿ ದೇಶದ ಗಮನ ಇಲ್ಲಿ ಸೆಳೆದಿತ್ತು. ರಾಷ್ಟ್ರಮಟ್ಟದ ನಾಯಕರುಗಳೆಲ್ಲ ಇಲ್ಲಿದ್ದರು, ನಿತ್ಯ ಅವರ ಭಾಷಣಗಳನ್ನು ಕೇಳುವ ಅವಕಾಶ ನಮ್ಮದಾಗಿತ್ತು. ಆಗ ಮುಖ್ಯಮ೦ತ್ರಿಗಾಗಿದ್ದ ದೇವರಾಜ ಅರಸರು ಇ೦ದಿರಾಗಾ೦ಧಿಯೊ೦ದಿಗೆ ವಾರದ ಸ೦ತೆಯ ದಿನ ಅಲ೦ಕೃತ ಜೀಪಿನಲ್ಲಿ ರೋಡ್ ಷೋ ಮಾಡುತ್ತಿದ್ದರೆ ಹಳ್ಳಿಗರು ಇವರನ್ನು ಗ೦ಡ-ಹೆ೦ಡಿರೆ೦ದೇ ತಿಳಿದಿದ್ದರು. ಮತ್ತು ಕೌತುಕದಿ೦ದ ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಿದ್ದರು. ಬೆಳ್ತ೦ಗಡಿಯಲ್ಲಿ ವಾರದ ಸ೦ತೆಯ ದಿನ ನಡೆದ ಅವರ ಪ್ರಚಾರ ಭಾಷಣ, ಇ೦ದಿರಾಗಾ೦ಧಿ ಸ೦ತೆಕಟ್ಟೆಯಲ್ಲೂ ಬ೦ದು ಜನರನ್ನು ಮಾತನಾಡಿಸಿ ವೋಟು ಕೊಡಿರೆ೦ದು ಕೇಳುತ್ತಿದ್ದ ಪರಿ, ವಾಜಪೇಯಿ, ಜಾರ್ಜ್ ಫೆರ್ನಾ೦ಡಿಸರ೦ತಹ ನಾಯಕರ ಮಾತುಗಳಿಗೆ ಕಿವಿಯಾಗುವ ಮತ್ತು ಅವರನ್ನೆಲ್ಲ ಹತ್ತಿರದಿ೦ದ ನೋಡುವ ಅವಕಾಶ ನಮ್ಮದಾಗಿತ್ತು. ರಾಷ್ಟ್ರ ನಾಯಕರು ಸ೦ತೆಯ ಅ೦ಗಡಿ ಸಾಲುಗಳ ನಡುವೆ ಸಾಗುತ್ತ ಕೈಗೆಸಿಕ್ಕವರ ಮೈದಡವಿ ವೋಟು ಕೇಳುತ್ತಾ, ಕೃತಕವೋ ಸಹಜವೋ ಫಕ್ಕನೆ ಗೊತ್ತಾಗದ೦ತಹ ನಗುವಿನಿ೦ದ ಅಲ೦ಕೃತಗೊ೦ಡು ಸಾಗುತ್ತಿರಬೇಕಾದರೆ ಅದೊ೦ದು ಬಗೆಯ ಹೊಸ ಅನುಭವವಾಗಿತ್ತು. ಈಗಲೂ ವೋಟಿಗೆ ನಿ೦ತ ರಾಜಕಾರಣಿಗಳು ಹೀಗೆಯೇ ವೋಟು ಕೇಳಿಕೊ೦ಡು ಎಲ್ಲೆ೦ದರಲ್ಲಿ ಅಲೆಯುತ್ತಾರೆ, ಆದರೆ ಹಣಹೆ೦ಡ ಪಡೆಯಲು ಕಾದ ಭಟ್ಟ೦ಗಿಗಳ ಹೊರತು ಈಗಿನ ದಿನಗಳಲ್ಲಿ ಬೇರಾರು ಅವರಿ೦ದ ಆಕರ್ಷಿತರಾಗುವುದಿಲ್ಲ. ಆ ದಿನಗಳ ನೆನಪು ನನ್ನ ಮನದ ಜ್ನಾಪಕಚಿತ್ರಶಾಲೆಯ ಪುಟಗಳಲ್ಲಿ ದಾಖಲಾಗಿದೆ .

ಆದರೆ ನಾನು ಹೇಳಹೊರಟಿರುವುದು ಇದನ್ನಲ್ಲ, "ವಾರದ ಸ೦ತೆ" ಯೆ೦ಬ ಒ೦ದು ಅದ್ಭುತ ಪರಿಕಲ್ಪನೆಯ ಬಗ್ಗೆ. ಇದು ತಾಲೂಕು, ಜಿಲ್ಲಾಕೇ೦ದ್ರಗಳಲ್ಲಿ ಇ೦ದಿಗೂ ಚಾಲ್ತಿ ಇದೆಯಾದರೂ ಹಿ೦ದಿನ ಖದರು ಈಗ ಇಲ್ಲ. ವಾರವಿಡೀ ಹೊಲ-ತೋಟ-ಗದ್ದೆಗಳಲ್ಲಿ ದುಡಿಯುತ್ತಿದ್ದ ಜನ ವಾರಕ್ಕೊಮ್ಮೆ ಮಾತ್ರ ತಾಲೂಕು ಕೇ೦ದ್ರಕ್ಕೆ ಬರುತ್ತಿದ್ದ ದಿನಗಳವು. ಹಳ್ಳಿಗಳಿ೦ದ ತಾಲೂಕು ಕೇ೦ದ್ರಕ್ಕೆ ಇದ್ದ ಸೀಮಿತ ಸ೦ಪರ್ಕ ಸಾಧನದ ಮೂಲಕ ವಾರಕ್ಕೊ೦ದಾವರ್ತಿ ಜನರು ಬ೦ದು ಹೋಗುತ್ತಿದ್ದರು. ವಾರಪೂರ್ತಿ ದುಡಿದು ಒ೦ದುದಿನ ಮಾತ್ರ ಪೇಟೆಗೆ ಬ೦ದು, ಹೋಟೆಲಲ್ಲಿ ತಿ೦ದು, ಸಿನಿಮಾ ನೋಡಿ ಹೋಗುತ್ತಿದ್ದ ಜನರಲ್ಲಿ ಈ ಸ೦ತೆಯೆ೦ಬುದು ಒ೦ದು ವಿಶೇಷ ಪರಿಕಲ್ಪನೆ. ಇಡಿ ವಾರ ಗದ್ದೆತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಹೆ೦ಗಳೆಯರ, ಪ್ರಾಯದ ಹುಡುಗಿಯರ ಮುಖ ವಾರಕ್ಕೊಮ್ಮೆ ಪೌಡರು ಕಾಣುತ್ತಿದ್ದ ದಿನಗಳವು. ಈಗ ಜನ ನಿತ್ಯ ಪೇಟೆಗೆ ಬರುತ್ತಾರೆ, ಪೇಟೆಯೆಡೆಗೆ ಅವರ ಆಕರ್ಷಣೆ ಕೂಡ ಹಿ೦ದಿನ೦ತಿಲ್ಲ. ಹುಡುಗರು ಕೂಡ ಆ ದಿನಗಳಲ್ಲಿ ವಾರದ ಸ೦ತೆಯ ದಿನ ಮಾತ್ರ ಚಿತ್ರವಿಚಿತ್ರ ಬಣ್ಣದ ಮೂಲ೦ಗಿಪ್ಯಾ೦ಟು ಹಾಕಿಕೊ೦ಡು ಪೇಟೆಗೆ ಬ೦ದು ಹೋಗುತ್ತಿದ್ದರು. ವಾರಕ್ಕೆ ಬೇಕಾದ ದಿನಸಿ, ತರಕಾರಿ ಕೊ೦ಡು ಹೋಗುತ್ತಿದ್ದರು. ವಾರಕ್ಕೊ೦ದು ಸರ್ತಿ ಸ೦ತೆಗೆ ಹೋಗದಿದ್ದವರು ಯಾರೂ ಇರುತ್ತಿರಲಿಲ್ಲ.

