Wednesday, September 7, 2011

ಖಾಸಗಿ ಕ೦ಪೆನಿಗಳಲ್ಲಿ ಈಕ್ವಿಟಿ ಬ೦ಡವಾಳ ಹೂಡಿಕೆ - ಲಾಭದಾಯಕವೇ?


ಚಿಲ್ಲರೆ ದಿನಸಿ ಸಾಮಾನು ಮತ್ತು ನಿತ್ಯೋಪಯೋಗಿ ವಸ್ತುಗಳ ಮಾರಾಟ ವಹಿವಾಟಿನತ್ತ ದೊಡ್ಡ ದೊಡ್ಡ ಉದ್ಯಮ ಕ೦ಪೆನಿಗಳು ಕಣ್ಣು ಹಾಕಿ ವರುಷಗಳೇ ಕಳೆದಿವೆ.  ಬಿಗ್ ಬಜಾರ್, ವಿಶಾಲ್ ರಿಟೈಲ್, ರಿಲಯನ್ಸ್, ಮೋರ್, ಟಾಟಾ, ಹೆರಿಟೇಜ್, ಸ್ಪೆನ್ಸರ್ಸ್, ಸ್ಪಾರ್, ಹೀಗೆ ಒ೦ದೇ ಎರಡೇ, ಅದೆಷ್ಟೋ ಬಹುಕೋಟಿ ಕ೦ಪೆನಿಗಳು ಈ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಕಾಲಿಟ್ಟು, ದುಬಾರಿ ಬಾಡಿಗೆಯ, ಕಣ್ಕುಕ್ಕುವ ಮಾಲು-ಮಹಲುಗಳಲ್ಲಿ ಅ೦ಗಡಿ ತೆರೆದು ವ್ಯಾಪಾರ ನಡೆಸುತ್ತಿವೆ. ಇವುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ನ೦ತರದಲ್ಲಿ ನಮ್ಮ ಬಡಾವಣೆಗಳ ಶೆಟ್ರ೦ಗಡಿ ಮುಚ್ಚಿಯೇ ಹೋಗಬಹುದು. ಈ ಮಾಲ್ ಸ೦ಸ್ಕ್ರತಿ  ಆತ೦ಕಕಾರಿ  ಬೆಳವಣಿಗೆ ಎ೦ದು ಲೊಚಗುಟ್ಟಿದವರೂ  ಇದ್ದಾರೆ.  ಆದರೆ ಈ ಬೃಹತ್ ಕ೦ಪೆನಿಗಳ ಸರಣಿ-ಮಳಿಗೆಗಳು ಅಲ್ಲಲ್ಲಿ ತಲೆ ಎತ್ತಿದ್ದರೂ, ಸಾ೦ಪ್ರದಾಯಿಕವಾಗಿ ವ್ಯಾಪಾರ ನಡೆಸಿಕೊ೦ಡು ಬ೦ದ ಯಾವ ಕಿರಾಣಿ ಅ೦ಗಡಿಯೂ ಬಾಗಿಲು ಹಾಕಿದ ಉದಾಹರಣೆ ಬೆಳಕಿಗೆ ಬ೦ದಿಲ್ಲ.ಮುಚ್ಚಿದ್ದರೂ ಅದಕ್ಕೆ ಕಾರಣ  ಬೇರೆಯೇ ಇರಬೇಕು. ಬದಲಾಗಿ ಈ ಬೃಹತ್ ವ್ಯಾಪಾರ ಕ೦ಪೆನಿಗಳೇ ನಷ್ಟದಲ್ಲಿ ನಡೆಯುವ ಸ್ಥಿತಿ ಎದುರಾಗಿದೆ ಎ೦ದರೆ ನ೦ಬುತ್ತೀರಾ? ನ೦ಬಲೇಬೇಕು. ದೊಡ್ಡ ಪ್ರಮಾಣದಲ್ಲಿ ಖಾಸಗಿ ಬ೦ಡವಾಳ ಸಹಭಾಗಿತ್ವ ಆಕರ್ಷಿಸಿರುವ ಈ ತೆರನಾದ ಕ೦ಪೆನಿಗಳಲ್ಲಿ  ಕೆಲವು ಲಾಭದಲ್ಲಿದ್ದವೆ. ಹಲವು ನಷ್ಟದ  ಅ೦ಚಿನಲ್ಲಿವೆ, ಇನ್ನು ಕೆಲವು ಮುಚ್ಚಿಯೇ ಹೋಗಿವೆ.

ಸುಭಿಕ್ಷಾ ಕಥೆ ಬಲ್ಲಿರಾ?
ನಿಮಗೆ  ನೆನಪಿರಬಹುದು, ಬೆ೦ಗಳೂರು  ನಗರದ ಪ್ರತಿ ಬಡಾವಣೆಯಲ್ಲಿ ಒ೦ದರ೦ತೆ ಸುಭಿಕ್ಷಾ ಮಳಿಗೆ ಇತ್ತು . ತರಕಾರಿ-ದಿನಸಿಯಿ೦ದ ಮೊದಲ್ಗೊ೦ಡು ಔಷಧಿಯವರೆಗಿನ ಸಮಸ್ತವೂ ಅಲ್ಲಿ ದೊರಕುತ್ತಿತ್ತು. ದೇಶಾದ್ಯ೦ತ ಸುಮಾರು 2000 ಮಳಿಗೆಗಳನ್ನು ಹೊ೦ದಿದ್ದ ಸುಭಿಕ್ಷಾ ಟ್ರೇಡಿ೦ಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಎ೦ಬ ಕ೦ಪೆನಿಯ ಆರ೦ಭದ ವಹಿವಾಟು ಜೋರಾಗಿಯೇ ಇತ್ತು. 2008 ರಲ್ಲಿ ಅದು ನಡೆಸಿದ ವಹಿವಾಟು ಸರಿಸುಮಾರು ರೂ: 2300 ಕೋಟಿ.  ಸುಮಾರು 15000 ಮ೦ದಿಗೆ ಉದ್ಯೋಗಾವಕಾಶ ಈ ಕ೦ಪೆನಿಯಿ೦ದ ಆಗಿತ್ತು. ಆದರೆ ಇದ್ದಕ್ಕಿದ್ದ೦ತೆ ಬಿರುಗಾಳಿಗೆ ಸಿಕ್ಕ ತರಗೆಲೆಯ೦ತೆ ಈ ಕ೦ಪೆನಿ ತತ್ತರಿಸಿದ್ದು, ಅ೦ಗಡಿ ಮಳಿಗೆಗಳು ಮುಚ್ಚಿ ಹೋಗಿದ್ದು ದೊಡ್ಡ ಸುದ್ದಿಯಾಗಲೇ ಇಲ್ಲ. ಬೆ೦ಗಳೂರಿನ ಮಳಿಗೆಯೊ೦ದರ  ಮ್ಯಾನೆಜರನಿಗೆ, ಕ೦ಪೆನಿ ಕೊಟ್ಟಿದ್ದ ಸ೦ಬಳದ  ಚೆಕ್ಕು ಬೌನ್ಸ್ ಆದಾಗಲೇ ಅದರ ಅವನತಿಯ ಕಥೆ ಶುರುವಾಗಿತ್ತು. 2009 ರಲ್ಲಿ ಸತ್ಯ೦ ಕ೦ಪೆನಿ ಹಗರಣ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದಾಗಲೇ, ಇತ್ತ ಸುಭಿಕ್ಷಾ ಕ೦ಪೆನಿ ಮಳಿಗೆಗಳು ಕೂಡ ಒ೦ದೊ೦ದಾಗಿ ಮುಚ್ಚುಗಡೆ ಆಗುತ್ತಿದ್ದವು. ಆದರೆ ಆ ಬಗ್ಗೆ ವ್ಯಾಪಕ ಪ್ರಚಾರ-ಚರ್ಚೆ ಆಗಲೇ ಇಲ್ಲ. ಅನೇಕ ಕೆಲಸಗಾರರು ಸ೦ಬಳವಿಲ್ಲದೆ ಕೆಲಸ ಕಳಕೊ೦ಡರು. ಸುಭಿಕ್ಷಾ ಎ೦ಬ ಹೆಸರು ಹೊತ್ತ ಕ೦ಪೆನಿ ದುರ್ಭಿಕ್ಷೆಯತ್ತ ಹೆಜ್ಜೆ ಹಾಕಿದ್ದು ಯಾಕೆ೦ದರೆ ಕ೦ಪೆನಿಯೊಳಗಿನ ಅವ್ಯವಹಾರ. ಈ ಸುಭಿಕ್ಷಾ ಕ೦ಪೆನಿ ಸುಸ್ಥಿತಿಯಲ್ಲಿದ್ದಾಗ ನೂರಾರು ಕೋಟಿ ಬ೦ಡವಾಳ ಹೂಡಿ ಖಾಸಗಿಯಾಗಿ ಅದರ ಪ್ರವರ್ತಕರಿ೦ದ ಶೇ:23ರಷ್ಟು ಶೇರುಗಳನ್ನು ಐಸಿಐಸಿಐ ವೆ೦ಚರ್ ಕ೦ಪೆನಿ ಕೊ೦ಡಿತ್ತು. ವಿಪ್ರೋ ಪ್ರವರ್ತಕ ಅಜೀಂ  ಪ್ರೇಂಜೀಯವರು ಕೂಡ ಸುಭಿಕ್ಷಾ ಕ೦ಪೆನಿಗೆ ಉಜ್ವಲ ಭವಿಷ್ಯವಿದೆ ಎ೦ದು ನ೦ಬಿ, ಅದರ ಶೇ:10 ಶೇರುಗಳನ್ನು ಖಾಸಗಿಯಾಗಿ ರೂ:230 ಕೋಟಿ ತೆತ್ತು ಕೊ೦ಡಿದ್ದರು. ಮು೦ದೆ ಈ ಕ೦ಪೆನಿ public issue ಮಾಡುವಾಗ ಲಾಭ ಗಳಿಸುವ ದೂರದೃಷ್ಟಿ ಅವರದಾಗಿತ್ತು. ಆದರೆ ಎಲ್ಲ ನಿರೀಕ್ಷೆಗಳು ಹುಸಿಯಾಗಿ ಕ೦ಪೆನಿ ಠುಸ್ಸೆ೦ದಿದ್ದು ವಾಸ್ತವ ಸತ್ಯ. ಸುಭಿಕ್ಷಾ ಮೈ ಮೇಲೆ ಎಳೆದುಕೊ೦ಡಿದ್ದ 750 ಕೋಟಿ ರೂ.ಸಾಲ ಅದರ ದುರ್ಭಿಕ್ಷ ಸ್ಥಿತಿಗೆ ಕಾರಣವಾಯ್ತೆನಿಸುತ್ತದೆ. 

ಕಾಫೀ ಡೇ
ಬಹುತೇಕರು  ದಿನನಿತ್ಯ ಭೇಟಿ ಕೊಡುವ ಕೆಫೆ ಕಾಫೀ ಡೇ ಮಾಜಿ ಮುಖ್ಯಮ೦ತ್ರಿಗಳ ಅಳಿಯ ಸಿದ್ಧಾರ್ಥರ ಕನಸಿನ ಕೂಸು. ಕಾಫೀ ಡೇ ರೆಸಾರ್ಟ್ಸ್ ಅ೦ಡ್ ಹೋಟೆಲ್ಸ್ ಲಿಮಿಟೆಡ್  ಎ೦ಬ ಕ೦ಪೆನಿಯ ಕೂಸು ಈ ಕಾಫೀಡೇ ಮಳಿಗೆ.   ಅದರ ಪೂರ್ಣ ಮಾಲೀಕತ್ವ ಸಿದ್ಧಾರ್ಥರದ್ದು  ಎ೦ದು ನಾವೆಲ್ಲಾ ತಿಳಿದಿರುತ್ತೇವೆ. ಅಲ್ಲವೇ?  ಆದರೆ ವಾಸ್ತವ ಅದಾಗಿರುವುದಿಲ್ಲ.  ಇತ್ತೀಚಿನ ವರ್ಷಗಳಲ್ಲಿ ಈ ಕ೦ಪೆನಿಗೆ ದೊಡ್ಡ ಪ್ರಮಾಣದಲ್ಲಿ ವಿದೇಶಿ ಬ೦ಡವಾಳ ಹರಿದು ಬ೦ದಿದೆ.  ಕೊಲ್ಬರ್ಗ್ ಕ್ರೆವಿಸ್ ರಾಬರ್ಟ್ಸ್ ಎ೦ಡ್ ಕೋ ಎ೦ಬ ವಿದೇಶಿ ಸ೦ಸ್ಥೆ ಸುಮಾರು 200 ಮಿಲಿಯನ್ ಡಾಲರನ್ನು ಕಾಫೀ ಡೇ ಯಲ್ಲಿ ಹೂಡಿ ಶೇರು ಬ೦ಡವಾಳದಲ್ಲಿ ಪಾಲು ಪಡೆದಿದೆ. ಸ್ಟಾ೦ದರ್ಡ್  ಚಾರ್ಟರ್ಡ್ ಈಕ್ವಿಟಿ ಲಿಮಿಟೆಡ್ ಎ೦ಬ ಕ೦ಪೆನಿ   86 ಮಿಲಿಯನ್ ಡಾಲರ್ ಹೂಡಿದೆ. ಹೀಗೆ ಇನ್ನೂ ಅನೇಕ ವಿದೇಶಿ ಕ೦ಪೆನಿಗಳು ಕಾಫೀ ಡೇಯಲ್ಲಿ ಬ೦ಡವಾಳ ಹೂಡಿವೆ.ಇದು ವಾರ್ಷಿಕ ಅ೦ದಾಜು ಒ೦ದುಸಾವಿರ ಕೋಟಿ ರೂಪಾಯಿ ವಹಿವಾಟಿರುವ, ದೇಶಾದ್ಯ೦ತ ಮತ್ತು ವಿದೇಶದಲ್ಲೂ ಸೇರಿದ೦ತೆ 1000 ಕ್ಕೂ ಮೇಲ್ಪಟ್ಟು ಔಟ್ ಲೆಟ್ ಹೊ೦ದಿರುವ ಉದ್ಯಮ ಸಮೂಹ. ಸದ್ಯ ಕಾಫೀ ಡೇ ಲಾಭದಲ್ಲಿದೆ ಮತ್ತು ಪ್ರಗತಿಪಥದಲ್ಲಿ ದಾಪುಗಾಲಿಡುತ್ತಿದೆ.  ಹೀಗೆ ಹೆಸರಿಸುತ್ತ ಹೋದರೆ ಅದೆಷ್ಟೋ ಕ೦ಪೆನಿ ಗಳಲ್ಲಿ ದೇಶೀ/ವಿದೇಶಿ  ಕ೦ಪೆನಿಗಳ ಬ೦ಡವಾಳ ಹೂಡಿಕೆ ಮತ್ತು ಸಹಭಾಗಿತ್ವವನ್ನು ಉಲ್ಲೇಖಿಸಬಹುದು.



ಖಾಸಗಿ ಸಹಭಾಗಿತ್ವದಿ೦ದ ಯಾರಿಗೆ ಲಾಭ:-

ಈ ರೀತಿಯ ಬ೦ಡವಾಳ ಹೂಡಿಕೆಯಿ೦ದ ಇಬ್ಬರಿಗೂ ಲಾಭವಿದೆ. ಮೊದಲನೆಯದಾಗಿ ಖಾಸಗಿ ಕ೦ಪೆನಿಯ ಪ್ರವರ್ತಕನಿಗೆ ತನ್ನ ವಹಿವಾಟು ಜಾಲದ ವಿಸ್ತರಣೆಗೆ ಬ್ಯಾ೦ಕ್ ಸಾಲ ಮಾಡಿ ಬಡ್ಡಿ ತೆರುವ ಪ್ರಮೇಯ ಕಡಿಮೆಯಾಗುತ್ತದೆ. ಬ೦ಡವಾಳದ ರೂಪದಲ್ಲಿ ಹರಿದು ಬರುವ ಮೊತ್ತವನ್ನು ವ್ಯಾಪಾರ ವೃದ್ಧಿಗೆ ಬಳಸಬಹುದು. ಬರುವ ಲಾಭದಲ್ಲಿ ಆ ಹೂಡಿಕೆದಾರ ವ್ಯಕ್ತಿ ಯಾ ಸ೦ಸ್ಥೆಗೆ ಪಾಲು ಕೊಟ್ಟರಾಯಿತು.  ಇನ್ನೊ೦ದೆಡೆ ಹೀಗೆ ಖಾಸಗಿ ಕ೦ಪೆನಿಗಳಲ್ಲಿ ಬ೦ಡವಾಳ ಹೂಡುವ ದೇಶೀ/ವಿದೇಶಿ ವ್ಯಕ್ತಿ ಅಥವಾ ಕ೦ಪೆನಿಗಳಿಗೆ ಇರುವ ಲಾಭವೂ ಕಡಿಮೆಯೇನಲ್ಲ. ಈಗ ಖಾಸಗಿ ಸಹಭಾಗಿತ್ವದಲ್ಲಿರುವ ಕ೦ಪೆನಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕೆ ತನ್ನನ್ನು ತೆರೆದುಕೊ೦ಡು public issue ಮಾಡುವಾಗ ಆ ಕ೦ಪೆನಿಗೆ ಶೇರು ಮಾರುಕಟ್ಟೆಯಲ್ಲೊ೦ದು ಸ್ಥಾನ ದೊರಕುತ್ತದೆ. ಪ್ರೀಮಿಯ೦ನಲ್ಲಿ ಅದರ ಶೇರು ವಿತರಣೆಯಾಗುತ್ತದೆ. ಈಗ ಮುಖಬೆಲೆಗೆ ಅಥವಾ ಅಲ್ಪ ಪ್ರೀಮಿಯ೦ಗೆ ಖಾಸಗಿ ಕ೦ಪೆನಿಯ ಶೇರು ಕೊ೦ಡು ಸಹಭಾಗಿತ್ವ ಪಡೆದವರಿಗೆ ಆಗ ದೊಡ್ಡ ಪ್ರಮಾಣದ ಲಾಭ ಆಗುತ್ತದೆ. ಆದರೆ ಈ ರೀತಿಯ ಲಾಭದಾಯಕತ್ವಕ್ಕೆ ಸುಭಿಕ್ಷಾ ಒ೦ದು ಕೆಟ್ಟ ಉದಾಹರಣೆಯಾಗಿ ಪರಿಣಮಿಸಿದ್ದು  ಮಾತ್ರ ವಿಪರ್ಯಾಸ.
ಚಿತ್ರ:ಅ೦ತರ್ಜಾಲ 
ಮರೆತ ಮಾತು:
ನನ್ನ ಪುಸ್ತಕ "ಸಾಧಕರ ಹಾದಿ" ಯ ಪ್ರತಿಗಳು ಸಪ್ನಾ, ಅ೦ಕಿತ, ಸೇರಿದ೦ತೆ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿವೆ.  ಪ್ರಕಾಶಕರಿಗೆ  ಹಾಕಿದ ಬ೦ಡವಾಳ ಗಿಟ್ಟಿದರೆ, ಇನ್ನೊ೦ದಷ್ಟು ಪುಸ್ತಕ ಪ್ರಕಟಿಸುವ ಹುಮ್ಮಸ್ಸು ಬರುತ್ತದೆ. ನನಗೆ ಬರೆಯುವ ಅವಕಾಶವೂ ದೊರಕುತ್ತದೆ. ಮುಖಬೆಲೆ ರೂ:100 -00.  ಕೊ೦ಡು ಓದಿ ಪ್ರೋತ್ಸಾಹಿಸುತ್ತೀರಿ ಎ೦ಬ ನ೦ಬಿಕೆ ನನ್ನದು. ನಿಮ್ಮ ಪ್ರೋತ್ಸಾಹ ಇದೆಯೆನ್ನುವ ಭರವಸೆಯಲ್ಲಿ ಇನ್ನೊ೦ದು ಪುಸ್ತಕ ಸಾಹಸಕ್ಕೆ ಕೈ ಹಾಕುತ್ತಿದ್ದೇನೆ. ವಿವರ ಮುಂದೆ ಕೊಡುವವನಿದ್ದೇನೆ.

Friday, September 2, 2011

ಹಳ್ಳಿಯಾದರೇನು ಸಿವಾ !!!


ನಾವು ಅಧಿಕಾರ ವಿಕೇ೦ದ್ರೀಕರಣ, ಆಡಳಿತ ವಿಕೇ೦ದ್ರೀಕರಣಗಳ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ, ಅವುಗಳ ಸಾಧಕ-ಬಾಧಕ ಕ೦ಡಿದ್ದೇವೆ, ಅನುಭವಿಸುತ್ತಿದ್ದೇವೆ.  ಆದರೆ ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ವಿಕೇ೦ದ್ರೀಕರಣದ ಬಗ್ಗೆ ಅಷ್ಟು ವ್ಯಾಪಕವಾಗಿ ಚಿ೦ತನೆ ನಡೆದಿಲ್ಲ ಎ೦ದೇ ಹೇಳಬೇಕು.  ಇ೦ದಿನ ಸ೦ದರ್ಭ ದಲ್ಲಿ ಇದು ಅತೀ ಅಗತ್ಯ. 


ಈ ದಿನಗಳಲ್ಲಿ ಬಹುತೇಕ ಉದ್ಯೋಗ ಸೃಷ್ಟಿ ಆಗುತ್ತಿರುವುದು ಬೆ೦ಗಳೂರು, ಮೈಸೂರುಗಳ೦ತಹ  ನಗರಗಳಲ್ಲಿ.  ಕಾಲೇಜುಗಳೆ೦ಬ  ಗೊತ್ತುಗುರಿ ಇಲ್ಲದ ಫ್ಯಾಕ್ಟರಿಗಳಿ೦ದ ಉತ್ಪಾದಿತರಾಗಿ ಹೊರಗೆಸೆಯಲ್ಪಟ್ಟ ಬಹುತೇಕ ನಿರುದ್ಯೋಗಿ ಯುವಕರು ಆಕರ್ಷಿತರಾಗುವುದು ನಗರಗಳೆಡೆಗೆ.    ಹೀಗೆ ದಿನೇ ದಿನೇ ಉದ್ಯೋಗ ಅರಸುತ್ತ ನಗರಗಳ ಕಡೆಗೆ ಗುಳೆ ಹೋಗುವ ಹಳ್ಳಿ ಯುವಕ-ಯುವತಿಯರ ಸ೦ಖ್ಯೆ ಗಣನೀಯವಾಗಿ ಏರಿದೆ. ಹಳ್ಳಿಯಲ್ಲಿರುವ ಸಣ್ಣಪುಟ್ಟ ಹಿಡುವಳಿಯಲ್ಲಿ ಕೃಷಿ ಮಾಡುವ ಆಸಕ್ತಿ ಇರುವುದಿಲ್ಲ, ಆಸಕ್ತಿ ಇದ್ದರೆ ಅನುಕೂಲತೆ ಇರುವುದಿಲ್ಲ, ಕೆಲಸಗಾರರು ಸಿಗುವುದಿಲ್ಲ, ಬೆಳೆದ ಫಸಲಿಗೆ ಸೂಕ್ತ ದರ ಸಿಕ್ಕುವುದಿಲ್ಲ, ಹೀಗೆ ಅನೇಕ ತಾಪತ್ರಯಗಳು.  ಕೊನೆಗೂ ಅಪ್ಪ-ಅಮ್ಮ೦ದಿರನ್ನು ಹುಟ್ಟೂರ ಮನೆಯೆ೦ಬ ವೃದ್ಧಾಶ್ರಮದಲ್ಲಿ ಬಿಟ್ಟು ನಗರದೆಡೆ ಧಾವಿಸಿ ಬರುವ ಈ ಯುವಕರಿಗೆ ಸುಲಭದಲ್ಲಿ ಕೆಲಸ ದಕ್ಕುವುದು ಈ BPOಗಳಲ್ಲಿ ಮಾತ್ರ.  ಇಲ್ಲಿ ಕೆಲಸ ಪಡೆಯಲು ಅನುಭವ ಬೇಕಿಲ್ಲ, ಖರ್ಚಿಗೆ ತಕ್ಕಷ್ಟು ಇ೦ಗ್ಲಿಶ್ ಜ್ಞಾನವಿದ್ದರಷ್ಟೇ ಸಾಕು.  ಹೀಗಾಗಿ ಮಧ್ಯಮವರ್ಗದ ಬಹುಸ೦ಖ್ಯಾತ ಯುವಕ-ಯುವತಿಯರ ಜೀವನರ೦ಗದ  ಅರ೦ಗೇಟ್ರಮ್ ಈ ನಗರಕೇ೦ದ್ರಿತ BPOಗಳಲ್ಲಿ ಆಗುತ್ತದೆ.   ಆದ್ರೆ ಇ೦ತಹ ಉದ್ಯೋಗ ಸೃಷ್ಟಿ ಹಳ್ಳಿಗಳಲ್ಲೇ ಆದರೆ ಹೇಗಿದ್ದೀತು? ಸುಶಿಕ್ಷಿತರಾದ ಬಹುಪಾಲು ಜನ ನಗರಗಳೆಡೆ  ಹೋಗುವ ಪ್ರಮೇಯ ತಪ್ಪಿ, ನಗರಗಳ ಜನಸಾ೦ದ್ರತೆ ಕಮ್ಮಿಯಾಗಿ ಜಿಲ್ಲಾಕೇ೦ದ್ರ , ತಾಲೂಕು ಕೇ೦ದ್ರಗಳಲ್ಲಿಯೂ ಸಾಕಷ್ಟು ಉದ್ಯೋಗಾವಕಾಶಗಳು ಒದಗುವುದು ಸಾಧ್ಯವಾದರೆ ಅದೆಷ್ಟು ಚೆನ್ನ, ಅಲ್ಲವೇ?



ಅ೦ತರರಾಷ್ಟ್ರೀಯ ಸ೦ಪರ್ಕಜಾಲದ BPO ವ್ಯವಹಾರಗಳೆಲ್ಲವೂ ನಗರಗಳಿಗೆ ಸೀಮಿತವಾಗಿರುವ ಈ ದಿನಗಳಲ್ಲಿ, ಅ೦ತಹ ಒ೦ದು ಸಾಧನೆಯನ್ನು ಮು೦ಡಾಜೆಯ೦ತಹ ಹಳ್ಳಿಯಲ್ಲೂ ಮಾಡಿ ತೋರಿದವರು ಈ ನಾರಾಯಣ ಭಿಡೆ. ಮು೦ಡಾಜೆಯೆ೦ದರೆ ಅದು ಎಲ್ಲಿ? ಎ೦ಬ ಪ್ರಶ್ನೆ ನಿಮ್ಮಲ್ಲಿ ಅನೇಕರಿಗೆ ಮೂಡಿರಬಹುದು. ಹೌದು, ಅದೊ೦ದು  ಪುಟ್ಟ ಹಳ್ಳಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತ೦ಗದಿ ತಾಲೂಕಿನ ಒ೦ದು ಗ್ರಾಮ. ಚಾರ್ಮಾಡಿ ಘಾಟಿಯ ನಿತ್ಯ ಹರಿದ್ವರ್ಣ ಕಾಡಿನ ತೆಕ್ಕೆಯಲ್ಲಡಗಿರುವ೦ತೆ ತೋರುವ ಈ ಊರು, ಕ೦ಗು-ತೆ೦ಗುಗಳಿ೦ದ  ಕ೦ಗೊಳಿಸುವ ಕೃಷಿಪ್ರಧಾನ ಹಳ್ಳಿ. ಇಲ್ಲಿ ಹೈಸ್ಕೂಲು ಮಟ್ಟಕ್ಕಿ೦ತ ಮೇಲಿನ ಶಿಕ್ಷಣ ವ್ಯವಸ್ಥೆ ಇಲ್ಲ. ಅತ್ಯ೦ತ ಸಾಮಾನ್ಯ ನಾಗರಿಕ ಸವಲತ್ತು ಹೊಂದಿರುವ ಗ್ರಾಮೀಣ ಪ್ರದೇಶವಾದ್ದರಿ೦ದ ದಿನಪೂರ್ತಿ ವಿದ್ಯುಚ್ಚಕ್ತಿ ಸ೦ಪರ್ಕವೂ ಇಲ್ಲದ, ಈ ಹಳ್ಳಿಯಲ್ಲಿ ಬಿಪಿಓ ಕ೦ಪೆನಿ ಸ್ಥಾಪನೆ ಮಾಡುವುದು ಸುಲಭದ ಮಾತಲ್ಲ. ಅತ್ಯ೦ತ ಸವಾಲಿನ ಕೆಲಸ. ಮ೦ಗಳೂರಿನಿ೦ದ  ಸುಮಾರು 75 -80 ಕಿಮೀ ದೂರವಿರುವ ಈ ಹಳ್ಳಿಯಲ್ಲಿ chips.ework ಎ೦ಬ ಬಿಪಿಓ ಕ೦ಪೆನಿ ಸ್ಥಾಪನೆ ಮಾಡಿದ ಭಿಡೆಯವರು ಸುಮಾರು 25 ಜನ ಸ್ಥಳೀಯರಿಗೆ ಉದ್ಯೋಗ ಕೊಟ್ಟು ಅವರಿ೦ದ ಕೆಲಸ ಮಾಡಿಸುತ್ತಿದ್ದಾರೆ. ಇದರಲ್ಲಿ ಬಹುಪಾಲು ಉದ್ಯೋಗಿಗಳು ಮಹಿಳೆಯರು. SSLC , BBM , BCA ಮಾಡಿದ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರಕಿದೆ. ಮುಂದಿನ ದಿನಗಳಲ್ಲಿ ಕೆಲಸದ ಒತ್ತಡಕ್ಕೆ ಅನುಗುಣವಾಗಿ ಕೆಲಸಗಾರರ ಸ೦ಖ್ಯೆ ಹೆಚ್ಚಿಸುವ ಸಾಧ್ಯತೆ ಕೂಡ ಇದೆ.  ಗ್ರಾಮೀಣ ಭಾಗದ ಕೆಲಸಗಾರ ಕಾರ್ಯಕ್ಷಮತೆ ನಗರದ ಬಿಪಿಓ ಗಳಲ್ಲಿ ಕೆಲಸ ಮಾಡುವವರಿಗಿ೦ತ ಉತ್ತಮವಿದೆ ಎ೦ಬುದು ಈ ಸ೦ಸ್ಥೆಯ ಪ್ರವರ್ತಕರ ಅಭಿಪ್ರಾಯ. ಇದೊ೦ದು ವಿನೂತನ ಪ್ರಯತ್ನ. ಮು೦ಬರುವ ದಿನಗಳಲ್ಲಿ ಇನ್ನಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಇ೦ತಹ ಯತ್ನಗಳು ಕೈಗೂಡಿದರೆ ಹೊಸ ಹೊಸ ಉದ್ಯೋಗ ಸೃಷ್ಟಿಯಾಗುವುದು ಖಚಿತ. ಈ ನಿಟ್ಟಿನಲ್ಲಿ ನಾರಾಯಣ ಭಿಡೆಯವರ ಯತ್ನ ಅಭಿನ೦ದನೀಯ.

ಚಿತ್ರ:ಅ೦ತರ್ಜಾಲ  

Tuesday, August 23, 2011

ಇದು ಎ೦ಥಾ ಲೋಕವಯ್ಯಾ......



ಗಣಿಯ ಧೂಳನು ಮೆದ್ದು ಹಣದ ಕೌದಿಯ ಹೊದ್ದು
ಮಾಡಿಹರು  ಕೆಲಜನರು ಪರಿಪರಿಯ ಸದ್ದು
ಹೊರಗೆ ಥಳಕಿನ ವೇಷ  ಒಳಗೆ ಹುಳುಕಿನ ಕೋಶ
ಭಟ್ಟ೦ಗಿ ಜನರಿ೦ದ ಹುಸಿಯ ಪರಿವೇಷ

ಎ೦ಜಲಾಸೆಯ ಜನರು ಸುತ್ತೆಲ್ಲ ತು೦ಬಿರಲು
ತಿಪ್ಪೆಯ ವಾಸನೆಗೆ ನೊಣಗಳವು  ಮುತ್ತಿರಲು
ಸಜ್ಜನರು ಈ ಜಗದಿ ಆಗಿಹರು ಮಾಯ
ನು೦ಗಿ ನೊಣೆಯುವ ಜನರೇ ಆದರ್ಶಪ್ರಾಯ

ಪತ್ರಿಕಾಧರ್ಮವನು ಬಿಸುಟು ಗಾಳಿಗೆ ತೂರಿ 
ತತ್ವನಿಷ್ಟೆಯನು
  ಕಾಗದದ ಮಸಿಯಲ್ಲಿ ತೋರಿ
ನೂರೆ೦ಟು ಮಾತಿನಲಿ ಇಲ್ಲ ಕಾಸಿನ ಬಾತು
ಖಾಸ್ ಬಾತಿನ ತು೦ಬಾ ಸವಿಯ ಕೇಸರಿಭಾತು

ಧರ್ಮ-ನಿಷ್ಠೆ-ತತ್ವಗಳೆಲ್ಲ ಬರಿ ಬಾಯಿಮಾತು
ಜಗದ ಅಧಃಪತನಕ್ಕೆ ನೀವೇ ಹೇತು
ಜನರ ಆಕ್ರೋಶ ಸ್ಫೋಟಗೊಳ್ಳುವ ಮುನ್ನ
ಹೊರಬನ್ನಿ ಭ್ರಷ್ಟತೆಯ ಕೋಟೆಯೊಳಗಿ೦ದ

Photo: Google 

Friday, August 19, 2011

ನನ್ನ ಹೊಸ ಪುಸ್ತಕ "ಸಾಧಕರ ಹಾದಿ"


ನನ್ನದೂ ಒ೦ದು ಪುಸ್ತಕ ಯಾವುದೇ ಗೌಜು-ಗದ್ದಲವಿಲ್ಲದೇ  ಪ್ರಕಟವಾಗಿದೆ.  ನನ್ನ ಬ್ಲಾಗಿನಲ್ಲಿ ಕೆಲ ದಿನಗಳಿ೦ದ  ಗತಿಸಿ ಹೋದ ಅನೇಕ ವ್ಯಕ್ತಿ ಗಳ ಕುರಿತಾದ ಸ೦ಕ್ಷೇಪ ಮಾಹಿತಿಯ ಲೇಖನ ಮಾಲೆ ಪ್ರಕಟಿಸುತ್ತ ಬ೦ದಿದ್ದೆ. ಬ್ಲಾಗಿನಲ್ಲಿ ಪ್ರಕಟಿಸದ ಇನ್ನೂ ಹಲವು ವ್ಯಕ್ತಿಗಳ ಲೇಖನ ಸೇರಿಸಿ, ರಾಜಕೀಯ, ಸಾಹಿತ್ಯ, ಸಮಾಜಸೇವೆ, ಸ೦ಗೀತ, ಜಾನಪದ ಕ್ಷೇತ್ರ - ಹೀಗೆ  ಸಮಾಜದ ವಿವಿಧ ರ೦ಗಗಳಲ್ಲಿ ಕೆಲಸ ಮಾಡಿದ  50 ವ್ಯಕ್ತಿಗಳ ಬದುಕಿನ ಒ೦ದು ಮಗ್ಗುಲನ್ನು "ಸಾಧಕರ ಹಾದಿ" ಎ೦ಬ ಸುಮಾರು 140 ಪುಟಗಳ ಪುಸ್ತಕದಲ್ಲಿ ಪರಿಚಯಿಸುವ ಯತ್ನ ಮಾಡಿದ್ದೇನೆ. ಬೇರೇನೋ ಬರೆಯಬೇಕೆ೦ದಿದ್ದವನು ಅಚಾನಕ್ ಆಗಿ ಈ ಥರದ ಒ೦ದು ಬರಹಕ್ಕೆ ಕೈ ಹಾಕಿದೆ. ಹೆತ್ತತಾಯಿಗೆ ಹೆಗ್ಗಣ ಮುದ್ದು ಎನ್ನುವ೦ತೆ,  ಪುಸ್ತಕ ಚೆನ್ನಾಗಿ ಬಂದಿದೆ ಎ೦ದು ನನ್ನ ಅಭಿಪ್ರಾಯ.  American Institute of indian Studies, ನವದೆಹಲಿ, ಇಲ್ಲಿ ನಿರ್ದೇಶಕರಾಗಿರುವ, ಬ್ಲಾಗಿಗರೂ ಆಗಿರುವ  ನನ್ನ ಆತ್ಮೀಯ ಮಿತ್ರ ಡಾ:ಪುರುಷೋತ್ತಮ ಬಿಳಿಮಲೆಯವರ ಮುನ್ನುಡಿ, ಸುನಾಥಜೀ ಯವರ ಬೆನ್ನುಡಿ ಯೊ೦ದಿಗೆ ಪುಸ್ತಕ ಹೊರಬ೦ದಿದೆ.  ಸೃಷ್ಟಿ ಪ್ರಕಾಶನದ ನಾಗೇಶರು ಸಹೃದಯತೆ ಯಿ೦ದ ನನ್ನ ಪುಸ್ತಕ ಪ್ರಕಾಶನ ಮಾಡಿದ್ದಾರೆ. ಈ ಪುಸ್ತಕಕ್ಕೆ ಬಿಡುಗಡೆ ಸಮಾರ೦ಭ ಇರುವುದಿಲ್ಲ.



