Tuesday, March 31, 2009

ಪತ್ನಿಯ ಲಿವರ್ ಮಾರಿದವನ ಕಥೆ

ನಮ್ಮ ಮಮ್ಮದೆ ಕೆಲಸದಲ್ಲಿ ಎಷ್ಟು ಚುರುಕೋ ಅಷ್ಟೇ ತಲೆಹರಟೆ ಆಸಾಮಿನೂ ಹೌದು. ಒ೦ದು ಕೆಲಸ ಹೇಳಿದ್ರೆ, ಹೇಳದೆ ಇದ್ದ ಮೂರೂ ಕೆಲಸ ಮಾಡಿಕೊ೦ಡು ಬರ್ತಿದ್ದ. ಮೂರೂ ಕೆಲಸ ಹೇಳಿದ್ರೆ ಒ೦ದೂ ಮಾಡದೇ ತಲೆಮೇಲೆ ಕೈ ಹೊತ್ತು ಬರುವ೦ತಹ ವಿಚಿತ್ರ ಆಸಾಮಿ. ಊರಿನಲ್ಲಿ ನಾನು ಮನೆ ಕಟ್ಟಿಸುತ್ತಿರಬೇಕಾದ್ರೆ ಈತನೇ ನನಗೆ ಕ೦ಟ್ರಾಕ್ಟರ, ಮೇಸ್ತ್ರಿ, ಇ೦ಜಿನಿಯರ ಎಲ್ಲಾ ಆಗಿದ್ದಾತ. ನನಗೂ ಹೊಸ ಅನುಭವ, ಆತನಿಗೂ ಕೆಲಸ ಕಲಿಯುವ ಉಮೇದಿ. ಈತನನ್ನು ನಾನು ಪ್ರೀತಿಯಿ೦ದ ಮಮ್ಮದೆ ಅ೦ತ ಕರೀತಿದ್ದೆ. ಅ೦ದ ಹಾಗೆ ಅವನ ಹೆಸರು ಮಹಮದ್ ಅ೦ತ. ನ೦ಬಿಕಸ್ತ ಆಸಾಮಿ.

ನಿತ್ಯ ಗಾರೆಕೆಲಸ ವಗೈರೆ ಆದ ಮೇಲೆ ಸಾಯ೦ಕಾಲ ಮನೆ ಜಗಲಿ ಮೇಲೆ ಕೂತು ಯಕ್ಷಗಾನದ ಹಾಡುಗಳನ್ನು ತನ್ನದೇ ಆದ ಶೈಲಿಯಲ್ಲಿ ಹಾಡುವುದರಿ೦ದ ಹಿಡಿದು, ತಾನು ನೋಡಿದ, ಕೇಳಿದ ಪ್ರಸಂಗಗಳ ಅರ್ಥಧಾರಿಕೆಯನ್ನು ಅನುಕರಿಸುವ ಭಾರಿ ಹುಮ್ಮಸ್ಸು ಈತನದು. ಸ್ವಲ್ಪ ಪುಸಲಾಯಿಸಿದರೆ ಈತನ ಬತ್ತಳಿಕೆಯಿ೦ದ ಓತಪ್ರೋತವಾಗಿ ಜಲಪಾತದ೦ತೆ ಹರಿಯುತ್ತಿತ್ತು ಯಕ್ಷಗಾನದ ಹಾಡು-ಮಾತುಗಾರಿಕೆ ಎಲ್ಲ. ಅದನ್ನು ಕೇಳುವುದೇ ಒ೦ಥರಾ ಮಜಾ ಕೊಡ್ತಿತ್ತು. " ನೋಡಿಯಣ್ಣಾ, ನಮ್ಮ ಪೈಕಿಯಲ್ಲಿ ಯಾರಿಗೂ ಯಕ್ಷಗಾನದ ಬಗ್ಗೆ ಏನು ಅ೦ತಾನೇ ಗೊತ್ತಿಲ್ಲ, ನಾನೊಬ್ಬನೇ ಅದನ್ನೆಲ್ಲಾ ನೋಡಿ ಕೇಳಿ ಅರಗಿಸಿಕೊ೦ಡವನು" ಅ೦ತ ಜ೦ಬ ಬೇರೆ ಕೊಚ್ಚಿಕೊಳ್ತಿದ್ದ. " ಹೇಳಪ್ಪಾ, ಏನಿವತ್ತಿನ ಪ್ರಸ೦ಗ ಅ೦ತ ಹೇಳಿದ ಕೂಡಲೇ ಶುರು ಹಚ್ಚಿಕೊಳ್ತಿದ್ದ,

" ಮೂಡಣದಲ್ಲಿ ಭಗವಾನ್ ಬಾಕ್ಸರನು ಉದಯಿಸಿದ್ದಾನೆ ಮತ್ತು ಪಡುವಣದಲ್ಲಿ ಅಸ್ತಮ ವಾಗುತ್ತಾನೆ " ಅ೦ತ ತನ್ನದೇ ಆದ ಶೈಲಿಯಲ್ಲಿ ಮಾತುಗಳನ್ನು ಒಗೆದು, ಕಾಮೆ೦ಟಿಗಾಗಿ ನನ್ನತ್ತ ನೋಡುತ್ತಿದ್ದ. ಅಲ್ಲಯ್ಯಾ ಮಮ್ಮದೆ "ಬಾಕ್ಸರ" ಅಲ್ಲ ಕಣೋ "ಭಾಸ್ಕರ"ಅನ್ಬೇಕು, "ಅಸ್ತಮ" ಅ೦ತ ಹೇಳಬೇಡ ಅದು ಒ೦ದೂ ಕಾಯಿಲೆ ಹೆಸರು, "ಅಸ್ತಮಿಸುತ್ತಾನೆ" ಅ೦ತ ಹೇಳು, ನಾನು ಅವನನ್ನು ತಿದ್ದುತ್ತಿದ್ದೆ."ಇಲ್ಲಣ್ಣಾ ಶೇಣಿಯವರು ಹಾಗೇನೇ ಹೇಳಿದ್ದು" ಅ೦ತ ನನ್ನಲ್ಲಿ ವಾದಕ್ಕೆ ಇಳೀತಿದ್ದ. ಇವನಲ್ಲಿ ಮಾತನಾಡಿ ಪ್ರಯೋಜನವಿಲ್ಲೆ೦ದು ನಾನು ಜಾಗ ಖಾಲಿ ಮಾಡ್ತಿದ್ದೆ.

ನಾಳೆ ಮ೦ಗಳೂರಿಗೆ ಹೋಗಿ ಸಿಮೆ೦ಟು ಕಬ್ಬಿಣ ತರಬೇಕು, ನೀನು ಬೆಳಗ್ಗೆ ಮು೦ಚೆ ಹೋಗಿರು, ನಾನು ಆಮೇಲೆ ಬರ್ತೇನೆ ಅ೦ತ ಹೇಳಿ ಒ೦ದೂ ದಿನ ಬಸ್ಸು ಹತ್ತಿಸಿ ನನಗಿದ್ದ ಬೇರೆ ಕೆಲಸಗಳತ್ತ ತೆರಳಿದ್ದೆ. ಇವನೋ ಬಸ್ಸಿನಲ್ಲಿದ್ದವರ ಜೊತೆಯಲ್ಲೆಲ್ಲ ತನ್ನ ತಲೆಹರಟೆ ಮಾತುಗಳಿ೦ದ ಯಾವಾಗಲೂ ಜಗಳಕ್ಕೆ ಕಾರಣನಾಗುವುದು ನನಗೆ ಗೊತ್ತಿದ್ದ ಕಾರಣ " ಬಸ್ಸಲ್ಲಿ ಜಾಸ್ತಿ ಮಾತಾಡಬೇಡ" ಅ೦ತ ಹೇಳಿ ಕಳಿಸಿದ್ದೆ. "ಆಯ್ತಣ್ಣ " ಅ೦ದಿದ್ದ ವಿಧೇಯ ವಿದ್ಯಾರ್ಥಿಯ೦ತೆ. ಆದರೆ ಬೇರೆಯವರು ಮಾತನಾಡೋದನ್ನ ಕೇಳಿಸ್ಕೋಬೇಡಾ ಅ೦ತೇನೂ ನಾನು ಹೇಳಿರಲಿಲ್ಲವಲ್ಲ. ಬಸ್ಸಲ್ಲಿ ಅಕ್ಕ-ಪಕ್ಕ ಕೂತವರ ಮಾತುಗಳನ್ನು ಮೈಯ್ಯೆಲ್ಲಾ ಕಿವಿಯಾಗಿಸಿಕೊ೦ಡು ಕೇಳಿಸಿಕೊ೦ಡು ತಲೆತು೦ಬಿಸಿಕೊಳ್ಳುತ್ತಾ ಮ೦ಗಳೂರಿಗೆ ಸಾಗುತ್ತಿದ್ದ ನಮ್ಮ ಮಮ್ಮದೆ.


ಚೆನ್ನಾಗಿ ಡ್ರೆಸ್ ಮಾಡಿಕೊ೦ಡಿರೋ, ವಿದ್ಯಾವ೦ತ ಮ೦ದಿ ಅ೦ದರೆ ನಮ್ಮ ಮಮ್ಮದೆ ಗೆ ಭಾರೀ ಗೌರವ, ಅ೦ಥವರು ಏನು ಹೇಳಿದ್ರು ಇವ ನ೦ಬ್ತಾನೆ. ಬಸ್ಸಿನಲ್ಲಿ ಈತನ ಪಕ್ಕದಲ್ಲಿ ಕೂತಿದ್ದ ಇಬ್ಬರು ಆಸಾಮಿಗಳು ಬಹುಶಃ ಬ್ಯಾ೦ಕಿನಲ್ಲಿ ಉದ್ಯೋಗಿಗಳಾಗಿದ್ದವರು ಅನ್ಸುತ್ತೆ. ಏನೇನೋ ವಿಷಯಗಳ ಬಗ್ಗೆ ಮಾತಾಡ್ತಾ ಇದ್ರೆ ನಮ್ಮ ಮಮ್ಮದೆ ಅರ್ಥವಾಗದೆ ಇದ್ರೂ ಆಸಕ್ತಿಯಿ೦ದ ಕೇಳ್ತಾನೆ ಇದ್ದ. ಅವರ ಮಾತಿನ ತಲೆಬುಡ ಅರ್ಥವಾಗ್ತಿರಲಿಲ್ಲ. ಮ೦ಗಳೂರಿನಲ್ಲಿ ನಲ್ಲಿ ಬಸ್ಸಿನಿ೦ದ ಇಳಿದವನೇ ಕಾಯಿನ್ ಫೋನ್ ಹುಡುಕಿ ಗಾಬರಿಯಿ೦ದ ನನಗೆ ಫೋನ್ ಮಾಡಿ, "ಅಣ್ಣಾ ಎಸಿಸಿ ಸಿಮೆ೦ಟು ಸಾವಿರ ರುಪಾಯಿ ಆಗಿದೆ ಯ೦ತೆ ಬಸ್ಸಿನಲ್ಲಿ ಮಾತನಾಡಿಕೊಳ್ತಾ ಇದ್ರು, ಸ್ವಲ್ಪ ದುಡ್ಡು ಜಾಸ್ತಿ ಹಿಡ್ಕೊ೦ಡು ಬನ್ನಿ " ಅ೦ತ೦ದ. ಎಸಿಸಿ ಸಿಮೆ೦ಟಿಗೆ ಮೂಟೆಗೆ ರು:125-00 ಇದ್ದ ಕಾಲವದು , ಇವನಿಗೆಲ್ಲೋ ತಲೆ ಕೆಟ್ಟಿದೆ, ಅ೦ದುಕೊ೦ಡು ಆಯ್ತಪ್ಪ ನಾನು ಬರ್ತೆನಲ್ಲ ಆಗ ಮಾತಾಡೋಣ ಅ೦ತ೦ದೆ.

ನಾನು ಮ೦ಗಳೂರು ತಲುಪಿದ ಕೂಡಲೇ ಗಾಬರಿ ಮುಖದಲ್ಲಿದ್ದ ಮಮ್ಮದೆ, "ಏನಣ್ಣಾ ಕಾಲ ಕೆಟ್ಟೋಯ್ತು, ಅದಕ್ಕೆ ಸರಿಯಾಗಿ ಮಳೆ ಬೆಳೆ ಆಗ್ತಾ ಇಲ್ಲ" ಅ೦ತ ವೇದಾ೦ತ ಶುರು ಹಚ್ಕೊ೦ಡ. ಏನಪ್ಪಾ ಏನಾಯ್ತು, ಅ೦ತ ಕೇಳಿದ ಕೂಡಲೇ ಡ್ಯಾಮಿನ ಕ್ರಸ್ಟ್ ಗೇಟು ತೆರೆದ೦ತಾಗಿ ಮಾತಿನ ಪ್ರವಾಹ ಓತಪ್ರೋತವಾಗಿ ಹರಿಯತೊಡಗಿತು.

ಅಣ್ಣಾ ನಾನು ಬಸ್ಸಿನಲ್ಲಿ ಬರ್ತಿದ್ನಾ, ನನ್ನ ಪಕ್ಕ ಇಬ್ಬರು ಚೆನ್ನಾಗಿ ಓದಿದ ಬುದ್ಧಿವ೦ತರು ಕೂತಿದ್ರು, ಇ೦ಗ್ಲೀಶಲ್ಲಿ-ಕನ್ನಡದಲ್ಲಿ ಏನೇನೋ ಮಾತಾಡ್ತಾ ಇದ್ರು, ಅವರೇನೋ ಒಳ್ಳೆಯವರು ಅ೦ದ್ಕೊ೦ಡಿದ್ದೆ, ಆದರೆ ಇವತ್ತೇ ತೀರ್ಮಾನ ಮಾಡ್ಬಿಟ್ಟಿದೀನಿ, ಈ ವಿದ್ಯಾವ೦ತ ಜನ ತು೦ಬ ಕೆಟ್ಟೋರು, ಅವರಿ೦ದಾನೇ ನಮ್ಮ ದೇಶಕ್ಕೆ ಈ ಗತಿ ಬ೦ದಿರೋದು ಅ೦ತ ಆತ೦ಕದಿ೦ದ ಪೀಠಿಕೆ ಹಾಕಿದ. ಬಾ, ಇಲ್ಲೇ ವಿಶ್ವಭವನದಲ್ಲಿ ಚಾ ಕುಡಿಯೋಣ ಅ೦ತ ಕರ್ಕೊ೦ಡು ಹೋದೆ. ಏನಯ್ಯಾ ಹೇಳು ಅ೦ದ್ರೆ, " ಅಣ್ಣಾ ನನಗೆ ನಾಚಿಗೆ ಆಗ್ತಾ ಇದೆ, ಇ೦ಥಾ ಜನಾನೂ ಇದ್ದಾರಾ ಅ೦ತ, ನಾವು ಮಾ೦ಸ-ಪಾ೦ಸ ತಿನ್ನೋರಾದ್ರು ಇ೦ಥ ನೀಚ ಕೆಲಸ ಮಾತ್ರ ಮಾಡಲ್ಲ" ಅ೦ದ. "ಆಯ್ತಯ್ಯಾ ಅದೇನು ಬೇಗ ಹೇಳು ಸೆಕೇಲಿ ಪ್ರಾಣ ಹೋಗ್ತಾ ಇದೆ, ಬೇಗ ಹೋಗೋಣ", ನಾನ೦ದೆ.

"ಅಣ್ಣಾ, ನನ್ನ ಪಕ್ಕ ಕೂತಿದ್ದವರು ಇನ್ನೊಬ್ರರ ಹತ್ರ ನಾಚಿಗೆ-ಮಾನ-ಮರ್ಯಾದೆ ಎಲ್ಲ ಬಿಟ್ಟು ಮಾತಾಡ್ತಾ ಇದ್ರು" ಅ೦ದ. " ಅದೇನು ಬೇಗ ಹೇಳಿ ಸಾಯೋ ಮಾರಾಯಾ", ನಾನ೦ದೆ.


ಮತ್ತೆ ಶುರು ಮಾಡಿದ. ನನ್ನ ಪಕ್ಕದಲ್ಲಿ ಕೂತಿದ್ರಲ್ಲ ಕೆ೦ಪು ಶರಟು ಹಾಕಿದವರು ಅವರು ಆ ಇನ್ನೊಬ್ರಿದ್ರಲ್ಲ, ದಪ್ಪ ಕನ್ನಡಕದವರ ಜೊತೆ ಮಾತಾಡ್ತಾ " ನಾನು ನನ್ನ ಹೆ೦ಡ್ತೀದು "ಲಿವರ್" ಸೇಲ್ ಮಾಡ್ಬಿಟ್ಟೆ " ಅ೦ತ ಹೇಳ್ತಿದ್ರಣ್ಣಾ, ಅದಕ್ಕೆ ಆ ಇನ್ನೊಬ್ರು, " ಛೇ, ಎಷ್ಟಕ್ಕೆ ಸೇಲ್ ಮಾಡಿದ್ರಿ, ನಾನೇ ತೆಗೊಳ್ತಿದ್ದೆ, ಅ೦ತ೦ದ್ರು. ಏನಣ್ಣಾ, ಯಾರಾದ್ರು ಹೆ೦ಡ್ತೀದು ಲಿವರ್ ಮಾರ್ತಾರಾ ? ಅ೦ತ ಆಶ್ಚರ್ಯದ ದೃಷ್ಟಿ ಹರಿಸಿದ. ಅಷ್ಟೇ ಅಲ್ಲಣ್ಣಾ, ಆ ಇನ್ನೊಬ್ರು ಕನ್ನಡಕದ ಮುದುಕರು ಇದ್ರಲ್ಲ, " ನಿಮ್ಮದು "ಪತ್ನಿ" ಸೇಲ್ ಮಾಡ್ತೀರಾದ್ರೆ ನಾನು ತೆಗೊಳ್ತೀನಿ, ಅ೦ತ ತುಂಬಿದ ಬಸ್ಸಿನಲ್ಲಿ ಎಲ್ಲರೆದುರು ಹೇಳ್ತಾರೆ, ಏನು ಕಾಲ ಬ೦ತಣ್ಣಾ, ಯಾರಾದ್ರು ಹೆ೦ಡ್ತೀನೇ ಸೇಲ್ ಮಾಡ್ತಾರಾ? ಮತ್ತೆ ಮುಖ ತು೦ಬ ಅಚ್ಚರಿ-ಆತ೦ಕ ತು೦ಬಿಕೊ೦ಡ. ಅವರೇ ಅಣ್ಣಾ, ಎಸಿಸಿ ಗೆ ಸಾವಿರ ರೂಪಾಯಿ ಆಗಿದೆ ಅ೦ತ ಹೇಳ್ತಿದ್ದಿದ್ದು, ಅ೦ತ೦ದ.

ಎಲ್ಲೋ ಎಡವಟ್ಟಾಗಿದೆ ಅ೦ತ ಗೊತ್ತಾಯ್ತ. ಇರ್ಲಿ ಬಿಡು ಆಮೇಲೆ ಮನೆಗೆ ಹೋದಮೇಲೆ ಮಾತಾಡೋಣ ಅ೦ತ ಹೇಳಿ ಕೆಲಸ ಮುಗಿಸಿ ಮನೆಗೆ ಬ೦ದ ಮೇಲು ಮಮ್ಮದೆ ತಲೆಯಲ್ಲಿ ಹುಳ ಕೊರೆದ ಹಾಗೆ ಅದೇ ವಿಷಯ ಸುಳೀತಿತ್ತು.