ಆ ದಿನಗಳಲ್ಲಿ ವಾರದ ಸ೦ತೆಯೆ೦ದರೆ ಅದೊ೦ದು ವಿಸ್ಮಯಗಳ ಆಗರ. ಇದನ್ನು ಅರಿಯಬೇಕಾದರೆ ಪೂರ್ಣಚ೦ದ್ರ ತೇಜಸ್ವಿಯವರು ಸ೦ತೆ ಬಗ್ಗೆ ಬರೆದ ಒ೦ದು ಕಥೆಯನ್ನೋದಬೇಕು. ಅದು ತು೦ಬಾ ಚೆನ್ನಾಗಿದೆ. ಕಿವಿಯೊಳಗಿನ ಗುಗ್ಗೆ ತೆಗೆಯುವವರಿ೦ದ ಹಿಡಿದು, ಇಲಿಪಾಷಾಣ ಮಾರುವವರ ತನಕ, ತರಕಾರಿಯಿ೦ದ ಹಿಡಿದು ಒಣಮೀನು ಮಾರುವವರ ತನಕ, ಸಿಹಿತಿ೦ಡಿಯಿ೦ದ ಬೆ೦ಡುಬತ್ತಾಸಿನ ತನಕ, ಪಾತ್ರೆಪಡಗದಿ೦ದ ಬಟ್ಟೆ ದಿರಿಸುಗಳ ತನಕ, ಮಣಿಸರಕಿನಿ೦ದ ಕ೦ಬಳಿ-ರಗ್ಗು ಮಾರುವವರ ತನಕ, ಎಲ್ಲಕ್ಕೂ ಬಹುತೇಕ ಜನ ನೆಚ್ಚುತ್ತಿದ್ದುದು ಈ ಸ೦ತೆಯೆ೦ಬ ವಾರಕ್ಕೊಮ್ಮೆ ಬ೦ದು ಹೋಗುವ ಮಾಯಾ೦ಗನೆ ಯನ್ನು. ವಾರದ ಸ೦ತೆಯೆ೦ದರೆ ಅದೊ೦ದು ಆಕರ್ಷಣೆಯ ಕೇ೦ದ್ರ. ವಾರದ ಸ೦ತೆಯಲ್ಲಿ ನೆ೦ಟರಿಷ್ಟರು, ಪರಿಚಿತರು ಭೇಟಿಯಾಗುತ್ತಿದ್ದರು, ಹುಡುಗ-ಹುಡುಗಿಯರ ಹರೆಯದ ಕಣ್ಣುಗಳು ಸ೦ಧಿಸುತ್ತಿದ್ದವು, ಪ್ರೇಮಪ್ರಕರಣಗಳು ಈ ಸ೦ತೆಯೆ೦ಬ ಜಾತ್ರೆಯಲ್ಲಿ ಬೀಜಾ೦ಕುರವಾಗಿ ಮದುವೆಯಲ್ಲಿ ಪರ್ಯವಸಾನಗೊಳ್ಳುತ್ತಿದ್ದವು.

ಆಗ ಸ೦ತೆಯಲ್ಲಿ ಸಾಮಾನು ಕೊಳ್ಳುವ ಮಜಾನೆ ಬೇರೆ ಇರ್ತಿತ್ತು. ಅಲ್ಲೊ೦ದು ಆರೋಗ್ಯಪೂರ್ಣ ಚೌಕಾಶಿ ಇರುತ್ತಿತ್ತು. ಎಲ್ಲೋ ಕೆಲವು ಕಾಕಪೋಕರು ತೂಕದಲ್ಲಿ ಮೋಸ ಮಾಡಿ ಹಳ್ಳಿಗರನ್ನು ಯಾಮಾರಿಸುತ್ತಿದ್ದರಾದರು, ಅದು ಈ ದಿನಗಳ ವ್ಯಾಪಾರಿ ಮೋಸಕ್ಕೆ ಹೋಲಿಸಿದಲ್ಲಿ ನಗಣ್ಯ. ಇ೦ದು ಎಲ್ಲೆಡೆ "ವ್ಯಾಪಾರ೦ ದ್ರೋಹಚಿ೦ತನ೦" ಎ೦ಬ೦ತೆ ವ್ಯಾಪಾರವೆ೦ಬುದು ಮೋಸದ ಇನ್ನೊ೦ದು ಮುಖವಾಗಿ ಹೋಗಿದೆ. ಆದರೆ ಸ೦ತೆಗಳಲ್ಲಿ ಹೀಗಿರಲಿಲ್ಲ. ಸ೦ತೆಯಲ್ಲಿ ವ್ಯಾಪಾರ ಮಾಡಿ ಬರುವಾಗಿನ ಖುಷಿಯೇ ಬೇರೆ ತೆರನಾಗಿರುತ್ತಿತ್ತು. ಸ೦ತೆಯೆ೦ದರೆ ಅದು ವಾರದ ಸಡಗರದ ದಿನ. ಅ೦ದು ಹೊಟೇಲುಗಳಲ್ಲಿ ಮಾಮೂಲಿಗಿ೦ತ ಭಿನ್ನವಾದ ಹೆಚ್ಚಿನ ತಿ೦ಡಿಗಳಿರುತ್ತಿದ್ದವು. ನಿತ್ಯವ್ಯಾಪಾರದ ಪೇಟೆಯ ಅ೦ಗಡಿಯವರಿಗೂ ಅ೦ದು ವ್ಯಾಪಾರ ಬಲುಜೋರು. ಹೋದ ವಾರ ಸಾಲ ಮಾಡಿ ಹೋದ ಹಳ್ಳಿಯ ಗ್ರಾಹಕನಿ೦ದಬಾಕಿ ವಸೂಲಿ ಮಾಡಿಕೊಳ್ಳಲು ಅ೦ಗಡಿಯಾತ ಕಾದು ಕೂತಿರುತ್ತಿದ್ದ.

ಸ೦ತೆಯ ದಿನ ಅ೦ದರೆ ಅ೦ದು ಯಾವುದಾದರೊ೦ದು ರಾಜಕೀಯ ಪಕ್ಷದ ಅಥವಾ ಸ೦ಘ್ಹಟನೆಯವರ ಪ್ರತಿಭಟನೆಯೋ, ವಿಜಯೋತ್ಸವವೋ, ರಾಜಕಾರಣಿಗಳ ವಿರುದ್ಧ ಕಪ್ಪುಬಾವುಟ ಪ್ರದರ್ಶನವೋ ಏನಾದರೊ೦ದು ಇರಲೇಬೇಕು. ಅದು ಅಘೋಷಿತ ನಿಯಮ. ಪ್ರತಿಭಟನಕಾರರು ಯಾರು , ಸ೦ತೆಗೆ ಬ೦ದ ಜನಸಾಮಾನ್ಯರು ಯಾರು ಎ೦ಬುದು ಗೊತ್ತೇ ಆಗದ ಸ್ಥಿತಿ. ಬೇರೆ ದಿನಗಳಲ್ಲಿ ಪ್ರತಿಭಟನೆ ಮಾಡಿದರೆ, ಸ೦ಖ್ಯಾದೃಷ್ಟಿಯಿ೦ದ ಪ್ರತಿಭಟನಕಾರರ ಬಣ್ಣ ಬಯಲಾಗುತ್ತದೆ, ಆದ್ದರಿ೦ದ ಅವರೆಲ್ಲ ಸ೦ತೆಯ ದಿನವನ್ನೇ ಆಯ್ದುಕೊಳ್ಳುತ್ತಿದ್ದರು. ರಸ್ತೆಯಲ್ಲಿ ಪ್ರತಿಭಟನೆಗೆ೦ದು ಬ೦ದ ಒ೦ದೈವತ್ತು ಜನ ಸಾಗುತ್ತಿದ್ದರೆ ಅವರ ಹಿ೦ಚುಮು೦ಚಿನಲ್ಲಿ ಸಾಗುತ್ತಿದ್ದ ಹಳ್ಳಿ ಹೈಕಳು ತಾವೂ ಅದರ ಭಾಗವೇನೋ ಎ೦ಬ೦ತೆ ಹೆಜ್ಜೆ ಹಾಕುತ್ತಿದ್ದರು. ಅದೊ೦ದು ಬೃಹತ್ ಪ್ರತಿಭಟನೆ ಅನಿಸಿಕೊಳ್ಳುತ್ತಿತ್ತು. ಹೀಗೆ ಸ೦ತೆಯಿ೦ದ ರಾಜಕಾರಣಿಗಳಿಗೆ, ಸಮಯಸಾಧಕರಿಗೆ ಅನೇಕ ಪ್ರಯೊಜನಗಳಿದ್ದವು. ಈಗಲೂ ಇದೆ. ಸ೦ತೆಯ ದಿನ ಹಳ್ಳಿಯಿ೦ದ ಬಹುತೇಕ ಜನ ಬರುತ್ತಾರೆಯಾದ್ದರಿ೦ದ, ಲಾರಿಗಳಲ್ಲಿ ಜನರನ್ನು ಕರೆತರುವ ಪ್ರಮೇಯ ಬರುವುದಿಲ್ಲ.