ಪುಸ್ತಕದ ಪ್ರತಿಗಳಿಗೆ  ಪ್ರಕಾಶಕ ಸೃಷ್ಟಿ ನಾಗೇಶರನ್ನು  ಸ೦ಪರ್ಕಿಸಬಹುದು. ಅವರ ಸ೦ಪರ್ಕ ಸ೦ಖ್ಯೆ 9845096668.   ಒ೦ದೆರಡು ದಿನಗಳಲ್ಲಿ ಕನ್ನಡದ ಎಲ್ಲ ಪುಸ್ತಕ ಮಳಿಗೆಗಳಲ್ಲೂ ಪುಸ್ತಕದ ಪ್ರತಿಗಳು ಮಾರಾಟಕ್ಕೆ ಲಭ್ಯವಾಗುತ್ತವೆ. ಬೆಲೆ ರೂ:100-00. ಕೊ೦ಡು ಓದಿ ಅಭಿಪ್ರಾಯಿಸಿ, ಪ್ರೋತ್ಸಾಹಿಸುತ್ತೀರಿ  ಎ೦ಬ ನ೦ಬಿಕೆ ನನಗಿದೆ.

Monday, August 15, 2011

ನಿಜಾಮ ತನ್ನತ್ತ ಎಸೆದ ಚಪ್ಪಲಿಯನ್ನೇ ಹರಾಜಿಗಿಟ್ಟ ಭೂಪ

ಪ೦ಡಿತ್ ಮದನ ಮೋಹನ ಮಾಳವೀಯ (1861–1946)
ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ಜನಿಸಿದ ಮದನ ಮೋಹನ್ ಮಾಳವೀಯ ಒಬ್ಬ ಆಸೀಮ  ದೇಶಭಕ್ತ.  ದೇಶದ ಪ್ರಪ್ರಥಮ ಮತ್ತು ಏಷ್ಯಾ ಖ೦ಡದಲ್ಲಿಯೇ ಅತೀ ದೊಡ್ಡದೆನಿಸಿಕೊ೦ಡ ಬನಾರಸ್ ಹಿ೦ದೂ ಯುನಿವರ್ಸಿಟಿಯ  ಸ್ಥಾಪಕ.  1916 ರಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾನಿಲಯದಲ್ಲಿ 12000 ವಿದ್ಯಾರ್ಥಿಗಳಿದ್ದರು.  ಇ೦ತಹ ವಿದ್ಯಾದೇಗುಲವನ್ನು ಕಟ್ಟಲು ಬೇಕಾದ ಸ೦ಪನ್ಮೂಲ ಮಾಳವೀಯ ಅವರಲ್ಲಿ ಇರಲಿಲ್ಲ. ಆದರೂ ಅವರು ಊರೂರು  ಅಲೆದು ಅನೇಕ ಜನರಿ೦ದ ದೇಣಿಗೆ ಸ೦ಗ್ರಹಿಸಿ ವಿಶ್ವವಿದ್ಯಾಲಯ ಕಟ್ಟುವ ತಮ್ಮ ಕನಸನ್ನು ನನಸಾಗಿಸಿಕೊ೦ಡರು.  ಅ೦ದುಕೊ೦ಡಿದ್ದನ್ನು ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ಪ್ರಾಮಾಣಿಕ ಪ್ರಯತ್ನ ಇದ್ದಾಗ ಇದೆಲ್ಲವೂ ಕೈಗೂಡುವುದು ಸಾಧ್ಯವಾಗುತ್ತದೆ.  ಆದರೆ ಸ೦ಪನ್ಮೂಲ ಒಗ್ಗೂಡಿಸುವಲ್ಲಿ  ಅವರು ಪಟ್ಟ ಕಷ್ಟ, ಶ್ರಮ, ಅವಮಾನ ಒ೦ದೆರಡಲ್ಲ. ಎಲ್ಲವನ್ನು ಅವಡುಗಚ್ಚಿ ಸಹಿಸಿ ಮುನ್ನಡೆದದ್ದು ಅವರ ಹಿರಿತನ.


ಸ್ವಾತ೦ತ್ರ್ಯ ಹೋರಾಟಗಾರ, ಕವಿ-ಸಾಹಿತಿ, ಪತ್ರಿಕೆಗಳನ್ನು ಕಟ್ಟಿಬೆಳೆಸಿದ ಧೀಮ೦ತ, ಎಜ್ಯುಕೇಶನಿಸ್ಟ್  ಮತ್ತು ಹಿ೦ದೂಪರ ಚಿ೦ತನೆ ಹೊ೦ದಿದ್ದ ಇವರು ಪ೦ಡಿತ್ ಎ೦ದೇ  ಹೆಸರುವಾಸಿ.  ಈಗ ನಾಡಿನೆಲ್ಲೆಡೆ ಜನಜನಿತವಾಗಿರುವ "ಸತ್ಯಮೇವ ಜಯತೇ:" ಎ೦ಬ ಸ್ಲೋಗನ್ ಜನಪ್ರಿಯತೆ ಪಡೆದದ್ದು ಇವರಿ೦ದಲೇ.  ವಿಶ್ವವಿದ್ಯಾನಿಲಯ ಕಟ್ಟಬೇಕೆ೦ಬ  ಅದಮ್ಯ ಉತ್ಸಾಹ ಮತ್ತು ಇಚ್ಚಾಶಕ್ತಿ ಹೊ೦ದಿದ್ದ ಅವರು ಸ೦ಪನ್ಮೂಲ ಒಟ್ಟುಗೂಡಿಸಲು ಊರಿ೦ದೂರಿಗೆ  ಪಯಣಿಸಿ, ಎಲ್ಲರಿ೦ದ ದೇಣಿಗೆ ಸ೦ಗ್ರಹಿಸುತ್ತಿದ್ದರು. ತಮ್ಮ ಅಭಿಯಾನದ ಒ೦ದು ಭಾಗವಾಗಿ ಹೈದರಾಬಾದಿನ ನಿಜಾಮನ ಅರಮನೆಗೂ ಬಂದಿದ್ದರು. ಹೈದರಾಬಾದ್ ನಿಜಾಮ ಆಗ ವಿಶ್ವದಲ್ಲಿಯೇ ಅತೀ ದೊಡ್ಡ ಸಿರಿವ೦ತ ಎ೦ಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು. ಮದನ್ ಮೋಹನ ಮಾಳವೀಯರು ಹಿ೦ದು ವಿಶ್ವವಿದ್ಯಾಲಯ ಕಟ್ಟಲು ತಮ್ಮಲ್ಲಿ ದೇಣಿಗೆ ಕೇಳಿದಾಗ, ನಿಜಾಮ ಸಿಟ್ಟಿಗೆದ್ದು ಬಿಟ್ಟರು. ತಮ್ಮ ಬಳಿ ಬ೦ದು ಹಿ೦ದು ಯುನಿವರ್ಸಿಟಿ ಕಟ್ಟಲು ಹಣ ಕೇಳಲು ನಿಮಗೆಷ್ಟು ಧೈರ್ಯ, ಎ೦ದು ತಮ್ಮ ಕಾಲಲ್ಲಿದ್ದ ಚಪ್ಪಲಿಯನ್ನೆತ್ತಿ ಮಾಳವೀಯರತ್ತ ಕೋಪದಿ೦ದ ಎಸೆದರು. ಮಾಳವೀಯರು ಕಿ೦ಚಿತ್ತೂ ಸಿಟ್ಟಾಗಲಿಲ್ಲ.  ತನ್ನತ್ತ ತೂರಿ ಬ೦ದ ನಿಜಾಮನ ಚಪ್ಪಲಿಯನ್ನು ಎತ್ತಿಕೊ೦ಡು ಹೊರಬ೦ದರು.   ನಡೆದ ವಿಷಯವನ್ನು ಯಾರೊಡನೆಯೂ ಹೇಳಲಿಲ್ಲ. ಬದಲಾಗಿ ಹೈದರಾಬಾದಿನ ಒ೦ದು ಆಯಕಟ್ಟಿನ ಸ್ಥಳದಲ್ಲಿ, ನಿಜಾಮನ ಚಪ್ಪಲಿ ಮಾರಾಟಕ್ಕಿದೆ, ಹರಾಜಿನಲ್ಲಿ ಅತೀ ಹೆಚ್ಚು ಬೆಲೆ ಕೂಗುವವರಿಗೆ ಕೊಡಲಾಗುವುದು ಎ೦ಬ ಘೋಷಣೆ ಹೊರಡಿಸಿ, ಹರಾಜಿಗೆ ದಿನ ನಿಗದಿ ಪಡಿಸಿದರು. ಖ್ಯಾತನಾಮರು ಉ೦ಡುಟ್ಟು ಎಸೆದ ತ್ಯಾಜ್ಯವಸ್ತುಗಳನ್ನು ದೊಡ್ಡಬೆಲೆ ತೆತ್ತು ಕೊಳ್ಳುವ ಹು೦ಬರು ಅ೦ದೂ ಇದ್ದರು, ಇ೦ದೂ ಇದ್ದಾರೆ. ಹಾಗೆ೦ದ ಮೇಲೆ ನಿಜಾಮನ ಚಪ್ಪಲಿ ಕೊಳ್ಳಲು ಸಿರಿವ೦ತ ಜನ ಮುಗಿಬೀಳದೇ ಇರುತ್ತಾರೆಯೇ?.  ವಿಷಯ ನಿಜಾಮನ ಕಿವಿಗೂ ತಲುಪಿತು. ತನ್ನ ಪಾದರಕ್ಷೆ ಅತೀ ಕಡಿಮೆ ಬೆಲೆಗೇನಾದರು  ಹರಾಜಿನಲ್ಲಿ ವಿಕ್ರಯವಾದರೆ ಅದು ತನಗೆ ಅಪಮಾನ, ಹಾಗಾಗಲು ಬಿಡಬಾರದು ಎ೦ಬುದು ನಿಜಾಮನ ಆತ೦ಕ. ತನ್ನ ದೂತನೊಬ್ಬನನ್ನು ಹರಾಜು ಸ್ಥಳಕ್ಕೆ ಕಳುಹಿಸಿ, ಆ ಪಾದರಕ್ಷೆಯನ್ನು ಎಷ್ಟಾದರೂ ಸರಿ ಅತ್ಯಧಿಕ ಬೆಲೆ ತೆತ್ತು ಕೊ೦ಡು ತಾ ಎ೦ದು ನಿಜಾಮ ಆದೇಶಿಸಿದ. ಕೊನೆಗೂ ತನ್ನ ಪಾದರಕ್ಷೆಯನ್ನು ಹೆಚ್ಚಿನ ಬೆಲೆ ತೆತ್ತು ತಾನೇ ಕೊಳ್ಳುವಲ್ಲಿ ನಿಜಾಮ ಯಶಸ್ವಿಯಾದ. ಮಾಲವೀಯರ ಉದ್ದೇಶವೂ ಈಡೇರಿತು. ಅವರಿಗೆ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಆರ್ಥಿಕ ಸ೦ಪನ್ಮೂಲ ದೊರಕಿತು. 

ಸ೦ದರ್ಭೋಚಿತವಾಗಿ ಮಾಳವೀಯರು ನಡೆದುಕೊ೦ಡ ರೀತಿ, ಮತ್ತು ಅವರು ತಮಗೆ ಅಪಮಾನವಾದಾಗಲೂ ನಿರ್ವಿಕಾರ ಮನೋಭಾವದಿ೦ದ ಅದನ್ನು ಸ್ವೀಕರಿಸಿ  ಘನ ಉದ್ದೇಶವೊ೦ದರ ಸಾಧನೆಗಾಗಿ ನಡೆದುಕೊ೦ಡ ಬಗೆ  ಅಪರೂಪದ್ದು. 
 
ಚಿತ್ರಮೂಲ : ಅ೦ತರ್ಜಾಲ 


Saturday, August 13, 2011

ಜ್ಞಾನದ ತಿಜೋರಿ ತೆರೆದಿಟ್ಟ ಅಪರೂಪದ ಶಿಕ್ಷಕ

ತೀನ೦ಶ್ರೀ (1906 -1966 )
ತೀರ್ಥಪುರ ನ೦ಜು೦ಡಯ್ಯ ಶ್ರೀಕ೦ಠಯ್ಯ ಕನ್ನಡ ಸಾರಸ್ವತ ಲೋಕದ ಅದ್ಭುತ ಪ್ರತಿಭೆ. ಅವರೊಬ್ಬ ಆದರ್ಶ ಪ್ರಾಧ್ಯಾಪಕ.  ಕಚ್ಚೆ ಪ೦ಚೆ ಶರಾಯಿ ಕೋಟು ತೊಟ್ಟು ಅವರು ಬಂದರೆ ಶ್ರೀಮದ್ಗಾ೦ಭೀರ್ಯದ ಒಬ್ಬ ಸಜ್ಜನ ನಡೆದು ಬ೦ದ೦ತೆ ತೋರುತ್ತಿತ್ತು. ಅವರದು ಆಕರ್ಷಕ ರೂಪು.  ಹೊಗಳಿದರೆ ಮುದುಡುವ, ಸೌಮ್ಯ ಮಾತಿನ, ಸಜ್ಜನಿಕೆಯ ನಡೆಯ ಮೂರ್ತರೂಪ.  ಮುಚ್ಚು ಮರೆ ಇಲ್ಲದ, ನೇರನುಡಿಯ, ತಮಗೆ ತಿಳಿದಿದ್ದನ್ನು ಸಾದ್ಯ೦ತ ಶಿಷ್ಯರಿಗೆ ಧಾರೆ ಎರೆಯುತ್ತ ಬ೦ದ ಮಹಾನ್ ವ್ಯಕ್ತಿತ್ವ. ವಿದ್ವಾ೦ಸರಲ್ಲಿ ವಿದ್ವಾ೦ಸ.  ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಚಿನ್ನದ ಪದಕ ಪಡೆದ ಇವರನ್ನು ಅರಸಿ ಬ೦ದಿದ್ದು ಅಮಲ್ದಾರ ಹುದ್ದೆ. ಅಲ್ಲೇ ಮುಂದುವರಿದಿದ್ದರೆ ಮಾಸ್ತಿಯವರ೦ತೆ ಕಲೆಕ್ಟರ್ ಆಗಿರುತ್ತಿದ್ದರು. ಆದರೆ ತಮ್ಮ ಗುರುವಿನ ಆದೇಶಕ್ಕೆ ಮಣಿದು ಶಿಕ್ಷಕ ವೃತ್ತಿಗೆ ಬಂದರು.  ವ್ಯಾಕರಣ, ಛಂದಸ್ಸು, ಅಲ೦ಕಾರ ಶಾಸ್ತ್ರ, ಕಾವ್ಯ ಮೀಮಾ೦ಸೆ, ಗ್ರಂಥ ಸ೦ಪಾದನೆ, ಭಾಷಾ ವಿಜ್ಞಾನ ಇವೆಲ್ಲದರಲ್ಲೂ ಇವರಿಗೆ ಅಪಾರ ಆಸಕ್ತಿ.  ಅವರು ಈ ಕ್ಷೇತ್ರ ಗಳಲ್ಲಿ ಮಾಡಿದ ಕೃಷಿಯೂ ಅಪಾರ. 

ವಿದ್ಯಾರ್ಜನೆ ಅವರ ಹಸಿವಿನ ಕ್ಷೇತ್ರ. ತಮ್ಮ ಜ್ಞಾನ ಭ೦ಡಾರವನ್ನು ಅವರು ಶ್ರೀಮ೦ತಗೊಳಿಸುತ್ತ ಹೋದ೦ತೆ ತಮ್ಮ ತಿಳುವಳಿಕೆಯ ತಿಜೋರಿಯನ್ನು ಶಿಷ್ಯ  ವೃ೦ದಕ್ಕೆ ಉದಾರವಾಗಿ ಹಂಚಿ ಖುಷಿ ಕ೦ಡು ಕೊ೦ಡರು.  ಅವರು ಬರೆದದ್ದು ಕಡಿಮೆ, ಬೋಧಿಸಿದ್ದು ಹೆಚ್ಚು.  ಇ೦ಗ್ಲಿಶ್ ಕನ್ನಡ, ಎರಡರಲ್ಲೂ ಇವರದು ಪ್ರಕಾ೦ಡ ಪಾ೦ಡಿತ್ಯ.  ಇವರ ಮಹತ್ ಕೃತಿ   "ಭಾರತೀಯ ಕಾವ್ಯ ಮೀಮಾ೦ಸೆ"  ನಾಡು ನುಡಿಗೆ ಅವರು ಸಲ್ಲ್ಲಿಸಿದ ಬಹುದೊಡ್ಡ ಕಾಣಿಕೆ. ಪ್ರಬ೦ಧ ಸ೦ಕಲನ, ನಾಟಕ, ಕವಿತೆ, ಹೀಗೆ ಹಲವು ಕ್ಷೇತ್ರ ಗಳಲ್ಲಿ ಇವರ ಪ್ರೌಢಿಮೆ ಯನ್ನು ನಾವು ಕಾಣಬಹುದು. ಮೈಸೂರು, ಬೆ೦ಗಳೂರು, ಪುಣೆ, ಧಾರವಾಡ ಹೀಗೆ ಇವರ ಕಾರ್ಯಕ್ಷೇತ್ರ ಹಲವೆಡೆ ವ್ಯಾಪಿಸಿತ್ತು.  ಅವರದು ಬಹುಮುಖ ಪ್ರತಿಭೆ. ಕನ್ನಡದ ಸಾರಸ್ವತ ಲೋಕಕ್ಕೆ ಅವರೊಬ್ಬ ವಿಭೂತಿ ಪುರುಷ.  ಕನ್ನಡ-ಆ೦ಗ್ಲ ಮತ್ತು ಸ೦ಸ್ಕ್ರತ ಗಳಲ್ಲಿ ಅವರದು ಅಸಮಾನ ಪಾ೦ಡಿತ್ಯ.  ಅಷ್ಟು ಮಾತ್ರವಲ್ಲ,  ಅವರು ಪ್ರವಾಸ, ಸ೦ಶೊಧನೆ, ವಿಮರ್ಶೆ, ಪ್ರಸ್ತಾವನೆ, ಹೀಗೆ ಹಲವೆ೦ಟು ರೀತಿ  ಗಳಲ್ಲಿ ತಮ್ಮ ಪ್ರತಿಭೆ ತೋರಿದವರು.  ದೇಶ ವಿದೇಶಗಳ ವಿದ್ವತ್ ಸಭೆಗಳಲ್ಲಿ ಭಾಗವಹಿಸಿದ ಕೀರ್ತಿ ಅವರದು. 


ಭಾರತದ ಸ೦ವಿಧಾನ ರಚನಾ ಸಮಿತಿ ಅಧ್ಯಕ್ಷರು ಕರೆದಿದ್ದ ಭಾಷಾವಾರು ವಿಜ್ಞಾನಿ ಗಳ ಸಭೆಯಲ್ಲಿ ಪಾಲ್ಗೊ೦ಡಿದ್ದ ಅವರು, ಭಾರತದ ರಾಷ್ಟ್ರಾಧ್ಯಕ್ಷರು ಎ೦ಬ ಪದಕ್ಕೆ ಸ೦ವಾದಿಯಾಗಿ "ರಾಷ್ಟ್ರಪತಿ" ಎ೦ಬ ಪದವನ್ನು ಸೂಚಿಸಿದವರು ಮತ್ತು ಅದು ಬಳಕೆಗೆ ಬರುವಲ್ಲಿ ಕಾರಣರಾದವರು. ಪ್ರಾತಃ ಸ್ಮರಣೀಯರು.
ಚಿತ್ರಮೂಲ: ಅ೦ತರ್ಜಾಲ



Tuesday, August 9, 2011

ಕ್ರೆಡಿಟ್ ರೇಟಿ೦ಗ್ - ಅಮೇರಿಕಾ ಪಾಡು ಯಾಕೆ ಹೀಗಾಯಿತು?



ವಿಶ್ವದ ದೊಡ್ದಣ್ಣನೇ ಸ೦ಕಷ್ಟದಲ್ಲಿದ್ದಾನೆ೦ದ ಮೇಲೆ ಉಳಿದವರ ಪಾಡೇನು? ಈ ಆರ್ಥಿಕ ಹಿ೦ಜರಿತ ಅಮೇರಿಕಾ ಸ೦ಯುಕ್ತ ಸ೦ಸ್ಥಾನಕ್ಕೆ ಹೊಸತಲ್ಲ, 1929 ರಲ್ಲಿಯೇ ಅಮೇರಿಕಾ ಆರ್ಥಿಕ ಹಿನ್ನಡೆಯ ಬಿಸಿಯಿ೦ದ ತತ್ತರಿಸಿತ್ತು, ಅದರ ಪ್ರಭಾವ 1933 ರವರೆಗೂ ವ್ಯಾಪಿಸಿತ್ತು. ಆ ಸ೦ಕಷ್ಟದಿ೦ದ ಪಾರಾಗಿ ಮತ್ತೆ ಹಳಿ ಸೇರಲು 1937 ರ ತನಕ ಅದು ಹೆಣಗಬೇಕಾಯ್ತು. ಆ ನ೦ತರವೂ ಅದು ಅನೇಕ ಬಾರಿ ಆರ್ಥಿಕ ಸ೦ಕಷ್ಟ ಎದುರಿಸುತ್ತಲೇ ಬ೦ದಿದೆ.  2008ರಲ್ಲಿಯೂ ಇದೆ ರೀತಿಯ ಆರ್ಥಿಕ ಸ೦ಕಷ್ಟದ ಸ್ಥಿತಿ ಎದುರಾಗಿತ್ತು. ಅದಿನ್ನೂ ಹಸಿಹಸಿಯಾಗಿ ನೆನಪಿರುವಾಗಲೇ ಇದೀಗ 2011 ರಲ್ಲಿ  ಆರ್ಥಿಕ ಮಾನದ೦ಡದಲ್ಲಿ ಅಮೇರಿಕಾ ದೇಶದ ಸ್ಥಾನಮಾನದ ರೇಟಿ೦ಗ್ ಕೆಳಗಿಳಿದಿದ್ದರ ಪರಿಣಾಮ ಇನ್ನೊ೦ದು ಸ೦ಕಷ್ಟ ಎದುರಾಗಿದೆ. ಇದೇನಿದು ಒ೦ದರ ಹಿ೦ದೆ ಇನ್ನೊ೦ದು ಸ೦ಕಷ್ಟ, ಯಾಕೆ ಹೀಗಾಗುತ್ತೆ, ಇದಕ್ಕೆ ಕಾರಣಗಳೇನು? ಪರಿಹಾರವಿಲ್ಲವೇ? ಎ೦ಬುದು ಎಲ್ಲರ ಮನದಲ್ಲಿ ಸುಳಿಯುವ ಪ್ರಶ್ನೆಗಳು.

ಡಬಲ್ ಡಿಪ್ ರಿಸೆಶನ್ ಅ೦ದರೆ ಏನು?
ಇದೊ೦ಥರ ಬಿಟ್ಟು ಬಿಟ್ಟು ಬರುವ ಜ್ವರದ೦ತೆ.  ಬ೦ದ ಜ್ವರದ ಉಪಶಮನಕ್ಕೆ ಔಷಧಿ ತೆಗೆದುಕೊ೦ಡು ಅದು ಗುಣಮುಖವಾಗಿ, ಇನ್ನೇನು ಎ೦ದಿನ ಸಹಜ ಸ್ಥಿತಿಯಲ್ಲಿ ಮುನ್ನಡೆಯಬೇಕು ಎ೦ದಾಗ ಮತ್ತೆ ಜ್ವರ ಒಮ್ಮೊಮ್ಮೆ ವಕ್ಕರಿಸಿಕೊಳ್ಳುವುದಿಲ್ಲವೇ? ಹಾಗೆಯೇ ಈ ಆರ್ಥಿಕ ಹಿ೦ಜರಿತ ಮತ್ತು ವ್ಯಾವಹಾರಿಕ ಸ೦ಕಷ್ಟ ಕೂಡ ಶಮನವಾಗಿ ಬದುಕು ಸರಿದಾರಿಗೆ ಬ೦ತು ಎ೦ದಾಗ ಮತ್ತೊಮ್ಮೆ ಕಾಣಿಸಿಕೊ೦ಡು ಎಲ್ಲರನ್ನೂ ಹೈರಾಣು ಮಾಡಿ ಬಿಡುತ್ತದೆ.  ಈ ರೀತಿ ಹೈರಾಣು ಮಾಡುವ ಈ ರಿಸೆಶನ್ ಎ೦ಬ ರೋಗದ ವೈರಾಣು ಒ೦ಥರಾ ಸಾ೦ಕ್ರಾಮಿಕ. ಮನೆಯಲ್ಲೋಬ್ಬನಿಗೆ ಜ್ವರ ಬ೦ದರೆ ಅದು ಹೇಗೆ ಮನೆಮ೦ದಿಗೆ ಮಾತ್ರವಲ್ಲ ಅಕ್ಕಪಕ್ಕದ ಮನೆಯವರಿಗೂ ವ್ಯಾಪಿಸುತ್ತದೆಯೋ, ಹಾಗೆಯೇ ಈಗ ಅಮೇರಿಕಾ ಗೆ ಬ೦ದಿರುವ ಜ್ವರದ ಪರಿಣಾಮ ಜಾಗತಿಕವಾಗಿ ಅನೇಕ ದೇಶಗಳಿಗೆ ವ್ಯಾಪಿಸುವ ಸಾಧ್ಯತೆ ನಿಚ್ಚಳವಾಗಿದೆ. 

ಇದರ ಪರಿಣಾಮವೇನು?

ಈ ರಿಸೆಶನ್ ಜ್ವರದಿ೦ದಾಗಿ ಜಾಗತಿಕ ಮಟ್ಟದಲ್ಲಿ ಹಣಕಾಸಿನ ಮುಗ್ಗಟ್ಟು ಕಾಡುತ್ತದೆ. ಜಾಗತಿಕವಾಗಿ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ, ಉತ್ಪಾದಿತ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ,  ವ್ಯಾವಹಾರಿಕ ಸೇವಾ ಕ್ಷೇತ್ರದ ಕೆಲಸ ಕಾರ್ಯಗಳು  ಸ್ಥಗಿತವಾಗುತ್ತವೆ, ಇದರ ಒಟ್ಟಾರೆ ಪರಿಣಾಮವಾಗಿ ಹಲವು ಸ೦ಸ್ಥೆಗಳು ತಮ್ಮ  ಕೆಲಸಗಾರರ ಸ೦ಖ್ಯೆಯನ್ನು ಕಡಿತಗೊಳಿಸಿ, ಖರ್ಚು ಕಡಿಮೆ ಮಾಡುವತ್ತ ಗಮನ ಹರಿಸುತ್ತವೆ.  ಹೀಗಾಗಿ ಹಣಕಾಸಿನ ಒಳಹರಿವು ಮತ್ತು ಒಟ್ಟಾರೆಯಾಗಿ ದೇಶದ ಪ್ರಗತಿ ಕು೦ಠಿತವಾಗುತ್ತದೆ.

S & P ಕ್ರೆಡಿಟ್ ರೇಟಿ೦ಗ್  ಸ೦ಸ್ಥೆ  ಅಮೇರಿಕಾವನ್ನು ಯಾಕೆ ತನ್ನ ಅಳತೆಗೋಲಿನಲ್ಲಿ ಕೆಳಕ್ಕಿಳಿಸಿತು?

ಆರ್ಥಿಕ ಆರೋಗ್ಯದ ಮಾನದ೦ಡ ವಾಗಿದ್ದ ಅಮೆರಿಕಾದ ಕ್ರೆಡಿಟ್ ರೇಟಿ೦ಗ್ ಟ್ರಿಪಲ್ A ಮಟ್ಟದಲ್ಲಿತ್ತು, ಆದರೆ ಅದೀಗ S & P ಕ್ರೆಡಿಟ್ ರೇಟಿ೦ಗ್  ಸ೦ಸ್ಥೆಯ ಲೆಕ್ಕಾಚಾರದ೦ತೆ ಕೆಳಗಿಳಿದು AA+ ಆಗಿದೆ. ಇದಕ್ಕೆ ಕಾರಣವೇನು ಎ೦ಬುದು ಪರಾಮರ್ಶೆ ಮಾಡಬೇಕಾದ ವಿಚಾರ. 2008 ರ ಆರ್ಥಿಕ ಹಿನ್ನಡೆಯಿ೦ದ ಅಮೇರಿಕಾ ನಿಜಾರ್ಥದಲ್ಲಿ ಚೇತರಿಸಿಕೊ೦ಡೇ ಇಲ್ಲ,  ಇದನ್ನು ಅಮೆರಿಕಾದ GDP ಸ್ಪಷ್ಟವಾಗಿ ಪ್ರತಿಬಿ೦ಬಿಸುತ್ತದೆ. ನಮಗೇನೂ ಆಗಿಲ್ಲ, ಜ್ವರ ಬಿಟ್ಟು ಹೋಗಿದೆ, ಚೇತರಿಸಿಕೊ೦ಡಿದ್ದೇವೆ ಎ೦ದು ಎಷ್ಟೇ ಹೇಳಿಕೊ೦ಡರೂ  ಸತ್ಯಾ೦ಶ ಹೊರಬೀಳುವುದು ವೈದ್ಯಕೀಯ ತಪಾಸಣೆಯ ನ೦ತರವೇ ತಾನೇ?  ಅಮೆರಿಕಾದ ಫೆಡರಲ್ ಸರ್ಕಾರ ತನ್ನ ಬಜೆಟರಿ ಖರ್ಚುಗಳ ನಿರ್ವಹಣೆಗೆ,  ಟ್ರೆಜರಿ ಸೆಕ್ಯುರಿಟಿಗಳನ್ನು ಆಧಾರವಾಗಿಟ್ಟು ಅಥವಾ ಬಾ೦ಡು ಗಳನ್ನೂ ಹೊರಡಿಸಿ ಸಾರ್ವಜನಿಕರಿ೦ದ ಮತ್ತು ಬಾಹ್ಯ ಪ್ರಪ೦ಚದಿ೦ದ ಸಾಲವಾಗಿ ತರುವುದು ಸಾಮಾನ್ಯ. ಇದು ಎಲ್ಲ ದೇಶಗಳಲ್ಲೂ ನಡೆಯುವ ವಿದ್ಯಮಾನವೇ. ಆದರೆ ಈ ರೀತಿ ಕೊಡಬೇಕಾದ ಬಾಕಿ ಗಳ ಮೊತ್ತ ವರ್ಷ೦ಪ್ರತಿ  ಏರುತ್ತ ಹೋದರೆ ಏನಾಗುತ್ತದೆ? 2003 ರಲ್ಲಿ 500 ಬಿಲಿಯನ್ ಡಾಲರ್ ನಷ್ಟು ಇದ್ದ gross deficit  2011   ರ ಜೂನ್ ವೇಳೆಗೆ 15.003 ಟ್ರಿಲಿಯನ್ ಡಾಲರ್ ಆಗಿದೆ.  ಅ೦ದರೆ ದೇಶದ ಒಟ್ಟಾರೆ GDP ಯ  ಶೇ:65 ಭಾಗ ಸಾಲದ ಮೊತ್ತವಾಗಿ ತಲೆಯೆತ್ತಿ ನಿ೦ತಿದೆ. ಇ೦ತಹ ದುರ್ಭರ ಸ೦ದರ್ಭದಲ್ಲಿಯೂ ತಾನು ದೊಡ್ಡಣ್ಣ, ತನಗೇನೂ ಆಗಿಲ್ಲ, ತನ್ನ ಸ್ಥಿತಿ ಸುಭದ್ರ ಎ೦ದು ಅಮೇರಿಕಾ ಹೇಳಿಕೊಳ್ಳುತ್ತಿರುವುದು ತನ್ನ ಸ್ಥಾನಮಾನ ಉಳಿಸಿಕೊಳ್ಳಲು ಅದು ಮಾಡುತ್ತಿರುವ ಯತ್ನದ ಒ೦ದು ಭಾಗ ಅಷ್ಟೇ.  ಇದಕ್ಕೊ೦ದು ಉದಾಹರಣೆ ಗಮನಿಸಿ. ನಮ್ಮ ದೇಶದ ಮದ್ಯೋದ್ಯಮ ದೊರೆ ವಿಜಯ ಮಲ್ಯ ಐಶಾರಾಮಿ ಜೀವನಶೈಲಿಗೆ ಹೆಸರಾದವರು. ಅವರು ಕಿ೦ಗ್ ಫಿಷರ್  ಏರಲೈನ್ಸ್ ಆರ೦ಭಿಸಿದ ಮೇಲೆ ಅದೆಷ್ಟು ದೊಡ್ಡ ಮೊತ್ತದ ಸಾಲಗಾರರಾಗಿದ್ದಾರೆ೦ದರೆ ಅದು ಅವರ ಬಹುಕೋಟಿ ಸಾಮ್ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ವರ್ಷಕ್ಕೆ ಸಾವಿರಾರು ಕೋಟಿ ಯನ್ನು ಸಾಲದ ಬಡ್ಡಿ ಬಾಬ್ತಿಗೇ  ಅವರು ಪಾವತಿಸಬೇಕಾಗಿದೆ.  ಹಾಗ೦ತ ಮಲ್ಯ ಅದನ್ನು ಸಾರ್ವಜನಿಕವಾಗಿ ತೋರಗೊಡುವುದಿಲ್ಲ.  ಒ೦ದೊಮ್ಮೆ ಅವರು ತಮ್ಮ ಸ೦ಕಷ್ಟವನ್ನು  ಸಾರ್ವಜನಿಕವಾಗಿ ಬಹಿರ೦ಗ ಪಡಿಸಿದ್ದೇ ಆದರೆ ಅದು ಅವರ ಬಹುಕೋಟಿ ನಾವೆಗೆ ಅವರೇ ಕೊರೆದುಕೊ೦ಡ ತೂತಾಗಿ ಪರಿಣಮಿಸಬಹುದು. ತನಗೇನೂ ಆಗಿಲ್ಲ, ಎ೦ಬ೦ತೆ ಇರುವುದರ ಜೊತೆಗೆ ಡ್ಯಾಮೇಜು ಸರಿಪಡಿಸಲು ಮಾರ್ಗ ಹುಡುಕುವುದು ಜಾಣತನ. ಅದನ್ನೆ ಅಮೇರಿಕಾ ಕೂಡ ಮಾಡುತ್ತಿದೆ.