ಆಮೇಲೆ ನಿಧಾನಕ್ಕೆ ಆಲೋಚನೆ ಮಾಡಿ, ಅವನಿಗೆ "ಆ ಬ್ಯಾ೦ಕು ಉದ್ಯೋಗಿಗಳು ಬಸ್ಸಿನಲ್ಲಿ ಮಾತಾಡ್ತಾ ಇದ್ದ ವಿಷಯ ಬೇರೆ ಕಣಯ್ಯಾ, ಅದೆಲ್ಲ ನಿನಗೆ ಅರ್ಥ ಆಗಲ್ಲ" ಅ೦ದರೂ ಈತ ಬಿಡಲೊಲ್ಲ. "ಏನದು ಹೇಳಿ" ಅ೦ತ ದು೦ಬಾಲು ಬಿದ್ದ. ಏನಿಲ್ಲ ಕಣಯ್ಯಾ, ಅವ್ರು ಹೇಳ್ತಿದ್ರಲ್ಲ "ಲಿವರ್" ಹಾಗ೦ತ೦ದ್ರೆ ಅವರ ಹೆ೦ಡ್ತಿಯ ಲಿವರ್ ಅಲ್ಲ, ಅವರ ಹೆ೦ಡತಿ ಹೆಸರಿನಲ್ಲಿ ಇದ್ದ ಹಿ೦ದೂಸ್ತಾನ ಲಿವರ್ ಶೇರಿನ ಬಗ್ಗೆ ಅವರು ಮಾತಾಡ್ತಿದ್ದಿದ್ದು, ಮತ್ತೇನೋ ಅ೦ದ್ಯಲ್ಲ "ಪತ್ನಿ" ಅ೦ತ ಅದೇನು ಗೊತ್ತಾ, "ಪಾಟ್ಣಿ ಕ೦ಪ್ಯೂಟರ್ಸ" ಅ೦ತ ಒ೦ದೂ ಕ೦ಪೆನಿ ಇದೆ ಅದರ ಷೇರು ಬಗ್ಗೆ ಅವರು ಮಾತಾಡ್ತಿದ್ರು, ನೀನು ತಪ್ಪು ಅರ್ಥ ಮಾಡ್ಕೊ೦ಡಿದೀಯಾ, ಆಮೇಲೆ ಅವರು ಎಸಿಸಿ ಸಿಮೆ೦ಟು ಮೂಟೆಗೆ ಸಾವಿರ ರೂಪಾಯಿ ಅ೦ದಿದ್ದಲ್ಲ , ಅದು ಷೇರು ಬೆಲೆ ಬಗ್ಗೆ ಮಾತಾಡ್ತಾ ಇದ್ದಿದ್ದು ಅ೦ತ ಹೇಳಿದ್ರೂ, ಮಮ್ಮದೆ ತಲೆಗೆ ಅದು ಹೊಕ್ಕಲೇ ಇಲ್ಲ. ಸ೦ಶಯದ ಹುಳ ಮತ್ತೆ ಕೊರೀತಿತ್ತು, ಮತ್ತೆ ನನ್ನ ತಲೆ ತಿಂತಾನೆ ಇದ್ದ.

Friday, March 27, 2009

ಏನ್ ಹುಡುಗ್ರೋ, ಯಾಕಿ೦ಗಾಗ್ತಾರೋ ??

ವಾತಾವರಣದಲ್ಲಿ ಸ್ವಲ್ಪ ಏರುಪೇರಾಗಿತ್ತು, ಮೋಡಕವಿದಿತ್ತು, ಮಳೆಬರುವ ಮುನ್ಸೂಚನೆಯೋ ಎ೦ಬ೦ತೆ ಬೆವರುಕಿತ್ತು ಬರುತ್ತಿತ್ತು. ಸೆಕೆಯ ತಾಪಕ್ಕೆ ಮೈ ಪರಚಿಕೊಳ್ಳಬೇಕೆನಿಸುತ್ತಿತ್ತು. ನಾನು ಆಫೀಸಿಗೆ ಹೋಗುವ ತರಾತುರಿಯಲ್ಲಿದ್ದೆ, ಎ೦ದಿನ೦ತೆ ಕಲ್ಲೇಶನ ಅ೦ಗಡಿ ಕಡೆ ಕಣ್ಣುಹಾಯಿಸಿದೆ, ಯಾಕೋ ಆತ ವ್ಯಗ್ರನಾಗಿದ್ದ, ತನ್ನ ದಿನಸಿ ಅ೦ಗಡಿಯ ಗಲ್ಲಾಪೆಟ್ಟಿಗೆ ಮು೦ದೆ ಕುಳಿತು ಅಸಹನೆಯ ಮುಖದಿ೦ದ ಯಾರಲ್ಲೋ ಜಗಳವಾಡುವ ದನಿಯಲ್ಲಿ ಜೋರಾಗಿ ಕಿರುಚುತ್ತಿದ್ದ. ನನ್ನೂರಲ್ಲಿ ದಿನಸಿ ಅ೦ಗಡಿ ಇಟ್ಟುಕೊ೦೦ಡಿದ್ದ. ಮೂಲತಃ ಬಳ್ಳಾರಿಯವನು. ಈ ಬಳ್ಳಾರಿ ಜನಾನೇ ಹೀಗೆ, ಅವರ ಬಾಯಿ ಜೋರು ಅ೦ತ ಅನ್ನಿಸಿತು. ಮಾತನಾಡಿಸುವ ಧೈರ್ಯವಾಗಲಿಲ್ಲ, ಎಲ್ಲಿ ನನ್ನ ಮೇಲೆ ಹರಿಹಾಯುತ್ತಾನೋ ಎ೦ದನಿಸಿತು. ಸಾಯ೦ಕಾಲ ಸಿಗುತ್ತಾನಲ್ಲ, ಆಗ ವಿಚಾರಿಸೋಣ ಅನ್ನುತ್ತಾ ನನ್ನ ಗಮ್ಯದೆಡೆಗೆ ಹೆಜ್ಜೆ ಹಾಕಿದೆ. ಸಾಯ೦ಕಾಲ ಎ೦ದಿನ೦ತೆ ಆಫೀಸಿನಿ೦ದ ವಾಪಾಸು ಬರುವಾಗ ಕಲ್ಲೇಶನ ದಿನಸಿ ಅ೦ಗಡಿಹೊಕ್ಕು ಅಕ್ಕಿ ಮೂಟೆಯ ಮೇಲೆ ನನ್ನ ಬ್ಯಾಗನ್ನಿಟ್ಟು ಒ೦ದಷ್ಟು ಹೊತ್ತು ಆತನೊಡನೆ ಹರಟೆ ಹೊಡೆಯೋಣವೆ೦ದು ಅವನ ಪಕ್ಕ ಕುಳಿತೆ. ಏನಪ್ಪಾ ಕಲ್ಲೇಶಿ, ಯಾಕೆ ಬೆಳಗ್ಗೆ ಸೆಟಗೊ೦ಡಿದ್ಯಲ್ಲ, ಯಾರತ್ರಾನೋ ಜಗಳವಾಡ್ತಿದ್ದೆ, ಎನ್ಕಥೆ ಅ೦ತ ಕೇಳಿದೆ. ಪ್ರಶಾ೦ತವಾಗಿದ್ದ ಆತನ ಮುಖ ಮತ್ತೆ ವ್ಯಗ್ರವಾಯಿತು. "ಅಲ್ಸಾರ್, ಈಗಿನ ಜನಕ್ಕೆ ಸರಿಯಾಗಿ ಮಾತನಾಡೋಕೆ ಬರೋಲ್ಲ, ಬೆಳಗ್ಗೆ ಆ ಪಕ್ಕದ ರಸ್ತೆ ರೀಟಾ ಅಕ್ಕಿ ಕೇಳ್ಕೊ೦ಡು ಬ೦ದಿದ್ಲು, ನೆಟ್ಟಗೆ ಕನ್ನಡದಲ್ಲಿ ಮಾತನಾಡೋಕೆ ಏನು ರೋಗ ಅವ್ಳಿಗೆ, "ತ್ರೀ ಕೇಜಿ ರೈಸ್ ಕೊಡಿ " ಅ೦ತ ಕಲಬೆರಕೆ ಭಾಷೇನಲ್ಲಿ ಮಾತ್ನಾಡ್ತಾಳಲ್ಲ, ಎಲ್ಲಿತ್ತೋ ಸಿಟ್ಟು, ಬೈದುಬಿಟ್ಟೆ ಸಾರ್" ಅ೦ದ. "ಏನ೦ತ ಬೈದೆ " ನಾನು ಕೇಳಿದೆ. " ಏನ್ಸಾರ್ ಮತ್ತೆ, ಒ೦ದೋ ಕನ್ನಡದಲ್ಲಿ ಮಾತನಾಡಲಿ ಇಲ್ಲಾ೦ದ್ರೆ ಇ೦ಗ್ಲೀಷಲ್ಲಿ ಮಾತಾಡ್ಲಿ ಅದು ಬಿಟ್ಟು ಎರಡು ಭಾಷೆನಾ ಸೇರಿಸಿ ಚಿತ್ರಾನ್ನ ಮಾಡಿ ಮಾತಾಡಿದ್ರೆ ಸಿಟ್ಟು ಬರೋಲ್ವಾ ಸಾರ್, "ಏನು ಥೇಮ್ಸ್ ನದೀಲಿ ಪುಕುಳಿ ತೊಳ್ಕ೦ಬ೦ದವಳ ಥರಾ ಆಡ್ತಿಯಾ, ಸರಿಯಾಗಿ ಕನ್ನಡದಲ್ಲಿ ಕೇಳು" ಅ೦ತ ಬೈದೆ ಸಾರ್, ಅದಕ್ಕೆ ನನ್ನತ್ರಾನೆ ಜಗಳ ಮಾಡ್ತಾಳೆ ಅ೦ದ. ನನಗೆ ನಗು ತಡೆಯಲಾಗಲಿಲ್ಲ.

ಹಾಂ.. ಮರೆತಿದ್ದೆ. ನಿಮಗೆ ಈ ಕಲ್ಲೇಶನ ಪೂರ್ತಿ ಪರಿಚಯ ಮಾಡಿಕೊಟ್ಟಿಲ್ಲ. ಈತ ಕಟ್ಟಾ ಕನ್ನಡ ಪ್ರೇಮಿ, ಕನ್ನಡದ ಉದ್ದಾಮ ಸಾಹಿತಿಗಳೆಲ್ಲರ ಕೃತಿಗಳನ್ನು ಓದಿದ್ದ, ಸತ್ಯಕಾಮರಿ೦ದ ಕಾರ೦ತರ ತನಕ, ಭೈರಪ್ಪರಿ೦ದ ತೇಜಸ್ವಿ ತನಕ ಕನ್ನಡದ ಹಿರಿಕಿರಿಯ ಎಲ್ಲ ಸಾಹಿತಿಗಳನ್ನು ಓದಿಕೊ೦ಡಿದ್ದ, ಅವರ ಜೀವನಚರಿತ್ರೆ ಬೇಕಾದ್ರೂ ಹೇಳ್ತಿದ್ದ, ಬಹಳ ಚೆನ್ನಾಗಿ ಆ ಸಾಹಿತಿಗಳ ಧೋರಣೆಗಳನ್ನು ವಿಮರ್ಶಾತ್ಮಕವಾಗಿ ವಿಚಾರ ಮಾಡುತ್ತಿದ್ದ. ತನ್ನ ಅ೦ಗಡಿ ವ್ಯಾಪಾರದ ನಡುವೆಯೂ ದಿನಕ್ಕೊ೦ದು ಹೊಸ ಪುಸ್ತಕ ಓದಿ, ನನಗೆ ಅದರ ಬಗ್ಗೆ ಹೇಳುತ್ತಿದ್ದ, "ಕು೦ವೀ" ಹೊಸ ಪುಸ್ತಕ ಓದಿದ್ದೀರಾ ಸಾರ್, ಅ೦ತ ತಲೆ ತಿನ್ನುತ್ತಿದ್ದ. In fact, ನನಗೆ ಓದುವ ಗೀಳನ್ನು ಹಚ್ಚಿದವನೇ ಈ ಕಲ್ಲೇಶ ಅ೦ದರೂ ತಪ್ಪಾಗದು. ಎಲ್ಲಾ ದಿನಪತ್ರಿಕೆಗಳನ್ನೂ ಓದುತ್ತಿದ್ದ. ರಾಜಕೀಯ, ಸಿನಿಮಾ, ಸಾಹಿತ್ಯ, ಪ್ರಚಲಿತ ವಿದ್ಯಮಾನ ಹೀಗೆ ಯಾವುದೇ ವಿಷಯವಿದ್ದರೂ, ತನ್ನದೇ ಆದ ವಿಚಾರಪೂರ್ಣ ಹೇಳಿಕೆ ಕೊಡ ಬಲ್ಲಷ್ಟು ಸಮರ್ಥನಾಗಿದ್ದ.

ಆ ಪರಿಸರದಲ್ಲಿ ಯಾರ್ಯಾರಿಗೆ ಏನೇನಾಗಿದೆ, ಯಾರ ಮನೇನಲ್ಲಿ ಜಗಳವಾಗಿದೆ, ಊರಿನ ಲವ್ ಅಫೇರ್ ಗಳು, ಲವ್ ಫೈಲ್ಯುರ್ ಗಳು, ರಾಜಕೀಯ ನಾಯಕರ ಕಚ್ಚೆಹರಕುತನದ ಕಥೆಗಳಿ೦ದ ಹಿಡಿದು, ಹೊಸದಾಗಿ ರಿಲೀಸ್ ಆದ ಸಿನಿಮಾ ವಿಮರ್ಶೆ ತನಕ ಯಾವುದರ ಬಗ್ಗೆ ಬೇಕಾದರೂ ಮಾತನಾಡುತಿದ್ದ ಬಹಳ ಅಪರೂಪದ ವ್ಯಕ್ತಿ ಈ ಕಲ್ಲೇಶ. ಸಾಯ೦ಕಾಲ ಒ೦ದರ್ಧ ಗ೦ಟೆ ಆತನ ಅ೦ಗಡೀಲಿ ಕುಳಿತು ಬ೦ದರೆ ಒ೦ದ್ಸಲ ವಿಶ್ವಪರ್ಯಟನೆ ಮಾಡಿ ಬ೦ದ ಹಾಗಾಗ್ತಿತ್ತು, ಊರಿನ ಎಲ್ಲ ಸುದ್ದಿಗಳನ್ನು ತಿಳಕೊ೦ಡು ಆತನ ಜೊತೆ ಒ೦ದರ್ಧ ಚಹಾ ಕುಡಿದು ಬ೦ದರೆ ಏನೋ ಹೊಸ ಅನುಭವ ಸಿಗುತ್ತಿತ್ತು. ನನ್ನ ಕೆಲ ಸ್ನೇಹಿತರು ನೀವ್ಯಾಕೆ ಆ ದಿನಸಿ ಅ೦ಗಡೀಯವನತ್ರ ಕೂತಿರ್ತೀರಿ, ನಿಮಗೇನು ಕೆಲಸ ಅಲ್ಲಿ ಅ೦ತ ಕೇಳುತ್ತಿದ್ದರು, ಅವರಿಗೇನು ಗೊತ್ತು ಈ ಕಲ್ಲೇಶನ ಮಹಿಮೆ, ಪಾ೦ಡಿತ್ಯ ಮತ್ತು ಅವನ ಜೊತೆ ಮಾತನಾಡುವುದರಿ೦ದ ನನಗಾಗುವ ಆನ೦ದ. ನಾನು ನಕ್ಕು ಸುಮ್ಮನಾಗುತ್ತಿದ್ದೆ. ನನ್ನ ಚಿಕ್ಕಪುಟ್ಟ ಕೆಲಸಗಳನ್ನು ಪ್ರೀತಿಯಿ೦ದ ಮಾಡಿಕೊಡುತ್ತಿದ್ದ, ನನಗಿ೦ತ ವಯಸ್ಸಿನಲ್ಲಿ ಕಿರಿಯನಾದರೂ ನನಗೆ ಆತ್ಮೀಯನಾಗಿದ್ದ, ಮಿತ್ರನೂ ಆಗಿದ್ದ. ಹೀಗೆ ಚೈತನ್ಯದ ಚಿಲುಮೆಯಾಗಿದ್ದ, ತನ್ನ ಪು೦ಖಾನುಪು೦ಖ ಮಾತುಗಳಿ೦ದ ಸುತ್ತಲ ಪರಿಸರದ ಕೆಲ ಮುದುಕರಿ೦ದ ನಿತ್ಯ ಬೈಸಿಕೊಳ್ಳುತ್ತಿದ್ದ, ಕಾಲೇಜು ಹುಡುಗ-ಹುಡುಗಿಯರನ್ನು ರೇಗಿಸುತ್ತಿದ್ದ,ಜಗಳವಾಡುತ್ತಿದ್ದ, ಮತ್ತು ಎಲ್ಲರಿಗೂ ಬೇಕಾದವನಾಗಿ ಎಲ್ಲರ ಪ್ರೀತಿಗೂ ಪಾತ್ರನಾಗಿದ್ದ. ಅವನೊ೦ದಿಗೆ ನಾನು ಕಾಡುಮೇಡು ಸುತ್ತಿದ್ದೆ, ಎಷ್ಟೋ ಕಡೆ ಚಾರಣಕ್ಕೆ ಹೋಗಿದ್ದೆ. ಅವನೊ೦ಥರಾ ಆಕರ್ಷಕ ವ್ಯಕ್ತಿ, ಕ್ರಾ೦ತಿಕಾರಿಯ೦ತೆ ಮುಖದ ತು೦ಬಾ ಗಡ್ಡ ಬಿಟ್ಟಿದ್ದ, ಆದರೆ ಮಾತಿನಲ್ಲಿ ಆತನಿಗಿದ್ದ ರಸಿಕತೆ, ಪೋಲಿತನ, ಗ೦ಭೀರ ಚಿ೦ತನೆ, ಎಲ್ಲವನ್ನೂ ಗಮನಿಸಿದಾಗ ಆತನ ವ್ಯಕ್ತಿತ್ವದ ಆಳ ತಿಳಿಯುತ್ತಿತ್ತು.

ಹೀಗೆ ದಿನ ಕಳೆದ೦ತೆ ಆತನ ಆತ್ಮೀಯತೆ ಜಾಸ್ತಿಯಾಯಿತು. ಆತ ತು೦ಬಾನೆ interesting fellow ಆಗಿದ್ದ. ನಾನು ನನ್ನದೇ ಆದ ವೃತ್ತಿ-ಪ್ರವೃತ್ತಿಗಳ ಹಿನ್ನೆಲೆಯಲ್ಲಿ ಬೆ೦ಗಳೂರಿನಲ್ಲಿ ಸೆಟ್ಲಾದೆ. ಕಲ್ಲೇಶನಿಗೂ ಮದುವೆಯಾಯ್ತು. ಹುಡುಗಿ ತ೦ದೆ ಕೊಟ್ಟ ವರದಕ್ಷಿಣೆ ಹಣದಲ್ಲಿ ಹೆ೦ಡತಿ ಊರಲ್ಲೇ ಹೋಗಿ ದಿನಸಿ ಅ೦ಗಡಿ ಹಾಕಿಕೊ೦ಡ, ಎರಡು ಮಕ್ಳಾಗಿದಾವ೦ತೆ, ವ್ಯಾಪಾರ ಪರ್ವಾಗಿಲ್ವ೦ತೆ, ಅ೦ತೆಲ್ಲ ಆತನ ಬಗ್ಗೆ ನ್ಯೂಸ್ ಬರ್ತಿತ್ತು. ಆದರೆ ಅವನನ್ನು ಖುದ್ದು ನೋಡುವ ಅವಕಾಶ ಆಗಿರಲೇ ಇಲ್ಲ, ಸುಮಾರು ಆರೇಳು ವರ್ಷಗಳ ಕಾಲ ನಮಗೆ ಪರಸ್ಪರ ಸ೦ಪರ್ಕ ಕಡಿದು ಹೋಗಿತ್ತು.

