Thursday, April 30, 2009

ಕಾರ್ಮಿಕರ ದಿನದ೦ದು ನಿನ್ನ ಪೊಗಳುವರು


ಗುಳಿಬಿದ್ದ ಕಣ್ಣುಗಳು ಕಳೆಗೆಟ್ಟ ಮುಖಮೋರೆ
ಸೊರಗೆದ್ದ ಪಕ್ಕೆಲುಬು ಇದು ನಿನ್ನ ಚಹರೆ
ಸೆರೆಕುಡಿದು ತೂರಾಡಿ ನಿಟ್ಟುಸಿರ ಮೊರೆ ಹೋಗಿ
ಬದುಕುವೆಯ ಮನೆಮ೦ದಿ ಸುಖವ ಮರೆತು

ಸೇತುವೆಯೋ ರಸ್ತೆಯೋ,ಬಹುಮಹಡಿ ಕಟ್ಟಡವೋ
ಶ್ರಮದ ಕೆಲಸಕೆ ಬೇಕು ನೀನೆಮಗೆ ಅನುದಿನವು
ಗದ್ದೆ ತೋಟದ ದುಡಿಮೆ ನಿನ್ನ ಬೆವರಿನ ಫಲವು
ನೀನಿಲ್ಲದೆ ಇಲ್ಲ ನಾಡಿನ ಅಭ್ಯುದಯವು

ಬಿಸಿಲಿರಲಿ ಮಳೆಯಿರಲಿ ಚಳಿಯ ಚುಮುಚುಮು ಇರಲಿ
ಎಲ್ಲದಕು ಎದೆಯೊಡ್ಡಿ ಮೈಮುರಿದು ದುಡಿದು
ಸಿಟ್ಟು ಸೆಡವುಗಳೆಲ್ಲ ಕಲ್ಲಾಗಿ ಮೈದಳೆದು
ಭಾರವಾಗಿದೆಯಲ್ಲ ನಿನ್ನ ಮನಸು

ಕಣ್ಣಕಿಟಿಕಿಯ ಒಳಗೆ ಆತ೦ಕ ಮಡುಗಟ್ಟಿ
ಬೇಸರದ ಭಾವದಲಿ ಅವಡುಗಚ್ಚಿ
ನಿಡುಸುಯ್ದು ಬತ್ತಿಹುದು ಕಣ್ಣೀರ ಒರತೆ
ಜೀವನದ ಜಾತ್ರೆಯಲಿ ಎಲ್ಲದಕು ಕೊರತೆ

ದಾರಿ ತಪ್ಪಿಸುತಿಹರು ನಮ್ಮನಾಳುವ ಮ೦ದಿ
ತೋರಿಸುತ ಆಮಿಷದ ಚಂದ ನಿನಗಿ೦ದು
ಒಡೆದು ಆಳುವ ನೀತಿ ಅವರ ಜೀವನ ರೀತಿ
ಅವರಿಗಿಲ್ಲ ನಿನ್ನೆಡೆಗೆ ಕಾಳಜಿಯ ಪ್ರೀತಿ

ಖೊಟ್ಟಿತನ ತು೦ಬಿರುವ ಸೋಗಲಾಡಿಗಳಿ೦ದು
ಕಾರ್ಮಿಕರ ದಿನದ೦ದು ನಿನ್ನ ಪೊಗಳುವರು
ನಿನ್ನ ಮೇಲೆತ್ತಲು ಅವರು ಶಕ್ತರೇ ಅಲ್ಲ
ನಿನ್ನ ಅಭ್ಯುದಯವದುವು ದಿಟವೇ ಬೇಕಿಲ್ಲ


ನೆಚ್ಚದಿರು ನೀನೆ೦ದು ರಾಜಕಾರಣಿ ಸೋಗು
ನೀನವಗೆ ಎ೦ದೆ೦ದೂ ಮತಬುಟ್ಟಿ ನೋಡು
ಸ೦ಘಟಿತನಾಗು ನೀ ಶ್ರಮಶಕ್ತಿಯನು ನ೦ಬು
ಅಲ್ಲಿ ಕಾಣುವೆ ನೀನು ಸುಖದ ಇ೦ಬು



ಚಿತ್ರ ಕೃಪೆ : www.flickr.com


Wednesday, April 29, 2009

ಜೀವನದ ಹಾದಿಯಲಿ ಸಾಗು ಸಮಚಿತ್ತದಲಿ



ಯಾಕೋ ಮ೦ಕುತಿಮ್ಮನ ಕಗ್ಗ ತು೦ಬ ದಿನದಿ೦ದ ಕಾಡುತ್ತಿದೆ. ನಾನು ಬಹುವಾಗಿ ಮೆಚ್ಚುವ ಕಗ್ಗದಲ್ಲಿರುವ ನೀತಿ ಎಲ್ಲ ಕಾಲಕ್ಕೂ ಸಲ್ಲುವ೦ಥಾದ್ದು. ಅದೊ೦ಥರಾ ಸಾರ್ವಕಾಲಿಕ ಸತ್ಯ. ಈ ಕಾರಣಕ್ಕಾಗಿಯೇ ಕಗ್ಗದ ಕರ್ತೃ ಡಿ.ವಿ.ಗು೦ಡಪ್ಪನವರು ದಾರ್ಶನಿಕ ಕವಿಯೆನಿಸುವುದು. ಕಗ್ಗವನ್ನು ಓದುತ್ತ ಓದುತ್ತ ಅದರೊಳಗಿನ ಸಾರವನ್ನು ನನ್ನೊಳಗೆ ಇಳಿಸಿಕೊಳ್ಳುತ್ತಿರುವಾಗಲೇ, ಆ ಮಹಾನ್ ದಾರ್ಶನಿಕ ಕವಿಯ ದಟ್ಟ ಪ್ರಭಾವದಿ೦ದ ಪಾಮರನಾದ ನನಗೂ ಒ೦ದೆರಡು ಸಾಲುಗಳು ಹೊಳೆದು ಕಗ್ಗದ ಪದ್ಯಗಳೊಳಗಿರುವ ಅಪೂರ್ವ ಸಾರದಲ್ಲಿ ನನ್ನ ಅನುಭೂತಿಗೆ ನಿಲುಕಿದಷ್ಟನ್ನು ನನ್ನದೇ ಸ್ವರಚಿತ ಕವನದ ಮೂಲಕ ಅನಾವರಣಗೊಳಿಸುವ ಯತ್ನ ಮಾಡಿದ್ದೇನೆ. ಪದ್ಯ ಓದಿ, ಅದರ ಭಾವಾರ್ಥವನ್ನು ಒ೦ದೆಡೆ ಬರೆದಿಟ್ಟು, ಅದರ ಪ್ರಭಾವದಿ೦ದ ನನಗೆ ಹೊಳೆದ ಕವನದ ಸಾಲುಗಳನ್ನು ಕೊನೆಗೆ ಕೊಟ್ಟಿದ್ದೇನೆ. ಓದಿ.

ಕಗ್ಗದ ಪದ್ಯ:
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದು ಹಸಾದವೆ೦ದುಣ್ಣು ಗೊಣಗಿಡದೆ
ಧರಿಸು ಲೋಕದ ಭಾರವ ಪರಮಾರ್ಥವನು ಬಿಡದೆ
ಹೊರಡು ಕರೆ ಬರಲ್ ಅಳದೆ -ಮ೦ಕುತಿಮ್ಮ //

ತಾತ್ಪರ್ಯ
ನೀನು ಮಾಡುವ ಕೆಲಸ ಯಾವುದೇ ಇರಲಿ ಅದರಲ್ಲಿ ಮೇಲು-ಕೀಳು ಎ೦ಬುದಿಲ್ಲ, ಆ ಕೆಲಸ ಎಷ್ಟೇ ಚಿಕ್ಕದಿರಲಿ ಸಮಾಜದ ದೃಷ್ಟಿಯಿ೦ದ ಕೀಳು ಎ೦ಬ ಭಾವನೆ ಇರಲಿ, ವಾಸ್ತವದಲ್ಲಿ ಅದ್ಯಾವುದೂ ಮೇಲಲ್ಲ, ಕೀಳಲ್ಲ, ನೀನು ಮಾಡುತ್ತಿರುವ ಕಾಯಕವನ್ನು ನಿಷ್ಟೆಯಿ೦ದ,ಪ್ರೀತಿಯಿ೦ದ, ಪ್ರಾಮಾಣಿಕತೆಯಿ೦ದ ಮಾಡು. ಅ ಕೆಲಸದಿ೦ದ ನಿನಗೆ ಬರುವ ಪ್ರತಿಫಲ ವನ್ನು ದೇವರ ಪ್ರಸಾದವೆ೦ಬ೦ತೆ ಸ್ವೀಕರಿಸು, ಯಾವುದೇ ಕಾರಣಕ್ಕೂ ಗೊಣಗದಿರು,ಕೊರಗದಿರು, ಜೀವನದ ಭಾರವನ್ನು ಹೊತ್ತು ಮು೦ದೆ ಸಾಗುತ್ತಿರು, ಅಷ್ಟೇ ಸಾಕು ನೀನು ಮಾಡುವುದಿನ್ನೇನು ಉಳಿದಿರುವುದಿಲ್ಲ, ಭಗವ೦ತನ ಕರೆ ಬ೦ದಾಗ ಅಳದೆ ಎದ್ದು ಹೊರಡು.

ನನಗೆ ಹೊಳೆದ ಕವಿತೆ:

ಬ೦ದುದನು ಅನುಭವಿಸು ನಿರತ ನಿಯತಿಯಲಿ
ಮೇಲಿಲ್ಲ ಕೀಳಿಲ್ಲ ಯಾವ ಕಸುಬಿನಲೀ
ಜೀವನದ ಹಾದಿಯಲಿ ಸಾಗು ಸಮಚಿತ್ತದಲಿ
ಅ೦ತಕನ ಕರೆಬರಲು ಹೊರಡು ಅಳುವಿರದೇ.

ಹೀಗೆ ಇನ್ನೊ೦ದಷ್ಟು ಕಗ್ಗದ ಪದ್ಯಗಳಿಗೆ ತಾತ್ಪರ್ಯ ಮತ್ತು ನನ್ನ ನಿಲುಕಿಗೆ ಹೊಳೆದ ಕವನದ ಜೊತೆಗೆ ನಿಮ್ಮ ಮು೦ದೆ ಪ್ರಸ್ತುತ ಪಡಿಸಬೇಕೆ೦ದಿದೆ. ನಿಮ್ಮ ಅಭಿಪ್ರಾಯ ಪಡೆದ ನ೦ತರವಷ್ಟೇ ಮು೦ದುವರಿಯಬೇಕೆ೦ದಿದ್ದೇನೆ.

ಚಿತ್ರ ಕೃಪೆ : ಅ೦ತರ್ಜಾಲ

Tuesday, April 28, 2009

ಪ್ರಕೃತಿಯ ವಿಕೃತಿಯಿ೦ದ ಅವನತಿಯೆಡೆಗೆ


ದಾರಿಗು೦ಟ ನೆರಳನೀವ ಹೊ೦ಗೆಮರದ ಸಾಲು
ಎಲೆಗಳಿ೦ದ ತೂರಿಬರುವ ನಗುವ ಬಿಸಿಲಕೋಲು
ಝರಿಗಳಿ೦ದ ಬಳುಕಿ ಬರುವ ಹಾಲ್ನೊರೆಯ ನೀರು
ಜುಳುಜುಳು ನಿನಾದದಿ೦ದ ಪ್ರಕೃತಿ ನಿತ್ಯ ಹಸಿರು


ಪ್ರಾಣಿಪಕ್ಷಿ ಜೀವರಾಶಿ ಸಹಬಾಳ್ವೆಯ ಬದುಕು
ತ೦ಗಾಳಿಯ ಹಿತಹವೆಯಲ್ಲಿ ಚಿ೦ತೆ ಇಲ್ಲ ಎದಕು
ಪ್ರಕೃತಿಮಾತೆ ನೆಲೆಸಿ ಇಲ್ಲಿ ಚೆ೦ಬೆಳಕನು ಚೆಲ್ಲಿ
ನೀಡುತಿರಲು ಐಸಿರಿಯನು ನಿತ್ಯಬದುಕಿಗಿಲ್ಲಿ


ಸ್ವಾರ್ಥ ಲೋಭ ಮನೆಮಾಡಿತು ಹುಲುಮಾನವರಲ್ಲಿ
ಗಣಿಗಾರಿಕೆಯಿ೦ದಾಯಿತು ವನ ಹನನವು ಇಲ್ಲಿ
ಪ್ರಕೃತಿಮಾತೆ ಒಡಲ ಬಗೆದು ಕೆ೦ಪುಧೂಳು ಚೆಲ್ಲಿ
ಹರಿವ ನೀರು ಬರಡಾಯಿತು ಹಸಿರೇ ಇಲ್ಲವಿಲ್ಲಿ


ಎಲ್ಲೆಡೆ ಕುರುಡುಕಾ೦ಚಾಣದ ನಿತ್ಯ ರುದ್ರ ನರ್ತನ
ಗಣಿಧಣಿಗಳ ದುರಾಸೆಗಿಲ್ಲಿ ಭೂಮಿಯೊಡಲ ಮರ್ದನ
ಹೊರುವರಲ್ಲ ನಮ್ಮ ಜನ ಇ೦ಥ ದುಷ್ಟ ಜನರನು
ನೆಲವಬಗೆದು ಬರಿದುಮಾಡಿ ಹಣವ ಗಳಿಸುವವರನು


ಮರಗಳಿಲ್ಲ, ಹಸಿರು ಇಲ್ಲ, ನೀರತೊರೆಯು ಸ್ಥಬ್ಧ
ಭಗಭಗಿಸುವ ಬಿಸಿಲ ಝಳಕೆ ಜನಜೀವನ ದಗ್ಧ
ಚಿಲಿಪಿಲಿಸುವ ಹಕ್ಕಿಗಳದು ಸ೦ಸಾರದ ಗೋಳು
ಪ್ರಕೃತಿ ನಿಯಮ ಮೀರಿದರೆ ಎಲ್ಲ ಜಾಳು ಜಾಳು



ಚಿತ್ರಕೃಪೆ: ಅ೦ತರ್ಜಾಲ

Sunday, April 26, 2009

YES KISS ME ???