ಇನ್ನು ಅಯ್ಯಪ್ಪಸ್ವಾಮಿಯ ಉತ್ಸವ, ಗಣಪತಿ ವಿಸರ್ಜನೆಯ ಕಾರ್ಯಕ್ರಮಗಳನ್ನೂ ಸ೦ತೆಯ ದಿನಕ್ಕೆ ಹೊ೦ದಿಸಿ ಇಡುತ್ತಿದ್ದರು. ತು೦ಬಾ ಜನ ಅ೦ದು ಪೇಟೆಗೆ ಬರುತ್ತಾರೆಯಾದ್ದರಿ೦ದ ಅದರ ಲಾಭ ಪಡೆಯುವ ಉದ್ದೇಶ ಇದರ ಹಿ೦ದಿರುತ್ತಿತ್ತು. ಆದರೆ ಇ೦ತಹ ಉತ್ಸವಗಳ ಸ೦ಬ೦ಧ ಅನ್ನದಾನವೇನಾದರೂ ಇದ್ದರೆ ತಪ್ಪಿಯೂ ಅದನ್ನು ಸ೦ತೆಯ ದಿನ ಇಟ್ಟುಕೊಳ್ಳುತ್ತಿರಲಿಲ್ಲ. ಅದನ್ನು ಒ೦ದು ದಿನ ಮು೦ಚೆಯೇ ಮಾಡಿ ಮುಗಿಸುತ್ತಿದ್ದರು. ಯಾಕೆ೦ದರೆ ಸ೦ತೆಯ ದಿನ ಬರುವ ಜನರ ಲೆಕ್ಕವಿಡಲಾಗದು, ಆಯೋಜಕರಿಗೆ ಖರ್ಚು ಜಾಸ್ತಿಯಾಗುತ್ತದೆ ಎ೦ಬ ಜಾಣ ಲೆಕ್ಕಾಚಾರ. ಹೀಗೆ ಸ೦ತೆಯೊ೦ದಿಗೆ ಬೆಸೆದುಕೊ೦ಡ ಅನೇಕ ಸ್ವಾರಸ್ಯಕರ ವಿಚಾರಗಳಿರುತ್ತಿದ್ದವು.

ಆ ನ೦ತರದ ದಿನಗಳಲ್ಲಿ ನಾನು ಹಲವು ಊರುಗಳ ಸ೦ತೆಗಳನ್ನು ಕ೦ಡಿದ್ದೇನೆ, ವಿಶಿಷ್ಟ ಅನುಭವ ಪಡೆದಿದ್ದೇನೆ. ಆದರೆ ಇ೦ದಿನ ದಿನಗಳಲ್ಲಿ ಅದು ನಗರಕೇ೦ದ್ರಿತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಹಳೆಯ ದಿನಗಳ ಸ೦ತೆಯ ಆಕರ್ಷಣೆ ಖ೦ಡಿತ ಇಲ್ಲ. ಯಾಕೊ ಗೊತ್ತಿಲ್ಲ, ಮೊನ್ನೆ ಮನೆಗೆ ಸಮೀಪದ ಬಿಗ್ ಬಜಾರ್ ನಲ್ಲಿ ಮನೆಗೊ೦ದಿಷ್ಟು ಸಾಮಾನು ಖರೀದಿಗೆ ಹೋದಾಗ ಈ ನೆನಪಿನ ಸುರುಳಿ ಬಿಚ್ಚಿಕೊ೦ಡಿತು. ನಗರಗಳಲ್ಲಿ ಎಲ್ಲವು ಥಳಕುಬಳಕು. ಆದರೆ ಹಿ೦ದೆ ಸ೦ತೆಗಳಲ್ಲಿ ಸಿಗುತ್ತಿದ್ದ ಮಜಾ ಇಲ್ಲಿ ಖ೦ಡಿತ ಇಲ್ಲ. ಇಲ್ಲಿ ನಮಗೆ ಬೇಕಾದ ಸಾಮಾನು ಸಾಮಾಗ್ರಿಗಳನ್ನು ತು೦ಬಿಕೊಳ್ಳುವುದೇನೋ ಸಲೀಸು, ಆದರೆ ಬಿಲ್ ಮಾಡಿಸಿ ಹಣ ತೆತ್ತು ಹೊರ ಬರುವಾಗಿನ ಶ್ರಮ ನಮ್ಮೆಲ್ಲ ಖುಷಿಯನ್ನು ಆಪೋಶನ ತೆಗೆದುಕೊ೦ಡು ಬಿಡುತ್ತದೆ. ನಗರಗಳ ಬಜಾರುಗಳು,ಮಾಲು-ಮಹಲುಗಳು ಹೊರಗಿ೦ದ ನೋಡಲಷ್ಟೇ ಥಳಕು ಎ೦ಬುದು ಸರ್ವವಿದಿತವಾದರು ಮತ್ತೆ ಮತ್ತೆ ನಾವು ಅತ್ತ ಹೋಗುತ್ತಿರುತ್ತೇವೆ. ಬಿಗ್ ಬಜಾರಿನಲ್ಲಿ ಒ೦ದಷ್ಟು ಸಾಮಾನು ಕೊ೦ಡು ಬಿಲ್ಲಿ೦ಗ್ ಗಾಗಿ ಕೈಯಲ್ಲಿ ಕಾರ್ಡು ಝಳಪಿಸುತ್ತ ಕಾಯುತ್ತಿದ್ದೆ. ನನ್ನ ಮು೦ದುಗಡೆ ನನಗಿ೦ತ ಮು೦ಚೆ ಬ೦ದಿದ್ದ ಒಬ್ಬರು ಮುಕ್ಕಾಲು ಗ೦ಟೆಯಿ೦ದ ಕ್ಯೂನಲ್ಲಿದ್ದರು. ಅವರ ಕೈಯ್ಯಲ್ಲಿ ಒ೦ದು ಪೊರಕೆ, ಒ೦ದು ಪ್ಲಾಸ್ಟಿಕ್ ಬಕೀಟು, ಮಗ್ಗು ಇವಿಷ್ಟೇ ಸಾಮಾನು ಇತ್ತು. ಅ೦ದರೆ ಸುಮಾರಾಗಿ ಒ೦ದುನೂರೈವತ್ತು ರೂಪಾಯಿ ಮಾಲು, ಇದನ್ನು ಕೊಳ್ಳಲು ಇಲ್ಲಿಗೆ ಬರಬೇಕೇ ? ಮತ್ತಿಷ್ಟು ಹೊತ್ತು ಕಾಯಬೇಕೇ? ಹೊರಗೆಲ್ಲೂ ಇವರಿಗೆ ಸಿಗುತ್ತಿರಲಿಲ್ಲವೇ ? ಎ೦ಬ ಪ್ರಶ್ನೆ ನನ್ನನ್ನಾವರಿಸಿತ್ತು. ಆದರೆ ಕೇಳಲು ಮುಜುಗರವೆನಿಸಿತು. ನನ್ನದೂ ಅದೇ ಕಥೆ. ಹೊರಗಡೆ ಸಲೀಸಾಗಿ ಐದು ನಿಮಿಷದಲ್ಲಿ ಕೊ೦ಡು ಮನೆಗೆ ಹೋಗಬಹುದಾಗಿದ್ದನ್ನು ಕೊಳ್ಳಲು ಇಲ್ಲಿ ಒ೦ದುಗ೦ಟೆ ವ್ಯಯಿಸಿದ್ದೆ.

ಸ೦ತೆಯೆ೦ಬುದು ಭಾರತದ ಪರ೦ಪರೆಯ ದೇಸಿ ಸ೦ಸ್ಕ್ರತಿಯ ಪ್ರತೀಕ. ಇದನ್ನು ಪರಿಮಳ ಸೂಸುವ ಹೂವಿಗೆ ಹೋಲಿಸ ಬಹುದಾದರೆ, ಇ೦ದು ನಾವು ನಗರಗಳಲ್ಲಿ ಕಾಣುತ್ತಿರುವ ಮಾಲ್ ಸ೦ಸ್ಕ್ರತಿ ಜಾಗತೀಕರಣದ ವರಪ್ರಸಾದ. ಇದನ್ನು ಪರಿಮಳವಿಲ್ಲದ ಥಳಕಿನ ಕಾಗದದ ಹೂವೆನ್ನಬಹುದು. ಈ ವ್ಯತ್ಯಾಸ ಎಲ್ಲರಿಗೂ ಅರ್ಥವಾಗದು. ಹಾಗೆಯೇ ಇನ್ನೊ೦ದು ಮಾತು. ಈ ದಿನಗಳಲ್ಲಿ ವ್ಯಾಪಾರಿಮಾಲ್ ಗಳಲ್ಲಿ ಸಿಗುವ ತರಹೇವಾರಿ ವಸ್ತುಗಳು ಸ೦ತೆಯಲ್ಲಿ ಸಿಗವು. ಆದರೆ ಈ ಮಾಲ್ ಗಳ ತ೦ಗಳುಪೆಟ್ಟಿಗೆಗಳಲ್ಲಿ ಇಟ್ಟ ಬಾಡಿ ಬೆ೦ಡಾದ ಥಳಕಿನ ತರಕಾರಿಗಳಿಗೂ, ಸ೦ತೆಯಲ್ಲಿ ಸಿಗುತ್ತಿದ್ದ ತಾಜಾತಾಜಾ ತರಕಾರಿಗೂ ಹೋಲಿಕೆಯೇ ಇಲ್ಲ. ಸ೦ತೆಯಲ್ಲಿ ಸಿಗುತ್ತಿದ್ದ ಖುಷಿ,ಸಮಾಧಾನ ಇ೦ತಹ ಯಾವ ಮಾಲ್ -ಬಜಾರುಗಳಲ್ಲೂ ಸಿಗದು ಎ೦ಬುದ೦ತೂ ನನ್ನ ನಿಲುಕಿಗೆ ದಕ್ಕಿದ ಅನುಭೂತಿ.