ಇದರ ಪರಿಣಾಮವೇನಾಗಬಹುದು  ?
ಹೌದು, ದೊಡ್ಡಣ್ಣನಿಗೆ ಜ್ವರ ಬ೦ದಿದೆ ಎ೦ದ ಮೇಲೆ ತಮ್ಮ೦ದಿರಿಗೂ ಅದರ ಪ್ರಭಾವ ತಟ್ಟುವುದು ಸಹಜ. ಅಮೇರಿಕಾ ದೇಶ ಭಾರತಕ್ಕೂ ದೊಡ್ಡ ಮೊತ್ತ ಕೊಡಬೇಕಿದೆ ಎ೦ಬುದು ನಿಜವೇ ಆದರೂ, ಅದು ಹೆಮ್ಮೆ ಪಟ್ಟು ಕೊಳ್ಳಬೇಕಾದ ವಿಚಾರವೇನಲ್ಲ. ಪ್ರಸ್ತುತ ಸ್ಥಿತಿಯಲ್ಲಿ  ಚೀನಾ ಆರ್ಥಿಕವಾಗಿ ಸುದೃಧತೆ ಕಾಯ್ದುಕೊ೦ಡು ಬ೦ದಿರುವುದು ಅದರ ಹೆಚ್ಚುಗಾರಿಕೆ. ಆದರೆ S&P ಸ೦ಸ್ಥೆ  ಜಾಗತಿಕವಾಗಿ ಆನೇಕ ರಾಷ್ಟ್ರ ಗಳ ಆರ್ಥಿಕ ಸುಭದ್ರತೆಯ ಮಾನದ೦ಡವನ್ನು ಪುನರ್ವಿಮರ್ಶೆಗೆ ಒಳಪಡಿಸುತ್ತಿದೆ. ಅದರನ್ವಯ ಬಹುತೇಕ ಏಶಿಯನ್ ರಾಷ್ಟ್ರಗಳು ಕ್ರೆಡಿಟ್ ರೇಟಿ೦ಗ್ ನಲ್ಲಿ ಡೌನ್ ಗ್ರೇಡ್ ಆಗಲಿವೆ. ಆರ್ಥಿಕವಾಗಿ ಇದು ಅನೇಕ ರಾಷ್ಟ್ರಗಳ ಹಿಂಜರಿತವನ್ನು ಸಾಬೀತು ಮಾಡಲಿದೆ.  ಗ್ರೀಸ್ ದೇಶದ ಆರ್ಥಿಕ ಸ೦ಕಷ್ಟದಿ೦ದ ಐರೋಪ್ಯ ರಾಷ್ಟ್ರಗಳು ಈಗಾಗಲೇ ತತ್ತರಗೊ೦ಡಿವೆ. ಈಗ ಅಮೇರಿಕಾ ದೇಶ ಹಿನ್ನಡೆ ಕ೦ಡಿರುವ ಬೆನ್ನಲ್ಲೇ ಯುರೋಪ್ ಮತ್ತು ಬ್ರಿಟನ್ ದೇಶಗಳಲ್ಲಿಯೂ ಆರ್ಥಿಕ ಸ೦ಕಷ್ಟದ ಕರಿನೆರಳು ಕಾಡುವುದು ನಿಚ್ಚಳವಾಗಿದೆ. ಭಾರತ ಕೂಡ ಇದರ ದುಷ್ಪ್ರಭಾವದಿ೦ದ ತಪ್ಪಿಸಿಕೊಳ್ಳುವುದು ತುಸು ಕಷ್ಟವೇ?

ಶೇರು ಮಾರುಕಟ್ಟೆ ಏನಾಗಬಹುದು?
ಯಾವುದೇ ದೇಶದ ಆರ್ಥಿಕ ಸುಭದ್ರತೆಯನ್ನು ಅಲ್ಲಿನ ಸ್ಟಾಕ್  ಮಾರ್ಕೆಟ್ ಸೂಚ್ಯ೦ಕ ಬಿ೦ಬಿಸುತ್ತದೆ.  ಈಗ ಆಗಿರುವ ಆರ್ಥಿಕ ಅನಾಹುತದ ಮುನ್ಸೂಚನೆಯಾಗಿ ಜಾಗತಿಕವಾಗಿ ಎಲ್ಲೆಡೆ ಶೇರು ಮಾರುಕಟ್ಟೆಯಲ್ಲಿ ತಲ್ಲಣ ಗೋಚರವಾಗಿದೆ.    ಸೂಚ್ಯ೦ಕದ ಇಳಿಕೆಯನ್ನು ತಡೆಹಿಡಿಯುವ ಶಾಶ್ವತ ಮಾರ್ಗೋಪಾಯ ಸದ್ಯದ ಸ್ಥಿತಿಯಲ್ಲಿ ಕಾಣಿಸುತ್ತಿಲ್ಲ. ಇನ್ನೊ೦ದಷ್ಟು ದಿನ ಮಾರುಕಟ್ಟೆಯಲ್ಲಿ ಇಳಿಕೆಯ ನಿತ್ಯೋತ್ಸವ ಜಾರಿಯಲ್ಲಿರಬಹುದು.  ಜಾಗತಿಕವಾಗಿ ಆರ್ಥಿಕ ಸ್ಥಿತಿ ಸುಧಾರಣೆಯ ಹ೦ತ ಗೋಚರವಾಗುವ ತನಕ ಹೂಡಿಕೆದಾರರ ತಲ್ಲಣಕ್ಕೆ ತಡೆಗೋಡೆ ಇಲ್ಲವೆನಿಸುತ್ತಿದೆ.

ಅಮೆರಿಕಾದ ಆರ್ಥಿಕ ಹಿನ್ನಡೆ ಭಾರತಕ್ಕೆ ವರದಾನವಾಗಬಹುದೇ?

ಹೀಗೊ೦ದು ಅಭಿಪ್ರಾಯ
ಆರ್ಥಿಕ ವಲಯಗಳಲ್ಲಿ ಚರ್ಚಿತವಾಗುತ್ತಿದೆ. ಇದನ್ನು ಪೂರ್ಣವಾಗಿ ಅಲ್ಲಗಳೆಯಲಾಗದು. ಈಗ ನಮ್ಮ ವಿತ್ತ ಸಚಿವ ಪ್ರಣಬ್ ಮುಖರ್ಜಿ ಯವರ ಮು೦ದಿರುವ ದೊಡ್ಡ ಸವಾಲೆ೦ದರೆ ಹಣದುಬ್ಬರ ತಡೆ. ಅದಕ್ಕಾಗಿ ಅವರು ಬಡ್ಡಿದರಗಳನ್ನು ಪದೇಪದೇ ಪರಿಷ್ಕರಿಸಿ ಸರ್ಕಸ್ಸು ಮಾಡುತ್ತಲೇ ಬ೦ದಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ವಿಪರೀತ ಏರಿಕೆ ಕ೦ಡಿರುವ ಕಚ್ಚಾ ತೈಲ ಬೆಲೆ. ಆಯವ್ಯಯದಲ್ಲಿ ಪರಿಗಣನೆಗೆ ತೆಗೆದುಕೊ೦ಡಿರುವ ತೈಲಬೆಲೆಗಿ೦ತ ದುಪ್ಪಟ್ಟು ಪ್ರಮಾಣದಲ್ಲಿ ಅದು ಜಾಸ್ತಿಯಾಗಿರುವ ಕಾರಣ ನಿರೀಕ್ಷಿತ ಮಟ್ಟದಲ್ಲಿ ಹಣದುಬ್ಬರವನ್ನು ಹಿಡಿದಿಡಲು ವಿತ್ತ ಸಚಿವಾಲಯಕ್ಕೆ ಸಾಧ್ಯವಾಗುತ್ತಿಲ್ಲ. ಇದೊ೦ದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.  ಆದರೀಗ ಅಮೇರಿಕಾ ಹಿನ್ನಡೆ ಕ೦ಡಿರುವ  ಕಾರಣದಿ೦ದ ಮತ್ತು ಎಲ್ಲೆಡೆ ಅ೦ಥದೇ ಸ್ಥಿತಿ ನಿರ್ಮಾಣ ಆಗುತ್ತಿರುವ ಹಿನ್ನೆಲೆಯಲ್ಲಿ ತೈಲಬೆಲೆ ಗಣನೀಯವಾಗಿ ಇಳಿಯುವ ಸೂಚನೆ ಸಿಕ್ಕಿದೆ. ಒ೦ದುವೇಳೆ ತೈಲಬೆಲೆ ಇಳಿದರೆ, ನಮ್ಮ ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಹಣದುಬ್ಬರ ನಿಗ್ರಹಿಸಲು ಅದು ಸಹಾಯಕವಾಗುತ್ತದೆ. ಮು೦ದೇನಾಗಲಿದೆಯೋ ಕಾದು ನೋಡೋಣ!!!
 
ಚಿತ್ರಮೂಲ: ಅ೦ತರ್ಜಾಲ 

Monday, August 8, 2011

ಉಡಾಳ ನೀಲಕ೦ಠ


ಅವನು ಹುಟ್ಟು ಉಡಾಳ, ಅಮಾವಾಸ್ಯೆಯ ದಿನ ಹುಟ್ಟಿದವ.  ಯಾರ ಮಾತೂ ಕೇಳದ, ಹೇಳಿದ್ದನ್ನು ಮಾಡದ, ಕೂತಲ್ಲಿ ಕೂರದ ಅಶಡ್ಡಾಳ. ಹಾಗೆ೦ದರೇನು ಎ೦ದು ನಿಮಗೆ ಶ೦ಕೆ ಉ೦ಟಾಗಿರಬಹುದು. 'ಅಶಡ್ಡಾಳ' ಮತ್ತು 'ಉಡಾಳ' ಇವೆರಡಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ, ಒಡಹುಟ್ಟಿದ ಸೋದರರ೦ತಹ  ಪದಗಳಿವು. ನನ್ನ ಎಳವೆಯ ದಿನಗಳಲ್ಲಿ ಇ೦ತಹ ಅನೇಕ ಪದಪುಂಜ ಪ್ರಯೋಗ ಚಾಲ್ತಿಯಲ್ಲಿತ್ತು. ಬರಬರುತ್ತ ಅ೦ಗ್ರೇಜಿ ಅನುಕರಣೆಯ ಕಾರಣದಿ೦ದ ಈ ಪದಗಳು ನೇಪಥ್ಯಕ್ಕೆ ಸರಿದು ಸಮಾನಾ೦ತರ ಆ೦ಗ್ಲಪದಗಳು ಗ್ರಾಮ್ಯ ಜನರ ನಾಲಿಗೆಯಲ್ಲೂ ಹರಿದಾಡುವ೦ತಾಯ್ತು. ಇರಲಿ, ನಾನು ಹೇಳ ಹೊರಟಿರುವ ವಿಚಾರ ಬೇರೆಯೇ ಇದೆ. ಆ ಉಡಾಳ ಹುಡುಗ ಸುಮಾರು ಎ೦ಟು ವರ್ಷ ಪ್ರಾಯದವನು, ಗೊ೦ಡಾರಣ್ಯದ೦ತಹ ಒ೦ದು ಹಳ್ಳಿಯಲ್ಲಿ ತು೦ಬುಕುಟು೦ಬದ ಪರಿಸರದಲ್ಲಿ ಆತನಿದ್ದ. ಹೆಸರು ನೀಲಕ೦ಠ. ಇದು ಸುಮಾರು 1930 ನೇ ಇಸವಿಯ ಘಟನೆ. ರಾತ್ರಿಯಿಡೀ ಕು೦ಭದ್ರೋಣ ಮಳೆ ಸುರಿದು ನೆಲ ಮೆದುವಾಗಿತ್ತು. ಭೂಮಿ  ರಸಾತಲಕ್ಕೆ ಕುಸಿದು ಬೀಳುವುದೇನೋ, ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂದು ಮನೆಮ೦ದಿಯೆಲ್ಲ ಮಾತನಾಡುವುದು ಕೇಳಿ ಈ ನೀಲಕ೦ಠನಿಗೆ ಎಲ್ಲಿಲ್ಲದ ಸೋಜಿಗ. ಈತನ ಅಕ್ಕನ ಮಗ ರಾಮು ಕೂಡ ಜತೆಗಿದ್ದ. ಇಬ್ಬರೂ ಒ೦ದೇ ಓರಗೆಯವರು. ಅವನಿಗೂ ಸರಿಸುಮಾರು ಆರೇಳು  ವರುಷ ಪ್ರಾಯ. ಇಬ್ಬರೂ ಶಾಲೆಯ ಮುಖ ಕ೦ಡಿರಲಿಲ್ಲ. ಶಾಲೆಗೇ ಹೋಗಬೇಕಾದರೆ ಆರೇಳು ಕಿಮೀ ದುರ್ಗಮ ಕಾಡಿನ ಹಾದಿಯಲ್ಲಿ ನಡೆಯಬೇಕಿತ್ತು. ಹಾಗಾಗಿ ಸಣ್ಣ ವಯಸ್ಸಿಗೆ ಶಾಲೆಗೇ ಕಳುಹಿಸುತ್ತಿರಲಿಲ್ಲ ಹೆತ್ತವರು. ರಸ್ತೆಯಾಗಲೀ, ವಿದ್ಯುಚ್ಚಕ್ತಿಯಾಗಲೀ ಏನೆಂಬುದೇ ಗೊತ್ತಿಲ್ಲದ, ದಟ್ಟಡವಿಯ ನಡುವೆ ಹುದುಗಿದ್ದ  ಆ ಊರೆ೦ಬ ಅರಣ್ಯ ಸದೃಶ್ಯ ಘಟ್ಟ ಪ್ರದೇಶದಲ್ಲಿ ಇದ್ದದ್ದು  ಬೆರಳೆಣಿಕೆಯ ಮನೆಗಳು. ಹುಲಿಯ ಗರ್ಜನೆ, ಕಾಡುಹ೦ದಿ, ಕಾಡೆಮ್ಮೆಗಳ ನಿತ್ಯ ದರ್ಶನ, ಬಗೆಬಗೆಯ ಹಾವುಗಳ ಚಲನ-ವಲನ ಮನೆಯ ಸುತ್ತ ಅವ್ಯಾಹತವಾಗಿ ಇರುತ್ತಿತ್ತು. ಅದೊ೦ದು ರೀತಿಯಲ್ಲಿ ಪ್ರಾಣಿಗಳೊ೦ದಿಗೆ  ಮಾನವರ ಸಹಬಾಳ್ವೆಯ ಉದಾಹರಣೆಯ೦ತಿದ್ದ ದಿನಗಳು. 


ಆ ದಿನಗಳೇ ಹಾಗೆ. ಪರಿಸರದೊ೦ದಿಗೆ ಹೊ೦ದಿಕೊ೦ಡು ಬಾಳು ಸಾಗುತ್ತಿತ್ತು. ಎಲ್ಲವೂ ಸುರಳೀತ, ಯಾವುದಕ್ಕೂ ಧಾವ೦ತವಿಲ್ಲ. ಸಮಯದ ಇತಿಮಿತಿಗಳಿಲ್ಲ, ರಾಸಾಯನಿಕ ಗೊಬ್ಬರಗಳಿಲ್ಲದೆ ಬೆಳೆದ, ನಳನಳಿಸುತ್ತಿದ್ದ, ಕ೦ಗು ತೆ೦ಗು, ಪಚ್ಚೆ ಹಸಿರಿನ ಪೈರು, ವಿಧವಿಧ ಹಕ್ಕಿ ಪಕ್ಷಿಗಳ ಕೂಜನ, ಹಲಬಗೆಯ ಪ್ರಾಣಿಸ೦ಕುಲದ ಆವಾಸಸ್ಥಾನವಾಗಿತ್ತು ಆ ಪುಟ್ಟ ಹಳ್ಳಿ.  ದೈವ ದೇವರುಗಳೆ೦ದರೆ ಜನರಿಗೆ ಎಲ್ಲಿಲ್ಲದ ಭಯಭಕ್ತಿ. ರಕ್ತೇಶ್ವರಿ, ಚೌಡೇಶ್ವರಿ, ಕಲ್ಲುರ್ಟಿ, ಪಂಜುರ್ಲಿಗಳಿಗೆ ಹೆದರದ ಜನ ಇರಲಿಲ್ಲ.  ರೇಡಿಯೋ ಮಾತು ಪಕ್ಕಕ್ಕಿರಲಿ,  ಆ ಊರಿಗೆ , ವೃತ್ತ ಪತ್ರಿಕೆಗಳಾಗಲೀ, ಯಾವುದೇ ಲಿಖಿತ ವಸ್ತುವಿಷಯ ಕಾಲಿಟ್ಟಿರಲಿಲ್ಲ. ಹಾಗಾಗಿ ಹೊರಗಣ ಪ್ರಪ೦ಚದ ಕಿ೦ಚಿತ್ತೂ ವಿದ್ಯಮಾನ ಅಲ್ಲಿನ ಜನರಿಗಿರಲಿಲ್ಲ, ಜನರ ಮೇಲೆ ಪ್ರಭಾವವೂ ಬೀರಿರಲಿಲ್ಲ. ಹಾಗಾಗಿ ದೇಶವನ್ನು ಬ್ರಿಟಿಷರು ಆಳುತ್ತಿದ್ದಾರೋ, ರಾಜರ ಆಳ್ವಿಕೆ ಇದೆಯೋ ಯಾವುದೂ ಅಲ್ಲಿನವರಿಗೆ ಗೊತ್ತಿರಲಿಲ್ಲ, ಅವರಿಗದು ಬೇಕಾಗಿಯೂ ಇರಲಿಲ್ಲ. ಮೈಯ್ಯಲ್ಲಿ ಕಸುವಿದ್ದಷ್ಟು ದಿನ ರೈತಾಪಿ ಕಸುಬು. ಕಾಸು ಕೂಡಿಡುವ ಅವಶ್ಯಕತೆ ಅ೦ದಿನವರಿಗೆ ಕ೦ಡಿರಲಿಲ್ಲ.     ವಿಜ್ಞಾನ ತ೦ತ್ರಜ್ಞಾನಗಳ ಪ್ರವೇಶ ಆ ಹಳ್ಳಿಗೆ ಆಗಿರಲೇ ಇಲ್ಲ, ಅಸಲಿಗೆ ಆ ಶಬ್ದಗಳೇ ಅಲ್ಲಿನ ಜನರ ಮನದ ಪದಕೋಶದಲ್ಲಿ ಹುಟ್ಟಿರಲಿಲ್ಲ.  ಅದೊ೦ದು ದಟ್ಟ ಮೋಡದ  ದಿನದ೦ದು, ಮಳೆಯ ಹುಟ್ಟೂರೆ೦ದೇ ಖ್ಯಾತವಾಗಿದ್ದ ಆ ಊರಿನಲ್ಲಿ  ಎಡೆಬಿಡದ ಜಲಧಾರೆ. ಬಿಟ್ಟೂ ಬಿಡದೆ ಎರಡು ದಿನ ಸುರಿದಿತ್ತು ಮಳೆ. ಊರಿಗೆ ಊರೇ ದ್ವೀಪವಾಗಿತ್ತು. ಒ೦ದರ್ಥದಲ್ಲಿ ಅದು ಆ ಭಾಗದ ಕಡೆಯ ಊರು. ಊರ ಸರಹದ್ದಿನಲ್ಲೇ ಇತ್ತು ಭಾರೀ ಕಾಡು, ನೂರಾರು ಮೈಲಿ ಹಬ್ಬಿದ್ದ ಆ ಕಾಡು ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾನನ. ತಲೆ ಎತ್ತಿ ನೋಡಿದರೆ ಭೋರ್ಗರೆದು ಸುರಿಯುವ ಬ೦ಡಾಜೆ ಅಬ್ಬಿ ರುದ್ರರಮಣೀಯವಾಗಿರುತ್ತಿತ್ತು. ಎಲ್ಲಿ ನೋಡಿದರಲ್ಲಿ ನೀರ ಬುಗ್ಗೆಗಳು, ಹಳ್ಳಿಗರ ಮಾತಿನಲ್ಲಿ ಹೇಳುವುದಾದರೆ "ಜಲ" ಬ೦ದಿತ್ತು. ಅ೦ದರೆ  ಅ೦ತರ್ಜಲ ಮಟ್ಟ ಭೂಮಿಯ ಮೇಲ್ಮುಖ ತಲುಪಿತ್ತು. ಎಲ್ಲಿ ಅಗೆದರೂ ನೀರು, ನೀರು, ನೀರು. 


ಅ೦ತಹ ದಿನಮಾನದ ಭಾದ್ರಪದ ಮಾಸದ ಒ೦ದು ದಿನ  ಊರಿನ ಹಿರಿಯ ವಾಸುದೇವ ಪ್ರಭುಗಳ ಮನೆಯಲ್ಲಿ ಗಣೇಶನ ಹಬ್ಬ. ಎತ್ತಿನಗಾಡಿಗಳಲ್ಲಿ ಪಯಣಿಸಿ ಬ೦ದಿದ್ದ ಊರ ಪರವೂರ ಜನರೆಲ್ಲಾ ಅಲ್ಲಿ ಸೇರಿದ್ದರು. ಯಕ್ಷಗಾನ ತಾಳಮದ್ದಲೆ ಅ೦ದಿನ ಸ೦ಜೆಯ ಆಕರ್ಷಣೆ. ಯಕ್ಷಗಾನವೆ೦ದರೆ  ರಾತ್ರಿ-ಬೆಳಗಾಗುವ ತನಕ ವರ್ಷಕ್ಕೊ೦ದಾವರ್ತಿ  ನಡೆಯುತ್ತಿದ್ದ ಏಕೈಕ ಮನರಂಜನಾ ಮಾಧ್ಯಮ.  ಕೃಷ್ಣಾರ್ಜುನ ಕಾಳಗ ಅ೦ದಿನ ಪ್ರಸ೦ಗ. ಊರ ಜನರೆಲ್ಲಾ ಬೆಳಕಿಗಾಗಿ ಕೈಯ್ಯಲ್ಲಿ ಸೂಡಿ ದೊ೦ದಿ ಹಿಡಿದು ಪ್ರಭುಗಳ ಮನೆ ತಲುಪಿ, ಮೈಯ್ಯೆಲ್ಲ ಕಿವಿಯಾಗಿಸಿ ಯಕ್ಷಗಾನ ಸವಿಯುತ್ತಿದ್ದರು. ಚಹಾ-ಕಾಫೀ-ಅವಲಕ್ಕಿ, ಕಡ್ಲೆ ಉಸ್ಲಿ ಉಪಾಹಾರಕ್ಕೆ ಕೊರತೆ ಇಲ್ಲದ೦ತೆ ವ್ಯವಸ್ಥೆ ಇತ್ತು. ಮನೆಮಂದಿಯೊ೦ದಿಗೆ  , ಉಡಾಳನೆ೦ದೇ ಖ್ಯಾತಿ ಪಡೆದಿದ್ದ ಈ ನೀಲಕ೦ಠ, ತನ್ನ ಸಮವಯಸ್ಕ ರಾಮು ಜೊತೆಗೆ ಬ೦ದಿದ್ದ.  ರಾತ್ರಿಯಿಡೀ ಚೆ೦ಡೆಮದ್ದಲೆಯ ಸದ್ದಿಗೆ, ಅರ್ಥದಾರಿಗಳ ಮಾತಿಗೆ ಕಿವಿ ಕೊಟ್ಟು ತನಗರಿವಿಲ್ಲದೆ ನಿದ್ದೆಗೆ ಸರಿದಿದ್ದರು. ಹಿರಿಯರೆಲ್ಲ ಯಕ್ಷಗಾನದ ರಸಗವಳ ಸವಿಯುತ್ತಿದ್ದರೆ
, ಹುಡುಗರು  ನಿದ್ದೆಯ ಮ೦ಪರಿನಲ್ಲಿಯೇ ಅಲ್ಲಿ, ಇಲ್ಲಿ ಓಡಾಡಿ ಖುಷಿಗೊಳ್ಳುತ್ತಿದ್ದರು.  ಚೆ೦ಡೆಯ ನಿನಾದ ಅವರ ಕಿವಿಗಳಲ್ಲಿ ಗುಯ್ಗುಡುತ್ತಿತ್ತು.  ಬೆಳಕು ಮೂಡುವ ಹೊತ್ತು, ಸೂರ್ಯ ಘಟ್ಟದ ತುತ್ತ ತುದಿಯ ಗುಡ್ಡದಿ೦ದ ಸೀಳೊಡೆದು ಈ ಊರಿಗೆ ಬೆಳಕು ಚೆಲ್ಲುವ ಸಮಯ.   ಈ ಉಡಾಳ ಹುಡುಗ ನೀಲಕ೦ಠ  ತನ್ನ ವಾರಿಗೆಯ ರಾಮು ಜತೆಗೂಡಿ, ನಿದ್ದೆಯ ಮ೦ಪರಿನಲ್ಲಿಯೇ ಮನೆಯ ಹೊರಗಡೆ ಆಟವಾಡುತ್ತಿದ್ದ, ಮನೆಮ೦ದಿಯೆಲ್ಲ ರಾತ್ರಿಯ ಯಕ್ಷಗಾನ ಸವಿದು ಅರೆನಿದ್ರಾವಸ್ಥೆಯಲ್ಲಿ ಮನೆಗೆ ಬ೦ದು ತಲುಪಿದ್ದರು. ಮನೆಯ ಹೊರಗಣ ಪರಿಸರದಲ್ಲಿ ಮಾವಿನ ಮರದಡಿಯಲ್ಲಿದ್ದ ಪೊಟರೆಯೊಳಗಿ೦ದ ಒ೦ದು ಬಣ್ಣಬಣ್ಣದ ಹಾವು ಹೊರಸರಿದು ಲಾಸ್ಯವಾಡುತ್ತ ಮು೦ದೆ ಸಾಗುತ್ತಿತ್ತು. ಅದರ ಬಣ್ಣ ಅದೆಷ್ಟು ಮನಮೋಹಕ, ಅದರ ಸ್ನಿಗ್ಧ ಸು೦ದರ ಮೈಚರ್ಮ ಆಕರ್ಷಕವಾಗಿತ್ತು. ಆಟವಾಡುತ್ತಿದ್ದ ಈ ಹುಡುಗರು ಆ ಹಾವನ್ನು ಹಿ೦ಬಾಲಿಸಿ ಒ೦ದಷ್ಟು ದೂರ ಹೋದರು. ಇಬ್ಬರಿಗೂ ಆ ಹಾವನ್ನು ಹಿಡಿಯಬೇಕೆ೦ಬ ಆಸೆ. 'ನೀನು ಹಿಡಿ' ಎ೦ದು ನೀಲಕ೦ಠ ರಾಮುವಿಗೆ ಹೇಳುತ್ತಿದ್ದ, ತೆವಳುತ್ತ ಸಾಗುತ್ತಿದ್ದ ಅದರ ಅ೦ದಚೆ೦ದ, ವರ್ಣ ವೈವಿಧ್ಯ ಅಷ್ಟು ಮೋಹಕವಾಗಿತ್ತು.  ಸರಕ್ಕನೆ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟ ರಾಮು ಆ ಹಾವನ್ನು ಹಿಡಿದೇ ಬಿಟ್ಟ. ಅದರ ಜಾರು ಮೈ ತಾಕಿದೊಡನೆ ರೋಮಾಂಚಿತನಾಗಿ ಕೈ ಬಿಟ್ಟು ಬಿಟ್ಟಿದ್ದ.  ಇನ್ನೊಮ್ಮೆ ಹಿಡಿಯುವ ಯತ್ನದ ಭಾಗವಾಗಿ ಕೈ ಹಾಕುವಷ್ಟರಲ್ಲಿ ಆ ವಿಷಪೂರಿತ ಹಾವು ಭುಸುಗುಟ್ಟಿ ಆತನನ್ನು ಕಚ್ಚಿಯೇ ಬಿಟ್ಟಿತ್ತು. ಹಾವನ್ನು ಹಿಡಿಯುವ೦ತೆ ಒತ್ತಾಯಿಸಿದ್ದ ನೀಲಕ೦ಠ ಹೆದರಿ ಅಲ್ಲಿ೦ದ ಕಾಲ್ಕಿತ್ತಿದ್ದ. ರಾಮುವಿನ ಚೀತ್ಕಾರ ಕೇಳಿ ಹೊರಬ೦ದಿದ್ದ ಮನೆಮ೦ದಿಗೆ ವಿಚಾರ ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಹಾವು ಹಿದಿವ೦ತೆ ಪುಸಲಾಯಿಸಿದ ನೀಲಕ೦ಠನು ಅಪರಾಧಿಯ೦ತೆ ನಿ೦ತು ನೋಡುತ್ತಿದ್ದ. ನೋಡ ನೋಡುತ್ತಲೇ ನೀಲಿಗಟ್ಟಿದ ರಾಮುವಿನ ದೇಹ ಅವನ ಬದುಕಿನ ಅಂತಿಮ ಚರಣ ಹಾಡಿಯೇ ಬಿಟ್ಟಿತ್ತು. ಬದುಕುಳಿದ ಉಡಾಳ ಹುಡುಗ ಬೆತ್ತದ ಏಟು ತಿ೦ದು ಅರೆ ಜೀವವಾಗಿದ್ದ. ಇ೦ತಹ ಅನೇಕ ಉಡಾಳತನದ ಪ್ರಸ೦ಗಗಳಲ್ಲಿ ಪೆಟ್ಟು ತಿ೦ದು ಮೈ ಮೆತ್ತಗಾಗಿಸಿಕೊ೦ಡಿದ್ದ ನೀಲಕ೦ಠ ಯುವಾವಸ್ಥೆಗೆ ಬ೦ದಾಗ ಎಳವೆಯ ದಿನಗಳ ತಪ್ಪಿನ ಅರಿವಾಗಿತ್ತು, ಜವಾಬ್ದಾರಿ ಬ೦ದಿತ್ತು. ಬದುಕಿನ ಘೋರತೆ, ಕ್ರೂರತೆಯ ಸತ್ಯದರ್ಶನವಾಗಿತ್ತು. ಮನೆಬಿಟ್ಟು ದುಡಿಯಲು ಹೊರಟ ಆತ ಬೆ೦ಗಳೂರು  ತಲುಪಿ, ಕಷ್ಟ-ಸ೦ಕಷ್ಟಗಳ  ಚಕ್ರವ್ಯೂಹ ಗಳನ್ನೂ ಭೇದಿಸಿ, ಜೀವನಾನುಭವದ ಅಗ್ಗಿಷ್ಟಿಕೆಯಲ್ಲಿ ನೊ೦ದು ಬೆ೦ದು ರೂಪು ಪಡೆದಿದ್ದ. ವೃತ್ತಿ ಪ್ರವೃತ್ತಿ ಗಳಲ್ಲಿ ಯಶಸ್ವಿಯಾದ. ಶಿಕ್ಷಕ, ಕವಿ, ಸಾಹಿತಿ ಎ೦ದು ಹೆಸರಾದ.  ಆದರೆ ತನ್ನ ಎ೦ದಿನ ಬಾಲಿಶ ಯೋಚನೆಯ,  ಉಡಾಳ ಮನಸ್ಥಿತಿಯನ್ನು ಕೊನೆವರೆಗೂ ಬಿಟ್ಟಿರಲಿಲ್ಲ. ಬಹುಶಃ ಅದುವೇ ಆತನ ಜೀವನೋತ್ಕರ್ಶಕ್ಕೆ ಕಾರಣವಾಗಿರಬೇಕು. 

ಇದು ಕಥೆಯಲ್ಲ ವಾಸ್ತವ, ಈತ ಯಾರೆ೦ದು ಊಹಿಸಿ!!!

ಚಿತ್ರ: ಅ೦ತರ್ಜಾಲ

Friday, August 5, 2011

ತಳುಕಿನ ವೆ೦ಕಣ್ಣಯ್ಯ

ತಳುಕಿನ ವೆ೦ಕಣ್ಣಯ್ಯ (1885-1936)
ಅವರು ಕನ್ನಡ ಸಾಹಿತ್ಯ ಲೋಕದ ಆದ್ಯ ಪ್ರವರ್ತಕರಲ್ಲಿ ಒಬ್ಬರು.  ಇವರನ್ನು ಆಧುನಿಕ ಕನ್ನಡ ಸಾಹಿತ್ಯದ ಅಶ್ವಿನಿಕುಮಾರರೆಂದು ಕರೆಯಲಾಗುತ್ತದೆ. ಇವರು ಪ್ರಾರಂಭಿಸಿದ ಕನ್ನಡ ಎಂ.ಎ. ತರಗತಿಯ ಪ್ರಥಮ ಬ್ಯಾಚಿನಲ್ಲಿದ್ದವರುಗಳಲ್ಲಿ ಒಬ್ಬರು ಕುವೆಂಪುರವರು. ಪುಟ್ಟಪ್ಪನವರು ತಮ್ಮ ಗುರುಗಳನ್ನು ದೇವರೆಂದೇ ತಿಳಿದಿದ್ದರಂತೆ.  ನೋಡಲು ಎತ್ತರದ ಆಳು, ಟಿ.ಎಸ್.ವಿಯವರು. ಬಿ.ಎ. ಮುಗಿಸಿದ ತರುವಾಯ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕನ್ನಡ ವಿಷಯದಲ್ಲಿ ಎಂ.ಎ. ಮಾಡಿ ಮುಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ತಮ್ಮ ಶಿಷ್ಯರೆಲ್ಲರನ್ನೂ ತಮ್ಮ ಮಕ್ಕಳಂತೆ ಕಂಡು, ಕೈಲಾಗದವರಿಗೆ ಊಟ ವಸತಿಗಳನ್ನೂ ಕೊಟ್ಟು ಪಾಠ ಹೇಳಿಕೊಟ್ಟರು. ಕನ್ನಡ ಎಂ.ಎ.ನ ಮೊದಲನೆಯ ಬ್ಯಾಚಿನಲ್ಲಿ ಕುವೆ೦ಪು  ಸೇರಿದಂತೆ ಹಲವರಿದ್ದರು. ಎಲ್ಲರನ್ನೂ ತಮ್ಮ ಮನೆಗೆ ಕರೆದೊಯ್ದು ಊಟ ಹಾಕಿ, ಪಾಠ ಹೇಳಿಕೊಟ್ಟವರು. ಅವರಂತೆಯೇ ಅಷ್ಟೇ ಎತ್ತರಕ್ಕೇರಿದವರು ಅವರ ತಮ್ಮಂದಿರಲ್ಲೊಬ್ಬರಾದ ತ.ಸು.ಶಾಮರಾಯರು. ಅವರಲ್ಲೂ ಇದೇ ಗುಣವನ್ನು ಕಂಡು, ಅವರ ಶಿಷ್ಯರಾಗಿದ್ದ ಜಿ.ಎಸ್.ಶಿವರುದ್ರಪ್ಪ ನವರು ಅವರ ಬಗ್ಗೆ ಒಂದು ಕವನವನ್ನೇ ರಚಿಸಿದ್ದರು. ಅದು ಬಹಳ ಜನಪ್ರಿಯವೂ ಹೌದು. ಅದೇ - ಎದೆ ತುಂಬಿ ಹಾಡಿದೆನು ಅಂದು ನಾನು ...   ಕುವೆ೦ಪು ಅವರಿಗೂ ಗುರುಗಳಾಗಿದ್ದ ವೆ೦ಕಣ್ಣಯ್ಯ ನವರು ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರು.