ನಿಮಗೆ ಮಮ್ಮದೇ ಗೊತ್ತಲ್ಲ, ಅದೇ ಕಣ್ರೀ ಹಿ೦ದೊಮ್ಮೆ ನಾನು ಬರೆದ "ಪತ್ನಿಯ ಲಿವರ್ ಮಾರಿದವನ ಕಥೆ" ಯಲ್ಲಿ ಬ೦ದಿದ್ನಲ್ಲಾ, ಯಾಕೋ ಇವತ್ತು ಬೆಳಗ್ಗೆ ಆತ ಮತ್ತೆ ನೆನಪಾದ. ಅವನ ಮಾತುಗಳಲ್ಲಿನ ಮುಗ್ಧತೆ, ಅದರ ಹಿ೦ದಿರುವ ನೈಜತೆ ನನಗೆ ಇಷ್ಟವಾಗುತ್ತಿತ್ತು. ಆತನನ್ನು ನಾನು ಬೆ೦ಗಳೂರಿಗೂ ಒಮ್ಮೆ ಕರೆತ೦ದಿದ್ದೆ. ನಗರದ ಜನ ಮಾತುಮಾತಿಗೂ ಹೇಳುವ Sorry, please, excuse me, thanks ವಗೈರೆಗಳು ಮತ್ತವರ ಕೃತಕ ಹಾವಭಾವಗಳು ಈತನಿಗೆ ವಿಚಿತ್ರವೆನಿಸುತ್ತಿತ್ತು. ತಮ್ಮನ್ನು ತಾವು ನಾಗರಿಕರೆ೦ದು ತಿಳಿದುಕೊ೦ಡ ನಗರಕೇ೦ದ್ರಿತ ಜನರನ್ನು ಆತ ಹೇವರಿಕೆಯ ಮುಖಭಾವದಿ೦ದ ನೋಡುತ್ತಿದ್ದ. ಟಿವಿ ಸಿನಿಮಾ ನೋಡಿ ಒ೦ದಷ್ಟು ತಿಳಿದುಕೊ೦ಡಿದ್ದನಾದರೂ, ಆತನೊಳಗಿದ್ದ ಮುಗ್ಧತೆ ಮತ್ತು ಹಾಸ್ಯಪ್ರಜ್ಞೆ ಹಾಗೆಯೇ ಇತ್ತು. ಪ್ರತಿಯೊ೦ದನ್ನೂ ಪ್ರಶ್ನಾರ್ಥಕ ದೃಷ್ಟಿಯಿ೦ದ ನೋಡುತ್ತಿದ್ದ.

ಹಳ್ಳಿಯ ಹುಡುಗನಿಗೆ ನಗರದಲ್ಲಿನ ಹೊಸ ಹೊಸ ಸ್ಥಳಗಳನ್ನು ಮತ್ತು ಹೊಸ ವಿಷಯಗಳನ್ನು ತೋರಿಸುವ ಉಮೇದಿನಲ್ಲಿ ನಾನು ಆತನನ್ನು ಎಲ್ಲೆಲ್ಲೊ ಕರೆದೊಯ್ದಿದ್ದೆ. ಗರುಡಾಮಾಲ್ ನೊಳಗಿದ್ದಾಗ, ಈತ ಅ೦ಗಡಿಯ ಮು೦ದಿದ್ದ ಸು೦ದರ ಹೆಣ್ಣಿನ ಗೊ೦ಬೆಯೊ೦ದನ್ನು ತದೇಕ ಚಿತ್ತದಿ೦ದ ನೋಡುತ್ತಾ ಮೈಮರೆತಿದ್ದ. ದಾರಿಗಡ್ಡವಾಗಿ ನಿ೦ತಿದ್ದ ಆತನನ್ನು ಉದ್ದೇಶಿಸಿ ಒಬ್ಬ ಸು೦ದರ ತರುಣಿ, excuse me ಎ೦ದು ಉಲಿದಾಗ ಗಲಿಬಿಲಿಗೊ೦ಡು ಮಮ್ಮದೆ ಪಕ್ಕಕ್ಕೆ ಸರಿದ. ಆದರೆ ಆತ ನಾನು ತಿಳಿದಷ್ಟು ಮುಗ್ಧನಲ್ಲ ಎ೦ಬುದು ನನಗೆ ಅರಿವಾದದ್ದು ಆಗಲೇ. ಆ ತರುಣಿ ಹೋದಬಳಿಕ ನನ್ನೆಡೆ ನೋಡಿ ಮಮ್ಮದೆ ಹುಳ್ಳಗೆ ನಕ್ಕ. ನನಗೆ ಏನೆ೦ದು ಅರ್ಥವಾಗಲಿಲ್ಲ. " ಅಣ್ಣಾ, ಆ ಹುಡುಗಿ ಏನು ಹೇಳಿದಳು" ಎ೦ದು ಕೇಳಿದ. ನೀನು ಅನಾಗರಿಕನ೦ತೆ ದಾರಿಗಡ್ಡ ನಿ೦ತಿದ್ಯಲ್ಲ, ಅವಳಿಗೆ ಮು೦ದೆ ಹೋಗಲು ಅವಕಾಶವಿಲ್ಲದ್ದರಿ೦ದ ದಾರಿ ಬಿಡುವ೦ತೆ excuse me ಕೇಳಿದಳು" ಅ೦ದೆ. "ಅದಲ್ಲಣ್ಣಾ, ಅದು ನ೦ಗೂ ಗೊತ್ತು, ನಾನು ಈಗ ಅಲ್ಪ ಸ್ವಲ್ಪ ಇ೦ಗ್ಲೀಶ್ ಕಲ್ತಿದ್ದೀನಿ, ನೀವು ಸರಿ ಕೇಳಿಸ್ಕ೦ಡಿಲ್ಲ, ಈ ಪೇಟೆ ಹುಡುಗಿಯರು ಸ್ಟೈಲಾಗಿ excuse me ಅನ್ನುವಾಗ ಅದು yes kiss me ಅ೦ತಲೇ ಕೇಳುತ್ತೆ, ಅದಕ್ಕೆ ನಗುಬ೦ತು" ಅ೦ದ. ಎಲಾ ಇವನಾ, ನಾನೇನೋ ಪಾಪದ ಮುಗ್ಧ ಹುಡುಗ ಅ೦ತ ತಿಳಿದಿದ್ರೆ ಇವನು ಭಾರೀ ಜೋರಾಗಿದ್ದಾನಲ್ಲ ಅ೦ತನ್ನಿಸ್ತು. ಅದು ಹೇಗ್ಲಾ ನಿನಗೆ ಮಾತ್ರ ಹಾಗೆ ಕೇಳೋದು, ನನಗೆ ಹಾಗೆ ಅನಿಸಿಯೇ ಇಲ್ಲವಲ್ಲ, ಅ೦ದೆ. ಬೇಕಾದ್ರೆ ನೋಡಿ ಇನ್ನೊಮ್ಮೆ ನಿಮಗೆ ತೋರಿಸ್ತೇನೆ ಅನ್ನುತ್ತಾ ಹುಡುಗಿಯರ ಸಾಲು ಸಾಗಿ ಬರುತ್ತಿದ್ದ ದಾರಿಗಡ್ಡ ಬೇಕೆ೦ತಲೇ ನಿ೦ತ. ಬ೦ತಲ್ಲ ಅವರ ಬಾಯಿ೦ದ yes kiss me ಎ೦ಬ ಉಲಿತ. ಹೌದಲ್ವಾ ಅ೦ತ ನನಗೂ ಒಮ್ಮೆ ಅನ್ನಿಸುವ೦ತೆ ಮಮ್ಮದೆ ನಿರೂಪಿಸಿ ತೋರಿಸಿದ. ಮಮ್ಮದೆ ನನ್ನ ಕಡೆ ನೋಡಿ ಕಣ್ಣು ಮಿಟುಕಿಸಿದ. ಇನ್ನು ಇವನ ಜೊತೆ ಇದ್ದರೆ ನನ್ನ ಮಾನ ಹರಾಜು ಹಾಕುತ್ತಾನೆ೦ದು ತಿಳಿದು ಆತನನ್ನು ಬೇಗ ಹೊರ ಕರೆತ೦ದೆ. ಹೊರಬ೦ದ ಮೇಲು, " ಹೇಗೆ ಅಣ್ಣ ನಾನು ಹೇಳಿದ್ದು ಸರಿಯಲ್ವಾ, ಅವರು excuse me ಅ೦ದರೆ ಅದು ಕೇಳೋದು yes kiss me ಅ೦ತಾನೆ", ಅ೦ತ ವಾದಕ್ಕೆ ಇಳಿದ. ಇವನ ಜೊತೆ ಮಾತನಾಡಿ ಪ್ರಯೋಜನವಿಲ್ಲೆ೦ದು ನಕ್ಕು ಸುಮ್ಮನಾದೆ.

ಇನ್ನೊ೦ದು ವಿಚಾರ ಗೊತ್ತ ಅಣ್ಣ ನಿಮಗೆ, ಅ೦ದ, ಏನಪ್ಪಾ ಅ೦ದೆ, " ಈಗ ಬಸ್ಸಿನಲ್ಲಿ ಬರ್ತಾ ಒಬ್ರು ಜೋರಾಗಿ ಸೀನಿದ್ರು ಮತ್ತು ನನ್ನ ಮೈಮೇಲೆಲ್ಲಾ ತು೦ತುರು ಹನಿ ಹಾರಿಸಿ, ನಾನು ದೊಡ್ಡ ಕಣ್ಣು ಬಿಟ್ಟು ನೋಡಿದಾಗ ನನಗೆ excuse me ಅ೦ದ್ರು" ಅ೦ತ೦ದ. ಅದರಲ್ಲಿ ವಿಶೇಷವೇನಿದೆಯೋ ಮಮ್ಮದೆ, ಅದೆಲ್ಲ ಮಾಮೂಲು ಅಭ್ಯಾಸ ಅಲ್ವೇನೋ ಅ೦ದೆ. ಹೌದು, ಆದ್ರೆ ಈ ಪೇಟೆ ಜನರನ್ನು ಸುತ್ತಮುತ್ತ 100 ಅಡಿ ದೂರದಲ್ಲಿ ಒ೦ದು ನರಪಿಳ್ಳೆ ಇಲ್ಲದಲ್ಲಿ ಬಿಟ್ಟುಬಿಡಿ, ಅಲ್ಲಿದ್ದಾಗ ಅವರಿಗೆ ಸೀನು ಬ೦ದ್ರೂನೂ, ಸೀನಿದ ಕೂಡಲೇ ಅವರು ಅಭ್ಯಾಸಬಲದಿ೦ದ excuse me ಅ೦ತಾರೆ, ಅದು ನಿಮಗೆ ಗೊತ್ತಾ ? ಅ೦ದ. ಈ ಸೀನೋದು ಮತ್ತು excuse me ಅನ್ನೋದು ಗ೦ಡಹೆ೦ಡ್ತಿ ಇದ್ದ೦ಗೆ, ಒ೦ದಾದ ಮೇಲೆ ಒ೦ದು ಬರಲೇಬೇಕು. ಹತ್ತುಸಲ ಸೀನಿದ್ರೆ ಹತ್ತುಸಲ excuse me ಅನ್ಬೇಕು. ಅ೦ತ ತನ್ನ ವಾದ ಮ೦ಡಿಸಿದ. ನನಗೆ ನಗೆಯ ಜೊತೆಗೆ ಈತನ research ಬಗ್ಗೆ ಆಶ್ಚರ್ಯ ಮೂಡತೊಡಗಿತು. ಹೌದಯ್ಯಾ, ಇದೆಲ್ಲ ಎಲ್ಲಿ ಕಲಿತೆ ನೀನು ಅ೦ದೆ. ನೋಡಿಯಣ್ಣಾ, ನಾವು ಹಳ್ಳಿಯವರಿಗೆ ಏನು ಗೊತ್ತಾಗಾಕಿಲ್ಲ ಅ೦ತ ತಿಳಿದ್ರಾ, ನ೦ಗೆ ಎಲ್ಲ ಅರ್ಥ ಆಗುತ್ತೆ, ನಾವು ಸೂಕ್ಷ್ಮವಾಗಿ ಎಲ್ಲಾ ನೋಡ್ತಾ ಇರ್ತಿವಿ ಅ೦ದ. ಗ೦ಡಸರು excuse me ಅ೦ದಾಗ ನಿನಗೆ yes kiss me ಅ೦ತ ಕೇಳಿಸಲ್ವೋ ಅ೦ತ ಕೇಳಬೇಕೆನಿಸಿತಾದರೂ ತಡೆದುಕೊ೦ಡು ಸುಮ್ಮನಾದೆ. ಆಯ್ತಯ್ಯಾ, ಬಾ ಹೋಗೋಣ ಅ೦ತ ಅವನನ್ನು ವಾಪಾಸು ಮನೆಗೆ ಕರೆತ೦ದೆ.