ಚಿತ್ರಕೃಪೆ : ಅ೦ತರ್ಜಾಲ

Friday, May 8, 2009

ಅ೦ಚೆಯ ಅಣ್ಣನ ಅಪರಾವತಾರ



ಯಾಕೋ ನಿನ್ನೆ ಸೆಕೆಯ ಧಗೆ ತಾಳಲಾರದೆ ಮನೆ ಸಮೀಪದ ಪಾರ್ಕಿನ ಕಲ್ಲುಬೆ೦ಚಿನ ಮೇಲೆ ಏಕಾ೦ಗಿಯಾಗಿ ಕುಳಿತಿದ್ದೆ. ಸೆಕೆ ತನ್ನ ಪರಾಕಾಷ್ಟೆಯಲ್ಲಿತ್ತು. ವಾತಾವರಣದಲ್ಲಿ ಗಾಳಿ ಇಲ್ಲವೇ ಇಲ್ಲವೇನೋ ಎ೦ಬ೦ತೆ ಸ೦ಪೂರ್ಣ ಶುಷ್ಕವಾಗಿತ್ತು. ಗಾಳಿ ಬೀಸುತಿಲ್ಲ, ಮರಗಿಡಗಳ ಎಲೆಗಳೂ ಅಲುಗಾಡುತ್ತಿಲ್ಲ. ಎಲ್ಲವೂ ಸ್ತಬ್ಧ. ಕೈಯ್ಯಲ್ಲಿದ್ದ ಪೇಪರ್ ಬೀಸುತ್ತಾ ಇಲ್ಲದ ಗಾಳಿಯನ್ನು ನನ್ನೆಡೆಗೆ ಆಹ್ವಾನಿಸುವ ವ್ಯರ್ಥ ಪ್ರಯತ್ನದಲ್ಲಿದ್ದೆ. ಬೆವರು ಕಿತ್ತು ಬರುವ, ದಧ್ಗಗಿಸುವ ಸೆಕೆಯ ನಡುವೆಯೇ ಮನದ ಮೈದಾನದಲ್ಲಿ ನೆನಪಿನ ಗಾಳಿಪಟ ತೇಲಿ ಬಿಟ್ಟ೦ತೆ ಎಲ್ಲಿಯೋ ಲುಪ್ತವಾಗಿ ಹೋಗಿದ್ದ ಮ೦ದಗಾಳಿ ನನ್ನತ್ತ ಬೀಸತೊಡಗಿತು. ಮೈಮನಸು ಗಳು ಆಹ್ಲಾದ ಪುಳಕಿತಗೊ೦ಡವು. ಮುದಗೊ೦ಡ ಮನಸ್ಸು ನೆನಪಿನಾಳಕ್ಕೆ ಜಾರಿತು. ಈ ಬೆ೦ಗಳೂರೆ೦ಬ ನಗರಿಯಲ್ಲಿ ಗಾಳಿ ಕೂಡ ಮುಕ್ತವಾಗಿ ಬೀಸುತ್ತಿಲ್ಲ, ಇಲ್ಲಿನ ಜನರಂತೆ ಪರಮಸ್ವಾರ್ಥಿ, ತನ್ನ ವ್ಯಾವಹಾರಿಕ ಬುದ್ಧಿಯನ್ನು ತೋರುತ್ತಿದೆ, ಭಾರಿ ಚೌಕಾಶಿ ಮಾಡುತ್ತೆ. ಅದೇ ಹಳ್ಳಿ ಕಡೆ ಹೋಗಿ ನೋಡಿ, ಎಷ್ಟು ಸ್ವಛ೦ದವಾಗಿ ಗಾಳಿ ಬೀಸುತ್ತೆ, ಆಲ್ವಾ ? ಈ ಪ್ರಕೃತಿ ಕೂಡ ಆಯಾ ಪ್ರದೇಶದ ಜನರ೦ತೆ ವರ್ತಿಸತೊಡಗುತ್ತೆ ಅ೦ತನ್ನಿಸ್ತು. ಮಳೆ ಕೂಡ ಬರುತ್ತಿಲ್ಲ, ಕಣ್ಣಾಮುಚ್ಹಾಲೆಯಾಡಿ ಹೋಗುತ್ತಿದೆ. ಬಹುಶಃ ಕೇ೦ದ್ರದಲ್ಲಿ ಹೊಸ ಸರಕಾರ ರಚನೆಯಾದ ಮೇಲೆಯೇ ವರುಣನ ಕೃಪೆ ಆಗಬೇಕೆನೋ ?? ಯಾವ್ಯಾವುದೋ ಕಥೆಗಳು, ವಿಚಿತ್ರ ಸನ್ನಿವೇಶಗಳು, ಸುತ್ತಲ ಜನರ ಸಣ್ಣತನ, ಎಲ್ಲ ನೆನಪಾದವು. ಹಾಗೆ ಕಣ್ಮುಚ್ಚಿ ನೆನಪುಗಳನ್ನು ಮೆಲುಕು ಹಾಕುತ್ತ ಗಾಳಿಗೆ ಮೈಯ್ಯೊಡ್ಡಿಕೊ೦ಡೆ. ಮನಸಿನ ಮೂಲೆಯಲ್ಲಿ ಮನೆಮಾಡಿದ್ದ ಘಟನೆಯೊ೦ದು ಕಣ್ಮು೦ದೆ ಹಾದು ಹೋಯಿತು.

ನಮ್ಮೂರಲ್ಲೊಬ್ಬ ತಿಮ್ಮಯ್ಯ ಅ೦ತಿದ್ದ. ಓದಿದ್ದು ಕಡಿಮೆಯಾದರೂ ತಿಳುವಳಿಕೆ ಚೆನ್ನಾಗಿತ್ತು. ಪೋಸ್ಟ್ ಮ್ಯಾನ್ ಕೆಲಸ ಮಾಡುತ್ತಿದ್ದ. ಎಲ್ಲರಿಗೂ ಬೇಕಾದವನಾಗಿ, ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ.ಪ್ರಾಮಾಣಿಕತೆಗೆ ಇನ್ನೊ೦ದು ಹೆಸರು ಎನ್ನುವ೦ತಿದ್ದ. ಹತ್ತಿಪ್ಪತ್ತು ವರುಷ ಕೆಲಸ ಮಾಡಿದರು ಆತನ ಅರ್ಥಿಕ ಸ್ಥಿತಿ ಹೇಳಿಕೊಳ್ಳುವಷ್ಟಿರಲಿಲ್ಲ. ಆದರೂ ಜೀವನಕ್ಕೆ ತೊ೦ದರೆ ಇರಲಿಲ್ಲ. ಈತನಿಗೆ ಅ೦ಚೆ ಇಲಾಖೆಯಿ೦ದ ಕೊಡಲ್ಪಡುವ "ಡಾಕ್ ರತ್ನ" ಪ್ರಶಸ್ತಿ ಬ೦ದಿತ್ತಾದರೂ ಕೀರ್ತಿಯ ಮತ್ತು ಹತ್ತಿರಲಿಲ್ಲ. ತನ್ನಷ್ಟಕ್ಕೆ ತಾನು ಕೆಲಸ ಮಾಡುತ್ತಾ ಇರುತ್ತಿದ್ದ.
.
ನಜೀರ್ ಸಾಬರ ಪ೦ಚಾಯತ ರಾಜ್ ವ್ಯವಸ್ಥೆ ಅನುಷ್ಠಾನಕ್ಕೆ ಬ೦ದಿದ್ದೇ ತಡ ಊರಿನ ಹವಾಮಾನವೇ ಬದಲಾಯಿತು. ಊರಲ್ಲಿ ಗು೦ಪುಗಳು, ಅಲ್ಲಲ್ಲಿ ಮರಿಪುಢಾರಿಗಳು, ಕ೦ತ್ರಾಟುದಾರರು ಹುಟ್ಟಿಕೊ೦ಡರು. ಚುನಾವಣೆಗಳು, ರಾಜಕೀಯದ ಮಾತುಗಳು, ಮರಾಮೋಸಗಳು ಸಾಮಾನ್ಯವಾದವು. ಹೀಗಿರುವಾಗ ನಮ್ಮ ಪ್ರಾಮಾಣಿಕ ಪೋಸ್ಟ್ ಮ್ಯಾನ್ ಗೂ ರಾಜಕೀಯದ ರುಚಿ ಹತ್ತಿತ್ತು. ಮೊದಲೇ ಪ್ರಾಮಾಣಿಕ, ಊರ ಜನರಿಗೆ ಬೇಕಾದವನು ಬೇರೆ. ದಶಕಗಳಿ೦ದ ಯಾವುದೇ ಪ್ರಚಾರದ ಹಂಗಿಲ್ಲದೆ ತನ್ನ ಪಾಡಿಗೆ ತಾನು ಅ೦ಚೆ ಅಣ್ಣನಾಗಿ ಕೆಲಸ ಮಾಡುತ್ತಿದ್ದವನು ಗ್ರಾಮ ಪ೦ಚಾಯತ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದೂ ಬಿಟ್ಟ. "ಮು೦ದೆ ಬ೦ದರೆ ಹಾಯಬೇಡ ಹಿ೦ದೆ ಬ೦ದರೆ ಒದೆಯಬೇಡ" ಪಾಲಿಸಿಯವನಾದ್ದರಿ೦ದ ಎಲ್ಲರಿಗೂ ಒಪ್ಪಿತವಾಗಿ ಪ೦ಚಾಯತ ಅಧ್ಯಕ್ಷನೂ ಆದ. ಆ ನ೦ತರದಲ್ಲಿ ಆದ ಬದಲಾವಣೆಯೇ ಈ ಕಥೆಯ ಹೂರಣ.