ವೆ೦ಕಣ್ಣಯ್ಯನವರ ಮನೆಯಲ್ಲಿ ನಿತ್ಯ ಸಾಹಿತ್ಯ ದಾಸೋಹ. ಅಲ್ಲಿ ಪ್ರತಿನಿತ್ಯ ಸಾಹಿತ್ಯ ಗೋಷ್ಠಿ ನಡೆಯುತ್ತಿತ್ತು. ಅದರಲ್ಲಿ ಪಾಲ್ಗೊಳ್ಳುತ್ತಿದ್ದವರಲ್ಲಿ ಬಿ.ಎಂ.ಶ್ರೀ, ತೀನ೦ ಶ್ರೀ  ಎ.ಆರ್.ಕೃ ಮುಂತಾದವರನ್ನು ಹೆಸರಿಸಬಹುದು.ಡಿ.ವಿ.ಗು೦ಡಪ್ಪ  ನವರು ಮಂಕುತಿಮ್ಮನ ಕಗ್ಗದ ಮುಖಪುಟದಲ್ಲಿ ಟಿ.ಎಸ್.ವಿ, ಎ.ಆರ್.ಕೃ ಮತ್ತು ಮೋಕ್ಷಗುಂಡಂ ಕೃಷ್ಣಮೂರ್ತಿಗಳನ್ನು  (ಮೋಕ್ಷ ಗು೦ಡ೦ ವಿಶ್ವೇಶ್ವರಯ್ಯ ನವರ ಸಾಕು ಮಗ) ಮೂವರು ಮೇರು ಪರ್ವಗಳೆಂದು ಹೆಸರಿಸಿದ್ದಾರೆ. ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಸಾಹಿತ್ಯ ಗೋಷ್ಠಿಯಲ್ಲಿ ಟಿ.ಎಸ್.ವಿ.ಯವರು ಎಷ್ಟರ ಮಟ್ಟಿಗೆ ತಲ್ಲೀನರಾಗುತ್ತಿದ್ದರೆಂದರೆ, ಒಮ್ಮೆ ಅವರ ನವಜಾತ ಕೂಸು ಮರಣ ಹೊಂದಿ ಮನೆಯವರೆಲ್ಲರೂ ಗೊಳೋ ಎಂದು ಅಳುತ್ತಿದ್ದರೆ, ಒಳಗೆ ಹೋಗಿ ಮತ್ತೆ ಬಂದು ಸಾಹಿತ್ಯ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರಂತೆ. ಅದಕ್ಕೆ ಅಲ್ಲಿದ್ದ ಒಬ್ಬರು ‍ಯಾರೋ ಹೇಳಿದ್ದರಂತೆ, 'ಒಳಗೆ ಅಳುತ್ತಿದ್ದಾರೆ, ಏನೋ ಅಚಾತುರ್ಯವಾಗಿದೆ, ನೀವು ನೋಡುವುದಿಲ್ಲವೇ'. ಅದಕ್ಕಿವರು ಎಲ್ಲ ದೈವನಿಯಾಮಕ - ನಡೆಯುವುದೆಲ್ಲವೂ ನಡೆಯುತ್ತಲೇ ಇರುತ್ತದೆ ಎಂದಿದ್ದರಂತೆ. ಎಂದಿಗೂ ಹೆಚ್ಚಿನ ಸಂತೋಷ ಅಥವಾ ದು:ಖ ವ್ಯಕ್ತಪಡಿಸದ ಸ್ಥಿತಪ್ರಜ್ಞ  ವ್ಯಕ್ತಿತ್ವ ಅವರದ್ದು.  ಎತ್ತರದ ಆಳ್ತನ ಹೊ೦ದಿದ್ದ ವೆ೦ಕಣ್ಣಯ್ಯನವರ ಬಳಿ ತಮಾಷೆಯಾಗಿ ಕೈಲಾಸ೦ ಅವರು ಹೀಗೆ ಹೇಳುತ್ತಿದ್ದರ೦ತೆ - ಸಾರ್ ಅಲ್ಲೇ ಮೇಲೆ ಸ್ವರ್ಗದಲ್ಲಿ ನನ್ನ ಪೂರ್ವಜರು ಕ್ಷೇಮವೇ ಸ್ವಲ್ಪ ನೋಡಿಬಿಡಿ',

ಅವರು ಕನ್ನಡ ಸಾರಸ್ವತ ಲೋಕದ ವಿಭೂತಿ ಪುರುಷ, ಅದೆಷ್ಟೋ ಶಿಷ್ಯ ಸಮೂಹವನ್ನು ಸೃಜಿಸಿದ ಮಹಾಜೀವ. ಅವರು ಕನ್ನಡದ ಉದ್ದಾಮ ಸಾಹಿತಿಗಳ ಗುರುಗಳು. ಪ್ರಾತಃ ಸ್ಮರಣೀಯರು.
ಚಿತ್ರ:ಅ೦ತರ್ಜಾಲ

Monday, July 25, 2011

ನಿರಂಜನರಾದ ಕುಳಕು೦ದ ಶಿವರಾಯರು

ನಿರ೦ಜನ       
ಗಾ೦ಧೀಜಿ, ಕಾರ್ಲ್ ಮಾರ್ಕ್ಸ್ ಮತ್ತು ಲೆನಿನ್ ರಿ೦ದ ಪ್ರಭಾವಿತರಾಗಿದ್ದವರಿವರು. ಸ್ವಾತ೦ತ್ರ್ಯ ಪೂರ್ವದಲ್ಲಿಯೇ  ಕಮ್ಯುನಿಸ್ಟ್ ಸಿದ್ಧಾ೦ತಗಳಿಗೆ ಬದ್ಧರಾಗಿ ತಮ್ಮ ಬದುಕನ್ನು ರೂಪಿಸಿಕೊ೦ಡವರು.  ದಕ್ಷಿಣ ಕನ್ನಡ ಜಿಲ್ಲೆಯ ಕುಳಕು೦ದ ಎ೦ಬ ಪುಟ್ಟ ಊರಿನಿ೦ದ ಬ೦ದವರು.  ಹುಟ್ಟಿದ್ದು  1924ರಲ್ಲಿ   ಅವರು ಕುಳಕು೦ದ ಶಿವರಾಯರು.  ವಿದ್ಯಾರ್ಥಿ ದೆಸೆಯಿ೦ದಲೇ ರಾಜಕೀಯ, ಸಾಮಾಜಿಕ ಮತ್ತು ಸಮಕಾಲೀನ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿ ಚಿ೦ತಿಸುವ ಧೋರಣೆಯನ್ನು ತಮ್ಮಲ್ಲಿ ಅಳವಡಿಸಿಕೊ೦ಡವರು. ಅವರಲ್ಲಿ  ಹೋರಾಟದ ಮನೋಭಾವ ಅಚಲವಾಗಿತ್ತು.  ಅರ್ಧ ತೋಳಿನ ಬನಿಯನ್, ಬಿಳಿಯ ಅಡ್ಡ ಪ೦ಚೆ, ತಲೆಯಲ್ಲೊ೦ದು ಖಾದಿ ಟೋಪಿ, ಕಾಲಿಗೊ೦ದು ಬಳೆ, ಇದು  ಅವರ ದೈನ೦ದಿನ ದಿರಿಸು.  ಒಮ್ಮೆ ಅವರು ಮು೦ಬೈ ನಲ್ಲಿ ನಡೆದ ಪ್ರಗತಿಶೀಲ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದರು. ಅಲ್ಲಿ೦ದ ಬ೦ದ ನ೦ತರ ಅವರ ಬದುಕು, ಧೋರಣೆ, ದಿರಿಸು ಎಲ್ಲವೂ ಬದಲಾಗಿತ್ತು. ಗಾ೦ಧೀ ಟೋಪಿಯನ್ನು ಕೆಳಗಿಳಿಸಿ ಅವರು ಕಮ್ಯುನಿಸ್ಟ್ ತತ್ವಕ್ಕೆ ಬದ್ಧರಾದರು. ಕ್ರಾ೦ತಿಕಾರಿ ಧೋರಣೆ ಅವರಿಗೆ ಪ್ರಿಯವಾಯ್ತು.   ಆ ನ೦ತರದ ಅವರ ಬದುಕು ಹೋರಾಟದ್ದು. ಹಲವು ಕಾರ್ಮಿಕ ಚಳುವಳಿಗಳಲ್ಲಿ ಅವರು ಸಕ್ರಿಯರಾಗಿದ್ದರು. ಜೈಲುವಾಸ, ಬೀದಿಗಿಳಿದು ಹೋರಾಟ, ಬಾವುಟ ಹಿಡಿದು ಪ್ರದರ್ಶನ, ಊರೂರು ಅಲೆದಾಟ ಇದೆಲ್ಲವನ್ನೂ ಮಾಡಿದರು.  ಅವರೊಳಗೊಬ್ಬ ಅಪರೂಪದ ಬರಹಗಾರನಿದ್ದ,  ಬೆ೦ಗಳೂರು, ಮಂಗಳೂರು, ಹುಬ್ಬಳ್ಳಿ , ಮು೦ಬೈ - ಹೀಗೆ ಅವರ ಕಾರ್ಯವ್ಯಾಪ್ತಿ ಹಿರಿದು. ಹುಬ್ಬಳ್ಳಿಯಲ್ಲಿ ಕಮ್ಯುನಿಸ್ಟ್ ಪತ್ರಿಕೆ "ಜನಶಕ್ತಿ"ಗೆ ಅವರು ಸ೦ಪಾದಕರಾಗಿದ್ದರು. ಪ್ರಗತಿಶೀಲ ಸಾಹಿತ್ಯದ ಪ್ರತಿಪಾದಕರಾಗಿದ್ದರು.  ಸ್ವಾತ೦ತ್ರ್ಯಾ ನ೦ತರ 1948 ರಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ನಿಷೇಧ ಹೇರುವ ನಿರ್ಧಾರಕ್ಕೆ ಸರಕಾರ ಬ೦ದಿತ್ತು.  ಆ ಕಾಲಘಟ್ಟದಲ್ಲಿ ಕಮ್ಯುನಿಸ್ಟ್ ನಾಯಕರನ್ನು ಬ೦ಧಿಸುವ ಕಾರ್ಯ ವ್ಯಾಪಕ ವಾಗಿತ್ತು.  ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳಿಗಾಗಿ ಊರೂರು ಸುತ್ತುತ್ತಿದ್ದ ಕುಳಕು೦ದ ಶಿವರಾಯರು ಕೆಲವೆಡೆ ಶಿ.ರಾ.ಕುಳಕು೦ದ ಆಗಿದ್ದರು. ಮು೦ದೆ ಹೆಸರು ಬದಲಿಸಿಕೊ೦ಡು ಶಾಶ್ವತವಾಗಿ "ನಿರಂಜನ" ಆದರು.  ಅದೇ ಹೆಸರಿನಿ೦ದ ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯ ಕೃತಿಗಳನ್ನಿತ್ತರು. ಹಲವಾರು ವರ್ಷ ಭೂಗತರಾಗಿದ್ದುಕೊ೦ಡೇ ತಮ್ಮ ಬರವಣಿಗೆಯ ಮೂಲಕ  ಜನಪ್ರಿಯರಾದರು.  ಪುರೋಗಾಮಿ ಸಾಹಿತ್ಯ ಎ೦ಬ ಪ್ರಕಾಶನ ಸ೦ಸ್ಥೆ ಸ್ಥಾಪಿಸಿ ಸಾಹಿತ್ಯ ರ೦ಗದಲ್ಲಿಯೂ ಗುರುತಿಸಲ್ಪಟ್ಟರು. ವೆ೦ಕಟಲಕ್ಶ್ಮಿ ಎ೦ಬ ವೈದ್ಯೆಯ ಪರಿಚಯವಾಗಿ ಮದುವೆಯಾಯ್ತು. ಆ ವೆ೦ಕಟಲಕ್ಶ್ಮಿ ಬೇರಾರೂ ಅಲ್ಲ ಕನ್ನಡ ಸಾಹಿತ್ಯ ಲೋಕಕ್ಕೆ ವೈದ್ಯಕೀಯ ವಿಚಾರಗಳ ಕುರಿತಾದ ಹಲವಾರು ಕೃತಿಗಳನ್ನು ಕೊಟ್ಟ ಜನಪ್ರಿಯ ಲೇಖಕಿ ಅನುಪಮಾ ನಿರಂಜನ.


ನಿರಂಜನರು, ಸಾಹಿತಿ, ಪತ್ರಕರ್ತ,ಅ೦ಕಣಕಾರ,  ಕಾದ೦ಬರಿಕಾರ ಹೀಗೆ ಹಲಬಗೆಯ ಪರಿವೇಷಗಳಲ್ಲಿ ತಮ್ಮನ್ನು ತೊಡಗಿಸಿಕೊ೦ಡರು. ಪ್ರಗತಿಶೀಲ ಸಾಹಿತ್ಯದ ಅಭಿವೃಧ್ಧಿಗಾಗಿ, ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತನಾಗಿ ಮತ್ತು ಸಾಹಿತಿಯಾಗಿ ನಿರ೦ಜನರು ಮಾಡಿದ ಸಾಧನೆ ವಿಶಿಷ್ಟವಾದದ್ದು. ಮುಖ್ಯವಾಗಿ ಅವರ ಸ೦ಪಾದಕತ್ವದ ‘ಜ್ಞಾನ ಗ೦ಗೋತ್ರಿ’ ಮತ್ತು ಇಪ್ಪತ್ತೈದು ಸ೦ಪುಟಗಳ ಜಗತ್ತಿನ ವಿವಿಧ ದೇಶ ಭಾಷೆಗಳ ಮನತಟ್ಟುವ ಕಥೆಗಳ ಸ೦ಗ್ರಹ ‘ವಿಶ್ವ ಕಥಾಕೋಶ’ – ಇವು ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒ೦ದಾಗಿವೆ.


ಜೀವಿತದ ಕೊನೆಗಾಲದಲ್ಲಿ ಬೆ೦ಗಳೂರಿನಲ್ಲಿಯೇ ವಾಸವಿದ್ದ ನಿರಂಜನರನ್ನು  ಪಾರ್ಶ್ವವಾಯು ಕ೦ಗೆಡಿಸಿತ್ತು. ಆದರೂ ಅವರೊಳಗಿನ ಕ್ರಾ೦ತಿಕಿಡಿ ಉಜ್ವಲವಾಗಿತ್ತು.  ಅವರ ಧೋರಣೆಗೆ ಒಗ್ಗುವ ಸಭೆ ಸಮಾರ೦ಭಗಳು ಎಲ್ಲೇ ಇದ್ದರೂ ಕಷ್ತ್ರ ಪಟ್ಟು ಹೋಗಿ ಭಾಗವಹಿಸುತ್ತಿದ್ದರು. ಅವರಲ್ಲಿದ್ದ ಅದಮ್ಯ ಜೀವನ ಪ್ರೀತಿ ಅಂಥಾದ್ದು. 
 
ಚಿತ್ರ:ಅ೦ತರ್ಜಾಲ 


Wednesday, July 20, 2011

ಈ ಕವಿಪು೦ಗವ ಅಭಿನವ ಕಾಳಿದಾಸ

ಎಸ್.ವಿ.ಪರಮೇಶ್ವರ ಭಟ್ಟ  
ಹೇಮಂತ ಋತುರಾಜನಿಳೆಗೆ ಬಂದಿಳಿವಂದು, 
ಹೂವಿಲ್ಲ ಹಸುರಿಲ್ಲ ಚಿಗುರೆಲೆಗಳಿಲ್ಲ,
ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ, 
ಕುಸುಮ ಗಂಧವ ತರುವ ಮರುತನಿಲ್ಲ" 

ಇ೦ತಹ ನೂರಾರು ಕವಿತೆಗಳ ಮೂಲಕ, ಕಬ್ಬಿಣದ ಕಡಲೆಯ೦ತಿದ್ದ ಸ೦ಸ್ಕ್ರತ ಉದ್ಗ್ರಂಥಗಳನ್ನು ಕನ್ನಡೀಕರಿಸುವ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿ ಸ್ಥಾನ ಪಡೆದ ಶೃ೦ಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು, ಕನ್ನಡ ಸಾಹಿತ್ಯದ ಸ೦ದರ್ಭದಲ್ಲಿ "ಅಭಿನವ ಕಾಳಿದಾಸ" ಎ೦ದೇ ಹೆಸರಾದವರು.  ಇದಕ್ಕೆ ಕಾರಣ ಅವರ ಕನ್ನಡ ಕಾಳಿದಾಸ ಮಹಾಸ೦ಪುಟ. ಎಳವೆಯಲ್ಲಿಯೇ ತಾಯ್ತ೦ದೆಯವರನ್ನು ಕಳೆದು ಕೊ೦ಡ ಇವರು ಬದುಕಿನುದ್ದಕ್ಕೂ ಕಷ್ಟಗಳ ಸರಮಾಲೆಯನ್ನು ಹಾಸಿ ಹೊದ್ದು ಬದುಕಿದವರು.  ಶಿಕ್ಷಕರಾಗಿ ವೃತ್ತಿ ಆರ೦ಭಿಸಿ ಕನ್ನಡದ ಪ್ರೊಫೆಸರ್ ಆಗಿ ನಾಡಿನುದ್ದ ಓಡಾಡಿ ಕನ್ನಡದ ಕ೦ಪು ಸೂಸಿದ ಭಟ್ಟರಿಗೆ ಅಪಾರ ಶಿಷ್ಯವರ್ಗ. ಶಿಷ್ಯರಿಗೆಲ್ಲ ಅವರು "ಎಸ್ವಿಪೀ" ಎ೦ದೇ ಪರಿಚಿತ. ಅವರು ಸ್ನೇಹಜೀವಿ. ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ,ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮುಖ್ಯಸ್ಥರಾಗಿದ್ದ ಅವರು  ಅನೇಕ ವರ್ಷಗಳ ಕಾಲ ಮಂಗಳೂರನ್ನು  ಸಾಹಿತ್ಯ ಸಂಸ್ಕೃತಿಗಳ ಕೇಂದ್ರವಾಗಿ ಮಾಡಿಕೊಂಡು , ಕರಾವಳಿಯ ಉದ್ದಕ್ಕೂ ಸಾಧಿಸಿದ್ದು ದಿಗ್ವಿಜಯ. 


ತಮ್ಮ ಶಿಷ್ಯವರ್ಗದ ಮೇಲೆ ಅವಿನಾಭಾವದ ಪ್ರೀತಿ-ವಿಶ್ವಾಸದ ಸಿ೦ಚನ, ತಮ್ಮ ಮನೆಮಕ್ಕಳ೦ತೆ  ವಿದ್ಯಾರ್ಥಿಗಳನ್ನು  ಕಾಣುತ್ತಿದ್ದ ರೀತಿ ಅವರ ಮೇಲೆ ಎಲ್ಲರಿಗೂ ಗೌರವ ಉಕ್ಕಲು ಕಾರಣವಾಗಿತ್ತು.  ಪುಸ್ತಕ ಪ್ರಕಟಣೆ ಅವರ ಗೀಳು. ಶಿಷ್ಯರ, ಮಿತ್ರರ, ಸಹೋದ್ಯೋಗಿ ಗಳ ಮತ್ತು ತಮ್ಮ ಪರಿಚಯ ವಲಯಕ್ಕೆ ಬ೦ದ ಎಲ್ಲರಿಗೂ ಪುಸ್ತಕ ಪ್ರಕಟಣೆಗೆ ಮು೦ದಾಗುವ೦ತೆ ಪ್ರೇರೇಪಿಸುತ್ತಿದ್ದ ಜೀವಿ. ಅವರ ಮನೆತು೦ಬಾ ಪುಸ್ತಕಗಳದೆ ರಾಶಿ.  ಅವರ ಕನ್ನಡ ಪ್ರೀತಿ ಅ೦ಥಾದ್ದು. ಅನೇಕ ಸಲ ಸಾಲ ಮಾಡಿ ಕನ್ನಡ ಕೃತಿ ಪ್ರಕಟಣೆ ಮಾಡಿದ ಮಹಾನುಭಾವ.  ಅಷ್ಟೇ ಅಲ್ಲ ತಮ್ಮ ಶಿಷ್ಯರ ಜೊತೆ ಹೆಗಲಿಗೆ ಪುಸ್ತಕ ತು೦ಬಿದ ಚೀಲ ಹಾಕಿಕೊ೦ಡು ಮ೦ಗಳೂರಿನ ಬಿಸಿಲ ರಸ್ತೆಗಳಲ್ಲಿ ದಣಿವಿನ ಕುರುಹೂ ಇಲ್ಲದ ನಗುಮೊಗದೊ೦ದಿಗೆ ಓಡಾಡಿ ಪುಸ್ತಕ ಪರಿಚಾರಿಕೆ ಮಾಡಿದವರು. ಯಕ್ಷಗಾನ ತಾಳಮದ್ದಲೆಯಲ್ಲೂ ಇವರಿಗೆ ಅಪಾರ ಆಸಕ್ತಿಯಿತ್ತು.  ಆಗ  ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಿದ್ದ ಮ೦ಗಳೂರು ಸ್ನಾತಕೋತ್ತರ ಕೇ೦ದ್ರಕ್ಕೆ "ಮ೦ಗಳಗ೦ಗೋತ್ರಿ  " ಎ೦ಬ  ಹೆಸರನ್ನು ಸೂಚಿಸಿದ್ದು ಇವರೇ.  ಅವರೊಬ್ಬ ಮಹಾಗುರು.  ತಮ್ಮ ವಿದ್ಯಾರ್ಥಿಗಳ ಜ್ಞಾನಕೋಶವನ್ನು ಸ೦ಪದ್ಭರಿತವಾಗಿಸುವ ದಿಸೆಯಲ್ಲಿ ಈ ಗುರುವಿಗೆ ಅದಮ್ಯ ಆಸಕ್ತಿ.  ಕನ್ನಡದ ಸಮಕಾಲೀನ ಸಾಹಿತಿಗಳನ್ನೆಲ್ಲ ಮ೦ಗಳೂರಿಗೆ ಕರೆಸಿಕೊ೦ಡು ಅವರಿ೦ದ ಭಾಷಣ ಏರ್ಪಡಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯದ ವಾತಾವರಣ ಜಾಗೃತವಾಗುವ೦ತೆ ನೋಡಿಕೊಳ್ಳುತ್ತಿದ್ದವರು. ಅವರಿಗೆ ಪರಂಪರೆಯ ಬಗ್ಗೆ ಅಪಾರವಾದ ಗೌರವ ,ಹಿರಿಯರ ಬಗ್ಗೆ ಗುರುಗಳ ಬಗ್ಗೆ ಅವರ ಒಳ್ಳೆಯ ಗುಣಗಳ ಬಗ್ಗೆ ಅಪಾರ ವಿಶ್ವಾಸ. ಅವರೊಬ್ಬ ಅಜಾತ ಶತ್ರು. ಹಸಿದ ಹೊಟ್ಟೆಯಲ್ಲೇ ಪಾಠ ಮಾಡಬಲ್ಲ, ಮೊಗೆದಷ್ಟೂ ಮುಗಿಯದ ಜ್ಞಾನ ಸೆಲೆ ಹೊ೦ದಿದ್ದ ವಿದ್ವತ್ತಿನ ಗಣಿ. 

ಅವರಿದ್ದಲ್ಲಿ ನಗುವಿನ ಅನುರಣನ.  ಅವರ ಪರಿಚಯ ವಲಯಕ್ಕೆ ಒಮ್ಮೆ ಹೊಕ್ಕವರು ಅನುಭವಿಸುತ್ತಿದ್ದ ಪ್ರೀತಿ-ವಿಶ್ವಾಸ ಅಂಥಾದ್ದು.  ಯಾರನ್ನು ನೋಯಿಸದ, ಎಲ್ಲರನ್ನು ನಗಿಸುತ್ತಾ, ತಾವೂ ನಗುತ್ತ, ಮಕ್ಕಳ೦ತೆ  ಇರುತ್ತಿದ್ದ ಭಟ್ಟರ ವ್ಯಕ್ತಿತ್ವ ಅಪರೂಪದ್ದು. ತಮ್ಮೊಳಗೆ ನೂರೆ೦ಟು ನೋವುಗಳ  ಜ್ವಾಲಾಮುಖಿಯಿದ್ದರೂ ಯಾರಿಗೂ ತೋರಗೊಡದ ಪ್ರಶಾ೦ತ ವ್ಯಕ್ತಿತ್ವ.   ಸರಳತೆ, ಸಜ್ಜನಿಕೆ, ಉದಾರತೆ ಇವುಗಳಿಗೆಲ್ಲ ಅನ್ವರ್ಥನಾಮದ೦ತಿದ್ದ ಭಟ್ಟರ ಮನೋಬಲ ವಿಶೇಷವಾದದ್ದು.  ಮನೆಯಲ್ಲಿ ಮಡದಿ ಕಾಯಿಲೆಗೆ ಒಳಗಾಗಿ ನರಳುತ್ತಿದ್ದರೂ, ಪತ್ನಿಯ ಅನಾರೋಗ್ಯ ಅವರನ್ನು ಹೈರಾಣು ಮಾಡಿದ್ದರೂ, ಅದನ್ನು ಯಾರಿಗೂ ತೋರಗೊಡದೆ ತರಗತಿಯಲ್ಲಿ ನಗುನಗುತ್ತ ಪಾಠ ಮಾಡುತ್ತಿದ್ದ ಸ್ಥಿತಪ್ರಜ್ಞರು.

ಸಭೆಗೆ ಬ೦ದು ಮುಖ ತೋರಿಸಿ, ತುರ್ತು ಕೆಲಸವಿಲ್ಲದಿದ್ದರೂ ಬೇರೊ೦ದು ಕಾರ್ಯಕ್ರಮಕ್ಕೆ ಹೋಗಲೇಬೇಕಾಗಿದೆ ಎ೦ದು ಸುಳ್ಳು ಹೇಳಿ ವೇದಿಕೆಯಿ೦ದ ಕಾಲ್ಕೀಳುವ ಇ೦ದಿನ ದಿನಮಾನದ ರಾಜಕಾರಣಿ-ಸಾಹಿತಿಗಳು ಇದನ್ನು ಗಮನಿಸಬೇಕು. ಒಮ್ಮೆ ಅವರು ಯಾವುದೋ ಊರಿನಲ್ಲಿ ಸಮಾರ೦ಭವೊ೦ದರಲ್ಲಿ ಭಾಷಣ ಮಾಡುತ್ತಿದ್ದಾಗ, ಮೈಸೂರಿನಲಿದ್ದ ಅವರ ಮಗ ಅಪಘಾತಕ್ಕೆ ಒಳಗಾದ ಸುದ್ದಿ ಬ೦ದಿತ್ತು.  ಆದರೆ ಅದನ್ನು ತೋರಗೊಡದೆ, ತಮ್ಮ ಸರದಿ ಬರುವವರೆಗೆ ಕಾದು ಅಲ್ಲಿದ್ದ ಜನರನ್ನು ನಗಿಸಿ, ತಮ್ಮ ಎ೦ದಿನ ಶೈಲಿಯಲ್ಲಿಯೇ ಭಾಷಣ ಮಾಡಿದ ನ೦ತರವೇ ಮಗನನ್ನು ನೋಡಲು ತೆರಳಿದ್ದರು.  ಪ್ರಶಸ್ತಿ ಸಮ್ಮಾನಗಳಿಗೆ ಎ೦ದೂ  ಹಾತೊರೆಯದ ಇವರು ಅಪರೂಪದ ಪ್ರತಿಭೆ. ಮರೆಯಲಾಗದ ವ್ಯಕ್ತಿತ್ವ.

ನನಗಿಷ್ಟವಾದ ಅವರದೊ೦ದು ಭಾವಗೀತೆಯ ಪೂರ್ಣಪಾಠ ಇಲ್ಲಿದೆ ನಿಮ್ಮ ಓದಿಗಾಗಿ. ನಿಮಗೂ ಇದು ಇಷ್ಟವಿರಬಹುದು.


ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ ತೂಗುತಿತ್ತು
ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗನಸೂಡಿ ಸಾಗುತಿತ್ತು||ಪ||

ಮುದುಡಿರುವ ಪೊದರಿನಲಿ ನಸುಗಂಪಿನುದರದಲಿ
ಜೇನುಗನಸಿನಾ ಹಾಡು ಕೇಳುತಿತ್ತು
ತುಂಬು ನೀರಿನ ಹೊಳೆಯೊಳ್ ಅಂಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನು ಹಾಡುತಿತ್ತು ||ತಿಳಿ||

ಬರುವ ಮುಂದಿನ ದಿನದ ನವ ನವೋದಯಕ್ಕಾಗಿ
ಪ್ರಕೃತಿ  ತಪವಿರುವಂತೆ ತೋರುತಿತ್ತು
ಶಾಂತ ರೀತಿಯಲಿರುಳು ಮೆಲ್ಲ ಮೆಲ್ಲನೆ ಉರುಳಿ
ನಾಳಿನ ಶುಭೋದಯ ಸಾರುತಿತ್ತು ||ತಿಳಿ||

ಚಿತ್ರ:ಅ೦ತರ್ಜಾಲ

Tuesday, July 19, 2011

ಸಣ್ಣ ಮೀನುಗಳಿಗೂ ಒ೦ದಿಷ್ಟು ಪೌಷ್ಟಿಕ ಆಹಾರ

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ  ಉದ್ಯಮಗಳು ನಮ್ಮ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿವೆ.  ರೂ:25 ಲಕ್ಷ ಬ೦ಡವಾಳದೊಳಗಿನ ಉದ್ಯಮವನ್ನು "ಅತಿಸಣ್ಣ" ಎ೦ತಲೂ 25 ಲಕ್ಷದಿ೦ದ ಮೇಲ್ಪಟ್ಟ ಆದರೆ ರೂ:5 ಕೊಟಿಯೋಳಗಿನ ಬ೦ಡವಾಳದ ಉದ್ಯಮವನ್ನು "ಸಣ್ಣ" ಎ೦ತಲೂ 5 ರಿ೦ದ 10 ಕೋಟಿ  ರೂಪಾಯಿ ಬ೦ಡವಾಳದ ಉದ್ಯಮವನ್ನು "ಮಧ್ಯಮವರ್ಗದ ಉದ್ದಿಮೆ" ಎ೦ತಲೂ ಪರಿಗಣಿಸಲಾಗಿದೆ. ಆದರೆ ಈ ಉದ್ಯಮಗಳಿಗೆ ಸರಕಾರದಿಂದ ಸೂಕ್ತ ಪ್ರೋತ್ಸಾಹ ಮತ್ತು ಸಹಾಯದ ಕೊರತೆ ಇದೆ. ನಮ್ಮ ಸರಕಾರೀ ಯಂತ್ರ ದೊಡ್ಡ ದೊಡ್ಡ ತಿಮಿ೦ಗಿಲದ೦ತಹ ಉದ್ಯಮ ಸಮೂಹಗಳಿಗೆ  ಸಹಾಯ, ರಿಯಾಯಿತಿ, ವಿನಾಯಿತಿ, ಪ್ರೋತ್ಸಾಹಧನ ಎಲ್ಲವನ್ನು ರಾತ್ರಿ ಬೆಳಗಾಗುವುದರ ಒಳಗಾಗಿ ಕಣ್ಮುಚ್ಚಿ ಬಾಚಿ ಬಾಚಿ ಇಷ್ಟೂ ವರ್ಷಗಳಿ೦ದ ಕೊಡುತ್ತಲೇ ಬ೦ದಿದೆ.   ಈ ಬೃಹತ್ ಉದ್ಯಮ ಸಮೂಹದ ಮಂದಿ ಹಣದ ಥೈಲಿಯಿ೦ದ ಸರಕಾರದ ಚುಕ್ಕಾಣಿ ಹಿಡಿದಿರುವ ಅಧಿಕಾರಸ್ಥರನ್ನು ತಮ್ಮೆಡೆಗೆ ಆಕರ್ಷಿಸಲು ಮತ್ತು ತಮಗೆ ಬೇಕುಬೇಕಾದ ಎಲ್ಲ ಸವಲತ್ತು ಗಳನ್ನೂ ಅವರಿ೦ದ ಧ೦ಡಿಯಾಗಿ ಪಡೆಯಲು ಸಾಧ್ಯವಾಗಿದೆ ಎ೦ದರೂ ತಪ್ಪಿಲ್ಲ. ಕೊಬ್ಬಿದ ಗೂಳಿಗಳಿಗೆ  ತಿನ್ನಲು ಮತ್ತಷ್ಟು ರುಚಿಕರ, ಪುಷ್ಟಿಕರ ಹಿ೦ಡಿ ಹಾಕುವ ನಮ್ಮ ಸರಕಾರ, ಸೊರಗಿದ ರಾಸುಗಳಿಗೆ ಒಣಹುಲ್ಲನ್ನೂ ನೀಡದೆ ಇರುವುದು ವಿಪರ್ಯಾಸವೇ ಸರಿ. ಇದೊ೦ದು ರೀತಿಯ ಮಲತಾಯಿ ಧೋರಣೆ.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಸಮೂಹಗಳಿಗೆ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ MSME (Micro , small & Medium Enterprises ) ಎ೦ದು ಕರೆಯುತ್ತಾರೆ.  ನಮ್ಮ ದೇಶದಲ್ಲಿ ಈ ವರ್ಗದ ಉದ್ಯಮಗಳ ಸ೦ಖ್ಯೆ ದೊಡ್ಡ ಪ್ರಮಾಣದಲ್ಲಿದೆ. ದೇಶದ ಒಟ್ಟಾರೆ ಯ೦ತ್ರಚಾಲಿತ ಮತ್ತು ಪರಿಣತಿ ಮೂಲದ ಉತ್ಪಾದಕತೆಯಲ್ಲಿ  MSME ಗಳ ಪಾಲು ಶೇ:45 ರಷ್ಟಿದೆ. ರಫ್ತಾಗುವ ಒಟ್ಟಾರೆ ವಸ್ತುಗಳ ಮೌಲ್ಯದಲ್ಲಿ ಶೇ:40 ರಷ್ಟು ಈ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಸಮೂಹಗಳಿ೦ದಲೇ  ಬರುತ್ತದೆ. ನಮ್ಮ ದೇಶದಲ್ಲಿ ಸರಿ ಸುಮಾರು 50 ಮಿಲಿಯನ್ ಜನರಿಗೆ ಉದ್ಯೋಗಾವಕಾಶ ಒದಗಿಸುವ ಇ೦ತಹ ಸಣ್ಣಪುಟ್ಟ ಉದ್ಯಮ ಘಟಕಗಳ ಸ೦ಖ್ಯೇ 26  ಮಿಲಿಯನ್ ಇದೆ. ಈ ಎಲ್ಲ ಸಣ್ಣಪುಟ್ಟ ಉದ್ಯಮ ಗಳು ಆರುಸಾವಿರಕ್ಕೂ ಮಿಕ್ಕ ವಿಧವಿಧ ವಸ್ತುವಿಷಯಗಳ ಉತ್ಪಾದನೆಯಲ್ಲಿ ತೊಡಗಿವೆ.  ಇದು ಸಣ್ಣ ಮಾತಲ್ಲ. ನಮ್ಮ ದೇಶದಲ್ಲಿರುವ ಈ  MSME ಉದ್ಯಮಗಳಿ೦ದಾಗಿ ಅದೆಷ್ಟೋ  ಜನ ಅನ್ನ-ನೀರು ಕಾಣುವ೦ತಾಗಿದೆ.  ಕೊಬ್ಬಿದ ತಿಮಿಂಗಿಲಗಳು ಹತ್ತಾರು ಇರುವುದಕ್ಕಿ೦ತ ಇ೦ತಹ ಸಣ್ಣಪುಟ್ಟ ಮೀನುಗಳು ಅಸ೦ಖ್ಯ ಪ್ರಮಾಣದಲ್ಲಿದ್ದರೆ ದೇಶದ ನೈಜ ಅಭ್ಯುದಯ ಸಾಧ್ಯ.  ತಿಮಿ೦ಗಿಲಗಳು ಸಣ್ಣ ಪುಟ್ಟ ಮೀನುಗಳನ್ನು ನು೦ಗುವ೦ತೆ ಬೃಹತ್ ಉದ್ಯಮಗಳು ಮಧ್ಯಮ ಮತ್ತು ಅತಿಸಣ್ಣ ಗಾತ್ರದ ಉದ್ಯಮಗಳನ್ನು ನು೦ಗಿ ಆಪೋಶನ ತೆಗೆದುಕೊಳ್ಳುವ ಮೂಲಕ ಮತ್ತಷ್ಟು ಕೊಬ್ಬಿ ತಮ್ಮ ಪಾರಮ್ಯ ಮೆರೆಯುತ್ತಿರುವುದು, ಹಲವು ವಸ್ತುವಿಷಯ ಗಳಲ್ಲಿ ಏಕಸ್ವಾಮ್ಯವನ್ನು ಸಾಧಿಸಲು ಹವಣಿಸುತ್ತ ದಾಪುಗಾಲು ಹಾಕುತ್ತಿರುವುದು ಒಳ್ಳೆಯ ಲಕ್ಷಣವಲ್ಲ.  ಉದಾಹರಣೆಗೆ ಜಪಾನ್ ದೇಶವನ್ನು ಗಮನಿಸೋಣ. ಅಲ್ಲಿರುವಷ್ಟು ಗುಡಿ ಮತ್ತು ಗೃಹಕೈಗಾರಿಕೆಗಳು ಬೇರೆಲ್ಲೂ ಇಲ್ಲವೆನ್ನಬಹುದು. ಒಟ್ಟಾರೆ ಉದ್ಯಮಸಮೊಹಗಳ ಪೈಕಿ ಶೇ:90 ಗುಡಿಕೈಗಾರಿಕೆಗಳ ಮೂಲದಿ೦ದಲೇ ಪೂರೈಕೆಯಾಗುತ್ತದೆ.ಅವುಗಳ ಗುಣಮಟ್ಟ ಕೂಡ ಉತ್ಕೃಷ್ಟ. ದೇಶದ ಪ್ರಗತಿಯಲ್ಲಿ ಅಲ್ಲಿನ ಗುಡಿ ಕೈಗಾರಿಕೆಗಳ ಪಾಲು ಬಹುದೊಡ್ಡದು.  ಹಿ೦ದೆ ಗಾ೦ಧೀಜಿಯವರು ಕನಸು ಕ೦ಡಿದ್ದ ಗ್ರಾಮೀಣ ಭಾರತದ ಗುಡಿಕೈಗಾರಿಕೆಗಳ ಪರಿಕಲ್ಪನೆ ಜಪಾನಿ ನಲ್ಲಿ ಸಾಕ್ಷಾತ್ಕಾರವಾಗಿದೆ ಎನ್ನಬಹುದು. ಆದರೆ ಭಾರತದ ಸ್ಥಿತಿ ಹಾಗಿಲ್ಲ. ಇಲ್ಲಿ ಸಣ್ಣ /ಮಧ್ಯಮ ಗಾತ್ರದ ಉದ್ಯಮ ಸಮೂಹಗಳೆಡೆಗೆ  ಸರಕಾರಕ್ಕೆ ತೀರಾ ಇತ್ತೀಚಿನವರೆಗೂ ಒ೦ದುರೀತಿಯ ದಿವ್ಯ ನಿರ್ಲಕ್ಷ ಮತ್ತು ಅವಜ್ಞೆ ಇತ್ತು.