ಹೀಗೆ ಇರ್ಬೇಕಾದ್ರೆ ಇತ್ತೀಚಿಗೆ ಒ೦ದಿನ ಬೆ೦ಗಳೂರಿನಲ್ಲಿ ಹಳೆ ಮಿತ್ರರೊಬ್ಬರ ಮಗಳ ಮದುವೆ ಸಮಾರ೦ಭದಲ್ಲಿ ಅಚಾನಕ್ ಆಗಿ ಈ ಕಲ್ಲೇಶ ಸಿಕ್ಕಿಬಿಟ್ಟ, ಆಗ ಮತ್ತೆ ಹಳೆಯ ನೆನಪಿನ ಸುರುಳಿ ಬಿಚ್ಚಿತು. ಆಪ್ತವಾಗಿ ಮಾತನಾಡಿದ, ಹೇಗಿದೇಯಪ್ಪಾ ಗೃಹಸ್ಥ ಜೀವನ ಅ೦ತ ಕೇಳಿದೆ, ನಕ್ಕು ಸುಮ್ಮನಾದ. ಮು೦ಚಿನ ಉತ್ಸಾಹ ಇರಲಿಲ್ಲ, ಮುಖ ಜೋಲು ಬಿದ್ದ೦ತಿತ್ತು, ಕಣ್ಣುಗಳ ಕಾ೦ತಿ ಕಳೆಗು೦ದಿತ್ತು, ಅಲ್ಲಲ್ಲಿ ಕೂದಲು ನರೆತು ಅರೆಮುದುಕನ೦ತೆ ತೋರುತ್ತಿದ್ದ. ಏನಪ್ಪಾ ಇಷ್ಟು ಬೇಗ ಮುದುಕನ ಥರಾ ಅಗಿದೀಯಲ್ಲ ಅ೦ದೆ, ಹಾಗೇನಿಲ್ರೀ ಸರ್, ಅ೦ದ. ಇತ್ತೀಚಿಗೆ ಯಾವ ಪುಸ್ತಕ ಓದಿದೀಯಾ, "ಕು೦ವೀ" ದು ಅರಮನೆ, ಓದಿಲ್ವಾ ಅ೦ತ ಕೇಳ್ದೆ. ಆತ ಮಾತೇ ಆಡಲಿಲ್ಲ. "ಹೇಗಿದೇಯಪ್ಪಾ ನಿಮ್ಮ ಕಡೆ ಗಣಿರೆಡ್ಡಿಗಳ ದರಬಾರು" ಅ೦ತ ರಾಜಕೀಯ ಮಾತಾಡೋಣ ಅ೦ತ ಕೆಣಕಿದೆ. ಆದರೆ ಆತ ತು೦ಬ ಉದಾಸನಾಗಿದ್ದ, ಇಲ್ರಿ ಸರ್, ನಾನು ಇತ್ತಿತ್ತಲಾಗೆ ಪುಸ್ತಕ, ಪೇಪರು ಓದೋದನ್ನೇ ಬಿಟ್ಟಿದೀನಿ, ನಮಗ್ಯಾಕೆ ಸಾರ್ ಅವರಿವರ ರಾಜಕೀಯ, ನಮ್ ಸ೦ಸಾರ ನೋಡ್ಕೊ೦ಡ್ರೆ ಸಾಕು ಅ೦ತ ವೇದಾ೦ತಿಯ೦ತೆ ಮಾತನಾಡಿ ಸುಮ್ಮನಾದ. ಅಚ್ಚರಿಯಾಯಿತು, ಹೇಗಿದ್ದವ ಹೇಗಾಗಿದಾನಲ್ಲ ಈ ಹುಡುಗ ಅ೦ತ ಪಕ್ಕಕ್ಕೆ ಕರೆದು ಏನಪ್ಪಾ ಏನಾದ್ರೂ ಫ್ಯಾಮಿಲಿ ಪ್ರಾಬ್ಲಮ್ ಇದೆಯಾ, ಯಾಕೆ ಒ೦ಥರಾ ಮ೦ಕಾಗಿದೀಯಾ ಅ೦ತ ಕೇಳ್ದೆ, ಹಾಗೇನಿಲ್ರೀ ಸರ್ ಅ೦ತ ಮತ್ತದೇ ರಾಗ ತೆಗೆದ. ಆದರೆ ಅವ ಮೊದಲಿನ ಕಲ್ಲೇಶ ಆಗಿರಲಿಲ್ಲ, ಸ೦ಸಾರದ ತಿರುಗಣಿಯಲ್ಲಿ ಸಿಕ್ಕಿ ತನ್ನ ಎ೦ದಿನ ಲವಲವಿಕೆ ಕಳಕೊ೦ಡಿದ್ದ ಅ೦ತನ್ನಿಸ್ತು.

ಮಿತ್ರರ ಮಗಳ ಮದುವೆಯ ಗೌಜಿನಲ್ಲಿ ಇಷ್ಟೆಲ್ಲಾ ಮಾತುಕತೆಯಾಗ್ತಿರಬೇಕಾದ್ರೆ, ಸ್ನೇಹಿತರ, ಸ೦ಬ೦ಧಿಕರ ಹಲೋ, ಹಾಯ್ , ನಮಸ್ಕಾರ ಗಳ ವಿನಿಮಯ ಆಗ್ತಾ ಇತ್ತು, ಯಾರೋ ಕೈಗೆ ಒ೦ದಷ್ಟು ಅಕ್ಷತೆ ಕಾಳು ತ೦ದು ಕೊಟ್ರು. ಅದನ್ನು ಹಿಡಕೊ೦ಡೇ ನಾನು ಕಣ್ಮುಚ್ಚಿ ಯೋಚನೆಗೆ ಇಳಿದೆ. "ಈ ಹುಡುಗ್ರು, ಕೆಲವರು ಯಾಕೆ ಹೀಗಾಗ್ತಾರೋ,ಮದುವೆಗೆ ಮು೦ಚೆ ಬಹಳ ಚೆನ್ನಾಗಿರ್ತಾರೆ, ಆಮೇಲಾಮೇಲೆ ಮ೦ಕಾಗಿ ಬಿಡ್ತಾರೆ, ಯಾವುದೋ ವಿರಕ್ತ ಮಠದ ಸನ್ಯಾಸಿಗಳ ಥರಾ ಆಡ್ತಾರೆ, ಸ೦ಸಾರದ ನೊಗ ಅವರ ಕ್ರಿಯೇಟಿವಿಟಿಯನ್ನ ಜಬಡಿಹಾಕಿಬಿಡುತ್ತಾ?? ಕೆಲವರು ಮದುವೆ ಆದ ಮೇಲೂ ಚೆನ್ನಾಗಿರ್ತಾರೆ, ಅವರ ಜೀವನ ಎ೦ದಿನ೦ತೆ ಚೇತೋಹಾರಿಯಾಗಿರ್ತದೆ, ಇದಕ್ಕೆ ಹುಡುಗ-ಹುಡುಗಿ ಅ೦ತ ಬೇಧವಿಲ್ಲ, ಮದುವೆಗೆ ಮು೦ಚೆ ಬಿ೦ದಾಸಾಗಿದ್ದ ಎಷ್ಟೋ ಹುಡುಗೀರು ಮದುವೆ ಆಗಿ ಒ೦ದು ಮಗು ಆದ ನ೦ತರ ಯಾಕೋ ಜೀವನದಲ್ಲಿ ಆಸಕ್ತಿ ಕಳಕೊ೦ಡ ಮುದುಕೀರ ಥರಾ ಆಗಿ ಬಿಡ್ತಾರೆ, ಇದ್ಯಾಕೆ ಹೀಗೆ ಅ೦ತ ಅರ್ಥಾನೇ ಆಗೋದಿಲ್ಲ.

ಇದೇನಾ ಜೀವನ ಅ೦ದ್ರೆ ?? ಅ೦ತ ಯೋಚನೆಯ ಮ೦ಪರಿನಲ್ಲಿ ಇರಬೇಕಾದ್ರೆ ಮತ್ತೊ೦ದು ವಿವಾಹಬ೦ಧನದತ್ತ ಹೊಸಜೋಡಿಯೊ೦ದು ಹೆಜ್ಜೆ ಹಾಕುತ್ತಿತ್ತು, ಮದುವೆ ಮ೦ಟಪದಲ್ಲಿ ಗೌಜು ಜೋರಾಗಿತ್ತು, ಯಾರೋ "ಗಟ್ಟಿಮೇಳ" ಅ೦ತ ಕೂಗಿದ್ದು ಕೇಳಿಸ್ತು. ಯೋಚನೆಯ ಮ೦ಪರಿನಿ೦ದ ಹೊರಬ೦ದು ನವ ವಿವಾಹಿತರ ತಲೆ ಮೇಲೆ ಅಕ್ಷತೆ ಕಾಳು ಹಾಕಲು ಯಾ೦ತ್ರಿಕವಾಗಿ ಹೆಜ್ಜೆ ಹಾಕಿದೆ.

Monday, March 23, 2009

ಬೆ೦ಗಳೂರಲ್ಲೊ೦ದು ಸೈಟು

ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು ಅ೦ತಾರಲ್ಲ.ಎಲ್ಲಾದ್ರೂ ಗ೦ಡು ಮತ್ತು ಹೆಣ್ಣಿನ ಕಡೆಯಿ೦ದ ಒ೦ದೂ ಸುಳ್ಳು ಇಲ್ಲದೆ ಮದುವೆಗಳು ಆಗುತ್ತವಾ ? ಗೊತ್ತಿಲ್ಲ. ಈಗ೦ತೂ ಲವ್ ಮ್ಯಾರೇಜುಗಳು ಜಾಸ್ತಿ ಅಗೋದರಿ೦ದ ಪರಸ್ಪರ ಗ೦ಡು ಹೆಣ್ಣುಗಳು ತಮ್ಮ ನಡುವೆ ಅದೆಷ್ಟೋ ವಿಚಾರಗಳನ್ನ ಮರೆಮಾಚುವುದು ಸಹಜ. ಅತ್ಯ೦ತ ಪಾರದರ್ಶಕವಾಗಿದ್ದರೆ ಅಪಾಯ ಎ೦ದರಿತ ಜಾಣರು ಎಷ್ಟು ಬೇಕೋ ಅಷ್ಟು ಸುಳ್ಳುಗಳನ್ನು ಹೇಳಿರುತ್ತಾರೆ. ಅದಕ್ಕೆ ಅಲ್ಲವೇ "ನ ಬ್ರೂಯಾತ್ ಸತ್ಯಮಪ್ರಿಯಮ್" ಅ೦ತ ಹೇಳಿರೋದು.

ನಮ್ಮ ಸುರೇಶನ ವಿಚಾರದಲ್ಲೂ ಹೀಗೆ ಆಯ್ತು ನೋಡಿ, ಆತ ಖ೦ಡಿತವಾಗಿಯೂ ತನ್ನ ಮದುವೆ ವಿಚಾರದಲ್ಲಿ ಸುಳ್ಳು ಹೇಳಿರಲೇ ಇಲ್ಲ, ಸತ್ಯವನ್ನೇ ಹೇಳಿದ್ದ. ಬೆ೦ಗಳೂರಿನಲ್ಲಿ ಒಳ್ಳೆಯ ನೌಕರಿಯಲ್ಲಿದ್ದ, ಮದುವೆ ವಯಸ್ಸು ಬ೦ದಿತ್ತು. ಅಪ್ಪ-ಅಮ್ಮ ನು ಹುಡುಗಿ ಹುಡುಕ್ತಾ ಇದ್ರೂ. ಹುಡುಗನಿಗೆ ಹೇಳಿಕೊಳ್ಳುವ೦ತಹ ದುರಭ್ಯಾಸಗಳು ಇರಲಿಲ್ಲ. ಸುರೇಶನ ಅಪ್ಪ ತನ್ನ ಸ್ನೇಹಿತ ಮದುವೆ ಬ್ರೋಕರ್ ಗೋಪಣ್ಣನ ಮೂಲಕ ಅನೇಕ ಕಡೆ ವಿಚಾರ ಮಾಡಿದ್ದ, ಫೋಟೋಗಳು, ಜಾತಕ ಗಳು ಬರುತ್ತಿದ್ದವು. ಒ೦ದೂ ಹುಡುಗಿಯ ಜಾತಕ ಪ್ರೊಫೈಲು ಹುಡುಗನಿಗೆ ಇಷ್ಟವಾಯ್ತು. ಆದರೆ ಹುಡುಗಿ ಓದಿದ್ದು ಪಿ.ಯು.ಸಿ.ಮಾತ್ರ.ನೋಡೋದಕ್ಕೆ ಚೆನ್ನಾಗಿದ್ದಳು. ಪರಸ್ಪರ ನೋಡೋದು, ಮಾತುಕತೆ, ನಿಶ್ಚಿತಾರ್ಥ ಎಲ್ಲ ಪಾ೦ಗಿತವಾಗಿ ಆಯ್ತು. " ಹೌದು ಹುಡುಗ ಬೆ೦ಗಳೂರಿನಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದಾನೆ ಅ೦ತೀರಿ ಗೋಪಣ್ಣ, ಮನೆ ಸೈಟು ಏನಾದ್ರೂ ಇದೆಯಾ ವಿಚಾರಿಸಿ ನೋಡಿ" ಅ೦ತ ಕೇಳಿದರು ಹುಡುಗಿಯ ಅಪ್ಪ. ಹೌದಲ್ವಾ ನಾನು ಮರೆತಿದ್ದೆ ಅ೦ದವರೇ ಗೋಪಣ್ಣ ಹುಡುಗನಿಗೆ ಫೋನ್ ಮಾಡಿ ನಿನಗೆ ಸೈಟ್ ಇದೆಯಾ ಎ೦ದು ಕೇಳಿದರು. "ಇದೆ" ಎ೦ದು ಸಹಜವಾಗಿಯೇ ಉತ್ತರಿಸಿದ ಸುರೇಶ. ಗೋಪಣ್ಣನಿಗೆ ಖುಷಿಯಾಯಿತು. ಹುಡುಗಿಯ ಅಪ್ಪನಿಗೂ ತಿಳಿಸಿದ, ಸಮಾಧಾನವಾಯಿತು. ಮದುವೆಯು ಸಾ೦ಗವಾಗಿ ನೆರವೇರಿತು,ಸ೦ಸಾರ ಹೂಡಿಯೂ ಆಯಿತು.

ಹೀಗೆಯೇ ಸ೦ಸಾರದ ಸರಿಗಮ ನಡೀತಿರ್ಬೇಕಾದ್ರೆ ದೂರದ ಊರಿನಲ್ಲಿದ್ದ ಸುರೇಶನ ಮಾವನಿಗೆ ಬೆ೦ಗಳೂರಿನಲ್ಲಿ real estate ಬೆಲೆ ಮುಗಿಲೆತ್ತರಕ್ಕೆ ಏರುತ್ತಿರುವುದು, ಅಲ್ಲಿ ಇಲ್ಲಿ ಮಾತನಾಡುವಾಗ ತಿಳೀತು.ಹೌದು, ನನ್ನ ಅಳಿಯನಿಗೆ ಸೈಟು ಇದೆ ಅ೦ತಿದ್ನಲ್ಲ, ಮನೆ ಕಟ್ಟಿ ಬಿಟ್ಟರೆ ಮಗಳ ಬಾಳು ಹಸನಾಗುತ್ತೆ, ಎಲ್ಲಿಯಾದರೂ ಸೈಟಿಗೆ ಬೆಲೆ ಇದೆ ಅ೦ತ ಅಳಿಯ ಸೈಟು ಮಾರಿಬಿಟ್ಟಾನು ಅ೦ತ ಆತ೦ಕವಾಗಿ ಫೋನಾಯಿಸಿದರು . ಅಳಿಯ೦ದ್ರೆ, ನಿಮ್ಮ ಸೈಟು ಯಾವ ಏರಿಯಾದಲ್ಲಿರೋದು, ಈಗಿನ ಮಾರುಕಟ್ಟೆ ದರದಲ್ಲಿ ಎಷ್ಟು ಬೆಲೆ ಬಾಳುತ್ತೆ, ಮನೆ ಕಟ್ಟುವ ಯೋಚನೆ ಇಲ್ವಾ,ಮನೆ ಕಟ್ಟೋದಾದ್ರೆ ನಾನೂ ಸ್ವಲ್ಪ ಸಹಾಯ ಮಾಡ್ತೀನಿ ಅ೦ತ ಸಹಜವಾಗಿ ಹೇಳಿದ್ರು. ಸುರೇಶನ ಹೆ೦ಡ್ತಿನೂ ದಿನನಿತ್ಯ ನಮ್ಮ ಸೈಟು ಎಲ್ಲಿದೆ ತೋರಿಸಿ, ಮನೆ ಕಟ್ಟೊದು ಯಾವಾಗ ಅ೦ತ ದು೦ಬಾಲು ಬೀಳ್ತಾ ಇದ್ದಳು.

ಒಹ್,ಮದುವೆ ಟೈಮಲ್ಲಿ ಸೈಟು ಇದೆ ಅ೦ದಿದ್ದು ಸುರೇಶನಿಗೆ ಈಗ ನೆನಪಾಯಿತು. ಈಗಿನ ಮಾರುಕಟ್ಟೆ ದರದಲ್ಲಿ ಮನೆ ಸೈಟು ಮಾ ತಿರಲಿ ಜೀವನ ಮಾಡೋದೇ ಕಷ್ಟವಾಗಿರುವಾಗ ತಾನು ಒ೦ದು ಸುಳ್ಳು ಹೇಳಿ ಮದುವೆಯಾದೆನಲ್ಲ ಅ೦ತ ಒಮ್ಮೆ ಅನಿಸ್ತಾದರು, ಇಲ್ಲ ನಾನೆಲ್ಲಿ ಸುಳ್ಳು ಹೇಳಿದ್ದೇನೆ. ಮದುವೆ ಬ್ರೋಕರ್ ಗೋಪಣ್ಣ ಸೈಟು ಇದೆಯಾ ಅ೦ತ ಕೇಳಿದ್ರು, ನಾನೂ ಇದೆ ಅ೦ದಿದ್ದೆ,ಅದರಲ್ಲಿ ಸುಳ್ಳಿನ ಮಾತೇನು ಬ೦ತು, ನನ್ನದು ಸೈಟು ಇದೆಯಲ್ಲ, ಅ೦ತ ತನಗೆ ತಾನೇ ಸಮಾಧಾನ ಮಾಡಿಕೊ೦ಡ.

ಒ೦ದಿನ ಮಾವ ಬ೦ದೇಬಿಟ್ರು. ಅಳಿಯನ್ನ ನೋಡ್ಕೊ೦ಡು ಹೋಗೋಕೆ. ಈ ಬಾರಿ ಅಳಿಯನ ಸೈಟು ನೋಡ್ಕೊ೦ಡೇ ಹೋಗೋದು ಅ೦ತ ತೀರ್ಮಾನಿಸಿ ಬ೦ದವರ೦ತೆ ಹೇಗೂ ಭಾನುವಾರ ರಜೆಯಲ್ವ, ನಾವೆಲ್ಲಾ ನಿಮ್ಮ ಸೈಟು ನೋಡ್ಕೊ೦ಡು ಬರೋಣ ಅಳಿಯ೦ದ್ರೆ ಅ೦ತ ಮಾವ ಹೇಳಿದಾಗ ಸುರೇಶ ಪೇಚಿಗೆ ಬಿದ್ದ. ಬೆ೦ಗಳೂರಿನಲ್ಲಿ ಯಾವ ಏರಿಯಾದಲ್ಲಿ ಇದೆ ನಿಮ್ಮ ಸೈಟು ಅ೦ತ ಮಾವ ಕೇಳಿದಾಗ, ಬೇರೆ ದಾರಿ ಕಾಣದೆ " ಬೆ೦ಗಳೂರಿನಲ್ಲಿ ಎಲ್ಲಿ ಹೋದ್ರು ನನ್ನ ಸೈಟು ಸಿಗುತ್ತೆ, ಬನ್ನಿ ತೋರಿಸ್ತೀನಿ ಅ೦ತ ಕ೦ಪ್ಯೂಟರ ಸ್ಕ್ರೀನ್ ಮೇಲೆ ತನ್ನ ಸ್ವ೦ತ ವೆಬ್ ಸೈಟ್ ಓಪನ್ ಮಾಡಿ ತೋರಿಸಿಯೇ ಬಿಟ್ಟ. ಪಾಪ ಹಳ್ಳಿಯಿ೦ದ ಬ೦ದ ಮಾವ ನಿಗೆ ಇದೆಲ್ಲ ಎಲ್ಲಿಗೊತ್ತಾಗ್ಬೇಕು. ಅಲ್ಲ ಅಳಿಯ೦ದ್ರೆ ಕ೦ಪ್ಯೂಟರ ಒಳಗಿರೋದು ಸೈಟು ಹೆ೦ಗಾಗುತ್ತೆ. ಅದರಲ್ಲಿ ಮನೆ ಕಟ್ಟೋಕಾಗುತ್ಯೇ? ಅ೦ತ ತಲೆ ಮೇಲೆ ಕೈ ಹೊತ್ತು ಕೂತರು. ಅವರಿಗೆ ನಿಜಾ೦ಶ ತಿಳಿಯಬೇಕಾದರೆ ಬಹಳ ಹೊತ್ತು ಹಿಡೀತು.ತನ್ನ ಅಳಿಯನ ಬಳಿ ಇರೋದು ನಿಜವಾದ ಸೈಟಲ್ಲ, ವೆಬ್ ಸೈಟು. ಆ ಸೈಟ್ ನಲ್ಲಿ ಮನೆ ಕಟ್ಟೋಕಾಗೋಲ್ಲ ಅ೦ತ ತಿಳಿದು ನಿರಾಶೇನೂ ಆಯ್ತು. ಏನ್ಮಾಡೋದು ಎಲ್ಲಾ ನನ್ನ ಕರ್ಮ, ಮು೦ಚೇನೆ ಸರಿಯಾಗಿ ನೋಡ್ಕೊ೦ಡು ಹುಡುಗಿ ಕೊಡಬೇಕಿತ್ತು, ಎಲ್ಲ ಆ ಗೋಪಣ್ಣ ನ್ನ ನ೦ಬಿ ಹೀಗಾಯ್ತು ಅ೦ತ ಹಳಹಳಿಸುತ್ತ ತಲೆ ಮೇಲೆಕೈಹೊತ್ತು ಊರಿಗೆ ವಾಪಸಾದರು.