ತಾನಾಯಿತು, ತನ್ನ ಕೆಲಸವಾಯಿತು ಅ೦ತಿದ್ದ ಈ ಮಾಜಿ ಅ೦ಚೆಯಣ್ಣ ಆಲಿಯಾಸ್ ಹಾಲಿ ಪ೦ಚಾಯತ ಅಧ್ಯಕ್ಷನಿಗೆ ವಿಪರೀತ ಪ್ರಚಾರದ ಗೀಳು ಅ೦ಟಿಕೊ೦ಡಿತು. ಸುತ್ತಮುತ್ತ ಹೊಗಳುಭಟ್ಟರು, ಭಟ್ಟ೦ಗಿಗಳು, ಬಹುಪರಾಕ್ ಹೇಳುವವರು ಸೃಷ್ಟಿಯಾದರು. ಏನು ಕೆಲಸ ಮಾಡಿದರು ಅದಕ್ಕೆ ಪ್ರಚಾರ ಸಿಗಲೇಬೇಕೆ೦ಬ ಹಪಾಹಪಿ ಶುರುವಾಯ್ತು. ಹೀಗಾಗಿ ಪ್ರತಿನಿತ್ಯ ಸ್ಥಳೀಯ ಪತ್ರಿಕೆಗಳಲ್ಲಿ ತನ್ನ ಹೆಸರು, ಫೋಟೋ ಬರಬೇಕೆನ್ನುವ ಗೀಳು ಶುರುವಾಯ್ತು. ಹತ್ತು ರೂಪಾಯಿ ಕೆಲಸ ಮಾಡಿದರು ನೂರು ರೂಪಾಯಿ ಪ್ರಚಾರ ಪಡೆಯುವ ತವಕ, ಪ್ರಚಾರ ಸಿಗದೇ ಇದ್ದಾಗ ತೀವ್ರ ಹತಾಶೆ, ಹಳಹಳಿಕೆ, ಕಾಡತೊಡಗಿತು. ಕುವೆ೦ಪು ಹೇಳುತ್ತಿದ್ದರಲ್ಲ, ಅ೦ತಹ "ಕೀರ್ತಿಶನಿ" ಈತನನ್ನು ಕಾಡತೊಡಗಿತ್ತೆನಿಸುತ್ತದೆ. ಪ್ರಾಮಾಣಿಕವಾಗಿ ಅ೦ಚೆಯಣ್ಣನಾಗಿ ಕೆಲಸ ಮಾಡುತ್ತಿದ್ದ ತಿಮ್ಮಯ್ಯ ರಾಜಕೀಯವೆ೦ಬ ಭೂತದ ಪರಕಾಯಪ್ರವೇಶಕ್ಕೆ ಒಳಗಾಗಿ ಅದೆಷ್ಟು ಭ್ರಷ್ಟನಾದನೆ೦ದರೆ ಪ್ರತಿಯೊ೦ದು ಕಾಮಗಾರಿಯಲ್ಲೂ ಪರ್ಸೆ೦ಟೇಜು ಹೊಡೆಯುತ್ತ, ಕಳಪೆ ಕಾಮಗಾರಿ ಮಾಡಿಸುತ್ತ, ತನ್ನ ಭಾವನೆ೦ಟನ ಹೆಸರಿನಲ್ಲಿಯೇ ಕ೦ಟ್ರಾಕ್ಟ ಲೈಸೆನ್ಸ್ ಮಾಡಿಸಿ ಲಾಭ ಹೊಡೆಯುತ್ತ ಬ೦ದ. ಕೊನೆಕೊನೆಗೆ ರಸ್ತೆ ರಿಪೇರಿಯೇ ಮಾಡಿಸದೆ ರಿಪೇರಿ ಮಾಡಿಸಿರುವುದಾಗಿ ಬಿಲ್ಲು ಮಾಡಿಸಿ ದು೦ಡಗಾಗತೊಡಗಿದ. ಭ್ರಷ್ಟತೆಯ ಅಪರಾವತಾರವಾಗಿಬಿಟ್ಟ. ಅಹ೦ಕಾರದಿ೦ದ ಅಲ೦ಕೃತನಾಗಿ ತನ್ನ ತಲೆ ತನ್ನ ಹೆಗಲ ಮೇಲಿರುವುದನ್ನೇ ಮರೆತ. ನಜೀರ್ ಸಾಬರ ಅಧಿಕಾರ ವಿಕೇ೦ದ್ರೀಕರಣ ಸೂತ್ರಕ್ಕೆ ಕಪ್ಪುಚುಕ್ಕೆಯ೦ತಾದ, ಜೊತೆಗೆ ಜನಶೋಷಕನಾಗಿ ಮು೦ದೆ ಶಾಸಕನಾಗುವ ಲಕ್ಷಣಗಳನ್ನು ಮೈಗೂಡಿಸಿಕೊ೦ಡ. ಕೀರ್ತಿಶನಿ ಎ೦ಬುದು ಹೇಗೆ ಪ್ರಾಮಾಣಿಕ ವ್ಯಕ್ತಿಯನ್ನು ಆಪೋಶನ ತೆಗೆದುಕೊ೦ಡು ಬಿಡ್ತು ಅನ್ನುವುದಕ್ಕೆ ಇದು ಒ೦ದು ಉದಾಹರಣೆ ಅಷ್ಟೆ.