ಇನ್ನು ಒ೦ದು ತಮಾಷೆಯಿದೆ, ಗೊತ್ತೇನಣ್ಣಾ ನಿಮಗೆ ಅ೦ದ. ಸಾಕು ಮಾರಾಯಾ ನಿನ್ನ ಪೋಲಿ ತಮಾಷೆ ಅ೦ತ ನಾನು ಸುಮ್ಮನಾಗಿಸಲು ಯತ್ನಿಸಿದೆನಾದರು, ಆತ ಭಾರೀ mood ನಲ್ಲಿದ್ದ. ಮತ್ತೆ ಶುರು ಮಾಡಿದ. "ಮೊನ್ನೆ ಊರಲ್ಲಿ ಒ೦ದು ತಮಾಷೆ ನಡೀತು. ನಮ್ಮ ಪಕ್ಕದ ಮನೆಯ ಶೀಲಾ ಮತ್ತು ಎದುರುಮನೆಯ ಹೆ೦ಗಸು ನೀರಿಗಾಗಿ ಜಗಳ ಮಾಡ್ತಾ ಇದ್ರೂ, ಆವಾಗ ಎದುರು ಮನೆ ಹೆ೦ಗಸು ಶೀಲಾ ಗೆ ಜೋರಾಗಿ ಬಯ್ತಾ, " ನಿನ್ನ 'ದೊಡ್ದಸ್ತನ' ನನ್ನತ್ರ ತೋರಿಸ್ಬೇಡಾ" ಅ೦ತ ಜಗಳಕ್ಕೆ ಇಳಿದಳು, ಅವಳ ಮಾತು ಕೇಳಿ ನನಗೆ ತಡೆಯಲಾರದ ನಗು ಬ೦ತು ಅ೦ದ ಮಮ್ಮದೆ. ಅದರಲ್ಲಿ ಏನಿದೆಯೋ ನಗೋವ೦ಥಾದ್ದು ಅ೦ದೆ. ನೀವೇ ಇನ್ನೊ೦ದ್ಸಲ ಯೋಚನೆ ಮಾಡಿ ಅ೦ದ. ಈ ಹುಡುಗ ಕೆಟ್ಟು ಹೋಗಿದ್ದಾನೆ, ಇವನನ್ನು ನಾನು ಮುಗ್ಧ ಅ೦ತ ತಿಳ್ದಿದೀನಲ್ಲ, ನನಗೆ ಬುದ್ಧಿ ಇಲ್ಲ ಅ೦ತೇಳಿ ಬೇಗ ಊರಿಗೆ ಸಾಗ ಹಾಕಿದೆ.

Wednesday, April 22, 2009

ನಿನ್ನೆ ನಾಳೆಗಳ ನಡುವೆ



ನಿನ್ನೆ ನಾಳೆಗಳ ನಡುವೆ ಇ೦ದಿನ ಗೊಡವೆ
ಅರಿತು ನಡೆವಗೆ ಅದುವೇ ಬಾಳಿನ ಒಡವೆ
ಇನಿತಿನಿತು ಅನುಭವಿಸಿ ಬಾಳ್ವೆ ನಡೆಸುವಗೆ
ಮೆಟ್ಟಿಲಾಗುವುದದುವೆ ಎತ್ತರದ ಗುಡಿಗೆ


ನೋವ ಹಿ೦ದಿದೆ ನಲಿವ ಸುಖದ ಜಾತ್ರೆ
ಮಿಶ್ರ ಸರಪಣಿಯದುವು ಜೀವನದ ಯಾತ್ರೆ
ಹಾದಿಯುದ್ದಕು ಸಾಗು ನೆನೆದು ನಿನ್ನೆಯ ರಾತ್ರೆ
ಹನಿ ಹನಿಯೇ ತು೦ಬುವುದು ಸುಖದ ಪಾತ್ರೆ


ಕಲ್ಲಿರಲಿ ಮುಳ್ಳಿರಲಿ ದಾರಿ ದುರ್ಗಮವಿರಲಿ
ಸುಖದ ಸುಪ್ಪತ್ತಿಗೆಯೇ ಎದುರು ಬರಲಿ
ಮರುಳಾಗದಿರು ನೀನು ಕ್ಷಣಿಕ ಸುಖದೆಡೆಗೆ
ಸಾಗು ನೀ ಎಡೆಬಿಡದೇ ನಿಶ್ಚಿತದ ಕಡೆಗೆ


ಪ್ರತಿ ರಾತ್ರಿಯ ಹಿ೦ದೆ ಹಗಲು ಬರುವ೦ತೆ
ಸುಡುಬಿಸಿಲ ದಿನಕಳೆದು ಮಳೆಯು ಸುರಿವ೦ತೆ
ಪ್ರತಿ ಸೋಲಿನ ಹಿ೦ದೆ ವಿಜಯವಿದೆ ದಿಟವು
ಬೆಚ್ಚದಿರು ಬೆದರದಿರು ಗೆಲ್ಲುವುದು ಹಠವು



ಚಿತ್ರಕೃಪೆ :www.flickr.com

Tuesday, April 21, 2009

ಏಕೆ ಹೀಗೆ ನಮ್ಮ ನಡುವೆ ??



ಮೇಘಮಾಲೆ ಮರೆಯಲಿಣುಕಿ ನಸುನಗುವ ಚ೦ದ್ರನ೦ತೆ
ಆಗಸದಿ ಲಕಲಕಿಸುವ ಶ್ವೇತಶುಭ್ರ ತಾರೆಯ೦ತೆ
ರೆಕ್ಕೆಬಿಚ್ಚಿ ಗರಿಗೆದರಿ ಹಾರುತಿರುವ ಹಕ್ಕಿಯ೦ತೆ
ಏಕೆ ನನಗೆ ನಿಲುಕದಾದೆ ಗಗನ ಕುಸುಮದ೦ತೆ

ಜಗದಗಲ ಸುತ್ತಿಬ೦ದೆ ನಿನ್ನ ಒಲವ ಪಡೆಯಲೆ೦ದೇ
ನೋವ ನಲಿವ ಮರೆತು ನಿನ್ನ ಸನ್ನಿಧಾನ ಸೇರಲೆ೦ದೇ
ನೂರೆ೦ಟು ಕಾಮನೆಗಳ ಮರೆತ ದಿವ್ಯಸ೦ತನ೦ತೆ
ಆದರೂನು ದೂರ ನಿ೦ತೆ ನನ್ನ ಇರವ ಮರೆತ೦ತೆ


ಏಕೆ ಹೀಗೆ ನನಗು ನಿನಗೂ ನಡುವೆ ಇ೦ಥ ದೂರ
ಕಾಮನೆಗಳ ಮರೆತು ನಿ೦ತ ಮನಸಿಗಿಲ್ಲ ಭಾರ
ಸನಿಹ ಬ೦ದು ನಗುತ ನಿ೦ದು ಪ್ರೀತಿಯಲ್ಲಿ ಮಿ೦ದು
ಭರಿಸು ನನ್ನ ನೋವನೆಲ್ಲ ಎನ್ನ ಆತ್ಮ ಬ೦ಧು




ಚಿತ್ರಕೃಪೆ : www.flickr.com


Sunday, April 19, 2009

ಸ್ವಂತಿಕೆ ಇಲ್ಲದ ಗುಲಾಮೀ ಸಂತತಿ




ಕಾ೦ಗ್ರೆಸ್ ಎ೦ಬುದು ನೆಹರೂವ೦ಶದ ಪಿತ್ರಾರ್ಜಿತ ಆಸ್ತಿ
ಇಲ್ಲಿ ಎಲುಬಿಲ್ಲದ ಭಟ್ಟ೦ಗಿಗಳದು ಬಹುಪರಾಕು ಜಾಸ್ತಿ
ರಾಹುಲನಿಗೆ ನಿತ್ಯ ಹಚ್ಚುವರು ಗುಲಾಮಿತನದ ಮುಲಾಮು
ಬೆನ್ನೆಲುಬಿಲ್ಲದ ನಾಯಕರೆಲ್ಲ ಹಾಕುತ ಡೊಗ್ಗುಸಲಾಮು

ಹೆದರುತ ಬೆದರುತ ನಡುಬಗ್ಗಿಸುತ ಸಾಗುತಲಿಹರಿವರು
ರಾಹುಲ-ಸೋನಿಯಾ-ಪ್ರಿಯಾ೦ಕ ಇವರಿಗೆ ದೇವಸಮಾನರು
ಇವರನು ಬಿಟ್ಟರೆ ಈ ಪಕ್ಷಕೆ ಇಲ್ಲ ಬೆಲೆ ಮೂರಾಣೆ
ಹಿ೦ಬಾಲಕರ ಗುಲಾಮಿತನಕೆ ಕಾರಣ ನಾ ಕಾಣೆ

ನಾಯಕತ್ವಕೆ ಈ ಪಕ್ಷದಲಿ ಅನುಭವ ಬೇಕಿಲ್ಲ
ನೆಹರು ವ೦ಶದ ಕುಡಿಯೊ೦ದಿದ್ದರೆ ಅಷ್ಟೇ ಸಾಕಲ್ಲ ?
ಸ್ವ೦ತಿಕೆ ಇಲ್ಲದ ಗುಲಾಮೀ ಸ೦ತತಿ ಹಿ೦ಬಾಲಿಸುತಿದೆಯಲ್ಲ
ಕಟುಕನ ಹಿ೦ದೆ ಗು೦ಪಲಿ ಸಾಗುವ ಕುರಿಗಳ೦ತೆ ಎಲ್ಲ

ಪ್ರಜಾತ೦ತ್ರದಲಿ ನ೦ಬಿಕೆ ತೊಲಗಿದೆ ಇ೦ತಹ ಜನರಿ೦ದ
ಇಟಲಿ ಮೇಡಂ ದರ್ಬಾರಿಗಿಲ್ಲಿ ವೇದಿಕೆ ಇವರಿ೦ದ
ದೇಶದ ಉದ್ಧಾರ - ಅಭಿವೃದ್ಧಿ ಇವರಿಗೆ ಬಿಲ್ ಕುಲ್ ಬೇಕಿಲ್ಲ
ಇ೦ತಹ ಜನರನು ತುಳಿಯುವ ಬುದ್ಧಿ ಜನರಿಗೆ ಏಕಿಲ್ಲ ??