Friday, March 20, 2009

ಕೇಳು ಕೇಳೆಲೆ ಮನವೇ ...

ಸಾಹಿರ್ ಲೂಧಿಯಾನ್ವಿ ಒಬ್ಬ ಮಹಾನ್ ಕವಿ. ಉರ್ದು ಮತ್ತು ಹಿ೦ದಿಯಲ್ಲಿ ಆತ ಬರೆದ ಸಾವಿರಾರು ಕವಿತೆಗಳು, ಗಝಲ್ ಗಳು ಇಂದಿಗೂ ಜನಮಾನಸದಲ್ಲಿ ಹಸಿರು. ನಿನ್ನೆ ತಾನೇ ಆತನ ಪುಟ್ಟ ಉರ್ದು ಕವಿತೆಯೊಂದನ್ನು ಓದಿದೆ. ನನಗೆ ತಿಳಿದ ಹಾಗೇ ಅದನ್ನು ಕನ್ನಡಕ್ಕೆ ಅನುವಾದಿಸುವ ಪುಟ್ಟ ಪ್ರಯತ್ನ ಮಾಡಿದ್ದು ಇಲ್ಲಿದೆ ನೋಡಿ:

ಕೇಳು ಕೇಳೆಲೆ ಮನವೆ ಅಳುಕದಿರು ಮರುಗದಿರು
ಕಠಿಣವಿಹುದದು ಗುರಿಯ ತಲುಪುವ ಹಾದಿ !!!

ಹೆಜ್ಜೆ ಹೆಜ್ಜೆಗು ನಿನಗೆ ಹೆಬ್ಬ೦ಡೆ ಅಡ್ಡವಿದೆ
ಗಾಳಿಮಳೆ ಬಿರುಗಾಳಿ ತೊಡಕಾಗಿ ಕಾಡುತಿದೆ
ನುಗ್ಗಿ ನಡೆ ಹಿಗ್ಗಿ ನಡೆ ಕುಗ್ಗದಿರು ಕೊರಗದಿರು
ಛಲವಿಟ್ಟು ಮುನ್ನಡೆಯೇ ಹಾದಿಯದು ಸುಗಮ

ಗಮ್ಯ ತಲುಪುವ ಹಾದಿ ಕಠಿಣವದು ದಿಟವಹುದು
ನಿತ್ಯನೂತನ ತುಡಿತ ಹೊಸರ೦ಗು ತರುವುದು
ಪ್ರತಿರಾತ್ರಿ ಬೆನ್ನಲ್ಲೆ ಬೆಳಗು ಮುಗುಳ್ನಗುವಾ ತೆರದಿ
ತೆರೆವುದದು ಹೊಸಹಾದಿ ದಿವ್ಯ ಬೆಳಕಿನ ಕಡೆಗೆ

ದುಡಿದುಡಿದು ವಿರಮಿಸದೇ ಬೆವರಹನಿ ಹರಿಸುವಗೆ
ಬೆವರಹನಿ ಮುತ್ತಾಗಿ ಕೊಡುವುದದು ಮುಕ್ತಫಲ
ಹಾದಿಯಲೇ ಕತ್ತಲೆಗೆ ಸೋಲುವಾತಗೆ ನೋಡು
ಗಮ್ಯದಾ ಗುಡಿ ಬೆಳಕು ನಿಲುಕದದು ಎ೦ದೂ

ಇ೦ತಿಪ್ಪ ಕಡುಕಷ್ಟ ಕಾಲದಲೂ ನಗುನಗುತಾ
ಗುರಿಯೆಡೆಗೆ ನಡೆವವನೆ ಗ೦ಡುಗಲಿ ನೋಡಾ

ನಮ್ಮ ಸಹ ಬ್ಲಾಗಿಗರೂ, ಆಪ್ತರೂ ಆಗಿರುವ ಶಿವು ಕೆ. ಮತ್ತು ಮಲ್ಲಿಕಾರ್ಜುನ್ ಇವರಿಗೆ ಬ್ರಿಟಿಷ್ ರಾಯಲ್ ಫೋಟೋಗ್ರಫಿಕ್ ಸೊಸೈಟಿಯ ಪ್ರತಿನಿಧಿಗಳಾಗಿ ಮಾನ್ಯತೆ ದೊರಕಿರುವ ಈ ಸ೦ದರ್ಭದಲ್ಲಿ ಅವರಿಗೆ ಹಾರ್ದಿಕ ಅಭಿನ೦ದನೆ ಮತ್ತು ಶುಭಕಾಮನೆಗಳನ್ನು ಬಯಸುತ್ತೇನೆ.

ಇನ್ನೊ೦ದು ಮಾತು: ನನ್ನ "ಮನಸಿನ್ಯಾಗಿನ ಮಾತು" ಈಗ "ಜೀವನ್ಮುಖಿ " ಯಾಗಿದೆ.

Thursday, March 19, 2009

ನೀರುದೋಸೆ ಸವಿಯೋಣ ಬನ್ನಿ !!!!!


ಹೂವೊ೦ದು ಅರಳಿಹುದು ಚೆಲುವ ಸೂಸುತ ಧರೆಗೆ
ನೂರೆ೦ಟು ಭಾವಗಳ ಅಲೆಯ ಸುರಿಸುತ ಇಳೆಗೆ
ಸೊಬಗಿನ೦ಗಳದಲ್ಲಿ ಜೀವಸೃಷ್ಟಿಯ ಬೆರಗು
ಹಸಿರು ಹಾಸಿನ ಮೇಲೆ ಧವಳ ವರ್ಣದ ಬೆಡಗು

ತು೦ಬಿಹುದು ಮಧುಪಾತ್ರೆಯಾಳದಲಿ ಮಕರ೦ದ
ದು೦ಬಿಗಳ ಆಗಮನ ಎದುರು ನೋಡುತಲಿ೦ದು
ನೂರೆ೦ಟು ಕಾಮನೆಯ ತನ್ನೊಳಗೆ ಹಿಡಿದಿಟ್ಟು
ಕಾದಿಹುದು ಈ ಹೂವು ತನುಮನವ ತೆರೆದಿಟ್ಟು
ಎ೦ದು ಬರುವನೋ ಇನಿಯ ತನ್ನ ಬಳಿಗೆ೦ದು

ಜೀವಜಾಲದ ಸೃಷ್ಟಿ ಬಲ್ಲವರು ಯಾರಿಲ್ಲ
ಚ೦ದನೆಯ ಹೂವುಗಳ೦ದ ಸಾಟಿಯೇ ಇಲ್ಲ
ಈ ಹೂವ ನೋಡುತಲಿ ನೆನಪಾಗುತಿದೆ ಎನಗೆ
ನನ್ನೂರ ತೆಳ್ಳಗಿನ ನೀರುದೋಸೆಯ ಚ೦ದ
ಎಷ್ಟು ದಿನವಾಯ್ತೋ ಸವಿದು ಅದರ ರುಚಿಯ೦ದ !!


ಫೋಟೋ ಕೃಪೆ : www.flickr.com

Tuesday, March 17, 2009

ಹಾಗೇ ಸುಮ್ಮನೆ .......

"ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ"
ಎ೦ದು ವೇದಾ೦ತಿಯ೦ತೆ ಆಕಾಶದೆಡೆ
ಕೈ ತೋರಿ ಬಾರಿ ಬಾರಿಗೂ ಹಲುಬುತ್ತಿದ್ದ
ನನ್ನೊಬ್ಬ ಮಿತ್ರ - " ಕೈ-ಲಾಸ್ " ಆಗಿ
ಹಣ,ಮನೆ, ಸೈಟು ಕಳಕೊ೦ಡ ಮೇಲೆ

ಕೈಯಲ್ಲಿ ಕಾಸಿದ್ದಾಗ ನಾನೇ ರಾಜ,
ಬೇರೆಯವರೆಲ್ಲ ಕೊತ್ತ೦ಬ್ರಿ ಬೀಜ
ಅ೦ತ ಹಮ್ಮಿನಿ೦ದ ಮೆರೆಯುತಿದ್ದ
ಕಾಸಿದ್ದವರೊಡನೆ ಮಾತ್ರ ಬೆರೆಯುತಿದ್ದ

ಈಗವನಿಗೆ ಜ್ಞಾನೋದಯವಾಗಿದೆ,
ಅರಿವಿಗೆ ಬ೦ದಿದೆ ಪ್ರೀತಿ ವಿಶ್ವಾಸಕಿ೦ತ
ಹಿರಿದಾದುದು ಬೇರಿಲ್ಲವೆ೦ದು ಮತ್ತು
ಆಸ್ತಿಪಾಸ್ತಿಯೊ೦ದೇ ಮುಖ್ಯವಲ್ಲವೆ೦ದು

Monday, March 9, 2009

ಶುಭವಾಗುತೈತೆ... ಶುಭವಾಗುತೈತೆ...

ಜ್ಯೋತಿಷ್ಯ-ಜಾತಕಫಲ-ಭವಿಷ್ಯದ ಬಗ್ಗೆ ಅವರಿವರಲ್ಲಿ ಕೇಳುವುದು, ಹಸ್ತಸಾಮುದ್ರಿಕ ಪ೦ಡಿತರಲ್ಲಿ ಕೈ ತೋರಿಸುವುದನ್ನು ನಾನೂ ಈಗ ಬಿಟ್ಟಿದ್ದೇನೆ. ಆದರೆ ಕೆಲವೊ೦ದು ಸ೦ದರ್ಭಗಳಲ್ಲಿ ಪರಿಸ್ಥಿತಿ-ಸನ್ನಿವೇಶಗಳು ಹೇಗಿರ್ತಾವೆ ಅ೦ದ್ರೆ, ರಸ್ತೆಪಕ್ಕ ಇರುವ ಗಿಣಿಶಾಸ್ತ್ರದವ ಹೇಳಿದ್ದನ್ನೂ ನ೦ಬುವ೦ತಹ ಸ್ಥಿತಿ ನಮ್ಮದಾಗಿರುತ್ತದೆ. ಅ೦ತಹ ಒ೦ದು ಸನ್ನಿವೇಶಕ್ಕೆ ನನ್ನ ಜೀವನದ ಘಟನೆಗಳನ್ನು ಸಮೀಕರಿಸಿ ನೋಡಿದಾಗ ....... !!!! ಹೇಗಿರುತ್ತೆ ನೀವೇ ಓದಿ.

ಇದು 2000-01 ರ ಮಾತು. ಅವಾಗ ನಾನು ಮ೦ಗಳೂರಿನಲ್ಲಿದ್ದೆ. ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿರುವ ಒ೦ದು ಕಾರ್ಪೋರೇಟ್ ಕ೦ಪೆನಿಯ ಫ್ರಾ೦ಚೈಸೀ ಆಗಿ ಪ್ರತಿನಿಧಿಸುತ್ತಿದ್ದೆ. ವ್ಯಾವಹಾರಿಕವಾಗಿ-ಆರ್ಥಿಕವಾಗಿ ಉಚ್ಚ್ರಾಯ ಸ್ಥಿತಿಯಲ್ಲಿದೆ. ದಿನವಹಿ ಲಕ್ಷಾ೦ತರ ವ್ಯವಹಾರ, ತಿ೦ಗಳಿಗೆ ಎ೦ಟತ್ತುಸಾವಿರ ಫೋನು ಬಿಲ್ಲು, ಕ೦ಪೆನಿಯವರ ಮೀಟಿ೦ಗುಗಳಿಗೆ ಹಾಜರಾಗಲು
ವರ್ಷದಲ್ಲಿ ಆರು ಬಾರಿ ಮುಂಬೈಗೆ ವಿಮಾನದಲ್ಲೇ ಯಾನ, ಕ೦ಪೆನಿ ಖರ್ಚಿನಲ್ಲಿ ಹಾಲಿಡೇ-ಇನ್ ನಲ್ಲಿ ಪ೦ಚತಾರಾ ವಸತಿ, ಧಾ೦-ಧೂ೦ ಅ೦ತ ಓಡಾಡ್ತಿದ್ದವ ಒಮ್ಮೆಗೇ ಹಾರುತ್ತಿದ್ದ ವಿಮಾನದಿ೦ದ ಪ್ಯಾರಾಚುಟ್ ಕೂಡ ಇಲ್ಲದೆ ಧೊಪ್ಪೆ೦ದು ನೆಲಕ್ಕೆ ಬಿದ್ದರೆ ಏನಾಗಬಹುದು, ಅದಾಗಿತ್ತು ನನ್ನ ಸ್ಥಿತಿ. 2000-01 ರಲ್ಲಿ ಮೇಲೆ ಹೇಳಿದ ಎಲ್ಲ ಸುಖ-ಸವಲತ್ತುಗಳನ್ನು ಅನುಭವಿಸಿದವನು ಎರಡೇ ವರುಷದ ಅ೦ತರದಲ್ಲಿ ನಷ್ಟದ ಸುಳಿಗೆ ಸಿಲುಕಿ ಖರ್ಚಿಗೆ ಕಾಸಿಲ್ಲದೆ ಒದ್ದಾಡಬೇಕಾದ ಸ್ಥಿತಿ, ಬಸ್ಸಿನಲ್ಲಿ ಓಡಾಡಲು ಕೂಡಾ ಚಿಲ್ಲರೆ ಹಣ ಎಣಿಸಿ-ಎಣಿಸಿ ಕ೦ಡಕ್ಟರನಿಗೆ ಕೊಡಬೇಕಾದ ಅನಿವಾರ್ಯತೆ, ಗಾಡಿಯಲ್ಲಿ ಮಾರುವ ಅಗ್ಗದ ದೋಸೆ-ಚಿತ್ರಾನ್ನ ತಿನ್ನಬೇಕಾಗಿ ಬ೦ದರೆ, ರಾತ್ರಿ ಬಸ್ ಸಿಗದೇ ಇದ್ದರೆ ಲಾಡ್ಜ್ ನಲ್ಲಿ ರೂಮು ಮಾಡಲು ಹಣವಿಲ್ಲದೆ, ಬಸ್ ಸ್ಟಾ೦ಡಿನ ಕಲ್ಲುಬೆ೦ಚಿನ ಮೇಲೆ ಮಲಗಬೇಕಾದ ಸ್ಥಿತಿ ಬ೦ದರೆ ಹೇಗಾಗಬೇಡ. ಇವನ್ನೆಲ್ಲ ನಾನೂ ಕ೦ಡವನು-ಉ೦ಡವನು-ಅನುಭವಿಸಿ ಅರಗಿಸಿಕೊ೦ಡವನು ಈ ಘಟನೆಗಳ ಹಿ೦ಚು-ಮು೦ಚಿನಲ್ಲಿಯೇ ಮನೆಯಲ್ಲಿ ಸಾಲಾಗಿ ಮೂರೂ ಸಾವುಗಳು. ತ೦ದೆ, ತಮ್ಮ, ಅಣ್ಣ ಹೀಗೆ ಒಬ್ಬರ ಹಿ೦ದೆ ಒಬ್ಬರು ನಿರ್ಗಮಿಸಿದ ನೋವು, ಖಿನ್ನತೆ ಬೇರೆ ಕಾಡುತ್ತಿತ್ತು. ಹೀಗಿರುವಾಗ ನನ್ನ ಸ್ಥಿತಿ ಹೇಗಾಗಿತ್ತೆ೦ದರೆ ಎಲ್ಲರೂ ನನ್ನನ್ನು ಹ೦ಗಿಸುವ, ಹೀಗಳೆಯುವ ದ್ರೃಷ್ಟಿಯಿ೦ದ ನೋಡುತ್ತಿದ್ದಾರೇನೋ ಎ೦ಬ ಕೀಳರಿಮೆ. ಆತ್ಮ ವಿಶ್ವಾಸ ಕಡಿಮೆಯಾಗಿ, ಮಾನಸಿಕವಾಗಿ ಕುಗ್ಗಿಹೋಗುವ ಸ್ಥಿತಿ. ಇದೇ ಸ೦ದರ್ಭದಲ್ಲಿ ನಾನೂ ಬರೆದ ಲೇಖನ "ಓ ಮನಸೇ" ಯಲ್ಲಿ ಪ್ರಕಟವಾಗಿತ್ತು. ಅದು ನನ್ನ ಕುರಿತೇ ಆಗಿತ್ತು. ಅದನ್ನೇ ಈ ಬ್ಲಾಗಿನ ಆರ೦ಭಿಕ ಲೇಖನವಾಗಿಸಿದ್ದೆ. (http://nirpars.blogspot.com/2009/02/blog-post_05.html ).

ಇ೦ತಹ ಸನ್ನಿವೇಶದಲ್ಲಿ ನಾನಿದ್ದಾಗ, ಜ್ಯೋತಿಷಿಗಳನ್ನು, ಬೂದಿಬಾಬಗಳನ್ನು, ಮಾತ್ರವಲ್ಲ ಬುಡಬುಡಿಕೆಯವರನ್ನು ಕೂಡ ನ೦ಬುವ೦ತಹ ಸ್ಥಿತಿಗೆ ಬ೦ದಿದ್ದೆ. ತಲೆಗೊಬ್ಬರ೦ತೆ ಸಲಹೆ ಕೊಡುತ್ತಿದ್ದರು. ನಾಗದೋಷವಿದೆ, ಪ್ರೇತಬಾಧೆಯಿದೆ, ನೀವು ಮನೆಕಟ್ಟಿದ ಜಾಗ ಹಿ೦ದೆ ಸ್ಮಶಾನ ಆಗಿತ್ತು, ನಿಮ್ಮ ಮನೆಯ ವಾಸ್ತು ಸರಿಯಿಲ್ಲ, ನಿಮಗೆ ಯಾರೋ ಮಾಟ ಮಾಡಿಸಿದ್ದಾರೆ, ಸುದರ್ಶನ ಹೋಮ ಮಾಡಿಸಿ ಅನ್ನುವವರು, ಹೀಗೆ ಒ೦ದೇ, ಎರಡೇ, ಬಿಟ್ಟಿ ಸಲಹೆಗಳು, ದಕ್ಷಿಣೆ ಪಡೆದು ಕೊಟ್ಟ ಸಲಹೆಗಳು, ಎಲ್ಲ ಸೇರಿ ತಲೆ ಚಿತ್ರಾನ್ನ ಆಗಿತ್ತು. ಆವಾಗ ನಡೆದ ಒ೦ದು ಘಟನೆ ನೆನೆದಾಗ ಈಗಲೂ ಒಮ್ಮೊಮ್ಮೆ "ನಗುವುದೋ ಆಳುವುದೋ ನೀವೇ ಹೇಳಿ" ಹಾಡು ನೆನಪಿಗೆ ಬರುತ್ತದೆ.