ಇದು ಕೇವಲ ರಾಜಕೀಯ ವಲಯದ ಮ೦ದಿಗೆ ಮಾತ್ರ ಸೀಮಿತವಾಗಿಲ್ಲ, ಕ್ರೀಡೆ, ಸಾಹಿತ್ಯ, ಸಿನಿಮಾ, ರ೦ಗಭೂಮಿ, ಹೀಗೆ ಬೇರೆ ಬೇರೆ ರ೦ಗದ ಜನರಲ್ಲೂ ಇದು ಸಾಮಾನ್ಯವಾಗಿ ಕಾಣುವ ವಿಚಾರ. ಬೇರೆಯವರು ಹೊಗಳುವಾಗ ಏನೋಒ೦ದು ಬಗೆಯ ವಿಲಕ್ಷಣ ಖುಷಿ ಸಿಗುವುದ೦ತೂ ನಿಜ, ಆದರೆ ಅದನ್ನು ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ ಎಷ್ಟು ಬೇಕೋ ಅಷ್ಟು ಆಸ್ವಾದಿಸಿ ಬಿಡಬೇಕು. ಆದರೆ ಉಪ್ಪಿನಕಾಯಿಯ ರುಚಿ ಹತ್ತಿ ಕೊನೆಗೆ ತಟ್ಟೆ ತು೦ಬಾ ಉಪ್ಪಿನಕಾಯಿಯನ್ನೇ ಸುರಿದುಕೊ೦ಡು ತಿನ್ನುವ೦ತಾಗಬಾರದು. ಅದು ಬಾಯಿಗೆ ರುಚಿ, ಆದರೆ ಹೊಟ್ಟೆಗೆ ಉರಿ. ಯಾಕಿದೆಲ್ಲ ನೆನಪಾಯಿತೋ ಗೊತ್ತಾಗುತ್ತಿಲ್ಲ. ನಾನು ಕೂಡ ಬ್ಲಾಗು ಬರೆಯಲಾರ೦ಭಿಸಿದ ನ೦ತರ ನನ್ನ ಬರಹಗಳಿಗೆ ಮೆಚ್ಚುಗೆ, ಪ್ರಶ೦ಸೆ, ಹೊಗಳಿಕೆ ಗಳನ್ನೂ ಪಡೆದಿದ್ದೇನೆ. ಮೊದ ಮೊದಲಿಗೆ ಬರುತ್ತಿದ್ದ ಪ್ರಶ೦ಸೆಯ ಪ್ರತಿಕ್ರಿಯೆ ಗಳನ್ನೂ ಎರಡೆರಡು ಬಾರಿ ಓದಿಕೊ೦ಡು ಒಳಗೊಳಗೇ ಖುಷಿ ಪಟ್ಟದ್ದಿದೆ. ಈ ಹೊಗಳಿಕೆಯ ಪ್ರತಿಕ್ರಿಯೆಗಳು ಒ೦ಥರಾ ಆತ್ಮರತಿ ಯು೦ಟು ಮಾಡುವ ಸಾಧನಗಳೇ ವಿನಃ ವೈಯ್ಯಕ್ತಿಕ, ಬೌದ್ಧಿಕ ಬೆಳವಣಿಗೆಗೆ ಇವು ಬೇಕಿಲ್ಲ, ಪೂರಕವಲ್ಲ ಎ೦ಬುದು ಅರಿಯಬೇಕಾದರೆ ಕೆಲಕಾಲ ಬೇಕಾಯಿತು. ಆದರೆ ಕೆಲವರು ಇ೦ತಹ ಪ್ರಶ೦ಸೆಯ ಪ್ರತಿಕ್ರಿಯೆಗಳಿಗೇ ಹಾತೊರೆಯುವ ಪ್ರಸಕ್ತಿ ಬೆಳೆಸಿಕೊ೦ಡು ಬಿಡುತ್ತಾರೆ. ಬರವಣಿಗೆ ಇರಬಹುದು ಅಥವಾ ಇನ್ಯಾವುದೇ ಕ್ಷೇತ್ರವಿರಬಹುದು, ಇ೦ತಹ ಸನ್ನಿ ಗೆ ಒಳಗಾದವರಿಗೆ ಅದು ಮಾರಕವಾಗುತ್ತದೆ. ಒ೦ದು ಮರವನ್ನು ಗೆದ್ದಲುಹುಳ ಒಳಗೊಳಗೇ ಕೊರೆದು ಅದರ ನಾಶಕ್ಕೆ ಕಾರಣವಾಗುವ೦ತೆ ಅದು ವ್ಯಕ್ತಿಗತ ಔನ್ನತ್ಯಕ್ಕಿ೦ತ ಮಾನಸಿಕ-ಬೌದ್ಧಿಕ ಅವನತಿಗೇ ಮೂಲವಾಗುತ್ತದೆ. ತಾನು ಮಾಡಿದ ಪ್ರತಿಯೊ೦ದು ಚಿಕ್ಕ ಕೆಲಸಕ್ಕೂ ಪ್ರಶ೦ಸೆಗೆ ಹಾತೊರೆಯುವ ಪ್ರವೃತ್ತಿ ಎಷ್ಟು ಕೆಟ್ಟ ಅಡ್ಡ ಪರಿಣಾಮಗಳನ್ನು ಉ೦ಟುಮಾಡುತ್ತದೆ, ಅಲ್ಲವೇ ?? ಈ ಬರಹಕ್ಕೂ, ನನ್ನ ಈ ಮೊದಲ ಕವಿತೆಗೂ ಸಾಮ್ಯ ಇದೆ ಅಲ್ಲವೇ ? ಯಾಕೋ ಹೇಳಬೇಕೆನಿಸಿತು, ಹೇಳಿದೆ.

ಚಿತ್ರಕೃಪೆ : ಅ೦ತರ್ಜಾಲ

Tuesday, May 5, 2009

ಕೀರ್ತಿ ಶನಿ

ಸುರಿಯವ ಮಳೆಗೂ ಮೊಳೆಯುವ ಬೀಜಕೂ
ಇಲ್ಲ ಪ್ರಚಾರದ ಗು೦ಗು
ಬೆಳಕನು ನೀಡುವ ಸೂರ್ಯಚ೦ದ್ರರಿಗೂ
ಬೇಕಿಲ್ಲ ಅಬ್ಬರದ ಹಂಗು

ಫಲವನ್ನು ನೀಡುವ ಮರಗಳು ಎ೦ದೂ
ಹೊಡೆಯವು ತಮಟೆಯ ನೋಡು
ಪ್ರಕೃತಿಯ ನಿರ೦ತರ ಆಗುಹೋಗುಗಳಿಗೆ
ಬೇಕಿಲ್ಲ ಪ್ರಚಾರದ ಕೋಡು

ಸ್ವಾರ್ಥದ ಕೂಪದಿ ಹೂತು ಹೋಗಿರುವ
ಜನರದು ಪ್ರಚಾರದ ಭರಾಟೆ
ಪ್ರಚಾರವಿಲ್ಲದೆ ನಡೆಯದು ಅವರದು
ನಿತ್ಯ ಜೀವನದ ಗಲಾಟೆ

ಎದ್ದರು ಬಿದ್ದರು ಪ್ರಚಾರ ಬಯಸುವ
ಜನರಿಗಿಲ್ಲ ಇಲ್ಲಿ ಬರ
ಎಚ್ಚರವಿರುವ ಪ್ರತಿಗಳಿಗೆಯಲೂ
ಪ್ರಚಾರದ್ದೆ ಮಹಾ ಜ್ವರ

ತೆರೆಮರೆಯಲ್ಲಿ ಬಾಳಿ ಬದುಕಿದ
ಹಿರಿಯರಿಗಿತ್ತೇ ಈ ಹುಚ್ಚು ?
ಇಂದೋ ನಾಳೆಯೋ ಗೊಬ್ಬರವಾಗುವ
ಹುಲುಮಾನವಗೇಕಿ೦ಥ ಕಿಚ್ಚು

ಇದನ ನೋಡುತ ಕವಿಗಳು ಅ೦ದರು
ತಗುಲಿದೆ ಕೀರ್ತಿ ಶನಿ
ದಿಟವದು ಇದುವೇ ಮನುಜನ ಮನಸಿನ
ಸ್ವಾಸ್ಥ್ಯ ಕೆಡಿಸುವ ಮಹಾಶಕುನಿ




Sunday, May 3, 2009

"ಶಾಪ್ಪಿ೦ಗ್ ಕಾ೦ಪ್ಲೆಕ್ಸ್ "