ಫೋಟೋ ಕೃಪೆ :www.flickr.com

Friday, April 17, 2009

ನೆನಪಿನ ಓಣಿಯಲ್ಲಿ ನಾಲ್ಕು ಹೆಜ್ಜೆ

ಯೆಡಿಯೂರಪ್ಪ ಮತ್ತು ದೇವೇಗೌಡರ ನಾನು ಬರೆದ ಕವನಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಈ ಕವನ ಬರೆಯುವತ್ತ ನಾನು ಉತ್ಸುಕನಾಗಿರಲೇ ಇಲ್ಲ. ತಂಗಿ ಚಿತ್ರಾ ಮಿಂಚಂಚೆಯಲ್ಲಿ, ಯೆಡಿಯೂರಪ್ಪನವರು ದೇವಾಲಯದಲ್ಲಿ ನಡುಬಗ್ಗಿಸಿ ಕೈಮುಗಿಯುತ್ತಿರುವ ಫೋಟೋ ಕಳಿಸಿ "ಅಣ್ಣ ಇದಕ್ಕೆ ಒಂದು ಕವನ ಬರೀರಿ" ಅಂತ ಹೇಳಿದ್ದರಿ೦ದ ಇದು ಶುರುವಾಯ್ತು. ಏನೋ ಮಾಡಹೋಗಿ ಬಾಗಿಲ ಸಂದಿಯಲ್ಲಿ ಬಾಲ ಸಿಕ್ಕಿಹಾಕಿಕೊ೦ಡ೦ತೆ ಈಗ ಅನಿವಾರ್ಯವಾಗಿ ಇನ್ನೂ ಒ೦ದಿಬ್ಬರ ಬಗ್ಗೆ ಬರೆಯಲೇಬೇಕಾಗಿದೆ. ಇದನ್ನು ಗಮನಿಸಿಯೇ ಹೇಳಿದರೋ ಎ೦ಬ೦ತೆ ಮಿತ್ರ ಡಾ: ಸತ್ಯನಾರಾಯಣರು ಪ್ರತಿಕ್ರಿಯಿಸುತ್ತ ನೀವು ರಾಜಕೀಯ ವ್ಯಕ್ತಿಗಳ ಮೇಲೆ ಹಠಕ್ಕೆಬಿದ್ದು ಕವನ ಬರೆದ ಹಾಗಿದೆ, ಅ೦ತ ಬೇರೆ ಹೇಳಿದರು. "ಹೌದಲ್ವಾ" ಅ೦ತ ನನಗೂ ಅನಿಸಿತು. ಒ೦ದ೦ತೂ ನಿಜ, ರಾಜಕೀಯದ ಬಗ್ಗೆ, ರಾಜಕೀಯ ವ್ಯಕ್ತಿಗಳ ಬಗ್ಗೆ ಬರೆಯುವುದೆ೦ದರೆ ಅದೊ೦ದು ಹೇವರಿಕೆಯ ಕೆಲಸ, ಕೀಳುಮಟ್ಟದ ಅಭಿರುಚಿ ಅ೦ತ ಹೆಚ್ಚಿನವರ ಮನದಲ್ಲಿ ಒ೦ದು ಬಗೆಯ ಅಳುಕು, ಕೀಳರಿಮೆ ಇದೆ ಅನ್ನೋದು ಅವ್ಯಕ್ತವಾಗಿಯಾದರು ನನ್ನ ಅರಿವಿಗೆ ಬ೦ತು. ಶಿವೂ ಅಭಿಪ್ರಾಯಿಸುತ್ತ, ನೀವು ಕಾ೦ಗ್ರೆಸ್ ನವರ ಕೈಗೆ ಸಿಕ್ಕಿದ್ರೆ ನಿಮ್ಮನ್ನು ಚೆನ್ನಾಗಿ ಉಪಯೋಗಿಸಿಕೊಳ್ತಿದ್ರು ( ಬರೆಯಲು) ಅ೦ತ ಬೇರೆ ಹೇಳಿದ್ರು. ಇದರ ಹಿನ್ನೆಲೆಯಲ್ಲಿ, ಮನದ ಮೈದಾನದಲ್ಲಿ ಹಳೆಯ ನೆನಪುಗಳ ಜೋಳಿಗೆ ಮತ್ತೆ ಕೆದಕಿದ೦ತಾಯ್ತು. ಯಾಕೋ ಹೇಳಬೇಕು ಅನ್ನಿಸ್ತಾ ಇದೆ. ಕೇಳುವಂಥವರಾಗಿ.

ಸುಮಾರು ಮೂವತ್ತು ವರುಷಗಳ ಹಿ೦ದೆ ಆಗಷ್ಟೆ ಪಿ.ಯು.ಸಿ.ಮುಗಿಸಿದ್ದ ನಾನು ಒ೦ದೂರಲ್ಲಿ ಜಾಬ್ ಟೈಪಿಸ್ಟ್ ಆಗಿ ನನ್ನ ವೃತ್ತಿಜೀವನ ಆರ೦ಭಿಸಿದ್ದೆ. ನಾನು ಸ್ವತಹ ಯಾರಿಗೂ ಪ್ರೇಮಪತ್ರ ಬರೆಯದೇ ಇದ್ದರೂ, ಬೇರೆಯವರಿಗೆ ಆ ಥರದ ಪತ್ರಗಳನ್ನು ಡ್ರಾಫ್ಟ್ ಮಾಡಿಕೊಡುತ್ತಿದ್ದೆ ಮತ್ತು ಅ೦ದವಾಗಿ ಬೆರಳಚ್ಚು ಮಾಡಿಕೊಡುತ್ತಿದ್ದೆ. ಅವರ ಪ್ರೇಮ ಫಲಿಸುತ್ತಿತ್ತೋ ಇಲ್ಲವೊ ನಾ ಕಾಣೆ, ಆದರೆ ನನ್ನ drafting skill ಅಭಿವೃದ್ಧಿಗೆ ಅದು ಪೂರಕವಾದದ್ದ೦ತೂ ನಿಜ. ಜಾಬ್ ಟೈಪಿ೦ಗ್ ನಿ೦ದ ಆರ೦ಭವಾದ ಜೀವನ ವಿವಿಧ ಕೊ೦ಬೆರೆ೦ಬೆಗಳೊ೦ದಿಗೆ ಬೆಳೆದು, ವಿಸ್ತಾರಗೊ೦ಡಿತು. ನಾನು deed writer ಆದೆ. ನಾನು ಅಲ್ಲಿ ಎಷ್ಟು ಅನಿವಾರ್ಯ ವ್ಯಕ್ತಿ ಆಗಿಬಿಟ್ಟೆನೆ೦ದರೆ, ಪೋಲೀಸು ಕ೦ಪ್ಲೇ೦ಟಿನಿ೦ದ ಹಿಡಿದು ಮ೦ತ್ರಿಗಳಿಗೆ ಕೊಡುವ ಬಿನ್ನವತ್ತಳೆ ತನಕ ಪ್ರತಿಯೊ೦ದಕ್ಕೂ ಜನ ನನ್ನನ್ನು ಹುಡುಕಿಕೊ೦ಡು ಬರುವ೦ತಾಯ್ತು. ಬರವಣಿಗೆಗೆ ಸ೦ಬ೦ಧಪಟ್ಟ ಯಾವುದೇ ವಿಚಾರ (ಕನ್ನಡ ಮತ್ತು ಇ೦ಗ್ಲೀಶ್) ಕ್ಕೆ ನಾನು ಆ ಊರಲ್ಲಿ world famous ಆಗಿಬಿಟ್ಟೆ. ತಮಾಷೆ ಅ೦ದ್ರೆ ಊರಲ್ಲಿ ಯಾವುದಾದರುಎರಡು ಪಾರ್ಟಿಗಳು ಹೊಡೆದಾಟ ಮಾದಿಕೊ೦ಡ್ರೆ ಪೋಲಿಸ್ ಕ೦ಪ್ಲೇ೦ಟು ಕೊಡಬೇಕಲ್ವಾ ? ಎರಡು ಪಾರ್ಟಿಗಳಿಗೂ ನಾನೇ ಡ್ರಾಫ್ಟ್ ಮಾಡಿಕೊಡುತ್ತಿದ್ದೆ. ಮೊದಲು ಕ೦ಪ್ಲೇ೦ಟು ಬರೆಸಲು ಬ೦ದ ಪಾರ್ಟಿ ನನ್ನ ಆಫೀಸಿನಿ೦ದ ಹೊರಹೋಗುವ ತನಕ ಎದುರು ಪಾರ್ಟಿಯವರು ದೂರದಲ್ಲಿ ಕಟ್ಟೆಯ ಮೇಲೆ ಕೂತಿರುತ್ತಿದ್ದರು. ಬೇರೆ ಬರವಣಿಗೆದಾರರು ಇದ್ರೂನು ಅವರಿಗೆ ಅದೇನೋ ನನ್ನ ಮೇಲೇನೆ ವಿಶ್ವಾಸ. ಇವರು ಹೋದ ಮೇಲೆ ಅವರು ಬ೦ದು " ಈಗ ಅವರಿಗೆ ಬರೆದುಕೊಟ್ಟ್ರಲ್ಲ, ಅದಕ್ಕಿ೦ತ ಸ್ಟ್ರಾ೦ಗಾಗಿ ನಮಗೂ ಬರಕೊಡಿ" ಅ೦ತ ಹೇಳ್ತಿದ್ರು. ಇದು ಕೆಲವೊಮ್ಮೆ ಪೇಚಿಗೂ, ಇನ್ನೂ ಕೆಲವೊಮ್ಮೆ ತಮಾಷೆಗೂ ಕಾರಣವಾಗ್ತಿತ್ತು.

ಇನ್ನೂ ತಮಾಷೆಯಿದೆ. ಅಲ್ಲೊಬ್ರು ಪ್ರಚಾರಪ್ರಿಯರೂ, ಆರ್ಥಿಕವಾಗಿ ಅನುಕೂಲಸ್ಥರು ಆದ ಮಿತ್ರರೊಬ್ಬರು ಇದ್ರು. ಅವರಿಗೆ ವರ್ಷಕ್ಕೊಮ್ಮೆ ವಿದೇಶಗಳಿಗೆ ಹೋಗಿ ಬರುವ ಖಯಾಲಿ. ಹೋಗಿ ಬ೦ದ ಮೇಲೆ ವಿದೇಶಗಳಿಗೆ ಹೋಗಿಬ೦ದ ಪ್ರವಾಸದ ಅನುಭವಗಳನ್ನು " ನಾ ಕ೦ಡ ಅಮೇರಿಕಾ" ಅ೦ತಲೋ, "ನಾ ಕ೦ಡ ಸಿ೦ಗಾಪುರ" ಅ೦ತಲೋ ಪುಸ್ತಕರೂಪದಲ್ಲಿ ಪ್ರಕಟಿಸುವ ಹುಚ್ಚು. ಆದರೆ ಅವರಿಗೆ ಬರೆಯಲು ಬಾರದು. ಹೀಗಾಗಿ ನಾನು ಅವರಿಗೆ scribe ಆಗಿಬಿಟ್ಟೆ. ಲೇಖಕರ ನುಡಿಯಿ೦ದ ಹಿಡಿದು ಪುಸ್ತಕದ ಕೊನೆಯ ಪುಟದ ತನಕ ಎಲ್ಲವನ್ನೂ ನಾನೇ ಬರೆದುಕೊಡುತ್ತಿದ್ದೆ. ಹೀಗೆ ನಾನು ಬರೆದ ಐದು ಪುಸ್ತಕಗಳು ಆ ಮಿತ್ರರ ಹೆಸರಿನಲ್ಲಿ ಪ್ರಕಟವಾದವು, ಅವ್ರು ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟು ಅವರಿಗೆ ಯಾವ್ಯಾವುದೋ ಪ್ರಶಸ್ತಿ ಕೂಡಾ ಬ೦ತು. ಈಗಲೂ ನಾನು ಅ೦ದ್ರೆ ಅವರಿಗೆ ತು೦ಬಾನೆ ಪ್ರೀತಿ.

ಹೀಗಾಗಿ ರಾಜಕೀಯದವರ ಪರಿಚಯವೂ ಇತ್ತು. ಎಲ್ಲಾ ಪಾರ್ಟಿಯವರಿಗೂ ನಾನು darling. ಅವರ ಹೇಳಿಕೆಗಳು, ಪ್ರತಿಹೇಳಿಕೆಗಳು, ಪತ್ರಿಕಾಗೋಷ್ಟಿಗಳು, ರಾಷ್ಟ್ರಮಟ್ಟದ ಲೀಡರುಗಳಿಗೆ ಕೊಡುವ ಪತ್ರಗಳು, ಹೀಗೆ ಎಲ್ಲವಕ್ಕೂ ನಾನು scribe. ಇನ್ನೂ ಕೆಲವರು ನನ್ನತ್ರ ಬರೆಸಿದರೆ ಕೆಲಸ ಆಗೇಬಿಡುತ್ತೆ ಅ೦ತ ನ೦ಬಿದ ಹು೦ಬರೂ ಇದ್ರು. "ಅವರ ಕೈಗುಣ ಭಾರೀ ಚೆನ್ನಾಗಿದೆ ಕಣ್ರೀ, ಅವರತ್ರ ಮಾಡ್ಸಿ ನಿಮ್ಮ ಕೆಲಸ ಆದ೦ಗೇನೇ" ಅ೦ತಿದ್ರು. ಈ ರೀತಿಯ ಪುಕ್ಕಟೆ ಪ್ರಚಾರಗಳನ್ನು ನಾನೂ enjoy ಮಾಡ್ತಿದ್ದೆ ಅನ್ನಿ ಹೀಗಾಗಿ ಒಮ್ಮೆ ವಿಧಾನಸಭಾ ಚುನಾವಣಾ ಸ೦ದರ್ಭದಲ್ಲಿ ಊರಿನ ಹಿರಿಯರೊಬ್ಬರು ಫೋನ್ ಮಾಡಿ " ನಮ್ಮ ಹುಡುಗನನ್ನ ಕಳ್ಸಿದೀನಿ, ಅವನಿಗೆ ಈ ಸಲ ನಮ್ಮ ಪಾರ್ಟಿಯಿ೦ದ ಟಿಕೆಟ್ ಕೇಳ್ಬೇಕು, ಒ೦ದೊಳ್ಳೆ ಡ್ರಾಫ್ಟ್ ಮಾಡಿಕೊಡಿ,ಹಾಗೇ ಅವನದೊ೦ದು ಬಯೋಡೇಟಾನೂ ಮಾಡಿಕೊಡಿ" ಅ೦ತೇಳಿದ್ರು. ಅವರು ಹೇಳಿದ ಹುಡುಗಪ್ಪನೂ ಬ೦ದ. ನಾನು ಆ ದಿನ ಸಿಕ್ಕಾಪಟ್ಟೆ busy ಯಾಗಿದ್ದೆ. ಪಾಪ ಆತ ಬೆಳಗ್ಗೆ ಬ೦ದವನು ಮಧ್ಯಾಹ್ನ ಎರಡುಗ೦ಟೆಯವರೆಗೆ ಕಾದು, ನನ್ನಿ೦ದ ಡ್ರಾಫ್ಟ್ ಮಾಡಿಸಿಕೊ೦ಡು ಪುನೀತನಾಗಿ ಹೋದ. ಆತನಿಗೆ ಟಿಕೇಟೂ ಸಿಕ್ತು, ಗೆದ್ದೂಬಿಟ್ಟ, ಶಾಸಕನೂ ಆದ. ನನ್ನತ್ರ ಅರ್ಜಿ ಬರೆಸುವಾಗ ಅಮಾಯಕನ೦ತಿದ್ದ ಆ ಹುಡುಗ ರಾಜಕೀಯದ ಪಟ್ಟುಗಳನ್ನು ಕರತಲಾಮಲಕಗೊಳಿಸಿಕೊ೦ಡು ಪ್ರಚ೦ಡನೇ ಆದ. ದೇವೇಗೌಡರ ಮತ್ತು ಜೆ.ಎಚ್.ಪಟೇಲ್ ಮ೦ತ್ರಿಮ೦ಡಲದಲ್ಲಿ ಎರಡು ಬಾರಿ ಮ೦ತ್ರಿಯೂ ಆಗಿ ಎಲ್ಲರೀತಿಯಿ೦ದ ದು೦ಡಗಾಗಿ ಬಿಟ್ಟ. ಇದನ್ನೆಲ್ಲಾ ಪ್ರತಿಷ್ಠೆಗಾಗಿ ಬರೆದಿಲ್ಲ, ಅ೦ತಹ ಸ್ವಕುಚಮರ್ದನಾಸಕ್ತಿಯೂ ನನಗಿಲ್ಲ.ಇದು ಚುನಾವಣಾ ಸಮಯವಾದ್ದರಿ೦ದ ಮತ್ತು ಶಿವೂ ಬರೆದ ಕಾಮೆ೦ಟನ್ನು ಓದುತ್ತ ಹಳೆಯದೆಲ್ಲ ನೆನಪಾಯ್ತು. ಬರೆಯುತ್ತಾ ಹೋದರೆ ಇನ್ನೂ ಏನೇನೋ ಇದೆ. ಅದೆಲ್ಲ ಈಗ ಅಪ್ರಸ್ತುತ.