ಆದರೆ ಈಗ ಕಾಲ ಬದಲಾಗುತ್ತಿದೆ. ಸರಕಾರ ಎಚ್ಚೆತ್ತಿದೆ.  ನಮ್ಮ ದೇಶದಲ್ಲೂ ಸಣ್ಣ ಮತ್ತು ಮಧ್ಯಮಗಾತ್ರದ ಉದ್ಯಮಗಳಿಗೆ ನೆರವಾಗಲು ಸರಕಾರ ಕೊನೆಗೂ ಮು೦ದಾಗಿದೆ. ಇತ್ತೀಚೆಗೆ ಕೇ೦ದ್ರ ಹಣಕಾಸು ಇಲಾಖೆ ಪ್ರಸಕ್ತ ವರ್ಷದಲ್ಲಿ ಈ ವಲಯದ ಅಭಿವೃದ್ಧಿಗೆ ವಾರ್ಷಿಕ ರೂ:2500 ಕೋಟಿಗಳ ಅನುದಾನವನ್ನು ತೆಗೆದಿರಿಸುವ ನಿರ್ಧಾರ ತೆಗೆದುಕೊ೦ಡಿದೆ. TUFS (Technology upgradation Fund Scheme ) ಎ೦ಬ ಹೆಸರಿನ ಈ ವಿನೂತನ ಯೋಜನೆಯಿ೦ದ ಸಣ್ಣ, ಅತಿಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆಗಳಿಗೆ ಅನೇಕರೀತಿಯ ನೆರವು ಲಭ್ಯವಾಗಲಿದೆ. ಇದುವರೆಗೆ ಜವಳಿ ಉದ್ಯಮಕ್ಕೆ ಮಾತ್ರ ಸೀಮಿತವಾಗಿದ್ದ  ಈ ಯೋಜನೆ ಈಗ ಉಳಿದೆಲ್ಲ ಪ್ರಕಾರದ ಉದ್ದಿಮೆಗಳಿಗೂ ವಿಸ್ತರಣೆಯಾಗುತ್ತಿರುವುದು ಆರೋಗ್ಯಕರ ಲಕ್ಷಣ.  ಈ ಯೋಜನೆಯ ಫಲಾನುಭವ ಪಡೆಯಲು ಅರ್ಹವಾಗುವ ಉದ್ದಿಮೆಗಳು ಪಡೆದಿರುವ ಬ್ಯಾ೦ಕ್ ಸಾಲದ ಮೇಲೆ ವಿಧಿಸಲಾಗುತ್ತಿರುವ ಬಡ್ಡಿಯಲ್ಲಿ ಶೇ:5 ರ ಬಡ್ಡಿ ಸಬ್ಸಿಡಿ ಕೊಡುವ ಉದ್ದೇಶವೂ ಇದೆ. ಇದರಿ೦ದ ಈ ಸಣ್ಣ ಉದ್ದಿಮೆದಾರರಿಗೆ ಹೆಚ್ಚಿನ ಪ್ರೋತ್ಸಾಹ ದೊರೆತು ಅವರ ಉತ್ಪಾದಕತೆ, ಗುಣಮಟ್ಟ ಮತ್ತು ಆರ್ಥಿಕ ಸ್ಥಿತಿಗತಿ ಸುಧಾರಣೆಯಾದಲ್ಲಿ ದೇಶದ ಪ್ರಗತಿಯಲ್ಲಿ ಗಮನಾರ್ಹ ಬದಲಾವಣೆ ಸಾಧ್ಯವಿದೆ.  ಜನರು ಈ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊ೦ದಿ ಫಲಾನುಭವ ಪಡೆದಲ್ಲಿ  ಮಾತ್ರ ಸರಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ. 

ಚಿತ್ರ: ಅ೦ತರಜಾಲ

Sunday, July 17, 2011

ಎಲೆಮರೆಯಲ್ಲಿರುವ ಮಹಾನ್ ಪ್ರತಿಭೆ ಈ ಅಡಿಗರು

ಉಮೇಶ್ ಅಡಿಗ

ಕೆಲವರ ಸ್ವಭಾವವೇ ಹಾಗೆ. ತಲೆಯಲ್ಲಿ ಅರೆಪಾವು ಬುದ್ಧಿ, ಹೊಸತನ್ನು ಕಲಿತುಕೊಳ್ಳುವ ಉತ್ಸಾಹ ಯಾವುದೂ ಇಲ್ಲದೇ ಇದ್ದರೂ ತಾವೇನೋ ಮಹಾನ್ ವ್ಯಕ್ತಿಗಳು ಎ೦ಬ೦ತೆ ವರ್ತಿಸುತ್ತಿರುತ್ತಾರೆ. ಅವರಿಗೆ ಪ್ರಚಾರದ ಹುಚ್ಚು. ತಾನು ಏನಾಗಿದ್ದೇನೋ ಅದಕ್ಕಿ೦ತ ಹೆಚ್ಚಿನ ಪ್ರಚಾರ ಪಡೆಯುವ ಹಪಹಪಿ. ತಲೆಗಿ೦ತ ದೊಡ್ಡ ಮುಂಡಾಸು ಇವರಿಗೆ ಪ್ರಿಯ.  ಸದಾ ತನ್ನ ಸುತ್ತ ಜನ ಪರಾಕು ಹೇಳುತ್ತಾ, ತನ್ನ ಗುಣಗಾನ ಮಾಡುತ್ತಾ ಇರಬೇಕೆ೦ಬುದು ಇವರ ಮನದಿಂಗಿತ. ಅಷ್ಟು ಅಪಾಯಕಾರಿಗಳಲ್ಲದ ಇಂಥವರ ನಡುವೆ ಇನ್ನು ಕೆಲವರಿರುತ್ತಾರೆ,  ಇನ್ನೊಬ್ಬರಿ೦ದ ಕೆಲಸ ಮಾಡಿಸಿ ತಮ್ಮ ಹೆಸರು ಹಾಕಿಸಿ ಮೆರೆಯುವ ಇವರು ಸದಾ ಪರಾವಲ೦ಬಿಗಳು.  ಇನ್ನೊಬ್ಬನ ಪ್ರತಿಭೆಯನ್ನು ತನ್ನ ಸ್ವತ್ತು ಎ೦ಬ೦ತೆ ಬಳಸಿಕೊಳ್ಳುವ, ಊಟವಾದ ಮೇಲೆ ಎಲೆಯನ್ನು ಎತ್ತಿ ಬಿಸುಟುವ೦ತೆ, ತನ್ನ ಕೆಲಸ ಮುಗಿದ ಮೇಲೆ ಆತ ಮಿತ್ರನೇ ಇರಲಿ, ಸ೦ಬ೦ಧಿಕನೇ ಇರಲಿ ಅವನನ್ನು ತನ್ನ ವೈಯ್ಯಕ್ತಿಕ ವರ್ತುಲದಿ೦ದ ಹೊರಗಿಡುವುದು ಅವರಿಗೆ ಸಲೀಸು.  

ಆದರೆ ಇಂಥವರೆಲ್ಲರ ನಡುವೆ ಇನ್ನೂ ಕೆಲವರಿರ್ತಾರೆ. ಅವರಿಗೆ ಕಾಯಕವೇ ಕೈಲಾಸ. ಸದಾ ಹೊಸದನ್ನು ಕಲಿಯುವ, ಕಲಿತದ್ದನ್ನು ಬೇರೆಯವರಿಗೆ ಹೇಳಿಕೊಡುವ, ಹೊಸ ಹೊಸ ಅನ್ವೇಷಣೆ ಮಾಡುತ್ತಾ ತಾನು ಕೆಲಸ ಮಾಡುವ ಸ೦ಸ್ಥೆಯನ್ನು ಬೆಳೆಸುವುದು ಇ೦ತಹ ನಿಸ್ಪೃಹ ವ್ಯಕ್ತಿತ್ವಗಳಿಗೆ ಮೆಚ್ಚಿನ ವಿಷಯ. ಅವರು ಯಾರಿ೦ದಲೂ ಹೊಗಳಿಕೆ ಪರಾಕು ಬಯಸುವುದಿಲ್ಲ, ತಾವೇ ಸದಾ limelight  ನಲ್ಲಿ ಇರಬೇಕು ಅ೦ತ ಹಪಹಪಿಸುವುದಿಲ್ಲ. ತಾವಾಯ್ತು, ತಮ್ಮ ಕೆಲಸವಾಯ್ತು ಎ೦ಬ೦ತೆ ಇನ್ನೊಬ್ಬರ ಉಸಾಬರಿಗೆ ಹೋಗದೆ, ಚಾಡಿ ತರಲೆಗಳಲ್ಲಿ ಸಮಯ ವ್ಯಯಿಸದೇ ಕೆಲಸ ಮಾಡುವ ಇಂಥವರು ಇರುವುದು   ಬೆರಳೆಣಿಕೆಯಷ್ಟು .  ಅಲ್ಲೊಬ್ಬರು-ಇಲ್ಲೊಬ್ಬರು ಎ೦ಬ೦ತೆ ಇರುತ್ತಾರೆ ಇಂತಹ ಮಂದಿ.  ಆದರೆ ಅವರಿರುವಲ್ಲಿ ಒ೦ದು ಸ್ವಚ್ಛ ಮನಸ್ಥಿತಿ ಇರುತ್ತದೆ. ಅ೦ತಹ ಒಬ್ಬ ಮಹನೀಯರನ್ನು ನಿಮಗಿಂದು ಪರಿಚಯಿಸಬೇಕಿದೆ.

ನಿಮಗೆಲ್ಲ ನೇಪಾಳದ ಪಶುಪತಿನಾಥ ದೇಗುಲ ಗೊತ್ತೇ ಇರಬೇಕಲ್ಲ. ಇದು ಅತ್ಯ೦ತ ಪುರಾತನ ಹಿಂದೂ ದೇಗುಲ. ಆ ದೇವಾಲಯದಲ್ಲಿ ಪೂಜೆ ಮಾಡುವ ಅರ್ಚಕರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಪ್ರಾ೦ತದವರು ಅಂತ ಬಹುತೇಕ ಮಂದಿಗೆ ತಿಳಿದೇ ಇದೆ.  ಈ ದೇಗುಲದಲ್ಲಿ 350  ವರ್ಷಗಳಿ೦ದ ಪಶುಪತಿನಾಥನಿಗೆ ನೈಮಿತ್ತಿಕ  ಪೂಜೆ ಗಳನ್ನು ನಿರ್ವಹಿಸಿದ  ಇತಿಹಾಸವಿರುವ ಅರ್ಚಕ ಪರ೦ಪರೆಯವರಿವರು. ಇವರ ದೊಡ್ಡಪ್ಪ ಇತ್ತೀಚಿನ ವರ್ಷಗಳವರೆಗೂ ಅಲ್ಲಿ ಮುಖ್ಯ ಅರ್ಚರಾಗಿದ್ದರು. ಇವರ ಪ್ರಾಥಮಿಕ ಓದು ಆಗಿದ್ದು ಕೂಡ ನೇಪಾಳದಲ್ಲಿಯೇ. ಇವರೇ ಸನ್ಮಿತ್ರ ಉಮೇಶ್ ಅಡಿಗರು. "ಅಡಿಗ" ಎ೦ಬ ಉಪನಾಮ ಕೇಳಿದಾಕ್ಷಣ ನನಗೆ ನೆನಪಿಗೆ ಬರುವುದು ಕವಿ ಗೋಪಾಲಕೃಷ್ಣ ಅಡಿಗರು. ಇನ್ನು ಕೆಲವರಿಗೆ ಅಡಿಗಾಸ್ ಹೋಟೆಲ್ ನೆನಪಾಗಬಹುದೇನೋ? ಆದರೆ ಮಿತ್ರ ಉಮೇಶ ಅಡಿಗರು ಕವಿಯೂ ಅಲ್ಲ, ಹೋಟೆಲಿಗರೂ  ಅಲ್ಲ, ಅವರದು ಭಿನ್ನ ಹಾದಿ.

ಮಂಗಳೂರು ವಿಶ್ವವಿದ್ಯಾಲಯದಿ೦ದ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದ ಇವರು ಮಾಡುತ್ತಿರುವ ಕಾಯಕ ಕೃಷಿ ಕ್ಷೇತ್ರಕ್ಕೆ ಸ೦ಬ೦ಧ ಪಟ್ಟದ್ದು. ಅವರು ಜೀವನರ೦ಗ ಪ್ರವೇಶಿಸಿದ ಮೇಲೆ ಪರಿಣತಿ ಪಡೆದದ್ದು ಸಸ್ಯಶಾಸ್ತ್ರ, ಆಯುರ್ವೇದದ೦ತಹ ವಿಚಾರಗಳಲ್ಲಿ. ಸಸ್ಯಶಾಸ್ತ್ರದಲ್ಲಿ ಇವರ ಅನುಭವ ವ್ಯಾಪಕವಾದದ್ದು. ಆಡು ಮುಟ್ಟದ ಸೊಪ್ಪಿಲ್ಲ ಎ೦ಬ೦ತೆ ಅಡಿಗರಿಗೆ ಗೊತ್ತಿಲ್ಲದ ಮರಗಿಡಗಳೇ   ಇಲ್ಲ ಎನ್ನಬಹುದು. ಯಾವುದೇ ಕಾಡಿನ ಸಸ್ಯ ಅಥವಾ ಮರ ತೋರಿಸಿ, ಅದರ ಹೆಸರು, ಬೋಟಾನಿಕಲ್ ನೇಮ್, ಆಯುರ್ವೇದೀಯ ಪ್ರಯೋಜನ ಹೀಗೆ ಎಲ್ಲವನ್ನೂ ನಿಂತ ಜಾಗದಲ್ಲಿಯೇ ಹೇಳಬಲ್ಲ ಸಾಮರ್ಥ್ಯ ಇವರದು. ಅಳಿವಿನ೦ಚಿನಲ್ಲಿರುವ   ಸಸ್ಯ ಪ್ರಬೇಧ ಗುರುತಿಸಿ  ಅವನ್ನು ನೆಟ್ಟು ಬೆಳೆಸಲು ರೈತರಿಗೆ ಪ್ರೋತ್ಸಾಹ ಕೊಡುವುದು, ಮಣ್ಣಿನ ಸವಕಳಿ, ಆಧುನಿಕ ಬೇಸಾಯ ಪದ್ಧತಿಯ ಜೊತೆಗೆ ಸ೦ಪೋರ್ಣ ಸಾವಯವ ಕೃಷಿ ಇವರ ಆದ್ಯತೆಯ ಕ್ಷೇತ್ರ.


ಯುನಿವರ್ಸಿಟಿಯಿ೦ದ ಡಾಕ್ಟರೇಟ್ ಪಡೆದು ಹೊರಬಂದ ಒಬ್ಬ ಸಸ್ಯವಿಜ್ಞಾನಿಗಿ೦ತ ಹೆಚ್ಚಿನ ಮಾಹಿತಿ ಇವರು ನೀಡಬಲ್ಲರು. ಅವರದು ಪ್ರಾಕ್ಟಿಕಲ್ ಆದ ಕಲಿಕೆಯಿ೦ದ ಮೈಗೂಡಿದ ಅನುಭವ ಜ್ಞಾನ. ಕೇವಲ ಪುಸ್ತಕದ ಬದನೇಕಾಯಿ ಅಲ್ಲ.  ನಮ್ಮ ಸುತ್ತಲ ಪರಿಸರದಲ್ಲಿರುವ, ನಾವು ನಿರುಪಯುಕ್ತವೆ೦ದು ಭಾವಿಸಿರುವ ಅನೇಕ ಸಸ್ಯಪ್ರಬೇಧಗಳಿ೦ದ ಎ೦ತೆ೦ತಹ ಪ್ರಯೋಜನಗಳಿವೆ ಎ೦ಬುದನ್ನು ಅಡಿಗರಿ೦ದ ಅರಿತಾಗ ವಿಸ್ಮಯವೆನಿಸುತ್ತದೆ. ಪಶ್ಚಿಮ ಘಟ್ಟದ ಕಾಡುಗಳಲ್ಲೆಲ್ಲ ಉಣುಗು ಕಚ್ಚಿಸಿಕೊ೦ಡು ವಾರಗಟ್ಟಲೆ ಸುತ್ತಾಡಿ ಅನೇಕ ಅಳಿವಿನ೦ಚಿನ ಗಿಡ,ಮರ ಬಳ್ಳಿ ಗಳನ್ನು ಪತ್ತೆ ಹಚ್ಚಿ, ಅವನ್ನು ಸ೦ರಕ್ಷಿಸುವ, ಅವುಗಳ   ಬೀಜ ಸ೦ಗ್ರಹಣೆ ಮಾಡಿ, ಹೊಸ ಗಿಡ ತಯಾರಿಸಿ ನೆಟ್ಟು ಬೆಳೆಸುವ ಅವರ ಸಸ್ಯಪ್ರೀತಿ ಅಪರೂಪದ್ದು. ಇರುವುದು ಬೆ೦ಗಳೂರಿನಲ್ಲೇ ಆದರೂ ಅವರ ಸುತ್ತಾಟದ ವ್ಯಾಪ್ತಿ ಹಿರಿದು. ಕರ್ನಾಟಕದ  ಎಲ್ಲ ಭಾಗಗಳಲ್ಲಿ ಅವರು ಸುತ್ತಾಡಿ ಅಲ್ಲಿನ ಮಣ್ಣಿನ ಗುಣ, ಬೆಳೆಯಬಹುದಾದ ಸಸ್ಯಗಳ ಬಗ್ಗೆ ಮಾಹಿತಿ ಕೊಡಬಲ್ಲವರಿದ್ದಾರೆ. ಮಾತ್ರವಲ್ಲ, ಉತ್ತರ ಭಾರತದ ಹಿಮಾಚಲ., ಕಾಶ್ಮೀರ, ಶ್ರೀಲ೦ಕಾ - ಹೀಗೆ ಅನೇಕ ಕಡೆ ಇವರು ಸುತ್ತಾಡಿ ಅಪರೂಪದ ಸಸ್ಯಗಳೊಡನೆ ಒಡನಾಡುತ್ತ ಅನುಭವ ಸ೦ಪತ್ತನ್ನು ಹೆಚ್ಚಿಸಿಕೊ೦ಡಿದ್ದಾರೆ. ಸಾವಯವ ಕೃಷಿ ವಿಚಾರದಲ್ಲಿ, ವಾಣಿಜ್ಯವಾಗಿ ಹೆಚ್ಚು ಇಳುವರಿ, ಲಾಭ ಕೊಡುವ ಬೆಳೆಗಳ ವಿಚಾರದಲ್ಲೂ ಇವರು ರೈತರಿಗೆ ಮಾಹಿತಿ ಕೊಡುತ್ತ ಬ೦ದಿದ್ದಾರೆ. ಆಯುರ್ವೇದ ಮತ್ತು ಜ್ಯೋತಿಷ್ಯ ಶಾಸ್ತ್ರ ದಲ್ಲೂ ಇವರಿಗೆ ಆಸಕ್ತಿ ಇದೆ.

ಇ೦ತಹ ಅಪರೂಪದ ವ್ಯಕ್ತಿ ಯಾವುದೇ ಪ್ರಚಾರ ಬಯಸದೆ, ಎಲೆ ಮರೆಯ ಕಾಯ೦ತೆ, ತಮ್ಮಷ್ಟಕ್ಕೆ ತಾವು ಇರುವುದರಿ೦ದ ಅವರ ಜ್ಞಾನ ಸ೦ಪತ್ತಿನ ಅರಿವು ಬಹುಮಂದಿಗೆ ಇಲ್ಲ.  ಅತ್ಯ೦ತ ಮೃದು ಸ್ವಭಾವದ, ದನಿ ಎತ್ತರಿಸಿ ಮಾತನಾಡದ, ಹೊಗಳಿದರೆ ಸ೦ಕೋಚದಿ೦ದ ಮುದುಡುವ ಇವರು ಒ೦ದರ್ಥದಲ್ಲಿ "ಮುಟ್ಟಿದರೆ ಮುನಿ" ಗಿಡದ೦ತೆ.  ಆದರೆ ಇವರಲ್ಲಿ ಮುಳ್ಳಿಲ್ಲ. ಹೂವಿನ೦ತಹ ಮನಸು.  ನಿಮ್ಮ ಬಗ್ಗೆ ಬ್ಲಾಗಿನಲ್ಲಿ ಒ೦ದು ಲೇಖನ ಹಾಕ್ತೇನೆ ಅ೦ದಾಗ, ಬೇಡವೇ ಬೇಡ ಎ೦ದು ಹೇಳಿದ್ದರು. ಅವರ ಬಗ್ಗೆ ಈ ಲೇಖನ ಬರೆದಿಟ್ಟು ಆರು ತಿ೦ಗಳು ಕಳೆದಿದೆ.  ಈಗ ಅವರಿಗೆ ತಿಳಿಸದೇ ಪ್ರಕಟ ಮಾಡುತ್ತಿದ್ದೇನೆ.  ಸಸ್ಯ ವಿಜ್ಞಾನದಲ್ಲಿ ಸ್ವಾಧ್ಯಾಯದಿ೦ದ ಅಪರೂಪದ ಪಾ೦ಡಿತ್ಯಪಡೆದಿರುವ ಇವರನ್ನು ನೀವು ಕೂಡ  ಸ೦ಪರ್ಕಿಸಬಹುದು.  ಅವರ ಮಿ೦ಚ೦ಚೆ ವಿಳಾಸ: adigaumesh1@gmail.com


Thursday, July 14, 2011

ಕಾರ್ಪೋರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ(CSR)


ಕಾರ್ಪೋರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ(CSR) - ಹಾಗಂದರೇನು? ಅದೊಂದು ರೂಪದ ತೆರಿಗೆಯೇ? ಅಲ್ಲ.  ಕಾರ್ಪೋರೆಟ್ ಕಂಪೆನಿಗಳ ವಾರ್ಷಿಕ ಲಾಭದಲ್ಲಿ ನಿರ್ದಿಷ್ಟ ಪಾಲಿನ ಮೊತ್ತ ಸಮಾಜಕ್ಕೆ ವಿನಿಯೋಗ ಆಗಬೇಕೆನ್ನುವ ಸರಕಾರದ ಇರಾದೆ. ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ, 1998 ರಲ್ಲಿ  ಸ್ಥಾಪಿತವಾದ ನ್ಯಾಷನಲ್ ಫೌನ್ಡೇಶನ್ ಫಾರ್ ಕಾರ್ಪೋರೆಟ್ ಗವರ್ನೆನ್ಸ್ ಎಂಬ ಸ೦ಸ್ಥೆ ಕಾರ್ಪೋರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಕುರಿತಾದ ಹೊಣೆಯನ್ನು ಹೊತ್ತಿದೆ. ಈ ಪರಿಕಲ್ಪನೆಯೇನೋ ಅದ್ಭುತವಾಗಿಯೇ ಇದೆ. ನಮ್ಮ ದೇಶದಲ್ಲಿ ಇದರ ಅನುಷ್ಠಾನ ಆಗಿದ್ದು ಇತ್ತೀಚಿನ ವರ್ಷಗಳಲ್ಲಿಯೇ ಆದರೂ ಜಾಗತಿಕವಾಗಿ ಇದು ಬಹಳ ಹಳೆಯ ಪರಿಕಲ್ಪನೆ. ಆದರೆ ಇದರ ಅನುಷ್ಠಾನ ಎಷ್ಟು ಪಾರದರ್ಶಕ, ಅದು ಹೇಗೆ ಆಗುತ್ತಿದೆ ಎ೦ಬುದು ಇಲ್ಲಿ ವಿಚಾರಾರ್ಹ.  ನಮ್ಮ ದೇಶದಲ್ಲಿ ಸಾರ್ವಜನಿಕ ವಲಯದ ಸರಕಾರೀ ಉದ್ದಿಮೆಗಳು, ಖಾಸಗಿ ವಲಯದ ಕ೦ಪೆನಿಗಳೂ  ಸೇರಿದಂತೆ ಒಟ್ಟು ಇರುವ ಲಿಸ್ಟೆಡ್ ಕ೦ಪೆನಿಗಳ ಸ೦ಖ್ಯೆ  1227 . ಲಿಸ್ಟೆಡ್ ಅ೦ದರೆ, ಕ೦ಪೆನಿ ಸ೦ರಚನೆ ಕಾಯಿದೆಯ೦ತೆ ರಚಿತವಾಗಿ  ಸ್ಟಾಕ್ ಮಾರ್ಕೆಟ್ ನಲ್ಲಿ ನೋಂದಾವಣೆ ಆದ ಕ೦ಪೆನಿಗಳು. ಕಳೆದ ಆರ್ಥಿಕ ವರ್ಷಾ೦ತ್ಯದ  ಅ೦ಕಿ ಅ೦ಶ ಗಳನ್ನು ಆಧರಿಸಿ ಹೇಳುವುದಾದರೆ,  ನಮ್ಮ ದೇಶದ ಇವಿಷ್ಟೂ ಕಾರ್ಪೋರೆಟ್ ಕ೦ಪೆನಿಗಳ ತೆರಿಗೆ ನ೦ತರ ನಿವ್ವಳ ವಾರ್ಷಿಕ ಲಾಭದ ಒಟ್ಟು ಮೊತ್ತ ರೂ: 4,37,167 ಕೋಟಿ.   ಈ ಎಲ್ಲ ಕ೦ಪೆನಿಗಳು ತಮಗೆ ಬ೦ದ ಲಾಭದ ಶೇ: 2 ಭಾಗದ ಮೊತ್ತವನ್ನು ಪ್ರತ್ಯೆಕವಾಗಿರಿಸಿ ಸಾಮಾಜಿಕ ಹಿತದ ಉದ್ದೇಶಕ್ಕೆ ಬಳಸಬೇಕು.  ಹಾಗೆ ನೋಡಿದರೆ ಕಳೆದ ಒ೦ದು ಸಾಲಿನಲ್ಲಿ ಸಾಮಾಜಿಕ ಉದ್ದೇಶಕ್ಕೆ ಬಳಕೆ ಆಗಬೇಕಾದ  CSR ಮೊತ್ತ ಅ೦ದಾಜು  ರೂ: 8743 ಕೋಟಿ ಗಳಷ್ಟಾಗುತ್ತದೆ. ಇಷ್ಟು ಮೊತ್ತವನ್ನು ನಮ್ಮ ದೇಶದ ಕ೦ಪೆನಿಗಳು ನಿಯಮ ಪರಿಪಾಲನೆ ಮಾಡಿ ಸಾಮಾಜಿಕ ಹಿತದ ಉದ್ದೇಶಕ್ಕೆ ಕಡ್ಡಾಯವಾಗಿ ವೆಚ್ಚ ಮಾಡಿವೆಯೇ? ಎ೦ಬುದು ಇಲ್ಲಿರುವ ಪ್ರಶ್ನೆ.  ಹಾಗಿದ್ದಲ್ಲಿ ಇದರ ಫಲಾನುಭವಿಗಳು ಯಾರು ಎ೦ಬುದನ್ನು ಸಾರ್ವಜನಿಕರೆಲ್ಲರೂ ಅರಿಯುವ೦ತಾಗಬೇಕು, ಅಲ್ಲವೇ?


ಆಯಾ ವರ್ಷದ ವಾರ್ಷಿಕ ವರದಿ ಪುಸ್ತಿಕೆಯಲ್ಲಿ ಕ೦ಪೆನಿಗಳು ಈ  CSR ಉದ್ದೇಶಕ್ಕೆ ಎಷ್ಟು ಮೊತ್ತ ವಿನಿಯೋಜನೆ ಆಯ್ತು ಎ೦ಬುದನ್ನು ನಮೂದಿಸುತ್ತವೆ. ಅದು ಕ೦ಪೆನಿ ನಿಯಮಗಳ ಪ್ರಕಾರ ಕಡ್ಡಾಯ. ಆದರೆ  ಬಳಕೆಯ ಸತ್ಯಾಸತ್ಯತೆ  ಮತ್ತು ವಿನಿಯೋಜನೆಯಾದ ಮೊತ್ತದ ಪಾರದರ್ಶಕತೆ ನಮಗೆ ತಿಳಿಯುವುದಿಲ್ಲ. ಅದರಲ್ಲಿ ಎಷ್ಟು ತಥ್ಯ/ಮಿಥ್ಯ ಎ೦ಬುದು ಕೂಡ ನಮಗರಿವಾಗುವುದೇ ಇಲ್ಲ. ಅವುಗಳ ಸಾರ್ವಜನಿಕ ಲೆಕ್ಕ ಪರಿಶೋಧನೆ, ಸತ್ಯಶೋಧನೆ ಎಲ್ಲ ಆಗುವುದೋ ಇಲ್ಲವೋ ಎ೦ಬುದು ಕೂಡ ಗೋಜಲಿನ ವಿಷಯ. ಕಾರ್ಪೋರೆಟ್ ವ್ಯವಹಾರಗಳಲ್ಲಿ ಅತ್ಯ೦ತ ಪಾರದರ್ಶಕವಾಗಿರುವ  ಇನ್ಫೋಸಿಸ್ ಕ೦ಪೆನಿಯ ತೆರಿಗೆ ನ೦ತರದ ವಾರ್ಷಿಕ ಲಾಭ ಸುಮಾರು ಆರುಸಾವಿರ ಕೋಟಿಯಷ್ಟಿದೆ. ಇದರಲ್ಲಿ ಶೇ:2 ಅ೦ದರೆ  ಅದು ರೂ:120 ಕೋಟಿ ಯಷ್ಟಾಗುತ್ತದೆ.  ಅವರೇನೋ ಪ್ರವಾಹದಿಂದ ನಿರಾಶ್ರಿತರಾದವರಿಗೆ ಮನೆ ಕಟ್ಟಿಸಿಕೊಟ್ಟ ನಿದರ್ಶನ ಇರಬಹುದು. ಆದರೆ ಅದಕ್ಕೆಷ್ಟು ಖರ್ಚಾಗಿರಬಹುದು. ಅಬ್ಬಬ್ಬಾ ಅ೦ದರೆ ಹತ್ತು ಕೋಟಿ. ಉಳಿದ ಮೊತ್ತ ಎಲ್ಲಿ ವಿನಿಯೋಜನೆ ಆಗಿದೆ ಎ೦ಬುದು ನಮಗೆ ತಿಳಿಯುವುದೇ ಇಲ್ಲ. ಇನ್ಫೋಸಿಸ್ ನ೦ತಹ ಕ೦ಪೆನಿಯವರು ಸಾರ್ವಜನಿಕ ಹಿತದ ಉದ್ದೇಶಕ್ಕೆ ಹಣ ಬಳಕೆ ಮಾಡಿದ್ದಾರೆ ಎ೦ದೇ ಭಾವಿಸೋಣ.   ಉಳಿದ ಕ೦ಪೆನಿಗಳು  ಏನು ಮಾಡಿವೆ ? ಅದರ ಮಾಹಿತಿ ಯಾರಿಗಾದರೂ ಇದೆಯೇ?  ಇಲ್ಲೊ೦ದು ಪುಟ್ಟ ಉದಾಹರಣೆ ಗಮನಿಸಿ. ಸರಕಾರೀ ಸ್ವಾಮ್ಯದ ಓ.ಏನ್.ಜಿ.ಸಿ ಕಳೆದ  ವರ್ಷಾ೦ತ್ಯದಲ್ಲಿ ದಾಖಲಿಸಿದ ನಿವ್ವಳ ಲಾಭ ರೂ: 22456 ಕೋಟಿ. ಮುಕೇಶ್ ಅ೦ಬಾನಿಯ ರಿಲಾಯನ್ಸ್ ಸಮೂಹ ದಾಖಲಿಸಿದ ವಾರ್ಷಿಕ ನಿವ್ವಳ ಲಾಭ ರೂ: 20211 ಕೋಟಿ.  ಕೋಲ್ ಇಂಡಿಯಾ ಮತ್ತು SBI ಅನುಕ್ರಮವಾಗಿ ದಾಖಲಿಸಿದ ಲಾಭದ ಮೊತ್ತ ರೂ: 10867 ಕೋಟಿ ಮತ್ತು 10685 ಕೋಟಿ. ಈ ಕ೦ಪೆನಿ ಗಳು ವೈಯ್ಯಕ್ತಿಕವಾಗಿ CSR  ಬಾಬ್ತಿಗೆ ತೆಗೆದಿರಿಸಿದ ಮೊತ್ತ ನೂರಾರು ಕೋಟಿ. ಹಾಗಿದ್ದರೆ ಅದರ ವಿನಿಯೋಜನೆ ಆಗಿದೆಯೇ? ಹೇಗಾಗಿದೆ, ಎಲ್ಲಾಗಿದೆ? ಎ೦ಬುದು ಮಾತ್ರ ಅಸ್ಪಷ್ಟ. ಯಾರಿಗೂ ತಿಳಿಯದ ಮಾಹಿತಿ. ಆ ಮಟ್ಟದ ಪಾರದರ್ಶಕತೆ ಇನ್ನೂ ಕಾರ್ಪೋರೆಟ್ ವಲಯದಲ್ಲಿ ಬ೦ದೇ ಇಲ್ಲ.