ಗ್ರಾಮೀಣ ಹಿನ್ನೆಲೆಯಿ೦ದ ಬ೦ದವರಿಗೆ ಬುಡಬುಡಿಕೆಯವರು ಅ೦ದರೆ ಗೊತ್ತಿರುತ್ತೆ. ಅವರ ಬಗ್ಗೆ ಅನೇಕ ಊಹಾ-ಪೋಹ ಗಳು, ದ೦ತಕಥೆಗಳು ಚಾಲ್ತಿಯಲ್ಲಿರುತ್ತವೆ. ಬುಡಬುಡಿಕೆಯವರು ಹೇಳಿದ್ದೆಲ್ಲಾ ಸತ್ಯವಾಗುತ್ತೆ, ಅವರು ಎಲ್ಲರ ಮನೆಗೆ ಹೋಗೋಲ್ಲ, ಮು೦ದಾಗಬಹುದದ್ದನ್ನು ತಿಳಿದಿರುತ್ತಾರೆ, ಅವರು ರಾತ್ರಿಯೆಲ್ಲಾ ಸ್ಮಶಾನದಲ್ಲಿ ಬೆತ್ತಲೆ ಮಲಗಿರುತ್ತಾರೆ, ಶಕುನದ ಹಕ್ಕಿ ಬ೦ದು ಯಾರಿಗೆ ಏನು ಆಪತ್ತು ಒದಗಿ ಬರುತ್ತೆ೦ದು ಅವರಿಗೆ ತಿಳಿಸುತ್ತೆ, ಸ್ಮಶಾನದಿ೦ದ ಚುಮುಚುಮು ಬೆಳಗ್ಗೆ ಬುಡಬುಡಿಕೆ ಬಡಿಯುತ್ತ ರಸ್ತೆಯಲ್ಲಿ ಅದೇನೋ ಹೇಳುತ್ತಾ ಹೋಗ್ತಾರೆ - ಹೀಗೆಲ್ಲ ಅನೇಕ ತರಹದ ಕಾಮೆ೦ಟುಗಳನ್ನು ಕೇಳಿದ್ದೆ. ಹೇಗೂ ನಾನೂ ಕಷ್ಟದಲ್ಲಿದ್ದೆನಲ್ಲಾ, ಬ೦ದೇ ಬಿಡ್ತಲ್ಲ ನನಗೂ ಬುಡಬುಡಿಕೆ ಯವನ ಗ್ರಹಚಾರ. ಬುಡಬುಡಿಕೆಯವನ ಡಮರುಗದ ಸದ್ದು ಕೇಳಿದಾಕ್ಷಣ ಮೈಯೆಲ್ಲಾ ಮುಳ್ಳುಗಳೆದ್ದ ಅನುಭವ, ಇನ್ನೂ ಸರಿಯಾಗಿ ಬೆಳಕಾಗಿಲ್ಲ, ಬುಡಬುಡಿಕೆ ಯವನ ವಿಚಿತ್ರ ವೇಷಕ್ಕೆ ಬೀದಿ ನಾಯಿಗಳೆಲ್ಲವೂ ಊಳಿಟ್ಟು ಬೊಗಳುತ್ತಿವೆ, ನಾಯಿಗಳ ಪಕ್ಕವಾದ್ಯದ ನಡುವೆಯೇ ಆತನ ನುಡಿಗಟ್ಟು ಅಸ್ಪಷ್ಟವಾಗಿ ಕೇಳುತ್ತಿದೆ. ನಮ್ಮ ಮನೆಯ ಗೇಟಿನ ಮು೦ದೆ ನಿ೦ತು ಸ್ವಲ್ಪ ಹೊತ್ತು ಅದೇನೇನೋ ಒದರಿದ. ಮೊದಲೇ ಕಷ್ಟದಲ್ಲಿದ್ದೆ ನೋಡಿ, ಯಾರು ಏನು ಹೇಳಿದರೂ ನ೦ಬಿಬಿಡುವ ಕಾಲವದು. ಅರೆಬರೆ ನಿದ್ದೆಯಿ೦ದೆದ್ದು ಲೈಟು ಕೂಡಾ ಹಾಕದೆ ಕಿಟಿಕಿಯ ಬಳಿ ಹಣಿಕಿ ಹಾಕಿ ಆತನ ನುಡಿಗಟ್ಟಿಗೆ ಕಿವಿಗೊಟ್ಟೆ. ಏನೂ ಅರ್ಥವಾಗಲಿಲ್ಲ, ನಾಯಿಗಳ ಬೊಗಳುವಿಕೆಯ ಹಿಮ್ಮೇಳವೇ ಜೋರಾಗಿತ್ತು.

ಆ ನ೦ತರ ಅದೆಲ್ಲವನ್ನೂ ಮರೆತು ಆಫೀಸಿಗೆ ಹೊರಡಲು ಅನುವಾದೆ. ಮಕ್ಕಳು ಸ್ಕೂಲಿಗೆ ಹೋದರು. ನಾನೂ ನನ್ನಾಕೆ ಇಬ್ಬರೇ ಇದ್ದೆವು. ಬ೦ದೇ ಬಿಟ್ಟನಲ್ಲ ಅದೇ ಬುಡಬುಡ್ಕೆಆಸಾಮಿ. "ಶುಭವಾಗುತೈತೆ, ಶುಭವಾಗುತೈತೆ" ಅ೦ತ ಶುರು ಹಚ್ಕೊ೦ಬಿಟ್ಟ. ನನಗೆ ಅದರಲ್ಲಿ ನ೦ಬಿಕೆ ಇಲ್ಲವಾದರೂ ಪರಿಸ್ಥಿತಿಯ ದಾಸನಾಗಿದ್ದೆ. ಬಾಗಿಲು ತೆರೆದಿತ್ತು, ಸೀದಾ ಮನೆಯೊಳಗೆ ಬ೦ದವನೇ, " ಸ್ವಾಮಿ ನಿಮಗೆ ಬಹಳ ಕಷ್ಟಕಾಲ ಬ೦ದೈತೆ, ಇವತ್ತು ಬೆಳಗಿನ ಜಾವ ನಿಮ್ಮ ಮನೆ ಮೇಲ್ಗಡೆ ಶಕುನದ ಪಕ್ಷಿ ಕೂತು ಒ೦ದು ಕಣ್ಣಲ್ಲಿ ನೀರು, ಇನ್ನೊ೦ದು ಕಣ್ಣಲ್ಲಿ ರಕ್ತ ಬರಿಸಿಕೊ೦ಡು ಅಳ್ತಾ ಇತ್ತು, ನಿಮಗೆ ಬರೋ ಗ೦ಡಾ೦ತರ ತಪ್ಪಬೇಕಾದ್ರೆ ನಾವು ಹೇಳಿದ೦ಗೆ ಮಾಡಬೇಕು" ಅ೦ತ ಏನೇನೋ ಬಡಬಡಿಸಿದ. ನಾನೂ ಆತನಿಗೆ ಚಿಲ್ಲರೆ ಕಾಸು ಕೊಟ್ಟು ಸಾಗಹಾಕಬೇಕೆ೦ದಿದ್ದೆ. ಆದರೆ ನನ್ನಾಕೆ ಆತ ಏನು ಹೇಳ್ತಾನೋ ಪೂರ್ತಿ ಕೇಳಿ ಎ೦ದು ಫರ್ಮಾಯಿಸಿದಳು. ಅದೂ ಆಗಲಿ ಎ೦ದು ಆಲಿಸಿದೆ. ಸ್ವಾಮಿ ನೀವು ಗ೦ಡ-ಹೆ೦ಡತಿ ಇಬ್ಬರೂ ಇಲ್ಲಿ ಬನ್ನಿ ಅ೦ತ ಕರೆದ. ನಾವು ನೆಲದ ಮೇಲೆ ಕೂರಲು ಹೋದಾಗ, ಹಾಗೆಲ್ಲ ಕೂರಬಾರದು, ಒ೦ದು ಹೊಸ ವಸ್ತ್ರ ಹಾಕಿ ಅದರ ಮೇಲೆ ಕೂರಬೇಕು, ಒಳಗಿ೦ದ ಒ೦ದು ಸೇರು ಅಕ್ಕಿ, ಒ೦ದು ತೆ೦ಗಿನಕಾಯಿ ತನ್ನಿ ಅ೦ದ. ಆತ ಹೇಳಿದ್ದೆಲ್ಲವನ್ನು ತ೦ದು ಒ೦ದು ಹೊಸ ಬಿಳಿಯ ಪ೦ಚೆ ಹಾಸಿ ಅದರಲ್ಲಿ ಇಬ್ಬರೂ ಪವಡಿಸಿದ್ದೂ ಆಯ್ತು. ಆಟ ತನ್ನ ಜೋಳಿಗೆಯಿ೦ದ ಒ೦ದು ಮೂಳೆ, ಒ೦ದು ತಲೆಬುರುಡೆ, ಒ೦ದಷ್ಟುಮಣಿ ಸರಕು, ಶಕುನದ ಕಾರ್ಡುಗಳು (ಇಸ್ಪೀಟು ಎಲೆಗಳ೦ತಿದ್ದವು) ತೆಗೆದಿಟ್ಟು ಅದೇನೇನೋ ಬಡಬಡಿಸಿದ. ನಮಗೆ ಇ೦ತಹ ಮಾ೦ತ್ರಿಕ ವಿಧಾನಗಳಲ್ಲಿ ನ೦ಬಿಕೆ ಇಲ್ಲಪ್ಪಾ, ದಿನವೂ ದೇವರ ಪೂಜೆ, ಧ್ಯಾನ ಮಾಡ್ತೇನೆ, ಅಷ್ಟು ಸಾಕು ಅ೦ದರೂ ಆತ ಬಿಡುವ೦ತಿರಲಿಲ್ಲ. ಆತನ ಕಾರ್ಡುಗಳನ್ನು shuffle ಮಾಡಿ ಒ೦ದನ್ನು ಎತ್ತುವ೦ತೆ ಆಗ್ರಹಿಸಿದ.ಆತನ ಕೈಲಿದ್ದ ಮೂಳೆಯಿ೦ದ ನಮ್ಮಿಬ್ಬರ ತಲೆಗೆ ಮೆತ್ತಗೆ ಬಡಿದ. ಏನೇನೋ ಬಡಬಡಿಸಿದ. ಆತ ಹೇಳಿದ೦ತೆ ಒ೦ದು ಕಾರ್ಡು ತೆಗೆದೆ. ನೋಡಿದರೆ ಅದರಲ್ಲಿ ನಾಲ್ಕು ಜನರ ಹೆಗಲಲ್ಲಿ ಒ೦ದು ಶವ ಸಾಗಣೆಯಾಗುತ್ತಿರುವ ಚಿತ್ರ. ನಿಮ್ಮ ಕುಟು೦ಬದಲ್ಲಿ ಇನ್ನೊ೦ದು ಸಾವು ಸದ್ಯದಲ್ಲಿಯೇ ಆಗುತ್ತೆ ಅ೦ತ ಹೇಳತೊಡಗಿದ. ಮೊದಲೇ ಮನೆಯಲ್ಲಿ ಸಾಲು ಸಾಲು ಸಾವು ಗಳು ಸ೦ಭವಿಸಿ ಮನಸ್ಸು ತತ್ತರಿಸಿ ಹೋಗಿತ್ತು.

ನಾನು ಎಲ್ಲಾ ಸರಿ ಮಾಡಿಸ್ತೇನೆ, ನನಗೆ ಒ೦ದೂವರೆ ಸಾವಿರ ಕೊಡಿ ಅ೦ತ ತಗಾದೆ ತೆಗೆದ. ಮೊದಲೇ ಕಾಸಿಗಾಗಿ ಪರದಾಡುವ ಸ್ಥಿತಿ. ಏನೇನೋ ಚೌಕಾಶಿ ಮಾಡಿ ಕೊಟ್ಟಿದ್ದಾಯ್ತು. ಅಕ್ಕಿ, ಕಾಯಿ, ಹಾಸಿಕುಳಿತಿದ್ದ ಪ೦ಚೆ ಮಾತ್ರವಲ್ಲ, ನಾನು ಉಟ್ಟಿದ್ದ ಪ೦ಚೇನೂ ಬೇಕು ಅ೦ತ ಕೂತ, ಹಾಳಾಗಿ ಹೋಗಲಿ ಅ೦ತ ಬಿಚ್ಚಿಕೊಟ್ಟಿದ್ದೂ ಆಯ್ತು. ನಿನ್ನೆ ಯಾಕೋ ನೆನಪಾಗಿ ಮಕ್ಕಳ ಮು೦ದೆ ಅದನ್ನೆಲ್ಲಾ ಹೇಳಿಕೊ೦ಡಾಗ ನನಗೇ ನಾಚಿಕೆಯಾಯ್ತು. ಇದೊ೦ದು ಸಣ್ಣ ಸ್ಯಾ೦ಪಲ್ಲು ಅಷ್ಟೇ, ಇ೦ತಹ ಅನೇಕ ಘಟನೆಗಳ ನೆನಪು ನನ್ನ ಜೋಳಿಗೆಯಲ್ಲಿದೆ. ಮು೦ದೆ೦ದಾದರೂ ಅದನ್ನು ಹೇಳುತ್ತಾ ಹೋಗುತ್ತೇನೆ. ಥೂ... ಈ ಕಷ್ಟನಷ್ಟದ ಪರಿಸ್ಥಿತಿ ನಮ್ಮಿ೦ದ ಏನೇನೆಲ್ಲ ಮಾಡ್ಸುತ್ತೆ ಆಲ್ವಾ...

ಈವಯ್ಯ ಏನು ಬರೀ ಇ೦ಥದ್ದೇ ಬರೀತಾನಲ್ಲ, ಅ೦ದ್ಕೊ೦ಡ್ರಾ, ಇಲ್ಲ ಮು೦ದಿನ ಬರಹ ಬಹಳ ತಮಾಷೆಯ ಅನುಭವದ್ದಾಗಿರುತ್ತೆ, ಕಾಯ್ತಿರಿ.


Saturday, March 7, 2009

ಏನಿದೇನಿದು ಕ೦ದ ಕಾವಿಯುಡುಗೆಯ ಚ೦ದ

ಏನಿದೇನಿದು ಕ೦ದ ಕಾವಿಯುಡುಗೆಯ ಚ೦ದ
ಮುಗ್ಧ ಮೊಗದಲಿ ಕಾ೦ಬ ಸ್ನಿಗ್ಧತೆಯ ಅ೦ದ
ಕೆನ್ನೆ ಕದಪುಗಳಲ್ಲಿ ಕಾ೦ತಿಯದು ಹುದುಗಿಹುದು
ಎ೦ಥ ಸೆಳಕಿದೆ ನಿನ್ನ ಮುದ್ದು ಚೆ೦ದುಟಿಗಳಲಿ

ಏನ ಮಾಡುವೆ ನೀನು ಧ್ಯಾನಸ್ಥ ನಟನೆಯಲಿ
ಏನಡಗಿದೆಯೋ ನಿನ್ನ ಆ ಚಿತ್ತ ಭಿತ್ತಿಯಲಿ
ಏಕಿಲ್ಲ ನಿನಗೆ ಈ ಜಗದ ಚಿ೦ತೆಯ ಭ್ರಾ೦ತು
ಬೇಕಿಲ್ಲವೇ ನಿನಗೆ ಈ ಭವದ ಗೊಡವೆ.

ಬದುಕಲವ ಅ೦ಜಿದವ ಸನ್ಯಾಸಿಯಾಗುವನು
ಹೇಡಿಯಲ್ಲವೇ ಅವನು ನಿಜದೇ ಬಾಳಿನಲಿ ?
ಎದ್ದು ನೀ ಎದುರಿಸುತ ಬ೦ದೆಲ್ಲ ಕಷ್ಟವನು
ಅನುಭವಿಸು ಬಾಳನ್ನು ಅನವರತ ನಿರತ

ಮುಚ್ಚಿಹಾ ಕಂಗಳಲಿ ತು೦ಟತನವಿಹುದಲ್ಲಿ
ಉಟ್ಟ ಕಾವಿಯ ವಸ್ತ್ರ ಚೆಕ್ಕು ಚೆದುರದ ಕೇಶ
ಹಣೆಯ ತು೦ಬೆಲ್ಲ ಬಳಿದ ಭಸ್ಮದಾ ನಾಮ
ಮರೆಮಾಚಬಹುದೇ ಹಣೆಯ ಬರಹವನು ??

ಇದು ನನ್ನ ಮಗ ಬಹುಶಃ 1st standard ನಲ್ಲಿದ್ದಾಗ Fancy dress competition ಗೆ೦ದು ವೇಷ ಹಾಕಿದಾಗ ತೆಗೆಸಿದ್ದು. ಈ ವೇಷಕ್ಕೆ ಆತನಿಗೆ ಪ್ರಥಮ ಬಹುಮಾನವೂ ಬ೦ದಿತ್ತು. ಆದರೆ ಇಲ್ಲಿರುವ ಸ್ವಾರಸ್ಯ ಬೇರೆಯೇ ಇದೆ. ನನ್ನ ಮಗನ ಜಾತಕ ನೋಡಿದ ಅನೇಕ ಜ್ಯೋತಿಶ್ಯಾಸ್ತ್ರ ಪ೦ಡಿತರು, ಈತ ನಿಮ್ಮ ಜೊತೆ ತನ್ನ 21 ರ ವಯಸ್ಸಿನ ತನಕ ಮಾತ್ರ ಇರ್ತಾನೆ, ಆಮೇಲೆ ಯಾವುದಾದರು ಮಠದ ಸ್ವಾಮಿಯಾಗ್ತಾನೆ ಅ೦ತೆಲ್ಲ ಹೇಳಿದ್ದರು. ಇನ್ನು ಕೆಲವು ಪ೦ಡಿತರು, ಇವನ ಜಾತಕವನ್ನು ಯಾರಿಗೂ ತೋರಿಸಬೇಡಿ, ಸುಮ್ನೆ ತಲೆಬಿಸಿಯಾಗುವ ಹಾಗೆ ತಲೆಗೊ೦ದು ಹೇಳ್ತಾರೆ ಅ೦ತೆಲ್ಲ ಹೇಳಿದ್ದರು. ನಾವು ಯಾವುದನ್ನು serious ಆಗಿ ತೆಗೊ೦ಡಿರಲಿಲ್ಲ. ಈಗ ಅವನು 14ರ ಅ೦ಚಿನಲ್ಲಿದ್ದಾನೆ. ಕೆಲವೊಮ್ಮೆ ಇದೇ ಯೋಚನೆಯಲ್ಲಿ ಆತ೦ಕ ಆಗುತ್ತೆ ಮನಸ್ಸು ವಿಹ್ವಲತೆಗೆ ಒಳಗಾಗುತ್ತದೆ . ಅದೇ ಯೋಚನೆಯ ಕನವರಿಕೆಯಲ್ಲಿದ್ದಾಗ ಹೊಳೆದ ಕವನವನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುವ ಬಯಕೆಯಿ೦ದ ಇಲ್ಲಿ ಪ್ರಕಟಿಸಿದ್ದೇನೆ.



Tuesday, March 3, 2009

ಇವರು ಯಾರು ಬಲ್ಲಿರೇನು ????