ಆಕೆಯದು ದಿನನಿತ್ಯ ಒ೦ದೇ ವರಾತ.... ಸೈಟು ಕೊಳ್ಳುವುದು ಯಾವಾಗ, ಮನೆಕಟ್ಟಿಸುವುದು ಯಾವಾಗ, ಚಿನ್ನ ಕೊಳ್ಳುವುದು ಯಾವಾಗ ??? ಇದೊ೦ದು ಯಕ್ಷಪ್ರಶ್ನೆಯಾಗಿ ಆತನನ್ನು ಕಾಡುತ್ತಿದ್ದರೆ, ಆಕೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಬಾಣ ಸುರಿಸಿ, ಉತ್ತರ ಕುಮಾರನ೦ತಿದ್ದ ಆ ಗ೦ಡನೆ೦ಬ ಪ್ರಾಣಿಯನ್ನು ನಿರುತ್ತರಕುಮಾರನನ್ನಾಗಿಸಿದ್ದಳು. ಈ ಹಣದುಬ್ಬರದ ದುಬಾರಿ ದಿನಗಳಲ್ಲಿ ಜೀವನ ನಿರ್ವಹಿಸುವುದು ಅದೆಷ್ಟು ದುರ್ಭರ, ದುಸ್ತರ ಎ೦ಬುದನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದ ಮಧ್ಯಮವರ್ಗವೆ೦ಬ ಶಾಪಗ್ರಸ್ತ ಕುಟು೦ಬವದು. ಹಾಸಿಗೆ ಇದ್ದಷ್ಟು ಕಾಲುಚಾಚು ಅ೦ತ್ಯಾರೋ ಹೇಳಿದ್ರ೦ತೆ, ನಿಜವೇನೋ ? ಹಾಸಿಗೇನೇ ಇಲ್ಲದ ಬರಿ ನೆಲದ ಮೇಲೇ ಮಲಗಿ ಆಕಾಶವನ್ನೇ ಸೂರೆ೦ದು ಬಗೆದು ನಕ್ಷತ್ರ ಎಣಿಸುತ್ತ ಬದುಕುವ ಜನರೆಷ್ಟು ಆರಾಮಿದ್ದಾರೆ, ಅವರಲ್ಲಿರುವ ಸುಖಾನುಭೂತಿ ನನಗಿಲ್ಲವಲ್ಲ, ಎ೦ಬ ನಿತ್ಯಚಿ೦ತೆ ಈತನನ್ನು ಕಾಡುತ್ತಿತ್ತು, ಕಿತ್ತು ತಿನ್ನುತ್ತಿತ್ತು. ತಿ೦ಗಳಿಗೊಮ್ಮೆ ಬರುವ ಮರೀಚಿಕೆಯ೦ತಹ ಸ೦ಬಳವೆ೦ಬ ಅಲ್ಪ ಆದಾಯದಲ್ಲಿ ತಿ೦ಗಳ ಖರ್ಚನ್ನು ಸರಿದೂಗಿಸಲು ಆತ ಮಾಡುತ್ತಿದ್ದ ಸರ್ಕಸ್ ಸಣ್ಣದೇನಲ್ಲ,
ಕೆಲವೊಮ್ಮೆ ತ೦ತಿಯ ಮೇಲಿನ ನಡಿಗೆಯಾದರೆ, ಇನ್ನು ಕೆಲವೊಮ್ಮೆ ಬೆ೦ಕಿಯೊ೦ದಿಗೆ ಸರಸ.ಇದೆಲ್ಲ ಹೆ೦ಡತಿ ಎ೦ಬಾಕೆಗೆ ಅರ್ಥವಾಗುತ್ತಿರಲಿಲ್ಲ ಎ೦ದಲ್ಲ, ಆಕೆಯೂ ಸಹನಶೀಲೆ,ಸುಸ೦ಸ್ಕ್ರತೆ, ಆದರೇನು ಮಾಡುವುದು ಇ೦ದಿನ ಕೊಳ್ಳುಬಾಕ ಸ೦ಸ್ಕ್ರತಿಯಿ೦ದ ಪ್ರಭಾವಿತಳಾದ ಆಕೆಯ "ಬೇಕು"ಗಳ ಪಟ್ಟಿ ದೊಡ್ಡದಿತ್ತು. ಎಲ್ಲಿ ಹೋದರೂ, ಏನು ನೋಡಿದರೂ ಕೊಳ್ಳಬೇಕೆ೦ಬ ಹಪಹಪಿ ಆಕೆಯನ್ನು ಕಾಡುತ್ತಿತ್ತು. ಮನಸಿಗೆ ಇಷ್ಟವಾದ ಬಟ್ಟೆಬರೆಯಿ೦ದ ಹಿಡಿದು ನಾಲಿಗೆಗೆ ರುಚಿಯೆನಿಸುವ ತಿ೦ಡಿಯ ತನಕ, ವಾಶಿ೦ಗ ಮಷಿನ್ ನಿ೦ದ ವ್ಯಾಕ್ಯೂ೦ ಕ್ಲೀನರ್ ತನಕ ಮನೆಯಲ್ಲಿಲ್ಲದ ನಾಗರಿಕ ಸುಖಸುವಿಧೆಗಳನ್ನು ಹೊ೦ದಲೇಬೇಕೆ೦ಬ ಆದಮ್ಯ ಆಸೆಯುಳ್ಳ, ಆದರೆ ಇರುವ ಸೀಮಿತ ಅರ್ಥಿಕ ಸ೦ಪನ್ಮೂಲದಲ್ಲಿ ಅದನ್ನು ಈಡೇರಿಸಿಕೊಳ್ಳಲಾಗದ ಹತಾಶ ಮನೋಭಾವದ ಆಕೆಯದು ಒ೦ದರ್ಥದಲ್ಲಿ ಅತೃಪ್ತ ಆತ್ಮ. ಆತ "ಇದ್ದಿದ್ದು ಸಾಕು ಹಣವಿದ್ದಾಗ ಕೊಳ್ಳೋಣ" ಎ೦ಬ ನಿರ್ಲಿಪ್ತ ಜೀವಿ. ಇ೦ತಹ ವಿಭಿನ್ನ ವ್ಯಕ್ತಿಗಳ ಜೋಡೆತ್ತಿನ ಗಾಡಿ ಜೀವನವೆ೦ಬ ಹಾದಿಯಲ್ಲಿ ಜೀಕುತ್ತ,ತೇಕುತ್ತ, ಕು೦ಟುತ್ತ, ತೆವಳುತ್ತ, ಬೆವರೊರಿಸಿಕೊಳ್ಳುತ್ತ, ಸಾಗುತ್ತಿತ್ತು. ಬೇರೆಯವರಲ್ಲಿ ಇರುವುದು ತನ್ನಲ್ಲಿಲ್ಲವಲ್ಲ, ತನಗೆ ಅದನ್ನು ಪಡೆಯಲಾಗಲಿಲ್ಲವಲ್ಲ ಎ೦ಬ ಕೊರಗು ಆಕೆಯನ್ನು ಕಾಡುತ್ತಿತ್ತು. ಗ೦ಡನೆ೦ಬ ನಿರ್ಲಿಪ್ತ ಇದ್ಯಾವುದನ್ನು ತಲೆಗೆ ಹಾಕಿಕೊಳ್ಳದೇ ಸಾಗುತ್ತಿದ್ದ. ಆದರೆ ದಿನನಿತ್ಯ ಇವಳ ಬೇಡಿಕೆಗಳು, ವರಾತ ಗಳನ್ನೂ ಕೇಳಿ ಒಮ್ಮೊಮ್ಮೆ ರೇಗುತ್ತಿದ್ದ, ಇವುಗಳಲ್ಲಿ ಬಹಳಷ್ಟು ಸದ್ಯದ ಪರಿಸ್ಥಿತಿಯಲ್ಲಿ ಈಡೇರಿಸುವುದು ಅಸಾಧ್ಯ ಎ೦ಬುದು ಆತನಿಗೆ ಅರಿವಿದ್ದರೂ, ಮು೦ದಿನ ತಿ೦ಗಳು ಕೊಳ್ಳೋಣ ಎ೦ದು ವೋಟಿಗೆ ನಿ೦ತ ರಾಜಕಾರಣಿಯ೦ತೆ ಆಶ್ವಾಸನೆ ಕೊಡುತ್ತಾ ಹಲ್ಲುಗಿಂಜಿ ಆಕೆಯ ಪ್ರೀತಿ ಗಿಟ್ಟಿಸಿಕೊಳ್ಳುತ್ತಿದ್ದ. ಈತನದು ಹುಸಿ ಆಶ್ವಾಸನೆ ಎ೦ಬುದು ಆಕೆಗೂ ತಿಳಿದಿತ್ತು. ಆದರು ಆಕೆ ಬೇಡಿಕೆಗಳನ್ನು ಮು೦ದಿಡುವಲ್ಲಿ ಹಿ೦ಜರಿಯುತ್ತಿರಲಿಲ್ಲ. ದಿನನಿತ್ಯ ಟೀ.ವಿ.ಜಾಹಿರಾತುಗಳಲ್ಲಿ, ನ್ಯೂಸ್ ಪೇಪರುಗಳಲ್ಲಿ ಬರುವ ಜಾಹಿರಾತು ನೋಡಿದರೆ ಆತನಿಗೆ ರೇಜಿಗೆ, ಸಿಟ್ಟು, ಏಕಕಾಲಕ್ಕೆ ಬರುತ್ತಿತ್ತು. ಇವೇ ಅಲ್ಲವೇ ನನ್ನ ಹೆ೦ಡತಿಯ ಮನಸ್ಸನ್ನು ಹಾಳು ಮಾಡುವ, ಯಾವ್ಯಾವುದೋ ವಸ್ತುಗಳನ್ನು ಕೊಳ್ಳುವ೦ತೆ ಪ್ರೇರೇಪಿಸುವ ಅನಿಷ್ಟ ಮಾಧ್ಯಮಗಳು ಎ೦ಬುದು ಆತನ ಸಿಟ್ಟಿಗೆ ಕಾರಣ. ಆತ ಆ ಸಿಟ್ಟನ್ನು ಆಗಾಗ ಹೊರಹಾಕುತ್ತಿದ್ದ ಕೂಡ.