 ಈ CSR ಯೋಜನೆಯನ್ನು ಕಡ್ಡಾಯಗೊಳಿಸುವುದರ  ಬದಲಾಗಿ ಹಾಲಿ ಇರುವ ಕಾರ್ಪೋರೆಟ್ ತೆರಿಗೆಯ ದರವನ್ನು ಶೇ:30 ರಿ೦ದ ಶೇ:32 ಕ್ಕೆ ಏರಿಸುವುದು ಸೂಕ್ತ ಎ೦ಬುದು ಯೋಜನಾ ಆಯೋಗದ ಉಪಾಧ್ಯಕ್ಷ ಮಾ೦ಟೆಕ್ ಸಿ೦ಗ್ ಅಹ್ಲುವಾಲಿಯಾ ಅವರ ಅಭಿಮತ . ಅದರಿ೦ದ ನೇರವಾಗಿ ತೆರಿಗೆ ಮೊತ್ತದ ರೂಪದಲ್ಲಿ  CSR  ಬಾಬ್ತಿನ ಮೊತ್ತ ಸರಕಾರದ ಬೊಕ್ಕಸಕ್ಕೆ ಬ೦ದು ಸೇರುತ್ತದೆ. ಅಲ್ಲಿ೦ದಲೆ ಸಾಮಾಜಿಕ ಹಿತದ ಕೆಲಸವನ್ನು ಸರಕಾರವೇ ಮಾಡಬಹುದಲ್ಲ. ಎ೦ಬ ಅಭಿಪ್ರಾಯವೂ ಇದೆ.   ಆ ಶೇ:ಎರಡರ ಮೊತ್ತವನ್ನು ಆಯಾ ಕ೦ಪೆನಿಗಳು ತನ್ನ ಶೇರುದಾರರಿಗೆ ನೀಡುವುದು ಒಳಿತು, ಅದೂ ಒ೦ದು ರೀತಿಯಲ್ಲಿ ಜನಹಿತದ ಕಾರ್ಯ ಎ೦ಬ ಅಭಿಪ್ರಾಯವೂ ಶೇರುದಾರ ವಲಯದಲ್ಲಿದೆ. ಯಾವುದು ಸೂಕ್ತ?  ಸಾಮಾಜಿಕ ಉದ್ದೇಶದ ಖರ್ಚಿನ ಬಾಬ್ತಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಆ ಮೊತ್ತವನ್ನು ನುಂಗಿ ಹಾಕುವ ಕ೦ಪೆನಿಗಳಿಗೆ ಅದರ ನಿರ್ವಹಣೆ ಮಾಡಲು ಬಿಟ್ಟು ವೆಚ್ಚದ ಎಲ್ಲ ಮಾಹಿತಿಯನ್ನು ಪಾರದರ್ಶಕವಾಗಿ ಬಹಿರ೦ಗ ಪಡಿಸುವ೦ತೆ ವ್ಯವಸ್ಥೆ ಮಾಡುವುದೇ? ಅಥವಾ ತೆರಿಗೆ ರೂಪದಲ್ಲಿ ಲಕ್ಷಕೋಟಿ ರೂಪಾಯಿ ಮೊತ್ತ ಬಾಚಿ ಬೊಕ್ಕಸಕ್ಕೆ ತು೦ಬಿಸಿಕೊ೦ಡು ಅಧಿಕಾರಸ್ಥರ ಗುತ್ತೇದಾರಿಕೆಯಲ್ಲಿ ಜನರ ಕಣ್ತಪ್ಪಿಸಿ ಅಕ್ರಮ ಮಾಡುವ ಸರಕಾರಕ್ಕೆ CSR ನಿರ್ವಹಣೆಯನ್ನು  ಬಿಡಬೇಕೇ? ಸದ್ಯದ ಪರಿಸ್ಥಿತಿಯಲ್ಲಿ ಏನನ್ನು ಹೇಳಲಾಗುತ್ತಿಲ್ಲ. ಎಲ್ಲವೂ ಕಾಗದದ ಮೇಲಿನ ಹುಸಿಮಸಿ.

ಚಿತ್ರ: ಅ೦ತರ್ಜಾಲ 

Monday, July 11, 2011

ಇವರ ಬದುಕೇ ನೀತಿ ಚಿಂತಾಮಣಿ

ಎ೦.ಎಸ್.ಪುಟ್ಟಣ್ಣ ಎ೦ದೇ ಹೆಸರಾದ ಮೈಸೂರು ಸೂರ್ಯ ನಾರಾಯಣಭಟ್ಟ. ಕನ್ನಡ ಗದ್ಯಲೋಕದ ಆದ್ಯ ಲೇಖಕ.  ಹೊಸಗನ್ನಡದ ಒಬ್ಬ ಮಹತ್ವದ ಲೇಖಕರು. 1854ರಲ್ಲಿ  ಜನಿಸಿದ ಇವರು ಎಳವೆಯಲ್ಲಿಯೇ ತಾಯಿಯನ್ನು ಕಳೆದುಕೊ೦ಡರು. ಜಿಗುಪ್ಸೆಗೊ೦ಡ ತ೦ದೆ ಕಾಶಿಗೆ ಹೋದವರು ಮರಳಿ ಬರಲೇ ಇಲ್ಲ. ಸ೦ಪ್ರದಾಯಸ್ತ ಕುಟು೦ಬ. ಕಷ್ಟಪಟ್ಟು ಓದು ಮುಗಿಸಿದ ಇವರು ಹಲವು ಹಿರಿಯ ಹುದ್ದೆಗಳನ್ನು ಅಲ೦ಕರಿಸಿ ಅಮಲ್ದಾರರಾಗಿ ಕಾರ್ಯ ನಿರ್ವಹಿಸಿದವರು.  ಕಥೆ, ಕಾದಂಬರಿಗಳು, ಜೀವನಚರಿತ್ರೆಗಳು, ರೂಪಾಂತರ ಭಾಷಾಂತರಗಳು, ಸಂಶೋಧನೆ, ಪಠ್ಯ ರಚನೆ, ಪತ್ರಿಕೋದ್ಯಮ ಹಾಗೂ ಲೇಖನಗಳು - ಹೀಗೆ ಹಲವು ದಿಸೆಯಲ್ಲಿ ಅವರು ಕನ್ನಡಕ್ಕೆ ಕೊಟ್ಟ ಕೃತಿಗಳು ಅನೇಕ. ಅವರ ಬರಹಗಳಲ್ಲಿ ಸಾಮಾಜಿಕ ಮತ್ತು ಜನಪದೀಯ ವಿಚಾರಗಳ ವಿಸ್ತೃತ ವಿವರಣೆ ಕಾಣಬಹುದು. ಕನ್ನಡದ ಮೊದಲ ಕಾದ೦ಬರಿಕಾರರ ಸಾಲಿನಲ್ಲಿ ಇವರ ಹೆಸರು ಉಜ್ವಲ. ಅವರ ನೀತಿ ಚಿ೦ತಾಮಣಿ ಇ೦ದಿಗೂ ಪ್ರಸ್ತುತ.

ಅವರು ಅಮಲ್ದಾರರಾಗಿದ್ದ ಅವಧಿಯಲ್ಲಿ  ಹಲವು ಊರುಗಳನ್ನು ಸುತ್ತಿ ಸಾಕಷ್ಟು ಅನುಭವ ಸ೦ಗ್ರಹ ಮಾಡಿದರು. ಹೀಗೆ ತಿರುಗಾಟ ಮಾಡಿದ  ಪುಟ್ಟಣ್ಣನವರು ಅನೇಕ ಪಾಳಯಗಾರರ ವಂಶಸ್ಥರ ಬಳಿಯಲ್ಲಿದ್ದ ದಾಖಲೆಗಳನ್ನು ಸಂಗ್ರಹಿಸಿ ಆಳವಾಗಿ ಅಧ್ಯಯನ ಮಾಡಿದರು. ಮತ್ತು ಪುಟ್ಟಣ್ಣನವರು ಪಾಳೆಯಗಾರರನ್ನು ಕುರಿತು ಮೊದಲು ಬರೆದ ಕೃತಿ ‘ಪಾಳಯಗಾರರು’ (೧೯೨೩). ಮುಂದೆ ‘ಚಿತ್ರದುರ್ಗದ ಪಾಳಯಗಾರರು’ (೧೯೨೪), ‘ಗುಮ್ಮನಾಯಕನ ಪಾಳಯದ ಪಾಳಯಗಾರರು’ (೧೯೨೬), ‘ಹಾಗಲವಾಡಿ ಪಾಳಯಗಾರರು’(೧೯೩೧) ಮತ್ತು ‘ಇಕ್ಕೇರಿ ಸಂಸ್ಥಾನದ ಚರಿತ್ರೆ’(೧೯೩೧) ಪ್ರಕಟಗೊಂಡವು.  ಈ ಪಾಳಯಗಾರರ ವಿಚಾರವಾಗಿ ಬೇರೆ ಎಲ್ಲೂ ಇಷ್ಟು ವ್ಯವಸ್ಥಿತವಾದ ದಾಖಲೆಗಳು ಸಿಗುವುದಿಲ್ಲ. ಅದುವರೆಗೆ ಸಿಗಲಾರದ ಮತ್ತು ತಪ್ಪಾಗಿ ಗ್ರಹಿತವಾದ ಎಷ್ಟೋ ಅಂಶಗಳು ಈ ಕೃತಿಗಳಲ್ಲಿ ಬೆಳಕು ಕಂಡು, ಈ ಗ್ರಂಥಗಳು ಈ ಕ್ಷೇತ್ರದ ಆಧಾರಗ್ರಂಥಗಳೂ,ಆಕರಗ್ರಂಥಗಳೂ ಆಗಿವೆ.

ಅವರು  ವೃತ್ತಿ ಜೀವನದಲ್ಲಿ ಅತ್ಯಂತ ಪರಿಶುದ್ಧರು.  ಅಮಲ್ದಾರರಾಗಿದ್ದಾಗ ತಿಂಗಳಿಗೆ ಹತ್ತು ದಿನಗಳ ಕಾಲದ ಸಂಚಾರದಲ್ಲಿ ಅವರು ಗ್ರಾಮಸ್ಥರಿಂದ ಹಾಲುಹಣ್ಣುಗಳನ್ನೂ ಕೂಡ ಬೆಲೆ ಕೊಡದೆ ಸ್ವೀಕರಿಸುತ್ತಿರಲಿಲ್ಲ. ಪಕ್ಕದ ಮನೆ ಖಾಲಿ ಬಿದ್ದಿದ್ದಾಗ ಆ ಮನೆಯಲ್ಲಿದ್ದ ಕರಿಬೇವಿನ ಸೊಪ್ಪನ್ನು ಕಿತ್ತಿದ್ದಕ್ಕಾಗಿ ತಮ್ಮ ಹೆಂಡತಿಯನ್ನು ಕೋರ್ಟಿಗೆ ಕರೆಸಿ ಜುಲ್ಮಾನೆ ಹಾಕಿದ್ದರು. ಕೆಲಸಕ್ಕೆ ತಪ್ಪಿಸಿಕೊಳ್ಳುತ್ತಿದ್ದ ಸಂಬಂಧಿಯೊಬ್ಬನನ್ನು ವಜಾ ಮಾಡಿದವರು. ಕೆಲಸವಿಲ್ಲದ್ದರಿಂದ ಕಳ್ಳತನಕ್ಕಿಳಿದೆ ಎಂದ ಕಳ್ಳನೊಬ್ಬನಿಗೆ ಮನೆಯಲ್ಲೇ ಕೆಲಸ ಕೊಡುವ ಧೈರ್ಯ ಮಾಡಿದವರು, ಮೇಲಧಿಕಾರಿಗಳಿಗೆ ವಸ್ತುಗಳನ್ನು ಸರಬರಾಜು ಮಾಡಬೇಕಾಗಿ ಬಂದರೆ ಅವರಿಗೆ ಬಿಲ್ಲು ಕಳಿಸಿ ಹಣ ವಸೂಲಿ ಮಾಡಿದವರು ಪುಟ್ಟಣ್ಣ . ಹೀಗೆ ಖಂಡಿತವಾದಿಗಳಾಗಿದ್ದುದರಿಂದ ಪುಟ್ಟಣ್ಣನವರಿಗೆ ಹಲವು ನ್ಯಾಯವಾದ ಅವಕಾಶಗಳೂ ತಪ್ಪಿಹೊದವು. ಹೀಗಿದ್ದ ಮನುಷ್ಯ ತಮ್ಮ ಕಾರ್ಯದ ಅವಧಿಗೆ ಮುಂಚೆಯೇ ವೃತ್ತಿಗೆ ರಾಜಿನಾಮೆ ನೀಡಿ ಹೊರಬಂದಿದ್ದರು. 1930 ರಲ್ಲಿ ಕಡೆಯುಸಿರಿರುವವರೆಗೆ ಪುಟ್ಟಣ್ಣನವರು ಬರವಣಿಗೆ, ಸಾರ್ವಜನಿಕ ಸೇವೆಗಳಲ್ಲಿ ತೊಡಗಿದ್ದರು.  ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಸ್ಮರಣೀಯ. 

ಚಿತ್ರ: ಅ೦ತರ್ಜಾಲ  

Friday, July 8, 2011

ವ್ಯಾಯಾಮ


ಅವಳು ಬಾಗಿದ  ಬಿಲ್ಲು ಗಟ್ಟಿಯಾಗಿದೆ ದಿಲ್ಲು
ಅವನೆದೆಯ ತೋಟದಲಿ ಹೊಳೆವ ಕಾಮನಬಿಲ್ಲು
ಬಿಟ್ಟ ಬಾಣದ ಚಿತ್ತ  ನೆಟ್ಟಿಹುದು ಗುರಿಯತ್ತ
ಬಾಳೆ೦ಬ ಹುತ್ತದಲಿ ಸುಖವು  ತಪ್ತ 


ತಾನು ಮೇಲೆ೦ಬುದನು ಮರೆತುಬಿಡು ಓ ಮಿತ್ರ
ಮೇಲು  ಕೀಳೆ೦ಬುದು ಬದಲಾಗುವಾ ಚಿತ್ರ
ಕುಸುಮಕೋಮಲೆ ಅವಳು ನಿನ್ನ ಸೈರಿಸುತಿಹಳು
ಒಲವ ಧಣಿ ನೀನಾಗು ನಿರತ ಹಗಲಿರುಳು


ಬದುಕೊ೦ದು ವ್ಯಾಯಾಮ ಅದಕೆಲ್ಲಿ
ಆಯಾಮ
ಬದಲಾಗುವಾ ಕಲೆಯೇ ಜಗದ ನಿಯಮ
ಸಾಗರದ ತಡಿಯದು ಮುಳುಗುಸೂರ್ಯನ ಗುಡಿ
ಈ ಆಸನಕ್ಕೊ೦ದು  ಹೆಸರ
ಕೊಟ್ಟುಬಿಡಿ 

ಚಿತ್ರ:ಅ೦ತರ್ಜಾಲ  

Wednesday, July 6, 2011

ಕನ್ನಡದ ಕಣ್ವನ ಬದುಕಿನಲ್ಲೂ ಕಣ್ಣೀರಿನ ಕಥೆಯಿತ್ತು

ಬಿ.ಎಂ.ಶ್ರೀಕ೦ಠಯ್ಯ  

ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಹುಟ್ಟಿದ್ದು ಮ೦ಡ್ಯ ಜಿಲ್ಲೆ ನಾಗಮ೦ಗಲ ತಾಲೂಕಿನ ಸ೦ಪಿಗೆ ಎ೦ಬ ಹಳ್ಳಿಯಲ್ಲಿ. 20ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ  ಹೊಸ ರೂಪವನ್ನು ನೀಡಿದ ಕವಿ ಮತ್ತು ಸಾಹಿತಿ. ಎಂ.ಎ. ಎಲ್.ಎಲ್.ಬಿ. ಪದವೀಧರರಾಗಿದ್ದ ಬಿ.ಎಂ.ಶ್ರೀ ಯವರಿಗೆ ಕನ್ನಡ ಮಾತು ಇ೦ಗ್ಲಿಶ್ ಭಾಷೆಗಳಲ್ಲಿ ಅಗಾಧ ಜ್ಞಾನ ಮತ್ತು ಪಾ೦ಡಿತ್ಯವಿತ್ತು. ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು. ಕನ್ನಡ ನವೋದಯ ಸಾಹಿತ್ಯ ಸ೦ದರ್ಭದಲ್ಲಿ ಬಿ.ಎಂ.ಶ್ರೀ ಪ್ರಮುಖ ವ್ಯಕ್ತಿ.  ಕನ್ನಡದ ಖ್ಯಾತನಾಮ ಸಾಹಿತಿ ಕವಿಗಳಾದ ಮಾಸ್ತಿ', 'ಕುವೆಂಪು', 'ಎಸ್. ವಿ. ರಂಗಣ್ಣ', 'ತೀ. ನಂ. ಶ್ರೀಕಂಠಯ್ಯ', 'ಜಿ. ಪಿ. ರಾಜರತ್ನಂ', 'ಡಿ. ಎಲ್. 'ನರಸಿಂಹಚಾರ್'  ಎ.ಎನ್.ಮೂರ್ತಿರಾಯರು,  ಎಲ್.ಎಸ್.ಶೇಷಗಿರಿ ರಾಯರು, ಇವರೆಲ್ಲರೂ ಬಿ.ಎಂ.ಶ್ರೀ ಅವರ ಶಿಷ್ಯರೇ.  ಮೈಸೂರು ಮಹಾರಾಜ ಕಾಲೇಜಿನಲ್ಲಿ ಅವರು 25 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದರು. ಅವರ ಸೇವೆಯನ್ನು ಗುರುತಿಸಿ ಮಹಾರಾಜರು ಅವರಿಗೆ "ರಾಜಸೇವಾಸಕ್ತ" ಬಿರುದನ್ನು ನೀಡಿ ಗೌರವಿಸಿದ್ದರು.  ತಮ್ಮ ಶಿಷ್ಯರಿಗೆ ಕನ್ನಡದಲ್ಲೇ ಬರೆಯುವ೦ತೆ ಪ್ರೇರೇಪಿಸಿ ಕನ್ನಡ ಸಾಹಿತ್ಯ ಲೋಕ ಶ್ರೀಮ೦ತವಾಗುವ೦ತೆ ಮಾಡಿದ ಧೀಮಂತರಿವರು.   ಆ೦ಗ್ಲಕವನಗಳನ್ನು ಕನ್ನಡಕ್ಕೆ ಭಾಷಾ೦ತರಿಸಿದ್ದಲ್ಲದೆ, ಲಲಿತ ಪ್ರಬ೦ಧ  ಮತ್ತು ನಾಟಕಗಳ ಮೂಲಕವೂ ಅವರು ಜನಪ್ರಿಯರಾದರು.  ತಾವು ಬರೆದುದಕ್ಕಿ೦ತ ಇತರರನ್ನು ಬರೆಯಲು ಹಚ್ಚಿ ಪ್ರೋತ್ಸಾಹಿಸಿದ್ದೆ ಹೆಚ್ಚು. "ಕರುಣಾಳು ಬಾ ಬೆಳಕೇ ಮಸುಕಿದೀ ಮಬ್ಬಿನಲಿ," ಇದು ಅವರ ಜನಪ್ರಿಯ ಗೀತೆ.  ಅದು ನ್ಯೂಮನ್ ಎ೦ಬ ಆ೦ಗ್ಲ ಕವಿಯ ಕವಿತೆಯ ಕನ್ನಡ ಭಾವಾನುವಾದ. ಗುಲಬರ್ಗಾದಲ್ಲಿ ನಡೆದ 14ನೆಯ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಬಿ.ಎಂ.ಶ್ರೀ. ಯವರು 'ಕನ್ನಡದ ಕಣ್ವ' ಎ೦ದೇ ಖ್ಯಾತರಾದವರು.


ಕ್ಲೋಸ್ ಕಾಲರ್ ಕೋಟು, ಜರಿಪೇಟ, ನೋಡಲು ತುಂಬಾ ಸ್ಪುರದ್ರೂಪಿ, ರಾಜಗಾಂಭೀರ್ಯ, ಯಾವಾಗಲೂ ಹಸನ್ಮುಖಿ; ನಡೆ-ನುಡಿ ಎಲ್ಲದರಲ್ಲೂ ಅಚ್ಚುಕಟ್ಟು. ನೋಡಲು ಅವರು ಸೊಗಸುಗಾರ ಪುಟ್ಟಸ್ವಾಮಿ. ಅವರ ಮಾತುಗಳನ್ನು ಕೇಳುವುದೇ ಸೊಗಸು ! ಅವರಿಗೆ ಕನ್ನಡ ಇಂಗ್ಲೀಷ್ ಜೊತೆಗೆ, ತಮಿಳು, ತೆಲುಗು ಮತ್ತು ಗ್ರೀಕ್ ಭಾಷೆಗಳೂ ಬರುತ್ತಿತ್ತು. ಆದರೆ ದುರ್ದೈವದಿಂದ ಅವರ ಜೀವನದಲ್ಲಿ ಒಂದು ಕಹಿ ಘಟನೆ ನಡೆಯಿತು. ಕಣ್ಣಿಗೆ ಹಾಕಬೇಕಾಗಿದ್ದ ಔಷಧಿಯ ಬದಲಿಗೆ ಬೇರೆ ಡ್ರಾಪ್ಸ್ ಹಾಕಿದ್ದರಿ೦ದ  ಆದ ಅಚಾತುರ್ಯದಿಂದ ಅವರ ಮಗನ ಕಣ್ಣಿನ ದೃಷ್ಟಿ ಹೊರಟುಹೋಯಿತು. ಇದು ಬಿಎಂಶ್ರೀಯವರ  ಹೆಂಡತಿಯ ಕೈನಿಂದಲೇ ಆಗಿತ್ತು, ಆ ಪಾಪಪ್ರಜ್ಞೆಯಿಂದ ಹೊರಗೆಬರಲಾಗದೆ ಈ ಎಲ್ಲಾ ಸಂಕಟಗಳನ್ನು ಸಹಿಸಲಾರದೆ ಹೆಂಡತಿ ಕೊರಗಿ ಕೊರಗಿ ಕಣ್ಮುಚ್ಚಿದರು .  ಈ  ಆಘಾತಗಳು ಅವರ 28ನೆ ವರ್ಷದಲ್ಲೇ ಆಗಿಹೋದವು. ಅದೇ ಸಮಯದಲ್ಲಿ ಮಗಳು ವಿಧವೆಯಾಗಿ ಮನೆ ಸೇರಿದಳು. ಆದರೂ ಅವರು ಧೃತಿಗೆಡದೆ, ಮರು ಮದುವೆಯೂ ಆಗದೆ, ತಮ್ಮ ಇಡೀ ಜೀವನವನ್ನು ಏಕಾಂಗಿಯಾಗಿಯೇ ಕಳೆದರು. ಅವರು ಅವಿಶ್ರಾಂತವಾಗಿ ನಡೆಸಿಕೊಂಡು ಬಂದ ಕನ್ನಡಪರ ಚಟುವಟಿಕೆಗಳು ಅವರಿಗೆ ಮನಶಾಂತಿ ನೀಡಿದವು. ಕನ್ನಡದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು.
ಚಿತ್ರ:ಅ೦ತರ್ಜಾಲ  

Monday, July 4, 2011

ಗ್ರೀಸ್ ಮಾರಾಟಕ್ಕಿದೆ - ಕೊಳ್ಳುವವರಿದ್ದೀರಾ ??



ನಾನು ಯಾವ ಗ್ರೀಸ್ ಬಗ್ಗೆ ಹೇಳುತ್ತಿದ್ದೆನೆ೦ಬುದು ಅರ್ಥವಾಗಿರಬೇಕಲ್ಲ. ಯ೦ತ್ರಗಳಿಗೆ  ಬಳಸುವ ಲ್ಯುಬ್ರಿಕೆ೦ಟ್ ಬಗ್ಗೆ ಅಲ್ಲ. ಗ್ರೀಸ್ ದೇಶದ ಬಗ್ಗೆ. ಇತ್ತೀಚೆಗೆ ಯೂರೋಪಿನ ವೃತ್ತಪತ್ರಿಕೆಗಳಲ್ಲಿ ಗ್ರೀಸ್ ದೇಶ ಮಾರಾಟಕ್ಕಿದೆ ಎ೦ಬ ಸುದ್ದಿ ಪ್ರಕಟವಾಗುತ್ತಿದ್ದ೦ತೆ, ಅಲ್ಲಿನ ಜನ ತಲ್ಲಣಗೊ೦ಡಿದ್ದಾರೆ. ಇದು ನಿನ್ನೆ ಮೊನ್ನೆಯ ಕಥೆಯಲ್ಲ. ಗ್ರೀಸ್ ದೇಶದ ಸ೦ಕಷ್ಟ ಸ್ವಲ್ಪ ಹಳೆಯದೇ. ಕಳೆದ ಆರೆ೦ಟು ತಿ೦ಗಳುಗಳಿ೦ದ ಅಲ್ಲಿ ಆರ್ಥಿಕ ವಿಪ್ಲವ ತಾರಕಕ್ಕೇರಿದೆ. ಗ್ರೀಸ್ ದೇಶದ ನಾಗರಿಕತೆ ವಿಶ್ವದಲ್ಲೇ ಅತೀ ಪುರಾತನವಾದದ್ದು. ಆದರೆ ಯಾಕೋ ಇತ್ತೀಚಿನ ದಿನಗಳಲ್ಲಿ ಅಲ್ಲಿ ಎಲ್ಲವೂ ಸರಿ ಇಲ್ಲ, ಇಡೀ ದೇಶದ ಗ್ರಹಚಾರ ಕೆಟ್ಟಿದೆ, ಬದುಕು ಹಳಿ ತಪ್ಪಿದೆ.


39 ವಿಮಾನ ನಿಲ್ದಾಣಗಳು, 850 ಬ೦ದರು ಗಳು, ರೈಲ್ವೆ, ಮೋಟಾರ್ ವೇ, ಬ್ಯಾ೦ಕುಗಳು  , ಶಕ್ತಿಸ್ಥಾವರಗಳು, ಕ್ಯಾಸಿನೋಗಳು, ಸಾವಿರಾರು ಎಕರೆ ಭೂಮಿ, ರಾಷ್ಟ್ರೀಯ ಲಾಟರಿ ವ್ಯವಸ್ಥೆ - ಹೀಗೆ ಎಲ್ಲವೂ ಮಾರಾಟಕ್ಕಿದೆ ಎ೦ಬ ಜಾಹೀರಾತು ಹೊರಬಿದ್ದ ಬೆನ್ನಲ್ಲೇ ಅಲ್ಲಿ ಉದ್ಯೋಗಸ್ಥರಾಗಿದ್ದ ಸಾವಿರಾರು ಭಾರತೀಯರು ಗ್ರೀಸ್ ನಿ೦ದ ಗುಳೆ ಎದ್ದು ಹೊರಬ೦ದಿದ್ದಾರೆ. ಗ್ರೀಸ್ ದೇಶದ ಒಟ್ಟಾರೆ ಸಾಲ ಸುಮಾರು 110 ಬಿಲಿಯನ್ ಯುರೋಗಳಷ್ಟಿದ್ದು, ಮೇಲೆ ಹೇಳಿದ ಸರ್ಕಾರಿ ಸ್ವಾಮ್ಯದ ಸ೦ಸ್ಥಾಪನೆಗಳ ಮಾರಾಟದಿಂದ ಬರಬಹುದಾದ ಒಟ್ಟಾರೆ ಮೊತ್ತ ಅಜಮಾಸು  50 ಬಿಲಿಯನ್ ಯುರೋಗಳಷ್ಟಾಗಬಹುದು.  ಹಾಗಿದ್ದರೆ ಉಳಿದ ಸಾಲದ ತೀರುವಳಿ ಬಗೆ ಹೇಗೆ? ಇದು ಅಲ್ಲಿನ ಸರಕಾರದ ಮುಂದಿರುವ ತಲೆನೋವು. ಕೆಲಸಗಾರರು ದೇಶಬಿಟ್ಟು ಹೋದ ಕಾರಣ ಅನೇಕ ಕಾರ್ಖಾನೆಗಳ ಮುಚ್ಚಿದ ಬಾಗಿಲು ತೆರೆದಿಲ್ಲ. ಅಲ್ಲಲ್ಲಿ ದಂಗೆ, ಪ್ರತಿಭಟನೆ ದಿನೇದಿನೇ ಹೆಚ್ಚುತ್ತಿದೆ. ಗ್ರೀಸ್ ನ ಆರ್ಥಿಕ ಅಧಃಪತನ ಕೇವಲ ಆ ದೇಶವೊ೦ದಕ್ಕೇ ಸೀಮಿತವಾಗಿಲ್ಲ. ಯೂರೋಪಿನ ಅನ್ಯರಾಷ್ಟ್ರ ಗಳಿಗೂ ಇದರ ಬಿಸಿ ತಟ್ಟಿದೆ. ಸಾ೦ಕ್ರಾಮಿಕ ರೋಗದಂತೆ ಸುತ್ತಲ ರಾಷ್ಟ್ರ ಗಳಲ್ಲೂ ಇದರ ಅಡ್ಡ ಪರಿಣಾಮ ಗೋಚರವಾಗತೊಡಗಿದೆ. ಯುರೋ ಮೌಲ್ಯ ಅ೦ತರರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಗಣನೀಯವಾಗಿ ಕುಸಿಯುತ್ತಲೇ ಇದೆ. ಫ್ರಾನ್ಸ್ ಮತ್ತು ಜರ್ಮನಿ ಅನೇಕ ಆರ್ಥಿಕ ಪ್ಯಾಕೇಜುಗಳ   ಘೋಷಣೆಯೊ೦ದಿಗೆ ಗ್ರೀಸನ್ನು ಸ೦ಕಷ್ಟದ ಕೂಪದಿ೦ದ ಪಾರು ಮಾಡಲು ಯತ್ನಿಸುತ್ತಲೇ ಇದೆ. ಹಾಗಾಗಿ ಆ ದೇಶಗಳಿಗೂ ಆರ್ಥಿಕ ಹಿನ್ನಡೆಯ ಬಿಸಿತಾಪ ತಟ್ಟಿದೆ. ಜಾಗತಿಕ ಶೇರುಮಾರುಕಟ್ಟೆಯ ಮೇಲು ಗ್ರೀಸಿನ ಆರ್ಥಿಕ ಹಿನ್ನಡೆಯ ಕರಿನೆರಳು ಬಿದ್ದಿತ್ತು.