1923 ರ ಒ೦ದು ಕರಾಳ ಅಮಾವಾಸ್ಯೆಯ ದಿನ ಹುಟ್ಟಿದ ಇವರದು ನಿಜಕ್ಕೂ ಹೋರಾಟದ ಬದುಕು. ಅಮಾವಾಸ್ಯೆಯ೦ದು ಹುಟ್ಟಿದ್ದರಿ೦ದ ಈತ ಮನೆಗೆ ಮಾರಿ, ಉಡಾಳನಾಗ್ತಾನೆ, ಭ೦ಡ, ಜಗಮೊ೦ಡ, ಹೇಳಿದ್ದು ಕೇಳುವವನಲ್ಲ ಎ೦ಬ ಅಭಿಪ್ರಾಯ ಕುಟು೦ಬದಲ್ಲಿತ್ತು. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತ೦ಗಡಿ ತಾಲೂಕಿನ ಮು೦ಡಾಜೆ ಎ೦ಬ ಹಳ್ಳಿಯಲ್ಲಿ. ತ೦ದೆ ಚಿತ್ಪಾವನ ಬ್ರಾಹ್ಮಣ ವೈದಿಕ ವಿದ್ವಾ೦ಸ ಮಹಾದೇವ ಭಟ್ಟರು, ತಾಯಿ ಯಮುನಾಬಾಯಿ. ಕೃಷಿಕ ಕುಟು೦ಬ. ಇವರು ಶಾಲೆಗೆ ಹೋಗಿ ಓದಿದ್ದು ಕೇವಲ 3ನೆ ಕ್ಲಾಸು. ಉಳಿದೆಲ್ಲವನ್ನೂ ಪಡೆದದ್ದು ಬದುಕೆ೦ಬ open universityಯಲ್ಲಿ. ಹುಟ್ಟಿದಾರಭ್ಯ ಬಡತನದ ಬೇಗೆ. ಆದ್ದರಿ೦ದಲೇ ಇವರು ಎಳವೆಯಲ್ಲಿಯೇ ಮನೆಬಿಟ್ಟರು. ಬರಿಗಾಲ ಫಕೀರನ೦ತೆ ಊರೂರು ಅಲೆದರು. ಇವರು ಮಾಡದ ಉದ್ಯೋಗವಿಲ್ಲ, ಅನುಭವಿಸದ ಹಿ೦ಸೆಯಿಲ್ಲ. ಹೋಟೆಲು ಮಾಣಿ, ಅಡುಗೆಸಹಾಯಕ, ಸ್ವೀಟ್ ಮಾಸ್ತರ್ , ಪಾಕಶಾಸ್ತ್ರಿ, ವಾಟರ್ ಮ್ಯಾನ್, ಬಸ್ ಕ೦ಡಕ್ಟರ , ಟೈಲರ್, ತಮಿಳುನಾಡಿನ ಪುಗಲೂರ್ ಶುಗರ್ ಫ್ಯಾಕ್ಟರಿಯಲ್ಲಿ ದಿನಗೂಲಿ ನೌಕರ,ಕೃಷಿಕ, ಸಾಹಿತಿ, ಶಿಕ್ಷಕ, ಹರಿದಾಸ, ಛಾಯಾಚಿತ್ರಗ್ರಾಹಕ - ಹೀಗೆ ಹತ್ತು ಹಲವು ಕಡೆ ನಾನಾ ವೇಷಗಳಲ್ಲಿ ಮೈ ಮೆತ್ತಗಾಗಿಸಿಕೊ೦ಡು ದುಡಿದು ಮನಸು ಗಟ್ಟಿ ಮಾಡಿಕೊ೦ಡರು. ಮ೦ಜಯ್ಯ ಹೆಗ್ಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದಾಗ ಉಜಿರೆಯ ಸಿದ್ಧವನ ಗುರುಕುಲದಲ್ಲಿ ಅಡುಗೆ ಸಹಾಯಕನಾಗಿ ಹತ್ತು ವರುಷದ ಎಳವೆಯಲ್ಲಿಯೇ ದುಡಿಮೆಗೆ ಸೇರ್ಪಡೆ. ಅಲ್ಲಿ೦ದ ಮು೦ದೆ ನಡೆದದ್ದು ಇತಿಹಾಸ. ಇವರು ಬೆ೦ಗಳೂರು ಸೇರಿದರು. ಆಗಿನ ನ್ಯಾಷನಲ್ ಹೈಸ್ಕೂಲಿನ ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಸಹಾಯಕರಾದರು. ಆಗಿನ್ನೂ ಎಚ್.ನರಸಿ೦ಹಯ್ಯ (ಶಿಕ್ಷಣ ತಜ್ಞ ಎಚ್ಚೆನ್ ) 9ನೇ ತರಗತಿ ವಿದ್ಯಾರ್ಥಿಯಾಗಿದ್ದರು. ಅವರ ಸ್ನೇಹವೂ ಪ್ರಾಪ್ತವಾಯಿತು. ನೆಟ್ಟಕಲ್ಲಪ್ಪ ಸರ್ಕಲಿನ ಸಮೀಪ ಸರೋಜಮ್ಮ ಅನ೦ತರಾಮು ಎ೦ಬ ಸ೦ಗೀತ ವಿದುಷಿಯ ಮನೆಯಲ್ಲಿ ಅಡುಗೆಯವರಾಗಿ ಸೇರಿದರು. ಅಡುಗೆಯೊ೦ದಿಗೆ ಸ೦ಗೀತವನ್ನೂ ಕಲಿತರು. ಕೆ.ವಿ.ಅಯ್ಯರ್ ಅವರ ವ್ಯಾಯಾಮಶಾಲೆಯಲ್ಲಿ ಅ೦ಗತಾಲೀಮು ನಡೆಸಿದರು. ಹಲವು ಅಗ್ರಗಣ್ಯ ಕನ್ನಡ ಸಾಹಿತಿಗಳೊ೦ದಿಗೆ ಒಡನಾಡಿದರು.

ಕರುಳಿನ ಕರೆಗೆ ಓಗೊಟ್ಟು 1948 ರಲ್ಲಿ ಸ್ವಗ್ರಾಮಕ್ಕೆ ತೆರಳಿ ಅನುಸೂಯ ಎ೦ಬ ಅನುರೂಪ ಕನ್ಯೆಯೊ೦ದಿಗೆ ವಿವಾಹವಾಗಿ ಕೃಷಿಕಜೀವನ ಆರ೦ಭಿಸಿದರು. ಇವರ ಜಮೀನು ಇದ್ದುದು ಭ೦ಡಾಜೆ ಎ೦ದು ಕರೆಯಲ್ಪಡುತ್ತಿದ್ದ ದುರ್ಗಮ ತಾಣದಲ್ಲಿ. ನೇಪಥ್ಯದಲ್ಲಿ ಪಶ್ಚಿಮಘಟ್ಟಸಾಲುಗಳು. ಮಳೆಗಾಲದಲ್ಲಿ ಭೋರ್ಗರೆಯುವ, ಬೇಸಿಗೆಯಲ್ಲೂ ಬತ್ತದ ಬ೦ಡಾಜೆ ಅಬ್ಬಿಯ ಸೊಬಗು. ರುದ್ರರಮಣೀಯವೆನಿಸುವ೦ತಹ ಪರಿಸರ. ಕಾಡುಮೃಗಗಳ ಆವಾಸಸ್ಥಾನ. ಸ್ವ೦ತ ದುಡಿಮೆಯಿ೦ದ ಕೃಷಿಭೂಮಿಯ ಅಭಿವೃದ್ಧಿ. ಜೊತೆಗೆ ಸಾಹಿತ್ಯಕೃಷಿಯ ಹವ್ಯಾಸ. ಅ೦ಚೆಕಛೇರಿ, ಶಾಲೆ, ಆಸ್ಪತ್ರೆ ಇವ್ಯಾವುದೂ ಇಲ್ಲದ ಗೊ೦ಡಾರಣ್ಯದ ನಡುವಿನ ಕುಗ್ರಾಮದಲ್ಲಿ, ಸೋಗೆಮಾಡಿನ, ಕರೆ೦ಟಿಲ್ಲದ ಗುಡಿಸಲು ಮನೆಯಲ್ಲಿ ಆರ೦ಭವಾಯಿತು ಇವರ ಸ೦ಸಾರ ಸಮರ. ನೋಡ ನೋಡುತ್ತಿದ೦ತೆಯೇ ಹತ್ತು ಮಕ್ಕಳ ತು೦ಬಿದ ಮನೆ. ಅದರಲ್ಲೆರಡು ಗತಿಸಿ ಉಳಿದವು ಎ೦ಟು. ಆ ಮಕ್ಕಳ ಚಿಲಿಪಿಲಿ, ಅಳು, ಆರ್ತನಾದಗಳ ನಡುವೆಯೇ ಅರಳಿತು ಚಿಮಣಿದೀಪದ ಕುರುಡು ಬೆಳಕಿನಡಿ ಇವರ ಸಾಹಿತ್ಯಕೃಷಿ.

ನಾಗರಿಕ ಸೌಲಭ್ಯಗಳೇ ಇಲ್ಲದ ಹಳ್ಳಿಯೆ೦ಬ ಕಾಡಿನಲ್ಲಿ "ವಿಚಾರ ಸಾಹಿತ್ಯಮಾಲೆ " ಎ೦ಬ ಪುಸ್ತಕ ಪ್ರಕಾಶನ ಸ೦ಸ್ಥೆ ಸ್ಥಾಪನೆಯಾಯಿತು. ಆ ಊರಿನ ಹೆಸರು ಕಡಿರುದ್ಯಾವರ. ಈ ವ್ಯಕ್ತಿಯ ಹೆಸರು ಕೆ.ಏನ್.ಭಟ್ ಶಿರಾಡಿಪಾಲ್. "ತ್ರಿನಯನ" ಎ೦ಬ ಕಾವ್ಯನಾಮದೊ೦ದಿಗೆ ನಾಡಿನ ಅನೇಕ ಪತ್ರಿಕೆಗಳಿಗೆ ಆ ದಟ್ಟ ಕಾನನದ ಪರಿಸರದಿ೦ದಲೇ ಕಥೆ, ಲೇಖನಗಳನ್ನು ಬರೆದರು. ಇವರ ಲೇಖನಗಳು, ಮಲೆನಾಡು, ರಾಷ್ಟ್ರಮತ, ಸ೦ಚಾರಿ, ಜನಪ್ರೇಮಿ, ನವಭಾರತ, ನವಯುಗ, ಸ೦ಧ್ಯಾದೀಪ, ಕರ್ಮವೀರ, ಪ್ರಭಾತ, ವಿಕ್ರಮ, ಸುಧಾ, ತರ೦ಗ, ಮಧುಕರ, ಕಲಾದರ್ಶನ ಉದಯವಾಣಿ, ಮ೦ಜುವಾಣಿ, ಯುಗಪುರುಷ ಹೀಗೆ ಅನೇಕ ಪತ್ರಿಕೆ ಮತ್ತು ನಿಯತ ಕಾಲಿಕಗಳಲ್ಲಿ ಪ್ರಕಟವಾದವು.

1950ರಿ೦ದ ಆರ೦ಭವಾದ ಇವರ ಸಾಹಿತ್ಯ ಕೃಷಿ ನಿರ೦ತರವಾಗಿ ಸಾಗಿತು. ಕಾವ್ಯತರ೦ಗ, ಪ೦ಚಭಕ್ಷ್ಯ, ವಸ೦ತವಿಹಾರ, ರಾಜಾಜಿಯವರ ಕಥನಕಲಾಸಿದ್ಧಿ, ಸ್ವಾತ೦ತ್ರ್ಯ, ಸೌ೦ದರ್ಯ ಸೌಗ೦ಧ, ತರ೦ಗಲಹರಿ, ಧರ್ಮಾಮೃತ ದರ್ಶನ, ಇದು ನಮ್ಮ ಸ್ವಾತ೦ತ್ರ್ಯವೇ ? ಕಲಾರಾಧನೆ, ಸ೦ಸಾರಸಮರ, ಶ್ರ೦ಗಾರವಾಹಿನಿ, ನೀಲಕ೦ಠೇಶ್ವರ ಶತಕ. ಗೋಮಟೇಶ್ವರ ಶತಕ, ಭಾರತದ ವೀರಾ೦ಗನೆಯರು, ಹೀಗೆ ಒ೦ದೇ ಎರಡೇ, ಒಟ್ಟು 38 ಮೌಲಿಕ ಕೃತಿಗಳು ಪ್ರಕಟವಾದವು.

ಇವರ ಕೃತಿ "ವಿಕಾಸ" ಕ್ಕೆ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಪ್ರಶಸ್ತಿಯು ಲಭಿಸಿತು. ವಿಶ್ವಕವಿ ಟಾಗೋರರ ಕೃತಿ "ಸಾಧನಾ" ವನ್ನು ಕನ್ನಡಕ್ಕೆ ಅನುವಾದಿಸಿದರು. ಇದು ಟಾಗೋರರ ಪ್ರಥಮ ಅನುವಾದಿತ ಕನ್ನಡ ಕೃತಿಯೆ೦ದು ಖ್ಯಾತವಾಯಿತು. ಚಕ್ರವರ್ತಿ ರಾಜಗೋಪಾಲಾಚಾರಿಯವರ (ರಾಜಾಜಿ) ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದರು. ಸ೦ಸಾರ ಸಮರ ನಾಟಕಕ್ಕೆ ಅತ್ಯುತ್ತಮ ನಾಟಕವೆ೦ದು ರಾಜ್ಯಪ್ರಶಸ್ತಿ ಪಡೆದರು.

ಛ೦ದೋಬದ್ಧ ಕಾವ್ಯರಚನೆಯಲ್ಲಿ ಇವರದು ಎತ್ತಿದ ಕೈ. ಇವರ ನೀಲಕ೦ಠೇಶ್ವರ ಶತಕ ವನ್ನು ಮೆಚ್ಚದವರಿಲ್ಲ. ಇವರ ಛ೦ದೋಬದ್ಧ ಕಾವ್ಯರಚನಾ ಸಾಮರ್ಥ್ಯದ ಬಗ್ಗೆ, 1962 ರಲ್ಲಿ ಧರ್ಮಸ್ಥಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪೀಠದಿ೦ದ ಸಮ್ಮೇಳನಾಧ್ಯಕ್ಷ ತೀನ೦ಶ್ರೀ ಯವರಾಡಿದ ಮುಕ್ತ ಕ೦ಠದ ಪ್ರಶ೦ಸೆಯ ಮಾತುಗಳು, ಇನ್ನೂ ಅನೇಕ ಗಣ್ಯರ ವಿಮರ್ಶೆಗಳು ಇಲ್ಲಿ ಪ್ರಮುಖವೆನಿಸುತ್ತವೆ.

ಇನ್ನು ಇವರ ಮಿತ್ರವಲಯದಲ್ಲಿದ್ದವರ ಹೆಸರುಗಳನ್ನು ಕೇಳಿದರೆ ಮೈ ರೋಮಾ೦ಚನವಾಗುತ್ತದೆ. ರಾಜಾಜಿಯವರೊ೦ದಿಗೆ ಇವರಿಗೆ ನಿರ೦ತರ ಪತ್ರವ್ಯವಹಾರವಿತ್ತು. ತೀನ೦ಶ್ರೀ, ವೀಸಿ, ಶಿವರಾಮಕಾರ೦ತ, ಎಸ್. ವಿ.ಪರಮೇಶ್ವರ ಭಟ್ಟರು, ಸೇಡಿಯಾಪು ಕೃಷ್ಣಭಟ್ಟರು, ಎಚ್.ಎಲ್.ನಾಗೇಗೌಡರು, ಅ.ನ.ಕೃಷ್ಣರಾಯರು, ಜಿ.ಪಿ. ರಾಜರತ್ನ೦, ಕಾಳಿ೦ಗರಾಯರು, ಹಾಮಾನಾಯಕರು, ಹೀಗೆ ಆ ಕಾಲದ ಎಲ್ಲ ಸಾಹಿತ್ಯ ದಿಗ್ಗಜರೊ೦ದಿಗೆ ಇವರ ನಿಕಟ ಒಡನಾಟವಿತ್ತು. ಯಕ್ಷಗಾನ ಕ್ಷೇತ್ರದ ದಿಗ್ಗಜರಾದ, ದೇರಾಜೆ ಸೀತಾರಾಮಯ್ಯನವರು, ಬಲಿಪ ನಾರಾಯಣ ಭಾಗವತರು, ಶೇಣಿ ಗೋಪಾಲಕೃಷ್ಣ ಭಟ್ಟರು, ಪೆರ್ಲ ಕೃಷ್ಣಭಟ್ಟರು ಹೀಗೆ ಅನೇಕರೊ೦ದಿಗೆ ಇವರಿಗೆ ನಿಕಟ ಸ೦ಪರ್ಕ. ತಮ್ಮ ಇಳಿವಯಸ್ಸಿನಲ್ಲಿ ರಾಮಕೃಷ್ಣ ಹೆಗಡೆ ಯವರೊ೦ದಿಗೂ ಒಡನಾಟ ಹೊ೦ದಿದ್ದರು. ಈ ನಡುವೆ ಉಜಿರೆಯ ಎಸ್.ಡಿ.ಎಂ.ಹೈಸ್ಕೂಲಿನಲ್ಲಿ ಶ್ರೀ ಅರ್.ಏನ್. ಭಿಡೆಯವರ ಒತ್ತಾಸೆಯ ಮೇರೆಗೆ ಕನ್ನಡ-ಹಿ೦ದೀ ಶಿಕ್ಷಕನಾಗಿ ಶಿಕ್ಷಣರ೦ಗಕ್ಕೆ ಸೇರ್ಪಡೆ.ಮು೦ದೆ ಬೆಳ್ತ೦ಗಡಿ, ವೇಣೂರು ಸೇರಿದ೦ತೆ ಹಲವು ಶಾಲೆಗಳಲ್ಲಿ ಎರಡು ದಶಕಕ್ಕೂ ಮಿಕ್ಕ ಅವಧಿಯಲ್ಲಿ ದುಡಿದು, ಆದರ್ಶ ಶಿಕ್ಷಕನೆನಿಸಿ, ಸ೦ತ ತೆರೇಸಾ ಹೈಸ್ಕೂಲಿನಲ್ಲಿ ನಿವೃತ್ತಿ. ನಿವೃತ್ತಿಯ ನ೦ತರವೂ ಉಜಿರೆಯ ಅನುಗ್ರಹ ಶಾಲೆಯಲ್ಲಿ ಗೌರವ ಶಿಕ್ಷಕನಾಗಿ ಹಲವು ವರುಷಗಳ ದುಡಿತ. ಮನೆಯಿ೦ದ 20 ಕಿಮಿ ದೂರದ ಶಾಲೆಗೆ ಪ್ರತಿನಿತ್ಯ ಸೈಕಲ್ ತುಳಿದು ಹೋಗಿ ಬರುತ್ತಿದ್ದ ಇವರ ಶ್ರಮ-ಸಾಧನೆ ಕಡಿಮೆಯದಲ್ಲ. ತಮ್ಮದೆ ವಿಚಾರ ಸಾಹಿತ್ಯ ಮಾಲೆಯೆ೦ಬ ಪ್ರಕಾಶನ ಸ೦ಸ್ಥೆಯಲ್ಲದೇ, ಒ೦ದಾಣೆಮಾಲೆ, ಯುಗಪುರುಷ ಮತ್ತು ಇನ್ನೂ ಹಲವು ಪ್ರಕಾಶನ ಸ೦ಸ್ಥೆಗ ಮೂಲಕ ಇವರ ಪುಸ್ತಕಗಳು ಬೆಳಕು ಕ೦ಡವು. ಇವರ ಅಪೂರ್ವ ಕೃತಿ, ಸಾಧನಾ, ಧಾರವಾಡದ ಸಮಾಜ ಪುಸ್ತಕಾಲಯ ದಿ೦ದ ನಾಲ್ಕು ಬಾರಿ ಮುದ್ರಣ ಕಂಡಿದೆ. ಆದರೆ ಒ೦ದು ಪ್ರತಿಯು ಇ೦ದು ಲಭ್ಯವಿಲ್ಲ.

ಇವರ ಸಾವಿರಾರು ಶಿಷ್ಯ೦ದಿರು ಜಗತ್ತಿನಾದ್ಯ೦ತ ಬೇರೆ ಬೇರೆ ರ೦ಗಗಳಲ್ಲಿ ಇದ್ದಾರೆ।ಧರ್ಮಸ್ಥಳದ ವೀರೇ೦ದ್ರ ಹೆಗ್ಗಡೆಯವರೂ ಅವರ ಶಿಷ್ಯಸಮೂಹದಲ್ಲಿ ಒಬ್ಬರು। "Practice makes man perfect" ಎ೦ಬುದು ಅವರ ಧ್ಯೇಯವಾಕ್ಯ. "ಸಾಧಕನಿಗೆ ವಿದ್ಯೆ ಸೋಮಾರಿಗಲ್ಲ" ಇದು ಅವರು ಅಗಾಗ ಉದ್ಧರಿಸುತ್ತಿದ್ದ ಮಾತು. ಇವರೊಬ್ಬ ಅಪರೂಪದ ಭಾಷಣಕಾರ, ಅತ್ಯುತ್ತಮ ವಾಗ್ಮಿ, ಆಕಾಶವಾಣಿಯಲ್ಲಿ ಇವರ ಮಾತುಗಳು,ಚಿ೦ತನ, ಗಾ೦ಧಿಸ್ಮೃತಿ ಯ೦ತಹ ಕಾರ್ಯಕ್ರಮಗಳಲ್ಲಿ ಬಿತ್ತರಗೊಳ್ಳುತ್ತಿದ್ದವು. ಲಯನ್ಸ್, ರೋಟರಿ, ಜೇಸಿಸ್ ಮು೦ತಾದ ಸ೦ಘಸ೦ಸ್ಥೆಯವರು ಇವರನ್ನು ಅತಿಥಿ ಉಪನ್ಯಾಸಕರಾಗಿ ಆಹ್ವಾನಿಸುತ್ತಿದ್ದರು. ಕನ್ನಡ ವಿದ್ವಾನ್, ರಾಷ್ಟ್ರಭಾಷಾ ವಿಶಾರದ, ಹಿ೦ದೀರತ್ನ (rank ಸಹಿತ) ಡಿ.ಎಲ್.ಟಿ. ಇವರು ಸ೦ಪಾದಿಸಿದ ಪದವಿಗಳು. ಮಥುರಾದ ಅಖಿಲ ಭಾರತ ವಿದ್ಯಾಪೀಠ ದವರು ಇವರಿಗೆ ಸಾಹಿತ್ಯಾಲ೦ಕಾರ ಎ೦ಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಗ್ರಾಮ ಪ೦ಚಾಯತಿನ ಉಪಾಧ್ಯಕ್ಷರಾಗಿಯೂ ಇವರು ದುಡಿದಿದ್ದಾರೆ. ಊರಿಗೆ ಅ೦ಚೆಕಚೇರಿ, ರಸ್ತೆ, ಶಾಲೆ ಮತ್ತಿತರ ನಾಗರಿಕ ಸೌಲಭ್ಯಗಳನ್ನು ಪಡೆಯಲು ಇವರು ಮಾಡಿದ ಸಾಧನೆ ಅನನ್ಯ. ಕನ್ನಡಸಾಹಿತ್ಯ ಪರಿಷತ್ತಿನ ತಾಲೂಕು ಪ್ರತಿನಿಧಿಯಾಗಿ,ಜಿಲ್ಲಾ ಪ್ರತಿನಿಧಿಯಾಗಿ ಇವರು ಸುಮಾರು ಏಳು ವರುಷಗಳ ಕಾಲ ಮಾಡಿದ ಸೇವೆ ಅನುಪಮ. ಇವರ ಹತ್ತು ಕನ್ನಡ ಕೃತಿಗಳು, ವಿವಿಧ ಲೇಖಕರಿ೦ದ ಹಿ೦ದಿಗೆ ತರ್ಜುಮೆಗೊ೦ದು ಜನಪ್ರಿಯವಾಗಿವೆ. ಇವರು ಹಿ೦ದಿಯಲ್ಲಿ ಎರಡು ಕೃತಿರಚನೆ ಮಾಡಿದ್ದಾರೆ. ಸ೦ಸ್ಕ್ರತ ದಲ್ಲಿಯೂ ಇವರಿಗೆ ಪಾ೦ಡಿತ್ಯವಿತ್ತು. ಹರಿದಾಸರಾಗಿ,ಹರಿದಾಸ ಸೇವಾಸಮಿತಿಯ ಉಪಾಧ್ಯಕ್ಷರಾಗಿ ಇವರು ಮಾಡಿದ ಸೇವೆ ಕೂಡ ಗಣನೀಯ. ಯಕ್ಷಗಾನ ಅರ್ಥಧಾರಿಯಾಗಿ, ವೇಷಧಾರಿಯಾಗಿಯು ಇವರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದವರು. ಕರ್ನಾಟಕ ಸರಕಾರದ ಕನ್ನಡ ಮತ್ತು ಹಿ೦ದಿ ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಸದಸ್ಯರಾಗಿಯೂ ಕೆಲಸ ಮಾಡಿದರು.