Thursday, April 16, 2009

ಸ್ವಲ್ಪ ಕಾಳಜಿ ವಹಿಸಿದ್ರೆ ನೀವಾಗುತಿದ್ರಿ ಒಬ್ಬ ಮುತ್ಸದ್ಧಿ


ಚಿ೦ತೆ ಇಲ್ಲದವಗೆ ಸ೦ತೆಯಲ್ಲೂ ನಿದ್ದೆ ಬರುವುದು ನಿಜವಿರಬಹುದು
ಆದರೆ ನಿಮ್ಮ ನಿತ್ಯಚಿ೦ತನೆಯ ಪರಿಗೆ ಹೀಗೆ೦ದರೆ ಹೇಗಾಗಬಹುದು ?
ನಿಮ್ಮ ಸಾರ್ವಜನಿಕ ನಿದ್ದೆ ಅದು ದೇಶದ ಹಿತಕ್ಕಾಗಿ, ಸ್ವಂತಕ್ಕಲ್ಲ
ಛೇ, ಟೀಕೆ ಮಾಡುವುದಕ್ಕೂ ಇತಿಮಿತಿ ಬೇಡವೇ ದೇವಾ ?

ರೈತನ ಮಗನೆ೦ದು ಸಾರಿ ಏನು ಸಾಧಿಸಿದಿರಿ ಅ೦ತಾರಲ್ಲ ಮ೦ದಿ
ದಿಲ್ಲಿಗೂ ಬಿಜಯ೦ಗೈಸಿತಲ್ಲ ನಿಮ್ಮ ಸೊಪ್ಪುಸಾರು ಮುದ್ದೆ ಮಹಾತ್ಮೆ
ಛೇ, ಛೇ, ನಿಮಗೆ ಹಾಗೆಲ್ಲ ಹೇಳಲಾಗದು, ನೀವು ರಾಜ್ಯದ ಹೆಮ್ಮೆಯ ಪುತ್ರ
ಪ್ರಧಾನಿ ಪಟ್ಟವೇರಿದ ಮೊದಲ ಕನ್ನಡಿಗನೆ೦ಬುದು ಹೆಗ್ಗಳಿಕೆ ಮಾತ್ರ

ಉತ್ತಿಲ್ಲ, ಬಿತ್ತಿಲ್ಲ, ಕೈಕೆಸರಾಗಿಲ್ಲ, ಆದರೂ ನೀವು ಮಣ್ಣಿನ ಮಗ
ಹೇಳಿ ? ಹೊತ್ತಿದ್ದೀರಾ ನೀವೆ೦ದಾದರೂ ರೈತನುಳುಮೆಯ ನೊಗ ?
ಜಾತ್ಯಾತೀತತೆಯ ಸೋಗಿನಲ್ಲಿ ನಿಮ್ಮದು ಕುಟಿಲ ರಾಜನೀತಿ
ಜನ ನಿಮ್ಮನ್ನಿನ್ನೂ ನೆಚ್ಕೊ೦ಡಿದ್ದಾರಲ್ಲ, ಅವರಿಗೆ ದೇವ್ರೇ ಗತಿ !!

ಆಗಾಗ ನೀವು ರಾಜಕೀಯದ ಧೂಳಿನಿ೦ದ ಮೇಲೆದ್ದು ಬರ್ತೀರಿ
"ಫೀನಿಕ್ಸ್ ಪಕ್ಷಿಯ೦ತೆ ನಾನು" ಅ೦ತ ಕಟ್ಟು ಕಥೆ ಬೇರೆ ಹೇಳ್ತೀರಿ
ಗೆದ್ದರೆ ಬಡವರವೋಟಿನಿ೦ದ ಸೋತರೆ ಶ್ರೀಮ೦ತರ ನೋಟಿನಿ೦ದ
ಅ೦ತ ನೀವೇ ಮೊನ್ನೆ ಹೇಳ್ತಿದ್ರಲ್ಲಾ ಪೂಸಿ ಹೊಡ್ದು ಬಾಡೂಟದಿ೦ದ


ಸದ್ಯಕ್ಕೆ ನಿಮ್ಮ ತಲೇಲಿರೋದು ಕುಮಾರದ್ವಯರ ರಾಜಕೀಯ ಪುನರ್ವಸತಿ
ಅದ್ಕಾಗಿ ನೀವು ಏನು ಮಾಡೋಕು ಸಿದ್ಧ, ರೈತನಿಗೆ ಬೇಕಾದ್ರಾಗ್ಲಿ ನಿರ್ವಸತಿ
ಒ೦ದ್ಕಣ್ಣು ದೆಲ್ಲಿ ಗದ್ದುಗೆ ಮೇಲೆ ಇನ್ನೊ೦ದ್ಕಣ್ಣು ರಾಜ್ಯದ ಮೇಲೇನಾ ??
ಮಾಟ-ಮ೦ತ್ರ ವಾಮಾಚಾರ, ನೀವು ಇದನೆಲ್ಲ ಮಾಡೋದು ಸರೀನಾ ?

ಸ್ವಲ್ಪ ಕಾಳಜಿ ವಹಿಸಿದರೆ ನೀವಾಗುತಿದ್ರಿ ಒಬ್ಬ ಮುತ್ಸದ್ಧಿ
ಬಿಟ್ಟು ಬಿಟ್ಟಿದ್ರೆ ಕುತ್ಸಿತ ರಾಜಕೀಯ ಮತ್ಸರದ ಬುದ್ಧಿ
ಈಗ ನೀವಾಗಿದ್ದೀರಿ ಒಬ್ಬ ಅವಕಾಶವಾದಿ ರಾಜಕಾರಣಿ
ನಿಮ್ಮಲ್ಲಿಲ್ಲ ನಿಜವಾಗಿಯೂ ರೈತಪರ ಕಾಳಜಿಯ ದನಿ


ಇದೆ ನಿಮ್ಮ ಬಳಿ "ಮಣ್ಣಿನ ಮಗ" ನೆ೦ಬ ಅಗ್ಗಳಿಕೆಯ ಅಭಿದಾನ
ನಿಜ ಹೇಳಿ, ರೈತರ ಅಭ್ಯುದಯಕ್ಕೆ ನಿಮ್ಮದೇನು ವರದಾನ ?
ಅಧಿಕಾರದ ಗದ್ದುಗೆಗೆ ಹತ್ತೆ೦ಟು ಕುಟಿಲನೀತಿಗಳ ಕುಸ್ತಿ ಪಟ್ಟು
ರಾಜಕೀಯದ ಗರಡಿಮನೆಯಲ್ಲಿ ಸದ್ಯವೇ ಆಗಲಿದೆ ನಿಮ್ಮ ಗುಟ್ಟು ರಟ್ಟು


Tuesday, April 14, 2009

ಕ್ಷಮಿಸು ಮನ್ನಿಸು ನನ್ನೆಲ್ಲ ಎಡವಟ್ಟುಗಳ ದೇವಾ

ಚಿತ್ರಕೃಪೆ : ಕನ್ನಡಪ್ರಭ

ಯಾಕೋ ಗೊತ್ತಾಗ್ತಿಲ್ಲ, ರಾಜಕೀಯದ ಬಿಸಿ ಗಾಳಿ ಜೋರಾಗಿದೆ। ಇದರಿ೦ದ ವಾತಾವರಣದಲ್ಲಿ ಸೆಕೆ ಇನ್ನಷ್ಟು ಜಾಸ್ತಿಯಾಗಿದೆ. ಬಹುಶಃ ಮಳೆ ಕೂಡ, ಕೇ೦ದ್ರದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುವುದನ್ನು ಎದುರು ನೋಡುತ್ತಿದೆಯೇನೋ ಅನಿಸುವ೦ತಿದೆ. ವೃತ್ತಪತ್ರಿಕೆಗಳಲ್ಲಿ ಚುನಾವಣೆಯ ಸುದ್ದಿ, ರಾಜಕೀಯ ಪುಢಾರಿಗಳ ಚಿತ್ರ-ವಿಚಿತ್ರ ಹೇಳಿಕೆಗಳು, ಆರೋಪ-ಪ್ರತ್ಯಾರೋಪಗಳೇ ವಿಜ್ರ೦ಭಿಸುತ್ತಿವೆ. ಇತ್ತೀಚಿಗೆ ದಿನಪತ್ರಿಕೆಯೊ೦ದರಲ್ಲಿ ನಮ್ಮ ಮಾನ್ಯ ಮು.ಮ೦. ಯೆಡಿಯೂರಪ್ಪನವರು ಮ೦ಗಳೂರು ಸಮೀಪದ ದೇವಳವೊ೦ದರಲ್ಲಿ ಭಕ್ತಿಭಾವ ಪರವಶರಾಗಿ ನಡುಬಗ್ಗಿಸಿ ಕೈಮುಗಿಯುತ್ತಿರುವ ಚಿತ್ರ ಕ೦ಡಾಗ ಒ೦ದು ಕವನ ರಚಿಸುವ ಹುಮ್ಮಸ್ಸು ಬ೦ತು. ಯಾರನ್ನೂ ಲೇವಡಿ ಮಾಡುವ ಉದ್ದೇಶ ಇಲ್ಲಿಲ್ಲ. ಕೇವಲ ವೈನೋದಿಕ ಪ್ರಜ್ನೆಯೊ೦ದಿಗೆ ಈ ಕವನ ಬರೆದಿಟ್ಟು ಅದಾಗಲೇ
-4 ದಿನಗಳಾಗಿವೆ ಆದರೆ ಬ್ಲಾಗಲ್ಲಿ ತಡವಾಗಿ ಪ್ರಕಟವಾಗುತ್ತಿದೆ. ಮಾನ್ಯ ಯೆಡಿಯೂರಪ್ಪನವರ ಮನದಾಳದ ಪ್ರಾರ್ಥನೆ ಇದಾಗಿರಬಹುದೇ ? ಕವನ ಓದಿ

ಕಾಣದ ದೇವರ ಮು೦ದೆ ಅಳುವ ದೊರೆಯ ಆರ್ತ ಮೊರೆ
ಮತದಾರನ ಓಲೈಸಲು ದೇವರ ಮನ ಗೆಲ್ಲುವ ಹುನ್ನಾರವೇ
ರಾಜಕಾರಣಿಗಳ ಮನದಾಳದ ಒಳತೋಟಿಯ ಬಲ್ಲವರಿಲ್ಲ
ನಿಜಭಕ್ತಿಯೋ, ನಾಟಕೀಯತೆಯೋ ಆ ದೇವನಿಗೂ ಗೊತ್ತಿಲ್ಲ


ಆಹಾ ಏನು ಭಯಭಕ್ತಿ, ನಡು ಬಗ್ಗಿದೆ ಕಣ್ ಕುಗ್ಗಿದೆ
ನೋಟದಲ್ಲಿ ಆತ೦ಕದ ಛಾಯೆಯೇ ಮಡುಗಟ್ಟಿದೆ
ಭಕ್ತಿಯ ಪರಾಕಾಷ್ಟೆಯಲ್ಲಿ ಪೊಡಮಡುವ ಭಾವ
ಕ್ಷಮಿಸು ಮನ್ನಿಸು ನನ್ನೆಲ್ಲ ಎಡವಟ್ಟುಗಳ ದೇವಾ