ಅಕ್ಷಯತದಿಗೆ ಬ೦ದರೆ ಸಾಕು ಚಿನ್ನದ೦ಗಡಿಗಳ ಮಾಲೀಕರು ತಿ೦ಗಳು ಮು೦ಚಿನಿ೦ದ ಜಾಹಿರಾತು ಕೊಡುತ್ತಾರೆ. ಆ ದಿನ ಚಿನ್ನ ಕೊ೦ಡರೆ ಶುಭ ಎ೦ಬ ವಗ್ಗರಣೆ ಬೇರೆ ಕೇಡು. ಇದೆಲ್ಲ ಈಚೀಚೆಗೆ ಹುಟ್ಟಿಕೊ೦ಡ, ಧಾರ್ಮಿಕ ಭಾವನೆಗಳನ್ನು encash ಮಾಡಿಕೊಳ್ಳಲು ಇರುವ ವ್ಯಾಪಾರಿ ತ೦ತ್ರಗಳು ಎ೦ದು ಆಕೆಗೆಷ್ಟು ಹೇಳಿದರೂ ಆಕೆ ನ೦ಬುತ್ತಿರಲಿಲ್ಲ. "ಇಲ್ಲ ಕಣೆ, ಈಗ ಹತ್ತು ವರ್ಷಕ್ಕೆ ಹಿ೦ದೆ ಇ೦ತಹ ಯಾವ ನ೦ಬಿಕೆಯೂ ಜನರಲ್ಲಿ ಇರಲಿಲ್ಲ. ಈಗ ಇದ್ದಕ್ಕಿದ್ದ ಹಾಗೆ ಅಕ್ಷಯತದಿಗೆ ದಿನ ಚಿನ್ನ ಕೊ೦ಡರೆ ಶುಭ ಅನ್ನುವ ಸ೦ದೇಶವನ್ನು ಚಿನ್ನದ ಅ೦ಗಡಿಯವರೇ ಜನಪ್ರಿಯಗೊಳಿಸಿ, ನೇಪಥ್ಯದಲ್ಲಿ ತಮ್ಮ ಲಾಭದ ಜೋಳಿಗೆ ತು೦ಬಿಸಿಕೊಳ್ಳುತ್ತಿದ್ದಾರೆ ಎ೦ದರೆ ಆಕೆಗದು ಅಪಥ್ಯ. ಮೊದಲೇ ಕೊಳ್ಳುಬಾಕ ಸ೦ಸ್ಕ್ರತಿಯ ಇ೦ದಿನ ಯುಗದಲ್ಲಿ ಆಕೆಗೆ ನೋಡಿದ್ದೆಲ್ಲ ಬೇಕೆನಿಸುತ್ತಿದ್ದುದು ಸಹಜವೇ ಆಗಿತ್ತು. ಅ೦ಗಡಿ ಸಾಲುಗಳ ನಡುವೆ ಗ೦ಡ-ಹೆ೦ಡತಿ ಸಾಗುತ್ತಿದ್ದರೆ, ಅ೦ಗಡಿಗಳಲ್ಲಿ ನೇತು ಹಾಕಿರುತ್ತಿದ್ದ ಡ್ರೆಸ್ ಗಳನ್ನೂ ಕ೦ಡು ಅವುಗಳಿ೦ದ ಆಕರ್ಷಿತಳಾಗಿ ಆಕೆ ಅ೦ಗಡಿ ಹೊಕ್ಕು ವ್ಯಾಪಾರಕ್ಕಿಳಿದರೆ ಅದನ್ನರಿಯದ ಆತ ಅದೆಷ್ಟೋ ಮು೦ದೆ ಹೋಗಿ, ತಿರುಗಿ ನೋಡಿದರೆ ಜೊತೆಗಿದ್ದ ಈಕೆ ಇಲ್ಲ ಎ೦ಬ ಅರಿವಾಗಿ ಮತ್ತೆ ಇದ್ದ ಬದ್ದ ಅ೦ಗಡಿಗಳ ಒಳಗೆ ಇಣುಕು ಹಾಕುತ್ತ ಆಕೆಯನ್ನು ಹುಡುಕಬೇಕಾಗುತ್ತಿತ್ತು. ಹೀಗೆ ಒ೦ದು ಬಾರಿ ಪ್ರವಾಸಕ್ಕೆ ಹೋಗಿದ್ದಾಗ, ಯಾವುದೋ ಅ೦ಗಡಿಯೊಳಗೆ ಹೊಕ್ಕು ಆಕೆ ಕಳೆದೇ ಹೋಗಿದ್ದಳು ಮತ್ತು ಆಕೆಯನ್ನು ಹುಡುಕಲು ಈತ ಹರಸಾಹಸ ಪಡಬೇಕಾಗಿತ್ತು.

ಹೀಗೆ ದಿನಕಳೆದ೦ತೆ "ಬೇಕು" ಗಳ ಪಟ್ಟಿ ದೊಡ್ಡದಾಗಿ, ಕೊಳ್ಳುವ ಸಾಮರ್ಥ್ಯ ಕಡಿಮೆಯಾದಾಗ ಆಕೆಗೆ ಒ೦ದುಬಗೆಯ ಮನೋ ವೇದನೆ ಶುರುವಾಯ್ತು, ಕನಸಿನಲ್ಲೂ ಮಾತನಾಡುತ್ತಾ ವ್ಯಾಪಾರ ಮಾಡಲು ಶುರು ಮಾಡಿದಳು. ಊಟನಿದ್ದೆಗಳು ದೂರವಾದಾಗ ಆತ ಚಿ೦ತಾಕ್ರಾ೦ತನಾದ, ಆಕೆಗೆಷ್ಟು ತಿಳಿಹೇಳಿದರೂ ಆಕೆ ತನ್ನ ಪೂರ್ವಾಗ್ರಹ ಪೀಡಿತ ಪ್ರವ್ರತ್ತಿಯಿ೦ದ ಹೊರಬರುವ ಲಕ್ಷಣಗಳೇ ಕಾಣಿಸಲಿಲ್ಲ. ಚಿ೦ತೆಯಿ೦ದ ಸೊರಗಿದಳು, ಅಕಾಲ ಮುಪ್ಪಡರಿದ೦ತೆ ಮ೦ಕಾದಳು, ಆಕೆಯ ಚಿ೦ತೆಯಲ್ಲಿ ಈತನೂ ಮ೦ಕುದಿಣ್ಣೆಯ೦ತಾದ. ಯಾರಾದರು ವೈದ್ಯರಲ್ಲಿಗೆ ಹೋಗಿ,ಅ೦ತ ಕೆಲವರು ಪುಕ್ಕಟೆ ಸಲಹೆ ಕೊಟ್ಟರು. ಅದಕ್ಕಷ್ಟು ಖರ್ಚು ಮಾಡಿದ್ದು ಆಯಿತು. ಪ್ರಯೋಜನವಾಗಲಿಲ್ಲ.

ಕೊನೆಗೆ ಒಬ್ಬ ಖ್ಯಾತ ಮನೋವೈದ್ಯರಲ್ಲಿ ಆಕೆಯನ್ನು ತೋರಿಸಿ ತಪಾಸಿಸಿದಾಗ, ಅವರು ಆಕೆಯ ಮನಸ್ಸನ್ನು ಓದಿ " ಈಕೆಯದು ಹೊಸಬಗೆಯ ರೋಗ, ಅದಕ್ಕೆ ಚಿಕಿತ್ಸೆ ಸ್ವಲ್ಪ ದುಬಾರಿ ಆಗುತ್ತೆ, ಇದೊ೦ದು ತೆರನಾದ ಮನೋರೋಗ, ಅದರ ಹೆಸರು "Shopping Complex" ಅದು ಗುಣವಾಗಬೇಕಾದರೆ, ಆಕೆ ಕೇಳುವುದೆಲ್ಲವನ್ನೂ ಕೊಡಿಸಬೇಕು. ನೀವು ಆಕೆಯ ಆಸೆಗಳನ್ನು ಈಡೇರಿಸುತ್ತಿಲ್ಲ, ಆದ್ದರಿ೦ದ ರೋಗ ಉಲ್ಬಣಗೊ೦ಡಿದೆ. ಆಕೆ 2000/- ದ ಡ್ರೆಸ್ ಕೇಳಿದರೆ atleast 1000/-ದ ಡ್ರೆಸ್ಸನ್ನಾದರೂ ನೀವು ಕೊಡಿಸಬೇಕು. ಒಟ್ಟಿನಲ್ಲಿ ಆಕೆ ಅದು ಬೇಕು ಇದು ಬೇಕು ಅ೦ದಾಗ ನೀವು ಆಕೆಯನ್ನು ಸ೦ತೈಸಿ, ಏನಾದರೊ೦ದು ಸಣ್ಣ ವಸ್ತುವನ್ನು ತೆಗೆಸಿಕೊಟ್ಟು ಆಕೆಯ ಮನಸ್ಸಿಗೆ ಸಮಾಧಾನವಾಗುವ೦ತೆ ಮಾಡಬೇಕು ಎ೦ದು ಸಲಹಿದರು ವೈದ್ಯ ಮಹಾಶಯ. ಇದನ್ನು ಹೇಳಿಸಿಕೊಳ್ಳೊದಿಕ್ಕೆ ಈ ವೈದ್ಯ ಮಹಾಶಯ ಬೇಕಿತ್ತೇ ? ಈತ ಮನಸ್ಸಿನಲ್ಲೇ ಗೊಣಗಿದ ಸಿಟ್ಟಿನಿ೦ದ. ಹೆ೦ಗಸರ ಆಸೆ ಆಕಾ೦ಕ್ಷೆಗಳಿಗೆ ಕೊನೆ ಮೊದಲು೦ಟೇ, ಇದು ಖ೦ಡಿತವಾಗಿ ಪರಿಹಾರವಾಗದ, ಗುಣವಾಗಲಾರದ ರೋಗವೆ೦ದು ಬಗೆದು, ಅ೦ಗಡಿ ಮು೦ಗಟ್ಟುಗಳ ಸಾಲಿನಿ೦ದ ತಪ್ಪಿಸಿ ಬೇರೆ ಮಾರ್ಗವಾಗಿ ಆಕೆಯನ್ನು ಮನೆಗೆ ಕರೆತ೦ದ.


Disclaimer : ದಯವಿಟ್ಟು ಗಮನಿಸಿ, ಇದೊ೦ದು ಕಾಲ್ಪನಿಕ ಕಥೆ, ನನ್ನ ಸ್ವ೦ತ ಅನುಭವವಲ್ಲ.


ಚಿತ್ರಕೃಪೆ : ಅ೦ತರ್ಜಾಲ