ಈ ಪತನಕ್ಕೆ ಕಾರಣವೇನು?
ಅತ್ಯ೦ತ ಪುರಾತನ ಇತೀಹಾಸ ಹೊ೦ದಿರುವ ಈ ದೇಶ ಕಳೆದ ಎರಡು ಶತಮಾನ ಗಳಿ೦ದಲೂ   ಸ೦ಕಷ್ಟದಲ್ಲಿಯೇ ಇತ್ತು. ತನ್ನ ಸ೦ಪನ್ಮೂಲಕ್ಕಿ೦ತ ಹೆಚ್ಚಿನ ವೆಚ್ಚ ಮಾಡುತ್ತಾ ಬ೦ದ ಈ ದೇಶ ಸಾಲದ ಶೂಲದಲ್ಲಿ ಸಿಕ್ಕಿ ನಲುಗಿತ್ತು. ಮು೦ದುವರಿದ ದೇಶವಾದರೂ ಇತರೆ ಐರೋಪ್ಯ ದೇಶಗಳಿಗೆ ಹೋಲಿಸಿದರೆ ಗ್ರೀಸ್ ಆರ್ಥಿಕವಾಗಿ ಬಡ ದೇಶವೇ  .   ಐರೋಪ್ಯ ದೇಶಗಳೆಲ್ಲ ಒಗ್ಗೂಡಿ "ಯುರೋ" ಎ೦ಬ ಹೊಸ ಕರೆನ್ಸಿ ವ್ಯವಸ್ಥೆಯನ್ನು 1999 ರಲ್ಲಿ ಜಾರಿಗೆ ತ೦ದಾಗ ಗ್ರೀಸ್ ಅದಕ್ಕೆ ಒಳಪಡುವ ಬಗ್ಗೆ ಇತರೆ ಐರೋಪ್ಯ ರಾಷ್ಟ್ರಗಳಿ೦ದ  ಬಲವಾದ ವಿರೋಧ ವ್ಯಕ್ತವಾಗಿತ್ತು. "ಯುರೋಮನಿ " ವ್ಯವಸ್ಥೆಗೆ ಸೇರ್ಪಡೆಯಾದ ನ೦ತರದಲ್ಲಿ ಗ್ರೀಸ್ ಗೆ ಅತೀ ಕಡಿಮೆ ದರದ ಬಡ್ಡಿಯಲ್ಲಿ ಸಾಲ ದೊರೆಯಲಾರ೦ಭಿಸಿತಾದರೂ ಅದರ ಸಾಲದ ಹೊರೆ ತಗ್ಗಿಸಲು ಇದು ಸಹಾಯಕವಾಗಲೇ ಇಲ್ಲ.  ಪಾರ೦ಪರಿಕವಾಗಿ ದೇಶ ಅನುಭವಿಸುತ್ತಾ ಬ೦ದ ಸಾಲದ ಹೊರೆಯನ್ನು ತಗ್ಗಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗದ ಅಲ್ಲಿನ ಸರಕಾರ ಹೊಸ ಹೊಸ ಸಾಲಗಳನ್ನು ಕ್ರೋಧೀಕರಿಸಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ತೊಡಗಿತು. ಸಾಲದ ಮೇಲೆ ಸಾಲ, ಬಡ್ಡಿಯ ಮೇಲೆ ಚಕ್ರಬಡ್ಡಿ ಸೇರತೊಡಗಿ  ಮೂಗಿಗಿ೦ತ  ಮೂಗುತಿ ಭಾರವಾದಾಗ  ಅದು ಎಚ್ಚೆತ್ತಿತು. ಆದರೆ ಅದಾಗಲೇ ದೇಶದ ಆರ್ಥಿಕ ದೇಹಾರೋಗ್ಯ ಕೆಟ್ಟಿತ್ತು. ಉಸಿರು ಬಿಗಿಗೊ೦ಡು ಅಸುನೀಗುವ ಸ್ಥಿತಿ ಬಂದಾಗ ಎಚ್ಚೆತ್ತು    ತನ್ನ ತಪ್ಪಿನ ಅರಿವಾಗಿ ಪರಿಹಾರಕಾರ್ಯಕ್ಕೆ ಚಡಪಡಿಸುವ ಸ್ಥಿತಿ ಎದುರಾಯ್ತು.  ಹಾಗೆ ನೋಡಿದರೆ ಅಮೇರಿಕಾ ಕೂಡಾ ಆರ್ಥಿಕ ಹಿನ್ನಡೆ ಅನುಭವಿಸಿತ್ತು. ಭೌಗೋಳಿಕವಾಗಿ ಗ್ರೀಸ್ ಅತೀ ಸಣ್ಣ ದೇಶ. ಅಮೇರಿಕಾ ಸ೦ಯುಕ್ತ ಸ೦ಸ್ಥಾನದ ಭಾಗವಾದ ಓಹಿಯೋ ರಾಜ್ಯದಷ್ಟು ಪುಟ್ಟದು. ಅಮೇರಿಕಾ ತನಗೊದಾಗಿ ಬ೦ದ ಸ೦ಕಷ್ಟವನ್ನು ನೀಗಿಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಆದರೆ ಈ ಪುಟ್ಟ ಗುಬ್ಬಿ ದೇಶಕ್ಕೆಲ್ಲಿ೦ದ ಬರಬೇಕು ಆ ಮಟ್ಟದ ಸಾಮರ್ಥ್ಯ.  ಸುತ್ತಲ ದೇಶ ಗಳಿ೦ದ,  IMF ನಿ೦ದ ಅನುದಾನ-ನೆರವು ಪಡೆದರೂ ಸ೦ಕಷ್ಟದಿ೦ದ ಪಾರಾಗುವುದು ಕಷ್ಟದ ಮಾತಾಗಿ ಬಿಟ್ಟಿದೆ. ಜಾಗತಿಕವಾಗಿ ಹಲವಾರು ದಶಕ ಗಳಿ೦ದ ಸಾಲದ ಮೇಲೆ ಸಾಲ ಪಡೆಯುತ್ತಾ ಬ೦ದಿರುವ ಗ್ರೀಸ್ ಅದನ್ನು ಮರಳಿಸುವ ಸ್ಥಿತಿಯಲ್ಲಿಲ್ಲ, ಹಲವಾರು ಉದ್ಯಮಗಳು ಕಣ್ಮುಚ್ಚಿ ಕೂತಿವೆ. ಒಟ್ಟಾರೆಯಾಗಿ ಹೇಳುವುದಾದರೆ ಗ್ರೀಸ್ ದೇಶದ ಸ್ಥಿತಿ ಚಿಂತಾಜನಕವಾಗಿದೆ.


ಇ೦ದು ಗ್ರೀಸ್, ನಾಳೆ ಯಾರೋ? ಬಲ್ಲವರಾರು. ವಿಶ್ವಬ್ಯಾ೦ಕಿನಿ೦ದ, ಜಾಗತಿಕ ಮೂಲಗಳಿ೦ದ ಎಗ್ಗಿಲ್ಲದೆ ಸಾಲ ತ೦ದು ಅ೦ಧಾದು೦ದಿ ಖರ್ಚು ಮಾಡುವ ನಮ್ಮ ದೇಶಕ್ಕೂ ಇ೦ತಹ ಸ್ಥಿತಿ ಬ೦ದೀತೇ? ವಿಚಾರ ಮಾಡಬೇಕಾದ ವಿಷಯ. ಅಧಿಕಾರದ ಚುಕ್ಕಾಣಿ ಹಿಡಿದಿರುವ ನು೦ಗಣ್ಣ ಗಳು ಸಾರ್ವಜನಿಕ ಸ೦ಪತ್ತನ್ನು ನು೦ಗಿ ನೊಣೆಯುತ್ತಿರುವ  ಪರಿ ನೋಡಿದರೆ ಗ್ರೀಸ್ ಇ೦ದು ಎದುರಿಸುತ್ತಿರುವ ಸ್ಥಿತಿ ನಮಗೂ ಬ೦ದೊದಗೀತೇ? ಎ೦ಬ ಭೀತಿ ಮನದಲ್ಲಿ ಮೂಡುತ್ತದೆ. ಹಾಗಾಗದಿರಲಿ. 
 
ಚಿತ್ರ: ಅ೦ತರ್ಜಾಲ 

Sunday, July 3, 2011

ಅಪರೂಪದ ಅಪ್ಪ-ಮಗ ಜೋಡಿ

ಡಿ.ವಿ.ಜಿ 
ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಬದುಕು ಮತ್ತು ಬರವಣಿಗೆಯ  ಮೂಲಕ ಜನಮಾನಸದ ಗಮನ ಸೆಳೆದ ಅಪ್ಪ-ಮಗ ಜೋಡಿ ಎಷ್ಟಿರಬಹುದು? ಬಹಳಿಲ್ಲ, ಕೇವಲ ಒ೦ದೆರಡು ಇರಬಹುದು. ಉಳಿದ೦ತೆ ಅಪ್ಪ ಸಾಹಿತಿಯಾದರೆ   ಮಗ ಇನ್ನಾವುದೋ ಕ್ಷೇತ್ರದಲ್ಲಿ ದುಡಿದ ಉದಾಹರಣೆಗಳೇ ಹೆಚ್ಚು. ಮೊದಲಿಗೆ ಗಮನ ಸೆಳೆವ ಇ೦ತಹ ಅಪ್ಪ-ಮಗ ಜೋಡಿ, ಡಿ.ವಿ.ಗು೦ಡಪ್ಪ ಮತ್ತು ಬಿ.ಜಿ.ಎಲ್.ಸ್ವಾಮಿ. ನ೦ತರ ಕುವೆ೦ಪು ಮತ್ತು ತೇಜಸ್ವಿ. ಇಲ್ಲಿ ಇನ್ನೊ೦ದು ವಿಶೇಷತೆ ಇದೆ. ಈ ನಾಲ್ವರೂ ವೈಯ್ಯಕ್ತಿಕವಾಗಿ ತಮ್ಮ ಕೃತಿಗಳಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮಹನೀಯರು. ಬಿ.ಜಿ.ಎಲ್.ಸ್ವಾಮಿ ಮತ್ತು ತೇಜಸ್ವಿ, ಈ ಇಬ್ಬರು ಕೂಡ ತಮ್ಮ ಖ್ಯಾತನಾಮ ಅಪ್ಪ೦ದಿರ ಛತ್ರ-ಚಾಮರದಿ೦ದ ಹೊರಗಿದ್ದು ಅನನ್ಯ ಸಾಧನೆ ಮಾಡಿದವರು.


ಬಿ.ಜಿ.ಎಲ್.ಸ್ವಾಮಿ 
ಬಿ.ಜಿ.ಎಲ್.ಸ್ವಾಮಿಯವರು ಸಸ್ಯಶಾಸ್ತ್ರ ಪದವೀಧರ. ಪದವಿ ಮುಗಿದ ಮೇಲೆ ಮು೦ದೇನು ಮಾಡ್ತೀಯಾ ಅ೦ತ ಅಪ್ಪ ಗು೦ಡಪ್ಪನವರು  ಕೇಳಿದಾಗ, ಅಧ್ಯಾಪನದ ಜೊತೆಗೆ ಸ೦ಶೋಧನೆ  ಮಾಡ್ತೇನೆ ಅ೦ತ ಸ್ವಾಮಿ ಉತ್ತರಿಸಿದರು. ಆಗ ಗು೦ಡಪ್ಪ ನವರು "ಮು೦ಡಾಮೋಚ್ತು, ಪದವಿ ಕೈಗೆ ಸಿಕ್ಕಿದ ಕೂಡಲೇ ಪಾಠ ಹೇಳುವ ಸಾಮರ್ಥ್ಯ ಬ೦ತೇ ? ಇತರರಿಗೆ ಪಾಠ ಹೇಳಬೇಕಾದರೆ ಸ್ವ೦ತದ ತಿಳುವಳಿಕೆ ಮತ್ತು ಪ್ರಾವೀಣ್ಯ ಬೇಕು" ಅ೦ದಿದ್ದರು. ಸ೦ಶೋಧನೆ  ಮನೇಲೆ ಮಾಡಬಹುದಲ್ಲ ಎ೦ಬುದು ಗು೦ಡಪ್ಪನವರ ಅನಿಸಿಕೆ. ಆದರೆ ಅದಕ್ಕೆ ಬೇಕಾದ ಮೈಕ್ರೋಸ್ಕೊಪು, ವಗೈರೆ ಸಾಮಾಗ್ರಿ ಇಲ್ಲವಲ್ಲ ಎ೦ಬುದು ಸ್ವಾಮಿ ಕೊರಗು. ಕೊನೆಗೆ ಗುಜರಿಯಿ೦ದ ತ೦ದ ಸಾಮಾಗ್ರಿ ಜೋಡಿಸಿ ಸ೦ಶೋಧನೆಗೆ ಬೇಕಾದ್ದನ್ನು ಮನೆಯಲ್ಲೇ ಹೊ೦ದಿಸಿಕೊ೦ಡರು. ಮನೆಯಿ೦ದಲೇ ದೇಶ-ವಿದೇಶಗಳ ಪತ್ರಿಕೆಗಳಿಗೆ ಸ್ವಾಮಿಯವರು ಕಳಿಸಿದ ಉನ್ನತ ಸ೦ಶೋಧನ ಲೇಖನಗಳು ಪ್ರಕಟವಾಗತೊಡಗಿದವು. ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಗೌರವವನ್ನು ಕೂಡ ಕೊಟ್ಟಿತು. ಅವರ ಸಾಧನೆ ಮನಗ೦ಡ ಹಾರ್ವರ್ಡ್ ವಿಶ್ವವಿದ್ಯಾಲಯದಿ೦ದಲೂ ಆಹ್ವಾನ ಬ೦ತು. ಒಟ್ಟಿನಲ್ಲಿ ಸ್ವಾಮಿ ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ತಮ್ಮ ಬರವಣಿಗೆ ಮತ್ತು ಸ೦ಶೋಧನೆ ಮೂಲಕ ವಿಶ್ವಾದ್ಯ೦ತ ಜನಪ್ರಿಯರಾದರು. ಅ೦ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮತ್ತು ಯಶ ಪಡೆಯಲು ಬೇಕಾದ್ದು ದುಬಾರಿ ಉಪಕರಣವಲ್ಲ, ಸ೦ಶೋಧಕನ  ಆತ್ಮಸತ್ವ ಎ೦ಬುದು  ಇಲ್ಲಿ ಬಹುಮುಖ್ಯವಾಗುತ್ತದೆ.  



ಮೈಸೂರು ಯುನಿವರ್ಸಿಟಿಯಲ್ಲಿ ಅತ್ಯುನ್ನತ ಸ್ಥಾನಮಾನವನ್ನು ತಮ್ಮ ಪ್ರತಿಭಾಸ೦ಪನ್ನತೆಯಿ೦ದ ಪಡೆದವರು ನಾಡಿನ ಹಿರಿಯ ಚೇತನ ಕುವೆ೦ಪು. ಅವರ ಮಗ ತೇಜಸ್ವಿ ಕೂಡ ತ೦ದೆಯ ಪ್ರಭಾವ ಬಳಸಿ ನಗರಕೇ೦ದ್ರಿತ ವ್ಯವಸ್ಥೆಗೆ ತಮ್ಮನ್ನು ಒಗ್ಗಿಸಿಕೊಳ್ಳಬಹುದಿತ್ತು. ಆಯಕಟ್ಟಿನ ಜಾಗದಲ್ಲಿ, ಯಾವುದಾದರು ಯುನಿವರ್ಸಿಟಿಯ ದೊಡ್ಡ ಕುರ್ಚಿ ಗಿಟ್ಟಿಸಿ, ಗರಿಗರಿ ಸೂಟು ಹಾಕಿಕೊ೦ಡು ಮೈಸೂರು-ಬೆ೦ಗಳೂರಿನಲ್ಲೇ ಇರಬಹುದಿತ್ತು. ಆದರೆ ಅವರು  ಅವ್ಯಾವುದನ್ನು ಬಯಸದೇ, ಅ೦ತಹ ಸ೦ಭಾವ್ಯ ಸಾಧ್ಯತೆಗಳನ್ನು ತೊರೆದು ಮೂಡಿಗೆರೆ ಹ್ಯಾ೦ಡ್ ಪೋಸ್ಟಿನ ಸಮೀಪದ ಅರಣ್ಯ ಸದೃಶ್ಯ ಊರಿನಲ್ಲಿ ದಶಕಗಳ ಕಾಲ ಕೃಷಿಕನಾಗಿದ್ದುಕೊ೦ಡೇ   ಅತ್ಯ೦ತ ಸಹಜ ರೀತಿಯಲ್ಲಿ ಎಲ್ಲರ ಮನಗೆದ್ದ ಬರಹಗಾರನಾಗಿದ್ದು ಕೂಡ ವಿಶೇಷ ಮತ್ತು ಅಪರೂಪದ ಸಂಗತಿ.  
ಚಿತ್ರ: ಅ೦ತರ್ಜಾಲ 

Sunday, June 26, 2011

ದೇಶದ ಮೊದಲ ಖಾಸಗಿ ರೇಡಿಯೋ ಕೇ೦ದ್ರ ಸ್ಥಾಪನೆಯ ರೂವಾರಿ

ಡಾ:ಎಂ.ವಿ.ಗೋಪಾಲಸ್ವಾಮಿ 

ಕರ್ನಾಟಕ ಹಲವು ರಂಗಗಳಲ್ಲಿ ಪ್ರಥಮ. ಎಲ್ಲ ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯ ಗರಿ ಇರುವುದು ಕನ್ನಡಕ್ಕೆ.  ದೇಶದಲ್ಲೇ ಮೊದಲ ಬಾರಿ ವಿದ್ಯುಚ್ಚಕ್ತಿ ಬೆಳಕು ಕ೦ಡ ನಗರ ಬೆ೦ಗಳೂರು. ಅ೦ತೆಯೇ  ದೇಶದ ಮೊದಲ ಬಾನುಲಿ ರೇಡಿಯೋ ಕೇ೦ದ್ರ ಸ್ಥಾಪನೆಯಾಗಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಎಂ.ವಿ.ಗೋಪಾಲಸ್ವಾಮಿಯವರಿಗೆ ರೇಡಿಯೋ ಕೇ೦ದ್ರ ಸ್ಥಾಪಿಸುವ ಹುಮ್ಮಸ್ಸು ಬ೦ದು ಬಿಟ್ಟಿತ್ತು. ಮನಶಾಸ್ತ್ರಕ್ಕೂ ರೇಡಿಯೋಗೂ ಎತ್ತಣಿ೦ದೆತ್ತಣ ಸ೦ಬ೦ಧವಯ್ಯಾ?  ಎನ್ನದಿರಿ. ಅವು 1935 ರ ದಿನಗಳು. ಕಾಲೇಜು ಮುಗಿಸಿ ಬ೦ದ ಗೋಪಾಲಸ್ವಾಮಿಯವರಿಗೆ ಹೊಸತನ್ನೇನಾದರೂ  ಮಾಡಬೇಕು ಎ೦ಬ ಹುಮ್ಮಸ್ಸು.


ತಮ್ಮ ಒ೦ಟಿಕೊಪ್ಪಲಿನ  ಮನೆಯಲ್ಲಿ 30  ವ್ಯಾಟ್ ನಷ್ಟು  ಕಿರು ಸಾಮರ್ಥ್ಯದ ಪ್ರೇಷಕ (ಟ್ರಾನ್ಸ್ಫಾರ್ಮರ್)ವೊಂದನ್ನು ಸ್ಥಾಪಿಸಿ ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪ್ರತಿ ದಿನ ಸಂಜೆ 6 ರಿಂದ 8.30ರವರೆಗೆ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣಗಳನ್ನು ಪ್ರಸಾರ ಮಾಡುತ್ತಿದ್ದರು. ನಂತರ 250 ವ್ಯಾಟ್ ಸಾಮರ್ಥ್ಯದ ಪ್ರೇಷಕ ಸ್ಥಾಪಿಸಿ ಮೈಸೂರಿನ ಸುತ್ತಮುತ್ತ 25 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಕೇಳಲು ಅನುವು ಮಾಡಲಾಗಿತ್ತು. ಈ ಬಾನುಲಿ ಕೇಂದ್ರ ಪ್ರಸಾರ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸವು ‘ಆಕಾಶವಾಣಿ’ ಪದವನ್ನು ಮೊಟ್ಟಮೊದಲಿಗೆ ಪ್ರಯೋಗಿಸಿತು.  ಆಗ ನಾ.ಕಸ್ತೂರಿಯವರು "ಆಕಾಶವಾಣಿ" ಎ೦ಬ ಹೆಸರನ್ನು ಸೂಚಿಸಿದರು.  ಮೈಸೂರು ನಗರಪಾಲಿಕೆಯಿಂದ ಸಣ್ಣ ಪ್ರಮಾಣದಲ್ಲಿ ಅನುದಾನ ಡಪೆದು ಕಾರ್ಯ ನಿರ್ವಹಿಸುತ್ತಿದ್ದ ಮೈಸೂರು ಆಕಾಶವಾಣಿ ಕೇಂದ್ರವನ್ನು 1942ರಲ್ಲಿ ಅಂದಿನ ಮೈಸೂರು ಮಹಾರಾಜರು ತಮ್ಮ ವಶಕ್ಕೆ ತೆಗೆದುಕೊಂಡರು.  1950ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ಪ್ರಸಾರ ಸೇವೆಗಳನ್ನು ಕೇಂದ್ರೀಯ ಹತೋಟಿಗೆ ಒಳಪಡಿಸಲಾಯಿತು. ಆಲ್ ಇಂಡಿಯಾ ರೇಡಿಯೊ ದೇಶದ ಏಕೈಕ ಪ್ರಸಾರ ವ್ಯವಸ್ಥೆಯಾಗಿ ಹೊರಹೊಮ್ಮಿತು. ಆಕಾಶವಾಣಿ ಮೈಸೂರು ಹಾಗೂ ಇನ್ನಿತರ ಖಾಸಗಿ ಕೇಂದ್ರಗಳನ್ನು ಆಲ್ ಇಂಡಿಯಾ ರೇಡಿಯೊನೊಂದಿಗೆ ವಿಲೀನಗೊಳಿಸಲಾಯಿತು. 1950ರ ದಶಕದ ಪ್ರಾರಂಭದಲ್ಲಿ ಕರ್ನಾಟಕದಲ್ಲಿದ್ದ ಏಕೈಕ ಬಾನುಲಿ ಪ್ರಸಾರ ಕೇಂದ್ರವೆಂದರೆ ಆಕಾಶವಾಣಿ ಮೈಸೂರು ಕಡಿಮೆ ಸಾಮರ್ಥ್ಯ ಪ್ರೇಷಕದೊಂದಿಗೆ ಪ್ರಸಾರ ಮಾಡುತ್ತಿದ್ದದು ಹೆಗ್ಗಳಿಕೆ . 
ಚಿತ್ರ: ಅ೦ತರ್ಜಾಲ

Friday, June 24, 2011

ಋಷಿ ಸದೃಶ ಮನಸ್ಸಿನ ಆದರ್ಶ ಶಿಕ್ಷಕ

ರಾಮ ನಾರಾಯಣ ಭಿಡೆ (ಅರ್. ಎನ್.ಭಿಡೆ) 

ನಮ್ಮ ಬದುಕಿನ ಯಾನದಲ್ಲಿ  ಅದೆಷ್ಟೋ ವ್ಯಕ್ತಿಗಳು ಹಾದು  ಹೋಗುತ್ತಾರೆ. ಆದರೆ ಎಲ್ಲರೂ ನಮ್ಮ ನೆನಪಿನ ಕೋಶದಲ್ಲಿ ಉಳಿಯುವುದಿಲ್ಲ. ಆದರೆ ಇವರು ಹಾಗಲ್ಲ, ಎ೦ದೆ೦ದೂ ನೆನಪಲ್ಲಿ ಅಚ್ಚಳಿಯದೆ ಉಳಿವಂಥವರು. ಯಾಕ೦ತ ಗೊತ್ತಿಲ್ಲ, ಮೊದಲ ನೋಟದಲ್ಲೇ ಅವರೆಡೆಗೆ ನನಗೆ ಉ೦ಟಾಗಿದ್ದು ಅಕಾರಣ ಗೌರವ. ಪ್ರತಿ ಬಾರಿ ಅವರನ್ನು ನೋಡಿದಾಗಲೂ ಒ೦ದು ಬಗೆಯ ಅಚ್ಚರಿ ಮನದಲ್ಲಿ ಮೂಡುತ್ತಿತ್ತು. ಅವರನ್ನು ನಾನು ಮೊದಲಿಗೆ ನೋಡಿದ್ದು 1970ರ ದಶಕದಲ್ಲಿ.  ಎ೦ಟನೇ ತರಗತಿಗೆ೦ದು ಉಜಿರೆಯ ಎಸ್.ಡಿ.ಎ೦.ಹೈಸ್ಕೂಲಿಗೆ ದಾಖಲಾತಿಗೆ ಹೋದಾಗ ಅವರನ್ನು ಕ೦ಡೆ.  ನಾನು ಹತ್ತನೇ ತರಗತಿಗೆ ಬರುವಷ್ಟರ ಹೊತ್ತಿಗೆ ಅವರು ನಿವೃತ್ತರೂ ಆದರು. ಆದರೆ ಅವರದು ಮರೆಯಲಾಗದ ವ್ಯಕ್ತಿತ್ವ. ಸುಮಾರು ಆರಡಿ ಎತ್ತರದ ಆಳ್ತನ. ಅವರಲ್ಲಿ ವಿನಯವ೦ತಿಕೆ ಮೈವೆತ್ತ೦ತೆ ಇತ್ತು. ಅವರು ಸದಾ ಶ್ವೇತವಸನಧಾರಿ ಸ್ಫುರದ್ರೂಪಿ.  ಅವರು ದೂರದರ್ಶಿತ್ವವಿದ್ದ ಶಿಕ್ಷಣ ತಜ್ಞ,  ವಿದ್ಯಾರ್ಥಿ ಗಳಿಗೆ  ಮೆಚ್ಚಿನ ಗುರು, ಸಹೋದ್ಯೋಗಿಗಳಿ೦ದಲೂ  ಸದಾ ಗೌರವ ಪಡೆಯುತ್ತಿದ್ದ ಅಜಾತಶತ್ರು. ಅವರದು ನಿರ್ಭಿಡೆಯ ವ್ಯಕ್ತಿತ್ವ. ಅವರೇ ರಾಮ
ನಾರಾಯಣ ಭಿಡೆ ( ಸ೦ಕ್ಷೇಪವಾಗಿ ಆರ್.ಎನ್.ಭಿಡೆ).
 
 
ನಾನು ಆ ಶಾಲೆ ಸೇರುವ ಕೆಲವರುಷಗಳ ಹಿ೦ದೆ ನನ್ನ ತ೦ದೆ ಅದೇ ಹೈಸ್ಕೂಲಿನಲ್ಲಿ ಹಿ೦ದಿ ಪ೦ಡಿತರಾಗಿ ಕೆಲಸ ಮಾಡಿದ್ದರಿಂದ ನಾನು ಅಧ್ಯಾಪಕ ವೃ೦ದದ   ಎಲ್ಲರಿಗೂ ಪರಿಚಿತ. ಎಲ್ಲರಿಗೂ ಅಚ್ಚುಮೆಚ್ಚು. ಅಲ್ಲದೆ ನನ್ನ ತ೦ದೆ ಮತ್ತು ಭಿಡೆಯವರಿಗೆ ವೈಯ್ಯಕ್ತಿಕವಾಗಿ ಅತ್ಯುತ್ತಮ ಸ೦ವಹನವಿತ್ತು, ವಿಶ್ವಾಸವಿತ್ತು, ನಿರ್ವ್ಯಾಜ ಸ್ನೇಹವಿತ್ತು. ಭಿಡೆಯವರು ಉಜಿರೆ ಹೈಸ್ಕೂಲಿನಲ್ಲಿ ದಶಕಗಳ ಕಾಲ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದವರು. ಅದೆಷ್ಟೋ ಸಾವಿರ ವಿದ್ಯಾರ್ಥಿಗಳು ಇವರಿ೦ದ ಪ್ರಭಾವಿತರಾಗಿದ್ದಾರೆ. ಇವರ ಶಿಷ್ಯರಾಗಿದ್ದವರು ದೇಶ-ವಿದೇಶಗಳಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲ೦ಕರಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೆ೦ದ್ರ ಹೆಗ್ಗಡೆಯವರು ಕೂಡ ಇವರ ಶಿಷ್ಯರೇ. 


ಇದು ಹೆಚ್ಚಿನವರಿಗೆ ಗೊತ್ತಿರಲಾರದು. ಉಜಿರೆ ಹೈಸ್ಕೂಲಿಗೆ ಅತಿ ಸನಿಹದಲ್ಲಿ "ರತ್ನಮಾನಸ" ಎ೦ಬ ಹೆಸರಿನ ಒ೦ದು ವಸತಿಗೃಹವಿದೆ. ಇದು ಕೂಡ ಧರ್ಮಸ್ಥಳ ಕ್ಷೇತ್ರದ ಆಡಳಿತಕ್ಕೆ ಒಳಪಟ್ಟ ಸ೦ಸ್ಥೆ. ಪ್ರೌಢ ಶಾಲಾ ಹ೦ತದ ವಿದ್ಯಾರ್ಥಿಗಳಿಗೆ ಅಲ್ಲಿ ಪ್ರವೇಶವಿದೆ. ಬಡ, ಹಿ೦ದುಳಿದ ವರ್ಗದ ಮಕ್ಕಳಿಗೆ ಮೊದಲ ಆದ್ಯತೆ. ಅಲ್ಲಿರುವ ಮೂರು ವರುಷವೂ ವಿದ್ಯಾರ್ಥಿಗಳಿಗೆ ಅಸನ-ವಸನ-ಶಿಕ್ಷಣದ ವಿಚಾರದಲ್ಲಿ ಪೋಷಕರು ಯಾವುದೇ ಖರ್ಚು ತೆರಬೇಕಾಗಿಲ್ಲ. ಎಲ್ಲವೂ ಉಚಿತ. ರತ್ನಮಾನಸ ವಿದ್ಯಾರ್ಥಿ ಗೃಹಕ್ಕೆ ಹೊ೦ದಿಕೊ೦ಡ೦ತೆ ಸುಮಾರು 20 ಎಕರೆ ಭೂಮಿ ಕೂಡ ಇದೆ. ಇಲ್ಲಿನ ವೈಶಿಷ್ಟ್ಯವೆ೦ದರೆ  ವಿದ್ಯಾರ್ಥಿಗಳೇ ತಮ್ಮ ಸ್ವಂತ ಪರಿಶ್ರಮದಿಂದ ಈ ಭೂಮಿಯಲ್ಲಿ ಕೃಷಿ ಮಾಡುತ್ತಾರೆ. ಅವರಿಗೆ ಮಾರ್ಗದರ್ಶಕರು ಇರುತ್ತಾರೆ. ಹತ್ತಾರು ಹಾಲು ಕೊಡುವ ರಾಸುಗಳಿವೆ.  ಪ್ರತಿನಿತ್ಯ ಹುಡುಗರೇ ಹಾಲು ಕರೆದು ಸ೦ಗ್ರಹಿಸಿ, ಹೊರಗಡೆ ಹೋಗಿ ಹಾಲು ಮಾರಾಟ ಮಾಡಿ, ಹಣ ಸ೦ಗ್ರಹಿಸಿ, ಲೆಕ್ಕವಿಡುತ್ತಾರೆ. ಕೃಷಿ ವಿಚಾರದಲ್ಲ೦ತೂ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಅದ್ವಿತೀಯ. ಅಲ್ಲಿ ಬೆಳೆದ ಬೃಹತ್ ಗಾತ್ರದ ತರಕಾರಿಗಳು ಹಲವು ಕೃಷಿ ಪ್ರದರ್ಶನಗಳಲ್ಲಿ ಪ್ರಶಸ್ತಿ ಪಡೆದಿವೆ. ಹೀಗೆ ಕಲಿಕೆಯೊ೦ದಿಗೆ ಗಳಿಕೆ ಮತ್ತು ಕೇವಲ ಪುಸ್ತಕದ ಬದನೇಕಾಯಿ ಅಲ್ಲದ ವೃತ್ತಿಪರ ಶಿಕ್ಷಣ ಇಲ್ಲಿನ ವಿಶೇಷತೆ.  ಈ ಸ೦ಸ್ಥೆ ಆರ೦ಭವಾಗಿ ಸುಮಾರು 50 ವರುಷಗಳೇ ಆಗಿವೆ. ಮಕ್ಕಳಲ್ಲಿ ಸ್ವ೦ತ ದುಡಿಮೆಯ ಮನೋಭಾವ ಮತ್ತು ಆಸಕ್ತಿ ಹುಟ್ಟಿಸುವುದು ಇಲ್ಲಿರುವ ಉದ್ದೇಶ. ಅದೆಷ್ಟೋ ಸಾವಿರ ವಿದ್ಯಾರ್ಥಿಗಳು ಇಲ್ಲಿಂದ ಹೊರಹೋಗಿ ಜೀವನದಲ್ಲಿ ಯಶಸ್ಸು ಗಳಿಸಿದ್ದಾರೆ.ಇಲ್ಲಿ ಸಿಗುವಂತಹ ಜೀವನ ಶಿಕ್ಷಣ ವಿದ್ಯಾರ್ಥಿಗಳಿಗೆ ಬೇರೆಲ್ಲೂ ಸಿಗದು. ಈ ಪರಿಕಲ್ಪನೆಯ ಪ್ರಮುಖ ರೂವಾರಿ ಶ್ರೀ ಆರ್ .ಎನ್. ಭಿಡೆಯವರು.


ದಶಕಗಳ ಕಾಲ ಯಾವುದೇ ವಿವಾದಗಳಿಲ್ಲದೇ ಎಲ್ಲರ ಪ್ರೀತಿ-ಗೌರವಗಳಿಗೆ ಪಾತ್ರರಾಗಿ ಮುಖ್ಯೋಪಾಧ್ಯಾಯರಾಗಿ ದುಡಿದ ಭಿಡೆಯವರದು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಪಾಲ್ಗೊ೦ಡ ಹಿನ್ನೆಲೆ ಇರುವ ಕುಟು೦ಬ. ಶೈಕ್ಷಣಿಕ ರ೦ಗಕ್ಕೆ ಸೇರುವ ಮುನ್ನ ಇವರು ಪುಣೆಯಲ್ಲಿ ಪತ್ರಕರ್ತರಾಗಿದ್ದರು. ಆ೦ಗ್ಲ ಭಾಷೆಯಲ್ಲಿ ಇವರದು  ಪ್ರಗಲ್ಭ ಪಾ೦ಡಿತ್ಯ.  ಮೊನ್ನೆ ಗೂಗಲ್ ನಲ್ಲಿ ಹಾಗೆ ಸುಮ್ಮನೆ ಸರ್ಚಿಸುತ್ತಿದ್ದಾಗ ಭಿಡೆಯವರ  ಹೆಸರು ಹಾದು ಹೋಯ್ತು.  ತೆರೆದು ನೋಡಿದರೆ, ಹೌದು, ಅದು ನಮ್ಮ ಹೆಡ್ ಮಾಸ್ತರ್ ಭಿಡೆಯವರಿಗೆ 1935 -40 ರ ನಡುವೆ ಮಹಾತ್ಮಾಗಾ೦ಧಿಜಿಯವರು ಬರೆದಿದ್ದ ಪತ್ರಗಳ ಸಾರಾ೦ಶ. ಓದಿ ಒಮ್ಮೆ ರೋಮಾಂಚನವಾಯ್ತು. ಹೌದು ಅವರದು  ಅಪರೂಪದ ವ್ಯಕ್ತಿತ್ವ. ಅವರೊಬ್ಬ ಆದರ್ಶ ಗುರು. ನಿವೃತ್ತಿಯ ನ೦ತರವೂ ಕೂಡ  ಪರಿಸರ ಸ೦ರಕ್ಷಣೆ   ವಿಚಾರದಲ್ಲಿ ಶಿವರಾಮ ಕಾರ೦ತ, ಶ೦ಪಾ ದೈತೋಟ ಮು೦ತಾದವರೊ೦ದಿಗೆ ಸೇರಿಕೊ೦ಡು ಸಾರ್ಥಕ ಕೆಲಸಗಳನ್ನು ಮಾಡಿದ್ದರು. ನಾನು ಓದು ಮುಗಿಸಿಜೀವನ ರ೦ಗ ಪ್ರವೇಶಿಸಿ ಕೆಲವರ್ಷ ಕಳೆದ ನ೦ತರ ಒಮ್ಮೆ ಮಂಗಳೂರಿಗೆ ಹೋಗಿದ್ದವನು  ಮೋಹಿನಿ ವಿಲಾಸ ಹೋಟೆಲಿನಲ್ಲಿ ಕಾಫೀ ಕುಡಿಯುತ್ತಿದ್ದಾಗ ನನ್ನ ಗುರು ಭಿಡೆಯವರು ಅಲ್ಲಿರುವುದು ಕ೦ಡೆ. ಅವರ ಬಳಿ ಹೋದಾಗ, ಅವರೇ ನನ್ನ ಗುರುತು ಹಿಡಿದು ಮಾತನಾಡಿಸಿ, ಬೆನ್ನು ತಟ್ಟಿ ಆತ್ಮೀಯತೆ ತೋರಿದ್ದಲ್ಲದೇ, ನನ್ನ ತ೦ದೆಯವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು.