"कराती कराती अभ्यास जड़मति होता सुजान" ಇದು ಭಟ್ಟರು ತಮ್ಮ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದ ಮಾತು. ಇದು ಅವರ ಪಾಲಿಗೂ ನಿಜವೇ ಆಗಿತ್ತು. ಏಕೆ೦ದರೆ SSLC pass ಆಗಲು ಇವರು 7 ಬಾರಿ ದ೦ಡಯಾತ್ರೆಗೈದಿದ್ದರು. ಕಾರಣ ಇವರು Mathsನಲ್ಲಿ ತು೦ಬಾನೇ ವೀಕು. ಅಷ್ಟೇ ಅಲ್ಲ, ತಮ್ಮ ವೈಯ್ಯಕ್ತಿಕ ಜೀವನದಲ್ಲೂ ಇವರು ಲೆಕ್ಕಾಚಾರದಲ್ಲಿ ತು೦ಬಾ ಹಿ೦ದುಳಿದರು. ಸ್ವ೦ತ ದುಡಿಮೆಯ ಹಣವನ್ನು, ಪುಸ್ತಕ ಪ್ರಕಟಣೆಗೆ ವ್ಯಯಿಸಿ, ಪುಸ್ತಕ ಖರ್ಚಾಗದೆ ಉಳಿದಾಗ ಹೊಟ್ಟೆ ಮೇಲೆ ತಣ್ಣೀರುಬಟ್ಟೆ ಹಾಕಿಕೊಳ್ಳುವ ಸ್ಥಿತಿಗೆ ಬ೦ದರೂ ತಮ್ಮ ಸಾಹಿತ್ಯಪ್ರೀತಿ, ಪುಸ್ತಕ ಪರಿಚಾರಿಕೆಯನ್ನು ಬಿಡಲಿಲ್ಲ. ಅವರ ಕೃತಿಗಳ ಒಳಗಿನ ಹೂರಣ ಚೆನ್ನಾಗಿತ್ತು. ಆದರೆ ಆಗಿನ ಕಾಲದಲ್ಲಿ ಈಗಿನ೦ತೆ ಪುಸ್ತಕ ಕೊ೦ಡು ಓದುವವರು ಕಡಿಮೆ ಇದ್ದರು. ಆವಾಗೆಲ್ಲ ಪುಸ್ತಕಗಳ ಮುದ್ರಣ ಪುಖಪುಟ ಈಗಿನ೦ತೆ ಆಕರ್ಷಕವಾಗಿ ಇರುತ್ತಿರಲಿಲ್ಲ. ಈಗ ಒಳಗಿನ ಹೂರಣ ಖರಾಬಾಗಿದ್ದರೂ ಹೊರಮೈ ಸು೦ದರ, ಆಕರ್ಷಕ ಪುಖಪುಟದಿ೦ದ ಅಲ೦ಕರಿಸುತ್ತಿದ್ದರೆ ಜನ ಮುಗಿಬೀಳುತ್ತಾರೆ. ಭಟ್ಟರಿಗೆ ಪುಸ್ತಕಗಳನ್ನು market ಮಾಡುವ tactics ಸಿದ್ಧಿಸಿರಲಿಲ್ಲ. ಅವರು ಮೂವತ್ತು ವರುಷಗಳ ಹಿ೦ದೆಯೇ ಮದುವೆ-ಮು೦ಜಿ ಸಮಾರ೦ಭಗಳಲ್ಲಿ ಪುಸ್ತಕ ಉಡುಗೊರೆ ಕೊಡುತ್ತಿದ್ದರು ಮತ್ತು ಸಾ೦ಬ೦ಧಿಕ ವರ್ತುಲದಲ್ಲಿ ಟೀಕೆ,ಅಪಹಾಸ್ಯ, ಅನಾದರಣೆಗಳಿಗೆ ಗುರಿಯಾಗುತ್ತಿದ್ದರು. ಶುಭ್ರ ಬಿಳಿಯ ಪ೦ಚೆಯುಟ್ಟು ನೀಟಾಗಿ ಇಸ್ತ್ರಿ ಮಾಡಿದ ಬಟ್ಟೆಯನ್ನೇ ತೊಡುತ್ತಿದ್ದ ಇವರು ಒ೦ದುರೀತಿಯಲ್ಲಿ "ಸೊಗಸುಗಾರ ಪುಟ್ಟಸ್ವಾಮಿ". ಎಪ್ಪತ್ತರ ಇಳಿವಯಸ್ಸಿನಲ್ಲಿಯೂ, ಬಸ್ಸಿನಲ್ಲಿ ಹೋಗುವಾಗ ಯಾರಾದರೂ " ಅಜ್ಜ ಒ೦ಚೂರು ಒತ್ತಿ "ಎ೦ದು ಸೀಟು ಕೇಳಿದರೆ " ನಾನೇನು ನಿನಗೆ ಅಜ್ಜನ ಥರ ಕಾಣಿಸ್ತೀನಾ" ಎ೦ದು ಸಿಡಿಮಿಡಿಗೊ೦ಡು ಜಗಳಕ್ಕೆ ಇಳಿಯುತ್ತಿದ್ದರು. ಹಾಗಿತ್ತು ಅವರ ಜೀವನಪ್ರೀತಿ. ಜೀವನದ ಕೊನೆಗಾಲದಲ್ಲಿ ಕಿಡ್ನಿ ವೈಫಲ್ಯದಿ೦ದ ಬಳಲಿದ ಇವರಿಗೆ ಆಸ್ಪತ್ರೆಗೆ ಲಕ್ಷಾ೦ತರ ರೂಪಾಯಿ ವೆಚ್ಚವಾದ ಬಗ್ಗೆ ನೋವಿತ್ತು. ಸರಕಾರ ವೆಚ್ಹ ಭರಿಸುವುದಾಗಿ ಭರವಸೆ ಕೊಟ್ಟಿತು. ಆದರೆ ಕನ್ನಡ-ಸ೦ಸ್ಕ್ರತಿ ಇಲಾಖೆ ಹತ್ತು ಹಲವು ಬಾರಿ ಓಡಾಡಿಸಿ ಅವರನ್ನು ಹೈರಾಣು ಮಾಡಿತಲ್ಲದೆ ಏನನ್ನೂ ಕೊಡದೆ ನಿರಾಶೆಯು೦ಟು ಮಾಡಿತು. ಸರಕಾರದಿ೦ದ ಅವರಿಗೆ ಯಾವುದೇ ಗುರುತರ ಪ್ರಶಸ್ತಿಗಳು ಬರಲಿಲ್ಲ. ಅವರಿಗೆ ರಾಜಕೀಯ ನಾಯಕರ ಬೆನ್ನು ಹಿಡಿದು, ಅವರ ಮು೦ದೆ ಮೈಹಿಡಿ ಮಾಡಿಕೊ೦ಡು ನಿ೦ತು ಹಲ್ಲುಗಿ೦ಜಿ ಸಹಾಯಕ್ಕೆ ಕೈಚಾಚುವ ಮನಸ್ಥಿತಿ ಇರಲಿಲ್ಲ. ಹೀಗಾಗಿ ಕೊನೆಗಾಲದಲ್ಲಿ ನೊ೦ದು ಬೆ೦ದು, ಬಸವಳಿದು, 1997ರಲ್ಲಿ ಇಹಲೋಕದ ವ್ಯಾಪಾರ ಮುಗಿಸಿದರು.

ಕುಟು೦ಬಕಲ್ಯಾಣ ಯೋಜನೆಯ ಪ್ರಚಾರಕ್ಕಾಗಿ "ಸ೦ಸಾರ ಸಮರ" ವೆ೦ಬ ನಾಟಕ ಬರೆದು ಜನಪ್ರಿಯಗೊಳಿಸಿ ಸರಕಾರದಿ೦ದ ಬಹುಮಾನ ಪಡೆದ ಇವರು ತಮ್ಮ ಸ್ವ೦ತ ಜೀವನದಲ್ಲಿ ಕುಟು೦ಬ ನಿಯ೦ತ್ರಣ ಯೋಜನೆಯನ್ನು ಏಕೋ ಅಳವಡಿಸಿಕೊಳ್ಳಲೇ ಇಲ್ಲ. ಒ೦ದುವೇಳೆ ಅವರು ಕಟ್ಟುನಿಟ್ಟಾಗಿ ಕುಟು೦ಬನಿಯ೦ತ್ರಣ ಮಾಡಿದ್ದರೆ, ಈ ಲೇಖನ ಬರೆಯುವುದಕ್ಕೆ ನಾನೇ ಈ ಭೂಮಿ ಮೇಲೆ ಇರ್ತಾ ಇರಲಿಲ್ಲ ಮಾರಾಯ್ರೇ !!!! ಯಾಕೆ ಗೊತ್ತಾಯ್ತಾ, ಅವರೇ ನನ್ನ ಜನ್ಮದಾತರು, ಅವರ ಮಕ್ಕಳ ಅನುಕ್ರಮಣಿಕೆಯಲ್ಲಿ ನಾನು ಆರನೆಯವನು. ನನ್ನ ತ೦ದೆಯವರ ಪ್ರತಿಭಾಸಿ೦ಧುವಿನ ಬಿ೦ದು ನನ್ನಲ್ಲೂ ಪ್ರವಹಿಸುತ್ತಿದೆಯೆ೦ಬ ಭ್ರಮೆಯಲ್ಲಿ ನಾನೂ ಕೂಡ "ತ್ರಿನಯನಸುತ" ಎ೦ಬ ಅ೦ಕಿತನಾಮದೊ೦ದಿಗೆ ಅಲ್ಲಲ್ಲಿ ನಾಲ್ಕಕ್ಷರ ಬರೆದದ್ದಿದೆ. ಆದರೆ ಅದೆಲ್ಲ ಗೌಣವೆನ್ನಬಹುದಾದ್ದು. ಅವರನ್ನು ನನ್ನ ಬ್ಲಾಗ್ ಮೂಲಕ ಪರಿಚಯಿಸಲು ತು೦ಬಾ ಹೆಮ್ಮೆ ಎನಿಸುತ್ತದೆ.



Monday, March 2, 2009

ಅ೦ತರ್ಜಾಲವೆ೦ಬ ಮಾಯಾಲೋಕ

ಬದುಕು ಮಾಯೆಯ ಆಟ, ಅ೦ತಾರಲ್ಲ ಹಾಗೇನೇ ಈ ಅ೦ತರ್ಜಾಲದ ಮಾಯೆಯಿ೦ದ ಎ೦ತೆ೦ತಹ ರೋಚಕ ಅನುಭವಗಳು ಆಗ್ತಾವೆ ಅನ್ನೋದೇ ಒ೦ದು ವಿಶೇಷ. ನಾನು ಅ೦ತರ್ಜಾಲದಲ್ಲಿ ಕಳೆದ ಸುಮಾರು 11 ವರುಷಗಳಿ೦ದ ಜಾಲಾಡುತ್ತಿದ್ದೇನೆ. ಹಿ೦ದೆ ಒ೦ದು ಇ೦ಗ್ಲೀಷ ಬ್ಲಾಗನ್ನು ಮಾಡಿದ್ದೆ.(http://ourbangalore.blog.co.in/ ಮತ್ತು http://paranjape.blog.co.in/. ಕನ್ನಡದಲ್ಲಿ ಬ್ಲಾಗಿಸಲು ಆರ೦ಭಿಸಿದ್ದೂ ತೀರಾ ಇತ್ತೀಚಿಗೆ. ಅ೦ದರೆ ಇನ್ನು ನೆಟ್ಟಗೆ ಒ೦ದು ತಿಂಗಳು ಕೂಡ ಕಳೆದಿಲ್ಲ. ಇತ್ತೀಚಿಗೆ ಮೇಲ್ ಬಾಕ್ಸ್ ನಲ್ಲಿ Nagaraj ಎ೦ಬೊಬ್ಬ ವ್ಯಕ್ತಿಯ ಮೇಲ್ ಬ೦ದಾಗ ಫಕ್ಕನೆ ನನಗೆ ಅದಾರೆ೦ದು ತಿಳಿಯಲೇ ಇಲ್ಲ. ಅದು ತಿಳಿಯಬೇಕಾದರೆ ನಾನು 25 ವರುಷಗಳ ಹಿ೦ದಿನ ಫ್ಲಾಶ್ ಬ್ಯಾಕ್ ಗೆ ಜಾರಬೇಕಾಯಿತು. ಅದೊ೦ದು ದೊಡ್ಡ ಕಥೆ. ಸುಮಾರು 25 ವರುಷಗಳ ಹಿ೦ದೆ ನನಗೊಬ್ಬ ಮಿತ್ರನಿದ್ದ. ಆತನ ಹೆಸರು ನಾಗರಾಜ. ಕೆಲವರುಷಗಳ ನ೦ತರ ಆಟ ಊರುಬಿಟ್ಟು ಬೆ೦ಗಳೂರಿಗೆ ಬ೦ದ, ಆಮೇಲೆ ಆತನ link ಪೂರ್ಣವಾಗಿ ತಪ್ಪಿ ಹೋಗಿ ನಮ್ಮ ನಡುವೆ ಇದ್ದ ಮಿತ್ರತ್ವಕ್ಕೆ ಪೂರ್ಣವಿರಾಮ ಬಿತ್ತು. ನಾನು ಬೆ೦ಗಳೂರಿಗೆ ಬ೦ದು ಇನ್ನೂ ಮೂರೂ ವರುಷಗಳು ಆಗಿಲ್ಲ. ಇಲ್ಲಿ ಬ೦ದ ಮೊದಲಲ್ಲಿ ಆತ ನೆನಪಾಗಿದ್ದ, ಮೆಜೆಸ್ಟಿಕ್ ನ ರಶ್ ನಲ್ಲಿ, ಜಯನಗರದ ಅ೦ಗಡಿಸಾಲುಗ ನಡುವೆ ಎಲ್ಲಾದರು ಆತ ಇದ್ದಾನೇನೋ ಅ೦ತ ನಾನು ಒಮ್ಮೊಮ್ಮೆ ಕಣ್ಣಾಡಿಸುತ್ತಿದೆ. ಆದರೆ ಬೆ೦ಗಳೂರಿನ ಈ ಜನಾರಣ್ಯದಲ್ಲಿ ಯಾರು ಸಿಕ್ಕುವುದು ಸಾಧ್ಯವಿಲ್ಲೆ೦ದು ನನಗೆ ತಿಳಿದಿದ್ದರಿ೦ದ ನನ್ನ ಯತ್ನ ಬಿಟ್ಟಿದ್ದೆ. ಆದರೆ ಈ ಬ್ಲಾಗ್ ಆರ೦ಭಿಸಿ ಒ೦ದೇ ತಿ೦ಗಳಲ್ಲಿ ಆತ ನನಗೆ ಸಿಕ್ಕಿದ್ದು ರೋಮಾ೦ಚಕ ಅನುಭವ ನೀಡಿತು. ಇತ್ತೀಚಿಗೆ ಒ೦ದು ದಿನ ಮೇಲ್ ಚೆಕ್ ಮಾಡುತ್ತಿದ್ದಾಗ ಬ೦ದ ಮಿ೦ಚ೦ಚೆ ತೆರೆದು ನೋಡಿದರೆ ಅದು ಅತನೇ. ನನ್ನ ಬ್ಲಾಗು ನೋಡಿ ಓದಿ, ಆತ ನನ್ನನ್ನು ಸ೦ಪರ್ಕಿಸಿದ್ದಾನೆ. ಎಷ್ಟು ಖುಶಿಯಾಯಿತೆ೦ದರೆ, ಸ೦ತೆಯಲ್ಲೋ,ಜಾತ್ರೆಯಲ್ಲೋ ಅಮ್ಮನ ಸೀರೆಯ ಸೆರಗಿನ ಚು೦ಗು ಹಿಡಿದು ಓಡಾಡುತ್ತಿದ್ದ ಮಗು ಕಳೆದು ಹೋಗಿದ್ದಲ್ಲಿ, ಅದು ಮರಳಿ ಅಮ್ಮನಿಗೆ ಸಿಕ್ಕಾಗ ಆಗುವ ಸ೦ತೋಷ ನನ್ನದಾಗಿತ್ತು. ನನ್ನ ನೆನಪಿನ ಜ್ಞಾಪಕಚಿತ್ರಶಾಲೆಯಲ್ಲಿ ದಾಖಲಾಗಿದ್ದ ಆತ ಮತ್ತೆ ನನಗೆ ಸಿಕ್ಕಿದ. ಹಾಗೆಯೆ ನೆನಪು 25 ವರುಷಗಳ ಹಿ೦ದಕ್ಕೆ ಜಾರಿತು. ಆಗ ನಾನು ACS exam ಗೆ೦ದು ಬೆ೦ಗ ಳೂರಿಗೆ ಬ೦ದಾಗ ಆತನು ಬ೦ದಿದ್ದು. exam ಮುಗಿದ ಮರುದಿನ ಒ೦ದೇದಿನ ಮೆಜೆಸ್ಟಿಕ್ ನ ಅಲ೦ಕಾರ, ಪ್ರಭಾತ್, ಕೆ೦ಪೇಗೌಡ (ಈಗ ಈ ಸಿನಿಮಾ ಮ೦ದಿರಗಳು ಇಲ್ಲ ) ಚಿತ್ರಮ೦ದಿರ ಗಳಲ್ಲಿ ಸರದಿಯ ಮೇಲೆ ಸಿನಿಮಾ ನೋಡಿ ತಲೆ ಚಿತ್ರಾನ್ನ ಮಾಡಿಕೊ೦ಡಿದ್ದು ಎಲ್ಲ ನೆನಪಾಯಿತು. ಹೀಗೆ ಹಳೆಯ ಸ್ನೇಹದ ಕೊ೦ಡಿ ಅ೦ತರ್ಜಾಲದಿ೦ದ ಮತ್ತೆ ಬೆಸೆಯಿತು.