ಒ೦ಡೆದೆ ವಿಪಕ್ಷಗಳ ಬಿಟ್ಟೂಬಿಡದ ಮಳೆಯ೦ಥ ನಿರ೦ತರ ಟೀಕಾಸ್ತ್ರ
ಮತ್ತೊ೦ದೆಡೆ ಸ್ವಪಕ್ಷದ ಹಿತಶತ್ರುಗಳ ತೆರೆಮರೆಯ ಕಾಟಾಸ್ತ್ರ
ಮಗದೊ೦ದೆಡೆ ಗಣಿಧಣಿಗಳಿ೦ದ ಬಗ್ಗುಬಡಿಯುವ ಬ್ರಹ್ಮಾಸ್ತ್ರ
ಸಾಕುಸಾಕೆನಿಸಿ ಹೈರಾಣಾಗಿದೆ ದೇವಾ ಈ ನನ್ನ ಜೀವ


ಹಗೆಯ ಹೂರಣ ತು೦ಬಿ ನಗೆಯ ತೋರಣ ಕಟ್ಟಿ ಹಲ್ಲು ಬೀರುತ
ಭಟ್ಟ೦ಗಿಗಳ೦ತೆ ನನ್ನ ಬೆನ್ನಹಿ೦ದೆ ತಿರುಗುತ್ತಿದ್ದಾರೆ ನಗುನಗುತ
ನಿತ್ಯಸ೦ಕಟಗಳ ಸ೦ತೆಯಲಿ ನಿದ್ದೆ ಬಾರದಾಗಿದೆ ನೆಮ್ಮದಿ ದೂರಾಗಿದೆ
ಹಿತಶತ್ರುಗಳ್ಯಾರೆ೦ದು ತಿಳಿಯದಾಗಿದೆ ಕೇಳಲಾರೆಯಾ ನನ್ನ ಮೊರೆಯಾ


ಯಾರು ಸೋತರು ಚಿ೦ತಿಲ್ಲ ನನ್ನ ಮಗನೊಬ್ಬನನ್ನು ಗೆಲ್ಲಿಸು
ನನ್ನ ಹಿತಶತ್ರುಗಳೆಲ್ಲ ನಾಶವಾಗಲಿ ನನ್ನ ಸೀಟು ಗಟ್ಟಿಯಾಗಿರಲಿ
ಬದುಕು ಶೋಭಾಯಮಾನವಾಗಿರಲಿ ಗಳಿಸಿದ ಕೋಟಿಗಳು ಕರಗದಿರಲಿ
ಗಜದಾನವೋ, ಸ್ವರ್ಣರಥವೋ ಏನು ಬೇಕು ಕೇಳು ಓ ನನ್ನ ತ೦ದೇ
ಬಿಡೆನು ಎ೦ದೆ೦ದಿಗೂ ನಿನ್ನ ಪಾದ ಹರ ಹರಾ ಶ್ರೀ ಯೆಡಿಯೂರೇಶ್ವರಾ

Monday, April 13, 2009

ಮುದಿ ಮನಸಿನ ತಲ್ಲಣ


ನಾನಿವತ್ತು ನನ್ನ ಬ್ಲಾಗ್ update ಮಾಡುವ ಹಪಾಹಪಿಯಲ್ಲಿ ಇರಲೇ ಇಲ್ಲ. ಮನೆಯಿ೦ದ ಹೊರಬಂದು ಕೆಲಸದ ನಿಮಿತ್ತ ಎಲ್ಲೋ ಹೋಗುವವನಿದ್ದೆ, ರಸ್ತೆಯ junction ಸಮೀಪ ವಾಹನ ಜಂಗುಳಿಯ ರಸ್ತೆ ದಾಟುವಲ್ಲಿ ಒಬ್ಬ ಹಣ್ಣು ಹಣ್ಣು ಮುದುಕಿ ಕಷ್ಟಪಡುತ್ತಿದ್ದುದನ್ನು ಕಂಡು ನಾನು ನಿಜವಾಗಿಯು ಮರುಗಿದೆ. ಆಕೆಯ ಕೈಹಿಡಿದು ರಸ್ತೆ ದಾಟಿಸಿದೆ. ಆಕೆ ಹೇಳಿದ ಕಥೆ ನಿಜವೇ ಆದರೆ, ಖಂಡಿತವಾಗಿಯೂ ಆಕೆಯ ಮಕ್ಕಳಿಗೆ ನರಕದಲ್ಲಿಯೂ ಜಾಗ ಸಿಗದು. ಯಾಕೋ ಮನಸ್ಸು ವಿಹ್ವಲಗೊ೦ಡಿತು. ಕೂಡಲೇ ಊರಲ್ಲಿರುವ ನನ್ನಮ್ಮನಿಗೆ ಫೋನ್ ಮಾಡಿ ಆಕೆಯ ಕ್ಷೇಮ ವಿಚಾರಿಸಿದೆ. ಏನೋ ಹಳಹಳಿ ಮನಸನ್ನು ಕಾಡುತ್ತಿತ್ತು. ಆ ಗುಂಗಿನಲ್ಲೇ ಒ೦ದು ಕವನ ಅಕ್ಷರ ರೂಪ ತಾಳಿತು, ಅದು ನಿಮ್ಮ ಮುಂದಿದೆ.

ಸುಕ್ಕಾದ ಮೈ ಮನಸು ಹೆಪ್ಪುಗಟ್ಟಿದ ರಕ್ತ
ಕಣ್ಣಗೋಲಗಳಲ್ಲಿ ಕಾರ್ಮುಗಿಲ ನೆನಪು
ಮನದ ಮರ್ಮರವನ್ನು ಕೇಳುವವರಾರಿಲ್ಲ
ಯೌವ್ವನದ ದಿನಗಳಾ ನೆನಪು ಮಾಸಿಲ್ಲ

ನೆನಪು ನೇವರಿಕೆಗಳಿಗೆ ಮರೆವಿನಾ ತೋರಣ
ಮಸುಕಾಗುತಿದೆಯಲ್ಲ ಗತದಿನದ ಹುರುಪು
ಉತ್ಕರ್ಷ ಉತ್ಸಾಹ ಉಲ್ಲಾಸ ವಿಲ್ಲಿಲ್ಲ
ಕಸು ಕಳೆದ ಜೀವಕ್ಕೆ ಸತುವು ಏಕಿಲ್ಲ

ಒಣ ಎಲೆಯು ಉದುರಲು ಹಸಿರೆಲೆಯು ನಗುವಂತೆ
ಜರೆಯುವರು ನಿನ್ನನ್ನೇ ನಿ೦ದಿಸುತ ಎಲ್ಲ
ದಿನಗಳೆದು ತಲೆಮಾಸಿ ವಯಸು ಜಾರಿದ ದಿನಕೆ
ನೆನಪಾಗುವುದು ನಿನ್ನ ಸುಕ್ಕು ಮೈ ಮನಸು



ಫೋಟೋ ಕೃಪೆ : www.flickr.com



Thursday, April 9, 2009

ಚುಟುಕುಬ್ರಹ್ಮನ ನೆನಪಲ್ಲಿ ಕುಟುಕು ಕಾರ್ಯಾಚರಣೆ

ದಿನಕರ ದೇಸಾಯಿ ಯವರು


ಯಾಕೋ ಗೊತ್ತಿಲ್ಲ, ಚುಟುಕುಬ್ರಹ್ಮ ದಿನಕರ ದೇಸಾಯಿಯವರ ಚೌಪದಿಗಳ ನೆನಪಾಯಿತು. ಅವರದೊ೦ದಷ್ಟು ಚುಟುಕು ಓದೋಣ ಅ೦ತ ತಡಕಾಡಿದೆ. ನನ್ನ ಸ೦ಗ್ರಹದಲ್ಲಿ ಔಷಧಿಗೆ ಬೇಕ೦ದ್ರೆ ಒ೦ದೇ ಒ೦ದೂ ಸಿಗಲಿಲ್ಲ. ನಾನೂ ಸಣ್ಣವನಿದ್ದಾಗ ಮನೆಗೆ ದಿನ-ವಾರಪತ್ರಿಕೆಗಳು ಧ೦ಡಿಯಾಗಿ ಬರುತ್ತಿದ್ದವು. ಬಡಸಾಹಿತಿಯ ಮನೆಯಲ್ವಾ ಆದ್ರಿ೦ದ ಬೇರೆ ವಿಚಾರಕ್ಕೆ ಕೊರತೆ ಇದ್ರೂ ಓದಿಗೆ ಯಾವತ್ತು ಕೊರತೆ ಇರ್ತಿರಲಿಲ್ಲ. ಆಗ ಪ್ರಜಾಮತ ಅ೦ತ ಒ೦ದು ಪತ್ರಿಕೆ ಬರ್ತಿತ್ತು. (ಪಾಕ್ಷಿಕ ಅ೦ತ ನೆನಪು). ಅದು ಈಗ ಇಲ್ಲ. ಅದರಲ್ಲಿ ಬರುತ್ತಿದ್ದ "ಗುಪ್ತ ಸಮಾಲೋಚನೆ" ಎ೦ಬ ಅ೦ಕಣಕ್ಕೆ ವಯಸ್ಕ ಹುಡುಗ-ಹುಡುಗಿಯರು ಮುಗಿಬೀಳುತ್ತಿದ್ದರು. ಆಗ ಎಷ್ಟು ಓದಿದರು ನನಗೆ ಅದೇನೆ೦ದೇ ಅರ್ಥವಾಗುತ್ತಿರಲಿಲ್ಲ, ಆದರೆ ದಿನಕರ ದೇಸಾಯಿಯವರ ಚುಟುಕು ಮಾತ್ರ ನನ್ನ ಗಮನ ಸೆಳೆಯುತ್ತಿತ್ತು, ಒ೦ಥರಾ attractive ಆಗಿ ಇರ್ತಿತ್ತು. ಹಾಗಿತ್ತು ಅವರ ಪದಲಾಲಿತ್ಯ.

ದಶಕಗಳ ಹಿ೦ದೆ ಓದಿದ ಅವರ ಚುಟುಕುಗಳ ನೆನಪು ಇನ್ನು ಮನಸಿನಲ್ಲಿ ಹಸಿರಾಗಿದೆ. ಅದನ್ನೇ ಮೆಲುಕು ಹಾಕುತ್ತ, ಇ೦ದಿನ ರಾಜಕೀಯ ಸನ್ನಿವೇಶದಲ್ಲಿ ದೇಸಾಯಿಯವರು ಇದ್ದಿದ್ದರೆ ಅವರ ಚುಟುಕು ಹೇಗಿರುತ್ತಿತ್ತೋ ಏನೋ ಎ೦ಬ ಕಲ್ಪನಾ ಲೋಕಕ್ಕೆ ಜಾರಿದೆ. ಅವರ ಪದ ಪ್ರಯೋಗಕ್ಕೆ, ಅವರ ವಿಶಿಷ್ಟ ಶೈಲಿಗೆ ಅವರೇ ಸಾಟಿ. ನವಿಲು ಕುಣಿದಿದ್ದನ್ನು ನೋಡಿ ಕೆ೦ಬೂತನೂ ಕುಣಿಯೋ ಹಾಗೆ ನಾನೂ ಒ೦ದಷ್ಟು ಚೌಪದಿಗಳನ್ನು ಬರೆದಿದ್ದೇನೆ. ಚೆನ್ನಾಗಿಲ್ಲ ಎ೦ದು ನನಗೆ ಗೊತ್ತು, ಓದಿ ಅಭಿಪ್ರಾಯಿಸಿ.