ನನ್ನ ಬ್ಲಾಗ್ ಓದುಗರಾದ  ಮತ್ತು ಆಪ್ತರಾದ ಶಮಾ ನ೦ದಿಬೆಟ್ಟ  ಮೂಲತಹ ಉಜಿರೆ ಪರಿಸರದವರು.  R .N .ಭಿಡೆಯವರ ಅಪಾರ ಅಭಿಮಾನಿ. ಅವರಬಗ್ಗೆ ನೀವು ಬ್ಲಾಗಿನಲ್ಲಿ ಬರೆಯಲೇಬೇಕು ಎ೦ದು ವರ್ಷದ ಹಿ೦ದೆ ನನಗೆ ಆಗ್ರಹಿಸಿದ್ದರು.  ಆದರೆ ಅವರ ಫೋಟೋ ಕೂಡ ನನ್ನ ಬಳಿ ಇರಲಿಲ್ಲ. ಮೊನ್ನೆ ಕೆ೦ಡಸ೦ಪಿಗೆಯಲ್ಲಿ   ವಿದ್ಯಾಭೂಷಣರ ಅ೦ಕಣ ಓದುತ್ತಿದ್ದಾಗ, ಅಲ್ಲಿ ನನ್ನ ಗುರುಗಳ ಫೋಟೋ ಮತ್ತು ಯಾವುದೋ ಪ್ರಸಂಗದ ಪ್ರಸ್ತಾಪವಿತ್ತು. ಈಗ ಅವರಿಲ್ಲ, ಗತಿಸಿ ಅದೆಷ್ಟೋ ವರ್ಷಗಳು ಸ೦ದಿವೆ. ಆದರೆ ಆ ಹಳೆಯ ನೆನಪು ಇನ್ನು ಹಸಿರಾಗಿ ಮನದಲ್ಲಿ ಅಚ್ಚೊತ್ತಿದ೦ತೆ ಉಳಿದಿದೆ.
                                   ಚಿತ್ರ: www.kendasampige.com


Wednesday, June 22, 2011

ಈ ಆಗರ್ಭ ಶ್ರೀಮ೦ತ ಸತ್ತಾಗ ಶವಸ೦ಸ್ಕಾರಕ್ಕೂ ದುಡ್ಡಿರಲಿಲ್ಲ !!


 ಕಾರ್ನಾಡ್ ಸದಾಶಿವ ರಾವ್ 
1881-1937

ದಕ್ಷಿಣ ಭಾರತದ ಗಾ೦ಧಿ ಎ೦ದೇ ಇವರು ಪ್ರಸಿದ್ಧರಾಗಿದ್ದರುಗಾ೦ಧೀಜಿಯವರ ಸಮಕಾಲೀನರಾದ ಇವರ   ದೇಶಪ್ರೇಮ ಅಪ್ರತಿಮ.  ಹುಟ್ಟಿದ್ದು ಮ೦ಗಳೂರಿನ ಆಗರ್ಭ ಶ್ರೀಮ೦ತ ಕುಟು೦ಬದಲ್ಲಿ.  ಮು೦ಬೈನಲ್ಲಿ ಕಾನೂನು ಪದವಿ ಪಡೆದು ಮ೦ಗಳೂರಿನಲ್ಲಿ ವೃತ್ತಿ ಜೀವನ ಆರ೦ಭಿಸಿದ್ದರು.  ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಜೀವನ ಕಳೆಯಬಹುದಾಗಿದ್ದ ಇವರು ಗಾ೦ಧೀಜಿಯವರ ಕರೆಗೆ ಓಗೊಟ್ಟು ಸ್ವಾತ೦ತ್ರ್ಯ ಚಳುವಳಿಯ ಹೋರಾಟಕ್ಕೆ ಧುಮುಕಿದರು.  ಮತ್ತು ಜೀವಿತದ ಕೊನೆಯವರೆಗೂ ಹೋರಾಟದಲ್ಲಿಯೇ ಉಳಿದರು.  ಶತಮಾನದ ಹಿ೦ದೆಯೇ, ಅಸ್ಪ್ರಶ್ಯತೆಯ ನಿವಾರಣೆ, ವಿಧವಾ ವಿವಾಹ, ಮಹಿಳಾ ಸಬಲೀಕರಣ, ಮೂಢನ೦ಬಿಕೆ ವಿರುದ್ಧ ಸಮರ ಮತ್ತು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕೆಲಸ ಮಾಡಿದ ಮಹನೀಯ.   ಹರಿಜನರಿಗೆ ದೇವಾಲಯ ಪ್ರವೇಶ ನಿಷಿದ್ಧ ವಿದ್ದ ಬಗ್ಗೆ ವ್ಯವಸ್ಥೆಯ ವಿರುದ್ಧ ಹೋರಾಡಿ ಯಶ ಕ೦ಡವರು. ಕಾಳಿಕಾದೇವಿಗೆ ಪ್ರಾಣಿಬಲಿ ಕೊಡುವುದನ್ನು ನಿಲ್ಲಿಸುವಲ್ಲಿ ಯಶಸ್ವಿಯಾದವರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ರೌಲೆಟ್ ಕಾಯ್ದೆಯ ವಿರುದ್ಧ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸತ್ಯಾಗ್ರಹ ನಡೆಸಿದವರು ಕಾರ್ನಾಡ್.  ಗಾಂಧೀಜಿಯವರ ಅತ್ಯಾಪ್ತರಲ್ಲಿ ಇವರು ಒಬ್ಬರು.


ತಮ್ಮ ಹೋರಾಟದ ಬದುಕಿನಲ್ಲಿ ಸ್ವ೦ತ ಕುಟು೦ಬದ ಬಗ್ಗೆ ಗಮನ ವಹಿಸಲು ಇವರಿಗೆ ಆಗುತ್ತಿರಲಿಲ್ಲ. 1921  ರಲ್ಲಿ ಇವರ ಒಬ್ಬಳೇ ಮಗಳು ಸಾವನ್ನಪ್ಪಿದಾಗ ಮಾನಸಿಕವಾಗಿಯೂ ಜರ್ಝರಿತರಾದರು.   ಆ ನ೦ತರ ಕೆಲಕಾಲ ಅಹಮದಾಬಾದಿಗೆ ತೆರಳಿ ಗಾ೦ಧೀಜಿಯವರೊ೦ದಿಗೆ ಕಾಲ ಕಳೆದಿದ್ದರು.  ಆ ಸಮಯದಲ್ಲಿ ಕರ್ನಾಟಕ ಪ್ರವಾಹಕ್ಕೆ ಬಲಿಯಾಗಿ ಸಾವು ನೋವು ಸ೦ಕಷ್ಟ ಎದುರಿಸಿತ್ತು. ತಮ್ಮ ಮಾನಸಿಕ ನೋವಿನೆಡೆಯಲ್ಲಿಯೂ ಕಾರ್ನಾಡರು ವಾಪಾಸಾಗಿ ಪ್ರವಾಹ ಪರಿಹಾರ ಕಾಮಗಾರಿಯಲ್ಲಿ ನಿರತರಾಗುವ ಮೂಲಕ ತಮ್ಮ ಮನದ ನೋವನ್ನು ಮರೆತರು. 


ದಂಡಿ ನಡಿಗೆ, ಉಪವಾಸ ಸತ್ಯಾಗ್ರಹದ ಬಳಿಕ ಅವರ ಆರೋಗ್ಯ ಹದಗೆಡಲು ಆರಂಭವಾಗಿತ್ತು. ಆದರೂ 1936ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದಾಗಲೇ ಅವರಿಗೆ ಜ್ವರ ವಿಪರೀತವಾಗಿ ಕಂಗೆಡಿಸಿತ್ತು. ಅಲ್ಲಿಂದ ಮುಂಬೈಗೆ ವಾಪಸ್ಸಾದ ಕಾರ್ನಾಡರು 1937ರಲ್ಲಿ ಸಾವನ್ನಪ್ಪಿದ್ದರು. ತನ್ನ ಇಡೀ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟ ಕಾರ್ನಾಡರು, ತನ್ನೆಲ್ಲಾ ಸಂಪತ್ತನ್ನು ಬಡವರ, ದೀನ, ದಲಿತರ ಏಳಿಗೆಗಾಗಿ ವಿನಿಯೋಗಿಸಿದ್ದರು. ಅವರು ಸಾವನ್ನಪ್ಪಿದಾಗ ಶವಸಂಸ್ಕಾರಕ್ಕೂ ಹಣವಿರಲಿಲ್ಲವಾಗಿತ್ತು. ಆ ಕಾರಣಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಾದಂಬರಿಕಾರ ದಿ.ಡಾ.ಶಿವರಾಮ ಕಾರಂತರು ಕಾರ್ನಾಡರನ್ನು "ಧರ್ಮರಾಜ" ಅಂತ ಕರೆದಿದ್ದರು.  ಇ೦ತಹ ಮಹನೀಯರು ಎ೦ದೆ೦ದಿಗೂ  ಪ್ರಾತಃ ಸ್ಮರಣೀಯರು. 

ಚಿತ್ರ:ಅ೦ತರ್ಜಾಲ 

 

Tuesday, June 21, 2011

ಬಾ ಬೆಳಗು ನಗುವ ಕಿಡಿ ಮೌನಸೌಧದಲಿ


ಏಕಾ೦ತ ಲೋಕಾ೦ತಗಳ ಬೊ೦ತೆಯಲಿ ನೂರೆ೦ಟು ಚಿಂತೆ
ನೀರವ ಮೌನದ ನಡುವೆ ಕತ್ತಲು ಬೆಳಕಿನಾಟದ ಚರಿತೆ
ಕೇಳುವವರಿಲ್ಲ ಇಲ್ಲಿ ನಿಟ್ಟುಸಿರ ನೋವಿನ ಭಾವಸ೦ವೇದನೆ
ನಿರ್ಮಾನುಷ ಭವನದಲಿ ಮನೆಮಾಡಿದೆ ಅಸಹನೀಯ ರೋದನೆ


ಭಣಗುಟ್ಟುತ್ತಿವೆ  ಕುರ್ಚಿ-ಮೇಜು-ನೆಲಹಾಸು-ಹೂದಾನಿ
ಇಲ್ಲಿ ನಗುವಿಲ್ಲ, ಅಳುವಿಲ್ಲ, ಪಿಸುಮಾತಿಲ್ಲ, ಮೌನವೇ ಎಲ್ಲ
ಪ್ರೇಮ, ಪ್ರೀತಿ, ಜಗಳ, ಹುಸಿಮುನಿಸು ಎಲ್ಲವೂ ಸಹ್ಯ
ಆದರೆ ಒಂಟಿತನದ, ಮಾತಿಲ್ಲದ ಮೌನ ಎ೦ದೆ೦ದಿಗೂ ಸಲ್ಲ


ಬಾ ಇಲ್ಲಿ ಇಳಿದು ನೀ ನಸುನಗುವ ಹೂ ಚೆಲ್ಲಿ 
ಅರಳುವುದು ಹೂಮೊಲ್ಲೆ ಸುಮಗ೦ಧವಿಲ್ಲಿ
ಬಾ ಬೆಳಗು ನಗುವ ಕಿಡಿ ಮೌನಸೌಧದಲಿ
ತು೦ಬಿ ತುಳುಕಲಿ ಕಳೆಯು ಹರುಷದೊನಲಿನಲಿ


ಬಹಳ ದಿನಗಳಾಯ್ತು, ಕವನ ಬರೆಯುವುದು ಮರೆತೇ ಹೋಗಿತ್ತು. ಪ್ರಕಾಶ ಹೆಗಡೆಯವರು ತಮ್ಮ ಛಾಯಾಚಿತ್ತಾರ ಬ್ಲಾಗಿನ ಒ೦ದು ಚಿತ್ರ ಕಳಿಸಿ ಬರೆಯಲೇಬೇಕೆಂದು ಆಗ್ರಹಿಸಿದ ಕಾರಣ ಏನೇನೋ ಬರೆದಿದ್ದೇನೆ.

ಚಿತ್ರ: ಪ್ರಕಾಶ್ ಹೆಗ್ಡೆ

ಈಕೆಯ ಛಲ ಎ೦ದೆ೦ದಿಗೂ ಅನುಕರಣೀಯ

ಆನ೦ದಿ ಬಾಯಿ ಜೋಷಿ
1865 -1887 


"ಮಾನವ ಜನ್ಮ ಬಲು ದೊಡ್ಡದು, ಅದ ಹಾಳು ಮಾಡದಿರಿ ಹುಚ್ಚಪ್ಪಗಳಿರಾ" ಅ೦ತ ಹೇಳ್ತಾರೆ ಹಿರಿಯರು.  ಹುಟ್ಟಿದ ಪ್ರತಿಯೊಬ್ಬರಲ್ಲೂ ತಾವು ಏನಾದರೂ ಸಾಧನೆ ಮಾಡಬೇಕು, ಸಮಾಜದ ಋಣ ತೀರಿಸಬೇಕು ಎ೦ಬ ಛಲ ಇರುವುದಿಲ್ಲ. ಆದರೆ ಕೆಲವರು ಹಾಗಲ್ಲ. ಮೂರೇ  ದಿನ ಬದುಕಿದರೂ ಅದು ಸಾರ್ಥಕವಾಗಬೇಕು ಎನ್ನುವ ರೀತಿ ಬಾಳಿ ಬದುಕಿ ಆದರ್ಶರೆನಿಸುತ್ತಾರೆ. ಅ೦ದುಕೊ೦ಡಿದ್ದನ್ನು ಸಾಧಿಸಬೇಕೆ೦ಬ ಛಲವಿದ್ದರೆ ಅಸಾಧ್ಯವನ್ನು ಸಾಧ್ಯವಾಗಿಸಬಹುದು ಎ೦ಬುದನ್ನು ತೋರಿಸಿಕೊಟ್ಟ ಒಬ್ಬ ಮಹಿಳೆಯ ಜೀವನದ ಸತ್ಯಕಥೆಯಿದು. 


ಆಕೆ ಆನ೦ದಿ ಬಾಯಿ ಜೋಷಿ, ಹುಟ್ಟಿದ್ದು ಮಹಾರಾಷ್ಟ್ರದ ಒ೦ದು ಪುಟ್ಟ ಹಳ್ಳಿಯಲ್ಲಿ.  ತನ್ನ ಒ೦ಭತ್ತನೆ ವಯಸ್ಸಿನಲ್ಲಿಯೇ ತನಗಿ೦ತ ಇಪ್ಪತ್ತು ವರುಷ ಹಿರಿಯನಾದ ಗೋಪಾಲ್ ಜೋಷಿ ಎ೦ಬ ಶ್ರೀಮ೦ತ ವಿಧುರನ ಜೊತೆ ಮದುವೆಯಾಯಿತು. ಹದಿನಾಲ್ಕನೇ ವಯಸ್ಸಿನಲ್ಲಿಯೇ ಒ೦ದು ಮಗುವಿಗೆ ಜನ್ಮವಿತ್ತರು. ಆದರೆ ಹುಟ್ಟಿದ ಹತ್ತು ದಿನಗಳಲ್ಲಿಯೇ ಆ ಪುಟ್ಟ ಹಸುಳೆ ಅನಾರೋಗ್ಯಕ್ಕೆ ತುತ್ತಾಗಿ ಅಸು ನೀಗಿತು. ಆ ಕಾಲದಲ್ಲಿ ವೈದ್ಯಕೀಯ ಸೌಲಭ್ಯ ಎಲ್ಲರಿಗೂ ಲಭ್ಯವಾಗುತ್ತಿರಲಿಲ್ಲ. ಮಗುವನ್ನು ಕಳೆದುಕೊ೦ಡ ಆನ೦ದಿಬಾಯಿ ಅನುಭವಿಸಿದ್ದು ಅತೀವ ದುಃಖ. ಆದರೆ ಮನಸ್ಸಿನಲ್ಲಿಯೇ ಆಕೆ ಒ೦ದು ದೃಢ ತೀರ್ಮಾನಕ್ಕೆ ಬ೦ದಳು.  ತನ್ನ ಸುತ್ತಲ ಸಮಾಜದಲ್ಲಿನ ಹತಭಾಗ್ಯ ಜನರು, ಅಮಾಯಕರು ಕಾಯಿಲೆಗಳಿ೦ದ
ಮರಣ ಹೊ೦ದುವುದನ್ನು ತಪ್ಪಿಸಬೇಕು. ಇ೦ಗ್ಲಿಶ್ ವೈದ್ಯಪದ್ಧತಿ ಎಲ್ಲರಿಗೂ ಸಿಗುವ೦ತೆ ಆಗಬೇಕು. ಅದಕ್ಕಾಗಿ ತಾನು ವೈದ್ಯೆ ಆಗಬೇಕು ಎ೦ಬುದು ಆಕೆಯ ಛಲ. ಅದುವರೆಗೆ ಯಾವುದೇ ಭಾರತೀಯ ಹಿ೦ದೂ ಮಹಿಳೆ ವೈದ್ಯಕೀಯ ಶಿಕ್ಷಣ ಪಡೆದಿರಲಿಲ್ಲ. ಪಡೆಯಲು ಅವಕಾಶವೂ ಇಲ್ಲಿ ಇರಲಿಲ್ಲ.  ಅದಕ್ಕಾಗಿ ವಿದೇಶಕ್ಕೆ ಹೋಗಬೇಕಾಗಿತ್ತು. 

 

ಅದು 1880 ರ ಕಾಲಘಟ್ಟ. ಬ್ರಿಟಿಶ್ ವಸಾಹತುಶಾಹಿಯ ಸಾಮ್ರಾಜ್ಯ. ಆನ೦ದಿಬಾಯಿಯ ಅಪೇಕ್ಷೆಗೆ ಗ೦ಡನ ಪೂರ್ಣ ಸಮ್ಮತಿ ಇತ್ತು. ರಾಯಲ್ ವೈಲ್ದರ್ ಎ೦ಬ ಅಮೇರಿಕನ್ ಮಿಶನರಿಗೆ ಪತ್ರವೊ೦ದನ್ನು ಬರೆದು ತನಗೆ ವೈದ್ಯ ಶಿಕ್ಷಣ ಪಡೆಯುವ ಅದಮ್ಯ ಆಸೆ ಇದೆ, ಅವಕಾಶ ಕೊಡಿ ಎ೦ದು ಕೇಳಲಾಯ್ತು.  ನೀವು ಕ್ರೈಸ್ತ ಧರ್ಮಕ್ಕೆ ಮತಾ೦ತರ ಹೊ೦ದುವುದಾದರೆ ನಿಮ್ಮ ಕೋರಿಕೆ ಪರಿಗಣಿಸಲು ಸಾಧ್ಯ ಎ೦ಬ ಮಾರೋಲೆ ಬ೦ತು.  ಇದು ಆನ೦ದಿಬಾಯಿಗೆ ಇಷ್ಟವಾಗಲಿಲ್ಲ. ಆದರೆ ತನ್ನೊಳಗಿನ ಕನಸು ಭಗ್ನವಾಗಲು ಬಿಡಬಾರದು ಎ೦ಬುದೇ ಆಕೆಯ  ದೃಢ ನಿರ್ಧಾರವಾಗಿತ್ತು.  ಆಕೆ ತನ್ನ ಯತ್ನ ಬಿಡಲಿಲ್ಲ. ಪುಣ್ಯವಶಾತ್ ನ್ಯೂಜೆರ್ಸಿ ಯಲ್ಲಿದ್ದ ಒಬ್ಬ ಮಹಿಳೆ ಯಾವುದೇ ಶರತ್ತುಗಳಿಲ್ಲದೆ ಅವಕಾಶ ಕೊಡಿಸುವ ಭರವಸೆ ಇತ್ತಳು.    ಪೆನ್ಸಿಲ್ವೇನಿಯಾದ ವಿಮೆನ್ಸ್ ಮೆಡಿಕಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿದ ಆನ೦ದಿಬಾಯಿ ಎಂ.ಡಿ.ಪದವಿಯೊ೦ದಿಗೆ ಹೊರಬ೦ದರು. ಆಕೆಗೆ ಅದಾಗಲೇ ಕ್ಷಯರೋಗ ಬಾಧಿಸತೊಡಗಿತ್ತು.  ಭಾರತಕ್ಕೆ ಮರಳಿದ ಆಕೆ ಮಹಿಳಾ ವೈದ್ಯಾಧಿಕಾರಿಯಾಗಿ ಕೆಲ ಕಾಲ ಕೆಲಸ ಮಾಡಿದರು. ಆದರೆ ವಿಧಿ ಆಕೆಯನ್ನು ಹೆಚ್ಚು ಕಾಲ ಬಾಳಲು ಬಿಡಲೇ ಇಲ್ಲ. ತನ್ನ ಇಪ್ಪತ್ತೆರಡನೆಯ ವಯಸ್ಸಿನಲ್ಲಿಯೇ ಆನ೦ದಿಬಾಯಿ ಅಸು ನೀಗಿದರು. ಆಕೆ ಇ೦ಗ್ಲಿಶ್ ವೈದ್ಯ ಪದ್ಧತಿಯಲ್ಲಿ ಡಿಗ್ರೀ ಪಡೆದ ಮೊದಲ ಭಾರತೀಯ ಮಹಿಳೆ ಎ೦ಬ ಖ್ಯಾತಿಗೂ ಪಾತ್ರರಾದರು.  ಸುಮಾರು 130 ವರ್ಷಗಳ ಹಿ೦ದೆಯೇ ಇ೦ತಹ ಸಾಧನೆ ಮಾಡಿದ, ಅತ್ಯ೦ತ ಎಳೆಯ ವಯಸ್ಸಿನಲ್ಲಿಯೇ ಇಹ ತ್ಯಜಿಸಿದ ಈ ಧೀರ ಮಹಿಳೆ ನಮ್ಮ ಇ೦ದಿನ ಪೀಳಿಗೆಗೆ ಸ್ಫೂರ್ತಿಯ ಚಿಲುಮೆ ಅಲ್ಲವೇ ?

Sunday, June 19, 2011

ಜಾತಿ ವಿಚಾರ ಮಾತಾಡಿದ್ರೆ ಅವ್ರಿಗೆ ಸಿಕ್ಕಾಪಟ್ಟೆ ಸಿಟ್ಟು ಬರ್ತಿತ್ತು !!

ಪ್ರೊ. ಎ. ಆರ್. ಕೃಷ್ಣ ಶಾಸ್ತ್ರಿಗಳು 
1890–1968

ಪ್ರೊ. ಎ. ಆರ್. ಕೃಷ್ಣ ಶಾಸ್ತ್ರಿಗಳ ಹೆಸರು ಬ೦ದೊಡನೆ  ನೆನಪಾಗುವುದು "ವಚನ ಭಾರತ". ಸಂಸ್ಕೃತದಲ್ಲಿದ್ದ ಮಹಾಭಾರತವನ್ನು ಕನ್ನಡಕ್ಕೆ ತಂದ ಕೀರ್ತಿ ಅವರಿಗೆ ಸಲ್ಲಬೇಕು. ವಚನಭಾರತ 500 ಪುಟಗಳ ಸರಳ, ಸ್ಪಷ್ಟ ಲೇಖನ.  ಅವರಿಗೆ  ಕನ್ನಡವಲ್ಲದೆ ಸ೦ಸ್ಕ್ರತ, ಬ೦ಗಾಳಿ, ತಮಿಳು, ತೆಲುಗು, ಹಿಂದಿ  ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ಫ್ರೆಂಚ್, ಜರ್ಮನ್ ಮತ್ತು ಉರ್ದು ಭಾಷೆಗಳನ್ನೂ, ಅವರು ಕಲಿತಿದ್ದರು.  ಇವರು ಪ್ರಖ್ಯಾತ ವಯ್ಯಾಕರಣಿ  ಅಂಬಳೆ ರಾಮಕೃಷ್ಣಶಾಸ್ತ್ರಿಗಳ ಮಗ.  ಪಂಚೆ, ಶರ್ಟ್, ತಲೆಯಮೇಲೆ ಒಂದು ಟೋಪಿ, ತಲೆಯಲ್ಲಿ ಜುಟ್ಟು,, ಹಣೆಯಲ್ಲಿ ತಿದ್ದಿದ ಗಂಧಾಕ್ಷತೆ  - ಇದು ಅವರ ಮುಖ್ಯ ಚಹರೆ. ಎಲ್ಲಿ ಹೋಗಬೇಕಾದರೂ ಬರಿಕಾಲಿನಲ್ಲಿ ಹೋಗುತ್ತಿದ್ದರು.

ಮೊದಲು ಮೈಸೂರು ಜಿಲ್ಲಾ ಕಛೇರಿಯಲ್ಲಿ ಗುಮಾಸ್ತರ ಕೆಲಸದಲ್ಲಿದ್ದ ಅವರು ನ೦ತರ ಬೆ೦ಗಳೂರಿನ ಸೆಂಟ್ರೆಲ್ ಕಾಲೇಜ್ ನ ಕನ್ನಡವಿಭಾಗದಲ್ಲಿ, ಶಿಕ್ಷಕರಾದರು. ಇವರಿಗೆ ಪ್ರೊ. ಟಿ. ಎಸ್. ವೆಂಕಣ್ಣಯ್ಯನವರು ಹತ್ತಿರದ ಗೆಳೆಯರು. ಟಿ. ಎಸ್ .ವೆಂಕಣ್ಣಯ್ಯ, ಮತ್ತು ಎ. ಆರ್. ಕೃಷ್ಣಶಾಸ್ತ್ರಿಗಳ ಜೋಡಿಯನ್ನು ಮಿತ್ರರು ಮತ್ತು ಸಮಕಾಲೀನರು, "ಕನ್ನಡದ ಅಶ್ವಿನಿದೇವತೆಗಳು," ಎಂದು ಕರೆಯುತ್ತಿದ್ದರು. ಎ. ಆರ್. ಕೃಷ್ಣಶಾಸ್ತ್ರಿಗಳು ಕನ್ನಡಸಂಘ ಪ್ರಾರಂಭಿಸಿದರು.  "ಪ್ರಬುದ್ಧ ಕರ್ನಾಟಕ, " ತ್ರೈಮಾಸಿಕ ಪತ್ರಿಕೆಯನ್ನು ಆರಂಭಿಸಿದರು. ಆಗಿನ ಕಾಲದಲ್ಲಿ ಕನ್ನಡ ಓದುವವರು, ಬರೆಯುವವರು ಬಹಳ ಕಡಿಮೆ ಸ೦ಖ್ಯೆಯಲ್ಲಿದ್ದರು. ಶಾಸ್ತ್ರಿಯವರಿಗೋ ಕನ್ನಡ ಸಂಘ  ಮತ್ತು ಪ್ರಬುದ್ಧ ಕರ್ನಾಟಕಗಳು ಎರಡು ಕಣ್ಣಿನಷ್ಟು ಪ್ರಾಮುಖ್ಯವಾದವುಗಳು. ಮನೆ, ಮನೆಗಳಿಗೂ ಹೋಗಿ ಕನ್ನಡಲ್ಲಿ ಹೆಚ್ಚು ಹೆಚ್ಚು ಬರೆಯಲು ಯುವ ಜನರಿಗೆ ಪ್ರೋತ್ಸಾಹಿಸಿದರು. ತಪ್ಪುಗಳನ್ನು ತಾವೇ ತಿದ್ದಿ ಪ್ರಕಟಪಡಿಸುತ್ತಿದ್ದರು. ಕನ್ನಡಭಾಷೆಗೆ ಅವರು ಕೊಟ್ಟ ಕೊಡುಗೆ ಅಪಾರ. ಅವರು ಬ೦ಗಾಳಿ ಕಾದ೦ಬರಿಕಾರ  ಬ೦ಕಿ೦ ಚಂದ್ರ ಚಟರ್ಜಿ ಯವರ ಮೇಲೆ ಬರೆದ ಕೃತಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.  ಸ್ವತಃ ದೈವಭಕ್ತರಾದರೂ, ಅವರು ತಮ್ಮ 60ನೆಯ ವರ್ಷದ ಷಷ್ಠಿ ಪೂರ್ತಿಯನ್ನು ನೆರೆವೇರಿಸಿಕೊಳ್ಳಲಿಲ್ಲ. ಅದರ ಬದಲಾಗಿ, ಪ್ರತಿವರ್ಷವೂ ಮಾಘ ಶುದ್ಧ ಪೂರ್ಣಿಮೆಯ ದಿನದಂದು, ಭಾರತದ ಪ್ರತಿಯನ್ನು ದೇವರಮುಂದೆ ಇಟ್ಟು, ಪೂಜಿಸಿ, ಅದರ ಪ್ರತಿಗಳನ್ನು ಎಲ್ಲರಿಗೂ ಹಂಚಿ ತೃಪ್ತಿಪಡುತ್ತಿದ್ದರು.

ನಿವೃತ್ತರಾದ ಮೇಲೂ ನ್ಯಾಷನಲ್ ಕಾಲೇಜ್ ನಲ್ಲಿ ಕನ್ನಡ ಪಾಠ ಹೇಳಲು ಕರೆ
ಬಂತು. ಅವರು ಒಪ್ಪಿಕೊಂಡರು. ವರ್ಷಗಳಕಾಲ ಸೇವೆಮಾಡಿಯೂ ಸ೦ಭಾವನೆ ಪಡೆಯಲೇ ಇಲ್ಲ.  ಪಾಠ ಹೇಳುವಾಗಲೂ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡುತಿದ್ದರು. ಪ್ರತಿ ದಿನ ಮಾರನೆಯದಿನದ ಪಾಠಕ್ಕೆ ಸಿದ್ಧತೆ ನಡೆಯುತ್ತಿತು. ಸ್ಪಷ್ಟವಾಗಿ ಕೊನೆಯ ಬೆಂಚಿನ ವಿದ್ಯಾರ್ಥಿಗೂ ಚೆನ್ನಾಗಿ ಕೇಳಿಸುವಷ್ಟು ಜೋರಾಗಿ ಪಾಠ ಮಾಡುತ್ತಿದ್ದರು.  ಅವರು ಹೊರಗೆ ವಜ್ರದಷ್ಟು ಕಠೋರವಾಗಿ ಕಂಡರೂ ಅವರ ಮನಸ್ಸು ಹೂವಿನಷ್ಟು ಮೃದುವಾಗಿತ್ತು. ನಿರಾಡಂಬರ ವ್ಯಕ್ತಿ, ಹೊಗಳಿಕೆ, ಸಭೆ, ಭಾಷಣಗಳನ್ನು  ಅವರು ಹೆಚ್ಚಿಗೆ ಇಷ್ಟಪಡುತ್ತಿರಲಿಲ್ಲ. ಅವರು  ಅಪರೂಪದ ವಿದ್ವತ್ ಪ್ರತಿಭೆ. 





ತ.ಸು.ಶಾಮರಾಯರು
1906-1998

ತಳುಕಿನ ಸುಬ್ಬಣ್ಣ ಶಾಮರಾಯರು ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳುಕು ಗ್ರಾಮದಲ್ಲಿ.  ಅವರು ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು.  ಶಾಮರಾಯರು ಬಿ.ಎಂ.ಶ್ರೀ, ತೀನ೦ಶ್ರೀ, ಮತ್ತು ಕುವೆ೦ಪು  ಅವರ ಶಿಷ್ಯರಾಗಿದ್ದರು. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಮುಂದೆ  ಕುವೆ೦ಪು  ಅವರ ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ "ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿಯನ್ನು ಪಡೆದು, ಪ್ರಾಧ್ಯಾಪಕ ವೃತ್ತಿಯನ್ನು ಕೈಗೊಂಡರು. ಮೈಸೂರು ವಿಶ್ವವಿದ್ಯಾನಿಲಯ  ಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ತ ಸು ಶಾಮರಾಯರು  "ತಳುಕಿನ ವೆಂಕಣ್ಣಯ್ಯ ಗ್ರಂಥಮಾಲೆ"ಯನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದು ಸಾವಿರ ಪುಸ್ತಕಗಳ ಸರದಾರ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ.  ನಾಟಕ, ವಿಮರ್ಶೆ, ಕಾದ೦ಬರಿ, ಅನುವಾದ, ಕಾವ್ಯಸ೦ಗ್ರಹ, ವ್ಯಾಕರಣಕೋಶ, ಸಾಹಿತ್ಯ ಚರಿತ್ರೆ, ಹೀಗೆ ಅವರು ಕೈ ಹಾಕದ ಕ್ಷೇತ್ರವಿಲ್ಲ, ಎಲ್ಲೆಡೆಯೂ ಅವರು ತಮ್ಮ ಛಾಪನ್ನು ಒತ್ತಿದ ಮಹನೀಯ.

"ಶಾಮರಾಯರ ಅಚ್ಚುಮೆಚ್ಚಿನ ಶಿಷ್ಯ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು. ಶಾಮರಾಯರು ಅವರನ್ನು ಗುರುತಿಸಿದ್ದು ಒಂದು ಸಂಕಟದ ಸಮಯದಲ್ಲೇ. ಬಡತನದಿಂದ ಈತ ಬೆಂಡಾಗಿದ್ದಾನೆ, ಊಟಕ್ಕೂ ತೊಂದರೆಯಾಗಿದೆ ಎಂಬುದನ್ನು ಗುರುಗಳು ತಮ್ಮ ಸೂಕ್ಷ್ಮ ಸಂವೇದನಾ ಶಕ್ತಿಯಿಂದ ಕಂಡುಹಿಡಿದುಕೊಂಡರು. ಮೊದಲು ತಾತ್ಕಾಲಿಕ ಪರಿಹಾರ, ಮುಂದಿನದು ಆಮೇಲೆ. ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿದರು. ಅನಂತರ ಇವರಿಗೆ ಮೊದಲೇ ಪರಿಚಿತರಾಗಿದ್ದ ಸುತ್ತೂರು ಜಗದ್ಗುರುಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಬಳಿ ಶಿಷ್ಯನನ್ನು ಕರೆದುಕೊಂಡು ಹೋದರು. ಶಿವರುದ್ರಪ್ಪನವರ ವಿಷಯವನ್ನು ವಿವರಿಸಿದರು. ಸ್ವಾಮೀಜಿಯವರು ತಮಾಷೆಗೆ ಹೇಳಿದರು. "ಏನು ಶಾಮರಾಯರೇ, ನೀವು ಬ್ರಾಹ್ಮಣರು. ಒಬ್ಬ ಲಿಂಗಾಯತ ಹುಡುಗನ ಬಗ್ಗೆ ಶಿಫಾರಸ್ಸು ಮಾಡಲು ಬಂದಿದ್ದೀರಲ್ಲ!" ಮೇಷ್ಟ್ರು ಅಷ್ಟಕ್ಕೆ ಕೆರಳಿದರು: "ಎಲ್ಲ ವಿದ್ಯಾರ್ಥಿಗಳೂ ನನ್ನ ಮಕ್ಕಳು. ಅವರಿಗೆ ಜಾತಿ ಗೀತಿ ಇಲ್ಲ." ಸ್ವಾಮಿಗಳು ನಕ್ಕು ಮೇಷ್ಟ್ರನ್ನು ಸಮಾಧಾನ ಪಡಿಸಿದರು. ಶಿವರುದ್ರಪ್ಪನವರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ಕೊಟ್ಟರು.  ಇದು ತ.ಸು.ಶಾಮರಾಯರ ವ್ಯಕ್ತಿತ್ವವನ್ನು ಸಾದರಪಡಿಸುವ ಒ೦ದು ಪುಟ್ಟ ಉದಾಹರಣೆ.  ಅದೆಷ್ಟೋ ವಿದ್ಯಾರ್ಥಿಗಳನ್ನು ನಿಸ್ವಾರ್ಥಭಾವದಿ೦ದ ಪೊರೆದು ಪೋಷಿಸಿದ ಮಹಾನ್ ವ್ಯಕ್ತಿತ್ವ ಶಾಮರಾಯರದು. ಅವರೊಬ್ಬ ಆದರ್ಶ ಅಧ್ಯಾಪಕ.

ಚಿತ್ರ:ಅ೦ತರ್ಜಾಲ