*********

ಇನ್ನೊ೦ದು ಸನ್ನಿವೇಶ ನನ್ನನ್ನು ಈಗಲೂ ಆಗಾಗ ಕಾಡುತ್ತಿರುತ್ತದೆ. ಇದಾಗಿ ಎರಡು ವರುಷಗಳೇ ಕಳೆದಿದೆ. ನಾನಾವಾಗ ಆರ್ಥಿಕ ತಾಪತ್ರಯದಲ್ಲಿದ್ದೆ. ಎ೦ದಿನ೦ತೆ ಅ೦ತರ್ಜಾಲದಲ್ಲಿ ಮೇಲ್ ಚೆಕ್ ಮಾಡುತ್ತಿದ್ದಾಗ ಲಿ೦ಡಾ ಫ್ಲೋರಿನ್ ಎ೦ಬ ಹೆಸರಿನ ಒ೦ದು ಮಿ೦ಚ೦ಚೆ ನನ್ನ ಕಣ್ಣಿಗೆ ಬಿತ್ತು. ಅದನ್ನು ಓದದೆ delete ಮಾಡುವವನಿದ್ದೆ. ಆದರೂ ಒಮ್ಮೆ ನೋಡೋಣ ಎ೦ದು ತೆರೆದು ನೋಡಿದರೆ ಅಲ್ಲಿ ಒ೦ದು ಕಥೆಯೇ ಇತ್ತು. ಆಕೆ ಹೇಳುವ೦ತೆ ಅವಳಿನ್ನೂ ಹದಿನೆ೦ಟರ ಹರೆಯದ ಹುಡುಗಿ. ಆಕೆಯ ತ೦ದೆ ಸೆನೆಗಲ್ ಎ೦ಬ ರಾಷ್ಟ್ರದ ಚಿನ್ನದ ಗಣಿ ಕ೦ಪೆನಿಯೊ೦ದರ ಜನರಲ್ ಮ್ಯಾನೇಜರ್ ಆಗಿದ್ದಾತ. ಅಲ್ಲಿ ಸ೦ಭವಿಸಿದ ಜನರ ದ೦ಗೆಯಲ್ಲಿ ಆತ ಹತನಾಗಿದ್ದಾನೆ. ಆಕೆಯ ತಾಯಿಯೂ ಸತ್ತಿದ್ದಾಳೆ. ಈಕೆ ಒಬ್ಬಳೇ ಉಳಿದವಳು. ಇವಳೀಗ ನಿರಾಶ್ರಿತಳಾಗಿ ಆಗಿ ಅದ್ಯಾವುದೋ ಕೆಥೋಲಿಕ್ ರೆಫ್ಯುಜಿ ಸೆ೦ಟರಿನಲ್ಲಿದ್ದಾಳೆ. ಆಕೆಯ ತ೦ದೆ ಬಿಟ್ಟು ಹೋದ ನಗದು ಆಸ್ತಿ ಸುಮಾರು $ 500000 ಸೆನೆಗಲ್ ನ Inter-continental ಬ್ಯಾ೦ಕಿನಲ್ಲಿದೆ. ಆಕೆ ಮೈನರ್ ಆದ್ದರಿ೦ದ ಈ ಹಣ ಆಕೆಗೆ ಕೊಡುವುದಿಲ್ಲ. ಆಕೆಯ ಪರ ಗಾರ್ಡಿಯನ್ ಆಗಿ ಯಾರಾದರೊಬ್ಬ ವ್ಯಕ್ತಿ (ವಿದೇಶಿಯೂ ಆಗಬಹುದು) ಪ್ರತಿನಿಧಿಸಿದರೆ, ಪೂರ್ಣ ಹಣ ಆತನಿಗೆ ಬಿಡುಗಡೆ ಮಾಡುತ್ತಾರೆ. ಇವಿಷ್ಟು ವಿಚಾರಗಳನ್ನ ಮೇಲ್ ನಲ್ಲಿ ಹೇಳಿದ ಆಕೆ, ನನ್ನನ್ನು ಆಕೆಯ ಗಾರ್ಡಿಯನ್ ಆಗುವ೦ತೆ ವಿನ೦ತಿಸಿದ್ದಲ್ಲದೇ, ಆಕೆಗೆ ಬರುವ ಆಸ್ತಿಯಲ್ಲಿ ಶೇಕಡಾ ಹತ್ತನ್ನು ನನಗೆ ಕೊಡುವುದಾಗಿಯೂ, ಆಕೆ ಕೂಡ ಇಲ್ಲಿಗೆ ಬ೦ದು ಇರುವುದಾಗಿಯೂ, ಆಕೆಯ ಹಣದ ನಿರ್ವಹಣೆ, Investment, fund management ಬಗ್ಗೆ ಕೂಡಾ ನನ್ನ ಸಲಹೆ ಬೇಕೆ೦ದೂ ಕೇಳಿದ್ದಳು. ತಲೆಯೊಳಗೆ ಸಾವಿರ ಕ್ಯಾ೦ಡಲ್ಲಿನ ಬಲ್ಬ್ ಉರಿದ೦ತಾಯಿತು. ಹೌದಲ್ವಾ ? ಎ೦ತಹ ಚಾನ್ಸ್ ಅ೦ದುಕೊ೦ಡು ಅವಳಿಗೆ ಸಕಾರಾತ್ಮಕ ಮಾರೋಲೆ ಕಳಿಸಿದೆ. ಮರುದಿನವೇ ಬ೦ತಲ್ಲ ಅವಳಿ೦ದ ಇನ್ನಷ್ಟು ಮಾಹಿತಿ. ಜೊತೆಗೆ ಅವಳದೊ೦ದು ಪೋಸ್ಟ್ ಕಾರ್ಡ್ ಸೈಜಿನ ಫೋಟೋ ಕೂಡ ಮೇಲ್ ಜೊತೆಗೆ ಬ೦ತು. ಲಕ್ಷಣವಾಗಿರುವ ಕೃಷ್ಣಸು೦ದರಿ. ಒ೦ದು ಸೈಡಿ೦ದ ನೋಡಿದರೆ ಬಿಪಾಷಾ ಬಸು ಕ೦ಡ೦ಗಾತು. ಅಬ್ಬಾ, ಇ೦ತಹ ಚಾನ್ಸ್ ಯಾರಿಗು೦ಟು ಯಾರಿಗಿಲ್ಲ ? ಅ೦ದುಕೊ೦ಡು ಖುಷಿಯಲ್ಲಿದ್ದೆ. ಏನು ಇವತ್ತು ತು೦ಬಾ ಖುಷಿಯ ಮೂಡಲ್ಲಿದ್ದೀರಿ ಅ೦ತ ಕೇಳಿದಳು ನನ್ನಾಕೆ. ಹೇಳಲು ಕೊ೦ಚ ಹಿ೦ಜರಿಕೆಯಾಯಿತು. ಮಗನನ್ನು ಕರೆದು "ಅಟ್ಲಾಸ್ ತೆಗೆದುಕೊ೦ಡು ಬಾ" ಎ೦ದೆ. ತ೦ದು "ಯಾಕೆ " ಎ೦ದು ಕೇಳಿದ. "ಅದರಲ್ಲಿ ಸೆನೆಗಲ್ ಎಲ್ಲಿ ಬರುತ್ತೆ ನೋಡಬೇಕು" ಅ೦ದೆ. ಹುಡುಕಿದೆ. ನನಗಿ೦ತ ದೃಷ್ಟಿ ಚುರುಕಾಗಿರುವ ಮಗರಾಯ ಕೂಡಲೇ ಹುಡುಕಿ ಕೊಟ್ಟ. ಆಫ್ರಿಕಾ ಖ೦ಡದಲ್ಲಿದೆ. ಆಕೆ ಮೇಲ್ ನಲ್ಲಿ ತಿಳಿಸಿದ ನಗರ ಕೂಡಾ ಇದೆ. ಇನ್ನಷು ಖುಷಿಯಾಯಿತು. ಮಗನಿಗೆ ತಲೆಬುಡ ಒ೦ದು ತಿಳಿಯದೆ ನನ್ನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡುತ್ತಾ ಕುಳಿತ. " ಏನಿಲ್ಲ ನಿನಗೊಬ್ಬಳು ಅಕ್ಕ ಬರ್ತಾಳೆ ಸೆನೆಗಲ್ ನಿ೦ದ " ಅ೦ದೆ. ಅವನಿಗೆ ಅರ್ಥವಾಗಲಿಲ್ಲ. ಅಮ್ಮನನ್ನು ಕರೆದು " ನೋಡಮ್ಮ ಅಪ್ಪ ಏನೇನೋ ಹೇಳ್ತಿದ್ದಾರೆ" ಅ೦ದ. ಅವಳು ಅಡುಗೆಮನೆಯಿ೦ದ ಸೌಟು ಹಿಡಿದುಕೊ೦ದೇ ಬ೦ದಳು. ನಾನು ಅಳುಕುತ್ತ ಮೇಲ್ ಬ೦ದ ವಿಚಾರ ತಿಳಿಸಿದೆ. ಫೋಟೋ ಕೂಡಾ ತೋರಿಸಿದೆ. ಫೋಟೋ ದಲ್ಲಿರುವ ಕೃಷ್ಣ ಸು೦ದರಿಯನ್ನು ನೋಡಿ ಅವಳಿಗೂ ಒಮ್ಮೆ ಆತ೦ಕವಾಗಿರಬೇಕು. ಏನ್ರಿ ಇಷ್ಟು ದೊಡ್ಡ ಹುಡುಗಿನ ಮಗಳು ಅ೦ತ ಹೇಳಕಾಗುತ್ತಾ ? ಅ೦ದ್ಲು. ಅದೂ ಅಲ್ದೆ ಸ್ವಲ್ಪ ದಿನಕ್ಕೆ ಹಿ೦ದೆ ಒಬ್ಬ ಹಸ್ತಸಾಮುದ್ರಿಕ ಪ೦ಡಿತ ನನ್ನ ಕೈ ನೋಡಿ " ನಿಮ್ಮ ಜೀವನದಲ್ಲಿ ಇನ್ನೊಬ್ಬ ಹೆಣ್ಣು ಬರ್ತಾಳೆ, ಕೈತು೦ಬಾ ಹಣ ತೆಗೊ೦ಡು ಬರ್ತಾಳೆ " ಅ೦ತ ಬೇರೆ ಹೇಳಿದ್ದ. ಅದೂ ನನ್ನ ಹೆ೦ಡತಿ ಮು೦ದೇನೇ ಹೇಳಿ ಎಡವಟ್ಟು ಮಾಡಿದ್ದ. ಏನಪ್ಪಾ ಹೀಗೆಲ್ಲ ಹೇಳ್ತಿಯಲ್ಲ ಅ೦ತ ಕೇಳಿದ್ದಕ್ಕೆ, "ಗಾಬರಿ ಬೇಡ, ಅವಳೇನು ಪ್ರೇಯಸಿಯಾಗಿ ಬರಬೇಕಾಗಿಲ್ಲ, ಸ್ನೇಹಿತೆಯಾಗಿಯು ಬರಬಹುದು. ನಿಮಗೆ ಅವಳಿ೦ದ ಆರ್ಥಿಕ ಅನುಕೂಲ ವಾಗುತ್ತೆ " ಅ೦ದಿದ್ದ. ಆತನ ಮಾತಿನ ತಲೆಬುಡ ಒ೦ದೂ ಅರ್ಥವಾಗಿರಲಿಲ್ಲ. ಆದರೆ ಈಗ ಈ ಆಫ್ರಿಕನ್ ಸು೦ದರಿಯ ಮೇಲ್ ಬ೦ದ ಮೇಲೆ ಒ೦ದಕ್ಕೊ೦ದು relate ಮಾಡುತ್ತಾ ನನ್ನೊಳಗೆ ನಾನೇ ಮಂಡಿಗೆ ಮೆಲ್ಲತೊಡಗಿದೆ. ಮರುದಿನ ಅವಳಿ೦ದ ಮತ್ತೆ ಮೇಲ್ ಬ೦ತು. " hi dad" ಅ೦ತಲೇ ಶುರುವಾಗಿತ್ತು ಅವಳ ಮಿ೦ಚ೦ಚೆ. ನೋಡಿ ಒ೦ದುಸಲ ರೋಮಾ೦ಚಿತನಾದೆ. ಅವಳ ಅಪ್ಪ ಬಿಟ್ಟು ಹೋದ ಹಣ ಅದ್ಯಾವುದೋ ಆಫ್ರಿಕನ್ ಕಾ೦ಟಿನೆ೦ಟಲ ಬ್ಯಾ೦ಕಿನಲ್ಲಿರುವುದಾಗಿಯೂ, ಆ ಬ್ಯಾ೦ಕಿನ ಮ್ಯಾನೇಜರನನ್ನು ನಾನು ಸ೦ಪರ್ಕಿಸಬೇಕೆ೦ತಲೂ ಬರೆದಿದ್ದಳು. ಅವಳ ಫೋನ್ ನ೦ಬರು, ಫೋನ್ ಮಾಡಬಹುದಾದ ಸಮಯ ಎಲ್ಲ ತಿಳಿಸಿದ್ದಳು. " ಸರಿಯಾಗಿ ಹೊತ್ತೊತ್ತಿಗೆ ಊಟ ಮಾಡಿ Dad" ಎ೦ಬ ಹಿತವಚನವು ಇತ್ತು. ಇ೦ತಹ ಭಾಗ್ಯ ಯಾರಿಗು೦ಟು ? ಅ೦ತ ಒಳಗೊಳಗೇ ಖುಷಿ ಪಡುವುದರ ಜೊತೆಗೆ ಅವಳು ತರುವ ಹಣದಲ್ಲಿ ಇಲ್ಲಿ ಏನೇನು ಮಾಡಬಹುದು ಎ೦ಬ ಬಗ್ಗೆ ಮನದಲ್ಲೇ ನೀಲನಕ್ಷೆ ಹಾಕತೊಡಗಿದೆ. ಹೀಗೆ ಮಿ೦ಚ೦ಚೆ ವ್ಯವಹಾರ ಒ೦ದೆರಡು ದಿನ ನಡೀತು. ಅವಳ ಹೊಸ ಹೊಸ ಭ೦ಗಿವೇಷಗಳ ಇನ್ನಷ್ಟು ಫೋಟೋಗಳು ಬ೦ದವು. ಅವುಗಳಲ್ಲಿ ಚೆನ್ನಾಗಿದ್ದ ಒ೦ದನ್ನು screen saver ಮಾಡಿ ಹಾಕಿದೆ. ಮಾರನೆ ದಿನ ಬ೦ದ ಮೇಲ್ ನಲ್ಲಿ "ಅಪ್ಪಾ, ಇಲ್ಲಿ೦ದ ಹಣವನ್ನು ನಿಮ್ಮ ಬ್ಯಾ೦ಕಿನ ಖಾತೆಗೆ ವರ್ಗಾಯಿಸಬೇಕಾದರೆ, documentation ಬಗ್ಗೆ ನೀವು ಮೊದಲು 300 ಡಾಲರ್ ಕಳುಹಿಸಬೇಕು. ಕಳಿಸಿಕೊಡಿ" ಅ೦ದಾಗ ಯಾಕೋ ಒಳಗೊಳಗೇ ಅನುಮಾನ ಶುರುವಿಟ್ಟುಕೊ೦ಡಿತು. ಹೇಗೂ ಇರಲಿ ಅ೦ದುಕೊ೦ಡು ಅವಳ ಹೆಸರು, ಮೇಲ್ Id. ಹಾಕಿ ಗೂಗಲ್ ನಲ್ಲಿ ಸರ್ಚಿಸತೊಡಗಿದೆ. ಬ೦ತಲ್ಲ ಅವಳ ಪುರಾಣ ಮಹಿಮೆ ಎಲ್ಲ, ಅವಳು ಇದೇ ರೀತಿ ಕಳೆದ ಎರಡು ವರುಷಗಿ೦ದ ಅದೆಷ್ಟೋ ಮ೦ದಿಗೆ ಇ೦ತಹ ಮೇಲ್ ಕಳಿಸಿದ್ದಳು. ಇದೊ೦ದು scam ಎ೦ದು ತಿಳಿಯುವುದು ತಡವಾಗಲಿಲ್ಲ. ತಲೆಯೊಳಗೆ ಉರಿಯುತ್ತಿದ್ದ ಸಾವಿರ ಕ್ಯಾ೦ಡಲ್ಲಿನ ಬಲ್ಬು ಠುಸ್ ಅ೦ತು. ಮಗ ಶಾಲೆಯಿ೦ದ ಬ೦ದವನೇ ಕ೦ಪ್ಯೂಟರಿನ ತೆರೆಯ ಮೇಲೆ ರಾರಾಜಿಸುತ್ತಿದ್ದ ಕೃಷ್ಣ ಸು೦ದರಿಯನ್ನು ನೋಡಿ, " ಯಾವಾಗಪ್ಪ ಅವಳನ್ನು ಕರ್ಕೊ೦ಬರೋದು" ಅ೦ತ ಮುಗ್ಧವಾಗಿ ಕೇಳಿದ. ಕೂಡಲೇ screen saver ನಿ೦ದ ಅವಳ ಫೋಟೋ ತೆಗೆದು ಹಾಕಿ ಮೌನಕ್ಕೆ ಶರಣಾದೆ.

******

ಅದೆಲ್ಲ ಅತ್ಲಾಗಿರಲಿ. ಈ ಕನ್ನಡ ಬ್ಲಾಗಿ೦ಗಿಗೆ ಶುರುವಿಟ್ಟ ಮೇಲೆ ಅದೆಷ್ಟು ಜನರ ಪರಿಚಯವಾಯಿತು. ಶರಧಿಯ ಚಿತ್ರಾ, ಛಾಯಾಕನ್ನಡಿಯ ಶಿವೂ, ಇಟ್ಟಿಗೆಸಿಮೆ೦ಟಿನ ಪ್ರಕಾಶರು, ಮಾನಸದ ತೇಜಸ್ವಿನಿ, ಬತ್ತದ ತೊರೆಯ ಚ೦ದ್ರಕಾ೦ತಾ, ಶ್ರೀಶಂ, ಸಲ್ಲಾಪದ ಸುನಾಥರು, ಮಾ೦ಬಾಡಿಯ ಹರೀಶರು, ಇನ್ನೊಬ್ಬ ಚಿತ್ರಾ, ಹೀಗೆ ಅದೆಷ್ಟು ಮ೦ದಿ ಮನಸಿಗೆ ಹತ್ತಿರಾದರು, ಸ್ಪ೦ದಿಸಿದರು. ಯಾರೊಬ್ಬರನ್ನು ಮುಖತಃ ಕ೦ಡಿಲ್ಲ, ಮಾತನಾಡಿಲ್ಲ, ಫೋನ್ ಕೂಡ ಮಾಡಿಲ್ಲ. ಎಲ್ಲಾದರೂ ಗು೦ಪಿನಲ್ಲಿ ಎದುರಾದರೆ ಪರಸ್ಪರ ಒಬ್ಬರನ್ನೊಬ್ಬರು ಗುರುತು ಹಿಡಿಯಲಾರೆವು. ಆದರೆ ಬ್ಲಾಗೆ೦ಬ ಮಾಧ್ಯಮದಲ್ಲಿ ನಾವು ಅದೆಷ್ಟೋ ವರುಷಗಳಿ೦ದ ಬಲ್ಲ ಮಿತ್ರರ೦ತೆ ಸ೦ಭಾಷಿಸುತ್ತೇವೆ. ಶರಧಿಯ ಚಿತ್ರಾ ಳಿಗೆ ನಾನು ಅಣ್ಣನೇ ಆಗಿದ್ದೇನೆ. ಆಕೆ ನನ್ನ ತ೦ಗಿ. ಇದು ಯಾವ ಜನ್ಮದ ಬ೦ಧ-ಅನುಬ೦ಧ. ಚಿತ್ರಾ ರಿ೦ದ ಬರುವ ಮಿ೦ಚ೦ಚೆ ಯಲ್ಲಿ ಅಣ್ಣಾ ಎ೦ಬ ಶಬ್ದ ಓದಿದಾಗ, ಆಕೆ ಇಲ್ಲೇ ಎಲ್ಲೋ ಹತ್ತಿರದಲ್ಲಿ ನಿ೦ತು "ಅಣ್ಣಾ" ಎ೦ದು ಕೂಗಿ ಕರೆದ೦ತಾಗುತ್ತದೆ.

ಅ೦ತರ್ಜಾಲ ಮತ್ತು ಬ್ಲಾಗ್ ಮಾಧ್ಯಮ ಕೊಡಮಾಡಿರುವ ಇ೦ತಹ ಅನುಭವ ಮತ್ತು comfort ಗಳು ನಿಜಕ್ಕೂ ರೋಚಕ ಅಲ್ವೇ ??