ಮತ್ತೆ ಬ೦ದಿದೆ ನೋಡು ಮಹಾ ಚುನಾವಣೆ
ಜೋರಾಗಿ ನಡೆದಿದೆ ಕಾಳಧನದ ಚಲಾವಣೆ
ಆಯೋಗದಿ೦ದ ಅಕ್ರಮ ಹಣಹೆ೦ಡ ತಪಾಸಣೆ
ಇದು ಪರಸ್ಪರ ವಿರೋಧ ಪಾರ್ಟಿಗಳ ಚಿತಾವಣೆ


ಯಾವ ಪಕ್ಷಕೂ ಇಲ್ಲ ನೀತಿ-ನಿಯತಿ-ನಿಜಾಯಿತಿ
ಅಬ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಗೆ ಪೂರ್ಣ ವಿನಾಯಿತಿ
ಅವರ್ಯಾರಿಗೂ ಇಲ್ಲ ಜನಪರ ಕಾಳಜಿಯ ಚಿ೦ತೆ
ಖರ್ಚು ಮಾಡುವರು ಎಷ್ಟಾದರೂ ನೋಟಿನ ಕ೦ತೆ


ನಾಯಕರ ನಾಲಿಗೆಗಿಲ್ಲ ಲ೦ಗು ಲಗಾಮು
ಹೊಡಿ-ಬಡಿ-ಕಡಿ ಗಳದ್ದೇ ನಿತ್ಯ ಹ೦ಗಾಮು
ಕುರುಡು ಕಾ೦ಚಾಣದ್ದೆ ಇಲ್ಲಿ ಕಾರುಬಾರು
ಪ್ರಣಾಳಿಕೆಗಳೆಲ್ಲ ಸುಳ್ಳುಪೊಳ್ಳು ಬರೀ ಬೋರು


ನಮ್ಮ ನಾಯಕರ ನೆಗೆತ ಕ೦ಡು ದ೦ಗಾಗಿ
ಮ೦ಗಗಳೂ ನಾಚಿವೆಯ೦ತೆ ನೋಡಿ
ಹಣ ಸಿಗುವುದಾದರೆ ಹೆಣವೂ ಬಾಯಿ ಬಿಡುವಾಗ
ನಮ್ಮದೇನು ಮಹಾ ಎ೦ದ ಪಕ್ಷಾ೦ತರಿ ದಿವಿನಾಗಿ


ಲಕ್ಷಗಳಲ್ಲಿದ್ದ ನಮ್ಮ ನಾಯಕರ ಆಸ್ತಿ-ಪಾಸ್ತಿ
ದಾಟಿದೆ ಹಲವು ಕೋಟಿಗೂ ಮೀರಿ ಜಾಸ್ತಿ
ಸೊರಗಿ ಸೀಕಲಕಡ್ಡಿಯಾದರೆ ಬಡ ಮತದಾರ
ಕೊಬ್ಬಿದ ಗೂಳಿಯ೦ತಾಗಿದ್ದಾನೆ ನಮ್ಮ ನೇತಾರ


ಚರ೦ಡಿಯಾದರೇನು ಮೊರಿಯಾದರೇನು ಗೆಬರಿ ತಿನ್ನುವುದಕ್ಕೆ
ರಿಸೆಶನ್ ಇದ್ರೂ ರಾಜಕಾರಣಿಗಳಿಗೆ ಮಾತ್ರ ಬರೋಲ್ಲ ಧಕ್ಕೆ
ಹುಚ್ಮು೦ಡೆ ಮದುವೇಲಿ ಉಣ್ಣೋದೇ ರಾಜಕಾರಣಿ ಪಾತ್ರ
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅ೦ದ್ರೆ ಇದೇನಾ ಮಿತ್ರ ?


ಯಾರು ಗೆಲ್ತಾರೆ, ಯಾರು ಗದ್ದಿ ಹಿಡಿತಾರೆ ಅನ್ನೋದೇ ಚರ್ಚೆ
ಯುಪಿಎ, ಏನ್.ಡಿ.ಎ. ಥರ್ಡ್ ಫ್ರೊ೦ಟು ಇಲ್ಲ ಚೌಚೌ ಮಿರ್ಚಿ
ಯಾರಾದರೇನು ಎಲ್ಲ ಕಡಿದು ಕಟ್ಟೆ ಹಾಕೋದು ಏನ೦ತ ಗೊತ್ತಲ್ಲ
ಇವರ ಬಣ್ಣದ ಮಾತು ನಂಬಿದರೆ ದೇಶ ಖ೦ಡಿತ ಉದ್ಧಾರ ಆಗೋಲ್ಲ




Tuesday, April 7, 2009

ಜನಮಾನಸದಿ೦ದ ದೂರವಾಗುತ್ತಿರುವ ಅಪ್ರತಿಮ ಸಾಧಕಿ


ಪ೦ಡಿತಾ ರಮಾ ಬಾಯಿ
(23 April 1858 - 5 April 1922)

"People must not only hear about the kingdom of God, but must see it in actual operation, on a small scale perhaps and in imperfect form,but a real demonstration nevertheless"


ನನಗೆ ಈ ವ್ಯಕ್ತಿಯ ಪರಿಚಯ ಲೇಖನ ಬರೆಯುವ ಇರಾದೆಯೇ ಇರಲಿಲ್ಲ. ನಮ್ಮ ಬ್ಲಾಗ್ ಸಮೂಹದ ಹಿರಿಯಣ್ಣ ಸುನಾಥರು ಅವರ ಬ್ಲಾಗಿನಲ್ಲಿ ಒಬ್ಬ ಮಹನೀಯರ ಬಗ್ಗೆ ಪರಿಚಯಾತ್ಮಕವಾಗಿ ಬರೆದಿದ್ದ ಬರಹಕ್ಕೆ ಪ್ರತಿಕ್ರಿಯಿಸುತ್ತ ಸಹಜವಾಗಿ ನಾನು ಪ೦ಡಿತಾ ರಮಾಬಾಯಿ ಹೆಸರನ್ನು ಅಲ್ಲಿ ಉಲ್ಲೇಖಿಸಿದ್ದೆ. ಅದಕ್ಕೆ ಪ್ರತಿಯಾಗಿ ಸುನಾಥರು ಆಕೆಯ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸಿ ಎ೦ದು ಪ್ರತಿಸ್ಪ೦ದಿಸಿದ್ದರು. ಇದಾಗಿ ಅನೇಕ ದಿನಗಳೇ ಕಳೆದಿದ್ದರು ಸಮಯಾಭಾವದಿ೦ದ ಆ ಕಡೆ ಹೊರಳಲಾಗಿರಲಿಲ್ಲ.ಇದೀಗ ಸಮಯ ಕೂಡಿ ಬ೦ದಿದೆ ಅನಿಸುತ್ತದೆ.

ಈಕೆ ಜನಿಸಿದ್ದು 1858 ರಲ್ಲಿ. ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಒ೦ದು ಕುಗ್ರಾಮ "ಮಾಳ"ಎ೦ಬ ಹಳ್ಳಿಯಲ್ಲಿ. ತ೦ದೆ ಅನ೦ತ ಶಾಸ್ತ್ರಿ ಡೋ೦ಗ್ರೆ. ಸ೦ಸ್ಕ್ರತ ದಲ್ಲಿ ವಿಶೇಷ ವಿದ್ವತ್ತು ಹೊ೦ದಿದ್ದ ಶಾಸ್ತ್ರಿಗಳ ಪ್ರಭಾವದಿ೦ದ ಈಕೆಯೂ ಅದ್ವಿತೀಯವೆನಿಸುವ ಭಾಷಾಪಾ೦ಡಿತ್ಯ ಹೊ೦ದಿದ್ದರು. ಎಳವೆಯಲ್ಲಿಯೇ ರಾಮಾಯಣ, ಮಹಾ ಭಾರತ, ಭಗವದ್ಗೀತೆಯ ಶ್ಲೋಕಗಳನ್ನು ಕ೦ಠಪಾಠ ಮಾಡಿಕೊ೦ಡಿದ್ದ ಈಕೆ ಅವುಗಳ ಅರ್ಥವಿಸ್ತಾರವನ್ನು ಜನರಿಗೆ ಪರಿಣಾಮಕಾರಿಯಾಗಿ ತಿಳಿಹೇಳುವ ಕಲೆ ಸಿಧ್ಧಿಸಿಕೊ೦ಡಿದ್ದರು. ಆ ಕಾಲದಲ್ಲಿ ಉ೦ಟಾದ ಭಯ೦ಕರ ಕ್ಷಾಮದ ಪರಿಣಾಮ ಊರಿಗೆ ಊರೇ ಹಸಿವಿನಿ೦ದ ನರಳಿ ಸಾವಿನ ದವಡೆಯಲ್ಲಿದ್ದಾಗ ತ೦ದೆ-ತಾಯಿ ಮರಣಿಸಿದರು. ಜೀವನೋಪಾಯಕ್ಕೆ ದಾರಿಕಾಣದೇ ರಮಾಬಾಯಿ ತಮ್ಮ ಸೋದರನೊ೦ದಿಗೆ ಕರ್ನಾಟಕದಿ೦ದ ಗುಳೇ ಹೊರಟರು. ಆಗ ಈಕೆಯ ವಯಸ್ಸು 16. ಕರ್ನಾಟಕದಾದ್ಯ೦ತ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ಕಾಲ್ನಡಿಗೆಯಲ್ಲಿ ಸ೦ಚರಿಸಿ ಉದ್ಗ್ರಂಥಗಳ ಪ್ರವಚನ ಮಾಡಿ ಜೀವನ ನಡೆಸುತ್ತಿದ್ದರು. ಕಲ್ಕತ್ತೆಯ ಪ೦ಡಿತರು ಗಳು ಈಕೆಗೆ "ಪ೦ಡಿತಾ" ಎ೦ಬ ಬಿರುದು ದಯಪಾಲಿಸಿದರು. (ಬಹುಷಃ "ಪ೦ಡಿತ" ಎ೦ಬುದರ ಸ್ತ್ರೀಲಿ೦ಗವಾಚಕ ಇದಾಗಿರಬಹುದು). ಕಲ್ಕತ್ತೆಯ ವಕೀಲ ಬಿಪಿನ್ ಬಿಹಾರಿ ಎ೦ಬವರನ್ನು ವಿವಾಹವಾದರು. ಅಬ್ರಾಹ್ಮಣನನ್ನು ಮದುವೆಯಾಗಿದ್ದಕ್ಕೆ ಸ್ವಕುಲಬಾ೦ಧವ ರಿ೦ದ ಬಹಿಷ್ಕ್ರತರಾದರು. ಮು೦ದಿನದು ಹೋರಾಟದ ಬದುಕು. 1882 ರಲ್ಲಿ ಪತಿಯನ್ನು ಕಳೆದುಕೊ೦ಡು ವಿಧವೆಯಾದ ರಮಾಬಾಯಿ, ಪೂನಾ ನಗರಕ್ಕೆ ಬ೦ದು ವಿಧವಾ ಮಹಿಳೆಯರ ನೆರವಿಗಾಗಿ ಆರ್ಯ ಮಹಿಳಾ ಸಮಾಜ ಸ್ಥಾಪಿಸಿದರು. ಮಹಿಳೆಯರಿಗೆ ಆಗಿನ ಕಾಲದಲ್ಲಿ ಸಮಾಜ ತೋರುತ್ತಿದ್ದ ಅನಾಸ್ಥೆ, ವೈದ್ಯಕೀಯ ಸೌಲಭ್ಯವಿಲ್ಲದೆ ಹೆರಿಗೆ ವೇಳೆ ಸಾಯುತ್ತಿದ್ದ ಮಹಿಳೆಯರ ಸ್ಥಿತಿ ಕ೦ಡು ಮರುಗುತ್ತಿದ್ದ ರಮಾಬಾಯಿಗೆ ವೈದ್ಯಕೀಯ ಪದವಿ ಪಡೆದು ವೈದ್ಯೆಯಾಗಿ ಮಹಿಳೆಯರ ಸೇವೆ ಮಾಡಬೇಕೆ೦ಬ ಅದಮ್ಯ ಹ೦ಬಲವಿತ್ತು. ಆದರೆ ಕಿವುಡುತನದ ತೊ೦ದರೆ ಇದ್ದ ರಮಾಬಾಯಿಗೆ ವೈದ್ಯಕೀಯ ಪಾಠಗಳನ್ನು ಕೇಳಿಸಿಕೊಳ್ಳಲಾಗದ ಕಾರಣ ವೈದ್ಯಕೀಯ ಶಿಕ್ಷಣ ಗಗನ ಕುಸುಮವಾಗಿತ್ತು. ಅಮೆರಿಕೆಯಲ್ಲೂ ಸ೦ಚರಿಸಿ ಅನೇಕ ನಗರಗಳಲ್ಲಿ ಪ್ರವಚನ ಕೊಡುತ್ತಿದ್ದ ರಮಾಬಾಯಿಯವರು ಬರೆದ ಅನೇಕ ಪುಸ್ತಕಗಳು ಬಹುಚರ್ಚಿತ ಮತ್ತು ಬಹುಜನಪ್ರಿಯವಾಗಿ ದ್ದವು. ಅವುಗಳಲ್ಲಿ ಪ್ರಮುಖವಾದವು "The High Caste Hindu Woman " ಮತ್ತು"My American Encounter." ಮಹಿಳೆಯರ ಸಬಲೀಕರಣದ ಬಗ್ಗೆ ರಮಾಬಾಯಿಗಿದ್ದ ಕಾಳಜಿಯ ವಿಚಾರ ಇ೦ಗ್ಲೇ೦ಡಿನ ರಾಣಿ ಎಲಿಜಬೆತ್ ಗಮನಕ್ಕೂ ತಲುಪಿತು. ರಮಾಬಾಯಿಯನ್ನು ತನ್ನ ಅರಮನೆಗೆ ಕರೆಸಿಕೊ೦ಡ ರಾಣಿ, ಕ್ರೈಸ್ತಧರ್ಮಕ್ಕೆ ಮತಾ೦ತರ ಹೊ೦ದುವುದಾದರೆ ಮಾತ್ರ ವೈದ್ಯ ಶಿಕ್ಷಣ ಓದಲು ಅನುವು ಮಾಡಿಕೊಡುವುದಾಗಿ ಷರತ್ತು ಹಾಕಿದರಲ್ಲದೆ, ವಿಶೇಷ ಆಸಕ್ತಿ ವಹಿಸಿ ಈಕೆಗೆ ವೈದ್ಯಕೀಯ ಪದವಿ ದೊರಕಿಸುವಲ್ಲಿ ಮತ್ತು ತಮ್ಮ ಧರ್ಮಕ್ಕೆ ಸೆಳೆಯುವಲ್ಲಿ ಯಶಸ್ವಿಯಾದರು. ಪರಿಣಾಮವಾಗಿ ವೈದ್ಯಕೀಯ ಶಿಕ್ಷಣ ಪಡೆದ ಪ್ರಥಮ ಭಾರತಿಯ ಮಹಿಳೆ ಎ೦ಬ ಹೆಮ್ಮೆಗೂ ಇವರು ಭಾಜನರಾದರು. ಸ್ವಧರ್ಮದಲ್ಲಿದ್ದ ಪ್ರೋತ್ಸಾಹದ ಕೊರತೆಯೋ, ಮಹಿಳೆಯರ ಬಗ್ಗೆ ಇದ್ದ ಅನಾದರಣೆಯ ಕಾರಣವೋ, ರಮಾಬಾಯಿ ಪರಿಸ್ಥಿತಿಯ ದಾಳಕ್ಕೆ ಸಿಲುಕಿ ಕ್ರೈಸ್ತ ಧರ್ಮಕ್ಕೆ ಮತಾ೦ತರಗೊ೦ಡರು. ಬೈಬಲ್ಲನ್ನು ಮರಾಠಿಗೆ ಭಾಷಾ೦ತರಿಸಿದರು.

1889 ರಲ್ಲಿ ಈಕೆಯಿ೦ದ ಸ್ಥಾಪಿತವಾದ ರಮಾ ಮುಕ್ತಿ ಮಿಶನ್ ಇ೦ದಿಗೂ ಸಕ್ರಿಯವಾಗಿದೆ. ಮಾತ್ರವಲ್ಲ ಭಾರತದಲ್ಲಿ ಮಹಿಳೆಯರ ದನಿಯಾಗಿ, ಮಹಿಳೆಯರಿಗೆ ಸಮಾನ ಹಕ್ಕುಬಾಧ್ಯತೆಗಳನ್ನು ಪ್ರತಿಪಾದಿಸುವಲ್ಲಿ ಶತಮಾನಕ್ಕೂ ಮೊದಲು ದನಿ ಎತ್ತಿದ ಪ್ರಥಮ ಮಹಿಳೆ ಎನಿಸಿದರು.

ರಮಾಬಾಯಿ ಭಾರತದ ಪ್ರಥಮ ಎಜ್ಯುಕೆಷನಿಸ್ಟ್ ಮಹಿಳೆ ಮಾತ್ರವಲ್ಲ ಈಗ ಜನಪ್ರಿಯವಾಗಿರುವ "kindergarten" ಶಿಕ್ಷಣ ಪದ್ಧತಿಯನ್ನು ಮತ್ತು ಸಚಿತ್ರ ಪಠ್ಯಪುಸ್ತಕಗಳನ್ನು ಶತಮಾನಕ್ಕೆ ಮೊದಲೇ ಭಾರತದ ಹಳ್ಳಿಗಳ ಪ್ರಾಥಮಿಕ ಶಾಲೆಗಳಿಗೆ ಮೊದಲಿಗೆ ಪರಿಚಯಿಸಿದವರು.

ಮಹಿಳಾ ಸಬಲೀಕರಣಕ್ಕಾಗಿ ದುಡಿದು ಇತ್ತೀಚಿಗೆ ಅ೦ತರರಾಷ್ಟ್ರೀಯ ಪ್ರಶಸ್ತಿಪಡೆದ ರುತ್ ಮನೋರಮಾ ಕೂಡಾ ಪ೦ಡಿತಾ ರಮಾಬಾಯಿಯವರಿ೦ದ ಪ್ರಭಾವಿತರಾದವರು.

ನವಭಾರತ ನಿರ್ಮಾಣದಲ್ಲಿ, ಅದರಲ್ಲೂ ಮಹಿಳೆಯರ ಸಬಲೀಕರಣದ ಹಿನ್ನೆಲೆಯಲ್ಲಿ ಇವರ ಅಪಾರ ಶ್ರಮ, ದೂರದ್ರಷ್ಟಿ ಮತ್ತು ಕರ್ತವ್ಯಪರತೆಯನ್ನು ಪರಿಗಣಿಸಿ ಭಾರತ ಸರಕಾರ 1989 ರಲ್ಲಿ ಇವರ ಹೆಸರಲ್ಲಿ ಒ೦ದು ಅ೦ಚೆ ಚೀಟಿಯನ್ನು ಹೊರತ೦ದಿದೆ.

ಈಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇ೦ದಿನ ಸಮಾಜಕ್ಕೆ ಇಲ್ಲದಿರುವುದರಿ೦ದ, ಅವರ ಹೆಸರು ಜನಮಾನಸದಿ೦ದ ದೂರವಾಗುತ್ತಿದೆ. ಯಾರ್ಯಾರದೋ ಕುರಿತ ಅಸ೦ಗತ ಮಾಹಿತಿಗಳನ್ನು ಪಠ್ಯಪುಸ್ತಕಗಳಲ್ಲಿ ತು೦ಬಿ ಮಕ್ಕಳ ಮೇಲೆ ಹೇರುವ ಸರಕಾರ ಇ೦ಥವರ ಜೀವನದ ಕುರಿತಾದ ಮಾಹಿತಿಯನ್ನು ಪಠ್ಯವಾಗಿಸಿದಲ್ಲಿ ಪ್ರಯೋಜನವಾದೀತೆ೦ಬ ಆಶಯ ನನ್ನದು. ಮಾತ್ರವಲ್ಲ ಈಕೆಯ ಬಗ್ಗೆ ಮಾಹಿತಿ ಇರುವ ಬಹುತೇಕರಿಗೂ ಸಹಾ ಈಕೆಯ ಹುಟ್ಟೂರು ಕರ್ಣಾಟಕದ ಒ೦ದು ಪುಟ್ಟಹಳ್ಳಿ ಎ೦ಬುದು ಗೊತ್ತಿಲ್ಲ. ಆ ಉದ್ದೇಶಕ್ಕಾಗಿ ನಾನು ಈ ಪರಿಚಯವನ್ನು ಅತ್ಯ೦ತ ಸ೦ಕ್ಶಿಪ್ತಗೊಳಿಸಿ ತಮ್ಮ ಮು೦ದಿಟ್ಟಿದ್ದೇನೆ. ಇವರ ಬಗ್ಗೆ ನನಗೆ ತಿಳಿದಿರದ ಮಾಹಿತಿ ತಮ್ಮಲ್ಲಿದ್ದರೆ ದಯವಿಟ್ಟು ತಿಳಿಸಿ ಎ೦ಬ ವಿನ೦ತಿ ನನ್ನದು.

Sunday, April 5, 2009

ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ

ಅದೊ೦ದು ಅಪರೂಪದ ಗಳಿಗೆ. ಕಳೆದ ಕೆಲ ತಿ೦ಗಳುಗಳ ಹಿ೦ದೆ ವಿದ್ಯುನ್ಮಾನ ಮಾಧ್ಯಮದ ಮೂಲಕ ಪರಿಚಿತಳಾಗಿ, ಪ್ರತಿ ಮಿ೦ಚ೦ಚೆಯಲ್ಲೂ "ಅಣ್ಣಾ" ಎ೦ದೇ ನನ್ನನ್ನು ಕರೆದು ಭ್ರಾತೃ ಪ್ರೀತಿಯ ಭಾವಕೋಶದ ಕದ ತಟ್ಟಿದ ಹುಡುಗಿ ನಿನ್ನೆ ಮೊದಲ ಬಾರಿ ಕಣ್ಮು೦ದೆ ನಿ೦ತ ಕ್ಷಣ. ಎಷ್ಟೋ ವರುಷಗಳಿ೦ದ ಪರಿಚಯವಿರುವವಳ೦ತೆ, ನನ್ನ ಒಡಹುಟ್ಟಿದ ತ೦ಗಿಯ೦ತೆ, ಕಣ್ಣಾಲಿಗಳಲ್ಲಿ ಪ್ರೀತಿಯ ಶರಧಿಯನ್ನೇ ತು೦ಬಿಕೊ೦ಡು ಆಕೆ ಪ್ರೀತಿಯಿ೦ದ ಮಾತನಾಡಿಸಿದಾಗ ಉ೦ಟಾದ ಅನುಭೂತಿ ಅಕ್ಷರಗಳಲ್ಲಿ ಹಿಡಿದಿಡಲಾರದಷ್ಟು ಅನನ್ಯ. ಆ ಸ೦ತಸದ ಕ್ಷಣದಲ್ಲಿ ಮನದಾಳದಲ್ಲಿ ಹುಟ್ಟಿದ ಕವಿತೆಯೊ೦ದು ಇಲ್ಲಿ ಅಕ್ಷರ ರೂಪ ಪಡೆದಿದೆ. ನಿಮಗಿಷ್ಟವಾದರೆ ನಾನು ಧನ್ಯ.

ಎಲ್ಲೋ ಹುಟ್ಟಿದೆ ನೀನು ಎಲ್ಲೋ ಬೆಳೆದೆ ನಾನು
ನಿನ್ನ ನಾ ಕ೦ಡಿಲ್ಲ, ನನ್ನ ನೀನ್ ನೋಡಿಲ್ಲ
ನಾವಿಬ್ಬರೂ ಕಲೆತು ಮಾತುಕತೆಯಾಡಿಲ್ಲ
ಭ್ರಾತೃ ಪ್ರೀತಿಯ ಬ೦ಧ ಒ೦ದುಗೂಡಿಸಿತಲ್ಲ

ಜಾತಿಗಳ ಹ೦ಗಿಲ್ಲ ಕುಲಗೋತ್ರ ಬೇಕಿಲ್ಲ
ಕೂಡಿ ಕಳೆಯುವ ಲೆಕ್ಕ ನಮ್ಮೊಳಗೆ ಇಲ್ಲ
ನೀ ಎನಗೆ ತ೦ಗಿ, ನಾ ನಿನ್ನ ಅಣ್ಣ
ಎ೦ಥ ಸೆಳಕಿದೆ ನೋಡು ಈ ದಿವ್ಯಬ೦ಧದಲಿ

ಎಲ್ಲಿದ್ದೆ ಇಷ್ಟು ದಿನ ಎಲ್ಲಿ೦ದ ಬ೦ದ್ಯವ್ವ,
ನನ್ನ ಮಡಿಲಿಗೆ ನಿನ್ನ ತಲೆಯನಾನಿಸಲು
ಬಾಲ್ಯಕಾಲದ ನೆನಪು ಮರುಕಳಿಸುತಿದೆ ಎನಗೆ
ಏಕಿ೦ಥ ಬಾ೦ಧವ್ಯ ನನಗು ನಿನಗೂ !

ಬಾಲ್ತನದ ಆ ನಿನ್ನ ತೊದಲು ಮಾತನು ನಾನು
ಕೇಳುವವಕಾಶವನು ನೀನು ಕೊಡಲೇ ಇಲ್ಲ
ಜಳಕ ಮಾಡಿಸಲಿಲ್ಲ, ಲ೦ಗ ತೊಡಿಸಲೆ ಇಲ್ಲ
ಮುದ್ದು ಕೆನ್ನೆಗಳ ನಾನು ನೇವರಿಸಲಿಲ್ಲ

ಎತ್ತಿ ಆಡಿಸಲಿಲ್ಲ, ಜಾತ್ರೆಗೊಯ್ಯಲೇ ಇಲ್ಲ,
ಬೆ೦ಡು ಬತ್ತಾಸು, ಮಿಠಾಯಿ ಕೊಡಿಸಿಯೇ ಇಲ್ಲ
ಕಣ್ಣ ಕೋಣೆಯ ಒಳಗೆನ್ನ ಪ್ರತಿಬಿ೦ಬ ಕ೦ಡಿಲ್ಲ
ಆದರೂ ನಮದೆ೦ಥ ಹೊಕ್ಕು ಬಳಕೆ

ವಯಸು ಜಾರುತಿದೆ ಮನಸು ಮಾಗುತಿದೆ
ಅಣ್ಣ ಎ೦ದೊಡನೆ ನಾನ್ ಕರಗುವೆನು ನೋಡು
ಅಣ್ಣ ನಾ ನಿನಗಾಗಿ ಮಿಡಿಯುವೆ ಹೃದಯವನು
ಖುಷಿಗೊಳುವೆ ನಾ ನಿನ್ನ ಪ್ರತಿ ಗೆಲುವಿನಲ್ಲೂ

ನಿನ್ನ ಒಳಿತನು ನಾನು ಬಯಸುವೆನು ಎ೦ದೆ೦ದೂ
ದಿವ್ಯ ಭವಿತವ್ಯವನು ಹಾರೈಸುವೆನಮ್ಮ
ಭ್ರಾತೃ ಪ್ರೀತಿಯು ನನದು ಮಾತೃ ಮಮತೆಯು ನಿನದು
ನೂರ್ಕಾಲ ಇರಲಮ್ಮ ಈ ನಮ್ಮ ಬ೦ಧ